ಕೃಷಿಪರಿಸರ ವಿಜ್ಞಾನದ ತರಬೇತಿ ವಿಡಿಯೋಗಳು ಕಲಿಯುವ ರೈತರಿಗೆ ನೆರವಾಗುವುದು


ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಕೃಷಿ ಪರಿಸರ ಜ್ಞಾನ ಮತ್ತು ಅಭ್ಯಾಸಗಳು ಲಭ್ಯವಾಗುವಂತೆ ಮಾಡಲು ಕೃಷಿ ಸಲಹಾ ಸೇವೆಗಳನ್ನು ಬಲಪಡಿಸುವುದು ಕೃಷಿ ಪರಿಸರವಿಜ್ಞಾನ ಮತ್ತು ಸಾವಯವ ಕೃಷಿಯ ಪರಿವರ್ತನೆಗೆ ನಿರ್ಣಾಯಕವಾದ ಅಂಶವಾಗಿದೆ. ಡಿಜಿಟಲ್ ಕಲಿಕಾ ಪರಿಕರಗಳು ರೈತರಿಗೆ ಕೃಷಿ ಪರಿಸರವಿಜ್ಞಾನದ ಅಭ್ಯಾಸಗಳ ಬಗ್ಗೆ ತರಬೇತಿ ನೀಡಲು, ರೈತರ ಪ್ರಯೋಗ ಮತ್ತು ದೇಸಿ ಆವಿಷ್ಕಾರ ಮತ್ತು ಉನ್ನತ ಮಟ್ಟದ ಕೃಷಿವಿಜ್ಞಾನವನ್ನು ಉತ್ತೇಜಿಸಲು ಪರಿಣಾಮಕಾರಿ ಮಾರ್ಗವಾಗಿದೆ.


ಪರಿಸರಾತ್ಮಕ ಕೃಷಿಯ ಕುರಿತಾದ ತಿಳಿವಳಿಕೆ, ಸಂಕೀರ್ಣವಾಗಿದ್ದು ಹಂಚಿಕೊಳ್ಳುವುದು ಕಷ್ಟ. ಸಣ್ಣ, ಅತಿಸಣ್ಣ ರೈತರು, ಗ್ರಾಮೀಣ ಮಹಿಳೆಯರು, ಯುವಕರು ಹಲವು ಬಗೆಯ ಸವಾಲುಗಳನ್ನು ಎದುರಿಸುತ್ತಾರೆ. ತಮ್ಮ ಭಾಷೆಯಲ್ಲಿ ಪ್ರಸ್ತುತ ಎನಿಸುವಂತಹ ಕೃಷಿ ಮಾಹಿತಿಯನ್ನು ನೀಡುವಂತಹ ಸಂಪನ್ಮೂಲಗಳಿಗಾಗಿ ಕಾತರದಿಂದ ಕಾಯುತ್ತಿರುತ್ತಾರೆ. ದೇಸಿ ಆಹಾರ ವ್ಯವಸ್ಥೆಯನ್ನು ಕಾಪಾಡಲು ಈ ರೈತರ ತಿಳಿವಳಿಕೆ ಹಾಗೂ ಕೌಶಲಗಳನ್ನು ಬಲಪಡಿಸುವ ಅಗತ್ಯವಿದೆ.

ಬಿಹಾರದ ದುರ್ದಿಃ ಹಳ್ಳಿಯಲ್ಲಿ ERA ತಂಡದ ಸದಸ್ಯ ಸ್ಮಾರ್ಟ್‌ ಪ್ರೊಜೆಕ್ಟರ್‌ ಬಳಸಿ ರೈತರಿಗೆ ವಿಡಿಯೋ  ತೋರಿಸುತ್ತಿರುವುದು

ರೈತರಿಗೆ ವಿಸ್ತರಣಾ ಸಿಬ್ಬಂದಿಯ ಕಡಿಮೆ ಅನುಪಾತದಿಂದಾಗಿ (ಉದಾಹರಣೆಗೆ ಭಾರತದಲ್ಲಿ 1:1162), ಕೇವಲ ಒಂದು ಸಣ್ಣ ಶೇಕಡಾವಾರು ರೈತರಿಗೆ ಮಾತ್ರ ಇದನ್ನು ಪಡೆಯುವ ಅವಕಾಶವಿದೆ. ದಶಕಗಳಿಂದ, ವಿಸ್ತರಣಾ ಸೇವೆಗಳು ಕೃಷಿಯ ಹಸಿರು ಕ್ರಾಂತಿಯ ಮಾದರಿಯನ್ನು ಬೆಂಬಲಿಸುವ ನಿಟ್ಟಿನಲ್ಲಿ ಸಂಶೋಧನೆಗಳು ನಡೆದಿವೆ. ಆದ್ದರಿಂದ ಕೃಷಿ ಪರಿಸರವಿಜ್ಞಾನದ ಪರಿವರ್ತನೆಯನ್ನು ಬೆಂಬಲಿಸಲು ಬೇಕಾದ ಮನಸ್ಥಿತಿ ಅಥವಾ ಕೌಶಲ್ಯ, ಜ್ಞಾನವನ್ನು ಹೊಂದಿಲ್ಲ. ಕೆಲವು ಅಭಿವೃದ್ಧಿ ಯೋಜನೆಗಳು ಕೃಷಿ ಪರಿಸರವಿಜ್ಞಾನದಲ್ಲಿ ರೈತರಿಗೆ ತರಬೇತಿ ಕಾರ್ಯಕ್ರಮಗಳನ್ನು ಹೊಂದಿದ್ದರೂ, ಅವು ಹೆಚ್ಚು ಜನರನ್ನು ತಲುಪಿಲ್ಲ. ಆದ್ದರಿಂದ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಕೃಷಿ ಪರಿಸರವಿಜ್ಞಾನದ ಜ್ಞಾನ ಮತ್ತು ಪದ್ಧತಿಗಳು ಲಭ್ಯವಾಗುವಂತೆ ಕೃಷಿ ಸಲಹಾ ಸೇವೆಗಳನ್ನು ಬಲಪಡಿಸುವುದು ಒಂದು ಪ್ರಮುಖ ಸವಾಲಾಗಿದೆ.

