ಕರ್ನಾಟಕದ ಸಾದಲಿ ಗ್ರಾಮದಲ್ಲಿ ನವೀಕರಿಸಬಹುದಾದ ಇಂಧನದಿಂದ ನಡೆಯುವ ಶೀತಲೀಕರಣ ವ್ಯವಸ್ಥೆಯ ಸ್ಥಾಪನೆಯಿಂದ ಸಣ್ಣ ತೋಟಗಾರಿಕಾ ರೈತರ ಜೀವನೋಪಾಯದ ಸುಧಾರಣೆಗಿಂತ ಹೆಚ್ಚಿನ ಪ್ರಯೋಜನಗಳಾಗಿವೆ. ಮಹಿಳೆಯರು ಮತ್ತು ಯುವಕರನ್ನು ಸಕ್ರಿಯವಾಗಿ ಒಳಗೊಂಡ ಈ ಉಪಕ್ರಮವು ತ್ಯಾಜ್ಯವನ್ನು ಕಡಿಮೆ ಮಾಡಲು, ಆಹಾರ ಭದ್ರತೆಯನ್ನು ಹೆಚ್ಚಿಸಲು ಮತ್ತು ಸುಸ್ಥಿರ ಅಭಿವೃದ್ಧಿ ಗುರಿಗಳಿಗೆ ಕೊಡುಗೆ ನೀಡುವ ಮಾದರಿಯಾಗಿದೆ.
ಭಾರತದಲ್ಲಿ ಕೃಷಿ ಪ್ರಮುಖ ವಲಯವಾಗಿದ್ದು, ಸುಮಾರು 60% ಜನಸಂಖ್ಯೆಯ ಜೀವನಾಧಾರವಾಗಿದೆ. ದೇಶದ ಕೃಷಿ ಉತ್ಪಾದನೆಯಲ್ಲಿ ಸಣ್ಣ ಮತ್ತು ಅತಿ ಸಣ್ಣ ರೈತರು ನಿರ್ಣಾಯಕ ಪಾತ್ರ ವಹಿಸುತ್ತಾರೆ. ಆದರೂ, ಹಣ್ಣು, ತರಕಾರಿ ಮತ್ತು ಹೂವಿನಂತಹ ಬೇಗ ಹಾಳಾಗುವ ಬೆಳೆಗಳ ಬೆಳೆಗಾರರಾಗಿ ಹಲವಾರು ಸವಾಲುಗಳನ್ನು ಎದುರಿಸುತ್ತಾರೆ. ಅಸಮರ್ಪಕ ಶೇಖರಣಾ ಸೌಲಭ್ಯಗಳು, ಅನಿಯಮಿತ ವಿದ್ಯುತ್ ಸರಬರಾಜು ಮತ್ತು ಹೆಚ್ಚಿನ ಬೆಳೆಯ ಕೊಯ್ಲಿನ ನಂತರದ ನಷ್ಟದ ಸವಾಲುಗಳು ಸೇರಿವೆ. ಇದು ಗ್ರಾಮೀಣ ಸಮುದಾಯಗಳಲ್ಲಿ ಬಹುತೇಕ ಉತ್ಪನ್ನ ಹಾಳಾಗುವಿಕೆ, ಕಡಿಮೆ ಆದಾಯ ಅವಕಾಶಗಳು ಮತ್ತು ಆರ್ಥಿಕ ಬೆಳವಣಿಗೆಯ ಹಿನ್ನಡೆಗೆ ಕಾರಣವಾಗುತ್ತದೆ. ಮತ್ತೊಂದೆಡೆ, ಸೌರ ತಂತ್ರಜ್ಞಾನಗಳು ಕೃಷಿ ಪದ್ಧತಿಗಳ ಅವಿಭಾಜ್ಯ ಅಂಗವಾಗುತ್ತಿವೆ. ಇದು ಕೃಷಿ ಸಮುದಾಯಗಳಲ್ಲಿ ಸ್ಥಿತಿಸ್ಥಾಪಕತ್ವವನ್ನು ಬೆಳೆಸುವುದರೊಂದಿಗೆ, ಪರಿಸರ ಸ್ನೇಹಿ ಅಭ್ಯಾಸಗಳನ್ನು ಅಳವಡಿಸಿಕೊಳ್ಳುವ ಮೂಲಕ ಹವಾಮಾನ ಬದಲಾವಣೆಯ ವ್ಯಾಪಕ ಪರಿಣಾಮವನ್ನು ತಗ್ಗಿಸುವಲ್ಲಿ ಗಮನಾರ್ಹ ಕೊಡುಗೆ ನೀಡುತ್ತವೆ. ಬಹು ಬೇಗ ಹಾಳಾಗುವ ಉತ್ಪನ್ನಗಳನ್ನು ಬೆಳೆಯುವ ರೈತರ ಸಮಸ್ಯೆಗಳನ್ನು ಪರಿಹರಿಸಲು ಈ ತಂತ್ರಜ್ಞಾನವನ್ನು ಬಳಸಿಕೊಂಡು, 2023-24 ರಲ್ಲಿ, ಇಂಧನ ಮತ್ತು ಸಂಪನ್ಮೂಲ ಸಂಸ್ಥೆ (TERI), ಕರ್ನಾಟಕದ ಚಿಕ್ಕಬಳ್ಳಾಪುರ ಜಿಲ್ಲೆಯ ಸಾದಲಿ ಗ್ರಾಮದಲ್ಲಿ ನವೀನ ಸೌರಶಕ್ತಿ ಚಾಲಿತ ಕೋಲ್ಡ್ ರೂಮ್ ಯೋಜನೆಯನ್ನು ಜಾರಿಗೆ ತಂದಿತು. EKOenergy ಸಂಸ್ಥೆಯ ಆರ್ಥಿಕ ಬೆಂಬಲದೊಂದಿಗೆ, ಮಹಿಳಾ ಕೇಂದ್ರಿತ ಯೋಜನೆಯು ಸಣ್ಣ ಮತ್ತು ಅತಿ ಸಣ್ಣ ರೈತರ ಜೀವನವನ್ನು ಸುಧಾರಿಸುವ ಗುರಿಯನ್ನು ಹೊಂದಿದೆ. ಇದು 5 ಗ್ರಾಮ ಪಂಚಾಯ್ತಿಗಳ (34 ಹಳ್ಳಿಗಳು) 5617 ರೈತರನ್ನು ಒಳಗೊಂಡಿದೆ.
