ಕುಟುಂಬ, ಜೀವವೈವಿಧ್ಯ ಮತ್ತು ಕೃಷಿ ಪರಿಸರದ ಪೋಷಣೆ


ಮೂರು ವರ್ಷಗಳ ಅಲ್ಪಾವಧಿಯಲ್ಲಿ ನೈಸರ್ಗಿಕ ಕೃಷಿಯಲ್ಲಿ ಮುಖ್ಯ ತರಬೇತುದಾರರಾಗಿರುವ ಈ ಸ್ಥಳೀಯ ನವನಿರ್ಮಿತಿಕಾರರನ್ನು ಭೇಟಿಮಾಡಿ. ಅವರು ತಮ್ಮ ಹೊಲಗಳಲ್ಲಿ ಸಿರಿಧಾನ್ಯಗಳ ಕೃಷಿಯನ್ನು ಪರಿಚಯಿಸಿದ್ದಲ್ಲದೆ, ಹೊಸ ಪಾಕವಿಧಾನಗಳನ್ನು ರೂಪಿಸುವ ಮೂಲಕ ಸಿರಿಧಾನ್ಯಗಳ ಸೇವನೆಯನ್ನು ಉತ್ತೇಜಿಸಿದರು.


ಹಿಮಾಚಲ ಪ್ರದೇಶದ ಮಹಿಳೆಯರು, ಸಣ್ಣ ಜಮೀನುಗಳನ್ನು (ತಾರಸಿಗಳಂತೆ) ಹೊಂದಿದ್ದು, ತಮ್ಮ ಸ್ಥಳೀಯ ಪರಿಸರ ವ್ಯವಸ್ಥೆಗೆ ಸೂಕ್ತವಾದ ಬೆಳೆಗಳು ಮತ್ತು ಬೆಳೆ ಸಂಯೋಜನೆಗಳನ್ನು ಬೆಳೆಸುತ್ತಾರೆ. ಸಾಂಪ್ರದಾಯಿಕ ಸಂಯೋಜನೆಗಳನ್ನು ಅನುಸರಿಸಿ, ಅವರು ಸಿರಿಧಾನ್ಯಗಳನ್ನು ನಿಯಮಿತ ಬೆಳೆಗಳೊಂದಿಗೆ ಬೆಳೆಯುತ್ತಿದ್ದಾರೆ. ಅವರಿಗೆ ರಾಗಿ/ಕೊಡ/ಕೊಡರ ಸ್ಥಳೀಯವಾಗಿ ಇದನ್ನು ʼಮಂಡಲʼ ಎಂದು ಕೂಡ ಕರೆಯುತ್ತಾರೆ. ಈಗ ಅವರು ಕಂಗ್ನಿ/ ಕೌನಿಲ್‌ ಸೌನಕ್‌ (ನವಣೆ), ಊದಲು/ ಸಾನ್ವಾ ಮತ್ತು ಸಾಮೆ/ಕುಟ್ಕಿ ಬೆಳೆಯಲು ಆರಂಭಿಸಿದ್ದಾರೆ.

ಈ ಮಹಿಳೆಯರು ತಮ್ಮ ಬಳಿಯಿರುವ ಸಣ್ಣ ಭೂಮಿಯಲ್ಲೇ ಹಲವಾರು ವರ್ಷಗಳಿಂದ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಪ್ರಜ್ಞಾಪೂರ್ವಕವಾಗಿ ನೈಸರ್ಗಿಕ ಕೃಷಿಗೆ ಬದಲಾಗಿದ್ದಾರೆ. ಈಗಾಗಲೇ ಅವರು ಪರಿಣಿತ ಕೃಷಿಕರಾಗಿದ್ದು ತಮ್ಮ ಹೊಲಗಳಲ್ಲಿನ ಜೀವವೈವಿಧ್ಯತೆಯ ಬಗ್ಗೆ ಚೆನ್ನಾಗಿ ಅರಿತಿದ್ದು ಅವುಗಳನ್ನು ಸಂರಕ್ಷಿಸುತ್ತಿದ್ದಾರೆ. ಹೊಸ ಪ್ರಯೋಗಗಳನ್ನು ಮಾಡುತ್ತಾ, ಹೊಸ ತಿಳಿವಳಿಕೆಯನ್ನು ಕಟ್ಟಿಕೊಳ್ಳುತ್ತಾ ಅದನ್ನು ಸಿರಿಧಾನ್ಯಗಳ ಕಾರ್ಯಕ್ರಮಗಳು ಮತ್ತು ಸಂಪರ್ಕ ಸಭೆಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. RRA_Network [https://www.rainfedindia.org] ಸಂಪರ್ಕ ತಾಣದ ಮೂಲಕ ಪ್ರಚಾರವನ್ನು ಕೈಗೊಳ್ಳಲಾಗುತ್ತದೆ.

