ಈಶಾನ್ಯ ಭಾರತದಲ್ಲಿ ಸಿರಿಧಾನ್ಯಗಳ ಪುನಶ್ಚೇತನ


ಈಶಾನ್ಯ ಪ್ರದೇಶದ ಸಣ್ಣ ಹಿಡುವಳಿದಾರರು ತಮ್ಮ ಬೆಳೆ ಹಾಗೂ ಆಹಾರ ಪದ್ಧತಿಯಲ್ಲಿ ರಾಗಿಯನ್ನು ಪುನಶ್ಚೇತನಗೊಳಿಸಿದ್ದಾರೆ. ತಾಂತ್ರಿಕ ಮಾರ್ಗದರ್ಶನ ಮತ್ತು ಮೌಲ್ಯವರ್ಧನೆಯ ವಿಷಯದಲ್ಲಿ ಬೆಂಬಲ, ಮತ್ತು ಮಾರುಕಟ್ಟೆ ಸಂಪರ್ಕಗಳನ್ನು ಕಲ್ಪಿಸುವ ಮೂಲಕ ಈಶಾನ್ಯ ಭಾರತದ ಆಹಾರ ಮತ್ತು ಕೃಷಿ ವ್ಯವಸ್ಥೆಗಳಲ್ಲಿ ಸಿರಿಧಾನ್ಯಗಳನ್ನು ಮರಳಿ ತರುವಲ್ಲಿ ಪ್ರಮುಖ ಪಾತ್ರ ವಹಿಸಿದೆ.


ಈಶಾನ್ಯ ಭಾರತದಲ್ಲಿ ಮಳೆಯಾಧಾರಿತ ಕೃಷಿಯನ್ನು ಜೀವನಾಧಾರವಾಗಿ ಅವಲಂಬಿಸಿರುವ ಸಣ್ಣ ಹಿಡುವಳಿದಾರರು ಹೆಚ್ಚಿದ್ದಾರೆ. ಈ ಪ್ರದೇಶವು ಅರಣ್ಯವನ್ನು ಕಡಿದು ಇಲ್ಲವೇ ಸುಟ್ಟು ಕೃಷಿಗಾಗಿ ಬಳಸುವಂತಹ ಸಾಂಪ್ರಾದಾಯಿಕ ಕೃಷಿಪದ್ಧತಿಗಳಿಗೆ ಹೆಸರುವಾಸಿಯಾಗಿದೆ. ಈ ಪ್ರದೇಶದಲ್ಲಿ ಅಕ್ಕಿ, ಜೋಳ, ರಾಗಿ, ದ್ವಿದಳ ಧಾನ್ಯಗಳು, ಚಹಾ, ಮಸಾಲೆಗಳು ಮತ್ತು ಹಣ್ಣುಗಳಂತಹ ಬೆಳೆಗಳನ್ನು ಹೆಚ್ಚಿಗೆ ಬೆಳೆಯಲಾಗುತ್ತದೆ. ಅಪಾರ ಜೀವವೈವಿಧ್ಯತೆಯಿಂದ ಕೂಡಿರುವ ಈ ಪ್ರದೇಶವು ಅನೇಕ ಸ್ಥಳೀಯ ಬೆಳೆ ಪ್ರಭೇದಗಳು ಮತ್ತು ಜಾನುವಾರು ತಳಿಗಳಿಗೆ ನೆಲೆಯಾಗಿದೆ. ಈ ಪ್ರದೇಶವು ಪ್ರವಾಹ, ಭೂಕುಸಿತ ಮತ್ತು ಭೂಕಂಪಗಳಂತಹ ನೈಸರ್ಗಿಕ ವಿಕೋಪಗಳಿಂದ ಹೆಚ್ಚಿನ ಅಪಾಯವನ್ನು ಎದುರಿಸುತ್ತಿದೆ. ಇದು ಕೃಷಿಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಭೂ ಕುಸಿತ, ಮಣ್ಣಿನ ಸವಕಳಿ, ಕಡಿಮೆ ಉತ್ಪಾದಕತೆ, ಕಳಪೆ ಮಾರುಕಟ್ಟೆ ಸಂಪರ್ಕಗಳು ಮತ್ತು ಹವಾಮಾನ ಬದಲಾವಣೆಗಳು ಈ ಪ್ರದೇಶದ ರೈತರು ಎದುರಿಸುತ್ತಿರುವ ಮತ್ತಷ್ಟು ಸವಾಲುಗಳಾಗಿವೆ.

