ಕೃಷಿ ವಿಜ್ಞಾನದಲ್ಲಿ ಯಶಸ್ಸನ್ನು ಅಭಿವೃದ್ಧಿಪಡಿಸುವುದು


ಉತ್ಸಾಹ, ಸಮರ್ಪಣೆ ಮತ್ತು ಸೃಜನಶೀಲತೆ ಜೀವನವನ್ನು ಹೇಗೆ ಬದಲಿಸುತ್ತದೆ ಎನ್ನುವುದಕ್ಕೆ ರೆಹಾನಾ ಅವರ ಕಥೆಯು ಸ್ಪೂರ್ತಿದಾಯಕ ಉದಾಹರಣೆಯಾಗಿದೆ. ಕೃಷಿವಿಜ್ಞಾನದ ಮೂಲಕ, ಅವರು ತಮ್ಮ ಜಮೀನಿನ ಉತ್ಪಾದಕತೆಯನ್ನು ಬದಲಿಸುವುದರೊಂದಿಗೆ ಪರಿಸರ ಸಂರಕ್ಷಣೆ ಮತ್ತು ಸಮುದಾಯದ ಯೋಗಕ್ಷೇಮಕ್ಕೆ ಕೊಡುಗೆ ನೀಡಿದರು. ಅಣಬೆ ಬೆಳೆಯುವ ಕಲೆಯನ್ನು ಕಲಿಯುವುದರಿಂದ ಹಿಡಿದು ಕೃಷಿಪರಿಸರ ಫಾರಂ ರೂಪಿಸುವವರೆಗಿನ ಅವರ ಪ್ರಯಾಣವು ಸಮುದಾಯದ ಮೇಲೆ ಇತ್ಯಾತ್ಮಕ ಪರಿಣಾಮ ಬೀರಿರುವುದನ್ನು ತೋರುತ್ತದೆ.


ಮಹಿಳೆಯರು, ಕೃಷಿಪರಿಸರ ಜ್ಞಾನದ ರಕ್ಷಕರಾಗಿದ್ದು ಆಹಾರದ ಪ್ರಾಥಮಿಕ ಉತ್ಪಾದಕರಾಗಿ, ಭೂಮಿಯ ರಕ್ಷಕರಾಗಿ ಶತಮಾನಗಳಿಂದ ಕೃಷಿಯಲ್ಲಿ ಮೂಲಭೂತ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಕೃಷಿವಿಜ್ಞಾನದಲ್ಲಿ, ಮಹಿಳೆಯರ ಜ್ಞಾನ ಮತ್ತು ಕೌಶಲ್ಯಗಳು ತಮ್ಮ ಸಮುದಾಯದ ಅಗತ್ಯಗಳು ಮತ್ತು ಸಾಂಸ್ಕೃತಿಕ ಮೌಲ್ಯಗಳೊಂದಿಗೆ ಹೊಂದಿಕೊಳ್ಳುವ ಸುಸ್ಥಿರ ಕೃಷಿ ಪದ್ಧತಿಗಳನ್ನು ಉತ್ತೇಜಿಸುವಲ್ಲಿ ಅಮೂಲ್ಯವಾಗಿವೆ. ಸ್ಥಳೀಯ ಪರಿಸರ ವ್ಯವಸ್ಥೆ, ಸಾಂಪ್ರದಾಯಿಕ ಕೃಷಿ ತಂತ್ರಗಳು ಮತ್ತು ಬೀಜ ಸಂರಕ್ಷಣಾ ವಿಧಾನದ ವ್ಯಾಪಕ ಜ್ಞಾನವನ್ನು ಪೀಳಿಗೆಯಿಂದ ಪೀಳಿಗೆಗೆ ರವಾನಿಸಲಾಗಿದೆ. ನಿಸ್ಸಂಶಯವಾಗಿ, ಸುಸ್ಥಿರ ಮತ್ತು ಅಂತರ್ಗತ ಆಹಾರ ವ್ಯವಸ್ಥೆಯನ್ನು ರೂಪಿಸುವಲ್ಲಿ ಮಹಿಳೆಯರು ಗಮನಾರ್ಹ ಕೊಡುಗೆ ನೀಡಿದ್ದಾರೆ ಆದರೆ ಇದನ್ನು ಕೆಲವೊಮ್ಮೆ ಗಮನಿಸುವುದೇ ಇಲ್ಲ. ಮಹಿಳೆಯರ ಒಳಗೊಳ್ಳುವಿಕೆಯ ಹೊರತಾಗಿಯೂ, ಸಮಾಜವು ಅವರ ಕೊಡುಗೆಗಳನ್ನು ಕಡೆಗಣಿಸಿದೆ. ಕೃಷಿವಿಜ್ಞಾನ ಕ್ಷೇತ್ರದಲ್ಲಿ ಮಹಿಳೆಯರನ್ನು ಸಬಲೀಕರಣಗೊಳಿಸುವುದು ಕುಟುಂಬದ ಪರಿಸ್ಥಿತಿಯನ್ನು ಮಾತ್ರವಲ್ಲದೆ ಅವರ ಪ್ರಧಾನ ಕೃಷಿ ಪದ್ಧತಿಯ ಮಾದರಿಯನ್ನೂ ಪರಿವರ್ತಿಸುತ್ತದೆ.

