ಕೃಷಿ ವ್ಯವಸ್ಥೆಯಲ್ಲಿ ವೈವಿಧ್ಯತೆ ಮತ್ತು ವಿವಿಧ ಉದ್ಯಮಗಳನ್ನು ಸಂಯೋಜಿಸುವುದರಿಂದ ಆಹಾರ ಮತ್ತು ಪೌಷ್ಟಿಕಾಂಶ ಭದ್ರತೆ, ಆದಾಯ ಮತ್ತು ಸಂಪನ್ಮೂಲಗಳ ಅತ್ಯುತ್ತಮ ಬಳಕೆಯಂತಹ ಹಲವು ಅಗತ್ಯಗಳನ್ನು ಪೂರೈಸಲು ಸಹಾಯವಾಗುತ್ತದೆ . ಶ್ರೀಮತಿ ಮಂಜುಳಾ ಅವರ ಪ್ರಕರಣವು ಅದನ್ನು ಸಾಬೀತುಪಡಿಸುತ್ತದೆ.
ಸಣ್ಣ ಮತ್ತು ಅತಿ ಸಣ್ಣ ರೈತರು ಭಾರತದ ಗ್ರಾಮೀಣ ಆರ್ಥಿಕತೆಯ ಮೂಲವಾಗಿದ್ದು, ಅವರು ಒಟ್ಟು ರೈತ ಸಮುದಾಯದ ಶೇಕಡ 85 ರಷ್ಟಿದ್ದಾರೆ. ಆಹಾರ ಭದ್ರತೆ ಮತ್ತು ಪೌಷ್ಟಿಕಾಂಶ ಭದ್ರತೆ, ಸುಧಾರಿತ ಆದಾಯ ಹಾಗೂ ಮರುಬಳಕೆಯ ಉತ್ಪನ್ನಗಳನ್ನು (ಕೆಲವೊಮ್ಮೆ ತ್ಯಾಜ್ಯವೆಂದು ಪರಿಗಣಿಸಲಾಗುತ್ತದೆ) ಮತ್ತೊಂದು ವ್ಯವಸ್ಥೆಗೆ ಇನ್‌ಪುಟ್ ಆಗಿ ಪರಿವರ್ತಿಸುವ ಮೂಲಕ ಸಂಪನ್ಮೂಲಗಳ ಪರಿಣಾಮಕಾರಿ ಬಳಕೆಗೆ ಸಮಗ್ರ ಕೃಷಿ ವ್ಯವಸ್ಥೆ (IFS) ಒಂದು ಮಾರ್ಗವೆಂದು ಗುರುತಿಸಲ್ಪಟ್ಟಿದೆ. IFS ಎನ್ನುವುದು ಧಾನ್ಯಗಳು, ದ್ವಿದಳ ಧಾನ್ಯಗಳು, ತೋಟಗಾರಿಕೆ ಬೆಳೆಗಳಾದ ತರಕಾರಿಗಳು, ಮಾವು, ಪಶುಸಂಗೋಪನೆ- ಹೈನುಗಾರಿಕೆ, ಮೇವು ಬೆಳೆಗಳು ಮತ್ತು ಕೃಷಿ ಹೊಂಡಗಳಲ್ಲಿ ಜಲಚರ ಸಾಕಣೆ, ಕೋಳಿ ಸಾಕಣೆ ಮುಂತಾದ ಕೃಷಿ ಉದ್ಯಮಗಳ ಮಿಶ್ರಣವಾಗಿದ್ದು, ಸಂಪನ್ಮೂಲಗಳ ದಕ್ಷ ಬಳಕೆಯ ಮೂಲಕ ಆರ್ಥಿಕ ಮತ್ತು ಸುಸ್ಥಿರ ಕೃಷಿ ಉತ್ಪಾದನೆಯನ್ನು ಸಾಧಿಸಲು ಇದನ್ನು ಬಳಸಲಾಗುತ್ತದೆ.
