ಸಣ್ಣ ರೈತರಿಗೆ ದುಬಾರಿ ವೆಚ್ಚದ ಕಾರಣದಿಂದಾಗಿ ಕೃಷಿ ಯಂತ್ರಗಳ ಲಭ್ಯತೆ ಸೀಮಿತವಾಗಿರುತ್ತದೆ. ಆದ್ದರಿಂದ ಪರಿಸರ, ಸಾಮಾಜಿಕ ಮತ್ತು ಆರ್ಥಿಕ ಸಮತೋಲನವನ್ನು ಖಾತ್ರಿಪಡಿಸಿಕೊಳ್ಳುವಾಗ ಉತ್ಪಾದಕತೆಯನ್ನು ಹೆಚ್ಚಿಸುವ ಸುಸ್ಥಿರ ಯಾಂತ್ರೀಕರಣ ಮಾದರಿ ಅಗತ್ಯ. ಮಹಾಶಕ್ತಿ ಪ್ರತಿಷ್ಠಾನದ ಸುಸ್ಥಿರ ಕೃಷಿ ಯಾಂತ್ರೀಕರಣ ಉಪಕ್ರಮವು ಶ್ರಮವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಕೃಷಿ ಯಂತ್ರೋಪಕರಣಗಳನ್ನು ಒದಗಿಸುವಲ್ಲಿ ಯಶಸ್ವಿಯಾಗಿದೆ.
ಧೆಂಕನಲ್ ಜಿಲ್ಲೆಯ ಭುವನ್ ಮತ್ತು ಕಂಕದಹಾದ್ ಬ್ಲಾಕ್‌ಗಳಲ್ಲಿನ ಸ್ಥಳೀಯ ಕೃಷಿ-ಪರಿಸರ ಮತ್ತು ಸಾಮಾಜಿಕ ಪರಿಸರದಲ್ಲಿ ಸಣ್ಣ ಮತ್ತು ವಿಭಜಿತ ಹಿಡುವಳಿ ಪ್ರದೇಶಗಳು, ಭತ್ತ ಆಧಾರಿತ ವ್ಯವಸ್ಥೆಗಳು ಮತ್ತು ಮಹಿಳೆಯರು ಕೃಷಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ವಿಭಜಿತ ಭೂ ಹಿಡುವಳಿ ಹೊಂದಿರುವ ಸಣ್ಣ ರೈತರು ಕೃಷಿಯಲ್ಲಿ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಾರೆ. ಇದರಲ್ಲಿ ಕೂಲಿಯಾಳುಗಳ ಕೊರತೆಯೂ ಸೇರಿದೆ. ಹೆಚ್ಚುತ್ತಿರುವ ಕೂಲಿ ವೆಚ್ಚವು ಸ್ಥಳೀಯ ಪರಿಸ್ಥಿತಿಗಳಿಗೆ ಅನುಗುಣವಾದ ಸಣ್ಣ ಪ್ರಮಾಣದ, ಕೈಗೆಟುಕುವ ಉಪಕರಣಗಳ ಬಳಕೆಯ ಅಗತ್ಯವನ್ನು ಸೃಷ್ಟಿಸಿದೆ. 2004 ರಿಂದ ಒರಿಸ್ಸಾದ ಸುಮಾರು 17 ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಾಶಕ್ತಿ ಫೌಂಡೇಶನ್, ಸುಸ್ಥಿರ ಜೀವನೋಪಾಯ ಪರಿಹಾರಗಳನ್ನು ಒದಗಿಸುತ್ತಿದೆ. ಸುಸ್ಥಿರ ಯಾಂತ್ರೀಕರಣದ ಮೂಲಕ ಈ ಸಮಸ್ಯೆಯನ್ನು ಪರಿಹರಿಸಲು ಪ್ರಯತ್ನಿಸಿದೆ.
ಸುಸ್ಥಿರ ಕೃಷಿ ಯಾಂತ್ರೀಕರಣ
ಕ್ಷೇತ್ರ ಅನುಭವದ ಆಧಾರದ ಮೇಲೆ, ಸುಸ್ಥಿರ ಯಾಂತ್ರೀಕರಣದ ತತ್ವಗಳು:
- ಬಿಡಿ ಜಮೀನುಗಳಿಗೆ ಸೂಕ್ತವಾದ ಯಂತ್ರಗಳು, ಶ್ರಮವನ್ನು ಕಡಿಮೆ ಮಾಡುವ ಮಹಿಳಾ ಸ್ನೇಹಿತ ಸಲಕರಣೆಗಳು ಸಂರಕ್ಷಣಾ ಪದ್ಧತಿಗಳನ್ನು ಬೆಂಬಲಿಸುವುದು
- ಸುಸ್ಥಿರ ಇಂಧನ ಪರಿಹಾರಗಳ ಅಳವಡಿಕೆ – ಕಡಿಮೆ ಇಂಧನ, ಎಲ್‌ಪಿಜಿ/ಸಿಎನ್‌ಜಿ ಮತ್ತು ಸೌರಶಕ್ತಿ ಚಾಲಿತ ಉಪಕರಣಗಳು ಹೊರಸೂಸುವಿಕೆ ಮತ್ತು ಕಾರ್ಯಾಚರಣೆಯ ವೆಚ್ಚವನ್ನು ಕಡಿಮೆ ಮಾಡಲು
- ಕಸ್ಟಮ್ ನೇಮಕಾತಿ ಕೇಂದ್ರಗಳು (CHCs), ರೈತ ಉತ್ಪಾದಕ ಗುಂಪುಗಳು ಮತ್ತು ಸ್ವಸಹಾಯ ಸಂಘಗಳ ಸಹಕಾರ ಸಂಘಗಳನ್ನು ವಿಸ್ತರಿಸುವ ಮೂಲಕ ಉಪಕರಣಗಳ ಹಂಚಿಕೆ ಮತ್ತು ತರಬೇತಿಗಾಗಿ ಸ್ಥಳೀಯ ಸಾಂಸ್ಥಿಕ ಕಾರ್ಯವಿಧಾನಗಳನ್ನು ಬಲಪಡಿಸುವುದು.
