ಕೃಷಿಯಲ್ಲಿ ನೀರಿನ ಸಮರ್ಥ ಬಳಕೆಗಾಗಿ ಕಾಲುವೆ ಯಾಂತ್ರೀಕರಣ


ನಮ್ಮ ನೀರಾವರಿ ವ್ಯವಸ್ಥೆಯನ್ನು 21ನೇ ಶತಮಾನದ ಬೇಡಿಕೆಗಳಿಗೆ ಹೊಂದುವಂತೆ ಮಾಡುವುದು ನಮ್ಮ ಮುಂದಿರುವ ನಿಜವಾದ ಸವಾಲಾಗಿದೆ. ತಂತ್ರಜ್ಞಾನವೇ ಸರ್ವಸ್ವ ಅಲ್ಲದಿದ್ದರೂ, ಅನುಭವದಿಂದ ಪಾಠ ಕಲಿಯುವಲ್ಲಿನ ನಿರಾಕರಣೆ ಕಾಲುವೆಯ ಯಾಂತ್ರೀಕರಣವು ನಿರಂತರವಾಗಿ ಸೋಲಲು ಕಾರಣವಾಗುತ್ತದೆ. ನೀರಾವರಿ ಯೋಜನೆಗಳು ಕಾಲಕ್ಕೆ ತಕ್ಕಂತೆ ಬದಲಾಗಬೇಕು. ವ್ಯವಸ್ಥಿತ ವಿಧಾನ ಇದಕ್ಕೆ ಅತ್ಯಗತ್ಯ.


ಕೃಷಿಯಲ್ಲಿ ನೀರಿನ ಸಮರ್ಥ ಬಳಕೆಯ ಕುರಿತಾದ ಚರ್ಚೆಗಳು ಅನೇಕ ಬಾರಿ ಬಹುಮುಖ್ಯ ತಿರುವನ್ನು ತೆಗೆದುಕೊಳ್ಳುತ್ತವೆ. ಅಸಮರ್ಥ ಬಳಕೆಗಾಗಿ ಸಾಮಾನ್ಯವಾಗಿ ರೈತರನ್ನೇ ದೂಷಿಸಲಾಗುತ್ತದೆ. ವ್ಯವಸ್ಥಿತ ಸಮಸ್ಯೆಗಳಿಗೆ ಹೆಚ್ಚು ಗಮನನೀಡಲಾಗುವುದಿಲ್ಲ ಇಲ್ಲವೇ ಸಂಪೂರ್ಣವಾಗಿ ನಿರ್ಲಕ್ಷಿಸಲಾಗುತ್ತದೆ. ಜಲಮೂಲದಿಂದ ಜಮೀನಿಗೆ ನೀರನ್ನು ಸಾಗಿಸಲಾಗುವ ಭೌತಿಕ ವ್ಯವಸ್ಥೆಯ ಕುರಿತು “ಎಲ್ಲ ಸರಿಯಾಗಿದೆ” ಎಂದು ಲಘುವಾಗಿ ಪರಿಗಣಿಸಲಾಗಿದೆ.

ಮಹಾರಾಷ್ಟ್ರವು ಭಾರತದ ಪ್ರಗತಿಶೀಲ, ಕೈಗಾರಿಕೀಕರಣಗೊಂಡ ಮತ್ತು ನಗರೀಕರಣಗೊಂಡ ರಾಜ್ಯಗಳಲ್ಲಿ ಒಂದಾಗಿದೆ. ನೀರಾವರಿ ಯೋಜನೆಗಳ ಸ್ವರೂಪ, ಅವುಗಳ ಸಾಮರ್ಥ್ಯ, ಬಳಕೆ ಮತ್ತು ನೀರಾವರಿ ದಕ್ಷತೆಯ ಸೂಕ್ಷ್ಮ ಪರಿಶೀಲನೆಯು ನೀರಾವರಿ ವ್ಯವಸ್ಥೆಗಳನ್ನು ಆಧುನೀಕರಿಸುವ ಅಗತ್ಯವನ್ನು ತೋರುತ್ತದೆ.

ಮಹಾರಾಷ್ಟ್ರದ ಪ್ರಕರಣ

ಅಂತರರಾಜ್ಯ ಜಲ ನ್ಯಾಯಮಂಡಳಿಯು 1,16,467 MCM ಮೇಲ್ಮೈ ನೀರನ್ನು ಬಳಸಲು ಅನುಮತಿಸಿದೆ. ಇದರಲ್ಲಿ 55%ರಷ್ಟು ನೀರು ಕೊಂಕಣ ಪ್ರದೇಶದಲ್ಲಿ ಲಭ್ಯವಿದೆ. ಅಲ್ಲಿ ಆ ನೀರನ್ನು ಬಳಸಲು ನಿರ್ಬಂಧಗಳಿವೆ. ಆದ್ದರಿಂದ ಮಹಾರಾಷ್ಟ್ರ ಇಲ್ಲಿಯವರೆಗೆ 38% ನೇರ ಸಂಗ್ರಹಣಾ ಸಾಮರ್ಥ್ಯವನ್ನು ಮಾತ್ರ ರೂಪಿಸಲು ಸಾಧ್ಯವಾಗಿದೆ. ಮಹಾರಾಷ್ಟ್ರದ ಹೆಚ್ಚಿನ ನೀರಾವರಿ ಯೋಜನೆಗಳನ್ನು ನೀರಾವರಿಗಾಗಿ ಮಾತ್ರ ವಿನ್ಯಾಸಗೊಳಿಸಲಾಗಿದ್ದರೂ, 2020-21 ರಲ್ಲಿ ನೀರಾವರಿಯ ನೀರಿನ ಬಳಕೆ 58.6% ಆಗಿತ್ತು. ಉಳಿದ 41.4% ನೀರನ್ನು ನೀರಾವರಿಯೇತರ ಉದ್ದೇಶಕ್ಕಾಗಿ ಬಳಸಲಾಗಿದೆ, ಇದರಲ್ಲಿ ಮನೆ, ಕೈಗಾರಿಕೆ ಮತ್ತು ಇತರೆ ಸೇರಿವೆ. ʼಇತರೆʼ ಎನ್ನುವ ವರ್ಗವನ್ನು ವಿವರಿಸಿಲ್ಲ. ವಿಚಿತ್ರ ಎಂದರೆ 15% ನೀರಿನ ಬಳಕೆಯನ್ನು ಈ ʼಇತರೆʼ ವರ್ಗದಡಿಯಲ್ಲಿ ಸೇರಿಸಲಾಗಿದೆ. ನದಿಗಳಲ್ಲಿ 15.6% ನಷ್ಟು ನೀರು ಕಳೆದುಹೋಗುತ್ತದೆ ಮತ್ತು 16.7% ನಷ್ಟು ನೀರು ಆವಿಯಾಗುತ್ತದೆ.