ಹೊಸ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನಗಳು (ICT ಗಳು) ವೇಗವಾಗಿ ಲಭ್ಯವಾಗುತ್ತಿರುವುದರಿಂದ, ಕೃಷಿ ಮತ್ತು ಸಾವಯವ ಕೃಷಿಯತ್ತ ಪರಿವರ್ತನೆಗೊಳ್ಳಲು ಹೆಚ್ಚಿನ ರೈತರನ್ನು ತಲುಪಲು ಗುಣಮಟ್ಟದ ಡಿಜಿಟಲ್ ಕಲಿಕಾ ಸಾಧನಗಳನ್ನು ಬಳಸಬೇಕು ಎಂಬ ಅರಿವು ಹೆಚ್ಚುತ್ತಿದೆ. ಕೃಷಿ ಪರಿಸರವಿಜ್ಞಾನ ಪದ್ಧತಿಗಳ ಬಗ್ಗೆ ರೈತರಿಗೆ ತರಬೇತಿ ನೀಡಲು ವೀಡಿಯೊಗಳು ಕಡಿಮೆವೆಚ್ಚದ ಪರಿಣಾಮಕಾರಿ ಮಾರ್ಗವಾಗಿದೆ. ರೈತರ ನೇತೃತ್ವದ ಪ್ರಯೋಗ ಮತ್ತು ಸ್ಥಳೀಯ ನಾವೀನ್ಯತೆ, ಹೆಚ್ಚಿನ ಪ್ರಮಾಣದಲ್ಲಿ ಕೃಷಿ ಪರಿಸರವಿಜ್ಞಾನವನ್ನು ಉತ್ತೇಜಿಸುತ್ತದೆ.

ವಿಡಿಯೋ-ಮಧ್ಯಸ್ಥಿಕೆಯು ಕಲಿಕೆಯ ಶಕ್ತಿ

ಕೃಷಿ ಪರಿಸರ ಮತ್ತು ಸಾವಯವ ಕೃಷಿಯನ್ನು ಬೆಂಬಲಿಸುವ ಲಾಭರಹಿತ ಸಂಸ್ಥೆಯಾದ ಆಕ್ಸೆಸ್ ಅಗ್ರಿಕಲ್ಚರ್, ರೈತರ ಕೃಷಿ ಪರಿಸರವಿಜ್ಞಾನದ ಜ್ಞಾನವನ್ನು ನಿರ್ಮಿಸಲು, ದೇಶಗಳು ಮತ್ತು ಸಂಸ್ಕೃತಿಗಳಲ್ಲಿ ಕಲಿಕೆಯನ್ನು ಉತ್ತೇಜಿಸಲು, ರೈತರು ಹೆಚ್ಚು ಪ್ರಯೋಗಾತ್ಮಕವಾಗಿರಲು, ನಡವಳಿಕೆಯನ್ನು ಬದಲಾಯಿಸಿಕೊಳ್ಳುವಂತೆ ಮಾಡಲು ವಿಡಿಯೋಗಳು ತುಂಬಾ ಪರಿಣಾಮಕಾರಿ ಎಂದು ಸ್ಪಷ್ಟವಾಗಿ ತೋರಿಸಿದೆ. ರೈತ ವಿಸ್ತರಣೆಯನ್ನು ವಿಸ್ತರಣಾ ಸಿಬ್ಬಂದಿ ನಡೆಸುತ್ತಾರೆ.

ಆಕ್ಸೆಸ್‌ ಅಗ್ರಿಕಲ್ಚರಲ್‌ ರೈತರ ನಡುವೆ ವಿನಿಮಯ ಮಾಡಿಕೊಳ್ಳಲು ಗುಣಾತ್ಮಕವಾದ ತರಬೇತಿ ವಿಡಿಯೋಗಳನ್ನು ದೇಸಿ ಭಾಷೆಗಳಲ್ಲಿ ಒದಗಿಸುತ್ತದೆ. ಆಕ್ಸೆಸ್ ಅಗ್ರಿಕಲ್ಚರ್ ಮುಕ್ತ ವೇದಿಕೆಯಾಗಿದ್ದು (www.accessagriculture.org) 90 ಕ್ಕೂ ಹೆಚ್ಚು ಭಾಷೆಗಳಲ್ಲಿ 225 ಕ್ಕೂ ಹೆಚ್ಚು ವಿಡಿಯೋಗಳನ್ನು ಉಚಿತವಾಗಿ ಡೌನ್‌ಲೋಡ್ ಮಾಡಬಹುದಾಗಿದೆ.

