ಕೇರಳದ ನಗರಗಳಲ್ಲಿ ಮನೆ ಕೈತೋಟದ ಚಳುವಳಿ ಸಾಮಾಜಿಕ ಮಾಧ್ಯಮಗಳ ಪಾತ್ರ


ನಗರಗಳಲ್ಲಿ ಮನೆ ಕೈತೋಟಗಳು, ಖಾಸಗಿ ವಸತಿ ಸ್ಥಳಗಳಿಗೆ ಸೀಮಿತವಾಗಿದೆ. ಇದನ್ನು ವಿಸ್ತರಿಸಿದರೆ ನಗರಕ್ಕೆ ಆಹಾರ ಪೂರೈಸುವ ಸಾಮರ್ಥ್ಯವನ್ನು ಹೊಂದಿದೆ. ಕೇರಳದಲ್ಲಿ, ಸರ್ಕಾರದ ಮಧ್ಯಸ್ಥಿಕೆ ಮತ್ತು ಜನರ ಸಾಮಾಜಿಕ ಮಾಧ್ಯಮ ಆಧಾರಿತ ಉಪಕ್ರಮದಿಂದ ಬೆಂಬಲಿತವಾದ ನಗರಗಳ ಮನೆ ಕೈತೋಟಗಾರಿಕೆಯು ವ್ಯಾಪಕ ಸಾಮಾಜಿಕ ಚಳುವಳಿಯಾಗಿದೆ.


ಗ್ರಾಮ-ನಗರಗಳು ಹೊಂದಿಕೊಂಡಂತಿರುವ ಕೇರಳ ರಾಜ್ಯವು, ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ತೋಟಗಳಿಂದ ಕೈತೋಟಗಳಿಗೆ ತರಕಾರಿ ಉತ್ಪಾದನೆಯನ್ನು ವಿಸ್ತರಿಸುವ ಮೂಲಕ ಕೃಷಿ ವಿಸ್ತರಣೆಯಲ್ಲಿ ತನ್ನ ಭೌಗೋಳಿಕ ಮತ್ತು ಪ್ರಾದೇಶಿಕ ಮಿತಿಗಳನ್ನು ಮೀರುತ್ತಿದೆ. 2012 ರಿಂದ, ಕೇರಳ ರಾಜ್ಯ ಸರ್ಕಾರವು ‘ತರಕಾರಿ ಅಭಿವೃದ್ಧಿ ಕಾರ್ಯಕ್ರಮ’ (VDP) ಮೂಲಕ ರಾಜ್ಯದಲ್ಲಿ ತರಕಾರಿ ಉತ್ಪಾದನೆಗೆ ಬಜೆಟ್ ಹಂಚಿಕೆಯಲ್ಲಿ ಭಾರಿ ಏರಿಕೆ ಮಾಡಿದೆ. VDP ಗಾಗಿ ಒಟ್ಟು ವಾರ್ಷಿಕ ಬಜೆಟ್‌ ಹಂಚಿಕೆಯ ಸುಮಾರು 10 ಪ್ರತಿಶತದಷ್ಟು ನೀಡುವ ಮೂಲಕ ನಗರದ ಮನೆ ಕೈತೋಟಗಾರಿಕೆಯು ಪ್ರಮುಖ ಸ್ಥಾನವನ್ನು ಪಡೆಯಿತು. ತರಕಾರಿ ಉತ್ಪಾದನೆಯನ್ನು ಬಳಕೆಯಾಗದ ಸ್ಥಳಗಳಿಗೆ ಅಂದರೆ ಮನೆಗಳು, ಶಾಲೆಗಳು ಮತ್ತು ಇತರ ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳಿಗೆ ವಿಸ್ತರಿಸುವುದು ಪ್ರಮುಖ ಕಾರ್ಯತಂತ್ರಗಳಲ್ಲಿ ಒಂದಾಗಿದೆ.

ಬೆಂಬಲವು ವಿವಿಧ ತರಕಾರಿ ಸಸಿಗಳನ್ನು ನೆಟ್ಟಿರುವ ಗ್ರೋ ಬ್ಯಾಗುಗಳ ಸಬ್ಸಿಡಿ (75% ಸಬ್ಸಿಡಿ) ವಿತರಣೆಯನ್ನು ಒಳಗೊಂಡಿತ್ತು, ಫಲಾನುಭವಿಗಳು ತಾರಸಿಯಲ್ಲಿ, ಬಾಲ್ಕನಿಗಳಲ್ಲಿ ರೂ.500 ಕ್ಕಿಂತ ಕಡಿಮೆ ವೆಚ್ಚದಲ್ಲಿ ನಗರದಲ್ಲಿ ಮನೆ ಕೈತೋಟವನ್ನು ಬೆಳೆಸಲು ಅನುವು ಮಾಡಿಕೊಡುತ್ತದೆ. ಕಡಿಮೆ ತೂಕದ ಗ್ರೋ ಬ್ಯಾಗ್‌ಗಳ ವಿನ್ಯಾಸ ಮತ್ತು ಅದರೊಳಗೆ ಮಣ್ಣಿನ ಮಿಶ್ರಣದಲ್ಲಿ ತೆಂಗಿನನಾರಿನ ಬಳಕೆಯು ಕಂಟೇನರ್‌ಗಳ ತೂಕವನ್ನು ಕಡಿಮೆ ಮಾಡಲು ಕೊಡುಗೆ ನೀಡಿದೆ. ಇದರಿಂದಾಗಿ ಮನೆಯ ತಾರಸಿಗೆ ಹಾನಿಯಾಗುವ ಆತಂಕವನ್ನು ಕಡಿಮೆಮಾಡುತ್ತದೆ. ಸರ್ಕಾರದ ಸಬ್ಸಿಡಿಯು (50%-75% ವರೆಗೆ) ಜೈವಿಕ ನಿಯಂತ್ರಣ ಏಜೆಂಟ್‌ಗಳು ಮತ್ತು ಸಾವಯವ ಕೀಟನಾಶಕಗಳು, ನೀರು ಉಳಿಸುವ ತಂತ್ರಜ್ಞಾನಗಳಾದ ವಿಕ್‌, ಹನಿ ನೀರಾವರಿ ಮತ್ತು ದೇಶೀಯ ತ್ಯಾಜ್ಯ ನಿರ್ವಹಣಾ ಘಟಕಗಳು (ಪೈಪ್ ಕಾಂಪೋಸ್ಟ್‌ಗಳು, ಪೋರ್ಟಬಲ್ ಜೈವಿಕ ಅನಿಲ ಸ್ಥಾವರಗಳು ಇತ್ಯಾದಿ) ನಂತಹ ವಿವಿಧ ಪರಿಸರ ಸ್ನೇಹಿ ಒಳಸುರಿಯುವಿಕೆಗಳನ್ನು ಸಹ ಬೆಂಬಲಿಸುತ್ತದೆ. ಮನೆಯ ತ್ಯಾಜ್ಯಗಳ ಮರುಬಳಕೆಗೆ ಅನುವು ಮಾಡಿಕೊಡುತ್ತದೆ. ಸಬ್ಸಿಡಿ ನೀಡಲಾದ ಒಳಸುರಿಯುವಿಕೆಗೆ ಸೂಕ್ತವಾದ ಸಾಂಸ್ಥಿಕ ಕಾರ್ಯವಿಧಾನಗಳು ಪೂರಕವಾಗಿದೆ – ಸ್ಥಳ ಉಳಿತಾಯ, ಸಂಪನ್ಮೂಲದ ಪರಿಣಾಮಕಾರಿ ಕೃಷಿ ವಿಧಾನಗಳ ಅಭಿವೃದ್ಧಿಗಾಗಿ ಸರ್ಕಾರಿ ಸಂಶೋಧನಾ ಸಂಸ್ಥೆಗಳು; ಕೃಷಿ ಭವನಗಳಿಂದ ವಿಸ್ತರಣಾ ಸೇವೆಗಳು; ತರಬೇತಿ ಕಾರ್ಯಕ್ರಮಗಳು ಮತ್ತು ತೋಟಗಾರಿಕೆ ಒಳಹರಿವು ಮತ್ತು ತಂತ್ರಜ್ಞಾನಗಳ ಸುಲಭ ಮತ್ತು ಕೈಗೆಟುಕುವ ರೀತಿಯಲ್ಲಿ ಒದಗಿಸಲು ನಗರ ಕೃಷಿ-ಸೇವಾ ಕೇಂದ್ರಗಳ ಸ್ಥಾಪನೆ. ಸಾಂಪ್ರದಾಯಿಕ ಹಬ್ಬಗಳಾದ ಓಣಂ ಮತ್ತು ವಿಷುಗಳೊಂದಿಗೆ ಕೈ ತೋಟದ ತರಕಾರಿ ಉತ್ಪಾದನೆಗೆ ಸಾಂಸ್ಕೃತಿಕ ಆಯಾಮವನ್ನು ನೀಡಲಾಯಿತು.

