CSISA-MEA ಯ ಬೆಂಬಲದೊಂದಿಗೆ ಯಶಸ್ವಿ ಯಂತ್ರೋಪಕರಣ ಪರಿಹಾರ ಪೂರೈಕೆದಾರರಾಗಿರುವ ಪ್ರೋಮಿಲಾ ಅವರ ಕಥೆಯು ಸಮುದಾಯದ ಹಲವು ಮಹಿಳೆಯರು ಕೃಷಿ ಮತ್ತು ಸಸಿಗಳನ್ನು ಬೆಳೆಸುವುದರಲ್ಲಿ ತೊಡಗಿಸಿಕೊಳ್ಳಲು ಪ್ರೋತ್ಸಾಹಿಸುತ್ತಿದೆ.
ಮೂವತ್ಮೂರು ವರ್ಷದ ಪ್ರೊಮಿಲಾ ರಾಣಿ ಮೊಂಡೋಲ್ ಬಾಂಗ್ಲಾದೇಶದ ಬಲಿಯಕಂಡಿ ಉಪಜಿಲ್ಲಾದಲ್ಲಿ ತಮ್ಮ ಗಂಡ, ನಾಲ್ವರು ಹೆಣ್ಣುಮಕ್ಕಳು ಮತ್ತು ಅತ್ತೆಯೊಂದಿಗೆ ವಾಸಿಸುತ್ತಿದ್ದಾರೆ. ಕುಟುಂಬದ ಪ್ರಮುಖ ಜೀವನೋಪಾಯ ಕೃಷಿಯಾಗಿದೆ. ಪ್ರೊಮಿಲಾ ಅವರು USAID-ನಿಧಿಯ ಫೀಡ್ ದಿ ಫ್ಯೂಚರ್ ದಕ್ಷಿಣ ಏಷ್ಯಾ-ಯಾಂತ್ರೀಕರಣ ವಿಸ್ತರಣಾ ಚಟುವಟಿಕೆ (CSISA-MEA) ಅಡಿಯಲ್ಲಿ ಯಶಸ್ವಿ ಯಂತ್ರೋಪಕರಣ ಪರಿಹಾರ ಪೂರೈಕೆದಾರರಾಗಿದ್ದಾರೆ (MSP). ಅವರು ಮತ್ತು ಅವರ ಗಂಡ ಕುಟುಂಬಕ್ಕಾಗಿ ಆದಾಯ ಗಳಿಸುವ ಮುಖ್ಯ ಸದಸ್ಯರು.
ಬಾಂಗ್ಲಾದೇಶದ ರಾಜಧಾನಿ ಢಾಕಾದಿಂದ ಸುಮಾರು 100 ಕಿಮೀಗಳಷ್ಟು ದೂರದಲ್ಲಿರುವ ರಾಜ್ಬರಿ ಜಿಲ್ಲೆಯಲ್ಲಿ, ಕೃಷಿಯು ಸಮುದಾಯದ ಪ್ರಮುಖ ಜೀವನೋಪಾಯವಾಗಿದೆ. ರೈತರು ಮೂರು ವಿಭಿನ್ನ ಋತುಗಳಲ್ಲಿ ಅಕ್ಕಿ, ಗೋಧಿ, ಜೋಳ, ಸೆಣಬು, ಸಾಸಿವೆ, ಮಸಾಲೆಗಳು ಮತ್ತು ತರಕಾರಿಗಳಂತಹ ಬೆಳೆಗಳನ್ನು ಬೆಳೆಸುತ್ತಾರೆ. 