ಕೈಗೊಂಡ ಉಪಕ್ರಮ
ಯೋಜನೆಯ ಅನುಷ್ಠಾನ ಮಾಡಲಾದ ಸಾದಲಿಯಲ್ಲಿನ ಒಟ್ಟು 800 ರೈತರಲ್ಲಿ ಸುಮಾರು 35% ರಷ್ಟು ಸಣ್ಣ ಮತ್ತು ಅತಿ ಸಣ್ಣ ರೈತರು, 2 ಹೆಕ್ಟೇರ್‌ಗಿಂತ ಕಡಿಮೆ ಕೃಷಿ ಭೂಮಿಯನ್ನು ಹೊಂದಿದ್ದಾರೆ. ಈ ಪ್ರದೇಶದಲ್ಲಿ ಬೆಳೆಯುವ ಪ್ರಮುಖ ತೋಟಗಾರಿಕಾ ಬೆಳೆಗಳೆಂದರೆ ಮಾವು, ದ್ರಾಕ್ಷಿ, ದಾಳಿಂಬೆ, ಸಪೋಟ, ಪೇರಲ, ಪಪ್ಪಾಯಿ, ಬಾಳೆ, ಸಿಟ್ರಸ್ ಹಣ್ಣುಗಳು ಮತ್ತು ಹೂವುಗಳು. ಗೋದಾಮುಗಳು, ಶೀತಲೀಕರಣ ಘಟಕಗಳು, ಶ್ರೇಣೀಕರಣ ಮತ್ತು ಪ್ಯಾಕಿಂಗ್ ಹೌಸ್‌ಗಳಂತಹ ಕೊಯ್ಲು ನಂತರದ ಮೂಲಸೌಕರ್ಯಗಳ ಕೊರತೆ ಮತ್ತು ಅನಿಯಮಿತ ವಿದ್ಯುತ್ ಪೂರೈಕೆಯಿಂದಾಗಿ, ರೈತರು ತಮ್ಮ ತೋಟಗಾರಿಕಾ ಉತ್ಪನ್ನಗಳನ್ನು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಅಂಗಳಕ್ಕೆ ಅಥವಾ ಖಾಸಗಿ ವ್ಯಾಪಾರಿಗಳಿಗೆ ತಕ್ಷಣವೇ ಸಾಗಿಸಬೇಕಾದ ಒತ್ತಡದಲ್ಲಿ ಇರುತ್ತಾರೆ. ಇದರಿಂದಾಗಿ ಉತ್ಪನ್ನಗಳಿಗೆ ಕಡಿಮೆ ಬೆಲೆಗಳು ಕಂಡುಬರುತ್ತವೆ.
ಗ್ರಿಡ್‌ಗೆ ಸಂಪರ್ಕ ಹೊಂದಿದ ಹತ್ತಿರದ ಸಾಂಪ್ರದಾಯಿಕ ಶೀತಲೀಕರಣ ಸಘಟಕಗಳು ಗ್ರಾಮದಿಂದ ಸುಮಾರು 30 ಕಿಲೋಮೀಟರ್ ದೂರದಲ್ಲಿವೆ. ಐದು ದಿನಗಳ ಅವಧಿಗೆ ಕೆಜಿಗೆ ರೂ. 2 ರಷ್ಟಿದ್ದು ಈ ಶೇಖರಣಾ ಶುಲ್ಕ ತುಂಬಾ ಹೆಚ್ಚು. ಇದು ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಭರಿಸಲಾಗದಂತಿದ್ದು, ಕನಿಷ್ಠ 100 ಮೆಗಾಟನ್‌ನಿಂದ 1000 ಮೆಗಾಟನ್ ಸಾಮರ್ಥ್ಯದವರೆಗಿನ ಘಟಕದ, ವೆಚ್ಚವು ರೂ. 60 ರಿಂದ ರೂ. 275 ಲಕ್ಷಗಳವರೆಗೆ ಇರುತ್ತದೆ.
ಸಾದಲಿಯಮ್ಮ ತೋಟಗಾರಿಕೆ ರೈತ ಉತ್ಪಾದಕ ಕಂಪನಿ ಲಿಮಿಟೆಡ್ (SHFP Co. Ltd.) ಒಂದು ದಶಕದ ಹಿಂದೆ ಸಾದಲಿ ಗ್ರಾಮದಲ್ಲಿ ರೂಪುಗೊಂಡ ಸ್ಥಳೀಯ ರೈತ ಉತ್ಪಾದಕ ಸಂಸ್ಥೆ (FPO) ಆಗಿದೆ. FPO ಮುಖ್ಯವಾಗಿ ರೈತರಿಗೆ ಸಗಟು ದರದಲ್ಲಿ ಕೃಷಿ ಒಳಸುರಿಯುವಿಕೆಗಳನ್ನು (ಬೀಜಗಳು, ಕೀಟನಾಶಕಗಳು ಮತ್ತು ರಸಗೊಬ್ಬರಗಳು) ಪೂರೈಸುತ್ತದೆ. ಬೇಡಿಕೆ ಕಡಿಮೆಯಿರುವ ಬಹುಬೇಗ ಹಾಳಾಗುವ ಉತ್ಪನ್ನಗಳಿಗೆ ಸಂಬಂಧಿಸಿದ ಸವಾಲುಗಳಿಗೆ ಕಾರ್ಯಸಾಧ್ಯ ಪರಿಹಾರಗಳನ್ನು ಕಂಡುಕೊಳ್ಳುವ ಸಲುವಾಗಿ ರೈತರಿಂದ, ವಿಶೇಷವಾಗಿ ಮಹಿಳೆಯರಿಂದ FPOಗೆ ನಿರಂತರವಾಗಿ ಬೇಡಿಕೆಗಳು ಬರುತ್ತಿದ್ದವು. ನಿರಂತರವಾಗಿ ಕಾಡುತ್ತಿದ್ದ ಈ ಸಮಸ್ಯೆಯನ್ನು ನಿಭಾಯಿಸುವ ಸಲುವಾಗಿ, FPO ತನ್ನ ತಾಂತ್ರಿಕ ನಾವೀನ್ಯತೆಗಳನ್ನು ಬಳಸಿಕೊಂಡು ಸುಸ್ಥಿರ ಪರಿಹಾರವನ್ನು ಕಾರ್ಯಗತಗೊಳಿಸುವಲ್ಲಿ ಸಹಾಯಕ್ಕಾಗಿ TERI ಅನ್ನು ಸಂಪರ್ಕಿಸಿತು.
ನಿಟ್ಟಿನಲ್ಲಿ ನಡೆದ ಪ್ರಕ್ರಿಯೆ
TERI ಈ ಯೋಜನೆಯನ್ನು ಮೂರು ವಿಭಿನ್ನ ಹಂತಗಳಲ್ಲಿ ಕಾರ್ಯಗತಗೊಳಿಸಿತು: ಯೋಜನಾ ಹಂತ, ಅನುಷ್ಠಾನ ಹಂತ ಮತ್ತು ಹಿಂತೆಗೆದುಕೊಳ್ಳುವ ಹಂತ. ಯೋಜನೆಯ ಕಾರ್ಯಗತಗೊಳಿಸುವಿಕೆಗೆ ಒಟ್ಟಾರೆ ಸಂಯೋಜಕರ ಪಾತ್ರವನ್ನು TERI ವಹಿಸಿಕೊಂಡು ಒಂದು ಸಂಯೋಜಿತ ಸಾಂಸ್ಥಿಕ ವಿಧಾನವನ್ನು ಅಳವಡಿಸಿಕೊಳ್ಳಲಾಯಿತು. ಇದರಲ್ಲಿ ಸೌರಶಕ್ತಿ ಚಾಲಿತ ಕೋಲ್ಡ್ ರೂಂ ಸ್ಥಾಪನೆ ಮತ್ತು ನಂತರದ ವ್ಯವಸ್ಥೆಯನ್ನು SHFP ಕಂಪನಿ ಲಿಮಿಟೆಡ್‌ಗೆ ವರ್ಗಾಯಿಸುವುದು ಸೇರಿತ್ತು. ತಾಲ್ಲೂಕು ಮಟ್ಟದ ತೋಟಗಾರಿಕೆ ಇಲಾಖೆ (DoH) ತಾಂತ್ರಿಕ ಮಾರ್ಗದರ್ಶನದೊಂದಿಗೆ ತರಬೇತಿ ಮತ್ತು ಸಾಮರ್ಥ್ಯ ವೃದ್ಧಿಯನ್ನು ಸುಗಮಗೊಳಿಸಿತು. ಸೋಲಾರ್ ಕೋಲ್ಡ್ ರೂಂ ಸ್ಥಾಪನೆ ಮತ್ತು ವಾರ್ಷಿಕ ನಿರ್ವಹಣೆಯ ಜವಾಬ್ದಾರಿಯನ್ನು ಸಾಧನ ಪೂರೈಕೆದಾರರು ಹೊತ್ತಿದ್ದರು. SHFP ಕಂಪನಿಯು (ಫಲಾನುಭವಿಗಳು) ವ್ಯವಸ್ಥೆಯ ಸ್ಥಾಪನೆಗೆ ಅಗತ್ಯವಾದ ಸ್ಥಳವನ್ನು ಒದಗಿಸಿದರು.
ಆರಂಭದಲ್ಲಿ, ಬೆಳೆ ಬೆಳೆಯುವ ಪ್ರದೇಶ, ತೋಟಗಾರಿಕೆ ಬೆಳೆಗಳ ಪ್ರಕಾರ, ಪ್ಯಾಕೇಜ್ (ಕೊಯ್ಲು, ಸ್ವಚ್ಛಗೊಳಿಸುವುದು, ವಿಂಗಡಿಸುವುದು, ಸಂಗ್ರಹಿಸುವುದು, ತರಕಾರಿಗಳು, ಹಣ್ಣುಗಳು ಮತ್ತು ಹೂವುಗಳ ಪ್ಯಾಕಿಂಗ್), ಮಾರುಕಟ್ಟೆ ಪದ್ಧತಿಗಳು, ಸ್ಥಳೀಯ ಮಟ್ಟದಲ್ಲಿ ಎದುರಿಸುತ್ತಿರುವ ಬೇಡಿಕೆ ಮತ್ತು ಪೂರೈಕೆ ಸಮಸ್ಯೆಗಳ ಕುರಿತಾದ ದತ್ತಾಂಶವನ್ನು ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿ ಇಲಾಖೆಗಳಿಂದ ಸಂಗ್ರಹಿಸಲಾಯಿತು. ಇದಲ್ಲದೆ, ಮನೆ ಸಮೀಕ್ಷೆಗಳ ಮೂಲಕ FPO ರೈತ ಸದಸ್ಯರಿಂದ ವಿಸ್ತೃತ ಮಾಹಿತಿಯನ್ನು ಸಂಗ್ರಹಿಸಲಾಯಿತು. ಮನೆ ಸಮೀಕ್ಷೆಯ ಮಾದರಿ ಗಾತ್ರವು ಸುಮಾರು 10% (100 ರೈತರು) ಆಗಿತ್ತು. ಹೆಚ್ಚುವರಿಯಾಗಿ, ಯೋಜನಾ ಚಟುವಟಿಕೆಗಳನ್ನು ಸಂಯೋಜಿಸುವುದು ಮತ್ತು ಯೋಜನೆ, ಅನುಷ್ಠಾನ ಮತ್ತು ನಿರ್ವಹಣೆಗಾಗಿ ಚೌಕಟ್ಟನ್ನು ಅಭಿವೃದ್ಧಿಪಡಿಸುವ ಬಗ್ಗೆ ಮಹಿಳಾ ರೈತರು ಮತ್ತು ಕರ್ನಾಟಕ ಸರ್ಕಾರದ FPO ಮತ್ತು ತೋಟಗಾರಿಕೆ ಇಲಾಖೆಯ (DoH) ಸಮಿತಿ ಸದಸ್ಯರೊಂದಿಗೆ ವಿವರವಾದ ಚರ್ಚೆಗಳನ್ನು ನಡೆಸಲಾಯಿತು. ಬೇಗ ಹಾಳಾಗುವ ಸರಕುಗಳ ಸಂಗ್ರಹಣೆಗೆ ಸುಸ್ಥಿರ ಪರಿಹಾರಗಳಿಗೆ ಗಮನಾರ್ಹ ಬೇಡಿಕೆ ಇರುವುದರಿಂದ, ನವೀಕರಿಸಬಹುದಾದ ಶಕ್ತಿಯಿಂದ ನಡೆಸಲ್ಪಡುವ ಶೀತಲೀಕರಣ ಘಟಕಗಳಿಗೆ ಮೂಲಸೌಕರ್ಯವನ್ನು ಒದಗಿಸುವ ಮೂಲಕ ಈ ಸಮಸ್ಯೆಯನ್ನು ಪರಿಹರಿಸಲು TERI ಮುಂದಾಯಿತು.