ಗಿಡಗಳನ್ನು ಬೆಳೆಯಲು ಮರುಬಳಕೆ ಮಾಡಿದ ಕ್ಯಾನುಗಳು

ಸರ್ಕಾರವು ಸಬ್ಸಿಡಿ ನೀಡುವ ಮೂಲಕ ಪರಿಸರ ಸ್ನೇಹಿ ಒಳಸುರಿಯುವಿಕೆಗಳನ್ನು ಒದಗಿಸಿತು ಮತ್ತು ಉಪಕ್ರಮಗಳನ್ನು ಬೆಂಬಲಿಸಲು ಸಾಂಸ್ಥಿಕ ಕಾರ್ಯವಿಧಾನಗಳನ್ನು ರೂಪಿಸಿತು.

ಸರ್ಕಾರದ ಹಸ್ತಕ್ಷೇಪಕ್ಕೆ ಜನರ ಪ್ರತಿಕ್ರಿಯೆ

ಈ ಕೆಳಗಿನ ಅವಲೋಕನಗಳು ವಿವಿಧ ಸರ್ಕಾರಿ ದಾಖಲೆಗಳ ಪರಿಶೀಲನೆ, ಸುದ್ದಿ ವರದಿಗಳು, ತಿರುವನಂತಪುರಂ ಕಾರ್ಪೊರೇಷನ್‌ನಲ್ಲಿ ನಡೆಸಿದ ಮನೆಗಳ ಸಮೀಕ್ಷೆ ಮತ್ತು ಕೇರಳದ ವಿವಿಧ ಎಫ್‌ಬ್ಯಾಗ್ರಿಕಲ್ಚರ್ ಗುಂಪುಗಳಲ್ಲಿ ಹೋಪ್ ಫೌಂಡೇಶನ್‌ ವತಿಯಿಂದ ತ್ರಿಶೂರ್‌ನಲ್ಲಿ ಆಯೋಜಿಸಲಾದ ಭೌತಿಕ ಸಭೆಯ ಭಾಗವಹಿಸಿದವರಲ್ಲಿ ನಡೆಸಿದ ಪ್ರಶ್ನಾವಳಿ ಸಮೀಕ್ಷೆಯನ್ನು ಆಧರಿಸಿದೆ.

ತಿರುವನಂತಪುರಂ ಕಾರ್ಪೊರೇಷನ್‌ನಲ್ಲಿ ನಡೆಸಿದ ಪ್ರಾಥಮಿಕ ಸಮೀಕ್ಷೆಯಲ್ಲಿ ಅನೇಕ ನಗರ ನಿವಾಸಿಗಳಿಗೆ ಕೈತೋಟವನ್ನು ಪ್ರಾರಂಭಿಸಲು ಸರ್ಕಾರದ ಮಧ್ಯಸ್ಥಿಕೆಗಳು ಸಹಕಾರಿಯಾಗಿದೆ ಎನ್ನುವುದು ತಿಳಿದುಬಂದಿದೆ. ಸಾಂಪ್ರದಾಯಿಕ ಪದ್ಧತಿಯನ್ನು ಪುನರುಜ್ಜೀವನಗೊಳಿಸುವುದರ ಜೊತೆಗೆ, ಸಬ್ಸಿಡಿ ಬೆಂಬಲದೊಂದಿಗೆ, ಕಡಿಮೆ ಹಣಕಾಸಿನ ಹೂಡಿಕೆಯೊಂದಿಗೆ ತಮ್ಮ ಮನೆಗಳಲ್ಲಿ ತರಕಾರಿ ತೋಟಗಾರಿಕೆಯನ್ನು ತ್ವರಿತವಾಗಿ ಅಳವಡಿಸಿಕೊಳ್ಳುವುದು ಜನರಿಗೆ ಸುಲಭವಾಯಿತು. ಮನೆಯಲ್ಲಿ ಬೆಳೆದ ತರಕಾರಿಗಳ ಬಗ್ಗೆ ಜನರಲ್ಲಿ ಆಸಕ್ತಿ ಹುಟ್ಟಲು ಮತ್ತೊಂದು ಪ್ರಮುಖ ಕಾರಣವೆಂದರೆ ಆರೋಗ್ಯದ ಬಗೆಗಿನ ಕಾಳಜಿ. ‘ಸಾವಯವ’ ಎಂದು ಮಾರಾಟವಾಗುವ ತರಕಾರಿಗಳು ಸೇರಿದಂತೆ ವಾಣಿಜ್ಯಿಕವಾಗಿ ಲಭ್ಯವಿರುವ ತರಕಾರಿಗಳಲ್ಲಿ ಅಪಾಯಕಾರಿ ಕೀಟನಾಶಕಗಳ ಅವಶೇಷಗಳು ಉಳಿದಿರುವುದರ ಬಗ್ಗೆ ಮೂಡಿದ ಜಾಗೃತಿ. ಕೇರಳದ ಕೃಷಿ ವಿಶ್ವವಿದ್ಯಾಲಯವು 2013 ರಿಂದ ಮುದ್ರಣ ಮತ್ತು ದೃಶ್ಯ ಮಾಧ್ಯಮಗಳಲ್ಲಿ ಮೂಲಕ ಪ್ರಚುರ ಪಡಿಸಿದ ಫಲಿತಾಂಶಗಳು ಜಾಗೃತಿ ಮೂಡಿಸಲು ಸಹಾಯ ಮಾಡಿತು. ಎಂಡೋಸಲ್ಫಾನ್ ಕೀಟನಾಶಕ ದುರಂತದ ನೆನಪುಗಳು, ಹೆಚ್ಚುತ್ತಿರುವ ಕ್ಯಾನ್ಸರ್ ಪ್ರಮಾಣವು ಪರ್ಯಾಯ ಆಯ್ಕೆಗಳ ಬಗ್ಗೆ ಜನ ಆಲೋಚಿಸುವಂತೆ ಮಾಡಿತು.  ಈ ಸಂದರ್ಭದಲ್ಲಿ, ಸಾವಯವ ಮತ್ತು ಕೃಷಿ ಪರಿಸರಾತ್ಮಕ ವಿಧಾನವನ್ನು ಅಳವಡಿಸಿಕೊಂಡು ಮನೆಯ ಕೈತೋಟದಲ್ಲಿ ತರಕಾರಿ ಉತ್ಪಾದನೆಯು ಅತ್ಯುತ್ತಮ ಆಯ್ಕೆಯಾಗಿದೆ.

ಸಾಮಾಜಿಕ ಮಾಧ್ಯಮಗಳು, ವಿಶೇಷವಾಗಿ ಸ್ಥಳೀಯ ಭಾಷೆಯಾದ ಮಲಯಾಳಂನಲ್ಲಿ ರಚಿಸಲಾದ ಫೇಸ್‌ಬುಕ್ ಗುಂಪುಗಳು ಕೇರಳದಲ್ಲಿ ಈ ಕೈ ತೋಟಗಾರಿಕೆ ಪದ್ಧತಿಗಳನ್ನು ಜನಪ್ರಿಯಗೊಳಿಸಲು ವೇದಿಕೆಯಾಗಿ ಮಾರ್ಪಟ್ಟಿವೆ. ಬಹುಬೇಗ, ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಕೈತೋಟಗಾರಿಕೆ ಸಾಮಾಜಿಕ ಆಂದೋಲನವಾಯಿತು.

ಹೀಗಾಗಿ, ಕೇರಳದಲ್ಲಿ, ಮನೆ ಕೈತೋಟದ ಚಳುವಳಿಯು ಕೃಷಿಪರಿಸರ ಆಯ್ಕೆಗಳ ಕುರಿತಾದ ಜಾಗೃತಿ ಮತ್ತು ಸರ್ಕಾರದ ಸಾವಯವ ಕೃಷಿ ನೀತಿ (2010) ಹಾಗೂ ಬೆಂಬಲಿತ ಮಧ್ಯಸ್ಥಿಕೆಗಳೊಂದಿಗೆ ಸ್ವಾವಲಂಬಿ ತರಕಾರಿ ಉತ್ಪಾದನೆ ಮತ್ತು ಅಳವಡಿಕೆಯು ಆರಂಭಗೊಂಡಿತು.

