ಸುಸ್ಥಿರ ಕೃಷಿಯೆಡೆಗಿನ ಬದಲಾವಣೆ ಭರವಸೆ ನೀಡುವಂತಹದ್ದಾದರೂ ಸವಾಲುಗಳು ಇನ್ನೂ ಉಳಿದಿವೆ. ಖಾರಿಫ್ ಋತುವಿನಲ್ಲಿಯ ಭಾರಿ ಮಳೆಯು ಬೇರುಕಾಂಡ ಕೊಳೆಯುವಂತಹ ಸಮಸ್ಯೆಗಳನ್ನು ಹೆಚ್ಚಿಸಿದೆ. ಇದರಿಂದಾಗಿ ರೈತರು ರಾಸಾಯನಿಕ ಒಳಸುರಿಯುವಿಕೆಗಳನ್ನು ಹೆಚ್ಚಾಗಿ ಬಳಸುತ್ತಿದ್ದು ಕೃಷಿವೆಚ್ಚಗಳನ್ನು ಹೆಚ್ಚಿಸಿವೆ. 10-ಡ್ರಮ್ ಥಿಯರಿಯಂತಹ ಉಪಕ್ರಮಗಳು ರೈತರಿಗೆ ಇಂತಹ ಸವಾಲುಗಳನ್ನು ಸುಸ್ಥಿರ ರೀತಿಯಲ್ಲಿ ಎದುರಿಸುವ ಸಾಧನವಾಗಿದೆ.
ದ ವಾಟರ್‌ಶೆಡ್ ಆರ್ಗನೈಸೇಶನ್ ಟ್ರಸ್ಟ್ (WOTR) ಮಹಾರಾಷ್ಟ್ರದ ಜಲ್ನಾ, ಸೋಲಾಪುರ ಮತ್ತು ಧಾರಾಶಿವ್ ಜಿಲ್ಲೆಗಳಾದ್ಯಂತ ಕೃಷಿಯಲ್ಲಿ ಸುಸ್ಥಿರತೆ ಮತ್ತು ಹವಾಮಾನ ಸ್ಥಿತಿಸ್ಥಾಪಕತ್ವವನ್ನು ಪ್ರತಿಪಾದಿಸುತ್ತಿದೆ. ವಿನೂತನ ಪದ್ಧತಿಗಳು ಮತ್ತು ಸಮುದಾಯ ಆಧಾರಿತ ವಿಧಾನಗಳ ಮೂಲಕ, WOTR ಬೆಳೆ ಉತ್ಪಾದನೆಯನ್ನು ಹೆಚ್ಚಿಸುವುದು, ಕೃಷಿ ವೆಚ್ಚವನ್ನು ಕಡಿಮೆ ಮಾಡುವುದು ಮತ್ತು ಪರಿಸರ ಸ್ನೇಹಿ ಕೃಷಿ ವಿಧಾನಗಳನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ. ಸ್ಥಳೀಯ ರೈತರ ಜೀವನವನ್ನು ಪರಿವರ್ತಿಸುತ್ತಿರುವ ಜೈವಿಕ ಸಂಪನ್ಮೂಲ ನಿರ್ವಹಣೆಗೆ ಸುಸ್ಥಿರ ಚೌಕಟ್ಟನ್ನು ರೂಪಿಸುತ್ತಿರುವ 10-ಡ್ರಮ್ ಥಿಯರಿಯ ಅನುಷ್ಠಾನವು ಅವರ ಪ್ರಮುಖ ಉಪಕ್ರಮಗಳಲ್ಲಿ ಒಂದಾಗಿದೆ.