ರೈತರು ಪರಸ್ಪರರಿಂದ ಕಲಿಯಲು ಮತ್ತು ಹೊಸ ಐಡಿಯಾಗಳನ್ನು ಪ್ರಯತ್ನಿಸಲು ಇಷ್ಟಪಡುತ್ತಾರೆ ಎನ್ನುವ ತತ್ವದ ಆಧಾರದ ಮೇಲೆ, ಆಕ್ಸೆಸ್ ಅಗ್ರಿಕಲ್ಚರ್ ವಿಡಿಯೋಗಳು ಸಾಮಾನ್ಯ ರೈತರು ಎದುರಿಸುತ್ತಿರುವ ಸವಾಲುಗಳು, ಅವುಗಳ ನಿವಾರಣೆಗೆ ಅವರು ತೆಗೆದುಕೊಳ್ಳುವ ಕ್ರಮಗಳನ್ನು ತೋರಿಸುತ್ತವೆ. ಇವು ಸಾಮಾನ್ಯವಾಗಿ ಸಾಮಾಜಿಕ ಸಹಕಾರ ಮತ್ತು ಸಾಂಸ್ಥಿಕ ಆವಿಷ್ಕಾರಗಳ ಉದಾಹರಣೆಗಳನ್ನು ಒಳಗೊಂಡಿರುತ್ತದೆ. ಗ್ರಾಮೀಣ ಜನರಿಗೆ ಅರ್ಥವಾಗುವಂತಹ ಸರಳ ಭಾಷೆಯನ್ನು ವಿಡಿಯೋಗಳಲ್ಲಿ ಬಳಸಲಾಗಿದೆ.

ಈ ವಿಡಿಯೋಗಳು ವೈಜ್ಞಾನಿಕ ಹಾಗೂ ರೈತರ ತಿಳಿವಳಿಕೆಯನ್ನು ಒಗ್ಗೂಡಿಸಿದ ಹಂತ ಹಂತವಾಗಿ ವಿವರಿಸುವ ವಿಧಾನವನ್ನು ಅಳವಡಿಸಿಕೊಂಡಿದೆ. ಇದರಲ್ಲಿ ಸುಸ್ಥಿರ ಕೃಷಿ ಅನ್ವೇಷಣೆಗಳ ಕುರಿತು ಪ್ರಾಯೋಗಿಕ ಮಾಹಿತಿ, ಸಲಹೆಗಳನ್ನು ನೀಡಬಲ್ಲ ಸಮರ್ಥ ರೈತರನ್ನು ಒಳಗೊಂಡಿರುತ್ತದೆ. ವಿಡಿಯೋಗಳು ಕೇವಲ ಏನು ಮಾಡಬೇಕೆಂದು ವಿವರಿಸುವುದಿಲ್ಲ. ಬದಲಿಗೆ ಏನನ್ನಾದರೂ ನಿರ್ದಿಷ್ಟ ವಿಧಾನದಲ್ಲಿ ಏಕೆ ಮಾಡಬೇಕು, ಅದರ ಹಿಂದಿನ ಜೈವಿಕ, ಭೌತಿಕ ಪ್ರಕ್ರಿಯೆಗಳು, ತತ್ವಗಳನ್ನು ವಿವರಿಸುತ್ತದೆ. ಇದನ್ನು ರೈತರು ಕಲಿತು ತಮ್ಮ ಸಂದರ್ಭಕ್ಕೆ ಅನ್ವಯಿಸಿಕೊಳ್ಳಬಹುದು.

ಸ್ಥಳೀಯ ಅಗತ್ಯಗಳ ಆಧಾರದ ಮೇಲೆ ಅಲ್ಲಿನ ಪಾಲುದಾರರು ಪ್ರಸ್ತಾಪಿಸಿದ ವ್ಯಾಪಕ ಶ್ರೇಣಿಯ ವಿಷಯಗಳನ್ನು ವಿಡಿಯೋಗಳು ಒಳಗೊಂಡಿವೆ. ಸುಸ್ಥಿರ ಕೃಷಿ ಪದ್ಧತಿಗಳ ಜೊತೆಗೆ, ವಿಡಿಯೋಗಳು ಕೊಯ್ಲೋತ್ತರ, ಮಾರ್ಕೆಟಿಂಗ್ ಮತ್ತು ಸಂಸ್ಕರಣೆಯಂತಹ ವಿಷಯಗಳನ್ನು ಒಳಗೊಂಡಿರುತ್ತವೆ. ಇದು ಕೃಷಿ ಕುಟುಂಬಗಳಿಗೆ ಹೆಚ್ಚುವರಿ ಆದಾಯವನ್ನು ನೀಡುತ್ತದೆ. ಮನುಷ್ಯರ ಆರೋಗ್ಯ, ಪೌಷ್ಟಿಕತೆ, ಪ್ರಾಣಿಗಳಿಗೆ ಸಂಬಂಧಿಸಿದ ಸಾಂಪ್ರಾದಾಯಿಕ ಆರೋಗ್ಯ ಅಭ್ಯಾಸಗಳನ್ನು ಬಳಸುವ ವಿಧಾನ, ಹವಾಮಾನ ಬದಲಾವಣೆಗೆ ಹೊಂದಿಕೊಳ್ಳುವುದು ಈ ರೀತಿಯ ವಿಷಯಗಳನ್ನು ಒಳಗೊಂಡಿರುತ್ತದೆ.

