ಸಿರಿಧಾನ್ಯಗಳ ಸಂಸ್ಕರಣೆಯ ವಿಕೇಂದ್ರೀಕರಣ


ಪೌಷ್ಟಿಕಾಂಶದ ಬಗ್ಗೆ ಜಾಗೃತಗೊಂಡ ಸಮುದಾಯಗಳು ಒಗ್ಗೂಡಿ  ಮಾಡಿದ ಪ್ರಯತ್ನಗಳಿಂದ ಭಾರತದಲ್ಲಿ ಮೂರು ಪ್ರದೇಶಗಳಲ್ಲಿ ಸಿರಿಧಾನ್ಯಗಳನ್ನು ಪುನಶ್ಚೇತನಗೊಳಿಸಲು, ಬೆಳೆಸಲು, ಸಂಸ್ಕರಣೆಗೊಳಿಸಲು ಮತ್ತು ಬಳಕೆಯನ್ನು ಉತ್ತೇಜಿಸಲು ಸಹಾಯ ಮಾಡಿದೆ.


ಸಿರಿಧಾನ್ಯಗಳು ಕಿರುಧಾನ್ಯಗಳಾಗಿದ್ದು ಜಗತ್ತಿನಾದ್ಯಂತ ಮಳೆಯಾಶ್ರಿತ ಭೂಮಿಯಲ್ಲಿ ಬೆಳೆಯಲಾಗುತ್ತದೆ. ಒಂದು ಗುಂಪಿನ ಬೆಳೆಗಳನ್ನು ಜಗತ್ತಿನ ವಿವಿಧ ಭಾಗಗಳಲ್ಲಿ ಸಾಕಷ್ಟು ದೊಡ್ಡ ಪ್ರಮಾಣದಲ್ಲಿ ಬೆಳೆಯಲಾಗುತ್ತದೆ ಮತ್ತು ಸೇವಿಸಲಾಗುತ್ತದೆ. ಇವುಗಳನ್ನು ಕಿರುಧಾನ್ಯಗಳೆಂದು ಕರೆಯಲಾಗುತ್ತದೆ. ಕೃಷಿ ಮತ್ತು ಆಹಾರದ ಹೆಚ್ಚುತ್ತಿರುವ ಜಾಗತೀಕರಣದೊಂದಿಗೆ, ಬಹುತೇಕ ಎಲ್ಲಾ ದೇಶಗಳಲ್ಲಿ ಕಳೆದ ಕೆಲವು ದಶಕಗಳಲ್ಲಿ ಕೃಷಿ ಮತ್ತು ಬಳಕೆ ಎರಡರಲ್ಲೂ ಗಮನಾರ್ಹ ಕುಸಿತ ಕಂಡುಬಂದಿದೆ.

ಭಾರತದಲ್ಲಿ ಬಹಳಷ್ಟು ಮಂದಿ ತಮ್ಮ ಪೌಷ್ಟಿಕಾಂಶ ಆಹಾರದಲ್ಲಿ ಸಿರಿಧಾನ್ಯಗಳನ್ನು ಬಳಸುತ್ತಿರುವುದರಿಂದ, ಅದರ ಕೃಷಿಯು ಜನಪ್ರಿಯವಾಗುತ್ತಿದೆ. ಸುಲಭ ಕೃಷಿ ಮತ್ತು ಪೌಷ್ಟಿಕಾಂಶ ಸಮೃದ್ಧತೆಯ ಕಾರಣದಿಂದ, ಅವುಗಳ ಕೃಷಿ, ಸಂಸ್ಕರಣೆ ಮತ್ತು ಬಳಕೆಯ ಬಗ್ಗೆ ನೀತಿ ನಿರೂಪಕರು ಮತ್ತು ಸಾರ್ವಜನಿಕರು ಚರ್ಚಿಸುತ್ತಿದ್ದಾರೆ.

ಅವುಗಳ ಭೌತಿಕ ರೂಪದ ದೃಷ್ಟಿಯಿಂದ ಧಾನ್ಯಗಳಲ್ಲಿ ಎರಡು ವಿಧಗಳಿವೆ – ʼಸಿಪ್ಪೆ/ಹೊಟ್ಟು ಇಲ್ಲದ ಧಾನ್ಯಗಳುʼ ಮತ್ತು ʼಸಿಪ್ಪೆ/ಹೊಟ್ಟು ಇರುವ ಧಾನ್ಯಗಳುʼ. ಹೊಟ್ಟು ಇಲ್ಲದ ಧಾನ್ಯಗಳಲ್ಲಿ ರಾಗಿ, ಸಜ್ಜೆ ಮತ್ತು ಜೋಳ ಸೇರಿದೆ. ಹೊಟ್ಟು ಇರುವ ಧಾನ್ಯಗಳಲ್ಲಿ ನವಣೆ, ಸಾಮೆ, ಆರ್ಕ, ಬರಗು, ಊದಲು ಮತ್ತು ಕೊರಲೆ ಸೇರಿದೆ. ಸಂಸ್ಕರಣೆಯ ಸಮಯದಲ್ಲಿ ಪೌಷ್ಟಿಕಾಂಶಗಳು ಹೆಚ್ಚು ನಷ್ಟವಾಗದಂತೆ ಉಳಿಸಿಕೊಳ್ಳಲು ಪ್ರಜ್ಞಾಪೂರ್ವಕ ಪ್ರಯತ್ನಗಳನ್ನು ಮಾಡಬೇಕಿದೆ.

ಹೊಟ್ಟು/ಸಿಪ್ಪೆ ಇರದ ಧಾನ್ಯ ಸಂಸ್ಕರಣೆ: ಹೊಟ್ಟು ಇರದ ಈ ಧಾನ್ಯಗಳ ಸಂಸ್ಕರಣೆಯು ಸ್ವಚ್ಛತೆ, ಶ್ರೇಣೀಕರಣ ಮತ್ತು ಹಿಟ್ಟು ಮಾಡುವುದನ್ನು ಒಳಗೊಂಡಿರುತ್ತದೆ. ಪೌಷ್ಟಿಕಾಂಶ ಉಳಿಕೆ ಮತ್ತು ಶೆಲ್ಫ್‌ ಜೀವಿತಾವಧಿಯನ್ನು ಹೆಚ್ಚಿಸಲು ಕಮಟು ವಾಸನೆಯನ್ನು ಕಡಿಮೆಗೊಳಿಸುವುದು ಪ್ರಾಥಮಿಕ ಸವಾಲು. ಇದಕ್ಕಾಗಿ ಹಿಟ್ಟು ಬೀಸುವ ಪ್ರಕ್ರಿಯೆಯಲ್ಲಿ ಶಾಖದ ಉತ್ಪಾದನೆಯನ್ನು ಕಡಿಮೆಗೊಳಿಸುವ ಅಗತ್ಯವಿದೆ. ಸಮುದಾಯಗಳು ಕಾಲಾಂತರದಲ್ಲಿ ಕಂಡುಕೊಂಡಿರುವ ಮತ್ತೊಂದು ಪರಿಹಾರವೆಂದರೆ ಅಲ್ಪ ಪ್ರಮಾಣದಲ್ಲಿ ಹಿಟ್ಟನ್ನು ಬೀಸಿ ಕಮಟು ವಾಸನೆ ಬರುವ ಮೊದಲೇ ಬಳಸುವುದು. ರಾಗಿ, ಕೆಲವು ಸಾಂಪ್ರದಾಯಿಕ ಸಜ್ಜೆ ತಳಿಗಳು ಮತ್ತು ಜೋಳವನ್ನು ಶೇಖರಿಸಿ ಇಟ್ಟಾಗಲೂ ಕೀಟಭಾದೆ ಕಡಿಮೆ. ಇತ್ತೀಚೆಗೆ ಅಭಿವೃದ್ಧಿಪಡಿಸಿದ ಹೊಸ ತಳಿಗಳಲ್ಲಿ ಕೀಟಬಾಧೆ ಹೆಚ್ಚಿರುವುದು ಕಂಡುಬಂದಿದೆ. ಗಾತ್ರ ಮತ್ತು ತೂಕದ ಆಧಾರದ ಮೇಲೆ ಶ್ರೇಣೀಕರಣವು ಹಾಳಾದ ಕಾಳುಗಳನ್ನು ಸ್ವಚ್ಛಗೊಳಿಸುವ ಮತ್ತು ಹಿಟ್ಟು, ತರಿ/ಕಣಗಳಾಗಿ ಅಥವ ಇನ್ನಾವುದಾದರೂ ತಿನ್ನಬಹುದಾದ ವಿಧದಲ್ಲಿ ಕಾಳನ್ನು ಸಿದ್ಧಗೊಳಿಸುವ ಸರಳ ವಿಧಾನಗಳು.

