ಬದಲಾವಣೆಯ ಬೀಜಗಳ ಬಿತ್ತನೆ


ಮಿಶ್ರ ಬೆಳೆ, ದೇಸಿ ಬೀಜಗಳು ಮತ್ತು ಸಮುದಾಯ ನೇತೃತ್ವದ ಕೃಷಿ ಪರಿಸರ ವಿಜ್ಞಾನವು ಸುಸ್ಥಿರ ಭವಿಷ್ಯದ ಕೀಲಿಕೈ ಆಗಿದೆ. ಅನಂತ್‌ ಅವರ ಪ್ರಯಾಣವು ಅಂತಹ ಒಂದು ಉದಾಹರಣೆಯಾಗಿದೆ.


ಒಡಿಶಾದ ರಾಯಗಡ ಜಿಲ್ಲೆಯ ಕಾಶಿಪುರ ಬ್ಲಾಕ್‌ನಲ್ಲಿ, ಹಸಿರು ಬೆಟ್ಟಗಳಿಂದ ಸುತ್ತವರೆದ ಕೊಡಿಗುಡ ಎಂಬ ಸಣ್ಣ ಆದಿವಾಸಿ ಹಳ್ಳಿಯಿದೆ.  ಪೂರ್ವಿಕರ ಜ್ಞಾನದ ನೆನಪಿನಲ್ಲಿ ಬೇರೂರಿರುವ ಈ ಹಳ್ಳಿಯಲ್ಲಿ ಸದ್ದಿಲ್ಲದೆ ಬದಲಾವಣೆಯೊಂದು ಮೊದಲಾಗಿದೆ.

ಹಸಿರು ಕ್ರಾಂತಿಯ ಪರಿಣಾಮದಿಂದಾಗಿ ದಶಕಗಳ ಕಾಲ ಸ್ಥಳೀಯ ಸಮುದಾಯಗಳು ತಮ್ಮ ಸ್ಥಿತಿಸ್ಥಾಪಕ, ಜೀವವೈವಿಧ್ಯ ಕೃಷಿ ವ್ಯವಸ್ಥೆಗಳಿಂದ ದೂರವಾಗಿ, ಏಕ ಬೆಳೆಯನ್ನು ಬೆಳೆಯುವಂತಾಗಿ ಭತ್ತ ಮತ್ತಿತರ ಬೆಳೆಗಳನ್ನೇ ಅವಲಂಬಿಸುವಂತಾಯಿತು. ಕಿರುಧಾನ್ಯಗಳು, ದ್ವಿದಳ ಧಾನ್ಯಗಳು ಮತ್ತಿತರ ಸಾಂಪ್ರದಾಯಿಕ ಬೆಳೆಗಳು ಹೊಲಗಳಿಂದ, ನೆನಪುಗಳಿಂದ ಮರೆಯಾದವು.

ಇಲ್ಲೊಬ್ಬ ಅನಂತ್‌ ಮಾಝಿ ಎನ್ನುವ ಸಣ್ಣ ರೈತ ಭೂಮಿಗೆ ಮರಳಿ ಕಸುವನ್ನು ತುಂಬುತ್ತಿದ್ದಾರೆ. ಹೊಸ ಕೃಷಿ ತಂತ್ರಜ್ಞಾನ ಹಾಗೂ ಪಾರಂಪರಿಕ ತಿಳಿವಳಿಕೆಯೊಂದಿಗೆ ಮರೆತು ಹೋದ ಬೀಜಗಳೊಂದಿಗೆ ಕೃಷಿಯ ಪುನಶ್ಚೇತನ ಮಾಡುವ ಮೂಲಕ ತನ್ನ ಸಮುದಾಯದ ಆಹಾರ ಸಾರ್ವಭೌಮತ್ವವನ್ನು ಮರಳಿ ಪಡೆಯುವ ದೃಢಸಂಕಲ್ಪ ಮಾಡಿದ್ದಾರೆ.

ಇದು ಕೇವಲ ಕೃಷಿಯ ಕಥೆಯಲ್ಲ; ಇದು ಅಸ್ಮಿತೆಯನ್ನು ಮರಳಿ ಗಳಿಸುವ, ಪ್ರಕೃತಿಯೊಂದಿಗೆ ಸಮತೋಲನವನ್ನು ಪುನಃಸ್ಥಾಪಿಸುವ ಮತ್ತು ಭವಿಷ್ಯದ ಪೀಳಿಗೆಗಳು ಹಸಿವಿನಿಂದ ಬಳಲದಂತೆ ಅಥವಾ ಅವರು ತಮ್ಮತನವನ್ನು ಮರೆಯದಂತೆ ನೋಡಿಕೊಂಡ ಕಥೆಯಾಗಿದೆ.

ಬದಲಾವಣೆಯ ಬೆಲೆ

ಕಳೆದ ನಲವತ್ತು ವರ್ಷಗಳಲ್ಲಿ, ಭಾರತದ ಕೃಷಿ ಭೂದೃಶ್ಯವು ನಾಟಕೀಯವಾಗಿ ಬದಲಾಗಿದೆ. ಹಸಿರು ಕ್ರಾಂತಿ ತಂತ್ರಜ್ಞಾನಗಳ ಆಗಮನ ಮತ್ತು ಹರಡುವಿಕೆಯೊಂದಿಗೆ, ಸ್ಥಳೀಯ ಬೆಳೆಗಳಾದ ಸಿರಿಧಾನ್ಯಗಳು ಮತ್ತು ಸ್ಥಳೀಯ ಭತ್ತದ ಪ್ರಭೇದಗಳನ್ನು ಹೆಚ್ಚು ಇಳುವರಿ ನೀಡುವ ಮತ್ತು ಹೈಬ್ರಿಡ್ ಭತ್ತದ ತಳಿಗಳು  ಮತ್ತಿತರ ನಗದು ಬೆಳೆಗಳಿಂದ ಬದಲಾಯಿಸಲಾಯಿತು. ಕೆಲವು ಪ್ರದೇಶಗಳಿಗೆ ಇದರಿಂದ ಪ್ರಯೋಜನವಾಯಿತು. ಅನಂತ್‌ ಅವರಂತಹ ಆದಿವಾಸಿ ಸಮುದಾಯಗಳಿಗೆ ಇದರಿಂದ ತೊಂದರೆಯಾಯಿತು.