ಸಾಮಾಜಿಕ ಮಾಧ್ಯಮಗಳು, ವಿಶೇಷವಾಗಿ ಸ್ಥಳೀಯ ಭಾಷೆಯಾದ ಮಲಯಾಳಂನಲ್ಲಿ ರಚಿಸಲಾದ ಫೇಸ್‌ಬುಕ್ ಗುಂಪುಗಳು ಕೇರಳದಲ್ಲಿ ಈ ಕೈ ತೋಟಗಾರಿಕೆ ಪದ್ಧತಿಗಳನ್ನು ಜನಪ್ರಿಯಗೊಳಿಸಲು ವೇದಿಕೆಯಾಗಿ ಮಾರ್ಪಟ್ಟಿವೆ. ಬಹುಬೇಗ, ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಕೈತೋಟಗಾರಿಕೆ ಸಾಮಾಜಿಕ ಆಂದೋಲನವಾಯಿತು.

ಹೀಗಾಗಿ, ಕೇರಳದಲ್ಲಿ, ಮನೆ ಕೈತೋಟದ ಚಳುವಳಿಯು ಕೃಷಿಪರಿಸರ ಆಯ್ಕೆಗಳ ಕುರಿತಾದ ಜಾಗೃತಿ ಮತ್ತು ಸರ್ಕಾರದ ಸಾವಯವ ಕೃಷಿ ನೀತಿ (2010) ಹಾಗೂ ಬೆಂಬಲಿತ ಮಧ್ಯಸ್ಥಿಕೆಗಳೊಂದಿಗೆ ಸ್ವಾವಲಂಬಿ ತರಕಾರಿ ಉತ್ಪಾದನೆ ಮತ್ತು ಅಳವಡಿಕೆಯು ಆರಂಭಗೊಂಡಿತು.

ಸಾಮಾಜಿಕ ಮಾಧ್ಯಮ ಸಂಪರ್ಕಜಾಲ ನಿರ್ಮಾಣ

ಸಾಮಾಜಿಕ ಮಾಧ್ಯಮ ವೇದಿಕೆಯಾದ ಫೇಸ್‌ಬುಕ್‌ ಅನ್ನು ಸಮಾನ ಆಸಕ್ತರ ನಡುವೆ ಸಂಪರ್ಕ ಸಾಧಿಸಲು ಬಳಸಲಾಗುತ್ತದೆ. ಸಕ್ರಿಯವಾಗಿರುವ ಮಲೆಯಾಳಂ ಕೃಷಿ ಎಫ್‌ಬಿ ಗುಂಪುಗಳಲ್ಲಿ ಹತ್ತಕ್ಕಿಂತ ಹೆಚ್ಚು ಮಂದಿ ಮುಖ್ಯವಾಗಿ ಮನೆಗಳಲ್ಲಿನ ಕೈತೋಟ ಕೃಷಿಯ ಕುರಿತು ಆಸಕ್ತರಾಗಿದ್ದಾರೆ. ಈ ಸಮೂಹಗಳ ನಿರ್ದಿಷ್ಟ ಉದ್ದೇಶಗಳು ಬದಲಾಗುತ್ತವೆಯಾದರೂ, ಈ ಸಮೂಹಗಳಲ್ಲಿ ಹೆಚ್ಚಿನವು ಸಮಾನ ನೆಲೆಯದಾಗಿರುತ್ತದೆ – ತರಕಾರಿಗಳು ಮತ್ತು ಹಣ್ಣುಗಳ ಕೃಷಿ-ಆಧಾರಿತ ಮನೆ ತೋಟದ ಕೃಷಿಯ ಮೂಲಕ ಆರೋಗ್ಯಕರ ತಿನ್ನುವ ಅಭ್ಯಾಸವನ್ನು ನಿರ್ಮಿಸುತ್ತವೆ. ಈ ಸಮೂಹಗಳಲ್ಲಿ ಹೆಚ್ಚಿನವು ಗ್ರಾಮೀಣ ಮತ್ತು ನಗರ ಮನೆ ತೋಟಗಳಿಗೆ ತಮ್ಮ ಬೆಂಬಲವನ್ನು ನೀಡುತ್ತವೆ. ಆದರೆ ಸ್ಥಳ ಮತ್ತು ಸಂಪನ್ಮೂಲ ನಿರ್ಬಂಧಗಳಿರುವುದರಿಂದ ನಗರ ನಿವಾಸಿಗಳಿಗೆ ಹೆಚ್ಚಿಗೆ ಪ್ರಯೋಜನಕಾರಿಯಾಗಿದೆ. ಕೆಲವು FB ಗುಂಪುಗಳು ಪ್ರಾಥಮಿಕವಾಗಿ ನಗರದ ಮನೆಯ ಕೈತೋಟ ಮಾಡುವವರಿಗೆ ನೆರವು ನೀಡಲು ಉದ್ದೇಶಿಸಿವೆ. ಕೆಲವು ಸಮೂಹಗಳು ಮುಖ್ಯವಾಗಿ ಕೈತೋಟಗಳಲ್ಲಿ ಬೆಳೆದ ಬೆಳೆಗಳ ಮಾರಾಟ ಮಾಡಲು ಅವಕಾಶ ಒದಗಿಸುತ್ತವೆ. ಕೋವಿಡ್‌-೧೯ ಸಾಂಕ್ರಾಮಿಕ ಕಾಲಿಡುವವರೆಗೂ ಈ ಗುಂಪುಗಳು ವಾರ್ಷಿಕವಾಗಿ ಮುಖಾಮುಖಿ ಭೇಟಿಯಾಗುವ ಸಂಪರ್ಕಗಳನ್ನು ಬಲಪಡಿಸಿಕೊಳ್ಳುವ ಕಾರ್ಯಕ್ರಮಗಳನ್ನು ಆಯೋಜಿಸುತ್ತಿತ್ತು.

ಕೋಷ್ಟಕ : ಲಕ್ಷಕ್ಕಿಂತ ಹೆಚ್ಚು ಸದಸ್ಯರನ್ನು ಹೊಂದಿರುವ FB ಕೃಷಿಗುಂಪುಗಳ ಪಟ್ಟಿ

FB ಗುಂಪು ೩೧ ಜನವರಿ ೨೦೨೨ರವರೆಗಿನ ಸದಸ್ಯತ್ವ ಆರಂಭವಾದ ವರ್ಷ
ಕೃಷಿ 454743 2014
ನಮ್ಮುಡೆ ಅಡುಕ್ಕಾಲತೋಟಂ (ನಮ್ಮಅಡುಗೆಮನೆ ಕೈತೋಟ) 409613 2014
ಕೃಷಿಭೂಮಿ 391139 2014
ಕರ್ಶಿಕ ವೈಪಾನಿ (ಆನ್‌ಲೈನ್‌ ಸಾವಯವ ಕೃಷಿ ಮಾರುಕಟ್ಟೆ) 153532 2014
ಅಡುಕ್ಕಾಲತೋಟಂ (ಅಡುಗೆಮನೆ ಕೈತೋಟ) 137333 2016

