ಮಹಾರಾಷ್ಟ್ರದಲ್ಲಿ ಜಾರಿಗೆ ತರಲಾದ ಬೋಡಿ ಆಧಾರಿತ ಸಮಗ್ರ ಕೃಷಿ ವ್ಯವಸ್ಥೆಯು ಸಣ್ಣ ರೈತರ ಜೀವನೋಪಾಯವನ್ನು ಹೆಚ್ಚಿಸಿದೆ. ಅದರ ವಿವಿಧ ಸಂಯೋಜಿತ ಘಟಕಗಳ ಮೂಲಕ, ಈ ಮಾದರಿಯು ಆದಾಯ, ಕುಟುಂಬದ ಪೋಷಣೆ, ಕೃಷಿ ಸ್ಥಿತಿಸ್ಥಾಪಕತ್ವ ಮತ್ತು ಸುಸ್ಥಿರತೆಯನ್ನು ಹೆಚ್ಚಿಸುತ್ತದೆ ಎನ್ನುವುದು ಸಾಬೀತಾಗಿದೆ.
ಭಾರತದಲ್ಲಿ ಸಣ್ಣ ರೈತರಿಗೆ ಪೋಷಣೆ ಮತ್ತು ಜೀವನೋಪಾಯವನ್ನು ಒದಗಿಸುವಲ್ಲಿ ಮೀನುಗಾರಿಕೆ ಪ್ರಮುಖ ಪಾತ್ರ ವಹಿಸುತ್ತದೆ. ಇದು ಭಾರತದಲ್ಲಿ ಸುಮಾರು 14.5 ಮಿಲಿಯನ್ ಜನರಿಗೆ ಉದ್ಯೋಗವನ್ನು ಒದಗಿಸುತ್ತದೆ. ಸಮುದ್ರ ಮತ್ತು ಸಾಗರ ಮೀನುಗಾರಿಕೆಯ ಜೊತೆಗೆ, ಜೀವನೋಪಾಯವನ್ನು ಬೆಂಬಲಿಸುವಲ್ಲಿ ಸಿಹಿನೀರಿನ ಮೀನುಗಾರಿಕೆ ಪ್ರಮುಖ ಪಾತ್ರ ವಹಿಸುತ್ತದೆ. ಹೀಗಿದ್ದೂ, ಕ್ಷೀಣಿಸುತ್ತಿರುವ ಜಲ ಸಂಪನ್ಮೂಲಗಳು ಮತ್ತು ಹೆಚ್ಚುತ್ತಿರುವ ಜಲ ಮಾಲಿನ್ಯವು ಒಳನಾಡಿನ ಮೀನುಗಾರಿಕೆಗೆ ಸವಾಲೊಡ್ಡಿದೆ. ಗ್ರಾಮೀಣ ಪ್ರದೇಶಗಳಲ್ಲಿನ ಹಲವಾರು ಜಲಮೂಲಗಳು ಮೀನುಗಾರಿಕೆಯನ್ನು ಉತ್ತೇಜಿಸುವ ಸಾಮರ್ಥ್ಯವನ್ನು ಹೊಂದಿದ್ದರೂ ಅವು ಬಳಕೆಯಾಗುತ್ತಿಲ್ಲ. ಮಹಾರಾಷ್ಟ್ರದ ಗಡ್ಚಿರೋಲಿ ಜಿಲ್ಲೆಯ ಎಟಪಲ್ಲಿ ಮತ್ತು ಭಾಂಬ್ರಗಡ್ ಮೀನುಗಾರಿಕೆಯನ್ನು ಉತ್ತೇಜಿಸಲು ಗಮನಾರ್ಹ ಸಾಮರ್ಥ್ಯವನ್ನು ಹೊಂದಿರುವ ಪ್ರದೇಶವಾಗಿದೆ.
ಎಟಪಲ್ಲಿ ಮತ್ತು ಭಾಂಬ್ರಗಡ್‌ಗಳಲ್ಲಿ ಶೇ. 80 ಕ್ಕಿಂತ ಹೆಚ್ಚು ಬುಡಕಟ್ಟು ಸಮುದಾಯಕ್ಕೆ ಸೇರಿದವರಿದ್ದು, ತೀವ್ರ ಬಡತನದಲ್ಲಿ ವಾಸಿಸುತ್ತಿದ್ದಾರೆ. ಈ ಪ್ರದೇಶದ ಬಹುಪಾಲು ಅರಣ್ಯದಿಂದ ಆವೃತವಾಗಿದೆ. ಹೆಚ್ಚಿನ ಕುಟುಂಬಗಳು ಜೀವನಾಧಾರಕ್ಕಾಗಿ ಕೃಷಿ ಮತ್ತು ಕೆಲವು ಅರಣ್ಯ ಸಂಪನ್ಮೂಲಗಳನ್ನು ಅವಲಂಬಿಸಿವೆ. ಹವಾಮಾನ ಬದಲಾವಣೆಯು ಇವುಗಳ ಮೇಲೆ ಪರಿಣಾಮ ಬೀರುತ್ತವೆ. ವರ್ಷಗಳು ಕಳೆದಂತೆ ನೈಸರ್ಗಿಕ ಸಂಪನ್ಮೂಲಗಳು ಖಾಲಿಯಾಗುತ್ತಿದ್ದು, ಬೆಳೆ ವೈವಿಧ್ಯತೆಯು ಕ್ಷೀಣಿಸುತ್ತಿರುವುದು ರೈತರನ್ನು ಮತ್ತಷ್ಟು ದುರ್ಬಲರನ್ನಾಗಿಸಿದೆ.
