ಸ್ಥಿತಿಸ್ಥಾಪಕತ್ವದ ಹೆಚ್ಚಳ


ಇಡುಕ್ಕಿ ಜಿಲ್ಲೆಯು ಪುನರುತ್ಪಾದಕ ಸಾವಯವ ಪದ್ಧತಿಗಳ ತತ್ವಗಳ ಆಧಾರದ ಮೇಲೆ ಕೃಷಿ ಪದ್ಧತಿಗಳನ್ನು ಅನುಸರಿಸುವ ಮೂಲಕ ಬದಲಾಗುತ್ತಿರುವ ಹವಾಮಾನದ ಪರಿಣಾಮಗಳನ್ನು ತಗ್ಗಿಸಲು ಮತ್ತು ಹೊಂದಿಕೊಳ್ಳಲು ಸಮರ್ಥವಾಗಿದೆ. ಪೀರ್‌ಮೇಡ್ ಡೆವಲಪ್‌ಮೆಂಟ್ ಸೊಸೈಟಿ ಎನ್‌ಜಿಒ ಆಗಿದ್ದು, ಕೃಷಿ ಪರಿಸರ ಪದ್ಧತಿಗಳನ್ನು ಉತ್ತೇಜಿಸುವ ಮೂಲಕ ರೈತರಿಗೆ ಕೃಷಿ ಸುಸ್ಥಿರತೆಯನ್ನು ನಿರ್ಮಿಸಲು ಸಹಾಯ ಮಾಡುತ್ತಿದೆ.


ಪಶ್ಚಿಮ ಘಟ್ಟಗಳು ಪಶ್ಚಿಮ ಕರಾವಳಿಗೆ ಸಮಾನಾಂತರವಾಗಿ 1,600 ಕಿ.ಮೀ. 160,000 ಕಿ.ಮೀ. ವಿಸ್ತೀರ್ಣದಲ್ಲಿ ಹಬ್ಬಿರುವ ಪರ್ವತ ಶ್ರೇಣಿ. ಇದು ವಿಶ್ವದ ಜೈವಿಕ ವೈವಿಧ್ಯತೆಯ ಎಂಟು ತಾಣಗಳಲ್ಲಿ ಒಂದಾಗಿದೆ. ಪಶ್ಚಿಮ ಘಟ್ಟಗಳ ಕೃಷಿ-ಪರಿಸರ ವ್ಯವಸ್ಥೆಗಳನ್ನು ಕಾಫಿ, ಚಹಾ, ಮಸಾಲೆಗಳು ಮತ್ತು ಇತರ ಬೆಳೆಗಳನ್ನು ಸ್ಥಳೀಯ ಮತ್ತು ಹೊಸದಾಗಿ ಪರಿಚಯಿಸಲಾದ ಮರಗಳ ಜಾತಿಗಳೊಂದಿಗೆ ಸಂಯೋಜಿಸುವ ಸಾಂಪ್ರದಾಯಿಕ ಕೃಷಿ-ಅರಣ್ಯ ವ್ಯವಸ್ಥೆ ಎಂದು ವ್ಯಾಖ್ಯಾನಿಸಲಾಗಿದೆ.

ಕಳೆದ 50 ವರ್ಷಗಳಲ್ಲಿ, ಈ ಪ್ರದೇಶದ ತಾಪಮಾನದಲ್ಲಿ ಸರಾಸರಿ 0.8°ಸೆಂ ಏರಿಕೆಯಾಗಿದೆ. ಮಳೆಗಾಲದ ಅವಧಿ ಕ್ಷೀಣಿಸಿದ್ದರೂ ಒಟ್ಟು ವಾರ್ಷಿಕ ಮಳೆಯ ಪ್ರಮಾಣವು ಸ್ಥಿರವಾಗಿ ಉಳಿದಿದೆ. ಇದು ಮಳೆಯಲ್ಲಾಗಿರುವ ವೈಪರಿತ್ಯಗಳನ್ನು ತೋರುತ್ತದೆ. ಈ ಹವಾಮಾನ ಬದಲಾವಣೆಯು ದಿಢೀರ್ ಪ್ರವಾಹ, ಭೂಕುಸಿತ, ದೀರ್ಘಕಾಲದ ಬರ ಮತ್ತು ಅನಿಯಮಿತ ಮಳೆಗಾಲಗಳಿಗೆ ಕಾರಣವಾಗುವ ಮೂಲಕ ಪರಿಸರದ ಮೇಲಿನ ಒತ್ತಡವನ್ನು ಇನ್ನಷ್ಟು ಹೆಚ್ಚಿಸಿದೆ. ಇದು ಕೃಷಿ, ನೀರಿನ ಲಭ್ಯತೆ ಮತ್ತು ಅರಣ್ಯ ಪುನರುತ್ಪಾದನೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಸಾಂಬಾರು ಬೆಳೆಯಾದ ಮೆಣಸಿನಲ್ಲಿ 28% ರಷ್ಟು ಉತ್ಪಾದನಾ ನಷ್ಟಕ್ಕೆ ಕಾರಣವಾಯಿತು. ಏಲಕ್ಕಿ ಮತ್ತು ಅರಿಶಿನದಂತಹ ಬೆಳೆಗಳಿಗೆ ಹೊಸ ಕೀಟ ಮತ್ತು ರೋಗಬಾಧೆ ಹೆಚ್ಚಿದ್ದರಿಂದ, ರಾಸಾಯನಿಕ ಕೀಟನಾಶಕಗಳು ಮತ್ತು ರಸಗೊಬ್ಬರಗಳ ವಿವೇಚನಾರಹಿತ ಬಳಕೆ ಹೆಚ್ಚಾಯಿತು. ಇದರ ಪರಿಣಾಮವಾಗಿ ಮಣ್ಣಿನ ಗುಣಮಟ್ಟ ಕುಸಿದು, ಪರಿಸರ ಹಾನಿಯಾಗತೊಡಗಿದೆ.

ಭಾರತದ ಕೇರಳ ರಾಜ್ಯದ ಪಶ್ಚಿಮ ಘಟ್ಟಗಳ ಇಡುಕ್ಕಿ ಜಿಲ್ಲೆಯಲ್ಲಿರುವ ಪೀರ್‌ಮೇಡ್ ಡೆವಲಪ್‌ಮೆಂಟ್ ಸೊಸೈಟಿ (PDS), ಸರ್ಕಾರೇತರ ಸಂಸ್ಥೆಯಾಗಿದ್ದು, 1980 ರಿಂದ ಸಣ್ಣ ಮತ್ತು ಅತಿ ಸಣ್ಣ ರೈತರು ಪುನರುತ್ಪಾದಕ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಳ್ಳುವಂತೆ ಪ್ರೋತ್ಸಾಹಿಸುತ್ತಿದೆ. PDS ಸಾವಯವ ಕೃಷಿ, ಜೀವವೈವಿಧ್ಯ ಸಂರಕ್ಷಣೆ ಮತ್ತು ವರ್ಧನೆ, ಸಂಶೋಧನೆ ಮತ್ತು ಅಭಿವೃದ್ಧಿ, ಸಾವಯವ ಉತ್ಪನ್ನಗಳ ಸಂಸ್ಕರಣೆ, ಸಣ್ಣ ಮತ್ತು ಅತಿ ಸಣ್ಣ ರೈತರ ಸಬಲೀಕರಣಕ್ಕಾಗಿ ಮಾರುಕಟ್ಟೆಯನ್ನು ಉತ್ತೇಜಿಸುವಲ್ಲಿ ತೊಡಗಿಸಿಕೊಂಡಿದೆ. ಸ್ಥಿತಿಸ್ಥಾಪಕ ಮೌಲ್ಯ ಸರಪಳಿಯನ್ನು ಸೃಷ್ಟಿಸುತ್ತದೆ. PDS ಸುಸ್ಥಾಪಿತ ಕೃಷಿ ವಿಸ್ತರಣೆ, ಸಾವಯವ ಸಾಂಬಾರು ಪದಾರ್ಥಗಳ ಸಂಸ್ಕರಣೆ ಮತ್ತು ಗುಣಮಟ್ಟದ ವ್ಯವಸ್ಥೆಯನ್ನು ಒದಗಿಸುತ್ತದೆ.

ರೈತರು ಹವಾಮಾನ ಬದಲಾವಣೆಯ ಪರಿಣಾಮವನ್ನು ತಗ್ಗಿಸಲು ಮತ್ತು ಹೊಂದಿಕೊಳ್ಳಲು ಸಹಾಯ ಮಾಡುವ ಕೃಷಿ ಪರಿಸರ ವ್ಯವಸ್ಥೆಯನ್ನು ರಚಿಸಲು PDS ಪುನರುತ್ಪಾದಕ ಸಾವಯವ ಪದ್ಧತಿಗಳ ತತ್ವಗಳ ಆಧಾರದ ಮೇಲೆ ಕೃಷಿ ಪದ್ಧತಿಗಳನ್ನು ಜಾರಿಗೆ ತರುತ್ತಿದೆ. ಇದು ಹವಾಮಾನ ಸ್ಥಿತಿಸ್ಥಾಪಕ ಸ್ಥಳೀಯ/ರೈತ ಪ್ರಭೇದಗಳನ್ನು ಉತ್ತೇಜಿಸುತ್ತಿದೆ. ಕೃಷಿ ಜೀವವೈವಿಧ್ಯತೆಯನ್ನು ಸಂರಕ್ಷಿಸುತ್ತಿದೆ, ಮಣ್ಣಿನ ಆರೋಗ್ಯ ಪುನರುತ್ಪಾದನೆ ಮತ್ತು ನೈಸರ್ಗಿಕ ಸಂಪನ್ಮೂಲಗಳ ದಕ್ಷ ನಿರ್ವಹಣೆಯನ್ನು ಉತ್ತೇಜಿಸುತ್ತಿದೆ. ರೈತರ ನಾವೀನ್ಯತೆಗಳು ಮತ್ತು ಸಾಂಪ್ರದಾಯಿಕ ಜ್ಞಾನವನ್ನು ಪ್ರೋತ್ಸಾಹಿಸುತ್ತಿದೆ. ಆ ಮೂಲಕ ಕೃಷಿಯ ಸುಸ್ಥಿರತೆಯನ್ನು ಖಚಿತಪಡಿಸುತ್ತಿದೆ.