ನಮ್ಮ ಕತೆಯು ರೆಹಾನಾ ಎನ್ನುವ ಕಠಿಣ ಪರಿಶ್ರಮ ಮಹಿಳೆಯೊಂದಿಗೆ ಆರಂಭವಾಗುತ್ತದೆ. ಅವಳು ತನ್ನ ಅತ್ತೆಮಾವಂದರೊಂದಿಗೆ ಸಣ್ಣ ಊರಿನಲ್ಲಿ ವಾಸಿಸುತ್ತಿದ್ದಳು. ರೆಹಾನಾ ಬಡಮಹಿಳೆಯಾಗಿದ್ದು, ಹಲವಾರು ನಿರ್ಬಂಧಗಳನ್ನು ಎದುರಿಸುತ್ತಿದ್ದಳು ಮತ್ತು ಸೀಮಿತ ಅವಕಾಶಗಳನ್ನು ಹೊಂದಿದ್ದಳು. ಕೃಷಿಸಂಬಂಧಿ ಎಲ್ಲ ನಿರ್ಧಾರಗಳನ್ನು ಅವಳ ಕುಟುಂಬದ ಪುರುಷ ಸದಸ್ಯರು ತೆಗೆದುಕೊಳ್ಳುತ್ತಿದ್ದರು. ಕಡಿಮೆ ಇಳುವರಿಯನ್ನು ನೀಡುವ ಸಾಂಪ್ರದಾಯಿಕ ಕೃಷಿ ವಿಧಾನಗಳೊಂದಿಗೆ ಪರದಾಡುತ್ತಿದ್ದರು. ಉತ್ಪಾದನಾ ವೆಚ್ಚಗಳ ಹೆಚ್ಚಳ ಮತ್ತು ಕೃಷಿ ಚಟುವಟಿಕೆಗಳಿಂದ ಸಿಗುತ್ತಿದ್ದ ಕಡಿಮೆ ಆದಾಯದಿಂದ ಊಟಕ್ಕೂ ಪರದಾಡುತ್ತಿದ್ದರು ಮತ್ತು ಆರ್ಥಿಕ ಸಂಕಷ್ಟಗಳನ್ನು ಎದುರಿಸುತ್ತಿದ್ದರು. ಹಲವಾರು ಸವಾಲುಗಳನ್ನು ಎದುರಿಸುತ್ತಿದ್ದರೂ, ಸೀಮಿತ ಸಂಪನ್ಮೂಲಗಳಿದ್ದರೂ ರೆಹಾನಾ ತನ್ನ ಕುಟುಂಬಕ್ಕೆ ಉತ್ತಮ ಜೀವನವನ್ನು ಒದಗಿಸುವ ಕನಸು ಕಾಣುತ್ತಿದ್ದಳು.