ಮೀನುಗಾರಿಕೆ ಆಧಾರಿತ ಸಮಗ್ರ ಕೃಷಿ: ಬಹುಮುಖ್ಯ ಅವಕಾಶ
ಈ ಪ್ರದೇಶದ ಬುಡಕಟ್ಟು ಸಮುದಾಯಗಳು ಬೋಡಿ ಸೇರಿದಂತೆ ಕೆಲವು ಶ್ರೀಮಂತ ಸಾಂಪ್ರದಾಯಿಕ ವ್ಯವಸ್ಥೆಯನ್ನು ಉಳಿಸಿಕೊಂಡಿವೆ. ಇಲ್ಲಿ ಭೂಮಿಯನ್ನು ಹೊಂದಿರುವ ಬಹಳಷ್ಟು ಕುಟುಂಬಗಳು ಬೋಡಿಗಳು ಎಂದು ಕರೆಯಲ್ಪಡುವ ಸಣ್ಣ ಜಲಮೂಲಗಳನ್ನು ಹೊಂದಿವೆ. ಕೃಷಿ ಭೂಮಿಯಲ್ಲಿ ಈ ಬೋಡಿಗಳ ಉಪಸ್ಥಿತಿಯು ಈ ಪ್ರದೇಶದ ವಿಶಿಷ್ಟ ಲಕ್ಷಣವಾಗಿದೆ. ಖಾರಿಫ್ ಋತುವಿನಲ್ಲಿ ಬರಗಾಲದ ಸಮಯದಲ್ಲಿ ಈ ಬೋಡಿಗಳು ಭತ್ತದ ಬೆಳೆಗೆ ನೀರನ್ನು ಒದಗಿಸಿ ಕಾಪಾಡುತ್ತದೆ. ಕೆಲವು ರೈತರು ಮನೆ ಬಳಕೆಗಾಗಿ ಬೋಡಿಗಳಲ್ಲಿ ಮೀನುಗಳನ್ನು ಕೊಯ್ಲು ಮಾಡುತ್ತಾರೆ.
ಬೋಡಿ ಆಧಾರಿತ ಸಮಗ್ರ ಕೃಷಿ ವ್ಯವಸ್ಥೆಯ ಅಂಶಗಳನ್ನು ಚಿತ್ರ ೧ರಲ್ಲಿ ತೋರಿಸಲಾಗಿದೆ.
ವರ್ತುಲ ಮತ್ತು ಸ್ಥಿತಿಸ್ಥಾಪಕ ಪರಿಕಲ್ಪನೆ
ಬೋಡಿ ಆಧಾರಿತ ವ್ಯವಸ್ಥೆಯು ಕೃಷಿಯಲ್ಲಿ ವರ್ತುಲ ವ್ಯವಸ್ಥೆಯನ್ನು ಸ್ಥಾಪಿಸಲು ಸಹಾಯ ಮಾಡುತ್ತದೆ. ಇದು ಬೋದಿ ಆಧಾರಿತ ಕೃಷಿ ವ್ಯವಸ್ಥೆಯ ಸುತ್ತಲೇ ಸುತ್ತುತ್ತದೆ. ಜಲಮೂಲಗಳನ್ನು ಆಳವಾಗಿಸುವುದರಿಂದ ನೀರನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಹೆಚ್ಚುತ್ತದೆ. ಸುತ್ತಲ ಭೂಮಿಯ ತೇವಾಂಶವು ಹೆಚ್ಚುತ್ತದೆ. ನೀರಿನಲ್ಲಿ ಬೆಳೆಯುವ ಸಸ್ಯಗಳನ್ನು ಸುಧಾರಿಸಲು ವಿವಿಧ ಕ್ರಮಗಳನ್ನು ಕೈಗೊಳ್ಳಲು ಉತ್ತೇಜಿಸಲಾಯಿತು. ಇದು ಒಳನಾಡಿನ ಮೀನುಗಾರಿಕೆಗೆ ಸೂಕ್ತ ವಾತಾವರಣವನ್ನು ಸೃಷ್ಟಿಸುತ್ತದೆ. ಇದರೊಂದಿಗೆ ಕೋಳಿ ಹಾಗೂ ಬಾತುಕೋಳಿ ಸಾಕಣೆಯನ್ನು ಮಾಡಲಾಗುತ್ತದೆ. ಈ ಹಕ್ಕಿಗಳ ಹಿಕ್ಕೆಯು ಬೋಡಿಯ ನೀರಲ್ಲಿನ ಜಲಸಸ್ಯಗಳು, ಮೀನುಗಳ ಬೆಳವಣಿಗೆಗೆ ಸಹಾಯಮಾಡುತ್ತದೆ. ಮೀನುಗಾರಿಕೆ ತ್ಯಾಜ್ಯವು ನೀರಿನಲ್ಲಿ ಸಸ್ಯ ಪೋಷಕಾಂಶಗಳ ಲಭ್ಯತೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಈ ನೀರನ್ನು ತೋಟಗಾರಿಕೆ ಗಿಡಗಳು ಮತ್ತು ತರಕಾರಿ ಬೆಳೆಗಳು ಬಳಸುತ್ತವೆ. ಪೌಷ್ಟಿಕಾಂಶ ಸಮೃದ್ಧವಾಗಿರುವ ನೀರು ಸಸ್ಯಗಳ ಬೆಳವಣಿಗೆಯನ್ನು ಸುಧಾರಿಸಲು ಮತ್ತು ಬೆಳೆಗಳ ಇಳುವರಿಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ರಸಗೊಬ್ಬರಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುತ್ತದೆ.
ಸಾಮಾಜಿಕ ಸಂಘಟನೆ ಮತ್ತು ಸಾಮರ್ಥ್ಯ ವೃದ್ಧಿ
“ಗ್ರಾಮ ನಿಯೋಜನ್ ಸಮಿತಿ” ಎನ್ನುವ 8 ಗ್ರಾಮ ಯೋಜನಾ ಸಮಿತಿಗಳಲ್ಲಿ ರೈತರನ್ನು ಸಂಘಟಿಸಲಾಗಿದೆ. ಬೋಡಿ ರೈತರಿಗಾಗಿ ಈ ಗ್ರಾಮ ಯೋಜನಾ ಸಮಿತಿಗಳು ಗ್ರಾಮ ಮಟ್ಟದಲ್ಲಿ ಉಪಕ್ರಮಗಳ ಯೋಜನೆ ಮತ್ತು ಮೇಲ್ವಿಚಾರಣೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿವೆ. ಈ ಸಮಿತಿಗಳು ತರಬೇತಿ ಮತ್ತು ಸಾಮರ್ಥ್ಯವರ್ಧನೆ ಕಾರ್ಯಕ್ರಮಗಳಿಗೆ ರೈತರನ್ನು ಒಟ್ಟುಗೂಡಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತವೆ. ಕ್ಲಸ್ಟರ್ ಮಟ್ಟದಲ್ಲಿ ರೈತ ಉತ್ಪಾದಕ ಸಂಸ್ಥೆ (FPO) ಅನ್ನು ರಚಿಸಲು ಸಮಿತಿಗಳನ್ನು ಒಟ್ಟುಗೂಡಿಸುತ್ತವೆ. ಭವಿಷ್ಯದಲ್ಲಿ, FPO ಒಳಸುರಿಯುವಿಕೆಗಳ ಸಾಮೂಹಿಕ ಸಂಗ್ರಹಣೆಯನ್ನು ಕೈಗೊಳ್ಳುತ್ತದೆ. ಕೃಷಿ ಉತ್ಪನ್ನಗಳ ಮಾರುಕಟ್ಟೆ ಸಂಪರ್ಕಗಳನ್ನು ಸ್ಥಾಪಿಸುತ್ತದೆ.
