ಮಹಿಳೆಯರ ನೇತೃತ್ವದ ಕೃಷಿ ಉದ್ಯಮಗಳು- ಸಿರಿಧಾನ್ಯಗಳ ಸಾಮರ್ಥ್ಯ ಪ್ರದರ್ಶನ


ಒರಿಸ್ಸಾದಲ್ಲಿ ಸಿರಿಧಾನ್ಯಗಳ ಪುನರುಜ್ಜೀವನವು ಮಹಿಳಾ ಗುಂಪುಗಳಲ್ಲಿ ಆತ್ಮವಿಶ್ವಾಸವನ್ನು ತುಂಬಿದೆ. ಬಡತನ ಮತ್ತು ಅಪೌಷ್ಟಿಕತೆಯನ್ನು ಹೋಗಲಾಡಿಸಲು ಸಹಾಯ ಮಾಡಿದೆ. ಒರಿಸ್ಸಾ ಮಿಲ್ಲೆಟ್ಸ್ ಮಿಷನ್ ಮತ್ತು ಮಿಷನ್ ಶಕ್ತಿ ಇಲಾಖೆಗಳು ಒರಿಸ್ಸಾದಾದ್ಯಂತ WSHG ನೇತೃತ್ವದ ಸಿರಿಧಾನ್ಯ ಆಧಾರಿತ ಕೃಷಿ ಉದ್ಯಮಗಳನ್ನು ಯಶಸ್ವಿಯಾಗಿ ಉತ್ತೇಜಿಸುತ್ತಿವೆ. ಜೀವನೋಪಾಯವನ್ನು ಬಲಪಡಿಸುವುದರೊಂದಿಗೆ ಮನೆಯ ಆದಾಯವನ್ನು ಉತ್ತಮಗೊಳಿಸಿದೆ.


ಒರಿಸ್ಸಾದ 62 ಪರಿಶಿಷ್ಟ ಪಂಗಡಗಳು ಅದರಲ್ಲೂ 13 ದುರ್ಬಲ ಬುಡಕಟ್ಟು ಗುಂಪುಗಳಿಗೆ ನೆಲೆಯಾಗಿದೆ. ಪರಿಶಿಷ್ಟ ಪಂಗಡಗಳು  ಒರಿಸ್ಸಾದ ಒಟ್ಟು ಜನಸಂಖ್ಯೆಯಲ್ಲಿ 22.85% ರಷ್ಟಿವೆ. ಹಲವು ವರ್ಷಗಳಿಂದ, ಬುಡಕಟ್ಟು ಸಮುದಾಯಗಳು ಗುಡ್ಡಗಾಡು ಪ್ರದೇಶ ಮತ್ತು ಪರ್ವತ ಇಳಿಜಾರುಗಳಲ್ಲಿ ಮಳೆಯಾಶ್ರಿತ ಕೃಷಿಯನ್ನಾಧರಿಸಿ ತಮ್ಮ ಜೀವನ ನಡೆಸುತ್ತಿದ್ದಾರೆ. ಅಲ್ಲಿ ಅವರು ಮಿಶ್ರ ಕೃಷಿ ಪದ್ಧತಿಯಡಿಯಲ್ಲಿ ರಾಗಿ, ದ್ವಿದಳ ಧಾನ್ಯಗಳು, ಕಾಳುಗಳು, ಗೆಡ್ಡೆಗಳು ಮತ್ತು ಬೇರುಗಳಂತಹ ಸಾಂಪ್ರದಾಯಿಕ ಬೆಳೆಗಳನ್ನು ಬೆಳೆಯುತ್ತಾರೆ. ಬುಡಕಟ್ಟು ಮಹಿಳೆಯರು ತಮ್ಮ ಮನೆಯ ಆದಾಯಕ್ಕೆ ಕೊಡುಗೆ ನೀಡುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಾರೆ. ಅವರು ತಮ್ಮ ಮನೆಯ ಗಂಡಸರಿಗೆ ಕೃಷಿ ಕೆಲಸಗಳಾದ ಬಿತ್ತನೆ, ಕಳೆ ಕೀಳುವುದು, ಕೊಯ್ಲು ಮತ್ತು ಸಂಸ್ಕರಣೆ ಮುಂತಾದ ಕೆಲಸಗಳಲ್ಲಿ ಸಹಾಯ ಮಾಡುತ್ತಾರೆ.

ಸಾಂಪ್ರದಾಯಿಕವಾಗಿ, ಹೆಚ್ಚು ಪೌಷ್ಟಿಕಾಂಶ ಹೊಂದಿರುವ ಸಿರಿಧಾನ್ಯಗಳು ಒರಿಸ್ಸಾದ ಬುಡಕಟ್ಟು ಪ್ರದೇಶಗಳ ಆಹಾರ ಪದ್ಧತಿ ಮತ್ತು ಬೆಳೆ ವ್ಯವಸ್ಥೆಯ ಮುಖ್ಯ ಭಾಗವಾಗಿದ್ದವು. ಸಿರಿಧಾನ್ಯಗಳು ಹವಾಮಾನ-ನಿರೋಧಕ ಬೆಳೆಗಳಾಗಿವೆ. ಏಕೆಂದರೆ ಅವು ತೀವ್ರ ಹವಾಮಾನ ಪರಿಸ್ಥಿತಿಗಳನ್ನು ತಡೆದುಕೊಳ್ಳಬಲ್ಲವು. ಅವುಗಳಿಗೆ ಕಡಿಮೆ ಒಳಸುರಿಯುವಿಕೆ ಮತ್ತು ಸಂಪನ್ಮೂಲಗಳ ಅಗತ್ಯವಿರುತ್ತದೆ. ಜೊತೆಗೆ ಸಿರಿಧಾನ್ಯಗಳ ಕಾಳುಗಳ ಗಾತ್ರ, ಆಕಾರ, ಹೊಟ್ಟು ಭಿನ್ನವಾಗಿರುತ್ತದೆ. ಹಾಗಾಗಿ ಇದರ ಸಂಸ್ಕರಣೆಯನ್ನು ಸರಾಗವಾಗಿ ಮಾಡುವುದು ಕಷ್ಟ.

