ಬೀಬಿ ಫಾತಿಮಾ ಅವರ ಯಶೋಗಾಥೆ


ಮಹಿಳಾ ಸಬಲೀಕರಣ ಎಂದರೆ ಮುಖ್ಯವಾಗಿ ಸಮಾಜದಲ್ಲಿ ಸಾಂಪ್ರದಾಯಿಕವಾಗಿ ಹಿಂದುಳಿದ ಮಹಿಳೆಯರ ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ಸ್ಥಾನಮಾನವನ್ನು ಉನ್ನತೀಕರಿಸುವ ಪ್ರಕ್ರಿಯೆ. ಮಹಿಳೆಯರನ್ನು ಸಬಲೀಕರಣಗೊಳಿಸುವುದರಿಂದ ಆರ್ಥಿಕತೆಯ ಅಭಿವೃದ್ಧಿಯಾಗುತ್ತದೆ. ಉತ್ಪಾದಕತೆ ಮತ್ತು ಬೆಳವಣಿಗೆಗೆ ಉತ್ತೇಜನ ಸಿಗುತ್ತದೆ. ಕರ್ನಾಟಕದ ಬೀಬಿ ಫಾತಿಮಾ ಅವರ ಕಥೆಯು, ಮಹಿಳೆಯರ ವ್ಯವಹಾರ ಅಥವಾ ಉದ್ಯಮವು ಅವರಿಗೆ ಆರ್ಥಿಕ ಸ್ವಾತಂತ್ರ್ಯ ಮತ್ತು ಸಬಲೀಕರಣವನ್ನು ನೀಡುವ ಮೂಲಕ ಸಮಾಜವನ್ನು ಗಮನಾರ್ಹವಾಗಿ ಬದಲಾಯಿಸುವ ಸಾಮರ್ಥ್ಯವನ್ನು ಹೊಂದಿದೆ ಎಂಬುದನ್ನು ಸಾಬೀತುಪಡಿಸುತ್ತದೆ.


ಬೀಬಿ ಫಾತಿಮಾ ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲ್ಲೂಕಿನ ತೀರ್ಥ ಗ್ರಾಮದ 38 ವರ್ಷದ ಯುವ, ಉದ್ಯಮಶೀಲ ಪದವೀಧರೆ. ಸಹಜ ಸಮೃದ್ಧ ಎಂಬ ಎನ್‌ಜಿಒ ಸಹಾಯದಿಂದ, ಬೀಬಿ ಫಾತಿಮಾ 2018 ರಿಂದ ಮಹಿಳೆಯರ ಸಬಲೀಕರಣಕ್ಕಾಗಿ ಕೆಲಸ ಮಾಡುತ್ತಿದ್ದಾರೆ. ಆರಂಭದಲ್ಲಿ ಅವರು ಬೀಬಿ ಫಾತಿಮಾ ಸ್ವ ಸಹಾಯ ಸಂಘ ಎಂಬ ಸ್ವಸಹಾಯ ಗುಂಪು (SHG) ಸ್ಥಾಪಿಸಿದರು. ಶಿಗ್ಗಾವಿ ಮತ್ತು ಕುಂದಗೋಳ ಎಂಬ ಎರಡು ತಾಲ್ಲೂಕುಗಳಲ್ಲಿ ಆರು ಸ್ವಸಹಾಯ ಗುಂಪುಗಳ ರಚನೆಗೆ ಮತ್ತಷ್ಟು ಅನುಕೂಲ ಮಾಡಿಕೊಟ್ಟರು.

