ರೈತರ ಡೈರಿ- ಶ್ರೀಮತಿ ಚಂಡಿ ಬಾಯಿ ಅವರ ಸ್ಪೂರ್ತಿದಾಯಕ ಪಯಣ

ಚಂಡಿ ಬಾಯಿ ಸಂಗಾರೆಡ್ಡಿ ಜಿಲ್ಲೆಯ ಜಹೀರಾಬಾದ್ ಮಂಡಲದ ಅರ್ಜುನ್ ನಾಯಕ್ ತಾಂಡಾ ಎಂಬ ಹಳ್ಳಿಯಿಂದ ಬಂದವರು. ಇದು ಬಂಜರು ಭೂಮಿಯಾಗಿದ್ದು, ಇಲ್ಲಿ ಕೃಷಿ ಮಾಡುವುದು ಸವಾಲಿನ ಸಂಗತಿ. ಅವರು 3 ಗಂಡು ಮಕ್ಕಳು, 3 ಸೊಸೆಯಂದಿರು ಮತ್ತು 6 ಮೊಮ್ಮಕ್ಕಳು ಸೇರಿದಂತೆ 13 ಸದಸ್ಯರ ಕುಟುಂಬದೊಂದಿಗೆ ವಾಸಿಸುತ್ತಿದ್ದಾರೆ. ಕೃಷಿಯೇ ಅವರ ಕುಟುಂಬದ ಪ್ರಮುಖ ಜೀವನಾಧಾರ. ಚಂಡಿ ಬಾಯಿ 5 ಎಕರೆ ಭೂಮಿಯನ್ನು ಹೊಂದಿದ್ದು, ಅಲ್ಲಿ ಅವರು ಮುಖ್ಯವಾಗಿ ಖಾರಿಫ್ ಋತುವಿನಲ್ಲಿ ಬೆಳೆಗಳನ್ನು ಬೆಳೆಯುತ್ತಾರೆ. ಚಂಡಿ ಬಾಯಿ ಖಾಸಗಿ ವ್ಯಾಪಾರಿಗಳಿಂದ ಬೀಜಗಳನ್ನು ಸಂಗ್ರಹಿಸಿ ಸೋಯಾಬೀನ್ ಮತ್ತು ಮೆಕ್ಕೆಜೋಳ ಈ ಎರಡು ಬೆಳೆಗಳನ್ನು ಬೆಳೆಯುತ್ತಿದ್ದರು. ವ್ಯಾಪಾರಿಗಳಿಂದ ಶೇ. 3% ಬಡ್ಡಿದರದಲ್ಲಿ ರೂ. 20,000 ಸಾಲ ಪಡೆದು ಜಹೀರಾಬಾದ್‌ನಿಂದ ಹೈಬ್ರಿಡ್ ಬೀಜಗಳು, ರಾಸಾಯನಿಕ ಗೊಬ್ಬರಗಳು ಮತ್ತು ಕೀಟನಾಶಕಗಳನ್ನು ಖರೀದಿಸಿದರು.

2016 ರಲ್ಲಿ, ಡೆಕ್ಕನ್ ಡೆವಲಪ್‌ಮೆಂಟ್ ಸೊಸೈಟಿ (ಡಿಡಿಎಸ್), ಎನ್ನುವ ಎನ್‌ಜಿಒ, ಅರ್ಜುನ್ ನಾಯಕ್ ಥಾಂಡಾದಲ್ಲಿನ ಸಮುದಾಯಗಳೊಂದಿಗೆ ಕೆಲಸ ಮಾಡಲು ಪ್ರಾರಂಭಿಸಿತು. ನಾಲ್ಕು ತಿಂಗಳ ನಂತರ ಅವರ ಸಮಸ್ಯೆಗಳನ್ನು ಪರಿಹರಿಸಲು ಡಿಡಿಎಸ್ ಸಂಘಂ (ಸಮುದಾಯ ಗುಂಪು) ರಚಿಸಲು ಸಹಾಯ ಮಾಡಿದರು. ಸದಸ್ಯರು ರಾಜಿ ಬಾಯಿ ಜೊತೆಗೆ ಚಂಡಿ ಬಾಯಿಯನ್ನು ಗುಂಪಿನ ನಾಯಕಿಯರನ್ನಾಗಿ ಆಯ್ಕೆ ಮಾಡಿದರು. 20 ಸದಸ್ಯರೊಂದಿಗೆ ಆರಂಭವಾದ ಸಂಘವು 2024 ರ ವೇಳೆಗೆ 60 ಸದಸ್ಯರನ್ನು ಹೊಂದಿತ್ತು. ಚಂಡಿ ಬಾಯಿ ಇತರ ಸದಸ್ಯರೊಂದಿಗೆ ಬೀಜ ನಿರ್ವಹಣೆ, ಸಾವಯವ ಗೊಬ್ಬರಗಳ ತಯಾರಿಕೆ, ಸಸ್ಯ ಸಾರಗಳು ಮತ್ತು ಕೀಟ ಮತ್ತು ರೋಗ ನಿಯಂತ್ರಣಕ್ಕಾಗಿ ಇತರ ನೈಸರ್ಗಿಕ ವಿಧಾನಗಳು ಮತ್ತು ಮೌಲ್ಯವರ್ಧಿತ ಉತ್ಪನ್ನಗಳಂತಹ ವಿವಿಧ ಅಂಶಗಳ ಕುರಿತು ತರಬೇತಿ ಮತ್ತು ಮಾರ್ಗದರ್ಶನವನ್ನು ಪಡೆದರು.