ಪ್ರತಿದಿನ ಬೆಳಿಗ್ಗೆ ತನ್ನ ದಿನನಿತ್ಯದ ಕೆಲಸದ ನಂತರ, ಅವಳು ಹಸು ಮತ್ತು ಮೇಕೆಗಳನ್ನು ಮೇಯಿಸಲು ಹೋಗುತ್ತಿದ್ದಳು. ಜಾನುವಾರುಗಳನ್ನು ಮೇಯಿಸುವುದರೊಂದಿಗೆ ಹೊಲದಲ್ಲಿ ಗಿಡಗಳ ಆರೈಕೆ ಕೂಡ ಮಾಡುತ್ತಿದ್ದಳು. ಪ್ರಾಣಿಗಳ ಮತ್ತು ಗಿಡಗಳ ಆರೈಕೆ ಅವಳ ಕೃಷಿ ಜೀವನದ ಅವಿಭಾಜ್ಯ ಅಂಗವಾಗಿತ್ತು. ಆದರೆ ಕೃಷಿಯೆಡೆಗಿನ ಅವಳ ಬದ್ಧತೆ ಮತ್ತು ಪ್ರಕೃತಿಯೊಂದಿಗಿನ ಅವಳ ನಿಕಟ ಸಂಪರ್ಕವನ್ನು ಯಾರೂ ಗಮನಿಸಿರಲಿಲ್ಲ.

ಒಂದು ದಿನ ತನ್ನ ನೆರೆಹೊರೆಯ ಮಹಿಳೆಯರು ಕೃಷಿಯಲ್ಲಿ ತೊಡಗಿಕೊಂಡಿರುವುದನ್ನು ಗಮನಿಸಿದಳು. ಅವರು ಸ್ವ-ಸಹಾಯ ಗುಂಪಿನ ಸದಸ್ಯರಾಗಿದ್ದರು. ಅವರು ಒಟ್ಟಾಗಿ ಅಣಬೆ ಉತ್ಪಾದನೆಯ ಸಣ್ಣ ಘಟಕವೊಂದನ್ನು ಸ್ಥಾಪಿಸಿದ್ದು, ತಮ್ಮ ಕೆಲಸಕ್ಕೆ ಪ್ರತಿಫಲವನ್ನು ಪಡೆಯುತ್ತಿದ್ದಾರೆ. ಅವರ ಗಮನಾರ್ಹ ಸಾಧನೆಗಳು ರೆಹಾನಾಗೆ ತನ್ನ ಮಿತಿಗಳ ಬಗ್ಗೆ ಪ್ರಶ್ನಿಸುವ ಸವಾಲನ್ನು ಒಡ್ಡಿತು. ಅವರಿಗೆ ಮಾಡಲು ಸಾಧ್ಯವಾಗುವುದಾದರೆ, ನನಗೇಕೆ ಸಾಧ್ಯವಿಲ್ಲ? ಎಂದು ಯೋಚಿಸಿದಳು.

ಸಹಜವಾಗಿಯೇ ಅವಳೊಳಗೆ ಕೃಷಿಯ ಕಡೆಗೊಂದು ತುಡಿತ ಮತ್ತು ಒಲವಿತ್ತು. ಅವಳ ಕುಟುಂಬವು ತಲೆತಲಾಂತರಗಳಿಂದ ಕೃಷಿಯಲ್ಲಿ ತೊಡಗಿಸಿಕೊಂಡಿತ್ತು. ಅವಳು ತನ್ನ ಪೂರ್ವಿಕರಿಂದ ಕೃಷಿಯ ಬಗ್ಗೆ ಆಳವಾದ ತಿಳಿವಳಿಕೆಯನ್ನು ಪಡೆದಿದ್ದಳು. ತನ್ನ ಸುತ್ತಮುತ್ತಲಿನ ಪರಿಸರದಿಂದ ಪ್ರೇರಿತಳಾದ ರೆಹಾನಾ “ಹಮಾರಿ ಏಕ್ತಾ” ಎಂಬ ಸ್ವಸಹಾಯ ಗುಂಪು (SHG) ಅನ್ನು ರಚಿಸುವ ಮೂಲಕ ತನ್ನದೇ ಹಾದಿಯನ್ನು ರೂಪಿಸಿಕೊಂಡಳು.