ಸಮುದಾಯ ಬೀಜ ಬ್ಯಾಂಕ್

ಬೀಜಗಳ ಉತ್ಪಾದನೆ ಮತ್ತು ಲಭ್ಯತೆಯನ್ನು ಹೆಚ್ಚಿಸುವ ಸಲುವಾಗಿ ಬೀಬಿ ಫಾತಿಮಾ 2019 ರಲ್ಲಿ ತೀರ್ಥದಲ್ಲಿ ಬೀಜ ಬ್ಯಾಂಕ್ ಆರಂಭಿಸಿದರು. ಪ್ರಸ್ತುತ, ಅವರು ವಿವಿಧ ಬೆಳೆಗಳ 300 ಬಗೆಯ ಬೀಜಗಳನ್ನು ಹೊಂದಿದ್ದಾರೆ. ಅವರ ಬಳಿ 75 ಬಗೆಯ ರಾಗಿ, 25 ಬಗೆಯ ಸಾಮೆ, 25 ಬಗೆಯ ಕೊರಲೆ, 10 ಬಗೆಯ ನವಣೆ  ಮತ್ತು ಎರಡು ಬಗೆಯ ಬರಗು ಬೀಜಗಳಿವೆ. ಅವರ ಬೀಜ ಬ್ಯಾಂಕಿನಲ್ಲಿ ತರಕಾರಿಗಳು ಮತ್ತು ದ್ವಿದಳ ಧಾನ್ಯಗಳ ವಿಭಿನ್ನ ಬಗೆಯ ಬೀಜಗಳಿವೆ.

ರೈತರು ತಮ್ಮ ಜಮೀನಿನಲ್ಲಿ ಅನೇಕ ಬೆಳೆಗಳನ್ನು ಬೆಳೆಯಲು ಸಹಾಯ ಮಾಡಲು 9 ಬಗೆಯ ಬೀಜಗಳನ್ನು ಒಳಗೊಂಡಿರುವ “ನವಧಾನ್ಯ ಕಿಟ್” ಅಭಿವೃದ್ಧಿಪಡಿಸಲಾಗಿದೆ. ಇದು ದ್ವಿದಳ ಧಾನ್ಯಗಳು, ಎಣ್ಣೆ ಬೀಜಗಳು, ರಾಗಿಗಳು ಮತ್ತು ತರಕಾರಿಗಳಂತಹ ವಿವಿಧ ಬೀಜಗಳನ್ನು ಒಳಗೊಂಡಿದೆ. ಪ್ರತಿ ವರ್ಷ, ಈ ಕಿಟ್‌ಗಳನ್ನು ಹಾವೇರಿ, ಧಾರವಾಡ, ಗುಲ್ಬರ್ಗಾ, ಮೈಸೂರು ಮತ್ತು ಮಂಡ್ಯ ಜಿಲ್ಲೆಗಳ ಆಯ್ದ ರೈತರಿಗೆ ಉಚಿತವಾಗಿ ವಿತರಿಸಲಾಗುತ್ತದೆ. ಆಸಕ್ತರಿಗೆ, ಈ ಕಿಟ್‌ಗಳನ್ನು ಮಾರಾಟ ಕೂಡ ಮಾಡಲಾಗುತ್ತದೆ.

ಬೀಜ ಬ್ಯಾಂಕ್ ಎಂದರೆ ಭವಿಷ್ಯದ ಪೀಳಿಗೆಗೆ ಶುದ್ಧ ತಳಿಗಳ ವೈವಿಧ್ಯತೆಯನ್ನು ಕಾಪಾಡಿಕೊಳ್ಳಲು ಬೀಜಗಳನ್ನು ಸಂಗ್ರಹಿಸುವ ಸೌಲಭ್ಯ. ಬೀಜಗಳನ್ನು ಸಾಮಾನ್ಯವಾಗಿ ಹವಾಮಾನ ನಿಯಂತ್ರಣ ವ್ಯವಸ್ಥೆಯಲ್ಲಿ, ಕಡಿಮೆ ಆರ್ದ್ರತೆ ಮತ್ತು ಸೂಕ್ತವಾದ ತಾಪಮಾನದಲ್ಲಿ ಸಂಗ್ರಹಿಸಲಾಗುತ್ತದೆ. ಇದು ಬೀಜಗಳ ದೀರ್ಘಕಾಲೀನ ಸಂರಕ್ಷಣೆಗೆ ಸಹಾಯ ಮಾಡುತ್ತದೆ. ಬೀಜ ಬ್ಯಾಂಕ್ ಎನ್ನುವುದು ಒಂದು ರೀತಿಯ ವಿಮೆಯಾಗಿದ್ದು, ಇದು ಸಾಧ್ಯವಾದಷ್ಟು ಸಸ್ಯ ಪ್ರಭೇದಗಳನ್ನು ಅಳಿವಿನಂಚಿನಿಂದ ಸಂರಕ್ಷಿಸಲು ನಮಗೆ ಅನುವು ಮಾಡಿಕೊಡುತ್ತದೆ. ಉತ್ತಮ ಧನಸಹಾಯದೊಂದಿಗೆ ಉತ್ತಮವಾಗಿ ನಿರ್ವಹಿಸಲ್ಪಡುವ ಬೀಜ ಬ್ಯಾಂಕುಗಳು ಹವಾಮಾನ ಬದಲಾವಣೆಯಿಂದ ಕೃಷಿಯ ಮೇಲೆ ಉಂಟಾಗುವ ಜಾಗತಿಕ ಪರಿಣಾಮವನ್ನು ತಗ್ಗಿಸುವಲ್ಲಿ ನಿರ್ಣಾಯಕವಾಗಿವೆ.

2021 ರಲ್ಲಿ, ಸಹಜ ಸಮೃದ್ಧ ಸಹಾಯದಿಂದ, ಹೈದರಾಬಾದ್‌ನ ಐಸಿಎಆರ್-ಐಐಎಂಆರ್‌ನ ಆರ್ಥಿಕ ನೆರವಿನೊಂದಿಗೆ ಗ್ರಾಮದಲ್ಲಿ ಒಂಬತ್ತು ರಾಗಿ ಸಂಸ್ಕರಣಾ ಯಂತ್ರಗಳನ್ನು (ಕೋಷ್ಟಕ 1 ನೋಡಿ) ಸ್ಥಾಪಿಸಲಾಯಿತು. ಇದನ್ನು ಬೀಬಿ ಫಾತಿಮಾ ಅವರ ನೇತೃತ್ವದಲ್ಲಿ ನಿರ್ವಹಿಸಲಾಗುತ್ತಿದೆ. ಈ ಘಟಕದಲ್ಲಿ, ರಾಗಿ ದೋಸೆ ಮಿಶ್ರಣ, ರಾಗಿ ಮಲ್ಟಿಗ್ರೇನ್ ಹಿಟ್ಟು, ರಾಗಿಯ ವಿಶೇಷ ಮಾಲ್ಟ್, ಎಲ್ಲಾ ಧಾನ್ಯಗಳ ಹಿಟ್ಟು ಮುಂತಾದ ವಿವಿಧ ಉತ್ಪನ್ನಗಳನ್ನು ಉತ್ಪಾದಿಸಲಾಗುತ್ತಿದೆ. ಇದರೊಂದಿಗೆ ಈ ನೈಸರ್ಗಿಕ ಉತ್ಪನ್ನಗಳಾದ ಪಪ್ಪಾಯಿ ಸೋಪ್‌ಗಳು, ಶುದ್ಧ ತೆಂಗಿನ ಎಣ್ಣೆಯನ್ನು ಬಳಸಿ ತಯಾರಿಸಿದ ಇದ್ದಿಲು ಸೋಪ್, ತುಳಸಿ, ಬೇವು, ಬೇವಿನ ರಸ, ಹಾಲು, ಅರಿಶಿನ ಮತ್ತು ಅಲೋವೆರಾವನ್ನು ಸಹ ಉತ್ಪಾದಿಸಲಾಗುತ್ತಿದೆ. ತಂತ್ರಜ್ಞಾನಗಳ ಬಳಕೆಯನ್ನು ಸಮುದಾಯಕ್ಕೆ ಪರಿಚಯಿಸಲು ಎಲ್ಲಾ ಮೌಲ್ಯವರ್ಧಿತ ಉತ್ಪನ್ನಗಳನ್ನು ಹಂಪಿ ಉತ್ಸವದಂತಹ ವಿವಿಧ ಕಾರ್ಯಕ್ರಮಗಳಲ್ಲಿ ಪ್ರದರ್ಶಿಸಲಾಗುತ್ತದೆ.

