ಉತ್ತರಾಖಂಡದ ಅಲ್ಮೋರಾ ಜಿಲ್ಲೆಯಲ್ಲಿ ನಡೆದ ಪೈನ್ ನೀಡಲ್ ಬ್ರಿಕೆಟ್ ಉಪಕ್ರಮವು, ಹೆಚ್ಚುವರಿ ಪೈನ್ ಎಲೆಗಳ ಬಯೋಮಾಸ್ (ಸಸ್ಯಗಳು, ಪ್ರಾಣಿಗಳು ಮತ್ತು ಜೀವಿಗಳಿಂದ ದೊರೆಯುವ ನೈಸರ್ಗಿಕ ಹಾಗೂ ಸಾವಯವ ವಸ್ತುಗಳು. ಇದು ನವೀಕರಿಸಬಹುದಾದ ಇಂಧನ ಮೂಲವಾಗಿದ್ದು, ಶಾಖ, ವಿದ್ಯುತ್ ಹಾಗೂ ಇಂಧನ ಉತ್ಪಾದನೆಗೆ ಬಳಕೆಯಾಗುತ್ತದೆ.) ಕಾಳ್ಗಿಚ್ಚಿನ ಅಪಾಯಕ್ಕೆ ಕಾರಣವಾಗುವ ಮೂಲಕ ಪರಿಸರಕ್ಕೆ ಒಡ್ಡುತ್ತಿದ್ದ ಸವಾಲನ್ನು ಪರಿಹರಿಸಲು ಅದನ್ನು ಶುದ್ಧ-ಸುಡುವ ಬ್ರಿಕೆಟ್ಗಳನ್ನಾಗಿ ಉತ್ಪಾದಿಸುವ ಮೂಲಕ ಅಮೂಲ್ಯವಾದ ಸಂಪನ್ಮೂಲವಾಗಿ ಪರಿವರ್ತಿಸಿತು. ಇದು WEF-FEG ನೆಕ್ಸಸ್ ಚೌಕಟ್ಟಿನೊಳಗೆ ಪರಿಸರ ಮತ್ತು ಆರ್ಥಿಕ ಉದ್ದೇಶಗಳೊಂದಿಗೆ ಲಿಂಗ ಸಬಲೀಕರಣವನ್ನು ಪರಿಣಾಮಕಾರಿಯಾಗಿ ಸಂಯೋಜಿಸುವ ಮೂಲಕ ಸುಸ್ಥಿರ ಗ್ರಾಮೀಣ ಅಭಿವೃದ್ಧಿಯ ಸದೃಢ ಮಾದರಿಯಾಗಿ ಕಾರ್ಯನಿರ್ವಹಿಸುತ್ತದೆ.
ಹಿಮಾಲಯದ ಮಧ್ಯಭಾಗದಲ್ಲಿರುವ ಉತ್ತರಾಖಾಂಡ ಪ್ರದೇಶದಲ್ಲಿನ ಕೃಷಿ-ಪರಿಸರ ಹಾಗೂ ಸಮಾಜೋಆರ್ಥಿಕ ಸವಾಲುಗಳು ಸಂಕೀರ್ಣವಾಗಿವೆ. ಪರಿಸರದ ದೃಷ್ಟಿಯಿಂದ ಈ ಭೂಭಾಗದಲ್ಲಿ ಚಿರ್ ಪೈನ್ (ಪೈನಸ್ ರಾಕ್ಸ್ಬರ್ಗ್ಹಿ ಸರ್ಗ್) ಮರಗಳ ಕಾಡುಗಳಿವೆ. ಈ ಕಾಡುಗಳಲ್ಲಿ ವೈವಿಧ್ಯಮಯವಾದ ಓಕ್ ಮತ್ತು ಅಗಲವಾದ ಎಲೆಗಳ ಜಾತಿಯ ಮರಗಳನ್ನು ಬದಲಿಸಿದೆ. ಈ ಬದಲಾವಣೆಯು ಆಳವಾದ ಪರಿಣಾಮವನ್ನು ಬೀರಿದೆ. ಸ್ಥಳೀಯವಾಗಿ ಪಿರುಲ್ ಎಂದು ಕರೆಯಲಾಗುವ ಈ ಪೈನ್ ಮರದ ಎಲೆಗಳು ಕಾಡಿನ ನೆಲದ ಮೇಲೆ ದಟ್ಟವಾದ ಹೈಡ್ರೋಫೋಬಿಕ್ ಪದರವನ್ನು ರೂಪಿಸುತ್ತವೆ. ಈ ಪದರವು ನೀರು ಮಣ್ಣಿನೊಳಗೆ ಇಳಿಯದಂತೆ ತಡೆಯುತ್ತದೆ. ಇದರಿಂದಾಗಿ ಅಕ್ಕಪಕ್ಕದ ಹೊಲಗಳಲ್ಲಿ ನೀರಿನ ಕೊರತೆಯನ್ನು ಉಲ್ಬಣಗೊಳಿಸುತ್ತದೆ ಮತ್ತು ಮಣ್ಣಿನ ಸವೆತ ಹೆಚ್ಚಾಗುವಂತೆ ಮಾಡುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ, ಹೀಗೆ ಸಂಗ್ರಹವಾದ ಉದುರಿಬಿದ್ದ ಎಲೆಗಳು ಜೀವವೈವಿಧ್ಯತೆಯನ್ನು ನಾಶಮಾಡುವ, ಅಪಾರ ಪ್ರಮಾಣದ ಇಂಗಾಲವನ್ನು ಬಿಡುಗಡೆ ಮಾಡುವ ಮತ್ತು ಮಣ್ಣಿನ ಆರೋಗ್ಯಕ್ಕೆ ಹಾನಿಯುಂಟುಮಾಡುವ ವಿನಾಶಕಾರಿ ವಾರ್ಷಿಕ ಕಾಳ್ಗಿಚ್ಚಿಗೆ ಉರುವಲನ್ನು ಒದಗಿಸುತ್ತದೆ.
