ಕೃಷಿ ಪರಿಸರ ವಿಜ್ಞಾನ- ಭಾರತೀಯ ಯುವಕರಿಗೊಂದು ಸುಸ್ಥಿರ ಪರಿಹಾರ


ಯುವಕರು ಕೃಷಿ ಪರಿಸರ ಪದ್ಧತಿಗಳನ್ನು ಅಳವಡಿಸಿಕೊಳ್ಳುವಂತೆ ಸಬಲರನ್ನಾಗಿಸಿ ಸುಸ್ಥಿರ ಆಹಾರ ಉತ್ಪಾದನೆಯನ್ನು ಖಚಿತಪಡಿಸುವುದಲ್ಲದೆ ಗ್ರಾಮೀಣ ಜೀವನೋಪಾಯ, ಪರಿಸರ ಸಂರಕ್ಷಣೆ ಮತ್ತು ಸಾಮಾಜಿಕ-ಆರ್ಥಿಕ ಅಭಿವೃದ್ಧಿಯನ್ನು ಸಹ ಪೋಷಿಸುತ್ತದೆ. ಈ ಲೇಖನವು ಭಾರತದಲ್ಲಿ ಯುವಕರು ಎದುರಿಸುತ್ತಿರುವ ಸವಾಲುಗಳನ್ನು ಪರಿಶೀಲಿಸುತ್ತದೆ. ಕೃಷಿ ಪರಿಸರ ವಿಜ್ಞಾನವು ಅವರ ಒಟ್ಟಾರೆ ಅಭಿವೃದ್ಧಿಗೆ ಕೊಡುಗೆ ನೀಡುವಲ್ಲಿ ಅವರನ್ನು ಸಬಲೀಕರಣಗೊಳಿಸಲು ಸುಸ್ಥಿರ ಪರಿಹಾರಗಳನ್ನು ಹೇಗೆ ನೀಡುತ್ತದೆ ಎಂಬುದನ್ನು ಅನ್ವೇಷಿಸುತ್ತದೆ. ಈ ಯುವ ಸಾಮರ್ಥ್ಯವನ್ನು ಬಳಸಿಕೊಳ್ಳುವ ಗುರಿಯನ್ನು ಹೊಂದಿರುವ ಪ್ರಸ್ತುತ ಕಾರ್ಯತಂತ್ರಗಳನ್ನು ಸಹ ಚರ್ಚಿಸಲಾಗಿದೆ.


ಭಾರತದ ಯುವಕರು ನಿರುದ್ಯೋಗ, ಶಿಕ್ಷಣದ ಕೊರತೆ, ಪರಿಸರ ನಾಶ ಮತ್ತು ಆರ್ಥಿಕ ಅಸಮಾನತೆಗಳು ಸೇರಿದಂತೆ ಹಲವಾರು ಸವಾಲುಗಳನ್ನು ಎದುರಿಸುತ್ತಿದ್ದಾರೆ. ರಾಷ್ಟ್ರೀಯ ಯುವ ನೀತಿ (2014) ಪ್ರಕಾರ, 15-29 ವರ್ಷ ವಯಸ್ಸಿನ ಯುವಕರು ಒಟ್ಟು ಭಾರತೀಯ ಜನಸಂಖ್ಯೆಯ 27.5% ರಷ್ಟಿದ್ದಾರೆ. ಇವರು ಭಾರತದ ಒಟ್ಟು ರಾಷ್ಟ್ರೀಯ ಆದಾಯಕ್ಕೆ 34% ಕೊಡುಗೆ ನೀಡುತ್ತಾರೆ. ಭಾರತದ ಯುವಜನರ ಅರ್ಹತೆ ಮತ್ತು ಕೌಶಲ್ಯಗಳ ಹೊರತಾಗಿಯೂ ನಿರುದ್ಯೋಗವು ದೊಡ್ಡ ಸಮಸ್ಯೆಯಾಗಿದೆ. ಸೂಕ್ತ ಉದ್ಯೋಗ ಅವಕಾಶಗಳ ಕೊರತೆಯು ಯುವಜನರಲ್ಲಿ ಹತಾಶೆ ಮತ್ತು ಭ್ರಮನಿರಸನಕ್ಕೆ ಕಾರಣವಾಗುತ್ತದೆ. ಬಡತನ, ಅಸಮರ್ಪಕ ಮೂಲಸೌಕರ್ಯ ಮತ್ತು ಸಾಮಾಜಿಕ ಅಡೆತಡೆಗಳಿಂದಾಗಿ ಲಕ್ಷಾಂತರ ಯುವಕರು ಗುಣಮಟ್ಟದ ಶಿಕ್ಷಣವನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ಇದು ಅವರ ವೈಯಕ್ತಿಕ ಮತ್ತು ವೃತ್ತಿಪರ ಬೆಳವಣಿಗೆಗೆ ಅಡ್ಡಿಯಾಗುತ್ತದೆ. ಇದಲ್ಲದೆ, ಹವಾಮಾನ ಬದಲಾವಣೆ, ಅರಣ್ಯನಾಶ ಮತ್ತು ಮಾಲಿನ್ಯ ಸೇರಿದಂತೆ ಪರಿಸರ ಅವನತಿಯು ಲಕ್ಷಾಂತರ ಜನರ ಜೀವನೋಪಾಯಕ್ಕೆ ಅದರಲ್ಲೂ ಕೃಷಿಯನ್ನೇ ಆದಾಯದ ಮೂಲವಾಗಿರಿಸಿಕೊಂಡ ಗ್ರಾಮೀಣ ಪ್ರದೇಶಗಳಲ್ಲಿ ಅಪಾಯವನ್ನುಂಟುಮಾಡುತ್ತಿದೆ. ಆರ್ಥಿಕ ಅಸಮಾನತೆಗಳು ಮುಂದುವರೆದಿವೆ ಜನಸಂಖ್ಯೆಯ ಹೆಚ್ಚಿನ ಭಾಗವು ಬಡತನ ರೇಖೆಯ ಕೆಳಗೆ ವಾಸಿಸುತ್ತಿದ್ದು, ಅಸಮಾನತೆಗಳು ಹೆಚ್ಚಾಗಿವೆ. ವಿಶೇಷವಾಗಿ, ಅಂಚಿನಲ್ಲಿರುವ ಸಮುದಾಯಗಳಿಗೆ ಸಂಪನ್ಮೂಲಗಳು ಮತ್ತು ಅವಕಾಶಗಳಿಗೆ ಪ್ರವೇಶವನ್ನು ಸೀಮಿತಗೊಳಿಸುತ್ತದೆ.