ಈಶಾನ್ಯ ಭಾರತದಲ್ಲಿ ಸಿರಿಧಾನ್ಯಗಳು ಕೃಷಿ ಮತ್ತು ಆಹಾರ ಸಂಸ್ಕೃತಿಯ ಪ್ರಮುಖ ಭಾಗವಾಗಿದೆ. ರಾಗಿ, ನವಣೆ, ಬಕ್‌ವ್ಹೀಟ್‌/ಕುಟ್ಟು, ಸಜ್ಜೆ ಮತ್ತು ಜಾಬ್ಸ್ ಟಿಯರ್ಸ್ ಈಶಾನ್ಯ ರಾಜ್ಯಗಳಲ್ಲಿ ಕಂಡುಬರುವ ಸಿರಿಧಾನ್ಯಗಳ ಕೆಲವು ಪ್ರಭೇದಗಳಾಗಿವೆ. ಅಸ್ಸಾಂ (18.82 ಕೆಜಿ/ಎಚ್‌ಎಸ್‌ಎಚ್/ಮೀ) ಮತ್ತು ಬಿಹಾರ (18.69 ಕೆಜಿ/ಎಚ್‌ಎಸ್‌ಎಚ್/ಮೀ) ರಾಜ್ಯಗಳಲ್ಲಿ ಈ ಕಿರುಧಾನ್ಯಗಳ ಅತ್ಯಧಿಕ ಬಳಕೆಯನ್ನು ಕಾಣಬಹುದಾಗಿದೆ. ಸಣ್ಣ ಕಾಳುಗಳ ಹುಲ್ಲಿನ ಸಸ್ಯಗಳನ್ನು ಇಲ್ಲಿನ ಸ್ಥಳೀಯ ಸಮುದಾಯಗಳು ಶತಮಾನಗಳಿಂದ ಬೆಳೆಯುತ್ತಿವೆ, ಸೇವಿಸುತ್ತಿವೆ. ಏಕೆಂದರೆ ಎಂತಹದ್ದೇ ಕಠಿಣ ಪರಿಸ್ಥಿತಿಗಳಲ್ಲೂ ಗುಡ್ಡಗಾಡಿನ ಪ್ರದೇಶಗಳಲ್ಲೂ ಬೆಳೆಯುವ ಹಾಗೂ ತೀವ್ರ ಹವಾಮಾನ ಪರಿಸ್ಥಿತಿಯನ್ನು ತಾಳಿಕೊಳ್ಳುವ ಗುಣಹೊಂದಿದೆ. ಭಾರತದ ಈಶಾನ್ಯ ರಾಜ್ಯಗಳಾದ್ಯಂತ ಹಿಮಾಲಯದಲ್ಲಿ ಸಾಂಪ್ರದಾಯಿಕ ಹುದುಗಿಸಿದ ಆಹಾರಗಳು ಮತ್ತು ಪಾನೀಯಗಳು ಅವುಗಳ ಪೌಷ್ಟಿಕಾಂಶದ ಮೌಲ್ಯ, ರುಚಿ, ಆರೋಗ್ಯ ಅಂಶಗಳು, ಸಾಮಾಜಿಕ, ಧಾರ್ಮಿಕ ಮತ್ತು ಸಾಂಸ್ಕೃತಿಕ ಪ್ರಾಮುಖ್ಯತೆಯಿಂದಾಗಿ ವಿಶೇಷ ಸ್ಥಾನವನ್ನು ಪಡೆದಿವೆ. ರಾಗಿ ಪೂರ್ವ ಹಿಮಾಲಯ ಪ್ರದೇಶದಲ್ಲಿ ಪ್ರಮುಖ ಬೆಳೆಯಾಗಿದೆ. ನವಣೆ ಮತ್ತು ರಾಗಿಗಳು ಹೆಚ್ಚಿನ ರಾಜ್ಯಗಳಲ್ಲಿ ಕಂಡುಬರುತ್ತವೆ.

ಈಶಾನ್ಯ ಭಾಗದ ಸಣ್ಣ ರೈತರ ಕೃಷಿಯಲ್ಲಿ ಸಿರಿಧಾನ್ಯಗಳು ಅವಿಭಾಜ್ಯ ಅಂಗವಾಗಿದೆ. ಇದನ್ನು ಆಹಾರ ಮತ್ತು ಪಾನೀಯಗಳಿಗಾಗಿ ಬಳಸುತ್ತಾರೆ. ಜೊತೆಗೆ ಮೇವಿಗೆ ಹಾಗೂ ಹಕ್ಕಿಗಳಿಗೆ ಆಹಾರವಾಗಿಯೂ ನೀಡುತ್ತಾರೆ. ಈಶಾನ್ಯ ರಾಜ್ಯಗಳಲ್ಲಿ ಸಿರಿಧಾನ್ಯಗಳ ಸೇವನೆಯ ಮಾದರಿಯು ಕಾಲಾನಂತರದಲ್ಲಿ ಒಂದೇ ರೀತಿ ಉಳಿದಿದೆ ಅಥವಾ ಕಡಿಮೆಯಾಗಿದೆ. ಈಶಾನ್ಯ ಭಾರತದಲ್ಲಿ ಸಿರಿಧಾನ್ಯಗಳ ಕೃಷಿಯನ್ನು ಉತ್ತೇಜಿಸಲು ಪ್ರಯತ್ನಗಳು ನಡೆಯುತ್ತಿವೆ.

ಹೆಚ್ಚಿನ ಆಹಾರ ಸಾರ್ವಭೌಮತ್ವಕ್ಕಾಗಿ ದೇಸಿ ಜ್ಞಾನ ಮತ್ತು ಸಾಂಪ್ರದಾಯಿಕ ಆಹಾರ ವ್ಯವಸ್ಥೆಯನ್ನು ಪುನರುಜ್ಜೀವನಗೊಳಿಸಲು ಕ್ಯಾರಿಟಾಸ್ ಇಂಡಿಯಾ ಈ ಪ್ರದೇಶದಲ್ಲಿ ಕೆಲಸ ಮಾಡುತ್ತಿದೆ. 2013 ರಿಂದ, ಕ್ಯಾರಿಟಾಸ್ ಇಂಡಿಯಾ ಅಸ್ಸಾಂ, ಅರುಣಾಚಲ ಪ್ರದೇಶ, ಮಣಿಪುರ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್ ಮತ್ತು ತ್ರಿಪುರ ರಾಜ್ಯಗಳಲ್ಲಿ ಕೃಷಿ ಪುನರುತ್ಪಾದನಾ ಕ್ರಮಗಳನ್ನು ಸುಗಮಗೊಳಿಸುವ (FARM) ಈಶಾನ್ಯ (NE) ಕಾರ್ಯಕ್ರಮವನ್ನು ಜಾರಿಗೊಳಿಸುತ್ತಿದೆ. FARM NE ಎಂಬುದು ಕ್ಯಾರಿಟಾಸ್ ಇಂಡಿಯಾದ ಅತಿದೊಡ್ಡ ಕ್ಲಸ್ಟರ್ ಕಾರ್ಯಕ್ರಮವಾಗಿದ್ದು, ಈ ಪ್ರದೇಶದ ಸಣ್ಣ ಹಿಡುವಳಿದಾರರನ್ನು ತಲುಪುತ್ತದೆ. ಹವಾಮಾನ-ಹೊಂದಾಣಿಕೆಯ ಸಾಂಪ್ರದಾಯಿಕ ಕೃಷಿ ವ್ಯವಸ್ಥೆಗಳು ಮತ್ತು ಸಾಂಪ್ರದಾಯಿಕ ಆಹಾರ ವ್ಯವಸ್ಥೆಗಳ ಮೂಲಕ ಆಹಾರ ಭದ್ರತೆಯನ್ನು ಉತ್ತೇಜಿಸುತ್ತದೆ. ಈ ಕಾರ್ಯಕ್ರಮವನ್ನು ಸಮುದಾಯ ನೇತೃತ್ವವನ್ನು ಒಳಗೊಳ್ಳುವಂತೆ ವಿನ್ಯಾಸಗೊಳಿಸಲಾಗಿದೆ. ಸಣ್ಣ ಹಿಡುವಳಿದಾರರು ಸಕಾರಾತ್ಮಕ ಬದಲಾವಣೆಯನ್ನು ತರುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ.