ಸಾಮಾಜಿಕವಾಗಿ ಈ ಗ್ರಾಮೀಣ ಆರ್ಥಿಕತೆಯು ಕೃಷಿ ಹಾಗೂ ಅರಣ್ಯ ಸಂಪನ್ಮೂಲವನ್ನು ಆಧರಿಸಿದೆ. ಈ ವ್ಯವಸ್ಥೆಯು ಹೆಚ್ಚಾಗಿ ಮಹಿಳೆಯರ ಶ್ರಮವನ್ನು ಆಧರಿಸಿದೆ. ಕೃಷಿ ಹಾಗೂ ಜಾನುವಾರು ನಿರ್ವಹಣೆ ಎರಡನ್ನು ಮಾಡುವುದರೊಂದಿಗೆ ಉರುವಲನ್ನು ಸಂಗ್ರಹಣೆಯಂತಹ ಕಠಿಣ ಕೆಲಸದಲ್ಲಿ ಗಂಟೆಗಟ್ಟಲೇ ತೊಡಗಿಸಿಕೊಳ್ಳಬೇಕಾಗುತ್ತದೆ. ಇದು ಉತ್ಪಾದಕತೆಯ ಅವಕಾಶಗಳನ್ನು ಕುಂಠಿತಗೊಳಿಸುತ್ತದೆ. ಅವರ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಗಂಡಸರು ಕೆಲಸ ಹುಡುಕಿ ವಲಸೆ ಹೋಗುವುದರಿಂದ ಕೃಷಿಯು ಮಹಿಳಾಕರಣಗೊಂಡಿದೆ. ಇದು ಅವರ ಜವಾಬ್ದಾರಿಯನ್ನು ಹೆಚ್ಚಿಸಿದೆಯೇ ಹೊರತು ನಿರ್ಧಾರ ತೆಗೆದುಕೊಳ್ಳುವ ಅಧಿಕಾರವನ್ನಾಗಲಿ, ಸಂಪನ್ಮೂಲಗಳನ್ನು ಬಳಸುವ ಅವಕಾಶವನ್ನಾಗಲಿ ನೀಡಿಲ್ಲ. ಪರಿಸರದ ಅವನತಿಯು ಸೃಷ್ಟಿಸಿದ ವಿಷವರ್ತುಲವು ಮಹಿಳೆಯ ಮೇಲಿನ ಭಾರವನ್ನು ಹೆಚ್ಚಿಸಿ ಭೂಮಿಯ ಸುಸ್ಥಿರ ನಿರ್ವಹಣೆಯಲ್ಲಿ ತೊಡಗಿಕೊಳ್ಳುವ ಅವರ ಸಾಮರ್ಥ್ಯವನ್ನು ನಿರ್ಬಂಧಿಸಿದೆ.
ಕಾರ್ಯತಂತ್ರದ ವಿಧಾನ: ಒಂದು ಸಂಯೋಜಿತ ನಂಟು
ಸಾಂಪ್ರದಾಯಿಕ ಅಭಿವೃದ್ಧಿ ಪ್ರಯತ್ನಗಳು ಸಾಮಾನ್ಯವಾಗಿ ಕಾಡ್ಗಿಚ್ಚು, ಗ್ರಾಮೀಣ ಇಂಧನ ಮತ್ತು ಮಹಿಳೆಯರ ಜೀವನೋಪಾಯದ ಈ ಸಮಸ್ಯೆಗಳನ್ನು ಪ್ರತ್ಯೇಕವಾಗಿ ಪರಿಹರಿಸುತ್ತವೆ. ಉತ್ತರಾಖಂಡದ ಗ್ರಾಮೀಣ ಜನರಲ್ಲಿ ಉದ್ಯೋಗ ಮತ್ತು ಆದಾಯ ಉತ್ಪಾದನೆಗಾಗಿ ಪರಿಸರ ಸ್ನೇಹಿ ಶಕ್ತಿಯನ್ನು ಉತ್ತೇಜಿಸಲು ಚಿರ್ ಪೈನ್ ಎಲೆ ಆಧಾರಿತ ಜೈವಿಕ-ಬ್ರಿಕೆಟ್ಗಳ ತಂತ್ರಜ್ಞಾನದ ಪ್ರದರ್ಶನ ಮತ್ತು ವಿಸ್ತರಣೆಯ ಮೇಲೆ ಗಮನ ಕೇಂದ್ರೀಕರಿಸುವ UCOST (ಉತ್ತರಾಖಂಡ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ) ಅನುದಾನಿತ ಯೋಜನೆಯನ್ನು ಜಿ.ಬಿ. ಪಂತ್ ರಾಷ್ಟ್ರೀಯ ಹಿಮಾಲಯನ್ ಪರಿಸರ ಸಂಸ್ಥೆ (GBPNIHE) 2022 ರಿಂದ 2024 ರವರೆಗೆ ಜಾರಿಗೆ ತಂದಿತು. ಇದು ತನ್ನ ಕಾರ್ಯತಂತ್ರವಾಗಿ ಸಂಯೋಜಿತ ವಿಧಾನವನ್ನು ಅಳವಡಿಸಿಕೊಂಡಿದೆ. ಸಾಮಾನ್ಯ ಸಮಸ್ಯೆಯಾದ ಪೈನ್ ಎಲೆಗಳು ಸ್ವತಃ ಪರಿಹಾರವಾಗಬಹುದು ಎಂಬ ಒಳನೋಟವನ್ನು ಆಧರಿಸಿ ಇದನ್ನು ನಿರ್ಮಿಸಲಾಗಿದೆ. ತಂತ್ರವು ನಾಲ್ಕು ಪ್ರಮುಖ ಸ್ತಂಭಗಳ ಮೇಲೆ ನಿಂತಿದೆ: ಸುಲಭವಾಗಿ ಕರಗತ ಮಾಡಿಕೊಳ್ಳಬಹುದಾದ ಸೂಕ್ತವಾದ, ಕಡಿಮೆ ವೆಚ್ಚದ ತಂತ್ರಜ್ಞಾನವನ್ನು ನಿಯೋಜಿಸುವುದು; ಬದಲಾವಣೆಯ ಪ್ರಾಥಮಿಕ ಏಜೆಂಟ್ಗಳಾಗಿ ಮಹಿಳೆಯರನ್ನು ಕೇಂದ್ರವಾಗಿರಿಸಿಕೊಳ್ಳುವುದು; ಗುಂಪುಗಳು ಮತ್ತು ಸಹಕಾರಿ ಸಂಸ್ಥೆಗಳ ಮೂಲಕ ಸಾಮೂಹಿಕ ಕ್ರಿಯೆಯನ್ನು ಬೆಳೆಸುವುದು; ಯೋಜನೆಯ ಜೀವಿತಾವಧಿಯನ್ನು ಮೀರಿ ಆರ್ಥಿಕ ಕಾರ್ಯಸಾಧ್ಯತೆಯನ್ನು ಖಚಿತಪಡಿಸಿಕೊಳ್ಳಲು ಪ್ರಾರಂಭದಿಂದಲೇ ಉದ್ಯಮ ದೃಷ್ಟಿಕೋನವನ್ನು ಹುಟ್ಟುಹಾಕುವುದು.
ಉಪಕ್ರಮಗಳು: ಪ್ರದರ್ಶನದಿಂದ ಉದ್ಯಮದವರೆಗೆ
ಯೋಜನೆಯ ಅನುಷ್ಠಾನವು ಮೂರು ಹಂತಗಳಲ್ಲಿ ನಡೆಯಿತು. ಮೊದಲ ಹಂತವು ವ್ಯಾಪಕವಾದ ಸಾಮರ್ಥ್ಯ ವೃದ್ಧಿಯನ್ನು ಒಳಗೊಂಡಿತ್ತು. ಅಲ್ಮೋರಾ ಜಿಲ್ಲೆಯ 30 ಹಳ್ಳಿಗಳಲ್ಲಿ 835 ವ್ಯಕ್ತಿಗಳಿಗೆ ಜೈವಿಕ-ಬ್ರಿಕೆಟ್ಗಳನ್ನು ತಯಾರಿಸುವ ತರಬೇತಿ ನೀಡುವುದರ ಮೇಲೆ ಕೇಂದ್ರಿತವಾಗಿತ್ತು. ಈ ಪ್ರಕ್ರಿಯೆಯು ಒಣ ಪೈನ್ ಎಲೆಗಳನ್ನು ಸಂಗ್ರಹಿಸುವುದು, ನಿಯಂತ್ರಿತ ಆಮ್ಲಜನಕರಹಿತ ಹೊಂಡಗಳಲ್ಲಿ ಇದ್ದಿಲು ಉತ್ಪಾದಿಸಲು ಕಾರ್ಬೊನೈಸ್ ಮಾಡುವುದು ಮತ್ತು ನಂತರ ಸರಳ ಕಬ್ಬಿಣದ ಅಚ್ಚನ್ನು ಬಳಸಿ ಜೇಡಿಮಣ್ಣಿನ ಬೈಂಡರ್ನೊಂದಿಗೆ ಇದ್ದಿಲನ್ನು ಸಂಕುಚಿತಗೊಳಿಸುವುದನ್ನು ಒಳಗೊಂಡಿತ್ತು (ಚಿತ್ರ 1). ತರಬೇತಿ ಪಡೆದವರಲ್ಲಿ 66% ಮಹಿಳೆಯರಿದ್ದರು. ಈ ತಂತ್ರಜ್ಞಾನವು ಇಂಧನ ಬಿಕ್ಕಟ್ಟಿನಿಂದ ತೊಂದರೆಗೆ ಒಳಗಾದವರನ್ನು ತಲುಪುವಂತೆ ಖಚಿತಪಡಿಸಿಕೊಂಡರು.