ಸ್ಪೂರ್ತಿದಾಯಕ ನವೋದ್ಯೋಮಿಗಳು

ಮಂಡಿ ಜಿಲ್ಲೆಯ ಚವಾರಿ ಗ್ರಾಮದ ಬಿಮ್ಲಾ ದೇವಿ ಕೇವಲ ಅರ್ಧ ಎಕರೆಯನ್ನು ಹೊಂದಿದ್ದು, ಹಲವಾರು ಬೆಳೆಗಳನ್ನು ಬೆಳೆಯುತ್ತಾಳೆ. ಪ್ರಸ್ತುತ, ಅವಳು ಖಾರಿಫ್‌ನಲ್ಲಿ, ಜೋಳ, ಸೋಯಾಬೀನ್, ಬದನೆ, ಚೆಂಡುಹೂ, ಬೆಂಡೆಕಾಯಿ, ಹಸಿರು ಮೆಣಸಿನಕಾಯಿ, ಶುಂಠಿ, ಸೌತೆಕಾಯಿ, ಹಾಗಲಕಾಯಿ, ಕೆಸುವಿನ ಎಲೆ(ಅರ್ಬಿ), ಸೂರ್ಯಕಾಂತಿ, ನಿಂಬೆ-ಹುಲ್ಲು, ವಿಥಾನಿಯಾ (ಅಶ್ವಗಂಧ), ಅರಿಶಿನವನ್ನು ಮುಖ್ಯವಾಗಿ ತನ್ನ ಮನೆಯ ಅಗತ್ಯಗಳ ಪೂರೈಕೆಗಾಗಿ ಬೆಳೆಯುತ್ತಿದ್ದಾಳೆ. ಕಳೆದ ನಾಲ್ಕು ವರ್ಷಗಳಲ್ಲಿ ಮೂರು ಸಿರಿಧಾನ್ಯಗಳನ್ನು ಅಂದರೆ ರಾಗಿ, ನವಣೆ, ಊದಲನ್ನು ಬೆಳೆಯುತ್ತಿದ್ದಾಳೆ. ನಾನೀಗ ಬೀಜಗಳನ್ನು ಸಾಲುಗಳಲ್ಲಿ ಬಿತ್ತನೆ ಮಾಡುತ್ತೇನೆ. ಇದರಿಂದ ಕಳೆ ಕೀಳುವುದು ಸುಲಭವಾಗುತ್ತದೆ,” ಎಂದಾಕೆ ಹೇಳುತ್ತಾಳೆ. ಈಗ ನೈಸರ್ಗಿಕ ಕೃಷಿಯಲ್ಲಿ ಪರಿಣಿತ ತರಬೇತಿಕಾರ್ತಿಯಾದ ಆಕೆಯನ್ನು ಸಿರಿಧಾನ್ಯಗಳ ಕೃಷಿಯ ಕುರಿತು ಮತ್ತು ಸಿರಿಧಾನ್ಯ ಖಾದ್ಯಗಳ ಬಗ್ಗೆ ಪಶು ಸಖಿಯರು ಮತ್ತು ಕೃಷಿ ಸಖಿಯರಿಗೆ ತರಬೇತಿ ನೀಡಲು ಆಹ್ವಾನಿಸಲಾಗುತ್ತದೆ. 2013ರಿಂದ ಆಕೆ ಹಳೆಯ ಬೀಜಗಳನ್ನು ಸಂರಕ್ಷಿಸುತ್ತಿದ್ದಾಳೆ. ಮುಖ್ಯವಾಗಿ ಅವಳ ಬಳಿ ಭತ್ತ ಮತ್ತು ಬಾರ್ಲಿಯ ಬೀಜಗಳಿವೆ. ಅದರಲ್ಲಿ ಐದು ಬಗೆಯ ಭತ್ತದ ಬೀಜಗಳಿವೆ. “ಇಲಾಖೆಯವರು ಐದು ಕ್ವಿಂಟಾಲ್‌ ರಾಗಿ ಬೀಜಗಳನ್ನು ಮತ್ತು ಜೊತೆಗೆ 20 ಕೆ.ಜಿ ನವಣೆಯನ್ನು ವಿತರಣೆಗಾಗಿ ನನ್ನಿಂದ ಖರಿದೀಸಿದ್ದಾರೆ,” ಎಂದು ಆಕೆ ಹೇಳುತ್ತಾಳೆ.