2014 ರಲ್ಲಿ, ಪ್ರೊಮಿಲಾ ಅವರ ಕುಟುಂಬವು ಕೇವಲ ಎರಡು ಎಕರೆ ಕೃಷಿಯೋಗ್ಯ ಭೂಮಿಯನ್ನು ಹೊಂದಿತ್ತು. ಅವರ ಗಂಡ ಕುಟುಂಬದ ಏಕೈಕ ಆದಾಯ ಗಳಿಸುವ ಸದಸ್ಯರಾಗಿದ್ದರು. ಅವರ ಸರಾಸರಿ ಮಾಸಿಕ 91 ಡಾಲರ್ ಆದಾಯ ಗಳಿಸುತ್ತಿದ್ದರು. ದಿನನಿತ್ಯದ ವೆಚ್ಚಗಳನ್ನು ಭರಿಸುವುದು ಸವಾಲಿನ ಸಂಗತಿಯಾಗಿತ್ತು. ಕುಟುಂಬದ ಆದಾಯವನ್ನು ಹೆಚ್ಚಿಸಲು, ಸೆಣಬು, ಜೋಳ, ಗೋಧಿ, ಸಾಸಿವೆ ಮತ್ತು ಮಸಾಲೆ ಬೆಳೆಗಳ ಬೀಜಗಳನ್ನು ನೆಡುವ ಮೂಲಕ ಬೆಳೆ ಉತ್ಪಾದನಾ ಚಟುವಟಿಕೆಗಳಲ್ಲಿ ತಮ್ಮ ಗಂಡನಿಗೆ ಸಹಾಯ ಮಾಡಲು ಪ್ರಾರಂಭಿಸಿದರು.
2014 ರಲ್ಲಿ, ಕುಟುಂಬವು CSISA-MI ಯೋಜನೆಯಲ್ಲಿ ತೊಡಗಿಸಿಕೊಂಡಿತು. ಆರಂಭದಲ್ಲಿ, ಅವರು ಪವರ್ ಟಿಲ್ಲರ್ ಹೊಂದಿದ್ದರು. ಈ ಯೋಜನೆಯು ಉಳುಮೆ ಮತ್ತು ಸಾಲು ಬಿತ್ತನೆಗಾಗಿ ಪವರ್ ಟಿಲ್ಲರ್-ಚಾಲಿತ ಸೀಡರ್ ಖರೀದಿಸಲು ಅವರಿಗೆ ನೆರವು ನೀಡಿತು. 2018 ರಲ್ಲಿ, ಪ್ರೋಮಿಲಾ ಸ್ಟಾರ್ಟರ್ ಕಿಟ್ ಹೊಂದಿದ ಪವರ್ ಟಿಲ್ಲರ್ ಚಾಲಿತ ಸೀಡರ್ (PTOS) ಯಂತ್ರವನ್ನು ಬಳಸಿಕೊಂಡು ಬೀಜ ಮಾಪನಾಂಕ ನಿರ್ಣಯ ಸೇರಿದಂತೆ ಸಾಲು ಬಿತ್ತನೆ ತಂತ್ರಗಳಲ್ಲಿ ತರಬೇತಿಯನ್ನು ಪಡೆದರು. ಗೋಧಿ, ಹೆಸರುಕಾಳು, ಎಳ್ಳು ಮತ್ತು ಸಾಸಿವೆ ಮುಂತಾದ ರಬಿ ಬೆಳೆಗಳನ್ನು ಸಾಲು ಬಿತ್ತನೆ ಮಾಡಲು ಪ್ರಾರಂಭಿಸಿದರು. ಖಾರಿಫ್ ಋತುವಿನಲ್ಲಿ, ಸೆಣಬನ್ನು ಬಿತ್ತಿದರು. 2019 ರಲ್ಲಿ CSISA-MEA ಆರಂಭಿಸಿದ ನಂತರ, ಪ್ರೋಮಿಲಾ ಭತ್ತದ ಕಸಿ ಕಾರ್ಯಾಚರಣೆಯ ಕುರಿತು ಪ್ರಾಯೋಗಿಕ ತರಬೇತಿ, ತನ್ನ ಸೇವಾ ವ್ಯವಹಾರ ವಿಸ್ತರಣೆಗಾಗಿ CSISA-MEA ಯಿಂದ ಒಂದು ಎಕರೆ ಯಾಂತ್ರೀಕೃತ ಭತ್ತದ ಕಸಿ ಪ್ರದರ್ಶನ, ಸಸಿ ಬೆಳೆಸುವ ತರಬೇತಿ, ಕೃಷಿ ಯಂತ್ರೋಪಕರಣಗಳ ಕಾರ್ಯಾಚರಣೆ ನಿರ್ವಹಣೆ ಮತ್ತು ದೋಷನಿವಾರಣೆಯ ಕುರಿತು ಎರಡು ದಿನಗಳ ತರಬೇತಿ ಮತ್ತು ಭತ್ತದ ಕಸಿ ಸೇವಾ ವ್ಯವಹಾರ ಮಾದರಿಗಳ ಕುರಿತು ಎರಡು ಕ್ಷೇತ್ರ ಭೇಟಿಗಳು ಸೇರಿದಂತೆ ಹಲವಾರು ಚಟುವಟಿಕೆಗಳಲ್ಲಿ ಭಾಗವಹಿಸಿದರು. CSISA-MEA ನೆರವಿನೊಂದಿಗೆ, ಅವರು ಮ್ಯಾಟ್ ಬಳಸಿ ಬೆಳೆಸಲಾಗುವ ಸಸಿಗಳು (ವಿಶೇಷ ಮ್ಯಾಟ್ ಅಥವಾ ಟ್ರೇಗಳಲ್ಲಿ ಬೆಳೆದ ಸಸಿಗಳು), ಉದ್ಯಮಿಗಳು, ರೈತರು ಮತ್ತು MSP ಗಳನ್ನು ಸಂಪರ್ಕಿಸಲು ಹಲವಾರು ಸಭೆಗಳನ್ನು ಆಯೋಜಿಸಿದರು, ಇದು ಅವರ ವ್ಯವಹಾರದ ವಿಸ್ತರಣೆಗೆ ಕಾರಣವಾಯಿತು. ಹೆಚ್ಚುವರಿಯಾಗಿ, CSISA-MEA ಅವರಿಗೆ ಕೃಷಿ ವಿಸ್ತರಣಾ ಇಲಾಖೆಯ ಸಂಪರ್ಕವನ್ನು ಒದಗಿಸಿತು. ಅಲ್ಲಿ ಅವರು 1,750 ಸಸಿ ಬೆಳೆಸುವ ಟ್ರೇಗಳು ಮತ್ತು ಮ್ಯಾಟ್ ಸೀಡ್ಲಿಂಗ್ಗೆ 750 ಕೆಜಿ ಬೀಜ ಬೆಂಬಲವನ್ನು ಪಡೆದರು. ಇದು ಅವರ ವ್ಯವಹಾರವನ್ನು ಗಮನಾರ್ಹವಾಗಿ ಬೆಳೆಸಿತು.
2023 ರಲ್ಲಿ, ಪ್ರೋಮಿಲಾ ಅಮಾನ್ ಋತುವಿಗೆ ಮುಂಚಿತವಾಗಿ (ಜುಲೈ ಮಧ್ಯದಿಂದ ನವೆಂಬರ್-ಡಿಸೆಂಬರ್ ಮಧ್ಯದವರೆಗೆ) 50% ಸರ್ಕಾರಿ ಸಬ್ಸಿಡಿಯೊಂದಿಗೆ ಭತ್ತದ ನಾಟಿ ಯಂತ್ರವನ್ನು ಖರೀದಿಸಿದರು. CSISA-MEA ಅವರಿಗೆ ಸರ್ಕಾರದ ಸಬ್ಸಿಡಿ ಪಡೆಯಲು ಸಹಾಯ ಮಾಡಿತು. VPKA ಫೌಂಡೇಶನ್ನೊಂದಿಗೆ 4% ಕಡಿಮೆ ಬಡ್ಡಿದರದಲ್ಲಿ ಸಾಲವನ್ನು ಪಡೆಯಲು ನೆರವು ನೀಡಿತು. ಇದರೊಂದಿಗೆ ಅನುಕೂಲಕರ ಮರುಪಾವತಿ ಯೋಜನೆಯನ್ನು ನೀಡಿತು.