ಎರಡನೇ ಹಂತವು ಉಪಕ್ರಮದ ವೈಜ್ಞಾನಿಕ ಮತ್ತು ಆರ್ಥಿಕ ಅಡಿಪಾಯಗಳನ್ನು ಬಲಪಡಿಸುವುದನ್ನು ಒಳಗೊಂಡಿತ್ತು. ಇದರಲ್ಲಿ ಇಂಧನದ ದಕ್ಷತೆ ಮತ್ತು ಸುರಕ್ಷತೆಯನ್ನು ಮೌಲ್ಯೀಕರಿಸುವುದು ಮತ್ತು ಉದ್ಯಮದ ಕಾರ್ಯಸಾಧ್ಯತೆಯನ್ನು ದೃಢಪಡಿಸುವ ವಿವರವಾದ ಆರ್ಥಿಕ ವಿಶ್ಲೇಷಣೆಯನ್ನು ನಡೆಸುವುದು, ಪ್ರತಿ ಬ್ಯಾಚ್ಗೆ ರೂ. 165 ನಿವ್ವಳ ಲಾಭ ಮತ್ತು 1.49 ರಷ್ಟು ಲಾಭ-ವೆಚ್ಚ ಅನುಪಾತವನ್ನು ಪಡೆಯುವುದು ಸೇರಿತ್ತು. ಮುಖ್ಯವಾಗಿ, ಸ್ಥಳೀಯ ಮಾಲೀಕತ್ವ ಮತ್ತು ನಿರಂತರತೆಯನ್ನು ಖಚಿತಪಡಿಸಿಕೊಳ್ಳಲು ಆರು ಮಹಿಳೆಯರಿಗೆ ಮಾಸ್ಟರ್ ತರಬೇತುದಾರರಾಗಿ ತರಬೇತಿ ನೀಡಲಾಯಿತು (ಚಿತ್ರ 2). ಮೂರನೇ ಹಂತವು ಬೆಂಬಲಿತ ಪರಿಸರ ವ್ಯವಸ್ಥೆಯನ್ನು ರಚಿಸುವುದರ ಮೇಲೆ ಕೇಂದ್ರೀಕರಿಸಿದೆ. ಬ್ರಿಕೆಟ್ಗಳ ಮಾರಾಟವನ್ನು ಸುಗಮಗೊಳಿಸಲು ಮತ್ತು ಉಪಕ್ರಮವನ್ನು ಸ್ಥಳೀಯ ಆರ್ಥಿಕತೆಯೊಳಗೆ ಅಳವಡಿಸಲು NGOಗಳು, ಸರ್ಕಾರಿ ಇಲಾಖೆಗಳು ಮತ್ತು ಖಾಸಗಿ ಮಾರಾಟಗಾರರೊಂದಿಗೆ 30 ಸದೃಢ ಸಂಪರ್ಕಗಳನ್ನು ರೂಪಿಸಲಾಯಿತು.
ಪರಿಣಾಮ: ಬಹು ಆಯಾಮ ರೂಪಾಂತರ
ಭೌತಿಕ, ಸಾಮಾಜಿಕ, ಆರ್ಥಿಕ ಮತ್ತು ಪರಿಸರ ಕ್ಷೇತ್ರಗಳಲ್ಲಿ ಇದರ ಪರಿಣಾಮವು ಪ್ರತಿಫಲಿಸಿತು. ಪರಿಸರ ವಿಜ್ಞಾನದ ದೃಷ್ಟಿಯಿಂದ, ಒಣ ಪೈನ್ ಎಲೆಗಳ ವ್ಯವಸ್ಥಿತ ಸಂಗ್ರಹವು ಅರಣ್ಯಗಳ ಮೇಲಿನ ಇಂಧನ ಹೊರೆಗಳನ್ನು ನೇರವಾಗಿ ಕಡಿಮೆ ಮಾಡಿತು. ಕಾಡ್ಗಿಚ್ಚಿನ ಅಪಾಯವನ್ನು ತಗ್ಗಿಸಿತು ಮತ್ತು ಉರುವಲಿಗೆ ಪರ್ಯಾಯವನ್ನು ಒದಗಿಸಿತು. ಇದು ಕಾಡುಗಳ ಮೇಲಿನ ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡಿತು. ಸಾಮಾಜಿಕವಾಗಿ, ಆಳವಾದ ಪರಿಣಾಮ ಬೀರಿತು (ಚಿತ್ರ 3). ಯೋಜನೆಯ ನಂತರದ ಸಮೀಕ್ಷೆಗಳು ಮಹಿಳೆಯರ ಆತ್ಮ ವಿಶ್ವಾಸ ಮತ್ತು ಆರ್ಥಿಕ ಸ್ಥಿತಿಯಲ್ಲಿ 100% ಹೆಚ್ಚಳವನ್ನು ಬಹಿರಂಗಪಡಿಸಿದವು. 87.5% ರಷ್ಟು ಜನರು ತಮ್ಮ ಮನೆಗಳಲ್ಲಿ ಮತ್ತು ಉದ್ಯಮಶೀಲತೆಯಲ್ಲಿ ನಿರ್ಧಾರ ತೆಗೆದುಕೊಳ್ಳುವ ಶಕ್ತಿ ಹೆಚ್ಚಿರುವುದನ್ನು ಗುರುತಿಸಿದರು. ಸಮುದಾಯ ಅರಣ್ಯ ನಿರ್ವಹಣೆ ಮತ್ತು ಗ್ರಾಮ ಸಭೆಗಳಲ್ಲಿ ಮಹಿಳೆಯರ ಭಾಗವಹಿಸುವಿಕೆಯಲ್ಲಿ ಗಮನಾರ್ಹ ಏರಿಕೆ ಕಂಡುಬಂದಿದೆ.
