ಭತ್ತದ ನೇರ ಬಿತ್ತನೆ- ಭತ್ತದ ಕೃಷಿಯಲ್ಲಿ ಕ್ರಾಂತಿ


ಭತ್ತದ ನೇರ ಬಿತ್ತನೆಯಂತಹ ತಂತ್ರಜ್ಞಾನಗಳು ನೀರನ್ನು ಸಂರಕ್ಷಿಸಲು, ರೈತರ ಆದಾಯವನ್ನು ಸುಧಾರಿಸಲು ಮತ್ತು ಪರಿಸರ ಫಲಿತಾಂಶಗಳನ್ನು ಹೆಚ್ಚಿಸಲು ಪರಿವರ್ತನಾತ್ಮಕ ಅವಕಾಶವನ್ನು ಒದಗಿಸುತ್ತವೆ. ಬಲವಾದ ನೀತಿ ಬೆಂಬಲದೊಂದಿಗೆ ವಿವಿಧ ಸಂಸ್ಥೆಗಳ ಸಂಯೋಜಿತ ಪ್ರಯತ್ನಗಳೊಂದಿಗೆ, ತಂತ್ರಜ್ಞಾನವು ಭತ್ತದ ಕೃಷಿಯಲ್ಲಿ ಕ್ರಾಂತಿಯನ್ನುಂಟುಮಾಡಬಹುದು. ಹೆಚ್ಚುತ್ತಿರುವ ಜನಸಂಖ್ಯೆಗೆ ಆಹಾರ ಭದ್ರತೆಯನ್ನು ಖಚಿತಪಡಿಸುತ್ತದೆ.


ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ತಲುಪಲು ಭಾರತವು 2030 ರ ಗಡುವಿನತ್ತ ಸಾಗುತ್ತಿರುವಾಗ, ಕೃಷಿ ವಲಯವು ದೇಶದ ಕಾರ್ಯತಂತ್ರದ ಮುಖ್ಯ ಭಾಗವಾಗಿದೆ. ಕೃಷಿಯು ಭಾರತೀಯ ಆರ್ಥಿಕತೆಯ ಬೆನ್ನೆಲುಬಾಗಿದ್ದು, ಲಕ್ಷಾಂತರ ಜನರ ಜೀವನೋಪಾಯದ ಪ್ರಮುಖ ಮೂಲವಾಗಿದೆ. ಈ ವಲಯವು ಹಲವಾರು SDG ಗಳಲ್ಲಿ, ವಿಶೇಷವಾಗಿ ಶೂನ್ಯ ಹಸಿವು (ಗುರಿ 2) ಮತ್ತು ಜವಾಬ್ದಾರಿಯುತ ಬಳಕೆ ಮತ್ತು ಉತ್ಪಾದನೆ (ಗುರಿ 12)ಯಂತಹ ಗುರಿಗಳಲ್ಲಿ ಪ್ರಗತಿಯನ್ನು ಸಾಧಿಸುವ ಅಗಾಧ ಸಾಮರ್ಥ್ಯವನ್ನು ಹೊಂದಿದೆ. ಹಾಗಾಗಿ, ಕೃಷಿ ವಲಯದಲ್ಲಿನ ತಾಂತ್ರಿಕ ಮಧ್ಯಸ್ಥಿಕೆಗಳು ಈ ಗುರಿಗಳನ್ನು ಸಾಧಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ.

ಜಾಗತಿಕವಾಗಿ ಸಿಹಿನೀರಿನ ಬಳಕೆಯಲ್ಲಿ ಕೃಷಿಯು ಶೇ. 70 ರಷ್ಟು ಪಾಲು ಹೊಂದಿದೆ. ಭಾರತವು ಜಾಗತಿಕವಾಗಿ ಅತಿದೊಡ್ಡ ಕೃಷಿ ಉತ್ಪಾದಕ ದೇಶಗಳಲ್ಲಿ ಒಂದಾಗಿದೆ. ನೀರು ಸೇರಿದಂತೆ ಕೃಷಿ ಒಳಸುರಿಯುವಿಕೆಗಳಿಗೆ ಸಂಬಂಧಿಸಿದಂತೆ ಮುಖ್ಯ ಗ್ರಾಹಕ ದೇಶವಾಗಿದೆ. ಎಷ್ಟರಮಟ್ಟಿಗೆ ಅಂದರೆ, ಭಾರತದಲ್ಲಿ ಕೃಷಿಯು ಸುಮಾರು 80% ರಷ್ಟು ಸಿಹಿನೀರನ್ನು ಬಳಸುತ್ತದೆ. ವಾರ್ಷಿಕ 245 ಶತಕೋಟಿ ಘನ ಮೀಟರ್‌ಗಳಿಗಿಂತ ಹೆಚ್ಚು ಅಂತರ್ಜಲ ಬಳಕೆಯಾಗುತ್ತಿದ್ದು, ಇದರಲ್ಲಿ ಸುಮಾರು 90%ರಷ್ಟು ಕೃಷಿಗಾಗಿ ಬಳಸಲಾಗುತ್ತದೆ. ದೇಶದ ಪ್ರಮುಖ ಕೃಷಿ ಪ್ರದೇಶಗಳಲ್ಲಿ ಅಂತರ್ಜಲ ಮಟ್ಟ ಕುಸಿಯುತ್ತಿದ್ದು, ನೀರಿನ ಕೊರತೆ ಹೆಚ್ಚುತ್ತಿರುವಾಗ, ಈ ರೀತಿಯ ನೀರಿನ ಹೆಚ್ಚು ಬಳಕೆ ಸಮರ್ಥನೀಯವಲ್ಲ.

ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆಯು (FAO) 2050 ರ ವೇಳೆಗೆ, ಬೆಳೆಯುತ್ತಿರುವ ಜಾಗತಿಕ ಆಹಾರ ಬೇಡಿಕೆಯನ್ನು ಪೂರೈಸಲು ರೈತರಿಗೆ ಹೆಚ್ಚುವರಿಯಾಗಿ ಶೇ. 19 ರಷ್ಟು ನೀರು ಬೇಕಾಗುತ್ತದೆ ಎಂದು ಅಂದಾಜಿಸಿದೆ. ಈಗಾಗಲೇ ನೀರಿನ ಕೊರತೆಯನ್ನು ಎದುರಿಸುತ್ತಿರುವ ಪ್ರದೇಶಗಳಲ್ಲೇ ಬೇಡಿಕೆ ಹೆಚ್ಚಿರುತ್ತದೆ. ನೀರಿನ ಬಿಕ್ಕಟ್ಟು ಹೆಚ್ಚುವುದನ್ನು ತಡೆಯಲು ಸೂಕ್ತ ನೀರಿನ ಬಳಕೆಯ ಪದ್ಧತಿಗಳಿಗೆ ಬದಲಾಗುವುದು ಅನಿವಾರ್ಯವಾಗಿದೆ.

ಭಾರತವು ಈ ಸವಾಲನ್ನು ಗುರುತಿಸಿದೆ. ದಕ್ಷ ನೀರಿನ ಬಳಕೆಯನ್ನು ಉತ್ತೇಜಿಸುವುದು ಸರ್ಕಾರಗಳ ಮೊದಲ ಆದ್ಯತೆಯಾಗಿದೆ. 2015 ರಲ್ಲಿ, ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ (PMKSY) ಯನ್ನು ‘ಹರ್ ಖೇತ್ ಕೋ ಪಾನಿ’ (ಪ್ರತಿ ಜಮೀನಿಗೆ ನೀರು) ದೃಷ್ಟಿಯೊಂದಿಗೆ ಪ್ರಾರಂಭಿಸಲಾಯಿತು. ಈ ಉಪಕ್ರಮವು ʼಹನಿ ಹನಿ ನೀರು ಹೆಚ್ಚಿನ ಬೆಳೆ’ಯ ಮಹತ್ವವನ್ನು ಒತ್ತಿಹೇಳುತ್ತದೆ. ಕೃಷಿ ಉತ್ಪಾದಕತೆಯನ್ನು ಹೆಚ್ಚಿಸಲು ಸೂಕ್ತ ನೀರಿನ ಅಳವಡಿಕೆಯ ಅಗತ್ಯವನ್ನು ಒತ್ತಿ ಹೇಳುತ್ತದೆ.