ಸಿರಿಧಾನ್ಯ ಪಾಕವಿಧಾನಗಳ ಮೂಲಕ ಸಹಜ ಕೃಷಿಗೆ ಬದಲಾಗಿ ಕೆಲವರು ತಾವು ಸಹಜ ಕೃಷಿಗೆ ಹೊರಳಿಕೊಂಡಿದ್ದರ ಕಾರಣದ ಬಗ್ಗೆ ಹೀಗೆ ಹೇಳಿದ್ದಾರೆ: “ದೈನಂದಿನ ಆಹಾರವು ಮಕ್ಕಳನ್ನು ಆಲಸಿಗಳನ್ನಾಗಿ ಮಾಡುತ್ತಿದೆ. ನಾವು ʼದಾಲಿಯʼ (ನೀರು ಅಥವ ಹಾಲಿನಲ್ಲಿ ಬೇಯಿಸಿದ ಬೇಳೆಗಳು) ತಿನ್ನಿಸಿದಾಗ ಅಥವ ʼಖೀರ್ʼ (ಕಂಗ್ನಿ ಅಥವ ರಾಗಿಯೊಂದಿಗೆ ಹಾಲಿನಲ್ಲಿ ಮಾಡಿದ ಪಾಯಸ)ವನ್ನು ಕೊಟ್ಟಾಗ ಮಗು ಹೆಚ್ಚು ಚುರುಕಾಗಿ ವರ್ತಿಸುತ್ತದೆ. ಇದನ್ನು ನಮ್ಮ ಮನೆಗಳಲ್ಲಿ ಗಮನಿಸಿದ್ದೇವೆ. ಆಹಾರದಲ್ಲಿನ ರಾಸಾಯನಿಕಗಳು ತಂದೊಡ್ಡುವ ಹಾನಿಯನ್ನು ಗಮನಿಸಿದ್ದೇವೆ,” ಎಂದು ಸೆಪ್ಟಂಬರ್ 2022ರ ಸಭೆಯಲ್ಲಿ ರೀಟಾ ದೇವಿ ಹೇಳಿದಳು. ಮಕ್ಕಳಿಗೆ ಇಷ್ಟವಾಗುವಂತಹ, ಅವರು ಮತ್ತೆ ಮತ್ತೆ ಕೇಳಿ ತಿನ್ನುವಂತಹ ಇನ್ನೊಂದಿಷ್ಟು ತಿಂಡಿಗಳನ್ನು ಆಕೆ ಸೃಷ್ಟಿಸಿದಳು. ಆರಂಭದಲ್ಲಿ ಮಾತಾಡಲು ಸಂಕೋಚ ಪಡುತ್ತಿದ್ದ ರೀಟಾ ದೇವಿ ಮತ್ತು ವಂದನಾ ನಿಧಾನವಾಗಿ ಎರಡು ವರ್ಷಗಳಲ್ಲಿ ಈಗ RTDCಯಲ್ಲಿ ಸಮುದಾಯ ಸಂಪನ್ಮೂಲ ವ್ಯಕ್ತಿಗಳಾಗಿದ್ದಾರೆ. ಅವರು ಈಗ ಮಕ್ಕಳು ಸಿರಿಧಾನ್ಯಗಳ ಹೊಸ ತಿಂಡಿಯನ್ನು ಒಪ್ಪಿಕೊಂಡಿದ್ದಾರೆ ಎಂದು ತಿಳಿಸುತ್ತಾರೆ. ತಮ್ಮ ಚಿಕ್ಕಂದಿನಲ್ಲಿ ಸಿರಿಧಾನ್ಯಗಳನ್ನು ತಿನ್ನದಿದ್ದ ದೊಡ್ಡವರು ಕೂಡ ಈಗ ಅದನ್ನು ಇಷ್ಟಪಡುತ್ತಿದ್ದಾರೆ.

ಸಿರಿಧಾನ್ಯಗಳ ಪಾಕ ತಯಾರಿಕೆಯಲ್ಲಿ ಸ್ವಯಂತರಬೇತಿ ಪಡೆದ ಆಕೆ ಈಗ ಹಲವು ಪದಾರ್ಥಗಳನ್ನು ತಯಾರಿಸುತ್ತಾಳೆ (ರಾಗಿ ಇಡ್ಲಿ, ರಾಗಿ ದೋಸೆ, ಬಾರ್ಲಿ ಪಾಯಸ, ಜೋಳದ ಪಾಪ್‌ಕಾರ್ನ್‌. ರಾಗಿ ಮತ್ತು ಸಜ್ಜೆಯ ಕಿಚಡಿ, ರಾಗಿ – ದಾಲಿಯ, ರಾಗಿ- ಸೂಪ್‌, ರಾಗಿ ಲಡ್ಡು, ಬಾರ್ಲಿ ಲಡ್ಡು ತಯಾರಿಕೆಯ ಬಗ್ಗೆ ಇತರರಿಗೆ ತರಬೇತಿ ನೀಡುತ್ತಾಳೆ. “ರಾಗಿಯಲ್ಲಿ ಟೀ ತಯಾರಿಸುತ್ತೇನೆ. ನನ್ನೆಲ್ಲ ತರಬೇತಿಗಳಲ್ಲಿ ಇದಕ್ಕೆ ಹೆಚ್ಚು ಬೇಡಿಕೆಯಿದೆ. ಮನೆಯಲ್ಲಿ ಕೂಡ ಮಕ್ಕಳಿಗೆ ಸಿರಿಧಾನ್ಯಗಳ ತಿಂಡಿ ಮಾಡಿಕೊಡುತ್ತೇನೆ. ಜೊತೆಗೆ, ರಾಗಿ ಹಲ್ವಾ, ರಾಗಿ ಹಪ್ಪಳ, ಸಜ್ಜೆ ಲಡ್ಡು, ಜೋಳದ ಪಾಪ್‌ಕಾರ್ನ್‌ ಕೂಡ ಮಾಡಿದ್ದೇನೆ. ಈ ಸಲ ನಾವು ಸಿರಿಧಾನ್ಯದ ಚಾಟ್‌ ಕೂಡ ಮಾಡಿದೆವು,” ಎಂದು ಆಕೆ ಹೇಳುತ್ತಾಳೆ. ರಾಜ್ಯ ಪ್ರಾಯೋಜಿತ ಎಟಿಎಂಎ ಯೋಜನೆಯಡಿಯಲ್ಲಿ ಮೇಳದಲ್ಲಿ (ಫೆಬ್ರವರಿ, 2023 ರಲ್ಲಿ ಶಿವರಾತ್ರಿ ಮೇಳ) ಆಕೆಗೆ ಸ್ಟಾಲ್ ನೀಡಲಾಯಿತು, ಅಲ್ಲಿ ಅವಳು ರಾಗಿ-ಚಪಾತಿ, ‘ಸಾಬುತ್ ಜಾನ್ ಕೆ ಲಡ್ಡು’ (ಬಾರ್ಲಿ ಲಾಡುಗಳು), ‘ಜೋವರ್ ಕೆ ಲಡ್ಡು’ (ಜೋಳದ ಲಾಡುಗಳು) ಮತ್ತು ‘ಕಂಗ್ನಿ ಕೆ ಲಡ್ಡು’ (ನವಣೆ ಲಾಡುಗಳು) ತಯಾರಿಸಿದಳು. ಮಂಡಿ ಜಿಲ್ಲೆಯ ಕಥಿಯೋ ಗ್ರಾಮದ ಕಲಾ ದೇವಿಗೆ ಒಂದೂವರೆ ಎಕರೆ ತಾರಸಿ ಕೃಷಿ ಭೂಮಿ ಇದೆ. ಸೇಬನ್ನು ಮುಖ್ಯ ಬೆಳೆಯಾಗಿ ಬೆಳೆಯುವುದರೊಂದಿಗೆ, ಪ್ರಸ್ತುತ ಅವಳು ಹುರಳಿಕಾಯಿ, ಕೆಂಪಕ್ಕಿ, ಮೆಕ್ಕೆ ಜೋಳ, ಹುರಳಿಕಾಳು, ದಾಳಿಂಬೆ, ಸೋಯಾಬಿನ್‌, ಸ್ಥಳೀಯ ಧಾನ್ಯ ʼಭಾರತ್‌ʼ (ಅಲಸಂದಿಯಂತೆ ಇರುತ್ತದೆ) ಮತ್ತು ಬಳ್ಳಿ ʼಜುಮ್ರುʼ ಬೆಳೆಯುತ್ತಿದ್ದಾಳೆ. ಇದರೊಂದಿಗೆ ಪೇರಳೆಯನ್ನು ಬೆಳೆಯಲು ಯೋಜನೆಯಿದೆ. ಸಿರಿಧಾನ್ಯಗಳ ಲಾಭಗಳ ಬಗ್ಗೆ ಅರಿತು, ಅವಳು ರಾಗಿ, ನವಣೆ, ಕಡಲೆ, ಸೆನುಕ್‌, ಸಾಮೆ ಮತ್ತು ರಾಮ್‌ದಾನ (ರಾಜಗಿರಿ) ಬೆಳೆಯಲು ಆರಂಭಿಸಿದ್ದಾಳೆ. ಮೊದಲು ನಾವು ಬಟಾಣಿ ಮಾತ್ರ ಬೆಳೆಯುತ್ತಿದ್ದೆವು. ಸಾರಜನಕ ಸ್ಥಿರೀಕರಣಕ್ಕಾಗಿ ಹುರುಳಿಕಾಯನ್ನು ಬೆಳೆಯಲು ಆರಂಭಿಸಿದೆವು. ಕಳೆದ 3-4 ವರ್ಷಗಳಲ್ಲಿ ಸಿರಿಧಾನ್ಯಗಳನ್ನು ಬೆಳೆಯಲು ಆರಂಭಿಸಿದೆವು,” ಎಂದು ಕಲಾ ದೇವಿ ಹೇಳುತ್ತಾಳೆ.