ವಿಡಿಯೋ ನೇತೃತ್ವದ ಕಲಿಕೆಯ ವಿಧಾನವು 2012 ರಿಂದ 100 ದೇಶಗಳಲ್ಲಿ ಅಂದಾಜು 90 ಮಿಲಿಯನ್ ಸಣ್ಣ ಹಿಡುವಳಿದಾರರನ್ನು ತಲುಪಿದೆ.

ವಿಡಿಯೋಗಳ ಮೂಲಕ ಪ್ರಾಣಿಗಳ ಆರೋಗ್ಯಕ್ಕೆ ಸಂಬಂಧಿಸಿದ ದೇಸಿ ಜ್ಞಾನ ಹಾಗೂ ಪದ್ಧತಿಗಳನ್ನು ಹಂಚಿಕೊಳ್ಳುವುದು

ಆಕ್ಸೆಸ್ ಅಗ್ರಿಕಲ್ಚರ್, ಭಾರತದ ಮಹಾರಾಷ್ಟ್ರದ ಪುಣೆಯಲ್ಲಿರುವ ಮಹಿಳಾ ಪಶುವೈದ್ಯರ ನೇತೃತ್ವದ ಎನ್‌ಜಿಒ “ಆಂಥ್ರಾ” ದ ಪಾಲುದಾರಿಕೆಯೊಂದಿಗೆ ಪ್ರಾಣಿಗಳ ಆರೋಗ್ಯ ರಕ್ಷಣೆಯಲ್ಲಿ ಗಿಡಮೂಲಿಕೆ ಔಷಧಿಗಳ ಕುರಿತು ರೈತ-ತರಬೇತಿ ವಿಡಿಯೋಗಳ ಸರಣಿಯನ್ನು ಅಭಿವೃದ್ಧಿಪಡಿಸಲಾಗಿದೆ. ಆಕ್ಸೆಸ್ ಅಗ್ರಿಕಲ್ಚರ್ ತರಬೇತಿ ಪಡೆದ ವೀಡಿಯೋ ಪಾಲುದಾರರಲ್ಲಿ ಒಬ್ಬರು ಸ್ಥಳೀಯವಾಗಿ ವಿಡಿಯೋಗಳನ್ನು ತಯಾರಿಸಿದ್ದಾರೆ.

ಪ್ರಾಣಿಗಳಿಗೆ ಬಳಸಲಾಗುವ ಔಷಧಿಗಳಲ್ಲಿನ ಆಂಟಿಮೈಕ್ರೊಬಿಯಲ್ ರೆಸಿಸ್ಟೆಂಟ್ (AMR) ಬ್ಯಾಕ್ಟೀರಿಯಾವು ಸಾರ್ವಜನಿಕ ಆರೋಗ್ಯದ ಮೇಲೆ ಅಪಾರ ಪರಿಣಾಮಗಳನ್ನು ಬೀರುವುದರಿಂದ, ಆಂಟಿಬಯೋಟಿಕ್‌ಗಳ ದುರುಪಯೋಗದ ಅಪಾಯಗಳ ಬಗ್ಗೆ ಸಾರ್ವಜನಿಕರಿಗೆ ಶಿಕ್ಷಣ ನೀಡಲು ವಿಡಿಯೋಗಳು ಪ್ರಮುಖ ಮಾರ್ಗವಾಗಿದೆ ಎಂದು ಆಂಥ್ರಾ ಸಂಸ್ಥಾಪಕ ನಿರ್ದೇಶಕಿ ಡಾ. ನಿತ್ಯಾ ಘೋಟ್ಗೆ ಹೇಳುತ್ತಾರೆ.

ಸಾವಿರಾರು ಪ್ರಾಣಿ ಆರೋಗ್ಯ ಕಾರ್ಯಕರ್ತರಿಗೆ ಮುಖಾಮುಖಿ ತರಬೇತಿ ನೀಡಿದರೂ, ಎಥ್ನೋವೆಟರಿನರಿ ಅಭ್ಯಾಸಗಳು ಕಡಿಮೆ ಎಂದು ಡಾ ಘೋಟ್ಗೆ ವಿವರಿಸಿದರು. ಆದ್ದರಿಂದ ಆಂಥ್ರಾ ಗಿಡಮೂಲಿಕೆ ಔಷಧಿಗಳು ಮತ್ತು ನೈಸರ್ಗಿಕ ಪ್ರಾಣಿಗಳ ಆರೋಗ್ಯ ರಕ್ಷಣೆಯ ಕುರಿತು ವಿಡಿಯೋಗಳನ್ನು ಅಭಿವೃದ್ಧಿಪಡಿಸಲು

ಆಕ್ಸೆಸ್ ಅಗ್ರಿಕಲ್ಚರ್‌ನೊಂದಿಗೆ ಪಾಲುದಾರಿಕೆ ಮಾಡಿಕೊಳ್ಳಲು ನಿರ್ಧರಿಸಿದರು.