ಆರ್ಥಿಕವಾಗಿ, ಈ ಉಪಕ್ರಮವು ಹೊಸ ಆದಾಯದ ಮೂಲವನ್ನು ಒದಗಿಸಿತು (ಕೋಷ್ಟಕ 1). 30 ಪಾಲುದಾರರನ್ನು ಗಮನಿಸಿದಾಗ ಅವರ ಒಟ್ಟು ಆದಾಯದಲ್ಲಿ ಸುಮಾರು 50% ಹೆಚ್ಚಳ ಕಂಡುಬಂದಿದೆ. ವೈಯಕ್ತಿಕ ಲಾಭವು 8% ರಿಂದ 100% ವರೆಗೆ ಇತ್ತು. ಮಹಿಳೆಯರು ಸ್ಥಳೀಯ ಮನೆಗಳು, ಕೆಫೆಗಳು ಮತ್ತು ಪ್ರವಾಸಿಗರಿಗೆ ಬ್ರಿಕೆಟ್ಗಳನ್ನು ಮಾರಾಟ ಮಾಡುವ ಮೂಲಕ ತಿಂಗಳ ಗಳಿಕೆಯನ್ನು ಗಳಿಸಲು ಪ್ರಾರಂಭಿಸಿದರು. ತ್ಯಾಜ್ಯ ಉತ್ಪನ್ನವನ್ನು ಮೌಲ್ಯಯುತ ಸರಕಾಗಿ ಪರಿವರ್ತಿಸಿದರು. ಸ್ಥಳೀಯ ಉದ್ಯಮಶೀಲತೆಯ ಮನೋಭಾವವನ್ನು ಬೆಳೆಸಿದರು.
ಕೋಷ್ಟಕ 1: ಅಳವಡಿಸಿಕೊಳ್ಳಲಾದ ಲಿಂಗ ಸಂಬಂಧಿ ಹಸ್ತಕ್ಷೇಪದ ಯಶಸ್ಸಿನ ಸೂಚಕಗಳ ಪ್ರದರ್ಶನ
ಸೂಚಕ | ಉತ್ಪಾದನೆ | ಫಲಿತಾಂಶ | WEF-FEG ನೆಕ್ಸಸ್ |
ತರಬೇತಿ ಪಡೆದ ಒಟ್ಟು ಪ್ರಶಿಕ್ಷಣಾರ್ಥಿಗಳು | 975 (649 ಹೆಂಗಸರು, 326 ಗಂಡಸರು) | ವರ್ಧಿತ ಸಮುದಾಯ ಕೌಶಲ್ಯ ಮತ್ತು ಸಾಮರ್ಥ್ಯ | ಮಹಿಳೆಯರ ಭಾಗವಹಿಸುವಿಕೆ (66.6%) ಸಬಲೀಕರಣ ಮತ್ತು ಸಾಮಾಜಿಕ ಸೇರ್ಪಡೆಯನ್ನು ಹೆಚ್ಚಿಸುತ್ತದೆ (ಮಹಿಳೆಯರು, ಲಿಂಗ) |
ನಡೆಸಲಾದ ತರಬೇತಿ ಅವಧಿಗಳು | ಸುಮಾರು 50 | ಸುಧಾರಿತ ಜ್ಞಾನ ವರ್ಗಾವಣೆ ಮತ್ತು ದತ್ತು | ಮಹಿಳಾ ಕೇಂದ್ರಿತ ತರಬೇತಿಯು ಲಿಂಗ ಸಮಾನತೆಯನ್ನು ಉತ್ತೇಜಿಸುತ್ತದೆ (ಮಹಿಳೆಯರು, ಲಿಂಗ) |
ಒಳಗೊಂಡ ಹಳ್ಳಿಗಳು | ಅಲ್ಮೋರಾದ ಹಲವು ಬ್ಲಾಕ್ಗಳಲ್ಲಿ 30 | ವಿಶಾಲ ಭೌಗೋಳಿಕ ಪ್ರಭಾವ | ವೈವಿಧ್ಯಮಯ ಕ್ಷೇತ್ರಗಳಲ್ಲಿ ಮಹಿಳೆಯರು ಪ್ರವೇಶ ಮತ್ತು ಪ್ರಯೋಜನವನ್ನು ಪಡೆಯುತ್ತಾರೆ (ಮಹಿಳೆಯರು, ಲಿಂಗ) |
ಪ್ರತಿ ಬ್ಯಾಚಿನ ಪೈನ್ ಎಲೆಗಳ ಬಯೋಮಾಸ್ | 30 ಕೆಜಿ ಕಚ್ಚಾ ವಸ್ತುವಿನಿಂದ 7.2 ಕೆಜಿ ಇದ್ದಿಲು ಉತ್ಪತ್ತಿಯಾಗುತ್ತದೆ. | ಬಯೋಮಾಸ್ ಅನ್ನು ಶಕ್ತಿಯ ಉತ್ಪನ್ನವಾಗಿ ಪರಿವರ್ತನೆ | ಸಂಗ್ರಹಣೆ ಮತ್ತು ಸಂಸ್ಕರಣೆಯಲ್ಲಿ ತೊಡಗಿರುವ ಮಹಿಳೆಯರು ಜೀವನೋಪಾಯ ಹೆಚ್ಚಳ (ಮಹಿಳೆಯರು, ಶಕ್ತಿ) |
ಪ್ರತಿ ಬ್ಯಾಚ್ಗೆ ಒಟ್ಟು ಬ್ರಿಕೆಟ್ಗಳು | 36 | ನವೀಕರಿಸಬಹುದಾದ ಇಂಧನ ಮೂಲ | ಉತ್ಪಾದನೆಯಲ್ಲಿ ಮಹಿಳೆಯರ ಪಾತ್ರವು ಇಂಧನ ಲಭ್ಯತೆ ಮತ್ತು ಆದಾಯವನ್ನು ಬೆಂಬಲಿಸುತ್ತದೆ (ಮಹಿಳೆಯರು, ಇಂಧನ) |
ಒಂದು ಬ್ಯಾಚ್ಗೆ ಬೇಕಾಗುವ ಸಮಯ | 4.3 ಗಂಟೆಗಳು | ಪರಿಣಾಮಕಾರಿ ಉತ್ಪಾದನಾ ಚಕ್ರ | ಮಹಿಳೆಯರು ಮನೆಕೆಲಸದೊಂದಿಗೆ ದುಡಿಮೆಯನ್ನು ಸರಿದೂಗಿಸುತ್ತಾರೆ(ಮಹಿಳೆಯರು, ಶಕ್ತಿ) |
ಪ್ರತಿ ಬ್ಯಾಚ್ನ ನಿವ್ವಳ ಲಾಭ | ರೂ. 165 | ಆದಾಯ ಉತ್ಪಾದನೆ | ಮಹಿಳೆಯರ ಆರ್ಥಿಕ ಸಬಲೀಕರಣ ಮತ್ತು ಆರ್ಥಿಕ ಸ್ವಾಯತ್ತತೆಯನ್ನು ಹೆಚ್ಚಿಸುತ್ತದೆ (ಮಹಿಳೆಯರು, ಆಹಾರ) |
ಒಂದು ಬ್ರಿಕೆಟ್ನ ಮಾರಾಟದ ಬೆಲೆ | ರೂ. 10 | ಕೈಗೆಟುಕುವ ಇಂಧನ ಆಯ್ಕೆ | ಮಹಿಳೆಯರನ್ನು ಉದ್ಯಮಿಗಳು ಮತ್ತು ಗ್ರಾಹಕರಾಗಲು ಬೆಂಬಲ ನೀಡುತ್ತದೆ (ಮಹಿಳೆಯರು, ಇಂಧನ) |