ಸರ್ಕಾರಿ ಇಲಾಖೆಗಳ ನಡುವಿನ ಸಹಯೋಗ

 ಈ ಸವಾಲುಗಳನ್ನು ಎದುರಿಸುವ ಸಲುವಾಗಿ, ಒರಿಸ್ಸಾ ಸರ್ಕಾರದ ಕೃಷಿ ಮತ್ತು ರೈತರ ಸಬಲೀಕರಣ ಇಲಾಖೆಯು ಸಿರಿಧಾನ್ಯಗಳನ್ನು ಪುನರುಜ್ಜೀವನಗೊಳಿಸಲು ಪ್ರಾರಂಭಿಸಿದ ಪ್ರಮುಖ ಕಾರ್ಯಕ್ರಮವಾದ ಒರಿಸ್ಸಾ ಮಿಲೆಟ್ಸ್ ಮಿಷನ್ (OMM) ಮಹಿಳೆಯರು ನೇತೃತ್ವದ ಸಿರಿಧಾನ್ಯ ಉದ್ಯಮಗಳನ್ನು ಬೆಂಬಲಿಸುತ್ತಿದೆ. ಮಿಷನ್ ಶಕ್ತಿ ಇಲಾಖೆಯ ಸಹಯೋಗದೊಂದಿಗೆ, ಮಹಿಳಾ ಸ್ವಸಹಾಯ ಗುಂಪುಗಳು (WSHGs) ಸಂಸ್ಕರಣಾ ಘಟಕಗಳು, ಮಿಲ್ಲೆಟ್ ಶಕ್ತಿ ಕೆಫೆ, ಮಿಲ್ಲೆಟ್ ಶಕ್ತಿ ಔಟ್ಲೆಟ್, ಮಿಲ್ಲೆಟ್ ಶಕ್ತಿ ಟಿಫಿನ್

ಕೇಂದ್ರ, ಟೇಕ್-ಹೋಮ್ ರೇಷನ್ (THR), ಬಯೋ-ಇನ್ಪುಟ್ ಕೇಂದ್ರಗಳು, ಕಸ್ಟಮ್ ನೇಮಕಾತಿ ಕೇಂದ್ರಗಳು ಮತ್ತು ಸಮುದಾಯಗಳು ನಿರ್ವಹಿಸುತ್ತಿರುವ ಬೀಜ ಬ್ಯಾಂಕ್‌ಗಳಂತಹ 2,000 ಕ್ಕೂ ಹೆಚ್ಚು ಉದ್ಯಮಗಳನ್ನು ಸ್ಥಾಪಿಸುವಲ್ಲಿ, ಮುನ್ನಡೆಸುವಲ್ಲಿ ಮತ್ತು ನಿರ್ವಹಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿವೆ.

“OMM ಒಂದು ವಿಶಿಷ್ಟ ಕಾರ್ಯಕ್ರಮ. ಏಕೆಂದರೆ ಇದು ಎರಡೂ ತುದಿಯ ಮೌಲ್ಯ ಸರಪಳಿ ಮಧ್ಯಸ್ಥಿಕೆಗಳು ಮತ್ತು ಅಳೆಯಬಹುದಾದಂತಹ ನವೀನ ವಿಧಾನಗಳನ್ನು ಗುರುತಿಸುತ್ತದೆ,” ಎಂದು ಒರಿಸ್ಸಾ ಸರ್ಕಾರದ ಕೃಷಿ ಮತ್ತು ರೈತರ ಸಬಲೀಕರಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅರವಿಂದ ಕುಮಾರ್ ಪಾಧೀ ಹೇಳಿದರು.

 ಮಹಿಳಾ ನೇತೃತ್ವದ ಸ್ವಸಹಾಯ ಗುಂಪುಗಳನ್ನು (WSHGs) ಒಳಗೊಳ್ಳುವ ಮೂಲಕ ಮತ್ತು ಸಿರಿಧಾನ್ಯ ಮೌಲ್ಯ ಸರಪಳಿಯಲ್ಲಿ ಅವರ ಸಕ್ರಿಯ ಭಾಗವಹಿಸುವಿಕೆಯನ್ನು ಸುಗಮಗೊಳಿಸುವ ಮೂಲಕ OMM ಮಹಿಳಾ ಸಬಲೀಕರಣದ ಮೇಲೆ ಗಮನ ಕೇಂದ್ರೀಕರಿಸಿದೆ. ಸಂಸ್ಕರಣೆ, ಮೌಲ್ಯವರ್ಧನೆ ಮತ್ತು ಮಾರುಕಟ್ಟೆಗಳಲ್ಲಿ ಮುಂಚೂಣಿ ಪಾತ್ರಗಳನ್ನು ವಹಿಸಲು ಮಹಿಳೆಯರಿಗೆ ತರಬೇತಿ ನೀಡಲಾಗುತ್ತದೆ,ಎಂದು ಪ್ರಧಾನ ಕಾರ್ಯದರ್ಶಿಯವರು ಹೇಳಿದರು. ಅಭಿಯಾನವನ್ನು 2017 ರಲ್ಲಿ 7 ಜಿಲ್ಲೆಗಳ 30 ಬ್ಲಾಕ್ಗಳಲ್ಲಿ ಪ್ರಾರಂಭಿಸಲಾಯಿತು. 2023 ರಿಂದ ಎಲ್ಲಾ 30 ಜಿಲ್ಲೆಗಳ 177 ಬ್ಲಾಕ್ಗಳಿಗೆ ವಿಸ್ತರಿಸಲಾಗಿದೆ.

ಮಿಷನ್ ಶಕ್ತಿ ಇಲಾಖೆಯು ಸಾಲ ಮತ್ತು ಮಾರುಕಟ್ಟೆ ಸಂಪರ್ಕವನ್ನು ಒದಗಿಸುವ ಮೂಲಕ ಲಾಭದಾಯಕ ಚಟುವಟಿಕೆಗಳ ಮೂಲಕ ಮಹಿಳೆಯರನ್ನು ಸಬಲೀಕರಣಗೊಳಿಸುವ ಉದ್ದೇಶವನ್ನು ಹೊಂದಿದೆ. ಮಿಷನ್ ಶಕ್ತಿ ಅಡಿಯಲ್ಲಿ WSHG ಗಳ ಮೂಲಕ ಮಹಿಳಾ ಸಬಲೀಕರಣವು ಒರಿಸ್ಸಾ ಸರ್ಕಾರದ ಪ್ರಮುಖ ಕಾರ್ಯಕ್ರಮವಾಗಿದೆ. ಕಾಲಾನಂತರದಲ್ಲಿ, ಹೆಚ್ಚು ಹೆಚ್ಚು ಮಹಿಳೆಯರು WSHG ಯ ಭಾಗವಾಗುತ್ತಾರೆ ಎಂದು ಭಾವಿಸಲಾಗಿದೆ. ರಾಜ್ಯದ ಎಲ್ಲಾ ಬ್ಲಾಕ್‌ಗಳು ಮತ್ತು ನಗರ ಸ್ಥಳೀಯ ಸಂಸ್ಥೆಗಳಲ್ಲಿ ಇಲ್ಲಿಯವರೆಗೆ ಸುಮಾರು 70 ಲಕ್ಷ ಮಹಿಳೆಯರನ್ನು 6 ಲಕ್ಷ ಗುಂಪುಗಳಲ್ಲಿ ಸಂಘಟಿಸಲಾಗಿದೆ.