 ಹವಾಮಾನ ಸ್ಥಿತಿಸ್ಥಾಪಕತ್ವಕ್ಕಾಗಿ ಕೃಷಿ-ಪರಿಸರ ವಿಧಾನಗಳು

ಇಡುಕ್ಕಿ ಜಿಲ್ಲಾ ಪ್ರದೇಶ ಮತ್ತು ಸುತ್ತಮುತ್ತಲಿನ ಸುಮಾರು 2000 ಸಣ್ಣ ಮತ್ತು ಅತಿ ಸಣ್ಣ ಪ್ರಮಾಣೀಕೃತ ಸಾವಯವ ರೈತರು ಪಿಡಿಎಸ್ ಸಾವಯವ ಸಾಂಬಾರು ಪದಾರ್ಥಗಳು ಎನ್ನುವ ಪೀರ್‌ಮೇಡ್ ಡೆವಲಪ್‌ಮೆಂಟ್ ಸೊಸೈಟಿಯ ಕೃಷಿ ಸಂಸ್ಕರಣೆ ಮತ್ತು ರಫ್ತು ಘಟಕದ ಅಡಿಯಲ್ಲಿ ಒಂದಾಗಿದ್ದಾರೆ. ಈ ರೈತರು ಮಣ್ಣಿನ ಫಲವತ್ತತೆ ಮತ್ತು ನೀರನ್ನು ಹಿಡಿದಿಡುವ ಸಾಮರ್ಥ್ಯವನ್ನು ಹೆಚ್ಚಿಸಲು ಕೃಷಿ-ಪರಿಸರ ತತ್ವಗಳನ್ನು ಅನುಸರಿಸುತ್ತಾರೆ. ಇದರಿಂದಾಗಿ ಅವರ ಜಮೀನು ಹವಾಮಾನ ವೈಪರಿತ್ಯಗಳನ್ನು ಎದುರಿಸಲು ಹೆಚ್ಚು ಸ್ಥಿತಿಸ್ಥಾಪಕತ್ವ ಗುಣವನ್ನು ಹೊಂದಿದೆ. ಅವರ ಪ್ರಮುಖ ತಂತ್ರಗಳಲ್ಲಿ ಒಂದು ಕೃಷಿ ಅರಣ್ಯೀಕರಣವನ್ನು ಒಳಗೊಂಡಿದೆ. ಅಲ್ಲಿ ಏಲಕ್ಕಿ, ಮೆಣಸು ಮತ್ತು ಜಾಯಿಕಾಯಿ ಮುಂತಾದ ಸಾಂಬಾರು ಬೆಳೆಗಳನ್ನು ನೆರಳು ನೀಡುವ ಮರಗಳ ಪಕ್ಕದಲ್ಲಿ ಬೆಳೆಯಲಾಗುತ್ತದೆ.

ಮತ್ತೊಂದು ವ್ಯಾಪಕವಾಗಿ ಅಳವಡಿಸಿಕೊಂಡ ವಿಧಾನವೆಂದರೆ ಬಹು-ಹಂತದ ಕೃಷಿ ಅರಣ್ಯ ವ್ಯವಸ್ಥೆ. ಇದರಲ್ಲಿ ಕರಿಮೆಣಸಿನ ಬಳ್ಳಿಗಳನ್ನು ಸಿಲ್ವರ್‌ ಓಕ್ ಅಥವಾ ಗ್ಲಿರಿಸಿಡಿಯಾ ಮರಗಳನ್ನು ಬಳಸಿ ಬೆಳೆಯುತ್ತವೆ. ಆದರೆ ನೆರಳನ್ನು ಬಯಸುವ ಬೆಳೆಗಳು ಏಲಕ್ಕಿ ಮತ್ತು ಕಾಫಿ ದಟ್ಟವಾದ ಮರಗಳ ನೆರಳಿನ ಅಡಿಯಲ್ಲಿ ಬೆಳೆಯುತ್ತವೆ. ಸಾಂಬಾರು ಬೆಳೆ ಆಧಾರಿತ ಮನೆ ತೋಟಗಳು ಅರಿಶಿನ, ಶುಂಠಿ, ಮೆಣಸು ಮತ್ತು ಜಾಯಿಕಾಯಿಯನ್ನು ಗೆಡ್ಡೆ ಬೆಳೆಗಳು, ಹಣ್ಣು ಮತ್ತು ಮರದ ಮರಗಳೊಂದಿಗೆ ಬೆಳೆಯಲಾಗುತ್ತದೆ.  ಇದು ವರ್ಷಪೂರ್ತಿ ಬೆಳೆ ವೈವಿಧ್ಯತೆ ಮತ್ತು ಮನೆಯ ಆಹಾರ ಸುರಕ್ಷತೆಯನ್ನು ಖಚಿತಪಡಿಸುತ್ತವೆ. ಸಿಲ್ವಿ-ತೋಟಗಾರಿಕಾ ವ್ಯವಸ್ಥೆಯಲ್ಲಿ, ಜಾಯಿಕಾಯಿ, ಅಡಿಕೆ ಮತ್ತು ತೆಂಗಿನಕಾಯಿ ಜೊತೆಗೆ ಸಾಂಬಾರು ಬೆಳೆಗಳನ್ನು ಬೆಳೆಸಲಾಗುತ್ತದೆ. ಇದು ಪೋಷಕಾಂಶಗಳ ಮರುಬಳಕೆಯನ್ನು ಉತ್ತೇಜಿಸುತ್ತದೆ. ಗ್ಲಿರಿಸಿಡಿಯಾದಂತಹ ಸಾರಜನಕ-ಸ್ಥಿರಗೊಳಿಸುವ ಸಸ್ಯಗಳುಮಣ್ಣಿನ ಫಲವತ್ತತೆಯನ್ನು ಹೆಚ್ಚಿಸುತ್ತದೆ ಮತ್ತು ಮಣ್ಣಿನ ಸವಕಳಿಯನ್ನು ಕಡಿಮೆ ಮಾಡುತ್ತದೆ. ಸ್ಥಳೀಯ ಮರ ಪ್ರಭೇದಗಳಡಿಯಲ್ಲಿ ನೆರಳಾಶ್ರಿತ ಬೆಳೆಗಳಾದ ಕಾಫಿ ಮತ್ತು ಏಲಕ್ಕಿ ಕೃಷಿ ಮಾಡಲಾಗುತ್ತದೆ. ಇದು ಜೀವವೈವಿಧ್ಯತೆಯೊಂದಿಗೆ ಇಂಗಾಲವನ್ನು ಹಿಡಿದಿಟ್ಟುಕೊಳ್ಳಲು ನೆರವಾಗುತ್ತದೆ.

ಇಡುಕ್ಕಿ ಜಿಲ್ಲೆಯ ಗುಡ್ಡಗಾಡು ಪ್ರದೇಶಗಳಲ್ಲಿ ಮಣ್ಣಿನ ಸವಕಳಿ ಮತ್ತು ಪೋಷಕಾಂಶಗಳ ನಷ್ಟವನ್ನು ತಪ್ಪಿಸಲು ಪಶ್ಚಿಮ ಘಟ್ಟಗಳಲ್ಲಿ ಹಿಂದೆ ಇದ್ದ ವೆಟಿವರ್ ಎನ್ನುವ ಹುಲ್ಲನ್ನು (ಕ್ರೈಸೊಪೊಗಾನ್ ಜಿಜಾನಿಯೊಯಿಡ್ಸ್) ಬಳಸುವ ಸಾಂಪ್ರದಾಯಿಕ ಪದ್ಧತಿಯನ್ನು ಪಿಡಿಎಸ್ ಪುನರುಜ್ಜೀವನಗೊಳಿಸಿದೆ. ಸಾಂಪ್ರದಾಯಿಕವಾಗಿ ಪರಿಸರದಲ್ಲಿ ಮಣ್ಣಿನ ಸ್ಥಿರತೆಯನ್ನು ಕಾಪಾಡುವ ಗುಣ ಮತ್ತು ಹಾಗೂ ಬೇರುಗಳ ಔಷಧೀಯ ಗುಣದ ಕಾರಣದಿಂದ ವೆಟಿವರ್‌ನ ಬಳಕೆ ಆಗುತ್ತಿತ್ತು. ಕಾಲಾನಂತರದಲ್ಲಿ ಇದು ಕಡಿಮೆಯಾಗಿದೆ. ಈ ಹುಲ್ಲಿನ ಅಪಾರ ಪ್ರಯೋಜನಗಳನ್ನು ಗುರುತಿಸಿ, ಪಿಡಿಎಸ್ ತನ್ನ ಪುನರುತ್ಪಾದಕ ಕೃಷಿ ಉಪಕ್ರಮಗಳ ಭಾಗವಾಗಿ ಈ ನೈಸರ್ಗಿಕ ಜೈವಿಕ-ಎಂಜಿನಿಯರಿಂಗ್ ವ್ಯವಸ್ಥೆಯನ್ನು ಪುನಃ ಪರಿಚಯಿಸಿದೆ. ವೆಟಿವರ್ ಹುಲ್ಲನ್ನು ಈಗ ಪಿಡಿಎಸ್‌ನ ಸ್ವಂತ ನರ್ಸರಿಯಲ್ಲಿ ಬೆಳೆಸಲಾಗುತ್ತದೆ. ಈ ಪ್ರದೇಶದಲ್ಲಿ ಮಣ್ಣಿನ ಸಂರಕ್ಷಣೆ ಮತ್ತು ಸುಸ್ಥಿರತೆಯನ್ನು ಹೆಚ್ಚಿಸಲು ಸಾಂಬಾರು ಬೆಳೆ ರೈತರಿಗೆ ಸರಬರಾಜು ಮಾಡಲಾಗುತ್ತದೆ.