ನೀರು ನಿರ್ವಹಣೆಯಲ್ಲಿನ ಸವಾಲುಗಳು

ಅಕ್ಕಿ ವಿಶ್ವದ ಪ್ರಮುಖ ಆಹಾರವಾಗಿದ್ದು, ಜಾಗತಿಕವಾಗಿ ಹೆಚ್ಚುತ್ತಿರುವ ಬೇಡಿಕೆಯನ್ನು ಗಮನಿಸಿದರೆ, ಮುಂದಿನ 25 ವರ್ಷಗಳಲ್ಲಿ ಅಕ್ಕಿ ಉತ್ಪಾದನೆಯು ಶೇ. 25 ರಷ್ಟು ಹೆಚ್ಚಾಗುವ ನಿರೀಕ್ಷೆಯಿದೆ. ಅಕ್ಕಿ ಉತ್ಪಾದನೆಯು ವಿಶೇಷವಾಗಿ ನೀರಿನ ಮೇಲೆ ಹೆಚ್ಚು ಅವಲಂಬಿತವಾಗಿದ್ದು, ಏಷ್ಯಾದಲ್ಲಿ ಬಳಸಲಾಗುವ ನೀರಿನ ಪ್ರಮಾಣವು ಸರಿಸುಮಾರು 50% ಮತ್ತು ಜಾಗತಿಕ ನೀರಿನ 34-43% ರಷ್ಟಿದೆ.

ಅಂತರರಾಷ್ಟ್ರೀಯ ಅಕ್ಕಿ ಸಂಶೋಧನಾ ಸಂಸ್ಥೆಯ ಪ್ರಕಾರ, ಭಾರತದಲ್ಲಿ ಕೇವಲ 1 ಕೆಜಿ ಅಕ್ಕಿ ಉತ್ಪಾದಿಸಲು ಸುಮಾರು 3,000 ಲೀಟರ್ ನೀರು ಬೇಕಾಗುತ್ತದೆ. ಇದಕ್ಕೆ ಮೂಲಕಾರಣ ಸಾಂಪ್ರದಾಯಿಕ ಭತ್ತದ ಕೃಷಿ. ಈ ವಿಧಾನದಲ್ಲಿ ಸಸಿಗಳನ್ನು ಪ್ರವಾಹಕ್ಕೆ ಸಿಲುಕಿದ ಗದ್ದೆಗಳಿಗೆ ನಾಟಿ ಮಾಡಲಾಗುತ್ತದೆ. ಕೆಸರು, ನೀರು ಸಆವಿಯಾಗುವಿಕೆ ಮತ್ತು ನೀರು ನುಗ್ಗುವಿಕೆಯಿಂದಾಗಿ ನೀರು ಗಮನಾರ್ಹ ಪ್ರಮಾಣದಲ್ಲಿ ನಷ್ಟವಾಗುತ್ತದೆ.

ಇದರೊಂದಿಗೆ, 2018 ರ ನೀರಿನ ಉತ್ಪಾದಕತೆಯ ಮ್ಯಾಪಿಂಗ್‌ – ಪ್ರಮುಖ ಭಾರತೀಯ ಬೆಳೆಗಳ ಅಧ್ಯಯನವು ಭಾರತದಲ್ಲಿ ಭತ್ತದ ಬೆಳೆಯ ಮಾದರಿಗಳು ಲಭ್ಯವಿರುವ ನೀರಾವರಿ ಸೌಲಭ್ಯಗಳಿಗೆ ಅನುಗುಣವಾಗಿರುವುದಿಲ್ಲ. ಇದು ಅಸಮರ್ಥ ನೀರಿನ ಬಳಕೆಗೆ ಕಾರಣವಾಗುತ್ತದೆ ಎಂದು ಕಂಡುಹಿಡಿದಿದೆ. ಉದಾಹರಣೆಗೆ, ಪಂಜಾಬಿನಲ್ಲಿ ಅತಿಹೆಚ್ಚು ಭತ್ತದ ಗದ್ದೆಗಳಿದ್ದರೂ ಅಲ್ಲಿ ನೀರಾವರಿ ಕೊರತೆಯಿದೆ. ಮತ್ತೊಂದೆಡೆ ಛತ್ತೀಸ್‌ಗಡ್‌ ಮತ್ತು ಜಾರ್ಖಂಡ್‌ನಂತಹ ರಾಜ್ಯಗಳಲ್ಲಿ ನೀರು ಇದ್ದರೂ ಕೂಡ ಅದು ಹೆಚ್ಚು ಭೂಮಿಯನ್ನು ಒಳಗೊಳ್ಳಲು ಸಾಧ್ಯವಾಗುತ್ತಿಲ್ಲ.

ಪಂಜಾಬ್‌ ಮತ್ತು ಹರಿಯಾಣ ಭಾರತದ ಅಕ್ಕಿ ಉತ್ಪಾದನೆಗೆ ಕೊಡುಗೆ ನೀಡುವ ಮುಖ್ಯ ರಾಜ್ಯಗಳಾಗಿದ್ದರೂ ಕೂಡ ನೀರಾವರಿ ಕೊರತೆಯಿಂದಾಗಿ ಸವಾಲುಗಳನ್ನು ಎದುರಿಸುತ್ತಿವೆ. ಈ ರಾಜ್ಯಗಳಲ್ಲಿ, ನೀರಿನ ಪ್ರತಿ ಘನ ಮೀಟರ್‌ಗೆ ಸುಮಾರು 0.22 ಕೆಜಿ ಅಕ್ಕಿ ಉತ್ಪಾದಿಸಲಾಗುತ್ತದೆ. ಇದು ನೀರಿನ ಅಸಮರ್ಥ ಬಳಕೆಯನ್ನು ಸೂಚಿಸುತ್ತದೆ. ಈ ಅಸಮರ್ಥತೆಯು ತೀವ್ರ ಅಂತರ್ಜಲ ಕುಸಿತಕ್ಕೆ ಕಾರಣವಾಗಿದೆ. ಉದಾಹರಣೆಗೆ, ಹರಿಯಾಣದಲ್ಲಿ, ಭತ್ತ ಉತ್ಪಾದಿಸುವ ಜಿಲ್ಲೆಗಳಲ್ಲಿ 2000 ಮತ್ತು 2021 ರ ನಡುವೆ ಸುಮಾರು 13 ಮೀಟರ್‌ಗಳಷ್ಟು ಅಂತರ್ಜಲ ಮಟ್ಟ ಕುಸಿದಿದೆ.

ಪಂಜಾಬ್ ಮತ್ತು ಹರಿಯಾಣದಲ್ಲಿ ನೀರಾವರಿಗೆ ನೀರಿನ ಉತ್ಪಾದಕತೆ ಕಡಿಮೆ ಇರುವುದು ಮತ್ತು ಭತ್ತದ ಕೃಷಿಗೆ ಅಂತರ್ಜಲದ ಮೇಲಿನ ಅತಿಯಾದ ಅವಲಂಬನೆ ಕೃಷಿಯ ಸುಸ್ಥಿರತೆಗೆ ಗಂಭೀರ ಅಪಾಯವನ್ನುಂಟುಮಾಡುತ್ತದೆ. ಈ ತಪ್ಪುಗಳು ಭಾರತದ ಭತ್ತದ ಕೃಷಿ ಪದ್ಧತಿಗಳಿಗೆ ತಾಂತ್ರಿಕ ಹಸ್ತಕ್ಷೇಪದ ಅಗತ್ಯವಿದೆ ಎನ್ನುವುದನ್ನು ಸೂಚಿಸುತ್ತದೆ. ಅದರಲ್ಲೂ ಹೆಚ್ಚುತ್ತಿರುವ ನೀರಿನ ಸಂಪನ್ಮೂಲನಗಳ ಕೊರತೆಯು ಇದನ್ನೇ ಹೇಳುತ್ತಿದೆ. ಸುಸ್ಥಿರ ಕೃಷಿ ಉದ್ದೇಶಗಳನ್ನು ಪೂರೈಸಲು – ನೀರಿನ ಬಳಕೆಯನ್ನು ಕಡಿಮೆ ಮಾಡಲು ಮತ್ತು ಬೆಳೆ ಇಳುವರಿಯನ್ನು ಹೆಚ್ಚಿಸಲು ಅನುವು ಮಾಡಿಕೊಡುವ ನವೀನ ತಂತ್ರಜ್ಞಾನವನ್ನು ಅಕ್ಕಿ ಉತ್ಪಾದನೆಗೆ ಅಳವಡಿಸುವುದು ಅತ್ಯಗತ್ಯ.