2021 ರಲ್ಲಿ RRA_Nನ ಬೀಜ ಗುಂಪಿನಿಂದ ಬೀಜಗಳ ಕುರಿತು ತರಬೇತಿ ಪಡೆದ ನಂತರ, ಸ್ಥಳೀಯ ಪರಿಸರ ವ್ಯವಸ್ಥೆಯಲ್ಲಿ ಉತ್ತಮವಾಗಿ ಬೆಳೆಯುವ ನಿರ್ದಿಷ್ಟ ಬೀಜ ಪ್ರಭೇದವನ್ನು ಗುರುತಿಸುವ ಉದ್ದೇಶದಿಂದ ಅವರು ತಮ್ಮ ಭೂಮಿಯಲ್ಲಿ ಜೈವಿಕ ವೈವಿಧ್ಯ ಬ್ಲಾಕ್ [BDB] ಅನ್ನು ಸ್ಥಾಪಿಸಿದ್ದಾರೆ.

ಅವಳು ಈಗಾಗಲೇ ಸ್ಥಳೀಯವಾಗಿ ಪ್ರಚಲಿತದಲ್ಲಿರುವ ಪಾಕವಿಧಾನಗಳನ್ನು ಇನ್ನಷ್ಟು ಸುಧಾರಿಸಿದ್ದಾಳೆ. ಈಗ ರಾಗಿ ಅಥವಾ ನವಣೆಯ ಹಿಟ್ಟಿನಿಂದ ಹೊಸತನ್ನು ಅಭಿವೃದ್ಧಿಪಡಿಸಿದ್ದಾಳೆ. ರಾಗಿ ಹಿಟ್ಟಿನಿಂದ ದೋಸೆ ರೀತಿಯ ತಿಂಡಿ ಮಾಡಿದೆ. ಅದನ್ನು ನಮ್ಮಲ್ಲಿ ಚಿಲ್ರ್ಹಾ ಎಂದು ಕರೆಯುತ್ತೇವೆ. ಲಸ್ಸಿ ಮತ್ತು ಅರ್ಕ ಹಿಟ್ಟಿನಿಂದ ಮತ್ತೊಂದು ಖಾದ್ಯ ʼಕೊಬ್ರು ಬಿಸಿ ಪಾನೀಯ,” ತಯಾರಿಸಿದೆ ಎಂದು ಕಲಾ ದೇವಿ ಹೇಳಿದಳು.

