ಕೃಷಿ ಪರಿಸರವನ್ನು ಉತ್ತೇಜಿಸುವ ಮಾರ್ಗಗಳು


ಆಹಾರದ ಅಗತ್ಯತೆಗಳು, ಜೀವನೋಪಾಯಗಳು, ಸ್ಥಳೀಯ ಸಂಸ್ಕೃತಿ, ಪರಿಸರ ಮತ್ತು ಅರ್ಥಶಾಸ್ತ್ರದ ನಡುವಿನ ಸಂಪರ್ಕಗಳನ್ನು ಸಂಪರ್ಕಿಸುವ ಮೂಲಕ ಕೃಷಿ ಪರಿಸರ ವಿಧಾನಗಳು ಸ್ಥಳ ನಿರ್ದಿಷ್ಟವಾಗಿವೆ. ಕೃಷಿವಿಜ್ಞಾನ ಕುರಿತಾದ ಶಿಕ್ಷಣವು ಇವೆಲ್ಲವನ್ನೂ ಸಂಪರ್ಕಿಸುವ ಕೊಂಡಿಯಾಗಿದ್ದು, ರೈತರು ಇಡೀ ಪ್ರಕ್ರಿಯೆಯ ಕೇಂದ್ರ.


ಪರಿಸರ ಮತ್ತು ಜನರ ಆರೋಗ್ಯದ ಮೇಲೆ ರಾಸಾಯನಿಕ ಕೀಟನಾಶಕಗಳು ಮತ್ತು ರಸಗೊಬ್ಬರಗಳ ದುಷ್ಪರಿಣಾಮಗಳ ಅರಿವಾಗಿ, ಸರ್ಕಾರೇತರ ಸಂಸ್ಥೆಗಳು (ಎನ್‌ಜಿಒಗಳು) ಮತ್ತು ಸಮುದಾಯ ಆಧಾರಿತ ಸಂಸ್ಥೆಗಳು (ಸಿಬಿಒಗಳು) ಹಲವು ವರ್ಷಗಳಿಂದ ಕೃಷಿಯಲ್ಲಿ ರಾಸಾಯನಿಕೇತರ ವಿಧಾನಗಳನ್ನು ಉತ್ತೇಜಿಸುತ್ತಿವೆ. ಸುಸ್ಥಿರ ಕೃಷಿ, ಸಾವಯವ ಕೃಷಿ, ಬಯೋ-ಡೈನಮಿಕ್‌ ಕೃಷಿ, ನೈಸರ್ಗಿಕ ಕೃಷಿ, ಪುನರುತ್ಪಾದಕ ಕೃಷಿ, ಕೃಷಿ ಪರಿಸರ ವಿಧಾನಗಳು, ಕಡಿಮೆ ಹೊರ ಒಳಸುರಿಯುವಿಕೆಗಳ ಸುಸ್ಥಿರ ಕೃಷಿ (LEISA), ಹಸು ಆಧಾರಿತ ಕೃಷಿ ಇತ್ಯಾದಿ ಹೀಗೆ ವಿವಿಧ ಹೆಸರುಗಳಲ್ಲಿ ಇವುಗಳನ್ನು ಪ್ರಚಾರ ಮಾಡಲಾಗುತ್ತಿದೆ. ಯುನೈಟೆಡ್ ನೇಷನ್ಸ್ ಫ್ರೇಮ್‌ವರ್ಕ್ ಆನ್ ಕ್ಲೈಮೇಟ್ ಚೇಂಜ್ ಕನ್ವೆನ್ಷನ್ (ಯುಎನ್‌ಎಫ್‌ಸಿಸಿಸಿ) ಗೆ ಸಲ್ಲಿಸಿದ ಭಾರತದ ಮೂರನೇ ದ್ವೈವಾರ್ಷಿಕ ವರದಿಯಲ್ಲಿ ಗ್ರೀನ್ ಹೌಸ್ ಗ್ಯಾಸ್ (ಜಿಹೆಚ್‌ಜಿ) ಹೊರಸೂಸುವಿಕೆಗೆ ಕೃಷಿಯು ಪ್ರಮುಖ ಕೊಡುಗೆ ನೀಡಿದೆ ಎಂದು ಹೇಳಲಾಗಿದೆ. ಭಾರತ ಸರ್ಕಾರವು ದೇಶದಾದ್ಯಂತ ನೈಸರ್ಗಿಕ ಕೃಷಿ ಯಲ್ಲಿ ಕೃಷಿ ಪರಿಸರ ವಿಧಾನಗಳನ್ನು ಉತ್ತೇಜಿಸುತ್ತಿದೆ.

ಆಧುನಿಕ ಕೃಷಿಯು ಕೃಷಿ ಪರಿಸರ ವಿಧಾನಕ್ಕೆ ಹೋಲಿಸಿದರೆ ಹೆಚ್ಚು ಸ್ವತಂತ್ರವಾಗಿದೆ. ಅಲ್ಲದೆ, ಆಧುನಿಕ ಕೃಷಿ ತಂತ್ರಜ್ಞಾನವು ರೈತರನ್ನು ಕೇವಲ ತಂತ್ರಜ್ಞಾನದ ಗ್ರಾಹಕರನ್ನಾಗಿ ಮಾಡಿದೆ. ಇದರಿಂದಾಗಿ ರೈತರು ತಮ್ಮ ಭೂಮಿಗೆ ತಕ್ಕ ಬೀಜಗಳು, ಹವಾಮಾನದ ಆಧಾರದ ಮೇಲೆ ಚಟುವಟಿಕೆಗಳನ್ನು ಯೋಜಿಸುವುದು, ವೈವಿಧ್ಯಮಯ ಉತ್ತಮ ಬೀಜಗಳನ್ನು ಆಯ್ಕೆ ಇತ್ಯಾದಿಗಳಲ್ಲಿ  ತಮಗಿದ್ದ ಸಾಂಪ್ರದಾಯಿಕ ಕೌಶಲಗಳನ್ನು ಕಳೆದುಕೊಳ್ಳುತ್ತಿದ್ದಾರೆ.