ನೈಸರ್ಗಿಕ ಪರಿಸರ ವ್ಯವಸ್ಥೆಗಳನ್ನು ಅನುಕರಿಸುವ ಈ ಅರಣ್ಯ-ಸಂಯೋಜಿತ ಕೃಷಿ ಅರಣ್ಯೀಕರಣವು ಗುಡ್ಡಗಾಡು ಪ್ರದೇಶಗಳ ರೈತರಿಗೆ ಸುಸ್ಥಿರ ಸಾಂಬಾರು ಬೆಳೆ ಉತ್ಪಾದನೆಗೆ ಸಹಾಯ ಮಾಡುತ್ತದೆ. ಈ ವ್ಯವಸ್ಥೆಗಳು ಕೃಷಿ ಸ್ಥಿತಿಸ್ಥಾಪಕತ್ವತೆ, ಮಣ್ಣಿನ ಸವಕಳಿಯನ್ನು ಸುಧಾರಿಸುವುದಲ್ಲದೆ, ಅನಿಯಮಿತ ಮಳೆಯ ಸಮಯದಲ್ಲಿ ಅಗತ್ಯವಾದ ಮಣ್ಣಿನ ತೇವಾಂಶವನ್ನು ಕಾಪಾಡುತ್ತದೆ. ಸಾವಯವ ಮತ್ತು ಫೇರ್‌ಟ್ರೇಡ್ ತತ್ವಗಳಿಗೆ ಅನುಗುಣವಾಗಿ ಹವಾಮಾನ ಹೊಂದಾಣಿಕೆ ಮತ್ತು ಜೀವವೈವಿಧ್ಯ ಸಂರಕ್ಷಣೆಗೆ ಕೊಡುಗೆ ನೀಡುತ್ತವೆ.

 ಜಲ ಸಂರಕ್ಷಣೆ ಮತ್ತು ನಿರ್ವಹಣೆ

ಸಮೃದ್ಧ ಮಳೆಯ ಹೊರತಾಗಿಯೂ, ಬೇಸಿಗೆಯಲ್ಲಿ ಗುಡ್ಡಗಾಡು ಪ್ರದೇಶಗಳಲ್ಲಿ ನೀರಿನ ಕೊರತೆ ಹೆಚ್ಚಾಗಿ ಕಂಡುಬರುತ್ತದೆ, ಏಕೆಂದರೆ ತೋಡಿದ ಬಾವಿಗಳು ಮತ್ತು ಝರಿಗಳು ಒಣಗುತ್ತವೆ. ಹೆಚ್ಚಿನ ಬೆಳೆಗಳು ಮಳೆಯಾಶ್ರಿತವಾಗಿದ್ದು, ನೀರಿಗಾಗಿ ಕೆಲವರು ತೆರೆದ ಬಾವಿಗಳು, ಸಣ್ಣ ಕೊಳಗಳು ಅಥವಾ ಚೆಕ್ ಡ್ಯಾಮ್‌ಗಳನ್ನು ಬಳಸುತ್ತಾರೆ. ಸಾಂಬಾರು ಬೆಳೆಗಳು ಸಂಪೂರ್ಣವಾಗಿ ಕಾಲೋಚಿತ ಹವಾಮಾನ ಪರಿಸ್ಥಿತಿಗಳ ಮೇಲೆ ಅವಲಂಬಿತವಾಗಿದೆ. ಆದ್ದರಿಂದ ನೀರಿನ ನಿರ್ವಹಣೆಯು ಪಶ್ಚಿಮ ಘಟ್ಟಗಳಲ್ಲಿ ಸ್ಥಿತಿಸ್ಥಾಪಕ ಕೃಷಿ ವ್ಯವಸ್ಥೆಯನ್ನು ರೂಪಿಸಲು ಪ್ರಮುಖ ಕಾರಣವಾಗಿದೆ.

PDS ಸಾವಯವ ಸಾಂಬಾರು ಪದಾರ್ಥಗಳು, ಬರಗಾಲದ ಸಮಯದಲ್ಲಿ ನೀರಿನ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಕೃಷಿ ಹೊಂಡಗಳು ಮತ್ತು ಚೆಕ್ ಡ್ಯಾಮ್‌ಗಳು ಮುಂತಾದ ಸಾಂಪ್ರದಾಯಿಕ ಮಳೆನೀರು ಕೊಯ್ಲು ವಿಧಾನಗಳ ಪುನರುಜ್ಜೀವನವನ್ನು ಪ್ರಾರಂಭಿಸಿವೆ. ಅನೇಕ ಜಮೀನುಗಳು ಮತ್ತು ಸಂಸ್ಕರಣಾ ಕೇಂದ್ರಗಳಲ್ಲಿ ಮಳೆನೀರು ಕೊಯ್ಲು ರಚನೆಗಳು ಮತ್ತು ನೀರಿನ ಮರುಹೂರಣ ವ್ಯವಸ್ಥೆಗಳನ್ನು ನಿರ್ಮಿಸಲಾಗಿದೆ. ಸಂಸ್ಕರಣಾ ಕೇಂದ್ರದಲ್ಲಿ 1,0000,000 ಲೀಟರ್‌ಗಳಿಗಿಂತ ಹೆಚ್ಚು ಮಳೆ ನೀರನ್ನು ಕೊಯ್ಲು ಮಾಡುವುದರೊಂದಿಗೆ ನೀರಿನ ಉತ್ಪಾದನೆಯಲ್ಲಿ ಸ್ಥಿರತೆ  ಸಾಧಿಸಲಾಗಿದೆ. ಇದು ಸಂಸ್ಕರಣಾ ಕೇಂದ್ರದ ವಾರ್ಷಿಕ ನೀರಿನ ಅಗತ್ಯವನ್ನು ಪೂರೈಸುತ್ತದೆ.

ಆಯಾ ಪ್ರದೇಶಗಳಲ್ಲಿ ಟೆರೇಸಿಂಗ್, ಬದುಗಳನ್ನು ಕಟ್ಟುವುದು, ಚೆಕ್ ಡ್ಯಾಂಗಳ ನಿರ್ಮಾಣ ಸೇರಿದಂತೆ ಜಲಾನಯನ ನಿರ್ವಹಣಾ ಕಾರ್ಯಕ್ರಮವನ್ನು ಕೈಗೊಳ್ಳಲಾಯಿತು. 2020 ರಿಂದ, ಜಲಾನಯನ ನಿರ್ವಹಣಾ ಕಾರ್ಯಕ್ರಮದಡಿಯಲ್ಲಿ, ಪಿಡಿಎಸ್ ಇಡುಕ್ಕಿ ಜಿಲ್ಲೆಯಾದ್ಯಂತ ನೀರಿನ ಸಂರಕ್ಷಣೆ ಮತ್ತು ಲಭ್ಯತೆಯನ್ನು ಹೆಚ್ಚಿಸಲು ಮಹತ್ವದ ಉಪಕ್ರಮಗಳನ್ನು ಕೈಗೊಂಡಿದೆ. ಸಂಸ್ಥೆಯು 60 ಹಳ್ಳಿಗಳಲ್ಲಿ 90 ಬಾವಿಗಳನ್ನು ಯಶಸ್ವಿಯಾಗಿ ಮರುಹೂರಣಗೊಳಿಸಿದೆ. ನೀರಿನ ಮೂಲಗಳನ್ನು ನವೀಕರಿಸಿದೆ. ಇದರ ಜೊತೆಗೆ, ಪಿಡಿಎಸ್ 15 ಹಳ್ಳಿಗಳಲ್ಲಿ ಸಮುದಾಯ ಕುಡಿಯುವ ನೀರಿನ ಯೋಜನೆಗಳನ್ನು ಕೈಗೊಂಡಿದೆ. ಇದರಿಂದ 250 ಕ್ಕೂ ಹೆಚ್ಚು ಕುಟುಂಬಗಳು ಪ್ರಯೋಜನ ಪಡೆದಿವೆ. ನೀರಿನ ಸುಸ್ಥಿರತೆಯನ್ನು ಮತ್ತಷ್ಟು ಬೆಂಬಲಿಸಲು, ವಿವಿಧ ಹಳ್ಳಿಗಳಲ್ಲಿ 110 ಮಳೆನೀರು ಕೊಯ್ಲು ರಚನೆಗಳನ್ನು ನಿರ್ಮಿಸಲಾಗಿದೆ. ಮಣ್ಣು ಮತ್ತು ನೀರು ಸಂರಕ್ಷಣಾ ಪ್ರಯತ್ನಗಳಲ್ಲಿ ಪ್ರದೇಶದಾದ್ಯಂತ 20,000 ಚದರ ಮೀಟರ್ ಕಲ್ಲಿನ ಬದುಗಳು ಮತ್ತು 3,000 ಘನ ಮೀಟರ್ ಗಲ್ಲಿ ಪ್ಲಗಿಂಗ್ ರಚನೆಗಳನ್ನು ಮಾಡಲಾಗಿದೆ.