ಕ್ಯಾರಿಟಾಸ್ ಇಂಡಿಯಾ ಈಶಾನ್ಯ ಪ್ರದೇಶದಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ. ಸಿರಿಧಾನ್ಯ ಸೇರಿದಂತೆ ಸುಸ್ಥಿರ ಕೃಷಿಯ ಉತ್ತೇಜನಕ್ಕಾಗಿ ಏಳು ರಾಜ್ಯಗಳಾದ್ಯಂತ ಸ್ಥಳೀಯ ಗುಂಪುಗಳೊಂದಿಗೆ ತೊಡಗಿಸಿಕೊಂಡಿದೆ. ಭಾರತದಲ್ಲಿ ಸಿರಿಧಾನ್ಯಗಳನ್ನು ಬೆಳೆಯಲು, ಬಳಕೆಯನ್ನು ಹೆಚ್ಚಿಸಲು ಕ್ಯಾರಿಟಾಸ್ ಇಂಡಿಯಾ ದುರ್ಬಲರಾದ ಜನಸಮುದಾಯಗಳಿಗೆ ಆಹಾರ ಮತ್ತು ಪೌಷ್ಟಿಕಾಂಶ ಭದ್ರತೆಯನ್ನು ಹೆಚ್ಚಿಸುವತ್ತ ಒತ್ತು ನೀಡುತ್ತಿದೆ. ಸಿರಿಧಾನ್ಯ ಕೃಷಿ ಮತ್ತು ಬಳಕೆಯನ್ನು ಉತ್ತೇಜಿಸುವ ಮೂಲಕ, ಕ್ಯಾರಿಟಾಸ್ ಇಂಡಿಯಾ ಸಾಂಪ್ರದಾಯಿಕ ಆಹಾರ ವ್ಯವಸ್ಥೆಯನ್ನು ಪುನರುಜ್ಜೀವನಗೊಳಿಸಲು ಶ್ರಮಿಸುತ್ತಿದೆ. ಈ ಆಹಾರ ವ್ಯವಸ್ಥೆಯು ಪೌಷ್ಟಿಕ, ಸುಸ್ಥಿರ ಮತ್ತು ದೃಢವಾದದ್ದಾಗಿದೆ.

ಈಶಾನ್ಯ ಪ್ರದೇಶದಲ್ಲಿ ಸಿರಿಧಾನ್ಯಗಳು ಸಾಂಪ್ರದಾಯಿಕ ಕೃಷಿಯ ಭಾಗವಾಗಿದೆ. ಆದರೆ ಜನಸಂಖ್ಯೆಯ ಬಹುಭಾಗ ಹೆಚ್ಚಾಗಿ ಅನ್ನ ತಿನ್ನುವವರಾಗಿರುವುದರಿಂದ ಪ್ರಧಾನ ಆಹಾರವಾಗಿ ಅವುಗಳ ಬಳಕೆ ಸೀಮಿತವಾಗಿದೆ. 2016-17ರ ಬೆಳೆ ಋತುವಿನಲ್ಲಿ, ಮೇಘಾಲಯದ ರಿ ಭೋಯ್ ಜಿಲ್ಲೆಯಲ್ಲಿ ಮೊದಲ ಬಾರಿಗೆ ರಾಗಿಯನ್ನು ಪ್ರಚುರಪಡಿಸಲಾಯಿತು. ವ್ಯಾಪಕ ಅಳವಡಿಕೆಯನ್ನು ಉತ್ತೇಜಿಸಲು, ಕ್ಯಾರಿಟಾಸ್ ಇಂಡಿಯಾ ರಾಗಿಗಳ ಬಳಕೆಯ ಮೇಲೆ ಒತ್ತು ನೀಡಿತು. ರಾಗಿಯ ಆರೋಗ್ಯ ಲಾಭಗಳ ಬಗ್ಗೆ ಜಾಗೃತಿ ಮೂಡಿಸಿತು ಮತ್ತು ಅವುಗಳನ್ನು ಹೆಚ್ಚಾಗಿ ಬಳಸುವಂತೆ ಸಲಹೆ ನೀಡಿತು.

ಪಿಎಲ್‌ಡಿ ವಿಧಾನ

ಈ ಕಾರ್ಯಕ್ರಮವು ಜನರ ನೇತೃತ್ವದ ಅಭಿವೃದ್ಧಿ ವಿಧಾನದ ಮೂಲ ತತ್ವವನ್ನು ಆಧರಿಸಿದೆ. ಇದು ಅಭಿವೃದ್ಧಿ ಉಪಕ್ರಮಗಳ ಯೋಜನೆ ಮತ್ತು ಅನುಷ್ಠಾನದಲ್ಲಿ ಸ್ಥಳೀಯ ಸಮುದಾಯಗಳು ಮತ್ತು ವ್ಯಕ್ತಿಗಳ ಭಾಗವಹಿಸುವಿಕೆಗೆ ಆದ್ಯತೆ ನೀಡುತ್ತದೆ. ಇದು ಜನರು ತಮ್ಮ ಅಭಿವೃದ್ಧಿಯಲ್ಲಿ ಸಕ್ರಿಯ ಪಾತ್ರ ವಹಿಸುವಂತೆ ಮಾಡುತ್ತದೆ. ಅವರ ಅಗತ್ಯತೆಗಳು ಮತ್ತು ಸಂದರ್ಭಗಳಿಗೆ ಅವರೇ ಸೂಕ್ತ ಮೂಲವೆಂದು ಗುರುತಿಸುತ್ತದೆ. ಈ ವಿಧಾನವು ಅಧಿಕಾರ ಮತ್ತು ನಿರ್ಧಾರ ತೆಗೆದುಕೊಳ್ಳುವಿಕೆಯನ್ನು ಸಮುದಾಯಕ್ಕೆ ವರ್ಗಾಯಿಸುವ ಹಾಗೂ ಸಮುದಾಯಗಳು, ನಾಗರಿಕ ಸಮಾಜ ಸಂಸ್ಥೆಗಳು ಮತ್ತು ಸರ್ಕಾರಿ ಘಟಕಗಳ ನಡುವೆ ಪಾಲುದಾರಿಕೆಯನ್ನು ನಿರ್ಮಿಸುವ ಗುರಿಯನ್ನು ಹೊಂದಿದೆ.

