ಪರಾಗಸ್ಪರ್ಶಕಗಳ ಸಂಖ್ಯೆಯಲ್ಲಿನ ಕುಸಿತವು ಆತಂಕಕಾರಿಯಾಗಿದ್ದು ಪರಿಸರ ವ್ಯವಸ್ಥೆಯನ್ನು ನಾಶಪಡಿಸುತ್ತದೆ. ಇದು ಆಹಾರ ಭದ್ರತಾ ಬಿಕ್ಕಟ್ಟನ್ನು ಉಂಟುಮಾಡುತ್ತದೆ. ಪರಾಗಸ್ಪರ್ಶಕಗಳ ಸಂಖ್ಯೆಯಲ್ಲಿನ ಕುಸಿತವು ಆತಂಕಕಾರಿಯಾಗಿದ್ದು ಪರಿಸರ ವ್ಯವಸ್ಥೆಯನ್ನು ನಾಶಪಡಿಸುತ್ತದೆ. ಇದು ಆಹಾರ ಭದ್ರತಾ ಬಿಕ್ಕಟ್ಟನ್ನು ಉಂಟುಮಾಡುತ್ತದೆ. ಪರಾಗಸ್ಪರ್ಶಕ ಕೀಟಗಳ ಜನಸಂಖ್ಯೆಯನ್ನು ಹೆಚ್ಚಿಸಲು BAIF ನ ಆರಂಭಿಕ ಉಪಕ್ರಮಗಳು ಪರಾಗಸ್ಪರ್ಶ ಮತ್ತು ಬೆಳೆ ಉತ್ಪಾದನೆಯನ್ನು ಹೆಚ್ಚಿಸುವುದಲ್ಲದೆ, ಕೃಷಿ ಪರಿಸರ ಸಂರಕ್ಷಣೆಯ ಭವಿಷ್ಯದ ಸಂರಕ್ಷಕರಾಗಲು ಯುವಕರನ್ನು ಸಬಲೀಕರಣಗೊಳಿಸಿವೆ.
ಹವಾಮಾನ ಬದಲಾವಣೆಗಳು ಮತ್ತು ಆವಾಸಸ್ಥಾನ ನಷ್ಟಗಳಿಂದಾಗಿ ಕೃಷಿ ಪರಿಸರ ಸಂರಕ್ಷಣೆಯು ಇತ್ತೀಚಿನ ದಿನಗಳಲ್ಲಿ ಬಹಳ ಮಹತ್ವವನ್ನು ಪಡೆದುಕೊಂಡಿದೆ. ಇತ್ತೀಚಿನ ಅಧ್ಯಯನಗಳು ಜಾಗತಿಕವಾಗಿ ಕೀಟಗಳ ಸಂಖ್ಯೆಯಲ್ಲಿ ಆತಂಕಕಾರಿ ಇಳಿಕೆಯನ್ನು ಸೂಚಿಸುತ್ತವೆ, ಇದಕ್ಕೆ ಆವಾಸಸ್ಥಾನ ನಷ್ಟ, ಕೀಟನಾಶಕಗಳ ಬಳಕೆ, ಮಾಲಿನ್ಯ ಮತ್ತು ಹವಾಮಾನ ಬದಲಾವಣೆ ಕಾರಣವಾಗಿದ್ದು, ಇದು ಆಹಾರ ಭದ್ರತೆ ಮತ್ತು ಪರಿಸರ ಸುಸ್ಥಿರತೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಕೀಟ ಆಧಾರಿತ ನೈಸರ್ಗಿಕ ನಿಯಂತ್ರಣ ಮತ್ತು ನೈಸರ್ಗಿಕ ಪರಭಕ್ಷಕ ಕಾರ್ಯವಿಧಾನಗಳನ್ನು ಪೋಷಿಸುವ ಕೃಷಿ ಪರಿಸರ ವ್ಯವಸ್ಥೆಯ ಸೇವೆಗಳನ್ನು ಉತ್ತೇಜಿಸುವುದು ಕೃಷಿ ಪರಿಸರ ಸಂರಕ್ಷಣೆಯಲ್ಲಿ ನಿರ್ಣಾಯಕ ಮತ್ತು ಮಹತ್ವದ ಪಾತ್ರವನ್ನು ವಹಿಸುತ್ತದೆ ಎಂದು BAIF ನಂಬುತ್ತದೆ.