 ಕೃಷಿ ಪರಿಸರ ವಿಜ್ಞಾನದ ಪಾತ್ರ

 ಭಾರತದ ಕೃಷಿ ವಲಯವು ಸಾಂಪ್ರದಾಯಿಕ ಕೃಷಿ ಪದ್ಧತಿಗಳಿಂದ ಕೂಡಿದ್ದು, ಇದು ಪರಿಸರಕ್ಕೆ ಧಕ್ಕೆ ಉಂಟುಮಾಡುವುದರೊಂದಿಗೆ ದೀರ್ಘಕಾಲೀನ ಸುಸ್ಥಿರತೆಗೆ ಧಕ್ಕೆ ತರುತ್ತದೆ. ಕೃಷಿ ಕೆಲಸದ ಬಹುಮುಖ್ಯ ಭಾಗವಾಗಿರುವ ಸಣ್ಣ ಹಿಡುವಳಿದಾರರು ಆರ್ಥಿಕ ಸವಾಲುಗಳನ್ನು ಎದುರಿಸುತ್ತಾರೆ. ಅವರಿಗೆ ಸಂಪನ್ಮೂಲಗಳ ಲಭ್ಯತೆ ಕಡಿಮೆ. ಹವಾಮಾನ ಬದಲಾವಣೆ, ಮಣ್ಣಿನ ಸವಕಳಿ ಮತ್ತು ನೀರಿನ ಕೊರತೆಯಿಂದ ಈ ಸವಾಲುಗಳು ಉಲ್ಬಣಗೊಳ್ಳುತ್ತವೆ. ಇದು ಕೃಷಿಗೆ ಪರ್ಯಾಯ ವಿಧಾನಗಳ ತುರ್ತು ಅಗತ್ಯವನ್ನು ಎತ್ತಿ ತೋರಿಸುತ್ತದೆ.

ಚೌಕ 1: ಕೃಷಿ ಪರಿಸರ ವಿಜ್ಞಾನದ ಪ್ರಮುಖ ತತ್ವಗಳು

 

  1. ಜೀವವೈವಿಧ್ಯ: ಕೃಷಿ ಪರಿಸರ ವಿಜ್ಞಾನವು ಕೃಷಿ ವ್ಯವಸ್ಥೆಗಳಲ್ಲಿ ಜೀವವೈವಿಧ್ಯದ ಮಹತ್ವವನ್ನು ಗುರುತಿಸುತ್ತದೆ. ವೈವಿಧ್ಯಮಯ ಪರಿಸರ ವ್ಯವಸ್ಥೆಗಳು ಕೀಟಗಳು, ರೋಗಗಳು ಮತ್ತು ಪರಿಸರ ಒತ್ತಡಗಳನ್ನು ತಡೆದುಕೊಳ್ಳುವ ಶಕ್ತಿ ಹೊಂದಿರುತ್ತದೆ. ಕೃಷಿ ಪರಿಸರ ಪದ್ಧತಿಗಳು ಹೆಚ್ಚಾಗಿ ಬೆಳೆ ವೈವಿಧ್ಯೀಕರಣ, ಕೃಷಿ ಅರಣ್ಯೀಕರಣ ಮತ್ತು ಕೃಷಿ ಪ್ರದೇಶಗಳಲ್ಲಿ ಅಥವಾ ಹತ್ತಿರದ ನೈಸರ್ಗಿಕ ಆವಾಸಸ್ಥಾನಗಳ ಸಂರಕ್ಷಣೆಯನ್ನು ಒಳಗೊಂಡಿರುತ್ತವೆ.
  2. ಮಣ್ಣಿನ ಆರೋಗ್ಯ: ಕೃಷಿ ಪರಿಸರ ವಿಜ್ಞಾನವು ಸುಸ್ಥಿರ ಕೃಷಿಯಲ್ಲಿ ಆರೋಗ್ಯಕರ ಮಣ್ಣಿನ ಮಹತ್ವವನ್ನು ಒತ್ತಿಹೇಳುತ್ತದೆ. ಬೆಳೆ ಸರದಿ, ಹೊದಿಕೆ ಬೆಳೆ ಮತ್ತು ಮಣ್ಣನ್ನು ಉತ್ತಮಗೊಳಿಸಲು ಸಾವಯವ ಅಭ್ಯಾಸಗಳು ಮಣ್ಣಿನ ಫಲವತ್ತತೆ, ರಚನೆ ಮತ್ತು ಪೋಷಕಾಂಶಗಳ ಚಕ್ರವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಸಂಶ್ಲೇಷಿತ ಒಳಸುರಿಯುವಿಕೆಗಳನ್ನು ಹೆಚ್ಚು ಅವಲಂಬಿಸಬೇಕಿಲ್ಲ.
  3. ಪರಿಸರ ಕೀಟ ನಿರ್ವಹಣೆ: ರಾಸಾಯನಿಕ ಕೀಟನಾಶಕಗಳನ್ನು ಮಾತ್ರ ಅವಲಂಬಿಸುವ ಬದಲು, ಕೃಷಿ ಪರಿಸರ ವಿಜ್ಞಾನವು ಸಮಗ್ರ ಕೀಟ ನಿರ್ವಹಣೆ (IPM) ತಂತ್ರಗಳ ಬಳಕೆಯನ್ನು ಪ್ರೋತ್ಸಾಹಿಸುತ್ತದೆ. ಇದು ಜೈವಿಕ ನಿಯಂತ್ರಣ, ಬೆಳೆ ಆವರ್ತನ, ಆವಾಸಸ್ಥಾನ ಪರಿವರ್ತನೆ ಮತ್ತು ಕೀಟಗಳನ್ನು ನಿರ್ವಹಿಸಲು ನಿರೋಧಕ ಬೆಳೆ ಪ್ರಭೇದಗಳ ಬಳಕೆಯಂತಹ ತಂತ್ರಗಳ ಸಂಯೋಜನೆಯನ್ನು ಒಳಗೊಂಡಿರುತ್ತದೆ. ಇದು ಪ್ರಯೋಜನಕಾರಿ ಜೀವಿಗಳು ಮತ್ತು ಪರಿಸರಕ್ಕೆ ಹಾನಿಯನ್ನು ಕಡಿಮೆ ಮಾಡುತ್ತದೆ.
  4. ಸ್ಥಳೀಯ ಜ್ಞಾನ ಮತ್ತು ಭಾಗವಹಿಸುವಿಕೆಯ ವಿಧಾನಗಳು:ಕೃಷಿ ಪರಿಸರ ವಿಜ್ಞಾನವು ಸ್ಥಳೀಯ ಜ್ಞಾನವನ್ನು ಗೌರವಿಸುತ್ತದೆ. ರೈತರು, ಸಂಶೋಧಕರು ಮತ್ತು ಇತರ ಪಾಲುದಾರರನ್ನು ಒಟ್ಟಾಗಿ ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಗಳನ್ನು ಉತ್ತೇಜಿಸುತ್ತದೆ. ಸ್ಥಳೀಯ ಸಮುದಾಯಗಳೊಂದಿಗೆ ಸಹಕರಿಸುವ ಮೂಲಕ, ಕೃಷಿ ಪರಿಸರ ಉಪಕ್ರಮಗಳನ್ನು ನಿರ್ದಿಷ್ಟ ಸಾಮಾಜಿಕ, ಸಾಂಸ್ಕೃತಿಕ ಮತ್ತು ಪರಿಸರ ಸಂದರ್ಭಗಳಿಗೆ ಅನುಗುಣವಾಗಿ ರೂಪಿಸಬಹುದು. ಅವುಗಳ ಪರಿಣಾಮಕಾರಿತ್ವ ಮತ್ತು ಸ್ವೀಕಾರವನ್ನು ಹೆಚ್ಚಿಸಬಹುದು.
  1. ಸುಸ್ಥಿರತೆ ಮತ್ತು ಸ್ಥಿತಿಸ್ಥಾಪಕತ್ವ: ಬದಲಾಗುತ್ತಿರುವ ಪರಿಸರ ಪರಿಸ್ಥಿತಿಗಳಿಗೆ ಹೊಂದಿಕೊಳ್ಳುವ ಮತ್ತು ದೀರ್ಘಕಾಲೀನ ಆಹಾರ ಭದ್ರತೆಯನ್ನು ಬೆಂಬಲಿಸುವ ಸ್ಥಿತಿಸ್ಥಾಪಕ ಕೃಷಿ ವ್ಯವಸ್ಥೆಗಳನ್ನು ನಿರ್ಮಿಸುವುದು ಕೃಷಿ ಪರಿಸರ ವಿಜ್ಞಾನದ ಗುರಿಯಾಗಿದೆ. ಬಾಹ್ಯ ಒಳಸುರಿಯುವಿಕೆಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವ ಮೂಲಕ ಮತ್ತು ಪರಿಸರ ಪ್ರಕ್ರಿಯೆಗಳನ್ನು ಬೆಳೆಸುವ ಮೂಲಕ, ಕೃಷಿ ಪರಿಸರ ಪದ್ಧತಿಗಳು ಆಹಾರ ಉತ್ಪಾದನಾ ವ್ಯವಸ್ಥೆಗಳ ಸುಸ್ಥಿರತೆಗೆ ಕೊಡುಗೆ ನೀಡುತ್ತವೆ.