ಕೃಷಿಪರಿಸರ ವಿಧಾನದಲ್ಲಿ ಪರಿಸರ ವ್ಯವಸ್ಥೆಯನ್ನು ಅರ್ಥಮಾಡಿಕೊಳ್ಳಬೇಕು. ಪರಿಸರ ವ್ಯವಸ್ಥೆ ಅಂದರೆ ಜೈವಿಕ ಮತ್ತು ಅಜೀವ ಪರಿಸರ ಮಾತ್ರವಲ್ಲದೆ ಆರ್ಥಿಕ ಮತ್ತು ಸಮಾಜೋ – ರಾಜಕೀಯ ಪರಿಸರ. ರೈತರು ಮತ್ತು ಕೃಷಿಯ ಮೇಲೆ ಪ್ರಭಾವ ಬೀರುವ ಎಲ್ಲಾ ಪರಿಸರ ವ್ಯವಸ್ಥೆಗಳನ್ನು ಪರಿಗಣಿಸಬೇಕು. ಕೃಷಿ ಪರಿಸರ ವ್ಯವಸ್ಥೆಯು ರೈತರ ಪರಿಸರ ವ್ಯವಸ್ಥೆಗಿಂತ ಭಿನ್ನವಾಗಿದೆ. ಇದನ್ನು ಶಿಕ್ಷಣತಜ್ಞರು ಅರ್ಥ ಮಾಡಿಕೊಳ್ಳಬೇಕು.

ಎಲ್ಲ ಪಾಲುದಾರರ ಭಾಗವಹಿಸುವಿಕೆ ಜ್ಞಾನ ವಿನಿಮಯವನ್ನು ಶಕ್ತಗೊಳಿಸುತ್ತದೆ

ಕೃಷಿ ಎಂದರೆ ಆಹಾರ ಉತ್ಪಾದನೆ ಮಾಡಲು ಎಷ್ಟು ಸಮರ್ಥವಾಗಿ ಸಂಪನ್ಮೂಲಗಳನ್ನು ಬಳಸಲಾಗುತ್ತದೆ ಎನ್ನುವುದಲ್ಲ. ಕೃಷಿ ಎನ್ನುವುದು ಒಂದು ನಿರ್ದಿಷ್ಟ ಕೃಷಿ ಪರಿಸರ ಪರಿಸ್ಥಿತಿಯಲ್ಲಿ ಅವನು ಅಥವಾ ಅವಳು ಹೊಂದಿರುವ ಸಂಪನ್ಮೂಲಗಳೊಂದಿಗೆ ಮಾಡುವ ಕೆಲಸ. ಇದು ಸ್ಥಳೀಯ ಸಂಸ್ಕೃತಿ, ಸ್ಥಳೀಯ ಪರಿಸ್ಥಿತಿಗಳು ಮತ್ತು ಸ್ಥಳೀಯ ಪರಿಸರದೊಂದಿಗೆ ಸಂಬಂಧವಿರುವ ಜೀವನೋಪಾಯದ ಆಯ್ಕೆಯಾಗಿದೆ. ಕೃಷಿ ಪರಿಸರ ಶಿಕ್ಷಣವು ರೈತರಿಗೆ ತರ್ಕಬದ್ಧ ನಿರ್ಧಾರಗಳನ್ನು ತೆಗೆದುಕೊಳ್ಳಲು ಅನುವು ಮಾಡಿಕೊಡುತ್ತದೆ. ಅದು ಆಹಾರ ಉತ್ಪಾದನೆಯನ್ನು ಸಕ್ರಿಯಗೊಳಿಸುವುದರೊಂದಿಗೆ ಸಹ ಮಾನವರ ಮತ್ತು ಪರಿಸರದ ಆರೋಗ್ಯವನ್ನು ರಕ್ಷಿಸುತ್ತದೆ. ಆಹಾರದ ಅಗತ್ಯತೆಗಳು, ಜೀವನೋಪಾಯಗಳು, ಸಂಸ್ಕೃತಿ, ಪರಿಸರ ಮತ್ತು ಆರ್ಥಿಕತೆಯನ್ನು ಬೆಸೆಯುವ ಶಿಕ್ಷಣ ಇಂದಿನ ಅಗತ್ಯವಾಗಿದೆ.