ಭತ್ತದ ನೇರ ಬಿತ್ತನೆ(DSR): ನೀರಿನ ಸಂರಕ್ಷಣೆಯಲ್ಲಿ ಒಂದು ಮಹತ್ವದ ಬದಲಾವಣೆ

 ಅಂತಹ ಒಂದು ಪ್ರಮುಖ ತಂತ್ರಜ್ಞಾನವೆಂದರೆ ಭತ್ತದ ನೇರ ಬಿತ್ತನೆ (DSR), ಇದು ಹೆಚ್ಚು ಬಳಕೆಯಾಗದ, ಹಳೆಯ ತಂತ್ರವಾಗಿದ್ದು, ಇದರಲ್ಲಿ ಸಸಿಗಳನ್ನು ನಾಟಿ ಮಾಡುವ ಬದಲು ಗದ್ದೆಗೆ ನೇರವಾಗಿ ಭತ್ತದ ಬೀಜಗಳನ್ನು ಬಿತ್ತಲಾಗುತ್ತದೆ. ಡಿಎಸ್ಆರ್ ನೀರನ್ನು ಉಳಿಸುತ್ತದೆ, ಮೀಥೇನ್ ಹೊರಸೂಸುವಿಕೆಯನ್ನು ಮತ್ತು ಒಳಸುರಿಯುವಿಕೆಯ ವೆಚ್ಚವನ್ನು ಕಡಿಮೆ ಮಾಡುತ್ತದೆ.

ಡಿಎಸ್ಆರ್ ನಲ್ಲಿ  ಎರಡು ವಿಧಾನಗಳಿವೆ: ಮಳೆಯಾಶ್ರಿತ ಮತ್ತು ಆಳವಾದ ನೀರಿನ ಪರಿಸರ ವ್ಯವಸ್ಥೆಗಳಿಗೆ ಸೂಕ್ತವಾದ ಒಣ ನೇರ ಬಿತ್ತನೆ (ಡಿಡಿಎಸ್ಆರ್), ಮತ್ತು ನೀರಾವರಿ ಪ್ರದೇಶಗಳಲ್ಲಿ ಮೊಳಕೆಯೊಡೆಯುವ ಮೊದಲು ಬೀಜಗಳನ್ನು ಕೆಸರು ಮಣ್ಣಿನಲ್ಲಿ ನೇರವಾಗಿ ಬಿತ್ತುವ ತೇವ ಬಿತ್ತನೆ.

DSR ಪರಿಣಾಮಕಾರಿ ಬೀಜ ಬಿತ್ತನೆಗಾಗಿ ನಿಖರ ಸಾಧನಗಳನ್ನು ಬಳಸುತ್ತದೆ. ಇದರಿಂದಾಗಿ ಕೂಲಿಯಾಳುಗಳ ಅಗತ್ಯ ಕಡಿಮೆಯಾಗುತ್ತದೆ. ಈ ಪ್ರಕ್ರಿಯೆಯು ಉಳುಮೆ, ಲಘು ನೀರಾವರಿ ಮತ್ತು ನೆಲಸಮಗೊಳಿಸುವಿಕೆ (ಸಾಮಾನ್ಯವಾಗಿ ಲೇಸರ್ ತಂತ್ರಜ್ಞಾನದೊಂದಿಗೆ) ಮೂಲಕ ಭೂಮಿಯನ್ನು ಸಿದ್ಧಪಡಿಸುವುದನ್ನು ಒಳಗೊಂಡಿರುತ್ತದೆ. ನಂತರ ಅಲ್ಪಾವಧಿಗೆ ಬೀಜಗಳನ್ನು ಸೂಕ್ತ ಅಂತರದಲ್ಲಿ, ಆಳದಲ್ಲಿ ಬಿತ್ತಲಾಗುತ್ತದೆ. ಬಿತ್ತನೆ ಮಾಡಿದ 8-10 ದಿನಗಳ ನಂತರ ನೀರನ್ನು ನೀಡಲಾಗುತ್ತದೆ. ಮಣ್ಣಿನ ಪ್ರಕಾರವನ್ನು ಅವಲಂಬಿಸಿ ವಾರಕ್ಕೊಮ್ಮೆ ಇದು ಮುಂದುವರಿಯುತ್ತದೆ.

ಅಧ್ಯಯನಗಳು DSR ನೀರಿನ ಬಳಕೆಯನ್ನು 30% ವರೆಗೆ ಕಡಿಮೆ ಮಾಡುತ್ತದೆ. ಕೃಷಿ ವೆಚ್ಚವನ್ನು ತಗ್ಗಿಸಿ ಕೂಲಿಯಾಳುಗಳ ಅವಶ್ಯಕತೆಗಳನ್ನು ಕಡಿಮೆ ಮಾಡುತ್ತದೆ. ಕೆಸರುಗದ್ದೆಯ ಅಡ್ಡಪರಿಣಾಮಗಳನ್ನು ತಪ್ಪಿಸುವ ಮೂಲಕ ಮತ್ತು ಸುಸ್ಥಿರ ಬೆಳೆ ಆವರ್ತನವನ್ನು ಬೆಂಬಲಿಸುವ ಮೂಲಕ ಮಣ್ಣಿನ ಆರೋಗ್ಯವನ್ನು ಕಾಪಾಡುತ್ತದೆ ಎಂದು ತೋರಿಸಿವೆ.

ಅಳವಡಿಕೆಗೆ ಇರುವ ಅಡೆತಡೆಗಳು

ಭತ್ತದ ನೇರ ಬಿತ್ತನೆ (DSR) ಯಿಂದ ಹಲವು ಲಾಭಗಳಿದ್ದರೂ, ಹಲವಾರು ಸವಾಲುಗಳಿಂದಾಗಿ ಭಾರತದಲ್ಲಿ ಇದರ ಅಳವಡಿಕೆಯು ತಡವಾಗುತ್ತಿದೆ. ತಾಂತ್ರಿಕ ಜ್ಞಾನದ ಕೊರತೆ ಮತ್ತು ಲೇಸರ್ ಲೆವೆಲರ್‌ಗಳು ಮತ್ತು ಸೀಡ್ ಡ್ರಿಲ್‌ಗಳಂತಹ ಸೂಕ್ತ ಉಪಕರಣಗಳ ಸೀಮಿತ ಲಭ್ಯತೆಯು ಇದಕ್ಕೆ ಬಹುಮುಖ್ಯ ತಡೆಯಾಗಿದೆ. ಇವು ಯಶಸ್ವಿ ಡಿಎಸ್‌ಆರ್ ಅನುಷ್ಠಾನಕ್ಕೆ ಅತ್ಯಗತ್ಯ. ಇದೇ ಕಾರಣದಿಂದಾಗಿ ಹಲವು ರೈತರಿಗೆ ಅದರಲ್ಲೂ ಸಣ್ಣ ಹಿಡುವಳಿದಾರರಿಗೆ ಸಾಂಪ್ರದಾಯಿಕ ಪದ್ಧತಿಗಳಿಂದ ಬದಲಾಗುವುದು ಕಷ್ಟವಾಗುತ್ತದೆ.