 

 

ಕೃಷಿ ಪರಿಸರ ವಿಜ್ಞಾನವು ಕೃಷಿಗೆ ಸಮಗ್ರ ವಿಧಾನವನ್ನು ನೀಡುತ್ತದೆ. ಇದು ಪರಿಸರ ತತ್ವಗಳನ್ನು ಕೃಷಿ ವ್ಯವಸ್ಥೆಗಳಲ್ಲಿ ಒಂದಾಗಿಸುವುದಕ್ಕೆ ಒತ್ತು ನೀಡುತ್ತದೆ. ಜೀವವೈವಿಧ್ಯತೆ, ಮಣ್ಣಿನ ಆರೋಗ್ಯ ಮತ್ತು ಪರಿಸರ ವ್ಯವಸ್ಥೆಯ ಸ್ಥಿತಿಸ್ಥಾಪಕತ್ವವನ್ನು ಉತ್ತೇಜಿಸುವ ಮೂಲಕ, ಕೃಷಿ ಪರಿಸರ ವಿಜ್ಞಾನವು ಪರಿಸರದ ಮೇಲಾಗುವ ಪರಿಣಾಮವನ್ನು ಕಡಿಮೆ ಮಾಡಿ ಉತ್ಪಾದಕತೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ. ಇದರ ಪ್ರಮುಖ ಅಭ್ಯಾಸಗಳಲ್ಲಿ ಬೆಳೆ ವೈವಿಧ್ಯೀಕರಣ, ನೈಸರ್ಗಿಕ ಕೀಟ ನಿರ್ವಹಣೆ ಮತ್ತು ದಕ್ಷ ನೀರಿನ ಬಳಕೆ ಸೇರಿವೆ. ಇವೆಲ್ಲವೂ ಕೃಷಿ ವ್ಯವಸ್ಥೆಗಳ ಸುಸ್ಥಿರತೆಗೆ ಕೊಡುಗೆ ನೀಡುತ್ತವೆ. ಕೃಷಿ ಪರಿಸರ ವಿಜ್ಞಾನದ ಪ್ರಮುಖ ತತ್ವಗಳನ್ನು ಚೌಕ 1 ರಲ್ಲಿ ವಿವರಿಸಲಾಗಿದೆ.

ಭಾರತದಲ್ಲಿ, ಕೃಷಿ ಪರಿಸರ ವಿಜ್ಞಾನ ಆಧಾರಿತ ಪದ್ಧತಿಗಳನ್ನು ವಿವಿಧ ಭೌಗೋಳಿಕ ಪ್ರದೇಶಗಳಲ್ಲಿ ದೀರ್ಘಕಾಲದಿಂದ ವೈಯಕ್ತಿಕ ವೃತ್ತಿಪರರು ಪ್ರತಿಪಾದಿಸುತ್ತಿದ್ದಾರೆ. ‘ಪ್ರಯೋಗ ಪರಿವಾರ್’ (ಮಹಾರಾಷ್ಟ್ರ) ಶ್ರೀಪಾದ್ ದಾಭೋಲ್ಕರ್ ಅವರಂತಹವರು ದಶಕಗಳಿಂದ ಕೈಗೊಂಡ ಉಪಕ್ರಮಗಳು, ಭಾಸ್ಕರ್ ಸೇವ್ (ಗುಜರಾತ್), ನಾರಾಯಣ ರೆಡ್ಡಿ (ಕರ್ನಾಟಕ) ಮತ್ತು ಜಿ. ನಮ್ಮಲ್ವಾರ್ (ತಮಿಳುನಾಡು) ಅವರು ಅನುಸರಿಸುತ್ತಿರುವ ನೈಸರ್ಗಿಕ ಕೃಷಿ ವಿಧಾನಗಳು ಪ್ರಸಿದ್ಧವಾಗಿವೆ. ಇತ್ತೀಚೆಗೆ ಶೂನ್ಯ-ಬಜೆಟ್ ನೈಸರ್ಗಿಕ ಕೃಷಿ (ZBNF) ನಂತಹ ಚಳುವಳಿಗಳು ಕೃಷಿ ಸಮುದಾಯಗಳನ್ನು ದೊಡ್ಡ ಪ್ರಮಾಣದಲ್ಲಿ ಸಜ್ಜುಗೊಳಿಸುವ ರೂಪವಾಗಿ ಹೊರಹೊಮ್ಮಿದೆ.

ಕೃಷಿಪರಿಸರ ವಿಜ್ಞಾನವು ಪರಿಹಾರವಾಗಿ ಕಾರ್ಯನಿರ್ವಹಿಸುತ್ತದೆ

ಭಾರತದಲ್ಲಿ ಯುವಜನರ ಸಂಖ್ಯೆ ಹೆಚ್ಚಿದೆ. ಕೃಷಿಯಲ್ಲಿ ಅವರ ಒಳಗೊಳ್ಳುವಿಕೆ ಹಲವಾರು ಕಾರಣಗಳಿಗಾಗಿ ನಿರ್ಣಾಯಕವಾಗಿದೆ:

  1. ನಾವೀನ್ಯತೆ ಮತ್ತು ರೂಪಾಂತರ: ಯುವ ರೈತರು ಕೃಷಿ ಸವಾಲುಗಳಿಗೆ ಹೊಸ ದೃಷ್ಟಿಕೋನಗಳು, ಸೃಜನಶೀಲತೆ ಮತ್ತು ನವೀನ ಪರಿಹಾರಗಳನ್ನು ತಂದುಕೊಡುತ್ತಾರೆ. ಹವಾಮಾನ ಬದಲಾವಣೆ ಮತ್ತು ಇತರ ಬೆದರಿಕೆಗಳ ವಿರುದ್ಧ ವಲಯದ ಸ್ಥಿತಿಸ್ಥಾಪಕತ್ವಕ್ಕೆ ಹೊಸ ತಂತ್ರಜ್ಞಾನಗಳು ಮತ್ತು ಅಭ್ಯಾಸಗಳಿಗೆ ಹೊಂದಿಕೊಳ್ಳುವ ಸಾಮರ್ಥ್ಯ ಅತ್ಯಗತ್ಯ.
  1. ಕೌಶಲ್ಯ ಅಭಿವೃದ್ಧಿ: ಕೃಷಿ ಪರಿಸರ ವಿಜ್ಞಾನವು ಆಧುನಿಕ ಕೃಷಿ ತಂತ್ರಗಳೊಂದಿಗೆ ಸಾಂಪ್ರದಾಯಿಕ ಜ್ಞಾನದ ಸಂಯೋಜನೆಯ ಮಹತ್ವವನ್ನು ಒತ್ತಿಹೇಳುತ್ತದೆ. ಕೃಷಿ ಪರಿಸರ ಪದ್ಧತಿಗಳಲ್ಲಿನ ತರಬೇತಿ ಮತ್ತು ಸಾಮರ್ಥ್ಯವರ್ಧನೆ ಕಾರ್ಯಕ್ರಮಗಳ ಮೂಲಕ, ಯುವಕರು ಯಶಸ್ವಿ ರೈತರು ಮತ್ತು ಉದ್ಯಮಿಗಳಾಗಬಲ್ಲ ಅಮೂಲ್ಯ ಕೌಶಲ್ಯಗಳನ್ನು ಕಲಿಯಬಹುದು.
  1. ಸುಸ್ಥಿರತೆ: ಕೃಷಿ ಪರಿಸರ ವಿಜ್ಞಾನವು ಪರಿಸರ ಸಂರಕ್ಷಣೆ, ಜೀವವೈವಿಧ್ಯ ಮತ್ತು ನೈಸರ್ಗಿಕ ಸಂಪನ್ಮೂಲ ನಿರ್ವಹಣೆಗೆ ಆದ್ಯತೆ ನೀಡುವ ಸುಸ್ಥಿರ ಕೃಷಿ ಪದ್ಧತಿಗಳನ್ನು ಉತ್ತೇಜಿಸುತ್ತದೆ. ಕೃಷಿ ಪರಿಸರ ವಿಧಾನಗಳಲ್ಲಿ ಯುವಕರನ್ನು ತೊಡಗಿಸಿಕೊಳ್ಳುವ ಮೂಲಕ ಭವಿಷ್ಯದ ಪೀಳಿಗೆಗೆ ಈ ಪದ್ಧತಿಗಳ ನಿರಂತರತೆಯನ್ನು ಖಚಿತಪಡಿಸುತ್ತದೆ.
  1. ಆರ್ಥಿಕ ಸಬಲೀಕರಣ: ಲಕ್ಷಾಂತರ ಭಾರತೀಯರಿಗೆ, ಅದರಲ್ಲೂ ಗ್ರಾಮೀಣ ಪ್ರದೇಶಗಳಲ್ಲಿ ಕೃಷಿಯು ಜೀವನೋಪಾಯದ ಪ್ರಮುಖ ಮೂಲವಾಗಿದೆ. ಕೃಷಿ ಪರಿಸರ ವಿಜ್ಞಾನದಲ್ಲಿ ಯುವಕರನ್ನು ತೊಡಗಿಸಿಕೊಳ್ಳುವ ಮೂಲಕ, ನಾವು ಆರ್ಥಿಕ ಸಬಲೀಕರಣ, ಉದ್ಯಮಶೀಲತೆ ಮತ್ತು ಗ್ರಾಮೀಣ ಅಭಿವೃದ್ಧಿಗೆ ಅವಕಾಶಗಳನ್ನು ಸೃಷ್ಟಿಸಬಹುದು.
  1. ಆಹಾರ ಭದ್ರತೆ: ಹೆಚ್ಚುತ್ತಿರುವ ಜನಸಂಖ್ಯೆ ಮತ್ತು ಬದಲಾಗುತ್ತಿರುವ ಆಹಾರದ ಆದ್ಯತೆಗಳೊಂದಿಗೆ, ಆಹಾರ ಭದ್ರತೆಯನ್ನು ಖಚಿತಪಡಿಸಿಕೊಳ್ಳುವ ತುರ್ತಿದೆ. ಕೃಷಿ ಪರಿಸರ ಪದ್ಧತಿಗಳು ವೈವಿಧ್ಯಮಯ ಬೆಳೆ ವ್ಯವಸ್ಥೆಗಳು, ಸಾವಯವ ಕೃಷಿ ಮತ್ತು ಸ್ಥಳೀಯ ಆಹಾರ ಉತ್ಪಾದನೆಗೆ ಒತ್ತು ನೀಡುತ್ತವೆ. ಆಹಾರ ಸಾರ್ವಭೌಮತ್ವ ಮತ್ತು ಪೌಷ್ಟಿಕಾಂಶ ಭದ್ರತೆಗೆ ಕೊಡುಗೆ ನೀಡುತ್ತವೆ.
  1. ಪರಿಸರ ಸಂರಕ್ಷಣೆ: ಕೃಷಿ ಪರಿಸರ ಪದ್ಧತಿಗಳು ಜೀವವೈವಿಧ್ಯ ಸಂರಕ್ಷಣೆ, ಮಣ್ಣಿನ ಆರೋಗ್ಯ ಮತ್ತು ನೀರಿನ ನಿರ್ವಹಣೆಯನ್ನು ಉತ್ತೇಜಿಸುತ್ತವೆ. ಹವಾಮಾನ ಬದಲಾವಣೆಯ ದುಷ್ಪರಿಣಾಮಗಳನ್ನು ತಗ್ಗಿಸುತ್ತವೆ. ಕೃಷಿ ಪರಿಸರ ವಿಜ್ಞಾನದಲ್ಲಿ ಯುವಕರ ಭಾಗವಹಿಸುವಿಕೆಯು ಅವರಿಗೆ ಪರಿಸರದ ಮೇಲ್ವಿಚಾರಕರಾಗಲು, ಸುಸ್ಥಿರ ಭೂ ಬಳಕೆ ಮತ್ತು ನೈಸರ್ಗಿಕ ಸಂಪನ್ಮೂಲ ಸಂರಕ್ಷಣೆಯನ್ನು ಮಾಡಲು ಅನುವು ಮಾಡಿಕೊಡುತ್ತದೆ.
  1. ಸಮುದಾಯ ಸಬಲೀಕರಣ: ಕೃಷಿ ಪರಿಸರ ವಿಜ್ಞಾನವು ಸಮುದಾಯ ಆಧಾರಿತ ಕೃಷಿ ವಿಧಾನಗಳನ್ನು ಬೆಳೆಸುತ್ತದೆ. ರೈತರಲ್ಲಿ ಸಾಮೂಹಿಕ ಕ್ರಮ ಮತ್ತು ಸಹಕಾರವನ್ನು ಉತ್ತೇಜಿಸುತ್ತದೆ. ಸಮುದಾಯ ನೇತೃತ್ವದ ಉಪಕ್ರಮಗಳಲ್ಲಿ ಯುವಕರ ಪಾಲ್ಗೊಳ್ಳುವಿಕೆ ಸಾಮಾಜಿಕ ಒಗ್ಗಟ್ಟನ್ನು ಉತ್ತೇಜಿಸುತ್ತದೆ. ಸ್ಥಳೀಯ ಸವಾಲುಗಳನ್ನು ಒಟ್ಟಾಗಿ ಎದುರಿಸಲು ಅನುವು ಮಾಡಿಕೊಡುತ್ತದೆ.
  1. ಉದ್ಯಮಶೀಲತೆ ಮತ್ತು ಮಾರುಕಟ್ಟೆ ಸಂಪರ್ಕಗಳು:

ಕೃಷಿಯಲ್ಲಿ ಯುವಕರಲ್ಲಿ ಉದ್ಯಮಶೀಲತೆಯನ್ನು ಪ್ರೋತ್ಸಾಹಿಸುವುದರಿಂದ ಮೌಲ್ಯವರ್ಧನೆ, ವೈವಿಧ್ಯೀಕರಣ ಮತ್ತು ಮಾರುಕಟ್ಟೆ ಪ್ರವೇಶಕ್ಕೆ ಹೊಸ ಅವಕಾಶಗಳನ್ನು ಸೃಷ್ಟಿಸಬಹುದು.

ರೈತ ಉತ್ಪಾದಕ ಸಂಸ್ಥೆಗಳು (FPOಗಳು) ಮತ್ತು ಸಹಕಾರಿ ಸಂಸ್ಥೆಗಳಂತಹ ಉಪಕ್ರಮಗಳು ಸಣ್ಣ ಹಿಡುವಳಿದಾರರು ತಮ್ಮ ಉತ್ಪನ್ನಗಳನ್ನು ಸಾಮೂಹಿಕವಾಗಿ ಮಾರುಕಟ್ಟೆ ಮಾಡಲು, ನ್ಯಾಯಯುತ ಬೆಲೆಗಳ ಬಗ್ಗೆ ಮಾತುಕತೆ ನಡೆಸಲು ಮತ್ತು ಸಾವಯವ ಉತ್ಪನ್ನಗಳ ದೊಡ್ಡ ಮಾರುಕಟ್ಟೆಗಳನ್ನು ಪ್ರವೇಶಿಸಲು ಅನುವು ಮಾಡಿಕೊಡುತ್ತದೆ. ಸಾವಯವ ಆಹಾರ ನವೋದ್ಯಮಗಳು ಮತ್ತು ಪರಿಸರ ಸ್ನೇಹಿ ಕೃಷಿ ಸಂಸ್ಕರಣಾ ಘಟಕಗಳಂತಹ ಯುವ ನೇತೃತ್ವದ ಕೃಷಿ ವ್ಯವಹಾರ ಉದ್ಯಮಗಳು ಗ್ರಾಮೀಣ ಉದ್ಯೋಗ ಉತ್ಪಾದನೆ ಮತ್ತು ಆರ್ಥಿಕ ಅಭಿವೃದ್ಧಿಗೆ ಕೊಡುಗೆ ನೀಡಬಹುದು.

ಕೃಷಿ ಪರಿಸರ ವಿಜ್ಞಾನದಲ್ಲಿ ಯುವಜನರ ತೊಡಗಿಸಿಕೊಳ್ಳಲು ಪ್ರಸ್ತುತ ಇರುವ ತಂತ್ರಗಳು

ಭಾರತದಲ್ಲಿ ಕೃಷಿ ಪರಿಸರ ವಿಜ್ಞಾನವನ್ನು ವ್ಯಾಪಕವಾಗಿ ಅಳವಡಿಸಿಕೊಳ್ಳಲು ಯುವಜನರ ಭಾಗವಹಿಸುವಿಕೆ ನಿರ್ಣಾಯಕವಾಗಿದೆ. ಶಿಕ್ಷಣ, ತಂತ್ರಜ್ಞಾನ ಮತ್ತು ಉದ್ಯಮಶೀಲತೆಯಲ್ಲಿ ಹೂಡಿಕೆ ಮಾಡುವ ಮೂಲಕ, ಯುವಜನರು ಸುಸ್ಥಿರ ಕೃಷಿಯನ್ನು ಮುನ್ನಡೆಸುವಲ್ಲಿ ಪ್ರಮುಖ ಪಾತ್ರ ವಹಿಸಬಹುದು. ಭಾರತವು ಕೃಷಿಯಲ್ಲಿ ಯುವಜನರ ಭಾಗವಹಿಸುವಿಕೆಯ ಮಹತ್ವವನ್ನು ಗುರುತಿಸಿದೆ. ಕೃಷಿ ಪರಿಸರ ವಿಜ್ಞಾನದಲ್ಲಿ ಅವರ ಒಳಗೊಳ್ಳುವಿಕೆಯನ್ನು ಉತ್ತೇಜಿಸಲು ವಿವಿಧ ಕಾರ್ಯತಂತ್ರಗಳನ್ನು ಜಾರಿಗೆ ತಂದಿದೆ. ಈ ಕ್ಷೇತ್ರದಲ್ಲಿ ಯುವಜನರ ಸಬಲೀಕರಣದ ಸಾಮರ್ಥ್ಯವನ್ನು ಹಲವಾರು ಉಪಕ್ರಮಗಳು ಪ್ರದರ್ಶಿಸುತ್ತವೆ.

ಕೆಲವು ಪ್ರಮುಖ ಉಪಕ್ರಮಗಳು:

  1. ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮಗಳು: ಭಾರತ ಸರ್ಕಾರವು ಪ್ರಧಾನ ಮಂತ್ರಿ ಕೌಶಲ್ಯ ವಿಕಾಸ ಯೋಜನೆ (PMKVY) ಮತ್ತು ದೀನ್ ದಯಾಳ್ ಉಪಾಧ್ಯಾಯ ಗ್ರಾಮೀಣ ಕೌಶಲ್ಯ ಯೋಜನೆ (DDU-GKY) ಯಂತಹ ಯೋಜನೆಗಳ ಮೂಲಕ ಯುವಕರಿಗೆ ಕೃಷಿ ಪರಿಸರ ಪದ್ಧತಿಗಳಲ್ಲಿ ಕೌಶಲ್ಯ ಅಭಿವೃದ್ಧಿ ತರಬೇತಿಯನ್ನು ನೀಡುತ್ತದೆ. ಈ ಕಾರ್ಯಕ್ರಮಗಳು ಸುಸ್ಥಿರ ಕೃಷಿ ತಂತ್ರಗಳನ್ನು ಅಳವಡಿಸಿಕೊಳ್ಳಲು ಅಗತ್ಯವಾದ ಜ್ಞಾನ ಮತ್ತು ಕೌಶಲ್ಯಗಳನ್ನು ನೀಡಿ ಅವರನ್ನು ಸಜ್ಜುಗೊಳಿಸುತ್ತವೆ.
  1. ಯುವ ಉದ್ಯಮಶೀಲತಾ ಕಾರ್ಯಕ್ರಮಗಳು: ಅಟಲ್ ಇನ್ನೋವೇಶನ್ ಮಿಷನ್ ಮತ್ತು ಸ್ಟಾರ್ಟ್ಅಪ್ ನಂತಹ ಉಪಕ್ರಮಗಳು ಭಾರತವು ಕೃಷಿ ವಲಯ ಸೇರಿದಂತೆ ಯುವಜನರಲ್ಲಿ ಉದ್ಯಮಶೀಲತೆಯನ್ನು ಬೆಳೆಸುವ ಗುರಿಯನ್ನು ಹೊಂದಿದೆ. ಈ ಕಾರ್ಯಕ್ರಮಗಳು ಯುವ ಕೃಷಿಕರಿಗೆ ಆರ್ಥಿಕ ಬೆಂಬಲ, ಮಾರ್ಗದರ್ಶನ ಮತ್ತು ಇನ್ಕ್ಯುಬೇಶನ್ ಸೌಲಭ್ಯಗಳನ್ನು ನೀಡುತ್ತವೆ. ಸುಸ್ಥಿರ ಕೃಷಿಗಾಗಿ ಹೊಸ ಪರಿಹಾರಗಳನ್ನು ಅಭಿವೃದ್ಧಿಪಡಿಸಲು ಅವರಿಗೆ ಪ್ರೋತ್ಸಾಹ ನೀಡುತ್ತದೆ.
  1. ಕೃಷಿ ಪರಿಸರ ಕೃಷಿಯ ಪ್ರಚಾರ: ಸರ್ಕಾರಿ ಸಂಸ್ಥೆಗಳು, ಸರ್ಕಾರೇತರ ಸಂಸ್ಥೆಗಳು ಮತ್ತು ನಾಗರಿಕ ಸಮಾಜ ಸಂಸ್ಥೆಗಳು ತರಬೇತಿ ಕಾರ್ಯಕ್ರಮಗಳು, ಪ್ರಾತ್ಯಕ್ಷಿಕೆಗಳು ಮತ್ತು ವಿಸ್ತರಣಾ ಸೇವೆಗಳ ಮೂಲಕ ಕೃಷಿ ಪರಿಸರ ಕೃಷಿಯನ್ನು ಉತ್ತೇಜಿಸುತ್ತವೆ. ಈ ಉಪಕ್ರಮಗಳು ಯುವಕರಲ್ಲಿ ಕೃಷಿ ಪರಿಸರ ವಿಜ್ಞಾನದ ಪ್ರಯೋಜನಗಳ ಬಗ್ಗೆ ಜಾಗೃತಿ ಮೂಡಿಸುತ್ತವೆ. ಅವುಗಳ ಅನುಷ್ಠಾನಕ್ಕೆ ಪ್ರಾಯೋಗಿಕ ಮಾರ್ಗದರ್ಶನವನ್ನು ಒದಗಿಸುತ್ತವೆ.
  1. ಯುವಜನರನ್ನು ತೊಡಗಿಸಿಕೊಂಡಿರುವ ವೇದಿಕೆಗಳು: ಯುವಜನರ ನೇತೃತ್ವದ ಸಂಸ್ಥೆಗಳು, ರೈತ ಉತ್ಪಾದಕ ಸಂಸ್ಥೆಗಳು (FPOಗಳು) ಮತ್ತು ಆನ್‌ಲೈನ್ ವೇದಿಕೆಗಳಂತಹ ವಿವಿಧ ವೇದಿಕೆಗಳು ಮತ್ತು ಜಾಲಗಳು, ಕೃಷಿ ಪರಿಸರ ವಿಜ್ಞಾನದಲ್ಲಿ ಯುವಕರ ತೊಡಗಿಸಿಕೊಳ್ಳುವಿಕೆಯನ್ನು ಸುಗಮಗೊಳಿಸುತ್ತವೆ. ಈ ವೇದಿಕೆಗಳು ಯುವ ರೈತರು ಮತ್ತು ಕೃಷಿ ಉದ್ಯಮಿಗಳಲ್ಲಿ ಜ್ಞಾನ ಹಂಚಿಕೆ, ಸಹಯೋಗ ಮತ್ತು ಸಾಮೂಹಿಕ ಕ್ರಿಯೆಯನ್ನು ಸಕ್ರಿಯಗೊಳಿಸುತ್ತವೆ.
  1. ನೀತಿ ಬೆಂಬಲ: ಭಾರತ ಸರ್ಕಾರವು ಪರಿಸರ ಕೃಷಿಯನ್ನು ಬೆಂಬಲಿಸಲು ನೀತಿ ಕ್ರಮಗಳನ್ನು ಪರಿಚಯಿಸಿದೆ. ಇದರಲ್ಲಿ ಸಾವಯವ ಕೃಷಿ ಪ್ರಚಾರ ಯೋಜನೆಗಳು, ಸುಸ್ಥಿರ ಕೃಷಿ ಧ್ಯೇಯಗಳು ಮತ್ತು ಕೃಷಿ-ಪರಿಸರ ಸಬ್ಸಿಡಿಗಳು ಸೇರಿವೆ. ಇದು ಯುವಕರು ಕೃಷಿ ಪರಿಸರ ಪದ್ಧತಿಗಳನ್ನು ಅಳವಡಿಸಿಕೊಳ್ಳಲು ಮತ್ತು ಹೆಚ್ಚಿಸಲು ಅನುವು ಮಾಡಿಕೊಡುವ ವಾತಾವರಣವನ್ನು ಸೃಷ್ಟಿಸುತ್ತವೆ.

ಕೃಷಿ ಪರಿಸರ ವಿಜ್ಞಾನ: ಒಂದು ಸುಸ್ಥಿರ ಪರಿಹಾರ

ಕೃಷಿ ಪರಿಸರ ವಿಜ್ಞಾನವು ಯುವಜನರು ಎದುರಿಸುತ್ತಿರುವ ಸವಾಲುಗಳನ್ನು ಪರಿಹರಿಸಲು ಮತ್ತು ಅವರನ್ನು ಸಬಲರನ್ನಾಗಿಸಲು ಸುಸ್ಥಿರ ಪರಿಹಾರವನ್ನು ಒದಗಿಸುತ್ತದೆ. ಕೃಷಿ ಪರಿಸರ ವಿಜ್ಞಾನವು ಅವರ ಸಾಮಾಜಿಕ-ಆರ್ಥಿಕ ಅಭಿವೃದ್ಧಿಯನ್ನು ಉತ್ತೇಜಿಸಲು ಸಮಗ್ರ ಪರಿಹಾರಗಳನ್ನು ನೀಡಬಲ್ಲದು.