ಜೇನುನೊಣಗಳು, ಚಿಟ್ಟೆಗಳು ಮತ್ತು ಇತರ ಕೀಟಗಳು ಸೇರಿದಂತೆ ಪರಾಗಸ್ಪರ್ಶಕಗಳು ಪ್ರಪಂಚದ 75% ಕ್ಕಿಂತ ಹೆಚ್ಚು ಹೂಬಿಡುವ ಸಸ್ಯಗಳ ಸಂತಾನೋತ್ಪತ್ತಿಗೆ ನಿರ್ಣಾಯಕವಾಗಿವೆ. ಇದರಲ್ಲಿ ಮೂರನೇ ಎರಡು ಭಾಗದಷ್ಟು ಬೆಳೆ ಪ್ರಭೇದಗಳು ಸೇರಿವೆ. ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆ ಅಂದಾಜಿನ ಪ್ರಕಾರ, ಪ್ರಪಂಚದಾದ್ಯಂತದ ಆಹಾರದ ಶೇ.90ರಷ್ಟು ಒದಗಿಸುವ 100 ಬೆಳೆ ಪ್ರಭೇದಗಳಲ್ಲಿ 71 ಪ್ರಭೇದಗಳು ಜೇನುನೊಣಗಳಿಂದ ಪರಾಗಸ್ಪರ್ಶಕ್ಕೆ ಒಳಗಾಗುತ್ತವೆ. ಈ ಪರಾಗಸ್ಪರ್ಶಕಗಳು ಇಲ್ಲದಿದ್ದರೆ, ಪರಿಸರ ವ್ಯವಸ್ಥೆಯು ಕುಸಿದು ಆಹಾರ ಭದ್ರತಾ ಬಿಕ್ಕಟ್ಟು ಎದುರಾಗುತ್ತದೆ. ಜಾಗತಿಕ ಉತ್ಪಾದನೆಯಲ್ಲಿ ಪರಾಗಸ್ಪರ್ಶಕ ಕೀಟಗಳ ಕೊಡುಗೆಯನ್ನು (FAO 1996) ಪ್ರಾಮುಖ್ಯತೆಯನ್ನು ಎತ್ತಿ ತೋರಿಸಲಾಗಿದೆ.
ಪ್ರಯೋಜನಕಾರಿ ಕೀಟಗಳನ್ನು ಸಾವಯವ ಪದಾರ್ಥಗಳನ್ನು ಪರಿವರ್ತಿಸುವ ವಿಭಜಕಗಳೆಂದು ಮತ್ತು ಕೀಟಗಳ ಸಂಖ್ಯೆಯನ್ನು ನಿಯಂತ್ರಿಸುವ ಪರಭಕ್ಷಕಗಳೆಂದು ಪರಿಗಣಿಸಲಾಗುತ್ತದೆ. ಉದಾಹರಣೆಗೆ ಜೀರುಂಡೆ, ಮರಳು ನೊಣಗಳು ಬೆಳೆಗೆ ಹಾನಿಯುಂಟುಮಾಡುವ ಹೇನುಕೀಟಗಳು ಮತ್ತಿತರ ಕೀಟಗಳನ್ನು ತಿನ್ನುತ್ತವೆ. ಇದರಿಂದ ರಾಸಾಯನಿಕ ಕೀಟನಾಶಕಗಳ ಬಳಕೆ ತಗ್ಗುತ್ತದೆ. ಪರಾಗಸ್ಪರ್ಶಕಗಳು ಮತ್ತು ಪ್ರಯೋಜನಕಾರಿ ಕೀಟಗಳೆಂದು ಗುರುತಿಸಲ್ಪಟ್ಟ ಈ ಪುಟ್ಟ ಕೆಲಸಗಾರರು ನಮ್ಮ ಪ್ರಕೃತಿಯ ಆರೋಗ್ಯವನ್ನು ಕಾಪಾಡಲು ನೆರವು ನೀಡುವುದಲ್ಲದೆ, ಕೃಷಿ ಉತ್ಪಾದಕತೆ ಮತ್ತು ಸುಸ್ಥಿರತೆಯನ್ನು ಹೆಚ್ಚಿಸುತ್ತವೆ.
ಕೃಷಿ ಪರಿಸರ ಸಂರಕ್ಷಣೆಯಲ್ಲಿ ಕೀಟಗಳ ಸಂರಕ್ಷಣೆಯ ನಿರ್ಣಾಯಕ ಪಾತ್ರವನ್ನು ಗುರುತಿಸಿ, BAIF ಎಂಬ ಸರ್ಕಾರೇತರ ಸಂಸ್ಥೆ, ಕೃಷಿ ಕ್ಷೇತ್ರದಲ್ಲಿ ಕೀಟಗಳ ಸಂಖ್ಯೆಯನ್ನು ಹೆಚ್ಚಿಸಲು ಕೆಲವು ಪ್ರಾಯೋಗಿಕ ಉಪಕ್ರಮಗಳನ್ನು ಜಾರಿಗೆ ತಂದಿತು. ಯುವ ಪೀಳಿಗೆಯನ್ನು ತೊಡಗಿಸಿಕೊಳ್ಳುವ ತುರ್ತು ಅಗತ್ಯವನ್ನು ಗುರುತಿಸಿ, ಅವರನ್ನು ಒಳಗೊಳ್ಳುವಂತಹ ಕೆಲವು ಉಪಕ್ರಮಗಳನ್ನು ಕೈಗೊಳ್ಳಲಾಯಿತು. ಇವುಗಳನ್ನು ಇಲ್ಲಿ ಮುಖ್ಯವಾಗಿ ಪ್ರಸ್ತಾಪಿಸಲಾಗಿದೆ.
ಶಾಲೆಗಳಲ್ಲಿ ಚಿಟ್ಟೆ ಉದ್ಯಾನಗಳು
BAIF ಶಾಲಾ ಆವರಣದಲ್ಲಿ ‘ಚಿಟ್ಟೆ ಉದ್ಯಾನʼಗಳನ್ನು ಪ್ರಚಾರ ಮಾಡುವ ಮೂಲಕ ಜೀವವೈವಿಧ್ಯ ಮತ್ತು ಅದರ ಪ್ರಯೋಜನಗಳ ಕುರಿತು ಜಾಗೃತಿ ಮೂಡಿಸುತ್ತಿದೆ. ಯುವ ಮನಸ್ಸುಗಳಿಗೆ ಅತ್ಯಾಕರ್ಷಕ ಮತ್ತು ಸಮಗ್ರ ಕಲಿಕೆಯ ಅವಕಾಶಗಳನ್ನು ಒದಗಿಸುತ್ತದೆ.
