ಕೃಷಿಯತ್ತ ಯುವಜನರ ಚಿತ್ತ ಸ್ಕೂಲ್ ಆಫ್ ಬಯೋಡೈನಾಮಿಕ್ ಫಾರ್ಮಿಂಗ್


ಕೇವಲ ಕೃಷಿ ತಂತ್ರಜ್ಞಾನಗಳನ್ನು ಯುವಜನರಿಗೆ ತಲುಪಿಸುವುದಷ್ಟೇ ಈ ಯೋಜನೆಯ ಉದ್ದೇಶವಲ್ಲ, ಬದಲಾಗಿ ಕೃಷಿ ವ್ಯವಸ್ಥೆಗೆ ಶಿಸ್ತುಬದ್ಧವಾದ ರೂಪ ನೀಡಿ, ಆ ಮೂಲಕ ಜೀವನಶೈಲಿಯನ್ನು ಸುಧಾರಿಸುವುದು ಈ ಯೋಜನೆಯ ಉದ್ದೇಶವಾಗಿದೆ.


ಭಾರತದ ಕೃಷಿ ವ್ಯವಸ್ಥೆಯು ನಿರಂತರವಾಗಿ ಗಂಭೀರವಾದ ಸಮಸ್ಯೆಗಳನ್ನು ಎದುರಿಸುತ್ತಿದೆ. ಅವುಗಳಲ್ಲಿ ಮನುಷ್ಯ ಕೈಯಾರೆ ತಂದುಕೊoಡoಥವೇ ಹೆಚ್ಚು. ನಮ್ಮ ಕೃಷಿ ವ್ಯವಸ್ಥೆಗೆ ತಕ್ಕುದಲ್ಲದ ಅಥವಾ ಅನುಚಿತವಾದ ತಂತ್ರಜ್ಞಾನ ಮತ್ತು ವಿಧಾನಗಳನ್ನು ಬಳಸುವ ಮೂಲಕ ಇಲ್ಲಿನ ಕೃಷಿ ವ್ಯವಸ್ಥೆಯು ಲಾಭಕ್ಕಿಂತ ನಷ್ಟವನ್ನೇ ಅನುಭವಿಸುವ ಸ್ಥಿತಿ ಬಂದಿದೆ. ಇದರೊಂದಿಗೆ ಗ್ರಾಮೀಣ ಭಾಗದಿಂದ ಹೆಚ್ಚಿನ ಸಂಖ್ಯೆಯ ಜನರು ನಗರದತ್ತ ವಲಸೆ ಹೋಗುತ್ತಿದ್ದಾರೆ. ಹೀಗಾಗಿ, ಗ್ರಾಮೀಣ ಜನರ ಜೀವನಮಟ್ಟ ಕೂಡ ನಶಿಸುತ್ತಿದೆ.

ಇತ್ತೀಚಿನ ಜನಗಣತಿಯ ಪ್ರಕಾರ, ತಮಿಳುನಾಡಿನಲ್ಲಿ ಶೇಕಡಾ ೫೦ರಷ್ಟು ಗ್ರಾಮೀಣ ಭಾಗದ ಜನರು ನಗರ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ. ಹೀಗಿದ್ದಾಗ ನಾವೆಲ್ಲ ಎಲ್ಲಿ ಹೋಗಬೇಕು? ಐಟಿ ಕಂಪನಿಗಳಲ್ಲಿ ದುಡಿಯಲು ಸಾಧ್ಯವೇ ಅಥವಾ ಕೋವಿಲ್‌ಪಟ್ಟಿ ಮತ್ತು ಉಸಿಲಂಪಟ್ಟಿಯoಥ ಯಾವುದಾದರೂ ತಯಾರಿಕಾ ಘಟಕಗಳಲ್ಲಿ ದುಡಿಯಲು ಸಾಧ್ಯವೇ? ಹೀಗಾದರೆ ಇಡೀ ರಾಜ್ಯಕ್ಕೆ ಆಹಾರ ಉತ್ಪಾದನೆ ಎಲ್ಲಿಂದ ಬರಬೇಕು? ರಾಜ್ಯಕ್ಕೆ ಆಹಾರ ನೀಡುವವರು ಯಾರು? ಇಂಥ ಗಂಭೀರ ಪ್ರಶ್ನೆಗಳಿಗೆ ಇಂದು ತಮಿಳುನಾಡಿನಲ್ಲಿ ಉತ್ತರ ಕಂಡುಕೊಳ್ಳಬೇಕಾದ ಅನಿವಾರ್ಯತೆ ಇದೆ.