ಕಳೆ ನಿರ್ವಹಣೆ ಮತ್ತೊಂದು ಮುಖ್ಯ ಸಮಸ್ಯೆಯಾಗಿದೆ. DSR ಗದ್ದೆಗಳು ರೋಗಭಾದೆಗೆ ತುತ್ತಾಗುವ ಅಪಾಯವಿರುವುದರಿಂದ ಇಳುವರಿಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು. ಈ ಸಮಸ್ಯೆಯನ್ನು ಪರಿಹರಿಸಲು ರೈತರಿಗೆ ಸೂಕ್ತ ತರಬೇತಿ ಹಾಗೂ ಸುಸ್ಥಿರ ಕಳೆ ನಿಯಂತ್ರಣ ಕ್ರಮಗಳ ಅನುಷ್ಠಾನಗೊಳಿಸಬೇಕಿದೆ. ಇದರಿಂದ ಹಾನಿಕಾರಕ ರಾಸಾಯನಿಕಗಳ ಮೇಲಿನ ಅವಲಂಬನೆಯನ್ನು ಕಡಿಮೆಗೊಳಿಸಬಹುದು.

DSRನ ಬಗ್ಗೆ ವಿಶ್ವಾಸ ಮೂಡಿಸಲು ಇದರಿಂದಾಗುವ ಉಳಿತಾಯ ಹಾಗೂ ಲಾಭಗಳ ಪ್ರಮಾಣ ಎಷ್ಟೆಂಬುದನ್ನು ರೈತರಿಗೆ ತಿಳಿಸಿ ವಿಶ್ವಾಸ ಮೂಡಿಸುವುದು ಅಗತ್ಯ.  ರೈತರು ತಮ್ಮ ಹಿಂಜರಿಕೆಯನ್ನು ತೊರೆಯಲು ಕಡಿಮೆ ನೀರಿನ ಬಳಕೆ, ಕೂಲಿಯಾಳುಗಳ ವೆಚ್ಚದಲ್ಲಿ ಕಡಿತ, ಸುಧಾರಿತ ಮಣ್ಣಿನ ಆರೋಗ್ಯ ಇವುಗಳ ಕುರಿತು ಪುರಾವೆ ಬೇಕಾಗುತ್ತದೆ.

DSRನ ಯಶಸ್ವಿ ಅನುಷ್ಠಾನಕ್ಕೆ ಜಾಗೃತಿ ಮತ್ತು ಸಾಮರ್ಥ್ಯ ವೃದ್ಧಿ ಬಹಳ ಮುಖ್ಯ. ಗಟ್ಟಿ ಪುರಾವೆಗಳಿಲ್ಲದೆ ಹೊಸ ವಿಧಾನಗಳನ್ನು ಅಳವಡಿಸಿಕೊಳ್ಳಲು ಹಲವು ರೈತರು ಹಿಂಜರಿಯುತ್ತಾರೆ. ಕೃಷಿ ವಿಜ್ಞಾನ ಕೇಂದ್ರಗಳು (ಕೆವಿಕೆಗಳು) ಶೈಕ್ಷಣಿಕ ಅಭಿಯಾನಗಳು ಮತ್ತು ಕ್ಷೇತ್ರ ಪ್ರದರ್ಶನಗಳನ್ನು ಆಯೋಜಿಸುವ ಮೂಲಕ ಪ್ರಮುಖ ಪಾತ್ರ ವಹಿಸಬಹುದು. ಡಿಎಸ್ಆರ್ ನಂತಹ ಸುಸ್ಥಿರ ಪದ್ಧತಿಗಳ ಆರ್ಥಿಕ ಮತ್ತು ಪರಿಸರ ಪ್ರಯೋಜನಗಳನ್ನು ರೈತರಿಗೆ ಅರ್ಥಮಾಡಿಸಬಹುದು.

ರೂಟ್ಸ್ ಫೌಂಡೇಶನ್: DSR ಮೂಲಕ ರೈತರನ್ನು ಸಬಲೀಕರಣಗೊಳಿಸುವುದು

ಫಾರ್ಲೆನ್ಸ್ ಗುಂಪಿನ ಅಡಿಯಲ್ಲಿರುವ ಸಾಮಾಜಿಕ ಉದ್ಯಮವಾದ ರೂಟ್ಸ್ ಫೌಂಡೇಶನ್, ಭಾರತದಲ್ಲಿ DSR ಮೂಲಕ ಸುಸ್ಥಿರ ಅಕ್ಕಿ ಉತ್ಪಾದನೆಯನ್ನು ಉತ್ತೇಜಿಸುವಲ್ಲಿ ಮುಂಚೂಣಿಯಲ್ಲಿದೆ. ಕಳೆದ 13 ವರ್ಷಗಳಿಂದ, ಫೌಂಡೇಶನ್ ಸುಸ್ಥಿರ ಕೃಷಿ ಪದ್ಧತಿಗಳನ್ನು ರೈತರು ಅಳವಡಿಸಿಕೊಳ್ಳುವಂತೆ ಮಾಡುವತ್ತ ಶ್ರದ್ಧೆಯಿಂದ ಕೆಲಸ ಮಾಡಿದೆ. ಇದರ ಪ್ರಮುಖ ಕಾರ್ಯಕ್ರಮವಾದ ‘ಭತ್ತದ ನೇರ ಬಿತ್ತನೆ ಮೂಲಕ ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆಯೊಂದಿಗೆ ಸುಸ್ಥಿರ ಅಕ್ಕಿ ಉತ್ಪಾದನೆ’, ಪಂಜಾಬ್, ಹರಿಯಾಣ, ಛತ್ತೀಸ್‌ಗಢ ಮತ್ತು ತೆಲಂಗಾಣ ಸೇರಿದಂತೆ ಭಾರತದ 10 ರಾಜ್ಯಗಳನ್ನು ಒಳಗೊಂಡಿದೆ.

ಡಿಎಸ್ಆರ್ ಅಳವಡಿಕೆಗೆ ಬಹುಮುಖಿ ಕಾರ್ಯಕ್ರಮ ವಿಧಾನ

ಡಿಎಸ್ಆರ್ ತಂತ್ರಗಳನ್ನು ಅಳವಡಿಸಿಕೊಳ್ಳಲು ರೈತರಿಗೆ ತರಬೇತಿ, ತಾಂತ್ರಿಕ ಬೆಂಬಲ ಮತ್ತು ನಿರಂತರ ಮೇಲ್ವಿಚಾರಣೆಯನ್ನು ಒಳಗೊಂಡಿರುವ ಸಮಗ್ರ ವಿಧಾನದ ಅಗತ್ಯವಿದೆ. ರೈತರು ಡಿಎಸ್ಆರ್ ಅನ್ನು ಪರಿಣಾಮಕಾರಿಯಾಗಿ ಅಳವಡಿಸಿಕೊಳ್ಳುವುದನ್ನು ಖಚಿತಪಡಿಸಿಕೊಳ್ಳಲು ರೂಟ್ಸ್ ಫೌಂಡೇಶನ್ ಸಮಗ್ರ ಕಾರ್ಯತಂತ್ರವನ್ನು ಜಾರಿಗೆ ತಂದಿದೆ. ಇದರಿಂದಾಗಿ ನೀರಿನ ಸಮರ್ಪಕ ಬಳಕೆಯ ಹೆಚ್ಚಳ, ಕೂಲಿಯಾಳುಗಳ ವೆಚ್ಚದಲ್ಲಿ ಕಡಿತ ಮತ್ತು ಭತ್ತದ ಕೃಷಿಯಲ್ಲಿ ಸುಸ್ಥಿರತೆ ಸುಧಾರಣೆಯಾಗುವಂತಹ ಪ್ರಯೋಜನಗಳು ದಕ್ಕಿವೆ.