2023 ರಲ್ಲಿ, “ದೇವಧಾನ್ಯ” ಎನ್ನುವ ರೈತ ಉತ್ಪಾದಕರ ಸಂಘಟನೆ (FPO) 1000 ಷೇರುದಾರರೊಂದಿಗೆ ರಚನೆಯಾಯಿತು. ಅದರಲ್ಲಿ 80 ಪ್ರತಿಶತ ಮಹಿಳೆಯರಿದ್ದರು. FPO ಮೂಲಕ, ಅವರು ಪ್ರತಿ ವಾರ 5 ಕ್ವಿಂಟಾಲ್‌ ವಿವಿಧ ಮಿಲೆಟ್‌ ಫ್ಲೇಕ್ಸ್‌ಗಳನ್ನು ಮಾರಾಟ ಮಾಡುತ್ತಾರೆ. ಅವರು ಮೇಳಗಳು ಮತ್ತು ಸಮ್ಮೇಳನಗಳ ಸಮಯದಲ್ಲಿ ಅಡುಗೆ ಸೇವೆಗಳನ್ನು ಸಹ ಒದಗಿಸುತ್ತಾರೆ. ಜಿಲ್ಲೆಯಲ್ಲಿ ರೊಟ್ಟಿಯನ್ನು ರೂ. 7-8ರಂತೆ ಮಾರಿದರೆ, ಹೊರಗಡೆ ರೂ. 10ಕ್ಕೆ ಮಾರುತ್ತಾರೆ. ಒಟ್ಟಾರೆ, ಸರಿಸುಮಾರು ಶೇ. 20% ಲಾಭ ಪಡೆಯುತ್ತಾರೆ.

ಕೋಷ್ಟಕ 1: ಕಿರುಧಾನ್ಯ ಸಂಸ್ಕರಣಾ ಯಂತ್ರಗಳು

ಅಸ್ಪಿರೇಟರ್‌ ಧಾನ್ಯಗಳ ಹೊಟ್ಟನ್ನು ತೆಗೆಯಲು ಬಳಸಲಾಗುತ್ತದೆ. ಅಕ್ಕಿ ಮತ್ತು ಹೊಟ್ಟನ್ನು ಅಸ್ಪಿರೇಟರ್‌ ಮೂಲಕ ಬೇರ್ಪಡಿಸಲಾಗುತ್ತದೆ. ಅಕ್ಕಿ ಮತ್ತು ಹೊಟ್ಟಿಗೆ ಎರಡು ಬೇರೆ ಬೇರೆ ಚೇಂಬರ್‌ಗಳಿರುತ್ತದೆ. ಪಾಲಿಶ್‌ ಆಗಿರದ ಧಾನ್ಯವು ಅಂತಿಮವಾಗಿ ಹೊರಬರುತ್ತದೆ.
ಗ್ರೇಡಿಂಗ್‌ ಯಂತ್ರ ಗ್ರೇಡರ್‌ ಅನ್ನು ಧಾನ್ಯಗಳ ಗಾತ್ರಕ್ಕನುಗುಣವಾಗಿ ಶ್ರೇಣಿಕರಣಗೊಳಿಸಲು ಬಳಸಲಾಗುತ್ತದೆ.