ಹೆಚ್ಚುವರಿಯಾಗಿ, ರೈತರು ಅಂತರ ಬೆಳೆ ಮತ್ತು ಹಸಿಗೊಬ್ಬರದ ಮೂಲಕ ಮಣ್ಣಿನ ತೇವಾಂಶ ಸಂರಕ್ಷಣೆಯನ್ನು ಅಭ್ಯಾಸ ಮಾಡುತ್ತಾರೆ. ನೀರಿನ ಬಳಕೆಯನ್ನು ಉತ್ತಮಗೊಳಿಸಲು, ನೀರು ವ್ಯರ್ಥವಾಗುವುದನ್ನು ಕಡಿಮೆ ಮಾಡಲು ಮತ್ತು ಬೆಳೆಗಳಿಗೆ ಪರಿಣಾಮಕಾರಿ ವಿತರಣೆಯನ್ನು ಖಚಿತಪಡಿಸಿಕೊಳ್ಳಲು ಹನಿ ನೀರಾವರಿ ಮತ್ತು ಹಸಿಗೊಬ್ಬರದ ತಂತ್ರಗಳನ್ನು ವ್ಯಾಪಕವಾಗಿ ಬಳಸಲಾಗುತ್ತದೆ. ಅಲಸಂದೆ ಮತ್ತು ದ್ವಿದಳ ಧಾನ್ಯದ ಸಸ್ಯಗಳನ್ನು ಹೊದಿಕೆ ಬೆಳೆಗಳಾಗಿ(ನೆರಳು ನೀಡುವಂತೆ) ಸಾಂಬಾರು ಬೆಳೆಗಳ ನಡುವೆ ಬೆಳೆಸಲಾಗುತ್ತದೆ. ಇದು ನೀರು/ತೇವಾಂಶ ಆವಿಯಾಗುವುದನ್ನು ತಡೆಗಟ್ಟುತ್ತದೆ. ಮಣ್ಣಿನ ರಚನೆಯನ್ನು ಸುಧಾರಿಸುತ್ತದೆ. ಈ ಕ್ರಮಗಳು ದೀರ್ಘಕಾಲದ ಶುಷ್ಕ ಅವಧಿಗಳಲ್ಲಿ ಕೃಷಿ ವ್ಯವಸ್ಥೆಗಳ ಸ್ಥಿತಿಸ್ಥಾಪಕತ್ವವನ್ನು ಒಟ್ಟಾರೆಯಾಗಿ ಹೆಚ್ಚಿಸುತ್ತವೆ.

ಹವಾಮಾನ-ನಿರೋಧಕ ಬೆಳೆ ಆಯ್ಕೆ ಮತ್ತು ವೈವಿಧ್ಯೀಕರಣ

ಪಿಡಿಎಸ್ ಸಾವಯವ ಸಾಂಬಾರು ಬೆಳೆ ರೈತರು ಅಳವಡಿಸಿಕೊಂಡ ಅತ್ಯಂತ ಪರಿಣಾಮಕಾರಿ ತಂತ್ರವೆಂದರೆ ಬೆಳೆ ವೈವಿಧ್ಯೀಕರಣ. ಒಂದೇ ಬೆಳೆಯನ್ನು ಅವಲಂಬಿಸುವುದು ಅಪಾಯಕಾರಿಯಾಗಬಹುದು. ಅದರಲ್ಲೂ ಹವಾಮಾನ ಮಾದರಿಗಳ ಅನಿರೀಕ್ಷಿತತೆಯನ್ನು ಗಮನಿಸಿದರೆ, ರೈತರು ಏಕಬೆಳೆಗೆ ಬದಲಾಗಿ ವೈವಿಧ್ಯಯಮಯ ಬೆಳೆಗಳನ್ನು ಸಂಯೋಜಿಸಿ ಬೆಳೆಯಲು ಪ್ರೋತ್ಸಾಹಿಸಲಾಗುತ್ತದೆ.

ಇದಲ್ಲದೆ, ಪಿಡಿಎಸ್ ಹವಾಮಾನ ನಿರೋಧಕ ಮತ್ತು ಸ್ಥಳೀಯವಾಗಿ ಹೊಂದಿಕೊಂಡ ಬೀಜ ಪ್ರಭೇದಗಳ ಲಭ್ಯತೆಯನ್ನು ಸುಗಮಗೊಳಿಸಿದೆ. ಉದಾಹರಣೆಗೆ, ಬರ-ನಿರೋಧಕ ಏಲಕ್ಕಿ ಪ್ರಭೇದಗಳು ಮತ್ತು ಕೀಟ-ನಿರೋಧಕ ಸಾಂಪ್ರದಾಯಿಕ ಮೆಣಸಿನಕಾಯಿ ಪ್ರಭೇದಗಳನ್ನು ಜನಪ್ರಿಯಗೊಳಿಸಲಾಗಿದೆ. ಈ ಪ್ರಭೇದಗಳಿಗೆ ಕನಿಷ್ಠ ಬಾಹ್ಯ ಒಳಸುರಿಯುವಿಕೆಗಳು ಬೇಕಾಗುತ್ತದೆ. ಶಾಖದ ಅಲೆಗಳು ಮತ್ತು ಅತಿವೃಷ್ಟಿಯಂತಹ ಹವಾಮಾನ ಒತ್ತಡಗಳನ್ನು ತಡೆದುಕೊಳ್ಳಲು ಅವು ಹೆಚ್ಚು ಸೂಕ್ತವಾಗಿವೆ.

 ಸ್ಥಳೀಯ ಕೃಷಿ ಸಮಸ್ಯೆಗಳನ್ನು ಪರಿಹರಿಸಲು ರೈತರ ಹೊಸ ಆವಿಷ್ಕಾರಗಳ ಹುಡುಕಾಟ

ಜಮೀನು ಮಟ್ಟದಲ್ಲಿ ತಂತ್ರಜ್ಞಾನ ಅಳವಡಿಕೆಯಲ್ಲಿ ಗಮನಾರ್ಹ ಅಂತರವಿದೆ ಎನ್ನುವುದನ್ನು ವ್ಯಾಪಕವಾಗಿ ಒಪ್ಪಿಕೊಳ್ಳಲಾಗಿದೆ. ಇದಕ್ಕೆ ಸಾಂಪ್ರದಾಯಿಕ ವಿಸ್ತರಣಾ ವ್ಯವಸ್ಥೆಗಳಲ್ಲಿರುವ ನ್ಯೂನತೆಗಳೇ ಕಾರಣ. ಹೀಗಿದ್ದೂ, PDS ಸಾವಯವ ಸಾಂಬಾರು ಬೆಳೆಗಳಿಗೆ ಸಂಬಂಧಿಸಿದ ಸವಾಲು ವಿಸ್ತರಣೆಯಲ್ಲಿ ಮಾತ್ರವಲ್ಲದೆ ಪ್ರಯೋಗಾಲಯ-ಅಭಿವೃದ್ಧಿಪಡಿಸಿದ ತಂತ್ರಜ್ಞಾನಗಳ ಲಭ್ಯತೆ ಹಾಗೂ ಕೈಗೆಟುವಂತೆ ಇಲ್ಲದಿರುವುದರಲ್ಲೂ ಇದೆ ಎಂದು ಗುರುತಿಸುತ್ತದೆ. ಇದು ರೈತರ ಪ್ರಾಯೋಗಿಕ ಅಗತ್ಯಗಳನ್ನು ಪೂರೈಸಲು ಮತ್ತು ಸ್ಥಿತಿಸ್ಥಾಪಕ ವ್ಯವಸ್ಥೆಗಳನ್ನು ರಚಿಸಲು ವಿಫಲವಾಗುತ್ತದೆ. ಇದಕ್ಕೆ ಪ್ರತಿಕ್ರಿಯೆಯಾಗಿ, PDS ಸಾಂಪ್ರದಾಯಿಕ “ಪ್ರಯೋಗಾಲಯದಿಂದ ಭೂಮಿಗೆ” ವಿಧಾನವನ್ನು “ಭೂಮಿಯಿಂದ ಪ್ರಯೋಗಾಲಯ” ಎಂದು ಮರು ವ್ಯಾಖ್ಯಾನಿಸಿದ್ದು ರೈತರ ಹೊಸ ಆವಿಷ್ಕಾರಗಳಿಗೆ ಒತ್ತು ನೀಡುತ್ತದೆ.

ಭೂಮಿಯಿಂದ ಪ್ರಯೋಗಾಲಯ ಉಪಕ್ರಮಗಳ ಕೇಂದ್ರವು ಸ್ಥಳೀಯ ಸಾಂಬಾರು ಬೆಳೆಯ ಪ್ರಭೇದಗಳು, ಸ್ಥಳೀಯ ಜ್ಞಾನ ಮತ್ತು ರೈತ-ನೇತೃತ್ವದ ನಾವೀನ್ಯತೆಗಳನ್ನು ಬೆಂಬಲಿಸುತ್ತದೆ. ವ್ಯಾಪಕ ಮನ್ನಣೆಯನ್ನು ಗಳಿಸಿರುವ ಭಾಗವಹಿಸುವಿಕೆ ಮಾದರಿಯನ್ನು ಬೆಳೆಸುತ್ತದೆ. ಗಮನಾರ್ಹವಾದ ನಾವೀನ್ಯತೆಗಳಲ್ಲಿ ಸ್ಥಳೀಯವಾಗಿ ಹೊಂದಿಕೊಂಡ, ಹವಾಮಾನ ಸ್ಥಿತಿಸ್ಥಾಪಕ, ಏಲಕ್ಕಿ, ಮೆಣಸು, ಜಾಯಿಕಾಯಿ ಮತ್ತು ಶುಂಠಿಯಂತಹ ಹೆಚ್ಚಿನ ಇಳುವರಿ ನೀಡುವ ಸಾಂಬಾರು ಪ್ರಭೇದಗಳು ಸೇರಿವೆ. ಜೊತೆಗೆ ಸಾವಯವ ಒಳಸುರಿಯುವಿಕೆಯ ಉತ್ಪಾದನೆ, ಗೊಬ್ಬರ ತಯಾರಿಸುವ ತಂತ್ರಗಳು, ಕೊಯ್ಲಿನ ನಂತರದ ಸಂಸ್ಕರಣೆ (ಡ್ರೈಯರ್‌ಗಳು ಮತ್ತು ಕ್ಲೀನರ್‌ಗಳು), ಸಾವಯವ ನುಗ್ಗೆಸೊಪ್ಪಿನಿಂದ ಪಡೆದ ಹಾರ್ಮೋನುಗಳು, ಕಸಿ ಮಾಡುವಿಕೆ ಮತ್ತು ಲೇಯರಿಂಗ್ ವಿಧಾನಗಳು ಮತ್ತು ಸುಸ್ಥಿರ ಕೀಟ ಮತ್ತು ರೋಗ ನಿರ್ವಹಣಾ ಪರಿಹಾರಗಳಲ್ಲಿನ ಪ್ರಗತಿಗಳು ಸೇರಿವೆ. ತಲೆಮಾರುಗಳ ಕೃಷಿ ಜ್ಞಾನದಲ್ಲಿ ಬೇರೂರಿರುವ ಈ ವಿಧಾನವು ರೈತರಿಗೆ ಪ್ರಾಯೋಗಿಕ, ವೆಚ್ಚ-ಪರಿಣಾಮಕಾರಿ ಪರಿಹಾರಗಳನ್ನು ನೀಡುತ್ತದೆ. ಈ ಪ್ರದೇಶದಲ್ಲಿ ಸ್ಥಿತಿಸ್ಥಾಪಕ ಕೃಷಿ-ಪರಿಸರ ವ್ಯವಸ್ಥೆಯನ್ನು ಸಾಧಿಸುವ ಮೂಲಕ ಸಾಂಪ್ರದಾಯಿಕ ಜ್ಞಾನ ಮತ್ತು ಆಧುನಿಕ ಸಾವಯವ ಕೃಷಿ ಪದ್ಧತಿಗಳ ನಡುವಿನ ಅಂತರವನ್ನು ಕಡಿಮೆ ಮಾಡುತ್ತದೆ,