ಶ್ರೀಮತಿ ಮಂಜುಳಾ ಬೊಕ್ನೇಕರ್ ಅವರ ಯಶೋಗಾಥೆ
43 ವರ್ಷದ ಶ್ರೀಮತಿ ಮಂಜುಳಾ ಬೊಕ್ನೇಕರ ಅವರು ಧಾರವಾಡದ ಕುಂಬಾರಕೊಪ್ಪ ಗ್ರಾಮದವರು. ಬಡ ಸಂಪ್ರದಾಯವಾದಿ ಕುಟುಂಬಕ್ಕೆ ಸೇರಿದವರಾಗಿದ್ದು, ವಿದ್ಯಾವಂತರಲ್ಲ. 18ನೇ ವಯಸ್ಸಿಗೆ ರೈತ ನಾರಾಯಣ ಬೊಕ್ನೇಕರ ಅವರೊಂದಿಗೆ ಮದುವೆಯಾಯಿತು. ಅವರಿಗೆ ಈಗ ಆರು ಮಂದಿ ಮೊಮ್ಮಕ್ಕಳು.
ಶ್ರೀಮತಿ ಮಂಜುಳಾ ಕೃಷಿ ಕುಟುಂಬದಿಂದ ಬಂದವರಾಗಿದ್ದರಿಂದ ಪತಿಯೊಂದಿಗೆ ಹೊಲದಲ್ಲಿ ಸಹಾಯ ಮಾಡಲು ಪ್ರಾರಂಭಿಸಿದರು. 1999 ರಲ್ಲಿ, ಕುಂಬರಕೊಪ್ಪ ಗ್ರಾಮದಲ್ಲಿ ಸಾಲ ಮಾಡಿ 4 ಎಕರೆ 3 ಗುಂಟೆ ನೀರಾವರಿ ಭೂಮಿಯನ್ನು ಖರೀದಿಸಿದರು. ಒಂದು ಎಕರೆಯನ್ನು ಮಾವಿನ ತೋಟಕ್ಕೆ ಮೀಸಲಿಡಲಾಗಿತ್ತು. ಆರಂಭದಲ್ಲಿ, ವಾರ್ಷಿಕವಾಗಿ ಎರಡು ಬೆಳೆಗಳನ್ನು ಬೆಳೆಯಲಾಗುತ್ತಿತ್ತು. ಇದರೊಂದಿಗೆ ಎಲ್ಲ ಬಗೆಯ ತರಕಾರಿಗಳು, ದ್ವಿದಳ ಧಾನ್ಯಗಳಾದ ಅಲಸಂದೆ, ಹೆಸರುಕಾಳು, ಹುರಳಿಯನ್ನು ಮನೆಬಳಕೆಗಾಗಿ ಬೆಳೆಸಲಾಯಿತು.
ಚೌಕ ೧: ಅಖಿಲ ಭಾರತ ಸಂಶೋಧನ ಯೋಜನೆ – ಕೃಷಿಯಲ್ಲಿ ಮಹಿಳೆಯ ಹಸ್ತಕ್ಷೇಪ ಭಾರತದ 75ನೇ ಸ್ವಾತಂತ್ರ್ಯೋತ್ಸವದ ನೆನಪಿನ ಆಜಾದಿ ಕಾ ಅಮೃತ್ ಮಹೋತ್ಸವದ ಭಾಗವಾಗಿ, ಪೋಷಣ್ ಅಭಿಯಾನವನ್ನು ಬಲಪಡಿಸಲು “ಪೌಷ್ಠಿಕಾಂಶ ಸ್ಮಾರ್ಟ್ ವಿಲೇಜ್” ಎಂಬ ಕಾರ್ಯಕ್ರಮವನ್ನು ಪ್ರಾರಂಭಿಸಲಾಗಿದೆ. ಈ ಹೊಸ ಉಪಕ್ರಮವು ಭಾರತದ 12 ರಾಜ್ಯಗಳಲ್ಲಿ 13 ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅಖಿಲ ಭಾರತ ಕೃಷಿಯಲ್ಲಿ ಮಹಿಳೆಯರ ಕುರಿತಾದ ಸಂಯೋಜಿತ ಸಂಶೋಧನಾ ಯೋಜನೆಯ (AICRP-WIA) ಮೂಲಕ ಭಾರತದಾದ್ಯಂತ 75 ಹಳ್ಳಿಗಳನ್ನು ತಲುಪುವ ಗುರಿಯನ್ನು ಹೊಂದಿದೆ. ಗ್ರಾಮೀಣ ಪ್ರದೇಶಗಳಲ್ಲಿ ಪೌಷ್ಟಿಕತೆಯ ಅರಿವು, ಶಿಕ್ಷಣ ಮತ್ತು ನಡವಳಿಕೆಯ ಬದಲಾವಣೆಗಳನ್ನು ಪ್ರಚುರಗೊಳಿಸಲು ಕೃಷಿ ಮಹಿಳೆಯರು ಮತ್ತು ಮಕ್ಕಳನ್ನು ಒಳಗೊಳ್ಳುವುದು. ಇದಕ್ಕಾಗಿ ದೇಸಿ ಖಾದ್ಯದ ಸಾಂಪ್ರದಾಯಿಕ ತಿಳಿವಳಿಕೆಯನ್ನು ಬಳಸಿಕೊಳ್ಳುವುದು. ಇದಕ್ಕಾಗಿ ಮನೆ ಕೃಷಿ ಮತ್ತು ಪೌಷ್ಟಿಕ ತೋಟದ ಮೂಲಕ ಪೌಷ್ಟಿಕಾಂಶ-ಸೂಕ್ಷ್ಮ ಕೃಷಿಯನ್ನು ಅನುಷ್ಠಾನಗೊಳಿಸುವುದು ಈ ಉಪಕ್ರಮದ ಉದ್ದೇಶಗಳಾಗಿವೆ. ಅಪೌಷ್ಟಿಕತೆ ಮುಕ್ತ ಗ್ರಾಮಗಳ ಗುರಿಯನ್ನು ಸಾಧಿಸಲು, ತೀವ್ರವಾದ ಜಾಗೃತಿ ಅಭಿಯಾನಗಳು, ಕ್ಷೇತ್ರ ಚಟುವಟಿಕೆಗಳು, ತರಕಾರಿ ಬೀಜಗಳು ಮತ್ತು ಹಣ್ಣಿನ ಗಿಡಗಳ ವಿತರಣೆಯನ್ನು ಕೈಗೊಳ್ಳಲಾಯಿತು. ಈ ಉಪಕ್ರಮದಡಿಯಲ್ಲಿ, ಧಾರವಾಡದ ಯುಎಎಸ್, 2020-21ರ ಅವಧಿಯಲ್ಲಿ ನ್ಯೂಟ್ರಿ-ಸ್ಮಾರ್ಟ್ ಗ್ರಾಮವನ್ನು ಅಭಿವೃದ್ಧಿಪಡಿಸುವ ಗುರಿಯೊಂದಿಗೆ ಕುಂಬಾರಕೊಪ್ಪವನ್ನು ದತ್ತು ಪಡೆದುಕೊಂಡಿದೆ. ಗೂಟ ಕಟ್ಟುವುದು ಮತ್ತು ಹೊದಿಕೆ ಹೊದಿಸುವುದು: ನೆಲಕ್ಕೆ ಬಾಗಿದ ತರಕಾರಿ ಗಿಡಗಳನ್ನು ನೇರವಾಗಿಸಲು ಅವುಗಳಿಗೆ ಆಸರೆಯಾಗಿ ಗೂಟಗಳಿಗೆ ಕಟ್ಟಲಾಗುತ್ತದೆ. ಈ ಗೂಟದ ಸಹಾಯದಿಂದ ಗಿಡಗಳು ಹೂ ಅಥವಾ ಹಣ್ಣಿನ ತೂಕ, ಜೋರು