ಪೈಲಟ್ ಡೆಮೊ ಘಟಕ
ವಿವಿಧ ಪಾಲುದಾರರೊಂದಿಗೆ ನಡೆದ ಚರ್ಚೆಯ ಫಲಿತಾಂಶಗಳ ಆಧಾರದ ಮೇಲೆ, ಯೋಜನಾ ಸ್ಥಳದಲ್ಲಿ ಸೂಕ್ತವಾದ 5 ಮೆಟ್ರಿಕ್ ಟನ್ ಸೌರಶಕ್ತಿ ಆಧಾರಿತ ಕೋಲ್ಡ್ ರೂಮನ್ನು ವಿನ್ಯಾಸಗೊಳಿಸಿ ಪ್ರದರ್ಶಿಸಲಾಯಿತು. TERI 5 ಮೆಟ್ರಿಕ್ ಟನ್ ಸಾಮರ್ಥ್ಯದ ಆಫ್-ಗ್ರಿಡ್ ಸೌರಶಕ್ತಿ ಚಾಲಿತ ಕೋಲ್ಡ್ ರೂಮ್ ವ್ಯವಸ್ಥೆಯನ್ನು ಪ್ರದರ್ಶಿಸಿತು, ಇದು 5kWp ಸೌರ ದ್ಯುತಿವಿದ್ಯುಜ್ಜನಕ (PV) ವ್ಯವಸ್ಥೆಯನ್ನು ಬಳಸಿಕೊಂಡು ಕಾರ್ಯನಿರ್ವಹಿಸುತ್ತದೆ. ಈ ವ್ಯವಸ್ಥೆಯು ಹಗಲಿನಲ್ಲಿ ಚಾರ್ಜ್ ಆಗುತ್ತದೆ. ಬ್ಯಾಟರಿಗಳು, ಡೀಸೆಲ್ ಅಥವಾ ಸಾಂಪ್ರದಾಯಿಕ ಇಂಧನ ಮೂಲಗಳನ್ನು ಅವಲಂಬಿಸದೆ 24 ಗಂಟೆಗಳ ಕಾಲ ಕೋಲ್ಡ್ ರೂಮಿನಲ್ಲಿ ತಂಪಾದ ವಾತಾವರಣವನ್ನು ನಿರ್ವಹಿಸುತ್ತದೆ.
TERI ಸಿದ್ಧಪಡಿಸಿದ ಪೂರೈಕೆದಾರರ ಪಟ್ಟಿಯಿಂದ ತಂತ್ರಜ್ಞಾನ ಪೂರೈಕೆದಾರರನ್ನು ಆಯ್ಕೆ ಮಾಡಲಾಗಿದೆ. ಅವರು ನಿಗದಿತ ಸಮಯದಲ್ಲಿ ಉತ್ತಮ ಗುಣಮಟ್ಟದ ವ್ಯವಸ್ಥೆಯನ್ನು ಪೂರೈಸುವ, ಉತ್ತಮ ಮಾರಾಟದ ನಂತರದ ಸೇವೆ ಮತ್ತು ದೀರ್ಘಕಾಲೀನ ಬೆಂಬಲವನ್ನು ಒದಗಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆ.
ಈ ಯೋಜನೆಯು ಸಂಪೂರ್ಣ ವೆಚ್ಚವನ್ನು ಅಂದರೆ ಸಾಧನದ ರೂ. 14 ಲಕ್ಷವನ್ನು ಭರಿಸಿತು. FPO ಅನುಸ್ಥಾಪನೆಗೆ ಸ್ಥಳಾವಕಾಶವನ್ನು ಒದಗಿಸುವುದರೊಂದಿಗೆ ಅನುಸ್ಥಾಪನೆಯ ನಂತರ ಅದರ ನಿರ್ವಹಣೆಯ ಹೊಣೆ ಹೊತ್ತುಕೊಂಡಿತು. FPO ರೈತರಿಗೆ ಸೋಲಾರ್ ಕೋಲ್ಡ್ ರೂಮನ್ನು ಬಾಡಿಗೆಗೆ ನೀಡಿ, ಮಹಿಳಾ ರೈತರಿಗೆ ಬೆಂಬಲ ನೀಡುವತ್ತ ನಿರ್ದಿಷ್ಟ ಒತ್ತು ನೀಡಿತು. ಸೋಲಾರ್ ಕೋಲ್ಡ್ ರೂಮಿನ ದುರಸ್ತಿ ಮತ್ತು ನಿರ್ವಹಣೆಗಾಗಿ TERI ಒಂದು ಸೇವಾ ಕಾರ್ಯವಿಧಾನವನ್ನು ಜಾರಿಗೆ ತಂದಿದೆ. ಇದನ್ನು FPO ನ ತರಬೇತಿ ಪಡೆದ ಮಹಿಳಾ CEO ಗಳು ಮತ್ತು ಉತ್ಪನ್ನ ಪೂರೈಕೆದಾರರು ನಿರ್ವಹಿಸುತ್ತಾರೆ.
ಮಹಿಳಾ ನೇತೃತ್ವದ ನಿರ್ವಹಣೆ
ಯೋಜನೆ ಮತ್ತು ಅನುಷ್ಠಾನದಿಂದ ನಿರ್ವಹಣೆಯವರೆಗೆ ಪ್ರತಿಯೊಂದು ಹಂತದಲ್ಲೂ ಮಹಿಳೆಯರ ಒಳಗೊಳ್ಳುವಿಕೆಗೆ ಈ ಯೋಜನೆಯು ಬಲವಾದ ಒತ್ತು ನೀಡಿತು. ಸೋಲಾರ್ ಕೋಲ್ಡ್ ರೂಮಿನ ದೈನಂದಿನ ಕಾರ್ಯಾಚರಣೆಗಳು ಮತ್ತು ನಿರ್ವಹಣೆಯ ಮೇಲ್ವಿಚಾರಣೆಗೆ ಮಹಿಳಾ ನೇತೃತ್ವದ ಸಮಿತಿಯನ್ನು ರಚಿಸಲಾಯಿತು. ಯೋಜನೆಯು ಲಿಂಗ ಸಂವೇದನಾಶೀಲ ಮತ್ತು ಸುಸ್ಥಿರವಾಗಿದೆ ಎಂದು ಖಚಿತಪಡಿಸುತ್ತದೆ. ಮಹಿಳಾ ಸದಸ್ಯರನ್ನು ಒಳಗೊಂಡ EKOenergy Solar-ಆಧಾರಿತ ಕೋಲ್ಡ್ ರೂಮ್ ಸಮಿತಿ (EKOSCC)ಯನ್ನು ಈ ಯೋಜನೆಯಡಿಯಲ್ಲಿ ಸ್ಥಾಪಿಸಲಾಯಿತು. ಇದನ್ನು ವ್ಯವಸ್ಥೆಯ ಮೇಲ್ವಿಚಾರಣೆ ಮತ್ತು ಅಗತ್ಯವಿದ್ದಾಗ ಸೌರ ಕೋಲ್ಡ್ ರೂಮ್‌ನ ಬಿಡಿಭಾಗಗಳ ನಿರ್ವಹಣೆ ಮತ್ತು ಬದಲಿಗಾಗಿ FPO ನಿಧಿಗಳ ಬಳಕೆಗೆ ಬೆಂಬಲ ಮತ್ತು ಅನುಮೋದನೆಗಳನ್ನು ಒದಗಿಸುವ ಸಲುವಾಗಿ ಸ್ಥಾಪಿಸಲಾಯಿತು.