ನೀರಾವರಿಸಂಭ್ಯಾವತೆ ಮತ್ತು ಬಳಕೆ

ಮಹಾರಾಷ್ಟ್ರವು ಇದುವರೆಗೆ 3877 ರಾಜ್ಯ ವಲಯದ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಿದೆ. ಇದರಲ್ಲಿ 87 ದೊಡ್ಡ, 297 ಮಧ್ಯಮ ಮತ್ತು 3493 ಸಣ್ಣ ಯೋಜನೆಗಳು ಸೇರಿವೆ. 85 ಲಕ್ಷ ಹೆಕ್ಟೇರ್ ಗರಿಷ್ಠ ನೀರಾವರಿ ಸಾಮರ್ಥ್ಯದಲ್ಲಿ  ರಾಜ್ಯವು 73.494 ಲಕ್ಷ ಹೆಕ್ಟೇರ್ ನೀರಾವರಿ ಸಾಮರ್ಥ್ಯವನ್ನು ಸೃಷ್ಟಿಸಿದೆ. ರಾಜ್ಯ ವಲಯದ ಯೋಜನೆಗಳ ನಿಜವಾದ ನೀರಾವರಿ ಪ್ರದೇಶವು 41.6 L ಹೆಕ್ಟೇರ್‌ (77%) ಆಗಿತ್ತು. ಸ್ಥಳೀಯ ವಲಯದ ಯೋಜನೆಗಳ ಮಾಹಿತಿ ಲಭ್ಯವಿಲ್ಲ. ಈ ಯೋಜನೆಗಳು ದುರದೃಷ್ಟವಶಾತ್ “ನಿರ್ಮಿಸಿ ಮರೆತುಹೋದ” ವರ್ಗಕ್ಕೆ ಸೇರುತ್ತವೆ. ನಿರ್ವಹಣೆಯ ಅನುಪಸ್ಥಿತಿಯು ಇದಕ್ಕೆ ಮುಖ್ಯ ಕಾರಣವಾಗಿದೆ.

ರಾಜ್ಯ ವಲಯ ಯೋಜನೆಗಳಲ್ಲಿ ಉತ್ತಮ ನೀರಾವರಿ ಸಾಮರ್ಥ್ಯವನ್ನು ಪರಿಗಣಿಸದೆ ಹೋದಲ್ಲಿ ವಾಸ್ತವವಾದ ನೀರಾವರಿ ಪ್ರದೇಶವು ಸರಾಸರಿ 45.4% ಮಾತ್ರ. ಬಾವಿ ನೀರಾವರಿಯೊಂದಿಗೆ ಇದು 69%ಗೆ ಹೆಚ್ಚುತ್ತದೆ. ಸೈದ್ಧಾಂತಿಕವಾಗಿ ಹೇಳುವುದಾದರೆ, ಬಾವಿ ನೀರಾವರಿ ಒಂದು ಆಕಸ್ಮಿಕ. ಅದು ಯೋಜನೆಯಲ್ಲಿ ಸೇರಿಲ್ಲ. ಬಾವಿ ನೀರಾವರಿಯ ವೆಚ್ಚ ಬಂಡವಾಳವನ್ನು ರೈತರೇ ಭರಿಸುತ್ತಾರೆ. ಇಡೀ ರಾಜ್ಯದಲ್ಲಿ ಕಬ್ಬು ಬೆಳೆಯುವ ಸರಾಸರಿ ಪ್ರದೇಶವು (483000 ಹೆಕ್ಟೇರ್)‌ 60% ಆಗಿದೆ.

ಅಣೆಕಟ್ಟುಗಳು ಪೂರ್ಣ ಸಾಮರ್ಥ್ಯದವರೆಗೆ ತುಂಬುವುದಿಲ್ಲ; ಸರಾಸರಿ ನೇರ ಸಂಗ್ರಹಣೆಯು 64% ಆಗಿದೆ. ಇದಕ್ಕೆ ಎರಡು ಕಾರಣಗಳಿವೆ. ಮೊದಲನೆಯದು, ಯೋಜನೆಯನ್ನು ಕಾರ್ಯಸಾಧ್ಯವಾಗಿಸಲು, ಲಭ್ಯವಿರುವ ನೀರಿನ ಮಟ್ಟವನ್ನು ಪರಿಗಣಿಸಲಾಗುತ್ತದೆ. ಎರಡನೆಯದು, ಯೋಜನೆಯ ಜಲಾನಯನ ಪ್ರದೇಶದಲ್ಲಿ ಹೆಚ್ಚುವರಿ ಮಧ್ಯಮ ಮತ್ತು ಸಣ್ಣ ನೀರಾವರಿ ಯೋಜನೆಗಳು ಮತ್ತು ಕೃಷಿ ಹೊಂಡಗಳ ಕಾರಣದಿಂದ ಅಧಿಕೃತ / ಅನಧಿಕೃತ ಪ್ರವಾಹದ ನೀರನ್ನು ಹಿಡಿದಿಡುವುದು. ಯಾವುದೇ ಉದ್ದೇಶಕ್ಕಾಗಿ ಯಾವುದೇ ವಿಧಾನದಿಂದ ಎಲ್ಲಿಯಾದರೂ ಶೇಖರಿಸಲಾದ ನೀರು ಪ್ರವಾಹದ ಪರಿಣಾಮವನ್ನು ಉಂಟುಮಾಡಬಲ್ಲದು. ನೀರು ನಿರ್ವಹಣೆ ಎನ್ನುವುದು ಶೂನ್ಯಸಂಪಾದನೆ ಆಟದಂತೆ.

ಒಟ್ಟಾರೆ ಯೋಜನೆಯ ಫಲಕಾರಿತ್ವ

ಒಟ್ಟಾರೆ ಯೋಜನೆಯ ಫಲಕಾರಿತ್ವ (Overall Project Efficiency – OPE) ಎನ್ನುವುದು ಎಲ್ಲ ಘಟಕಗಳ ದಕ್ಷತೆಯ ಫಲವಾಗಿರುತ್ತದೆ. ಕೆಳಗೆ ಅದನ್ನು ವಿವರಿಸಲಾಗಿದೆ-

OPE = Emc * Edyy* Eminor* Efc* Efarm (ಇಲ್ಲಿ Emc ಎಂದರೆ ಮುಖ್ಯ ಕಾಲುವೆಯ ದಕ್ಷತೆ, Edy ಎಂದರೆ ವಿತರಣೆಯ ದಕ್ಷತೆ; Eminor ಎಂದರೆ ಮೈನರ್‌ಗಳ‌ (ಮೈನರ್‌ ಡಿಸ್ಟ್ರಿಬ್ಯೂಟರಿ-ಸಣ್ಣ ಕಾಲುವೆಗಳು) ದಕ್ಷತೆ; Efc ಕ್ಷೇತ್ರ ಕಾಲುವೆಯ ದಕ್ಷತೆ ಮತ್ತು Efarm ಕ್ಷೇತ್ರ ಅಳವಡಿಕೆಯ ದಕ್ಷತೆ. ಪ್ರತಿಯೊಂದು ಘಟಕವೂ ಮುಖ್ಯ. ಯಾವುದೇ ಘಟಕದ ದಕ್ಷತೆಯು ಕಡಿಮೆಯಾದಲ್ಲಿ ಅದು OPEಯನ್ನು ಕಡಿಮೆಮಾಡುತ್ತದೆ.

