ನೀಲ ಉದ್ಯಾನವನ- ಪ್ರೀತಿಯ ಹವ್ಯಾಸ ಯಶಸ್ಸಿನ ಹಾದಿಯಲ್ಲಿ


ತನ್ನ ಆಸಕ್ತಿಯ ಕಡೆಗಿನ ತೀವ್ರವಾದ ಬದ್ಧತೆಯು ವ್ಯಕ್ತಿ ಉದ್ಯಮಿಯಾಗಿ ಅದ್ಭುತ ಯಶಸ್ಸನ್ನು ಗಳಿಸಲು ಕಾರಣವಾಗಬಹುದು. ಶ್ರೀಮತಿ ಸುಭದ್ರ ಕುಮಾರಿಯವರ ಕತೆಯು ತಮ್ಮ ಆರ್ಕಿಡ್‌ ಉದ್ಯಮವನ್ನು ಅವರು ಬೆಳೆಸಿದ ಬಗೆಯನ್ನು ಹೇಳುತ್ತದೆ.


ಕೇರಳದ ವಯನಾಡಿನ ಪ್ರಶಾಂತತೆಯಲ್ಲಿರುವ ನೀಲಾ ಗಾರ್ಡನ್‌ ಎನ್ನುವ ಪ್ರವರ್ಧಮಾನಕ್ಕೆ ಬರುತ್ತಿರುವ ಉದ್ಯಮದ ಹಿಂದಿನ ರೂವಾರಿ 63 ವರ್ಷದ ಸುಭದ್ರ ಕುಮಾರಿ. ಆರ್ಕಿಡ್‌ಗಳ ಬಗೆಗಿನ ಅವರ ಆಳವಾದ ಪ್ರೀತಿ ಇದರ ಹಿಂದಿದೆ.

ಮೂಲತಃ ಪಟ್ಟಣಂತಿಟ್ಟದವರಾದ ಸುಭದ್ರಾ ಅವರ ಕುಟುಂಬವು 1975 ರ ಸುಮಾರಿಗೆ ವಯನಾಡ್ ಜಿಲ್ಲೆಗೆ ಬಂದು ನೆಲೆಸಿತು. ಎಸ್‌ಎಸ್‌ಎಲ್‌ಸಿ ಮುಗಿಸಿ ದೂರಸಂಪರ್ಕ ಮತ್ತು ಟೈಪ್‌ರೈಟಿಂಗ್‌ನಲ್ಲಿ ಡಿಪ್ಲೊಮಾ ಪಡೆದ ಸುಭದ್ರಾ ಅವರಿಗೆ ಚಿಕ್ಕಂದಿನಿಂದಲೇ ಸಸ್ಯಗಳ ಬಗ್ಗೆ ಆಕರ್ಷಣೆಯಿತ್ತು. ಸಸ್ಯಗಳ ಬಗ್ಗೆ ಅದರಲ್ಲೂ ಹೂಗಿಡಗಳ ಬಗೆಗಿನ ಆಕೆಯ ಪ್ರೀತಿಯನ್ನು ನೋಡಿ ಅವರ ಕುಟುಂಬದವರು ಅವಳ ಸಸ್ಯಶಾಸ್ತ್ರೀಯ ಹುಡುಕಾಟಗಳನ್ನು ಬೆಂಬಲಿಸಿ ವಿವಿಧ ಭಾಗಗಳಿಂದ ವಸ್ತುಗಳನ್ನು ತರಿಸಿಕೊಟ್ಟು ಬೆಂಬಲಿಸಿತು.

