ಕಂಜಿಕುಝಿ – ಕೇರಳದ ಮೊದಲ ರಾಸಾಯನಿಕ ಮುಕ್ತ, ತರಕಾರಿ ಸ್ವಾಯತ್ತ ಪಂಚಾಯತ್


ಗ್ರಾಮವು 1994 ರಲ್ಲಿ ಸಾವಯವ ಕೃಷಿಯಲ್ಲಿ ತನ್ನ ಪ್ರಯೋಗಗಳನ್ನು ಪ್ರಾರಂಭಿಸಿತು. ಆಗ ಭಾರತದಲ್ಲಿ ಹೆಚ್ಚಿನವರಿಗೆ ಪರಿಕಲ್ಪನೆಯ ಬಗ್ಗೆ ತಿಳಿದಿರಲಿಲ್ಲ.


ಕೇರಳದ ಕರಾವಳಿ ಅಲಪ್ಪುಳ ಜಿಲ್ಲೆಯ ಕಂಜಿಕುಝಿ ಗ್ರಾಮದತ್ತ ಹೋಗುತ್ತಿದ್ದಂತೆ ಮರಳು, ಉಪ್ಪು ಮಿಶ್ರಿತ ಗಾಳಿ ಬೀಸತೊಡಗಿತು. ಹಳ್ಳಿಯೊಳಗೆ ಹೋಗುತ್ತಿದ್ದಂತೆ ತೋಟಗಳಿಂದ ಕಿತ್ತುತಂದ ತಾಜಾ ತರಕಾರಿಯ ಸುವಾಸನೆಯನ್ನು ಗಾಳಿ ಹೊತ್ತುತಂದಿತು.

ಭಾರತದ ಉಳಿದ ಭಾಗಗಳಿಗಿಂತ ಕಂಜಿಕುಝಿಯಲ್ಲಿ ವಿಭಿನ್ನವಾದ ಚಿತ್ರ ಕಂಡುಬರುತ್ತದೆ. ಹಳ್ಳಿಗಳಲ್ಲಿಯೂ ತರಕಾರಿಗಳು ವಿರಳವಾಗಿರುವ ಸಮಯದಲ್ಲಿ, ಕಂಜಿಕುಜಿಯು ಸಾವಯವಾಗಿ ಬೆಳೆದ ತರಕಾರಿಗಳಿಂದ ತುಂಬಿದೆ. ಕೇರಳದ ಏಕೈಕ ತರಕಾರಿ ಸ್ವಾಯತ್ತ ಪಂಚಾಯತ್‌ ಆಗಿರುವ ಕಂಜಿಕುಝಿ ಮಾದರಿ ಅನುಕರಣೀಯವಾಗಿದೆ. ಈ ಗ್ರಾಮವು 1994 ರಲ್ಲಿ ಸಾವಯವ ಕೃಷಿಯಲ್ಲಿ ತನ್ನ ಪ್ರಯೋಗಗಳನ್ನು ಪ್ರಾರಂಭಿಸಿತು. ಆಗ ಭಾರತದಲ್ಲಿ ಹೆಚ್ಚಿನವರಿಗೆ ಈ ಪರಿಕಲ್ಪನೆಯ ಬಗ್ಗೆ ತಿಳಿದಿರಲಿಲ್ಲ.