ಗಾಳಿ, ಮಳೆ ಅಥವ ಇನ್ನಿತರ ಅಡೆತಡೆಗಳಿಗೆ ಬಾಗುವುದು ತಪ್ಪುತ್ತದೆ. ಗೂಟದಿಂದ ಭಾರವಾದ ಎಲೆಗಳು, ಹಣ್ಣು ಅಥವಾ ಹೂಗೊಂಚಲುಗಳನ್ನು ಹೊಂದಿರುವ ಗಿಡಗಳು ಬಾಗುವುದು ಅಥವಾ ಮುರಿಯುವುದು ತಪ್ಪುತ್ತದೆ. ಜೊತೆಗೆ, ಗಿಡಗಳು ನೇರವಾಗಿರುವುದರಿಂದ ಉತ್ತಮ ಗಾಳಿಯ ಪ್ರಸರಣಕ್ಕೆ ಸಹಾಯ ಮಾಡುತ್ತದೆ. ಇದು ಗಿಡಗಳ ಆರೋಗ್ಯಕ್ಕೆ ಉತ್ತಮ. ಗೂಟಗಳು ಟೊಮೆಟೊಗಳನ್ನು ಗಿಡಗಳು ನೆಲದಿಂದ ದೂರವಿರಲು ಸಹಾಯವಾಗುತ್ತದೆ. ಅವು ಮೇಲ್ಮುಖವಾಗಿ ಬೆಳೆಯಲು ಸಹಾಯ ಮಾಡುತ್ತದೆ. ಅನೇಕ ರೋಗಗಳು ಮತ್ತು ಕೀಟಗಳು ನೆಲದ ಮಟ್ಟದಲ್ಲಿ ಆರಂಭವಾಗುವುದರಿಂದ, ಅವುಗಳನ್ನು ನೆಲದ ಸಂಪರ್ಕದಿಂದ ದೂರವಿಡಲು ಈ ರಚನಾತ್ಮಕ ವ್ಯವಸ್ಥೆಯನ್ನು ಬಳಸುವುದು ವಿವೇಕಯುತವಾಗಿದೆ. ಮಲ್ಚಿಂಗ್ (ಹೊದಿಕೆ) ಎಂದರೆ ಕಳೆ ನಿಯಂತ್ರಣಕ್ಕಾಗಿ ಮತ್ತು ಗಿಡಗಳಿಗೆ ಲಭ್ಯವಿರುವ ಮಣ್ಣಿನ ತೇವಾಂಶವನ್ನು ಉಳಿಸಿಕೊಳ್ಳಲು ಮಣ್ಣಿನ ಮೇಲ್ಭಾಗಕ್ಕೆ ಹೊದಿಕೆ ಹೊದಿಸುವ ಪ್ರಕ್ರಿಯೆ. ಹೊದಿಕೆ ಹಾಕುವುದರಿಂದ ಆಗುವ ಪ್ರಯೋಜನಗಳೆಂದರೆ, ಮಣ್ಣಿನ ತೇವಾಂಶ ಸಂರಕ್ಷಣೆ, ಮಣ್ಣಿನ ಸಂಕೋಚನ ಮತ್ತು ಸವಕಳಿ ಕಡಿಮೆ ಮಾಡುವುದು, ಮಣ್ಣಿನ ತಾಪಮಾನ ನಿಯಂತ್ರಣ, ಮಣ್ಣಿನ ಫಲವತ್ತತೆಯ ಸುಧಾರಣೆ, ಉಪ್ಪಿನ ಸಾಂದ್ರತೆಯಿಂದ ಉಂಟಾಗುವ ಲವಣಾಂಶದ ಒತ್ತಡವನ್ನು ಕಡಿಮೆ ಮಾಡುವುದು, ಸಸ್ಯಗಳ ಬೆಳವಣಿಗೆ, ಅಭಿವೃದ್ಧಿ ಮತ್ತು ಇಳುವರಿ, ರೋಗ ಮತ್ತು ಕಳೆಗಳ ನಿಯಂತ್ರಣ.