ಮೀನು ಸಾಕಾಣಿಕೆಯ ವಿವಿಧ ಸುಧಾರಿತ ಪದ್ಧತಿಗಳ ಕುರಿತು ರೈತರಿಗೆ ಅರಿವು ಮೂಡಿಸಲಾಯಿತು. ಆ ಕುರಿತು ತರಬೇತಿ ನೀಡಲಾಯಿತು. ಈ ತರಬೇತಿಗಳಲ್ಲಿ ಬೋಡಿ ತಯಾರಿಕೆ, ನೀರಿನ ಗುಣಮಟ್ಟದ ಮೌಲ್ಯಮಾಪನ, ಕೊಳಗಳಲ್ಲಿ ಮರಿಗಳನ್ನು ಬಿಡುವುದು, ಮೇವು ನಿರ್ವಹಣೆ, ರೋಗಗಳ ಗುರುತಿಸುವಿಕೆ, ಮೀನುಗಳ ಬೆಳವಣಿಗೆಯ ಮೇಲ್ವಿಚಾರಣೆ ಇತ್ಯಾದಿಗಳ ಕುರಿತು ಕ್ಷೇತ್ರ ಪ್ರದರ್ಶನಗಳು ಸೇರಿವೆ. ಸುಮಾರು 300 ರೈತರಿಗೆ ತರಬೇತಿ ನೀಡಲಾಯಿತು. ಆರಂಭದಲ್ಲಿ, ತರಬೇತಿ ನೀಡುವವರಿಗೆ ಭಾಗವಹಿಸುವವರು ಮಾತಾಡುವ ಮಡಿಯಾದಲ್ಲಿ ಮಾತನಾಡಲು ಸಾಧ್ಯವಾಗಲಿಲ್ಲ. ಈ ಸವಾಲನ್ನು ನಿವಾರಿಸಲು, BAIF ಗ್ರಾಮಗಳಿಂದ ಮರಾಠಿಯನ್ನು ಅರ್ಥಮಾಡಿಕೊಳ್ಳಬಲ್ಲ ಸಮುದಾಯ ಸಂಪನ್ಮೂಲ ವ್ಯಕ್ತಿಗಳನ್ನು (CRP) ಗುರುತಿಸಿತು. ತರಬೇತಿಗಳು ಮತ್ತು ಪ್ರಾತ್ಯಕ್ಷಿಕೆಗಳ ಸಮಯದಲ್ಲಿ ಈ ಸಿಆರ್‌ಪಿಗಳು ಅನುವಾದದಲ್ಲಿ ಸಹಾಯ ಮಾಡಿದರು. ತರಬೇತಿ ಸಾಮಗ್ರಿಯನ್ನು ಸುಲಭವಾಗಿ ಅರ್ಥವಾಗುವಂತೆ ಚಿತ್ರಗಳೊಂದಿಗೆ ಮಡಿಯಾ ಭಾಷೆಗೆ ಅನುವಾದಿಸಲಾಯಿತು.
ಕ್ಷೇತ್ರಗಳಲ್ಲಿ ಕೈಗೊಂಡ ಉಪಕ್ರಮ
ಸಾಂಪ್ರದಾಯಿಕವಾಗಿ ಬೋಡಿಗಳನ್ನು ಭತ್ತದ ಗದ್ದೆಗಳಿಗೆ ಅಗತ್ಯ ಬಿದ್ದಲ್ಲಿ ನೀರಾವರಿಗಾಗಿ ನೀರಿನ ಮೂಲವಾಗಿ ಬಳಸಲಾಗುತ್ತಿತ್ತು. ಹೆಚ್ಚಿನ ಬೋಡಿಗಳಲ್ಲಿ ಹೂಳು ತುಂಬಿರುವುದರಿಂದ ಅವುಗಳ ಸಂಗ್ರಹಣಾ ಸಾಮರ್ಥ್ಯ ಕುಸಿದಿದೆ. ಬೋಡಿಗಳಲ್ಲಿನ ಹೂಳನ್ನು ಮೊದಲು ತೆಗೆಯಲಾಗುತ್ತದೆ. ತೆಗೆದ ಹೂಳನ್ನು ಹೊಲಗಳಿಗೆ ಹಾಕಲಾಗುತ್ತದೆ. ಬೋಡಿಗಳನ್ನು ಸುಧಾರಿತ ಮೀನು ಕೃಷಿಗಾಗಿ ಬಳಸಲಾಗುತ್ತದೆ.