ಇದೆಲ್ಲ ಆರಂಭವಾದದ್ದು ಹೇಗೆ? ಕಂಜಿಕುಝಿಯ ಮಣ್ಣು ಕೃಷಿಗೆ ಯೋಗ್ಯವಲ್ಲವೆಂದು ಪರಿಗಣಿಸಲ್ಪಟ್ಟಿದ್ದರಿಂದ ಅವರು ತರಕಾರಿಗಾಗಿ ಕೇರಳದ ಇತರ ಭಾಗಗಳ ಮೇಲೆ ಅವಲಂಭಿತರಾದರು. ಇದು ತರಕಾರಿಗಳ ಬೆಲೆಯನ್ನು ಹೆಚ್ಚಿಸಿತು. ಎಲ್ಲಕ್ಕಿಂತ ಹೆಚ್ಚಾಗಿ ಸ್ಥಳೀಯ ಉದ್ಯಮಗಳಿಂದ (ಮುಖ್ಯವಾಗಿ ತೆಂಗು) ಗ್ರಾಮಸ್ಥರಿಗೆ ದೊರಕುತ್ತಿದ್ದ ಆದಾಯ ಕಡಿಮೆಯಾಗಿತ್ತು.  ಆದ್ದರಿಂದ, ಆಗಿನ ಪಂಚಾಯತ್ ಮುಖ್ಯಸ್ಥರು ಕ್ರಾಂತಿಗೆ ಕರೆ ನೀಡಿದರು: ಹಳ್ಳಿಯ ರೈತ ಕುಟುಂಬಗಳು ಕೈಗೊಳ್ಳುವ ಸಾವಯವ ಕೃಷಿಯಲ್ಲಿ ಭವಿಷ್ಯವಿದೆ ಎಂದು ಅವರು ನಿರ್ಧರಿಸಿದರು. “ತರಕಾರಿಯನ್ನು ಖರೀದಿಸದೇ ಇಲ್ಲೇ ಬೆಳೆಯುವಂತಾದದ್ದು ಮುಖ್ಯವಾಗಿತ್ತು”, ಎಂದು ಪಂಚಾಯತ್‌ ಅಧ್ಯಕ್ಷರಾದ ಎಂ.ಜಿ. ರಾಜು ಹೇಳುತ್ತಾರೆ.

“ಈ ನಿಟ್ಟಿನಲ್ಲಿ ಹೆಜ್ಜೆಯಿಟ್ಟಾಗ ಸವಾಲುಗಳು ಎದುರಾದವು. ಮಣ್ಣಿನ ಗುಣಮಟ್ಟ ಸರಿಯಿರಲಿಲ್ಲ ಅದರೊಂದಿಗೆ ಜನರಲ್ಲಿ ಸಾವಯವ ಕೃಷಿ ಕೈಗೊಳ್ಳುವಂತೆ ಅರಿವು ಮೂಡಿಸಬೇಕಿತ್ತು. ಎಲ್ಲಕ್ಕಿಂತ ಮುಖ್ಯವಾಗಿ ಈ ಯೋಜನೆಯನ್ನು ಮುಂದುವರೆಸಿಕೊಂಡು ಹೋಗಲು ವಾಸ್ತವಿಕವಾದ ಹಾಗೂ ಪರಿಣಾಮಕಾರಿ ವಿಧಾನವನ್ನು ರೂಪಿಸಬೇಕಿತ್ತು” ಎಂದು ಹೇಳಿದರು.

ಯೋಜನೆಯನ್ನು ರೂಪಿಸಿ, ಪಂಚಾಯತ್ ಸಮಿತಿಯು 8,600 ಕುಟುಂಬಗಳನ್ನು ಮನೆಯಲ್ಲಿ, ಹಿತ್ತಲಿನಲ್ಲಿ ಮತ್ತು ತಾರಸಿಗಳಲ್ಲಿ ಹಾಗಲಕಾಯಿ, ಕೆಂಪು ಪಾಲಕ, ಹೂಕೋಸು, ಹುರಳಿಕಾಯಿ ಇನ್ನಿತರ ತರಕಾರಿಗಳನ್ನು ಬೆಳೆಯಲು ಆಹ್ವಾನಿಸಿತು. ಲಭ್ಯವಿರುವ ಎಲ್ಲ ಸ್ಥಳವನ್ನು ಕೃಷಿಗೆ ಬೆಳೆಸುವ ಯೋಚನೆ ಮಾಡಿದ್ದರು. ಪಂಚಾಯತ್‌ ವತಿಯಿಂದ ಆರಂಭಿಕ ಧನಸಹಾಯವನ್ನು ನೀಡಲಾಯಿತು. “ಸುಸ್ಥಿರ ಅಭ್ಯಾಸವನ್ನು ರೂಪಿಸಲು, ಬೆಳೆಗಾರರನ್ನು ಮೇಲ್ವಿಚಾರಣೆ ಮಾಡಲು ಮತ್ತು ಪ್ರೋತ್ಸಾಹಿಸಲು ಕಾರ್ಷಿಕ ಕರ್ಮಸೇನಾ ಎಂಬ ಸಣ್ಣ ಸಮಿತಿಗೆ ತರಬೇತಿ ನೀಡಲಾಯಿತು. ಇದೊಂದು ಪ್ರಯಾಸಕರ ಪ್ರಕ್ರಿಯೆಯಾಗಿತ್ತು. ಆದರೆ ಅಂತಿಮವಾಗಿ ಮಣ್ಣಿನ pH ಸಮತೋಲನ ಮತ್ತು ಪೋಷಕಾಂಶಗಳ ಮಟ್ಟವನ್ನು ಪುನಃಸ್ಥಾಪಿಸಲಾಯಿತು. ಸಾವಯವ ಕೃಷಿಯನ್ನು ಬೆಂಬಲಿಸುವ ತಂತ್ರಗಳನ್ನು ಸ್ಥಳೀಯವಾಗಿ ಅಭಿವೃದ್ಧಿಪಡಿಸಿದಾಗ ಕೀಟ-ತಡೆಗಟ್ಟುವ ವಿಧಾನಗಳನ್ನು ಅಳವಡಿಸಿಕೊಳ್ಳಲಾಯಿತು”, ಎಂದು ರಾಜು ವಿವರಿಸಿದರು.