ಚಂಬಾ ಜಿಲ್ಲೆಯ ಪನೇಲಾ ಗ್ರಾಮದ ರೀನಾ ದೇವಿ ರಾಗಿಯನ್ನು ಹೊರತುಪಡಿಸಿ ಬೇರಾವುದೇ ಸಿರಿಧಾನ್ಯಗಳನ್ನು ಬೆಳೆಯಲಿಲ್ಲ. ಮೂರು ವರ್ಷಗಳ ಹಿಂದೆ ಅವಳು ನವಣೆ, ಸಾಮೆ ಮತ್ತು ಸುಖಾರ ಧನ್ ಎಂದು ಕರೆಯಲಾಗುವ ಕೆಂಪು ಅಕ್ಕಿಯನ್ನು ಬೆಳೆಯಲು ಪ್ರಾರಂಭಿಸಿದಳು [ಮಳೆಯಾಶ್ರಿತ ಪರಿಸ್ಥಿತಿಗಳಿಗೆ ಹೆಚ್ಚು ಸೂಕ್ತವಾಗಿದೆ]. ಈಗ ಆಕೆ ಹುರುಳಿ, ರಾಜಗಿರಿ ಮತ್ತು ಎಳ್ಳು ಬೆಳೆಯುತ್ತಿದ್ದಾಳೆ. ಆಕೆ ಈಗ ವೈವಿಧ್ಯಮಯ ಬೆಳೆಗಳೊಂದಿಗೆ ಮಿಶ್ರ ಬೇಸಾಯವನ್ನು ಅನುಸರಿಸುತ್ತಿದ್ದಾಳೆ. ತನ್ನ ಸ್ವಂತ ಪ್ರಯತ್ನದಿಂದ ರೂಪುಗೊಂಡ ಸ್ವಸಹಾಯ ಸಂಘದಲ್ಲಿ ಇತರರಿಗೆ ಘನಜೀವಾಮೃತವನ್ನು ಒದಗಿಸಿದ್ದಾಳೆ. ಇತರರಿಗೆ ಸಿರಿಧಾನ್ಯ ಕೃಷಿಯ ಕುರಿತು ತರಬೇತಿ ನೀಡುತ್ತಿದ್ದಾಳೆ. ಮೆಕ್ಕೆಜೋಳವು ನಮ್ಮ ಮುಖ್ಯ ಬೆಳೆಯಾಗಿದ್ದು, ಇದನ್ನು ರಾಜ್ಮಾದೊಂದಿಗೆ ಬೆಳೆಯಲಾಗುತ್ತದೆ (ರಾಜ್ಮಾ, ಸಾರಜನಕ ಫಿಕ್ಸಿಂಗ್ ದ್ವಿದಳ ಧಾನ್ಯ). ಈಗ ಇದರೊಂದಿಗೆ ರಾಗಿ, ನವಣೆ ಮತ್ತು ಸಾಮೆಯನ್ನು ಸಾಲು ಬಿತ್ತನೆಯಲ್ಲಿ ಬೆಳೆಯುತ್ತಿದ್ದೇವೆ.”

 ಜುಲೈ 2023 ರಲ್ಲಿ ನಡೆದ ಚಂಬಾ ಮಿಂಜಾರ್ ಮೇಳದಲ್ಲಿ ತನ್ನ ಅಂಗಡಿಗೆ ಭೇಟಿ ನೀಡಿದವರಿಗೆ ಆಕೆ ಬಿಸಿ ರಾಗಿ ಪಾನೀಯ (ʼಮಿಲೆಟ್‌ ಟೀ) ಪರಿಚಯಿಸಿದರು. ಮೇಳದ ಇತಿಹಾಸದಲ್ಲಿ ಇಂತಹ ಚಹಾ ಪರಿಚಯಿಸಿದ್ದು ಇದೇ ಮೊದಲು. ಧರ್ಮಶಾಲಾ ‘ರಾಗಿ ಆಹಾರ ಉತ್ಸವ’ದಲ್ಲಿ, ಆಕೆ ಮೊದಲ ಬಾರಿಗೆ ಚಂಬಾ ಜಿಲ್ಲೆಯಲ್ಲಿ ಸ್ಥಳೀಯವಾಗಿ ‘ಪಿಂಡ್ರಿ’ ಎಂದು ಕರೆಯಲಾಗುವ ಸಾಂಪ್ರದಾಯಿಕ ರಾಗಿ ಉತ್ಪನ್ನವನ್ನು ಜನಪ್ರಿಯಗೊಳಿಸಿದ್ದಾರೆ.