ಚಟುವಟಿಕೆಯನ್ನು ಪ್ರಾರಂಭಿಸುವ ಮೊದಲು ರೈತರು ಹೊಂಡದ ಅಳತೆ ಮತ್ತು ಹೊಂಡ ತಯಾರಿಕೆಯ ವಿಧಾನಗಳ ಬಗ್ಗೆ ತರಬೇತಿ ಪಡೆದರು. ಹೊಂಡದ ತಯಾರಿಕೆಯು ಉಳುಮೆ ಮತ್ತು ಸುಣ್ಣ ಹಾಕುವಂತಹ ಅಭ್ಯಾಸಗಳನ್ನು ಒಳಗೊಂಡಿತ್ತು. ಇಲ್ಲಿ ಪ್ರಮುಖವಾಗಿ ಬೆಳೆಯುವ ಮೀನುಗಳಲ್ಲಿ ರೋಹು, ಕಟ್ಲಾ, ಗ್ರಾಸ್ ಕಾರ್ಪ್ ಮತ್ತು ಕಾಮನ್ ಕಾರ್ಪ್ ಸೇರಿವೆ. ಇದರಿಂದ ಬರುವ ಆದಾಯವನ್ನು ಉತ್ತಮಗೊಳಿಸಲು ಮೇಲ್ಮೈ ಆಹಾರ, ತಳಭಾಗದ ಆಹಾರ ಮತ್ತು ಮಧ್ಯಮ ಮಟ್ಟದ ಆಹಾರಗಳ ಸಂಯೋಜನೆಯನ್ನು ಪರಿಚಯಿಸಲಾಯಿತು. ಪ್ರತಿ ಹೊಂಡದಲ್ಲಿನ ನೀರಿನ ಲಭ್ಯತೆಯ ಆಧಾರದ ಮೇಲೆ ಮರಿಗಳ ಸಂಖ್ಯೆಯನ್ನು ಲೆಕ್ಕಹಾಕಲು ರೈತರಿಗೆ ತರಬೇತಿ ನೀಡಲಾಯಿತು. ಹಸುವಿನ ಸಗಣಿ, ಎಣ್ಣೆ ಬೀಜದ ಕೇಕ್ ಮತ್ತು ರಸಗೊಬ್ಬರಗಳನ್ನು ಬಳಸುವ ಮೂಲಕ ಮೀನು ಮೇವಿನ ಸೂಕ್ತ ನಿರ್ವಹಣೆ ಮಾಡುವುದನ್ನು ರೈತರಿಗೆ ಮಾರ್ಗದರ್ಶನ ನೀಡಲಾಯಿತು. ಈ ಪ್ರದೇಶದಲ್ಲಿ ಸಕಾಲಿಕ ಮತ್ತು ಗುಣಮಟ್ಟದ ಮರಿಗಳ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು, ಕ್ಲಸ್ಟರ್‌ನಲ್ಲಿ ಮೀನು ಮರಿ ಕೇಂದ್ರ ಸ್ಥಾಪನೆಗೆ ಉತ್ತೇಜನ ನೀಡಲಾಯಿತು.
ಕೋಳಿ ಸಾಕಣೆ ಗೂಡುಗಳನ್ನು ಬೋಡಿಗಳ ಮೇಲೆ ಮಚನ್ (ಎತ್ತರಿಸಿದ ಅಟ್ಟಣೆ) ರೀತಿಯಲ್ಲಿ ನಿರ್ಮಿಸಲಾಯಿತು. ಈ ಹಕ್ಕಿಗಳು ಮೀನುಗಳನ್ನು ಪೋಷಿಸುವಲ್ಲಿ ಮುಖ್ಯ ಪಾತ್ರ ವಹಿಸುತ್ತದೆ. ಇವುಗಳ ತ್ಯಾಜ್ಯವು ಮೀನಿಗೆ ಮೇವಾಗುತ್ತದೆ. ಮೊಟ್ಟೆಗಳೊಂದಿಗೆ ಈ ಹಕ್ಕಿಗಳು ರೈತರಿಗೆ ಹೆಚ್ಚುವರಿ ಆದಾಯವನ್ನು ತರುತ್ತವೆ. ಸೂಕ್ತವಾದ ಲಸಿಕೆ, ನಿರ್ವಹಣಾ ಪದ್ಧತಿಗಳನ್ನು ಹಕ್ಕಿಗಳಿಗೆ ಪರಿಚಯಿಸಲಾಯಿತು.