ಸುಭದ್ರಾ ಅವರು ಸುಲ್ತಾನ್ ಬತ್ತೇರಿಯಲ್ಲಿರುವ ಪುಷ್ಪಕೃಷಿ ಉತ್ಸಾಹಿಗಳ ಸಂಘವಾದ ಕೃಷಿ-ತೋಟ ಸಂಘದ ಸದಸ್ಯರಾಗಿ ಸೇರಿಕೊಂಡರು. ಕೃಷಿ ಇಲಾಖೆಯ ಹೂವಿನ ವ್ಯವಹಾರದ ಮೇಲೆ ಈ ಸೊಸೈಟಿ ನಡೆಯುತ್ತದೆ. ಇದು ವಯನಾಡಿನಾದ್ಯಂತ ಸದಸ್ಯರನ್ನು ಹೊಂದಿತ್ತು. ವಾಸ್ತವದಲ್ಲಿ ಸುಭದ್ರಾ 2003 ರಲ್ಲಿ ಅಂಥೂರಿಯಂ ತರಬೇತಿಯೊಂದಿಗೆ ತನ್ನ ಹೂವಿನ ಕೃಷಿ ಪ್ರಯಾಣವನ್ನು ಪ್ರಾರಂಭಿಸಿದರು. ಆಂಥೂರಿಯಂ ಕತ್ತರಿಸಿದ ಹೂವುಗಳ ಸಂಗ್ರಹಣೆ, ಕೃಷಿ ಮತ್ತು ಸಂಸ್ಕರಣೆಯ ಬಗ್ಗೆ ತರಬೇತಿಯನ್ನು ನೀಡಲಾಯಿತು. ಆ ಸಮಯದಲ್ಲಿ ವಯನಾಡಿನಾದ್ಯಂತ ಕೃಷಿ ವಿಪನನ ಸಮಿತಿ ಎಂದು ಕರೆಯಲಾಗುವ ಸರ್ಕಾರಿ ಸಗಟು ಮಾರುಕಟ್ಟೆಯ ಮೂಲಕ ವ್ಯಾಪಾರ ವಹಿವಾಟು ನಡೆಸುತ್ತಿತ್ತು.

ತನ್ನತ್ತಿಗೆಯೊಂದಿಗೆ ತರಬೇತಿಗೆ ಸ್ಥಳೀಯ ಸಾರಿಗೆ ಬಸ್ಸಿನಲ್ಲಿ ಹೋಗುತ್ತಿದ್ದದ್ದನ್ನು ನೆನಪಿಸಿಕೊಳ್ಳುತ್ತಾರೆ. ಬಸ್ಸಿನಲ್ಲಿ ಹೋಗಲು ಹಣದ ತೊಂದರೆಯಿದ್ದರೂ ಕೂಡ ಗಿಡಗಳ ಕಡೆಗಿನ ಅಸೀಮ ಪ್ರೀತಿಯಿಂದಾಗಿ ಆಕೆ ಹೋದಳು. ಹೂ ಕೃಷಿಯಲ್ಲಿ ಎದುರಿಸಿದ ಆರ್ಥಿಕ ಸಂಕಷ್ಟಗಳು ಮತ್ತು ಕಾಡುಪ್ರಾಣಿಗಳ ಹಾವಳಿಯಿಂದಾಗಿ ಒಂದು ಕಾಲದಲ್ಲಿ ಈ ಸಂಘದ ಸದಸ್ಯರಾಗಿದ್ದ ಆಕೆಯ ಸಹದ್ಯೋಗಿಗಳು ಇದನ್ನು ಕೈಬಿಟ್ಟಿದ್ದರು. ಹಲವು ಸವಾಲುಗಳ ನಡುವೆಯೂ ಆಕೆ ಇದನ್ನು ಮುಂದುವರೆಸಿದರು. ಕೊನೆಗೆ 2008ರಲ್ಲಿ ಆಕೆಯ ಆಸಕ್ತಿ ಸುಂದರ ಆರ್ಕಿಡ್‌ ಹೂಗಳಲ್ಲಿ ನೆಲೆಕಂಡಿತು.