- ಕೃಷಿ ಯಾಂತ್ರೀಕರಣ ಪ್ರಕ್ರಿಯೆಗಳ ಕೈಗೆಟುಕುವಿಕೆ ಮತ್ತು ದೀರ್ಘಕಾಲೀನ ಸುಸ್ಥಿರತೆಯನ್ನು ಖಚಿತಪಡಿಸಿಕೊಳ್ಳಲು ಸ್ಥಳೀಯ ನಿರ್ವಹಣೆ ಮತ್ತು ದುರಸ್ತಿ ಸಂಪರ್ಕ ಜಾಲಗಳ ರಚನೆ.
ಯಾಂತ್ರೀಕರಣಕ್ಕಾಗಿ ಸಾಂಸ್ಥಿಕ ಮಾದರಿಗಳು
ಮಹಾಶಕ್ತಿ ಫೌಂಡೇಶನ್ ತನ್ನದೇ ಆದ ಕ್ಷೇತ್ರ ಅಭ್ಯಾಸಗಳಿಂದ ಪಡೆದ ಸಾಂಸ್ಥಿಕ ಮತ್ತು ವ್ಯವಹಾರ ಮಾದರಿಗಳನ್ನು ಉತ್ತೇಜಿಸಿತು – ಉದಾಹರಣೆಗೆ HDFC-FRDP ಕಾರ್ಯಕ್ರಮದಡಿಯಲ್ಲಿ ಸ್ಥಾಪಿಸಲಾದ ಸೇವಾ ಪೂರೈಕೆದಾರರ ಜಾಲಗಳನ್ನು ತೊಡಗಿಸಿಕೊಳ್ಳುವುದು; ಸಮುದಾಯ-ನಿರ್ವಹಣೆಯ ಕಸ್ಟಮ್ ನೇಮಕಾತಿ ಕೇಂದ್ರಗಳು (CHC ಗಳು) ಮತ್ತು SHG ನಿರ್ವಹಿಸುವ ಪರಿಕರ-ಬ್ಯಾಂಕ್‌ಗಳನ್ನು ಸ್ಥಾಪಿಸುವುದು, – ಯೋಜನೆಗಳು, ಪೂರೈಕೆದಾರರು ಮತ್ತು ಸೇವಾ ಜಾಲಗಳನ್ನು ಸಂಪರ್ಕಿಸಲು ಸಾರ್ವಜನಿಕ-ಖಾಸಗಿ ಪಾಲುದಾರಿಕೆಗಳನ್ನು (PPP) ಪೋಷಿಸಲಾಯಿತು.
ಅನುಷ್ಠಾನ ಪ್ರಕ್ರಿಯೆ
ಕೃಷಿ ಯಾಂತ್ರೀಕರಣದ ಅನುಷ್ಠಾನವನ್ನು ಸಾಮಾನ್ಯವಾಗಿ 12-24 ತಿಂಗಳುಗಳ ಅನುಷ್ಠಾನ ಮಾರ್ಗಸೂಚಿಯೊಂದಿಗೆ ನಾಲ್ಕು ಹಂತಗಳಲ್ಲಿ ಅನುಸರಿಸಲಾಗುತ್ತದೆ – ಹಂತ 1: ಅಗತ್ಯಗಳ ಮೌಲ್ಯಮಾಪನ ಮತ್ತು ಯೋಜನೆ (0–3 ತಿಂಗಳುಗಳು); ಹಂತ 2: ಪ್ರದರ್ಶನ ಮತ್ತು ಸಾಮರ್ಥ್ಯ ವೃದ್ಧಿ (4–9 ತಿಂಗಳುಗಳು); ಹಂತ 3: CHC ಗಳನ್ನು ಸ್ಥಾಪಿಸುವುದು ಮತ್ತು ಹಣಕಾಸು ಸಂಪರ್ಕಗಳನ್ನು ಸ್ಥಾಪಿಸುವುದು (10–18 ತಿಂಗಳುಗಳು) ಮತ್ತು ಹಂತ 4: ಉನ್ನತೀಕರಣ ಮತ್ತು ಮೇಲ್ವಿಚಾರಣೆ (19–24 ತಿಂಗಳುಗಳು). ಅನುಷ್ಠಾನದ ಮೂಲ ತತ್ವಗಳಲ್ಲಿ ಪರಿಸರ ಮತ್ತು ಸಾಮಾಜಿಕ ಅಂಶಗಳನ್ನು ರಕ್ಷಿಸುವುದು; ಮಣ್ಣಿನ ಸಂರಕ್ಷಣೆಯನ್ನು ಉತ್ತೇಜಿಸುವುದು; ನೀರಿನ ನಿರ್ವಹಣೆ; ವಾಯು ಮಾಲಿನ್ಯ ಕಡಿಮೆ ಮಾಡುವುದು; ಸಣ್ಣ ರೈತರು ಮತ್ತು ಮಹಿಳೆಯರಿಗೆ ಸಮಾನ ಪ್ರವೇಶ; PPE ಮತ್ತು ಸುರಕ್ಷಿತ ಸಂಗ್ರಹಣೆಯೊಂದಿಗೆ ಆರೋಗ್ಯ ಮತ್ತು ಸುರಕ್ಷತಾ ತರಬೇತಿ ಸೇರಿವೆ.