ಆದ್ದರಿಂದ, ನಾವು ತುರ್ತಾಗಿ ಇಂದಿನ ಗ್ರಾಮೀಣ ಭಾಗದ ಯುವ ಸಮೂಹವನ್ನು ಕೃಷಿ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಲು, ಕೃಷಿ ಕ್ಷೇತ್ರದಲ್ಲಿನ ಸವಾಲುಗಳನ್ನು ಎದುರಿಸಲು ಅವರನ್ನು ಪ್ರೇರೇಪಿಸಬೇಕು ಮತ್ತು ಅವರಿಗೆ ತರಬೇತಿ ನೀಡುವ ಅಗತ್ಯವಿದೆ ಎಂಬುದನ್ನು ಮನಗಂಡೆವು. ಸುಸ್ಥಿರ ಕೃಷಿಯನ್ನು ಮಾಡಲು ತರಬೇತಿ ನೀಡುವುದು ಮಾತ್ರವಲ್ಲ, ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವ ಮೂಲಕ ಆರ್ಥಿಕ ಪ್ರಗತಿ ಸಾಧಿಸಬಹುದು ಎನ್ನುವುದನ್ನೂ ಅವರಿಗೆ ಮನವರಿಕೆ ಮಾಡಿಕೊಡಬೇಕಿತ್ತು. ಈ ಹಿನ್ನೆಲೆಯಲ್ಲಿ ತಮಿಳುನಾಡಿನ ಕರೂರು ಜಿಲ್ಲೆಯಲ್ಲಿರುವ `ಇಂಬಾ ಸೇವಾ ಸಂಗಮ್’ ಭವಿಷ್ಯದ ದಿನಗಳಲ್ಲಿ ಗ್ರಾಮೀಣ ಪ್ರದೇಶದ ಬಡ ವಿದ್ಯಾರ್ಥಿಗಳನ್ನು ಅನುಭವೀ ಕೃಷಿಕರಾಗಿ ಪರಿವರ್ತಿಸುವ ದೃಷ್ಟಿಯಿಂದ ಸಂಸ್ಥೆಯೊoದನ್ನು ಆರಂಭಿಸಿದ್ದಾರೆ. ಇದು ಗಾಂಧಿ ತತ್ವಗಳಡಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಈ ವಿದ್ಯಾರ್ಥಿಗಳು ಜೀವನೋಪಾಯಕ್ಕಾಗಿ ಬಯೋಡೈನಾಮಿಕ್ ಕೃಷಿಯನ್ನು ಅನುಸರಿಸುವುದು ಮಾತ್ರವಲ್ಲ, ತಮ್ಮನ್ನು ತಾವು ಹೀಲಿಂಗ್ ದಿ ಅರ್ಥ್ ಕ್ಯಾಂಪೇನ್’ನ ಭಾಗವಾಗಿಯೂ ಮಾಡಿಕೊಂಡಿದ್ದಾರೆ. ಇದು ಭೂಮಿಗೆ ನಮ್ಮಿಂದಾದ ಗಾಯಗಳನ್ನು ಗುಣಪಡಿಸುವ ಉದ್ದೇಶವುಳ್ಳ ಕ್ಯಾಂಪೇನ್ ಆಗಿದೆ.

`ದಿ ಸ್ಕೂಲ್ ಆಫ್ ಬಯೋಡೈನಮಿಕ್ ಫಾರ್ಮಿಂಗ್’ ತಮಿಳುನಾಡಿನ ಕರೂರು ಜಿಲ್ಲೆಯ ವಿನೋಬಾಜಿಪುರಂ ಪ್ರದೇಶದಲ್ಲಿ ೨೦೧೨ರ ಜೂನ್ ೧೧ರಂದು ಆರಂಭವಾಯಿತು. ಇಲ್ಲಿ ಇಂಬಾ ಸೇವಾ ಸಂಗಮದ ಸಹಾಯದಿಂದ ಎರಡು ವರ್ಷಗಳ ಅವಧಿಯ ಡಿಪ್ಲೊಮಾ ಕೋರ್ಸನ್ನು ಉಚಿತವಾಗಿ ನೀಡಲಾಗುತ್ತದೆ. ಪ್ರಸ್ತುತ, ಮೊದಲ ಹಂತ(ಬ್ಯಾಚ್)ದ ಏಳು ಮಂದಿ ವಿದ್ಯಾರ್ಥಿಗಳು(ಬಿಡಿ-೭) ಕೋರ್ಸ್ ನ ಎರಡನೇ ವರ್ಷದಲ್ಲಿ ಓದುತ್ತಿದ್ದಾರೆ. ಈ ಏಳೂ ಮಂದಿ ವಿದ್ಯಾರ್ಥಿಗಳು ವಿನೋಬಾಜಿಪುರಂನ ಸಮೀಪದಲ್ಲಿರುವ ಗ್ರಾಮಗಳ ಕೃಷಿ ಸಮುದಾಯಕ್ಕೆ ಸೇರಿದವರು ಮತ್ತು ತೀರಾ ಬಡ ಕುಟುಂಬದ ಹಿನ್ನೆಲೆ ಹೊಂದಿದವರು. ೨೦೧೪ರ ಜೂನ್ ತಿಂಗಳಿಗೆ ಈ ಮೊದಲ ಹಂತದ(ಬ್ಯಾಚ್) ವಿದ್ಯಾರ್ಥಿಗಳು ಕೋರ್ಸ್ ಪೂರ್ಣಗೊಳಿಸಿ ಪದವಿ ಪಡೆದು ಹೊರಬರಲಿದ್ದಾರೆ.

ಇಲ್ಲಿ ಬಯೋಡೈನಮಿಕ್ ಅಥವಾ ಸಾವಯವ ಕೃಷಿಯ ಎಲ್ಲಾ ರೀತಿಯ ಅಂಶಗಳು ಅಥವಾ ಘಟಕಗಳ ಕುರಿತು ಹೇಳಿಕೊಡುವ ಮೂಲಕ ವಿದ್ಯಾರ್ಥಿಗಳನ್ನು ತರಬೇತಿಗೊಳಿಸಲಾಗುತ್ತದೆ. ಕೇವಲ ಓದು, ಬೋಧನೆ ಮಾತ್ರವಲ್ಲ, ಅದನ್ನು `ಪ್ರಾಯೋಗಿಕ ಕಲಿಕೆ’ ಮೂಲಕ ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಾರೆ. ಅಂದರೆ, ಸಿದ್ಧಾಂತಕ್ಕಿAತ ಪ್ರಯೋಗಗಳಿಗೆ ಹೆಚ್ಚು ಆದ್ಯತೆ ನೀಡಲಾಗುತ್ತದೆ. ಅದಕ್ಕನುಗುಣವಾಗಿ ಪಠ್ಯಕ್ರಮವನ್ನು ತಾಂತ್ರಿಕ ಕೌಶಲ್ಯ ತರಬೇತಿ, ಸರಳ ಕೌಶಲ್ಯ ತರಬೇತಿ ಮತ್ತು ಪ್ರಾಯೋಗಿಕ ಅಧ್ಯಯನ ಎಂಬ ಮೂರು ಭಾಗಗಳನ್ನಾಗಿ ವಿಂಗಡಿಸಲಾಗಿದೆ. ತಾಂತ್ರಿಕ ಕೌಶಲ್ಯ ತರಬೇತಿಯಲ್ಲಿ ವಿದ್ಯಾರ್ಥಿಗಳು ಕೃಷಿ ಅರಣ್ಯಶಾಸ್ತ್ರ , ಜಲಾನಯನ ಭೂಮಿಯ ನಿರ್ವಹಣೆ, ನೀರಾವರಿ ನಿರ್ವಹಣೆ, ಕೃಷಿ ಭೂಮಿಗೆ ಅಗತ್ಯವಾದ ಸಲಕರಣಗಳ ನಿರ್ವಹಣೆ, ಸಾವಯವ ಕೃಷಿ, ಮಣ್ಣಿನ ಫಲವತ್ತತೆ, ಬೆಳೆ ವಿಜ್ಞಾನ, ತೋಟಗಾರಿಕೆ, ಬೀಜ ವಿಜ್ಞಾನ, ಪ್ರಮಾಣೀಕರಣ ಮತ್ತು ಮಾರುಕಟ್ಟೆ ನಿರ್ವಹಣೆ ಕುರಿತು ಕಲಿಯುತ್ತಾರೆ. ಸಂವಹನ ಕೌಶಲ್ಯ, ಜೀವನ ನಿಭಾಯಿಸುವ ಅಥವಾ ನಿರ್ವಹಿಸುವ ಕೌಶಲ್ಯ, ಕಂಪ್ಯೂಟರ್ ಅಪ್ಲಿಕೇಶನ್ ಕುರಿತು ಮೂಲಭೂತ ಜ್ಞಾನ, ಕಲೆ ಮತ್ತು ಸಂಸ್ಕತಿ ಬಗ್ಗೆ ವಿದ್ಯಾರ್ಥೀಗಳು ಸರಳ ಕೌಶಲ್ಯ ಅಭಿವೃದ್ಧಿ ಭಾಗದಲ್ಲಿ ಕಲಿಯುತ್ತಾರೆ.