ಡಿಡಿಎಸ್ ಮತ್ತು ಕೆವಿಕೆ (ಕೃಷಿ ವಿಜ್ಞಾನ ಕೇಂದ್ರ) ಯ ಅಮೂಲ್ಯ ಮಾರ್ಗದರ್ಶನ, ನೆರವು ಮತ್ತು ಬೆಂಬಲದೊಂದಿಗೆ ಅವರು ಒಂದು ಎಕರೆಯಲ್ಲಿ 20 ಕ್ಕೂ ಹೆಚ್ಚು ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಇದರಲ್ಲಿ ಕಿರುಧಾನ್ಯಗಳು (ಉದಾ., ಬಾಜ್ರಾ, ರಾಗಿ, 2 ರೀತಿಯ ನವಣೆ, ಸಾಮೆ, ಬರಗು ಇತ್ಯಾದಿ), ದ್ವಿದಳ ಧಾನ್ಯಗಳು (ಉದಾ., ಕೆಂಪು ಬೇಳೆ, ಹೆಸರು ಬೇಳೆ, ಉದ್ದು, ಅಲಸಂದೆ ಇತ್ಯಾದಿ) ಮತ್ತು ಎಣ್ಣೆ ಬೀಜಗಳು (ಉದಾ., ಎಳ್ಳು, ಅಗಸೆ ಬೀಜಗಳು) ಸೇರಿವೆ. ಅವರು ವಿವಿಧ ಸಾವಯವ ಕೃಷಿ ಪದ್ಧತಿಗಳ ಮೂಲಕ ತಮ್ಮ ಜಮೀನಿನ ಪೋಷಣೆ ಮಾಡುತ್ತಿದ್ದಾರೆ. ಕಡೆಯ ಬಾರಿ ಉಳುಮೆ ಮಾಡುವಾಗ ಸರಿಸುಮಾರು 10 ಟ್ರ್ಯಾಕ್ಟರ್ ಲೋಡ್ (20 ಟನ್) ಗೊಬ್ಬರವನ್ನು ಹಾಕುತ್ತಾರೆ. ಪ್ರತಿ ಹೆಕ್ಟೇರ್‌ಗೆ 100 ಕೆಜಿಯಷ್ಟು  ಪುಷ್ಟೀಕರಿಸಿದ ಗೊಬ್ಬರವನ್ನು (ಎರೆಹುಳು ಗೊಬ್ಬರ, ಸಗಣಿ ಕೇಕ್ ಮತ್ತು ಮೇಕೆ ಗೊಬ್ಬರದ ಮಿಶ್ರಣ) ಸೇರಿಸಲಾಗುತ್ತದೆ.

ಬೆಳೆಗಳನ್ನು ಅಕ್ಕಪಕ್ಕದ ಸಾಲುಗಳಲ್ಲಿ ಬಿತ್ತಲಾಗುತ್ತದೆ. ಇದು ವೈವಿಧ್ಯಮಯ ಬೆಳೆ ಮಾದರಿಯನ್ನು ಖಚಿತಪಡಿಸುತ್ತದೆ. ಪಂಚಗವ್ಯ ಮತ್ತು ಜೀವಾಮೃತದಂತಹ ಸಾಂಪ್ರದಾಯಿಕ ಸಾವಯವ ವಿಧಾನಗಳನ್ನು ಬೆಳೆ ಬೆಳವಣಿಗೆಗೆ ಬಳಸಲಾಗುತ್ತದೆ. ಬೇವಿನ ಎಲೆ ಸಾರ, ಬೇವಿನ ಬೀಜದ ಸಾರ, ಬೆಲ್ಲದ ನೀರು ಮತ್ತು ಗೋ ಮೂತ್ರವನ್ನು ಕೀಟ ನಿರ್ವಹಣೆಗೆ ಬಳಸಲಾಗುತ್ತದೆ.