“ಚಿಟ್ಟೆ ಉದ್ಯಾನ” ಶೈಕ್ಷಣಿಕ ಜಾಗೃತಿ ಕಾರ್ಯಕ್ರಮವು ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ಜವಾಹರ್ ತಾಲ್ಲೂಕಿನ ಡೆಂಗಾಚಿಮೆಟ್ ಗ್ರಾಮದಲ್ಲಿದೆ. ಸ್ಥಳೀಯ ಆಶ್ರಮ (ಬುಡಕಟ್ಟು ವಸತಿ) ಶಾಲೆಯಲ್ಲಿ 2014 ರಲ್ಲಿ ಪ್ರಾರಂಭಿಸಲಾದ ಈ ಶಾಲಾ ಆಧಾರಿತ ಕಾರ್ಯಕ್ರಮವು ವಿದ್ಯಾರ್ಥಿಗಳು ಮತ್ತು ಶಿಕ್ಷಕರನ್ನು ಒಳಗೊಂಡಿದೆ. ಸಸ್ಯಗಳು ಮತ್ತು ಕೀಟಗಳ ನಡುವಿನ ಪರಸ್ಪರ ಕ್ರಿಯೆಗಳನ್ನು, ವಿಶೇಷವಾಗಿ ಚಿಟ್ಟೆಗಳನ್ನು ಗಮನಿಸಲು ಅವರಿಗೆ ತರಬೇತಿ ನೀಡಲಾಗುತ್ತದೆ. ಪ್ರತಿ ವರ್ಷ, 9 ಮತ್ತು 10 ನೇ ತರಗತಿಯ ವಿದ್ಯಾರ್ಥಿಗಳ ಹೊಸ ಬ್ಯಾಚ್ ಈ ಕಾರ್ಯಕ್ರಮದಲ್ಲಿ ಉತ್ಸಾಹದಿಂದ ಭಾಗವಹಿಸುತ್ತದೆ. ಈ ಕಾರ್ಯಕ್ರಮವು ಕಳೆದ ಒಂದು ದಶಕದಿಂದ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಪ್ರತಿ ತರಗತಿಯಿಂದ 10 ವಿದ್ಯಾರ್ಥಿಗಳನ್ನು ಈ ವೀಕ್ಷಣಾ ಯೋಜನೆಗೆ ಪ್ರತಿವರ್ಷ ಆಯ್ಕೆ ಮಾಡಲಾಗುತ್ತದೆ. ಈ ವಿದ್ಯಾರ್ಥಿಗಳು ಶಿಕ್ಷಕರಿಂದ ಮಾರ್ಗದರ್ಶನ ಪಡೆಯುತ್ತಾರೆ. ಶಾಲೆಯಲ್ಲಿನ ಚಿಟ್ಟೆ ಉದ್ಯಾನದಲ್ಲಿ ಚಿಟ್ಟೆಗಳ ಜೀವನ ಚಕ್ರವನ್ನು ಗಮನಿಸಿ ದಾಖಲಿಸುತ್ತಾರೆ. ನಿಖರವಾಗಿ ಗುರುತಿಸಲು ಗೈಡ್ ಪುಸ್ತಕಗಳನ್ನು ಬಳಸುತ್ತಾರೆ. ತಾವು ಗಮನಿಸಿದ್ದನ್ನು ನೋಟ್‌ಬುಕ್ಕಿನಲ್ಲಿ ದಾಖಲಿಸುತ್ತಾರೆ. ಕೀಟಗಳ ಜೀವನ ಚಕ್ರಗಳನ್ನು ಗಮನಿಸುವ ಮೂಲಕ, ವಿದ್ಯಾರ್ಥಿಗಳು ಸಸ್ಯ ಮತ್ತು ಪ್ರಾಣಿ ಜಗತ್ತನ್ನು, ಅವುಗಳ ನಡುವಿನ ಸಂಬಂಧವನ್ನು ಮತ್ತು ಬದುಕಿನ ಕಾಲಕ್ರಮವನ್ನು ಅರ್ಥಮಾಡಿಕೊಳ್ಳುತ್ತಾರೆ. ಪ್ರಾಯೋಗಿಕ ಅನುಭವದ ಮೂಲಕ, ಪರಾಗಸ್ಪರ್ಶಕಗಳು ಮತ್ತು ಪ್ರಯೋಜನಕಾರಿ ಕೀಟಗಳ ಮಹತ್ವವನ್ನು ಅರ್ಥಮಾಡಿಕೊಳ್ಳುತ್ತಾರೆ.