  • ರೈತರ ತರಬೇತಿ ಮತ್ತು ಪ್ರಾತ್ಯಕ್ಷಿಕೆಗಳು

ರೂಟ್ಸ್ ಫೌಂಡೇಶನ್, DSR ನ ಸೈದ್ಧಾಂತಿಕ ಮತ್ತು ಪ್ರಾಯೋಗಿಕ ಅಂಶಗಳ ಬಗ್ಗೆ ರೈತರಿಗೆ ಶಿಕ್ಷಣ ನೀಡಲು ಗುಂಪು ಚರ್ಚೆಗಳು, ದೊಡ್ಡ ಪ್ರಮಾಣದ ತರಬೇತಿ ಕಾರ್ಯಕ್ರಮಗಳು ಮತ್ತು ವೈಯುಕ್ತಿಕ ಸಂವಾದ ವಿಧಾನಗಳನ್ನು ಬಳಸುತ್ತದೆ. ಕ್ಷೇತ್ರ ಪ್ರಾತ್ಯಕ್ಷಿಕೆಗಳು ಪ್ರಾಯೋಗಿಕ ಅನುಭವವನ್ನು ಒದಗಿಸುತ್ತವೆ. ಯಂತ್ರೋಪಕರಣಗಳು ಮತ್ತು ತಂತ್ರಗಳ ಬಳಕೆಯನ್ನು ತೋರಿಸುತ್ತವೆ. ಸಾಂಪ್ರದಾಯಿಕ ಮತ್ತು DSR ನಾಟಿ ವಿಧಾನಗಳ ನಡುವಿನ ವ್ಯತ್ಯಾಸಗಳನ್ನು ಎತ್ತಿ ತೋರಿಸುತ್ತವೆ.

  • ತಾಂತ್ರಿಕ ಬೆಂಬಲ

ಸಂಪನ್ಮೂಲ ಸಂಬಂಧಿ ಅಡೆತಡೆಗಳನ್ನು ನಿವಾರಿಸಲು, ಈ ಕಾರ್ಯಕ್ರಮವು ರೈತರಿಗೆ ಬೀಜ ಯಂತ್ರಗಳು, ಕಳೆ ನಿರ್ವಹಣಾ ಸಾಧನಗಳು ಮತ್ತು ನೀರಾವರಿ ವ್ಯವಸ್ಥೆಗಳು ಸೇರಿದಂತೆ ಸುಧಾರಿತ ಯಂತ್ರೋಪಕರಣಗಳನ್ನು ಹೊಂದಲು ಸಹಾಯ ಮಾಡುತ್ತದೆ. ಈ ಉಪಕರಣಗಳ ಕಾರ್ಯಾಚರಣೆ, ನಿರ್ವಹಣೆ ಮತ್ತು ದುರಸ್ತಿ ಕುರಿತು ತರಬೇತಿಯನ್ನು ಸಹ ನೀಡಲಾಗುತ್ತದೆ. ರೈತರು ತಾಂತ್ರಿಕ ಸವಾಲುಗಳನ್ನು ನಿಭಾಯಿಸಲು ಸಾಧ್ಯವಾಗುವಂತೆ ಸಜ್ಜುಗೊಳಿಸುತ್ತದೆ.

ರೂಟ್ಸ್ ಫೌಂಡೇಶನ್ ಪೈ ಇಂಡಸ್ಟ್ರೀಸ್‌ನಿಂದ EKETSU ಸ್ಪ್ರೇ ಸಿಂಪಡಣೆಯಂತಹ ಹೊಸ ತಂತ್ರಜ್ಞಾನಗಳನ್ನು ಬಳಸುತ್ತಿದೆ. ಇದು DSR ವ್ಯವಸ್ಥೆಯಲ್ಲಿ ಇಳುವರಿ ನಷ್ಟವನ್ನು ಕಡಿಮೆ ಮಾಡಲು ವಿನ್ಯಾಸಗೊಳಿಸಲಾದ ಕಳೆನಾಶಕವಾಗಿದೆ. ಬಿಸ್ಪೈರಿಬಾಕ್ ಸೋಡಿಯಂ, ಕ್ಲೋರಿಮುರಾನ್ ಈಥೈಲ್ ಮತ್ತು ಮೆಟ್ಸಲ್ಫ್ಯೂರಾನ್ ಮೀಥೈಲ್ ಅನ್ನು ಒಳಗೊಂಡಿರುವ ಈ ತಂತ್ರಜ್ಞಾನವು ಕಳೆಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಸಹಾಯ ಮಾಡುತ್ತದೆ ಹಾಗೂ ಇಳುವರಿಯನ್ನು ಸುಧಾರಿಸುತ್ತದೆ.

  • ಮೇಲ್ವಿಚಾರಣೆ ಹಾಗೂ ನಿರಂತರ ಮಾರ್ಗದರ್ಶನ ಬೆಂಬಲ

ರೂಟ್ಸ್ ಫೌಂಡೇಶನ್ ರೈತರಿಗೆ ನಿಯಮಿತವಾಗಿ ಕ್ಷೇತ್ರ ಅಧಿಕಾರಿಗಳನ್ನು ಭೇಟಿಯಾಗುವ ಅವಕಾಶ ಮಾಡುವ ಮೂಲಕ ನಿರಂತರ ಬೆಂಬಲವನ್ನು ಖಚಿತಪಡಿಸುತ್ತದೆ. ನೀರಾವರಿ ಮತ್ತು ಕಳೆ ನಿಯಂತ್ರಣದ ಕುರಿತು ನೈಜ-ಸಮಯದಲ್ಲಿ ಸಮಸ್ಯೆ ನಿವಾರಣೆ, ಮಾರ್ಗದರ್ಶನವನ್ನು ನೀಡುತ್ತದೆ. ಈ ಸ್ಥಿರವಾದ ಬೆಂಬಲವು ರೈತರು ತಮ್ಮ DSR ಅಭ್ಯಾಸಗಳನ್ನು ಪರಿಷ್ಕರಿಸಿಕೊಳ್ಳಲು, ಸವಾಲುಗಳನ್ನು ಎದುರಿಸಲು ಮತ್ತು ಸುಸ್ಥಿರ ಕೃಷಿ ಗುರಿಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲು ಸಹಾಯ ಮಾಡುತ್ತದೆ.

ತರಬೇತಿ, ತಂತ್ರಜ್ಞಾನ ಮತ್ತು ನಿರಂತರ ಬೆಂಬಲವನ್ನು ನೀಡುವ ಮೂಲಕ, ರೂಟ್ಸ್ ಫೌಂಡೇಶನ್ ಬಲಿಷ್ಠ ಪರಿಸರ ವ್ಯವಸ್ಥೆಯನ್ನು ನಿರ್ಮಿಸಲು ಪ್ರಯತ್ನಿಸಿದೆ. ಇದು ರೈತರು DSR ಗೆ ಯಶಸ್ವಿಯಾಗಿ ಬದಲಾಗಲು ಅನುವು ಮಾಡಿಕೊಡುತ್ತದೆ. ಇದು ಭತ್ತದ ಕೃಷಿಯಲ್ಲಿ ದೀರ್ಘಕಾಲೀನ ಸುಸ್ಥಿರತೆಯನ್ನು ಉತ್ತೇಜಿಸುತ್ತದೆ.

ಸ್ಪಷ್ಟ ಫಲಿತಾಂಶಗಳು

ಈ ಪ್ರತಿಷ್ಠಾನದ ಪ್ರಯತ್ನಗಳು, ವಿಶೇಷವಾಗಿ ಪಂಜಾಬ್ ಮತ್ತು ಹರಿಯಾಣದಲ್ಲಿ, ನೀರಿನ ಸಂರಕ್ಷಣೆ, ಆರ್ಥಿಕ ಪ್ರಯೋಜನಗಳು ಮತ್ತು ಪರಿಸರ ಸುಸ್ಥಿರತೆಯ ವಿಷಯದಲ್ಲಿ ಗಮನಾರ್ಹ ಫಲಿತಾಂಶಗಳಿಗೆ ಕಾರಣವಾಗಿದೆ. ಇಲ್ಲಿಯವರೆಗೆ, 10 ಲಕ್ಷಕ್ಕೂ ಹೆಚ್ಚು ರೈತರಿಗೆ DSR ನ ಪ್ರಯೋಜನಗಳ ಬಗ್ಗೆ ಅರಿವು ಮೂಡಿಸಲಾಗಿದೆ. 5 ಲಕ್ಷಕ್ಕೂ ಹೆಚ್ಚು ರೈತರಿಗೆ 2,000+ ಪ್ರಾತ್ಯಕ್ಷಿಕೆ ಸಾಕಣೆ ಕೇಂದ್ರಗಳ ಮೂಲಕ ನೇರವಾಗಿ ತರಬೇತಿ ನೀಡಲಾಗಿದೆ. ತರಬೇತಿ ಕಾರ್ಯಕ್ರಮಗಳಲ್ಲಿ 2,000 ಕ್ಕೂ ಹೆಚ್ಚು ಮಹಿಳೆಯರನ್ನು ಒಳಗೊಂಡಿರುವುದು, ಆ ಮೂಲಕ ಕೃಷಿ ಪದ್ಧತಿಗಳಲ್ಲಿ ಲಿಂಗ ಸಮಾನತೆಯನ್ನು ಬೆಳೆಸುವುದು ಅತ್ಯಂತ ಗಮನಾರ್ಹ ಸಾಧನೆಗಳಲ್ಲಿ ಒಂದಾಗಿದೆ.