|
ಕೂಲಿಯಾಳುಗಳ ಕೊರತೆ ಮತ್ತು ಹೆಚ್ಚುತ್ತಿರುವ ಕೂಲಿ ವೆಚ್ಚವನ್ನು ನಿಭಾಯಿಸಲು, ಅವರು ತರಕಾರಿಗಳೊಂದಿಗೆ ಕಬ್ಬನ್ನು ಮಿಶ್ರ ಬೆಳೆಯಾಗಿ ಬೆಳೆಯಲು ಪ್ರಾರಂಭಿಸಿದರು. ಆರಂಭದಲ್ಲಿ, ಮನೆ ಬಳಕೆಗಾಗಿ ತರಕಾರಿಗಳನ್ನು ಬೆಳೆಯಲಾಗುತ್ತಿತ್ತು. ತರಕಾರಿಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಗಮನಿಸಿ ಬೆಳೆಯುವ ಪ್ರದೇಶವನ್ನು ಹೆಚ್ಚುಮಾಡಿದರು. ಆರಂಭದಲ್ಲಿ ಹೆಚ್ಚುವರಿ ಇಳುವರಿಯನ್ನು ಹತ್ತಿರದ ಹಳ್ಳಿಗಳಲ್ಲಿ ಮಾರಾಟ ಮಾಡಿ, ಕ್ರಮೇಣ ಬೆಳಗಾವಿ ನಗರಕ್ಕೆ ಸರಬರಾಜು ಮಾಡಲು ಶುರುಮಾಡಿದರು. ಆದರೂ, ಅವರಿಗೆ ವಿಶಾಲ ಪ್ರದೇಶದಲ್ಲಿ ಬೆಳೆದ ಟೊಮೆಟೊ ಮತ್ತು ಬಳ್ಳಿ ತರಕಾರಿಗಳನ್ನು ಕೊಯ್ಲು ಮಾಡುವುದು ಕಷ್ಟಕರ ಅನ್ನಿಸತೊಡಗಿತು.
‘ನ್ಯೂಟ್ರಿ-ಸ್ಮಾರ್ಟ್ ವಿಲೇಜ್’ ಯೋಜನೆಯ ಉಪಕ್ರಮದಡಿಯಲ್ಲಿ (ಬಾಕ್ಸ್ ನೋಡಿ), ವಿಜ್ಞಾನಿಯೊಬ್ಬರು ಜಮೀನಿಗೆ ಭೇಟಿ ನೀಡಿ, ರೈತರಿಗೆ ದೊಡ್ಡ ಪ್ರಮಾಣದ ತರಕಾರಿ ಕೃಷಿ ಮತ್ತು ಸುಧಾರಿತ ತರಕಾರಿ ಬೆಳೆಯುವ ತಂತ್ರಗಳು ಮತ್ತು ಸಮಗ್ರ ಕೃಷಿ ವಿಧಾನಗಳ ಬಗ್ಗೆ ಮಾರ್ಗದರ್ಶನ ನೀಡಿದರು. ಮಾರ್ಗದರ್ಶನದ ಜೊತೆಗೆ, ವಿವಿಧ ತರಕಾರಿಗಳು ಮತ್ತು ಸೊಪ್ಪಿನ ಬೀಜಗಳು ಮತ್ತು ಟೊಮೆಟೊ, ಬದನೆಕಾಯಿ ಮತ್ತು ಮೆಣಸಿನಕಾಯಿಯ ಸಸಿಗಳನ್ನು ವಿತರಿಸಲಾಯಿತು. ಅವುಗಳ ಬಗ್ಗೆ ನಂಬಿಕೆ ಬಂದ ನಂತರ, ಮಂಜುಳಾ ಈ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡರು.
ಹೊದಿಕೆ ಹೊದಿಸುವುದು ಮತ್ತು ಗೂಟ ಕಟ್ಟುವ ವಿಧಾನಗಳನ್ನು ಬಳಸುವ ಮೂಲಕ ಹೀರೆಕಾಯಿ, ಸೋರೆಕಾಯನ್ನು ಮಂಜುಳ ಯಶಸ್ವಿಯಾಗಿ ದೊಡ್ಡಪ್ರಮಾಣದಲ್ಲಿ ಬೆಳೆಸಿದರು. ಅವರು ಪಾಲಕ್, ಕೊತ್ತಂಬರಿ, ಸಬ್ಬಸಿಗೆ ಮತ್ತು ಅಮರಾಂಥಸ್ ಮುಂತಾದ ಸೊಪ್ಪಿನ ತರಕಾರಿಗಳನ್ನು ಸಹ ಬೆಳೆಯುತ್ತಾರೆ. ಮಾರುಕಟ್ಟೆಯಲ್ಲಿ ಅವುಗಳಿಗೆ ಹೆಚ್ಚಿನ ಬೆಲೆ ಸಿಗುತ್ತದೆ. ಕಬ್ಬಿನೊಂದಿಗೆ ಟೊಮೆಟೊವನ್ನು ಮಿಶ್ರ ಬೆಳೆಯಾಗಿ ಬೆಳೆಯಲಾಗುತ್ತಿತ್ತು, ಆದರೆ ಬದನೆಕಾಯಿಯನ್ನು ಗೂಟ ಕಟ್ಟುವ ವಿಧಾನವನ್ನು ಬಳಸಿ ಬೆಳೆಯಲಾಗುತ್ತಿತ್ತು.