10-ಡ್ರಮ್ ಯೂನಿಟ್ ಥಿಯರಿಯು ಪ್ರಯೋಜನಕಾರಿ ಸೂಕ್ಷ್ಮಜೀವಿಗಳು, ಖನಿಜಗಳು ಮತ್ತು ಪೋಷಕಾಂಶಗಳನ್ನು ಹೊಂದಿರುವ 10 ವಿಭಿನ್ನ ಮಿಶ್ರಣಗಳ ಗುಂಪು. ಇದರ ಬಳಕೆಯು, ಕೀಟಗಳು ಮತ್ತು ರೋಗಗಳನ್ನು ನಿರ್ವಹಿಸುವ ಮೂಲಕ, ಮಣ್ಣಿನ ಸಾವಯವ ಇಂಗಾಲವನ್ನು ಹೆಚ್ಚಿಸುವ ಮೂಲಕ ಮತ್ತು ಪ್ರೋಟೀನ್, ಲಿಪಿಡ್‌ಗಳು ಮತ್ತು ಸಸ್ಯಗಳ ಚಯಾಪಚಯ ಕ್ರಿಯೆಗಳ ಸಂಶ್ಲೇಷಣೆಯನ್ನು ಹೆಚ್ಚಿಸುವ ಮೂಲಕ ಸಸ್ಯಗಳ ಬೆಳವಣಿಗೆಯನ್ನು ಬೆಂಬಲಿಸುತ್ತದೆ. EM-2, DF-1, ಹ್ಯೂಮಿಕ್ ಆಮ್ಲ, ಫುಲ್ವಿಕ್ ಆಮ್ಲ, ತ್ಯಾಜ್ಯ ವಿಘಟಕ ಮತ್ತು ಏಳು ಧಾನ್ಯಗಳ ಮಿಶ್ರಣ (ಸ್ಲರಿ) ಸೇರಿದಂತೆ ಮೊದಲ ಐದು ಮಿಶ್ರಣಗಳನ್ನು ಹನಿ ನೀರಾವರಿ ಮೂಲಕ ಬೇರಿಗೆ (ರೈಜೋಸ್ಪಿಯರ್) ನೀಡಲಾಗುತ್ತದೆ. ಇಎಮ್ ದಶಪರ್ಣಿ ಆರ್ಕ್, ಇಎಮ್ ಅಮಿಲ್ ಆರ್ಕ್, ಇಎಮ್ ವೆಮಿಲ್ ಆರ್ಕ್, ಇಎಮ್ ದೇಸಿ ಕೆಲ್ಪ್ ಮತ್ತು ಇಎಮ್ ಫ್ರೂಟ್ ಆರ್ಕ್ ಗಳನ್ನು ಕೀಟ ಮತ್ತು ರೋಗ ನಿರ್ವಹಣೆ ಹಾಗೂ ಸಸ್ಯದ ಬೆಳವಣಿಗೆಗಾಗಿ ಎಲೆಗಳ ಮೇಲೆ ಸಿಂಪಡಿಸಲಾಗುತ್ತದೆ.
ಫೋಟೋ: 10-ಡ್ರಮ್ ಯೂನಿಟ್ ವಿಧಾನವು ಶುಂಠಿ ಕೃಷಿಯಲ್ಲಿ “ಪವಾಡ“ವನ್ನೇ ಮಾಡಿದೆ. ಇದು ದುಬಾರಿ ರಾಸಾಯನಿಕ ಒಳಸುರಿಯುವಿಕೆಗಳ ಮೇಲಿನ ಅವಲಂಬನೆಯನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡುವುದರ ಜೊತೆಗೆ ಉತ್ತಮ ಬೆಳೆ ಮತ್ತು ಮಣ್ಣಿನ ಆರೋಗ್ಯವನ್ನು ಖಚಿತಪಡಿಸುತ್ತದೆ.