ಜನರಿಗೆ ಭಾಗವಹಿಸುವಿಕೆ ಮತ್ತು ಸಾಮೂಹಿಕ ನಿರ್ಧಾರ ತೆಗೆದುಕೊಳ್ಳುವ ಪರಮಾಧಿಕಾರ ನೀಡುವ ಮೂಲಕ ಸಾಂಪ್ರದಾಯಿಕ ಮತ್ತು ಸಾಂಸ್ಕೃತಿಕ ಆಹಾರ ಪದ್ಧತಿಗಳನ್ನು ಪುನರುಜ್ಜೀವನಗೊಳಿಸಲು FARM ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು. ರೈತರು ತಮ್ಮ ಜೀವನ, ಜೀವನೋಪಾಯ, ಆದಾಯ ಮತ್ತು ಆಹಾರ ಭದ್ರತೆಗೆ ಸಂಬಂಧಿಸಿದ ಸಾಮಾನ್ಯ ಸಮಸ್ಯೆಗಳನ್ನು ಚರ್ಚಿಸಲು ಸಮುದಾಯ ಮತ್ತು ರೈತರ ಗುಂಪುಗಳಲ್ಲಿ ಅವರನ್ನು ಒಟ್ಟುಗೂಡಿಸಲಾಯಿತು. FARM ಕಾರ್ಯಕ್ರಮದ ಮೂಲಕ ಗ್ರಾಮಗಳಲ್ಲಿ ಸಮುದಾಯವನ್ನು ಸಜ್ಜುಗೊಳಿಸಲಾಯಿತು. ಜನರಿಗೆ ಸಿರಿಧಾನ್ಯಗಳಿಂದ ಆರೋಗ್ಯ, ಆರ್ಥಿಕತೆ ಮತ್ತು ಪರಿಸರಕ್ಕೆ ಆಗುವ ಪ್ರಯೋಜನಗಳ ಬಗ್ಗೆ ಅರಿವು ಮೂಡಿಸಲಾಯಿತು. ಇದು ಅವರಿಗೆ ಸಾಮೂಹಿಕ ನಿರ್ಧಾರಗಳ ಅರಿವು ಮತ್ತು ಮಾಲೀಕತ್ವವನ್ನು ಸೃಷ್ಟಿಸಿದೆ.

ಸಿರಿಧಾನ್ಯ ಕೃಷಿಯಲ್ಲಿ ರೈತರ ಸಾಮರ್ಥ್ಯವನ್ನು ಹೆಚ್ಚಿಸುವಲ್ಲಿ ಈ ಕಾರ್ಯಕ್ರಮವು ದ್ವಿಮುಖ ವಿಧಾನವನ್ನು ಅಳವಡಿಸಿಕೊಂಡಿದೆ. ಕೃಷಿ ಇಲಾಖೆ ಮತ್ತು ಕೃಷಿ ವಿಜ್ಞಾನ ಕೇಂದ್ರಗಳ (ಕೆವಿಕೆ) ತರಬೇತಿಗಳು ಸರಾಗವಾಗಿ ನಡೆಯುವಂತೆ ಮಾಡಲು, ರೈತರು ಪೂರ್ವಜರಿಂದ ಆನುವಂಶಿಕವಾಗಿ ಪಡೆದ ತಿಳಿವಳಿಕೆ ಮತ್ತು ಅಭ್ಯಾಸಗಳ ಆಧಾರದ ಮೇಲೆ, ಸಾಂಪ್ರದಾಯಿಕ ಮತ್ತು ವೈಜ್ಞಾನಿಕ ವಿಧಾನಗಳ ಮಿಶ್ರಣವನ್ನು ಅಳವಡಿಸಿಕೊಳ್ಳುವ ನಿಟ್ಟಿನಲ್ಲಿ FARM ಕೆಲಸ ಮಾಡಿದೆ. ಒಟ್ಟಾರೆಯಾಗಿ, ಇದು ವಿಜ್ಞಾನ ಮತ್ತು ಸಂಪ್ರದಾಯದ ಮಿಶ್ರಣವಾಗಿತ್ತು. ಈ ತರಬೇತಿ ಪಡೆದ ಸ್ಥಳೀಯರನ್ನೇ ಸಂಪನ್ಮೂಲ ವ್ಯಕ್ತಿಗಳನ್ನಾಗಿ ಗುರುತಿಸಿ, ಅವರ ಸಮುದಾಯಗಳಿಗೆ ಸಿರಿಧಾನ್ಯಗಳ ಕೃಷಿಯಲ್ಲಿ ಸಹಾಯ ಮಾಡಲು ಮತ್ತು ತರಬೇತಿ ನೀಡಲು ಅನುವು ಮಾಡಿಕೊಡಲಾಯಿತು.

ಈ ಕಾರ್ಯಕ್ರಮವು ಮೊದಲು ಕುಟುಂಬದ ಪೋಷಣೆ ಮತ್ತು ಆಹಾರದ ಅವಶ್ಯಕತೆಗಳನ್ನು ಪೂರೈಸಲು ಆದ್ಯತೆ ನೀಡಿತು. ಹೆಚ್ಚುವರಿ ಉತ್ಪನ್ನಗಳನ್ನು ಸಾಮಾನ್ಯವಾಗಿ ಸ್ಥಳೀಯ ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗುತ್ತಿತ್ತು. ಸಮುದಾಯಗಳು ತಮ್ಮ ಉತ್ಪನ್ನಗಳನ್ನು ಒಟ್ಟುಗೂಡಿಸಿ ಮಾರಾಟ ಮಾಡಲು ಜಾಗೃತಿ ಮೂಡಿಸಲಾಯಿತು. ಜನರು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಸಾಧ್ಯವಾಗುವಂತೆ ಕಾರ್ಯಕ್ರಮವು ಒಳಗೊಂಡ ಪ್ರದೇಶಗಳಲ್ಲಿ ಹಲವಾರು ಸಣ್ಣ ಅಂಗಡಿಗಳನ್ನು ರೂಪಿಸಲಾಯಿತು. ಇದರೊಂದಿಗೆ, ಸಂಸ್ಕರಣೆಗೆ ಸಹಾಯವಾಗುವಂತೆ ಗಿರಣಿ ಮತ್ತು ಪ್ಯಾಕೇಜಿಂಗ್ ಯಂತ್ರಗಳ ರೂಪದಲ್ಲಿ ರೈತರಿಗೆ ಬೆಂಬಲವನ್ನು ಒದಗಿಸಲಾಯಿತು.

ಫಲಿತಾಂಶಗಳು

ರೈತರು ಯಶಸ್ವಿ ಸಿರಿಧಾನ್ಯ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಂಡರು. ಬೀಜ ವಿನಿಮಯವು ವ್ಯಾಪಕ ಅಳವಡಿಕೆ ಮತ್ತು ಉನ್ನತೀಕರಣಕ್ಕೆ ಸಹಾಯ ಮಾಡಿತು. ಸ್ಥಳೀಯ ಖರೀದಿದಾರರನ್ನು ಒಳಗೊಳ್ಳುವ ಮೂಲಕ ಸಿರಿಧಾನ್ಯಗಳಿಗೆ ಮಾರುಕಟ್ಟೆ ಸಂಪರ್ಕವನ್ನು ಸೃಷ್ಟಿಸುವಲ್ಲಿ ಸಮುದಾಯ ಸಜ್ಜುಗೊಳಿಸುವಿಕೆಯು ಸಹಾಯ ಮಾಡಿತು. ಸಂಸ್ಕರಣಾ ಯಂತ್ರೋಪಕರಣಗಳ ಲಭ್ಯತೆಯು ರೈತರು ತಮ್ಮ ಉತ್ಪನ್ನಗಳ ಮೌಲ್ಯವರ್ಧನೆ ಮಾಡಲು ಸಹಾಯ ಮಾಡಿತು. ಇದರಿಂದ ಮಾರುಕಟ್ಟೆ ಆಯ್ಕೆಗಳು ಉತ್ತಮಗೊಂಡವು. ಕೇಕ್‌ಗಳು ಮತ್ತು ಸಿರಿಧಾನ್ಯಗಳ ಪುಡಿಯಂತಹ ಮೌಲ್ಯವರ್ಧಿತ ಉತ್ಪನ್ನಗಳು ಜನಪ್ರಿಯವಾಗಿವೆ.

FARM ಕಾರ್ಯಕ್ರಮವು 2 ವರ್ಷಗಳಷ್ಟು ಕಡಿಮೆ ಸಮಯದಲ್ಲಿ NER ನ ಐದು ರಾಜ್ಯಗಳ 15 ಜಿಲ್ಲೆಗಳಲ್ಲಿ ಸಿರಿಧಾನ್ಯಗಳನ್ನು ಬೆಳೆಯುವುದನ್ನು ಯಶಸ್ವಿಯಾಗಿ ಉತ್ತೇಜಿಸಿದೆ. ಅಸ್ಸಾಂ, ಅರುಣಾಚಲ ಪ್ರದೇಶ, ಮಣಿಪುರ, ಮೇಘಾಲಯ ಮತ್ತು ನಾಗಾಲ್ಯಾಂಡ್‌ಗಳಲ್ಲಿ ಸುಮಾರು 1,500 ಕ್ಕೂ ಹೆಚ್ಚು ಸಣ್ಣ ಹಿಡುವಳಿದಾರರು ಈಗ ಪ್ರತಿ ಕುಟುಂಬವು 3-5 ಎಕರೆ ಭೂಮಿಯಲ್ಲಿ ವಿವಿಧ ರೀತಿಯ ಸಿರಿಧಾನ್ಯಗಳನ್ನು ಬೆಳೆಯುತ್ತಿದ್ದಾರೆ.

ಜಾಗೃತಿ ಮತ್ತು ಅರಿವು ಮೂಡಿಸುವ ಅಧಿವೇಶನಗಳು ರೈತ ಸಮುದಾಯದಲ್ಲಿ ಸಿರಿಧಾನ್ಯಗಳನ್ನು ಜನಪ್ರಿಯಗೊಳಿಸುತ್ತಿವೆ. ಸಾಂಪ್ರದಾಯಿಕ ಬೀಜ ಬ್ಯಾಂಕುಗಳು ಸಹ ರಾಗಿ ಬೀಜಗಳನ್ನು ಸಂಗ್ರಹಿಸಲು ಪ್ರಾರಂಭಿಸಿದವು. ಈ ಕ್ಷೇತ್ರದಲ್ಲಿನ ಯಶಸ್ಸು ಇದರ ಅಳವಡಿಕೆಯನ್ನು ದ್ವಿಗುಣಗೊಳಿಸಿದೆ. ಸ್ಥಳೀಯ ಮತ್ತು ರಾಜ್ಯ ಮಟ್ಟದಲ್ಲಿ FARM ಕಾರ್ಯಕ್ರಮದ ಅಡಿಯಲ್ಲಿ ಆಯೋಜಿಸಲಾದ ರಾಗಿ ಬೀಜ ವಿನಿಮಯ ಕಾರ್ಯಕ್ರಮಗಳು, ಭೌಗೋಳಿಕವಾಗಿ ಒಂದೇ ರೀತಿಯ ಪ್ರದೇಶಗಳಲ್ಲಿ ಇದರ ಅಳವಡಿಕೆಯ ದರವನ್ನು ಹೆಚ್ಚಿಸಿವೆ.