ಅವರು ಟಿಕಾಮ್‌ಗಢ್‌ನ ಕೆವಿಕೆಯಲ್ಲಿ ನಡೆದ ಅಣಬೆ ಕೃಷಿಯ ತರಬೇತಿಗೆ ಹಾಜರಾಗಿದ್ದರು. ತಮ್ಮ ಮನೆಯಲ್ಲೇ ಅಣಬೆ ಉತ್ಪಾದನಾ ಘಟಕವನ್ನು ಸ್ಥಾಪಿಸಿದರು. ಕೆವಿಕೆಯಿಂದ ಬೀಜಗಳನ್ನು ಪಡೆದು ಅವಳು ಆಯಿಸ್ಟರ್‌ ಅಣಬೆ ಕೃಷಿಯನ್ನು ಸಣ್ಣ ಪ್ರಮಾಣದಲ್ಲಿ ಆರಂಭಿಸಿದಳು. ನಂತರ ಇತರ ತಳಿಗಳನ್ನು ಬೆಳೆಯಲು ಪ್ರಾರಂಭಿಸಿದಳು. ತನ್ನ ಸ್ವಸಹಾಯ ಸಂಘದಲ್ಲಿನ ಇತರ ಮಹಿಳೆಯರಿಗೂ ಅಣಬೆ ಬೆಳೆಯುವ ತಂತ್ರಗಳನ್ನು ಕಲಿಯುವಂತೆ ಪ್ರೋತ್ಸಾಹಿಸಿದಳು. ಅವಳು ಬೆಳೆದ ತಾಜಾ ಅಣಬೆಗಳ ಬಗ್ಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗತೊಡಗಿತು. ಜನ ಅವುಗಳನ್ನು ಕೊಳ್ಳಲು ಅವಳ ಮನೆಗೆ ಬರಲಾರಂಭಿಸಿದರು. ಇದರಲ್ಲಿ ಸಾಕಷ್ಟು ಏರಿಳಿತಗಳಿದ್ದವು. ಕೆಲವು ದಿನಗಳಲ್ಲಿ ಬೇಡಿಕೆ ಹೆಚ್ಚಿದ್ದರೆ ಮತ್ತೆ ಕೆಲವು ದಿನಗಳಲ್ಲಿ ಉತ್ಪಾದನೆ ಹೆಚ್ಚಿತ್ತು. ರೆಹಾನಾ ತನ್ನ ಜಾಣತನದಿಂದ, ಏನನ್ನೂ ವ್ಯರ್ಥಮಾಡದಿರಲು ನಿರ್ಧರಿಸಿದಳು. ಹೆಚ್ಚುವರಿ ಅಣಬೆಗಳನ್ನು ಒಣಗಿಸಿ, ಪುಡಿಯಾಗಿ ಸಂರಕ್ಷಿಸಲು ಆರಂಭಿಸಿದಳು. ಈ ಪುಡಿಯನ್ನು ಇನ್ನಿತರ ವಸ್ತುಗಳೊಂದಿಗೆ ಸೇರಿಸಿ ವಿಶಿಷ್ಟವಾದ ಹಪ್ಪಳಗಳನ್ನು ತಯಾರಿಸಿದಳು. ಈ ಹಪ್ಪಳಗಳು ವಿಶಿಷ್ಟವಾಗಿತ್ತು. ಹೀಗಿದ್ದೂ, ತನ್ನ ಉತ್ಪನ್ನಗಳ ಮಾರಾಟ ಮಾಡುವಲ್ಲಿ ಸವಾಲುಗಳನ್ನು ಎದುರಿಸಿದಳು. ತನ್ನ ಉತ್ಪನ್ನಗಳ ಪೌಷ್ಟಿಕಾಂಶ ಮೌಲ್ಯವನ್ನು ಕಂಡುಹಿಡಿಯಲು, ಅದನ್ನು ಪ್ರಮಾಣೀಕರಿಸಲು ಕೆವಿಕೆ ತಜ್ಞರನ್ನು ದೃಢಸಂಕಲ್ಪದೊಂದಿಗೆ ಸಂಪರ್ಕಿಸಿದಳು. ಈ ಅನುಭವವು ಅವಳಲ್ಲಿ ಆತ್ಮವಿಶ್ವಾಸವನ್ನು ತುಂಬಿತು.