ಸಾನು ಕಂಜಿಕುಜಿಯಲ್ಲಿ ಕಳೆದ 16 ವರ್ಷಗಳಿಂದ ಕೃಷಿ ಮಾಡುತ್ತಿದ್ದಾರೆ. ಫೋಟೊ : ಎಚ್‌. ವಿಭು

ರೈತರಿಗೆ ಚೆನ್ನಾಗಿ ತಿಳಿದಿದೆ

ಒಮ್ಮೆ ವ್ಯವಸ್ಥೆ ಜಾರಿಗೆ ಬಂದ ನಂತರ ಅದನ್ನು ಮುಂದುವರಿಸಿಕೊಂಡು ಹೋಗುವ ಜವಾಬ್ದಾರಿಯನ್ನು ಗ್ರಾಮಸ್ಥರಿಗೆ ವಹಿಸಲಾಯಿತು. ಆದ್ದರಿಂದ, ಇಂದಿಗೂ, ಪ್ರತಿ ಕುಟುಂಬವು ಗೊಬ್ಬರದ ಪ್ರಮಾಣ ಮತ್ತು ಕೀಟ ನಿಯಂತ್ರಣ ವಿಧಾನವನ್ನು ತಪ್ಪದೆ ಅನುಸರಿಸುತ್ತಿದೆ. “ತಮಗೆ ಯಾವುದು ಉತ್ತಮ ಎನ್ನುವುದು ರೈತರಿಗೆ ಚೆನ್ನಾಗಿ ಗೊತ್ತು. ತಪ್ಪುಗಳನ್ನು ತಿದ್ದಿಕೊಳ್ಳುತ್ತಾ ಅವರದನ್ನು ಕಲಿತಿದ್ದಾರೆ” ಎಂದು ರಾಜು ಹೇಳುತ್ತಾರೆ. ಕೃಷಿಯಲ್ಲಿ ಯಾವುದಾದರೂ ಆತ್ಯಂತಿಕ ನಿಯಮವಿದ್ದರೆ ಅದು ಕೃಷಿಯಲ್ಲಿ ರಾಸಾಯನಿಕಗಳನ್ನು ಬಳಸಬಾರದು ಎಂಬ ನಿಯಮ.

ಮಹಿಳಾ ಸ್ವಯಂ ಸೇವಾ ಸಂಸ್ಥೆಯಾದ ಕುಟುಂಬಶ್ರೀಯಿಂದ ಹಸಿರುಮನೆಗಳಲ್ಲಿ ಬೆಳೆದ ಬೀಜಗಳು ಮತ್ತು ಸಸಿಗಳನ್ನು ಪಂಚಾಯತ್ ಉಚಿತವಾಗಿ ನೀಡುತ್ತದೆ. “ಕಳೆದ ವರ್ಷ ನಾವು 50 ಲಕ್ಷಕ್ಕೂ ಹೆಚ್ಚು ಸಸಿಗಳನ್ನು ನೀಡಿದ್ದೇವೆ. ಕಡಿಮೆ ವೆಚ್ಚದಲ್ಲಿ ಪರಿಸರ ಸ್ನೇಹಿ ಗೊಬ್ಬರ ತಯಾರಿಸುವ ಸೌಲಭ್ಯವನ್ನೂ ಒದಗಿಸುತ್ತೇವೆ,” ಎನ್ನುತ್ತಾರೆ ರಾಜು.