ಪರಾಗಸ್ಪರ್ಶಕ ಉದ್ಯಾನಗಳು
ಕಳೆದ ನಾಲ್ಕು ವರ್ಷಗಳಿಂದ, ಶುಷ್ಕ ಋತುವಿನಲ್ಲಿ ಮಕರಂದ ಮತ್ತು ಪರಾಗ ಮೂಲ ಬೆಳೆಗಳನ್ನು ಉತ್ತೇಜಿಸಲು ಪ್ರಯತ್ನಗಳು ನಡೆದಿವೆ. ಪಾಲ್ಘರ್ ಜಿಲ್ಲೆಯ ವಿಕ್ರಮಗಡ, ಜವಾಹರ್ ಮತ್ತು ದಹನು ಬ್ಲಾಕ್‌ಗಳಾದ್ಯಂತ ಮಾಲ್ವಾಡ, ಕೌಲಾಲೆ, ಗಂಜಾದ್, ಸೆನ್ಸಾರಿ, ಗಂಗೋಡಿ ಮತ್ತು ದಭಾಡಿ ಗ್ರಾಮಗಳಲ್ಲಿ ಹುಚ್ಚೆಳ್ಳು, ಸಾಸಿವೆ, ಎಳ್ಳು, ಸೂರ್ಯಕಾಂತಿ, ಕ್ಯಾರೆಟ್, ಆಲ್ಫಾಲ್ಫಾ, ನುಗ್ಗೆಕಾಯಿ, ನಿಂಬೆ ಮತ್ತು ಕರಬೇವು ಮುಂತಾದ ಬೆಳೆಗಳನ್ನು ಬೆಳೆಯಲಾಗುತ್ತದೆ. 25-35 ವರ್ಷ ವಯಸ್ಸಿನ ಒಟ್ಟು 540 ಮಂದಿ ರೈತರು ಈ ಚಟುವಟಿಕೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಇದರಲ್ಲಿ 65 ಮಂದಿ ಯುವಕರು ಜೇನುಸಾಕಣೆದಾರರು.
ಪರಾಗಸ್ಪರ್ಶವನ್ನು ಹೆಚ್ಚಿಸಲು ಮತ್ತು ಕೃಷಿ ಭೂಮಿಯಲ್ಲಿ ಪರಾಗಸ್ಪರ್ಶಕಗಳ ಉಪಸ್ಥಿತಿಯನ್ನು ವಿಸ್ತರಿಸಲು ಈ ಯುವ ರೈತರು ಪರಾಗಸ್ಪರ್ಶಕ ತೋಟಗಳನ್ನು ಸ್ಥಾಪಿಸಿ ನಿರ್ವಹಿಸುತ್ತಾರೆ. ಕುಟುಂಬಗಳಿಗೆ ಪರಾಗಸ್ಪರ್ಶಕ ಉದ್ಯಾನಗಳನ್ನು ಸ್ಥಾಪಿಸಲು ಪ್ರೋತ್ಸಾಹಿಸಲಾಗುತ್ತದೆ. ಇದು ಈ ಕೀಟಗಳಿಗೆ ಆಶ್ರಯ ತಾಣಗಳಾಗಿ ಮಾತ್ರವಲ್ಲದೆ ಆರೋಗ್ಯಕರ ವಾತಾವರಣವನ್ನು ಉತ್ಪಾದಿಸುವ ಜೀವಂತ ಪ್ರಯೋಗಾಲಯಗಳಾಗಿಯೂ ಕಾರ್ಯನಿರ್ವಹಿಸುತ್ತದೆ.
ಜೇನುನೊಣಗಳ ಕಾಲೊನಿಗಳು ಮತ್ತು ಕೃತಕ ಗೂಡುಗಳ ಪ್ರಚಾರ
ಯುವಕರನ್ನು ಒಳಗೊಂಡ ಹಲವಾರು ಸಮುದಾಯ ಕಾರ್ಯಕ್ರಮಗಳಲ್ಲಿ ಕೈಗೊಳ್ಳುವ ನಿರ್ದಿಷ್ಟ ಉಪಕ್ರಮವೆಂದರೆ ಅಪಿಸ್ ಸೆರಾನಾ ಇಂಡಿಕಾದ ನಿರ್ವಹಣೆ. ಇದು ಭಾರತದ ಬುಡಕಟ್ಟು ಪ್ರದೇಶಗಳಲ್ಲಿ ಪ್ರಸಿದ್ಧ ಜೇನುನೊಣ ಪ್ರಭೇದವಾಗಿದ್ದು, ಹಣ್ಣಿನ ತೋಟಗಳಲ್ಲಿ ಕಂಡುಬರುತ್ತದೆ.
ಪರಿಸರ ವ್ಯವಸ್ಥೆಗಳು ಒಂದು ಕಾಲದಲ್ಲಿ ಮರಗಳಲ್ಲಿ ಅಥವಾ ಒಂಟಿ ಜೇನುನೊಣಗಳು ತಮ್ಮ ಮೊಟ್ಟೆಗಳನ್ನು ಇಡಲು ಬೇರೆ ಸೂಕ್ತ ಸ್ಥಳಗಳಲ್ಲಿ ರಂಧ್ರಗಳನ್ನು ಒದಗಿಸುತ್ತಿದ್ದವು. ನಗರ ಪ್ರದೇಶಗಳು ಈ ನೈಸರ್ಗಿಕ ಆವಾಸಸ್ಥಾನಗಳನ್ನು ಅತಿಕ್ರಮಿಸುತ್ತಿರುವುದರಿಂದ ಈ ತಾಣಗಳು ನಷ್ಟವಾಗಿವೆ. ನೈಸರ್ಗಿಕವಾಗಿ ಗೂಡುಕಟ್ಟುವ ತಾಣಗಳು ಕಡಿಮೆ ಆಗುತ್ತಿರುವುದರಿಂದ ಒಂಟಿ ಜೇನುನೊಣಗಳು ಸವಾಲುಗಳನ್ನು ಎದುರಿಸುತ್ತಿವೆ.