ಕೋಲ್ಡ್ ರೂಮ್ ವ್ಯವಸ್ಥೆಯ ಮೇಲ್ವಿಚಾರಣೆ ಮತ್ತು ಅನುಕೂಲಗಳನ್ನು ನಿರ್ಣಯಿಸಲು ಮಹಿಳಾ ಸದಸ್ಯರು ಮತ್ತು FPO ನ CEO ಗೆ ತರಬೇತಿ ನೀಡಲಾಯಿತು. EKOenergy Solar Cooling System Committee (EKOSCC) ಸದಸ್ಯರಿಗೆ ಮತ್ತು SHFP ಕಂಪನಿಯ ರೈತ ಸದಸ್ಯರಿಗೆ ಎರಡು ಕೌಶಲ್ಯ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಇದು ಪುರುಷರು ಮತ್ತು ಮಹಿಳೆಯರಿಬ್ಬರನ್ನೂ ಒಳಗೊಂಡಿತ್ತು. ಮೊದಲ ತರಬೇತಿಯು ಕೋಲ್ಡ್ ಸ್ಟೋರೇಜ್ ಸೌಲಭ್ಯಗಳ ಕಾರ್ಯಾಚರಣೆ ಮತ್ತು ನಿರ್ವಹಣೆ (O&M) ಮೇಲೆ ಕೇಂದ್ರೀಕರಿಸಲಾಗಿತ್ತು. ಈ ಕಾರ್ಯಕ್ರಮವು ಪ್ರಾಥಮಿಕವಾಗಿ ಸಮಿತಿಯ ಸದಸ್ಯರನ್ನು ಘಟಕದ ಪ್ರತಿದಿನದ ನಿರ್ವಹಣೆಗೆ ಅಗತ್ಯವಾದ ಕೌಶಲ್ಯಗಳೊಂದಿಗೆ ಸಜ್ಜುಗೊಳಿಸುವ ಗುರಿಯನ್ನು ಹೊಂದಿದೆ. ಇದರಲ್ಲಿ ವಸ್ತುಗಳನ್ನು ಪೇರಿಸುವುದು(ಇಡುವುದು) ಮತ್ತು ಇಳಿಸುವಿಕೆ (ಲೋಡ್ ಮತ್ತು ಅನ್ಲೌಡ್), ಉತ್ಪನ್ನದ ಗುಣಮಟ್ಟವನ್ನು ಕಾಪಾಡಲು ತಾಪಮಾನ ನಿಯಂತ್ರಣ ಮತ್ತು ಘಟಕವನ್ನು ಸ್ವಚ್ಛಗೊಳಿಸುವುದು ಸೇರಿವೆ. ಇದರೊಂದಿಗೆ, ವಿದ್ಯುತ್ ಸಂಪರ್ಕ ಮತ್ತು ಮೋಡ ಕವಿದ ವಾತಾವರಣ, ಮಳೆ ಬೀಳುವ ಸಂದರ್ಭದಲ್ಲಿ ಸೌರಶಕ್ತಿಯಿಂದ ಸಾಂಪ್ರದಾಯಿಕ ವಿದ್ಯುತ್‌ಗೆ ಹೇಗೆ ಪರಿವರ್ತನೆ ಮಾಡಬೇಕು, ವಿವಿಧ ಹಂತಗಳಲ್ಲಿ ಎದುರಾಗುವ ದೋಷನಿವಾರಣೆ ಮತ್ತು ಆನ್‌ಲೈನ್ ವ್ಯವಸ್ಥೆಯ ಮೇಲ್ವಿಚಾರಣೆಯ ಕುರಿತು ಸೂಚನೆ ನೀಡಲಾಯಿತು. ಎರಡನೇ ಕಾರ್ಯಕ್ರಮವು ವಿವಿಧ ತೋಟಗಾರಿಕಾ ಬೆಳೆಗಳ ಸಂಸ್ಕರಣೆ, ಪ್ಯಾಕೇಜಿಂಗ್ ಮತ್ತು ಮಾರುಕಟ್ಟೆ ತಂತ್ರಗಳ ಕುರಿತಾಗಿತ್ತು. ಈ ತರಬೇತಿಯಲ್ಲಿ ಹಲವಾರು ತಜ್ಞರು ಭಾಗವಹಿಸಿದ್ದರು, ಅವರು ಕೊಯ್ಲು, ಶುಚಿಗೊಳಿಸುವಿಕೆ ಮತ್ತು ಶ್ರೇಣೀಕರಣ ಸೇರಿದಂತೆ ಸಂಸ್ಕರಣಾ ವಿಧಾನಗಳ ಬಗ್ಗೆ ಒಳನೋಟಗಳನ್ನು ನೀಡಿದರು. ಪ್ಯಾಕೇಜಿಂಗ್ ವಿಭಾಗದಲ್ಲಿ, ಭಾಗವಹಿಸಿದವರು ಸಾಗಾಣಿಕೆಯ ವೇಳೆಯಲ್ಲಿ ಆಗುವ ಹಾನಿಯನ್ನು ಕಡಿಮೆ ಮಾಡುವ ತಂತ್ರಗಳನ್ನು ಕಲಿತರು. ಇದಲ್ಲದೆ, ಮಾರ್ಕೆಟಿಂಗ್ ಘಟಕವು ಇ-ಮಾರ್ಕೆಟಿಂಗ್ ವೇದಿಕೆಗಳು ಮತ್ತು ವಿವಿಧ ಮಾರ್ಕೆಟಿಂಗ್ ತಂತ್ರಗಳನ್ನು ಒಳಗೊಂಡಿದೆ.