ರೂಟ್ಸ್ ಫೌಂಡೇಶನ್‌ನ DSR ಉಪಕ್ರಮಗಳ ಸ್ಪಷ್ಟ ಫಲಿತಾಂಶಗಳು:

  • ಭತ್ತದ ಕೃಷಿಯಲ್ಲಿ ನೀರಿನ ಬಳಕೆಯಲ್ಲಿ 35-40% ಕಡಿತ
  • ಮೀಥೇನ್ (CH4) ಮತ್ತು ಇಂಗಾಲದ ಡೈಆಕ್ಸೈಡ್ (CO2) ಹೊರಸೂಸುವಿಕೆಯಲ್ಲಿ 35-40% ಇಳಿಕೆ
  • ಸುಧಾರಿತ ಮಾರುಕಟ್ಟೆ ಸಂಪರ್ಕಗಳ ಮೂಲಕ ರೈತರ ಆದಾಯದಲ್ಲಿ 50-100% ಹೆಚ್ಚಳ
  • ಪ್ರತಿ ಹೆಕ್ಟೇರ್‌ಗೆ ರೂ. 6,000–8,000ರಷ್ಟು ಕೃಷಿ ವೆಚ್ಚದಲ್ಲಿ ಉಳಿತಾಯ

ಈ ಕಾರ್ಯಕ್ರಮವು ಬೀರಿದ ಪರಿಣಾಮ ಮತ್ತು ಇತರ ಸುಸ್ಥಿರ ಕೃಷಿ ಮಧ್ಯಸ್ಥಿಕೆಗಳು ರೂಟ್ಸ್ ಫೌಂಡೇಶನ್‌ಗೆ ಮನ್ನಣೆಯನ್ನು ತಂದುಕೊಟ್ಟಿದೆ.  ನವದೆಹಲಿಯ ಇಂಡಿಯಾ ಇಂಪ್ಯಾಕ್ಟ್ ಶೃಂಗಸಭೆ 2021 ರಲ್ಲಿ ʼಲೀಡರ‍್ಸ್‌ ಆಫ್‌ ಸೋಶಿಯಲ್‌ ಚೇಂಜ್‌ʼನಂತಹ ಗೌರವವನ್ನು ಗಳಿಸಿಕೊಟ್ಟಿದೆ. ಸಾಮಾಜಿಕ ವಲಯದಲ್ಲಿ ಈ ವೇದಿಕೆಗೆ ಹಲವು ಪುರಸ್ಕಾರ, ಮನ್ನಣೆಗಳು ಸಿಕ್ಕಿವೆ.

ಈ ಫಲಿತಾಂಶಗಳು ರೈತರಿಗೆ ಅಮೂಲ್ಯವಾದ ಸಂಪನ್ಮೂಲಗಳನ್ನು ಉಳಿಸಲು ಸಹಾಯ ಮಾಡುವುದರೊಂದಿಗೆ ಆರ್ಥಿಕವಾಗಿ ಅವರನ್ನು ಸಬಲರನ್ನಾಗಿಸಿವೆ. ರೂಟ್ಸ್ ಫೌಂಡೇಶನ್ ಒದಗಿಸುವ ತರಬೇತಿಯು ರೈತರಿಗೆ DSR ಅನ್ನು ಪರಿಣಾಮಕಾರಿಯಾಗಿ ಬಳಸುವ ಬಗ್ಗೆ ತಿಳಿವಳಿಕೆ ನೀಡುತ್ತದೆ. ಆರಂಭದಲ್ಲಿ ತಂತ್ರಜ್ಞಾನವನ್ನು ಬಳಸುವಾಗ ಎದುರಾಗುವ ಸವಾಲುಗಳನ್ನು ನಿವಾರಿಸುತ್ತದೆ.

ಸಾರ್ವಜನಿಕ-ಖಾಸಗಿ ಸಹಭಾಗಿತ್ವದ ಪಾತ್ರ

ರೈತರು, ಸರ್ಕಾರೇತರ ಸಂಸ್ಥೆಗಳು, ಸರ್ಕಾರಿ ಸಂಸ್ಥೆಗಳು ಮತ್ತು ಖಾಸಗಿ ಕಂಪನಿಗಳ ನಡುವಿನ ಸಹಯೋಗವು DSR ಅಳವಡಿಕೆಗೆ ಇರುವ ಅಡೆತಡೆಗಳನ್ನು ನಿವಾರಿಸುವಲ್ಲಿ ನಿರ್ಣಾಯಕವಾಗಿದೆ. ಸಾರ್ವಜನಿಕ-ಖಾಸಗಿ ಪಾಲುದಾರಿಕೆಗಳು (ಪಿಪಿಪಿಗಳು) ಜಾಗೃತಿ ಅಭಿಯಾನಗಳನ್ನು ನಡೆಸಬಹುದು, ಆರ್ಥಿಕ ಪ್ರೋತ್ಸಾಹವನ್ನು ನೀಡಬಹುದು ಮತ್ತು ಅಗತ್ಯ ಉಪಕರಣಗಳು ಮತ್ತು ತಂತ್ರಜ್ಞಾನವು ಲಭ್ಯವಾಗುವಂತೆ ಮಾಡಬಹುದು. ಉದಾಹರಣೆಗೆ, ರೈತ ತರಬೇತಿ ಮತ್ತು ದೊಡ್ಡ ಪ್ರಮಾಣದ ಪ್ರದರ್ಶನಗಳಿಗಾಗಿ ಕೆವಿಕೆಗಳೊಂದಿಗಿನ ಪಾಲುದಾರಿಕೆಗಳು DSR ನ ಆರ್ಥಿಕ ಮತ್ತು ಪರಿಸರ ಲಾಭಗಳನ್ನು ವಿವರಿಸಬಹುದು.

ಫಾರ್ಲೆನ್ಸ್ ಗ್ರೂಪ್‌ನ ವ್ಯವಸ್ಥಾಪಕ ನಿರ್ದೇಶಕ ರಿತ್ವಿಕ್ ಬಹುಗುಣ, ಸಾರ್ವಜನಿಕ ಮತ್ತು ಖಾಸಗಿ ವಲಯಗಳ ನಡುವಿನ ಸಹಯೋಗದ ಮಹತ್ವವನ್ನು ಒತ್ತಿ ಹೇಳುತ್ತಾರೆ. “ಭತ್ತವನ್ನು ಬೆಳೆಯುವುದೊಂದು ಸಂಕೀರ್ಣ ಹಾಗೂ ಹೆಚ್ಚು ಒಳಸುರಿಯುವಿಕೆಗಳನ್ನು ಒಳಗೊಂಡ ಪ್ರಕ್ರಿಯೆಯಾಗಿದೆ. DSR ಬೆಳೆಗಳನ್ನು ಶೀಘ್ರವಾಗಿ ಸುಲಭವಾಗಿ ನೆಡಬಹುದು. ಇವು ಕಡಿಮೆ ಅವಧಿಯಲ್ಲಿ ಬೆಳೆಯುತ್ತವೆ, ಬೆಳೆಯಲು ಬೇಕಾಗುವ ನೀರು ಕಡಿಮೆ ಹಾಗೂ ಹವಾಮಾನ ತಾಳಿಕೆಯ ಗುಣವನ್ನು ಹೊಂದಿದೆ,” ಎಂದು ಅವರು ಹೇಳುತ್ತಾರೆ. ಇಲ್ಲಿಯೂ ಕಳೆ ನಿರ್ವಹಣೆಯಂತಹ ಸವಾಲುಗಳು ಹಾಗೂ ಜಾಗೃತಿಯ ಕೊರತೆಯಂತಹ ಸಮಸ್ಯೆಗಳನ್ನು ಎದುರಿಸಬೇಕಿದೆ. ಇದನ್ನು ದೊಡ್ಡಮಟ್ಟದಲ್ಲಿ ಅಳವಡಿಸಿಕೊಳ್ಳುವಂತೆ ಮಾಡಬೇಕಿದೆ.