ಸಿಪ್ಪೆ/ಹೊಟ್ಟು ಸುಲಿದ ಧಾನ್ಯಗಳ ಸಂಸ್ಕರಣೆ: ಸಿಪ್ಪೆ/ಹೊಟ್ಟು ಸುಲಿದ ಧಾನ್ಯಗಳನ್ನು ಸ್ವಚ್ಛಗೊಳಿಸಬೇಕು, ವರ್ಗೀಕರಿಸಬೇಕು ಮತ್ತು ಸಿಪ್ಪೆ/ಹೊಟ್ಟು ಬಿಡಿಸಬೇಕು. ಹೊಟ್ಟುಬಿಡಿಸುವುದನ್ನು ಒಕ್ಕಣೆ ಎಂದೂ ಕರೆಯಲಾಗುತ್ತದೆ. ಹೊಟ್ಟುಬಿಡಿಸಿದ ನಂತರ ಮುರಿದ ಹಾಗೂ ಹೊಟ್ಟುಬಿಡಿಸದ ಕಾಳುಗಳನ್ನು ಬೇರ್ಪಡಿಸಲು ಸ್ವಚ್ಛತೆ ಮತ್ತು ವರ್ಗೀಕರಣದ ಅಗತ್ಯ. ಆದ್ದರಿಂದ ಹೊಟ್ಟುಬಿಡಿಸಿದ ಕಾಳು ಎನ್ನುವುದರ ಅರ್ಥ ಸ್ವಲ್ಪಮಟ್ಟಿಗೆ ಸಂಕೀರ್ಣ ಪ್ರಕ್ರಿಯೆ. ಹೊರಪದರವು ಗಟ್ಟಿಯಾಗಿದ್ದು ಅದನ್ನು ಹೊಟ್ಟು/ಸಿಪ್ಪೆ ಎಂದು ಕರೆಯಲಾಗುತ್ತದೆ. ಅದರೊಳಗೆ ಮತ್ತೊಂದು ತೆಳುವಾದ ಪದರವಿದ್ದು ಅದನ್ನು ಸುಲಭವಾಗಿ ತೆಗೆಯಬಹುದು. ಇದರೊಳಗೆ ಬೀಜಪೋಷಕ (ಎಂಡೊಸ್ಪರ್ಮ್‌) ಇರುತ್ತದೆ. ಇದನ್ನು ಅಕ್ಕಿ ಕಾಳು ಎಂದು ಕರೆಯಲಾಗುತ್ತದೆ. ಹೊಟ್ಟಿನೊಳಗೆ ಕಾಳಿನ ಒಂದು ಬಿಂದುವಿನಲ್ಲಿ ಬೀಜಪೋಷಕದ (ಎಂಡೊಸ್ಪರ್ಮ್‌) ಒಳಗೆ ಪದರವನ್ನು ಸೀಳಿ ಬರುವ ಮೊಳಕೆಯೊಡುವ ಜೀವಾಂಕುರವಿರುತ್ತದೆ. ಸಿಪ್ಪೆ/ಹೊಟ್ಟಿನಲ್ಲಿ ಸೆಲ್ಯೂಲಸ್‌ ಅಂಶ ಹೆಚ್ಚಿರುವುದರಿಂದ ಮನುಷ್ಯರಿಗೆ ಜೀರ್ಣಿಸಿಕೊಳ್ಳಲು ಸಾಧ್ಯವಿಲ್ಲ. ಆದ್ದರಿಂದ ಸಿಪ್ಪೆ ತೆಗೆಯುವುದು ಈ ಕಾಳುಗಳ ಸಂಸ್ಕರಣೆಯ ಮೊದಲ ಹಂತವಾಗಿದೆ. ಹೊಟ್ಟಿನ ಪದರದಲ್ಲಿ ಖನಿಜಾಂಶಗಳು, ನಾರಿನಾಂಶ ಮತ್ತು ಅಗತ್ಯವಾದ ಕೊಬ್ಬಿನ ಆಮ್ಲಗಳಿಂದ ಸಮೃದ್ಧವಾಗಿದೆ. ಉತ್ತಮ ಸಂಸ್ಕರಣಾ ಪ್ರಕ್ರಿಯೆಯು ಸಾಧ್ಯವಾದಷ್ಟು ಈ ಪದರವನ್ನು ಉಳಿಸಿಕೊಳ್ಳುತ್ತದೆ. ಹೊಟ್ಟಿನ ಪದರದಲ್ಲಿ ಕೊಬ್ಬಿನಂಶ ಹೆಚ್ಚಿರುವುದರಿಂದ ಕಮಟು ವಾಸನೆ ಬರುವ ಪ್ರಮಾಣವನ್ನು ತಗ್ಗಿಸಲು ಈ ಪದರಕ್ಕೆ ಹೆಚ್ಚಿನ ಹಾನಿಮಾಡದಿರುವುದು ಸಹ ಮುಖ್ಯವಾಗಿದೆ. ಬೀಜಾಂಕುರ ಸೂಕ್ಷ್ಮಾಣು ಭಾಗದಲ್ಲಿ ಪ್ರೊಟೀನ್‌ ಹೆಚ್ಚಿರುವುದರಿಂದ ಸಂಸ್ಕರಣೆಯ ಸಮಯದಲ್ಲಿ ಅದು ನಷ್ಟವಾಗದೆ ಉಳಿಯುವಂತೆ ಖಚಿತಪಡಿಸಿಕೊಳ್ಳಬೇಕು. ಬೀಜಪೋಷಕವು (ಎಂಡೊಸ್ಪರ್ಮ್‌) ದಟ್ಟವಾದ ಅಂಶವಾಗಿದ್ದು ಸಂಸ್ಕರಣೆಯ ಸಮಯದಲ್ಲಿ ಧಾನ್ಯದ ತೇವಾಂಶ ಅಥವ ಗಾಳಿಯಲ್ಲಿ ಆರ್ದ್ರತೆಯು ಹೆಚ್ಚಾದಾಗ ಒಡೆಯಬಹುದು ಅಥವ ಛಿದ್ರವಾಗಬಹುದು. ಆದ್ದರಿಂದ ಸಾಧ್ಯವಾದಷ್ಟು ಧಾನ್ಯಗಳನ್ನು 12% ಕ್ಕಿಂತ ಕಡಿಮೆ ತೇವಾಂಶದಲ್ಲಿ ಒಣಗಿಸಬೇಕು ಮತ್ತು ಸಾಧ್ಯವಾದಷ್ಟು ಧಾನ್ಯಗಳನ್ನು ಬೆಚ್ಚಗಿನ ಅಥವ ತಂಪಾದ ದಿನಗಳಲ್ಲಿ ಸಂಸ್ಕರಿಸಬೇಕು.