ಒಟ್ಟು ಆದಾಯದಲ್ಲಿನ ಏರಿಕೆ ವರದಿ | ಒಟ್ಟು ರೂ. 445,642 | ಸುಧಾರಿತ ಜೀವನೋಪಾಯಗಳು | ಮಹಿಳೆಯರ ಹೆಚ್ಚಿದ ಆದಾಯವು ಕುಟುಂಬದ ಆಹಾರ ಭದ್ರತೆ ಮತ್ತು ಯೋಗಕ್ಷೇಮವನ್ನು ಸುಧಾರಿಸುತ್ತದೆ (ಮಹಿಳೆಯರು, ಆಹಾರ) |
ಕಾಡ್ಗಿಚ್ಚಿನ ಘಟನೆಗಳಲ್ಲಿ ಕಡಿತ | 70% ವರೆಗೆ ಕಡಿತ ಸಂಭವನೀಯತೆ | ವರ್ಧಿತ ಪರಿಸರ ವ್ಯವಸ್ಥೆಯ ಸುರಕ್ಷತೆ | ಬೆಂಕಿಯ ಅಪಾಯ ತಗ್ಗಿಸುವಿಕೆಯಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ನೈಸರ್ಗಿಕ ಸಂಪನ್ಮೂಲಗಳನ್ನು ಸಂರಕ್ಷಿಸುತ್ತದೆ (ಮಹಿಳೆಯರು, ಇಂಧನ, ಪರಿಸರ ವ್ಯವಸ್ಥೆಗಳು, ಅರಣ್ಯಗಳು) |
ಬ್ರಿಕೆಟ್ಗಳ ಕ್ಯಾಲೋರಿಫಿಕ್ ಮೌಲ್ಯ | >2500 ಕಿಲೋಕ್ಯಾಲರಿ/ಕೆ.ಜಿ. | ಸೂಕ್ತವಾದ ಶುದ್ಧ-ಉರುವಲು ಇಂಧನ | ಮಹಿಳೆಯರು ಮುಖ್ಯಸ್ಥರಾಗಿರುವ ಕುಟುಂಬಗಳ ಆರೋಗ್ಯ ಸುಧಾರಿಸುತ್ತದೆ (ಮಹಿಳೆಯರು, ಇಂಧನ, ಅರಣ್ಯ) |
ಬೂದಿಯ ಬಳಕೆ | ಸಾವಯವ ಗೊಬ್ಬರ ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸುತ್ತದೆ | ಮಣ್ಣಿನ ಪೋಷಕಾಂಶಗಳ ಚಕ್ರ ಮತ್ತು ಫಲವತ್ತತೆ ಸುಧಾರಣೆ | ಸುಸ್ಥಿರ ಕೃಷಿಯೊಂದಿಗೆ ಮಹಿಳಾ ರೈತರಿಗೆ ಬೆಂಬಲ ನೀಡುತ್ತದೆ (ಮಹಿಳೆಯರು, ಆಹಾರ, ಪರಿಸರ ವ್ಯವಸ್ಥೆಗಳು) |
ಯಶಸ್ಸಿನ ಚಾಲಕ: ಪರಿಸರ ವ್ಯವಸ್ಥೆಯ ಸಂರಕ್ಷಣೆ ಮತ್ತು ನೈಸರ್ಗಿಕ ಸಂಪನ್ಮೂಲ ನಿರ್ವಹಣೆಯಲ್ಲಿ ಸಾಮಾಜಿಕ ಒಳಗೊಳ್ಳುವಿಕೆ.
ಈ ಹಸ್ತಕ್ಷೇಪವು ಕಾಡಿನ ಬೆಂಕಿಯ ಅಪಾಯವನ್ನು ಕಡಿಮೆ ಮಾಡಿತು ಮತ್ತು ಮಣ್ಣಿನ ಆರೋಗ್ಯವನ್ನು ಹೆಚ್ಚಿಸುವುದರೊಂದಿಗೆ ಇಂಗಾಲ ಬೇರ್ಪಡಿಕೆ, ಆವಾಸಸ್ಥಾನ ಸಂರಕ್ಷಣೆ ಮತ್ತು ಮಣ್ಣಿನ ಸ್ಥಿರೀಕರಣದಂತಹ ಪ್ರಮುಖ ಪರಿಸರ ವ್ಯವಸ್ಥೆಯ ಸೇವೆಗಳನ್ನು ಒದಗಿಸಿತು. ಒಟ್ಟಾರೆ ಜೀವವೈವಿಧ್ಯ ಮತ್ತು ಪರಿಸರ ಸಮತೋಲನವನ್ನು ಬೆಂಬಲಿಸಿತು. ಇದರೊಂದಿಗೆ, ವಾಯು ಮಾಲಿನ್ಯ ಮತ್ತು ಆರೋಗ್ಯ ಅಪಾಯಗಳನ್ನು ಕಡಿಮೆ ಮಾಡುವ ಮೂಲಕ ಸಾಂಸ್ಕೃತಿಕ ಸೇವೆಗಳನ್ನು ಸುಧಾರಿಸಿತು. ಅರಣ್ಯದ ಸ್ಥಿತಿಸ್ಥಾಪಕತ್ವವನ್ನು ಬಲಪಡಿಸುವ ಮೂಲಕ, ಸೂಕ್ಷ್ಮ ಹವಾಮಾನವನ್ನು ನಿಯಂತ್ರಿಸುವ ಮೂಲಕ ಮತ್ತು ಬೆಂಕಿ ಮತ್ತು ಬರಗಾಲದಂತಹ ಹವಾಮಾನ ಪರಿಣಾಮಗಳನ್ನು ದುರ್ಬಲಗೊಳಿಸಿ ಅವುಗಳನ್ನು ಕಡಿಮೆ ಮಾಡುವ ಮೂಲಕ ಪರಿಸರ ವ್ಯವಸ್ಥೆ ಆಧಾರಿತ ಹೊಂದಾಣಿಕೆಗೆ (EbA) ಕೊಡುಗೆ ನೀಡಿದೆ. ಈ ಎಲ್ಲ ಪ್ರಯೋಜನಗಳು ಹವಾಮಾನ ಸ್ಥಿತಿಸ್ಥಾಪಕತ್ವ, ಪರಿಸರ ಸುಸ್ಥಿರತೆ ಮತ್ತು ಸಮುದಾಯ ಯೋಗಕ್ಷೇಮವನ್ನು ಬೆಳೆಸುವಲ್ಲಿ ಹಸ್ತಕ್ಷೇಪದ ಪಾತ್ರವನ್ನು ಎತ್ತಿ ತೋರಿಸುತ್ತವೆ. ಪರಿಸರ ವ್ಯವಸ್ಥೆ ಆಧಾರಿತ ವಿಧಾನಗಳ ಮೂಲ ತತ್ವಗಳೊಂದಿಗೆ ಹೊಂದಿಕೊಳ್ಳುತ್ತವೆ.
