ಹಿತ್ತಲಿನ ಪೌಷ್ಟಿಕಾಂಶ ತೋಟಗಳು- ಕುಟುಂಬದ ಪೌಷ್ಟಿಕಾಂಶ ಮತ್ತು ಆದಾಯಕ್ಕಾಗಿ


ಮಳೆಯಾಶ್ರಿತ ಕೃಷಿಯಲ್ಲಿ, ಹವಾಮಾನ ವೈಪರೀತ್ಯಗಳಿಂದ ಕೃಷಿ ಆಧಾರಿತ ಜೀವನೋಪಾಯವು ದುರ್ಬಲವಾಗಿದೆ. ಕೃಷಿ ಆಧಾರಿತ ಪರ್ಯಾಯ ಉದ್ಯಮಗಳು ರೈತರು ಕೃಷಿಯಲ್ಲಿ ಉಳಿಯಲು ಅಗತ್ಯವಾದ ಬೆಂಬಲವನ್ನು ಒದಗಿಸುತ್ತವೆ. ಹಿತ್ತಲಿನ ಅಡುಗೆಮನೆ ತೋಟವು ಮಹಿಳೆಯರ ಸಬಲೀಕರಣದ ಜೊತೆಗೆ ಆಹಾರ, ಆದಾಯ ಮತ್ತು ಪೌಷ್ಟಿಕಾಂಶ ಭದ್ರತೆಯಂತಹ ಹಲವು ಅಗತ್ಯಗಳನ್ನು ಪೂರೈಸುವ ಒಂದು ಉದ್ಯಮವಾಗಿದೆ.


ಕರ್ನಾಟಕದ ಧಾರವಾಡ ಜಿಲ್ಲೆಯ ಹುಬ್ಬಳ್ಳಿ ತಾಲ್ಲೂಕಿನಲ್ಲಿ ಚನ್ನಾಪುರ ಮತ್ತು ಚೌರಗುಡ್ಡ ಗ್ರಾಮಗಳಿವೆ. ಹೆಚ್ಚಿನ ರೈತರು ಸಣ್ಣ ಹಿಡುವಳಿಗಳನ್ನು ಹೊಂದಿದ್ದಾರೆ. ನೀರಾವರಿಗಾಗಿ ವಾರ್ಷಿಕ ಮಳೆಯನ್ನೇ ಸಂಪೂರ್ಣವಾಗಿ ಅವಲಂಬಿಸಿರುವ ಮಳೆಯಾಶ್ರಿತ ಕೃಷಿಯನ್ನು ಅಭ್ಯಾಸ ಮಾಡುತ್ತಾರೆ. ಕಳಪೆ ಮಣ್ಣು, ರಸಗೊಬ್ಬರಗಳು ಮತ್ತು ಕೀಟನಾಶಕಗಳ ಅನಿಯಂತ್ರಿತ ಬಳಕೆಯು ಉತ್ಪಾದನಾ ವೆಚ್ಚವನ್ನು ಹೆಚ್ಚಿಸುವುದಲ್ಲದೆ, ಬಾಹ್ಯ ಒಳಸುರಿಯುವಿಕೆಯ ಮೇಲೆ ಹೆಚ್ಚಿನ ಅವಲಂಬನೆ, ಕಡಿಮೆ ಉತ್ಪಾದಕತೆ, ಅನಿಶ್ಚಿತ ಆದಾಯ ಮತ್ತು ರಾಸಾಯನಿಕಯುಕ್ತ ಆಹಾರ ಉತ್ಪಾದನೆಗೆ ಕಾರಣವಾಗಿದೆ. ಹವಾಮಾನ ಬದಲಾವಣೆಯಿಂದ ಉಂಟಾಗುವ ಅನಿಯಮಿತ ಹವಾಮಾನ ಮಾದರಿಗಳು ಅವರ ಜೀವನೋಪಾಯ ಮಾರ್ಗವನ್ನು ಇನ್ನಷ್ಟು ಅನಿಶ್ಚಿತಗೊಳಿಸುತ್ತಿವೆ. ಮನೆಯ ಆಹಾರ ಮತ್ತು ಪೌಷ್ಟಿಕಾಂಶ ಭದ್ರತೆ ಅಪಾಯದಲ್ಲಿದೆ. ಮುಖ್ಯವಾಹಿನಿಯ ಸಂಸ್ಥೆಗಳಿಂದ ಪರಿಸರ ಸ್ನೇಹಿ ಕೃಷಿಯ ಬಗ್ಗೆ ಯಾವುದೇ ಮಾರ್ಗದರ್ಶನವಿಲ್ಲದೆ, ರೈತರು, ವಿಶೇಷವಾಗಿ ಯುವಕರು ಕೃಷಿಯಿಂದ ದೂರ ಸರಿಯುತ್ತಿದ್ದಾರೆ.