 ಇಂಗಾಲವನ್ನು ಹೆಚ್ಚಿಸಲು ಸಾವಯವ ಕೃಷಿ ಪದ್ಧತಿಗಳು

ಮಣ್ಣಿನ ಜೀವವೈವಿಧ್ಯ ಮತ್ತು ಸಾವಯವ ಇಂಗಾಲವನ್ನು ಹೆಚ್ಚಿಸುವ ಗುರಿಯನ್ನು ಹೊಂದಿರುವ ಸಾವಯವ ಕೃಷಿ ಪದ್ಧತಿಗಳನ್ನು ಪಿಡಿಎಸ್ ಸಾವಯವ ಸಾಂಬಾರು ಬೆಳೆಗಳು ಉತ್ತೇಜಿಸುತ್ತವೆ. ಮಣ್ಣಿನ ಇಂಗಾಲದ ಹೆಚ್ಚಳದಲ್ಲಿ ಸಾವಯವ ಒಳಸುರಿಯುವಿಕೆಯ ಗುಣಮಟ್ಟವು ನಿರ್ಣಾಯಕ ಪಾತ್ರ ವಹಿಸುತ್ತದೆ. ಸಾವಯವ ಗೊಬ್ಬರಗಳಾದ ಎರೆಹುಳು ಗೊಬ್ಬರ, ಬಯೋಡೈನಾಮಿಕ್ ಕಾಂಪೋಸ್ಟ್‌ಗಳು, ಹರಿತಕಷಾಯಂ, ಹಸಿರು ಗೊಬ್ಬರಗಳು, ಸಾಂಪ್ರದಾಯಿಕ ಹುದುಗಿಸಿದ ದ್ರವ ಸೂತ್ರೀಕರಣಗಳು ಇತ್ಯಾದಿಗಳು ಮಣ್ಣಿನ ರಚನೆಯನ್ನು ಸುಧಾರಿಸುತ್ತವೆ. ಸೂಕ್ಷ್ಮಜೀವಿಯ ಚಟುವಟಿಕೆಯನ್ನು ಹೆಚ್ಚಿಸುತ್ತವೆ, ಪೋಷಕಾಂಶಗಳ ಲಭ್ಯತೆಯನ್ನು ಹೆಚ್ಚಿಸುತ್ತವೆ ಮತ್ತು ನೀರಿನ ಧಾರಣವನ್ನು ಉತ್ತೇಜಿಸುತ್ತವೆ, ಒಟ್ಟಾರೆ ಮಣ್ಣಿನ ಫಲವತ್ತತೆ ಮತ್ತು ಸ್ಥಿತಿಸ್ಥಾಪಕತ್ವಕ್ಕೆ ಕೊಡುಗೆ ನೀಡುತ್ತವೆ. ಅಂತೆಯೇ, ಏರೋಬಿಕ್ ಕಾಂಪೋಸ್ಟಿಂಗ್ (ಗಾಳಿ/ ಆಮ್ಲಜನಕ ಸಹಿತ ಗೊಬ್ಬರ) ಮತ್ತು ಅನ್‌ಏರೋಬಿಕ್‌- ಆಮ್ಲಜನಕರಹಿತ ಕ್ರಿಯೆಯಿಂದ ಪಡೆದ ಉತ್ಪನ್ನಗಳು ಕಚ್ಚಾ ಸಸ್ಯ ವಸ್ತುಗಳಿಗಿಂತ ಮಣ್ಣಿನ ಸಾವಯವ ಇಂಗಾಲವನ್ನು ಪರಿಣಾಮಕಾರಿಯಾಗಿ ಹೆಚ್ಚಿಸುವ ನಿರೀಕ್ಷೆಯಿದೆ.

ಪಿಡಿಎಸ್ ಸಾವಯವ ಸಾಂಬಾರು ಬೆಳೆಗಳ ಅಡಿಯಲ್ಲಿ ರೈತರು ಅನುಸರಿಸುವ ಪುನರುತ್ಪಾದಕ ಸಾವಯವ ಕೃಷಿ ಪದ್ಧತಿಗಳು ಮಣ್ಣಿನ ಫಲವತ್ತತೆಯನ್ನು ನಿರ್ವಹಿಸುವ ಬದಲು ಮಣ್ಣಿನ ಜೀವವೈವಿಧ್ಯತೆಯನ್ನು ನಿರ್ವಹಿಸುವುದರ ಮೇಲೆ ಕೇಂದ್ರೀಕರಿಸುತ್ತವೆ. ಏಕೆಂದರೆ ಮಣ್ಣಿನ ಆರೋಗ್ಯವು ಹೆಚ್ಚಾಗಿ ಮಣ್ಣಿನ ಜೈವಿಕ ಚಟುವಟಿಕೆಯ ಮೇಲೆ ಅವಲಂಬಿತವಾಗಿದೆ. ಈ ಪದ್ಧತಿಗಳಲ್ಲಿ ಪಿಡಿಎಸ್ ಸಾವಯವ ಸಾಂಬಾರು ಬೆಳೆಗಳ ವಿಶ್ಲೇಷಣಾತ್ಮಕ ಪ್ರಯೋಗಾಲಯದಲ್ಲಿ ಮಣ್ಣಿನ ಫಲವತ್ತತೆಯ ಮೌಲ್ಯಮಾಪನವೂ ಸೇರಿದೆ. ಅಲ್ಲಿ ರೈತರು ಮಣ್ಣಿನ ಆರೋಗ್ಯ ಕಾರ್ಡ್‌ಗಳನ್ನು ಪಡೆಯುತ್ತಾರೆ; ಪೋಷಕಾಂಶಗಳ ನಷ್ಟವನ್ನು ಕಡಿಮೆ ಮಾಡಲು ಮಿಶ್ರ ಬೆಳೆ ಕೃಷಿಯನ್ನು ಉತ್ತೇಜಿಸುವುದು; ಮಣ್ಣಿನ ಸಾವಯವ ಗುಣವನ್ನು ಹೆಚ್ಚಿಸಲು ರಾಸಾಯನಿಕ ಗೊಬ್ಬರಗಳ ಬಳಕೆ ತಪ್ಪಿಸುವುದು; ರೈತ ಬೆಂಬಲ ವ್ಯವಸ್ಥೆಯ ಮೂಲಕ ಉತ್ತಮ ಗುಣಮಟ್ಟದ ಸಾವಯವ ಕೃಷಿ ಒಳಸುರಿಯುವಿಕೆಗಳನ್ನು ಪೂರೈಸುವುದು. ಹೆಚ್ಚುವರಿಯಾಗಿ, ರೈತರು ಆವಿಯಾಗುವಿಕೆಯಿಂದ ಆಗುವ ನೀರಿನ ನಷ್ಟವನ್ನು ಕಡಿಮೆ ಮಾಡಲು ಮತ್ತು ಸೋರಿಕೆಯ ಮೂಲಕ ಆಗುವ ಪೋಷಕಾಂಶಗಳ ನಷ್ಟವನ್ನು ಕಡಿಮೆ ಮಾಡಲು ಗರಿಷ್ಠ ಮಣ್ಣಿನ ಹೊದಿಕೆಯಿರುವಂತೆ ನೋಡಿಕೊಳ್ಳುತ್ತಾರೆ. ಮಣ್ಣಿನ ಸವಕಳಿಯನ್ನು ತಡೆಗಟ್ಟಲು ವೆಟಿವರ್ ಸಸ್ಯಗಳನ್ನು ಕಾರ್ಯತಂತ್ರದ ಭಾಗವಾಗಿ ಹೊರ ಅಂಚಿನ ಉದ್ದಕ್ಕೂ ನೆಡಲಾಗುತ್ತದೆ. ಆದರೆ ಕಲ್ಲಿನ ಬದುಗಳು ಮತ್ತು ಗಲ್ಲಿ ಪ್ಲಗಿಂಗ್‌ನಂತಹ (ತಡೆಗೋಡೆ) ಕ್ರಮಗಳು ಮಣ್ಣಿನ ಸಂರಕ್ಷಣೆಗೆ ಸಹಾಯ ಮಾಡುತ್ತವೆ. ಸಾಮರ್ಥ್ಯ-ನಿರ್ಮಾಣದ ಉಪಕ್ರಮಗಳು ರೈತರಿಗೆ ಮಣ್ಣಿನ ಆರೋಗ್ಯ ಪುನರುತ್ಪಾದನೆಗಾಗಿ ಜ್ಞಾನ ಮತ್ತು ಕೌಶಲ್ಯಗಳನ್ನು ಒದಗಿಸುತ್ತವೆ. ಈ ಪ್ರದೇಶದಲ್ಲಿ ಸಾವಯವ ಕೃಷಿಯ ಸುಸ್ಥಿರತೆಯನ್ನು ಬಲಪಡಿಸುತ್ತವೆ.