 

ಘಟಕ

 

ದಕ್ಷತೆ

ಕಾಂಕ್ರಿಟ್‌ ಕಾಲುವೆ

ಮಣ್ಣಿನ ಕಾಲುವೆ

ಮುಖ್ಯ ಕಾಲುವೆ

0.95

0.85

ವಿತರಣೆ

0.9

0.85

ಮೈನರ್‌ (ಸಣ್ಣ)

0.9

0.85

ಕ್ಷೇತ್ರ ಕಾಲುವೆ

0.9

0.85

ಕ್ಷೇತ್ರ ಅಳವಡಿಕೆ

0.75

0.75

OPE

0.52

0.39

ಮುಖ್ಯ ಕಾಲುವೆ, ವಿತರಣೆ ಮತ್ತು ಮೈನರ್‌ (ಸಣ್ಣ) ಕಾಲುವೆಗಳು ಒಟ್ಟಾಗಿ ಮುಖ್ಯ ವ್ಯವಸ್ಥೆಯನ್ನು ರೂಪಿಸುತ್ತದೆ (ಚಿತ್ರ-೧). ಇದು ಸಾಮಾನ್ಯವಾಗಿ ಸರ್ಕಾರದ ನಿಯಂತ್ರಣದಲ್ಲಿರುತ್ತದೆ. ಕ್ಷೇತ್ರ ಕಾಲುವೆ ಮತ್ತು ಜಮೀನನಲ್ಲಿನ ನೀರಾವರಿಯು ರೈತರ ಜವಾಬ್ದಾರಿಯಾಗಿರುತ್ತದೆ. ಎಲ್ಲಿ ನೀರು ಬಳಕೆದಾರರ ಸಂಘ (WUA) ರಚನೆಯಾಗಿರುತ್ತದೆಯೋ ಅಲ್ಲಿನ ಮೈನರ್‌ (ಸಣ್ಣ) ಕಾಲುವೆಗಳನ್ನು WUAಗೆ ಹಸ್ತಾಂತರಿಸಲಾಗುತ್ತದೆ.

2006ರ MMISF ನಿಯಮಗಳ ಪ್ರಕಾರ, WRD, GOM ಈ ಕೆಳಗಿನ ಘಟಕವಾರು ಫಲಕಾರಿತ್ವಗಳನ್ನು ಸೂಚಿಸಿದೆ. ಕಾಂಕ್ರಿಟ್‌ ಮತ್ತು ಮಣ್ಣಿನ ಕಾಲುವೆಗಳ ಒಟ್ಟಾರೆ ಕಾರ್ಯಾಚರಣೆಯ ಕ್ಷಮತೆಯು 52% ಮತ್ತು 39% ಆಗಿದೆ. ಅಂದರೆ 100 ಯೂನಿಟ್ ನೀರನ್ನು ಕಾಲುವೆಯ ಮೂಲದಿಂದ ಬಿಡುಗಡೆ ಮಾಡಿದಲ್ಲಿ, ಕಾಂಕ್ರಿಟ್‌ ಕಾಲುವೆಗಳಲ್ಲಿ ಕೇವಲ 52% ನೀರು ತಲುಪಬೇಕಾದಲ್ಲಿ ತಲುಪುತ್ತದೆ. ಮಣ್ಣಿನ ಕಾಲುವೆಗಳಲ್ಲಿ ಅದರ ಪ್ರಮಾಣ 39% ಆಗಿರುತ್ತದೆ.

ಮೇಲೆ ಪ್ರಸ್ತಾಪಿಸಲಾಗಿರುವ ಘಟಕವಾರು ಕ್ಷಮತೆಗಳು ʼವಿನ್ಯಾಸʼ ಮೌಲ್ಯಗಳು! ಕಾಲುವೆಗಳ ವಾಸ್ತವಿಕ ಸ್ಥಿತಿಯನ್ನಾಧರಿಸಿ ನಿಜವಾದ ಮೌಲ್ಯಗಳು ವಿನ್ಯಾಸ ಮೌಲ್ಯಗಳ 50%ನಷ್ಟಿರಬಹುದು. ಗಂಭೀರವಾಗಿ ಪರಿಗಣಿಸಬೇಕಾದ ಅಂಶವೆಂದರೆ: ಈ ರೀತಿಯ ಕಾಲುವೆಗಳಲ್ಲಿ 75 ರಿಂದ 80 ಪ್ರತಿಶತದಷ್ಟು ನೀರು ಸಾಗಣೆ ಮಾಡುವಾಗಲೇ ನಷ್ಟವಾಗುವುದರೊಂದಿಗೆ ಹೆಚ್ಚು ಪರಿಣಾಮಕಾರಿಯಾಗಿರುವುದಿಲ್ಲ. ಸರ್ಕಾರಿ ನಿಯಂತ್ರಿತ ಕಾಂಕ್ರಿಟ್‌ ಮತ್ತು ಮಣ್ಣಿನ ಕಾಲುವೆಗಳ ಮುಖ್ಯ ವ್ಯವಸ್ಥೆಯು (ಅಂದರೆ ಮುಖ್ಯ ಕಾಲುವೆ, ವಿತರಣೆ ಮತ್ತು ಸಣ್ಣ(ಮೈನರ್)‌ ವಿನ್ಯಾಸ ಕ್ಷಮತೆಯು 77% ಮತ್ತು 61% ಇರುತ್ತದೆ.