ಈ ಸಂದರ್ಭದಲ್ಲಿ, 2023 ರಲ್ಲಿ, AME ಫೌಂಡೇಶನ್, ರೋಟರಿ ಕ್ಲಬ್ ಇಂದಿರಾನಗರದ ಸಹಯೋಗದೊಂದಿಗೆ, ರೈತರ ಜೀವನೋಪಾಯವನ್ನು ಸುಧಾರಿಸಲು ಸುಸ್ಥಿರ ಕೃಷಿಯನ್ನು ಉತ್ತೇಜಿಸುವ ಯೋಜನೆಯನ್ನು ಜಾರಿಗೆ ತಂದಿತು. ಒಣ ಕೃಷಿ ಭೂಮಿ ಗುಂಪುಗಳು ವ್ಯವಸ್ಥಿತ ಮತ್ತು ಪರ್ಯಾಯ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಳ್ಳಲು ಬೆಂಬಲ ನೀಡಲು ಈ ಯೋಜನೆಯನ್ನು ಕೈಗೆತ್ತಿಕೊಳ್ಳಲಾಯಿತು. ಮೆಕ್ಕೆಜೋಳ, ಸೋಯಾಬೀನ್ ಮತ್ತು ಜೋಳದಂತಹ ಬೆಳೆಗಳಿಗೆ ಸಂಬಂಧಿಸಿದಂತೆ ಸುಸ್ಥಿರ ಕೃಷಿ ಪದ್ಧತಿಗಳ ಬಗ್ಗೆ ರೈತರಿಗೆ ಮಾರ್ಗದರ್ಶನ ನೀಡುವುದರ ಜೊತೆಗೆ, ಮನೆಗಳು ಪೌಷ್ಟಿಕಾಂಶ ಮತ್ತು ಆದಾಯವನ್ನು ಪಡೆಯಲು ಅನುವು ಮಾಡಿಕೊಡಲು ಅಡುಗೆ ತೋಟಗಳನ್ನು ಸಹ ಉತ್ತೇಜಿಸಲಾಯಿತು.

 ಹಿತ್ತಲ ಅಡುಗೆ ತೋಟಗಳು

ರೈತ ಮಹಿಳೆಯರು ತಮ್ಮ ಹಿತ್ತಲಿನಲ್ಲಿ ಅಡುಗೆ ತೋಟಗಳನ್ನು ಬೆಳೆಸಲು ಸಹಾಯ ಮಾಡುವುದು ಹಸ್ತಕ್ಷೇಪದ ಮುಖ್ಯ ಉದ್ದೇಶವಾಗಿತ್ತು. ಈ ಅಡುಗೆ ತೋಟಗಳು ಭಾಗವಹಿಸುವ ಕುಟುಂಬಗಳ ಆಹಾರ ವೈವಿಧ್ಯತೆಯನ್ನು ಹೆಚ್ಚಿಸಲು ಮತ್ತು ಪರಿಚಯಿಸಲಾದ ತರಕಾರಿಗಳಿಗೆ ಮಾರುಕಟ್ಟೆಯ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಉದ್ದೇಶ ಹೊಂದಿತ್ತು. ಇದರ ಬಗ್ಗೆ ಆಸಕ್ತಿ ತೋರಿದ ಕುಟುಂಬಕ್ಕೆ ಸುಮಾರು 10-13 ವಿಧದ ತರಕಾರಿ ಬೀಜಗಳನ್ನು ಹೊಂದಿರುವ ಅಡುಗೆ ತೋಟದ ಕಿಟ್ ಅನ್ನು ನೀಡಲಾಯಿತು. ಅಡುಗೆ ತೋಟಗಳನ್ನು ಬೆಳೆಸುವ ಮೂಲಕ, ಮಹಿಳೆಯರು ಅನೇಕ ರೀತಿಯ ಕಾಲೋಚಿತ ತರಕಾರಿಗಳನ್ನು ಕೊಯ್ಲು ಮಾಡಲು ಸಾಧ್ಯವಾಯಿತು.