ಡಿಸ್ಟೋನರ್ I ಮತ್ತು

ಡಿಸ್ಟೋನರ್ II

ಧಾನ್ಯ ಮತ್ತು ಕಲ್ಲುಗಳನ್ನು ಜರಡಿ ಹಿಡಿಯುವ ಮೂಲಕ ಬೇರ್ಪಡಿಸಲಾಗುತ್ತದೆ. ದೊಡ್ಡ ಕಲ್ಲುಗಳು ಮೇಲ್ಭಾಗದಲ್ಲಿ ಉಳಿದು, ಶಕ್ತಿ ಹಾಗೂ ಗಾಳಿಯ ಮೂಲಕ ಅವು ಧಾನ್ಯದಿಂದ ಬೇರಾಗಿ ಹೊರಬರುತ್ತದೆ.
ಹಿಟ್ಟಿನ ಗಿರಣಿ ಹಿಟ್ಟಿನ ಗಿರಣಿಗಳನ್ನು ಧಾನ್ಯಗಳನ್ನು ಚಿಕ್ಕದಾಗಿ ಒಡೆಯಲು, ಹಿಟ್ಟು ಮಾಡಲು ಬಳಸಲಾಗುತ್ತದೆ. ನಿಮ್ಮ ಅಗತ್ಯಕ್ಕೆ ತಕ್ಕಂತೆ ಮಾರುಕಟ್ಟೆಯಲ್ಲಿ ಲಭ್ಯವಿರುವ ವಿವಿಧ ಗಾತ್ರಗಳಲ್ಲೊಂದನ್ನು ಆಯ್ಕೆ ಮಾಡಿಕೊಳ್ಳಬಹುದು.
ಆಸ್ಪಿರೇಟರ್‌ ಮತ್ತು ಡಿಹಲ್ಲರ್‌ ಕಚ್ಚಾ ವಸ್ತುಗಳನ್ನು ಶುದ್ಧಗೊಳಿಸಿದ ಬಳಿಕ ಹೊಟ್ಟು ಬಿಡಿಸಲು ಹಲ್ಲರ್‌ಗೆ ಹಾಕಲಾಗುತ್ತದೆ.
ಪ್ಯಾಕಿಂಗ್‌ ಉತ್ಪನ್ನಗಳನ್ನು ಕ್ಷಮತೆಯಿಂದ ಪರಿಣಾಮಕಾರಿಯಾಗಿ ಪ್ಯಾಕ್‌ ಮಾಡಲು ಪ್ಯಾಕಿಂಗ್‌ ಯಂತ್ರಗಳನ್ನು ಬಳಸಲಾಗುತ್ತದೆ. ಪ್ಯಾಕಿಂಗ್‌ ಯಂತ್ರಗಳನ್ನು ವಿವಿಧ ರೀತಿಯಲ್ಲಿದ್ದು, ಪ್ರತಿಯೊಂದು ನಿರ್ದಿಷ್ಟ ಪ್ಯಾಕಿಂಗ್‌ ಅಗತ್ಯಕ್ಕೆ ತಕ್ಕಂತೆ ವಿನ್ಯಾಸಗೊಂಡಿರುತ್ತದೆ.

 

ಆಲ್‌ ಇಂಡಿಯಾ ಕೋ ಆರ್ಡಿನೆಟೆಡ್‌ ರಿಸರ್ಚ್‌ ಪ್ರಾಜೆಕ್ಟ್‌ – ವುಮೆನ್‌ ಇನ್‌ ಅಗ್ರಿಕಲ್ಚರ್‌ ಸಹಯೋಗದಲ್ಲಿ

ಐಸಿಎಆರ್‌ನ ಅಖಿಲ ಭಾರತ ಸಂಯೋಜಿತ ಸಂಶೋಧನಾ ಯೋಜನೆ –  ಮಹಿಳಾ ಕೃಷಿ, ಭುವನೇಶ್ವರದ ಕೇಂದ್ರೀಯ ಕೃಷಿ ಮಹಿಳಾ ಸಂಸ್ಥೆ (CIWA) 12 ರಾಜ್ಯಗಳಲ್ಲಿ ಶ್ರೀ ಅನ್ನ ಗ್ರಾಮ ಯೋಜನೆ ಎಂಬ ಯೋಜನೆಯನ್ನು ಜಾರಿಗೆ ತಂದಿತು. ದತ್ತು ಪಡೆದ ಪ್ರದೇಶ/ಗ್ರಾಮಗಳಲ್ಲಿ ರಾಗಿ ಉತ್ಪಾದನೆಯನ್ನು ಉತ್ತೇಜಿಸುವುದು ಮತ್ತು ಪೌಷ್ಠಿಕಾಂಶವನ್ನು ಹೆಚ್ಚಿಸಲು ಕಿರುಧಾನ್ಯ ಆಧಾರಿತ ಆಹಾರಗಳ ಸೇವನೆಯನ್ನು ಉತ್ತೇಜಿಸುವುದು ಇದರ ಉದ್ದೇಶವಾಗಿತ್ತು. AICRP-WIA, ಧಾರವಾಡ ಕೇಂದ್ರ, ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲ್ಲೂಕಿನ ಶಿಶುವಿನಾಳ ಮತ್ತು ಬನ್ನಿಕೊಪ್ಪ ಗ್ರಾಮಗಳನ್ನು ತನ್ನ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲು ಆಯ್ಕೆ ಮಾಡಿದೆ.