ಕೋಡಿಗುಡ ಮತ್ತು ಸುತ್ತಮುತ್ತಲಿನ ಇತರ ಹಳ್ಳಿಗಳಲ್ಲಿ, ಕೃಷಿಯು ಒಂದು ಕಾಲದಲ್ಲಿ ಸುರಕ್ಷಿತವಾಗಿ, ಋತುಚಕ್ರದ ಲಯಕ್ಕೆ ಅನುಗುಣವಾಗಿತ್ತು. ಆದರೆ, ವಾಣಿಜ್ಯ ಆಸಕ್ತಿಗಳು ಮುನ್ನಲೆಗೆ ಬಂದು ಆಧುನಿಕ ಕೃಷಿ ಪದ್ಧತಿಗಳು ಸಾಂಪ್ರದಾಯಿಕ ಕೃಷಿ ವಿಧಾನಗಳನ್ನು ಬದಲಾಯಿಸಿದಾಗ, ಮಿಶ್ರ ಬೆಳೆ ಪದ್ಧತಿಯ ಸ್ಥಳವನ್ನು ಏಕ ಬೆಳೆ ಪದ್ಧತಿಯು ಆಕ್ರಮಿಸಿತು. ಅಭಿವೃದ್ಧಿ ಕಾರ್ಯಕ್ರಮಗಳು ಪೌಷ್ಟಿಕ ಆಹಾರದ ಅಗತ್ಯತೆಗಳು, ಸ್ಥಳೀಯ ಪರಿಸ್ಥಿತಿಗಳು ಮತ್ತು ಪರಿಸರ ಸಮತೋಲನಗಳನ್ನು ಪರಿಗಣಿಸದೆ ಏಕ ಬೆಳೆಗಳನ್ನು, ವಿಶೇಷವಾಗಿ ಭತ್ತವನ್ನು ಉತ್ತೇಜಿಸಿದವು. ಇದರ ನಡುವೆ ಪುನರಾವರ್ತಿತ ಕೀಟ ಬಾಧೆ ಹವಾಮಾನ ಮಾದರಿಗಳು ಮತ್ತಷ್ಟು ಅನಿಯಮಿತವಾದವು. ಹೀಗಾಗಿ, ಬೆಳೆ ವೈಫಲ್ಯಗಳು ಸಾಮಾನ್ಯವಾದವು.

 ಭೂಮಿ ಮೊದಲಿನಂತಿಲ್ಲ. ಕೃಷಿ ದುಬಾರಿಯಾಗಿದೆ. ಬೆಳೆ ವೈವಿಧ್ಯತೆಯು ಕಳೆದುಹೋಗಿದೆ. ಕಾಡು ನಷ್ಟವಾಗಿದೆ. ಹಳೆಯ ಬೀಜಗಳು ಈಗಿಲ್ಲ,” ಎಂದು ಅನಂತ್‌ ಹೇಳುತ್ತಾರೆ.

ಅನಂತನಿಗೆ, ತನ್ನ ಕುಟುಂಬವನ್ನು ಪೋಷಿಸಲು ದಿನಗೂಲಿ ಮಾಡುವುದು ಬಿಟ್ಟು ಬೇರೆ ದಾರಿಯಿರಲಿಲ್ಲ. ಒಂದು ಕಾಲದಲ್ಲಿ ವೈವಿಧ್ಯಮಯ ಮತ್ತು ಸುಸ್ಥಿರ ಪರಿಸರ ವ್ಯವಸ್ಥೆಯಾಗಿದ್ದ ಅವರ ಸಣ್ಣ ಜಮೀನು ಈಗ ಹಿಂದಿನಂತಿಲ್ಲ, ಇದು ಅವರ ಕೃಷಿ ಆದಾಯದ ಮೇಲೆ ಪ್ರತಿಕೂಲ ಪರಿಣಾಮ ಬೀರಿತು. ಆರೋಗ್ಯ ಸಂಬಂಧಿ ತುರ್ತು ಪರಿಸ್ಥಿತಿಗಳಿಂದ ಹಿಡಿದು ಸಮಾರಂಭಗಳವರೆಗೆ ಎಲ್ಲದಕ್ಕೂ ಸಾಲ ಮಾಡಬೇಕಿತ್ತು. ಸರ್ಕಾರ ಪಡಿತರ ಸರಬರಾಜು ಮಾಡಿದರೂ, ವರ್ಷಕ್ಕೆ ಮೂರರಿಂದ ನಾಲ್ಕು ತಿಂಗಳು ಆಹಾರದ ಕೊರತೆ ಇತ್ತು,” ಎಂದು ಅವರು ಹೇಳುತ್ತಾರೆ.

 ಕೃಷಿಯ ಅಭೂತಪೂರ್ವ ಗತಕಾಲದ ನೆನಪು

2023 ಅನಂತ್‌ ಅವರ ಜೀವನಕ್ಕೆ ಒಂದು ಮಹತ್ವದ ತಿರುವು ನೀಡಿತು. ಅದು ಹೊಸ ತಂತ್ರಜ್ಞಾನವನ್ನು ಅಳವಡಿಕೆಯಿಂದ ಆದದ್ದಲ್ಲ. ಲಿವಿಂಗ್ ಫಾರ್ಮ್ಸ್‌ನವರು ನೀಡಿದ ಬೆಂಬಲವು ಹಳೆಯ ನೆನಪುಗಳ ಪುನಶ್ಚೇತನಕ್ಕೆ ಕಾರಣವಾಯಿತು.

ಲಿವಿಂಗ್ ಫಾರ್ಮ್ಸ್ ಜೊತೆ ಮಾತನಾಡುತ್ತಿದ್ದಂತೆ, ಅನಂತ್‌ ಅವರಿಗೆ ತಮ್ಮ ತಂದೆ ಅಪಾಯಕಾರಿ ಹಳ್ಳಿಯ ಬೆಟ್ಟಗುಡ್ಡಗಳ ಮೇಲೆ ಕೃಷಿ ಮಾಡುತ್ತಿದ್ದ ರೀತಿ ನೆನಪಾಯಿತು. ಸುಮಾರು 30 ವರ್ಷಗಳ ಹಿಂದೆ, ನಾವು ನಾಲ್ಕು ಬಗೆಯ ರಾಗಿ, ಮೂರು ಬಗೆಯ ನವಣೆ, ಊದಲು, ಬರಗು, ಎರಡು ವಿಧದ ಮೆಕ್ಕೆಜೋಳ, ಎರಡು ರೀತಿಯ ಜೋಳ, ಸಜ್ಜೆ, ತೊಗರಿ, ಕಪ್ಪು ಉದ್ದು… ಹೀಗೆ ಪಟ್ಟಿ ಮುಂದುವರಿಯುತ್ತದೆ,” ಎಂದು ಅವರು ಹೆಮ್ಮೆಯಿಂದ ನೆನಪಿಸಿಕೊಳ್ಳುತ್ತಾರೆ. ಈ ಬೆಳೆಗಳು ಕೇವಲ ಆಹಾರವಾಗಿರಲಿಲ್ಲ – ಅವು ಭರವಸೆಯಾಗಿದ್ದವು.