ಮಹಿಳಾ ನೇತೃತ್ವದ ಕೃಷಿ ಉದ್ಯಮಗಳು

ಒರಿಸ್ಸಾ ಮಿಲ್ಲೆಟ್ಸ್ ಮಿಷನ್ ಮತ್ತು ಮಿಷನ್ ಶಕ್ತಿ ಇಲಾಖೆಯ ನಡುವಿನ ಪಾಲುದಾರಿಕೆಯು ರಾಜ್ಯಾದ್ಯಂತ ಮಹಿಳಾ ಸ್ವಸಹಾಯ ಗುಂಪುಗಳಿಗೆ (WSHGs) ಮಹಿಳಾ ನೇತೃತ್ವದ ಕೃಷಿ ಉದ್ಯಮಗಳನ್ನು ಸ್ಥಾಪಿಸಲು ಸಹಾಯ ಮಾಡಿದೆ. ಈ ಉದ್ಯಮಗಳಲ್ಲಿ 3- ರಾಗಿ ಕ್ಲೀನರ್-ಗ್ರೇಡರ್-ಡಿಸ್ಟೋನರ್ ಘಟಕಗಳನ್ನು ಹೊಂದಿರುವ 7 WSHG ಗಳು (ಪ್ರತಿ ಗಂಟೆಗೆ 2-3 ಕ್ವಿಂಟಾಲ್ ಸಾಮರ್ಥ್ಯ), 3- ರಾಗಿ ಕ್ಲೀನರ್-ಗ್ರೇಡರ್-ಡಿಸ್ಟೋನರ್ ಘಟಕಗಳನ್ನು ಹೊಂದಿರುವ 14 WSHG ಗಳು (ಪ್ರತಿ ಗಂಟೆಗೆ 10-12 ಕ್ವಿಂಟಾಲ್ ಸಾಮರ್ಥ್ಯ), 2- ರಾಗಿ ಕ್ಲೀನರ್-ಗ್ರೇಡರ್-ಡಿಸ್ಟೋನರ್ ಘಟಕಗಳನ್ನು ಹೊಂದಿರುವ 35 WSHG ಗಳು, ಮೈನರ್ ಮಿಲ್ಟ್ ಡೆಹಲ್ಲರ್ ಘಟಕಗಳನ್ನು ಹೊಂದಿರುವ 20 WSHG ಗಳು, ಪಲ್ವರೈಸರ್ ಘಟಕಗಳನ್ನು ಹೊಂದಿರುವ 975 WSHG ಗಳು, ಥ್ರೆಷರ್ ಘಟಕಗಳನ್ನು ಹೊಂದಿರುವ 738 WSHG ಗಳು, ಇಂಟಿಗ್ರೇಟೆಡ್ ಚೈಲ್ಡ್ ಡೆವಲಪ್‌ಮೆಂಟ್ ಸರ್ವೀಸಸ್ ಪ್ರೋಗ್ರಾಂ ಅಡಿಯಲ್ಲಿ ಟೇಕ್-ಹೋಮ್-ರೇಷನ್ ಘಟಕಗಳನ್ನು ಹೊಂದಿರುವ 59 WSHG ಗಳು ಮತ್ತು ಇಂಟಿಗ್ರೇಟೆಡ್ ಮೈನರ್ ಮಿಲ್ಟ್ ಕ್ಲೀನರ್-ಗ್ರೇಡರ್-ಡಿಸ್ಟೋನರ್ ಘಟಕವನ್ನು ಹೊಂದಿರುವ 2 WSHG ಗಳು ಸೇರಿವೆ.

ಕೆಲವು ಯಶಸ್ಸಿನ ಕತೆಗಳನ್ನು ಕೆಳಗೆ ನೀಡಲಾಗಿದೆ.

ಯಶೋಗಾಥೆ 1

 ಕೊರಾಪುಟ್ ಜಿಲ್ಲೆಯ ಬೋಯಿಪರಿಗುಡ ಬ್ಲಾಕ್‌ನ ದೊರಗುಡ ಗ್ರಾಮದಲ್ಲಿ ನೆಲೆಗೊಂಡಿರುವ ಶಬರಿ WSHG, ಬುಡಕಟ್ಟು ರೈತ ಮಹಿಳೆಯರ ಶ್ರಮವನ್ನು ಕಡಿಮೆ ಮಾಡಲು ಕಾರ್ಯಕ್ರಮದ ಅಡಿಯಲ್ಲಿ ರಾಗಿ ಒಕ್ಕಣೆ ಯಂತ್ರವನ್ನು ಪಡೆದ ಬೋಯಿಪರಿಗುಡ ಬ್ಲಾಕ್‌ನಲ್ಲಿರುವ 10 WSHG ಗಳಲ್ಲಿ ಇದೂ ಒಂದು. ಹಿಂದೆ, ಈ ಬುಡಕಟ್ಟು ರೈತ ಮಹಿಳೆಯರು ರಾಗಿ ಒಕ್ಕಲು ಸಾಂಪ್ರದಾಯಿಕ ವಿಧಾನಗಳನ್ನು ಅವಲಂಬಿಸಿದ್ದರು. ಇದು ಶ್ರಮದಾಯಕ ಪ್ರಕ್ರಿಯೆಯಾಗಿದ್ದು, ಸಂಸ್ಕರಣಾ ವೆಚ್ಚವು ಹೆಚ್ಚಾಗುತ್ತಿತ್ತು. ಈ ಮಹಿಳೆಯರು ಪ್ರತಿದಿನ ಸುಮಾರು 5-6 ಗಂಟೆಗಳ ಕಾಲ ರಾಗಿಯನ್ನು ಒಣಗಿಸಿ ಹೊಟ್ಟುತೆಗೆದು ಬೀಜಗಳನ್ನು ಹೊರತೆಗೆಯುತ್ತಿದ್ದರು. ಈ ಪ್ರಕ್ರಿಯೆಯು ಮೂರರಿಂದ ಐದು ದಿನಗಳನ್ನು ತೆಗೆದುಕೊಳ್ಳುತ್ತಿತ್ತು. ಇದರಿಂದ ವೆಚ್ಚವು ಹೆಚ್ಚಾಗುತ್ತಿತ್ತು.