ಇದರೊಂದಿಗೆ ಹೈನುಗಾರಿಕೆ, ರೇಷ್ಮೆಸಾಕಣೆಗಳನ್ನು ಅಳವಡಿಸಿಕೊಂಡರು. ಒಂದು ಹಸುವಿನೊಂದಿಗೆ ಹೈನುಗಾರಿಕೆಯನ್ನು ಆರಂಭಿಸಿದರು. ಇಂದು ಅವರ ಬಳಿ ಹಸುವಿನೊಂದಿಗೆ ಎರಡು ಎತ್ತುಗಳಿವೆ. ಹೆಚ್ಚುವರಿ ಹಾಲನ್ನು ಮಾರಾಟ ಮಾಡುತ್ತಾರೆ. ಹೊಲದಲ್ಲೇ ತಯಾರಿಸಿದ ಗೊಬ್ಬರವನ್ನು ತೋಟಕ್ಕೆ ಬಳಸುತ್ತಾರೆ. ಹಿಪ್ಪುನೇರಳೆ ಕೃಷಿಯನ್ನು ಆರಂಭಿಸಿದ್ದಾರೆ. ಜೊತೆಗೆ, ಹೆಚ್ಚುವರಿ ರೇಷ್ಮೆಸಾಕಣೆಯ ಘಟಕಗಳನ್ನು ಹೊಂದಲು ಯೋಜಿಸುತ್ತಿದ್ದಾರೆ. ಹಿಪ್ಪುನೇರಳೆ ಗಿಡಗಳು ಇನ್ನೂ ಚಿಕ್ಕದಾದ್ದರಿಂದ, ಅದರೊಂದಿಗೆ ಮಿಶ್ರಬೆಳೆಯಾಗಿ ತರಕಾರಿಗಳನ್ನು ಬೆಳೆಯುತ್ತಿದ್ದಾರೆ.
ಮನೆಬಳಕೆಗಾಗಿ ಹುರುಳಿ, ಹೆಸರುಕಾಳು, ಅಲಸಂದೆ ಮತ್ತು ಮಡಿಕೆ ಕಾಳನ್ನು ಬೆಳೆಯುತ್ತಿದ್ದಾರೆ. ಮಾರುಕಟ್ಟೆಯಿಂದ ಆದಾಯ ಗಳಿಸಲು ಮೆಕ್ಕೆಜೋಳ, ಭತ್ತ ಮತ್ತು ಕಬ್ಬು ಬೆಳೆಯುತ್ತಾರೆ. ಒಂದು ಎಕರೆ ಮಾವಿನ ತೋಟವಿದೆ. ಆರಂಭದಲ್ಲಿ, ಅವರು ಮನೆಯ ಬಳಕೆಗಾಗಿ ತರಕಾರಿಗಳನ್ನು ಬೆಳೆಯುತ್ತಿದ್ದರು. ಈಗ ಅದನ್ನು ದೊಡ್ಡ ಪ್ರಮಾಣದಲ್ಲಿ ಬೆಳೆಯುತ್ತಿದ್ದಾರೆ. ಇದಲ್ಲದೆ ನಿಂಬೆ, ಕರಿಬೇವು, ಪೇರಲ, ತೆಂಗಿನಕಾಯಿ ಮತ್ತು ಸಪೋಟ ಮರಗಳು ಸಹ ಇವೆ. ಮಾವಿನಹಣ್ಣುಗಳನ್ನು ಮಾರಾಟ ಮಾಡಿದರೆ, ಉಳಿದವುಗಳನ್ನು ಮನೆಯ ಬಳಕೆಗೆ ಇಟ್ಟುಕೊಳ್ಳುತ್ತಾರೆ.