ಇನ್ನು ವಿದ್ಯಾರ್ಥಿಗಳು ಪ್ರತಿ ಅವಧಿಯ ಕೊನೆಯಲ್ಲಿ ೩ರಿಂದ ೪ ವಾರಗಳ ಪ್ರಾಯೋಗಿಕ ತರಬೇತಿಗೆ ಹಾಜರಾಗಬೇಕಾಗುತ್ತದೆ. ಸಮೀಪದ ಹೆಸರಾಂತ ಸಾವಯವ ಅಥವಾ ಬಯೋಡೈನಮಿಕ್ ಕೃಷಿಭೂಮಿಯಲ್ಲಿ ಈ ಪ್ರಾಯೋಗಿಕ ತರಬೇತಿಗೆ ಅವಕಾಶ ಕಲ್ಪಿಸಲಾಗುತ್ತದೆ. ಪ್ರಾಯೋಗಿಕ ತರಬೇತಿಯಲ್ಲಿ ಬಯೋಡೈನಮಿಕ್ ಕೃಷಿ ವ್ಯವಸ್ಥೆಯಲ್ಲಿ ತೊಡಗಿಸಿಕೊಳ್ಳುವ ಬಗೆ ಮತ್ತು ಅದರ ಅಗತ್ಯತೆಗಳು, ಸಾವಯವ ಗೊಬ್ಬರ ಮತ್ತು ಬಯೋಡೈನಮಿಕ್ ದ್ರವ ಗೊಬ್ಬರಗಳ ಕುರಿತ ಅಧ್ಯಯನಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತದೆ. ಜೊತೆಗೆ, ಈ ತರಬೇತಿ ತರಗತಿಯಲ್ಲಿ ವಿದ್ಯಾರ್ಥಿಗಳು ಕೃಷಿ ಸಲಕರಣೆಗಳಾದ ಟಿಲ್ಲರ್, ಕಳೆ ಕೀಳುವ ಯಂತ್ರ(ವೀಡರ್), ಸಿಂಪಡಣಾ ಸಾಧನ, ಬೆಳೆ ಕತ್ತರಿಸುವ ಯಂತ್ರಗಳ ಬಳಸುವುದು ಹೇಗೆ ಮುಂತಾದವುಗಳ ಬಗ್ಗೆ ತರಬೇತಿ ಪಡೆಯುತ್ತಾರೆ. ಈಗಿರುವ ಬ್ಯಾಚ್ ನ ವಿದ್ಯಾರ್ಥಿಗಳು ಅರೋವಿಲ್ಲೆಯಲ್ಲಿರುವ ವಿಂದಾರ ಫಾರ್ಮ್, ಕುರುಂಜಿ ಬಯೋಡೈನಮಿಕ್ ಫಾರ್ಮ್ ಮತ್ತು ಕೊಡೈಕೆನಾಲ್ ನಲ್ಲಿರುವ ವಾಲ್ ಡ್ರೋಫ್ ಸ್ಕೂಲ್ ಗೆ ಭೇಟಿ ನೀಡಿ ತರಬೇತಿ ಪಡೆದಿದ್ದಾರೆ. ಅಂತೆಯೇ ಚೆನ್ನೈನಲ್ಲಿರುವ  ಎಂಸಿಆರ್ ಸಿ ಏರ್ಪಡಿಸಿದ ಮಣ್ಣಿನ ವಿಶ್ಲೇಷಣೆಗಾಗಿ ಸೂಕ್ಷ್ಮ  ಪೋಷಕಾಂಶಗಳ(ಪೌಷ್ಠಿಕದ್ರವ್ಯಗಳ) ಪರ್ಯಾಯ ವಿಶ್ಲೇಷಣಾತ್ಮಕ ಪರೀಕ್ಷೆಗೆ ಸಂಬoಧಪಟ್ಟoತೆಯೂ ತರಬೇತಿ ಪಡೆದಿದ್ದಾರೆ. ಇಷ್ಟೇ ಅಲ್ಲ, ಭಾರತೀಯ ಬಯೋಡೈನಾಮಿಕ್ ಒಕ್ಕೂಟ, ಶೇನ್ ಬಾಗನೂರ್ ನಲ್ಲಿ ಏರ್ಪಡಿಸಿದ ತರಬೇತಿಯಲ್ಲಿಯೂ ಭಾಗವಹಿಸಿದ್ದಾರೆ. ಪ್ರಸ್ತುತ ಎರಡನೇ ವರ್ಷದಲ್ಲಿ ಈ ವಿದ್ಯಾರ್ಥಿಗಳು ಪ್ರಮಾಣೀಕರಣ ಮತ್ತು ಮಾರುಕಟ್ಟೆಗೆ ಸಂಬoಧಿಸಿದoತೆ ಕೆಲವು ಮೂಲಭೂತ ಅವಕಾಶಗಳನ್ನು ಪಡೆಯಲಿದ್ದು, ಅದು ಅವರು ಭವಿಷ್ಯದಲ್ಲಿ ಸ್ವಂತ ಕೃಷಿಭೂಮಿಗಳನ್ನು ನಿರ್ವಹಿಸುವ ಸಂದರ್ಭದಲ್ಲಿ ಸಾಕಷ್ಟು ಉಪಯುಕ್ತವಾಗಲಿದೆ.