ಈ ಉಪಕ್ರಮದ ಯಶಸ್ಸಿಗೆ ಹಲವಾರು ಪ್ರಮುಖ ಅಂಶಗಳು ಕಾರಣವೆಂದು ಹೇಳಬಹುದು. ಮೊದಲನೆಯದಾಗಿ, ಇದು ಸಮುದಾಯ ಖರೀದಿಯನ್ನು ಖಚಿತಪಡಿಸುವ ಸಾರ್ವತ್ರಿಕವಾಗಿ ಗುರುತಿಸಲಾದ ಒಣ ಪೈನ್ ಎಲೆಗಳ ಬೆದರಿಕೆಯನ್ನು ಪರಿಹರಿಸಿದೆ. ಎರಡನೆಯದಾಗಿ, ಇದು ಸೂಕ್ತವಾದ ತಂತ್ರಜ್ಞಾನವನ್ನು ಲಿಂಗ ಆಧಾರಿತ ಸಂಸ್ಥೆ ಮತ್ತು ಉದ್ಯಮವನ್ನು ಕೌಶಲ್ಯದೊಂದಿಗೆ ಜೋಡಿಸಿದೆ. ಇದು ಕೇವಲ ಕೌಶಲ್ಯವಲ್ಲದೆ ಲಾಭದಾಯಕ ವ್ಯಾಪಾರ ಅವಕಾಶವನ್ನಾಗಿ ಮಾಡಿದೆ. ಮೂರನೆಯದಾಗಿ, ಗುಂಪುಗಳ ಮೂಲಕ ಸಾಮೂಹಿಕ ಕ್ರಿಯೆಯ ಮೇಲೆ ಒತ್ತು ನೀಡುವುದರಿಂದ ಸಂಪನ್ಮೂಲ ಸಂಗ್ರಹಣೆ, ಕಾರ್ಮಿಕ ಶಕ್ತಿಯ ಹಂಚಿಕೆ ಮತ್ತು ಸಾಮೂಹಿಕ ಮಾರ್ಕೆಟಿಂಗ್ ಅನ್ನು ಸಕ್ರಿಯಗೊಳಿಸಲಾಗಿದೆ. ಇದು ವೈಯಕ್ತಿಕ ಪ್ರಯತ್ನದ ಮಿತಿಗಳನ್ನು ಮೀರಿದೆ. ಅಂತಿಮವಾಗಿ, ಪಾಲುದಾರರ ವ್ಯಾಪಕ ಬೆಂಬಲ ಜಾಲದ ಪೂರ್ವಭಾವಿ ನಿರ್ಮಾಣವು ಉದ್ಯಮವು ಉಳಿಯಲು ಅಗತ್ಯವಾದ ಮಾರುಕಟ್ಟೆ ಸಂಪರ್ಕಗಳು ಮತ್ತು ವಿಶ್ವಾಸಾರ್ಹತೆಯನ್ನು ಒದಗಿಸಿದೆ.
ಸಂರಕ್ಷಣೆಯ ಪ್ರಭಾವ ಮತ್ತು ಏಕೀಕರಣವನ್ನು ಅಳೆಯುವ ಶಿಫಾರಸುಗಳು
ಕ್ಷೇತ್ರ ಮಟ್ಟದ ವೃತ್ತಿಪರರ, ಮುಂದಿನ ಹೆಜ್ಜೆ ಶ್ರಮವನ್ನು ಮತ್ತಷ್ಟು ಕಡಿಮೆ ಮಾಡಲು, ದಕ್ಷತೆಯನ್ನು ಸುಧಾರಿಸಲು ಉತ್ತಮ ಕುಂಟೆಗಳು ಮತ್ತು ಸಂಗ್ರಹಣಾ ಸಾಧನಗಳಂತಹ ಮಹಿಳಾ ಸ್ನೇಹಿ ಯಾಂತ್ರೀಕರಣವನ್ನು ಪರಿಚಯಿಸುವುದು. ಪೋಷಕಾಂಶಗಳಿಂದ ಕೂಡಿದ ಬ್ರಿಕೆಟ್ ಬೂದಿಯನ್ನು ಸಾವಯವ ಗೊಬ್ಬರವಾಗಿ ಪ್ಯಾಕ್ ಮಾಡಿ, ಮಾರಾಟ ಮಾಡುವಂತಹ ಉಪ-ಉತ್ಪನ್ನಗಳನ್ನಾಗಿಸುವುದರಿಂದ ಹೆಚ್ಚುವರಿ ಆದಾಯದ ದಾರಿಗಳನ್ನು ಸೃಷ್ಟಿಸಬಹುದು. ಮಹಿಳಾ ಉತ್ಪಾದಕ ಕಂಪನಿಗಳಲ್ಲಿ ಯಶಸ್ವಿ ಗುಂಪುಗಳ ಔಪಚಾರಿಕ ನೋಂದಣಿಯನ್ನು ಸುಗಮಗೊಳಿಸುವುದರಿಂದ ಅವರಿಗೆ ಹಣಕಾಸು ಮತ್ತು ಮಾರುಕಟ್ಟೆಗಳ ಅವಕಾಶ ಹೆಚ್ಚಾಗುತ್ತದೆ. ಗ್ರಾಹಕ-ಆಧಾರಿತ ಮೌಲ್ಯ ಸರಪಳಿಗಳನ್ನು ಅಭಿವೃದ್ಧಿಪಡಿಸುತ್ತದೆ.
ನೀತಿ ನಿರೂಪಕರು, ಈ ಮಾದರಿಯನ್ನು ರಾಷ್ಟ್ರೀಯ ಯೋಜನೆಗಳಲ್ಲಿ ಸೇರಿಸುವುದು ಬಹಳ ಮುಖ್ಯ. MGNREGA (ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ) ಅಡಿಯಲ್ಲಿ ಕೆಲಸ ಮಾಡುವವರಿಗೆ "ಕಾಡಿನ ಬೆಂಕಿ ತಡೆಗಟ್ಟುವಿಕೆಗಾಗಿ ಒಣ ಪೈನ್ ಎಲೆಗಳ ಸಂಗ್ರಹಣೆ" ಯನ್ನು ಅನುಮತಿಸುವುದರಿಂದ ಉದ್ಯಮಗಳಿಗೆ ಸಂಗ್ರಹಣೆ ಮತ್ತು ಕಚ್ಚಾ ವಸ್ತುಗಳಿಗೆ ವೇತನವನ್ನು ಒದಗಿಸಿದಂತಾಗುತ್ತದೆ. ಅವರು ತೆರವುಗೊಳಿಸುವ ಪ್ರತಿ ಹೆಕ್ಟೇರ್ ಅರಣ್ಯವು ಸಮುದಾಯಗಳಿಗೆ "ಗ್ರೀನ್ ಕ್ರೆಡಿಟ್" ಅಥವಾ ನೇರ ಪಾವತಿಯನ್ನು ಒದಗಿಸುವುದರಿಂದ ಈ ಪರಿಸರ ಸೇವೆಯನ್ನು ಔಪಚಾರಿಕವಾಗಿ ಗುರುತಿಸಿ ಪ್ರೋತ್ಸಾಹಿಸಿದಂತಾಗುತ್ತದೆ. ಅಂತಿಮವಾಗಿ, ಬ್ರಿಕೆಟಿಂಗ್ ಮಾಡಲು ಟೂಲ್ಕಿಟ್ಗಳಿಗೆ ಮತ್ತು ಬ್ರಿಕೆಟ್ಗಳ ದೊಡ್ಡಮಟ್ಟದ ಖರೀದಿಗೆ ಅನುಕೂಲವಾಗುವಂತೆ ರಾಜ್ಯ ಸಂಸ್ಥೆಗಳಿಂದ ಉದ್ದೇಶಿತ ಸಬ್ಸಿಡಿಗಳನ್ನು ಒದಗಿಸುವುದು ದೊಡ್ಡಮಟ್ಟದ ಉತ್ಪಾದನೆ ಮತ್ತು ದೀರ್ಘಕಾಲೀನ ಸುಸ್ಥಿರತೆಯನ್ನು ಖಚಿತಪಡಿಸುತ್ತದೆ.