ರಾಗಿ ಒಕ್ಕಣೆ ಯಂತ್ರಗಳು ಸಿಕ್ಕ ನಂತರ, WSHGಗಳು ಉತ್ತಮ ಗುಣಮಟ್ಟದ ರಾಗಿಯನ್ನು ಪರಿಣಾಮಕಾರಿಯಾಗಿ ಸಂಸ್ಕರಿಸಿದವು. ಶಬರಿ WSHG ಅಸಾಧಾರಣವಾಗಿ ಉತ್ತಮವಾಗಿ ಕಾರ್ಯನಿರ್ವಹಿಸಿತು. ಸಂಸ್ಕರಣಾ ಘಟಕದಿಂದ ಉತ್ತಮ ಆದಾಯವನ್ನು ಗಳಿಸಿತು. ಇತರ ರೈತ ಮಹಿಳೆಯರು ತಮ್ಮ ಕೊಯ್ಲು ಮಾಡಿದ ರಾಗಿಯನ್ನು ಶಬರಿ WSHG ನಿರ್ವಹಿಸುವ ರಾಗಿ ಒಕ್ಕಣೆ ಯಂತ್ರದಿಂದ ಸಂಸ್ಕರಣೆ ಮಾಡಿಸಿಕೊಳ್ಳುತ್ತಾರೆ. ಇದಕ್ಕಾಗಿ ಪ್ರತಿ ಕೆಜಿ ರಾಗಿಗೆ ರೂ.1 ಪಾವತಿಸುತ್ತಾರೆ. ಕೊಯ್ಲಿನ ಸಮಯದಲ್ಲಿ WSHG ತಿಂಗಳಿಗೆ ಸರಾಸರಿ ರೂ.10,000 ಆದಾಯವನ್ನು ಗಳಿಸುತ್ತದೆ.

ಶಬರಿ WSHG ಯ ಅಧ್ಯಕ್ಷೆ ಚಂಚಲಾ ಮಾಝಿ, “ನಾವು ರೈತರಿಗೆ ರಾಗಿ ಒಕ್ಕಣೆ ಯಂತ್ರಗಳನ್ನು ಬಾಡಿಗೆ ಆಧಾರದ ಮೇಲೆ ಒದಗಿಸುತ್ತೇವೆ. ಪ್ರತಿ ಕ್ವಿಂಟಲ್ ರಾಗಿ ಸಂಸ್ಕರಣೆಗೆ ರೂ. 100 ವಿಧಿಸುತ್ತೇವೆ,”ಎಂದು ಹೇಳಿದರು. ಸಾಮಾನ್ಯವಾಗಿ, ದಿನವೊಂದಕ್ಕೆ 3 ರಿಂದ 4 ಕ್ವಿಂಟಾಲ್ ರಾಗಿ ಒಕ್ಕಣೆ ಮಾಡಲಾಗುತ್ತದೆ. ಅದೇ ಯಂತ್ರವನ್ನು ಬಳಸಿದಾಗ ಸಮಯದ ಉಳಿತಾಯವಾಗುತ್ತದೆ. ಹಿಂದೆಲ್ಲ ಇದು 5-6 ದಿನಗಳ ಶ್ರಮದಾಯಕ ಕೆಲಸವಾಗುತ್ತಿತ್ತು. ಈಗ ಒಂದೇ ದಿನದಲ್ಲಿ ಮಾಡಬಹುದಾಗಿದೆ. “ಸಾಂಪ್ರದಾಯಿಕ ತಂತ್ರಗಳನ್ನು ಬಳಸಿಕೊಂಡು ರಾಗಿ ಒಕ್ಕಣೆ ಮಾಡುವ ರೈತರು ನಮ್ಮ ಗುರಿ. ಇದರಿಂದಾಗಿ ಅವರ ಸಮಯ, ವೆಚ್ಚ ಮತ್ತು ಶ್ರಮವನ್ನು ಕಡಿಮೆ ಮಾಡಬಹುದು,” ಎಂದು ಶಬರಿ WSHG ಯ ಕಾರ್ಯದರ್ಶಿ ಭಾರತಿ ತಾರಾಪುಟಿಯಾ ಹೇಳಿದರು. “ರಾಗಿ ಒಕ್ಕಣೆ ಘಟಕವು ರೈತರು ಮತ್ತು WSHG ಯ ಮಹಿಳಾ ಸದಸ್ಯರ ಆದಾಯವನ್ನು ಹೆಚ್ಚಿಸಿದೆ. ಅವರ ಜೀವನೋಪಾಯವನ್ನು ಬಲಪಡಿಸಿದೆ,” ಎಂದು ಮಾಝಿ ಹೇಳಿದರು.

