ಯುವಜನತೆ ಮತ್ತು ಕೃಷಿ: ಪ್ರಮುಖ ಸವಾಲುಗಳು ಮತ್ತು ಪರಿಹಾರಗಳು ಎಂಬ ಪ್ರಕಟಣೆಯು ಯುವಕರನ್ನು ಕೃಷಿಯಲ್ಲಿ ಹೇಗೆ ಮರು ತೊಡಗಿಸಿಕೊಳ್ಳುವುದು ಎಂಬುದರ ಕುರಿತು ನಿಜ ಜೀವನದ ಉದಾಹರಣೆಗಳನ್ನು ಒದಗಿಸುತ್ತದೆ. ಗ್ರಾಮೀಣ ಯುವಕರಿಗೆ ಕೃಷಿಯಲ್ಲಿ ತೊಡಗಿಸಿಕೊಳ್ಳಲು ಮತ್ತು ಪರಿಸರ ಸ್ನೇಹಿ ಉತ್ಪಾದನಾ ವಿಧಾನಗಳನ್ನು ಅಳವಡಿಸಿಕೊಳ್ಳಲು ಅಗತ್ಯವಾದ ಕೌಶಲ್ಯ ಮತ್ತು ಒಳನೋಟಗಳನ್ನು ಸೂಕ್ತ ಶೈಕ್ಷಣಿಕ ಕಾರ್ಯಕ್ರಮಗಳು ಹೇಗೆ ಒದಗಿಸುತ್ತವೆ ಎಂಬುದನ್ನು ಇದು ತೋರಿಸುತ್ತದೆ. ಪ್ರಕಟಣೆಯ ಸಾರಾಂಶವನ್ನು ಇಲ್ಲಿ ನೀಡಲಾಗಿದೆ.
೨೦೫೦ ರ ವೇಳೆಗೆ ಜಾಗತಿಕ ಜನಸಂಖ್ಯೆಯು ೯ ಬಿಲಿಯನ್‌ಗೆ ಹೆಚ್ಚಾಗುವ ನಿರೀಕ್ಷೆಯಿದೆ, ಇದರಲ್ಲಿ ೧೫–೨೪ ವರ್ಷ ವಯಸ್ಸಿನ ಯುವಪೀಳಿಗೆಯು ಶೇ. ೧೪ ರಷ್ಟಿದ್ದಾರೆ. ವಿಶ್ವದ ಯುವ ಸಮೂಹವು ಬೆಳೆಯುವ ನಿರೀಕ್ಷೆಯಿದ್ದರೂ, ಯುವಕರಿಗೆ – ವಿಶೇಷವಾಗಿ ಅಭಿವೃದ್ಧಿಶೀಲ ದೇಶಗಳಲ್ಲಿನ ಆರ್ಥಿಕವಾಗಿ ಹಿಂದುಳಿದಿರುವ ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುವವರಿಗೆ – ಉದ್ಯೋಗ ಮತ್ತು ಉದ್ಯಮಶೀಲತಾ ಅವಕಾಶಗಳು ಸೀಮಿತವಾಗಿವೆ. ಅವರಿಗೆ ಸಿಗುವ ಸಂಭಾವನೆ ಬಹಳ ಕೆಳಮಟ್ಟದ್ದಾಗಿದೆ. ಗ್ರಾಮೀಣ ಯುವಕರಿಗೆ ಜೀವನೋಪಾಯದ ಅವಕಾಶಗಳ ಮೂಲವಾಗಿ ಕೃಷಿ ವಲಯದ ಸಾಮರ್ಥ್ಯವನ್ನು ಗುರುತಿಸಿ, ಅವರಿಗೆ ಕೃಷಿ ಚಟುವಟಿಕೆಗಳಿಗೆ ಪ್ರವೇಶವನ್ನು ಸುಗಮಗೊಳಿಸುವ ಕುರಿತು MIJARC/ FAO/IFAD ಜಂಟಿ ಯೋಜನೆಯನ್ನು 2011 ರಲ್ಲಿ ಕೈಗೊಳ್ಳಲಾಯಿತು. ಈ ಯೋಜನೆಯು ಗ್ರಾಮೀಣ ಯುವಕರ ಭಾಗವಹಿಸುವಿಕೆಯನ್ನು ಹೆಚ್ಚಿಸಲು ಇರುವ ಸವಾಲುಗಳು ಮತ್ತು ಅವಕಾಶಗಳ ಕುರಿತಾಗಿತ್ತು. ಯೋಜನೆಯ ಅವಧಿಯಲ್ಲಿ, ಆರು ಪ್ರಮುಖ ಸವಾಲುಗಳನ್ನು ಗುರುತಿಸಲಾಗಿದೆ. ಪ್ರತಿಯೊಂದು ಸವಾಲಿಗೂ, ಅದನ್ನು ಹೇಗೆ ನಿವಾರಿಸಬಹುದು ಎಂಬುದರ ಉದಾಹರಣೆಗಳಾಗಿ ಸಂಬಂಧಿತ ಪ್ರಕರಣ ಅಧ್ಯಯನಗಳ ಸರಣಿಯನ್ನು ಪ್ರಕಟಣೆಯು ಪ್ರಸ್ತುತಪಡಿಸುತ್ತದೆ.