ಸಮುದಾಯ ನೇತೃತ್ವದ ಸಂಸ್ಕರಣಾ ಉಪಕ್ರಮಗಳುಮೂರು ಪ್ರದೇಶಗಳಲ್ಲಿ ಸಂಸ್ಕರಣಾ ಘಟಕಗಳ ಪ್ರಕರಣಗಳು

ಈ ಲೇಖನವು ಭಾರತದಲ್ಲಿನ 3 ಹಳ್ಳಿಗಳಲ್ಲಿ ನಡೆಯುತ್ತಿರುವ ಪ್ರಯತ್ನಗಳ ಮುಖ್ಯಾಂಶಗಳನ್ನು ಎತ್ತಿ ತೋರಿಸುತ್ತದೆ. ಸ್ಥಳೀಯ ಸಮುದಾಯಗಳಿಗೆ ಸಿರಿಧಾನ್ಯಗಳ ತಿಂಡಿಗಳನ್ನು ಮರಳಿ ಪರಿಚಯಿಸಲು ಹಾಗೂ ಈ ಪ್ರದೇಶಗಳಲ್ಲಿ ಮುಖ್ಯವಾಗಿ ಸ್ಥಳೀಯವಾಗಿ ಅವುಗಳನ್ನು ಸಂಸ್ಕರಿಸುವ ಕುರಿತು ಅಗತ್ಯವಾದ ತರಬೇತಿ ಕಾರ್ಯಕ್ರಮಗಳನ್ನು ಕೃಷಿಗೆ ಮಾರ್ಗದರ್ಶನ ನೀಡಲು ನಡೆಸಲಾಯಿತು.

ಈ ಸ್ಥಳಗಳ ಹಿನ್ನಲೆಯು ಭಿನ್ನವಾಗಿತ್ತು. ಸ್ಥಳೀಯ ಸಂಸ್ಥೆಗಳು ಸ್ಥಳೀಯ ಸಮುದಾಯಗಳೊಂದಿಗೆ ವಿವಿಧ ಸಮಯಗಳಲ್ಲಿ ಕೆಲಸ ಮಾಡುತ್ತಿತ್ತು. ಅವರು ಸಿರಿಧಾನ್ಯಗಳ ಉತ್ಪಾದನೆ ಹಾಗೂ ಮನೆಗಳಲ್ಲಿ ಅವುಗಳ ಬಳಕೆ ಹೆಚ್ಚಿಸುವಲ್ಲಿ ಗಮನಕೇಂದ್ರೀಕರಿಸಿದ್ದಾರೆ. ವಿಶೇಷವಾಗಿ ಈ ಧಾನ್ಯಗಳು ಆಯಾ ಸಮುದಾಯಗಳ ಆಹಾರ ಸಂಸ್ಕೃತಿಯಲ್ಲಿ ಬಳಕೆಯಲ್ಲಿದ್ದವು.