ಕೃತಕ ಗೂಡುಕಟ್ಟುವ ರಚನೆಗಳನ್ನು ಜೇನುನೊಣ ಹೋಟೆಲ್‌ಗಳು/ಜೇನುನೊಣ ಮನೆಗಳು/ಕೀಟ ರಂಧ್ರಗಳು ಎಂದು ಕರೆಯುತ್ತಾರೆ. ಒಂಟಿಯಾಗಿ ಜೇನುನೊಣಗಳು ಸುರಕ್ಷಿತ ಮತ್ತು ಸುಭದ್ರ ವಾತಾವರಣದಲ್ಲಿ ತಮ್ಮ ಮೊಟ್ಟೆಗಳನ್ನು ಇಡಲು ಬಯಸುವ ಪರಿಸ್ಥಿತಿಯನ್ನು ಪುನರಾವರ್ತಿಸಲು ಇವುಗಳನ್ನು ವಿನ್ಯಾಸಗೊಳಿಸಲಾಗಿದೆ. ಈ ರಚನೆಗಳು ಒಂಟಿ ಜೇನುನೊಣಗಳಿಗೆ ಆಶ್ರಯವನ್ನು ಒದಗಿಸುವುದಲ್ಲದೆ, ಜೀವವೈವಿಧ್ಯತೆ ಮತ್ತು ಪರಿಸರ ವ್ಯವಸ್ಥೆಯ ಆರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿ ಪರಾಗಸ್ಪರ್ಶಕಗಳ ಮಹತ್ವದ ಬಗ್ಗೆ ಜಾಗೃತಿ ಮೂಡಿಸುತ್ತವೆ. ವೈವಿಧ್ಯಮಯ ಜೇನುನೊಣಗಳ ಪ್ರಭೇದಗಳನ್ನು ಸಂರಕ್ಷಿಸುವಲ್ಲಿ ಗಮನಾರ್ಹ ಕೊಡುಗೆ ನೀಡುತ್ತವೆ. ಜೇನುನೊಣಗಳ ಹೋಟೆಲ್‌ಗಳು (ಕೃತಕ ರಂಧ್ರಗಳು) ಒಂಟಿಯಾಗಿ ವಾಸಿಸುವ ಜೇನುನೊಣಗಳು, ವಿಶೇಷವಾಗಿ ಮೇಸನ್ ಜೇನುನೊಣಗಳು ಮತ್ತು ಎಲೆ ಕತ್ತರಿಸುವ ಜೇನುನೊಣಗಳಿಗೆ ನೆರವು ನೀಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಇವು ಉಳಿದ ಜೇನುನೊಣಗಳಿಗಿಂತ ಒಂಟಿಯಾಗಿ ಗೂಡುಕಟ್ಟುವ ನಡವಳಿಕೆಯಲ್ಲಿ ಭಿನ್ನವಾಗಿವೆ. ವೈವಿಧ್ಯಮಯ ಜೇನುನೊಣ ಪ್ರಭೇದಗಳನ್ನು ಆಕರ್ಷಿಸುವ ಮೂಲಕ, ಜೇನುನೊಣ ಕೃತಕ ರಂಧ್ರಗಳು ಜೀವವೈವಿಧ್ಯತೆಯನ್ನು ಹೆಚ್ಚಿಸುವಲ್ಲಿ ಮತ್ತು ಪರಿಸರ ವ್ಯವಸ್ಥೆಯ ಸ್ಥಿತಿಸ್ಥಾಪಕತ್ವವನ್ನು ಉತ್ತೇಜಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಇದರ ಪರಿಣಾಮವಾಗಿ ಪರಿಸರ ವ್ಯವಸ್ಥೆಗಳ ಒಟ್ಟಾರೆ ಆರೋಗ್ಯವೂ ಉತ್ತಮಗೊಳ್ಳುತ್ತದೆ.
ಜೇನುನೊಣಗಳ ಈ ಕೃತಕ ರಂಧ್ರಗಳ ರಚನೆ ವೈವಿಧ್ಯಮಯವಾಗಿರುತ್ತದೆ. ಪ್ರತಿಯೊಂದೂ ಒಂಟಿ ಜೇನುನೊಣಗಳ ನಿರ್ದಿಷ್ಟ ಅಗತ್ಯಗಳ ಪೂರೈಕೆಗೆ ತಕ್ಕಂತೆ ವಿನ್ಯಾಸಗೊಳಿಸಲಾಗಿದೆ. ಇವುಗಳನ್ನು ಹಲವು ರಂಧ್ರಗಳನ್ನು ಮಾಡಿರುವ ಮರದ ತುಂಡುಗಳು ಅಥವಾ ಕೊಳವೆಗಳಲ್ಲಿ ಮಾಡಲಾಗಿರುತ್ತದೆ. ಒಂಟಿಜೇನುನೊಣಗಳಿಗೆ ಆಶ್ರಯ ನೀಡುವಂತಹ ನೈಸರ್ಗಿಕವಾಗಿ ಮರಗಳಲ್ಲಿ ಕಂಡುಬರುವಂತಹದ್ದೆ ರಂಧ್ರಗಳನ್ನು ಹೋಲುತ್ತದೆ. ರಂಧ್ರಗಳನ್ನು ಕೊರೆದಿರುವ ಈ ಮರದ ಪೆಟ್ಟಿಗೆಗಳು ಆಶ್ರಯ ಹುಡುಕುತ್ತಿರುವ ಜೇನುನೊಣಗಳಿಗೆ ಸುಲಭವಾಗಿ ಎಟುಕುವ ತಾಣಗಳಾಗುತ್ತವೆ. ಮತ್ತೊಂದೆಡೆ ಈ ಕೃತಕ ವಿನ್ಯಾಸಗಳು ಪರಿಸರಕ್ಕೆ ಕೊಡುಗೆ ನೀಡುವುದರೊಂದಿಗೆ ಹೊರಾಂಗಣಕ್ಕೆ ಕಲಾತ್ಮಕತೆಯ ಸ್ಪರ್ಶ ನೀಡುತ್ತದೆ.