ಗುರುತಿಸಲಾದ ಮೊದಲ ಪ್ರಮುಖ ಸವಾಲು ಎಂದರೆ ಯುವಕರಿಗೆ ಜ್ಞಾನ, ಮಾಹಿತಿ ಮತ್ತು ಶಿಕ್ಷಣಕ್ಕೆ ಸಾಕಷ್ಟು ಅವಕಾಶವಿಲ್ಲದಿರುವುದು [ಅಧ್ಯಾಯ 1]. ಕಳಪೆ ಮತ್ತು ಅಸಮರ್ಪಕ ಶಿಕ್ಷಣವು ಉತ್ಪಾದಕತೆ ಮತ್ತು ಕೌಶಲ್ಯಗಳ ಗಳಿಕೆಯನ್ನು ಮಿತಿಗೊಳಿಸುತ್ತದೆ. ಆದರೆ ಜ್ಞಾನ ಮತ್ತು ಮಾಹಿತಿಗೆ ಸಾಕಷ್ಟು ಪ್ರವೇಶವಿಲ್ಲದಿರುವುದು ಉದ್ಯಮಶೀಲತಾ ಉದ್ಯಮಗಳ ಅಭಿವೃದ್ಧಿಗೆ ಅಡ್ಡಿಯಾಗಬಹುದು. ವಿಶೇಷವಾಗಿ ಅಭಿವೃದ್ಧಿಶೀಲ ದೇಶಗಳಲ್ಲಿ, ಯುವ ಗ್ರಾಮೀಣ ಮಹಿಳೆಯರ ಶಿಕ್ಷಣದ ಪ್ರವೇಶವನ್ನು ಸುಧಾರಿಸುವ ಮತ್ತು ಗ್ರಾಮೀಣ ಶಿಕ್ಷಣದಲ್ಲಿ ಕೃಷಿ ಕೌಶಲ್ಯಗಳನ್ನು ಸೇರಿಸುವ ಅವಶ್ಯಕತೆಯಿದೆ. ಗ್ರಾಮೀಣ ಕಾರ್ಮಿಕ ಮಾರುಕಟ್ಟೆಗಳ ಅಗತ್ಯಗಳನ್ನು ಪೂರೈಸಲು ಪದವೀಧರರ ಕೌಶಲ್ಯಗಳೊಂದಿಗೆ ಕೃಷಿ ತರಬೇತಿ ಮತ್ತು ಶಿಕ್ಷಣವನ್ನು ಸಹ ಅಳವಡಿಸಿಕೊಳ್ಳಬೇಕು. ಕಾಂಬೋಡಿಯಾ, ಉಗಾಂಡಾ, ಸೇಂಟ್ ಲೂಸಿಯಾ, ಪಾಕಿಸ್ತಾನ, ಮಡಗಾಸ್ಕರ್, ಬ್ರೆಜಿಲ್, ಘಾನಾ, ಕೀನ್ಯಾ, ರುವಾಂಡಾ ಮತ್ತು ಜಾಂಬಿಯಾಗಳಿಂದ ಬಂದ ಪ್ರಕರಣ ಅಧ್ಯಯನಗಳು ಇದನ್ನು ಸಾಧ್ಯವಾಗಿಸುವ ನೂತನ ವಿಧಾನಗಳನ್ನು ವಿವರಿಸುತ್ತವೆ.