ಈ ಮಹಿಳಾ ನೇತೃತ್ವದ ಪೈನ್ ಎಲೆಗಳ ಜೈವಿಕ-ಬ್ರಿಕೆಟ್ ಮಾಡುವ ಉಪಕ್ರಮವು ಪರ್ವತ ಪ್ರದೇಶಗಳ ಸಾಮಾಜಿಕ-ಪರಿಸರ ವ್ಯವಸ್ಥೆಯೊಳಗಿನ ಶಕ್ತಿ, ಪರಿಸರ ಮತ್ತು ಜೀವನೋಪಾಯದ ಪರಸ್ಪರ ಅವಲಂಬಿತ ಕ್ಷೇತ್ರಗಳ ನಡುವೆ ಸಂಪರ್ಕ ಏರ್ಪಡಿಸುವ ಮೂಲಕ ಸಮಗ್ರ ನೆಕ್ಸಸ್ ಚಿಂತನೆಯನ್ನು ಉದಾಹರಿಸುತ್ತದೆ. ಸಮಸ್ಯಾತ್ಮಕ ಅರಣ್ಯ ತ್ಯಾಜ್ಯವನ್ನು ಸುಸ್ಥಿರ ಶಕ್ತಿಯನ್ನಾಗಿ ಪರಿವರ್ತಿಸುವ ಮೂಲಕ, ಕಾಡಿನ ಬೆಂಕಿಯ ಅಪಾಯಗಳನ್ನು (ಪರಿಸರ) ತಗ್ಗಿಸುತ್ತದೆ, ವಾಯು ಮಾಲಿನ್ಯವನ್ನು (ಶಕ್ತಿ) ಕಡಿಮೆ ಮಾಡುತ್ತದೆ ಮತ್ತು ಗ್ರಾಮೀಣ ಮಹಿಳೆಯರಿಗೆ ಹೊಸ ಉದ್ಯಮಶೀಲತಾ ಅವಕಾಶಗಳನ್ನು ಒದಗಿಸುವ ಮೂಲಕ (ಜೀವನೋಪಾಯ) ಸಬಲೀಕರಣಗೊಳಿಸುತ್ತದೆ. ಬದಲಾದ ನೆಕ್ಸಸ್ ಚೌಕಟ್ಟು ನೀರು, ಶಕ್ತಿ, ಆಹಾರ, ಕಾಡುಗಳು, ಪರಿಸರ ವ್ಯವಸ್ಥೆಗಳು ಮತ್ತು ಲಿಂಗವನ್ನು ಒಳಗೊಳ್ಳುತ್ತದೆ. ಅರಣ್ಯ ಉಸ್ತುವಾರಿ ನೀರಿನ ಸಮತೋಲನವನ್ನು (ನೀರು) ಹೇಗೆ ಉಳಿಸಿಕೊಳ್ಳುತ್ತದೆ ಎಂಬುದನ್ನು ಎತ್ತಿ ತೋರಿಸುತ್ತದೆ. ಶುದ್ಧ ಇಂಧನ ಲಭ್ಯತೆಯು ಸಮುದಾಯದ ಯೋಗಕ್ಷೇಮ (ಶಕ್ತಿ), ಸುಸ್ಥಿರ ಕೃಷಿ ಆಹಾರ ಸುರಕ್ಷತೆಯನ್ನು (ಆಹಾರ) ಬೆಂಬಲಿಸುತ್ತದೆ. ಜೀವವೈವಿಧ್ಯ ಸಂರಕ್ಷಣೆ ಪರಿಸರ ವ್ಯವಸ್ಥೆಯ ಆರೋಗ್ಯವನ್ನು (ಅರಣ್ಯಗಳು ಮತ್ತು ಪರಿಸರ ವ್ಯವಸ್ಥೆಗಳು) ನಿರ್ವಹಿಸುತ್ತದೆ ಮತ್ತು ಸಾಮಾಜಿಕ ಸ್ಥಿತಿಸ್ಥಾಪಕತ್ವ ಮತ್ತು ಸಮಾನ ಸಂಪನ್ಮೂಲ ಬಳಕೆಯನ್ನು ಸಬಲೀಕರಣಗೊಳಿಸುವ ಪ್ರಸ್ತುತ ಇರುವ ಲಿಂಗಾಧಾರಿತ ಆರ್ಥಿಕ ಚಟುವಟಿಕೆಗಳೊಂದಿಗೆ ಸಂಕೀರ್ಣವಾದ ಪರಸ್ಪರ ಸಂಪರ್ಕಗಳನ್ನು ನಿರ್ವಹಿಸಲು ಸಮಗ್ರ ವಿಧಾನವನ್ನು ಒದಗಿಸುತ್ತದೆ. ಒಟ್ಟಾಗಿ, ಈ ಪರಸ್ಪರ ಸಂಬಂಧ ಹೊಂದಿರುವ ಅಂಶಗಳು ಸಮಗ್ರ ವಿಧಾನವನ್ನು ರೂಪಿಸುತ್ತವೆ. ಇದು ನೆಕ್ಸಸ್-ಆಧಾರಿತ ಪರಿಹಾರಗಳು ಪರಿಸರ ಸುಸ್ಥಿರತೆ, ಹವಾಮಾನ ಸ್ಥಿತಿಸ್ಥಾಪಕತ್ವ ಮತ್ತು ಸಾಮಾಜಿಕ-ಆರ್ಥಿಕ ಸಮಾನತೆಯನ್ನು ಏಕಕಾಲದಲ್ಲಿ ಹೇಗೆ ಹೆಚ್ಚಿಸಬಹುದು ಎಂಬುದನ್ನು ಪ್ರದರ್ಶಿಸುತ್ತದೆ. ಇದು ಜಾಗತಿಕವಾಗಿ ಪರ್ವತ ಪರಿಸರ ವ್ಯವಸ್ಥೆಗಳಿಗೆ ದೊಡ್ಡಮಟ್ಟದ ಮಾದರಿಯನ್ನು ನೀಡುತ್ತದೆ.