ಕಾಂಗ್ರಾ ಜಿಲ್ಲೆಯ ನಗ್ರೋಟಾ ಬಾಗವಾನ್‌ನ ವೀಣಾದೇವಿ ಪ್ರಸ್ತುತ ಅರಿಶಿನ, ಶುಂಠಿ, ಬೆಂಡೆಕಾಯಿ, ಸೋಯಾಬೀನ್, ಬದನೆ, ಹಸಿರು ಮೆಣಸಿನಕಾಯಿ, ದೊಣ್ಣೆ ಮೆಣಸಿನಕಾಯಿ (‘ಶಿಮ್ಲಾ ಮಿರ್ಚ್’), ಸೋರೆಕಾಯಿ, ಹಾಗಲಕಾಯಿ, ಸೌತೆಕಾಯಿ, ಸ್ಟ್ರಾಬೆರಿ ಮತ್ತು ಕರಿಮೆಣಸುಗಳನ್ನು ಬೆಳೆಯುತ್ತಿದ್ದು – ಮಿಶ್ರ ಮತ್ತು ವೈವಿಧ್ಯಮಯ ಕೃಷಿಗೆ ಸಾಕ್ಷಿಯಾಗಿದೆ. ನಾವು ಈಗ ಮೆಕ್ಕೆಜೋಳದ ಹೊಲದಲ್ಲಿ ಸಾರಜನಕದ ಲಾಭ ಪಡೆಯುವ ಸಲುವಾಗಿ ಹುರುಳಿಯನ್ನು ಬೆಳೆಯುತ್ತಿದ್ದು; ಕಳೆದ ಮೂರು ವರ್ಷಗಳಿಂದ ಹಾರಕ, ಎರಡು ವರ್ಷಗಳಿಂದ ನವಣೆಯನ್ನು ಬೆಳೆಯುತ್ತಿದ್ದೇವೆ. ಕಡಲೆಯನ್ನು ಕೂಡ ಬೆಳೆಯಲು ಶುರುಮಾಡಿದ್ದೇನೆ. ನವಣೆಯನ್ನು ಬದುಗಳ ಮೇಲೆ ಬೆಳೆಯುತ್ತಿದ್ದೇವೆ. ಹೊರ ಬದುಗಳಲ್ಲಿ ಸೇಬು ಮತ್ತು ಮಾವಿನ ಸಸಿಗಳನ್ನು ನೆಟ್ಟಿದ್ದೇವೆಎಂದು ಆಕೆ ವಿವರಿಸುತ್ತಾಳೆ. ಆಕೆಗೆ ಒಂದು ಎಕರೆ ಭೂಮಿಯಿದೆ.

ಸಿರಿಧಾನ್ಯಗಳ ಖಾದ್ಯಗಳಲ್ಲಿ ಆಕೆ ಹೊಸದಾಗಿ ʼನವಣೆ ಪಾಯಸʼ ಮತ್ತು ʼಚೋಲೆ ಲಸ್ಸಿʼ ತಯಾರಿಸಿದಳು. ಇದರೊಂದಿಗೆ ರಾಗಿ ಇಡ್ಲಿ, ನವಣೆ ಪಲಾವ್‌, ರಾಗಿ ಬಬ್ರು (ಹಿಟ್ಟನ್ನು ಹುದುಗಿಸಿ ಮಾಡುವ ಚಪಾತಿ ರೀತಿ ಖಾದ್ಯ) ಮತ್ತು ರಾಗಿ ಹಲ್ವ ಮಾಡುತ್ತಾಳೆ. ತನ್ನ ಸ್ವಸಹಾಯ ಸಂಘಗಳಲ್ಲಿ, ದೈನಂದಿನ ಬಳಕೆಗಾಗಿ ಜೋಳದ ಜೊತೆಗೆ ಗೋಧಿ ಮತ್ತು ರಾಗಿ ಬಳಸಲು ಮತ್ತು ʼರಾಗಿ ಟೀʼಯನ್ನು ಮಡಕೆಗಳಲ್ಲಿ ಮಾಡುವಂತೆ ಶಿಫಾರಸ್ಸು ಮಾಡುತ್ತಾಳೆ.

ಕಾಂಗ್ರಾ ಜಿಲ್ಲೆಯ ಉಸ್ತಾರ್ ಗ್ರಾಮದ ಮೀನಾ ದೇವಿಗೆ ಅರ್ಧ ಎಕರೆ ಭೂಮಿ ಇದೆ. 2016 ರಲ್ಲಿ ಆಕೆ ಸಹಜ ಕೃಷಿಯನ್ನು ಮತ್ತು 2018 ರಲ್ಲಿ ರಾಗಿ ಬೆಳೆಯಲು ಪ್ರಾರಂಭಿಸಿದಳು. ಪ್ರಸ್ತುತ ಆಕೆ ಸಿರಿಧಾನ್ಯಗಳು ಮತ್ತು ಹಲವಾರು ತರಕಾರಿಗಳನ್ನು ಬೆಳೆಯುತ್ತಿದ್ದಾಳೆ. ಸಹಜ ಕೃಷಿಗೆ ಹೊರಳಿಕೊಂಡಿದ್ದರಿಂದ ಮಣ್ಣು ಕಪ್ಪಾಯಿತು ಮತ್ತು ಮೃದುವಾಯಿತು; ಜೊತೆಗೆ ಕೀಟಗಳ ಹಾವಳಿ ಕಡಿಮೆಯಾಯಿತು,” ಹುಳಿ ಮಜ್ಜಿಗೆಯೊಂದಿಗೆ ಜೀವಾಮೃತ ಮತ್ತು ಘನಜೀವಾಮೃತವನ್ನು ಬಳಸಿದ್ದಾಗಿ ಆಕೆ ಹೇಳಿದಳು. ಸಿರಿಧಾನ್ಯಗಳೊಂದಿಗೆ ವೈವಿಧ್ಯತೆಗಾಗಿ, ಆಕೆ ಪ್ರಸ್ತುತ ಸೋರೆಕಾಯಿ, ಕುಂಬಳಕಾಯಿ, ಹಾಗಲಕಾಯಿ, ಶುಂಠಿ, ಅರಿಶಿನ, ಮೆಕ್ಕೆಜೋಳ, ಅಲಸಂದಿ, ಕೆಸುವಿನ ಗಡ್ಡೆ, ಕೆಸು, ಬೆಂಡೆಕಾಯಿ, ಬದನೆ, ಮೆಣಸಿನಕಾಯಿ, ಸೌತೆಕಾಯಿ ಮತ್ತು ಕಾಕಡಿ (ಸ್ಥಳೀಯ ಸೌತೇಕಾಯಿ ತಳಿ) ರಾಗಿಯೊಂದಿಗೆ ತನ್ನ ಅರ್ಧ ಎಕರೆಯಲ್ಲಿ ನವಣೆ, ಸಾಮೆ ಬೆಳೆಯುತ್ತಿದ್ದಾಳೆ.