ಪರಸ್ಪರರಿಂದ ಕಲಿಕೆ

ಕೈ ತೋಟಗಳನ್ನು ಪ್ರಾರಂಭಿಸುವ ಆರಂಭಿಕ ಹಂತದಲ್ಲಿ ಅನೇಕ ಜನರು ಎದುರಿಸಿದ ಸವಾಲುಗಳಲ್ಲಿ ಒಂದು, ತೋಟಗಾರಿಕೆ-ಸಂಬಂಧಿತವಾಗಿ ಅವರಿಗೆ ಎದುರಾಗುವ ಪ್ರಶ್ನೆಗಳನ್ನು ತ್ವರಿತವಾಗಿ ಪರಿಹರಿಸಲು ಬೆಂಬಲ ವ್ಯವಸ್ಥೆಯ ಕೊರತೆ. ಫೇಸ್‌ಬುಕ್ ಗುಂಪುಗಳು ಅವರಲ್ಲಿ ಅನೇಕರಿಗೆ ಅನುಕೂಲಕರ ಆಯ್ಕೆಯಾಗಿ ಬೆಳೆದಿವೆ. ಏಕೆಂದರೆ ಇದು ಅವರ ಕೆಲಸದ ಸಮಯದ ಮೇಲೆ ಪರಿಣಾಮ ಬೀರಲಿಲ್ಲ. ಇದರಿಂದಾಗುವ ಮತ್ತೊಂದು ಅನುಕೂಲವೆಂದರೆ ಅವರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಲು ವಿಜ್ಞಾನಿಗಳು ಮತ್ತು ಪರಿಣಿತ ಕೈತೋಟ ಕೃಷಿಕರು ಸೇರಿದಂತೆ ತರಬೇತಿ ಪಡೆದ ಕೃಷಿ ಸಿಬ್ಬಂದಿಗಳಂತಹ ತಜ್ಞರು ಇರುತ್ತಾರೆ.  ಈ ಗುಂಪುಗಳು ಬಹುಬೇಗ ಪರಸ್ಪರರ ಜ್ಞಾನ ಮತ್ತು ಅನುಭವದಿಂದ ಕಲಿಯುವ ವೇದಿಕೆಯಾಯಿತು. ಕೈ ತೋಟಗಾರಿಕೆಯ ಬಹುತೇಕ ಎಲ್ಲಾ ಅಂಶಗಳಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ಈ ಗುಂಪುಗಳಲ್ಲಿ ಪೋಸ್ಟ್ ಮಾಡಲಾಗುತ್ತದೆ. ಅದಕ್ಕೆ ತ್ವರಿತವಾಗಿ ಪ್ರತಿಕ್ರಿಯೆಗಳನ್ನು ಪಡೆಯುತ್ತಾರೆ. ಸಾಮಾನ್ಯವಾಗಿ ಈ ಚರ್ಚೆಗಳಲ್ಲಿ ಕೃಷಿ ಪರಿಸರ ವಿಧಾನಗಳು, ಬೆಳೆ ನಿರ್ವಹಣೆಗಾಗಿ ಮನೆಯಲ್ಲೇ ಕಂಡುಕೊಳ್ಳಬಹುದಾದ ಪರಿಹಾರಗಳ ಅಭಿವೃದ್ಧಿ ಮತ್ತು ಕ್ರಿಯಾತ್ಮಕವಾಗಿ ಸ್ಥಳವನ್ನು ಬಳಸುವುದು ಮತ್ತು ಸಂಪನ್ಮೂಲ ಉಳಿಸುವ ಕೃಷಿ ವಿಧಾನಗಳ ಕುರಿತ ಚರ್ಚೆಗಳು ಸೇರಿವೆ. ಬೆಳೆಗಳು ಅಥವಾ ತೋಟಗಾರಿಕೆ ವಿಧಾನಗಳ ಫೋಟೋಗಳು ಮತ್ತು ವೀಡಿಯೊಗಳ ಬಳಕೆಯು ವಿಷಯದ ಉತ್ತಮ ಗ್ರಹಿಕೆಯನ್ನು ಪಡೆಯಲು ಸಹಾಯ ಮಾಡಿತು. ನಗರದ ಕೈತೋಟದ ಕೃಷಿಕರಿಗೆ ಕ್ಷೇತ್ರ ಭೇಟಿಗಳು ಹೊಸ ಕೃಷಿಕ ಅಭ್ಯಾಸಗಳು ಮತ್ತು ತಂತ್ರಜ್ಞಾನಗಳನ್ನು ಕಲಿಯಲು ಸಹಾಯ ಮಾಡಿದೆ. ತೋಟಗಾರಿಕೆಯ ಮೂಲಭೂತ ಅಂಶಗಳನ್ನು ತಿಳಿದುಕೊಳ್ಳಲು, ಬಾಹ್ಯ ಒಳಸುರಿಯುವಿಕೆಯ ಮೇಲೆ ಕಡಿಮೆ ಅವಲಂಬನೆ, ಕಡಿಮೆ ವೆಚ್ಚದ ತೋಟಗಾರಿಕೆಯನ್ನು ಅಳವಡಿಸಿಕೊಳ್ಳುವುದು, ಲಭ್ಯವಿರುವ ಜಾಗವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವಲ್ಲಿ ಈ ಗುಂಪುಗಳು ಹೊಸಬರಿಗೆ ಬಹಳಷ್ಟು ಸಹಾಯ ಮಾಡುತ್ತವೆ.

ನಗರ ಪ್ರದೇಶಗಳಲ್ಲಿ ಮನೆ ಕೈತೋಟಗಾರಿಕೆ ಆಂದೋಲನವು ಹೆಚ್ಚಾಗಿ ಸ್ಥಳವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ಸಮರ್ಥ ಮನೆಯ ಕೈತೋಟಗಾರಿಕೆಯ ಅಭ್ಯಾಸಗಳ ನವೀನ ತಂತ್ರಜ್ಞಾನಗಳ ಅಭಿವೃದ್ಧಿಗೆ ವೇದಿಕೆಯನ್ನು ಪ್ರಚೋದಿಸಿತು. ಈ ತಂತ್ರಜ್ಞಾನಗಳು ಮತ್ತು ವಿಧಾನಗಳನ್ನು ಅಭಿವೃದ್ಧಿಪಡಿಸಿದ ಅನೇಕರು ತಮ್ಮ ಆಲೋಚನೆಗಳನ್ನು FB ಗುಂಪುಗಳ ಮೂಲಕ ಹಂಚಿಕೊಂಡಿದ್ದಾರೆ. ಇತರರು ಈ ಗುಂಪುಗಳಿಂದ ತಮ್ಮ ತಂತ್ರಜ್ಞಾನಗಳ ಖರೀದಿದಾರರನ್ನು ಕಂಡುಕೊಂಡಿದ್ದಾರೆ.

ಸ್ಪರ್ಧಾತ್ಮಕತೆ ಮತ್ತು ಅಂಗೀಕಾರವನ್ನು ಬೆಳೆಸುವುದು

COVID ಸಾಂಕ್ರಾಮಿಕ ರೋಗವು ಪ್ರಾರಂಭವಾಗುವುದಕ್ಕಿಂತ ಮೊದಲು, ಮನೆ ಕೈತೋಟಗಾರಿಕೆಯನ್ನು ಉತ್ತೇಜಿಸಲು ಸ್ಪರ್ಧೆಗಳ ಆಯೋಜನೆ ಮತ್ತು ಸವಾಲುಗಳನ್ನು ಎದುರಿಸುವಲ್ಲಿ ಅನೇಕ FB ಗುಂಪುಗಳು ಹೆಚ್ಚು ಸಕ್ರಿಯವಾಗಿದ್ದವು. ಈ ಉಪಕ್ರಮಗಳು ವೈವಿಧ್ಯಮಯವಾಗಿದ್ದವು. ಲಭ್ಯವಿರುವ ಸೀಮಿತ ಸ್ಥಳಗಳಲ್ಲಿ ಸಾವಯವವಾಗಿ ವೈವಿಧ್ಯಮಯ ತರಕಾರಿ ತಳಿಗಳನ್ನು ಗರಿಷ್ಠವಾಗಿ ಬೆಳೆಸುವ ಹೊಸ ಬಗೆಯ ಮನೆ ಕೈತೋಟದ ಅಭ್ಯಾಸಗಳನ್ನು ಉತ್ತೇಜಿಸುವತ್ತ ಅವರೆಲ್ಲರೂ ಗಮನಹರಿಸಿದ್ದಾರೆ. ಸ್ಪರ್ಧೆ/ಸವಾಲಿನ ಅವಧಿಯಲ್ಲಿ, ಭಾಗವಹಿಸುವವರು ಬಿತ್ತನೆಯ ದಿನದಿಂದ ಸುಗ್ಗಿಯವರೆಗಿನ ತರಕಾರಿ ಕೃಷಿಯ ವಿವರಣೆಯೊಂದಿಗೆ ಫೋಟೋಗಳನ್ನು ಅಪ್‌ಲೋಡ್ ಮಾಡುತ್ತಾರೆ. ಕೆಲವು ಸ್ಪರ್ಧೆಗಳಲ್ಲಿ ಭೇಟಿ ಏರ್ಪಡಿಸಿದ ಸಂದರ್ಭದಲ್ಲಿ ಪ್ರಶಸ್ತಿಗಳನ್ನು ನೀಡಲಾಯಿತು.