ಸಮಗ್ರ ಕೀಟ ಮತ್ತು ರೋಗ ನಿರ್ವಹಣೆ

ಬದಲಾಗುತ್ತಿರುವ ಹವಾಮಾನ ಪರಿಸ್ಥಿತಿಗಳೊಂದಿಗೆ, ಕೀಟ ಮತ್ತು ರೋಗಗಳ ಏಕಾಏಕಿ ಹೆಚ್ಚಾಗಿದೆ. ಕೀಟನಾಶಕ ಬಳಕೆ ಮತ್ತು ಹವಾಮಾನ ಬದಲಾವಣೆಯ ನಡುವಿನ ಪರಸ್ಪರ ಕ್ರಿಯೆಯು ಸಂಬಂಧಿತ ಪ್ರತಿಕ್ರಿಯೆಯ ಲೂಪ್ ಅನ್ನು ರೂಪಿಸುತ್ತದೆ. ಕೀಟನಾಶಕಗಳ ಉತ್ಪಾದನೆ, ಸಾಗಣೆ ಮತ್ತು ಅನ್ವಯವು ಇಂಗಾಲದ ಡೈಆಕ್ಸೈಡ್, ಮೀಥೇನ್ ಮತ್ತು ನೈಟ್ರಸ್ ಆಕ್ಸೈಡ್ ಸೇರಿದಂತೆ ಗಮನಾರ್ಹವಾದ ಹಸಿರುಮನೆ ಅನಿಲಗಳನ್ನು ಹೊರಸೂಸುತ್ತದೆ. ಇದು ಜಾಗತಿಕ ತಾಪಮಾನ ಏರಿಕೆಗೆ ಕೊಡುಗೆ ನೀಡುತ್ತದೆ. ಅಲ್ಲದೆ, ಕೆಲವು ಕಳೆನಾಶಕಗಳ ತಯಾರಿಕೆಯು ದೊಡ್ಡ ಪ್ರಮಾಣದ ಗಣಿಗಾರಿಕೆ ಮತ್ತು ಸಂಸ್ಕರಣೆ, ಗಣನೀಯ ಪರಿಸರ ನಾಶ ಮತ್ತು ಹಸಿರುಮನೆ ಅನಿಲಗಳ ಹೊರಸೂಸುವಿಕೆಯನ್ನು ಒಳಗೊಂಡಿರುತ್ತದೆ.

ಪಿಡಿಎಸ್ ಸಾವಯವ ಸಾಂಬಾರು ಬೆಳೆಗಾರರು ಸಾವಯವ ಕೀಟ ನಿರ್ವಹಣಾ ತಂತ್ರಗಳನ್ನು ಅಳವಡಿಸಿಕೊಂಡಿದ್ದಾರೆ. ಸಂಶ್ಲೇಷಿತ ಕೀಟನಾಶಕಗಳ ಮೇಲೆ ಅವಲಂಬಿತರಾಗಿಲ್ಲ. ಪ್ರಯೋಜನಕಾರಿ ಕೀಟಗಳು ಮತ್ತು ಗಿಡಮೂಲಿಕೆ ಆಧಾರಿತ ಸಾವಯವ ಕೀಟನಾಶಕಗಳ ಬಳಕೆ ಸೇರಿದಂತೆ ಜೈವಿಕ ನಿಯಂತ್ರಣ ವಿಧಾನಗಳು ಕೀಟಗಳು ಮತ್ತು ರೋಗಗಳನ್ನು ನಿರ್ವಹಿಸಲು ಸಹಾಯ ಮಾಡುತ್ತವೆ.

ಕೀಟ ಚಕ್ರಗಳನ್ನು ಮುರಿಯಲು ಮತ್ತು ಮಣ್ಣಿನಿಂದ ಹರಡುವ ರೋಗಗಳನ್ನು ತಡೆಗಟ್ಟಲು ರೈತರು ಬೆಳೆ ಸರದಿ ಪದ್ಧತಿಯನ್ನು ಅನುಸರಿಸುತ್ತಾರೆ. ಬೆಳ್ಳುಳ್ಳಿ ಮತ್ತು ಅರಿಶಿನ ಸಿಂಪಡಣೆಗಳಂತಹ ಕೆಲವು ಸಾಂಪ್ರದಾಯಿಕ ಸಸ್ಯಶಾಸ್ತ್ರೀಯ ಸಾರಗಳ ಬಳಕೆಯು ಶಿಲೀಂಧ್ರ ಮತ್ತು ಬ್ಯಾಕ್ಟೀರಿಯಾದ ಸೋಂಕುಗಳ ವಿರುದ್ಧ ನೈಸರ್ಗಿಕ ನಿರೋಧಕವಾಗಿ ಕಾರ್ಯನಿರ್ವಹಿಸುತ್ತದೆ. ಈ ಪರಿಸರ ಸ್ನೇಹಿ ವಿಧಾನಗಳು ಪ್ರದೇಶದ ಪರಿಸರ ಸಮತೋಲನವನ್ನು ಕಾಪಾಡುವುದರೊಂದಿಗೆ ಸಾಂಬಾರು ಬೆಳೆಗಳ ಆರೋಗ್ಯವನ್ನು ಕಾಪಾಡುತ್ತದೆ.

ಜೀವವೈವಿಧ್ಯ ರಕ್ಷಣೆ ಮತ್ತು ವರ್ಧನೆ

ಪಶ್ಚಿಮ ಘಟ್ಟಗಳ ಸಾಂಬಾರು ಬೆಳೆ ತೋಟಗಳಲ್ಲಿ ಸ್ಥಳೀಯ ಜ್ಞಾನದೊಂದಿಗೆ ಕೃಷಿ ಪದ್ಧತಿಗಳನ್ನು ಸಂಯೋಜಿಸಲು ಕ್ಷೇತ್ರ ಮಟ್ಟದಲ್ಲಿ ಜೀವವೈವಿಧ್ಯ ಕ್ರಿಯಾ ಯೋಜನೆಯನ್ನು ಅಳವಡಿಸಿಕೊಳ್ಳುವ ಪ್ರಕ್ರಿಯೆಯನ್ನು ಪಿಡಿಎಸ್ ಪ್ರಾರಂಭಿಸಿವೆ. ಪರಿಸರ ವ್ಯವಸ್ಥೆಯ ಸ್ಥಿರತೆಯನ್ನು ಸುಧಾರಿಸುವ, ಮಣ್ಣಿನ ಆರೋಗ್ಯವನ್ನು ಬೆಂಬಲಿಸುವ ಮತ್ತು ಬದಲಾಗುತ್ತಿರುವ ಹವಾಮಾನ ಪರಿಸ್ಥಿತಿಗಳಿಗೆ ಕೃಷಿ ಹೊಂದಾಣಿಕೆಯನ್ನು ಹೆಚ್ಚಿಸುವ ಮೂಲಕ ಹವಾಮಾನ ಸ್ಥಿತಿಸ್ಥಾಪಕತ್ವವನ್ನು ಹೆಚ್ಚಿಸುವಲ್ಲಿ ಜೀವವೈವಿಧ್ಯವು ನಿರ್ಣಾಯಕ ಪಾತ್ರ ವಹಿಸುತ್ತದೆ. ಈ ಉಪಕ್ರಮವು ಜಾಗೃತಿ ಕಾರ್ಯಕ್ರಮಗಳ ಮೂಲಕ ಜೀವವೈವಿಧ್ಯತೆ ಮತ್ತು ಪರಿಸರ ವ್ಯವಸ್ಥೆಯ ಸೇವೆಗಳನ್ನು ಉತ್ತೇಜಿಸುತ್ತದೆ. ಪ್ರದೇಶದ ಸಾಂಬಾರು ಬೆಳೆ ತೋಟದಲ್ಲಿನ ಮಣ್ಣಿನಲ್ಲಿರುವ ಸೂಕ್ಷ್ಮಜೀವಿಗಖ ಸಂಖ್ಯೆಯನ್ನು ದಾಖಲಿಸುತ್ತದೆ. ಯೋಜನೆಯ ಭಾಗವಾಗಿ, ಕೃಷಿ ಸುಸ್ಥಿರತೆಯನ್ನು ಬಲಪಡಿಸಲು ಹವಾಮಾನ-ಸ್ಥಿತಿಸ್ಥಾಪಕ ಸ್ಥಳೀಯ ಪ್ರಭೇದದ ಸಾಂಬಾರು ಬೆಳೆಗಳನ್ನು ಗುರುತಿಸಲಾಗುತ್ತದೆ, ಅವುಗಳ ಸಂಖ್ಯೆಯನ್ನು ಹೆಚ್ಚಿಸಿ ವಿತರಿಸಲಾಗುತ್ತದೆ. ಪರಾಗಸ್ಪರ್ಶಕಗಳು ಮತ್ತು ಪರಭಕ್ಷಕಗಳನ್ನು, ಅದರಲ್ಲೂ ವಿಶೇಷವಾಗಿ ಜೇನುನೊಣಗಳನ್ನು ಬೆಂಬಲಿಸುವ ಸ್ಥಳೀಯ ಸಸ್ಯ ಪ್ರಭೇದಗಳ ಪ್ರಚಾರವು ಪರಿಸರ ಸಮತೋಲನವನ್ನು ಕಾಪಾಡಿಕೊಳ್ಳಲು ಮತ್ತು ಬೆಳೆ ಉತ್ಪಾದಕತೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಕೀಟನಾಶಕಗಳು ಮತ್ತು ಸಸ್ಯನಾಶಕಗಳ ಬಳಕೆನ್ನು ತಪ್ಪಿಸುವುದರಿಂದ ತೋಟಗಳಲ್ಲಿ ಹೂವು, ಪ್ರಾಣಿ ಮತ್ತು ಸೂಕ್ಷ್ಮಜೀವಿಯ ವೈವಿಧ್ಯತೆಯು ಮತ್ತಷ್ಟು ಹೆಚ್ಚಾಗಿ ಸ್ಥಿತಿಸ್ಥಾಪಕ ಕೃಷಿ ವ್ಯವಸ್ಥೆಯು ಸೃಷ್ಟಿಯಾಗುತ್ತದೆ. ಪರಿಸರ ಲಾಭಗಳನ್ನು ತಿಳಿಯಲು ಇಂಗಾಲ ಹೆಚ್ಚಳದ ಮೌಲ್ಯಮಾಪನವನ್ನು ಪ್ರತಿಯೊಬ್ಬರ ತೋಟದಲ್ಲಿ ವೈಜ್ಞಾನಿಕ ಸಲಕರಣೆಗಳನ್ನು ಬಳಸಿ ಮಾಡಲಾಗುತ್ತದೆ. ಇದು ಹವಾಮಾನ ವೈಪರಿತ್ಯ ತಗ್ಗಿಸಲು ಮಾಡಿದ ಪ್ರಯತ್ನಗಳ ದಾಖಲೆಯನ್ನು ನೀಡುತ್ತದೆ. ಜೀವವೈವಿಧ್ಯ ಮತ್ತು ಹವಾಮಾನ ಸ್ಥಿತಿಸ್ಥಾಪಕತ್ವದ ಬಗ್ಗೆ ಸಾಂಪ್ರದಾಯಿಕ ಜ್ಞಾನವನ್ನು ವ್ಯವಸ್ಥಿತವಾಗಿ ದಾಖಲಿಸಲಾಗುತ್ತದೆ. ಅದನ್ನು ಕ್ಷೇತ್ರ ಪದ್ಧತಿಗಳಲ್ಲಿ ಸಂಯೋಜಿಸಲಾಗುತ್ತದೆ, ಆ ಮೂಲಕ ಮೌಲ್ಯಯುತವಾದ ಸ್ಥಳೀಯ ಕೃಷಿ ಜ್ಞಾನವನ್ನು ಸಂರಕ್ಷಿಸಲಾಗುತ್ತದೆ. ಇದಲ್ಲದೆ, ಅಂತರ ಬೆಳೆಗೆ ಸೂಕ್ತವಾದ ಔಷಧೀಯ ಸಸ್ಯಗಳನ್ನು ಗುರುತಿಸಲಾಗುತ್ತದೆ ಮತ್ತು ಉತ್ತೇಜಿಸಲಾಗುತ್ತದೆ, ಇದು ರೈತರಿಗೆ ಹೆಚ್ಚುವರಿ ಆದಾಯದ ಅವಕಾಶಗಳನ್ನು ಒದಗಿಸುತ್ತದೆ ಮತ್ತು ಪರಿಸರ ಸುಸ್ಥಿರತೆಯನ್ನು ಹೆಚ್ಚಿಸುತ್ತದೆ.