ಈ ಪ್ರದೇಶದಲ್ಲಿ ಭತ್ತವು ಪ್ರಮುಖ ಬೆಳೆಯಾಗಿರುವುದರಿಂದ, ಸುಧಾರಿತ ಪ್ರಭೇದಗಳನ್ನು ಒಳಗೊಂಡಂತೆ ಸುಧಾರಿತ ಕೃಷಿ ಪದ್ಧತಿಗಳನ್ನು ಪರಿಚಯಿಸಲಾಯಿತು. ಸೀತಾಫಲ, ನಿಂಬೆಯಂತಹ ತೋಟಗಾರಿಕಾ ಬೆಳೆಗಳನ್ನು ತೋಟದ ಬದುಗಳು ಮತ್ತು ಬೋಡಿಗಳ ಬದುಗಳ ಉದ್ದಕ್ಕೂ ನೆಡಲಾಯಿತು. ಕೃಷಿ ಭೂಮಿಯ ಸಣ್ಣ ಜಾಗಗಳಲ್ಲಿ ಪೌಷ್ಟಿಕ ತೋಟಗಳ ರೂಪದಲ್ಲಿ ವೈವಿಧ್ಯಮಯ ತರಕಾರಿ ಬೆಳೆಗಳನ್ನು ಬೆಳೆಯಲಾಗಿದೆ. ಮೀನು ಸಾಕಣೆಯಿಂದಾಗಿ ಬೋಡಿಯ ನೀರು ಕೆಲವು ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಈ ನೀರನ್ನು ಬೆಳೆಗಳಿಗೆ ಬಳಸುವುದರಿಂದ ಅವುಗಳಿಗೆ ಅಗತ್ಯವಾದ ಪೋಷಕಾಂಶಗಳು ದೊರಕುತ್ತದೆ. ಗೊಬ್ಬರ ತಯಾರಿಸುವ ಪದ್ಧತಿಗಳು ಮತ್ತು ಎರೆಹುಳು ಗೊಬ್ಬರ ಉತ್ಪಾದನೆಯ ಮೂಲಕ ಸಾವಯವ ವಸ್ತುಗಳ ಮರುಬಳಕೆಗಾಗಿ ವಿವಿಧ ಪದ್ಧತಿಗಳ ಕುರಿತು ರೈತರಿಗೆ ತರಬೇತಿ ನೀಡಲಾಯಿತು. ಕಾಡಿನ ಮರಗಳ ನಿರ್ವಹಣೆ ಮತ್ತು NTFPಗಳ (ಮರವನ್ನು ಹೊರತುಪಡಿಸಿದ ಅರಣ್ಯ ಉತ್ಪನ್ನಗಳು) ಸುಸ್ಥಿರ ಕೊಯ್ಲು ಕುರಿತು ಸೂಕ್ಷ್ಮತೆಯನ್ನು ಬೆಳೆಸುವುದರೊಂದಿಗೆ ಸಾಮರ್ಥ್ಯ ನಿರ್ಮಾಣ ಮಾಡಲಾಯಿತು.
ಫಲಿತಾಂಶಗಳು
ಬೋಡಿ ಆಧಾರಿತ ಸಮಗ್ರ ಕೃಷಿಯ ಪ್ರಮುಖ ಫಲಿತಾಂಶಗಳು ಹೀಗಿವೆ.
ಪ್ರತಿ ಬೋಡಿಯಿಂದ ಉತ್ಪಾದಿಸಲಾಗುವ ಸರಾಸರಿ ಮೀನಿನ ಪ್ರಮಾಣ ಪ್ರತಿ ಕುಟುಂಬಕ್ಕೆ ಸುಮಾರು 30 ಕೆಜಿ ಇತ್ತು. ಸುಧಾರಿತ ಪದ್ಧತಿಗಳನ್ನು ಅಳವಡಿಸಿಕೊಳ್ಳುವ ಮೂಲಕ, ರೈತರು ವರ್ಷಕ್ಕೆ ಪ್ರತಿ ಬೋಡಿಯಿಂದ ಸುಮಾರು 128 ಕೆಜಿ ಮೀನುಗಳನ್ನು ಕೊಯ್ಲು ಮಾಡಲು ಸಾಧ್ಯವಾಯಿತು. ಇದು ಅವರ ಆದಾಯವನ್ನು ಮತ್ತಷ್ಟು ಹೆಚ್ಚಿಸಿತು. ಸರಾಸರಿ ಕೃಷಿ ಆದಾಯವು ವಾರ್ಷಿಕ ರೂ.45,000/-ದಿಂದ ಸುಮಾರು ರೂ.1 ಲಕ್ಷ ಕ್ಕೆ ಏರಿದೆ. ಭವಿಷ್ಯದಲ್ಲಿ ಹಣ್ಣಿನ ಮರಗಳು ಆದಾಯವನ್ನು ಮತ್ತಷ್ಟು ಹೆಚ್ಚಿಸುತ್ತವೆ. ರೈತರು ಉತ್ತಮ ಕೌಶಲ್ಯಗಳನ್ನು ಕಲಿತಾಗ ಮೀನುಗಾರಿಕೆ ಮತ್ತು ಕೋಳಿ ಸಾಕಣೆಯಿಂದ ಬರುವ ಆದಾಯವೂ ಸುಧಾರಿಸುತ್ತದೆ. ಮಧ್ಯಸ್ಥಿಕೆಗೆ ಮೊದಲು ಮತ್ತು ನಂತರದ ಮೂಲ ಆದಾಯವನ್ನು ಕೋಷ್ಟಕ 1 ರಲ್ಲಿ ಪ್ರಸ್ತುತಪಡಿಸಲಾಗಿದೆ.