ಚಂಡಿ ಬಾಯಿ ಅವರ ಕೃಷಿ ವೆಚ್ಚ ಸರಾಸರಿ ರೂ. 25,050, ನಿವ್ವಳ ಆದಾಯ ರೂ. 36,580. ಕೃಷಿಯೊಂದಿಗೆ ಅವರು 4 ಮೇಕೆಗಳು ಮತ್ತು 2 ಹಸುಗಳನ್ನು ಸಹ ಸಾಕುತ್ತಾರೆ. ಕೃಷಿ ಚಟುವಟಿಕೆಗಳಿಂದ ಅವರು ರೂ. 36,580 ನಿವ್ವಳ ಆದಾಯವನ್ನು ಗಳಿಸುತ್ತಾರೆ. ಪ್ರತಿ ಎರಡು ವರ್ಷಗಳಿಗೊಮ್ಮೆ, ಜಾನುವಾರುಗಳನ್ನು ಮಾರಾಟ ಮಾಡುವುದರಿಂದ ರೂ. 30,000 ರಿಂದ ರೂ. 35,000 ಹೆಚ್ಚುವರಿ ಆದಾಯವನ್ನು ಗಳಿಸುತ್ತಾರೆ. ಜಾನುವಾರುಗಳಿಗೆ ಮೇವನ್ನು ನೇರವಾಗಿ ಅವರದೇ ಜಮೀನಿನಿಂದ ಪಡೆಯಲಾಗುತ್ತದೆ. ಇದರೊಂದಿಗೆ ಗ್ರಾಮದಲ್ಲಿ ನೈಸರ್ಗಿಕವಾಗಿ ಲಭ್ಯವಿರುವ ಸಸ್ಯಗಳು ಇದನ್ನು ಪೂರೈಸುತ್ತವೆ.

ತಮ್ಮ ಜಮೀನಿನ ಫಲಿತಾಂಶ ನೋಡಿದ ಬಳಿಕ, ಚಂಡಿ ಬಾಯಿ ಈ ಬದಲಾವಣೆಯ ಪ್ರಬಲ ಪ್ರತಿಪಾದಕರಾದರು. ತಮ್ಮ ಒಡನಾಡಿ ರೈತರು ಈ ಕೃಷಿ ಪದ್ಧತಿಯನ್ನು ಅನುಸರಿಸಲು ಪ್ರೇರೇಪಿಸಿದರು. ʼನಮ್ಮ ಜಮೀನುಗಳು ಆರೋಗ್ಯ, ಪೌಷ್ಟಿಕಾಂಶ ಮತ್ತು ಸಮೃದ್ಧಿಯನ್ನು ಪ್ರತಿಫಲಿಸುತ್ತಿವೆ,ʼ ಎಂದು ಚಂಡಿಬಾಯಿ ಹೇಳುತ್ತಾರೆ. ಈಗ, ಗ್ರಾಮದ ಬಹುಪಾಲು ರೈತರು ಸಂಘಕ್ಕೆ ಸೇರಲು ಮತ್ತು ಡಿಡಿಎಸ್ ಮತ್ತು ಕೆವಿಕೆ ಮಾರ್ಗದರ್ಶನದಲ್ಲಿ ಸಾವಯವ ಕೃಷಿಯಲ್ಲಿ ತೊಡಗಿಸಿಕೊಳ್ಳಲು ಉತ್ಸುಕರಾಗಿದ್ದಾರೆ. ಇದು ಸಹ ರೈತರು ಮತ್ತು ಗ್ರಾಮಸ್ಥರ ಜೀವನದಲ್ಲಿನ ಸಕಾರಾತ್ಮಕ ಬದಲಾವಣೆಗಳಿಂದ ಪ್ರೇರಿತವಾಗಿದೆ.

ಗಮನಿಸಿ: ಇದನ್ನು ಡಾ. ಎನ್. ಸ್ನೇಹಲತಾ, ವಿ. ರಮೇಶ್ ಮತ್ತು ಇ. ಸ್ವಾಮಿ, ಡಿಡಿಎಸ್-ಕೆವಿಕೆ, ಜಹೀರಾಬಾದ್, ಸಂಗಾರೆಡ್ಡಿ, ತೆಲಂಗಾಣ 502228 ಇವರು ಸಂಗ್ರಹಿಸಿದ್ದಾರೆ. ಡಾ. ಎನ್. ಸ್ನೇಹಲತಾ ಅವರನ್ನು snehalatha.ddskvk@ ddsindia.org ನಲ್ಲಿ ಸಂಪರ್ಕಿಸಬಹುದು.