೧. ತೀರ್ಥ ಗ್ರಾಮ, ಕುಂದಗೋಳ ತಾಲ್ಲೂಕು, ಧಾರವಾಡ ಜಿಲ್ಲೆ, ಕರ್ನಾಟಕ

ತೀರ್ಥ ಗ್ರಾಮವು ಸುಂದರ ಭೂದೃಶ್ಯವನ್ನು ಹೊಂದಿದ್ದು ಕಪ್ಪುಮಣ್ಣಿನಿಂದ ಶ್ರೀಮಂತವಾಗಿದೆ. ಐತಿಹಾಸಿಕವಾಗಿ ಪ್ರಮುಖ ಸಾಮೆ ಉತ್ಪಾದನಾ ಕೇಂದ್ರವಾಗಿದೆ. ಈ ಉಪಕ್ರಮವು ಇಂಡಿಯನ್‌ ಕೌನ್ಸಿಲ್‌ ಫಾರ್‌ ಅಗ್ರಿಕಲ್ಚರ್‌, ರಿಸರ್ಚ್‌ ಇಂಡಿಯನ್‌ ಇನ್ಸ್‌ಟ್ಯೂಟ್‌ ಫಾರ್‌ ಮಿಲೆಟ್‌ ರಿಸರ್ಚ್‌, ಕೆವಿಕೆ ಹುಲ್ಕೋಟಿ, ಗದಗ ಜಿಲ್ಲೆಯ ಆಹಾರ ಸಂರಕ್ಷಣೆ ಮತ್ತು ಈಕ್ವಿಟಿಯ ಕುರಿತು ಕೆಲಸ ಮಾಡುತ್ತಿರುವ ಸಹಜ ಸಮೃದ್ಧ ಎನ್ನುವ ಎನ್‌ಜಿಒ ಹಾಗೂ ಸೆಲ್ಕೊ ಫೌಂಡೇಶನ್‌ ಸಹಯೋಗದಲ್ಲಿ ನಡೆಸಿದ ಪ್ರಯತ್ನದ ಫಲಿತವಾಗಿದೆ. ಸಹಜ ಸಮೃದ್ಧ, 2018 ರಿಂದ ಸಮುದಾಯಗಳೊಂದಿಗೆ ಸಕ್ರಿಯವಾಗಿದ್ದು, IIMR ನೊಂದಿಗೆ ಕೆಲಸ ಮಾಡಲು ಪ್ರಾರಂಭಿಸಿತು. ನೋಡಲ್ ಏಜೆನ್ಸಿಯಾಗಿ ಗದಗದ ಹುಲ್ಕೋಟಿಯಲ್ಲಿ KH ಪಾಟೀಲ್ KVK ಯೊಂದಿಗೆ ಸಂಸ್ಕರಣಾ ಘಟಕವನ್ನು ಸ್ಥಾಪಿಸಲು ICAR ಬೆಂಬಲವನ್ನು ಪಡೆದುಕೊಂಡಿದೆ. ಸಾಮೆ ಸಂಸ್ಕರಣೆಯ ಪ್ರಕ್ರಿಯೆ, ನಿರ್ದಿಷ್ಟ ಯಂತ್ರಗಳು, ತರಬೇತಿ ಮತ್ತು ಸಾಮರ್ಥ್ಯ ನಿರ್ಮಾಣವನ್ನು ದಿ ಮಿಲೆಟ್‌ ಫೌಂಡೇಶನ್‌ ಒದಗಿಸಿದೆ. SELCO ಫೌಂಡೇಶನ್ ಸೌರಶಕ್ತಿಯನ್ನು ಒದಗಿಸಿತು. ಇದರಿಂದ ಗ್ರಾಹಕರು ಸಂಸ್ಕರಣಾ ಯಂತ್ರಗಳನ್ನು ವಿದ್ಯುತ್‌ ಅವಲಂಬನೆ ಇಲ್ಲದೆ ನಡೆಸಬಹುದಾಗಿದೆ. ಸಹಜ ಸಮೃದ್ಧ ವಿವಿಧ ಸಹಕಾರಿ ಪ್ರಯತ್ನಗಳನ್ನು ಸಂಘಟಿಸಿದೆ. ಪ್ರತಿ ಋತುವಿನಲ್ಲೂ ಕಿರುಧಾನ್ಯಗಳ ಲೋಡುಗಳನ್ನು ಹೊತ್ತ ಡಜನ್‌ಗಟ್ಟಲೇ ಲಾರಿಗಳು ದೂರ ಪ್ರದೇಶಗಳಲ್ಲಿನ ಸಂಸ್ಕರಣಾ ಘಟಕಗಳಿಗೆ ರವಾನಿಸಲಾಗುತ್ತದೆ. ಧಾನ್ಯಗಳನ್ನು ಕೈಯಿಂದ ಸಂಸ್ಕರಿಸುವುದು ಶ್ರಮದಾಯಕ. ನಿರಂತರವಾಗಿ ಇವುಗಳನ್ನು ಬೆಳೆಯುತ್ತಿದ್ದರೂ ಈ ಸಮುದಾಯಗಳು ಇದನ್ನು ಬಳಸುವುದು ಕಡಿಮೆ. ಸ್ಥಳೀಯ ಸಂಸ್ಕರಣಾ ಘಟಕವನ್ನು ಸ್ಥಾಪಿಸುವ ಮೂಲಕ ಈ ಸಮಸ್ಯೆಯನ್ನು ಪರಿಹರಿಸಲಾಗಿದೆ. ಸಂಸ್ಕರಣಾ ಘಟಕವನ್ನು ಬೀಬಿ ಫಾತಿಮಾ ಸ್ವಸಹಾಯ ಸಂಘ (BFSS), ಸ್ವಸಹಾಯ ಗುಂಪು, 2022 ರಲ್ಲಿ ಸ್ಥಾಪಿಸಲಾದ ದೇವಧಾನ್ಯ ಕೃಷಿ ಉತ್ಪನ್ನಕರ ಸಂಘ ಎನ್ನುವ ರೈತ ಉತ್ಪಾದಕರ ಸಂಸ್ಥೆಯ ಸಹಭಾಗಿತ್ವದಲ್ಲಿ ನಡೆಸುತ್ತಿದೆ.

BFSS ಶ್ರೀಮತಿ ಬೀಬಿ ಜಾನ್‌ ಹಳೆಮನಿಯವರ ನೇತೃತ್ವದಲ್ಲಿ 14 ಮಂದಿ ಮಹಿಳೆಯರನ್ನು ಒಳಗೊಂಡಿದೆ. ಕೆಲವು ತಿಂಗಳ ಹಿಂದೆ ನೋಂದಾಯಿಸಲಾದ ರೈತ ಉತ್ಪಾದ ಸಂಸ್ಥೆಯು ಸಂಸ್ಕರಿಸಲಾದ ಉತ್ಪನ್ನಗಳನ್ನು ಸ್ಥಳೀಯ ಮಾರುಕಟ್ಟೆಗಳೊಂದಿಗೆ ಲಿಂಕ್‌ ಮಾಡುತ್ತದೆ. ಹೀಗಾಗಿ, ಈ ಪ್ರದೇಶದಲ್ಲಿ ಸಮುದಾಯ ಆಧಾರಿತ ಕಿರುಧಾನ್ಯ ಸಂಸ್ಕರಣಾ ಘಟಕವನ್ನು ಸ್ಥಾಪಿಸುವ ಅಗತ್ಯವಿತ್ತು. ಬೀಬಿ ಫಾತಿಮಾ ಸ್ವಸಹಾಯ ಸಂಘದ ಸಿರಿಧಾನ್ಯ ಸಂಸ್ಕರಣಾ ಘಟಕವು ಸುಮಾರು 5 ಟನ್ ಕೊರಲೆ, ನವಣೆ, ಬರಗು ಮತ್ತು ಸಾಮೆಯನ್ನು ಸಂಸ್ಕರಣ ಮಾಡಿದೆ. ಅವರ ಉತ್ಪಾದನೆಯ ಸುಮಾರು 80% ಅನ್ನು ಮಾರುಕಟ್ಟೆಗಳು ಮತ್ತು ಸಮ್ಮೇಳನಗಳಲ್ಲಿ ಮಾರಾಟ ಮಾಡಲಾಗಿದೆ, ವಿವಿಧ ಸಂಸ್ಥೆಗಳು ಮತ್ತು ಅವುಗಳ ಸ್ಥಳಗಳ ಮೂಲಕ ಪ್ರವೇಶವನ್ನು ನೀಡಿದೆ. ಮುಂಬರವ ದಿನಗಳಲ್ಲಿ ಸ್ಥಳೀಯ ಬಳಕೆಯನ್ನು ಹೆಚ್ಚಿಸುವ ಪ್ರಯತ್ನಗಳನ್ನು ಕೈಗೊಳ್ಳಲಾಗಿದೆ. ಇಲ್ಲಿ ಮಹಿಳೆಯರಿಗೆ ಸಂಸ್ಕರಣಾ ತತ್ವಗಳನ್ನು ಪರಿಚಯಿಸುವುದು, ಸಂಸ್ಕರಣಾ ಯಂತ್ರಗಳನ್ನು ನಡೆಸಲು ಆತ್ಮವಿಶ್ವಾಸ ತುಂಬುವುದು ಮತ್ತು ಸಮುದಾಯದ ಯುವಸದಸ್ಯರಿಗೆ ಹೊಟ್ಟಿನಲ್ಲಿರುವ ಪೌಷ್ಟಿಕಾಂಶ ಮೌಲ್ಯದ ಬಗ್ಗೆ ಮನವರಿಕೆ ಮಾಡಿಕೊಡುವ ಸವಾಲುಗಳನ್ನು ಎದುರಿಸಬೇಕಿದೆ.