ಈ ಕಾರ್ಯಕ್ರಮದಡಿಯಲ್ಲಿ ದತ್ತು ಪಡೆದ ಹಳ್ಳಿಗಳಲ್ಲಿ ಕಿರುಧಾನ್ಯಗಳ ಉತ್ಪಾದನೆಯನ್ನು ಉತ್ತೇಜಿಸಲು ತೀರ್ಥದ ಬೀಜ ಬ್ಯಾಂಕ್‌ನಿಂದ ಬೀಜಗಳನ್ನು ಖರೀದಿಸಲಾಯಿತು.

ಪ್ರಶಸ್ತಿಗಳು ಮತ್ತು ಮನ್ನಣೆ

ಬೀಬಿ ಫಾತಿಮಾ ತಮ್ಮ ನಿರಂತರ ಪ್ರಯತ್ನ, ಆಸಕ್ತಿ ಮತ್ತು ಕುಟುಂಬ ಬೆಂಬಲದಿಂದ ಆರ್ಥಿಕ ಸ್ವಾತಂತ್ರ್ಯವನ್ನು ಗಳಿಸಿದರು. ಸಾಮಾಜಿಕ ಗೌರವ ಮತ್ತು ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಂಡರು. ೨೦೨೩ ರಲ್ಲಿ ಡೆಕ್ಕನ್ ಹೆರಾಲ್ಡ್ ಅವರನ್ನು ಬದಲಾವಣೆಯ ಹರಿಕಾರ್ತಿ ಎಂದು ಗುರುತಿಸಿತು. ಬೆಂಗಳೂರು, ಮಂಡ್ಯ, ಚೆನ್ನೈ ಮತ್ತು ದೆಹಲಿಯ ಅನೇಕ ಸಂಸ್ಥೆಗಳು ಅವರಿಗೆ ಅನೇಕ ಪ್ರಶಸ್ತಿಗಳು, ನಗದು ಪ್ರಮಾಣಪತ್ರಗಳು ಮತ್ತು ಪದಕಗಳನ್ನು ನೀಡಿ ಗೌರವಿಸಿವೆ. ಈಗ ಬೀಬಿ ಫಾತಿಮಾ ಕುಂದಗೋಳದಲ್ಲಿ 40 ಮತ್ತು ಶಿಗ್ಗಾವಿಯಲ್ಲಿ 10 ಮತ್ತು NRLM-ಸಂಜೀವಿನಿ ಗುಂಪಿನ ಅಡಿಯಲ್ಲಿ 83 ಸ್ವಸಹಾಯ ಗುಂಪುಗಳನ್ನು ರಚಿಸಿದ್ದಾರೆ. ಪ್ರಸ್ತುತ ಅವರು ಪಂಚಾಯತ್‌ನಲ್ಲಿ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಉದ್ಯಮಶೀಲತಾ ಚಟುವಟಿಕೆಗಳು ಮತ್ತು ಮೌಲ್ಯವರ್ಧನೆಯ ಮೂಲಕ ಗ್ರಾಮೀಣ ಮಹಿಳೆಯರನ್ನು ಸಬಲೀಕರಣಗೊಳಿಸುವುದರಿಂದ ಅವರ ಆದಾಯದೊಂದಿಗೆ ಆತ್ಮವಿಶ್ವಾಸವೂ ಹೆಚ್ಚಾಗುತ್ತದೆ. ಗ್ರಾಮ ಮಟ್ಟದಲ್ಲಿ ಸಾಮರ್ಥ್ಯ ವೃದ್ಧಿಗೂ ಸಹಕಾರಿಯಾಗುತ್ತದೆ. ಬೀಬಿ ಫಾತಿಮಾ ಅವರ ಪ್ರಯತ್ನಗಳು ಸಾಮರ್ಥ್ಯ ಮತ್ತು ಕೌಶಲ್ಯ ನಿರ್ಮಾಣದ ಮೂಲಕ ಮಹಿಳೆಯರ ಯಶಸ್ಸಿನ ಮೇಲೆ ಬೆಳಕು ಚೆಲ್ಲುತ್ತವೆ. ಆದ್ದರಿಂದ, ವಿಸ್ತರಣಾ ಕಾರ್ಯಕರ್ತರು ಅಂತಹ ಉದ್ಯಮಿಗಳನ್ನು ಗುರುತಿಸಿ, ಅವರನ್ನು ಉತ್ತೇಜಿಸಬೇಕು. ಇತರ ರೈತರು, ವಿಶ್ವವಿದ್ಯಾಲಯಗಳು, ಖಾಸಗಿ ಕಂಪನಿಗಳು, ಸಂಸ್ಕರಣಾ ಘಟಕಗಳು ಮತ್ತು ಗ್ರಾಹಕರೊಂದಿಗೆ ಸಂಪರ್ಕ ಕಲ್ಪಿಸಬೇಕು. 