ಒಂದು ವರ್ಷ ರಾಗಿ ಬೆಳೆಯುವಷ್ಟರಲ್ಲಿ, ಆಕೆ 12 ಮಂದಿ ಮಹಿಳೆಯರ ಗುಂಪನ್ನು ರೂಪಿಸಿ ರಾಗಿ ಪ್ರಚುರಗೊಳಿಸಲು ಆರಂಭಿಸಿದಳು. ರಾಗಿಯೇನೋ ಸಿಗುತ್ತಿತ್ತು. ಆದರೆ ಗೋಧಿ ಚಪಾತಿಗೆ ಹೋಲಿಸಿದಲ್ಲಿ ರಾಗಿಯ ಕಪ್ಪುಬಣ್ಣ ಮನೆಯಲ್ಲಿ ಮಕ್ಕಳಿಗೆ ಇಷ್ಟವಾಗಲಿಲ್ಲ. ಹಾಗಾಗಿ ಮೊದಲಿಗೆ ಅದರಿಂದ ತಿಂಡಿಗಳನ್ನು ಮಾಡಲು ಕಲಿತೆ. ಆಮೇಲೆ ಫಾಸ್ಟ್‌ ಫುಡ್‌ ತಿಂಡಿಗಳನ್ನು ಅದರಿಂದಲೇ ತಯಾರಿಸಿದೆ. ನಂತರ ನವಣೆಯಿಂದಲೂ ಇವುಗಳನ್ನು ಮಾಡಲು ಪ್ರಯತ್ನಿಸಿದೆ. ಕೆಲವು ತಿಂಡಿಗಳು ಬಹಳ ಚೆನ್ನಾಗಿತ್ತು. ಗುಂಪಿನಲ್ಲಿನ ಇತರರಿಗೂ ತರಬೇತಿ ನೀಡಿದೆವು.” ಅವಳು ರಾಗಿಇಡ್ಲಿ, ರಾಗಿಕೇಕ್, ರಾಗಿಚಿಲ್ಡಾ (ತರಕಾರಿಗಳೊಂದಿಗೆ), ರಾಗಿಸಿದ್ದು, ರಾಗಿಮೊಮೊ ಮತ್ತು ರಾಗಿಬಬ್ರುಗಳನ್ನು ತಯಾರಿಸಿದಳು. “ನಾವು ಹೊಸ ತಿಂಡಿಗಳನ್ನು ಪ್ರಯತ್ನಿಸಿದೆವು ಮತ್ತು ರಾಗಿಯಿಂದ ಚಪಾತಿಯನ್ನು ಮಾಡಿದೆವು. ಇದು ನಮ್ಮ ಜನಪ್ರಿಯ ಭೆರ್ಹುವನ್‌ ರೋಟಿಯಂತಹ ತಿಂಡಿ (ಪಲ್ಯ ತುಂಬಿದ ಚಪಾತಿ) ಆದರೆ ರಾಗಿ ಬಳಸಿ ಮಾಡಲಾಯಿತು.”

ಅವಳು ನವಣೆ ಉಪಯೋಗಿಸಿ ಪಾಯಸ ತಯಾರಿಸಿದಳು. ತನ್ನ ಗುಂಪಿನ ಸದಸ್ಯರಿಗೆ ನವಣೆಯಿಂದ ʼಕಿಚಡಿʼ, ʼಇಡ್ಲಿʼ ಮಾಡುವುದನ್ನು ಹೇಳಿಕೊಟ್ಟಳು. ʼಮಿಲೆಟ್‌ ಟೀʼ ತಯಾರಿಸಿ ಜನಪ್ರಿಯಗೊಳಿಸಿದಂತೆ ನವಣೆ ಬಳಸಿ ತಂಪು ಪಾನೀಯ ತಯಾರಿಸಿದಳು. ಅದಕ್ಕೆ ʼನವಣೆ ಥಂಡೈʼ ಎಂದು ಹೆಸರಿಟ್ಟಳು. ಸ್ಥಳೀಯವಾಗಿ ಅದನ್ನು ʼರೆಡುʼ ಅಥವ ʼಜೋಲ್‌ʼ ಎಂದು ಕರೆಯುತ್ತಾರೆ.