ವಿಡಿಯೋಗಳಿಗೆ ಮಹಾರಾಷ್ಟ್ರ ಮತ್ತು ಇತರ ರಾಜ್ಯಗಳ ಜಾನುವಾರು ಮಾಲೀಕರಿಂದ ಉತ್ತಮ ಪ್ರತಿಕ್ರಿಯೆಯನ್ನು ಪಡೆದಿದೆ. ರೈತರು ಅಗತ್ಯವಿದ್ದಾಗ ವಿಡಿಯೋಗಳನ್ನು ರಿಪ್ಲೇ ಮಾಡಿ ನೋಡಿಕೊಂಡು ಔಷಧಿಗಳನ್ನು ತಯಾರಿಸಿಕೊಳ್ಳಬಹುದು. ಜಾನುವಾರು ಪಾಲಕರು ವಿಡಿಯೋ ತಯಾರಿಕಾ ಪ್ರಕ್ರಿಯೆಯಲ್ಲಿ ಸಕ್ರಿಯ ಪಾತ್ರವನ್ನು ವಹಿಸುವ ಮೂಲಕ ಭಾಗಿಯಾಗುತ್ತಾರೆ. ವಿಡಿಯೋಗಳು ನಮ್ಮ ತರಬೇತಿ ಕಾರ್ಯಕ್ರಮಗಳ ಅವಿಭಾಜ್ಯ ಅಂಗವಾಗಿದೆ,” ಎಂದು ಡಾ ಘೋಟ್ಗೆ ಹೇಳುತ್ತಾರೆ.

ನಾವು ಮಹಾರಾಷ್ಟ್ರದಲ್ಲಿ ನಮ್ಮ ಪಾಲುದಾರ ನೆಟ್ವರ್ಕ್ಗಳ ಮೂಲಕ ಅಲೆಮಾರಿ ಪಶಪಾಲಕರು ಸೇರಿದಂತೆ 20,000 ಕ್ಕೂ ಹೆಚ್ಚು ಜಾನುವಾರು ಮಾಲೀಕರನ್ನು ಮತ್ತು ಇತರ ರಾಜ್ಯಗಳಲ್ಲಿ ಕೂಡ ಸರಿಸುಮಾರು ಇಷ್ಟೇ ಮಂದಿಯನ್ನು ತಲುಪಿದ್ದೇವೆ. ಇಂದು, ನೈಸರ್ಗಿಕ ಜಾನುವಾರು ಸಾಕಣೆಯ ಕಾರ್ಯಕ್ರಮವನ್ನು ಆರಂಭಿಸಲು ಸಹಾಯ ಮಾಡಲು ನಾವು ಮಹಾರಾಷ್ಟ್ರ ಸರ್ಕಾರದ ಪಶುಸಂಗೋಪನಾ ಇಲಾಖೆಯೊಂದಿಗೆ ವಿಡಿಯೋವನ್ನು ಹಂಚಿಕೊಳ್ಳುತ್ತಿದ್ದೇವೆ,” ಎಂದು ಅವರು ಹೇಳಿದರು.

ಭಾರತದಾದ್ಯಂತ ನೈಸರ್ಗಿಕ ಕೃಷಿಯನ್ನು ಅಳೆಯಲು ಪಾಲುದಾರಿಕೆ

ಆಕ್ಸೆಸ್ ಅಗ್ರಿಕಲ್ಚರ್ ಭಾರತದಲ್ಲಿನ ತನ್ನ ಪಾಲುದಾರ ಸಂಸ್ಥೆಗಳು ಭಾರತದಾದ್ಯಂತ ನೈಸರ್ಗಿಕ ಮತ್ತು ಸಾವಯವ ಕೃಷಿಯನ್ನು ಅಳೆಯಲು ತನ್ನ ಅನುಭವ ಮತ್ತು ಸಂಪನ್ಮೂಲಗಳನ್ನು ಬಳಸಿಕೊಳ್ಳುವ ಮಾರ್ಗಗಳನ್ನು ಅನ್ವೇಷಿಸುತ್ತಿದೆ. ಸಂಬಂಧಿತ ಭಾರತೀಯ ಭಾಷೆಯಲ್ಲಿ ಹೆಚ್ಚಿನ ವಿಡಿಯೋಗಳನ್ನು ಅನುವಾದಿಸಲು ಪಾಲುದಾರರೊಂದಿಗೆ ಕೆಲಸ ಮಾಡಲು ಬಯಸುತ್ತದೆ. ಆರೋಗ್ಯಕರ ಸುಸ್ಥಿರ ಆಹಾರ ವ್ಯವಸ್ಥೆಗೆ ಪರಿವರ್ತನೆಗೊಳ್ಳಲು ರೈತರಿಗೆ ಸಹಾಯ ಮಾಡಲು ಮತ್ತು ಸಮಾಜದ ಇತರ ಸದಸ್ಯರಿಗೆ ಗುಣಮಟ್ಟದ ಕಲಿಕೆಯ ಅನುಭವ ಪಡೆಯಲು ಬೆಂಬಲ ನೀಡುತ್ತದೆ.