ಇನ್ನುಮುಂದೆ ಕಂಜಿಕುಝಿಗೆ ಬೇರೆಡೆಯಿಂದ ತರಕಾರಿ ತರುವ ಅವಶ್ಯಕತೆಯಿಲ್ಲ. “ಮೊದಲು ಹಳ್ಳಿಗೆ ಬೇರೆಡೆಗಳಿಂದ ತರಕಾರಿಗಳನ್ನು ತರಲಾಗುತ್ತಿತ್ತು. ಈಗ ನಮ್ಮಲ್ಲೇ ಸಾವಯವ ವಿಧಾನದಲ್ಲಿ ಬೆಳೆದ ತಾಜಾ ತರಕಾರಿಗಳನ್ನು ಸ್ಥಳೀಯ ಮಾರುಕಟ್ಟೆಯಲ್ಲಿ ಮಾರುತ್ತೇವೆ,” ಎನ್ನುತ್ತಾರೆ ರಾಜು. ತರಕಾರಿಗಳ ಪ್ರಮಾಣ ಹೆಚ್ಚಾದಾಗ ಹೆದ್ದಾರಿಯ ಬದಿಗಳಲ್ಲಿ ಅವುಗಳನ್ನು ಇಟ್ಟುಕೊಂಡು ಪ್ರಯಾಣಿಕರಿಗೆ ಮಾರಾಟ ಮಾಡಲಾಯಿತು. “ಒಂದು ಕಾಲದಲ್ಲಿ ನಾವು ಕೊಂಡುತರುತ್ತಿದ್ದ ನಗರಗಳಿಗೆ ನಮ್ಮ ತರಕಾರಿಗಳು ತಲುಪಲಾರಂಭಿಸಿದವು. ಕೈಗೆಟಕುವ ಬೆಲೆಯಲ್ಲಿ ಸಾವಯವ ಉತ್ಪನ್ನವನ್ನು ಒದಗಿಸುವ ಮೂಲಕ ನಾವು ಗ್ರಾಹಕರ ಹಣ ಮತ್ತು ಆರೋಗ್ಯ ಎರಡಕ್ಕೂ ಗಮನಕೊಟ್ಟಂತಾಯಿತು.”

ಹಳ್ಳಿಯ ಬದುಕು ಬದಲಾಗಿದೆ. ತರಕಾರಿ ಕೃಷಿಯ ವರದಾನವಾಗಿ ಸಮೃದ್ಧಿಯನ್ನು ತಂದುಕೊಟ್ಟಿದೆ. ಕೆಲವು ಗ್ರಾಮಸ್ಥರು ತಿಂಗಳಿಗೆ ರೂ. 50,000 ಸಂಪಾದಿಸುತ್ತಿದ್ದಾರೆ. ಅವರು ವರ್ಷಪೂರ್ತಿ ಕೃಷಿ ಕೈಗೊಳ್ಳುತ್ತಿದ್ದಾರೆ. ಅವರು ಸಾವಯವ ಕೃಷಿಯ ಬಗ್ಗೆ ತರಗತಿಗಳನ್ನು ಸಹ ನೀಡುತ್ತಾರೆ; ಕೆಲವರು ಹೈಬ್ರಿಡ್ ತರಕಾರಿ ಪ್ರಭೇದಗಳನ್ನು ಸಹ ಅಭಿವೃದ್ಧಿಪಡಿಸಿದ್ದಾರೆ. ನಲವತ್ತೆಂಟು ವರ್ಷ ವಯಸ್ಸಿನ ಸುಭಕೇಶನ್ ಅವರು ಕಂಜಿಕುಜಿ ಹುರುಳಿಕಾಯಿ ಎಂದು ಕರೆಯಲ್ಪಡುವ ಸ್ಥಳೀಯ ಹೈಬ್ರಿಡ್ ಹುರುಳಿಕಾಯಿ ಬೀಜಗಳನ್ನು ಮಾರಾಟ ಮಾಡುವ ಮೂಲಕ ತಮ್ಮ ಕುಟುಂಬಕ್ಕೆ ನೆರವಾಗುತ್ತಿದ್ದಾರೆ. “ನಾನು 2% ಭೂಮಿಯಲ್ಲಿ ಕೃಷಿ ಮಾಡಲು ಪ್ರಾರಂಭಿಸಿದೆ – ಇದು ಈಗ 25% ಕ್ಕೆ ವಿಸ್ತರಿಸಿದೆ; ಕೃಷಿ ನನ್ನ ಜೀವನವನ್ನೇ ಬದಲಿಸಿದೆ’ ಎಂದು ಅವರು ಹೇಳುತ್ತಾರೆ. ಮತ್ತೊಬ್ಬ ರೈತ 71 ವರ್ಷದ ಆನಂದನ್ ತಾನು