ಅವರ ಬಿತ್ತನೆ ಮತ್ತು ಕೊಯ್ಲು ಸಮಯಗಳು ಒಂದಕ್ಕೊಂದು ಅಡ್ಡಿಪಡಿಸುತ್ತಿರಲಿಲ್ಲ. ಯಾವುದೇ ಋತುವಿನಲ್ಲಿ ಕುಟುಂಬವು ಕೆಲಸವಿಲ್ಲದೆ ಕೂರುತ್ತಿರಲಿಲ್ಲ. ” ಬರಗಾಲದಲ್ಲೂ ಬರಿಗೈಯಾಗಿರಲಿಲ್ಲ. ನನ್ನಪ್ಪ ಒಮ್ಮೆ ಆಗಸ್ಟ್‌ನಲ್ಲಿ ಸ್ವಲ್ಪ ರಾಗಿ ಬಿತ್ತಿದ್ದರು. ಅದರಿಂದಲೂ ಉತ್ತಮ ಫಸಲು ಸಿಕ್ಕಿತು,” ಎಂದು ಅವರು ಹೇಳುತ್ತಾರೆ. “ವರ್ಷಪೂರ್ತಿ ಜಮೀನು ಮತ್ತು ಕಾಡು ಎರಡರಿಂದಲೂ ಆಹಾರ ಸಿಗುತ್ತಿತ್ತು.” ಆದರೆ ವೈವಿಧ್ಯಮಯ ವ್ಯವಸ್ಥೆಯು ಕಣ್ಮರೆಯಾಗಿದೆ. ಕೋಡಿಗುಡದಲ್ಲಿ ರಾಗಿ, ಜೋಳ ಮತ್ತು ನವಣೆಯ ಒಂದೇ ಒಂದು ವಿಧ ಮಾತ್ರ ಉಳಿದಿದೆ. “ಈಗ, ಮಳೆ ಕೈಕೊಟ್ಟಾಗ, ಎಲ್ಲಾ ಬೆಳೆಗಳು ವಿಫಲವಾಗುತ್ತವೆ” ಎಂದು ಅನಂತ್‌ ಹೇಳುತ್ತಾರೆ. “ನಮ್ಮ ಆಹಾರದ ರುಚಿ ಇನ್ನು ಮುಂದೆ ಅದೇ ರೀತಿ ಇರುವುದಿಲ್ಲ. ಈಗ ನಮ್ಮ ಕೃಷಿ ವ್ಯವಸ್ಥೆಯ ಮೇಲೆ ನಮಗೆ ಯಾವುದೇ ನಿಯಂತ್ರಣವಿಲ್ಲ. ಅದು ನಿಧಾನವಾಗಿ ನಮ್ಮಿಂದ ದೂರವಾಗಿದೆ.”

 ಮಹತ್ವದ ತಿರುವು: ಪುನಶ್ಚೇತನದ ಬೀಜಗಳು

2022 -2023 ರ ನಡುವೆ, ಲಿವಿಂಗ್ ಫಾರ್ಮ್ಸ್ ಕೊಡಿಗುಡದಲ್ಲಿ ಪರ್ಯಾಲೋಚನಾ ಸಭೆಗಳನ್ನು ಆಯೋಜಿಸಿದಾಗ ನಿಜವಾದ ಕಿಡಿ ಹುಟ್ಟಿಕೊಂಡಿತು. ವೃದ್ಧ ರೈತರು ಮತ್ತು ಯುವಕರು ಇಬ್ಬರೂ ಈ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು. ಮಹಿಳೆಯರು ಮತ್ತು ಪುರುಷರು ಸೇರಿದಂತೆ ಸುಮಾರು 30 ರಿಂದ 40 ರೈತರು ಈ ‘ಪರ್ಯಾಲೋಚನ’ ಸಭೆಯಲ್ಲಿ ಭಾಗವಹಿಸಿದ್ದರು. ಹಿರಿಯ ಅನುಭವಿ ರೈತರು ತಮ್ಮ ಸಾಂಪ್ರದಾಯಿಕ ಕೃಷಿ ಪದ್ಧತಿಗಳು, ಬೆಳೆ ವೈವಿಧ್ಯತೆ, ಬೀಜ ಪರಂಪರೆ, ಸಾಂಪ್ರದಾಯಿಕ ಬೆಳೆ ಮತ್ತು ಆದಿವಾಸಿ ಸಂಸ್ಕೃತಿಯ ನಡುವಿನ ಸಂಬಂಧ ಮೊದಲಾದವುಗಳ ಕಥೆಗಳನ್ನು ಹಂಚಿಕೊಂಡರು. ಇವುಗಳನ್ನು ಕಿರಿಯ ರೈತರು ಅಲ್ಲಿಯವರೆಗೆ ಕೇಳೇ ಇರಲಿಲ್ಲ. ಎರಡು ಗಂಟೆಗಳ ಕಾಲ ನಡೆದ ಗ್ರಾಮ ಮಟ್ಟದ ಪರ್ಯಾಲೋಚನ ಅಧಿವೇಶನದಲ್ಲಿ, ಹಿರಿಯ ರೈತರು ತಮ್ಮ ಶ್ರೀಮಂತ ಗತಕಾಲವನ್ನು ನೆನಪಿಸಿಕೊಂಡರು. ಇದರ ಬಗ್ಗೆ ಕಿರಿಯರಿಗೆ ಅನುಮಾನಗಳಿದ್ದರೂ ಒಪ್ಪಿಕೊಳ್ಳುತ್ತಾರೆ. ನಂತರದ ಚರ್ಚೆಯು ಆಧುನಿಕ ಕೃಷಿ ಪದ್ಧತಿಗಳು ಮತ್ತು ಆದಿವಾಸಿ ಸ್ವಾವಲಂಬಿ ಕೃಷಿಯ ಮೇಲೆ ಅವುಗಳ ಋಣಾತ್ಮಕ ಪರಿಣಾಮಗಳ ಮೇಲೆ ಕೇಂದ್ರೀಕೃತವಾಗಿದ್ದವು. 3 ರಿಂದ 4 ಪರ್ಯಾಲೋಚನ ಸಭೆಗಳ ನಂತರ, ಅನಂತ ಮಾತ್ರವಲ್ಲದೆ ಹಳ್ಳಿಯ ಇತರ ಯುವ ರೈತರು ಸಹ ತಮ್ಮ ಸಾಂಪ್ರದಾಯಿಕ ಸುಸ್ಥಿರ ಕೃಷಿ ಪದ್ಧತಿಗಳ ಪ್ರಸ್ತುತತೆ ಮತ್ತು ಅವುಗಳ ಪ್ರಯೋಜನಗಳನ್ನು ಅರಿತರು. ಈ ಸಭೆಗಳು ಯುವ ರೈತರಿಗೆ ಪ್ರಸ್ತುತ ಪರಿಸ್ಥಿತಿಯಲ್ಲಿ ಎದುರಿಸುತ್ತಿರುವ ಸವಾಲುಗಳ ಬಗ್ಗೆ ಯೋಚಿಸಲು ಮತ್ತು ತಮ್ಮ ಸಾಂಪ್ರದಾಯಿಕ ಕೃಷಿ ವ್ಯವಸ್ಥೆಗಳನ್ನು ಪುನರುಜ್ಜೀವನಗೊಳಿಸಲು ನಿರ್ಧಾರಗಳನ್ನು ತೆಗೆದುಕೊಳ್ಳಲು ಸಹಾಯ ಮಾಡಿತು. ಅನಂತ್‌ ಕೂಡ ಅವರಲ್ಲಿ ಒಬ್ಬರು.