ಮುಖ್ಯ ವ್ಯವಸ್ಥೆಯನ್ನು ಸಾಕಷ್ಟು ಸರಿಯಾದ ರೀತಿಯಲ್ಲಿ ನಿರ್ವಹಿಸದೆ ಇರುವುದರಿಂದ WUA ಗಳು / ರೈತರು ಅವರಿಗೆ ಸಿಗಬೇಕಾದಷ್ಟು ನೀರನ್ನು ಸಿಗಬೇಕಾದ ಸಮಯದಲ್ಲಿ ಸಿಗಬೇಕಾದ ಸ್ಥಳದಲ್ಲಿ ಪಡೆಯುವುದಿಲ್ಲ. ನೀರಾವರಿ ಯೋಜನೆಗಳಲ್ಲಿನ ಅರಾಜಕತೆಯ ಫಲ! ಈ ಅಸಮರ್ಪಕ ನಿರ್ವಹಣೆಯು ಜಮೀನುಗಳಲ್ಲಿನ ನೀರಾವರಿ ಮತ್ತು WUA ಗಳ ಕಾರ್ಯಕ್ಷಮತೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ.  ಸಾಂಪ್ರದಾಯಿಕ ಮುಖ್ಯ ವ್ಯವಸ್ಥೆಯಲ್ಲಿನ ಅಸಮರ್ಥತೆ ಮತ್ತು ಜಮೀನಿನಲ್ಲಿ ಒತ್ತಡಕ್ಕೊಳಗಾದ ನೀರಾವರಿಯು ವಿಚಿತ್ರ ಸಂಯೋಜನೆಯಾಗಿದ್ದು ಅದು ಒಳ್ಳೆಯ ನೀರಾವರಿ ವ್ಯವಸ್ಥೆಯ ಬೆಂಬಲವಿಲ್ಲದೆ ಕಾರ್ಯನಿರ್ವಹಿಸುತ್ತದೆ.

ಈ ದೃಷ್ಟಿಯಿಂದ, ರಾಜ್ಯವು ತನ್ನ ನೀರಾವರಿ ಯೋಜನೆಗಳನ್ನು ಆಧುನೀಕರಣಗೊಳಿಸುವ ಕುರಿತು ಯೋಚಿಸಲು ಇದು ಸಕಾಲ.

ಪ್ರಸ್ತುತ ಗುಣಲಕ್ಷಣಗಳು ಮತ್ತು ನಿರ್ಬಂಧಗಳುಅವುಗಳನ್ನು ನಿವಾರಿಸಿಕೊಳ್ಳುವುದು ಹೇಗೆ

ಮಹಾರಾಷ್ಟ್ರದ ದೊಡ್ಡ ಪ್ರಮಾಣದ ಸಾರ್ವಜನಿಕ ವಲಯದ ನೀರಾವರಿ ಯೋಜನೆಗಳು ನೀರಾವರಿಗೆ ಮಾತ್ರವಲ್ಲದೆ ನೀರಾವರಿಯೇತರ [ಕುಡಿಯುವ, ದೇಶೀಯ, ಕೈಗಾರಿಕಾ, ಇತ್ಯಾದಿ] ಉದ್ದೇಶಗಳಿಗಾಗಿ ನೀರನ್ನು ಒದಗಿಸುತ್ತವೆ. ಅವು ಏಕಕಾಲಕ್ಕೆ ಹಲವಾರು ಮತ್ತು ಕೆಲವೊಮ್ಮೆ ಸ್ಪರ್ಧಾತ್ಮಕ/ಸಂಘರ್ಷಾತ್ಮಕ ಎನಿಸುವಂತಹ ಉದ್ದೇಶಗಳನ್ನು ಸಾಧಿಸಬೇಕೆಂದು ನಿರೀಕ್ಷಿಸಲಾಗುತ್ತದೆ (ಆದರೆ ಅದಕ್ಕೆ ತಕ್ಕಂತೆ ಇವು ರೂಪಿತವಾಗಿಲ್ಲ). ಮಹಾರಾಷ್ಟ್ರದಲ್ಲಿ ಅಸ್ತಿತ್ವದಲ್ಲಿರುವ ನೀರಾವರಿ ಯೋಜನೆಗಳು ಅಪ್‌ಸ್ಟ್ರೀಂ ನಿಯಂತ್ರಕ, ಹಸ್ತಚಾಲಿತ ನಿಯಂತ್ರಕವನ್ನು ಹೊಂದಿದೆ. ಬಹುತೇಕ ತೆರೆದ ಕಾಲುವೆ ವ್ಯವಸ್ಥೆಗಳನ್ನು ಹೊಂದಿದ್ದು, ವಾಸ್ತವಿಕ ಅಂಕಿಅಂಶಗಳ ಆಧಾರಕ್ಕೆ ಅನುಗುಣವಾದ ಯಾವುದೇ ಬಗೆಯ ಮುಖ್ಯ ನಿಯಂತ್ರಕಗಳು ಮತ್ತು ಅಡ್ಡನಿಯಂತ್ರಕಗಳು ಇರುವುದಿಲ್ಲ. ಅವುಗಳ ಪ್ರಸ್ತುತ ಕಾರ್ಯಕ್ಷಮತೆಯು ನಿಸ್ಸಂಶಯವಾಗಿ ಅವುಗಳ ಮೂಲ ಸ್ವಭಾವ ಮತ್ತು ಅಂತರ್ಗತ ಗುಣಲಕ್ಷಣಗಳ ಫಲಿತವಾಗಿದೆ. ವ್ಯವಸ್ಥೆಯೊಳಗೆ ಇಲ್ಲದೆ ಇರುವುದನ್ನು ನಿರೀಕ್ಷಿಸುವುದು ಸರಿಯಲ್ಲ.

ಬಹುತೇಕ ಎಲ್ಲಾ ಯೋಜನೆಗಳಲ್ಲಿ ಕಾಲುವೆಗಳು ಮತ್ತು DISNET ನಲ್ಲಿ ಅಳತೆ ಮಾಡುವ ಸಾಧನಗಳನ್ನು ಒದಗಿಸಲಾಗಿಲ್ಲ/ನಿರ್ಮಿಸಲಾಗಿಲ್ಲ. ಎಲ್ಲ ಅಳತೆ ಸಾಧನಗಳಿದ್ದರೂ ಅವುಗಳಲ್ಲಿ ಸಾಮಾನ್ಯ ಸಮಸ್ಯೆಗಳು ಇರಬಹುದು. ಅಂದರೆ ತಪ್ಪು ವಿನ್ಯಾಸ, ಸೂಕ್ತವಲ್ಲದ ಸ್ಥಳ, ದೋಷಯುಕ್ತ ನಿರ್ಮಾಣ, ಕಳಪೆ ನಿರ್ವಹಣೆ ಮತ್ತು ದುರಸ್ತಿ (M&R) ಮತ್ತು ವಿಶ್ವಾಸಾರ್ಹವಲ್ಲದ ದಾಖಲೆಗಳಂತಹ ಸಮಸ್ಯೆಗಳನ್ನು ಎದುರಿಸುತ್ತಿರಬಹುದು. ನೀರಾವರಿಯೇತರ ಯೋಜನೆಗಳಲ್ಲಿನ ಪೈಪ್‌ಲೈನುಗಳಲ್ಲಿನ ನೀರಿನ ಮೀಟರ್‌ಗಳ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗೇನೂ ಇಲ್ಲ. ನೀರಿನ ಮೀಟರ್‌ಗಳ ಸರಬರಾಜು, ಅಳವಡಿಕೆ, ನಿರ್ವಹಣೆ, ದುರಸ್ತಿ ಮತ್ತು ಮಾಪನಕ್ಕೆ ಸಾಕಷ್ಟು ಪ್ರಮಾಣದಲ್ಲಿ ವ್ಯವಸ್ಥಿತ ಯೋಜನೆಗಳು ಇದ್ದಂತಿಲ್ಲ.