ಯೋಜನೆಯ ಸಮಯದಲ್ಲಿ ಗುರುತಿಸಲಾದ ಎರಡನೇ ಸವಾಲು
ಯುವಜನರಿಗೆ ಭೂಮಿಗೆ ಸೀಮಿತ ಪ್ರವೇಶ [ಅಧ್ಯಾಯ 2]. ಕೃಷಿ ಪ್ರಾರಂಭಿಸಲು ಜಮೀನು ಇರಬೇಕಾದದ್ದು ಮೂಲಭೂತ ಅಗತ್ಯ. ಯುವಜನರಿಗೆ ಅದನ್ನು ಪಡೆಯುವುದು ಕಷ್ಟಕರವಾಗಿರುತ್ತದೆ. ಅಭಿವೃದ್ಧಿಶೀಲ ದೇಶಗಳಲ್ಲಿನ ಆನುವಂಶಿಕ ಕಾನೂನುಗಳು ಮತ್ತು ಪದ್ಧತಿಗಳು ಯುವತಿಯರಿಗೆ ಭೂಮಿಯನ್ನು ವರ್ಗಾಯಿಸುವುದನ್ನು ಸಮಸ್ಯಾತ್ಮಕವಾಗಿಸುತ್ತವೆ. ಆದ್ದರಿಂದ ತಿದ್ದುಪಡಿಯ ಅಗತ್ಯವಿರುತ್ತದೆ. ಯುವಕರಿಗೆ ಭೂಮಿ ಸ್ವಾಧೀನಪಡಿಸಿಕೊಳ್ಳಲು ಸಹಾಯ ಮಾಡಲು ಸಾಲಗಳು ಸಹ ಅಗತ್ಯವಾಗಿವೆ. ಗುತ್ತಿಗೆ ವ್ಯವಸ್ಥೆಯ ಮೂಲಕ ಯುವಕರು ಭೂಮಿಯ ಮಾಲೀಕರಾಗದಿದ್ದರೂ ಭೂಮಿ ಪಡೆಯಲು ಇದು ಪರಿಣಾಮಕಾರಿ ಎಂದು ಸಾಬೀತುಪಡಿಸಬಹುದು. ಫಿಲಿಪೈನ್ಸ್, ಬುರ್ಕಿನಾ ಫಾಸೊ, ಇಥಿಯೋಪಿಯಾ, ಮೆಕ್ಸಿಕೊ, ಈಜಿಪ್ಟ್ ಮತ್ತು ಉಗಾಂಡಾದ ಪ್ರಕರಣ ಅಧ್ಯಯನಗಳು ಯುವಕರಿಗೆ ಭೂಮಿ ಲಭ್ಯತೆಯನ್ನು ಸುಧಾರಿಸುವ ಸಂಭಾವ್ಯ ವಿಧಾನಗಳನ್ನು ಎತ್ತಿ ತೋರಿಸುತ್ತವೆ.