ಸಾಂಪ್ರದಾಯಿಕ ಬೀಜ ಪ್ರಭೇದಗಳನ್ನು ಒದಗಿಸುವುದು ಮುಖ್ಯ ಎಂದು ಅರಿತುಕೊಳ್ಳಲಾಯಿತು. ಲಿವಿಂಗ್ ಫಾರ್ಮ್ಸ್ ಕೋಡಿಗುಡದ ಮಹಿಳಾ ಸದಸ್ಯರಿಗೆ ಗ್ರಾಮದಲ್ಲಿ ಬೀಜ ಬ್ಯಾಂಕ್ ಸ್ಥಾಪಿಸಲು ಸಹಾಯ ಮಾಡಿತು ಮತ್ತು ಕೃಷಿ-ಪರಿಸರ ವಿಜ್ಞಾನದ ಕುರಿತು ತರಬೇತಿ ಅವಧಿಗಳನ್ನು ಆಯೋಜಿಸಿತು. ಆರಂಭದಲ್ಲಿ ಗ್ರಾಮದ 10 ಮಹಿಳೆಯರು 2023 ರ ಆರಂಭದಲ್ಲಿ ಬೀಜ ಬ್ಯಾಂಕ್ ಸ್ಥಾಪಿಸಲು ಮುಂದೆ ಬಂದರು. ಅವರು ನೆರೆಯ ಗ್ರಾಮ ಪಂಚಾಯತ್‌ಗಳಾದ ಸಿಂಧುರ್‌ ಘಾಟಿ, ಸುಂಗರ್, ಗೋಡಿಬಲಿ ಮುಂತಾದ ಹಳ್ಳಿಗಳಿಂದ ತಮ್ಮಲ್ಲಿ ಸಿಗದೆ ಇದ್ದ, ಕೆಲವು ವಿಧದ ರಾಗಿ, ದ್ವಿದಳ ಧಾನ್ಯಗಳು, ಎಣ್ಣೆ ಬೀಜಗಳು, ಜೋಳವನ್ನು ಸಂಗ್ರಹಿಸಿದರು. ಅವುಗಳನ್ನು ಮಡಿಕೆಗಳಲ್ಲಿ ಸಂಗ್ರಹಿಸಿ ಬೇರೆ ಬೇರೆ ಮನೆಗಳಲ್ಲಿ ಸಂಗ್ರಹಿಸಿದರು. ಪಕ್ಕದ ಬ್ಲಾಕ್ ಬಿಸ್ಸಮ್ ಕಟಕ್, ಮುನಿಗುಡ ಮತ್ತು ಚಂದ್ರಾಪುರದಿಂದ ಸಂಗ್ರಹಿಸುವ ಮೂಲಕ ಲೀವಿಂಗ್‌ ಫಾರಂ ಹವಾಮಾನ ತಾಳಿಕೆ ಹೊಂದಿರುವ ರಾಗಿ, ಸಾಮೆ, ನವಣೆ, ಊದಲು ಮತ್ತು ಕೆಲವು ವಿಧದ ಸ್ಥಳೀಯ ಭತ್ತ ಮತ್ತು ಪರಿಮಳಯುಕ್ತ ಭತ್ತವನ್ನು ಪಡೆಯಲು ಸಹಾಯ ಮಾಡಿದವು. ಲಿವಿಂಗ್ ಫಾರ್ಮ್ಸ್ ಕೇವಲ ಬೀಜಗಳನ್ನು ಒದಗಿಸಲಿಲ್ಲ. ಅವರು ಸಮುದಾಯಗಳಿಗೆ ಸಾವಯವ ಕೃಷಿ, ಬೀಜ ಸಂರಕ್ಷಣೆ ಮತ್ತು ಮಣ್ಣಿನ ಪುನಃಸ್ಥಾಪನೆಯ ಕುರಿತು ತರಬೇತಿ ನೀಡಿದರು. 2023 ರಲ್ಲಿ ಆಯ್ದ ರೈತ ಮುಖಂಡರಿಗೆ ಎರಡು ತಂಡಗಳಲ್ಲಿ ತರಬೇತಿಯನ್ನು ಆಯೋಜಿಸಲಾಯಿತು. ಈ ಗ್ರಾಮ ಮಟ್ಟದ ತರಬೇತಿ ಮತ್ತು ಸಾವಯವ ಗೊಬ್ಬರವನ್ನು ತಯಾರಿಸುವ ಪ್ರದರ್ಶನ ಕಾರ್ಯಕ್ರಮಗಳ ಜೊತೆಗೆ, ಕೋಡಿಗುಡ ಸೇರಿದಂತೆ ಕಾಶಿಪುರ ಬ್ಲಾಕ್‌ನ 60 ಹಳ್ಳಿಗಳಲ್ಲಿ ಮಿಶ್ರ ಕೃಷಿ ಪ್ರಕ್ರಿಯೆಗಳು ಮತ್ತು ರೈತರ ಅನುಭವ ಹಂಚಿಕೆ ಕಾರ್ಯಾಗಾರಗಳನ್ನು ಆಯೋಜಿಸಲಾಯಿತು.

