ಸುಸ್ಥಿರ ಕೃಷಿ ಮಾರ್ಗ
ಶ್ರೀ ಮಲ್ಲಿಕಾರ್ಜುನ ಪಾಟೀಲರು ಕರ್ನಾಟಕದ ಧಾರವಾಡ ಜಿಲ್ಲೆಯ ಕಲ್ಲಘಟ್ಟಿ ತಾಲ್ಲೂಕಿನ ಮುಕ್ಕಾಲು ಹಳ್ಳಿಗೆ ಸೇರಿದವರು. ದೇಶದ ಬಹುತೇಕ ರೈತರು ಕೃಷಿಯಲ್ಲಿ ಆದಾಯವಿಲ್ಲ ಎಂದು ಅದನ್ನು ತೊರೆಯುತ್ತಿರುವಾಗ ಪಾಟೀಲರು ಇವರ ನಡುವೆ ವಿಭಿನ್ನರಾಗಿ ನಿಲ್ಲುತ್ತಾರೆ. ಕೃಷಿಯಿಂದ ಸುಸ್ಥಿರ ಆದಾಯವನ್ನು ಗಳಿಸಬಹುದು ಎಂದು ಸಾಧಿಸಿ ತೋರಿಸಿ ಯುವಜನಾಂಗವು ಕೃಷಿಯಲ್ಲಿ ತೊಡಗಿಕೊಳ್ಳುವುದಕ್ಕೆ ಮಾದರಿಯಾಗಿದ್ದಾರೆ. ಸುಸ್ಥಿರವಾದ ನೈಸರ್ಗಿಕ ಕೃಷಿ ವಿಧಾನಗಳನ್ನು ಅಳವಡಿಸಿಕೊಂಡು ರಾಸಾಯನಿಕಗಳನ್ನು ಬಳಸದೆ ಮಲ್ಲಿಕಾರ್ಜುನ ಪಾಟೀಲರು ಮಣ್ಣಿನ ಆರೋಗ್ಯವನ್ನು ಕಾಪಾಡಿಕೊಂಡು ಉತ್ತಮ ಇಳುವರಿಯನ್ನು ಪಡೆಯುತ್ತಿದ್ದಾರೆ.
ಶ್ರೀ ಪಾಟೀಲರು ಸಜ್ಜೆ, ರಾಗಿ ಮತ್ತು ನವಣೆಯನ್ನು ಬೆಳೆಯುತ್ತಿದ್ದಾರೆ. ಇದರೊಂದಿಗೆ ಉದ್ದು, ಅಲಸಂದೆ, ಸೋಯಾಬೀನ್ ಇತ್ಯಾದಿಗಳನ್ನು ಬೆಳೆಯುತ್ತಿದ್ದಾರೆ. ಇಂದಿಗೂ ಇವುಗಳ ಬೀಜವನ್ನು ಕೇಳಿದ ರೈತರಿಗೆ ಒದಗಿಸುತ್ತಿದ್ದಾರೆ. ಅವರ ಬಳಿ ಮೂರು ಹಸುಗಳಿವೆ. ಹತ್ತು ಗುಂಟೆ ಭೂಮಿಯಲ್ಲಿ ಇವುಗಳಿಗಾಗಿ ಮೇವನ್ನು ಬೆಳೆಯುತ್ತಿದ್ದಾಋಎ. ಪ್ರತಿವಾರ ಸುಮಾರು ೨೨೫ ಲೀಟರ್‌ನಷ್ಟು ಹಾಲನ್ನು ಮಾರಾಟ ಮಾಡುತ್ತಿದ್ದಾರೆ.
ಇದರೊಂದಿಗೆ ಹಿತ್ತಲಲ್ಲಿ ಗಿರಿರಾಜ ಕೋಳಿ ಮತ್ತು ದೇಸಿ ಕೋಳಿಗಳ ಸಾಕಾಣಿಕೆ ಮಾಡುತ್ತಿದ್ದಾರೆ. ಇವುಗಳಿಂದ ಮಾಸಿಕ ರೂ.೫,೦೦೦ ಗಳಿಸುತ್ತಿದ್ದಾರೆ.
ಪ್ರತಿ ಹೆಕ್ಟೇರಿಗೆ ೨೪ ಕ್ವಿಂಟಾಲ್ ಜೋಳವನ್ನು ಬೆಳೆಯುವ ಮೂಲಕ ತಾಲ್ಲೂಕಿನಲ್ಲಿ ಅತಿಹೆಚ್ಚು ಜೋಳ ಬೆಳೆದ ದಾಖಲೆಯನ್ನು ಮಾಡಿದ್ದಾರೆ. ಅದೇ ರೀತಿ ಒಂದು ಎಕರೆಗೆ ೩೮ ಕ್ವಿಂಟಾಲ್ ಭತ್ತ ಬೆಳೆದು ದಾಖಲೆ ನಿರ್ಮಿಸಿದ್ದಾರೆ.
ಶ್ರೀ ಮಲ್ಲಿಕಾರ್ಜುನ ಪಾಟೀಲರು ತಮ್ಮ ಶ್ರಮಕ್ಕೆ ಹಲವು ಪುರಸ್ಕಾರಗಳನ್ನು ಪಡೆದಿದ್ದಾರೆ. ೨೦೧೪-೧೫ರಲ್ಲಿ ತಾಲ್ಲೂಕು ಮಟ್ಟದಲ್ಲಿ ಅತ್ಯುತ್ತಮ ಕೃಷಿಕ ಪ್ರಶಸ್ತಿ ಪಡೆದಿದ್ದಾರೆ. ೨೦೧೭ರಲ್ಲಿ ಶ್ರೀ ಸಿದ್ಧರೂಢ ರಾಜ್ಯ ಪ್ರಶಸ್ತಿ ಪಡೆದವರಲ್ಲಿ ಇವರು ಕೂಡ ಸೇರಿದ್ದಾರೆ.
ಶ್ರೀ ಪಾಟೀಲರು ಕುಟುಂಬವು ಮಣ್ಣನ್ನು ನಂಬಿ ಹಾಳಾದವರಿಲ್ಲ ಎಂಬ ಬಗ್ಗೆ ಅಚಲವಿಶ್ವಾಸವನ್ನು ಹೊಂದಿದ್ದಾರೆ. ಕೃಷಿಯ ಬಗೆಗಿನ ಅವರ ಈ ನಂಬಿಕೆಗೆ ಸಾಕ್ಷಿಯಾಗಿ ಅವರ ಮಕ್ಕಳಿಬ್ಬರೂ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಶ್ರೀ ಪಾಟೀಲರು ತಮ್ಮೆಲ್ಲ ಯಶಸ್ಸಿನ ಶ್ರೇಯ ತಮ್ಮೊಂದಿಗೆ ಈ ಪಯಣದಲ್ಲಿ ಜೊತೆಯಾಗಿ ನಿಂತಿರುವ ತಮ್ಮ ಪತ್ನಿಗೆ ಸಲ್ಲಬೇಕೆಂದು ಹೇಳುತ್ತಾರೆ.
ಆಂಗ್ಲ ಮೂಲ : ಲೀಸಾ ಇಂಡಿಯಾ; ಸಂಪುಟ :೨೧; ಸಂಚಿಕೆ : ೩ ; ಸೆಪ್ಟಂಬರ್ ೨೦೧೯