ತ್ಯಾಜ್ಯ ಮುಕ್ತ ಕೃಷಿಗೆ ಉತ್ತೇಜನ
ವಾಲ್ಮಾರ್ಟ್ ಫೌಂಡೇಶನ್‌ನಿಂದ ಧನಸಹಾಯ ಪಡೆದ ProRISE ಯೋಜನೆಯಡಿಯಲ್ಲಿ, WOTR ಸ್ಥಳೀಯ ಕೃಷಿ ಸಮುದಾಯಗಳಿಗೆ ತ್ಯಾಜ್ಯ ಮುಕ್ತ ಕೃಷಿ ಪದ್ಧತಿಗಳನ್ನು ಪರಿಚಯಿಸಿದೆ. ಈ ಯೋಜನೆಯು 11 ರೈತ ಉತ್ಪಾದಕ ಕಂಪನಿಗಳಲ್ಲಿ (FPCs) 10-ಡ್ರಮ್ ಯೂನಿಟ್ ಥಿಯರಿಯ ಆಧಾರದ ಮೇಲೆ 16 ಘಟಕಗಳನ್ನು ಸ್ಥಾಪಿಸಲು ಅನುಕೂಲ ಮಾಡಿಕೊಟ್ಟಿದೆ. ಈ ಘಟಕಗಳು ಜೈವಿಕ ಉತ್ತೇಜಕಗಳು, ಜೈವಿಕ ಗೊಬ್ಬರಗಳು, ಸಾವಯವ ಸೂತ್ರೀಕರಣಗಳು ಮತ್ತು ಜೈವಿಕ ಕೀಟನಾಶಕಗಳಂತಹ ಅಗತ್ಯ ಕೃಷಿ ಒಳಸುರಿಯುವಿಕೆಗಳನ್ನು ಉತ್ಪಾದಿಸುತ್ತವೆ.
ಈ 10-ಡ್ರಮ್ ಒಳಸುರಿಯುವಿಕೆಗಳ ಬಳಕೆಯು ಸ್ಥಳೀಯ ಮಟ್ಟದಲ್ಲಿ ಮತ್ತು ಕಡಿಮೆ ವೆಚ್ಚದಲ್ಲಿ ಉತ್ತಮ ಗುಣಮಟ್ಟದ ಕೃಷಿ ಸಂಪನ್ಮೂಲಗಳ ಲಭ್ಯತೆಯನ್ನು ಖಚಿತಪಡಿಸಿದೆ. ಈ ವ್ಯವಸ್ಥೆಯನ್ನು ಅಳವಡಿಸಿಕೊಳ್ಳುವ ರೈತರು ಕೃಷಿ ವೆಚ್ಚ ಕಡಿಮೆಯಾಗಿದೆ, ಬೆಳೆ ಉತ್ಪಾದಕತೆ ಹೆಚ್ಚಾಗಿದೆ ಮತ್ತು ಹವಾಮಾನ ಬದಲಾವಣೆಗೆ ಸಂಬಂಧಿಸಿದಂತೆ ಸ್ಥಿತಿಸ್ಥಾಪಕತ್ವವು ಹೆಚ್ಚಾಗಿದೆಯೆಂದು ವರದಿ ಮಾಡಿದ್ದಾರೆ. ಹೆಚ್ಚುವರಿಯಾಗಿ, ಈ ಯೋಜನೆಯು ಮಹಿಳಾ ಸ್ವ-ಸಹಾಯ ಗುಂಪುಗಳಿಗೆ (SHGs) ಈ ಘಟಕಗಳ ನಿರ್ವಹಣೆ ಮತ್ತು ನಡೆಸುವ ಅಧಿಕಾರವನ್ನು ನೀಡಿದೆ. ಇದು ಸುಸ್ಥಿರ ಜೀವನೋಪಾಯ ಮಾದರಿಯನ್ನು ಸೃಷ್ಟಿಸುತ್ತದೆ.