ಲಿವಿಂಗ್ ಫಾರ್ಮ್ಸ್ 2008 ರಿಂದ ಒರಿಸ್ಸಾದ ದಕ್ಷಿಣ ಭಾಗದ 3 ಜಿಲ್ಲೆಗಳ 150 ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಆಹಾರ ಸಾರ್ವಭೌಮತ್ವ ಕುರಿತು ಕೆಲಸ ಮಾಡುತ್ತಿರುವ ಸ್ವಯಂಸೇವಾ ಸಂಸ್ಥೆಯಾಗಿದೆ. ಲಿವಿಂಗ್ ಫಾರ್ಮ್ಸ್ ಒಂದು ಉಪಕ್ರಮವಾಗಿದ್ದು, ವಿಮರ್ಶಾತ್ಮಕ ಪ್ರಜ್ಞೆಯನ್ನು ಬೆಳೆಸಲು ಸಮುದಾಯಗಳೊಂದಿಗೆ ಪಾಲುದಾರಿಕೆಯಲ್ಲಿ ತೊಡಗಿಸಿಕೊಳ್ಳುವಿಕೆಯನ್ನು ಉತ್ತೇಜಿಸುತ್ತದೆ. ಆದಿವಾಸಿ ರೈತರ ಸಮಸ್ಯೆಗಳನ್ನು ಪರಿಹರಿಸುವ ಸಾಮರ್ಥ್ಯಗಳನ್ನು ಅಭಿವೃದ್ಧಿಪಡಿಸುತ್ತದೆ. ಇದರಿಂದಾಗಿ ಅವರು ಸವಾಲುಗಳಿಗೆ ಪ್ರತಿಕ್ರಿಯಿಸಲು ಸಾಧ್ಯವಾಗುತ್ತದೆ. ಲಿವಿಂಗ್ ಫಾರ್ಮ್ಸ್ ಸ್ಥಳೀಯ ಸಮುದಾಯಗಳ, ವಿಶೇಷವಾಗಿ ಮಹಿಳೆಯರ ಸಾಮರ್ಥ್ಯ ಮತ್ತು ತಿಳಿವಳಿಕೆಯನ್ನು ಹೆಚ್ಚು ಗೌರವಿಸುತ್ತದೆ.

ಲಿವಿಂಗ್ ಫಾರ್ಮ್ಸ್ ವಿವಿಧ ಸ್ಥಳೀಯ ಜನಸಾಮಾನ್ಯರ ಉಪಕ್ರಮಗಳು ಮತ್ತು ವೈವಿಧ್ಯಮಯ ಪಾಲುದಾರರ ನಡುವೆ ಸಂಪರ್ಕ ಮತ್ತು ಒಗ್ಗಟ್ಟನ್ನು ರೂಪಿಸುತ್ತದೆ. ಇದು ಶೈಕ್ಷಣಿಕ, ಸಂಶೋಧಕರು, ಮಾಧ್ಯಮ ಮತ್ತು ಸರ್ಕಾರದ ನಡುವೆ ಹೊಸ ಸಂವಾದಗಳನ್ನು ಹುಟ್ಟುಹಾಕುವ ಮೂಲಕ, ಸಮುದಾಯದ ಯೋಗಕ್ಷೇಮಕ್ಕಾಗಿ ಮತ್ತು ಪರಿಸರ ಬಿಕ್ಕಟ್ಟನ್ನು ಪರಿಹರಿಸಲು ನೈತಿಕ ಕ್ರಮವನ್ನು ಉತ್ತೇಜಿಸಲು ಸ್ಥಳೀಯ ಮತ್ತು ಪಾರಂಪರಿಕ ತಿಳಿವಳಿಕೆಯನ್ನು ಮೌಲ್ಯೀಕರಿಸುವ ಅಗತ್ಯವನ್ನು ಎತ್ತಿ ಹಿಡಿಯುತ್ತದೆ.

ತರಬೇತಿಗಳಿಗೆ ಹಾಜರಾದವರಲ್ಲಿ ಅನಂತ ಕೂಡ ಒಬ್ಬರು.

ಅವರು ಮೊದಲು ಮುಂದೆ ಬಂದು ಅವರು ಬೀಜ ಬ್ಯಾಂಕಿನಿಂದ ಊದಲು, ಬರಗು, ರಾಗಿ (ದಶರ) ಮತ್ತು 2 ರೀತಿಯ ನವಣೆಯ ಬೀಜಗಳನ್ನು ಪಡೆದರು. ಈ ಪ್ರಭೇದಗಳು ಅವರ ಬಾಲ್ಯದಲ್ಲಿ ಪ್ರಧಾನ ಆಹಾರವಾಗಿತ್ತು. ಅವರು ಪ್ರತಿ ವಿಧವನ್ನು 500 ಗ್ರಾಂನಿಂದ 1 ಕೆಜಿ ವರೆಗೆ ಸಾಲ ಪಡೆದು ಸುಮಾರು 2 ಎಕರೆ ಭೂಮಿಯಲ್ಲಿ ಬಿತ್ತಿದರು. ಅನಂತ್‌ ಅವರೊಂದಿಗೆ 17 ರೈತರು 2023 ರಲ್ಲಿ ಬೀಜಗಳನ್ನು ಬೀಜ ಬ್ಯಾಂಕಿನಿಂದ ಎರವಲು ಪಡೆದರು. “ಕೊಯ್ಲಿನ ನಂತರ ಬ್ಯಾಂಕಿಗೆ ಹಿಂದಿರುಗಿಸುವುದಾಗಿ ಮತ್ತು ಇತರರಿಗೂ ಅನುಕೂಲವಾಗಲು  1.5 ಪಟ್ಟು ಹೆಚ್ಚು ಸೇರಿಸುವುದಾಗಿ ನಾನು ಭರವಸೆ ನೀಡಿದ್ದೆ ,” ಎಂದು ಅನಂತ್‌ ಹೇಳಿದರು. ನಮ್ಮ ಹಳೆಯ ವ್ಯವಸ್ಥೆಯನ್ನು ನಾವು ಮತ್ತೆ ಜೀವಂತಗೊಳಿಸುತ್ತಿರುವಂತೆ ಭಾಸವಾಗುತ್ತದೆ.”