ಕೃಷಿ ಶಿಕ್ಷಣ ವಿಧಾನಗಳು

ಯಾವುದೇ ಹೊಸ ತಂತ್ರಜ್ಞಾನ ಅಥವಾ ಪ್ರಕ್ರಿಯೆಗಳನ್ನು ಅಳವಡಿಸಿಕೊಳ್ಳಲು ಮೂರು ಪ್ರಮುಖ ಅಂಶಗಳು ಮುಖ್ಯ: (1) ಅಗತ್ಯವಿರುವ ಸಾಮಗ್ರಿಗಳು ಮತ್ತು ಸಂಪನ್ಮೂಲಗಳು (ಹಾರ್ಡ್‌ವೇರ್) (2) ತಂತ್ರಜ್ಞಾನವನ್ನು ಹೇಗೆ ಬಳಸುವುದು ಎಂಬುದರ ಕುರಿತು ಜ್ಞಾನ ಮತ್ತು ತರಬೇತಿ (3) ಅಂತಹ ತಂತ್ರಜ್ಞಾನವನ್ನು ಏಕೆ ಬಳಸಬೇಕು ಮತ್ತು ಅದರ ಫಲಿತಾಂಶಗಳನ್ನು ಅರ್ಥಮಾಡಿಕೊಳ್ಳುವುದು. ತತ್ವಗಳು ಒಂದೇ ಆಗಿದ್ದರೂ ಸಹ, ಕೃಷಿ ಪರಿಸರ ವ್ಯವಸ್ಥೆ ಅಥವಾ ಭೌಗೋಳಿಕ ಬದಲಾವಣೆಯೊಂದಿಗೆ, ತಂತ್ರಜ್ಞಾನವು (ಬಳಸಿದ ವಸ್ತುಗಳು) ಬದಲಾಗಬಹುದು ಮತ್ತು ಸ್ಥಳೀಯ ಪರಿಸ್ಥಿತಿಗಳನ್ನು ಆಧರಿಸಿ ವಿಧಾನವನ್ನು ಅಳವಡಿಸಿಕೊಳ್ಳಬೇಕಾಗುತ್ತದೆ. ಉದಾಹರಣೆಗೆ, ಹೆಚ್ಚಿನ ವಿದ್ಯಾಭ್ಯಾಸ ಮಾಡಿರುವ ರೈತರಿಗೆ ಹೋಲಿಸಿದರೆ ಕಡಿಮೆ ವಿದ್ಯಾಭ್ಯಾಸ ಮಾಡಿರುವ ರೈತರಿಗೆ ತರಬೇತಿ ಸಾಮಗ್ರಿಗಳು ಮತ್ತು ವಿಧಾನಗಳು ವಿಭಿನ್ನವಾಗಿರಬೇಕು. ಕಪ್ಪು ಮಣ್ಣಿಗೆ ಹೊಂದುವುದು ಕೆಂಪು ಮರಳು ಮಣ್ಣಿಗೆ ಹೊಂದುವುದಿಲ್ಲ. ಬಯಲು ಪ್ರದೇಶದ ಪರಿಸರ ವ್ಯವಸ್ಥೆಯು ಪರ್ವತಗಳಿಗೆ ಹೋಲಿಸಿದರೆ ಭಿನ್ನವಾಗಿರುತ್ತದೆ.

ದೀರ್ಘ ಸಮಯದಿಂದ, ಸರ್ಕಾರವು ತನ್ನ ಕೃಷಿ ವಿಸ್ತರಣಾ ವ್ಯವಸ್ಥೆಯ ಮೂಲಕ ರೈತರಿಗೆ ಮಾಹಿತಿಯನ್ನು ಪ್ರಸಾರ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಹೀಗಿದ್ದೂ, ಸರ್ಕಾರದಲ್ಲಿ ಸದ್ಯ ಅಸ್ತಿತ್ವದಲ್ಲಿರುವ ಕಾರ್ಯವಿಧಾನದೊಂದಿಗೆ ಪ್ರತಿಯೊಬ್ಬ ರೈತನನ್ನು ತಲುಪುವುದು ಕಷ್ಟ. ಹಾಗಾಗಿ ಸರ್ಕಾರೇತರ ಸಂಸ್ಥೆಗಳು, ಖಾಸಗಿ ಕಂಪನಿಗಳು, ಹಣಕಾಸು ಸಂಸ್ಥೆಗಳು ಮುಂತಾದವರು ಈ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.

ಸರ್ಕಾರೇತರ ಸಂಸ್ಥೆಗಳು ಈ ರಂಗಕ್ಕೆ ಕಾಲಿಡುವುದರೊಂದಿಗೆ ಪ್ರಾಯೋಗಿಕ ಕಲಿಕೆಯು ಕೇಂದ್ರಕ್ಕೆ ಬಂದಿತು. ರೈತ ಕ್ಷೇತ್ರ ಶಾಲೆಯಂತಹ (FFS) ವಿಧಾನಗಳ ಮೂಲಕ ರೈತರಿಗೆ ಆವಿಷ್ಕಾರ ಕಲಿಕೆಯಂತಹ ವಿಧಾನದ ಮೂಲಕ ತರಬೇತಿ ನೀಡಲಾಗುತ್ತದೆ. ಈ ವಿಧಾನದಲ್ಲಿ, ಆಯ್ದ ರೈತರ ಗುಂಪು ನಿಯಮಿತವಾಗಿ ಭೇಟಿಯಾಗಿ ಆಯ್ದ ಕ್ಷೇತ್ರದಲ್ಲಿನ ಬೆಳೆಯನ್ನು ಋತುಮಾನದುದ್ದಕ್ಕೂ ಗಮನಿಸಿ ಆ ಬೆಳೆಯನ್ನು ಅರ್ಥಮಾಡಬೇಕು. ಹವಾಮಾನ-ಕೀಟ ಡೈನಾಮಿಕ್ಸ್, ಕೀಟದ ಜೀವನ ಚಕ್ರ, ಕೀಟ ಮತ್ತು ರಕ್ಷಕ ಸಂಬಂಧಗಳು, ಕೀಟಗಳಿಂದಾಗುವ ನಷ್ಟವನ್ನು ಮತ್ತು ಆಯ್ಕೆ ಮಾಡಿದ ಪರಿಹಾರಗಳ ಪರಿಣಾಮವನ್ನು ಗಮನಿಸುವುದು ಕೆಲವು ಪ್ರಮುಖ ಕಲಿಕೆಗಳಾಗಿವೆ. ಈ ಕಲಿಕಾ ಪ್ರಕ್ರಿಯೆಯು ಸಂಪನ್ಮೂಲಭರಿತವಾಗಿದ್ದು ಪರಿಣಾಮಕಾರಿ ಮತ್ತು ಸಮರ್ಥವಾಗಿದೆ. ಸಮುದಾಯಗಳಲ್ಲಿ ಸಂಪನ್ಮೂಲ ವ್ಯಕ್ತಿಗಳನ್ನು ತಯಾರು ಮಾಡಲು ಈ ವಿಧಾನವನ್ನು ಬಳಸಬಹುದು.