ಯಶೋಗಾಥೆ 2

ಕೊರಾಪುಟ್ ಜಿಲ್ಲೆಯ ಮಂಕಡಬೇಡ ಗ್ರಾಮದ ಮಾ ಸಂತೋಷಿ WSHG ರಾಗಿಯನ್ನು ಹಿಟ್ಟು ಮಾಡುವ ಪಲ್ವರೈಸರ್‌ ಯಂತ್ರವನ್ನು (3 HP, ಸಿಂಗಲ್ ಫೇಸ್) ನಿರ್ವಹಿಸುತ್ತಿದ್ದಾರೆ. ಹಿಟ್ಟು ಮಾಡುವ ಯಂತ್ರದ ಬಳಕೆಯಿಂದ, ರಾಗಿ ಹಿಟ್ಟನ್ನು ಮಾಡುವುದು ತುಂಬಾ ಸುಲಭ. ನಮಗೆ ತರಬೇತಿ ನೀಡಿ ಯಂತ್ರವನ್ನು ಒದಗಿಸಿದ್ದಕ್ಕಾಗಿ OMM ಮತ್ತು ಮಿಷನ್ ಶಕ್ತಿಗೆ ಧನ್ಯವಾದಗಳು, ಎಂದು WSHG ಅಧ್ಯಕ್ಷೆ ಗೌರಿ ಗುಂಟಾ ಹೇಳಿದರು. ಸ್ಥಳೀಯ ರೈತರು ತಮ್ಮ ರಾಗಿ ಹಿಟ್ಟು ಮಾಡಿಸಲು ಪಲ್ವರೈಸರ್ ಘಟಕಕ್ಕೆ ಹೆಚ್ಚಾಗಿ ಭೇಟಿ ನೀಡುತ್ತಾರೆ. WSHG 1 ಕೆಜಿ ರಾಗಿ ಹಿಟ್ಟು ಮಾಡಲು ರೂ. 4 ಶುಲ್ಕ ನಿಗದಿಪಡಿಸಿದೆ. ಈ ಯಂತ್ರದಿಂದ ಗಂಟೆಗೆ 15-20 ಕೆಜಿ ರಾಗಿಯನ್ನು ಹಿಟ್ಟು ಮಾಡಬಹುದು. ಕಳೆದ ವರ್ಷ WSHG ಪಲ್ವರೈಜರ್‌ ಘಟಕದಿಂದ ಸುಮಾರು ರೂ. 50,000 ಗಳಿಸಿತು. ನಾವು ನಮ್ಮ WSHG ಸದಸ್ಯರಿಗೆ ಆದಾಯವನ್ನು ಸಮಾನವಾಗಿ ವಿತರಿಸುತ್ತೇವೆ, ಎಂದು ಗುಂಟಾ ಹೇಳಿದರು. ಸ್ಥಳದಲ್ಲಿ ಹೆಚ್ಚು ಹೆಚ್ಚು WSHGಗಳು ಪಲ್ವರೈಜರ್‌ ಘಟಕವನ್ನು ಸ್ಥಾಪಿಸಲು ಆಸಕ್ತಿ ತೋರಿಸುತ್ತಿವೆ, ಎಂದು ಹೇಳಿದರು.

 ಯಶೋಗಾಥೆ 3

ಸುಂದರಗಢ ಜಿಲ್ಲೆಯ ಕುತ್ರಾ ಬ್ಲಾಕ್‌ನ ಮಿಂಟೆ ಕುಜೂರ್‌ ಅವರ ಜೀವನವು ಕಷ್ಟಕರವಾಗಿತ್ತು. ಕೃಷಿಯೇ ಅವರ ಆದಾಯದ ಪ್ರಾಥಮಿಕ ಮೂಲವಾಗಿದ್ದರಿಂದ, ಮಕ್ಕಳಿಗೆ ಒಳ್ಳೆಯ ಶಿಕ್ಷಣ ಒದಗಿಸುವುದು ಕಷ್ಟಕರವಾಗಿತ್ತು. 2022 ರಲ್ಲಿ, ಮಿಂಟೆ ಕುಜೂರ್ ಮತ್ತು ಜ್ಯೋತಿ WSHG ಯ ಇತರ ಸದಸ್ಯರು ಒರಿಸ್ಸಾ ಮಿಲ್ಲೆಟ್ ಮಿಷನ್‌ನಿಂದ ಪಲ್ವರೈಸರ್ ಅನ್ನು ಪಡೆದರು. ಸಂಪನ್ಮೂಲ ವ್ಯಕ್ತಿಯಿಂದ ತರಬೇತಿ ಪಡೆದ ನಂತರ, ಹತ್ತು ಸದಸ್ಯರಲ್ಲಿ ಮೂವರು ಸದಸ್ಯರು ಯಂತ್ರವನ್ನು ನಿರ್ವಹಿಸಿದರು. ಪ್ರತಿ ಕೆಜಿಗೆ ರೂ.5 ಶುಲ್ಕ ವಿಧಿಸಿದರು. ಸುಮಾರು ರೂ. 7000 ಮಾಸಿಕ ಆದಾಯವನ್ನು ಗಳಿಸಿದರು. ಪಲ್ವರೈಸರ್‌ನಲ್ಲಿ ರಾಗಿಯನ್ನು ಮಾತ್ರವಲ್ಲದೆ ಬೇಳೆ, ಅರಿಶಿನ ಮತ್ತು ಗೋಧಿಯನ್ನು ಸಹ ಹಿಟ್ಟು ಮಾಡಬಹುದು. ಈ ಉಪಕ್ರಮವು ಸ್ವಾವಲಂಬನೆಯತ್ತ ಒಂದು ಮಹತ್ವದ ಹೆಜ್ಜೆಯಾಯಿತು. ಕೌಶಲ್ಯ ನಿರ್ಮಾಣ ಮತ್ತು ಸಂಪನ್ಮೂಲ ಪೂರೈಕೆಯ ಬಾಹ್ಯ ಬೆಂಬಲು ಮಹಿಳಾ ಸಬಲೀಕರಣದ ಮೇಲೆ ಬೀರಿದ ಸ್ಪಷ್ಟ ಪರಿಣಾಮವನ್ನು ಪ್ರದರ್ಶಿಸಿತು. OMM ಅನುಷ್ಠಾನದ ನಂತರ, WSHG ಸದಸ್ಯರು ತಮ್ಮ ಕುಟುಂಬಗಳು ಮತ್ತು ಸಮುದಾಯಗಳಲ್ಲಿ ಹೆಚ್ಚಿನ ಗೌರವವನ್ನು ಗಳಿಸಿದರು. ಜೊತೆಗೆ, ತಮ್ಮ ಮಕ್ಕಳಿಗೆ ಉತ್ತಮ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣವನ್ನು ಕೊಡಿಸುವಷ್ಟು ಆರ್ಥಿಕ ಸ್ಥಿರತೆಯನ್ನು ಸಾಧಿಸಿದರು. ಇದು ಭವಿಷ್ಯದ ಪೀಳಿಗೆಗೆ ಸುಧಾರಿತ ಅವಕಾಶಗಳು ಒದಗಲು ಕಾರಣವಾಯಿತು.