ಭೇಟಿಯ ಸಮಯದಲ್ಲಿ, ತಿರುವನಂತಪುರದ ಕೃಷಿ ಇಲಾಖೆಯ ಅಧಿಕಾರಿಗಳು ಅವರಿಗೆ ಆರ್ಕಿಡ್ ಕೃಷಿಯನ್ನು ಪರಿಚಯಿಸಿದರು. ಆರಂಭದಲ್ಲಿ, ತಿರುವನಂತಪುರದ ಖಾಸಗಿ ನರ್ಸರಿಯಲ್ಲಿನ ಸಣ್ಣ ಖರೀದಿಯೊಂದಿಗೆ ಅವರ ಹೂವಿನ ಕೃಷಿ ಪಯಣ ಆರಂಭವಾಯಿತು. ಅದೇ ಅಂತಿಮವಾಗಿ ಅವರ ಪಯಣದಲ್ಲೊಂದು ಮಹತ್ವದ ತಿರುವಾಯಿತು. ಆ ಸಮಯದಲ್ಲಿ, ಅನೇಕ ಆರ್ಕಿಡ್ ಪ್ರಭೇದಗಳು ವಯನಾಡ್‌ನ ಗುಡ್ಡಗಾಡು ಪ್ರದೇಶದ ವಾತಾವರಣಕ್ಕೆ ಹೊಂದಿಕೊಳ್ಳುವುದಿಲ್ಲ ಎನ್ನುವುದು ಸಾಮಾನ್ಯ ಗ್ರಹಿಕೆಯಾಗಿತ್ತು. ಆದರೂ, ಆಕೆ ಆ ಕೃಷಿಯನ್ನು ಕೈಗೊಂಡು ತನ್ನ ಮನೆಯಲ್ಲಿ ಆರ್ಕಿಡ್‌ ಸಾಮ್ರಾಜ್ಯವನ್ನು ಕಟ್ಟಿದರು. ಅವರ ಆರಂಭಿಕ ಯೋಜನೆ ತಮ್ಮದೇ ಆದ ಆರ್ಕಿಡ್‌ ಸಂಗ್ರಹವನ್ನು ರೂಪಿಸುವುದಾಗಿತ್ತು. ನಂತರ ಗಿಡಗಳ ಸಂಖ್ಯೆ ಹೆಚ್ಚಿದಂತೆ, ತಮ್ಮಲ್ಲಿದ್ದ ಹಲವಾರು ಬಗೆಯ ಆರ್ಕಿಡ್‌ಗಳ ಮಾರಾಟಕ್ಕೆ ಮುಂದಾದರು. ರಾಜ್ಯದಾದ್ಯಂತ ಆರ್ಕಿಡ್‌ಗಳಿಗೆ ಇರುವ ಮಾರುಕಟ್ಟೆಯ ಸಾಧ್ಯತೆಗಳನ್ನು ಗುರುತಿಸಿ ಸುಭದ್ರ ತಮ್ಮ ಪ್ರಯತ್ನವನ್ನು ಇನ್ನಷ್ಟು ತೀವ್ರಗೊಳಿಸಿದರು.

ತಮ್ಮ ವ್ಯಾಪಾರಿ ಸ್ನೇಹಿತೆ ರೀನಾಳ ಸಹಾಯದಿಂದ, ಥೈಲ್ಯಾಂಡ್ ಮತ್ತು ತೈವಾನ್‌ನಿಂದ ವಿಶೇಷ ಆರ್ಕಿಡ್‌ಗಳನ್ನು ಆಮದು ಮಾಡಿಕೊಂಡರು. ಅದು ಅವರ ಸಂಗ್ರಹಕ್ಕೆ ಸೇರಿ ವಹಿವಾಟು ಹೆಚ್ಚಲು ಸಹಾಯ ಮಾಡಿತು. 2010 ರಲ್ಲಿ, ಸುಭದ್ರಾ ತಮ್ಮ ಆರ್ಕಿಡ್ ಮಾರ್ಕೆಟಿಂಗ್ ಉದ್ಯಮವನ್ನು ಅಧಿಕೃತವಾಗಿ ಪ್ರಾರಂಭಿಸಿದರು. ಪ್ರತಿ ಹಂತದಲ್ಲೂ ಅವರ ಕುಟುಂಬದವರು ನೀಡಿದ ಬೆಂಬಲ ನಿರ್ಣಾಯಕವಾಗಿತ್ತು. ಅಂಥೂರಿಯಂ ಮತ್ತು ಒಳಾಂಗಣ ಸಸ್ಯಗಳ ಮಾರಾಟದಿಂದ ಪ್ರಾರಂಭವಾದ ಈ ಉದ್ಯಮವು ಅವರ ಅಗಾಧವಾದ ಆರ್ಕಿಡ್ ಸಂಗ್ರಹದ ಮೂಲಕ ವಿಸ್ತರಿಸಿತು. ನಂತರ, ತೋಟಗಾರಿಕಾ ಇಲಾಖೆಯು ವಯನಾಡಿನಲ್ಲಿ ಆರ್ಕಿಡ್‌ಗಳ ಸಾಧ್ಯತೆಯನ್ನು ಪರಿಶೀಲಿಸಿ ಅವರಿಗೆ ಸಹಾಯಧನವನ್ನು ಒದಗಿಸಿತು. ಇದು ಉದ್ಯಮವನ್ನು ವಿಸ್ತರಿಸುವಲ್ಲಿ ಅವರಿಗೆ ಮತ್ತಷ್ಟು ಸಹಾಯ ಮಾಡಿತು. ಇತ್ತೀಚೆಗೆ, ಅವರು ವಯನಾಡಿನ ಅಂಬಲವಾಯಲ್‌ನಲ್ಲಿರುವ ಕೇರಳ ಕೃಷಿ ವಿಶ್ವವಿದ್ಯಾಲಯದ ಪ್ರಾದೇಶಿಕ ಕೃಷಿ ಸಂಶೋಧನಾ ಕೇಂದ್ರದ ಬೆಂಬಲದೊಂದಿಗೆ ಆರ್ಕಿಡ್‌ಗಳನ್ನು ಸಂಗ್ರಹಿಸುವುದರ ಜೊತೆಗೆ ವಯನಾಡಿನ ಆರ್ಕಿಡ್ ರೈತರಿಗಾಗಿ ತೋಟಗಾರಿಕೆ ಇಲಾಖೆಯ ಯೋಜನೆಯ ಲಾಭ ಪಡೆದರು.