 


ಆಂಗ್ಲ ಮೂಲ : ಲೀಸಾ ಇಂಡಿಯಾ; ಸಂಪುಟ :೨೬; ಸಂಚಿಕೆ : ೪ ; ಡಿಸೆಂಬರ್‌ ೨೦‌೨೪

Recent Posts

ಸ್ಥಿತಿಸ್ಥಾಪಕತ್ವದ ಹೆಚ್ಚಳ

ಸ್ಥಿತಿಸ್ಥಾಪಕತ್ವದ ಹೆಚ್ಚಳ

ಇಡುಕ್ಕಿ ಜಿಲ್ಲೆಯು ಪುನರುತ್ಪಾದಕ ಸಾವಯವ ಪದ್ಧತಿಗಳ ತತ್ವಗಳ ಆಧಾರದ ಮೇಲೆ ಕೃಷಿ ಪದ್ಧತಿಗಳನ್ನು ಅನುಸರಿಸುವ ಮೂಲಕ ಬದಲಾಗುತ್ತಿರುವ ಹವಾಮಾನದ ಪರಿಣಾಮಗಳನ್ನು ತಗ್ಗಿಸಲು ಮತ್ತು ಹೊಂದಿಕೊಳ್ಳಲು ಸಮರ್ಥವಾಗಿದೆ. ಪೀರ್‌ಮೇಡ್ ಡೆವಲಪ್‌ಮೆಂಟ್ ಸೊಸೈಟಿ ಎನ್‌ಜಿಒ ಆಗಿದ್ದು, ಕೃಷಿ ಪರಿಸರ ಪದ್ಧತಿಗಳನ್ನು ಉತ್ತೇಜಿಸುವ ಮೂಲಕ ಈ ರೈತರಿಗೆ ಕೃಷಿ ಸುಸ್ಥಿರತೆಯನ್ನು ನಿರ್ಮಿಸಲು ಸಹಾಯ ಮಾಡುತ್ತಿದೆ.

ಸುಸ್ಥಿರ ಮತ್ತು ಸಮಗ್ರ ಕೃಷಿ ಯಾಂತ್ರೀಕರಣ

ಸುಸ್ಥಿರ ಮತ್ತು ಸಮಗ್ರ ಕೃಷಿ ಯಾಂತ್ರೀಕರಣ

ಸಣ್ಣ ರೈತರಿಗೆ ದುಬಾರಿ ವೆಚ್ಚದ ಕಾರಣದಿಂದಾಗಿ ಕೃಷಿ ಯಂತ್ರಗಳ ಲಭ್ಯತೆ ಸೀಮಿತವಾಗಿರುತ್ತದೆ. ಆದ್ದರಿಂದ ಪರಿಸರ, ಸಾಮಾಜಿಕ ಮತ್ತು ಆರ್ಥಿಕ ಸಮತೋಲನವನ್ನು ಖಾತ್ರಿಪಡಿಸಿಕೊಳ್ಳುವಾಗ ಉತ್ಪಾದಕತೆಯನ್ನು ಹೆಚ್ಚಿಸುವ ಸುಸ್ಥಿರ ಯಾಂತ್ರೀಕರಣ ಮಾದರಿ ಅಗತ್ಯ. ಮಹಾಶಕ್ತಿ ಪ್ರತಿಷ್ಠಾನದ ಸುಸ್ಥಿರ ಕೃಷಿ ಯಾಂತ್ರೀಕರಣ ಉಪಕ್ರಮವು ಶ್ರಮವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಕೃಷಿ ಯಂತ್ರೋಪಕರಣಗಳನ್ನು ಒದಗಿಸುವಲ್ಲಿ ಯಶಸ್ವಿಯಾಗಿದೆ.

ಬದಲಾವಣೆಯ ಬೀಜಗಳ ಬಿತ್ತನೆ

ಬದಲಾವಣೆಯ ಬೀಜಗಳ ಬಿತ್ತನೆ

ಮಿಶ್ರ ಬೆಳೆ, ದೇಸಿ ಬೀಜಗಳು ಮತ್ತು ಸಮುದಾಯ ನೇತೃತ್ವದ ಕೃಷಿ ಪರಿಸರ ವಿಜ್ಞಾನವು ಸುಸ್ಥಿರ ಭವಿಷ್ಯದ ಕೀಲಿಕೈ ಆಗಿದೆ. ಅನಂತ್‌ ಅವರ ಪ್ರಯಾಣವು ಅಂತಹ ಒಂದು ಉದಾಹರಣೆಯಾಗಿದೆ.