2.ಕೇರಳದ ಪಾಲಕ್ಕಾಡ್ ಜಿಲ್ಲೆಯ ಅಟ್ಟಪಾಡಿ:

ಇದು 2021 ರ ಕೊನೆಯಲ್ಲಿ ಸ್ಥಾಪಿತವಾಯಿತು. ತ್ರಿಶೂರ್ ಮತ್ತು ತಿರುವನಂತಪುರಂ ಮೂಲದ ಥಾನಲ್ ಎಂಬ ಎನ್‌ಜಿಒ ಬೆಂಬಲದೊಂದಿಗೆ ಸ್ಥಳೀಯ ಸಮುದಾಯದ ಸದಸ್ಯರು ಇದನ್ನು ನಿರ್ವಹಿಸುತ್ತಾರೆ. ಅಟ್ಟಪಾಡಿ ಕೇರಳದ ಪಾಲಕ್ಕಾಡ್ ಜಿಲ್ಲೆಯ ಪಶ್ಚಿಮ ಘಟ್ಟಗಳ ಪೂರ್ವದ ಅಂಚಿನಲ್ಲಿರುವ ಒಂದು ಸಣ್ಣ ಪಟ್ಟಣವಾಗಿದೆ. ಥಾನಲ್ 2019 ರಲ್ಲಿ ಅಟ್ಟಪಾಡಿಯಲ್ಲಿ ಸಮುದಾಯದೊಂದಿಗೆ ಸೇರಿ ಸಿರಿಧಾನ್ಯಗಳ ಮೇಲೆ ಕೆಲಸ ಮಾಡಲು ಪ್ರಾರಂಭಿಸಿದರು. ಈ ಭಾಗಗಳಲ್ಲಿನ ಆದಿವಾಸಿ ಸಮುದಾಯಗಳು ಹಲವು ವರ್ಷಗಳಿಂದ ಸಿರಿಧಾನ್ಯಗಳ ಬೇಸಾಯ ಮಾಡಿ ಸೇವಿಸುತ್ತಿದ್ದಾರೆ. ಅಟ್ಟಪಾಡಿಯ ಸುತ್ತಲ ಹಳ್ಳಿಯಲ್ಲಿ ಮಳೆ ಅನಿಶ್ಚಿತವಾದ್ದರಿಂದ ಸಿರಿಧಾನ್ಯಗಳು ಇಲ್ಲಿನ ಜನರ ಆಹಾರದ ಭಾಗವಾಗಿದೆ ಎಂದು ಕಾಣುತ್ತದೆ. ಈ ಬೆಟ್ಟಗಳಲ್ಲಿ ಬೆಳೆಯುವ ಕಿರುಧಾನ್ಯದ ತಳಿಗಳು ಬಯಲು ಪ್ರದೇಶದಲ್ಲಿ ಬೆಳೆಯುವ ತಳಿಗಳಿಗಿಂತ ಸಣ್ಣದಾಗಿದೆ. ಈ ಕಿರುಧಾನ್ಯಗಳ ಸ್ವಚ್ಛತೆ, ಶ್ರೇಣೀಕರಣ ಮತ್ತು ಹೊಟ್ಟು ಬಿಡಿಸುವುದು ಹೆಚ್ಚು ಶ್ರಮದಾಯಕವಾದ್ದರಿಂದ ಬಳಕೆಯ ಕಡಿಮೆಯಾಯಿತು. ಮಳೆ ಹಾಗೂ ಹವಾಮಾನ ಬದಲಾವಣೆಯ ಸೂಕ್ಷ್ಮ ವ್ಯತ್ಯಾಸಗಳು ಇದನ್ನು ಇನ್ನಷ್ಟು ಜಟಿಲವಾಗಿಸಿತು. ತೊಗರಿಯನ್ನು ಸ್ಥಳೀಯವಾಗಿ ಬೆಳೆಯಲಾಗುತ್ತದೆ. ಸಮೀಪದಲ್ಲಿ ಹೆಚ್ಚಿನ ಹಿಟ್ಟಿನ ಗಿರಣಿಗಳು ಇಲ್ಲ.

ಬಹುರಾಷ್ಟ್ರೀಯ ಐಟಿ ಕಂಪನಿಯಾದ UST ಯಿಂದ CSR ಅನುದಾನದ ಮೂಲಕ ಭಾರತದ ಕೀಟನಾಶಕ ಆಕ್ಷನ್ ನೆಟ್‌ವರ್ಕ್‌ನ ಬೆಂಬಲದೊಂದಿಗೆ ಸಮುದಾಯ ಕೇಂದ್ರಿತ ಕಿರುಧಾನ್ಯ ಸಂಸ್ಕರಣಾ ಘಟಕವನ್ನು ಸ್ಥಾಪಿಸಲಾಗಿದೆ. ಕಿರುಧಾನ್ಯ ಸಂಸ್ಕರಣೆಯ ಪ್ರಕ್ರಿಯೆ, ಯಂತ್ರದ ವಿಶೇಷಣಗಳು, ತರಬೇತಿ ಮತ್ತು ಸಾಮರ್ಥ್ಯ ನಿರ್ಮಾಣವನ್ನು ದಿ ಮಿಲೆಟ್‌ ಫೌಂಡೇಶನ್ ಒದಗಿಸಿದೆ. ಜೊತೆಗೆ, ದಾಲ್‌ ಗಿರಣಿ ಯಂತ್ರಗಳು ಮತ್ತು ಹಿಟ್ಟಿನ ಗಿರಣಿಗಳನ್ನು ಘಟಕದಲ್ಲಿ ಸ್ಥಾಪಿಸಲಾಯಿತು. ಕಾರಣಾಂತರಗಳಿಂದ ಸಂಸ್ಥೆಗಳ ಆಸಕ್ತಿಯ ಹೊರತಾಗಿಯೂ ಈ ಘಟಕ ಹೆಚ್ಚಿಗೆ ಬಳಕೆಯಾಗಲಿಲ್ಲ. 2022 ರ ಕೊನೆಯಲ್ಲಿ, ಯಂತ್ರಗಳನ್ನು ನಿರ್ವಹಿಸಲು ಸ್ಥಳೀಯ ಮಹಿಳೆಯರ ತಂಡವನ್ನು ಮತ್ತು ಘಟಕದ ಕಾರ್ಯಾಚರಣೆಯನ್ನು ಮೇಲ್ವಿಚಾರಣೆ ಮಾಡಲು ಸ್ಥಳೀಯ ಥಾನಲ್ ಕಚೇರಿಯ ಸಿಬ್ಬಂದಿಯನ್ನು ಸನ್ನದ್ಧಗೊಳಿಸಲು ಎರಡನೇ ಸುತ್ತಿನ ತರಬೇತಿಯನ್ನು ನಡೆಸಲಾಯಿತು. ಘಟಕವು ಸಂಪೂರ್ಣ ಕಾರ್ಯಾಚರಣೆ ಆರಂಭಿಸುವುದನ್ನು ನೋಡಲು ಸ್ಥಳೀಯ ಸಮುದಾಯವು ಉತ್ಸುಕವಾಗಿದೆ. ಕಿರುಧಾನ್ಯಗಳನ್ನು ಒಳಗೊಂಡ ತಮ್ಮ ಆಹಾರ ಸಂಸ್ಕೃತಿಯ ಸವಿಯಾದ ನೆನಪುಗಳು ಅವರಲ್ಲಿವೆ. ಸಂಸ್ಕರಣಾ ಘಟಕದ ಬೆಂಬಲದಿಂದ ಕೃಷಿಯನ್ನು ಮುಂದುವರೆಸುವ ಅವಕಾಶವನ್ನು ಸಮುದಾಯಗಳಿಗೆ ನೀಡಿದವು. ಸ್ಥಳೀಯ ಸಂಸ್ಥೆಗಳು ಜನರ ಆಹಾರದಲ್ಲಿ ಸಿರಿಧಾನ್ಯಗಳನ್ನು ಮರಳಿತರುವ ಅವಕಾಶ ನೀಡಿದವು.