ಇಂದು, ನೀಲಾ ಗಾರ್ಡನ್ ತನ್ನ ಉದ್ಯಾನದಲ್ಲಿ ಆಂಥೂರಿಯಂ, ಫರ್ನ್ಸ್, ಬೆಗೋನಿಯಾ, ಆಫ್ರಿಕನ್ ವೈಲೆಟ್, ಹೋಯಾ ಮತ್ತು ಇತರ ಒಳಾಂಗಣ ಸಸ್ಯಗಳ ಜೊತೆಗೆ ಆರ್ಕಿಡ್‌ಗಳ ದೊಡ್ಡ ಸಂಗ್ರಹವನ್ನು ಹೊಂದಿದೆ. ಆಕೆಯ ಆರ್ಕಿಡ್ ಸಂಗ್ರಹದಲ್ಲಿ ಡೆಂಡ್ರೊಬಿಯಂ (100 ಕ್ಕೂ ಹೆಚ್ಚು ಪ್ರಭೇದಗಳು), ಫಲೇನೊಪ್ಸಿಸ್, ಮೊಕಾರಾ, ಒನ್ಸಿಡಿಯಮ್, ಕ್ಯಾಟ್ಲಿಯಾ, ವಂಡಾ, ಸಿಂಬಿಡಿಯಮ್, ಗ್ರಾಮಟೊಫಿಲಮ್, ಇತ್ಯಾದಿಗಳಂತಹ ಮುಖ್ಯ ಆರ್ಕಿಡ್‌ಗಳಿವೆ. ಜೊತೆಗೆ ಸ್ಥಳೀಯ ಆರ್ಕಿಡ್‌ಗಳ ಉತ್ತಮ ಸಂಗ್ರಹವಿದೆ.

2017ರಲ್ಲಿ ದೂರದರ್ಶನದ ಕೃಷಿ ದರ್ಶನದಲ್ಲಿ ಮೊದಲಿಗೆ ಅವರ ಪಯಣದ ಕತೆಯು ಪ್ರಸಾರವಾಯಿತು. ಪ್ರತಿ ಆಗಸ್ಟ್‌ನಲ್ಲಿ ನಡೆಯುವ ಬೆಂಗಳೂರು ಪುಷ್ಪ ಪ್ರದರ್ಶನ, ಕೃಷಿ ಇಲಾಖೆಯ (VAIGA) ಕೃಷಿ ಮೇಳ, RARS ನ ಪೂಪೋಲಿ ಪುಷ್ಪ ಉತ್ಸವ, ಕಲ್ಪೆಟ್ಟ ಪುಷ್ಪ ಪ್ರದರ್ಶನ ಮತ್ತು ಇತರ ಹಲವಾರು ಕಾರ್ಯಕ್ರಮಗಳಲ್ಲಿ ಅವರು ತಮ್ಮ ಸಂಗ್ರಹವನ್ನು ಪ್ರದರ್ಶಿಸುತ್ತಾರೆ.