ಈ ರಂಧ್ರಗಳಲ್ಲಿ ವಾಸಿಸಲು ಬರುವ ಜೇನುನೊಣಗಳಿಗೆ ಸುರಕ್ಷಿತವಾದ ಹಾಗೂ ರಾಸಾಯನಿಕ ಮುಕ್ತ ವಾತಾವರಣವನ್ನು ನಿರ್ಮಿಸಲು ನೈಸರ್ಗಿಕ ವಸ್ತುಗಳನ್ನೇ ಬಳಸಲಾಗುತ್ತದೆ. ಮರದ ತುಂಡುಗಳು, ಬಿದಿರಿನ ಕಾಂಡಗಳು, ರಂಧ್ರಗಳನ್ನು ಕೊರೆದ ದಿಮ್ಮಿಗಳನ್ನು ಸಾಮಾನ್ಯವಾಗಿ ಬಳಸಲಾಗುತ್ತದೆ. ಇವು ಪರಿಸರಸ್ನೇಹಿಯಾಗಿದ್ದು ವಿನ್ಯಾಸ ರಚನೆಯಲ್ಲಿ ಸುಸ್ಥಿರ, ಪರಿಸರಸ್ನೇಹಿ ಅಭ್ಯಾಸಗಳನ್ನೇ ಅಳವಡಿಸಿಕೊಳ್ಳಲಾಗುತ್ತದೆ. 2-3 ಬಿದಿರುಗಳನ್ನು ಹಟ್ಟಿಯ ಆಕಾರದಲ್ಲಿ ಜೋಡಿಸಬಹುದು. ಬಿದಿರಿನ ಗಂಟಿನ ಮೇಲ್ಭಾಗದಲ್ಲಿ ರಂಧ್ರಗಳನ್ನು ಕೊರೆದರೆ ಅವು ಕಾರ್ಪೆಂಟರ್ (ಬಡಗಿ) ಜೇನುನೊಣಗಳಿಗೆ ಆಶ್ರಯ ಒದಗಿಸುತ್ತದೆ. ಇವು ಪರಾಗಸ್ಪರ್ಶಕ ಜೀವಿಗಳಲ್ಲಿ ಮುಖ್ಯವಾದದ್ದು. ಜೇನುನೊಣದ ಕೃತಕ ರಂಧ್ರಗಳ ರಚನೆಯನ್ನು ಉತ್ತರ-ದಕ್ಷಿಣ ದಿಕ್ಕಿನಲ್ಲಿಡುವುದು ಉತ್ತಮ.
| ಜೇನುಗೂಡನ್ನು ಕಟ್ಟುವ ಜೇನುನೊಣಗಳಿಗಿಂತ ಭಿನ್ನವಾಗಿ ಏಕಾಂಗಿಯಾಗಿರುವ ಜೇನುನೊಣಗಳು ತಮ್ಮದೇ ವಾಸಸ್ಥಾನವನ್ನು ಹುಡುಕಿಕೊಳ್ಳುತ್ತವೆ. ಇವುಗಳ ಜೀವನಚಕ್ರವು ಹೆಣ್ಣು ಜೇನುನೊಣ ತಾನು ಆಯ್ಕೆಮಾಡಿಕೊಂಡ ರಂಧ್ರಗಳಲ್ಲಿ ಮೊಟ್ಟೆಯಿಡುವ ಮೂಲಕ ಆರಂಭವಾಗುತ್ತದೆ. ಈ ಲಾರ್ವಾಗಳು ಸರಿಯಾಗಿ ಬೆಳೆಯಲು ಪರಾಗ ಮತ್ತು ಮಕರಂದವನ್ನು ಒದಗಿಸಲಾಗುತ್ತದೆ. ಇವು ಸ್ವಭಾವತಃ ಏಕಾಂಗಿಯಾದ್ದರಿಂದ ಒಂದು ರಂಧ್ರದಲ್ಲಿ ಒಂದೇ ಮೊಟ್ಟೆ ಇರುತ್ತದೆ. ಇದರಿಂದ ಭವಿಷ್ಯದಲ್ಲಿ ಸ್ವತಂತ್ರವಾಗಿ, ಏಕಾಂಗಿಯಾಗಿರುವುದಕ್ಕೆ ಅಗತ್ಯವಾದ ವಾತಾವರಣ ಸಿಕ್ಕಂತಾಗುತ್ತದೆ. ಮೊಟ್ಟೆಯೊಡೆದು ಹೊಸ ಜೇನುಹುಳುಗಳು ಈ ರಂಧ್ರಗಳಿಂದ ಹೊರಬರುತ್ತವೆ. ಈ ಹುಳುಗಳು ಪರಾಗಸ್ಪರ್ಶ ಕ್ರಿಯೆಯಲ್ಲಿ ಮಹತ್ತರ ಪಾತ್ರವನ್ನು ವಹಿಸುತ್ತದೆ. |