ಫಾರ್ಲೆನ್ಸ್ ಗ್ರೂಪ್‌ನ ಭಾಗವಾಗಿ ರೂಟ್ಸ್ ಫೌಂಡೇಶನ್, ರೈತರಿಗೆ ಪ್ರಾಯೋಗಿಕ ಅನುಭವವನ್ನು ನೀಡುವ ಮೂಲಕ ತಂತ್ರಜ್ಞಾನ ಮತ್ತು ಜಾಗೃತಿಯ ಕೊರತೆಯನ್ನು ಪರಿಹರಿಸುತ್ತಿದೆ. ಈ ಉಪಕ್ರಮಗಳು ರೈತರಿಗೆ DSR ಗೆ ಪರಿಣಾಮಕಾರಿಯಾಗಿ ಪರಿವರ್ತನೆಗೊಳ್ಳಲು ಅಗತ್ಯವಾದ ಜ್ಞಾನ ಮತ್ತು ಕೌಶಲ್ಯಗಳನ್ನು ಒದಗಿಸಿ ಸಬಲರನ್ನಾಗಿಸಿ, ಅದನ್ನು ವ್ಯಾಪಕವಾಗಿ ಅಳವಡಿಸಿಕೊಳ್ಳಲು ಅಡಿಪಾಯ ಹಾಕುತ್ತವೆ.

ಸುಸ್ಥಿರ ಕೃಷಿಪದ್ಧತಿಗಳೊಂದಿಗೆ ಒಳಸುರಿಯುವಿಕೆಗಳಿಗೆ ಸಬ್ಸಿಡಿ ಒದಗಿಸುವ ಮೂಲಕ DSR ಅಳವಡಿಕೆಯನ್ನು ಪ್ರೋತ್ಸಾಹಿಸುವಲ್ಲಿ ಸರ್ಕಾರವು ನಿರ್ಣಾಯಕ ಪಾತ್ರ ವಹಿಸಬಹುದು. ಉದಾಹರಣೆಗೆ, ಬೀಜ ಡ್ರಿಲ್‌ಗಳು ಮತ್ತು ಲೇಸರ್ ಲೆವೆಲರ್‌ಗಳಂತಹ ಅಗತ್ಯ ಉಪಕರಣಗಳಿಗೆ ಸಬ್ಸಿಡಿಗಳು DSRಗೆ ಪರಿವರ್ತನೆಗೊಳ್ಳುವುದನ್ನು ಗಮನಾರ್ಹವಾಗಿ ಸುಗಮಗೊಳಿಸಬಹುದು. ಸಾವಯವ ಪದ್ಧತಿಗಳಂತಹ ಸುಸ್ಥಿರ ಕೃಷಿ ತಂತ್ರಗಳಿಗೆ ಆರ್ಥಿಕ ಪ್ರೋತ್ಸಾಹವನ್ನು ನೀಡುವ ಮೂಲಕ ರೈತರು ಪರಿಸರ ಸ್ನೇಹಿ ವಿಧಾನಗಳನ್ನು ಅಳವಡಿಸಿಕೊಳ್ಳಲು ಪ್ರೇರೇಪಿಸಬಹುದು. 2019 ರಲ್ಲಿ ಹರಿಯಾಣದಲ್ಲಿ ನೇರ ನಗದು ವರ್ಗಾವಣೆಯ ಮೂಲಕ DSR ಅಳವಡಿಕೆಗೆ ಪ್ರೋತ್ಸಾಹ ನೀಡಿದ್ದು ಹೆಚ್ಚು ಪರಿಣಾಮಕಾರಿಯಾಯಿತು.  44,000 ಕ್ಕೂ ಹೆಚ್ಚು ರೈತರು ಇದನ್ನು ಅಳವಡಿಸಿಕೊಂಡರು.

ಈ ಪ್ರಯತ್ನಗಳಿಗೆ ಪೂರಕವಾಗಿ, ಜಂಟಿ ಜಾಗೃತಿ ಅಭಿಯಾನಗಳನ್ನು ಸುಗಮಗೊಳಿಸುವುದು ಮತ್ತು ದೊಡ್ಡ ಪ್ರಮಾಣದ ಪ್ರಾತ್ಯಕ್ಷಿಕೆ ಯೋಜನೆಗಳಲ್ಲಿ ಹೂಡಿಕೆ ಮಾಡುವುದು ಅತ್ಯಗತ್ಯ. ಈ ಸಂಯೋಜಿತ ವಿಧಾನವು – ಸಬ್ಸಿಡಿಗಳು, ಪ್ರೋತ್ಸಾಹಕಗಳು, ಜಾಗೃತಿ ಮತ್ತು ಸಾಮರ್ಥ್ಯ ವೃದ್ಧಿ – DSR ಅನ್ನು ಮುಖ್ಯವಾಹಿನಿಗೆ ತರುವಲ್ಲಿ ಮತ್ತು ಅದರ ಸುಸ್ಥಿರ ಅಭಿವೃದ್ಧಿ ಗುರಿಗಳ (ಎಸ್‌ಡಿಜಿ) ಕಡೆಗೆ ಭಾರತದ ಪ್ರಗತಿಯನ್ನು ಚುರುಕುಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

ಮುಂದಿನ ಭವಿಷ್ಯ: ಭಾರತೀಯ ಕೃಷಿಯ ಸುಸ್ಥಿರ ಭವಿಷ್ಯ

ಭಾರತವು ತನ್ನ SDG ಗುರಿಗಳತ್ತ ಸಾಗುತ್ತಿರುವಾಗ, DSR ನಂತಹ ತಂತ್ರಜ್ಞಾನಗಳು ನೀರನ್ನು ಸಂರಕ್ಷಿಸಲು, ರೈತರ ಆದಾಯವನ್ನು ಸುಧಾರಿಸಲು ಮತ್ತು ಪರಿಸರ ಫಲಿತಾಂಶಗಳನ್ನು ಹೆಚ್ಚಿಸಲು ಪರಿವರ್ತನಾತ್ಮಕ ಅವಕಾಶವನ್ನು ಒದಗಿಸುತ್ತವೆ. ರೂಟ್ಸ್ ಫೌಂಡೇಶನ್‌ನಂತಹ ಸಂಸ್ಥೆಗಳ ಸಂಯೋಜಿತ ಪ್ರಯತ್ನಗಳು ಮತ್ತು ಸುಭದ್ರ ನೀತಿ ಬೆಂಬಲದೊಂದಿಗೆ, DSR ಭತ್ತದ ಕೃಷಿಯಲ್ಲಿ ಕ್ರಾಂತಿಯನ್ನುಂಟು ಮಾಡುವ ಮೂಲಕ ಬೆಳೆಯುತ್ತಿರುವ ಜನಸಂಖ್ಯೆಗೆ ಆಹಾರ ಭದ್ರತೆಯನ್ನು ಖಾತ್ರಿಪಡಿಸುತ್ತದೆ.

DSR ನೊಂದಿಗಿನ ಭಾರತದ ಅನುಭವವು ಪ್ರಪಂಚದಾದ್ಯಂತ ನೀರಿನ ಕೊರತೆಯಿರುವ ಇತರ ಪ್ರದೇಶಗಳಿಗೆ ಮಾದರಿಯಾಗಿದೆ. ಪರಿಣಾಮಕಾರಿ ಸಹಯೋಗಗಳ ಮೂಲಕ ಇಂತಹ ನಾವೀನ್ಯತೆಗಳನ್ನು ಒಳಗೊಳ್ಳುವ ಮೂಲಕ, ದೇಶವು ಸುಸ್ಥಿರ ಕೃಷಿಯಲ್ಲಿ ಜಾಗತಿಕ ಪ್ರಯತ್ನಗಳನ್ನು ಮುನ್ನಡೆಸಬಹುದು. ಮುಂದಿನ ಪೀಳಿಗೆಗೆ ಉತ್ತಮ ಭವಿಷ್ಯವನ್ನು ಭದ್ರಪಡಿಸಬಹುದು.