ತಮ್ಮ ವೆಬ್‌ಸೈಟ್ ಮತ್ತು ದೇಶವ್ಯಾಪಿ ಪ್ರದರ್ಶನಗಳ ಮೂಲಕ, ಸುಭದ್ರಾ ಅವರ ಗ್ರಾಹಕರು ದೇಶದ ಉದ್ದಗಲಕ್ಕೂ ವ್ಯಾಪಿಸಿದ್ದಾರೆ. ಕೇರಳ ಮತ್ತು ಬೆಂಗಳೂರು ಪ್ರಾಥಮಿಕ ಮಾರುಕಟ್ಟೆಗಳಾಗಿವೆ. ಅಲ್ಲದೆ, ಅವರು ಹಲವು ವರ್ಷಗಳಿಂದ ಮಹಾರಾಷ್ಟ್ರದಿಂದ ಕೋಲ್ಕತ್ತಾದವರೆಗಿನ ಖರೀದಿದಾರರಿಗೆ ಮಾರಾಟ ಮಾಡುತ್ತಿದ್ದಾರೆ. ಗ್ರಾಹಕರೊಂದಿಗೆ ಉತ್ತಮ ದೀರ್ಘಕಾಲೀನ ಸಂಬಂಧಗಳನ್ನು ಖಚಿತಪಡಿಸಿಕೊಳ್ಳಲು ಸಸ್ಯಗಳ ಪ್ಯಾಕೇಜಿಂಗ್‌ ಅನ್ನು ಕಾಳಜಿ ವಹಿಸಿ ಉತ್ತಮ ಗುಣಮಟ್ಟದ್ದಾಗಿರುವಂತೆ ನೋಡಿಕೊಳ್ಳುತ್ತಾರೆ.

ಪ್ರಸ್ತುತ, ಅವರು ಕೇವಲ ಸಸ್ಯಗಳ ಮಾರಾಟದ ಮೂಲಕವೇ ಸರಾಸರಿ ಮಾಸಿಕ ರೂ. 50,000 ಲಾಭ ಗಳಿಸುತ್ತಿದ್ದಾರೆ. ವಾಣಿಜ್ಯ ಯಶಸ್ಸಿನ ಹೊರತಾಗಿ ಸುಭದ್ರ ಅವರು ಸಸ್ಯಶಾಸ್ತ್ರೀಯ ಆಸಕ್ತಿಯನ್ನು ಪೋಷಿಸಲು ಆ ಕುರಿತ ತಿಳಿವಳಿಕೆಯನ್ನು ಹಂಚಿಕೊಳ್ಳಲು ಬದ್ಧರಾಗಿದ್ದಾರೆ. ಅವರು ತಮ್ಮ ತೋಟಕ್ಕೆ ಬರುವ ಸಂದರ್ಶಕರನ್ನು ಪ್ರೀತಿಯಿಂದ ಸ್ವಾಗತಿಸುತ್ತಾರೆ. ಹೂವುಗಳ ಬಗೆಗಿನ ತಮ್ಮ ತೀವ್ರ ಆಸಕ್ತಿಯನ್ನು ಹಂಚಿಕೊಳ್ಳುತ್ತಾರೆ. ಆರ್ಕಿಡ್ ಕೃಷಿಯಲ್ಲಿ ಆಸಕ್ತಿ ಹೊಂದಿರುವ ಉದಯೋನ್ಮುಖ ಉತ್ಸಾಹಿಗಳಿಗೆ ತರಬೇತಿ ಮತ್ತು ಸಲಹೆಗಳನ್ನು ಸಹ ನೀಡುತ್ತಾರೆ.

ಹೂವುಗಳನ್ನು ಕತ್ತರಿಸಿದ ಬಳಿಕ ಅದನ್ನು ಸಂಸ್ಕರಿಸಲು ಮತ್ತು ಸಂಗ್ರಹಿಸಲು ವಯನಾಡಿನಲ್ಲಿ ಇಲ್ಲಿಯವರೆಗೆ ಪೂರ್ಣ ಪ್ರಮಾಣದ ಸೌಲಭ್ಯವಿಲ್ಲ ಎಂದು ಅವರು ಹೇಳುತ್ತಾರೆ. ಈ ಹೂವುಗಳಿಗಿರುವ ವ್ಯಾಪಾರ ಸಾಮರ್ಥ್ಯವನ್ನು ತಿಳಿದುಕೊಳ್ಳಲು, ವಿಶೇಷವಾಗಿ ಬೆಂಗಳೂರಿನಂತಹ ದೊಡ್ಡ ಮಾರುಕಟ್ಟೆಗಳು ಸುತ್ತಮುತ್ತಲಿನಲ್ಲಿರುವುದರಿಂದ ಸರ್ಕಾರವು ಉಪಕ್ರಮಗಳನ್ನು ತೆಗೆದುಕೊಳ್ಳಬಹುದು ಎಂದು ಆಶಿಸುತ್ತಾರೆ.