ಯಶೋಗಾಥೆ 4

ನುವಾಪಾದ ಬೆಟ್ಟ ಪ್ರದೇಶದಲ್ಲಿ ಹೇರಳವಾಗಿ ಬೆಳೆಯಲಾಗುತ್ತಿದ್ದ ಸಾಂಪ್ರದಾಯಿಕ ಮಳೆಯಾಶ್ರಿತ ಬೆಳೆಗಳಲ್ಲಿ ಸಾಮೆಯೂ ಒಂದು. ಕಡಿಮೆ ಅವಧಿಯಲ್ಲಿ ಬೆಳೆಯಲಾಗುವ ಈ ಬೆಳೆಯನ್ನು ನಗದು ಬೆಳೆ ಎಂದು ಗುರುತಿಸಲಾಗುತ್ತದೆ. ಜೊತೆಗೆ ಇದು ಸಾಂಪ್ರದಾಯಿಕ ಆಹಾರ ಪದ್ಧತಿಯ ಭಾಗವಾಗಿದೆ. ಸಾಂಪ್ರದಾಯಿಕ ವಿಧಾನದಲ್ಲಿ 1 ಕೆಜಿ ಧಾನ್ಯದ ಹೊಟ್ಟನ್ನು ತೆಗೆಯಲು ಸುಮಾರು 2 ಗಂಟೆಗಳಷ್ಟು ಶ್ರಮಪಡಬೇಕಾಗುತ್ತದೆ.

ದೂರದ ಪ್ರದೇಶಗಳಲ್ಲಿರುವ ಮಹಿಳೆಯರ ಹೊಟ್ಟು ಬಿಡಿಸುವ ಶ್ರಮವನ್ನು ಕಡಿಮೆ ಮಾಡಲು ಸಾಮೂಹಿಕ ಯಂತ್ರ ಅಭಿವೃದ್ಧಿ ವಿಧಾನದ ಮೂಲಕ ಮನೆಮಟ್ಟದಲ್ಲೇ ಬಳಸಬಹುದಾದ ಯಂತ್ರವನ್ನು ಅಭಿವೃದ್ಧಿಗೊಳಿಸಲಾಯಿತು. ನುವಾಪಾ ಜಿಲ್ಲೆಯಲ್ಲಿ ನಡೆದ ಪ್ರಾಯೋಗಿಕ ಉಪಕ್ರಮವು ಮಹಿಳೆಯರಲ್ಲಿ ಗಮನಾರ್ಹ ಆಸಕ್ತಿಯನ್ನು ಹುಟ್ಟುಹಾಕಿತು. ರಾಜ್ಯಾದ್ಯಂತ ಈ ಧಾನ್ಯದ ಉತ್ಪಾದನೆ ಮತ್ತು ಬಳಕೆಯನ್ನು ಪುನರುಜ್ಜೀವನಗೊಳಿಸಲು ಕಡಿಮೆ-ವೆಚ್ಚದ ತಂತ್ರಜ್ಞಾನದ ಸಾಮರ್ಥ್ಯವನ್ನು ತೋರಿಸಿತು.

OMM ಪ್ರಾಯೋಗಿಕವಾಗಿ ಈ ಯಂತ್ರವನ್ನು ಬಳಸಿತು. ಇದು ಒಂದು ಗಂಟೆಯಲ್ಲಿ ಸುಮಾರು 4 ಕೆಜಿಯಷ್ಟು ಧಾನ್ಯವನ್ನು ಸಂಸ್ಕರಿಸಬಲ್ಲದು. ಇದರಲ್ಲಿ ಕಲ್ಲು ತೆಗೆಯುವುದು, ಶೋಧಿಸುವುದು ಮತ್ತು ಬಳಕೆಯ ನಡುವೆ ಯಂತ್ರವನ್ನು ತಣ್ಣಗಾಗಲು ಬಿಡುವುದು ಸೇರಿವೆ. ಪ್ರಸ್ತುತದಲ್ಲಿ ಲಭ್ಯವಿರುವ ಯಂತ್ರಗಳಲ್ಲೇ ಮಾರ್ಪಾಡು ಮಾಡಿ ಇದನ್ನು ಅಭಿವೃದ್ಧಿಗೊಳಿಸಲಾಗಿದೆ. ಇದು ತಂತ್ರಜ್ಞಾನವನ್ನು ರೂ.5000 ದಷ್ಟು ಕಡಿಮೆ ಬೆಲೆಯಲ್ಲಿ ಸಿಗುವಂತೆ ಮಾಡಿತು. ಜೊತೆಗೆ, ಬಳಕೆಯ ಸುಲಭತೆಗಾಗಿ ಈಗಾಗಲೇ ಉತ್ತಮವಾಗಿ ಅಭಿವೃದ್ಧಿ ಹೊಂದಿದ ವೈಶಿಷ್ಟ್ಯಗಳನ್ನು ಹೊಂದಿತ್ತು. ಡಿಹಲ್ಲರ್ ಅನ್ನು ಸಿಂಗಲ್‌ಫೇಸ್ ವಿದ್ಯುಚ್ಛಕ್ತಿಯಿಂದ ನಿರ್ವಹಿಸಬಹುದು ಹಾಗೂ ಯಾವುದೇ ಹೆಚ್ಚುವರಿ ಮೂಲಸೌಕರ್ಯಗಳ ಅಗತ್ಯವಿಲ್ಲ.

 ಯಶಸ್ಸಿನ ಅಂಶಗಳು

 ಒರಿಸ್ಸಾ ಮಿಲೆಟ್ಸ್ ಮಿಷನ್ ಮತ್ತು ಮಿಷನ್ ಶಕ್ತಿ ನಡುವಿನ ಸಹಯೋಗದಲ್ಲಿ ಯಶಸ್ವಿ ಮಹಿಳಾ ನೇತೃತ್ವದ ಕೃಷಿ ಉದ್ಯಮಗಳು ಅಭಿವೃದ್ಧಿ ಹೊಂದಿವೆ. ಮೊದಲನೆಯದು WSHG ಸದಸ್ಯರ ಸಮಗ್ರ ಸಾಮರ್ಥ್ಯ ನಿರ್ಮಾಣ. ತರಬೇತಿ ಕಾರ್ಯಕ್ರಮಗಳು, ಕಾರ್ಯಾಗಾರಗಳು ಮತ್ತು ಕ್ಷೇತ್ರ ಭೇಟಿಗಳ ಮೂಲಕ ಮಹಿಳಾ ರೈತರ ಸಾಮರ್ಥ್ಯಗಳನ್ನು ನಿರ್ಮಿಸುವತ್ತ ಮಿಷನ್ ಗಮನಹರಿಸಿದೆ. ಇದು ಸಿರಿಧಾನ್ಯ ಕೃಷಿ, ಸಂಸ್ಕರಣೆ ಮತ್ತು ಮಾರುಕಟ್ಟೆಯ ವಿಷಯಗಳಲ್ಲಿ ಅವರ ಜ್ಞಾನ ಮತ್ತು ಕೌಶಲ್ಯಗಳನ್ನು ಹೆಚ್ಚಿಸಿದೆ.