ಪ್ರೇರಣಾದಾಯಕ ಪ್ರಕರಣ

ಮೇಘಾಲಯ ರಾಜ್ಯದ ಪಶ್ಚಿಮ ಜೈನ್ತಿಯಾ ಹಿಲ್ಸ್ ಜಿಲ್ಲೆಯ ಸಮನೋಂಗ್ ಹಳ್ಳಿಯ 68 ವರ್ಷದ ರೈತ ಶ್ರೀ ಲ್ಯಾಂಗ್ ಪಿರ್ತುಹ್, ಸಿರಿಧಾನ್ಯ ಕೃಷಿಯ ಪ್ರಬಲ ಪ್ರತಿಪಾದಕರು. ಕಳೆದ 27 ವರ್ಷಗಳಲ್ಲಿ ಈ ಧಾನ್ಯಗಳ ಕೃಷಿಯು ಕುಸಿದಿದ್ದು ಇದರ ಸ್ಥಾನವನ್ನು ಭತ್ತವು ಆಕ್ರಮಿಸಿಕೊಂಡಿದೆ. ಲ್ಯಾಂಗ್‌ ಅವರ ಪ್ರಕಾರ ಈ ಧಾನ್ಯಗಳಿಗಿಂತ ಹೆಚ್ಚು ಲಾಭ ತರುವ ವಾಣಿಜ್ಯ ಬೆಳೆಗಳಾದ ಎಳ್ಳು ಹಾಗೂ ಪೊರಕೆಯು ಕೂಡ ಈ ಕುಸಿತಕ್ಕೆ ಕಾರಣವಾಗಿದೆ. ಇದರೊಂದಿಗೆ, ಅಕ್ಕಿ, ಗೋಧಿ ಮತ್ತು ಸಕ್ಕರೆಯನ್ನು ಮಾತ್ರ ಒಳಗೊಂಡಿರುವ ಸಾರ್ವಜನಿಕ ವಿತರಣಾ ವ್ಯವಸ್ಥೆ (ಪಿಡಿಎಸ್) ಯ ಪೂರೈಕೆಯು ಆಹಾರ ಪದ್ಧತಿಯಲ್ಲಿ ಬದಲಾವಣೆಗೆ ಕಾರಣವಾಗಿದೆ. ಜನರು ಬಾಹ್ಯ ಆಹಾರ ಉತ್ಪನ್ನಗಳ ಮೇಲೆ ಹೆಚ್ಚು ಅವಲಂಬಿತರಾಗುತ್ತಿದ್ದಾರೆ.

ಈ ಸವಾಲಿನ ಪರಿಸ್ಥಿತಿಗೆ ಪ್ರತಿಕ್ರಿಯೆಯಾಗಿ, ಜೈನ್ತಿಯಾ ಹಿಲ್ಸ್ ಡೆವಲಪ್‌ಮೆಂಟ್ ಸೊಸೈಟಿ (JHDS), FARM NE ಅಡಿಯಲ್ಲಿ ಕ್ಯಾರಿಟಾಸ್ ಇಂಡಿಯಾದ ಬೆಂಬಲದೊಂದಿಗೆ, ಸಿರಿಧಾನ್ಯ ಕೃಷಿಯಲ್ಲಿನ ಕುಸಿತವನ್ನು ಪರಿಹರಿಸಲು ಉಪಕ್ರಮವನ್ನು ಕೈಗೊಂಡಿತು. ಸಿರಿಧಾನ್ಯ ಕೃಷಿಯ ಮಹತ್ವ ಮತ್ತು ಅದರ ಪ್ರಸ್ತುತತೆಯ ಬಗ್ಗೆ ಚರ್ಚಿಸಲು ರೈತರೊಂದಿಗೆ ಸಭೆಗಳನ್ನು ಆಯೋಜಿಸಲಾಗಿತ್ತು. ಪಶ್ಚಿಮ ಜೈನ್ತಿಯಾ ಹಿಲ್ಸ್ ಜಿಲ್ಲೆಯ ಕೃಷಿ ವಿಜ್ಞಾನ ಕೇಂದ್ರವು ಸಿರಿಧಾನ್ಯಗಳ ಸಂಸ್ಕರಣೆಯಲ್ಲಿ ಉದ್ಯಮಿಗಳಿಗೆ ತರಬೇತಿ ನೀಡಲು ಬೆಂಬಲವನ್ನು ನೀಡುತ್ತಿದೆ.

ಈ ಮಧ್ಯಸ್ಥಿಕೆಯು ಈಗಾಗಲೇ ಸಕಾರಾತ್ಮಕ ಫಲಿತಾಂಶಗಳನ್ನು ನೀಡಿದೆ. 2019 ರಲ್ಲಿ ಸಿರಿಧಾನ್ಯ ಬೆಳೆಯುವ ಪ್ರಯತ್ನಕ್ಕೆ 10 ಕುಟುಂಬಗಳು ಸೇರಿಕೊಂಡಿವೆ. ಭವಿಷ್ಯದಲ್ಲಿ ಹೆಚ್ಚಿನ ಕುಟುಂಬಗಳು ಸೇರುವ ನಿರೀಕ್ಷೆಯಿದೆ. ಇದು ನೆರೆಯ ಹಳ್ಳಿಗಳು ಮತ್ತು ಇಡೀ ಜಿಲ್ಲೆಯನ್ನು ಸಿರಿಧಾನ್ಯ ಕೃಷಿಯ ಅಡಿಯಲ್ಲಿ ತರಲು ರೈತರಿಂದ ರೈತರವರೆಗೆ ಮತ್ತು ಸಮುದಾಯದಿಂದ ಸಮುದಾಯಕ್ಕೆ ವಿನಿಮಯವನ್ನು ಉತ್ತೇಜಿಸುತ್ತದೆ.

ಕ್ಯಾರಿಟಾಸ್ ಇಂಡಿಯಾ ತನ್ನ ಪಾಲುದಾರ ಸಂಸ್ಥೆ ಜೆಎಚ್‌ಡಿಎಸ್‌ಗೆ ನೀಡಿದ ಬೆಂಬಲದಿಂದಾಗಿ, ಸಮನೋಂಗ್ ಗ್ರಾಮದಲ್ಲಿ ಸಿರಿಧಾನ್ಯಗಳನ್ನು ಬೆಳೆಯುವ ಕುಟುಂಬಗಳ ಸಂಖ್ಯೆ 51 ಕ್ಕೆ ಏರಿಕೆಯಾಗಿದೆ. ಈ ಹಳ್ಳಿಯಲ್ಲಿ ಎರಡು ವಿಧದ ರಾಗಿ ಬೆಳೆಯಲಾಗುತ್ತದೆ, ಇದನ್ನು ಸಾಮಾನ್ಯವಾಗಿ ಕ್ರೆ ಲೀಹ್ (ಬಿಳಿ ರಾಗಿ) ಮತ್ತು ಕ್ರೆ ಐಯಾಂಗ್ (ಕಪ್ಪು ರಾಗಿ) ಎಂದು ಕರೆಯಲಾಗುತ್ತದೆ. ಸಿರಿಧಾನ್ಯ ಕೃಷಿಯ ದೀರ್ಘಕಾಲೀನ ಸುಸ್ಥಿರತೆ ಮತ್ತು ಸಂಸ್ಕರಣೆ, ಪ್ಯಾಕೇಜಿಂಗ್ ಮತ್ತು ಮಾರುಕಟ್ಟೆ ಮೂಲಕ ಹೆಚ್ಚುವರಿ ಆದಾಯ ಗಳಿಸುವ ಸಾಮರ್ಥ್ಯದ ಬಗ್ಗೆ ಸಮುದಾಯಕ್ಕೆ ಮನವರಿಕೆ ಆಗಿದೆ.