ಸುಭದ್ರ ಅವರ ಸಸ್ಯಗಳ ಮೇಲಿನ ಪ್ರೀತಿ ಮತ್ತು ದೃಢಸಂಕಲ್ಪವು, ಕಠಿಣ ಪರಿಶ್ರಮ ಮತ್ತು ನಿರಂತರತೆಯ ಮೂಲಕ ಒಬ್ಬರ ಕನಸುಗಳನ್ನು ಹೇಗೆ ನನಸಾಗಿಸಬಹುದು ಎಂಬುದನ್ನು ತೋರಿಸುತ್ತದೆ.  ಅವರು ತಮ್ಮ ತೋಟವನ್ನು ಅಭಿವೃದ್ಧಿಗೊಳಿಸುವುದರೊಂದಿಗೆ, ತಮ್ಮ ಸೃಜನಶೀಲ ವಿಚಾರಗಳಿಂದ ಇತರರಿಗೆ ಸ್ಫೂರ್ತಿ ನೀಡುತ್ತಾರೆ. ವಯಸ್ಸು ಮತ್ತು ಲಿಂಗವನ್ನು ಲೆಕ್ಕಿಸದೆ ಯಾರು ಬೇಕಾದರೂ ತಮ್ಮ ಆಸಕ್ತಿಯ ಬೆನ್ನುಹತ್ತಬಹುದು ಎಂದು ಭವಿಷ್ಯದ ಪೀಳಿಗೆಗೆ ಪ್ರೇರಣೆ ನೀಡುತ್ತಾರೆ.

 


Archana Bhatt, Sreeram.V, Abdullah Habeeb

Archana Bhatt

Scientist

Community Agrobiodiversity Centre, MSSRF

Wayanad, Kerala

E-mail: archanabhatt1991@gmail.com


ಆಂಗ್ಲ ಮೂಲ : ಲೀಸಾ ಇಂಡಿಯಾ; ಸಂಪುಟ :೨೬; ಸಂಚಿಕೆ : ೧ ; ಮಾರ್ಚ್‌ ೨೦‌೨೪

Recent Posts

ವಿಶ್ವ ಆಹಾರ ದಿನ 2025

ವಿಶ್ವ ಆಹಾರ ದಿನ 2025

ಆರೋಗ್ಯಕರ ಹಸಿವು ಮುಕ್ತ ಜಗತ್ತನ್ನು ನಿರ್ಮಿಸಲು ಸುಸ್ಥಿರ ಕೃಷಿ, ನ್ಯಾಯಯುತ ಆಹಾರ ವಿತರಣೆ ಮತ್ತು ಜವಾಬ್ದಾರಿಯುತ ಸೇವನೆಯ ಮೂಲಕ ಸಾಮೂಹಿಕ ಕ್ರಮಕ್ಕೆ ಇದು ಕರೆ ನೀಡುತ್ತದೆ. ಅಂದಾಜು 673 ಮಿಲಿಯನ್ ಜನರು ಹಸಿವಿನಿಂದ ಬದುಕುತ್ತಿದ್ದಾರೆ, ಇದು ಸಾಮೂಹಿಕ ಕ್ರಿಯೆಯ ತುರ್ತು ಅಗತ್ಯವನ್ನು ಎತ್ತಿ ತೋರಿಸುತ್ತದೆ.