10-ಡ್ರಮ್ ಯೂನಿಟ್ ಥಿಯರಿಯ ಯಶಸ್ಸಿನಲ್ಲಿ ಮಹಿಳಾ ಸ್ವಸಹಾಯ ಗುಂಪುಗಳು ಪ್ರಮುಖ ಪಾತ್ರ ವಹಿಸುತ್ತವೆ. ಆರಂಭದಲ್ಲಿ, ಈ ಮಹಿಳೆಯರು ವಿವಿಧ ಒಳಸುರಿಯುವಿಕೆಗಳನ್ನು ಸಿದ್ಧಪಡಿಸುವ ವಿಧಾನದ ಬಗ್ಗೆ ತರಬೇತಿಯನ್ನು ಪಡೆದರು. ಇಂದು, ಅವರು ಈ ಒಳಸುರಿಯುವಿಕೆಗಳನ್ನು ಉತ್ಪಾದಿಸುವುದಲ್ಲದೆ, FPC ಗಳ ಮೂಲಕ ಮಾರಾಟ ಮಾಡುತ್ತಾರೆ. ಇದು ಅವರ ಆರ್ಥಿಕ ಸ್ವಾತಂತ್ರ್ಯಕ್ಕೆ ಕೊಡುಗೆ ನೀಡಿದೆ. ಒಂದು 10-ಡ್ರಮ್ ಘಟಕವನ್ನು ಸ್ಥಾಪಿಸಲು ಸುಮಾರು ರೂ. 2 ಲಕ್ಷ ವೆಚ್ಚವಾಗುತ್ತದೆ. ಆರು ತಿಂಗಳೊಳಗೆ, 16 ಘಟಕಗಳು ಒಟ್ಟಾರೆಯಾಗಿ ರೂ. 16 ಲಕ್ಷ ಆದಾಯವನ್ನು ಗಳಿಸಿವೆ. ಇದು ಈ ಉಪಕ್ರಮದಿಂದ ಸಾಧಿಸಬಹುದಾದ ಆರ್ಥಿಕ ಸಾಮರ್ಥ್ಯವನ್ನು ತೋರುತ್ತದೆ.
|
ಆರಂಭದಲ್ಲಿ ತ್ಯಾಜ್ಯ ಮುಕ್ತ ಕೃಷಿಯ ಕಾರ್ಯಸಾಧ್ಯತೆಯ ಬಗ್ಗೆ ಅನುಮಾನ ಪಡುತ್ತಿದ್ದ ರವೀಂದ್ರರಂತಹ ರೈತರು ಈಗ ಅದರ ಪ್ರಯೋಜನಗಳನ್ನು ಪಡೆಯುತ್ತಿದ್ದಾರೆ. 10-ಡ್ರಮ್ ಯೂನಿಟ್ ಒಳಸುರಿಯುವಿಕೆಗಳ ನಿಯಮಿತ ಬಳಕೆಯು ಮಣ್ಣಿನ ಆರೋಗ್ಯವನ್ನು ಸುಧಾರಿಸಿದೆ. ಶುಂಠಿಯಂತಹ ಬೆಳೆಗಳಲ್ಲಿ ನೈಸರ್ಗಿಕ ಪ್ರತಿರೋಧವನ್ನು ಹೆಚ್ಚಿಸಿದೆ. ಖಾರಿಫ್ ಋತುವಿನಲ್ಲಿ ಭಾರೀ ಮಳೆಯಿಂದಾಗಿ ಬೇರುಕಾಂಡ ಕೊಳೆಯುವಂತಹ ಸಮಸ್ಯೆಗಳ ಹೊರತಾಗಿಯೂ, ರೈತರು ರಾಸಾಯನಿಕ ಒಳಸುರಿಯುವಿಕೆಯ ಮೇಲಿನ ಅವಲಂಬನೆಯನ್ನು ಗಮನಾರ್ಹವಾಗಿ ಕಡಿಮೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಉದಾಹರಣೆಗೆ, ರವೀಂದ್ರ ಕಳೆದ ವರ್ಷ ರಸಗೊಬ್ಬರಗಳು ಮತ್ತು ಕೀಟನಾಶಕಗಳಿಗಾಗಿ ರೂ. 60,000 – ರೂ. 65,000 ಖರ್ಚು ಮಾಡಿದರು. ಈ ವರ್ಷ, 10-ಡ್ರಮ್ ಯೂನಿಟ್ ವ್ಯವಸ್ಥೆಯಡಿಯಲ್ಲಿ, ಒಳಸುರಿಯುವಿಕೆಗಳ ವೆಚ್ಚವನ್ನು ರೂ. 