ಸಮುದಾಯದ ಭಾಗವಹಿಸುವಿಕೆ ಮತ್ತು ಜ್ಞಾನ ಹಂಚಿಕೆ

PDS ನಲ್ಲಿ ಹವಾಮಾನ-ನಿರೋಧಕ ಕೃಷಿಯ ಯಶಸ್ಸಿಗೆ ಸಮುದಾಯದ ಭಾಗವಹಿಸುವಿಕೆ ಮತ್ತು ರೈತರ ನೇತೃತ್ವದ ಜ್ಞಾನ ವಿನಿಮಯವೇ ಕಾರಣ. ಹವಾಮಾನ ಹೊಂದಾಣಿಕೆಯಲ್ಲಿ ಇತ್ತೀಚಿನ ತಂತ್ರಗಳೊಂದಿಗೆ ರೈತರನ್ನು ಸಜ್ಜುಗೊಳಿಸಲು ನಿಯಮಿತ ತರಬೇತಿ ಕಾರ್ಯಕ್ರಮಗಳು, ರೈತ ಕ್ಷೇತ್ರ ಶಾಲೆಗಳು ಮತ್ತು ಭಾಗವಹಿಸುವಿಕೆಯ ಕಲಿಕಾ ಅವಧಿಗಳನ್ನು ಆಯೋಜಿಸಲಾಗಿದೆ. ಪೀರ್-ಟು-ಪೀರ್ ಕಲಿಕೆಯು ಯಶಸ್ವಿ ಕೃಷಿ ಮಾದರಿಗಳನ್ನು ತ್ವರಿತವಾಗಿ ಅಳವಡಿಸಿಕೊಳ್ಳಲು ಅನುವು ಮಾಡಿಕೊಟ್ಟಿದೆ, ಇದು ದೀರ್ಘಾವಧಿಯ ಸುಸ್ಥಿರತೆಯನ್ನು ಖಚಿತಪಡಿಸುತ್ತದೆ.

ಇದಲ್ಲದೆ, ಈ ಉಪಕ್ರಮಗಳಲ್ಲಿ ಮಹಿಳಾ ರೈತರು ನಿರ್ಣಾಯಕ ಪಾತ್ರ ವಹಿಸುತ್ತಾರೆ. ಸ್ವ-ಸಹಾಯ ಗುಂಪುಗಳ ಮೂಲಕ, ಅವರು ಬೀಜ ಸಂರಕ್ಷಣೆ, ಸಾವಯವ ಒಳಸುರಿಯುವಿಕೆಗಳ ತಯಾರಿಕೆ ಮತ್ತು ಮೌಲ್ಯವರ್ಧಿತ ಸಾಂಬಾರು ಪದಾರ್ಥಗಳ ಸಂಸ್ಕರಣೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುತ್ತಾರೆ. ಇದು ಮನೆಯ ಆದಾಯವನ್ನು ಹೆಚ್ಚಿಸುವುದಲ್ಲದೆ, ಸುಸ್ಥಿರ ಕೃಷಿಗೆ ಸಂಬಂಧಿಸಿದ ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಗಳಲ್ಲಿ ಗ್ರಾಮೀಣ ಮಹಿಳೆಯರನ್ನು ಸಬಲಗೊಳಿಸುತ್ತದೆ.

ನೀತಿ ವಕಾಲತ್ತು ಮತ್ತು ಪ್ರಮಾಣೀಕರಣಗಳು

ಹವಾಮಾನ-ನಿರೋಧಕ ಕೃಷಿಯನ್ನು ಉತ್ತೇಜಿಸಲು ನೀತಿ ಬೆಂಬಲವನ್ನು ಪ್ರತಿಪಾದಿಸುವಲ್ಲಿ PDS ಸಾವಯವ ಸಾಂಬಾರು ಪದಾರ್ಥಗಳು ಪ್ರಮುಖ ಪಾತ್ರ ವಹಿಸಿವೆ. ಸರ್ಕಾರಿ ಸಂಸ್ಥೆಗಳು ಮತ್ತು ಉತ್ಪಾದಕ ಜಾಲಗಳ ಸಹಯೋಗದ ಮೂಲಕ, PDS ಸಾವಯವ ಸಾಂಬಾರು ಪದಾರ್ಥಗಳು ಈ ಪ್ರದೇಶದಲ್ಲಿ ಸ್ಥಿತಿಸ್ಥಾಪಕ ಕೃಷಿ-ಪರಿಸರ ವ್ಯವಸ್ಥೆಯನ್ನು ರಚಿಸುವ ಪ್ರಕ್ರಿಯೆಯನ್ನು ಮುನ್ನಡೆಸುತ್ತಿವೆ. ಸಾವಯವ ಮತ್ತು ಫೇರ್‌ಟ್ರೇಡ್ ಲೇಬಲ್‌ಗಳಂತಹ ಪ್ರಮಾಣೀಕರಣ ಕಾರ್ಯಕ್ರಮಗಳು ಸುಸ್ಥಿರ ಮತ್ತು ಹವಾಮಾನ ಸ್ಮಾರ್ಟ್ ಕೃಷಿ ಪದ್ಧತಿಗಳನ್ನು ಮತ್ತಷ್ಟು ಪ್ರೋತ್ಸಾಹಿಸುತ್ತವೆ. ಇದು ಅವರ ಕುಟುಂಬಗಳಿಗೆ ಸುಸ್ಥಿರ ಜೀವನ ಆದಾಯವನ್ನು ಖಚಿತಪಡಿಸುತ್ತದೆ.

ಪರಿಸರೀಯವಾಗಿ ಸುಸ್ಥಿರ ಮತ್ತು ಆರ್ಥಿಕವಾಗಿ ಕಾರ್ಯಸಾಧ್ಯವಾದ ಕೃಷಿ ಪದ್ಧತಿಗಳನ್ನು ಉತ್ತೇಜಿಸುವಲ್ಲಿ ಪ್ರಮಾಣೀಕರಣ ಮಾನದಂಡಗಳು ಪ್ರಮುಖ ಪಾತ್ರ ವಹಿಸುತ್ತವೆ. ಕಠಿಣ ಪರಿಸರ ಮತ್ತು ಸಾಮಾಜಿಕ ಮಾನದಂಡಗಳ ಅನುಸರಣೆಯನ್ನು ಖಚಿತಪಡಿಸಿಕೊಳ್ಳುವ ಮೂಲಕ, ಈ ಪ್ರಮಾಣೀಕರಣಗಳು ಜೀವವೈವಿಧ್ಯ ಸಂರಕ್ಷಣೆ, ಮಣ್ಣಿನ ಆರೋಗ್ಯ ಮತ್ತು ಕಡಿಮೆ ರಾಸಾಯನಿಕ ಒಳಸುರಿಯುವಿಕೆಗಳಿಗೆ ಕೊಡುಗೆ ನೀಡುವುದಲ್ಲದೆ, PDS ಸಾವಯವ ಸಾಂಬಾರು ಪದಾರ್ಥಗಳ ಜಾಲದ ಅಡಿಯಲ್ಲಿ ರೈತರಿಗೆ ಆರ್ಥಿಕ ಸ್ಥಿರತೆಯನ್ನು ಒದಗಿಸುತ್ತವೆ. ಸ್ಥಿರ ಮತ್ತು ನ್ಯಾಯಯುತ ಬೆಲೆ ನಿಗದಿ ಕಾರ್ಯವಿಧಾನಗಳು ಸಣ್ಣ ಹಿಡುವಳಿದಾರ ರೈತರು ವೈವಿಧ್ಯಮಯ ಬೆಳೆ ವ್ಯವಸ್ಥೆಗಳು, ಮಣ್ಣಿನ ಪುನರುತ್ಪಾದನೆ ತಂತ್ರಗಳು ಮತ್ತು ನೀರಿನ ಸಂರಕ್ಷಣಾ ತಂತ್ರಗಳಂತಹ ಹವಾಮಾನ ಹೊಂದಾಣಿಕೆಯ ಕ್ರಮಗಳಲ್ಲಿ ಮರುಹೂಡಿಕೆ ಮಾಡಲು ಅನುವು ಮಾಡಿಕೊಡುತ್ತದೆ. ರಾಷ್ಟ್ರೀಯ ಮತ್ತು ಜಾಗತಿಕ ಹವಾಮಾನ ಗುರಿಗಳೊಂದಿಗೆ ಪ್ರಮಾಣೀಕರಣ ಮಾನದಂಡಗಳನ್ನು ಜೋಡಿಸುವ ಸಮಗ್ರ ನೀತಿ ವಿಧಾನವು ರೈತರನ್ನು ಸಬಲೀಕರಣಗೊಳಿಸುತ್ತದೆ, ಆಹಾರ ಭದ್ರತೆಯನ್ನು ಹೆಚ್ಚಿಸುತ್ತದೆ ಮತ್ತು ಸ್ಥಿತಿಸ್ಥಾಪಕ ಮತ್ತು ಸುಸ್ಥಿರ ಕೃಷಿ ಆರ್ಥಿಕತೆಯನ್ನು ಬೆಳೆಸುತ್ತದೆ ಎಂದು PDS ಆರ್ಗಾನಿಕ್‌ ಸ್ಪೈಸಸ್‌ ನಂಬುತ್ತವೆ.