 ಸ್ಥಳೀಯವಾಗಿ ಲಭ್ಯವಿರುವ ವಸ್ತುಗಳಿಂದ ಹಂಡಿ ಖಾಟಾ (ಸಾವಯವ ಗೊಬ್ಬರ) ಮತ್ತು ದ್ರವ ಗೊಬ್ಬರವನ್ನು ಹೇಗೆ ತಯಾರಿಸಬೇಕೆಂದು ಅನಂತ್‌ ಕಲಿತರು. ಸಗಣಿ, ಗಂಜಲ, ಬೇವಿನ ಎಲೆಗಳು, ಲಕ್ಕಿ ಗಿಡದೆಲೆಗಳು, ದ್ವಿದಳ ಧಾನ್ಯದ ಸಸ್ಯಗಳ ಎಲೆಗಳು, ಎಕ್ಕದ ಎಲೆಗಳನ್ನು ಸಂಗ್ರಹಿಸಿ ಸಾವಯವ ಗೊಬ್ಬರ ತಯಾರಿಸಿದರು. ಇದನ್ನು ತಮ್ಮ ಮೆಕ್ಕೆಜೋಳದ ಹೊಲ ಮತ್ತು ಹೊಸದಾಗಿ ಮಾಡಿದ ಪೌಷ್ಟಿಕಾಂಶ ತೋಟದಲ್ಲಿ ಬಳಸಿ ಅತ್ಯುತ್ತಮ ಫಲಿತಾಂಶಗಳನ್ನು ಪಡೆದರು. ಈ ಗೊಬ್ಬರ ಯೂರಿಯಾಗಿಂತ ಉತ್ತಮವಾಗಿದೆ. ಇದು ಮಣ್ಣನ್ನು ಮರಳಿ ಜೀವಂತಗೊಳಿಸಿತು,” ಎಂದು ಉದ್ಗರಿಸುತ್ತಾರೆ.

 ಭರವಸೆಯ ಉದ್ಯಾನವನ

 ಖಾರಿಫ್ ಋತುವಿನಲ್ಲಿ, ಅನಂತ್‌ ಮತ್ತು ಅವರ ಪತ್ನಿ ಸ್ಥಳೀಯ ಬೀಜಗಳಾದ ಕುಂಬಳಕಾಯಿ, ಟೊಮೆಟೊ, ಅಮರಂಥ್, ಪಾಲಕ್, ಬೆಂಡೆಕಾಯಿ, ಬದನೆಕಾಯಿ, ತುಳಸಿ, ಹುರಳಿಕಾಯಿ, ಹಾಗಲಕಾಯಿ, ಹೀರೆಕಾಯಿ, ಸೋರೆಕಾಯಿ ಇನ್ನಿತರ 14ಕ್ಕೂ ಹೆಚ್ಚು ವಿಧದ ತರಕಾರಿಗಳನ್ನು ಹೊಂದಿರುವ ಪೌಷ್ಟಿಕ ಉದ್ಯಾನವನ್ನು ರಚಿಸಿದರು. ಅಷ್ಟು ವರ್ಷಗಳಲ್ಲಿ ಮೊದಲ ಬಾರಿಗೆ, ಅವರ ಮನೆಯಲ್ಲಿ ತಾಜಾ, ರಾಸಾಯನಿಕ ಮುಕ್ತ ತರಕಾರಿ ಬುಟ್ಟಿಗಳಿಂದ ತುಂಬಿತು. ತೋಟದಲ್ಲಿ ಸಾವಯವ ಗೊಬ್ಬರ ಬಳಸಿ ಉತ್ತಮ ಫಸಲನ್ನು ಪಡೆದರು. ಕೊಯ್ಲು ಮಾಡಿದ ಪ್ರತಿಯೊಂದು ತರಕಾರಿಗಳ ನಿಖರವಾದ ಪ್ರಮಾಣ ನೆನಪಿಲ್ಲದಿದ್ದರೂ, “ನನ್ನ ಐದು ಸದಸ್ಯರ ಕುಟುಂಬಕ್ಕೆ (ಇಬ್ಬರು ಮಕ್ಕಳು ಸೇರಿದಂತೆ) ಸಾಕಾಗುವಷ್ಟು ತರಕಾರಿಗಳನ್ನು ಪಡೆದೆವು,” ಎಂದು ಅವರು ಹೇಳುತ್ತಾರೆ. “ನಾವು ಪಡೆದ ಫಸಲನ್ನು ನೆರೆಹೊರೆಯವರು ಮತ್ತು ಸಂಬಂಧಿಕರೊಂದಿಗೆ ಹಂಚಿಕೊಂಡಿದ್ದೇವೆ. ನಾವು ಬೆಳೆದ ಸುರಕ್ಷಿತ ತರಕಾರಿಗಳು ನಮ್ಮ ಮಕ್ಕಳಿಗೆ ಸಾಕಷ್ಟು ಪ್ರಮಾಣದಲ್ಲಿ ಸಿಕ್ಕಿದ್ದನ್ನು ನೋಡಿ, ನಿಜಕ್ಕೂ ಸಂತೋಷವಾಯಿತು,” ಎಂದು ಹೇಳುವಾಗ ಅನಂತ್‌ ಅವರ ಪತ್ನಿಯ ಮುಖದಲ್ಲಿ ಹೆಮ್ಮೆಯಿತ್ತು.