ಕೃಷಿ ಪರಿಸರ ವಿಜ್ಞಾನವು ಈ ಸವಾಲುಗಳನ್ನು ಎದುರಿಸಲು ಮತ್ತು ಭಾರತದ ಯುವಕರನ್ನು ಸಬಲೀಕರಣಗೊಳಿಸಲು ಸಮಗ್ರ ವಿಧಾನವನ್ನು ನೀಡುತ್ತದೆ. ಪರಿಸರ ತತ್ವಗಳನ್ನು ಕೃಷಿ ಪದ್ಧತಿಗಳಲ್ಲಿ ಸಂಯೋಜಿಸುವ ಮೂಲಕ, ಪರಿಸರವನ್ನು ಸಂರಕ್ಷಿಸುವುದರ ಜೊತೆಗೆ ಉತ್ಪಾದಕತೆಯನ್ನು ಹೆಚ್ಚಿಸುವ ಸುಸ್ಥಿರ ಕೃಷಿ ತಂತ್ರಗಳನ್ನು ಕೃಷಿ ಪರಿಸರ ವಿಜ್ಞಾನವು ಉತ್ತೇಜಿಸುತ್ತದೆ. ಕೃಷಿ ಪರಿಸರ ಪದ್ಧತಿಗಳಲ್ಲಿ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮಗಳು ಯುವಕರನ್ನು ಯಶಸ್ವಿ ರೈತರು ಮತ್ತು ಉದ್ಯಮಿಗಳಾಗಲು ಅಗತ್ಯವಾದ ಜ್ಞಾನ ಮತ್ತು ಕೌಶಲ್ಯಗಳೊಂದಿಗೆ ಸಜ್ಜುಗೊಳಿಸುತ್ತವೆ. ಸಾವಯವ ಕೃಷಿ, ಮೌಲ್ಯವರ್ಧಿತ ಸಂಸ್ಕರಣೆ ಮತ್ತು ಪರಿಸರ ಪ್ರವಾಸೋದ್ಯಮದಲ್ಲಿ ಉದ್ಯಮಶೀಲತಾ ಅವಕಾಶಗಳು ಸುಸ್ಥಿರ ಜೀವನೋಪಾಯದ ಆಯ್ಕೆಗಳನ್ನು ಸೃಷ್ಟಿಸುತ್ತವೆ. ಗ್ರಾಮೀಣ ಅಭಿವೃದ್ಧಿಗೆ ಕೊಡುಗೆ ನೀಡುತ್ತವೆ. ಬಾಹ್ಯ ಒಳಸುರಿಯುವಿಕೆಗಳ ವೆಚ್ಚವನ್ನು ಕಡಿಮೆ ಮಾಡುವುದರಿಂದ ಉತ್ಪಾದಕರ ನಿವ್ವಳ ಆದಾಯವನ್ನು ಹೆಚ್ಚಿಸಬಹುದು.

ಇದಲ್ಲದೆ, ಕೃಷಿ ಪರಿಸರ ಪದ್ಧತಿಗಳು ಜೀವವೈವಿಧ್ಯ ಸಂರಕ್ಷಣೆ, ಮಣ್ಣಿನ ಆರೋಗ್ಯ ಮತ್ತು ನೀರಿನ ನಿರ್ವಹಣೆಯನ್ನು ಉತ್ತೇಜಿಸುತ್ತವೆ. ಹವಾಮಾನ ಬದಲಾವಣೆಯ ದುಷ್ಪರಿಣಾಮಗಳನ್ನು ತಗ್ಗಿಸುತ್ತವೆ. ಕೃಷಿ ಪರಿಸರ ವಿಜ್ಞಾನದಲ್ಲಿ ಯುವಕರನ್ನು ತೊಡಗಿಸಿಕೊಳ್ಳುವುದರಿಂದ ಅವರು ಪರಿಸರದ ಮೇಲ್ವಿಚಾರಕರಾಗಲು, ಸುಸ್ಥಿರ ಭೂ ಬಳಕೆ ಮತ್ತು ನೈಸರ್ಗಿಕ ಸಂಪನ್ಮೂಲ ಸಂರಕ್ಷಣೆ ಮಾಡಲು ಅನುವು ಮಾಡಿಕೊಡುತ್ತದೆ. ಕೃಷಿಗೆ ಸಮುದಾಯ ಆಧಾರಿತ ವಿಧಾನಗಳು ರೈತರಲ್ಲಿ ಸಾಮೂಹಿಕ ಕ್ರಮ ಮತ್ತು ಸಹಕಾರವನ್ನು ಪ್ರೋತ್ಸಾಹಿಸುತ್ತವೆ. ಸಾಮಾಜಿಕ ಒಗ್ಗಟ್ಟನ್ನು ಉತ್ತೇಜಿಸುತ್ತವೆ ಮತ್ತು ಸ್ಥಳೀಯ ಸವಾಲುಗಳನ್ನು ಸಹಯೋಗದಿಂದ ಎದುರಿಸಲು ಯುವಕರನ್ನು ಸಬಲೀಕರಣಗೊಳಿಸುತ್ತವೆ. ಇದರೊಂದಿಗೆ, ಕೃಷಿ ಪರಿಸರ ವಿಜ್ಞಾನವು ಒಳಸುರಿಯುವಿಕೆಯ ವೆಚ್ಚವನ್ನು ಕಡಿಮೆ ಮಾಡುವುದು, ಬೆಳೆ ಸ್ಥಿತಿಸ್ಥಾಪಕತ್ವವನ್ನು ಸುಧಾರಿಸುವುದು ಮತ್ತು ಸಣ್ಣ ಹಿಡುವಳಿದಾರ ರೈತರಿಗೆ ಮಾರುಕಟ್ಟೆ ಪ್ರವೇಶವನ್ನು ಹೆಚ್ಚಿಸುವ ಮೂಲಕ ಆರ್ಥಿಕ ಪ್ರಯೋಜನಗಳನ್ನು ನೀಡುತ್ತದೆ. ಕೃಷಿ ಪರಿಸರ ಪದ್ಧತಿಗಳನ್ನು ಅಳವಡಿಸಿಕೊಳ್ಳುವ ಮೂಲಕ, ಯುವಕರು ಪರಿಸರ ಆಘಾತಗಳು ಮತ್ತು ಆರ್ಥಿಕ ಅನಿಶ್ಚಿತತೆಗಳನ್ನು ತಡೆದುಕೊಳ್ಳುವ ಸ್ಥಿತಿಸ್ಥಾಪಕ ಕೃಷಿ ವ್ಯವಸ್ಥೆಗಳನ್ನು ನಿರ್ಮಿಸಬಹುದು. ಒಟ್ಟಾರೆಯಾಗಿ, ಕೃಷಿ ಪರಿಸರ ವಿಜ್ಞಾನವು ಯುವಜನರನ್ನು ಸಬಲೀಕರಣಗೊಳಿಸುವುದಲ್ಲದೆ ಆಹಾರ ಭದ್ರತೆ, ಪರಿಸರ ಸಂರಕ್ಷಣೆ ಮತ್ತು ಗ್ರಾಮೀಣ ಅಭಿವೃದ್ಧಿಗೆ ಕೊಡುಗೆ ನೀಡುವ ಸುಸ್ಥಿರ ಪರಿಹಾರವಾಗಿ ಹೊರಹೊಮ್ಮುತ್ತದೆ.

ಪರಾಮರ್ಶನಗಳು

FAO (Food and Agriculture Organization of the United Nations): https://www.fao.org/india/en/ResearchGate: https://www.researchgate.net/

Van der Ploeg, J. D., Barjolle, D., Bruil, J., Brunori, G., C. Madureira, L. M., Dossein, J., et al., 2019,

The economic potential of agroecology: empiricalevidence from Europe. J. Rural Stud. 71, 46–61. doi: 10.1016/j.jrurstud.2019.09.003

Dutta, D., Prasad, C. S., & Chakraborty, A. (2023). Thinking beyond Ecology: Can Reskilling Youth Lead to Sustainable Transitions in Agri-Food Systems? Social Sciences, 12(9), 478.