ಉಪಸಂಹಾರ

ಪಿಡಿಎಸ್ ಸಾವಯವ ಸಾಂಬಾರು ಬೆಳೆಗಾರರು ಅಳವಡಿಸಿಕೊಂಡ ಹವಾಮಾನ-ನಿರೋಧಕ ಕೃಷಿ ಪದ್ಧತಿಗಳು ಹವಾಮಾನ ಅಪಾಯಗಳನ್ನು ತಗ್ಗಿಸುವಲ್ಲಿ ಸುಸ್ಥಿರ ಕೃಷಿಯ ಶಕ್ತಿಯನ್ನು ಎತ್ತಿ ತೋರುತ್ತವೆ. ಸಾಂಪ್ರದಾಯಿಕ ಜ್ಞಾನವನ್ನು ಆಧುನಿಕ ಕೃಷಿ-ಪರಿಸರ ಪದ್ಧತಿಗಳೊಂದಿಗೆ ಸಂಯೋಜಿಸುವ ಮೂಲಕ, ಈ ರೈತರು ಪರಿಸರ ಸಮಗ್ರತೆಯನ್ನು ಕಾಪಾಡಿಕೊಂಡು ಉತ್ಪಾದಕತೆಯನ್ನು ಹೆಚ್ಚಿಸುವ ಮಾದರಿಯನ್ನು ಯಶಸ್ವಿಯಾಗಿ ರಚಿಸಿದ್ದಾರೆ. ಹವಾಮಾನ ಬದಲಾವಣೆಯ ನಿರಂತರವಾಗಿ ಬೆಳೆಯುತ್ತಿರುವ ಸವಾಲುಗಳ ವಿರುದ್ಧ ಸ್ಥಿತಿಸ್ಥಾಪಕತ್ವವನ್ನು ನಿರ್ಮಿಸಲು ಬಯಸುವ ಇತರ ಕೃಷಿ ಸಮುದಾಯಗಳಿಗೆ ಅವರ ಪ್ರಯತ್ನಗಳು ಸ್ಫೂರ್ತಿಯಾಗಿವೆ. ಮುಂದುವರಿಯುವಿಕೆ, ನಿರಂತರ ನಾವೀನ್ಯತೆ, ನೀತಿ ಬೆಂಬಲ ಮತ್ತು ಸಾಮೂಹಿಕ ಕ್ರಿಯೆಯು ವಿವಿಧ ಕೃಷಿ-ಪರಿಸರ ವ್ಯವಸ್ಥೆಗಳಲ್ಲಿ ಈ ಸುಸ್ಥಿರ ಕೃಷಿ ಪದ್ಧತಿಗಳ ಹೆಚ್ಚಳಕ್ಕೆ ಕಾರಣವಾಗುತ್ತದೆ.

ಆಕರಗಳು

Mann, Rohit, Saini, Deepak & Sharma, Swati & Dhorde, Amit & Gupta, Anju., Paradoxical behaviour of rainfall and temperature over ecologically sensitive areas along the Western Ghats, 2023, 10.21203/ rs.3.rs-2581616/v1. Sabu, Sachu, Kuruvila, Anil & Manojkumar, K., Status of Production and Export of Indian Black Pepper, 2020 Georgina Menon, K., Venkateshwar Reddy, K., Boje Gowd, B.H., Paul Vijay, P., Jhansi, R., Pesticides and Climate Change Feedback Loop. In: Babaniyi, B.R., Babaniyi, E.E. (eds) The Interplay of Pesticides and Climate Change, 2025, Springer, Cham. https://doi. org/10.1007/978-3-031-81669-7_6


Jacob Jose
Manager – Business Development
PDS Organic Spices
(A unit of Peermade Development Society)
Kuttikkanam, Idukki district, Kerala, India.
E-mail: marketing@pdsorganicspices.co

ಆಂಗ್ಲ ಮೂಲ : ಲೀಸಾ ಇಂಡಿಯಾ; ಸಂಪುಟ :೨೭; ಸಂಚಿಕೆ : ೨ ; ಜೂನ್‌ ೨೦‌೨೫

Recent Posts

ಸುಸ್ಥಿರ ಮತ್ತು ಸಮಗ್ರ ಕೃಷಿ ಯಾಂತ್ರೀಕರಣ

ಸುಸ್ಥಿರ ಮತ್ತು ಸಮಗ್ರ ಕೃಷಿ ಯಾಂತ್ರೀಕರಣ

ಸಣ್ಣ ರೈತರಿಗೆ ದುಬಾರಿ ವೆಚ್ಚದ ಕಾರಣದಿಂದಾಗಿ ಕೃಷಿ ಯಂತ್ರಗಳ ಲಭ್ಯತೆ ಸೀಮಿತವಾಗಿರುತ್ತದೆ. ಆದ್ದರಿಂದ ಪರಿಸರ, ಸಾಮಾಜಿಕ ಮತ್ತು ಆರ್ಥಿಕ ಸಮತೋಲನವನ್ನು ಖಾತ್ರಿಪಡಿಸಿಕೊಳ್ಳುವಾಗ ಉತ್ಪಾದಕತೆಯನ್ನು ಹೆಚ್ಚಿಸುವ ಸುಸ್ಥಿರ ಯಾಂತ್ರೀಕರಣ ಮಾದರಿ ಅಗತ್ಯ. ಮಹಾಶಕ್ತಿ ಪ್ರತಿಷ್ಠಾನದ ಸುಸ್ಥಿರ ಕೃಷಿ ಯಾಂತ್ರೀಕರಣ ಉಪಕ್ರಮವು ಶ್ರಮವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಕೃಷಿ ಯಂತ್ರೋಪಕರಣಗಳನ್ನು ಒದಗಿಸುವಲ್ಲಿ ಯಶಸ್ವಿಯಾಗಿದೆ.

ಬದಲಾವಣೆಯ ಬೀಜಗಳ ಬಿತ್ತನೆ

ಬದಲಾವಣೆಯ ಬೀಜಗಳ ಬಿತ್ತನೆ

ಮಿಶ್ರ ಬೆಳೆ, ದೇಸಿ ಬೀಜಗಳು ಮತ್ತು ಸಮುದಾಯ ನೇತೃತ್ವದ ಕೃಷಿ ಪರಿಸರ ವಿಜ್ಞಾನವು ಸುಸ್ಥಿರ ಭವಿಷ್ಯದ ಕೀಲಿಕೈ ಆಗಿದೆ. ಅನಂತ್‌ ಅವರ ಪ್ರಯಾಣವು ಅಂತಹ ಒಂದು ಉದಾಹರಣೆಯಾಗಿದೆ.

ಬೋಡಿ ಆಧಾರಿತ ಸಮಗ್ರ ಕೃಷಿ ವ್ಯವಸ್ಥೆ- ಬುಡಕಟ್ಟು ಕುಟುಂಬಗಳಿಗೆ ವರದಾನ

ಬೋಡಿ ಆಧಾರಿತ ಸಮಗ್ರ ಕೃಷಿ ವ್ಯವಸ್ಥೆ- ಬುಡಕಟ್ಟು ಕುಟುಂಬಗಳಿಗೆ ವರದಾನ

ಮಹಾರಾಷ್ಟ್ರದಲ್ಲಿ ಜಾರಿಗೆ ತರಲಾದ ಬೋಡಿ ಆಧಾರಿತ ಸಮಗ್ರ ಕೃಷಿ ವ್ಯವಸ್ಥೆಯು ಸಣ್ಣ ರೈತರ ಜೀವನೋಪಾಯವನ್ನು ಹೆಚ್ಚಿಸಿದೆ. ಅದರ ವಿವಿಧ ಸಂಯೋಜಿತ ಘಟಕಗಳ ಮೂಲಕ, ಈ ಮಾದರಿಯು ಆದಾಯ, ಕುಟುಂಬದ ಪೋಷಣೆ, ಕೃಷಿ ಸ್ಥಿತಿಸ್ಥಾಪಕತ್ವ ಮತ್ತು ಸುಸ್ಥಿರತೆಯನ್ನು ಹೆಚ್ಚಿಸುತ್ತದೆ ಎನ್ನುವುದು ಸಾಬೀತಾಗಿದೆ.