 

ಇದರಿಂದ ಪ್ರೇರಿತಳಾಗಿ, ಅವಳು ಕೃಷಿಯ ಕಡೆಗೆ ಗಮನಹರಿಸಿದಳು. ಇದು ಬದಲಾವಣೆಯ ಬಿಂದುವಾಯಿತು. ಅವಳು ತನ್ನ ಗಂಡನೊಂದಿಗೆ, ಸಮಗ್ರ ಕೃಷಿಯ ಪ್ರಯೋಗ ಕೈಗೊಂಡಳು. ಅವಳು ತನ್ನ ಸ್ವಸಹಾಯ ಸಂಘದ ಇತರ ಸದಸ್ಯರಿಗೆ ತರಕಾರಿಗಳು, ಹಣ್ಣುಗಳು, ಕಾಳುಗಳನ್ನು ಒಗ್ಗೂಡಿಸಿದಂತೆ  ವೈವಿಧ್ಯಮಯ ಬೆಳೆ ಬೆಳೆಯುವಂತೆ, ಜೊತೆಗೆ ಕೋಳಿ ಮತ್ತು ಮೇಕೆ ಸಾಕಾಣಿಕೆಯನ್ನು ಮಾಡುವುದರೊಂದಿಗೆ ಸಮತೋಲಿತ ಪರಿಸರವ್ಯವಸ್ಥೆಯನ್ನು ಸೃಷ್ಟಿಸುವ ಮೂಲಕ ಕೀಟ ಮತ್ತು ಹವಾಮಾನ ಏರಿಳಿತಗಳಿಗೆ ಸ್ಥಿತಿಸ್ಥಾಪಕತ್ವವನ್ನು ರೂಪಿಸುವಂತೆ ಸಲಹೆ ನೀಡಿದಳು.

ಸ್ವಸಹಾಯ ಸಂಘಗಳ ಸದಸ್ಯರು ಮಣ್ಣಿನ ಫಲವತ್ತತೆ ಹೆಚ್ಚಿಸಲು ಮತ್ತು ನೀರಿನ ಮರುಹೂರಣವನ್ನು ಹೆಚ್ಚಿಸಲು ಸಹವರ್ತಿ ನೆಡುವಿಕೆ, ಬೆಳೆ ಆವರ್ತನ, ನೈಸರ್ಗಿಕ ಗೊಬ್ಬರ ವಿಧಾನಗಳು, ಹೊದಿಕೆ ಮತ್ತು ಮುಚ್ಚಳಿಕೆಯನ್ನು ಅಳವಡಿಸಿಕೊಳ್ಳಲು ಆರಂಭಿಸಿದರು. ಅವಳು ಮೇಕೆ ಮತ್ತು ಕೋಳಿ ಸಾಕಾಣಿಕೆಯ ಬಗ್ಗೆ ವೈಜ್ಞಾನಿಕ ವಿಧಾನಗಳನ್ನು ಕಲಿತಳು. ಅವಳು ಜಾನುವಾರು ಸಾಕಾಣಿಕೆಯನ್ನು ಬೆಳೆ ಉತ್ಪಾದನೆಯೊಂದಿಗೆ ಸಂಯೋಜಿಸಿದರು. ಇದು ನೈಸರ್ಗಿಕ ಪ್ರಕ್ರಿಯೆಗಳನ್ನು ಉತ್ತೇಜಿಸುವುದರೊಂದಿಗೆ ನಕಾರಾತ್ಮಕ ಪರಿಸರ ಪರಿಣಾಮಗಳನ್ನು ಕಡಿಮೆಗೊಳಿಸುತ್ತದೆ. ಇದು ಜೈವಿಕ ವೈವಿಧ್ಯತೆಯನ್ನು ಹೆಚ್ಚಿಸುವುದರೊಂದಿಗೆ, ಸುಸ್ಥಿರ ಕೃಷಿವ್ಯವಸ್ಥೆಗೆ ಕಾರಣವಾಯಿತು.