ಎ) ಸೇವಾ ಪೂರೈಕೆದಾರರ ಸಂಪರ್ಕಜಾಲಗಳನ್ನು ತೊಡಗಿಸಿಕೊಳ್ಳುವುದು
ಕಾಕಡಹಾದ್ ಬ್ಲಾಕ್‌ನಲ್ಲಿನ ಆರಂಭಿಕ ಮತ್ತು ಅತ್ಯಂತ ಮಹತ್ವದ ಉಪಕ್ರಮಗಳಲ್ಲಿ ಒಂದು ಯಾಂತ್ರೀಕೃತ ನೇರ ಭತ್ತದ ಬಿತ್ತನೆ (DSR) ಪ್ರಚಾರ. ಇದು ಶ್ರಮದಾಯಕವಾದ ಕೈಯಿಂದ ನಾಟಿ ಮಾಡುವ ಅಭ್ಯಾಸದ ಬದಲು, ನೇರವಾಗಿ ಭತ್ತವನ್ನು ಬಿತ್ತಲು ಟ್ರ್ಯಾಕ್ಟರ್‌ಗಳು ಮತ್ತು ಬೀಜ ಡ್ರಿಲ್‌ಗಳನ್ನು ಬಳಸುವ ಸೇವಾ ಪೂರೈಕೆದಾರರನ್ನು ತೊಡಗಿಸಿಕೊಳ್ಳುವುದನ್ನು ಒಳಗೊಂಡಿತ್ತು. 2025 ರ ಖಾರಿಫ್ ಸಮಯದಲ್ಲಿ, ಮಹಾಶಕ್ತಿ ಫೌಂಡೇಶನ್ ಭುವನ್ ಮತ್ತು ಕಂಕಡಹಾದ್ ಬ್ಲಾಕ್‌ನಲ್ಲಿ ಯಾಂತ್ರೀಕೃತ DSR ನ ಪ್ರಚಾರವನ್ನು ದೊಡ್ಡ ಪ್ರಮಾಣದಲ್ಲಿ ನಡೆಸಿತು. 23 ಹಳ್ಳಿಗಳಲ್ಲಿ ಸುಮಾರು 482 ಎಕರೆಯಲ್ಲಿ ಒಟ್ಟು 267 ರೈತರು ಮೊದಲ ಬಾರಿಗೆ ಇದನ್ನು ಅಳವಡಿಸಿಕೊಂಡರು. ಫೌಂಡೇಶನ್ 8 ಗ್ರಾಮ ಮಟ್ಟದ ಪ್ರದರ್ಶನಗಳು, 3 ಪ್ರಾಯೋಗಿಕ ತರಬೇತಿ ಅವಧಿಗಳು ಮತ್ತು ಸೇವಾ ಪೂರೈಕೆದಾರರನ್ನು ಒಳಗೊಂಡ ಬ್ಲಾಕ್ ಮಟ್ಟದ ತರಬೇತಿಯನ್ನು ಆಯೋಜಿಸಿತು. ಆಸಕ್ತ ರೈತರು DSR ವಿಧಾನಗಳನ್ನು ಅಭ್ಯಾಸ ಮಾಡುವುದರಿಂದ ಕೂಲಿಯಾಳುಗಳ ಬೇಡಿಕೆ ಕಡಿಮೆಯಾಗುತ್ತದೆ, ತ್ವರಿತ ಬಿತ್ತನೆ ಸಾಧ್ಯವಾಗುತ್ತದೆ. ಎಕರೆಗೆ ರೂ. 4,000– ರೂ. 5,000 ವೆಚ್ಚ ಉಳಿತಾಯವಾಗುತ್ತದೆ. ಈ ತಂತ್ರಜ್ಞಾನ ಕ್ರಮೇಣ ಸುತ್ತಮುತ್ತಲಿನ ಪ್ರದೇಶಗಳಿಗೆ ಹರಡುತ್ತಿದೆ.
ಬಿ) ಸಮುದಾಯ ನಿರ್ವಹಿಸುವ ಬಾಡಿಗೆ ಕೇಂದ್ರಗಳು
ಸಾಮಾನ್ಯವಾಗಿ, ಹೆಚ್ಚಿನ ಆರಂಭಿಕ ಹೂಡಿಕೆ ವೆಚ್ಚಗಳಿಂದಾಗಿ, ರೈತರಿಗೆ ಟ್ರಾಕ್ಟರ್‌ಗಳು, ಕೊಯ್ಲು ಯಂತ್ರಗಳು ಮತ್ತು ದುಬಾರಿ ಬೀಜ ಡ್ರಿಲ್‌ಗಳಂತಹ ದೊಡ್ಡ ಉಪಕರಣಗಳನ್ನು ಖರೀದಿಸುವುದು ಕಷ್ಟವಾಗುತ್ತದೆ. ಕೋಷ್ಟಕ 1ರಲ್ಲಿ ವೈವಿಧ್ಯಮಯ ಉಪಕರಣಗಳ ವೆಚ್ಚದ ಸೂಚಿತ ಅಂಕಿಅಂಶಗಳನ್ನು ನೀಡಲಾಗಿದೆ. ಅವು ಬ್ರ್ಯಾಂಡ್, ವೈಶಿಷ್ಟ್ಯಗಳು, ಸಬ್ಸಿಡಿ ಲಭ್ಯತೆ, ಪ್ರದೇಶ ಮತ್ತು ಮಾದರಿಯಂತಹ ಅಂಶಗಳ ಆಧಾರದ ಮೇಲೆ ಗಣನೀಯವಾಗಿ ಬದಲಾಗುತ್ತವೆ. ಉದಾಹರಣೆಗೆ, ದೊಡ್ಡ ಪ್ರಮಾಣದ ಬಿತ್ತನೆಗಾಗಿ ಟ್ರಾಕ್ಟರ್-ಮೌಂಟೆಡ್ ಝೀರೋ-ಟಿಲ್ ಬೀಜ ಡ್ರಿಲ್, ಪುಶ್-ಟೈಪ್ ಮ್ಯಾನುವಲ್ ಸೀಡರ್‌ಗಿಂತ ಹೆಚ್ಚು ದುಬಾರಿಯಾಗಿದೆ.
ಪ್ರಕರಣ ೧: ಅಭಿಮನ್ಯ ಸಾಹು
| ಕಂಕದಹಡ ಬ್ಲಾಕ್‌ನ ಮಕುವಾಕಟೇನಿ ಗ್ರಾಮದ ಸಣ್ಣ ರೈತ ಅಭಿಮನ್ಯು ಸಾಹು, ಸಮಯ ಮತ್ತು ದೈಹಿಕ ಶ್ರಮವನ್ನು ಬೇಡುವ ಕೈಯಿಂದ ಕಳೆ ತೆಗೆಯುವ ಮತ್ತು ಗುದ್ದಲಿಯ ಕೆಲಸದ ಸವಾಲುಗಳನ್ನು ಎದುರಿಸಿದರು. ಕೃಷಿ ಯಾಂತ್ರೀಕರಣ ಕಾರ್ಯಕ್ರಮದ ಅಡಿಯಲ್ಲಿ, ಅವರು ಕಳೆ ತೆಗೆಯುವ ಮತ್ತು ಕೈ ಗುದ್ದಲಿ ಯಂತ್ರ ಮುಂತಾದ ಸುಧಾರಿತ ಉಪಕರಣಗಳನ್ನು ಅಳವಡಿಸಿಕೊಂಡರು. ಇದು ಕಳೆ ತೆಗೆಯುವ ಮತ್ತು ಗುದ್ದಲಿಯ ಕೆಲಸದ ಅವಧಿಯನ್ನು ಸುಮಾರು 40% ರಷ್ಟು ಕಡಿಮೆ ಮಾಡಿತು. ಕೂಲಿಯಾಳುಗಳ ಅವಲಂಬನೆಯನ್ನು ಕಡಿಮೆ ಮಾಡಿತು ಮತ್ತು ಮಣ್ಣಿನ ಗಾಳಿಯಾಡುವಿಕೆಯನ್ನು ಸುಧಾರಿಸಿತು. ಈ ಕಡಿಮೆ-ವೆಚ್ಚದ ಉಪಕರಣಗಳು ದಕ್ಷತೆಯನ್ನು ಹೆಚ್ಚಿಸಿದವು. ಶ್ರಮವನ್ನು ಕಡಿಮೆ ಮಾಡುವುದರೊಂದಿಗೆ ಲಾಭವನ್ನು ಹೆಚ್ಚಿಸಿದವು. |
ಕೆಲವು ಸಣ್ಣ ರೈತರು ಕಡಿಮೆ ಅಶ್ವಶಕ್ತಿಯ, ಪವರ್ ಟಿಲ್ಲರ್, ಪವರ್ ವೀಡರ್, ಸಣ್ಣ ಪಂಪ್ ಸೆಟ್‌ಗಳಂತಹ ಸಣ್ಣ ಪ್ರಮಾಣದ ಯಂತ್ರೋಪಕರಣಗಳನ್ನು ಬಯಸುತ್ತಾರೆ. ಇವು ಅವರ ಬಿಡಿ ಮತ್ತು ಸಣ್ಣ ಭೂ ಹಿಡುವಳಿಗಳಿಗೆ ಸೂಕ್ತವಾಗಿವೆ. ಖರೀದಿಸಲು, ನಿರ್ವಹಿಸಲು ಮತ್ತು ಚಾಲನೆ ಮಾಡಲು ಸುಲಭವಾಗಿದೆ. ಟ್ರಾಕ್ಟರ್‌ಗಳು, ಬೀಜ ಡ್ರಿಲ್‌ಗಳು ಮತ್ತು ಪವರ್ ರೀಪರ್‌ಗಳಂತಹ ಹೆಚ್ಚಿನ ಬೆಲೆಯ ಆಧುನಿಕ ಯಂತ್ರಗಳನ್ನು ಸಾಮಾನ್ಯವಾಗಿ ಸಣ್ಣ ರೈತರು ಗ್ರಾಹಕ ಬಾಡಿಗೆ ಕೇಂದ್ರಗಳ (CHC) ಮೂಲಕ ಅಥವಾ ರೈತ ಗುಂಪುಗಳೊಂದಿಗೆ ಜಂಟಿಯಾಗಿ ಖರೀದಿಸುವ ಮೂಲಕ ಪಡೆಯಬಹುದು.