ಕೋಷ್ಟಕ 1: ವಾರ್ಷಿಕ ಕೃಷಿ ಆದಾಯ
| ಮಧ್ಯಸ್ಥಿಕೆ | ಮಧ್ಯಸ್ಥಿಕೆಗೆ ಮೊದಲು (ರೂ.) | ಮಧ್ಯಸ್ಥಿಕೆಯ ನಂತರ (ರೂ.) |
| ಮೀನುಗಾರಿಕೆ | 5313 | 22400 |
| ಕೋಳಿ ಸಾಕಣೆ (ಮೊಟ್ಟೆಗಳು, ಹಕ್ಕಿಗಳು) | 0 | 19512 |
| ಪೌಷ್ಟಿಕಾಂಶ ತೋಟಗಳಿಂದ ತರಕಾರಿಗಳು (5 ಎಕರೆ) | 0 | 6653 |
| ಖಾರಿಫ್ – ಭತ್ತ (ಅಕ್ಕಿ) (3 ಎಕರೆ) | 35320 | 47560 |
| ರಬಿ – ಬೇಳೆಕಾಳುಗಳು | 0 | 4660 |
| ಮರೇತರ ಅರಣ್ಯ ಉತ್ಪನ್ನ | 4500 | 4500 |
| ಒಟ್ಟು | 45133 | 105285 |
ಸವಾಲುಗಳನ್ನು ಎದುರಿಸುವುದು
ಆರಂಭಿಕ ಹಂತದಲ್ಲಿ ಸಮಗ್ರ ಬೋಡಿ ಕೃಷಿ ವ್ಯವಸ್ಥೆಯನ್ನು ಉತ್ತೇಜಿಸುವಾಗ ವಿವಿಧ ಸವಾಲುಗಳನ್ನು ಎದುರಿಸಲಾಯಿತು. ಭಾಗವಹಿಸುವವರಲ್ಲಿದ್ದ ವಿಶ್ವಾಸದ ಕೊರತೆಯು ಈ ಸವಾಲುಗಳಲ್ಲಿ ಸೇರಿದೆ. ಇದನ್ನು ಚರ್ಚೆಗಳು ಮತ್ತು ಪ್ರಾತ್ಯಕ್ಷಿಕೆಗಳ ಮೂಲಕ ಪರಿಹರಿಸಲಾಯಿತು.
ಈ ಪ್ರದೇಶದಲ್ಲಿ ಗುಣಮಟ್ಟದ ಮೀನು ಮರಿಗಳನ್ನು ಪಡೆಯುವುದು ಕಷ್ಟವಿತ್ತು. ಪಕ್ಕದ ಪ್ರದೇಶದಿಂದ ಪ್ರಸಿದ್ಧ ಮೀನು ಮರಿಗಳ ಕೇಂದ್ರಗಳೊಂದಿಗೆ ಸಂಪರ್ಕ ಸಾಧಿಸುವ ಮೂಲಕ ಇದನ್ನು ಪರಿಹರಿಸಲಾಗಿದೆ. ಉತ್ತಮ ಮೀನು ಮರಿಗಳು ಸದಾ ಸಿಗುವಂತೆ ಈ ಪ್ರದೇಶದಲ್ಲಿ ಹೊಸ ಮೀನು ಮರಿಗಳ ಕೇಂದ್ರವನ್ನು ಸಹ ಅಭಿವೃದ್ಧಿಪಡಿಸಲಾಗಿದೆ.
ಮೇಯಲು ಬರುವ ಪ್ರಾಣಿಗಳು ಬೋಡಿಯ ರಚನೆಗಳಿಗೆ ಹಾಗೂ ಬೆಳೆಗಳಿಗೆ ಹಾನಿಯನ್ನುಂಟುಮಾಡುತ್ತಿದ್ದವು. ಗ್ರಾಮ ಮಟ್ಟದಲ್ಲಿ ನಿರ್ದಿಷ್ಟ ಪ್ರದೇಶಗಳಲ್ಲಿ ಮೇಯಿಸುವಿಕೆಯನ್ನು ಅಳವಡಿಸಿಕೊಳ್ಳುವ ಬಗ್ಗೆ ಸಮುದಾಯಕ್ಕೆ ಅರಿವು ಮೂಡಿಸಲಾಯಿತು. ಗ್ರಾಮ ಪಂಚಾಯಿತಿಗಳ ಈ ನಿರ್ಧಾರವು ಹಲವಾರು ರೈತರನ್ನು ಬೋಡಿ ಆಧಾರಿತ ವಿಧಾನವನ್ನು ಅಳವಡಿಸಿಕೊಳ್ಳಲು ಹಾಗೂ ರಬಿ ಬೆಳೆಗಳನ್ನು ಬೆಳೆಸಲು ಪ್ರೋತ್ಸಾಹಿಸಿದೆ.