30,000ಕ್ಕೆ ಇಳಿಯಿತು. ನಂತರದ ಬೆಳವಣಿಗೆಯ ಹಂತಗಳಲ್ಲಿ ನೀರಿನಲ್ಲಿ ಕರಗುವ ರಸಗೊಬ್ಬರಗಳಿಗೆ ಹೆಚ್ಚುವರಿಯಾಗಿ ರೂ.10,000 ಖರ್ಚಾಗುವ ನಿರೀಕ್ಷೆಯಿದೆ. ಇದರಿಂದ ಸರಿಸುಮಾರು ರೂ. 20,000 ಉಳಿತಾಯವಾಗುತ್ತದೆ. ಇದು ತ್ಯಾಜ್ಯ ಮುಕ್ತ ಕೃಷಿಯ ಆರ್ಥಿಕ ಅನುಕೂಲಗಳನ್ನು ಒತ್ತಿಹೇಳುತ್ತದೆ. |
ಉಪಸಂಹಾರ
10-ಡ್ರಮ್ ಯೂನಿಟ್ ಥಿಯರಿ ಎನ್ನುವುದು ಕೇವಲ ಕೃಷಿ ವಿಧಾನವಲ್ಲ; ಇದು ಸುಸ್ಥಿರ ಅಭಿವೃದ್ಧಿ ಮತ್ತು ಸಮುದಾಯ ಸಬಲೀಕರಣದ ಮಾದರಿಯಾಗಿದೆ. ಕೃಷಿ ಉತ್ಪಾದನೆಯ ವೆಚ್ಚವನ್ನು ಕಡಿಮೆ ಮಾಡುವ ಮೂಲಕ, ಮಣ್ಣಿನ ಆರೋಗ್ಯವನ್ನು ಹೆಚ್ಚಿಸುವ ಮೂಲಕ ಮತ್ತು ಪರಿಸರ ಸ್ನೇಹಿ ಅಭ್ಯಾಸಗಳನ್ನು ಉತ್ತೇಜಿಸುವ ಮೂಲಕ, ಇದು ಸ್ಥಿತಿಸ್ಥಾಪಕ ಕೃಷಿಯ ಭವಿಷ್ಯಕ್ಕೆ ಹಾದಿ ತೋರಿದೆ. ಇಂತಹ ಉಪಕ್ರಮಗಳ ನಿರಂತರ ಬೆಂಬಲ ಮತ್ತು ಪ್ರಮಾಣೀಕರಣದೊಂದಿಗೆ, ರೈತರು ಪರಿಸರ ಸಂರಕ್ಷಣೆಗೆ ಕೊಡುಗೆ ನೀಡುವುದರೊಂದಿಗೆ ದೀರ್ಘಕಾಲೀನ ಸುಸ್ಥಿರತೆ ಮತ್ತು ಆರ್ಥಿಕ ಸ್ಥಿರತೆಯನ್ನು ಸಾಧಿಸಬಹುದು.
Prithviraj Gaikwad
Sr. Agri. Officer, WOTR
E-mail: prithviraj.gaikwad@wotr.org.inSachin Karadkar
Agri. Extension Officer, WOTR
E-mail: sachin.karadkar@wotr.org.inPravin Ekunde
Agri. Officer, WOTR
E-mail: pravin.ekunde@wotr.org.inSandip Waghmare
Agri. Field Officer, WOTR
E-mail: sandip.waghmare@wotr.org.in
ಆಂಗ್ಲ ಮೂಲ : ಲೀಸಾ ಇಂಡಿಯಾ; ಸಂಪುಟ :೨೬; ಸಂಚಿಕೆ : ೪ ; ಡಿಸಂಬರ್ ೨೦೨೪