ರೈತರಿಗೆ ಈ ಪ್ರಕ್ರಿಯೆಯನ್ನು ಅರ್ಥಮಾಡಿಕೊಳ್ಳಲು, ಬಳಸಬೇಕಾದ ವಸ್ತುಗಳು ಹಾಗೂ ಬಳಕೆಯನ್ನು ತಿಳಿದುಕೊಳ್ಳಲು ತರಬೇತಿ ಮತ್ತು ಪ್ರಾತ್ಯಕ್ಷಿಕೆಗಳನ್ನು ನೀಡುವುದು ಮತ್ತೊಂದು ವಿಧಾನ. ಹಲವು ಸಂಸ್ಥೆಗಳು ರೈತರನ್ನು ತರಬೇತಿ ಮೂಲಕ ಶಿಕ್ಷಿತರನ್ನಾಗಿಸುತ್ತದೆ. ಶಿಕ್ಷಣಶಾಸ್ತ್ರದ ಪ್ರಕಾರದ ಶಿಕ್ಷಣವು ರೈತನಿಗೆ ತಿಳಿದಿರುವ ವಿಷಯದಿಂದ ಆರಂಭವಾಗಿ ಅದರ ಮೇಲೆ ಮುಂದಿನ ಕಟ್ಟಡವನ್ನು ಕಟ್ಟಬೇಕು. ರೈತರಿಗೆ ಶಿಕ್ಷಣ ನೀಡುವಾಗ ಸ್ಥಳೀಯ ಭಾಷೆ ಹಾಗೂ ಪಾರಿಭಾಷಿಕಗಳು ಬಹಳ ಮುಖ್ಯ. ರೈತರ ಅನುಭವ, ಸ್ಥಳೀಯ ಸಂಪನ್ಮೂಲಗಳ ಬಗೆಗಿನ ತಿಳಿವಳಿಕೆ ಮತ್ತು ಅವುಗಳ ಬಳಕೆ ಕೃಷಿಪರಿಸರ ವಿಧಾನದಲ್ಲಿ ಬಹಳ ಮುಖ್ಯವಾದ ಅಂಶ. ತರಬೇತಿ ನೀಡುವಾಗ ತರಬೇತುದಾರರು ಸ್ಥಳೀಯ ಪರಿಸರ ವ್ಯವಸ್ಥೆಯನ್ನು ಅರ್ಥಮಾಡಿಕೊಂಡಿರುವುದು ಬಹಳ ಮುಖ್ಯ. ರೈತರಿಗೆ ಇಡೀ ದಿನ ತರಗತಿಯೊಳಗೆ ಕೂತು ಪಾಠ ಕೇಳುವ ಅಭ್ಯಾಸವಿರುವುದಿಲ್ಲ. ದೃಶ್ಯ-ಶ್ರಾವ್ಯ ಮಾಧ್ಯಮದ ಮೂಲಕ, ಚಟುವಟಿಕೆಗಳ ಮೂಲಕ ಅವರನ್ನು ಚಟುವಟಿಕೆಯಿಂದ ಇರಿಸುವುದು ಬಹಳ ಮುಖ್ಯ.

ಕೃಷಿ ಪರಿಸರ ಶಿಕ್ಷಣದಲ್ಲಿ CSA  ಪಾತ್ರ

ಕೃಷಿಪರಿಸರ ಶಿಕ್ಷಣದ ಕೇಂದ್ರ ಕ್ಷೇತ್ರ ಕಲಿಕೆ

ಸಸ್ಟೈನಬಲ್ ಅಗ್ರಿಕಲ್ಚರ್ ಸೆಂಟರ್ (CSA) ಸುಸ್ಥಿರ ಕೃಷಿಯನ್ನು ಉತ್ತೇಜಿಸುವಲ್ಲಿ ತೊಡಗಿಕೊಂಡಿರುವ ಸಂಸ್ಥೆಯಾಗಿದೆ. ಇದು ಸರ್ಕಾರಗಳು, ಸರ್ಕಾರೇತರ ಸಂಸ್ಥೆಗಳು, ಸಮುದಾಯ ಆಧಾರಿತ ಸಂಸ್ಥೆಗಳು ಮತ್ತು ರೈತ ಸಂಘಟನೆಗಳ (ರೈತ ಉತ್ಪಾದಕ ಸಂಸ್ಥೆಗಳು (FPO) ಇತ್ಯಾದಿ) ಸಹಯೋಗದೊಂದಿಗೆ ವೈಜ್ಞಾನಿಕ ಹಿನ್ನೆಲೆಯ ಆಧಾರದ ಮೇಲೆ ಯಶಸ್ವಿ ಮಾದರಿಗಳನ್ನು ಸ್ಥಾಪಿಸುತ್ತಿದೆ. ಕೀಟನಾಶಕವಿಲ್ಲದೆ ನಿರ್ವಹಣೆ (NPM), ಸಾವಯವ/ನೈಸರ್ಗಿಕ ಕೃಷಿ, ಮುಕ್ತ ಬೀಜ ವ್ಯವಸ್ಥೆಗಳು, ರೈತ ಉತ್ಪಾದಕ ಸಂಸ್ಥೆಗಳು ಮತ್ತು ಸಾರ್ವಜನಿಕ ನೀತಿ ಸಮಸ್ಯೆಗಳು CSA ಯ ಪ್ರಮುಖ ಕೊಡುಗೆಗಳಾಗಿವೆ.