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಬೀಬಿ ಫಾತೀಮ, ತೀರ್ಥ ಗ್ರಾಮ, ಹಾವೇರಿ ಜಿಲ್ಲೆ ದೂ.ಸಂ- 8431988093.

 


Geeta P. Channal
Senior Scientist, AICRP-WIA (Extn)
University of Agricultural Sciences
Dharwad - 580 005
Karnataka, India
E-mail: geetrajpatil@yahoo.co.in

Rajeshwari Desai
Senior Scientist, AICRP-WIA (FRM)
University of Agricultural Sciences
Dharwad - 580 005
Karnataka, India


ಆಂಗ್ಲ ಮೂಲ : ಲೀಸಾ ಇಂಡಿಯಾ; ಸಂಪುಟ :೨೬; ಸಂಚಿಕೆ : ೨ ; ಜೂನ್‌ ೨೦‌೨೪

Recent Posts

ವಿಶ್ವ ಆಹಾರ ದಿನ 2025

ವಿಶ್ವ ಆಹಾರ ದಿನ 2025

ಆರೋಗ್ಯಕರ ಹಸಿವು ಮುಕ್ತ ಜಗತ್ತನ್ನು ನಿರ್ಮಿಸಲು ಸುಸ್ಥಿರ ಕೃಷಿ, ನ್ಯಾಯಯುತ ಆಹಾರ ವಿತರಣೆ ಮತ್ತು ಜವಾಬ್ದಾರಿಯುತ ಸೇವನೆಯ ಮೂಲಕ ಸಾಮೂಹಿಕ ಕ್ರಮಕ್ಕೆ ಇದು ಕರೆ ನೀಡುತ್ತದೆ. ಅಂದಾಜು 673 ಮಿಲಿಯನ್ ಜನರು ಹಸಿವಿನಿಂದ ಬದುಕುತ್ತಿದ್ದಾರೆ, ಇದು ಸಾಮೂಹಿಕ ಕ್ರಿಯೆಯ ತುರ್ತು ಅಗತ್ಯವನ್ನು ಎತ್ತಿ ತೋರಿಸುತ್ತದೆ.