ಮಹಾರಾಷ್ಟ್ರದ ನೀರಾವರಿ ಯೋಜನೆಗಳು ಮೂಲಭೂತವಾಗಿ ಅಪ್ಸ್ಟ್ರೀಮ್ನಿಯಂತ್ರಕ ವ್ಯವಸ್ಥೆಯನ್ನು ಹೊಂದಿದೆ. ಈ ರೀತಿಯ ವ್ಯವಸ್ಥೆಗಳು ಸರಬರಾಜು ನಿರ್ವಹಣೆಯ ತರ್ಕದ ಪ್ರಕಾರದ ಕಾರ್ಯನಿರ್ವಹಿಸುತ್ತವೆ. ಅಪ್‌ಸ್ಟ್ರೀಮ್‌ ನೀರಿನ ನಿಯಂತ್ರಕ ಅಂಶವನ್ನು (ಉದಾ: ಅಡ್ಡ ನಿಯಂತ್ರಕ) ನಿರ್ವಹಿಸಲಾಗಿದೆ. ಅಪ್‌ಸ್ಟ್ರೀಂ ವ್ಯವಸ್ಥೆಯ ಆಪರೇಟರ್‌ಗಳು ನೀರು ವಿತರಣೆಗೆ ಸಂಬಂಧಿಸಿದ ನಿರ್ಧಾರಗಳನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ತೆಗೆದುಕೊಳ್ಳುತ್ತಾರೆ. ನೀರು ಬಳಕೆದಾರರ ಅಗತ್ಯಗಳು ಮತ್ತು ಬೇಡಿಕೆಗಳನ್ನು ತೀರ ವಿರಳವಾಗಿ ಪರಿಗಣಿಸಲಾಗುತ್ತದೆ. ಅಧಿಕಾರಶಾಹಿ ತೆಗೆದುಕೊಳ್ಳುವ ನಿರ್ಧಾರಗಳನ್ನು ಬಳಕೆದಾರರ ಮೇಲೆ ಹೇರಲಾಗುತ್ತದೆ. ಆದ್ದರಿಂದ, ಬಹುಪಾಲು ಬಳಕೆದಾರರು ಸಾಮಾನ್ಯವಾಗಿ ಅಗತ್ಯಕ್ಕೆ ಸಾಲದಷ್ಟು ಪ್ರಮಾಣದ ನೀರನ್ನು ತಪ್ಪಾದ ಸಮಯದಲ್ಲಿ ಅನಿರೀಕ್ಷಿತ ಅವಧಿಯವರೆಗೆ ಪಡೆಯುತ್ತಾರೆ. ಇದು ನೀರು ಬಳಕೆದಾರರ ಸಂಘಗಳ ಕಳಪೆ ಪ್ರದರ್ಶನದ ಹಿಂದಿನ ಪ್ರಮುಖ ಕಾರಣವಾಗಿದೆ. ಸಹಭಾಗಿತ್ವದ ನೀರಾವರಿ ನಿರ್ವಹಣೆಯನ್ನು (PIM) ಜಲನೀತಿಯಲ್ಲಿ ಅಂಗೀಕರಿಸಲಾಗಿದೆ. ಕಾಯಿದೆ ಮತ್ತು ನಿಯಮಗಳಲ್ಲಿ ಒದಗಿಸಲಾಗಿರುವ ಸಾಂಪ್ರದಾಯಿಕ ಮುಖ್ಯ ವ್ಯವಸ್ಥೆಯು PIM ಗೆ ಹೊಂದಿಕೆಯಾಗುವುದಿಲ್ಲ. ಏಕೆಂದರೆ ಆ ರೀತಿಯ ಬದಲಾವಣೆಗೆ ತಕ್ಕಂತೆ ಇಂಜಿನಿಯರಿಂಗ್‌ ದೃಷ್ಟಿಕೋನದಿಂದ ಆ ರೀತಿಯಲ್ಲಿ ವಿನ್ಯಾಸಗೊಳಿಸಿಲ್ಲ.

ಡೌನ್ಸ್ಟ್ರೀಂ (ಕೆಳಹರಿವು) ನಿಯಂತ್ರಕ ವ್ಯವಸ್ಥೆಗಳು, ಇದಕ್ಕೆ ವಿರುದ್ಧವಾಗಿ, ಬೇಡಿಕೆಗೆ ಅನುಗುಣವಾಗಿ ಕಾರ್ಯನಿರ್ವಹಿಸುತ್ತದೆ. ಸಹಯೋಗ ನೀರಾವರಿ ನಿರ್ವಹಣೆಗಾಗಿ ಅವುಗಳನ್ನು ರೂಪಿಸಲಾಗಿದೆ. ಡೌನ್‌ಸ್ಟ್ರೀಮ್‌ (ಕೆಳಹರಿವು)ನ ನೀರಿನ ಮಟ್ಟವನ್ನು ನಿಯಂತ್ರಿಸಿ ನಿರ್ವಹಿಸಲಾಗುತ್ತದೆ. ಈಗಾಗಲೇ ತುಂಬಿರುವ ಕಾಲುವೆಯಿಂದ ನೀರನ್ನು ಹೊರಬಿಡುವ ನಿರ್ಧಾರವನ್ನು ಬಳಕೆದಾರರು/WUAಗಳು ತೆಗೆದುಕೊಳ್ಳುತ್ತಾರೆ. ಅವರು ನೀರನ್ನು ತೆಗೆದುಕೊಳ್ಳುತ್ತಿದ್ದಂತೆ ಬೇಡಿಕೆಯು ಅಪ್‌ಸ್ಟ್ರೀಮ್‌ (ಮೇಲ್ಮಟ್ಟ/ಮೇಲ್ಮುಖ) ಕಡೆಗೆ ತಿರುಗುತ್ತದೆ. ಅಂತಿಮವಾಗಿ ನೀರು ಬಿಡುವ ಮೂಲಕ ವ್ಯವಸ್ಥೆಯು ಪ್ರತಿಕ್ರಿಯಿಸುತ್ತದೆ. ಇದನ್ನು “ಬೇಡಿಕೆಗೆ ಅನುಗುಣವಾಗಿ” ಎನ್ನುವ ತರ್ಕದ ಮೇಲೆ ವಿನ್ಯಾಸಗೊಳಿಸಲಾಗಿದೆ. ಉದಾ: ಮಜಲ್‌ಗಾಂವ್ ಯೋಜನೆಯಲ್ಲಿ ಡೈನಾಮಿಕ್ ನಿಯಂತ್ರಕವು ಡೌನ್‌ಸ್ಟ್ರೀಮ್ ನಿಯಂತ್ರಣ ವ್ಯವಸ್ಥೆಗಳ ರೂಪಾಂತರಗಳಲ್ಲಿ ಒಂದಾಗಿದೆ! 1990 ರ ದಶಕದ ಆರಂಭದಲ್ಲಿ ಈ ಪರಿಕಲ್ಪನೆಯನ್ನು ಪರಿಚಯಿಸಿದ ಮಜಲ್ಗಾಂವ್ ಯೋಜನೆಯನ್ನು ಮರುಪರಿಶೀಲಿಸುವುದು ಅವಶ್ಯಕ.