90 ರ ದಶಕದ ಕೊನೆಯಲ್ಲಿ ಮತ್ತು 2000 ದ ಆರಂಭದಲ್ಲಿ, ಕೀಟನಾಶಕಗಳು ಬಹುದೊಡ್ಡ ಸಮಸ್ಯೆಯಾಗಿತ್ತು. CSA ರೈತರಿಗೆ ಮತ್ತು ರೈತರೊಂದಿಗೆ ಕೆಲಸ ಮಾಡುವವರಿಗೆ ಕೀಟನಾಶಕವಿಲ್ಲದ ನಿರ್ವಹಣೆ(NPM) ಮಾಡುವುದನ್ನು ತಿಳಿಸಿ ಕೊಡುವ ಮೂಲಕ  ಕೀಟಗಳ ಸಮಸ್ಯೆಗಳನ್ನು ಪರಿಹರಿಸಿದೆ. NPM ಎಂದರೆ ರಾಸಾಯನಿಕ ಕೀಟನಾಶಕಗಳಿಲ್ಲದ ಕೀಟ ನಿರ್ವಹಣೆಯ ವಿವಿಧ ವಿಧಾನಗಳು. ಕೀಟಗಳ ಜೀವನ ಚಕ್ರ, ಪ್ರಯೋಜನಕಾರಿ ಮತ್ತು ಹಾನಿಕಾರಕ ಕೀಟಗಳ ನಡುವಿನ ವ್ಯತ್ಯಾಸ ಮತ್ತು ಬೆಳೆ ವ್ಯವಸ್ಥೆಯಲ್ಲಿ ಬಲೆ ಬೆಳೆಗಳು ಮತ್ತು ಗಡಿ ಬೆಳೆಗಳನ್ನು ಒಳಗೊಂಡಂತೆ ವಿವಿಧ ತಡೆಗಟ್ಟುವ ವಿಧಾನಗಳು, ಫೆರೋಮೋನ್ ಬಲೆಗಳನ್ನು ಸ್ಥಾಪಿಸುವುದು ಮತ್ತು ಸ್ಥಳೀಯವಾಗಿ ಲಭ್ಯವಿರುವ ಸಸ್ಯಗಳು, ಪ್ರಾಣಿಗಳು ಮುಂತಾದ ಸಂಪನ್ಮೂಲಗಳನ್ನು ಬಳಕೆ ಜೈವಿಕ ಒಳಸುರಿಯುವಿಕೆಗಳನ್ನು ತಯಾರಿಸಲು ರೈತರಿಗೆ ಶಿಕ್ಷಣ ನೀಡಲಾಯಿತು. ರೈತರು ಈ ಪದ್ಧತಿಯ ಹಿಂದಿನ ತತ್ವಗಳನ್ನು ಅರ್ಥಮಾಡಿಕೊಂಡು, ತಮ್ಮ ಸಾಂಪ್ರದಾಯಿಕ ಜ್ಞಾನದ ಆಧಾರದ ಮೇಲೆ ವಿವಿಧ ಸಸ್ಯಗಳೊಂದಿಗೆ ಪ್ರಯೋಗವನ್ನು ಪ್ರಾರಂಭಿಸಿದರು. ಇದಕ್ಕೆ CSA ಆಧುನಿಕ ವೈಜ್ಞಾನಿಕ ಜ್ಞಾನವನ್ನು ಸೇರಿಸಿತು. CSA ತನ್ನ ಕೆಲಸವನ್ನು NPM ನೊಂದಿಗೆ ಪ್ರಾರಂಭಿಸಿದರೂ, ಅದಕ್ಕೆ ಕೃಷಿಯ ಸಮಗ್ರ ತಿಳಿವಳಿಕೆಯಿತ್ತು. ಕೀಟದ ಸಮಸ್ಯೆಯಿಂದ ಆರಂಭಿಸಿ ಅದರೊಂದಿಗೆ ಕೃಷಿಯ ಇತರ ಅಂಶಗಳನ್ನು ಒಳಗೊಂಡಿತು.

ರೈತರಿಗೆ ಶಿಕ್ಷಣ ನೀಡುವ ಪ್ರಕ್ರಿಯೆಯಲ್ಲಿ ಸಮುದಾಯ ಸಂಪನ್ಮೂಲ ವ್ಯಕ್ತಿಗಳನ್ನು ವಿಸ್ತರಣಾವಾದಿಗಳಾಗಿ ಬಳಸುವುದು ಉತ್ತಮ ಫಲಿತಾಂಶಗಳನ್ನು ನೀಡಿದೆ. ರೈತ ಸಮುದಾಯದಲ್ಲಿ ಕೃಷಿ ಪರಿಸರ ವಿಧಾನಗಳನ್ನು ಹೆಚ್ಚಿಸುವಲ್ಲಿ ಸಮುದಾಯ ಸಂಪನ್ಮೂಲ ವ್ಯಕ್ತಿಗಳು ನಿರ್ಣಾಯಕ ಪಾತ್ರವನ್ನು ವಹಿಸಿದ್ದಾರೆ.