ಅಮಾನ್ ಋತುವಿನಲ್ಲಿ(ಬಾಂಗ್ಲಾದಲ್ಲಿ ಮುಂಗಾರು ಸಮಯ), ಅವರು 20 ಹೆಕ್ಟೇರ್ ಭೂಮಿಯಲ್ಲಿ ಭತ್ತದ ಕಸಿ ಸೇವೆಗಳನ್ನು ಒದಗಿಸಿದರು. ಇದರಿಂದ ಸುಮಾರು 150 ರೈತರಿಗೆ ಪ್ರಯೋಜನವಾಯಿತು. ಆ ಋತುವಿನಲ್ಲಿ, ಅವರು ಒಟ್ಟು 1,640 ಡಾಲರ್ ಗಳಿಸಿದರು. ಇದರೊಂದಿಗೆ, 2023 ರಲ್ಲಿ, ರಬಿ ಋತುವಿನಲ್ಲಿ PTOS ಮೂಲಕ ಅಕ್ಕಿ, ಸೆಣಬು, ಗೋಧಿ, ಎಳ್ಳು ಮತ್ತು ಸಾಸಿವೆ ಸಾಲು ಬಿತ್ತನೆ ಮಾಡುವ ಮೂಲಕ ಸುಮಾರು 1,047 ಡಾಲರ್ ಗಳಿಸಿದರು. ಮೂರು ಬ್ಲಾಕ್ಗಳಲ್ಲಿ (ಶಾಲ್ಮಾರಾ, ಬಲ್ಯಕಂಡಿ ಮತ್ತು ರಾಜ್ಬರಿ ಜಿಲ್ಲೆಯ ನೊಬಪ್ಪುರ್) ರೈತರೊಂದಿಗೆ ಸಂಪರ್ಕ ಹೊಂದಿದ್ದು, ಭತ್ತದ ನಾಟಿ ಯಂತ್ರದ ಸೇವೆಗಳನ್ನು ನೀಡುತ್ತಾರೆ.
ಅವರು ಕೇವಲ MSP ಆಗಿ ಯಶಸ್ವಿಯಾಗಿಲ್ಲ. ಲಿಂಗಮಾನದಂಡಗಳನ್ನು ಮುರಿಯುವ ಮೂಲಕ ತನ್ನ ಸಮುದಾಯದ ಮಹಿಳೆಯರಿಗೆ ಸ್ಪೂರ್ತಿ ನೀಡಲು ಅವರು ಬದ್ಧವಾಗಿದ್ದಾರೆ. ಪ್ರಸ್ತುತ, ವಾರ್ಷಿಕ 2,276 ಡಾಲರ್ ಆದಾಯ ಮತ್ತು 1,184 ಡಾಲರ್ ಲಾಭಾಂಶದೊಂದಿಗೆ, ಸಮುದಾಯದ ನಾಯಕಿಯಾಗಿದ್ದು, ಇತರ 15 ಮಹಿಳೆಯರು ಕೃಷಿ ಮತ್ತು ಸಸಿ ಬೆಳೆಸುವ ಸೇವೆಗಳಲ್ಲಿ ತೊಡಗಿಸಿಕೊಳ್ಳಲು ಪ್ರೋತ್ಸಾಹಿಸುತ್ತಿದ್ದಾರೆ.
"ಕೇವಲ ಒಂದು ದಿನದ ನಾಟಿ ಮತ್ತು ಬಿತ್ತನೆ ಸೇವೆಯೊಂದಿಗೆ, ನನ್ನ ಮಗಳ ಟ್ಯುಟೋರಿಯಲ್ ವೆಚ್ಚವನ್ನು ಒಂದು ತಿಂಗಳು ಪೂರ್ತಿ ಭರಿಸಬಲ್ಲೆ. CSISA-MEA ಯ ಬೆಂಬಲವು MSP ಆಗಿ ನನ್ನನ್ನು ಹೆಚ್ಚು ಸ್ವಾವಲಂಬಿಯನ್ನಾಗಿ ಮಾಡಿದೆ. ಕುಟುಂಬದ ವೆಚ್ಚಗಳನ್ನು ಪೂರೈಸುವಲ್ಲಿ ನನ್ನ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ," ಎಂದು ಪ್ರೊಮಿಲಾ ಹೇಳುತ್ತಾರೆ.