BAIF ಸ್ಥಳೀಯ,ಆಕ್ರಮಣ, ಬೆರೆಯುವಂತಹ, ಬೆರೆಯದಿರುವ ಮತ್ತು ಒಂಟಿ ಪರಾಗಸ್ಪರ್ಶಕಗಳ ಪ್ರಚಾರದ ಮೇಲೆ ಗಮನಹರಿಸಿದೆ. ಜೇನುನೊಣಗಳು, ಕ್ಸೈಲೋಕೋಪಾ ಮತ್ತು ಇತರ ಪರಾಗಸ್ಪರ್ಶಕಗಳಾದ ಕ್ಸೈಲೋಕೋಪಾ ಅಮೆಥಿಸ್ಟಿನಾ, ಅಪಿಸ್ ಸೆರಾನಾ ಇಂಡಿಕಾ, ಸೆರಾಟಿನಿಡಿಯಾ, ಟೆರಾಟ್ಗೋನುಲಾ ಇರಿಡಿಪೆನ್ನಿಸ್, ನೊಮಿನೇ ಮತ್ತು ಹ್ಯಾಲಿಕ್ಟಿನೇ, ಲ್ಯಾಸಿಯೊಗ್ಲೋಸಮ್ (ಸೆಟೆನೊನೋಮಿಯಾ) ಇವುಗಳಿಗೆ ಆವಾಸಸ್ಥಾನಗಳನ್ನು ಒದಗಿಸಲು ಕೃತಕ ಗೂಡುಕಟ್ಟುವಂತಹ ಪರಿಹಾರಗಳನ್ನು ಕಂಡುಕೊಳ್ಳುವ ಮೂಲಕ ಇದನ್ನು ಉತ್ತೇಜಿಸುತ್ತದೆ. ಇವು ತೂತುಗಳಿರುವ ಮರದ ರಚನೆಗಳು, ಟೊಳ್ಳಾಗಿರುವ ಕೊಂಬೆಗಳು, ಕತ್ತರಿಸಿದ ಬಿದಿರು, ಐಪೋಮಿಯಾ ಕೊಂಬೆಗಳು ಸೇರಿವೆ. ಬಿದಿರು ಮುಖ್ಯವಾಗಿ ಜೇನು ಉತ್ಪಾದಿಸಿದ ಪರಾಗಸ್ಪರ್ಶಕಗಳಾದ ಕ್ಸೈಲೋಕೋಪಾ ತಳಿಯ (ಕಾರ್ಪೆಂಟರ್ ಜೇನುನೊಣಗಳು) ನೊಣಗಳಿಗೆ ಉಪಯುಕ್ತವಾಗಿದೆ. ಬಿದಿರಿನ ಗಂಟಿನ ಭಾಗದಲ್ಲಿ ರಂಧ್ರಗಳನ್ನು ಕೊರೆದು ತೋಟದಲ್ಲಿ ಮಳೆನೀರು ಒಳಹೋಗುವುದನ್ನು ತಡೆಯಲು ವಾರೆಯಾಗಿ ನಿಲ್ಲಿಸಲಾಗುತ್ತದೆ.
ಕೆಲವು ಫಲಿತಾಂಶಗಳು
ರೈತ ಯುವಕರು ಪ್ರಯೋಜನಕಾರಿ ಕೀಟಗಳು ಮತ್ತು ಪರಾಗಸ್ಪರ್ಶಕಗಳ ಮಹತ್ವದ ಬಗ್ಗೆ ಸಂವೇದನಾಶೀಲರಾಗಿರುವುದು ಮಾತ್ರವಲ್ಲದೆ, ಆರೋಗ್ಯಕರ ಪರಿಸರಕ್ಕಾಗಿ ಕೃಷಿ ಪರಿಸರ ಸಂರಕ್ಷಣೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. CSR ಪ್ರಾಯೋಜಕತ್ವಗಳ ಬೆಂಬಲದೊಂದಿಗೆ ಸುಸ್ಥಿರ ಕೃಷಿ ಪದ್ಧತಿಗಳ ಕುರಿತು ತರಬೇತಿ ಮತ್ತು ಜಾಗೃತಿ ಅಧಿವೇಶನಗಳ ಪರಿಣಾಮವಾಗಿ 65 ಯುವಕರಿಗೆ ಜೇನುನೊಣಗಳ ವಸಾಹತುಗಳನ್ನು(ಗೂಡುಗಳನ್ನು) ನಿರ್ವಹಿಸಲು ತರಬೇತಿ ನೀಡಲಾಗಿದೆ. ಯುವಪೀಳಿಗೆಯ ನೇತೃತ್ವದಲ್ಲಿನ ಈ ಉಪಕ್ರಮಗಳು ಪರಾಗಸ್ಪರ್ಶವನ್ನು ಹೆಚ್ಚಿಸುವುದಲ್ಲದೆ ಸ್ಥಳೀಯರಿಗೆ ಹಾಗೂ ಭೇಟಿನೀಡುವ ರೈತರಿಗೆ ಕೃಷಿ ಪದ್ಧತಿಯಲ್ಲಿ ಇದರ ಅಳವಡಿಕೆಯಿಂದ ಆಗುವ ಲಾಭಗಳ ಬಗ್ಗೆ ಸ್ಪೂರ್ತಿ ತುಂಬುತ್ತಿದೆ.