ಉಪಸಂಹಾರ

ಹಿಮಾಚಲ ಪ್ರದೇಶದ ಈ ಮಹಿಳೆಯರು ಕೃಷಿ ಜೀವವೈವಿಧ್ಯತೆಯ ನ್ಯಾಯಯುತ ಮತ್ತು ಪ್ರಾಯೋಗಿಕ ತಿಳುವಳಿಕೆಯನ್ನು ಹೊಂದಿದ್ದಾರೆ. ಇದು ಕೃಷಿವಿಜ್ಞಾನ ಪರಿವರ್ತನೆಗೆ ಪೂರ್ವಭಾವಿ ಅಗತ್ಯವಾಗಿದೆ. ಹೊಸದಾದ ಸ್ಥಳೀಯತೆಗೆ ಸೂಕ್ತವಾದ ಪಾಕವಿಧಾನಗಳ ಮೂಲಕ ರಾಗಿ ಸೇವನೆಯನ್ನು ಹೆಚ್ಚಿಸುವ ಅವರ ವಿಧಾನವು ಎರಡು ಪ್ರಯೋಜನಗಳನ್ನು ಹೊಂದಿದೆ. ಒಂದು ಕುಟುಂಬ-ಸದಸ್ಯರ ಆರೋಗ್ಯವನ್ನು ಸುಧಾರಿಸುವುದು ಮತ್ತೊಂದು ಅವರ ವೈಯುಕ್ತಿಕ ಸಬಲೀಕರಣ. ಸಿರಿಧಾನ್ಯಗಳನ್ನು ಬೆಳೆಯುವುದರಿಂದ ಇದು ಮೂಲಭೂತವಾಗಿ ಹವಾಮಾನ ಸ್ಥಿತಿಸ್ಥಾಪಕತ್ವ ಹೆಚ್ಚಿಸಲು ಸಹಾಯಮಾಡುತ್ತದೆ. ಪರಿಸರ ವ್ಯವಸ್ಥೆಯನ್ನು ಪೋಷಿಸುತ್ತಲೇ ಹೆಚ್ಚು ವೈವಿಧ್ಯಮಯ ಆಹಾರವನ್ನು ಹೇಗೆ ಉತ್ಪಾದಿಸಬಹುದು ಎಂದು ಅವರು ತೋರಿಸಿದ್ದಾರೆ.

ಸಹಜ ಕೃಷಿ ಮತ್ತು ಕೃಷಿಪರಿಸರದ ಕಡೆಗೆ ಹೊರಳಿದ್ದು ಈ ಮಹಿಳೆಯರ ಆತ್ಮವಿಶ್ವಾಸವನ್ನು ಬಲಪಡಿಸಿದ ಸಂದರ್ಭಗಳಾಗಿವೆ.  ವಿವಿಧ ಮಾಧ್ಯಮಗಳ ಮೂಲಕ (ವಿಶೇಷವಾಗಿ WhatsApp) HimRRA ನೆಟ್‌ವರ್ಕ್ ಮೂಲಕ ಜ್ಞಾನವನ್ನು ರೂಪಿಸುವುದು ಮತ್ತು ಹಂಚಿಕೊಳ್ಳುವುದು ಕೃಷಿ ಪರಿಸರ ಮತ್ತು ಸಹಜ ಕೃಷಿಯನ್ನು ಮತ್ತಷ್ಟು ಹರಡಲು ಅನುವು ಮಾಡಿಕೊಡುತ್ತದೆ. ಇದು ಲಿಂಗ ಸಮಾನತೆಯನ್ನು ತರುತ್ತದೆಯೇ ಎನ್ನುವುದು ಸಂಶೋಧನೆಯ ವಸ್ತುವಾಗಿದೆ. ಕೃಷಿಯ ಮೇಲೆ ಅವರ ನಿಯಂತ್ರಣ ಮತ್ತು ದಿನನಿತ್ಯದ ಕೃಷಿ ಚಟುವಟಿಕೆಗಳಲ್ಲಿ ಅವರ ಸ್ವತಂತ್ರ ನಿರ್ಧಾರಗಳು ಕಣ್ಣಿಗೆ ಕಾಣುತ್ತಿರುವ ಹೊಸ ಆಯಾಮಗಳಾಗಿವೆ.

ಕೃತಜ್ಞತೆಗಳು
HimRRA network and teams; RRA_N [Revitalizing Rainfed Agriculture Network, Hyderabad] and it’s state and theme groups, Chhavi Bathla, Bhuvnesh, the respondents and their families.

K. Sadana
Formerly Scientist at ICAR-NBAGR, Karnal-132 001 (Haryana)
E-mail: sadana.dk@gmail.com

Sukhdev Vishwapremi and Anoop Kumar
HimRRA Network, RTDC, Vill. & P.O. Kamlehar - 176 061 Kangra (HP)

 

ಆಂಗ್ಲ ಮೂಲ : ಲೀಸಾ ಇಂಡಿಯಾ; ಸಂಪುಟ :೨೫; ಸಂಚಿಕೆ : ೩ ; ಸೆಪ್ಟಂಬರ್ ೨೦‌೨‌೩

Recent Posts

ಕೃಷಿಯಲ್ಲಿ ನೀರಿನ ಸಮರ್ಥ ಬಳಕೆಗಾಗಿ ಕಾಲುವೆ ಯಾಂತ್ರೀಕರಣ

ಕೃಷಿಯಲ್ಲಿ ನೀರಿನ ಸಮರ್ಥ ಬಳಕೆಗಾಗಿ ಕಾಲುವೆ ಯಾಂತ್ರೀಕರಣ

ನಮ್ಮ ನೀರಾವರಿ ವ್ಯವಸ್ಥೆಯನ್ನು 21ನೇ ಶತಮಾನದ ಬೇಡಿಕೆಗಳಿಗೆ ಹೊಂದುವಂತೆ ಮಾಡುವುದು ನಮ್ಮ ಮುಂದಿರುವ ನಿಜವಾದ ಸವಾಲಾಗಿದೆ. ತಂತ್ರಜ್ಞಾನವೇ...