2023-24 ರಲ್ಲಿ, ಗುಂಪಿನ 70 ಸದಸ್ಯರಿಗೆ 13 ವಿವಿಧ ತರಕಾರಿಗಳನ್ನು ಹೊಂದಿರುವ ಅಡುಗೆ ತೋಟದ ಕಿಟ್‌ಗಳನ್ನು ನೀಡಲಾಯಿತು. ಮಳೆ ಹೆಚ್ಚಾಗಿದ್ದರಿಂದ, ಋತುವಿನ ಆರಂಭದಲ್ಲಿ ಬಿತ್ತನೆ ಮಾಡಿದವರ ಬೀಜಗಳು ಮೊಳಕೆಯೊಡೆಯಲಿಲ್ಲ. ಆದರೆ ತಡವಾಗಿ ಬಿತ್ತನೆ ಮಾಡಿದ ಸುಮಾರು 40% ಮಹಿಳೆಯರು ತೋಟಗಳಿಂದ ತರಕಾರಿಗಳನ್ನು ಪಡೆದರು. ಮಹಿಳೆಯರು ಅಡುಗೆ ತ್ಯಾಜ್ಯ, ಕೃಷಿ ತ್ಯಾಜ್ಯ ಮತ್ತು ಒಣ ಎಲೆಗಳಿಂದ ಸಮೃದ್ಧ ಸಾವಯವ ಗೊಬ್ಬರವನ್ನು ತಯಾರಿಸಿದರು. ಇದನ್ನೇ ಹಿತ್ತಲಿನ ತೋಟವನ್ನು ಫಲವತ್ತಾಗಿಸಲು ಬಳಸಲಾಯಿತು. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಮತ್ತು ಸಸ್ಯಗಳ ಬೆಳವಣಿಗೆಯನ್ನು ಉತ್ತೇಜಿಸಲು ಪಂಚಗವ್ಯ ಮತ್ತು ಜೀವಾಮೃತದಂತಹ ಸಾವಯವ ದ್ರವ ಗೊಬ್ಬರಗಳನ್ನು ಸಹ ತಯಾರಿಸಿದರು. ಕೀಟ ಮತ್ತು ರೋಗಗಳನ್ನು ನಿರ್ವಹಣೆಗೆ, ನೈಸರ್ಗಿಕ ಕೀಟನಾಶಕಗಳಾಗಿ ಬೇವಿನ ಎಣ್ಣೆ ಬಳಸಿದರು. ಮಣ್ಣಿನ ತೇವಾಂಶವನ್ನು ಉಳಿಸಿಕೊಳ್ಳಲು, ಕಳೆ ನಿಯಂತ್ರಣ ಮತ್ತು ಮಣ್ಣಿನ ಆರೋಗ್ಯವನ್ನು ಸುಧಾರಿಸಲು ಹುಲ್ಲು ಮತ್ತು ಒಣಗಿದ ಎಲೆಗಳನ್ನು ಹೊದಿಕೆಯಾಗಿ ಸಸ್ಯಗಳ ಸುತ್ತಲೂ ಹಾಕಲಾಯಿತು. ಪ್ರತಿಯೊಂದು ಕುಟುಂಬವೂ ಬದನೆಕಾಯಿ, ಬೆಂಡೆ, ಟೊಮೆಟೊ, ಸೋರೆಕಾಯಿ, ಸೌತೆಕಾಯಿ, ಮೂಲಂಗಿ ಮತ್ತು ಹಸಿರು ತರಕಾರಿಗಳನ್ನು ಬೆಳೆಯುತ್ತಿದ್ದರು. ಒಂದು ಋತುವಿನಲ್ಲಿ ರೂ. 2500-3500 ಮೌಲ್ಯದ ತರಕಾರಿಗಳನ್ನು ಬೆಳೆಯುತ್ತಿದ್ದರು.