ಈ ಮಿಷನ್ ಅಡಿಯಲ್ಲಿ, WSHG ಗಳಿಗೆ ತಮ್ಮ ಉದ್ಯಮಗಳನ್ನು ನಡೆಸಲು ಸಂಸ್ಕರಣಾ ಯಂತ್ರೋಪಕರಣಗಳನ್ನು ಒದಗಿಸಲಾಗಿದೆ. ಮೂರನೆಯದು ಕೃಷಿ ವಲಯದಲ್ಲಿ ಮಹಿಳೆಯರ ಭಾಗವಹಿಸುವಿಕೆ ಮತ್ತು ಸಬಲೀಕರಣಕ್ಕೆ ಆದ್ಯತೆ ನೀಡುವ ರಾಜ್ಯ ಸರ್ಕಾರದ ಬೆಂಬಲ ನೀತಿಗಳು. ಇದೆಲ್ಲವೂ ಮಹಿಳೆಯರು ನಡೆಸುವ ಕೃಷಿ ಉದ್ಯಮಗಳು ಬೆಳೆಯಲು ಅನುಕೂಲಕರ ವಾತಾವರಣವನ್ನು ಸೃಷ್ಟಿಸಿದೆ. ಈ ಕಾರಣಗಳೊಂದಿಗೆ ರೈತ ಮಹಿಳೆಯರ ದೃಢನಿಶ್ಚಯ ಮತ್ತು ಉದ್ಯಮಶೀಲತಾ ಮನೋಭಾವವು ಈ ಉದ್ಯಮಗಳ ಯಶಸ್ಸಿಗೆ ಕಾರಣವಾಗಿವೆ.

ಉಪಸಂಹಾರ

ಈ ಮಹಿಳಾ ನೇತೃತ್ವದ ಉದ್ಯಮಗಳು ತಮ್ಮ ಸಮುದಾಯಗಳು ಸಿರಿಧಾನ್ಯಗಳನ್ನು ಒಳಗೊಳ್ಳುವಂತೆ ಮಾಡುವುದರೊಂದಿಗೆ ಅದಕ್ಕೆ ಉತ್ತೇಜನ ನೀಡುತ್ತಿದೆ. ಸಿರಿಧಾನ್ಯಗಳ ಪೌಷ್ಟಿಕಾಂಶ ಅಂಶ ಮತ್ತು ಜೀವನೋಪಾಯದ ಭದ್ರತೆಯನ್ನು ಖಾತ್ರಿಗೊಳಿಸಿದೆ. ಇದರೊಂದಿಗೆ ಸಿರಿಧಾನ್ಯ ಆರ್ಥಿಕತೆಯನ್ನು ಪುನರುಜ್ಜೀವನಗೊಳಿಸುವ ಚಾಲಕಶಕ್ತಿಯಾಗಿದೆ. OMM ಕಾರ್ಯಕ್ರಮದ ವಿಸ್ತರಣೆಯೊಂದಿಗೆ, ಅಂತಹ ಹೆಚ್ಚಿನ ಉದ್ಯಮಗಳ ಅಗತ್ಯವಿರುತ್ತದೆ. ಹೆಚ್ಚಿನ ರೈತ ಮಹಿಳೆಯರು ಮತ್ತು WSHG ಗಳನ್ನು ಒಳಗೊಳ್ಳುವ ಮೂಲಕ ಮಿಷನ್‌ನ ವಿಸ್ತರಣೆಯಾಗುತ್ತದೆ. ಇದನ್ನು ಒರಿಸ್ಸಾದ ಇತರ ಪ್ರದೇಶಗಳಲ್ಲಿ ಪುನರಾವರ್ತಿಸಲಾಗುತ್ತದೆ. ಇದು ಮಿಷನ್‌ನ ವ್ಯಾಪ್ತಿ ಮತ್ತು ಪರಿಣಾಮವನ್ನು ವಿಸ್ತರಿಸುತ್ತದೆ. ಬಡತನ ನಿವಾರಣೆಗೆ ಮತ್ತು ದೊಡ್ಡ ಪ್ರಮಾಣದಲ್ಲಿ ಮಹಿಳಾ ಸಬಲೀಕರಣಕ್ಕೆ ಕೊಡುಗೆ ನೀಡುತ್ತದೆ.

ಹೊಲದಿಂದ ತಟ್ಟೆಯವರೆಗಿನ ಸಿರಿಧಾನ್ಯ ಮೌಲ್ಯ ಸರಪಳಿಯನ್ನು ಮುನ್ನಡೆಸುವಲ್ಲಿ WSHGಗಳು ನಿರ್ಣಾಯಕ ಪಾತ್ರ ವಹಿಸುತ್ತಿವೆ. ಒರಿಸ್ಸಾದಲ್ಲಿ ಸಿರಿಧಾನ್ಯ ಪುನರುಜ್ಜೀವನವು ಮಹಿಳಾ ಗುಂಪುಗಳಲ್ಲಿ ಆತ್ಮವಿಶ್ವಾಸವನ್ನು ತುಂಬಿದೆ. ಬಡತನ ಮತ್ತು ಅಪೌಷ್ಟಿಕತೆಯನ್ನು ಹೋಗಲಾಡಿಸಲು ಅವರಿಗೆ ನೆರವಾಗಿದೆ. OMM ಮಾದರಿಯು WSHG ಗಳು ಸಿರಿಧಾನ್ಯ ಆಧಾರಿತ ಉದ್ಯಮಗಳನ್ನು ಸ್ಥಾಪಿಸಲು ಬೆಂಬಲ ನೀಡಿದೆ. ಇದು ಅಪೌಷ್ಟಿಕತೆ, ನಿರುದ್ಯೋಗವನ್ನು ಪರಿಹರಿಸುವಲ್ಲಿ ಮತ್ತು ರೈತರು ತಮ್ಮ ಸಿರಿಧಾನ್ಯ ಕೃಷಿ ಪ್ರದೇಶವನ್ನು ಹೆಚ್ಚಿಸಲು ಪ್ರೇರೇಪಿಸಲು ಸಮಗ್ರ ಪರಿಹಾರವಾಗಬಹುದು.