ಇದಕ್ಕೊಂದು ಹಬ್ಬದ ಮೆರಗನ್ನು ನೀಡುವಂತೆ ಉಪಕ್ರಮಗಳನ್ನು ಕೈಗೊಳ್ಳಲಾಯಿತು. ಕಾಕತಾಳೀಯ ಎನ್ನುವಂತೆ ಕೇರಳದ ಸಾಂಪ್ರದಾಯಿಕ ಸುಗ್ಗಿ ಹಬ್ಬವಾದ ಓಣಂನ ಸಂದರ್ಭದೊಂದಿಗೆ ತಳಕುಹಾಕಿಕೊಂಡಿತು. ಆ ಸಮಯದಲ್ಲಿ ಜನ ಸುರಕ್ಷಿತ ಹಬ್ಬದೂಟವನ್ನು ಸವಿಯುವಂತಾಯಿತು. ಈ ಸ್ಪರ್ಧೆಗಳಿಗೆ ರಾಜ್ಯದ ಸಾಂಸ್ಕೃತಿಕ ಸಂಗತಿಗಳೊಂದಿಗೆ ಸಂಬಂಧ ಹೊಂದಿರುವಂತೆ ಸಾಂಬಾರ್ ಚಾಲೆಂಜ್, ಓಣತಿನು ಓರು ಮುರಮ್ ಪಚಕ್ಕರಿ (ಓಣಂಗಾಗಿ ತರಕಾರಿಗಳು) ನಂತಹ ಹೆಸರುಗಳನ್ನು ಇಡಲಾಗಿದೆ. ಇವುಗಳನ್ನು ನಿರ್ದಿಷ್ಟ FB ಗುಂಪುಗಳು ಇಲ್ಲವೇ FB ಕೃಷಿ ಗುಂಪುಗಳೊಂದಿಗೆ ಸಮಾನಾಸಕ್ತರು ಆಯೋಜಿಸಿದರು.

FB ಆಧಾರಿತ ಕೈತೋಟ ಸ್ಪರ್ಧೆಯ ಹೆಸರು ಒನತಿನು ಒರು ಮುರಂ ಪಚಕ್ಕರಿ. ೨೦೧೬ರಲ್ಲಿ ಇದನ್ನು ಕೃಷಿ ಅಧಿಕಾರಿ ಪಿ.ಸಿ. ಹರಿಕುಮಾರ್‌ ಅವರ ನೇತೃತ್ವದಲ್ಲಿ ರಾಜ್ಯ ಸರ್ಕಾರದೊಂದಿಗೆ ನಡೆಸಲಾಯಿತು. ನಂತರ ಇದನ್ನು ಮುಖ್ಯವಾಹಿನಿಯೊಂದಿಗೆ ಬೆಸೆಯಲಾಯಿತು. ಒಂದು ದಶಕದಿಂದ ಸ್ವತಃ ತಾರಸಿ ತೋಟದ ಕೃಷಿಕರಾಗಿದ್ದ ಹರಿಕುಮಾರ್‌ ಅವರು ಕೇರಳದಲ್ಲಿ ಮನೆ ಕೈತೋಟವನ್ನು ಪ್ರಚುರಪಡಿಸುವ ಅಗತ್ಯವನ್ನು ಮನಗಂಡರು. ಅದಕ್ಕನುಗುಣವಾಗಿ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಿ ಅದನ್ನು ಯಶಸ್ವಿಯಾಗಿ ಕಾರ್ಯಗತಗೊಳಿಸಿದರು. ಅವರ ಪ್ರಸ್ತಾವನೆಯು ಸ್ವೀಕೃತಗೊಂಡು ಸರ್ಕಾರವು ಅಗತ್ಯ ಕ್ರಮಗಳನ್ನು ಕೈಗೊಂಡಿತು. (ಚೌಕ ೧ ನೋಡಿ)

ಹೊಳಹುಗಳನ್ನು ಹಂಚಿಕೊಳ್ಳುವುದು, ವಿನಿಮಯ ಮಾಡಿಕೊಳ್ಳುವುದು

FB ಗುಂಪುಗಳು ತೋಟಗಾರಿಕೆಯ ಒಳಸುರಿಯುವಿಕೆಗಳು, ಬೀಜಗಳು ಮತ್ತು ಸಸಿಗಳನ್ನು ಹಂಚಿಕೊಳ್ಳುವ, ವಿನಿಮಯ ಮಾಡಿಕೊಳ್ಳುವ ಸಂಸ್ಕೃತಿಯನ್ನು ಸಹ ಬೆಳೆಸಿದವು. ಅನೇಕರು ಮಾರುಕಟ್ಟೆಗಳಲ್ಲಿ ಸಾಮಾನ್ಯವಾಗಿ ಲಭ್ಯವಿಲ್ಲದ ಸಾಂಪ್ರದಾಯಿಕ ಮತ್ತು ಸ್ಥಳೀಯ ತರಕಾರಿ ಪ್ರಭೇದಗಳನ್ನು ಬೆಳೆಯಲು ಬಯಸುತ್ತಾರೆ. FB ಗುಂಪುಗಳು ಈ ಪ್ರಭೇದಗಳ ಬೀಜಗಳ ಸಂರಕ್ಷಣೆ ಮತ್ತು ಪ್ರಸರಣವನ್ನು ಸುಗಮಗೊಳಿಸುತ್ತವೆ. ಅಂಚೆ ಸೇವೆಗಳನ್ನು ಬಳಸಿಕೊಂಡು ವರ್ಷವಿಡೀ ಬೀಜಗಳ ವಿನಿಮಯ ಮತ್ತು ಉಚಿತ ವಿತರಣೆ ನಡೆಯುತ್ತದೆ. ಹೆಚ್ಚುವರಿ ಬೀಜಗಳನ್ನು ಹೊಂದಿರುವ ಜನರು ಎಫ್‌ಬಿ ಗುಂಪುಗಳಲ್ಲಿ ಲಭ್ಯವಿರುವ ಬೀಜಗಳ ಪಟ್ಟಿಯನ್ನು ನಮೂದಿಸುತ್ತಾರೆ. ಯಾರಿಗಾದರೂ ಬೀಜಗಳನ್ನು ಬೇಕಿದ್ದಲ್ಲಿ, ಅವರು ಒಂದು ಲಕೋಟೆಯೊಳಗೆ ತಮಗೆ ಬೇಕಾದ ಬೀಜಗಳ ಹೆಸರನ್ನು ಬರೆದು ಮತ್ತೊಂದು ಸ್ಟ್ಯಾಂಪ್ ಹಚ್ಚಿದ ಲಕೋಟೆಯೊಂದಿಗೆ ಕಳುಹಿಸುತ್ತಾರೆ. ಈ  ರೀತಿ ಮಾಡುವುದರಿಂದ ಬೀಜಗಳನ್ನು ಕಳಿಸುವವರಿಗೆ ಹೆಚ್ಚುವರಿ ವೆಚ್ಚ ತಗಲುವುದಿಲ್ಲ. ಕೆಲವು ಗುಂಪುಗಳು ‘ಬೀಜ ಬ್ಯಾಂಕ್’ಗಳನ್ನು ಸಹ ನಿರ್ವಹಿಸುತ್ತವೆ. ಹೆಚ್ಚುವರಿ ಬೀಜಗಳನ್ನು ಹೊಂದಿರುವ ಜನರು ಅದನ್ನು ಬೀಜ ಬ್ಯಾಂಕ್‌ಗೆ ಕಳುಹಿಸಬಹುದು. ಗುಂಪುಗಳ ಭೇಟಿ ಸಂದರ್ಭದಲ್ಲಿ ಸಸಿಗಳ ಉಚಿತ ವಿನಿಮಯವೂ ನಡೆಯುತ್ತದೆ. FB ಗುಂಪುಗಳಲ್ಲಿ ಕ್ರಿಯಾತ್ಮಕ ಸಂವಾದದಿಂದ ಹಲವು ಸ್ನೇಹಸಂಬಂಧಗಳು ರೂಪುಗೊಂಡವು. ಹೀಗಾಗಿ ಭೇಟಿಗಳ ಸಂದರ್ಭದಲ್ಲಿ ಉಡುಗೊರೆ, ವಿನಿಮಯಗಳು ನಡೆದವು.