ಕೆಲವು ರೈತರು ಮೀನು, ತರಕಾರಿಗಳು ಮತ್ತು ಕೋಳಿಗಳ ಕಳ್ಳತನದಿಂದ ಹಾಗೂ ಕಾಡು ಪ್ರಾಣಿಗಳು ಕೋಳಿಗಳ ಮೇಲೆ ದಾಳಿ ಮಾಡಿದ್ದರಿಂದ ನಷ್ಟವನ್ನು ಅನುಭವಿಸಿದ್ದಾರೆ. ಈ ಸವಾಲುಗಳನ್ನು ರೈತರು ತಮ್ಮ ನಿವಾಸವನ್ನು ಬದಲಾಯಿಸುವ ಮೂಲಕ ಅಥವಾ ಬೋಡಿಗಳ ಬಳಿ ತಾತ್ಕಾಲಿಕ ನಿವಾಸಗಳನ್ನು ಅಭಿವೃದ್ಧಿಪಡಿಸುವ ಮೂಲಕ ಪರಿಹರಿಸಿ ಕೊಂಡಿದ್ದಾರೆ. ಜಮೀನುಗಳ ಸುತ್ತಲೂ ಕಡಿಮೆ ವೆಚ್ಚದ ಬೇಲಿಯನ್ನು ಹಾಕಲು ಸಹ ಪ್ರಯತ್ನಿಸಲಾಗುತ್ತಿದೆ.
ಮುಂದಿನ ಹಾದಿ
ಸವಾಲುಗಳ ಹೊರತಾಗಿಯೂ, ಇಲ್ಲಿಯವರೆಗೆ 226 ಕುಟುಂಬಗಳು ಈ ಕಾರ್ಯಕ್ರಮದ ಪ್ರಯೋಜನ ಪಡೆದಿವೆ. ಇದರೊಂದಿಗೆ, ಉನ್ನತೀಕರಣ ಹಂತದಲ್ಲಿ 600 ಕುಟುಂಬಗಳನ್ನು ಒಳಗೊಳ್ಳಲಾಗುವುದು. ಬೋಡಿ ಆಧಾರಿತ ಸಮಗ್ರ ಕೃಷಿ ವ್ಯವಸ್ಥೆಯು ರೈತರಿಗೆ ಹಲವು ಜೀವನೋಪಾಯದ ಮೂಲಗಳನ್ನು ಸೃಷ್ಟಿಸಿದೆ. ಇದು ಕೃಷಿ ವ್ಯವಸ್ಥೆಯಲ್ಲಿ ವೈವಿಧ್ಯತೆಯನ್ನು ತರುವುದರೊಂದಿಗೆ ಕುಟುಂಬ ಮಟ್ಟದಲ್ಲಿ ಪೌಷ್ಠಿಕಾಂಶದ ವೈವಿಧ್ಯತೆಯನ್ನು ಹೆಚ್ಚಿಸಿದೆ. ಬೋಡಿ ಆಧಾರಿತ ಸಮಗ್ರ ಕೃಷಿ ವ್ಯವಸ್ಥೆಯು ಅದರ ವಿವಿಧ ಸಂಯೋಜಿತ ಘಟಕಗಳ ಮೂಲಕ ಜಮೀನಿನ ಸ್ಥಿತಿಸ್ಥಾಪಕತ್ವವನ್ನು ಹೆಚ್ಚಿಸುವುದರೊಂದಿಗೆ, ಸುಸ್ಥಿರತೆಯನ್ನು ಉತ್ತೇಜಿಸಿದೆ. ಇದು ಈ ಪ್ರದೇಶದಲ್ಲಿ ಸುಧಾರಿತ ಮತ್ತು ಸುಸ್ಥಿರ ಜೀವನೋಪಾಯ, ಸುಸ್ಥಿರ ಮೀನುಗಾರಿಕೆಗೆ ಸಂಬಂಧಿಸಿದಂತೆ ಹಲವು ಫಲಿತಾಂಶಗಳನ್ನು ನೀಡುವ ಪುನರಾವರ್ತಿಸಬಹುದಾದ ಮಾದರಿಯಾಗಿದೆ.
Yogesh Sawant Chief Thematic Programme Executive (Farm Based Livelihoods and Climate Action) BAIF Development Research Foundation BAIF Bhavan, Dr. Manibhai Desai Nagar Warje Pune – 411058 E-mail: ygsawant@baif.org.in
ಆಂಗ್ಲ ಮೂಲ : ಲೀಸಾ ಇಂಡಿಯಾ; ಸಂಪುಟ :೨೭; ಸಂಚಿಕೆ : ೧ ; ಮಾರ್ಚ್ ೨೦೨೫