ಹೊಲಗೊಬ್ಬರದ ತಯಾರಿಕೆಗೆ ರೈತರು ಪ್ರಾಯೋಗಿಕ ಮಾರ್ಗದರ್ಶನ ನೀಡುತ್ತಿದ್ದಾರೆ

ಭಾರತ ಸರ್ಕಾರವು ನೈಸರ್ಗಿಕ ಮತ್ತು ಸಾವಯವ ಕೃಷಿಗೆ ಪರಿವರ್ತನೆಗೊಳ್ಳುವುದನ್ನು ಬೆಂಬಲಿಸುತ್ತಿದೆ. ಪರಿಸರ ಮತ್ತು ಸಾವಯವ ಉತ್ಪನ್ನಗಳಿಗೆ ಜಾಗತಿಕ ಮಾರುಕಟ್ಟೆಯನ್ನು ಬೆಳೆಸುವ ಗುರಿಯನ್ನು ಹೊಂದಿದೆ. ಆಕ್ಸೆಸ್ ಅಗ್ರಿಕಲ್ಚರ್ ವೀಡಿಯೋಗಳು ನಿಟ್ಟಿನಲ್ಲಿ ಪರಿಣಾಮಕಾರಿಯಾಗಿ ಸಹಾಯ ಮಾಡುತ್ತವೆ,” ಎಂದು ಭಾರತೀಯ ಪಶುವೈದ್ಯಕೀಯ ಸಂಶೋಧನಾ ಸಂಸ್ಥೆ, ಭಾರತೀಯ ಕೃಷಿ ಸಂಶೋಧನಾ ಮಂಡಳಿ (ಐಸಿಎಆರ್) ನಲ್ಲಿ ವಿಸ್ತರಣಾ ಶಿಕ್ಷಣ ವಿಭಾಗದ ಮುಖ್ಯಸ್ಥರಾಗಿರುವ ಡಾ.ಮಹೇಶ್ ಚಂದರ್ ಹೇಳಿದರು.

ರೈತರು ಮತ್ತು ವಿಸ್ತರಣಾ ಸಿಬ್ಬಂದಿಗಳು ಅನುಭವಿಗಳು ಹಾಗೂ ತರಬೇತಿ ಪಡೆದವರು. ಆದರೆ ಅವರು ಸಾಂಪ್ರದಾಯಿಕ ಕೃಷಿಯನ್ನು ಅವಲಂಭಿಸಿದ್ದಾರೆ. ಕೃಷಿ ಮತ್ತು ಸಾವಯವ ಕೃಷಿ ವಿಧಾನಗಳ ಬಗ್ಗೆ ಜ್ಞಾನ ಮತ್ತು ಕೌಶಲ್ಯಗಳ ಮೂಲಕ ಮನಸ್ಥಿತಿಯನ್ನು ಬದಲಾಯಿಸಬೇಕಾಗಿದೆಆಕ್ಸೆಸ್ ಅಗ್ರಿಕಲ್ಚರ್ ವಿಡಿಯೋಗಳು ಅವುಗಳ ಮೌಲ್ಯವನ್ನು ಸಾಬೀತುಪಡಿಸುವಲ್ಲಿ ನೆರವಾಗುತ್ತವೆ,” ಎಂದು ಅವರು ವಿವರಿಸಿದರು.

ಪ್ರಸಾರ

ಬದಲಾವಣೆ ತರಬಲ್ಲ ಯುವ ಗ್ರಾಮೀಣ ಜನತೆಯೊಂದಿಗೆ ಸಂಪರ್ಕಜಾಲ ಬೆಳೆಯುತ್ತಿದ್ದು ಆಕ್ಸೆಸ್‌ ಅಗ್ರಿಕಲ್ಚರ್‌ ಅವರ ಆಸಕ್ತಿಯನ್ನು ಸೆಳೆದಿದೆ. ಈ ಸಂಪರ್ಕಜಾಲ ““Entrepreneurs for Rural Access” (ERAs)ನ ಯುವಕರು ರೈತರು, ವಿಶೇಷವಾಗಿ ಮಹಿಳೆಯರು ಮತ್ತು ಯುವಜನರ ಜೀವನದಲ್ಲಿ ಧನಾತ್ಮಕ ಬದಲಾವಣೆಯನ್ನು ತರಲು ಡಿಜಿಟಲ್ ಕೌಶಲ್ಯ ಮತ್ತು ರೈತ-ತರಬೇತಿ ವಿಡಿಯೋಗಳನ್ನು ಪ್ರದರ್ಶಿಸಲು ಮತ್ತು ಅವುಗಳನ್ನು ಗ್ರಾಮೀಣ ಸಮುದಾಯಗಳಿಗೆ ಲಭ್ಯವಾಗುವಂತೆ ಮಾಡಲು ಸಾಧನಗಳನ್ನು ಹೊಂದಿದ್ದಾರೆ.