ಬಸನಗೌಡರ ವೈವಿಧ್ಯಮಯ ಬೆಳೆಗಳ ತೋಟ

ಬಸನಗೌಡರ ವೈವಿಧ್ಯಮಯ ಬೆಳೆಗಳ ತೋಟ

ಹುಣಸೆ ಮರ ಮುಪ್ಪಾದರೂ, ಹುಳಿ ಮುಪ್ಪಲ್ಲ ಅನ್ನುವ ಗಾದೆ ಮಾತಿನಂತೆ ಗದಗ ತಾಲೂಕಿನ ಪಾಪನಾಶಿ ಗ್ರಾಮದ ಪ್ರಗತಿಪರ ರೈತರಾದ ಬಸನಗೌಡ ರಾಯನಗೌಡ ಪಾಟೀಲರು ತಮ್ಮ ೭೭ನೇ ವಯಸ್ಸಿನಲ್ಲೂ ಅಪರಿಮಿತ ಉತ್ಸಾಹದೊಂದಿಗೆ ಆರೋಗ್ಯಕರ ಜೀವನ ನಡೆಸುತ್ತಿದ್ದಾರೆ. ಬಿ.ಎ. ಪದವಿ ಕಲಿಯುವಾಗ ಒಕ್ಕಲುತನ ಮಾಡಿ ಭೂಮಿ ತಾಯಿಯ ಮಡಿಲಲ್ಲಿ ಸಂತೃಪ್ತಿಯ ಬದುಕು ಕಟ್ಟಿಕೊಳ್ಳಬೇಕು ಎಂದು ನಿರ್ಧರಿಸಿದರು. ನಂತರ ಬಿ.ಎ. ಪದವಿಯನ್ನು ಅರ್ದದಲ್ಲಿಯೇ ಕೈಬಿಟ್ಟು ಮಾದರಿ ಪ್ರಗತಿಪರ ರೈತನಾಗಬೇಕು ಎಂಬ ದೃಡಸಂಕಲ್ಪದಿಂದ ತಮ್ಮ ತಂದೆಯೊಂದಿಗೆ ವ್ಯವಸಾಯ ಪ್ರಾರಂಭಿಸಿದರು. ಒಕ್ಕಲುತನ  ಪ್ರಾರಂಭಿಸಿದಾಗ ಗೌಡರ ವಯಸ್ಸು ೨೧, ಸುಮಾರು ೫೫ ವರ್ಷಗಳಿಂದ ನಿರಂತರವಾಗಿ ವಿವಿಧ ಬಗೆಯ ಕೃಷಿ, ತೋಟಗಾರಿಕೆ, ಅರಣ್ಯ  ಬೆಳೆಗಳನ್ನು ಬೆಳೆಯುತ್ತಾ ಅವುಗಳ ಬಗ್ಗೆ ಅಪಾರ ಜ್ಞಾನವನ್ನು ಹೊಂದಿರುವರು. ಅವರ ಚಿಕ್ಕ ಮಗ ಪ್ರವೀಣಗೌಡ ಪಾಟೀಲ ತೋಟ ನಿರ್ವಹಣೆ ಮಾಡಲು ಸಹಾಯ ಮಾಡುವನು.

ಟರ್ಕಿ ಕೋಳಿ ಸಾಕಾಣಿಕೆ ಮಹಿಳೆಯರಿಗೆ ಪರ್ಯಾಯ ಜೀವನೋಪಾಯದ ಅವಕಾಶ

ಟರ್ಕಿ ಕೋಳಿ ಸಾಕಾಣಿಕೆ ಮಹಿಳೆಯರಿಗೆ ಪರ್ಯಾಯ ಜೀವನೋಪಾಯದ ಅವಕಾಶ

ದಕ್ಷಿಣ ಪರಗಣ ಜಿಲ್ಲೆಯ ಮಹಿಳೆಯರು ಟರ್ಕಿ ಕೋಳಿ ಸಾಕಾಣಿಕೆಯನ್ನು ಯಶಸ್ವಿಯಾಗಿ ಕೈಗೆತ್ತಿಕೊಂಡಿದ್ದಾರೆ. ಸ್ಥಳೀಯ ಕೆವಿಕೆಯ ಪ್ರಚುರಪಡಿಸಿದ ಈ ಮಾದರಿಯು ಅಭಿವೃದ್ಧಿಗಿದ್ದ ಅಡೆತಡೆಗಳನ್ನು ನಿವಾರಿಸಿ ಮಹಿಳಾ ಗುಂಪುಗಳ ಸಾಮರ್ಥ್ಯವನ್ನು ತೆರೆದಿಟ್ಟಿದೆ.

YouTube
Instagram
WhatsApp