ಭುವನ್ ಮತ್ತು ಕಂಕದಹಾದ್ ಬ್ಲಾಕ್‌ಗಳಲ್ಲಿ, ಮಕುವಾಕತೇನಿ ಮತ್ತು ದರ್ಜನಿ ಗ್ರಾಮಗಳಲ್ಲಿ ಒಟ್ಟು ಎರಡು ಗ್ರಾಹಕ ಬಾಡಿಗೆ ಕೇಂದ್ರಗಳನ್ನು (CHC) ಸ್ಥಾಪಿಸಲಾಗಿದ್ದು, ಇವುಗಳಿಗೆ ಸಮುದಾಯಗಳು ಭಾಗಶಃ ಕೊಡುಗೆ ನೀಡುತ್ತವೆ. ಪ್ರತಿಯೊಂದು CHC ಪವರ್ ಟಿಲ್ಲರ್, ಬಹು-ಬೆಳೆ ಬೀಜ ಬಿತ್ತುವ ಸಾಧನ (ಡ್ರಿಲ್), ಕೋನೋ ಕಳೆಕೀಳುವ ಯಂತ್ರ, ಸ್ಪ್ರೇಯರ್ ಸೆಟ್ (ಬ್ಯಾಟರಿ ಚಾಲಿತ) ಮತ್ತು ಭತ್ತ ಒಕ್ಕಣಿಕೆ ಯಂತ್ರ ಹೊಂದಿದ್ದು, ಕೆಲವು ರೈತರಿಗೆ ಕೈ ಉಪಕರಣಗಳನ್ನು ನೀಡಲಾಗಿದೆ. ಮಹಾಶಕ್ತಿ ಫೌಂಡೇಶನ್ ರೈತ ಗುಂಪುಗಳನ್ನು ಸಜ್ಜುಗೊಳಿಸಿ, ಸುರಕ್ಷಿತ ಕಾರ್ಯಾಚರಣೆಯ ಕುರಿತು ತರಬೇತಿಯನ್ನು ನೀಡಲಾಯಿತು. ಮಾರಾಟಗಾರರೊಂದಿಗೆ ಖರೀದಿಯ ಸಂಪರ್ಕವನ್ನು ರೂಪಿಸಲಾಯಿತು. ಬಂಡವಾಳ ಹೂಡಿಕೆಗಳನ್ನು HDFC-FRDP (70%) ಮತ್ತು ಸಮುದಾಯಗಳು (30%) ಮಾಡಿವೆ. ಫೌಂಡೇಶನ್ ನಿರ್ವಹಣಾ ಪ್ರೋಟೋಕಾಲ್‌ಗಳು ಮತ್ತು ಬಾಡಿಗೆ ದಾಖಲೆಗಳನ್ನು ನಿರ್ವಹಿಸುತ್ತಿದೆ.