ಕೃಷಿ ಪರಿಸರ ವಿಜ್ಞಾನ ಎಂದರೆ ಹಳೆಯ ವ್ಯವಸ್ಥೆಗಳಿಗೆ ಹಿಂತಿರುಗುವುದಲ್ಲ. ಬದಲಿಗೆ ಕೃಷಿಯಲ್ಲಿ ಪ್ರಸ್ತುತ ಮತ್ತು ಭವಿಷ್ಯದ ಯೋಜಿತ ಸಮಸ್ಯೆಗಳನ್ನು ಪರಿಹರಿಸಲು ಸಾಂಪ್ರದಾಯಿಕ ಜ್ಞಾನವನ್ನು ಆಧುನಿಕ ವೈಜ್ಞಾನಿಕ ತಿಳಿವಳಿಕೆಯೊಂದಿಗೆ ಸಂಯೋಜಿಸುವುದು. ಈ ಪ್ರಕ್ರಿಯೆಯಲ್ಲಿ, ಕೃಷಿ ಪರಿಸರ ವಿಧಾನಗಳನ್ನು ಕೈಗೊಳ್ಳುವಲ್ಲಿ ರೈತರಿಗೆ ಸಹಾಯ ಮಾಡುವ ಕಾರ್ಯಕ್ರಮಗಳನ್ನು ಆರಂಭಿಸಿ ಅವರನ್ನು ಪ್ರೋತ್ಸಾಹಿಸಲು ನೀತಿ ನಿರೂಪಕರಿಗೆ ಪುರಾವೆಗಳನ್ನು ಒದಗಿಸಿ ಅರಿವು ಮೂಡಿಸಲಾಯಿತು.

ಇಂಟರ್ನೆಟ್ ಯುಗದ ಲಾಭವನ್ನು ಪಡೆದು, CSA ಹಲವಾರು ಮೊಬೈಲ್ (ಆಂಡ್ರಾಯ್ಡ್) ಆಧಾರಿತ ಅಪ್ಲಿಕೇಶನ್‌ಗಳನ್ನು ಅಭಿವೃದ್ಧಿಪಡಿಸಿದೆ. ಇದು ಕ್ಷೇತ್ರದ ಕಾರ್ಯನಿರ್ವಾಹಕರು, ಸಮುದಾಯ ಸಂಪನ್ಮೂಲ ವ್ಯಕ್ತಿಗಳು ಮತ್ತು ವಿದ್ಯಾವಂತ ರೈತರಿಗೆ ಉಪಯುಕ್ತವಾಗಿದೆ. ಪೆಸ್ಟೋಸ್ಕೋಪ್ ಅಂತಹ ಒಂದು ಅಪ್ಲಿಕೇಶನ್ ಆಗಿದ್ದು, ಇದು ತೋಟಗಳಲ್ಲಿನ ಕೀಟಗಳನ್ನು ಗುರುತಿಸಲು ಉಪಯುಕ್ತವಾಗಿದೆ. ಕ್ಷೇತ್ರ ಕಾರ್ಯನಿರ್ವಾಹಕರು ಸಮಸ್ಯೆಯ ಫೋಟೊ ತೆಗೆದು ಪ್ರಶ್ನೆಗಳನ್ನು ಕಳುಹಿಸಿಕೊಡಬಹುದು. ತೆಗೆದ ಫೋಟೊಗಳು ತಂತಾನೇ ಜಿಯೋ-ಟ್ಯಾಗ್‌ ಆಗುತ್ತದೆ. ಪರಿಣಿತರ ತಂಡವು ಪರಿಹಾರವನ್ನು ಕಳುಹಿಸಿಕೊಡುತ್ತಾರೆ. ಈ ತಂತ್ರಾಂಶವನ್ನು ಗೂಗಲ್‌ ಪ್ಲೇ ಸ್ಟೋರ್‌ ಮತ್ತು https://pestoscope.com/ ಜಾಲತಾಣದಿಂದ ಡೌನ್ಲೌಡ್‌ ಮಾಡಿಕೊಳ್ಳಬಹುದು. ಅದೇ ರೀತಿ CSA ಯೂಟ್ಯೂಬ್‌ ಚಾನಲ್‌, ಈಕೃಷಿ.ಟಿವಿಯನ್ನು (https://www.youtube.com/c/KrishiTV)  ನಡೆಸುತ್ತಿದೆ. ಇದರಲ್ಲಿ ಹಲವು ಭಾಷೆಗಳಲ್ಲಿ ವಿವಿಧ ವಿಷಯಗಳನ್ನು ಕುರಿತಾದ ಅನುಭವಗಳು, ಸಿದ್ಧತೆಗಳ ಮಾಹಿತಿ, ಸಿನೆಮಾಗಳಿವೆ.