ಸಮುದಾಯದಲ್ಲಿ ಸಿರಿಧಾನ್ಯ ಕೃಷಿಯನ್ನು ಪುನರುಜ್ಜೀವನಗೊಳಿಸುವಲ್ಲಿ ಮತ್ತು ಆಹಾರ ಸಾರ್ವಭೌಮತ್ವದ ಕಲ್ಪನೆಯನ್ನು ಉತ್ತೇಜಿಸುವಲ್ಲಿ FARM ಕಾರ್ಯಕ್ರಮವು ಪ್ರಮುಖ ಪಾತ್ರ ವಹಿಸಿದ್ದು, ಇದು ಪ್ರದೇಶದ ಭವಿಷ್ಯದ ದೃಷ್ಟಿಯಿಂದ ನಿರ್ಣಾಯಕವಾಗಿದೆ. ಮೇಘಾಲಯ, ಅಸ್ಸಾಂ, ಮಣಿಪುರ ಮತ್ತು ನಾಗಾಲ್ಯಾಂಡ್‌ನ ಇತರ ಭಾಗಗಳಲ್ಲಿಯೂ ಇದೇ ರೀತಿಯ ಪ್ರಕರಣಗಳು ವರದಿಯಾಗಿವೆ.

 

ಉಪಸಂಹಾರ

ಈಶಾನ್ಯ ರಾಜ್ಯಗಳಲ್ಲಿ ರಾಗಿಗಳನ್ನು ಪುನರುಜ್ಜೀವನಗೊಳಿಸುವ FARM ಕಾರ್ಯಕ್ರಮದ ಜನರ ನೇತೃತ್ವದ ವಿಧಾನವು ಭರವಸೆಯ ಫಲಿತಾಂಶಗಳನ್ನು ತೋರಿಸುತ್ತಿದೆ. ರೈತರನ್ನು ಬೆಂಬಲಿಸುವ ಮೂಲಕ ಮತ್ತು ಸುಸ್ಥಿರ ಕೃಷಿಯನ್ನು ಉತ್ತೇಜಿಸುವ ಮೂಲಕ, ಈ ಉಪಕ್ರಮವು ಪೌಷ್ಟಿಕ ಆಹಾರ ಮೂಲವಾಗಿ ಸಿರಿಧಾನ್ಯಗಳ ಜನಪ್ರಿಯತೆಯನ್ನು ಹೆಚ್ಚಿಸಿದ್ದಲ್ಲದೆ, ಸಣ್ಣ ಹಿಡುವಳಿದಾರ ರೈತರ ಜೀವನೋಪಾಯವನ್ನು ಹೆಚ್ಚಿಸಿತು. ಸಾಂಪ್ರದಾಯಿಕ ಕೃಷಿ ವಿಧಾನಗಳನ್ನು ಸಂರಕ್ಷಿಸಿತು. ಜನ-ನೇತೃತ್ವದ ಅಭಿವೃದ್ಧಿ ವಿಧಾನವು ಸಮುದಾಯಗಳು ತಮ್ಮ ಆಹಾರ ಭದ್ರತೆಯ ಬಗ್ಗೆ ತಿಳುವಳಿಕೆಯುಳ್ಳ ನಿರ್ಧಾರಗಳನ್ನು ತೆಗೆದುಕೊಳ್ಳಲು ಅನುವು ಮಾಡಿಕೊಟ್ಟಿದೆ. ಇದರಿಂದ ಅವರು ಯಾವುದು ತಮಗೆ ಉತ್ತಮ ಎಂದು ತಿಳಿದುಕೊಂಡಿದ್ದಾರೆ. ಈ ಉಪಕ್ರಮವು ಆರೋಗ್ಯಕರ ಪರಿಸರ ವ್ಯವಸ್ಥೆಗಳನ್ನು ಉತ್ತೇಜಿಸುವುದರ ಜೊತೆಗೆ ಜೀವವೈವಿಧ್ಯತೆಯನ್ನು ಕಾಪಾಡಿಕೊಳ್ಳಲು ಕಾರಣವಾಗಿದೆ. ಸಿರಿಧಾನ್ಯಗಳ ಪುನರುಜ್ಜೀವನವು ಸಮುದಾಯಗಳಲ್ಲಿನ ಸಾಂಸ್ಕೃತಿಕ ಆಹಾರ ಪದ್ಧತಿಗಳನ್ನು ಮರಳಿ ತಂದಿದೆ. ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆಯನ್ನು ತರುವಲ್ಲಿ ಜನರ ನೇತೃತ್ವದ ಹಸ್ತಕ್ಷೇಪದ ಶಕ್ತಿಯನ್ನು ಪ್ರದರ್ಶಿಸಿದೆ.