ಪರಾಮರ್ಶನಗಳು

  • https://tracextech.com/water-conservation-insustainable-agriculture/
  • h t t p : //www. k n o w l e d g e b a n k . i r r i . o r g /ericeproduction/III.1_Water_usage_in_rice.htm
  • Rehman, H.U., S.M.A. Basra and M. Farooq2011), ‘Field appraisal of seed priming to improve the growth, yield, and quality of direct seeded rice’, Turkish Journal of Agriculture and Forestry, Vol.35, pp. 357–65.
  • https://www.nabard.org/auth/writereaddata/tender/1806181128Water%20Productivity%20Mapping%20of%20Major%20Indian%20Crops,%20Web%20Ver s ion%20(Low%20 Resolution%20PDF).pdf
  • https://tile.loc.gov/storage-services/service/gdc/gdcovop/2018305076/2018305076.pdf?utm_source=chatgpt.com
  • https://www.irri.org/news-and-events/news/making-rice%E2%80%93cultivation-watereff i c i e n t – a n d – s u s t a i n a b l e – h a r y a n a ? u t m _source=chatgpt.com
  • https://www.asiapathways-adbi.org/2023/10/revitalizing-south-asias-groundwater-resourceswith-direct-seeded-rice/?utm_source=chatgpt.com

 


Ishani Sharma
Research Associate, Farlense
E-mail ID: ishani@farlense.com

Ritwik Bahuguna
Founder, Roots Foundation & Director, Farlense Group
E-mail ID: rb@rootsfoundation.in

A.P. Sinha
Advisor, Roots Foundation & Director, Farlense Group
E-mail ID: ap.sinha@rootsfoundation.in

Roots Foundation,
#104, Building No 32, Global Business Square
[32GBS] by INMACS,
Sector 44, Gurugram, Haryana 122003

ಆಂಗ್ಲ ಮೂಲ : ಲೀಸಾ ಇಂಡಿಯಾ; ಸಂಪುಟ :೨೬; ಸಂಚಿಕೆ : ೪ ; ಡಿಸಂಬರ್‌ ೨೦‌೨೪

Recent Posts

ಮಹಿಳೆಯರ ನೇತೃತ್ವದ ಕೃಷಿ ಉದ್ಯಮಗಳು- ಸಿರಿಧಾನ್ಯಗಳ ಸಾಮರ್ಥ್ಯ ಪ್ರದರ್ಶನ

ಮಹಿಳೆಯರ ನೇತೃತ್ವದ ಕೃಷಿ ಉದ್ಯಮಗಳು- ಸಿರಿಧಾನ್ಯಗಳ ಸಾಮರ್ಥ್ಯ ಪ್ರದರ್ಶನ

ಒರಿಸ್ಸಾದಲ್ಲಿ ಸಿರಿಧಾನ್ಯಗಳ ಪುನರುಜ್ಜೀವನವು ಮಹಿಳಾ ಗುಂಪುಗಳಲ್ಲಿ ಆತ್ಮವಿಶ್ವಾಸವನ್ನು ತುಂಬಿದೆ. ಬಡತನ ಮತ್ತು ಅಪೌಷ್ಟಿಕತೆಯನ್ನು ಹೋಗಲಾಡಿಸಲು ಸಹಾಯ ಮಾಡಿದೆ. ಒರಿಸ್ಸಾ ಮಿಲ್ಲೆಟ್ಸ್ ಮಿಷನ್ ಮತ್ತು ಮಿಷನ್ ಶಕ್ತಿ ಇಲಾಖೆಗಳು ಒರಿಸ್ಸಾದಾದ್ಯಂತ WSHG ನೇತೃತ್ವದ ಸಿರಿಧಾನ್ಯ ಆಧಾರಿತ ಕೃಷಿ ಉದ್ಯಮಗಳನ್ನು ಯಶಸ್ವಿಯಾಗಿ ಉತ್ತೇಜಿಸುತ್ತಿವೆ. ಜೀವನೋಪಾಯವನ್ನು ಬಲಪಡಿಸುವುದರೊಂದಿಗೆ ಮನೆಯ ಆದಾಯವನ್ನು ಉತ್ತಮಗೊಳಿಸಿದೆ.

ಈಶಾನ್ಯ ಭಾರತದಲ್ಲಿ ಸಿರಿಧಾನ್ಯಗಳ ಪುನಶ್ಚೇತನ

ಈಶಾನ್ಯ ಭಾರತದಲ್ಲಿ ಸಿರಿಧಾನ್ಯಗಳ ಪುನಶ್ಚೇತನ

ಈಶಾನ್ಯ ಪ್ರದೇಶದ ಸಣ್ಣ ಹಿಡುವಳಿದಾರರು ತಮ್ಮ ಬೆಳೆ ಹಾಗೂ ಆಹಾರ ಪದ್ಧತಿಯಲ್ಲಿ ರಾಗಿಯನ್ನು ಪುನಶ್ಚೇತನಗೊಳಿಸಿದ್ದಾರೆ. ತಾಂತ್ರಿಕ ಮಾರ್ಗದರ್ಶನ ಮತ್ತು ಮೌಲ್ಯವರ್ಧನೆಯ ವಿಷಯದಲ್ಲಿ ಬೆಂಬಲ, ಮತ್ತು ಮಾರುಕಟ್ಟೆ ಸಂಪರ್ಕಗಳನ್ನು ಕಲ್ಪಿಸುವ ಮೂಲಕ ಈಶಾನ್ಯ ಭಾರತದ ಆಹಾರ ಮತ್ತು ಕೃಷಿ ವ್ಯವಸ್ಥೆಗಳಲ್ಲಿ ಸಿರಿಧಾನ್ಯಗಳನ್ನು ಮರಳಿ ತರುವಲ್ಲಿ ಪ್ರಮುಖ ಪಾತ್ರ ವಹಿಸಿದೆ.

ಕೃಷಿ ಜ್ಞಾನ ವಾಹನ-ಕೃಷಿ ತಂತ್ರಜ್ಞಾನವನ್ನು ರೈತರ ಮನೆ ಬಾಗಿಲಿಗೆ ತರುವುದು

ಕೃಷಿ ಜ್ಞಾನ ವಾಹನ-ಕೃಷಿ ತಂತ್ರಜ್ಞಾನವನ್ನು ರೈತರ ಮನೆ ಬಾಗಿಲಿಗೆ ತರುವುದು

ಕೃಷಿ ಜ್ಞಾನ ವಾಹನ ಉಪಕ್ರಮವು ರಾಜ್ಯದಲ್ಲಿ ಲಭ್ಯವಿರುವ ವಿಸ್ತರಣಾ ಸೇವೆಗಳನ್ನು ಗಮನಾರ್ಹವಾಗಿ ಹೆಚ್ಚಿಸಿದೆ. ಬಿಹಾರವು ಕೃಷಿ ಉತ್ಪಾದಕತೆಯನ್ನು ಹೆಚ್ಚಿಸುವ ಸಾಮರ್ಥ್ಯವನ್ನು ಹೊಂದಿದೆ. ರೈತರಿಗೆ ಆಧುನಿಕ ಕೃಷಿ ತಂತ್ರಗಳು ಮತ್ತು ತಜ್ಞರ ಮಾರ್ಗದರ್ಶನವನ್ನು ನೇರವಾಗಿ ಒದಗಿಸುವ ಮೂಲಕ, ಇದು ಅರ್ಥಪೂರ್ಣ ಪರಿಣಾಮವನ್ನು ಸೃಷ್ಟಿಸಲು ಸಜ್ಜಾಗಿದೆ.

YouTube
Instagram
WhatsApp