ಮತ್ತೊಮ್ಮೆ, ೨೦೨೪ ಧಾರವಾಡ ಜಿಲ್ಲೆಯಲ್ಲಿ ಅತಿ ಹೆಚ್ಚು ಮಳೆಯಾಗಿದೆ. ಅಕಾಲಿಕ ಮಳೆಯಿಂದ ರೈತರು ಬೆಳೆ ನಷ್ಟವನ್ನು ಎದುರಿಸಬೇಕಾಯಿತು. ಅಂತಹ ಪರಿಸ್ಥಿತಿಯಲ್ಲಿ ಸುಮಾರು ೨೫ ಮಹಿಳಾ ರೈತರು ತಮ್ಮ ಹಿತ್ತಲಿನಲ್ಲಿ ಪೌಷ್ಠಿಕಾಂಶ ತೋಟಗಳನ್ನು ಬೆಳೆಸಿದರು. ಪ್ರತಿ ಮನೆಯೂ ಒಂದು ಋತುವಿನಲ್ಲಿ ರೂ. ೩೦೦೦-೪೦೦೦ ಮೌಲ್ಯದ ತರಕಾರಿಗಳನ್ನು ಬೆಳೆಯಿತು. ಬೆಳೆ ನಷ್ಟದಿಂದಾಗಿ ಆಹಾರ ಕೊರತೆಯನ್ನು ಎದುರಿಸುತ್ತಿರುವ ಈ ಕುಟುಂಬಗಳಿಗೆ ಅಡುಗೆ ತೋಟಗಳು ವರದಾನವಾದವು.

ಚೌಕ ೧: ಶೈನಾಜ್‌ ಅವರ ಕಥೆ

ಶ್ರೀಮತಿ ಶೈನಾಜ್ ಎಂ ಸೇತಸನದಿ ಧಾರವಾಡದ ಹುಬ್ಬಳ್ಳಿ ತಾಲ್ಲೂಕಿನ ಚನ್ನಾಪುರ ಗ್ರಾಮದಲ್ಲಿ ವಾಸಿಸುತ್ತಿದ್ದಾರೆ. ಅವರದು 4 ಸದಸ್ಯರ ಕುಟುಂಬ. ಅವರ ಕುಟುಂಬವು ಜೀವನೋಪಾಯಕ್ಕಾಗಿ ಹೆಚ್ಚಾಗಿ ಕೃಷಿಯನ್ನು ಅವಲಂಬಿಸಿದೆ. ಅವರಿಗೆ 2 ಎಕರೆ ಕೃಷಿ ಭೂಮಿ ಇದೆ. ಅವರ ಹಿತ್ತಲಿನಲ್ಲಿ ಸಣ್ಣ ಜಮೀನು ಇದ್ದು, ಅದರಲ್ಲಿ ಕುಟುಂಬಕ್ಕಾಗಿ ತಾಜಾ, ಸಾವಯವ ಉತ್ಪನ್ನಗಳನ್ನು ಬೆಳೆಯಲು ಬಯಸಿದರು. ಆದ್ದರಿಂದ ಸುಸ್ಥಿರ ತೋಟಗಾರಿಕೆ ಪದ್ಧತಿಗಳನ್ನು ಅಳವಡಿಸಿಕೊಂಡರು. ಸುಸ್ಥಿರ ಪದ್ಧತಿಗಳು ಸಣ್ಣ ಜಾಗಗಳನ್ನು ಉತ್ಪಾದಕ ಮತ್ತು ಪರಿಸರ ಸ್ನೇಹಿ ತೋಟಗಳಾಗಿ ಹೇಗೆ ಪರಿವರ್ತಿಸಬಹುದು ಎಂಬುದನ್ನು ತಿಳಿಯಲು ಬಹಳ ಉತ್ಸುಕರಾಗಿದ್ದರು.

ಅಡುಗೆ ಕೈತೋಟಗಾರಿಕೆಯಲ್ಲಿ ತರಬೇತಿ ಪಡೆದ ಮಹಿಳೆಯರಲ್ಲಿ ಶೈನಾಜ್ ಕೂಡ ಒಬ್ಬರು. ಅವರಿಗೆ ವಿವಿಧ ತರಕಾರಿ ಬೀಜಗಳನ್ನು ಒಳಗೊಂಡಿರುವ ಅಡುಗೆ ತೋಟದ ಕಿಟ್ ನೀಡಲಾಯಿತು. ಅವರು ತಮ್ಮ ಮನೆಯ ಹಿತ್ತಲಿನಲ್ಲಿ ಸಾಕಷ್ಟು ಸೂರ್ಯನ ಬೆಳಕನ್ನು ಪಡೆಯುವ ಪ್ರದೇಶವನ್ನು ಆಯ್ಕೆ ಮಾಡಿಕೊಂಡರು. ಮನೆಯಲ್ಲಿ ತಯಾರಿಸಿದ ಗೊಬ್ಬರ ಮತ್ತು ಸಾವಯವ ಗೊಬ್ಬರವನ್ನು ಮಣ್ಣಿಗೆ ಬೆರೆಸಿದರು. ಜಾಗವನ್ನು ಸಮರ್ಥವಾಗಿ ಬಳಸಿಕೊಳ್ಳಲು ಎತ್ತರದ ಹಾಸಿಗೆಗಳು, ಲಂಬ ತೋಟಗಾರಿಕೆ ರಚನೆಗಳು ಮತ್ತು ಕುಂಡಗಳನ್ನು ಒಳಗೊಂಡ  ಉದ್ಯಾನ ವಿನ್ಯಾಸವನ್ನು ಯೋಜಿಸಿದರು.