 ಪರಾಮರ್ಶನಗಳು

https://apeda.gov.in/milletportal/Production.

html#:~:text=The%20major%20millets%20producing%20states,in%20Millets%20production%20in%20India

https://apeda.gov.in/milletportal/about_us.html

https://www.medicalnewstoday.com/articles/what-ismillet#

summary

E-catalogue for export of millets and value-added

products-North Eastern states (https://apeda.gov.in/

milletportal/files/NER_Millet_Value_Added_Products_Catalogue.pdf)

Millets in the Indian Himalaya (https://www.millets.res.in/pub/2019/Millets_Indian_Himalaya.pdf)

https://apeda.gov.in/milletportal/Production.

html#:~:text=India%20is%20the%20largest%20producer,41%20per%20cent%20in%202020


Prabal sen
Program Associate
Caritas India
CBCI Centre, Ashok Place,
Opposite Gole Dak Khana,
New Delhi - 110 001, India
E-mail: prabal@caritasindia.org

ಆಂಗ್ಲ ಮೂಲ : ಲೀಸಾ ಇಂಡಿಯಾ; ಸಂಪುಟ :೨೫; ಸಂಚಿಕೆ : ೧ ; ಮಾರ್ಚ್‌ ೨೦‌೨೩

Recent Posts

ಮಹಿಳೆಯರ ನೇತೃತ್ವದ ಕೃಷಿ ಉದ್ಯಮಗಳು- ಸಿರಿಧಾನ್ಯಗಳ ಸಾಮರ್ಥ್ಯ ಪ್ರದರ್ಶನ

ಮಹಿಳೆಯರ ನೇತೃತ್ವದ ಕೃಷಿ ಉದ್ಯಮಗಳು- ಸಿರಿಧಾನ್ಯಗಳ ಸಾಮರ್ಥ್ಯ ಪ್ರದರ್ಶನ

ಒರಿಸ್ಸಾದಲ್ಲಿ ಸಿರಿಧಾನ್ಯಗಳ ಪುನರುಜ್ಜೀವನವು ಮಹಿಳಾ ಗುಂಪುಗಳಲ್ಲಿ ಆತ್ಮವಿಶ್ವಾಸವನ್ನು ತುಂಬಿದೆ. ಬಡತನ ಮತ್ತು ಅಪೌಷ್ಟಿಕತೆಯನ್ನು ಹೋಗಲಾಡಿಸಲು ಸಹಾಯ ಮಾಡಿದೆ. ಒರಿಸ್ಸಾ ಮಿಲ್ಲೆಟ್ಸ್ ಮಿಷನ್ ಮತ್ತು ಮಿಷನ್ ಶಕ್ತಿ ಇಲಾಖೆಗಳು ಒರಿಸ್ಸಾದಾದ್ಯಂತ WSHG ನೇತೃತ್ವದ ಸಿರಿಧಾನ್ಯ ಆಧಾರಿತ ಕೃಷಿ ಉದ್ಯಮಗಳನ್ನು ಯಶಸ್ವಿಯಾಗಿ ಉತ್ತೇಜಿಸುತ್ತಿವೆ. ಜೀವನೋಪಾಯವನ್ನು ಬಲಪಡಿಸುವುದರೊಂದಿಗೆ ಮನೆಯ ಆದಾಯವನ್ನು ಉತ್ತಮಗೊಳಿಸಿದೆ.

ಕೃಷಿ ಜ್ಞಾನ ವಾಹನ-ಕೃಷಿ ತಂತ್ರಜ್ಞಾನವನ್ನು ರೈತರ ಮನೆ ಬಾಗಿಲಿಗೆ ತರುವುದು

ಕೃಷಿ ಜ್ಞಾನ ವಾಹನ-ಕೃಷಿ ತಂತ್ರಜ್ಞಾನವನ್ನು ರೈತರ ಮನೆ ಬಾಗಿಲಿಗೆ ತರುವುದು

ಕೃಷಿ ಜ್ಞಾನ ವಾಹನ ಉಪಕ್ರಮವು ರಾಜ್ಯದಲ್ಲಿ ಲಭ್ಯವಿರುವ ವಿಸ್ತರಣಾ ಸೇವೆಗಳನ್ನು ಗಮನಾರ್ಹವಾಗಿ ಹೆಚ್ಚಿಸಿದೆ. ಬಿಹಾರವು ಕೃಷಿ ಉತ್ಪಾದಕತೆಯನ್ನು ಹೆಚ್ಚಿಸುವ ಸಾಮರ್ಥ್ಯವನ್ನು ಹೊಂದಿದೆ. ರೈತರಿಗೆ ಆಧುನಿಕ ಕೃಷಿ ತಂತ್ರಗಳು ಮತ್ತು ತಜ್ಞರ ಮಾರ್ಗದರ್ಶನವನ್ನು ನೇರವಾಗಿ ಒದಗಿಸುವ ಮೂಲಕ, ಇದು ಅರ್ಥಪೂರ್ಣ ಪರಿಣಾಮವನ್ನು ಸೃಷ್ಟಿಸಲು ಸಜ್ಜಾಗಿದೆ.

ಭತ್ತದ ನೇರ ಬಿತ್ತನೆ- ಭತ್ತದ ಕೃಷಿಯಲ್ಲಿ ಕ್ರಾಂತಿ

ಭತ್ತದ ನೇರ ಬಿತ್ತನೆ- ಭತ್ತದ ಕೃಷಿಯಲ್ಲಿ ಕ್ರಾಂತಿ

ಭತ್ತದ ನೇರ ಬಿತ್ತನೆಯಂತಹ ತಂತ್ರಜ್ಞಾನಗಳು ನೀರನ್ನು ಸಂರಕ್ಷಿಸಲು, ರೈತರ ಆದಾಯವನ್ನು ಸುಧಾರಿಸಲು ಮತ್ತು ಪರಿಸರ ಫಲಿತಾಂಶಗಳನ್ನು ಹೆಚ್ಚಿಸಲು ಪರಿವರ್ತನಾತ್ಮಕ ಅವಕಾಶವನ್ನು ಒದಗಿಸುತ್ತವೆ. ಬಲವಾದ ನೀತಿ ಬೆಂಬಲದೊಂದಿಗೆ ವಿವಿಧ ಸಂಸ್ಥೆಗಳ ಸಂಯೋಜಿತ ಪ್ರಯತ್ನಗಳೊಂದಿಗೆ, ತಂತ್ರಜ್ಞಾನವು ಭತ್ತದ ಕೃಷಿಯಲ್ಲಿ ಕ್ರಾಂತಿಯನ್ನುಂಟುಮಾಡಬಹುದು. ಹೆಚ್ಚುತ್ತಿರುವ ಜನಸಂಖ್ಯೆಗೆ ಆಹಾರ ಭದ್ರತೆಯನ್ನು ಖಚಿತಪಡಿಸುತ್ತದೆ.

YouTube
Instagram
WhatsApp