ಕರ್ನಾಟಕದ ವಿವಿಧ ಭಾಗಗಳಿಂದ 6 ಉದ್ಯಮಿಗಳು ಮತ್ತು ಯೋಜನಾ ಸ್ಥಳದಿಂದ 10 ಮಹಿಳಾ ರೈತರನ್ನು ಒಳಗೊಂಡ ಉದ್ಯಮಶೀಲತಾ ಅಭಿವೃದ್ಧಿ ಕಾರ್ಯಕ್ರಮ (EDP)ವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮವು ಪ್ರಾಥಮಿಕವಾಗಿ ಸೌರಶಕ್ತಿ ಚಾಲಿತ ಶೀತಲ ಶೇಖರಣಾ ಸೌಲಭ್ಯಗಳ ಬಳಕೆಯ ಮೂಲಕ ಸಾಧಿಸಬಹುದಾದ ವಿವಿಧ ವ್ಯಾಪಾರ ವಹಿವಾಟಿನ ಅವಕಾಶಗಳ ಮೇಲೆ ಕೇಂದ್ರೀಕರಿಸಿದೆ. ಇವುಗಳಲ್ಲಿ ಅಣಬೆಗಳು, ಡೈರಿ ಉತ್ಪನ್ನಗಳು ಮತ್ತಿತರ ಬೇಗ ಹಾಳಾಗುವ ವಸ್ತುಗಳ ಸಂರಕ್ಷಣೆ ಸೇರಿದೆ. ಇದು ಹೊಸ ಆದಾಯದ ಮೂಲಗಳನ್ನು ತೆರೆಯುತ್ತದೆ. ಇದರೊಂದಿಗೆ, ಸೋಲಾರ್ ಕೋಲ್ಡ್ ಸ್ಟೋರೇಜ್‌ನಲ್ಲಿ ಹೂಡಿಕೆ ಮಾಡಲು ಬಯಸುವ ಉದ್ಯಮಿಗಳಿಗೆ ಲಭ್ಯವಿರುವ ಬ್ಯಾಂಕ್ ಸಾಲದ ಆಯ್ಕೆಗಳ ಬಗ್ಗೆ ಮತ್ತು ಕರ್ನಾಟಕ ಸರ್ಕಾರದ ತೋಟಗಾರಿಕೆ ಇಲಾಖೆ ನೀಡುವ ಬೆಂಬಲದ ಬಗ್ಗೆ ಮಾಹಿತಿಯನ್ನು ಒದಗಿಸಿತು.
ತೋಟಗಾರಿಕೆ ಉತ್ಪನ್ನಗಳ ಒಳಹರಿವು ಮತ್ತು ಹೊರಹರಿವು, ತಾಪಮಾನದ ದತ್ತಾಂಶ, ಮೋಡ ಕವಿದ ವಾತಾವರಣದಲ್ಲಿ ವಿದ್ಯುತ್ ಬಳಕೆ, ಘಟಕದ ಬಾಡಿಗೆಯಿಂದ ಬರುವ ಆದಾಯ, ತೋಟಗಾರಿಕೆ ಉತ್ಪನ್ನಗಳ ಗುಣಮಟ್ಟ ಮತ್ತು ಉತ್ಪನ್ನಗಳ ಶೆಲ್ಫ್ ಜೀವಿತಾವಧಿಯಲ್ಲಿನ ಹೆಚ್ಚಳದಿಂದ ಪಡೆದ ಹೆಚ್ಚುವರಿ ಲಾಭದ ಕುರಿತಾದ ಮಾಹಿತಿಯನ್ನು ಸಂಗ್ರಹಿಸಲು FPO ಕಚೇರಿಯಲ್ಲಿ ಲಾಗ್ ಪುಸ್ತಕವನ್ನು ಇರಿಸಲಾಗಿತ್ತು.
ಕಾರ್ಯಾಚರಣೆ ಮತ್ತು ನಿರ್ವಹಣೆಯ ಕುರಿತು ತಾಂತ್ರಿಕ ಕೈಪಿಡಿಯನ್ನು ಅಭಿವೃದ್ಧಿಪಡಿಸಲಾಯಿತು. ಅದನ್ನು FPO ಜೊತೆ ಹಂಚಿಕೊಳ್ಳಲಾಯಿತು. ಸೋಲಾರ್ ಕೋಲ್ಡ್ ರೂಮ್‌ನ ಕಾರ್ಯಾಚರಣೆ ಮತ್ತು ನಿರ್ವಹಣಾ ಅಗತ್ಯಗಳು ಬಹಳ ಕಡಿಮೆ ಇರುತ್ತದೆ. ಸೌರ ಫಲಕಗಳ ಸಂಗ್ರಹಣೆ ಮತ್ತು ತಿಂಗಳಿಗೊಮ್ಮೆ ಶುಚಿಗೊಳಿಸಲು ವಾರಕ್ಕೊಮ್ಮೆ 20 ಲೀಟರ್ ನೀರಿನ ಅವಶ್ಯಕತೆ ಮಾತ್ರ ಇರುತ್ತದೆ. ಈ ವ್ಯವಸ್ಥೆಯನ್ನು ಮೊಬೈಲ್ ಅಪ್ಲಿಕೇಶನ್ ಮೂಲಕ ನಿರ್ವಹಿಸಬಹುದು. ಇದು ಬಳಕೆದಾರರಿಗೆ ತಮ್ಮ ಉತ್ಪನ್ನಗಳಿಗೆ ಶೇಖರಣಾ ತಾಪಮಾನವನ್ನು ಹೊಂದಿಸಲು, ವ್ಯವಸ್ಥೆಯ ಕಾರ್ಯಾಚರಣೆಗಳನ್ನು ಮೇಲ್ವಿಚಾರಣೆ ಮಾಡಲು ಮತ್ತು ಉದ್ಭವಿಸಬಹುದಾದ ಯಾವುದೇ ಸಮಸ್ಯೆಗಳನ್ನು ಗುರುತಿಸಲು ಅನುವು ಮಾಡಿಕೊಡುತ್ತದೆ. ಪ್ರಸ್ತುತ, ಈ ವ್ಯವಸ್ಥೆಯನ್ನು FPO ದ ಮಹಿಳಾ CEO ನಿರ್ವಹಿಸುತ್ತಿದ್ದಾರೆ. ಯೋಜನಾ ಪ್ರದೇಶದ ಎಲ್ಲಾ ರೈತರು ಸೋಲಾರ್ ಕೋಲ್ಡ್ ಸ್ಟೋರೇಜ್ ಪ್ರಯೋಜನ ಪಡೆಯಲು FPOನೊಂದಿಗೆ ಉತ್ತಮ ಸಂಪರ್ಕ ಹೊಂದಿದ್ದಾರೆ. ಕಂಪನಿಯು ತನ್ನ ಕಚೇರಿಯಲ್ಲಿ ಸೌಲಭ್ಯವನ್ನು ಬಾಡಿಗೆಗೆ ಪಡೆಯಲು ಸಂಪರ್ಕಿಸಬೇಕಾದವರ ಸಂಖ್ಯೆಗಳನ್ನು ಪ್ರದರ್ಶಿಸುವ ಸೂಚನಾ ಫಲಕವನ್ನು ಹಾಕಿದ್ದು, ಮೊದಲು ಬಂದವರಿಗೆ ಆದ್ಯತೆ ನೀಡಲಾಗುತ್ತದೆ.