ಹಣಕಾಸು ಸೇವೆಗಳಿಗೆ ಅಸಮರ್ಪಕ ಲಭ್ಯತೆ [ಅಧ್ಯಾಯ 3]
ಮೂರನೇ ಪ್ರಮುಖ ಸವಾಲಾಗಿ ಗುರುತಿಸಲಾಗಿದೆ. ಬಹುತೇಕ ಹಣಕಾಸು ಸೇವೆ ಒದಗಿಸುವವರು ಗ್ರಾಮೀಣ ಯುವಕರಿಗೆ ಅಡವಿಡಲು ಏನೂ ಆಧಾರ ಇಲ್ಲದಿರುವುದು ಮತ್ತು ಆರ್ಥಿಕ ಸಾಕ್ಷರತೆಯ ಕೊರೆತೆ ಮತ್ತಿತರ ಕಾರಣಗಳಿಂದಾಗಿ ಸಾಲ, ಉಳಿತಾಯ ಮತ್ತು ವಿಮೆ ಸೇರಿದಂತೆ ತಮ್ಮ ಸೇವೆಗಳನ್ನು ಒದಗಿಸಲು ಹಿಂಜರಿಯುತ್ತಾರೆ. ಯುವಕರಿಗೆ ಹಣಕಾಸು ಉತ್ಪನ್ನಗಳ ಬಗ್ಗೆ ತಿಳಿಸುವುದು, ಮಾರ್ಗದರ್ಶನ ಕಾರ್ಯಕ್ರಮಗಳು ಮತ್ತು ಸ್ಟಾರ್ಟ್-ಅಪ್‌ಗಳಿಗೆ ಹಣಕಾಸು ಒದಗಿಸುವ ಅವಕಾಶಗಳು ಈ ಸಮಸ್ಯೆಯನ್ನು ಪರಿಹರಿಸಲು ಸಹಾಯ ಮಾಡಬಹುದು. ಈ ನಿಟ್ಟಿನಲ್ಲಿ ಯುವಕರು ಅನೌಪಚಾರಿಕ ಉಳಿತಾಯ ಗುಂಪುಗಳನ್ನು ಮಾಡಿಕೊಳ್ಳುವಂತೆ ಪ್ರೋತ್ಸಾಹಿಸುವುದು ಸಹ ಉಪಯುಕ್ತವಾಗಿದೆ. ಫ್ರಾನ್ಸ್, ಕೆನಡಾ, ಉಗಾಂಡಾ, ಮೊಲ್ಡೊವಾ, ಸೆನೆಗಲ್, ಕಾಂಬೋಡಿಯಾ, ಬಾಂಗ್ಲಾದೇಶ ಮತ್ತು ಗ್ರೆನಡಾದ ಪ್ರಕರಣ ಅಧ್ಯಯನಗಳು ಗ್ರಾಮೀಣ ಯುವಕರ ಆರ್ಥಿಕ ಸೇವೆಗಳ ಲಭ್ಯತೆಯನ್ನು ಹೇಗೆ ಸುಧಾರಿಸಬಹುದು ಎಂಬುದರ ಬಗ್ಗೆ ನೀತಿ ನಿರೂಪಕರು ಮತ್ತು ಅಭಿವೃದ್ಧಿ ವೃತ್ತಿಪರರಿಗೆ ಉದಾಹರಣೆಗಳನ್ನು ಒದಗಿಸುತ್ತವೆ.
ಕೃಷಿಯಲ್ಲಿ ಯುವಕರ ಪಾಲ್ಗೊಳ್ಳುವಿಕೆಯನ್ನು ಬಲಪಡಿಸುವಲ್ಲಿ ಹಸಿರು ಉದ್ಯೋಗಗಳನ್ನು ಪಡೆಯುವ ತೊಂದರೆಗಳನ್ನು [ಅಧ್ಯಾಯ 4] ನಾಲ್ಕನೇ ಸವಾಲು ಎಂದು ಗುರುತಿಸಲಾಗಿದೆ. ಹಸಿರು ಉದ್ಯೋಗಗಳು ದೀರ್ಘಾವಧಿಯಲ್ಲಿ ಹೆಚ್ಚು ಸುಸ್ಥಿರ ಜೀವನೋಪಾಯವನ್ನು ಒದಗಿಸಬಹುದು. ಹೆಚ್ಚು ಶ್ರಮದಾಯಕವಾಗಿದ್ದು, ಅಂತಿಮವಾಗಿ ಹೆಚ್ಚಿನ ಮೌಲ್ಯವರ್ಧಿತತೆಯನ್ನು ಒಳಗೊಂಡಿರಬಹುದು. ಹೀಗಿದ್ದೂ, ಗ್ರಾಮೀಣ ಯುವಕರು ಹಸಿರು ಆರ್ಥಿಕತೆಯಲ್ಲಿ ಭಾಗವಹಿಸಲು ಅಗತ್ಯವಿರುವ ಕೌಶಲ್ಯಗಳನ್ನು (ಅಥವಾ ಅಗತ್ಯ ಕೌಶಲ್ಯ-ಅಪ್‌ಗ್ರೇಡ್ ಅವಕಾಶಗಳನ್ನು ಪಡೆಯಲು) ಹೊಂದಿಲ್ಲದಿರಬಹುದು. ಈ ಕೌಶಲ್ಯಗಳ ಅಸಾಮರಸ್ಯವನ್ನು ಸರಿಪಡಿಸಲು – ಔಪಚಾರಿಕ ಮತ್ತು ಅನೌಪಚಾರಿಕ ಕೆಲಸದ ತರಬೇತಿ ಸೇರಿದಂತೆ – ಶಿಕ್ಷಣ ಮತ್ತು ತರಬೇತಿಯನ್ನು ಯುವಕರು ಪಡೆಯುವ ಅವಕಾಶಗಳನ್ನು ಸುಧಾರಿಸುವ ಅಗತ್ಯವಿದೆ. ಜಾಂಜಿಬಾರ್ ದ್ವೀಪಸಮೂಹ, ರುವಾಂಡಾ, ಚೀನಾ, ಯುನೈಟೆಡ್ ಸ್ಟೇಟ್ಸ್, ಬಹಾಮಾಸ್, ಕೀನ್ಯಾ ಮತ್ತು ಉಗಾಂಡಾದ ಪ್ರಕರಣ ಅಧ್ಯಯನಗಳು ಕೃಷಿಯಲ್ಲಿ ಹಸಿರು ಉದ್ಯೋಗಗಳನ್ನು ಸೃಷ್ಟಿಸಲು ಅಗತ್ಯವಿರುವ ಕೌಶಲ್ಯ ಮತ್ತು ಅವಕಾಶಗಳನ್ನು ಯುವಜನರಿಗೆ ಒದಗಿಸಲು ನೂತನ ಹಾದಿಗಳ ಕುರಿತು ತಿಳಿಸುತ್ತವೆ.
ಗುರುತಿಸಲಾದ ಐದನೇ ಪ್ರಮುಖ ಸವಾಲು ಯುವಜನರಿಗೆ ಮಾರುಕಟ್ಟೆಗಳಿಗೆ ಸೀಮಿತ ಪ್ರವೇಶ [ಅಧ್ಯಾಯ 5]. ಏಕೆಂದರೆ ಆ ರೀತಿ ಪ್ರವೇಶವಿಲ್ಲದೆ ಯುವಕರು ಕಾರ್ಯಸಾಧ್ಯವಾದ ಮತ್ತು ಸುಸ್ಥಿರ ಕೃಷಿ ಉದ್ಯಮಗಳಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಸೂಪರ್ ಮಾರ್ಕೆಟ್‌ಗಳ ಹೆಚ್ಚುತ್ತಿರುವ ಅಂತರರಾಷ್ಟ್ರೀಯ ಪ್ರಭಾವ ಮತ್ತು ಅವುಗಳ ಪೂರೈಕೆ ಸರಪಳಿಗಳ ಕಠಿಣ ಮಾನದಂಡಗಳಿಂದಾಗಿ ಯುವಜನರಿಗೆ ಮಾರುಕಟ್ಟೆಗಳನ್ನು ಪ್ರವೇಶಿಸುವುದು ಇನ್ನಷ್ಟು ಕಷ್ಟಕರವಾಗುತ್ತಿದೆ. ಅಭಿವೃದ್ಧಿಶೀಲ ದೇಶಗಳ ಗ್ರಾಮೀಣ ಯುವತಿಯರು ಮಾರುಕಟ್ಟೆಗಳನ್ನು ಪ್ರವೇಶಿಸುವಲ್ಲಿ ಇನ್ನೂ ಹೆಚ್ಚಿನ ನಿರ್ಬಂಧಗಳನ್ನು ಎದುರಿಸಬೇಕಾಗುತ್ತದೆ. ಏಕೆಂದರೆ ಅವರ ಸ್ವಾತಂತ್ರ್ಯವು ಕೆಲವೊಮ್ಮೆ ಸಾಂಸ್ಕೃತಿಕ ರೂಢಿಗಳಿಂದಾಗಿ ಸೀಮಿತವಾಗಿರುತ್ತದೆ. ಶಿಕ್ಷಣ, ತರಬೇತಿ ಮತ್ತು ಮಾರುಕಟ್ಟೆ ಬಗ್ಗೆ ಸೂಕ್ತ ಮಾಹಿತಿ ಒದಗಿಸಿದಲ್ಲಿ ಯುವಜನರಿಗೆ ಮಾರುಕಟ್ಟೆಗಳಿಗೆ ಸುಗಮ ಪ್ರವೇಶವ ಒದಗಿಸಬಹುದು. ಸ್ಥಾಪಿತ ಮಾರುಕಟ್ಟೆಗಳು ಯುವ ರೈತರಿಗೆ ವಿಶೇಷವಾಗಿ ಮಹತ್ವದ ಅವಕಾಶಗಳನ್ನು ಒದಗಿಸುತ್ತವೆ. (ಯುವ) ಉತ್ಪಾದಕರ ಗುಂಪುಗಳಲ್ಲಿ ಅವರು ಪಾಲ್ಗೊಳ್ಳುವಂತೆ ಮಾಡುವುದು ಈ ವಿಷಯದಲ್ಲಿ ಅಷ್ಟೇ ಪ್ರಯೋಜನಕಾರಿಯಾಗಿದೆ. ಕೀನ್ಯಾ, ಘಾನಾ, ದಕ್ಷಿಣ ಯುರೋಪ್, ಯುನೈಟೆಡ್ ಸ್ಟೇಟ್ಸ್, ಟಾಂಜಾನಿಯಾ, ಕೊಲಂಬಿಯಾ ಮತ್ತು ಬೆನಿನ್‌ಗಳ ಪ್ರಕರಣ ಅಧ್ಯಯನಗಳು ಮಾರುಕಟ್ಟೆಗಳಿಗೆ ಯುವಜನರ ಪ್ರವೇಶವನ್ನು ಹೇಗೆ ಸುಧಾರಿಸಬಹುದು ಎಂಬುದಕ್ಕೆ ಉದಾಹರಣೆಗಳನ್ನು ಒದಗಿಸುತ್ತವೆ.
ಗುರುತಿಸಲಾದ ಆರನೇ ಸವಾಲು ನೀತಿ ಸಂವಾದದಲ್ಲಿ ಯುವಕರ ಸೀಮಿತ ಪಾಲ್ಗೊಳ್ಳುವಿಕೆ [ಅಧ್ಯಾಯ 6]. ನೀತಿ ರೂಪಣಾ ಪ್ರಕ್ರಿಯೆಯಲ್ಲಿ ಯುವಪೀಳಿಗೆಯ ಧ್ವನಿ ಹೆಚ್ಚಾಗಿ ಕೇಳಿಬರುವುದಿಲ್ಲ. ಆದ್ದರಿಂದ ಅವರ ಸಂಕೀರ್ಣ ಮತ್ತು ಬಹುಮುಖಿ ಅಗತ್ಯಗಳನ್ನು ಪೂರೈಸಲು ಸಾಧ್ಯವಾಗುವುದಿಲ್ಲ. ಈ ನೀತಿಗಳು ಸಾಮಾನ್ಯವಾಗಿ ಯುವಪೀಳಿಗೆಯ ವೈವಿಧ್ಯತೆಯನ್ನು ಹಿಡಿದಿಡಲು ಸೋಲುತ್ತದೆ. ಹಾಗಾಗಿ ಅವರಿಗೆ ಪರಿಣಾಮಕಾರಿಯಾಗಿ ಬೆಂಬಲ ನೀಡುವಲ್ಲಿ ಸೋಲುತ್ತದೆ. ಇದು ಸರಿಹೋಗಬೇಕೆಂದರೆ, ಯುವಸಮೂಹವು ತಮಗೆ ಬೇಕಾದದ್ದನ್ನು ಸರಿಯಾಗಿ ಪ್ರಸ್ತುತಪಡಿಸುವಂತಹ ಸಂವಹನ ಕೌಶಲ, ಸಾಮರ್ಥ್ಯವನ್ನು ಗಳಿಸಿಕೊಳ್ಳಬೇಕು. ನೀತಿ ನಿರೂಪಕರು ಸ್ವತಃ ಯುವಜನರನ್ನು ನೀತಿ ನಿರೂಪಣಾ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು. ಟೋಗೊ, ನೇಪಾಳ ಮತ್ತು ಬ್ರೆಜಿಲ್‌ನ ಪ್ರಕರಣ ಅಧ್ಯಯನಗಳು, ಹಾಗೆಯೇ ಆಫ್ರಿಕಾ ಮತ್ತು ಯುರೋಪ್‌ನ ಪ್ರಾದೇಶಿಕ ಮಟ್ಟದ ಉದಾಹರಣೆಗಳು, ಇವೆಲ್ಲವೂ ಯುವಜನರ ಮೇಲೆ ಹೆಚ್ಚು ಪರಿಣಾಮ ಬೀರುವ ನೀತಿಗಳನ್ನು ರೂಪಿಸುವಲ್ಲಿ ಅವರನ್ನು ತೊಡಗಿಸಿಕೊಳ್ಳುವ ವಿಧಾನಗಳನ್ನು ತೋರುತ್ತವೆ.
ಕೃಷಿ ವಲಯದಲ್ಲಿ ಯುವಕರ ಒಳಗೊಳ್ಳುವಿಕೆಯನ್ನು ಹೆಚ್ಚಿಸಲು, ಗಣನೀಯವಾಗಿ ಹೆಚ್ಚುತ್ತಿರುವ ಜನಸಂಖ್ಯೆಯಲ್ಲಿ ಬಳಕೆಯಾಗದೆ ಉಳಿದಿರುವ ಈ ಮಾನವ ಸಾಮರ್ಥ್ಯವನ್ನು ಬಳಸಿಕೊಳ್ಳಲು ಈ ಆರು ಮುಖ್ಯ ಸವಾಲುಗಳನ್ನು ಪರಿಹರಿಸುವುದು ಅತ್ಯಗತ್ಯವಾಗಿದೆ. ವಿಶೇಷವಾಗಿ ಅಭಿವೃದ್ಧಿಶೀಲ ದೇಶಗಳಲ್ಲಿ, ಕೃಷಿಯಲ್ಲಿ ಯುವ ಸಮೂಹದ ಭಾಗವಹಿಸುವಿಕೆಯನ್ನು ಹೆಚ್ಚಿಸುವುದರಿಂದ ಗ್ರಾಮೀಣ ಯುವಕರು, ವಯಸ್ಕರಲ್ಲಿ ಬಡತನ ನಿವಾರಣೆ ಮಾಡಲು ಸಾಧ್ಯವಿದೆ.