ಅವರ ಪ್ರಯತ್ನಗಳು ಯಾವಾಗಲೂ ಸಾಂಪ್ರದಾಯಿಕ ವಿಧಾನಗಳ ಪ್ರಾಯೋಗಿಕ ಜ್ಞಾನವನ್ನು ವೈಜ್ಞಾನಿಕ ವಿಧಾನಗಳೊಂದಿಗೆ ಸಂಯೋಜಿಸುವ ಮೂಲಕ ಸುಸ್ಥಿರ ಮತ್ತು ಪರಿಸರ ಸ್ನೇಹಿ ಆಹಾರ ವ್ಯವಸ್ಥೆಯನ್ನು ಹೆಚ್ಚಿಸುವ ಕಡೆಗೆ ನಿರ್ದೇಶಿಸಲ್ಪಟ್ಟವು. ದಿನನಿತ್ಯದ ಸವಾಲುಗಳನ್ನು ಎದುರಿಸುವಲ್ಲಿ ಅವರು ಹೊಸ ದೃಷ್ಟಿಕೋನಗಳು ಮತ್ತು ಒಳನೋಟಗಳನ್ನು ಪಡೆದರು. ಒಮ್ಮೆ ಅವಳ ಮೇಕೆಮರಿ ಅನಾರೋಗ್ಯಕ್ಕೆ ತುತ್ತಾಯಿತು. ಅವಳ ಸ್ವಸಹಾಯ ಸಂಘದ ಸದಸ್ರಯೊಬ್ಬರು ಮರಿಗೆ ಹಸುವಿನ ಹಾಲನ್ನು ನೀಡುವಂತೆ ಸಲಹೆ ನೀಡಿದರು. ಏಕೆಂದರೆ ಅದರಲ್ಲಿ ಇಮ್ಯುನೊಗ್ಲೊಬಿನ್‌ ಇರುತ್ತದೆ. ಅದು ರೋಗಗಳಿಂದ ರಕ್ಷಿಸುವ ಪ್ರತಿರೋಧಕ ಶಕ್ತಿಯನ್ನು ಒದಗಿಸುತ್ತದೆ. ಅವಳು ಕೂಡಲೇ ಈ ಸಲಹೆಯನ್ನು ಅನುಸರಿಸಿದಳು. ಮೇಕೆ ಮರಿ ಹುಷಾರಾಯಿತು. ಕೃಷಿಪರಿಸರ ಕ್ಷೇತ್ರದಲ್ಲಿ ಸಹಯೋಗವು ಮೌಲ್ಯಯುತವಾದದ್ದಾಗಿದೆ. ಕೃಷಿಯು ಕೇವಲ ಜೀವನೋಪಾಯಕ್ಕೆ ಒಂದು ಮಾರ್ಗವಲ್ಲ, ಅದು ಜೀವನವನ್ನು ರೂಪಿಸುವ ಮಾರ್ಗ ಎಂದು ನಾನು ನಂಬುತ್ತೇನೆ.