ಪ್ರಕರಣ ೨: ಸನಾತನ್ ಖಿಲಾರ್
| ಭುಬನ್ ಬ್ಲಾಕ್‌ನ ಮಥನುಗಾಂವ್ ಗ್ರಾಮದ ಪ್ರಗತಿಪರ ರೈತ ಸನಾತನ್ ಖಿಲಾರ್, 2025 ರಲ್ಲಿ ಮಹಾಶಕ್ತಿ ಫೌಂಡೇಶನ್‌ನಿಂದ ತರಬೇತಿ ಪಡೆದ ನಂತರ ತಮ್ಮ 2.5 ಎಕರೆ ಜಮೀನನ್ನು ಪರಿವರ್ತಿಸಿದರು. ಗುದ್ದಲಿ, ಕಳೆ ತೆಗೆಯುವ ಯಂತ್ರ ಮತ್ತು ಸಿಂಪಡಿಸುವ ಯಂತ್ರದಂತಹ ಕೈ ಉಪಕರಣಗಳನ್ನು ಅಳವಡಿಸಿಕೊಳ್ಳುವ ಮೂಲಕ, ಅವರು ಕೂಲಿಯಾಳುಗಳ ವೆಚ್ಚವನ್ನು 40% ವರೆಗೆ ಕಡಿಮೆ ಮಾಡಿದರು, ಮಣ್ಣಿನ ಆರೋಗ್ಯವನ್ನು ಸುಧಾರಿಸಿದರು, ಒಂದೇ ರೀತಿಯ ಕೀಟನಾಶಕವನ್ನು ಬಳಸಿದರು. |
ಕೋಷ್ಟಕ 1: ಕೃಷಿ ಸಲಕರಣೆಗಳ ವಿಧಗಳು
| ಕೃಷಿ ಕಾರ್ಯಾಚರಣೆ | ಬಳಕೆ/ಉದ್ದೇಶ | ಪ್ರಚಲಿತ (ಸಾಂಪ್ರದಾಯಿಕ) ಅಭ್ಯಾಸಗಳು | ಆಧುನಿಕ ಸಲಕರಣೆ (ಹೆಸರು) | ಅಂದಾಜು ವೆಚ್ಚ (ರೂ) ಮತ್ತು ಒರಿಸ್ಸಾದಲ್ಲಿ ಸಬ್ಸಿಡಿ |
| ಭೂಮಿ ಹದಗೊಳಿಸಲು | ಉಳುಮೆಗೆ ಭೂಮಿಯ ತಯಾರಿ | ಎತ್ತನ್ನು ಹೂಡಿ ಬಳಸುವ ಮರದ ನೇಗಿಲು | ಪವರ್ ಟಿಲ್ಲರ್/ ಟ್ರ್ಯಾಕ್ಟರ್ | ರೂ. 1.2–1.8 ಲಕ್ಷ; ಸಣ್ಣ/ ಅತಿ ಸಣ್ಣ ರೈತರಿಗೆ 50% ಸಬ್ಸಿಡಿ |
| ಬೀಜ ಬಿತ್ತನೆ | ಸಾಲುಗಳಲ್ಲಿ ಸಮನಾಗಿ ಬೀಜ ಬಿತ್ತನೆ | ಕೈಯಿಂದ ನೇರ ಬಿತ್ತನೆ | ಬೀಜ ಹಾಗೂ ರಸಗೊಬ್ಬರ ಡ್ರಿಲ್/ ಡ್ರಮ್ ಸೀಡರ್ | ರೂ.18,000– ರೂ.25,000; 50% ಸಬ್ಸಿಡಿ |
| ನಾಟಿ | ನರ್ಸರಿಯಿಂದ ತಂದ ಸಸಿಗಳ ನಾಟಿ | ಕೂಲಿಯಾಳುಗಳಿಂದ ನಾಟಿ ಮಾಡಿಸುವಿಕೆ | (8-row) ಭತ್ತ ನಾಟಿ ಮಾಡುವ ಯಂತ್ರ (೮-ಸಾಲು) | ರೂ. 1.5–2.0 ಲಕ್ಷ; 50% ಸಬ್ಸಿಡಿ |
| ಕಳೆ | ಕಳೆ ಕೀಳುವಿಕೆ | ಗುದ್ದಲಿ ಅಥವಾ ಕೈಯಿಂದ ಕೀಳುವಿಕೆ | ಕೊನೊ/ ಪವರ್ ಕಳೆ ಕೀಳುವ ಯಂತ್ರ | ರೂ. 10,000–ರೂ. 35,000; 50% ಸಬ್ಸಿಡಿ |
| ರಸಗೊಬ್ಬರ ಬಳಕೆ | ಸಮವಾಗಿ ರಸಗೊಬ್ಬರ ಹಾಕುವಿಕೆ | ಕೈಯಿಂದಲೇ ಹಾಕುವುದು | ರಸಗೊಬ್ಬರ ಬ್ರಾಡ್‌ಕಾಸ್ಟರ್/ ಅಪ್ಲಿಕೇಟರ್ | ರೂ.15,000–ರೂ. 25,000; 50% ಸಬ್ಸಿಡಿ |
| ನೀರಾವರಿ | ಬೆಳೆಗೆ ನೀರು ಪೂರೈಕೆ | ಕೈಯಿಂದ ನೀರು ಹಾಯಿಸುವುದು ಅಥವ ಕಾಲುವೆ ನೀರಾವರಿ | ತುಂತುರು/ ಹನಿ ನೀರಾವರಿ | ರೂ.50,000–ರೂ.80,000 ಪ್ರತಿ ಎಕರೆ; 55%–60% ಸಬ್ಸಿಡಿ |