ಫಲಿತಾಂಶಗಳು
ಸಾಂಪ್ರದಾಯಿಕ ಗ್ರಿಡ್ ಸಂಪರ್ಕಿತ ಕೋಲ್ಡ್ ಸ್ಟೋರೇಜ್ ಗಳಲ್ಲಿ ಉತ್ಪನ್ನಗಳನ್ನು ಐದು ದಿನಗಳ ಮಟ್ಟಿಗೆ ಇಡಲು ತಗಲುವ ವೆಚ್ಚ ಪ್ರತಿ ಕೆಜಿಗೆ ರೂ.2 ಆಗಿದ್ದರೆ, FPO ಅದೇ ಅವಧಿಗೆ ಪ್ರತಿ ಕೆಜಿಗೆ ರೂ.1 ಮಾತ್ರ ವಿಧಿಸುತ್ತದೆ. ಡಿಸೆಂಬರ್ 11, 2023 ಮತ್ತು ಡಿಸೆಂಬರ್ 30, 2024 ರ ನಡುವೆ, ಸುಮಾರು 60 ಮಂದಿ ರೈತರು ಸೋಲಾರ್ ಕೋಲ್ಡ್ ರೂಮ್ ಬಳಸಿಕೊಂಡು ಸೌತೆಕಾಯಿ, ಗುಲಾಬಿ ಮತ್ತು ಚೆಂಡುಮಲ್ಲಿಗೆ ಸೇರಿದಂತೆ ಒಟ್ಟು 15 ಎಂಟಿ (1 ಎಂಟಿ = 1000 ಕೆಜಿ) ತೋಟಗಾರಿಕಾ ಉತ್ಪನ್ನಗಳನ್ನು ಸಂಗ್ರಹಿಸಿದ್ದಾರೆ. ಇದರಿಂದ, SHFP ಕಂಪನಿಯು ಬಾಡಿಗೆಯ ರೂಪದಲ್ಲಿ ರೂ. 40,000 ಗಳಿಸಿತು.
ರೈತರು ಕೋಲ್ಡ್ ರೂಮ್ ಬಗ್ಗೆ ತೃಪ್ತಿ ವ್ಯಕ್ತಪಡಿಸಿದ್ದು, ಇದು ಸ್ಥಿರವಾದ ತಾಪಮಾನವನ್ನು ಕಾಯ್ದುಕೊಳ್ಳುವ ಮೂಲಕ ತಮ್ಮ ಉತ್ಪನ್ನಗಳು ಹಾಳಾಗುವುದನ್ನು ತಡೆಯುತ್ತದೆ. ಜೊತೆಗೆ ಉತ್ಪನ್ನಗಳ ಶೆಲ್ಫ್ ಜೀವಿತಾವಧಿಯನ್ನು ಹೆಚ್ಚಿಸುತ್ತದೆ ಎನ್ನುವುದನ್ನು ಗಮನಿಸಿದ್ದಾರೆ. ಅಲ್ಲದೆ, ಸಾಂಪ್ರದಾಯಿಕ ಕೋಲ್ಡ್ ಸ್ಟೋರೇಜ್‌ನ ದುಬಾರಿ ವೆಚ್ಚದ ಸವಾಲನ್ನು ಎದುರಿಸಿದ್ದ ಸಣ್ಣ ರೈತರಿಗೂ ಈ ಕೋಲ್ಡ್ ರೂಂಗಳ ವೆಚ್ಚ ಕೈಗೆಟುವಂತಿದೆ.
ಸೌರಶಕ್ತಿ ಆಧಾರಿತ ಕೋಲ್ಡ್ ರೂಮ್ ವ್ಯವಸ್ಥೆಯಿಂದ ಉಂಟಾಗಿರುವ ಹೊಸ ವ್ಯಾಪಾರ ಅವಕಾಶಗಳ ಬಗ್ಗೆ ಒಳನೋಟಗಳನ್ನು ಪಡೆಯುವ ಮೂಲಕ, ಸಾದಲಿ ಗ್ರಾಮದ ಐವರು ಮಹಿಳಾ ರೈತರ ಗುಂಪು 5 ಮೆಟ್ರಿಕ್ ಟನ್ ಸೌರಶಕ್ತಿ ಆಧಾರಿತ ಕೋಲ್ಡ್ ರೂಮ್ ಖರೀದಿಸಲು ಸಹಾಯಧನ ಪಡೆಯಲು ತೋಟಗಾರಿಕೆ ಇಲಾಖೆಯ ಸಹಾಯವನ್ನು ಕೋರಿದೆ.
ಆಹಾರ ವ್ಯರ್ಥವಾಗುವುದನ್ನು ತಗ್ಗಿಸುವುದು, ನವೀಕರಿಸಬಹುದಾದ ಇಂಧನದ ಮೇಲಿನ ಅವಲಂಬನೆ ಮತ್ತು ಹೆಚ್ಚಿನ ಆಹಾರ ಭದ್ರತೆಯ ಮೂಲಕ, ಯೋಜನೆಯು ಸುಸ್ಥಿರ ಅಭಿವೃದ್ಧಿ ಗುರಿಗಳಿಗೂ ಕೊಡುಗೆ ನೀಡಿದೆ.
ಸೋಲಾರ್ ಕೋಲ್ಡ್ ರೂಮ್ ವಿನ್ಯಾಸ ಸೇರಿದಂತೆ ಯೋಜನೆಯ ಎಲ್ಲಾ ಹಂತಗಳಲ್ಲಿ ರೈತ ಉತ್ಪಾದಕ ಸಂಸ್ಥೆ (ಎಫ್‌ಪಿಒ) ಮತ್ತು ತೋಟಗಾರಿಕೆ ಇಲಾಖೆಯೊಂದಿಗೆ ಪುರುಷ ಮತ್ತು ಮಹಿಳಾ ರೈತರು ಸಕ್ರಿಯವಾಗಿ ಭಾಗವಹಿಸಿರುವುದು ಅವರಲ್ಲಿ ಮಾಲೀಕತ್ವದ ಪ್ರಜ್ಞೆಯನ್ನು ಬೆಳೆಸಿದೆ. ರೈತರು ಸೌರ ಕೋಲ್ಡ್ ರೂಮ್ ಅನ್ನು ಸಮುದಾಯದ ಆಸ್ತಿಯಾಗಿ ಭಾವಿಸುತ್ತಾರೆ. ಸರ್ಕಾರಿ ಇಲಾಖೆಯ ಭಾಗವಹಿಸುವಿಕೆಯು ತಳಮಟ್ಟದಲ್ಲಿ ಸಹಯೋಗದ ಪ್ರಯತ್ನಗಳ ಸಾಮರ್ಥ್ಯವನ್ನು ಎತ್ತಿ ತೋರಿಸುತ್ತದೆ. ಈ ಯೋಜನೆಯಿಂದ ರೈತರಿಗೆ, ಗ್ರಾಮಸ್ಥರಿಗೆ ಸೌರಶಕ್ತಿಯಿಂದ ಸಮಾಜಕ್ಕೆ, ಪರಿಸರಕ್ಕೆ ಆಗುವ ಪ್ರಯೋಜನಗಳ ಬಗ್ಗೆ ಅರಿವು ಮೂಡಿತು.