ಸಾವಯವ ಘನತಾಜ್ಯವನ್ನು ಮರುಬಳಕೆ ಮಾಡುವ ಮೂಲಕ ಸಾವಯವ ಗೊಬ್ಬರ ತಯಾರಿಸುತ್ತಾರೆ. ಯೋಜನೆಯು ಒದಗಿಸಿದ ಗೊಬ್ಬರ ಘಟಕವನ್ನು ಹೊಂದಿದ್ದಾರೆ. ಕೃಷಿ ಇಲಾಖೆ ನೆರವಿನ ಮತ್ತೊಂದು ಯೋಜನೆಯಡಿಯಲ್ಲಿ, ಬರಗಾಲದ ಸಮಯದಲ್ಲಿ ಸುಮಾರು ಐದು ಎಕರೆ ಭೂಮಿಗೆ ನೀರಾವರಿ ಒದಗಿಸಲು ಸಹಾಯವಾಗುವಂತೆ ಮಳೆನೀರಿನ ಸಂಗ್ರಹಣೆಗೆ ಕೃಷಿ ಹೊಂಡವನ್ನು ನಿರ್ಮಿಸಿದರು.
ಶ್ರೀಮತಿ ಮಂಜುಳಾ ಬೊಕ್ನೇಕರ್ ಅವರ ಕೃಷಿ ಆದಾಯವು ಸುಮಾರು 2 ಲಕ್ಷದಿಂದ 2,97,500/- ರೂ.ಗಳಿಗೆ ಗಮನಾರ್ಹವಾಗಿ ಹೆಚ್ಚಳ ಕಂಡಿದೆ. ವೈವಿಧ್ಯಮಯ ತರಕಾರಿಗಳು ಮತ್ತು ಕೃಷಿ ಉತ್ಪನ್ನಗಳನ್ನು ಹೊಂದಿದ್ದು, ತಮ್ಮ ಸ್ನೇಹಿತರು ಮತ್ತು ಸಂಬಂಧಿಕರೊಂದಿಗೆ ತಾಜಾ ತರಕಾರಿಗಳನ್ನು ಹಂಚಿಕೊಳ್ಳುತ್ತಿರುವುದಾಗಿ ಹೆಮ್ಮೆಯಿಂದ ಹೇಳುತ್ತಾರೆ. ಹಲವಾರು ರೈತರು ಅವರ ಜಮೀನಿಗೆ ಭೇಟಿ ನೀಡಿದ್ದಾರೆ. ಅವರು ಅನೇಕರಿಗೆ ಮಾದರಿಯಾಗಿದ್ದಾರೆ. ಐಎಫ್‌ಎಸ್ ಮಾದರಿಯು ಸಣ್ಣ ಹಿಡುವಳಿದಾರರಿಗೆ ಆರೋಗ್ಯಕರ ಮತ್ತು ಪೌಷ್ಟಿಕ ಆಹಾರವನ್ನು ಪಡೆಯಲು ಮತ್ತು ನಿವ್ವಳ ಆದಾಯವನ್ನು ಹೆಚ್ಚಿಸಲು ಸಹಾಯಕವಾಗಿದೆ ಎನ್ನುವುದಕ್ಕೆ ಅವರು ಉದಾಹರಣೆಯಾಗಿದ್ದಾರೆ.
Rajeshwari Desai Senior Scientist (FRM) AICRP-WIA Research Complex UAS, Dharwad-580 005 Karnataka
Geeta Channal Senior Scientist (Extn) AICRP-WIA Research Complex UAS, Dharwad-580 005 Karnataka
ಆಂಗ್ಲ ಮೂಲ : ಲೀಸಾ ಇಂಡಿಯಾ; ಸಂಪುಟ :೨೬; ಸಂಚಿಕೆ : ೧ ; ಮಾರ್ಚ್ ೨೦೨೪