ಚೌಕ 1: ಒನತಿನು ಓರು ಮುರಮ್ ಪಚ್ಚಕ್ಕರಿ ವಿವಿಧ ಎಫ್‌ಬಿ ಕೃಷಿ ಗುಂಪುಗಳಲ್ಲಿ ಆಯೋಜಿಸಲಾದ ಒನತಿನು ಓರು ಮುರಂ ಪಚ್ಚಕ್ಕರಿ ಸ್ಪರ್ಧಯು, ಪಿ.ಸಿ. ಹರಿಕುಮಾರ್‌ ಅವರ ಕಲ್ಪನೆಯ ಕೂಸು. ಅವರು ಹಬ್ಬದ ಸಂದರ್ಭಕ್ಕೆ ಸಾಕಾಗುವಷ್ಟು ತರಕಾರಿಗಳನ್ನು ತಮ್ಮ ಕೈತೋಟಗಳಲ್ಲಿ ಬೆಳೆಯಲು ಪ್ರೋತ್ಸಾಹಿಸಿದರು.2015 ರಲ್ಲಿ, ಹರಿಕುಮಾರ್ ಅವರು ಸಸಿಗಳನ್ನು ನೆಡುವ ನಿಗದಿತ ಒಂದು ತಿಂಗಳ ಮೊದಲು ಎಫ್‌ಬಿ ಗ್ರೂಪ್‌ನಲ್ಲಿ ಒನತಿನು ಒರು ಮುರಂ ಪಚಕ್ಕರಿ ಎಂಬ ಸವಾಲನ್ನು ಪೋಸ್ಟ್ ಮಾಡಿದರು. ಓಣಂ ಹಬ್ಬಕ್ಕೆ ಇನ್ನೂ ೮೫-೯೦ ದಿನಗಳಿರುವಾಗಲೇ ಸಸಿಗಳನ್ನು ನೆಡುವುದು ಅವರ ಯೋಜನೆಯಾಗಿತ್ತು. ಇದರಿಂದ ಓಣಂ ಸಮಯಕ್ಕೆ ಸಾಕಷ್ಟು ತರಕಾರಿಗಳನ್ನು ಪಡೆಯಲು ಸಾಧ್ಯವಾಗುತ್ತಿತ್ತು. ಸಸಿ ನೆಟ್ಟ ದಿನದಿಂದ ಕೊಯ್ಲಿನವರೆಗೆ ಆಸಕ್ತರು ದಿನ ಇಲ್ಲವೇ ವಾರಕ್ಕೊಮ್ಮೆ ಗಿಡಗಳ ಬೆಳವಣಿಗೆ ತೋರಲು ಫೋಟೊಗಳನ್ನು ಹಂಚಿಕೊಂಡರು. ೨೦೧೫ರಲ್ಲಿ ಸುಮಾರು ೧೫೦೦೦ ಕುಟುಂಬಗಳು ಈ ಸವಾಲನ್ನು ಸ್ವೀಕರಿಸಿದ್ದರು ಎಂದು ಹರಿಕುಮಾರ್‌ ನೆನಪಿಸಿಕೊಳ್ಳುತ್ತಾರೆ. ಹಲವು FB ಗುಂಪುಗಳಲ್ಲಿ ಇದು ಮೂರು ವರ್ಷಗಳ ಕಾಲ ಸತತವಾಗಿ ನಡೆಯಿತು. ಕೆಲವು ವರ್ಷಗಳಲ್ಲಿ ಇದೇ ತರಹದ ಸವಾಲನ್ನು ವಿಶು ಹಬ್ಬದ ಋತುವಿಗೆ ಅಗತ್ಯವಾದ ತರಕಾರಿಗಳನ್ನು ಪಡೆಯಲು ನಡೆಸಲಾಯಿತು.2016 ರಲ್ಲಿ, ಸಾಮಾಜಿಕ ಮಾಧ್ಯಮವನ್ನು ಮೀರಿ ಈ ಸ್ಪರ್ಧೆಯನ್ನು ವಿಸ್ತರಿಸಲು, ಹರಿಕುಮಾರ್ ಅವರು ಪ್ರಸ್ತಾವನೆಯನ್ನು ಸಿದ್ಧಪಡಿಸಿದರು. ತಿರ್ಸೂರಿನಲ್ಲಿ ನಡೆದ ಎಫ್‌ಬಿ ಮೀಟ್‌ಅಪ್‌ನಲ್ಲಿ ಸಚಿವರೊಂದಿಗೆ ಚರ್ಚಿಸಿದರು. ನಂತರ, 2017 ರಲ್ಲಿ ರಾಜ್ಯ ಸರ್ಕಾರವು ಓಣಂ ಹಬ್ಬದ ಸಮಯದಲ್ಲಿ ಕೈ ತೋಟದ ತರಕಾರಿ ಉತ್ಪಾದನೆಯನ್ನು ಉತ್ತೇಜಿಸುವ ಸಾಧನವಾಗಿ VDP ಅಡಿಯಲ್ಲಿ ಒಣತಿನು ಓರು ಮುರಂ ಪಚಕ್ಕರಿ ಪರಿಚಯಿಸಿತು. ಈ ವಿಶೇಷ ಅಭಿಯಾನದಲ್ಲಿ ಶಾಲಾ ಮಕ್ಕಳಿಗೆ, ರೈತರಿಗೆ, ಮನೆಗಳಿಗೆ ವಿವಿಧ ರೀತಿಯ ಬೀಜದ ಕಿಟ್‌ಗಳನ್ನು ಉಚಿತವಾಗಿ ವಿತರಿಸಲಾಯಿತು. ಬೀಜಗಳಷ್ಟೇ ಅಲ್ಲದೆ, ಕೃಷಿ ಭವನಗಳ ಮೂಲಕ ಮನೆಗಳಿಗೆ ಸಬ್ಸಿಡಿ ದರದಲ್ಲಿ ತರಕಾರಿ ಸಸಿಗಳನ್ನು ವಿತರಿಸಲಾಯಿತು. ಒನತಿನು ಓರು ಮುರಮ್ ಪಚಕ್ಕರಿ VDP ಅಡಿಯಲ್ಲಿ ನಡೆಯುತ್ತಿರುವ ಘಟಕವಾಗಿದೆ.ಮೂಲ: https://keralaagriculture.gov.in/wp-content/uploads/021/06/Final-VDP-2021-22-Working-Instructions.pdf

ರೈತರು ಮತ್ತು ಗ್ರಾಹಕರನ್ನು ಸಂಪರ್ಕಿಸುವ FB ಆಧಾರಿತ ಮಾರುಕಟ್ಟೆಗಳು

ಕೈತೋಟಗಾರರು ತಮ್ಮ ಹೆಚ್ಚುವರಿ ಫಸಲನ್ನು ಮಾರಾಟ ಮಾಡಲು ಬಯಸಿದರೆ ಏನು ಮಾಡುವುದು? ಕೈತೋಟಗಾರಿಕೆಯ ಆಂದೋಲನದ ಆರಂಭಿಕ ವರ್ಷಗಳಲ್ಲಿ, ಪ್ರತಿಯೊಬ್ಬರೂ ಹೆಚ್ಚುವರಿ ಇಳುವರಿಯನ್ನು ಉಡುಗೊರೆಯಾಗಿ ನೀಡಲು ಆಸಕ್ತರಾಗಿದ್ದರು. ಆಗ ಈ ಪ್ರಶ್ನೆಯು ವಿಚಿತ್ರವಲ್ಲದಿದ್ದರೂ ಅನೇಕರಿಗೆ ಆಶ್ಚರ್ಯಕರವಾಗಿ ಕಂಡಿತು. “ಆನ್‌ಲೈನ್ ಆರ್ಗಾನಿಕ್‌ ಅಗ್ರಿಕಲ್ಚರಲ್‌ ಮಾರ್ಕೆಟ್‌” ಹೆಸರಿನ FB ಗುಂಪಿನ ಅಡ್ಮಿನ್‌ಗಳು ತ್ರಿಶೂರ್ ಮುನ್ಸಿಪಲ್ ಕಾರ್ಪೊರೇಶನ್‌ನಲ್ಲಿ ಇದನ್ನು ಗ್ರಹಿಸಿದರು. ತ್ರಿಶೂರ್ ನಗರದ ಶಾಲಾ ಆವರಣದಲ್ಲಿ ವಾರಕ್ಕೊಮ್ಮೆ ಭಾನುವಾರದ ಸಂತೆಯನ್ನು ಪ್ರಾರಂಭಿಸಲಾಯಿತು. ಇಲ್ಲಿ ರೈತರು, ಅದರಲ್ಲೂ ಮನೆ ಕೈತೋಟಗಾರರು ತಮ್ಮ ಉತ್ಪನ್ನಗಳನ್ನು ಮಧ್ಯವರ್ತಿಗಳ ಹಂಗಿಲ್ಲದೆ ಗ್ರಾಹಕರಿಗೆ ನೇರವಾಗಿ ಮಾರಾಟ ಮಾಡುವಂತಾಯಿತು. ನಂತರ, ಅವರು ಸ್ಥಳವನ್ನು ಹತ್ತಿರದ ಕ್ಲಬ್‌ಗೆ ಬದಲಾಯಿಸಿದರು. ಆಯಾ ರೈತರ ಹತ್ತಿರ ಲಭ್ಯವಿರುವ ಉತ್ಪನ್ನಗಳ ವಿವರಗಳನ್ನು ಪ್ರತಿ ಶನಿವಾರ FB ಗುಂಪಿನಲ್ಲಿ ಪೋಸ್ಟ್ ಮಾಡಲಾಗುತ್ತಿತ್ತು.