CSA ಆರಂಭವಾದಾಗಿಂದ ಹಲವು ಸರ್ಕಾರೇತರ ಸಂಸ್ಥೆಗಳು, ಸರ್ಕಾರಿ ಅಧಿಕಾರಿಗಳು, ಸಮುದಾಯ ಆಧಾರಿತ ಸಂಸ್ಥೆಗಳು ಮತ್ತು ವ್ಯಕ್ತಿಗಳಿಗೆ ಕೃಷಿಪರಿಸರ ವಿಧಾನ ಕುರಿತು ತರಬೇತಿ ನೀಡಿದೆ. ಕೋವಿಡ್‌ ೧೯ರ ಲಾಕ್‌ಡೌನ್‌ ಸಮಯದಲ್ಲಿ ದೃಶ್ಯಾಧಾರಿತ(ವರ್ಚುಯಲ್‌) ತರಬೇತಿಗಳನ್ನು ನಡೆಸುವ ಅವಕಾಶ CSAಗೆ ದೊರಕಿತು. ಈ ಬಗೆಯ ತರಬೇತಿಯು ಸಮುದಾಯ ಹಾಗೂ CSA ಇಬ್ಬರಿಗೂ ಹೊಸದಾಗಿತ್ತು. ಹೀಗಿದ್ದೂ CSA ದೃಶ್ಯಾಧಾರಿತ(ವರ್ಚುಯಲ್‌) ತರಬೇತಿಗೆ ತಕ್ಕಂತೆ ವಿಷಯಗಳನ್ನು ರೂಪಿಸಿ ಅದನ್ನು ಅಳವಡಿಸಿಕೊಂಡಿತು. ಇಂದು, ಈ ಬಗೆಯ ತರಬೇತಿಗಳು ಮತ್ತು ಚರ್ಚೆಗಳು ದೈನಂದಿನ ಬದುಕಿನ ಅವಿಭಾಜ್ಯ ಅಂಗವಾಗಿದೆ.

CSA ಗ್ರಾಮೀಣ ಅಕಾಡಮಿ (http://www.grameenacademy.in) ಎನ್ನುವ ಗ್ರಾಮೀಣ ಶಿಕ್ಷಣ ಪೋರ್ಟಲ್‌ ಹೊಂದಿದ್ದು ಇದರಲ್ಲಿ ಗ್ರಾಮೀಣಾಭಿವೃದ್ಧಿಗೆ ಸಂಬಂಧಿಸಿದಂತೆ ವಿವಿಧ ವಿಷಯಗಳ ಕುರಿತು ನಿಯಮಿತವಾಗಿ ಕೋರ್ಸುಗಳನ್ನು ಆಯೋಜಿಸುತ್ತದೆ.  ಗ್ರಾಮೀಣ ಯುವಕರು, ಮಹಿಳೆಯರು ಮತ್ತು ಗ್ರಾಮೀಣ ವಲಯದಲ್ಲಿ ಉದ್ಯೋಗ ಅರಸುವವರು ಅಥವಾ ಉದ್ಯಮಶೀಲರಾಗ ಬಯಸುವವರಿಗೆ ಜ್ಞಾನ ಮತ್ತು ಕೌಶಲ್ಯಗಳನ್ನು ಪರ್ಯಾಯ ಕಲಿಕೆಯ ಮೂಲಕ ಒದಗಿಸಲು ಒಂದು ವ್ಯವಸ್ಥೆಯನ್ನು ರಚಿಸುವ ಉದ್ದೇಶದಿಂದ ಗ್ರಾಮೀಣ ಅಕಾಡೆಮಿಯನ್ನು ಪ್ರಾರಂಭಿಸಲಾಗಿದೆ. ಇದು ಗ್ರಾಮೀಣಾಭಿವೃದ್ಧಿಗೆ ಸಂಬಂಧಿಸಿದಂತೆ ವಿವಿಧ ವಿಷಯಗಳ ಬಗ್ಗೆ ನೇರವಾಗಿ, ವರ್ಚುಯಲ್‌ ಆಗಿ ಎರಡನ್ನೂ ಒಳಗೊಂಡು ತರಬೇತಿಗಳನ್ನು ನೀಡುತ್ತದೆ. ಅಕಾಡೆಮಿಯು ಕೋರ್ಸುಗಳನ್ನು ನೀಡುವಲ್ಲಿ ವಿವಿಧ ಸಂಸ್ಥೆಗಳ ಸಹಯೋಗದೊಂದಿಗೆ ನಡೆಸುತ್ತಿದೆ. CSA ಹೊರತಾಗಿ ಬೇರೆ ಸಂಸ್ಥೆಗಳು ತಮ್ಮ ಪರಿಣಿತ ವಿಷಯಗಳಲ್ಲಿನ ತರಬೇತಿಯನ್ನು ಈ ವೇದಿಕೆಯಲ್ಲಿ ನಡೆಸಬಹುದು.

ಜಾಗತಿಕವಾಗಿ ವಿವಿಧ ವಿಶ್ವವಿದ್ಯಾನಿಲಯಗಳ ಸಹಭಾಗಿತ್ವದಲ್ಲಿ ಕೃಷಿ ಪರಿಸರದಲ್ಲಿ ಔಪಚಾರಿಕ ಶಿಕ್ಷಣವನ್ನು ಆರಂಭಿಸಲು CSA ಕೃಷ್ಣ ಸುಧಾ ಅಕಾಡೆಮಿ ಆಫ್ ಆಗ್ರೋ ಇಕಾಲಜಿಯನ್ನು ಆರಂಭಿಸಿದೆ. ಸಾವಯವ/ನೈಸರ್ಗಿಕ ಕೃಷಿ, ಗ್ರಾಮೀಣ ಜೀವನೋಪಾಯಗಳು, ಎಫ್‌ಪಿಒಗಳು, ಸಂಶೋಧನೆ ಮತ್ತು ಪರಸ್ಪರ ಆಸಕ್ತಿಯ ಇತರ ಕ್ಷೇತ್ರಗಳ ಕುರಿತು ಜಂಟಿಯಾಗಿ ಕೋರ್ಸ್‌ಗಳನ್ನು ನೀಡಲು ಸೆಂಚುರಿಯನ್ ವಿಶ್ವವಿದ್ಯಾಲಯದೊಂದಿಗೆ CSA ಒಪ್ಪಂದ ಮಾಡಿಕೊಂಡಿದೆ. CSA ತಾನು ನೀಡುವ ಕೋರ್ಸ್‌ಗಳಿಗೆ ವಿಷಯವನ್ನು ಅಭಿವೃದ್ಧಿಪಡಿಸುತ್ತದೆ, ಸಾವಯವ ಕೃಷಿ/ನೈಸರ್ಗಿಕ ಕೃಷಿ, FPOಗಳು, ನೀತಿ ಸಮಸ್ಯೆಗಳು ಇತ್ಯಾದಿಗಳ ಕುರಿತು ಶಿಕ್ಷಕರಿಗೆ ತರಬೇತಿ ನೀಡುತ್ತದೆ.