ಪರಾಗಸ್ಪರ್ಶ ಸೇವೆಗಳು ಹೆಚ್ಚಿವೆ. 9 ಜಾತಿಯ ಒಂಟಿ ಜೇನುನೊಣಗಳು ಗೂಡುಕಟ್ಟಿರುವುದು ಜೇನುಹುಳುಗಳ ಕೃತಕರಂಧ್ರಗಳ ಹೋಟಲುಗಳಿಂದ ತಿಳಿದುಬಂದಿದೆ. ಕೃಷಿ ಭೂಮಿಯಲ್ಲಿ ಇತರ ಪ್ರಯೋಜನಕಾರಿ ಕೀಟಗಳು ಹೇರಳವಾಗಿವೆ. ಕ್ಸೈಲೋಕೋಪಾ ಜಾತಿ, ಕ್ಸೈಲೋಕೋಪಾ ಅಮೆಥಿಸ್ಟಿನಾ ಮತ್ತು ಮೆಗಾಚೆಲಿಡ್ ಇವು ಹೆಚ್ಚು ಪ್ರಯೋಜನಕಾರಿ ಪರಾಗಸ್ಪರ್ಶಕಗಳಾಗಿವೆ. ಈ ಪ್ರಯೋಜನಕಾರಿ ಕೀಟಗಳು ತೋಟಗಳಿಗೆ ಭೇಟಿ ನೀಡುವುದರಿಂದ ಬೆಳೆಗಳ ಪರಾಗಸ್ಪರ್ಶ ಹೆಚ್ಚಾಗಿದೆ.
ನೈಸರ್ಗಿಕ ನಿಯಂತ್ರಣ ಏಜೆಂಟ್‌ಗಳಿಗೆ ಪ್ರೌಢಾವಸ್ಥೆಯಲ್ಲಿ ಮಕರಂದ ಬೇಕಾಗುತ್ತದೆ. ಮಕರಂದ ಮೂಲಗಳು ಹೆಚ್ಚಾದಂತೆ, ಚೆಲೋನಸ್ ನಂತಹ ನೈಸರ್ಗಿಕ ನಿಯಂತ್ರಣ ಏಜೆಂಟ್‌ಗಳು ಕೀಟ ನಿಯಂತ್ರಣಕ್ಕೆ ಸಹಾಯ ಮಾಡುತ್ತವೆ. ಕೀಟನಾಶಕಗಳ ಬಳಕೆ ಗಣನೀಯವಾಗಿ ಕಡಿಮೆಯಾಗುವುದರಿಂದ, ಕೃಷಿ ವೆಚ್ಚವೂ ಕಡಿಮೆಯಾಗುತ್ತದೆ. ಈ ಉಪಕ್ರಮವು ಮಾವು, ಗೋಡಂಬಿ, ಮೆಣಸಿನಕಾಯಿ, ಬದನೆಕಾಯಿ ಮತ್ತು ಸೌತೆಕಾಯಿಯಂತಹ ಬೆಳೆಗಳಲ್ಲಿ ಇಳುವರಿಯನ್ನು ಸುಧಾರಿಸಲು ಕಾರಣವಾಗಿದೆ. ಇದು ಹೆಚ್ಚಿದ ಪರಾಗಸ್ಪರ್ಶದ ಪ್ರಯೋಜನಗಳನ್ನು ಎತ್ತಿತೋರುತ್ತದೆ. ಯುವಕರ ಒಳಗೊಳ್ಳುವಿಕೆ ಕೃಷಿ ಇಳುವರಿಯನ್ನು ಸುಧಾರಿಸಿದ್ದಲ್ಲದೆ, ರೈತರಲ್ಲಿ ಜ್ಞಾನ ಹಂಚಿಕೆಯನ್ನು ಸುಗಮಗೊಳಿಸಿದೆ. ಹೀಗಾಗಿ, ಯುವಕರು ಕೃಷಿ ಪರಿಸರ ಸಂರಕ್ಷಣೆಯ ಭವಿಷ್ಯದ ಪಾಲಕರಾಗಿದ್ದಾರೆ.
ಪರಾಮರ್ಶನ:
- Buchmann, S. L. and Nabhan, G. P., The Forgotten Pollinators, 1996.
- Klein, A. M., Vaissière, B. E., Cane, J. H.,Steffan-Dewenter, I., Cunningham, S. A.,Kremen, C., & Tscharntke, T., Importance of pollinators in changing landscapes for world crops. Proceedings of the Royal Society B: Biological Sciences, 2007.
- Hallmann CA, Sorg M, Jongejans E, Siepel H, Hofland N, Schwan H, et al. 2017. More than 75 percent decline over 27 years in total flying insect biomass in protected areas., PLoS ONE 12 (10): e0185809. https://doi.org/10.1371/journal. pone.0185809 Editor: Eric Gord.
Vinod Borse Senior Project Officer BAIF Development Research Foundation Maharashtra E-mail: vinod.borse@baif.org.in
ಆಂಗ್ಲ ಮೂಲ : ಲೀಸಾ ಇಂಡಿಯಾ; ಸಂಪುಟ :೨೬; ಸಂಚಿಕೆ : ೨ ; ಜೂನ್ ೨೦೨೪