ಒಂದು ವಲಯದಲ್ಲಿನ ಒತ್ತಡಗಳು ಅಥವಾ ಬದಲಾವಣೆಗಳು ಇತರರ ಮೇಲೆ ಪರಿಣಾಮ ಬೀರುತ್ತವೆ ಎಂದು ಅದು ಒತ್ತಿಹೇಳುತ್ತದೆ, ಸಾಮಾಜಿಕ ಸಮಾನತೆಯನ್ನು ಉತ್ತೇಜಿಸುವಾಗ ಸಂಪನ್ಮೂಲಗಳನ್ನು ಸುಸ್ಥಿರವಾಗಿ ನಿರ್ವಹಿಸಲು ನೀತಿ ಸುಸಂಬದ್ಧತೆ ಮತ್ತು ಅಂತರ-ವಲಯ ಸಹಯೋಗವನ್ನು ಪ್ರತಿಪಾದಿಸುತ್ತದೆ. ವ್ಯಾಪಾರ-ವಹಿವಾಟುಗಳು ಮತ್ತು ಸಮಷ್ಟಿ ಪರಿಣಾಮಗಳನ್ನು ಗುರುತಿಸುವುದು, ಪರಿಸರ ವ್ಯವಸ್ಥೆಯ ಸೇವೆಗಳನ್ನು ಮೌಲ್ಯಮಾಪನ ಮಾಡುವುದು, ಸಮಗ್ರ ಆಡಳಿತವನ್ನು ಉತ್ತೇಜಿಸುವುದು ಮತ್ತು ನಾವೀನ್ಯತೆಯ ಮೂಲಕ ಸ್ಥಿತಿಸ್ಥಾಪಕತ್ವವನ್ನು ಸಕ್ರಿಯಗೊಳಿಸುವುದು ಪ್ರಸ್ತುತ ಚೌಕಟ್ಟಿನ ಪ್ರಮುಖ ಅಂಶಗಳಾಗಿವೆ. ಪೈನ್-ಆಧಾರಿತ ಜೈವಿಕ-ಬ್ರಿಕೆಟ್ಟಿಂಗ್ ಮಧ್ಯಸ್ಥಿಕೆಗೆ ಅನ್ವಯಿಸಿದಾಗ, ಈ ನೆಕ್ಸಸ್ ಚೌಕಟ್ಟು ಸುಸ್ಥಿರ ಅರಣ್ಯ ನಿರ್ವಹಣೆಯು ನಿರ್ದಿಷ್ಟವಾಗಿ ಪೈನ್ ಎಲೆಗಳ ಬಯೋಮಾಸ್ ಅನ್ನು ತೆಗೆದುಹಾಕುವುದು ಶುದ್ಧ ಮತ್ತು ನವೀಕರಿಸಬಹುದಾದ ಇಂಧನ ಉತ್ಪಾದನೆಯನ್ನು ಹೇಗೆ ಬೆಂಬಲಿಸುತ್ತದೆ ಎಂಬುದನ್ನು ತೋರುತ್ತದೆ. ಇದು ಕಾಡಿನ ಬೆಂಕಿಯ ಅಪಾಯಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ಹವಾಮಾನ ಪರಿಣಾಮಗಳನ್ನು ತಗ್ಗಿಸುತ್ತದೆ, ಪರಿಸರ ವ್ಯವಸ್ಥೆ ಆಧಾರಿತ ಹೊಂದಾಣಿಕೆಯನ್ನು ಹೆಚ್ಚಿಸುತ್ತದೆ. ಏಕಕಾಲದಲ್ಲಿ, ಈ ಉಪಕ್ರಮವು ಜೀವರಾಶಿ ಸಂಗ್ರಹಣೆ ಮತ್ತು ಬ್ರಿಕ್ವೆಟ್ ಉತ್ಪಾದನೆಯಲ್ಲಿ ಜೀವನೋಪಾಯ
ಅವಕಾಶಗಳನ್ನು ಸೃಷ್ಟಿಸುವ ಮೂಲಕ ಮಹಿಳೆಯರ ಆರ್ಥಿಕ ಸಬಲೀಕರಣವನ್ನು ಬೆಳೆಸುತ್ತದೆ, ಇದರಿಂದಾಗಿ ಪರ್ವತ ಸಮುದಾಯಗಳಲ್ಲಿ ಸಾಮಾಜಿಕ ಸ್ಥಿತಿಸ್ಥಾಪಕತ್ವವನ್ನು ಬಲಪಡಿಸುತ್ತದೆ.
ಪರಸ್ಪರ ಅವಲಂಬನೆಗಳನ್ನು ಗುರುತಿಸುವ ಮತ್ತು ಪರಿಹರಿಸುವ ಮೂಲಕ, WEF-FEG ನಂಟು ಪರಿಸರ ಸಂರಕ್ಷಣೆಯ ಪ್ರಯತ್ನಗಳು ಸಮುದಾಯದ ಯೋಗಕ್ಷೇಮ ಮತ್ತು ಲಿಂಗ ಸಮಾನತೆಯೊಂದಿಗೆ ಸಂಬಂಧ ಹೊಂದಿದೆ ಎಂದು ಖಚಿತಪಡಿಸುತ್ತದೆ. ಇಂತಹ ಸಂಯೋಜಿತ ವಿಧಾನವು ಸಂಪನ್ಮೂಲ ದಕ್ಷತೆ ಮತ್ತು ಸಾಮಾಜಿಕ-ಪರಿಸರ ಸ್ಥಿತಿಸ್ಥಾಪಕತ್ವವನ್ನು ಅತ್ಯುತ್ತಮವಾಗಿಸುವ ಸಂದರ್ಭ-ನಿರ್ದಿಷ್ಟ ಪರಿಹಾರಗಳ ವಿನ್ಯಾಸವನ್ನು ಸಕ್ರಿಯಗೊಳಿಸುತ್ತದೆ. ಇದು ಹವಾಮಾನ ಹೊಂದಾಣಿಕೆ ಮತ್ತು ದುರ್ಬಲ ಪರ್ವತ ಪರಿಸರ ವ್ಯವಸ್ಥೆಗಳಲ್ಲಿ ಸುಸ್ಥಿರ ಅಭಿವೃದ್ಧಿಗೆ ಚೌಕಟ್ಟನ್ನು ಹೆಚ್ಚು ಅನ್ವಯಿಸುತ್ತದೆ. ಈ ಸಮಗ್ರ ನಂಟು ದೃಷ್ಟಿಕೋನವು ಪಿರುಲ್ ಜೈವಿಕ-ಬ್ರಿಕೆಟ್ಟಿಂಗ್ ಯೋಜನೆಯನ್ನು ಹವಾಮಾನ-ಸ್ಥಿತಿಸ್ಥಾಪಕ, ಲಿಂಗ-ಒಳಗೊಂಡಿರುವ ಮತ್ತು ಪರಿಸರ-ಸುಸ್ಥಿರ ಆರ್ಥಿಕತೆಗಳನ್ನು ನಿರ್ಮಿಸಲು ಬಯಸುವ ವಿಶ್ವಾದ್ಯಂತ ಪರ್ವತ ಪ್ರದೇಶಗಳಿಗೆ ದೊಡ್ಡಮಟ್ಟದ ಮತ್ತು ಪುನರಾವರ್ತಿತ ಮಾದರಿಯಾಗಿ ಇರಿಸುತ್ತದೆ.
Harshit Pant
Scientist
Centre for Socio-economic Development (CSED)
G.B. Pant National Institute of Himalayan Environment
(GBP-NIHE),
Kosi-Katarmal, Almora-263643,
Uttarakhand, India
E-mail: harshit.pantj@gbpihed.nic.in
ಆಂಗ್ಲ ಮೂಲ : ಲೀಸಾ ಇಂಡಿಯಾ; ಸಂಪುಟ :೨೭; ಸಂಚಿಕೆ : ೪ ; ಡಿಸೆಂಬರ್ ೨೦೨೫