ಉಪಸಂಹಾರ

ಕೃಷಿ ಪರಿಸರ ಶಿಕ್ಷಣದ ಮುಖ್ಯ ಉದ್ದೇಶ ಸ್ಥಳೀಯ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು ರೈತ ಸಮುದಾಯದ ಪ್ರಸ್ತುತ ಅಗತ್ಯಗಳು ಮತ್ತು ಭವಿಷ್ಯದ ಅಗತ್ಯಗಳನ್ನು ಪರಿಹರಿಸುವಲ್ಲಿ ಸೂಕ್ತವಾದ ಕೃಷಿ ಪರಿಸರ ವಿಧಾನಗಳನ್ನು ಸೂಚಿಸುವುದು. ಲೈಬಿಗ್‌ನ ಬ್ಯಾರೆಲ್‌ನಂತೆ, ಪ್ರಸ್ತುತ ಇರುವ ಸಮಸ್ಯೆಯನ್ನು ಪರಿಹರಿಸಿದರೆ, ಮತ್ತೆ ಕೃಷಿ ಸಮುದಾಯಗಳ ಪ್ರಮುಖ ಸಮಸ್ಯೆಯಾಗಬಹುದಾದ ಮತ್ತೊಂದು ಸಮಸ್ಯೆ ಉದ್ಭವಿಸಬಹುದು. ಸಮಸ್ಯೆಗಳು ಕಾಲದೊಂದಿಗೆ ಬದಲಾಗುತ್ತವೆ. ಹಾಗಾಗಿ ಹಾಗಾಗಿ ರೈತ ಸಮುದಾಯಗಳ ಅಗತ್ಯಕ್ಕೆ ಸಂಸ್ಥೆಗಳು ಬದಲಾಗಬೇಕು. ಕಲಿಕೆಯ ಆಧಾರದ ಮೇಲೆ ವಿಷಯ ಮತ್ತು ಸೂಕ್ತವಾದ ಸಂಪನ್ಮೂಲ ಸಾಮಗ್ರಿಗಳನ್ನು ಸಮಯೋಚಿತವಾಗಿ ನವೀಕರಿಸುವುದು ಕೃಷಿ ಪರಿಸರ ಶಿಕ್ಷಣದಲ್ಲಿ ಪ್ರಮುಖ ಅಂಶಗಳಾಗಿವೆ. ಜೊತೆಗೆ, ಸ್ಥಳೀಯ ಕೃಷಿ ಪರಿಸರ ವ್ಯವಸ್ಥೆಗೆ ನಿರ್ದಿಷ್ಟವಾದ ಸ್ಥಳೀಯ ಪರಿಹಾರಗಳನ್ನು ಅಭಿವೃದ್ಧಿಪಡಿಸಲು ಶಿಕ್ಷಣ ಪ್ರಕ್ರಿಯೆಯಲ್ಲಿ ತಾಂತ್ರಿಕವಾಗಿ, ವಿಸ್ತರಣೆಯಾಗಿ ಮತ್ತು ಹೊಸ ಪಾಲುದಾರರಾಗಿ ರೈತರನ್ನು ಒಳಗೊಳ್ಳುವುದು ಅತ್ಯಗತ್ಯ.

ಜಿ. ಚಂದ್ರಶೇಖರ್‌, ಜಿ. ರಾಜಶೇಖರ್‌ ಮತ್ತು ಜಿ.ವಿ ರಾಮಾಂಜನೆಯಲು


G Chandra Sekhar, G. Rajashekar and G V Ramanjaneyulu

Centre for Sustainable Agriculture

H. No. 12-13-568, Nagarjuna Nagar, Street No 14, Lane No.10,

Tarnaka, Secunderabad – 500017

Email: sekhar@csa-india.org

ಆಂಗ್ಲ ಮೂಲ : ಲೀಸಾ ಇಂಡಿಯಾ; ಸಂಪುಟ :೨೪; ಸಂಚಿಕೆ : ‌೨ ; ಜೂನ್‌ ೨೦‌೨೨

Recent Posts

ಕೃಷಿಯಲ್ಲಿ ನೀರಿನ ಸಮರ್ಥ ಬಳಕೆಗಾಗಿ ಕಾಲುವೆ ಯಾಂತ್ರೀಕರಣ

ಕೃಷಿಯಲ್ಲಿ ನೀರಿನ ಸಮರ್ಥ ಬಳಕೆಗಾಗಿ ಕಾಲುವೆ ಯಾಂತ್ರೀಕರಣ

ನಮ್ಮ ನೀರಾವರಿ ವ್ಯವಸ್ಥೆಯನ್ನು 21ನೇ ಶತಮಾನದ ಬೇಡಿಕೆಗಳಿಗೆ ಹೊಂದುವಂತೆ ಮಾಡುವುದು ನಮ್ಮ ಮುಂದಿರುವ ನಿಜವಾದ ಸವಾಲಾಗಿದೆ. ತಂತ್ರಜ್ಞಾನವೇ...