ಆದ್ದರಿಂದ, ಡೌನ್‌ಸ್ಟ್ರೀಮ್ ನಿಯಂತ್ರಣ ವ್ಯವಸ್ಥೆಗಳ ತತ್ವಗಳನ್ನು ಬಳಸಿಕೊಂಡು ಪ್ರಾಯೋಗಿಕವಾಗಿ ಹೊಸ ಯೋಜನೆಯನ್ನು ವಿನ್ಯಾಸಗೊಳಿಸಬಹುದು ಎಂದು ಪ್ರಸ್ತಾಪಿಸಲಾಗಿದೆ. ಅಲ್ಲದೆ, ಮುಖ್ಯ ವ್ಯವಸ್ಥೆಯನ್ನು ಅನೇಕ ಇತರ ಕ್ರಮಗಳ ಮೂಲಕ ಆಧುನೀಕರಿಸಬಹುದು. ಮುಖ್ಯ ವ್ಯವಸ್ಥೆಯನ್ನು ಆಧುನೀಕರಿಸದಿದ್ದರೆ, ಅದರ ಗುಣಲಕ್ಷಣಗಳನ್ನು ಬದಲಾಯಿಸದಿದ್ದರೆ, ಅದರ ಕಾರ್ಯಕ್ಷಮತೆಯಲ್ಲಿ ಯಾವುದೇ ಗಮನಾರ್ಹ ಸುಧಾರಣೆ ಕಂಡುಬರುವುದಿಲ್ಲ. ನೀರಿನ ಮಟ್ಟ ಮತ್ತು ಹರಿವನ್ನು ನಿಯಂತ್ರಿಸಲು, ಹತೋಟಿಯಲ್ಲಿಡಲು, ಅಳೆಯಲು ಮುಖ್ಯ ವ್ಯವಸ್ಥೆಗೆ ಈ ಸೌಲಭ್ಯಗಳ ತುರ್ತು ಅಗತ್ಯವಿದೆ. ಮುಖ್ಯ ವ್ಯವಸ್ಥೆಯು ಉತ್ತಮವಾಗಿದ್ದಲ್ಲಿ, ನೀರಿನ ನಿರ್ವಹಣೆ, ಆಡಳಿತ ಮತ್ತು ನಿಯಂತ್ರಣ (WMGR) ಉತ್ತಮವಾಗಿರುತ್ತದೆ. ಇದರಿಂದ ಹಲವು ಉಪಯೋಗಗಳಿದ್ದು, ನೀರಿನ ಬಳಕೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ.

ಕೆಲವು ಸಂಭಾವ್ಯ ಪರಿಹಾರಗಳು

) ನಿಯಂತ್ರಕಗಳು ಮತ್ತು ಗೇಟ್ಗಳ ಆಧುನೀಕರಣ

  • ಮೋಟಾರ್‌ ಚಾಲಿತ HR & CR ಗೇಟ್‌ಗಳನ್ನು ಒದಗಿಸಿ ಮತ್ತು ನೀರಿನ ಕಾನೂನುಗಳನ್ನು ಅನುಷ್ಠಾನಗೊಳಿಸುವ ಮೂಲಕ ಅವುಗಳನ್ನು ರಕ್ಷಿಸಿ, ನಿರ್ವಹಣೆ ಮಾಡಿ ಮತ್ತು ನಡೆಸಬಹುದಾಗಿದೆ. ವಿಶೇಷ ಗೇಟ್‌ಗಳು M & R ಮೊಬೈಲ್‌ ಘಟಕಗಳು ಮತ್ತು ತರಬೇತಿ ಪಡೆದ ಆಪರೇಟರ್‌ಗಳನ್ನು ನೇಮಿಸಿ ಇವುಗಳನ್ನು ನಿರ್ವಹಿಸಬಹುದಾಗಿದೆ. ಶಾಖೆಗಳಿಗೆ ಡಕ್‌ಬಿಲ್‌ ಅಥವ ಅಡ್ಡಗಟ್ಟೆಗಳನ್ನು ಕಟ್ಟುವುದು.
  • ಸಾಂಪ್ರದಾಯಿಕ HR ಗೇಟ್‌ಗಳ ಬದಲಿಗೆ ವಿತರಕಗಳನ್ನು ಮತ್ತು ಮುಖ್ಯ ಕಾಲುವೆಯಲ್ಲಿನ ಸಾಂಪ್ರದಾಯಿಕ CR ಗೇಟ್‌ಗಳನ್ನು ಬದಲಿಸಿ ಸ್ವಯಂಚಾಲಿತ ಗೇಟುಗಳನ್ನು ಅಳವಡಿಸುವುದು.
  • ಆರಂಭಿಸಲಾಗುವ ಮುಖ್ಯ ಯೋಜನೆಗಳ ಮುಖ್ಯ ಕಾಲುವೆಗಳಲ್ಲಿ ಮೇಲ್ವಿಚಾರಣಾ ನಿಯಂತ್ರಣ ಮತ್ತು ದತ್ತಾಂಶ ಸ್ವಾಧೀನ (SCADA)ವನ್ನು ಪರಿಚಯಿಸುವುದು.

ಮೇಲೆ ಸೂಚಿಸಲಾದ ಮೂರು ಪರಿಹಾರಗಳನ್ನು “ಸರಿಯಾದ ರೀತಿಯಲ್ಲಿ ಬೆರೆಸಿ”. ಈ ಪರಿಹಾರಗಳನ್ನು ಬಳಸಿ ಪ್ರಾಯೋಗಿಕ ಯೋಜನೆಗಳನ್ನು ಕೈಗೊಳ್ಳಲು ಸೂಚಿಸಲಾಗಿದೆ.