3. ಪಿಪ್ರಿ ಗ್ರಾಮ, ಮಿಶ್ರಿಖ್ ಬ್ಲಾಕ್, ಸೀತಾಪುರ್ ಜಿಲ್ಲೆ, ಉತ್ತರ ಪ್ರದೇಶ

ಇಲ್ಲಿನ ಘಟಕದ ಹೆಸರು ಸೆಹತ್‌ ಕಾ ಬಾರ್ದಾನ (SkB). ಸ್ಥೂಲವಾಗಿ ಇದರರ್ಥ ಆರೋಗ್ಯದ ಸಲಕರಣೆ ಸಂದೂಕ . ಇಲ್ಲಿಯವರೆಗೆ ಸ್ಥಾಪಿಸಲಾಗಿರುವ ಆರು ಘಟಕಗಳಲ್ಲಿ ಇದು ಅತ್ಯಂತ ಚಿಕ್ಕದು. SkB ಯನ್ನು ಸಂಗ್ತಿನ್ ಕಿಸಾನ್ ಮಜ್ದೂರ್ ಸಂಘಟನೆ (ರೈತ ಕಾರ್ಮಿಕ ಸಮೂಹ), ಹೆಲ್ತಿ ಅವಧ್ ಫೌಂಡೇಶನ್ (ಕಂಪನಿಯ ಕಾಯಿದೆ 8ರ ಅಡಿಯಲ್ಲಿ ಸ್ಥಾಪಿಸಿರುವ ಲಾಭ ರಹಿತ ಕಂಪನಿ) ಮತ್ತು ಸೀತಾಪುರದ ಮೂಲದ ಸಾಂಗ್ಟಿನ್‌ ಎನ್ನುವ ಎನ್‌ಜಿಒ ಒಕ್ಕೂಟದಿಂದ ನಡೆಸಲಾಗುತ್ತಿದೆ. SkB ಇತ್ತೀಚಿನ ಸಂಸ್ಕರಣಾ ಘಟಕವಾಗಿದ್ದರೂ ಸಹ, ಸಾಂಗ್ಟಿನ್ ವಾಸ್ತವವಾಗಿ 2014 ರಿಂದ ರೈತರ ಕ್ಷೇತ್ರಗಳಲ್ಲಿ ಮತ್ತು ಅವರ ಆಹಾರದಲ್ಲಿ ಸಿರಿಧಾನ್ಯಗಳನ್ನು ಉತ್ತೇಜಿಸಲು ಸಮುದಾಯಗಳೊಂದಿಗೆ ಕೆಲಸ ಮಾಡುತ್ತಿದೆ. ಸೀತಾಪುರ ಜಿಲ್ಲೆಯಲ್ಲಿ ಸಿರಿಧಾನ್ಯಗಳಿಗೆ ಸಂಬಂಧಿಸಿದಂತೆ,  ಜಿಲ್ಲೆಯ ದೂರದ ಪ್ರದೇಶಗಳಲ್ಲಿ ಆರ್ಕ ಮತ್ತೆ ಕೆಲವೆಡೆ ನವಣೆಯನ್ನು ಬೆಳೆಯುತ್ತಿದ್ದ ಹಾಗೂ ಸೇವಿಸುತ್ತಿದ್ದ ಗಾಢನೆನಪು ಸ್ಥಳೀಯ ಸಮುದಾಯಗಳಲ್ಲಿವೆ. ಆದರೂ, ಬಹುತೇಕ ಕುಟುಂಬಗಳು ತಮ್ಮ ಹೊಲಗಳಲ್ಲಾಗಲಿ ಆಹಾರದಲ್ಲಾಗಲಿ ಕಳೆದ ಹಲವು ಋತುಗಳಿಂದ ಹಿಡಿದು ಹಲವು ದಶಕಗಳವರೆಗೆ ಸಿರಿಧಾನ್ಯಗಳನ್ನು ಕಂಡಿಲ್ಲ.

ಸಂಗ್ತಿನ್ ಕಿಸಾನ್ ಮಜ್ದೂರ್ ಸಂಘಟನ್ (SKMS), 6000 ಸದಸ್ಯರ ಪ್ರಬಲ ಸ್ಥಳೀಯ ರೈತ ಕಾರ್ಮಿಕ ಸಮೂಹವು ಉತ್ತರಪ್ರದೇಶದ ಸೀತಾಪುರ್ ಮತ್ತು ಹರ್ದೋಯಿ ಜಿಲ್ಲೆಗಳ 12 ಬ್ಲಾಕ್‌ಗಳಲ್ಲಿ ಹರಡಿದೆ. ಇದು 2015 ರಲ್ಲಿ ಹೊಸ ಚಳುವಳಿಯನ್ನು ಪ್ರಾರಂಭಿಸಿತು. ಅವರೆಲ್ಲರ ಸತತ ಪ್ರಯತ್ನವು  ಈ ಕುಟುಂಬಗಳಿಗೆ ಸಿರಿಧಾನ್ಯಗಳ ಕೃಷಿಯನ್ನು ಕಂಡುಕೊಳ್ಳುವಂತೆ ಮಾಡಿತು. ಈ ಕುಟುಂಬಗಳು  ಸ್ಥಳೀಯ ಮಣ್ಣು ಹಾಗೂ ಹವಾಮಾನಗಳಿಗೆ ಅನುಗುಣವಾಗಿ ನೀಡಲಾದ ಬೀಜಗಳೊಂದಿಗೆ ಕೃಷಿಯನ್ನು ಆರಂಭಿಸಿದವು. ಈ ಉಪಕ್ರಮದ ಮೂಲಕ ದೇಶದ ಇತರ ಭಾಗಗಳಿಂದ ಹೊಸ ಬೀಜಗಳನ್ನು ಪರಿಚಯಿಸಲಾಗಿದ್ದರೂ, ಕೆಲವೇ ರೈತರಿಗೆ ಮಾತ್ರ ಅವುಗಳನ್ನು ಯಶಸ್ವಿಯಾಗಿ ಬೆಳೆಸಲು ಸಾಧ್ಯವಾಯಿತು. 2 ವರ್ಷಗಳಲ್ಲಿ, ದೇಸಿ ಬೀಜಗಳು ಇಲ್ಲಿಗೆ ಸೂಕ್ತ ಎನ್ನುವುದು ಸ್ಪಷ್ಟವಾಗಿ ಅರಿವಾಯಿತು. ಸುಮಾರು 500 ರೈತರು ಮಳೆಯಾಶ್ರಿತ ಭೂಮಿಯಲ್ಲಿ ಹಾರಕ, ರಾಗಿ ಮತ್ತು ಊದಲನ್ನು ನಿಯಮಿತವಾಗಿ ಬೆಳೆಯುತ್ತಿದ್ದಾರೆ. ಸಮುದಾಯದಲ್ಲಿ ಹೆಚ್ಚಿರುವ ಅಪೌಷ್ಟಿಕತೆಯ ಬಗ್ಗೆ ಕಳಕಳಿ ಹೊಂದಿರುವ ರೈತ ಸಮುದಾಯವು ಆಹಾರ ಮತ್ತು ಪೌಷ್ಟಿಕಾಂಶ ಭದ್ರತೆಯ ದೃಷ್ಟಿಕೋನದಿಂದ ಕೃಷಿಯ ಮೇಲೆ ಗಮನಕೇಂದ್ರೀಕರಿಸಿದೆ. ಇದರ ಎರಡು ಲಕ್ಷಣಗಳೆಂದರೆ– ಒಂದು ಕೃಷಿಯ ಉಪಕ್ರಮಗಳು, ಎರಡು ಹಳ್ಳಿಗಳಲ್ಲಿ ಸಿರಿಧಾನ್ಯಗಳ ಸೇವನೆಯನ್ನು ಪ್ರಚುರಗೊಳಿಸುವುದು.