ಬಸನಗೌಡರ ವೈವಿಧ್ಯಮಯ ಬೆಳೆಗಳ ತೋಟ

ಬಸನಗೌಡರ ವೈವಿಧ್ಯಮಯ ಬೆಳೆಗಳ ತೋಟ

ಹುಣಸೆ ಮರ ಮುಪ್ಪಾದರೂ, ಹುಳಿ ಮುಪ್ಪಲ್ಲ ಅನ್ನುವ ಗಾದೆ ಮಾತಿನಂತೆ ಗದಗ ತಾಲೂಕಿನ ಪಾಪನಾಶಿ ಗ್ರಾಮದ ಪ್ರಗತಿಪರ ರೈತರಾದ ಬಸನಗೌಡ ರಾಯನಗೌಡ ಪಾಟೀಲರು ತಮ್ಮ ೭೭ನೇ ವಯಸ್ಸಿನಲ್ಲೂ ಅಪರಿಮಿತ ಉತ್ಸಾಹದೊಂದಿಗೆ ಆರೋಗ್ಯಕರ ಜೀವನ ನಡೆಸುತ್ತಿದ್ದಾರೆ. ಬಿ.ಎ. ಪದವಿ ಕಲಿಯುವಾಗ ಒಕ್ಕಲುತನ ಮಾಡಿ ಭೂಮಿ ತಾಯಿಯ ಮಡಿಲಲ್ಲಿ ಸಂತೃಪ್ತಿಯ ಬದುಕು ಕಟ್ಟಿಕೊಳ್ಳಬೇಕು ಎಂದು ನಿರ್ಧರಿಸಿದರು. ನಂತರ ಬಿ.ಎ. ಪದವಿಯನ್ನು ಅರ್ದದಲ್ಲಿಯೇ ಕೈಬಿಟ್ಟು ಮಾದರಿ ಪ್ರಗತಿಪರ ರೈತನಾಗಬೇಕು ಎಂಬ ದೃಡಸಂಕಲ್ಪದಿಂದ ತಮ್ಮ ತಂದೆಯೊಂದಿಗೆ ವ್ಯವಸಾಯ ಪ್ರಾರಂಭಿಸಿದರು. ಒಕ್ಕಲುತನ  ಪ್ರಾರಂಭಿಸಿದಾಗ ಗೌಡರ ವಯಸ್ಸು ೨೧, ಸುಮಾರು ೫೫ ವರ್ಷಗಳಿಂದ ನಿರಂತರವಾಗಿ ವಿವಿಧ ಬಗೆಯ ಕೃಷಿ, ತೋಟಗಾರಿಕೆ, ಅರಣ್ಯ  ಬೆಳೆಗಳನ್ನು ಬೆಳೆಯುತ್ತಾ ಅವುಗಳ ಬಗ್ಗೆ ಅಪಾರ ಜ್ಞಾನವನ್ನು ಹೊಂದಿರುವರು. ಅವರ ಚಿಕ್ಕ ಮಗ ಪ್ರವೀಣಗೌಡ ಪಾಟೀಲ ತೋಟ ನಿರ್ವಹಣೆ ಮಾಡಲು ಸಹಾಯ ಮಾಡುವನು.

ಟರ್ಕಿ ಕೋಳಿ ಸಾಕಾಣಿಕೆ ಮಹಿಳೆಯರಿಗೆ ಪರ್ಯಾಯ ಜೀವನೋಪಾಯದ ಅವಕಾಶ

ಟರ್ಕಿ ಕೋಳಿ ಸಾಕಾಣಿಕೆ ಮಹಿಳೆಯರಿಗೆ ಪರ್ಯಾಯ ಜೀವನೋಪಾಯದ ಅವಕಾಶ

ದಕ್ಷಿಣ ಪರಗಣ ಜಿಲ್ಲೆಯ ಮಹಿಳೆಯರು ಟರ್ಕಿ ಕೋಳಿ ಸಾಕಾಣಿಕೆಯನ್ನು ಯಶಸ್ವಿಯಾಗಿ ಕೈಗೆತ್ತಿಕೊಂಡಿದ್ದಾರೆ. ಸ್ಥಳೀಯ ಕೆವಿಕೆಯ ಪ್ರಚುರಪಡಿಸಿದ ಈ ಮಾದರಿಯು ಅಭಿವೃದ್ಧಿಗಿದ್ದ ಅಡೆತಡೆಗಳನ್ನು ನಿವಾರಿಸಿ ಮಹಿಳಾ ಗುಂಪುಗಳ ಸಾಮರ್ಥ್ಯವನ್ನು ತೆರೆದಿಟ್ಟಿದೆ.

YouTube
Instagram
WhatsApp