ವರ್ಷವಿಡೀ ಕೃಷಿ ಮಾಡುತ್ತೇನೆ ಎನ್ನುತ್ತಾರೆ.  ತಮ್ಮ 80% ಇಳುವರಿಗೆ ನಿಲ್ಲಿಸುವ ಉಪಾಯವನ್ನು ಹೀಗೆ ವಿವರಿಸುತ್ತಾರೆ : “ರೋಗ ಭಾದೆ ಆಗಲೇ ಶುರುವಾಗುವುದು. ಅದಕ್ಕೆ ನಾನು ಮೂರು ಸುತ್ತಿನಲ್ಲಿ ವರ್ಷಪೂರ್ತಿ ಕೃಷಿ ಮಾಡುತ್ತೇನೆ.”

ಮುಂದಿನ ಪೀಳಿಗೆಯನ್ನು ತಯಾರು ಮಾಡಲು ಸ್ಥಳೀಯ ಶಾಲೆಗಳಲ್ಲಿ ಕೃಷಿಯ ಪಾಠಗಳನ್ನು ಕಡ್ಡಾಯಗೊಳಿಸಲಾಗಿದೆ. “ಮಣ್ಣು ಈಗ ಪೋಷಕಾಂಶಗಳಿಂದ ಸಮೃದ್ಧವಾಗಿದೆ. ನಮ್ಮ ಮಕ್ಕಳು ಆರೋಗ್ಯಕರ, ರಾಸಾಯನಿಕ ಮುಕ್ತ ಆಹಾರದೊಂದಿಗೆ ಬೆಳೆಯುತ್ತಾರೆ” ಎಂದು ಹಳ್ಳಿಯ ಪರವಾಗಿ ಮಾತನಾಡುವ ರಾಜು ಹೇಳುತ್ತಾರೆ. ಕಳೆದ ಆರ್ಥಿಕ ವರ್ಷದಲ್ಲಿ ಪಂಚಾಯತ್ ವಾರ್ಷಿಕ ₹14 ಕೋಟಿ ವಹಿವಾಟು ನಡೆಸಿತು. ಕಂಜಿಕುಜಿಯ ಉತ್ಪನ್ನವನ್ನು ಕೇರಳದಾದ್ಯಂತ ಬಳಸುತ್ತಿದ್ದಾರೆ. ಈ ಹಳ್ಳಿ ಈಗ ಕೇವಲ ಸಮುದ್ರ ತೀರದ ಹಳ್ಳಿಯಾಗಿ ಉಳಿದಿಲ್ಲ.

ತಾನ್ಯಾ ಅಬ್ರಹಾಂ


ಈ ಲೇಖನವು ಮೂಲತಃ ಇಲ್ಲಿ ಪ್ರಕಟವಾಗಿದೆ :  https://www.thehindu.com/sci-tech/agriculture/how-kanjikuzhi-village-in-alappuzha-became-the-first-chemical-free-vegetable-sufficient-panchayat-in-kerala/article28949494.ece

ಆಂಗ್ಲ ಮೂಲ : ಲೀಸಾ ಇಂಡಿಯಾ; ಸಂಪುಟ :೨೩; ಸಂಚಿಕೆ : ೩ ; ಸೆಪ್ಟಂಬರ್ ೨೦‌೨೧

 

Recent Posts

ಕೃಷಿಯಲ್ಲಿ ನೀರಿನ ಸಮರ್ಥ ಬಳಕೆಗಾಗಿ ಕಾಲುವೆ ಯಾಂತ್ರೀಕರಣ

ಕೃಷಿಯಲ್ಲಿ ನೀರಿನ ಸಮರ್ಥ ಬಳಕೆಗಾಗಿ ಕಾಲುವೆ ಯಾಂತ್ರೀಕರಣ

ನಮ್ಮ ನೀರಾವರಿ ವ್ಯವಸ್ಥೆಯನ್ನು 21ನೇ ಶತಮಾನದ ಬೇಡಿಕೆಗಳಿಗೆ ಹೊಂದುವಂತೆ ಮಾಡುವುದು ನಮ್ಮ ಮುಂದಿರುವ ನಿಜವಾದ ಸವಾಲಾಗಿದೆ. ತಂತ್ರಜ್ಞಾನವೇ...