ತಾಕತಿ ಖಾನಾ ಶಿವಿರ್‌, ಎನರ್ಜಿ ಫುಡ್‌ ಆಹಾರ ಮೇಳವನ್ನು ಮೂರು ವರ್ಷಗಳಲ್ಲಿ ವಿವಿಧ ಹಳ್ಳಿಗಳಲ್ಲಿ ಸಂಘಟಿಸಿದೆ. ಸಿರಿಧಾನ್ಯಗಳು, ಕಾಳುಗಳು ಮತ್ತು ಎಣ್ಣೆಕಾಳುಗಳನ್ನು ಆಹಾರಪದಾರ್ಥಗಳಲ್ಲಿ ಒಳಗೊಳ್ಳಬೇಕಾದ ಅಗತ್ಯ ಮತ್ತು ಮರಳಿ ಪರಿಚಯಿಸುವ ಉದ್ದೇಶದಿಂದ ಮೇಳಗಳನ್ನು ಸಂಘಟಿಸಲಾಯಿತು. ಮಿಶ್ರ ಬೆಳೆ ಉತ್ಪನ್ನಗಳ ಪೌಷ್ಟಿಕಾಂಶದ ಲಾಭಗಳು, ಮೊಟ್ಟೆ ಮತ್ತು ಮಾಂಸದ ಪ್ರಯೋಜನಗಳನ್ನು ಎತ್ತಿ ತೋರಿಸಲಾಯಿತು. ಆಹಾರ ಪದ್ಧತಿಗಳ ಲಾಭದ ವಿಶ್ಲೇಷಣೆಯನ್ನು ಮಾಡಲಾಯಿತು.

ಜನರು ಸಿರಿಧಾನ್ಯಗಳನ್ನು ಬೆಳೆಯಲು, ಬಳಸಲು ಆರಂಭಿಸಿದಾಗ ಸಂಘಟನೆಯ ಸದಸ್ಯರು ಅಕ್ಕಿ ಗಿರಣಿಯವರೊಂದಿಗೆ ಮಾತಾಡಿ ಸಿರಿಧಾನ್ಯಗಳ ಹೊಟ್ಟನ್ನು ಬಿಡಿಸಿಕೊಡಲು ಕೇಳಿದರು. ಸಣ್ಣ ಗಿರಣಿ ಹೊಂದಿದ್ದವನು ಭತ್ತಕ್ಕೆ ಪಾಲಿಶ್‌ ಮಾಡುವ ಯಂತ್ರವನ್ನೇ ಸಿರಿಧಾನ್ಯಗಳ ಹೊಟ್ಟು ಬಿಡಿಸಲು ಬಳಸುತ್ತಿದ್ದ. ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯಿಂದ ತರಲಾದ ವಿವಿಧ ಗಾತ್ರದ ಜರಡಿಗಳು ಮತ್ತು ಸ್ಥಳೀಯ ಮೊರಗಳನ್ನು ಬಳಸಿ ಸಂಘಟನೆಯ ಸದಸ್ಯರು ಹೊಟ್ಟುಬಿಡಿಸುವ ಮೊದಲು ಧಾನ್ಯಗಳನ್ನು ಸ್ವಚ್ಛಗೊಳಿಸಿ, ವರ್ಗೀಕರಣ ಮಾಡಿದರು. ಹೊಟ್ಟು ಬಿಡಿಸಿದ ನಂತರವು ಸ್ವಚ್ಚಗೊಳಿಸಿದರು. ಹೊಟ್ಟು ಬಿಡಿಸಿದ ಸಿರಿಧಾನ್ಯದ ಅಕ್ಕಿಯ ಗುಣಮಟ್ಟವನ್ನು ರಾಜಿಮಾಡಿಕೊಳ್ಳಬೇಕಾಯಿತು. ಆದರೆ ಇದು ಸಂಸ್ಕರಣಾ ಘಟಕವನ್ನು ಸ್ಥಾಪಿಸುವ ಬಂಡವಾಳ ವೆಚ್ಚದ ಒಂದು ಭಾಗದಷ್ಟಿದ್ದು ಸಮುದಾಯದ ಪೌಷ್ಟಿಕಾಂಶವನ್ನು ಸುಧಾರಿಸಲು ಸಹಾಯ ಮಾಡಿತು. 2020 ರಲ್ಲಿ, ಉಪಕ್ರಮವು ಪ್ರಾರಂಭವಾದ 6 ವರ್ಷಗಳ ನಂತರ, ಸಣ್ಣ ಪ್ರಮಾಣದ ಯಾಂತ್ರೀಕೃತ ಸಂಸ್ಕರಣಾ ಸೌಲಭ್ಯವನ್ನು ಸ್ಥಾಪಿಸುವ ನಿರ್ಧಾರವನ್ನು ಸಂಘಟನ್ ಅನುಮೋದಿಸಿತು. ಸಂಗ್ತಿನ್‌ ಎಂಬ ದಾನಿಸಂಸ್ಥೆಯಿಂದ ಧನಸಹಾಯ, ದ ಮಿಲೆಟ್‌ ಫೌಂಡೇಷನ್‌ನ ತಾಂತ್ರಿಕ ನೆರವು ಮತ್ತು SKMS ಸಹಾಯದಿಂದ ಸಾಧ್ಯವಾಯಿತು. ಕಾರ್ಯಾರಂಭ ಮಾಡಿದ ಆರು ತಿಂಗಳಲ್ಲಿ, ಸುಮಾರು 2.5 ಟನ್‌ಗಳಷ್ಟು ಸಂಗ್ರಹಿಸಿದ ಧಾನ್ಯಗಳನ್ನು SkB ಯಲ್ಲಿ ಸ್ವಚ್ಛಗೊಳಿಸಲಾಗಿದೆ. 0.5 ಟನ್ ಸಿರಿಧಾನ್ಯದ ಅಕ್ಕಿಯ ಶೇ.ಅರವತ್ತರಷ್ಟು ಭಾಗವನ್ನು ಸ್ಥಳೀಯ ಸಮುದಾಯದಲ್ಲಿ ಮಾರಾಟ ಮಾಡಲಾಗಿದೆ. ಉಳಿದದ್ದನ್ನು ಲಕ್ನೋ ಮತ್ತು ಉತ್ತರಪ್ರದೇಶಗಳಲ್ಲಿ ಜನರಿಗೆ ಮತ್ತು ಸಂಸ್ಥೆಗಳಿಗೆ ಮಾರಾಟ ಮಾಡಲಾಗಿದೆ.