ERA ಗಳು ಸೌರ-ಚಾಲಿತ ಸ್ಮಾರ್ಟ್ ಪ್ರೊಜೆಕ್ಟರ್ ಅನ್ನು ಬಳಸುತ್ತವೆ (ಆಕ್ಸೆಸ್‌ ಅಗ್ರಿಕಲ್ಚರ್‌ನ ಎಲ್ಲ ರೈತ-ತರಬೇತಿ ವಿಡಿಯೋಗಳನ್ನು ಒಳಗೊಂಡಿರುತ್ತದೆ), ತಂತ್ರಜ್ಞಾನ, ವಿದ್ಯುತ್‌ ಮತ್ತು ಇಂಟರ್ನೆಟ್ ಸೀಮಿತವಾಗಿರುವ ದೂರದ ಗ್ರಾಮೀಣ ಪ್ರದೇಶಗಳಲ್ಲಿಯೂ ಇದನ್ನು ಬಳಸಬಹುದು. ಇದು ಅವರೊಂದಿಗೆ ಅವರ ಕುಟುಂಬದವರಿಗೆ ಹಾಗೂ ಸ್ಥಳೀಯ ರೈತರಿಗೆ ಕೃಷಿಪರಿಸರವಿಜ್ಞಾನದ ಕುರಿತ ಅದ್ಭುತ ಎನಿಸುವ ಹೊಸ ಐಡಿಯಾಗಳನ್ನು ಪರಿಚಯಿಸುತ್ತದೆ. ಇದರಿಂದ ಅವರು ತಮ್ಮ ಬದುಕನ್ನು ಉತ್ತಮಗೊಳಿಸಿಕೊಳ್ಳಬಹುದು.

ಜಾಗತಿಕವಾಗಿ ಬೀರಿದ ಪರಿಣಾಮ

2015, 2018 ಮತ್ತು 2021 ರಲ್ಲಿ ನಡೆಸಿದ ಸಮೀಕ್ಷೆಗಳ ಪ್ರಕಾರ ಆಕ್ಸೆಸ್‌ ಅಗ್ರಿಕಲ್ಚರಲ್‌ನ ವಿಡಿಯೋಗಳನ್ನು ವಿಶ್ವದಾದ್ಯಂತ  5,000 ಕ್ಕೂ ಹೆಚ್ಚು ಸಂಶೋಧನೆ, ವಿಸ್ತರಣೆ, ಶಿಕ್ಷಣ ಮತ್ತು ತಳಮಟ್ಟದ ಸಂಸ್ಥೆಗಳು ಮತ್ತು ಮಾಧ್ಯಮ ಸಂಸ್ಥೆಗಳಲ್ಲಿ ಬಳಸಲಾಗಿದೆ.

ಆಕ್ಸೆಸ್ ಅಗ್ರಿಕಲ್ಚರ್‌ನ ವಿಡಿಯೋ-ನೇತೃತ್ವದ ಕಲಿಕೆಯ ವಿಧಾನವು 2012 ರಲ್ಲಿ ಪ್ರಾರಂಭವಾದಾಗಿನಿಂದ 100 ದೇಶಗಳಲ್ಲಿ ಅಂದಾಜು 90 ಮಿಲಿಯನ್ ಸಣ್ಣ ಹಿಡುವಳಿದಾರರನ್ನು ತಲುಪಿದೆ. ಇದು ಕೃಷಿ ಪರಿಸರವಿಜ್ಞಾನದ ತತ್ವಗಳು ಮತ್ತು ಗ್ರಾಮೀಣ ಉದ್ಯಮಶೀಲತೆಯ ಬಗ್ಗೆ ಕಲಿಯಲು ಅನುವು ಮಾಡಿಕೊಡುತ್ತದೆ. ಇದು ಸುಧಾರಿತ ಗ್ರಾಮೀಣ ಜೀವನೋಪಾಯಗಳು ಮತ್ತು ಸುಸ್ಥಿರ ಆಹಾರ ವ್ಯವಸ್ಥೆಗಳಿಗೆ ಕಾರಣವಾಗುತ್ತದೆ.

ರೈತರಿಗೆ ಅಭ್ಯಾಸಕ್ಕೆ ಅನುಕೂಲವಾಗುವಂತೆ ಪ್ರತಿ ಹಂತವನ್ನು ವಿವರವಾಗಿ ವಿಡಿಯೋಗಳಲ್ಲಿ ತೋರಿಸಲಾಗುತ್ತದೆ