) ಅಳತೆಸಾಧನಗಳ ಆಧುನೀಕರಣ

ಪರಿಸ್ಥಿತಿಯನ್ನು ಸುಧಾರಿಸಲು ಮೂರು ದಾರಿಗಳಿವೆ. ಅವು ಈ ರೀತಿ ಇದೆ:

  • ದೊಡ್ಡ ಪ್ರಮಾಣದಲ್ಲಿ ಅಳತೆ ಸಾಧನಗಳನ್ನು ಒದಗಿಸಿ. WALMI ಪ್ರಕಟಣೆ ಸಂಖ್ಯೆ 36, ನೀರಿನ ಹಕ್ಕುಗಳ MWRRA ತಾಂತ್ರಿಕ ಕೈಪಿಡಿ, MMISF ಕಾಯಿದೆ, 2005 ಮತ್ತು ನಿಯಮಗಳು, 2006 ಮತ್ತು MWRRA ಕಾಯಿದೆ, 2005 ರ ಪ್ರಕಾರ ಹರಿವಿನ ಮಾಪನವನ್ನು ಮಾಡಿ.
  • ಪರೋಕ್ಷ ನೀರು ಮಾಪನಕ್ಕೆ ಬದಲಾವಣೆ. ಸಾಂಪ್ರದಾಯಿಕ HR ಗೇಟ್‌ಗಳಿಗೆ ಬದಲಿಯಾಗಿ ವಿತರಕಗಳನ್ನು ಅಳವಡಿಸಿದಲ್ಲಿ ಮಾಪನ ಸಾಧನಗಳ ಅಗತ್ಯವನ್ನು ಕಡಿಮೆಗೊಳಿಸಬಹುದು. ಇವು ನೀರನ್ನು ಸೂಕ್ತ ರೀತಿಯಲ್ಲಿ ಬಿಡುಗಡೆ ಮಾಡುತ್ತದೆ. ನೀರು ಬಿಟ್ಟ ಅವಧಿಯನ್ನಾಧರಿಸಿ ಪ್ರಮಾಣವನ್ನು ಅಳೆಯಬಹುದು.

ಎರಡು ಪರಿಹಾರಗಳನ್ನು “ಸೂಕ್ತ ರೀತಿಯಲ್ಲಿ ಬೆರೆಸಿ ಬಳಸಿ”.

ವಾಲ್ಯೂಮೆಟ್ರಿಕ್ ಸರಬರಾಜು ವ್ಯವಸ್ಥೆಗಳಿಗೆ ಬದಲಾಯಿಸಲು ಪ್ರಸ್ತಾವಿತ ಮಾರ್ಗಸೂಚಿ

ವಾಲ್ಯೂಮೆಟ್ರಿಕ್‌ ಸರಬರಾಜು ಉತ್ತಮ ರೀತಿಯ ನಿರ್ವಹಣೆ ಮತ್ತು ಚಾಲನಾ ವ್ಯವಸ್ಥೆಯನ್ನು ಬೇಡುತ್ತದೆ. ಇದು ಸಾಗಣೆಯ ನಷ್ಟ ಮತ್ತು ಸಮಯ ನಿರ್ವಹಣೆಯನ್ನು ಮಾಡುತ್ತದೆ. ನೀರಿನ ಮಟ್ಟ ಮತ್ತು ಹೊರಬಿಡುವಿಕೆಯನ್ನು ನಿಯಂತ್ರಿಸಲು Q-ಟೇಬಲ್‌ಗಳೊಂದಿಗೆ HR & CR ಕಾರ್ಯನಿರ್ವಾಹಕ ಗೇಟುಗಳು ಅಗತ್ಯ. ಕ್ರಿಯಾತ್ಮಕವಾಗಿ, ನಿಖರವಾಗಿ ಮಾಪನಾಂಕ ಗುರುತಿಸುವಂತಹ ಮಾಪನ ಸಾಧನಗಳು;ಗೇಟುಗಳ ಕಾರ್ಯಾಚರಣೆ ಮತ್ತು ನಿರ್ವಹಣೆಗೆ ಸಾಕಷ್ಟು ಸಂಖ್ಯೆಯಲ್ಲಿ ತರಬೇತಿ ಪಡೆದ ಕಾಲುವೆ ನಿರ್ವಾಹಕರು; ಹರಿವಿನ ಪ್ರಮಾಣವನ್ನು ವಿಶ್ವಾಸಾರ್ಹ ರೀತಿಯಲ್ಲಿ ದಾಖಲಿಸುವ ಮಾಪನ ಸಾಧನಗಳು; ವಿಶೇಷ ಗೇಟುಗಳು ಮತ್ತು ತ್ವರಿತ ಹಾಗೂ ಸಮರ್ಪಕ ನಿರ್ವಹಣೆ, ದುರಸ್ತಿಗಾಗಿ ಮಾಪನಾಂಕ ಸಾಧನಗಳ ರಿಪೇರಿ ಮಾಡುವಂತಹ ಮೊಬೈಲ್‌ ಘಟಕಗಳು ಅಗತ್ಯ.

ಉಪಸಂಹಾರ

ವಾಲ್ಯೂಮೆಟ್ರಿಕ್ ಸಪ್ಲೈ (VS) ಒಂದು ಸ್ವೀಕೃತ ತತ್ವವಾಗಿದೆ. ಈ ವ್ಯವಸ್ಥೆಯಲ್ಲಿ ʼಯಾಕೆʼ ಮತ್ತು ʼಏನುʼ ಎನ್ನುವ ವಿಷಯಗಳ ಕುರಿತು ಈಗಾಗಲೇ ರಾಜ್ಯ ಜಲನೀತಿ ಮತ್ತು ಹಲವಾರು ಪ್ರಕಟಣೆಗಳಲ್ಲಿ ತಿಳಿಸಲಾಗಿದೆ. ಇಲ್ಲಿನ ದೊಡ್ಡ ಸಂದಿಗ್ಧತೆ – ಹೇಗೆ? ಯಾವಾಗ? ಎಷ್ಟರ ಮಟ್ಟಿಗೆ? ಯಾರಿಂದ? ತೆರಬೇಕಾದ ಬೆಲೆಯೆಷ್ಟು?  ವೈಯಕ್ತಿಕ ನೀರಿನ ಬಳಕೆದಾರರ ಸಂಘದ ಮಟ್ಟದಲ್ಲಿ ವಾಲ್ಯೂಮೆಟ್ರಿಕ್ ಪೂರೈಕೆ ವ್ಯವಸ್ಥೆಗಳನ್ನು ಪರಿಚಯಿಸುವುದು ತುಲನಾತ್ಮಕವಾಗಿ ಸುಲಭ. ಯೋಜನಾ ಮಟ್ಟದಲ್ಲಿ ಅವುಗಳನ್ನು ಪರಿಚಯಿಸುವುದು ನಿಜವಾದ ಸವಾಲಾಗಿದೆ. ಇಲ್ಲಿ ಅಗತ್ಯವಾಗಿ ಬೇಕಾದದ್ದು ಸುವ್ಯವಸ್ಥಿತ ವಿಧಾನ.