| ಬೆಳೆ ರಕ್ಷಣೆ | ಕೀಟ ಹಾಗೂ ರೋಗ ನಿಯಂತ್ರಣ | ಕೈಯಿಂದ ಸಿಂಪಡಣೆ | ವಿದ್ಯುತ್/ ಬ್ಯಾಟರಿ ಚಾಲಿತ ಸ್ಪ್ರೆಯರ್ | ರೂ. 8,000–ರೂ. 15,000; 50% ಸಬ್ಸಿಡಿ |
| ಕೊಯ್ಲು | ಬೆಳೆಯನ್ನು ಕತ್ತರಿಸಿ ಸಂಗ್ರಹಿಸುವುದು | ಕುಡುಗೋಲು ಅಥವ ಕೈಯಿಂದ ಕಟಾವು ಮಾಡುವುದು | ಪವರ್ ರೀಪರ್/ ಕಂಬೈನ್ ಹಾರ್ವೆಸ್ಟರ್ (ಕಟಾವು ಯಂತ್ರ) | ರೂ.1.5–20 ಲಕ್ಷ; 40%–50% ಸಬ್ಸಿಡಿ |
| ಒಕ್ಕಣೆ | ಧಾನ್ಯ ಸ್ವಚ್ಛಗೊಳಿಸುವಿಕೆ (ಧಾನ್ಯವನ್ನು ಹುಲ್ಲಿನಿಂದ ಬೇರ್ಪಡಿಸುವುದು) | ಮರದ ದಿಮ್ಮಿಗಳ ಮೇಲೆ ಬಡಿಯುವುದು | ಭತ್ತ/ ಬಹುಬೆಳೆ ಒಕ್ಕಣೆ ಯಂತ್ರ | ರೂ.40,000–ರೂ.80,000; 50% ಸಬ್ಸಿಡಿ |
| ಕೊಯ್ಲಿನ ನಂತರದ ಸಂಸ್ಕರಣೆ | ಸ್ವಚ್ಛಗೊಳಿಸುವಿಕೆ ಮತ್ತು ಶ್ರೇಣೀಕರಣ | ಕೇರುವಿಕೆ | ಕೇರುವ ಯಂತ್ರ/ ಧಾನ್ಯ ಸ್ವಚ್ಛಗೊಳಿಸುವ ಯಂತ್ರ/ ಡ್ರೈಯರ್ | ರೂ.30,000–ರೂ.1 ಲಕ್ಷ; 40%–50% ಸಬ್ಸಿಡಿ |
| ಸಾರಿಗೆ | ಕೃಷಿ ಉತ್ಪನ್ನಗಳ ಸಾಗಾಣಿಕೆ | ಎತ್ತಿನ ಗಾಡಿ |
ಪವರ್ ಟಿಲ್ಲರ್/ ಮಿನಿ ಟ್ರಕ್ | ರೂ.60,000–ರೂ.1.5 ಲಕ್ಷ; 40%–50% ಸಬ್ಸಿಡಿ |
ಸಿ) ಸಣ್ಣ ಸಲಕರಣೆಗಳ ಬ್ಯಾಂಕುಗಳು
ಮಹಾಶಕ್ತಿ ಫೌಂಡೇಶನ್ HDFC-FRDP ಯ CSR ಬೆಂಬಲದ ಮೂಲಕ ಸಣ್ಣ-ಉಪಕರಣ ಯಾಂತ್ರೀಕರಣ ಉಪಕ್ರಮಗಳನ್ನು ಕೂಡ ಬೆಂಬಲಿಸುತ್ತದೆ. ಇದು ಎರಡು ಹಲ್ಲಿನ ಸಲಿಕೆ, ಕೈಯಿಂದ ಕಳೆ ತೆಗೆಯುವ ಯಂತ್ರ, ಹಲುಬೆ, ಹಸ್ತಚಾಲಿತ ರಿಡ್ಜರ್ ಮುಂತಾದ ಸಣ್ಣ ಸಾಧನಗಳನ್ನು ಒದಗಿಸುತ್ತದೆ. ಜೊತೆಗೆ NPK ಮಣ್ಣಿನ ಸಂವೇದಕ, LCD ಡಿಜಿಟಲ್ ಡಿಸ್ಪ್ಲೆಯ ಪಿನ್ ಪ್ರೋಬ್, 3 ಇನ್ 1 ಮಣ್ಣಿನ ತೇವಾಂಶ ಲೈಟ್ ಮತ್ತು pH ಪ್ರೋಬ್, 6 ಇನ್ 1 ಮಣ್ಣಿನ ತೇವಾಂಶ ಮೀಟರ್, pH, ಲೈಟ್, ತೇವಾಂಶ ಮೀಟರ್, ಮಣ್ಣಿನ ಫಲವತ್ತತೆ ಪರೀಕ್ಷಕ, ಡಿಜಿಟಲ್ ಮಣ್ಣಿನ ತೇವಾಂಶ ಮತ್ತು ATC ಯೊಂದಿಗೆ ಬ್ರಿಕ್ಸ್ ರಿಫ್ರ್ಯಾಕ್ಟೋಮೀಟರ್‌ನಂತಹ ಕೆಲವು ಸಣ್ಣ ಕೃಷಿ ಉಪಕರಣಗಳನ್ನು ಒದಗಿಸುತ್ತದೆ. ಮಹಾಶಕ್ತಿ ಫೌಂಡೇಶನ್ ಕಳೆ ತೆಗೆಯುವ ಕೈ ಯಂತ್ರಗಳು, ಹಲಬೆಗಳು, ರಿಡ್ಜರ್‌ಗಳು ಮತ್ತು ಮಣ್ಣು ಪರೀಕ್ಷಾ ಸಾಧನಗಳನ್ನು (26 ಸ್ವಸಹಾಯ ಗುಂಪುಗಳು, 14 ರೈತ ಕ್ಷೇತ್ರ ಶಾಲೆಗಳು (FFS) ಮತ್ತು 9 ಉತ್ಪಾದಕ ಗುಂಪುಗಳಿಗೆ) ಒದಗಿಸಿದೆ. ಈ ಉಪಕರಣಗಳನ್ನು ಸಾಮುದಾಯಿಕ ಸಾಲ ನೀಡುವ ಕಾರ್ಯವಿಧಾನದ ಅಡಿಯಲ್ಲಿ ನಿರ್ವಹಿಸಲಾಗುತ್ತದೆ. ಅಲ್ಲಿ ಸದಸ್ಯರು ಸರಳ ನೋಂದಣಿ ವ್ಯವಸ್ಥೆಯ ಮೂಲಕ ಉಪಕರಣಗಳನ್ನು ಎರವಲು ಪಡೆಯುತ್ತಾರೆ ಮತ್ತು ನಿರ್ವಹಣೆಗೆ ಪ್ರತಿ ಬಾರಿ ಬಳಸಲು ರೂ.10–ರೂ.30 ಕೊಡುಗೆ ನೀಡುತ್ತಾರೆ. 