Abhijit Mohanty
Programme Manager-Knowledge Building
WASSAN, Odisha
E-mail: abhijitmohanty10@yahoo.com

Bhesaja Choudhury
Media and Communication Coordinator
WASSAN, Odisha
E-mail: bhesaja@gmail.com

Trinath Taraputia
Regional Coordinator
WASSAN, Odisha
E-mail: trinath.b2793@gmail.com


ಆಂಗ್ಲ ಮೂಲ : ಲೀಸಾ ಇಂಡಿಯಾ; ಸಂಪುಟ :೨೬; ಸಂಚಿಕೆ : ೧ ; ಮಾರ್ಚ್‌ ೨೦‌೨೪

Recent Posts

ಈಶಾನ್ಯ ಭಾರತದಲ್ಲಿ ಸಿರಿಧಾನ್ಯಗಳ ಪುನಶ್ಚೇತನ

ಈಶಾನ್ಯ ಭಾರತದಲ್ಲಿ ಸಿರಿಧಾನ್ಯಗಳ ಪುನಶ್ಚೇತನ

ಈಶಾನ್ಯ ಪ್ರದೇಶದ ಸಣ್ಣ ಹಿಡುವಳಿದಾರರು ತಮ್ಮ ಬೆಳೆ ಹಾಗೂ ಆಹಾರ ಪದ್ಧತಿಯಲ್ಲಿ ರಾಗಿಯನ್ನು ಪುನಶ್ಚೇತನಗೊಳಿಸಿದ್ದಾರೆ. ತಾಂತ್ರಿಕ ಮಾರ್ಗದರ್ಶನ ಮತ್ತು ಮೌಲ್ಯವರ್ಧನೆಯ ವಿಷಯದಲ್ಲಿ ಬೆಂಬಲ, ಮತ್ತು ಮಾರುಕಟ್ಟೆ ಸಂಪರ್ಕಗಳನ್ನು ಕಲ್ಪಿಸುವ ಮೂಲಕ ಈಶಾನ್ಯ ಭಾರತದ ಆಹಾರ ಮತ್ತು ಕೃಷಿ ವ್ಯವಸ್ಥೆಗಳಲ್ಲಿ ಸಿರಿಧಾನ್ಯಗಳನ್ನು ಮರಳಿ ತರುವಲ್ಲಿ ಪ್ರಮುಖ ಪಾತ್ರ ವಹಿಸಿದೆ.

ಕೃಷಿ ಜ್ಞಾನ ವಾಹನ-ಕೃಷಿ ತಂತ್ರಜ್ಞಾನವನ್ನು ರೈತರ ಮನೆ ಬಾಗಿಲಿಗೆ ತರುವುದು

ಕೃಷಿ ಜ್ಞಾನ ವಾಹನ-ಕೃಷಿ ತಂತ್ರಜ್ಞಾನವನ್ನು ರೈತರ ಮನೆ ಬಾಗಿಲಿಗೆ ತರುವುದು

ಕೃಷಿ ಜ್ಞಾನ ವಾಹನ ಉಪಕ್ರಮವು ರಾಜ್ಯದಲ್ಲಿ ಲಭ್ಯವಿರುವ ವಿಸ್ತರಣಾ ಸೇವೆಗಳನ್ನು ಗಮನಾರ್ಹವಾಗಿ ಹೆಚ್ಚಿಸಿದೆ. ಬಿಹಾರವು ಕೃಷಿ ಉತ್ಪಾದಕತೆಯನ್ನು ಹೆಚ್ಚಿಸುವ ಸಾಮರ್ಥ್ಯವನ್ನು ಹೊಂದಿದೆ. ರೈತರಿಗೆ ಆಧುನಿಕ ಕೃಷಿ ತಂತ್ರಗಳು ಮತ್ತು ತಜ್ಞರ ಮಾರ್ಗದರ್ಶನವನ್ನು ನೇರವಾಗಿ ಒದಗಿಸುವ ಮೂಲಕ, ಇದು ಅರ್ಥಪೂರ್ಣ ಪರಿಣಾಮವನ್ನು ಸೃಷ್ಟಿಸಲು ಸಜ್ಜಾಗಿದೆ.

ಭತ್ತದ ನೇರ ಬಿತ್ತನೆ- ಭತ್ತದ ಕೃಷಿಯಲ್ಲಿ ಕ್ರಾಂತಿ

ಭತ್ತದ ನೇರ ಬಿತ್ತನೆ- ಭತ್ತದ ಕೃಷಿಯಲ್ಲಿ ಕ್ರಾಂತಿ

ಭತ್ತದ ನೇರ ಬಿತ್ತನೆಯಂತಹ ತಂತ್ರಜ್ಞಾನಗಳು ನೀರನ್ನು ಸಂರಕ್ಷಿಸಲು, ರೈತರ ಆದಾಯವನ್ನು ಸುಧಾರಿಸಲು ಮತ್ತು ಪರಿಸರ ಫಲಿತಾಂಶಗಳನ್ನು ಹೆಚ್ಚಿಸಲು ಪರಿವರ್ತನಾತ್ಮಕ ಅವಕಾಶವನ್ನು ಒದಗಿಸುತ್ತವೆ. ಬಲವಾದ ನೀತಿ ಬೆಂಬಲದೊಂದಿಗೆ ವಿವಿಧ ಸಂಸ್ಥೆಗಳ ಸಂಯೋಜಿತ ಪ್ರಯತ್ನಗಳೊಂದಿಗೆ, ತಂತ್ರಜ್ಞಾನವು ಭತ್ತದ ಕೃಷಿಯಲ್ಲಿ ಕ್ರಾಂತಿಯನ್ನುಂಟುಮಾಡಬಹುದು. ಹೆಚ್ಚುತ್ತಿರುವ ಜನಸಂಖ್ಯೆಗೆ ಆಹಾರ ಭದ್ರತೆಯನ್ನು ಖಚಿತಪಡಿಸುತ್ತದೆ.

YouTube
Instagram
WhatsApp