ಈ ಸವಾಲುಗಳು ಸಂಕೀರ್ಣವಾಗಿ ಒಂದರೊಳಗೊಂದು ಹೆಣೆದುಕೊಂಡಿದ್ದರೂ, ಪ್ರಕರಣ ಅಧ್ಯಯನಗಳಿಂದ ಹಲವಾರು ಪ್ರಮುಖ ತೀರ್ಮಾನಗಳಿಗೆ ಬರಬಹುದು: ಯುವಜನರಿಗೆ ಸರಿಯಾದ ಮಾಹಿತಿಯು ಲಭ್ಯವಾಗುವಂತೆ ಖಚಿತಪಡಿಸಿಕೊಳ್ಳುವುದು ನಿರ್ಣಾಯಕ; ಆಧುನಿಕ ಕೃಷಿ ಕ್ಷೇತ್ರದ ಅಗತ್ಯಗಳಿಗೆ ಯುವಕರು ಪ್ರತಿಕ್ರಿಯಿಸಲು ಸಾಧ್ಯವಾಗುವಂತೆ ಸಮಗ್ರ ತರಬೇತಿ ವಿಧಾನಗಳು ಅಗತ್ಯವಿದೆ; ಆಧುನಿಕ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನಗಳು ಉತ್ತಮ ಸಾಮರ್ಥ್ಯವನ್ನು ನೀಡುತ್ತವೆ; ಸಮೂಹದ ಕೆಲಸಕ್ಕಾಗಿ ಯುವಕರನ್ನು ಸಂಘಟಿಸಿ ಅವರು ತಮ್ಮ ಸಾಮರ್ಥ್ಯಗಳನ್ನು ಸುಧಾರಿಸಿಕೊಳ್ಳುವಂತೆ ಮಾಡುವ ಅವಶ್ಯಕತೆಯಿದೆ; ಕೃಷಿ ವಲಯವನ್ನು ಪ್ರವೇಶಿಸಲು ಯುವಜನತೆಯನ್ನು ಪ್ರೋತ್ಸಾಹಿಸಲು ಅವರಿಗೆ ನಿರ್ದಿಷ್ಟವಾದ ಯೋಜನೆಗಳು ಮತ್ತು ಕಾರ್ಯಕ್ರಮಗಳು ಪರಿಣಾಮಕಾರಿಯಾಗಬಹುದು; ಯುವಜನರು ಎದುರಿಸುತ್ತಿರುವ ಪ್ರಮುಖ ಸವಾಲುಗಳನ್ನು ಪರಿಣಾಮಕಾರಿಯಾಗಿ ಪರಿಹರಿಸಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳಲು ನೀತಿ ನಿರೂಪಕರು ಮತ್ತು ಅಭಿವೃದ್ಧಿ ವೃತ್ತಿಪರರು ಇಡಿಯಾಗಿ ಗಮನಿಸಿ ಪ್ರತಿಕ್ರಿಯಿಸುವ ಅಗತ್ಯವಿದೆ. ಜಾಗತಿಕವಾಗಿ ಜನಸಂಖ್ಯೆಯ ಹೆಚ್ಚಳ ಮತ್ತು ಕೃಷಿ ಉತ್ಪಾದಕತೆ ಕಡಿಮೆಯಾಗುತ್ತಿರುವುದರಿಂದ, ಕೃಷಿ ಕ್ಷೇತ್ರದಲ್ಲಿ ಯುವಜನರ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸಲು ಸಂಘಟಿತ ಪ್ರಯತ್ನ ಮಾಡುವ ಪ್ರಯತ್ನ ಹಿಂದೆಂದಿಗಿಂತಲೂ ಹೆಚ್ಚಾಗಿದೆ. ಅಂದರೆ ಯುವಜನರು ತಮಗಾಗಿ ಮತ್ತು ಭವಿಷ್ಯದ ಪೀಳಿಗೆಗೆ ಆಹಾರ-ಭದ್ರತೆಯನ್ನು ಖಾತ್ರಿಪಡಿಸಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಬೇಕು.
ಗಮನಿಸಿ: ಇದು ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆ (FAO) ಕೃಷಿ ಮತ್ತು ಗ್ರಾಮೀಣ ಸಹಕಾರಕ್ಕಾಗಿ ತಾಂತ್ರಿಕ ಕೇಂದ್ರ (CTA) ಮತ್ತು ಅಂತರರಾಷ್ಟ್ರೀಯ ಕೃಷಿ ಅಭಿವೃದ್ಧಿ ನಿಧಿ (IFAD), 2014 ರ ಸಹಯೋಗದೊಂದಿಗೆ ಪ್ರಕಟಿಸಿದ FAO, ಯುವಜನತೆ ಮತ್ತು ಕೃಷಿ: ಪ್ರಮುಖ ಸವಾಲುಗಳು ಮತ್ತು ಪರಿಹಾರಗಳ ಸಾರಾಂಶವಾಗಿದೆ.
ಆಂಗ್ಲ ಮೂಲ : ಲೀಸಾ ಇಂಡಿಯಾ; ಸಂಪುಟ :೨೬; ಸಂಚಿಕೆ : ೨ ; ಜೂನ್ ೨೦೨೪