2024 ರಲ್ಲಿ, ಈ ವ್ಯವಸ್ಥೆಯಿಂದ ರೂ. 38,500 ಗಳಿಸಿತು. ಇದನ್ನು ಗುಂಪುಗಳು ಸಣ್ಣಪುಟ್ಟ ದುರಸ್ತಿ ಮತ್ತು ಹಳೆಯ ಉಪಕರಣಗಳ ಬದಲಿಗಾಗಿ ಬಳಸಿದವು.
ಉಪಸಂಹಾರ
ಭುವನ್ ಮತ್ತು ಕಂಕದಹಾದ್‌ನಲ್ಲಿ ಪ್ರಚಾರ ಮಾಡಲಾದ ಸುಸ್ಥಿರ ಯಾಂತ್ರೀಕರಣ ಮಾದರಿಯು ಪ್ರಸ್ತುತ 500 ರೈತರನ್ನು ಒಳಗೊಂಡಿದ್ದು, 60 ಹಳ್ಳಿಗಳಲ್ಲಿ ಸಣ್ಣ ಪ್ರಮಾಣದ ಉಪಕರಣಗಳನ್ನು ವಿತರಿಸಲಾಗಿದೆ. ಕೃಷಿ ಉಪಕರಣಗಳು ಕಡಿಮೆ ಬೆಲೆಗೆ ಸಿಗುವುದನ್ನು ಖಾತ್ರಿಪಡಿಸುವ, ಯುವಜನರಿಗೆ ಉದ್ಯೋಗವನ್ನು ಬೆಂಬಲಿಸುವ ಮತ್ತು ಮಹಿಳಾ ರೈತರಿಗೆ ಶ್ರಮವನ್ನು ಕಡಿಮೆ ಮಾಡುವ CHC-ಆಧಾರಿತ ಸೇವೆಗಳಿಂದ ಅವರಿಗೆ ಬೆಂಬಲ ನೀಡಲಾಗುತ್ತದೆ. CHC ಯಂತ್ರೋಪಕರಣಗಳನ್ನು ತರಬೇತಿ ಪಡೆದ ಯುವಕರು ನಿರ್ವಹಿಸುತ್ತಿದ್ದರೆ, ಸಣ್ಣ ಉಪಕರಣಗಳನ್ನು SHGಗಳು/PGಗಳ ಮೂಲಕ ನಿರ್ವಹಿಸಲಾಗುತ್ತದೆ. ಹೀಗಾಗಿ ಈ ಉಪಕ್ರಮವು ಸಾಂಸ್ಥಿಕ ಮಾಲೀಕತ್ವವನ್ನು ಪ್ರೋತ್ಸಾಹಿಸಿದೆ. ಕೃಷಿ ಯಂತ್ರೋಪಕರಣಗಳು ಎಲ್ಲರಿಗೂ ಲಭ್ಯವಾಗುವಂತೆ ಮಾಡಿದೆ.
ಪರಾಮರ್ಶನಗಳು Sujata Kangude, S. Farm mechanisation driven by women farmers, LEISA India, March 2024, Volume 26, Issue 1, themed “Farm women Breaking barriers,” pg-6 Khondoker Abdul Mottaleb, Timothy J. Krupnik, Olaf Erenstein. Factors associated with small-scale agricultural machinery adoption in Bangladesh: Census findings. 2016 Journal of Rural Studies, 46, 155-168 https://doi.org/10.1016/j.jrurstud.2016.06.012.
Ashutosh Pal Mahashakti Foundation, Plot No.: 05, 2nd Floor I Dharma Vihar, Lane-02, Khandagiri, Bhubaneswar – 751030 E-mail : ashutoshpal@mahashaktiindia.org
ಆಂಗ್ಲ ಮೂಲ : ಲೀಸಾ ಇಂಡಿಯಾ; ಸಂಪುಟ : ೨೭ ; ಸಂಚಿಕೆ : ೪ ; ಡಿಸೆಂಬರ್ ೨೦೨೫