Oteros-Rozas, E., Ravera, F., & García-Llorente, M., 2019, How does agroecology contribute to the transitions towards social-ecological sustainability., Sustainability, 11(16), 4372.

Amoak, D., Luginaah, I., & McBean, G., 2022, Climate change, food security, and health: Harnessing agroecology to build climate-resilient communities., Sustainability, 14(21), 13954.

Gurr, G. M., Wratten, S. D., & Altieri, M. A., 2004, Ecological engineering for enhanced pest management: towards a rigorous science., Ecological engineering for pest management: Advances in habitat manipulation for arthropods, 2,219.

Fustec, J., Lesuffleur, F., Mahieu, S., & Cliquet, J. B., 2010, Nitrogen rhizodeposition of legumes. A review., Agronomy for sustainable development, 30, 57-66.


Vikash Yadav
SRF ICAR-Indian Institute of Soil and Water
Conservation (IISWC)
218, Kaulagarh Road Dehradun
Uttarakhand, India -248195
E-mail: vikashyadavbkt2000@gmail.com

Bankey Bihari
Principal Scientist (Agricultural Extension)
ICAR-Indian Institute of Soil and Water
Conservation (IISWC)
218, Kaulagarh Road Dehradun
Uttarakhand, India -248195


ಆಂಗ್ಲ ಮೂಲ : ಲೀಸಾ ಇಂಡಿಯಾ; ಸಂಪುಟ :೨೬; ಸಂಚಿಕೆ : ೨ ; ಜೂನ್ ೨೦‌೨೪

Recent Posts

ಮಹಿಳೆಯರ ನೇತೃತ್ವದ ಕೃಷಿ ಉದ್ಯಮಗಳು- ಸಿರಿಧಾನ್ಯಗಳ ಸಾಮರ್ಥ್ಯ ಪ್ರದರ್ಶನ

ಮಹಿಳೆಯರ ನೇತೃತ್ವದ ಕೃಷಿ ಉದ್ಯಮಗಳು- ಸಿರಿಧಾನ್ಯಗಳ ಸಾಮರ್ಥ್ಯ ಪ್ರದರ್ಶನ

ಒರಿಸ್ಸಾದಲ್ಲಿ ಸಿರಿಧಾನ್ಯಗಳ ಪುನರುಜ್ಜೀವನವು ಮಹಿಳಾ ಗುಂಪುಗಳಲ್ಲಿ ಆತ್ಮವಿಶ್ವಾಸವನ್ನು ತುಂಬಿದೆ. ಬಡತನ ಮತ್ತು ಅಪೌಷ್ಟಿಕತೆಯನ್ನು ಹೋಗಲಾಡಿಸಲು ಸಹಾಯ ಮಾಡಿದೆ. ಒರಿಸ್ಸಾ ಮಿಲ್ಲೆಟ್ಸ್ ಮಿಷನ್ ಮತ್ತು ಮಿಷನ್ ಶಕ್ತಿ ಇಲಾಖೆಗಳು ಒರಿಸ್ಸಾದಾದ್ಯಂತ WSHG ನೇತೃತ್ವದ ಸಿರಿಧಾನ್ಯ ಆಧಾರಿತ ಕೃಷಿ ಉದ್ಯಮಗಳನ್ನು ಯಶಸ್ವಿಯಾಗಿ ಉತ್ತೇಜಿಸುತ್ತಿವೆ. ಜೀವನೋಪಾಯವನ್ನು ಬಲಪಡಿಸುವುದರೊಂದಿಗೆ ಮನೆಯ ಆದಾಯವನ್ನು ಉತ್ತಮಗೊಳಿಸಿದೆ.

ಈಶಾನ್ಯ ಭಾರತದಲ್ಲಿ ಸಿರಿಧಾನ್ಯಗಳ ಪುನಶ್ಚೇತನ

ಈಶಾನ್ಯ ಭಾರತದಲ್ಲಿ ಸಿರಿಧಾನ್ಯಗಳ ಪುನಶ್ಚೇತನ

ಈಶಾನ್ಯ ಪ್ರದೇಶದ ಸಣ್ಣ ಹಿಡುವಳಿದಾರರು ತಮ್ಮ ಬೆಳೆ ಹಾಗೂ ಆಹಾರ ಪದ್ಧತಿಯಲ್ಲಿ ರಾಗಿಯನ್ನು ಪುನಶ್ಚೇತನಗೊಳಿಸಿದ್ದಾರೆ. ತಾಂತ್ರಿಕ ಮಾರ್ಗದರ್ಶನ ಮತ್ತು ಮೌಲ್ಯವರ್ಧನೆಯ ವಿಷಯದಲ್ಲಿ ಬೆಂಬಲ, ಮತ್ತು ಮಾರುಕಟ್ಟೆ ಸಂಪರ್ಕಗಳನ್ನು ಕಲ್ಪಿಸುವ ಮೂಲಕ ಈಶಾನ್ಯ ಭಾರತದ ಆಹಾರ ಮತ್ತು ಕೃಷಿ ವ್ಯವಸ್ಥೆಗಳಲ್ಲಿ ಸಿರಿಧಾನ್ಯಗಳನ್ನು ಮರಳಿ ತರುವಲ್ಲಿ ಪ್ರಮುಖ ಪಾತ್ರ ವಹಿಸಿದೆ.

ಕೃಷಿ ಜ್ಞಾನ ವಾಹನ-ಕೃಷಿ ತಂತ್ರಜ್ಞಾನವನ್ನು ರೈತರ ಮನೆ ಬಾಗಿಲಿಗೆ ತರುವುದು

ಕೃಷಿ ಜ್ಞಾನ ವಾಹನ-ಕೃಷಿ ತಂತ್ರಜ್ಞಾನವನ್ನು ರೈತರ ಮನೆ ಬಾಗಿಲಿಗೆ ತರುವುದು

ಕೃಷಿ ಜ್ಞಾನ ವಾಹನ ಉಪಕ್ರಮವು ರಾಜ್ಯದಲ್ಲಿ ಲಭ್ಯವಿರುವ ವಿಸ್ತರಣಾ ಸೇವೆಗಳನ್ನು ಗಮನಾರ್ಹವಾಗಿ ಹೆಚ್ಚಿಸಿದೆ. ಬಿಹಾರವು ಕೃಷಿ ಉತ್ಪಾದಕತೆಯನ್ನು ಹೆಚ್ಚಿಸುವ ಸಾಮರ್ಥ್ಯವನ್ನು ಹೊಂದಿದೆ. ರೈತರಿಗೆ ಆಧುನಿಕ ಕೃಷಿ ತಂತ್ರಗಳು ಮತ್ತು ತಜ್ಞರ ಮಾರ್ಗದರ್ಶನವನ್ನು ನೇರವಾಗಿ ಒದಗಿಸುವ ಮೂಲಕ, ಇದು ಅರ್ಥಪೂರ್ಣ ಪರಿಣಾಮವನ್ನು ಸೃಷ್ಟಿಸಲು ಸಜ್ಜಾಗಿದೆ.

YouTube
Instagram
WhatsApp