ಜಾಗೃತ ಸಮುದಾಯ

 ಈ ಪಯಣದಲ್ಲಿ ಅನಂತ್‌ ಒಬ್ಬಂಟಿಯಲ್ಲ. ಈ ವರ್ಷ (2024), ಕೋಡಿಗುಡದ 35 ರೈತರು ಧಾನ್ಯಗಳು, ದ್ವಿದಳ ಧಾನ್ಯಗಳು, ಎಣ್ಣೆಕಾಳುಗಳು ಮತ್ತು ಗೆಡ್ಡೆಗಳು ಸೇರಿದಂತೆ ಮಿಶ್ರ ಕೃಷಿಯ ಮೂಲಕ 11–12 ಸಾಂಪ್ರದಾಯಿಕ ಬೆಳೆಗಳನ್ನು ಪುನರುಜ್ಜೀವನಗೊಳಿಸಲು ಕೈಜೋಡಿಸಿದ್ದಾರೆ. ಇದು ಅವರು ಹಿಂದೆ ಬೆಳೆಯುತ್ತಿದ್ದ ಎರಡು ಅಥವಾ ಮೂರು ಬೆಳೆಗಳನ್ನು ಕೈಬಿಟ್ಟಿರುವುದನ್ನು ಸೂಚಿಸುತ್ತದೆ.

ಅಲ್ಲದೆ, 2025 ರ ಖಾರಿಫ್ ಸಮಯದಲ್ಲಿ ಇನ್ನಷ್ಟು ರೈತರು ಈ ಆಂದೋಲನಕ್ಕೆ ಸೇರಲು ಉತ್ಸುಕರಾಗಿದ್ದಾರೆ.

ಬಹು ಮುಖ್ಯವಾಗಿ, ಸಾಂಪ್ರದಾಯಿಕ ಜ್ಞಾನ ಮತ್ತು ಸಾಂಪ್ರದಾಯಿಕ ಬೀಜಗಳ ಪಾಲಕರಾದ ಮಹಿಳೆಯರು ಮುಂದೆ ಬಂದು ಬೀಜ ಬ್ಯಾಂಕುಗಳನ್ನು ಮುನ್ನಡೆಸುತ್ತಿದ್ದಾರೆ, ಶ್ರಮ ವಿನಿಮಯ ಮಾಡಿಕೊಳ್ಳುತ್ತಿದ್ದಾರೆ ಮತ್ತು ಪರಸ್ಪರ ಬೆಂಬಲದ ಮೂಲಕ ಹಳೆಯ ವ್ಯವಸ್ಥೆಗಳನ್ನು ಪುನರುಜ್ಜೀವನಗೊಳಿಸುತ್ತಿದ್ದಾರೆ. ಒಂದು ಕಾಲದಲ್ಲಿ ಕನಸು ಅನ್ನುವಂತೆ ಇದ್ದದ್ದು ಅವರ ಪ್ರೇರಣೆ ಮತ್ತು ನಾಯಕತ್ವದಿಂದಾಗಿ ಈಗ ಚಳುವಳಿಯಾಗಿ ಮಾರ್ಪಟ್ಟಿದೆ.

 ಭವಿಷ್ಯವನ್ನು ಕಟ್ಟುವತ್ತ

ಕೊಡಿಗುಡದನ ಲ್ಲಿ ಸಾಂಪ್ರದಾಯಿಕ ಕೃಷಿಯ ಪುನರುಜ್ಜೀವನವು ಕೇವಲ ಅಲ್ಲಿನ ಯಶಸ್ಸಿನ ಕಥೆಯಲ್ಲ. ಹವಾಮಾನ ಬದಲಾವಣೆ ಮತ್ತು ಆಹಾರ ಅಭದ್ರತೆಯಂತಹ ಅಪಾಯವನ್ನು ಎದುರಿಸುತ್ತಿರುವ ಭಾರತದಾದ್ಯಂತದ ಸಮುದಾಯಗಳಿಗೆ ಇದು ಮಾದರಿಯಾಗಿದೆ. ದೇಸಿ ಬೆಳೆಗಳು ಮತ್ತು ಕೃಷಿ-ಪರಿಸರ ಪದ್ಧತಿಗಳನ್ನು ಅಳವಡಿಸಿಕೊಳ್ಳುವ ಮೂಲಕ, ಅನಂತ್‌ ಮತ್ತು ಅವರೊಂದಿಗಿನ ರೈತರು ಹವಾಮಾನ-ನಿರೋಧಕ, ಪೌಷ್ಟಿಕ ಮತ್ತು ಸಾಂಸ್ಕೃತಿಕ ತಿಳಿವಳಿಕೆಯಲ್ಲಿ ಬೇರೂರಿರುವ ಕೃಷಿ ವ್ಯವಸ್ಥೆಯನ್ನು ರೂಪಿಸುತ್ತಿದ್ದಾರೆ.

ನಮ್ಮ ಆಹಾರ ವ್ಯವಸ್ಥೆಯನ್ನು ಹೇಗೆ ಮರಳಿ ತರಬಹುದು ಎಂದು ಯೋಚಿಸುತ್ತಿದ್ದೆ, ಆದರೆ ಎಲ್ಲಿಂದ ಆರಂಭಿಸಬೇಕೆಂದು ನನಗೆ ತಿಳಿದಿರಲಿಲ್ಲ.” ಈಗ ನಾವು ಆರಂಭಿಸಿರುವುದನ್ನು ಇನ್ನು ನಿಲ್ಲಿಸುವುದಿಲ್ಲ. ನಮ್ಮನ್ನು ಸದೃಢವಾಗಿಸಿದ್ದ ಪ್ರತಿಯೊಂದು ಬೀಜ, ಪ್ರತಿಯೊಂದು ಅಭ್ಯಾಸವನ್ನು ನಾವು ಮರಳಿ ತರುತ್ತೇವೆ.”

 ಈಗ ಯುವಕರು ಒಟ್ಟಿಗೆ ಕುಳಿತು ನಮ್ಮ ಆಹಾರ ವ್ಯವಸ್ಥೆ, ನಮ್ಮ ಭೂಮಿ ಮತ್ತು ಪರಿಸರವನ್ನು ಹೇಗೆ ರಕ್ಷಿಸುವುದು ಎನ್ನುವುದರ ಬಗ್ಗೆ ಚರ್ಚೆ ಮಾಡುತ್ತಿದ್ದಾರೆ. ನಾವು ಈಗ ಆರಂಭಿಸಿದರೆ, ಅದನ್ನು ಅವರು ಮುಂದುವರಿಸುತ್ತಾರೆ.”