ತಾರಸಿ ತೋಟಕ್ಕೆ ಕಡಿಮೆ ತೂಕದ ಗ್ರೋ ಬ್ಯಾಗ್ಗಳನ್ನು ಬಳಸಲಾಗುತ್ತದೆ

ನಾಟ್ಟುಚಂತಾ – ಸಾವಯವ ಉತ್ಪನ್ನಗಳ ಸ್ಥಾಪಿತ ಮಾರುಕಟ್ಟೆಯನ್ನು ಸ್ಥಾಪಿಸಲಾಯಿತು. ‘ನಾಟ್ಟುಚಂತಾ‘ ಎಂಬ ವಾರದ ಸಂತೆಯು ನಗರ, ನಗರದ ಹೊರವಲಯದ ಮನೆಯ ಕೈತೋಟಗಳಲ್ಲಿ ಸಂಪೂರ್ಣವಾಗಿ ಸಾವಯವವಾಗಿ ಬೆಳೆದ ಉತ್ಪನ್ನಗಳನ್ನು ಮಾರಾಟ ಮಾಡುತ್ತದೆ. ಇದರೊಂದಿಗೆ ‘ರೈತರ ವಿಳಾಸವನ್ನು ತಿಳಿದುಕೊಳ್ಳುವ’ ಪ್ರಕ್ರಿಯೆಯನ್ನು ಸಕ್ರಿಯಗೊಳಿಸುತ್ತದೆ. FB ಗ್ರೂಪ್ ‘ಕಾರ್ಶಿಕ ವಿಪನಿ ಆನ್‌ಲೈನ್ ಅಗ್ರಿಕಲ್ಚರ್ ಮಾರ್ಕೆಟ್’ಮೂಲಕ ನಾಟ್ಟುಚಂತಾ ಆಯೋಜಿಸಲಾಗಿದೆ. ಆಸಕ್ತ ರೈತರು ತಮ್ಮ ಉತ್ಪನ್ನಗಳನ್ನು ಭಾನುವಾರ ಸಂತೆ/ ನಾಟ್ಟುಚಂತಾ ಮೂಲಕ ಮಾರಾಟ ಮಾಡಲು ಈ FB ಗುಂಪಿನ ಅಡ್ಮಿನ್‌ಗಳನ್ನು ಸಂಪರ್ಕಿಸಬೇಕು. ಪರೀಶೀಲನಾ ಪ್ರಕ್ರಿಯೆಯಲ್ಲಿ ಅವರು ಆಯ್ಕೆಯಾದಲ್ಲಿ ತಾವು ಯಾವ ಉತ್ಪನ್ನಗಳನ್ನು ತರುತ್ತೇವೆ ಎನ್ನುವುದನ್ನು ಗುಂಪಿನ ಅಡ್ಮಿನ್‌ಗಳಿಗೆ ತಿಳಿಸಬೇಕು. ಗ್ರೂಪಿನ ಅಡ್ಮಿನ್‌ಗಳು ಉತ್ಪನ್ನಗಳ ವಿವರ ಹಾಗೂ ಅದನ್ನು ತರುವ ರೈತರ ಹೆಸರನ್ನು(ಕೋವಿಡ್‌ ಸಮಯದಲ್ಲಿ ಸಂತೆ ನಡೆಯದ ಸಂದರ್ಭವನ್ನು ಬಿಟ್ಟು) ಶನಿವಾರದಂದು ಎಫ್‌ಬಿ ಪೇಜಿನಲ್ಲಿ ಹಾಕುತ್ತಿದ್ದರು. ಇದರಿಂದ ಆಸಕ್ತ ಸದಸ್ಯರು ಸಂತೆಗೆ ಭೇಟಿ ನೀಡಲು ಅನುಕೂಲ ಮಾಡಿಕೊಟ್ಟಿತು.

ಪರಿಶೀಲನಾ ಪ್ರಕ್ರಿಯೆಯು ಕಠಿಣವಾಗಿದೆ. ಆಯೋಜಕರು ಚರ್ಚೆ ಮಾಡುವುದರೊಂದಿಗೆ ಕ್ಷೇತ್ರ ಭೇಟಿ ಮಾಡಿ ಬೆಳೆಗೆ ಕೇವಲ ಸಾವಯವ ಒಳಸುರಿಯುವಿಕೆಗಳನ್ನು ಮಾತ್ರ ಬಳಸಿರುವರೇ, ಯಾವುದೇ ರಾಸಾಯನಿಕ ಕೀಟನಾಶಕಗಳನ್ನು ಬಳಸಿಲ್ಲವೇ ಎನ್ನುವುದನ್ನು ಗಮನಿಸುತ್ತಾರೆ. ವಿಶ್ವಾಸಾರ್ಹ ಉತ್ಪನ್ನಗಳನ್ನು ಗುರುತಿಸುತ್ತಾರೆ. ಬಹಳಷ್ಟು ಸಂದರ್ಭದಲ್ಲಿ ಉತ್ಪಾದಕರು ತಮ್ಮನ್ನು ತಾವು ಕೃಷಿಕರೆಂದು ಗುರುತಿಸಿಕೊಳ್ಳಲು ಇಷ್ಟಪಡುತ್ತಾರೆ. ತಮ್ಮ ಉತ್ಪನ್ನಗಳನ್ನು ಮಾರಲು ನೇರವಾಗಿ ಗ್ರಾಹಕರೊಂದಿಗೆ ಸಂಬಂಧ ಏರ್ಪಡಿಸಲಾಗುತ್ತದೆ. ʼನಾಟ್ಟುಚಂತಾʼ  ಹೆಚ್ಚುವರಿ ಆದಾಯ ಗಳಿಕೆಗೆ ಅನುವು ಮಾಡಿಕೊಡುವುದರೊಂದಿಗೆ ಕೃಷಿಕರು ಮತ್ತು ಗ್ರಾಹಕರ ನಡುವೆ ಸಾಮಾಜಿಕ ಬಂಧವನ್ನು ಬೆಸೆಯುತ್ತದೆ. ಈ ಸಂತೆಗೆ ಬರುವ ಬಹುತೇಕ ಕೃಷಿಕರು ನಗರದ ಹೊರವಲಯಕ್ಕೆ ಸೇರಿದವರಾಗಿರುತ್ತಾರೆ. ಸಹಜವಾಗಿ ಅವರ ಬಳಿ ನಗರದೊಳಗಿನವರಿಗಿಂತ ಹೆಚ್ಚಿನ ಕೃಷಿ ಜಾಗವಿರುತ್ತದೆ. ಈ ಲೇಖಕರೇ ಗಮನಿಸಿರುವಂತೆ ಇಲ್ಲಿಗೆ ೨೦೦ಗ್ರಾಂನಷ್ಟು ಅತ್ಯಲ್ಪ ಪ್ರಮಾಣದ ಉತ್ಪನವನ್ನು ಕೂಡ ತರಬಹುದು. ಸಾವಯವ ಉತ್ಪನ್ನಗಳಿಗೆ ಹೆಚ್ಚಿನ ಬೇಡಿಕೆಯಿದೆ. ಹಾಗಾಗಿ ಅವುಗಳ ವಿಶ್ವಾಸಾರ್ಹತೆ ಬಹಳ ಮುಖ್ಯ. ಈ ಗುಂಪುಗಳು ನಂಬಿಕೆಯ ಆಧಾರದ ಮೇಲೆಯೇ ಕಾರ್ಯನಿರ್ವಹಿಸುತ್ತದೆ. ನಗರ ಹಾಗೂ ಹೊರವಲಯಗಳ ಉತ್ಪನ್ನವನ್ನು ನಗರದ ದೊಡ್ಡ ಆಹಾರ ವ್ಯವಸ್ಥೆಯೊಳಗೆ ಸೇರಿಸುವ ಪ್ರಯತ್ನವನ್ನು ಇದು ಮಾಡುತ್ತದೆ. ವರ್ಷಗಳ ಕಳೆದ ನಂತರ ಇಂತಹದೇ ಉಪಕ್ರಮಗಳನ್ನು ಎಫ್‌ಬಿ ಗುಂಪುಗಳು ಇನ್ನೂ ಕೆಲವು ಜಿಲ್ಲಾ ಕೇಂದ್ರಗಳಲ್ಲಿ ಕೈಗೊಂಡಿತು. ಸಂಪೂರ್ಣ ಸಾವಯವ ಉತ್ಪಾದನೆ ಮಾಡಲು ಒತ್ತುನೀಡಿ ʼನಿಮ್ಮ ಗ್ರಾಹಕರನ್ನು ತಿಳಿಯಿರಿʼ ಎಂದು ಕೆಲವೆಡೆ ಯಶಸ್ವಿಯಾಯಿತು.