ಮುಂದಿನ ಹಾದಿ
ಈ ಪ್ರದೇಶದಲ್ಲಿ ಸೌರಶಕ್ತಿ ಚಾಲಿತ ಶೀತಲ ಶೇಖರಣಾ ಸೌಲಭ್ಯಗಳ ಲಭ್ಯತೆಯನ್ನು ಹೆಚ್ಚಿಸಲು, ಈ ತಂತ್ರಜ್ಞಾನಗಳನ್ನು ಬಹಳ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಲಭ್ಯವಾಗುವಂತೆ ಮಾಡುವ ಉದ್ದೇಶದಿಂದ TERI ಗಮನಾರ್ಹ ಪ್ರಯತ್ನಗಳನ್ನು ಮಾಡಿದೆ. ಈ ನಿಟ್ಟಿನಲ್ಲಿ, ಕರ್ನಾಟಕದ ವಿವಿಧ ಪ್ರದೇಶಗಳ ಆರು ಉದ್ಯಮಿಗಳಿಗೆ ತರಬೇತಿ ನೀಡಲಾಗಿದೆ. ಇದರೊಂದಿಗೆ, TERI ಈ ಉದ್ಯಮಿಗಳು ಮತ್ತು ಪೂರೈಕೆದಾರರ ನಡುವೆ ಸಂಪರ್ಕವನ್ನು ಸುಗಮಗೊಳಿಸಿದೆ. ಹಾಗೂ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಂತಹ ರಾಷ್ಟ್ರೀಕೃತ ಬ್ಯಾಂಕುಗಳು ವ್ಯಾಪಾರಕ್ಕಾಗಿ ಸಾಲಗಳನ್ನು ಪಡೆಯುವಲ್ಲಿ ಅವರಿಗೆ ಸಹಾಯ ಮಾಡುತ್ತವೆ. ಪ್ರಸ್ತುತ, ಉದ್ಯಮಿಗಳು ಈ ನಿಟ್ಟಿನಲ್ಲಿ ಸಕ್ರಿಯವಾಗಿ ಕೆಲಸ ಮಾಡುತ್ತಿದ್ದಾರೆ.
ಚಿಕ್ಕಬಳ್ಳಾಪುರದಲ್ಲಿ TERI ಆಯೋಜಿಸಿದ್ದ ಪಾಲುದಾರರ ಕಾರ್ಯಾಗಾರದ ನಂತರ, ಇತರ ತಾಲ್ಲೂಕುಗಳ FPO ಸದಸ್ಯರು ಸಹಾಯಧನಕ್ಕಾಗಿ ತೋಟಗಾರಿಕೆ ಇಲಾಖೆಯನ್ನು ಸಂಪರ್ಕಿಸಿದ್ದಾರೆ. ಸೌರಶಕ್ತಿ ಆಧಾರಿತ ಕೋಲ್ಡ್ ಸ್ಟೋರೇಜ್ ಘಟಕಗಳನ್ನು ಖರೀದಿಸಲು ಅಗತ್ಯವಿರುವ 60% ಹಣವನ್ನು ಹೂಡಿಕೆ ಮಾಡಲು ಅವರು ಯೋಜನೆಯನ್ನು ರೂಪಿಸಿದ್ದಾರೆ. ಈ ವಿಕೇಂದ್ರೀಕೃತ ಸಮುದಾಯ ಕೇಂದ್ರಿತ ಪರಿಹಾರವನ್ನು ಹೆಚ್ಚಿಸಲು ನಾವು ಇತರ ಮಾರ್ಗಗಳ ಕಡೆಗೆ ನೋಡುತ್ತೇವೆ.
ಸಾದಲಿ ಗ್ರಾಮದಲ್ಲಿ ಮಹಿಳೆಯರು ಮತ್ತು ಯುವಕರನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಸೌರ ಕೋಲ್ಡ್ ರೂಮ್ ಯೋಜನೆಯ ಯಶಸ್ವಿ ಅನುಷ್ಠಾನವು, ಕರ್ನಾಟಕದ ಇತರ ಪ್ರದೇಶಗಳಲ್ಲಿ ಮತ್ತು ಅದರಾಚೆಗೂ ಈ ಮಾದರಿಯನ್ನು ಪುನರಾವರ್ತಿಸಲು ಒಂದು ಸದೃಢವಾದ ಚೌಕಟ್ಟನ್ನು ಒದಗಿಸಿದೆ. ಮಹಿಳೆಯರನ್ನು ಒಳಗೊಳ್ಳುವಿಕೆಗೆ ಆದ್ಯತೆ ನೀಡುವ ಮೂಲಕ, ಯುವಕರನ್ನು ತೊಡಗಿಸಿಕೊಳ್ಳುವ ಮೂಲಕ ಮತ್ತು ಸಮುದಾಯ ನೇತೃತ್ವದ ಹೊಸತನಗಳನ್ನು ಪೋಷಿಸುವ ಮೂಲಕ, ಈ ಯೋಜನೆಯು ಗ್ರಾಮೀಣ ಕೃಷಿ ಸಮುದಾಯದ ವಿಶ್ವಾಸವನ್ನು ಹೆಚ್ಚಿಸಿದೆ. ಇದು ಸಣ್ಣ ಮತ್ತು ಅತಿ ಸಣ್ಣ ರೈತರ ಜೀವನೋಪಾಯವನ್ನು ಸುಧಾರಿಸುವುದರೊಂದಿಗೆ, ಉತ್ಪನ್ನ ವ್ಯರ್ಥವಾಗುವುದನ್ನು ಕಡಿಮೆ ಮಾಡಿದೆ, ಆಹಾರ ಭದ್ರತೆಯನ್ನು ಹೆಚ್ಚಿಸಿದೆ ಮತ್ತು ಕೃಷಿ ಕ್ಷೇತ್ರದ ಸುಸ್ಥಿರ ಪ್ರಗತಿಗೆ ಕೊಡುಗೆ ನೀಡಿದೆ.
Nagaraju Y Senior Manager, Sustainable Services Management (SSM) The Energy and Resources Institute (TERI) Southern Regional Centre, 4th Main, Domlur II Stage, Bangalore - 560 071, Karnataka E-mail: nagarju@teri.res.in Website: www.teriin.org
ಆಂಗ್ಲ ಮೂಲ : ಲೀಸಾ ಇಂಡಿಯಾ; ಸಂಪುಟ :೨೬; ಸಂಚಿಕೆ : ೪ ; ಡಿಸಂಬರ್ ೨೦೨೪