ಆಹಾರ ಮತ್ತು ಕೃಷಿಯಲ್ಲಿ ಹೆಚ್ಚುತ್ತಿರುವ ಬಿಕ್ಕಟ್ಟುಗಳಿಗೆ ಪರಿಹಾರಗಳನ್ನು ಹುಡುಕುತ್ತಿರುವಾಗ, ನೀತಿ ನಿರೂಪಕರು ಮತ್ತು ಕೃಷಿ ಸಂಸ್ಥೆಗಳು ಅನಂತ್‌ ಅವರಂತಹವರ ಸ್ಪಷ್ಟ, ದೃಢ ಮತ್ತು ತಿಳಿವಳಿಕೆಯ ಧ್ವನಿಗಳನ್ನು ಕೇಳಿಸಿಕೊಳ್ಳುವುದು ಒಳ್ಳೆಯದು. ಮಿಶ್ರ ಬೆಳೆ, ದೇಸಿ ಬೀಜಗಳು ಮತ್ತು ಸಮುದಾಯ ನೇತೃತ್ವದ ಕೃಷಿ ಪರಿಸರ ವಿಜ್ಞಾನವು ಹೆಚ್ಚು ಸುಸ್ಥಿರ ಭವಿಷ್ಯದ ಕೀಲಿಕೈ ಹೊಂದಿರಬಹುದು.


Bichitra Biswal and Anil Lima
Living Farms
Ratnakar baug-2, Tankapani Road
Bhubaneswar, Odisha-751018
E-mail: livingfarmsoffice@gmail.com

ಆಂಗ್ಲ ಮೂಲ : ಲೀಸಾ ಇಂಡಿಯಾ; ಸಂಪುಟ :೨೭; ಸಂಚಿಕೆ : ೨ ; ಜೂನ್ ೨೦‌೨೫

Recent Posts

ಸ್ಥಿತಿಸ್ಥಾಪಕತ್ವದ ಹೆಚ್ಚಳ

ಸ್ಥಿತಿಸ್ಥಾಪಕತ್ವದ ಹೆಚ್ಚಳ

ಇಡುಕ್ಕಿ ಜಿಲ್ಲೆಯು ಪುನರುತ್ಪಾದಕ ಸಾವಯವ ಪದ್ಧತಿಗಳ ತತ್ವಗಳ ಆಧಾರದ ಮೇಲೆ ಕೃಷಿ ಪದ್ಧತಿಗಳನ್ನು ಅನುಸರಿಸುವ ಮೂಲಕ ಬದಲಾಗುತ್ತಿರುವ ಹವಾಮಾನದ ಪರಿಣಾಮಗಳನ್ನು ತಗ್ಗಿಸಲು ಮತ್ತು ಹೊಂದಿಕೊಳ್ಳಲು ಸಮರ್ಥವಾಗಿದೆ. ಪೀರ್‌ಮೇಡ್ ಡೆವಲಪ್‌ಮೆಂಟ್ ಸೊಸೈಟಿ ಎನ್‌ಜಿಒ ಆಗಿದ್ದು, ಕೃಷಿ ಪರಿಸರ ಪದ್ಧತಿಗಳನ್ನು ಉತ್ತೇಜಿಸುವ ಮೂಲಕ ಈ ರೈತರಿಗೆ ಕೃಷಿ ಸುಸ್ಥಿರತೆಯನ್ನು ನಿರ್ಮಿಸಲು ಸಹಾಯ ಮಾಡುತ್ತಿದೆ.

ಸುಸ್ಥಿರ ಮತ್ತು ಸಮಗ್ರ ಕೃಷಿ ಯಾಂತ್ರೀಕರಣ

ಸುಸ್ಥಿರ ಮತ್ತು ಸಮಗ್ರ ಕೃಷಿ ಯಾಂತ್ರೀಕರಣ

ಸಣ್ಣ ರೈತರಿಗೆ ದುಬಾರಿ ವೆಚ್ಚದ ಕಾರಣದಿಂದಾಗಿ ಕೃಷಿ ಯಂತ್ರಗಳ ಲಭ್ಯತೆ ಸೀಮಿತವಾಗಿರುತ್ತದೆ. ಆದ್ದರಿಂದ ಪರಿಸರ, ಸಾಮಾಜಿಕ ಮತ್ತು ಆರ್ಥಿಕ ಸಮತೋಲನವನ್ನು ಖಾತ್ರಿಪಡಿಸಿಕೊಳ್ಳುವಾಗ ಉತ್ಪಾದಕತೆಯನ್ನು ಹೆಚ್ಚಿಸುವ ಸುಸ್ಥಿರ ಯಾಂತ್ರೀಕರಣ ಮಾದರಿ ಅಗತ್ಯ. ಮಹಾಶಕ್ತಿ ಪ್ರತಿಷ್ಠಾನದ ಸುಸ್ಥಿರ ಕೃಷಿ ಯಾಂತ್ರೀಕರಣ ಉಪಕ್ರಮವು ಶ್ರಮವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಕೃಷಿ ಯಂತ್ರೋಪಕರಣಗಳನ್ನು ಒದಗಿಸುವಲ್ಲಿ ಯಶಸ್ವಿಯಾಗಿದೆ.

ಬೋಡಿ ಆಧಾರಿತ ಸಮಗ್ರ ಕೃಷಿ ವ್ಯವಸ್ಥೆ- ಬುಡಕಟ್ಟು ಕುಟುಂಬಗಳಿಗೆ ವರದಾನ

ಬೋಡಿ ಆಧಾರಿತ ಸಮಗ್ರ ಕೃಷಿ ವ್ಯವಸ್ಥೆ- ಬುಡಕಟ್ಟು ಕುಟುಂಬಗಳಿಗೆ ವರದಾನ

ಮಹಾರಾಷ್ಟ್ರದಲ್ಲಿ ಜಾರಿಗೆ ತರಲಾದ ಬೋಡಿ ಆಧಾರಿತ ಸಮಗ್ರ ಕೃಷಿ ವ್ಯವಸ್ಥೆಯು ಸಣ್ಣ ರೈತರ ಜೀವನೋಪಾಯವನ್ನು ಹೆಚ್ಚಿಸಿದೆ. ಅದರ ವಿವಿಧ ಸಂಯೋಜಿತ ಘಟಕಗಳ ಮೂಲಕ, ಈ ಮಾದರಿಯು ಆದಾಯ, ಕುಟುಂಬದ ಪೋಷಣೆ, ಕೃಷಿ ಸ್ಥಿತಿಸ್ಥಾಪಕತ್ವ ಮತ್ತು ಸುಸ್ಥಿರತೆಯನ್ನು ಹೆಚ್ಚಿಸುತ್ತದೆ ಎನ್ನುವುದು ಸಾಬೀತಾಗಿದೆ.