ಮನೆಬಳಕೆಗೆ ತರಕಾರಿಗಳಿಗಾಗಿ ಪ್ರತಿ ತಿಂಗಳು ಸುಮಾರು ರೂ.800-1000 ಖರ್ಚು ಮಾಡುತ್ತಿದ್ದ ಶೈನಾಜ್, ಈಗ ಅವುಗಳನ್ನು ತಮ್ಮ ಹಿತ್ತಲಿನಲ್ಲಿಯೇ ಬೆಳೆಯುವಷ್ಟು ಸಮರ್ಥರಾಗಿದ್ದಾರೆ. ಸ್ವಂತವಾಗಿ ತರಕಾರಿ ಬೆಳೆಯುವ ಮೂಲಕ, ರೂ. 3800 ಮೌಲ್ಯದ ತರಕಾರಿಗಳನ್ನು ಕೊಯ್ಲು ಮಾಡಬಹುದು ಎಂದು ಹೇಳುತ್ತಾರೆ.

ಅವರ ಈ ಕಾರ್ಯವು ಕುಟುಂಬಕ್ಕೆ ತಾಜಾ, ಆರೋಗ್ಯಕರ ಆಹಾರವನ್ನು ಒದಗಿಸಿದೆಯಲ್ಲದೆ, ಪರಿಸರ ಸುಸ್ಥಿರತೆ ಮತ್ತು ಸಮುದಾಯದ ತೊಡಗಿಸಿಕೊಳ್ಳುವಿಕೆಯನ್ನು ಉತ್ತೇಜಿಸಿದೆ. ಅವರು ತಮ್ಮ ತೋಟಗಾರಿಕೆ ತಿಳಿವಳಿಕೆಯನ್ನು ನೆರೆಹೊರೆಯವರೊಂದಿಗೆ ಸಕ್ರಿಯವಾಗಿ ಹಂಚಿಕೊಳ್ಳುತ್ತಾರೆ. ತಮ್ಮ ಅನುಭವಗಳು ಮತ್ತು ಜ್ಞಾನವನ್ನು ಹಂಚಿಕೊಳ್ಳುವ ಮೂಲಕ, ಸುಸ್ಥಿರ ತೋಟಗಾರಿಕೆ ಅಭ್ಯಾಸಗಳನ್ನು ಅಳವಡಿಸಿಕೊಳ್ಳಲು ಇತರರನ್ನು ಪ್ರೇರೇಪಿಸುತ್ತಿದ್ದಾರೆ. ಆ ಮೂಲಕ ಹಸಿರು ಮತ್ತು ಆರೋಗ್ಯಕರ ವಾತಾವರಣಕ್ಕೆ ಕೊಡುಗೆ ನೀಡುತ್ತಾರೆ. ಅವರ ಯಶಸ್ವಿ ಅಡುಗೆ ಕೈತೋಟವು ಸಮುದಾಯದ ಸದಸ್ಯರಿಗೆ ತಮ್ಮದೇ ಆದ ತೋಟಗಳನ್ನು ಪ್ರಾರಂಭಿಸಲು ಸ್ಫೂರ್ತಿ ನೀಡಿದೆ. ಸುಸ್ಥಿರ ಜೀವನ ಸಂಸ್ಕೃತಿಯನ್ನು ಬೆಳೆಸುತ್ತಿದೆ.