2021ರ ಆನ್‌ಲೈನ್ ಸಮೀಕ್ಷೆಯಲ್ಲಿ ಹಲವರು ನೀಡಿದ ಪ್ರತಿಕ್ರಿಯೆಗಳನ್ನು ಗಮನಿಸಿದಾಗ ಜಾಗತಿಕವಾಗಿ ಇದರ ಪರಿಣಾಮ ಗಮನಾರ್ಹವಾದದ್ದು ಎನ್ನುವುದು ತಿಳಿಯುತ್ತದೆ. ವಿಡಿಯೋಗಳಿಂದಾಗಿ ಇಳುವರಿ ಉತ್ತಮಗೊಂಡಿದೆ ಎನ್ನುವ ಅಭಿಪ್ರಾಯವನ್ನು ಶೇ. 50% ಮಂದಿ ವ್ಯಕ್ತಪಡಿಸಿದ್ದಾರೆ. “ಸುಧಾರಿತ ಕೀಟ ನಿರ್ವಹಣೆ”, “ಉತ್ತಮ ಮಣ್ಣಿನ ಆರೋಗ್ಯ”, “ಉತ್ತಮ ಉತ್ಪನ್ನಗಳು” ಇವುಗಳ ಕುರಿತು 40% ಕ್ಕಿಂತ ಹೆಚ್ಚು ಮಂದಿ ಪ್ರತಿಕ್ರಿಯಿಸಿದ್ದಾರೆ. 30% ಕ್ಕಿಂತ ಹೆಚ್ಚು ಜನರು “ದೇಸಿ ಜ್ಞಾನದ ಕುರಿತು ಮೆಚ್ಚುಗೆ”, “ಯುವಕರ ಒಳಗೊಳ್ಳುವಿಕೆ”, “ಉತ್ತಮ ಆಹಾರ ಮತ್ತು ಪೋಷಣೆ”, “ಹೆಚ್ಚಿನ ಲಾಭ”, “ಮಹಿಳೆಯರ ಸಬಲೀಕರಣ” ಮತ್ತು “ಸುಧಾರಿತ ಗುಂಪು ರಚನೆ” ಕುರಿತು ಪ್ರತಿಕ್ರಿಯಿಸಿದ್ದಾರೆ.

ಆಕ್ಸೆಸ್ ಅಗ್ರಿಕಲ್ಚರ್ ಮಾದರಿಯು ಕಡಿಮೆ ವೆಚ್ಚ ಮತ್ತು ಸುಸ್ಥಿರವಾದದ್ದಾಗಿದೆ. ಈ ಮಾದರಿಯು ಪರಿಣಾಮಕಾರಿಯಾಗಿದೆ ಎನ್ನುವ ಕಾರಣದಿಂದಾಗಿ ಸಂಸ್ಥೆಯು 2021 ರಲ್ಲಿ ಸ್ವಿಸ್ ಸರ್ಕಾರ ಮತ್ತು FAO ನಿಂದ ಸುಸ್ಥಿರ ಆಹಾರ ವ್ಯವಸ್ಥೆಗಳಿಗಾಗಿ ಅಂತರರಾಷ್ಟ್ರೀಯ ನಾವೀನ್ಯತೆ ಪ್ರಶಸ್ತಿಯನ್ನು ಪಡೆದಿದೆ. ಸಮುದಾಯದ ಮೇಲೆ ಬೀರಿರುವ ಪರಿಣಾಮವನ್ನು ಗುರುತಿಸಿ ಇತ್ತೀಚೆಗೆ 2022ರಲ್ಲಿ ಅರೆಲ್ ಗ್ಲೋಬಲ್ ಫುಡ್ ಇನ್ನೋವೇಶನ್ ಪ್ರಶಸ್ತಿಯೊಂದಿಗೆ ಗೌರವಿಸಲಾಯಿತು.

ಸಾವಿತ್ರಿ ಮೊಹಪಾತ್ರ


ಪರಾಮಾರ್ಶನ

Van Mele P, Okry F, Wanvoeke J, Fousseni Barres N,

Malone P, Rodgers J, Rahman E and Salahuddin A,

2018, Quality farmer training videos to support South-

South learning, CSI Transactions on ICT 6, p.245–255.

 

Savitri Mohapatra

Mass Media Officer

Access Agriculture

No.3 Kumaran Street, Puducherry 605001, India.

E-mail: savitri@accessagriculture.org

‌ಆಂಗ್ಲ ಮೂಲ : ಲೀಸಾ ಇಂಡಿಯಾ; ಸಂಪುಟ :೨೪; ಸಂಚಿಕೆ : ೨ ; ಜೂನ್ ೨೦‌೨೨

 

 

Recent Posts

ಕೃಷಿಯಲ್ಲಿ ನೀರಿನ ಸಮರ್ಥ ಬಳಕೆಗಾಗಿ ಕಾಲುವೆ ಯಾಂತ್ರೀಕರಣ

ಕೃಷಿಯಲ್ಲಿ ನೀರಿನ ಸಮರ್ಥ ಬಳಕೆಗಾಗಿ ಕಾಲುವೆ ಯಾಂತ್ರೀಕರಣ

ನಮ್ಮ ನೀರಾವರಿ ವ್ಯವಸ್ಥೆಯನ್ನು 21ನೇ ಶತಮಾನದ ಬೇಡಿಕೆಗಳಿಗೆ ಹೊಂದುವಂತೆ ಮಾಡುವುದು ನಮ್ಮ ಮುಂದಿರುವ ನಿಜವಾದ ಸವಾಲಾಗಿದೆ. ತಂತ್ರಜ್ಞಾನವೇ...