ಮಾತೃಭೂಮಿ ಎನ್ನುವ ಮಲೆಯಾಳಂನ ಜನಪ್ರಿಯ ಹಳೆಯ ದಿನಪತ್ರಿಕೆ ನಾಟ್ಟುಚಂತಾ ಕುರಿತು ವರದಿ ಮಾಡಿತು. ಇದು ಈ ಕ್ರಿಯೆಗೆ ವೇಗವನ್ನು ನೀಡಿತು.

ಕೋವಿಡ್‌ಗೆ ಮುನ್ನ ನಾಟ್ಟುಚಂತಾದಲ್ಲಿ ಉತ್ಪನ್ನಗಳನ್ನು ಮಾರಾಟ ಮಾಡಲು ಬರುತ್ತಿದ್ದ ರೈತರ ಸಂಖ್ಯೆ ೧೫-೨೦ರಷ್ಟು ಇತ್ತು. ಲಾಕ್‌ಡೌನ್‌ ನಂತರ ರೈತರ ಸಂಖ್ಯೆ ೬-೮ಕ್ಕೆ ಇಳಿಯಿತು. ಹಲವು ಮಂದಿ ರೈತರು ನಾಟ್ಟುಚಂತಾದ ಕುರಿತು ಆಸಕ್ತರಾಗಿದ್ದರೂ ಕೂಡ ಸಂಪೂರ್ಣ ಸಾವಯವ ಉತ್ಪಾದನಾ ವಿಧಾನಗಳನ್ನು ಅನುಸರಿಸಿ ಪರಿಶೀಲನಾ ಪ್ರಕ್ರಿಯೆಯಲ್ಲಿ ತೇರ್ಗಡೆಯಾಗುವಲ್ಲಿ ಸೋಲುತ್ತಿದ್ದಾರೆ. ಭಾನುವಾರದ ಸಂತೆಯು ಈ ರೈತರಿಗೆ ಹೆಚ್ಚುವರಿ ಆದಾಯದ ಮೂಲವೇ ಹೊರತು ಪ್ರಾಥಮಿಕ ಆದಾಯವಲ್ಲ. ಈ ಸಂತೆಯು ಇಂದಿಗೂ ತ್ರಿಶೂರ್‌ನ ಬ್ಯಾನರ್ಜಿ ಮೆಮೊರಿಯಲ್‌ ಕ್ಲಬ್‌ನಲ್ಲಿ ನಡೆಯುತ್ತಿದೆ. ಲಾಕ್‌ಡೌನ್‌ ಸಮಯದಲ್ಲಿ ಮಾತ್ರ ಈ ಸಂತೆ ನಡೆಯಲಿಲ್ಲ. ನಾಟ್ಟುಚಂತಾದ ರೈತರು ಲಾಕ್‌ಡೌನ್‌ ಸಮಯದಲ್ಲಿ ತಮ್ಮ ಮಿತಿಯೊಳಗೆ ಮನೆಗೆ ಉತ್ಪನ್ನಗಳನ್ನು ತಲುಪಿಸುವ ಏರ್ಪಾಡು ಮಾಡಿದರು.

 

ನಾಟ್ಟುಚಂತಾ ʼನಿಮ್ಮ ರೈತರನ್ನು ತಿಳಿಯಿರಿʼ, ಸಂಪೂರ್ಣ ಸಾವಯವ ವಿಧಾನಗಳನ್ನು ಆಧರಿಸಿ ಫೇಸ್‌ಬುಕ್‌ ನಡೆಸುತ್ತಿರುವ ಉಪಕ್ರಮ. ʼಕೃಷಿಕ ವಿಪಾನಿ ಆನ್‌ಲೈನ್‌ ಅಗ್ರಿಕಲ್ಚರಲ್‌ ಮಾರ್ಕೆಟ್‌ʼನಂತಹ ಎಫ್‌ಬಿ ಗುಂಪುಗಳು ಸದಸ್ಯರು ತಮ್ಮ ಉತ್ಪನ್ನಗಳ ಕುರಿತು ಗುಂಪಿನಲ್ಲಿ ಪೋಸ್ಟ್‌ ಮಾಡುವ ಮೂಲಕ ಭಾರತದಾದ್ಯಂತ ಗ್ರಾಹಕರನ್ನು ಕಂಡುಕೊಳ್ಳಲು ಅನುವುಮಾಡಿಕೊಡುತ್ತದೆ. ಗುಂಪಿನ ಅಡ್ಮಿನ್‌ಗಳು ಉತ್ಪನ್ನಗಳ ಗುಣಮಟ್ಟದ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.

ಎದುರಿಸಿದ ಸವಾಲುಗಳು

ಇತರ ಯಾವುದೇ ರಂಗದಂತೆ, ನಗರಗಳ ಕೈ ತೋಟಗಾರಿಕೆಯಲ್ಲಿ FB ಸಮೂಹಗಳ ಒಳಗೊಳ್ಳುವಿಕೆ ಸಹ ಕೋವಿಡ್ ಸಾಂಕ್ರಾಮಿಕದಿಂದ ಪ್ರಭಾವಿತವಾಗಿದೆ. ಸಭೆಗಳು, ಭೇಟಿಗಳು ನಿಂತವು, ಸ್ಪರ್ಧೆಗಳು, ಸವಾಲುಗಳು ಸ್ಥಗಿತಗೊಂಡವು, ಬೀಜ ಬ್ಯಾಂಕ್‌, ಬೀಜ ಹಂಚುವಿಕೆಯ ಚಟುವಟಿಕೆಗಳು ಕಡಿಮೆಯಾದವು, ನಾಟ್ಟುಚಂತಾ ಸುಮಾರು ಒಂದು ವರ್ಷದಿಂದ ನಡೆಯುತ್ತಿಲ್ಲ. ಈ ಸವಾಲುಗಳ ಹೊರತಾಗಿಯೂ, ಸಾಂಪ್ರದಾಯಿಕ ಕೈತೋಟದ ಅಭ್ಯಾಸಗಳನ್ನು ಪುನರುಜ್ಜೀವನಗೊಳಿಸುವಾಗ ಸುಸ್ಥಿರ ಕೃಷಿ- ಆಹಾರ ವ್ಯವಸ್ಥೆಗಳ ಪರಿವರ್ತನೆಗೆ ಕೊಡುಗೆ ನೀಡುವಲ್ಲಿ FB ಗುಂಪುಗಳ ಒಳಗೊಳ್ಳುವಿಕೆ ಸಾಮಾಜಿಕ ಮಾಧ್ಯಮದ ಸಾಮರ್ಥ್ಯವನ್ನು ಎತ್ತಿಹಿಡಿಯುತ್ತದೆ.

ಅನಿತ ಪಿನ್ಹೇರೊ


ಉಲ್ಲೇಖಗಳು

Aarya, U. R., “Thinking Out of the Basket”. The

Times of India. 20th August 2017. https://timesofindia.indiatimes.com/city/kochi/thinking-out-of-thebasket/articleshow/60133326.cms

Anita Pinheiro

Adjunct Faculty, School of Global Affairs,

Dr. B.R Ambedkar University Delhi.

E-mail: anitapadiyoor@gmail.com

apinheiro@aud.ac.in

ಆಂಗ್ಲ ಮೂಲ : ಲೀಸಾ ಇಂಡಿಯಾ; ಸಂಪುಟ :೨೪; ಸಂಚಿಕೆ : ‌೧ ; ಮಾರ್ಚ್‌ ೨೦‌೨೨

 

Recent Posts

ಕೃಷಿಯಲ್ಲಿ ನೀರಿನ ಸಮರ್ಥ ಬಳಕೆಗಾಗಿ ಕಾಲುವೆ ಯಾಂತ್ರೀಕರಣ

ಕೃಷಿಯಲ್ಲಿ ನೀರಿನ ಸಮರ್ಥ ಬಳಕೆಗಾಗಿ ಕಾಲುವೆ ಯಾಂತ್ರೀಕರಣ

ನಮ್ಮ ನೀರಾವರಿ ವ್ಯವಸ್ಥೆಯನ್ನು 21ನೇ ಶತಮಾನದ ಬೇಡಿಕೆಗಳಿಗೆ ಹೊಂದುವಂತೆ ಮಾಡುವುದು ನಮ್ಮ ಮುಂದಿರುವ ನಿಜವಾದ ಸವಾಲಾಗಿದೆ. ತಂತ್ರಜ್ಞಾನವೇ...