ರೆಹಾನಾ ಅವರ ಫಾರಂ ಒಂದೇ ಛಾವಣಿ ಅಡಿಯಲ್ಲಿನ ಸಹಜೀವನ ಕೃಷಿ ವ್ಯವಸ್ಥೆಯ ಮಾದರಿಯಾಗಿದೆ. ಇಲ್ಲಿ ಅವಳಿಗೆ ಹೊರ ಒಳಸುರಿಯುವಿಕೆಗಳ ಮೇಲಿನ ಅವಲಂಬನೆ ಕಡಿಮೆಯಾಯಿತು, ಹವಾಮಾನ ವ್ಯತ್ಯಾಸಗಳಿಗೆ ಸ್ಥಿತಿಸ್ಥಾಪಕತ್ವ ಗುಣ ದಕ್ಕಿತು, ಮಣ್ಣಿನ ಗುಣಮಟ್ಟ ಸುಧಾರಿಸಿತು ಮತ್ತು ಬೆಳೆ ಇಳುವರಿ ಹೆಚ್ಚಿತು. ಅವಳು ಉತ್ತಮ ಗುಣಮಟ್ಟದ ಉತ್ಪನ್ನಗಳನ್ನು ಉತ್ಪಾದಿಸಿದ್ದು ಮಾತ್ರವಲ್ಲದೆ ಹೆಚ್ಚುವರಿ ಉತ್ಪನ್ನಗಳನ್ನು ಸ್ಥಳೀಯ ಮಾರುಕಟ್ಟೆಗಳಲ್ಲಿ ಉತ್ತಮ ಬೆಲೆಗೆ ಮಾರಾಟ ಮಾಡಲು ಆರಂಭಿಸಿದಳು. ಈ ಪರಿಸರ ಸಮತೋಲನವು ಅವಳಿಗೆ ಮನುಷ್ಯರು ಮತ್ತು ಕೃಷಿಯ ನಡುವೆ ಸಾಮರಸ್ಯವನ್ನು ಪುನಃಸ್ಥಾಪಿಸಲು ಅವಕಾಶ ಮಾಡಿಕೊಟ್ಟಿತು. ಆ ಮೂಲಕ ಸುಸ್ಥಿರ ಕೃಷಿಯನ್ನು ಉತ್ತೇಜಿಸಿತು. ಉತ್ಸಾಹ, ಸಮರ್ಪಣೆ ಮತ್ತು ಸೃಜನಶೀಲತೆ ಜೀವನವನ್ನು ಹೇಗೆ ಪರಿವರ್ತಿಸುತ್ತದೆ ಎಂಬುದಕ್ಕೆ ರೆಹಾನಾ ಅವರ ಕಥೆಯು ಸ್ಪೂರ್ತಿದಾಯಕ ಉದಾಹರಣೆಯಾಗಿದೆ. ಕೃಷಿವಿಜ್ಞಾನದ ಮೂಲಕ, ಅವಳು ತನ್ನ ಜಮೀನಿನ ಉತ್ಪಾದಕತೆಯನ್ನು ಪರಿವರ್ತಿಸುವುದರೊಂದಿಗೆ ಪರಿಸರ ಸಂರಕ್ಷಣೆ ಮತ್ತು ಸಮುದಾಯದ ಒಳಿತಿಗೆ ಕೊಡುಗೆ ನೀಡಿದಳು. ಅಣಬೆ ಬೆಳೆಯುವ ಕಲೆಯನ್ನು ಕಲಿಯುವುದರಿಂದ ಹಿಡಿದು ಕೃಷಿ ಫಾರಂ ರೂಪಿಸುವವರೆಗಿನ ಅವಳ ಪ್ರಯಾಣವು ಸವಾಲುಗಳನ್ನು ಅವಕಾಶಗಳಾಗಿ ಪರಿವರ್ತಿಸಿಕೊಂಡ ಅವಳ ಶಕ್ತಿ ಮತ್ತು ಸಮುದಾಯದ ಮೇಲೆ ಸಕಾರಾತ್ಮಕ ಪರಿಣಾಮವನ್ನು ಬೀರುವ ಶಕ್ತಿಯನ್ನು ತೋರುತ್ತದೆ.


Mahak khatri 
Senior Agriculture Development Officer (SADO),
Department of Agriculture Development and Farmers Welfare,
Tikamgarh (MP)
Haweli Road Sindhi Colony Tikamgarh (MP) 472001
E-mail: mahakkhatri09@gmail.com

Yogranjan Singh 
Scientist
JNKVV College of Agriculture,
Tikamgarh (MP)
E-mail: yogranjan@gmail.com

Khushbu khatri
Rural Agriculture Extension Officer (RAEO),
Department of Agriculture Development and Farmers Welfare,
Tikamgarh (MP)
E- mail: khushbukhatri2014@gmail.com

 

ಆಂಗ್ಲ ಮೂಲ : ಲೀಸಾ ಇಂಡಿಯಾ; ಸಂಪುಟ :೨೫; ಸಂಚಿಕೆ : ೩ ; ಸೆಪ್ಟಂಬರ್ ೨೦‌೨‌೩

Recent Posts

ಕೃಷಿಯಲ್ಲಿ ನೀರಿನ ಸಮರ್ಥ ಬಳಕೆಗಾಗಿ ಕಾಲುವೆ ಯಾಂತ್ರೀಕರಣ

ಕೃಷಿಯಲ್ಲಿ ನೀರಿನ ಸಮರ್ಥ ಬಳಕೆಗಾಗಿ ಕಾಲುವೆ ಯಾಂತ್ರೀಕರಣ

ನಮ್ಮ ನೀರಾವರಿ ವ್ಯವಸ್ಥೆಯನ್ನು 21ನೇ ಶತಮಾನದ ಬೇಡಿಕೆಗಳಿಗೆ ಹೊಂದುವಂತೆ ಮಾಡುವುದು ನಮ್ಮ ಮುಂದಿರುವ ನಿಜವಾದ ಸವಾಲಾಗಿದೆ. ತಂತ್ರಜ್ಞಾನವೇ...