ಪ್ರಸ್ತುತ, ಅವರ ಸಮುದಾಯದಲ್ಲಿ 15 ಮಹಿಳೆಯರು ನಾಟಿ ಮತ್ತು ಬೀಜ ಬಿತ್ತನೆ ಸೇವೆಗಳನ್ನು ನೀಡುತ್ತಿದ್ದಾರೆ. ಸುನೀತಾ ರಾಣಿ, ನಿಬಾ ರೈ, ರಾಕೋಲಿ, ದೀಪ್ತಿ, ಮಿತಾ ಮತ್ತು ಅಂಗೋಲಿ ಮುಂತಾದವರು ಅವರಿಂದ ಪ್ರೇರಿತರಾಗಿದ್ದಾರೆ. ಏಳು ಮಹಿಳೆಯರು ಈಗ ಹೊಲಗಳಲ್ಲಿ ಭತ್ತ ನಾಟಿ ಯಂತ್ರವನ್ನು ನಿರ್ವಹಿಸುತ್ತಿದ್ದು, ಇತರರು ಅದರಲ್ಲಿ ಆಸಕ್ತಿ ತೋರಿಸುತ್ತಿದ್ದಾರೆ. ಇದು ಪ್ರೋಮಿಲಾ ಸಮುದಾಯದಲ್ಲಿ ತಂದಿರುವ ಗಮನಾರ್ಹ ಸಕಾರಾತ್ಮಕ ಬದಲಾವಣೆಯಾಗಿದೆ.
ಅವರ ಪ್ರಭಾವವು ಅವರ ಸ್ವಂತ ಯಶಸ್ಸಿಗಿಂತ ದೊಡ್ಡದು. ಅವರು ಕೃಷಿಯಲ್ಲಿ ಮಹಿಳೆಯರ ಬಗ್ಗೆ ತಮ್ಮ ಸಮುದಾಯದ ಗ್ರಹಿಕೆಯಲ್ಲಿ ಸಕಾರಾತ್ಮಕ ಬದಲಾವಣೆಯನ್ನು ಉಂಟುಮಾಡಿದ್ದಾರೆ. ರಾಜ್ಬರಿ ಜಿಲ್ಲೆಯ MSP ನೆಟ್ವರ್ಕಿಂಗ್ ಸಮಿತಿಯ ಉಪಾಧ್ಯಕ್ಷರಾಗಿ, ತಮ್ಮ ಕುಟುಂಬದ ಯೋಗಕ್ಷೇಮಕ್ಕೆ ಮಾತ್ರವಲ್ಲದೆ ಬಾಂಗ್ಲಾದೇಶದಲ್ಲಿ ಮಹಿಳಾ ಸಬಲೀಕರಣಕ್ಕೂ ಕೊಡುಗೆ ನೀಡುವ ಮೂಲಕ ಜವಾಬ್ದಾರಿಗಳನ್ನು ನಿರ್ವಹಿಸುವುದನ್ನು ಮುಂದುವರೆಸಿದ್ದಾರೆ.
ಟಿಪ್ಪಣಿ: ಇದು ಮೂಲತಃ ಪ್ರಕಟವಾಗಿರುವ ವೆಬ್ ವಿಳಾಸ https://www. cimmyt.org/news/a-community-leader-in-baliakandiinspires- women-empowerment-in-agriculture-promilarani- mondol/
Asmaul Husna and Nur-A-Mahajabin Khan
ಆಂಗ್ಲ ಮೂಲ : ಲೀಸಾ ಇಂಡಿಯಾ; ಸಂಪುಟ :೨೭; ಸಂಚಿಕೆ : ೪ ; ಡಿಸೆಂಬರ್ ೨೦೨೫