ಹೊಸ ವ್ಯವಸ್ಥೆಗಳು HR ಮತ್ತು CR ಗೇಟ್‌ಗಳ ಕೈಗಾರಿಕಾ ಉತ್ಪಾದನೆ, ಡಕ್‌ಬಿಲ್ ಮಾದರಿಗಳು, ಅಳತೆ ಸಾಧನಗಳು ಮತ್ತು ನೀರಿನ ಮೀಟರ್‌ಗಳ ಸ್ಥಾಪನೆ, ನಿರ್ವಹಣೆ, ರಿಪೇರಿ, ಮಾಪನಾಂಕ ನಿರ್ಣಯ, ಸ್ವಯಂಚಾಲಿತ ಡೇಟಾ ಸಂಗ್ರಹಣೆ ಇತ್ಯಾದಿಗಳನ್ನು ಒಳಗೊಂಡಿರುವ ಹೊಸ ಅವಕಾಶಗಳನ್ನು ಸಹ ಸೃಷ್ಟಿಸುತ್ತವೆ. CTF, SRO ಮತ್ತು ವಿತರಕಗಳನ್ನು ಕೆಲವು ತರಬೇತಿಯ ನಂತರ ಸ್ಥಳೀಯ ಸಣ್ಣ / ಮಧ್ಯಮ ಕೈಗಾರಿಕೋದ್ಯಮಿಗಳು ತಯಾರಿಸಬಹುದು. ಇದು ನಮ್ಮ ಉದ್ಯಮಿಗಳಿಗೆ ಬಹಳ ದೊಡ್ಡ ವ್ಯಾಪಾರ ಅವಕಾಶ ಒದಗಿಸುತ್ತದೆ. ಅವರು ವಾರ್ಷಿಕ ನಿರ್ವಹಣೆ ಒಪ್ಪಂದಗಳು ಮತ್ತು ಮಾಪನಾಂಕ ನಿರ್ಣಯ ಕಾರ್ಯಗಳನ್ನು ಸಹ ತೆಗೆದುಕೊಳ್ಳಬಹುದು; ಗೇಟ್ಸ್ ನಿರ್ದೇಶನಾಲಯ / ಕಾರ್ಯಾಗಾರವು ರೇಡಿಯಲ್ ಗೇಟ್‌ಗಳನ್ನು ಅಭಿವೃದ್ಧಿಪಡಿಸುವ ಅನುಭವವನ್ನು ಹೊಂದಿದೆ; ತಂತ್ರಜ್ಞಾನ ವರ್ಗಾವಣೆಗಾಗಿ ಅಂತಾರಾಷ್ಟ್ರೀಯ ಕಂಪನಿಗಳೊಂದಿಗೆ ಒಪ್ಪಂದಗಳನ್ನೂ ಮಾಡಿಕೊಳ್ಳಬಹುದು.

ಆಧುನೀಕರಣವನ್ನು ಅತ್ಯುತ್ತಮವಾಗಿ ಮಾಡಲು ಸಾಧ್ಯ. 21ನೇ ಶತಮಾನದ ಬೇಡಿಕೆಗಳಿಗೆ ತಕ್ಕಂತೆ ನಮ್ಮ ನೀರಾವರಿ ವ್ಯವಸ್ಥೆಗಳನ್ನು ಹೊಂದಾಣಿಕೆ ಮಾಡಿಕೊಳ್ಳುವುದು ಹೇಗೆ ಎಂಬುದು ನಮ್ಮ ಮುಂದಿರುವ ನಿಜವಾದ ಸವಾಲಾಗಿದೆ. ತಂತ್ರಜ್ಞಾನವೇ ಎಲ್ಲವೂ ಅಲ್ಲ! ನಿಜ! ಆದರೆ ಪಾಠ ಕಲಿಯಲು ಉದಾಸೀನತೆ ತೋರುವುದು ಮತ್ತು  ನಿರಾಕರಿಸುವುದು ಸರಿಯಲ್ಲ. ನೀರಾವರಿ ವಲಯ ಮತ್ತು ವಿಶೇಷವಾಗಿ ನೀರಾವರಿ ಯೋಜನೆಗಳು ಕಾಲಕ್ಕೆ ತಕ್ಕಂತೆ ಬದಲಾಗಬೇಕಾಗಿದೆ. ಇದಕ್ಕೆ ಜಾಗತಿಕ ಉದಾಹರಣೆಗಳೂ ಇವೆ. ಇಸ್ರೇಲ್‌ನಲ್ಲಿ ರಾಷ್ಟ್ರೀಯ ವಾಹಕ, USA ನಲ್ಲಿ ಕ್ಯಾಲಿಫೋರ್ನಿಯಾ ಅಕ್ವೆಡಕ್ಟ್ ಮತ್ತು ಫ್ರಾನ್ಸ್‌ನ ಪ್ರೊವೆನ್ಸ್-ಡಿ-ಕೆನಾಲ್ ಕಾಲುವೆ ಯಾಂತ್ರೀಕೃತಗೊಂಡ ಮುಖ್ಯ ವ್ಯವಸ್ಥೆಯ ಕೆಲವು ಅತ್ಯುತ್ತಮ ಉದಾಹರಣೆಗಳಾಗಿವೆ.

ಪರಾಮರ್ಶನಗಳು

WRD, GOM, Water Resources Management, 11.1 Irrigation, Report of Integrated State Water Plan committee, 2017

Pradeep Purandare, Making Irrigation Systems Compatible & Amenable to Modern Concepts and Improving Institutional & Legal Arrangements, A submission to the drafting Committee for National Water Policy on 27.1.2020

 

Pradeep Purandare
Retired Associate Professor, WALMI, Aurangabad.
Expert and Member, State Level Committees and Expert Panels
Blog: jaagalyaa-thewhistleblower.blogspot.in, M 9822565232, E-mail: pradeeppurandare@gmail.com

ಆಂಗ್ಲ ಮೂಲ : ಲೀಸಾ ಇಂಡಿಯಾ; ಸಂಪುಟ :೨೫; ಸಂಚಿಕೆ : ೩ ; ಸೆಪ್ಟಂಬರ್ ೨೦‌೨‌೩

Recent Posts