AME Foundation
No. 204, 100 Feet Ring Road,
3rd Phase, Banashankari 2nd Block, 3rd Stage
Bangalore - 560 085, India
www.amefound.org
E-mail: leisaindia@yahoo.co.in

ಆಂಗ್ಲ ಮೂಲ : ಲೀಸಾ ಇಂಡಿಯಾ; ಸಂಪುಟ :೨೭; ಸಂಚಿಕೆ : ೩ ; ಸೆಪ್ಟಂಬರ್ ೨೦‌೨೫

Recent Posts

ಸ್ಥಿತಿಸ್ಥಾಪಕತ್ವದ ಹೆಚ್ಚಳ

ಸ್ಥಿತಿಸ್ಥಾಪಕತ್ವದ ಹೆಚ್ಚಳ

ಇಡುಕ್ಕಿ ಜಿಲ್ಲೆಯು ಪುನರುತ್ಪಾದಕ ಸಾವಯವ ಪದ್ಧತಿಗಳ ತತ್ವಗಳ ಆಧಾರದ ಮೇಲೆ ಕೃಷಿ ಪದ್ಧತಿಗಳನ್ನು ಅನುಸರಿಸುವ ಮೂಲಕ ಬದಲಾಗುತ್ತಿರುವ ಹವಾಮಾನದ ಪರಿಣಾಮಗಳನ್ನು ತಗ್ಗಿಸಲು ಮತ್ತು ಹೊಂದಿಕೊಳ್ಳಲು ಸಮರ್ಥವಾಗಿದೆ. ಪೀರ್‌ಮೇಡ್ ಡೆವಲಪ್‌ಮೆಂಟ್ ಸೊಸೈಟಿ ಎನ್‌ಜಿಒ ಆಗಿದ್ದು, ಕೃಷಿ ಪರಿಸರ ಪದ್ಧತಿಗಳನ್ನು ಉತ್ತೇಜಿಸುವ ಮೂಲಕ ಈ ರೈತರಿಗೆ ಕೃಷಿ ಸುಸ್ಥಿರತೆಯನ್ನು ನಿರ್ಮಿಸಲು ಸಹಾಯ ಮಾಡುತ್ತಿದೆ.

ಸುಸ್ಥಿರ ಮತ್ತು ಸಮಗ್ರ ಕೃಷಿ ಯಾಂತ್ರೀಕರಣ

ಸುಸ್ಥಿರ ಮತ್ತು ಸಮಗ್ರ ಕೃಷಿ ಯಾಂತ್ರೀಕರಣ

ಸಣ್ಣ ರೈತರಿಗೆ ದುಬಾರಿ ವೆಚ್ಚದ ಕಾರಣದಿಂದಾಗಿ ಕೃಷಿ ಯಂತ್ರಗಳ ಲಭ್ಯತೆ ಸೀಮಿತವಾಗಿರುತ್ತದೆ. ಆದ್ದರಿಂದ ಪರಿಸರ, ಸಾಮಾಜಿಕ ಮತ್ತು ಆರ್ಥಿಕ ಸಮತೋಲನವನ್ನು ಖಾತ್ರಿಪಡಿಸಿಕೊಳ್ಳುವಾಗ ಉತ್ಪಾದಕತೆಯನ್ನು ಹೆಚ್ಚಿಸುವ ಸುಸ್ಥಿರ ಯಾಂತ್ರೀಕರಣ ಮಾದರಿ ಅಗತ್ಯ. ಮಹಾಶಕ್ತಿ ಪ್ರತಿಷ್ಠಾನದ ಸುಸ್ಥಿರ ಕೃಷಿ ಯಾಂತ್ರೀಕರಣ ಉಪಕ್ರಮವು ಶ್ರಮವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಕೃಷಿ ಯಂತ್ರೋಪಕರಣಗಳನ್ನು ಒದಗಿಸುವಲ್ಲಿ ಯಶಸ್ವಿಯಾಗಿದೆ.

ಬದಲಾವಣೆಯ ಬೀಜಗಳ ಬಿತ್ತನೆ

ಬದಲಾವಣೆಯ ಬೀಜಗಳ ಬಿತ್ತನೆ

ಮಿಶ್ರ ಬೆಳೆ, ದೇಸಿ ಬೀಜಗಳು ಮತ್ತು ಸಮುದಾಯ ನೇತೃತ್ವದ ಕೃಷಿ ಪರಿಸರ ವಿಜ್ಞಾನವು ಸುಸ್ಥಿರ ಭವಿಷ್ಯದ ಕೀಲಿಕೈ ಆಗಿದೆ. ಅನಂತ್‌ ಅವರ ಪ್ರಯಾಣವು ಅಂತಹ ಒಂದು ಉದಾಹರಣೆಯಾಗಿದೆ.