ಮುಂದಿನ ಹತ್ತು ವರ್ಷಗಳಲ್ಲಿ ಒಂದು ಸಾವಿರಕ್ಕೂ ಹೆಚ್ಚು ಕೃಷಿಯಾಸಕ್ತ ಯುವಜನರನ್ನು ಸೃಷ್ಟಿಸಬೇಕೆನ್ನುವುದು ನಮ್ಮ ಪ್ರಮುಖ ಗುರಿಯಾಗಿದೆ. ಅದು ಪುರುಷರಾಗಿರಬಹುದು ಅಥವಾ ಮಹಿಳೆಯರೂ ಆಗಿರಬಹುದು. ಅವರು ಹೀಲಿಂಗ್ ದಿ ಅರ್ಥ್ ಕ್ಯಾಂಪೇನ್ ಯೋಜನೆಯಲ್ಲೂ ಸಕ್ರಿಯವಾಗಿ ಭಾಗಿಯಾಗಲಿದ್ದಾರೆ. ಕೇವಲ ಕೃಷಿ ತಂತ್ರಜ್ಞಾನಗಳನ್ನು ಯುವಜನರಿಗೆ ತಲುಪಿಸುವುದಷ್ಟೇ ಈ ಯೋಜನೆಯ ಉದ್ದೇಶವಲ್ಲ, ಬದಲಾಗಿ ಕೃಷಿ ವ್ಯವಸ್ಥೆಗೆ ಶಿಸ್ತುಬದ್ಧವಾದ ರೂಪ ನೀಡಿ, ಆ ಮೂಲಕ ಜೀವನಶೈಲಿಯನ್ನು ಸುಧಾರಿಸುವುದೇ ಈ ಯೋಜನೆಯ ಉದ್ದೇಶವಾಗಿದೆ. ಇದಕ್ಕಾಗಿ ಸಾಮೂಹಿಕ ಕ್ರಮಗಳನ್ನು ಕೈಗೊಂಡು ಸಮಾಜದಲ್ಲಿ ಸಕಾರಾತ್ಮಕವಾದ ಬದಲಾವಣೆ ತರಬಲ್ಲೆವು ಎನ್ನುವ ವಿಶ್ವಾಸ ನಮಗಿದೆ.

ಡಿ.ತಂಗಪಾoಡಿಯನ್


D Thangapandian is a member of the academic committee of The School of Biodynamic Farming and The Lead Worker of Farm India – www.farmindia.org  For more information, contact Mr.Jayakaran, Director, The School of Biodynamic Farming, Vinobajipuram, Karur District, Tamil Nadu. Website: www.inbasevasangam.org


ಆಂಗ್ಲ ಮೂಲ: ಲೀಸಾ ಇಂಡಿಯಾ, ಸಂಪುಟ ೧೫, ಸಂಚಿಕೆ ೩, ಸೆಪ್ಟೆಂಬರ್ ೨೦೧೩

Recent Posts

ಕೃಷಿಯಲ್ಲಿ ನೀರಿನ ಸಮರ್ಥ ಬಳಕೆಗಾಗಿ ಕಾಲುವೆ ಯಾಂತ್ರೀಕರಣ

ಕೃಷಿಯಲ್ಲಿ ನೀರಿನ ಸಮರ್ಥ ಬಳಕೆಗಾಗಿ ಕಾಲುವೆ ಯಾಂತ್ರೀಕರಣ

ನಮ್ಮ ನೀರಾವರಿ ವ್ಯವಸ್ಥೆಯನ್ನು 21ನೇ ಶತಮಾನದ ಬೇಡಿಕೆಗಳಿಗೆ ಹೊಂದುವಂತೆ ಮಾಡುವುದು ನಮ್ಮ ಮುಂದಿರುವ ನಿಜವಾದ ಸವಾಲಾಗಿದೆ. ತಂತ್ರಜ್ಞಾನವೇ...