ಹೀಗಾಗಿ, ಮೂರು ವಿಭಿನ್ನ ಪ್ರದೇಶಗಳಲ್ಲಿ ಸಿರಿಧಾನ್ಯಗಳ ಉತ್ಪಾದನೆ ಮತ್ತು ಬಳಕೆಯನ್ನು ಪುನಶ್ಚೇತನಗೊಳಿಸಲು ಉಪಕ್ರಮಗಳನ್ನು ಕೈಗೊಳ್ಳಲಾಗಿದೆ. ಇದರಲ್ಲಿ ಸಾಧ್ಯವಾದಷ್ಟು ಸಿರಿಧಾನ್ಯಗಳ ಸಂಸ್ಕರಣೆಯಲ್ಲಿ ಪೌಷ್ಟಿಕಾಂಶಗಳನ್ನು ಉಳಿಸಿಕೊಳ್ಳುವ ಕುರಿತು ಸ್ಥಳೀಯ ಮಹಿಳೆಯರು ಹಾಗೂ ಪುರಷರಿಗೆ ತರಬೇತಿ ನೀಡುವುದು ಮತ್ತು ಆಹಾರಕ್ರಮದಲ್ಲಿ ಸಿರಿಧಾನ್ಯಗಳನ್ನು ಮರಳಿ ಪರಿಚಯಿಸುವುದು ಸೇರಿದೆ. ಇದರೊಂದಿಗೆ ಕೈಜೋಡಿಸಿರುವ ರೈತರು ಸಣ್ಣ, ಅತಿಸಣ್ಣ ಇಲ್ಲವೇ ಕೃಷಿ ಮತ್ತು ಆಹಾರ ವ್ಯವಸ್ಥೆಯಲ್ಲಿ ಬದಲಾವಣೆಯನ್ನು ತರಲು ಬಯಸುತ್ತಿರುವವರು. ಕೋವಿಡ್ 19 ಸಾಂಕ್ರಾಮಿಕವು ತರಬೇತಿ ಮತ್ತು ಸಂಸ್ಕರಣಾ ಘಟಕಗಳ ಸ್ಥಾಪನೆಗೆ ಯೋಜಿಸಲಾಗಿದ್ದ ಸಮಯಕ್ಕೆ ಅಡ್ಡಿಪಡಿಸಿತು. ಸಮುದಾಯಗಳು ತಮ್ಮ ಪೌಷ್ಟಿಕಾಂಶ ಮಟ್ಟವನ್ನು ಸುಧಾರಿಸುವ ನಿಟ್ಟಿನಲ್ಲಿ ಕಷ್ಟದ ಸಮಯವನ್ನು ಎದುರಿಸಿದರು. ಅವರು ಇತರ ಸವಾಲುಗಳನ್ನು ಎದುರಿಸುತ್ತಿದ್ದಾರೆ. ಉದಾಹರಣೆಗೆ – ಯಂತ್ರಗಳನ್ನು ನಡೆಸಲು ಸ್ಥಳೀಯ ಸಮುದಾಯಗಳಲ್ಲಿ ಸೂಕ್ತರಾದವರನ್ನು ಹುಡುಕುವುದು, ಸಣ್ಣ ಪ್ರಮಾಣದ ವಿಕೇಂದ್ರೀಕೃತ ಪ್ರಕ್ರಿಯೆಯ ಯಂತ್ರಗಳು ಮತ್ತು ಅಂತಹ ಘಟಕಗಳ ಉತ್ಪನ್ನಗಳ ಮೇಲೆ  GSTಯಂತಹ ಸಮಸ್ಯೆಗಳನ್ನು ಎದುರಿಸಬೇಕಾಯಿತು. ಮುಖ್ಯವಾಹಿನಿಯ ಪ್ರಾಥಮಿಕ ಗಮನವು ಮಾರುಕಟ್ಟೆ ಕೇಂದ್ರಿತ ವಿಧಾನದ ಮೇಲೆ ಕೇಂದ್ರೀಕೃತವಾಗಿದೆ. ಆದರೂ, ಸುಸ್ಥಿರ ಆಹಾರ ವ್ಯವಸ್ಥೆಗಳನ್ನು ಆರಂಭಿಸಲು ಜನಕೇಂದ್ರಿತ ವಿಕೇಂದ್ರೀಕೃತ ಸಮುದಾಯ ಸ್ವಾಮ್ಯದ ಪ್ರಕ್ರಿಯೆಗಳನ್ನು ಬಲಪಡಿಸಬೇಕು.

ಮುಂದಿನ ಕೆಲವು ವರ್ಷಗಳಲ್ಲಿ, ಮೇಲೆ ವಿವರಿಸಿದಂತಹ ಅನೇಕ ಸಂಸ್ಕರಣಾ ಘಟಕಗಳನ್ನು ಪ್ರೋತ್ಸಾಹಿಸಬೇಕಾಗಿದೆ. ಅವರು ವಿಕೇಂದ್ರೀಕೃತ ಆರ್ಥಿಕತೆ, ವಿನೂತನ ಪರಿಸರ ವ್ಯವಸ್ಥೆಯನ್ನು ಬಲಪಡಿಸುವ ಮತ್ತು ಪೌಷ್ಟಿಕಾಂಶ ಲಭ್ಯತೆಗೆ ಸುಧಾರಿತ ಸ್ಥಳೀಯ ಪರಿಹಾರಗಳನ್ನು ಕಂಡುಕೊಳ್ಳುವ ದೀಪಧಾರಿಗಳಾಗುತ್ತಾರೆ.


Dwiji Guru
The Millet Foundation
Saideep Apartments,
41, Govindappa Road,
Basavanagudi,
Bengaluru 560004
India
E- mail: dwiji@themillet.org

ಆಂಗ್ಲ ಮೂಲ : ಲೀಸಾ ಇಂಡಿಯಾ; ಸಂಪುಟ :೨೫; ಸಂಚಿಕೆ : ೧ ; ಮಾರ್ಚ್‌ ೨೦‌೨‌೩

Recent Posts

ಕೃಷಿಯಲ್ಲಿ ನೀರಿನ ಸಮರ್ಥ ಬಳಕೆಗಾಗಿ ಕಾಲುವೆ ಯಾಂತ್ರೀಕರಣ

ಕೃಷಿಯಲ್ಲಿ ನೀರಿನ ಸಮರ್ಥ ಬಳಕೆಗಾಗಿ ಕಾಲುವೆ ಯಾಂತ್ರೀಕರಣ

ನಮ್ಮ ನೀರಾವರಿ ವ್ಯವಸ್ಥೆಯನ್ನು 21ನೇ ಶತಮಾನದ ಬೇಡಿಕೆಗಳಿಗೆ ಹೊಂದುವಂತೆ ಮಾಡುವುದು ನಮ್ಮ ಮುಂದಿರುವ ನಿಜವಾದ ಸವಾಲಾಗಿದೆ. ತಂತ್ರಜ್ಞಾನವೇ...