ಕ್ಯಾಕ್ಟಸ್ – ಪರ್ಯಾಯ ಮೇವಿನ ಬೆಳೆ


ಮುಳ್ಳುರಹಿತ ಕ್ಯಾಕ್ಟಸ್ನಲ್ಲಿ ನೀರಿನ ಅಂಶ ಹೆಚ್ಚಿದ್ದು ಜಾನುವಾರುಗಳಿಗೆ ಭರವಸೆಯ ಮೇವಿನ ಬೆಳೆಯಾಗಿದೆ. ಕಡಿಮೆ ನೀರಿನಲ್ಲಿಯೇ ಬೆಳೆಯಬಹುದಾದ ಬೆಳೆಯಾದ್ದರಿಂದ ಇದು ಬರಪ್ರದೇಶಗಳಲ್ಲಿ ಕೂಡ ಬೆಳೆಯಬಹುದು. ಬಿಎಐಎಫ್ಕರ್ನಾಟಕದಲ್ಲಿ ಕ್ಯಾಕ್ಟಸ್ಅನ್ನು ಜಾನುವಾರುಗಳಿಗೆ ಮೇವು ಬೆಳೆಯಾಗಿ ದಕ್ಷಿಣ ಭಾರತದ ರಾಜ್ಯಗಳ ರೈತರ ನಡುವೆ ಪ್ರಚುರ ಪಡಿಸುತ್ತಿದೆ.


ಭಾರತದಲ್ಲಿ ೫೩% ಪ್ರದೇಶವು ಒಣ ಹಾಗೂ ಕಡಿಮೆ ನೀರಿರುವ ಪ್ರದೇಶಗಳಾಗಿವೆ. ಈ ಪ್ರದೇಶಗಳಲ್ಲಿ ಹವಾಮಾನ ಬದಲಾವಣೆಯಿಂದಾಗಿ ಬೆಳೆ ಹಾನಿ, ಜಾನುವಾರು ಹಾಗೂ ಅಲ್ಲಿನ ಬದುಕಿನ ಮೇಲೆ ಪ್ರತಿಕೂಲ ಪರಿಣಾಮಗಳುಂಟಾಗಿರುವುದು ಕಂಡುಬರುತ್ತಿವೆ. ರೈತರು ತಮ್ಮ ಹಾಗೂ ಜಾನುವಾರುಗಳ ಹೊಟ್ಟೆ ತುಂಬಿಸಿಕೊಳ್ಳಲು ಪರದಾಡುತ್ತಿದ್ದಾರೆ.

ಶುಷ್ಕ ಹಾಗೂ ಅರೆಶುಷ್ಕ ಪ್ರದೇಶಗಳು ಸೀಮಿತ ಸಂಪನ್ಮೂಲನಗಳನ್ನು ಒಳಗೊಂಡಿವೆ. ಬೇಸಿಗೆಯಂತಹ ಸಮಯದಲ್ಲಿ ಹಸಿರು ಮೇವು ಸಿಗುವುದು ಕಡಿಮೆ. ಅಂತಹ ಸಮಯದಲ್ಲಿ ಸಾಂದ್ರೀಕೃತ ಪೂರಕ ಆಹಾರ ಒಳ್ಳೆಯದು. ಬೇಸಿಗೆಯಲ್ಲಿ ರೈತರು ಹಸಿರು ಮೇವಿನ ಸಮಸ್ಯೆಯನ್ನು ಎದುರಿಸುತ್ತಾರೆ. ಅಂತಹ ಸಮಯದಲ್ಲಿ ಜಾನುವಾರುಗಳಿಗೆ ನೀರಿನಂಶ ಹೆಚ್ಚಿರುವ ಮೇವಿನ ಅಗತ್ಯವಿರುತ್ತದೆ. ಅಂತಹ ಸಂದರ್ಭಗಳಲ್ಲಿ ಮುಳ್ಳಿಲ್ಲದ ಕ್ಯಾಕ್ಟಸ್‌ ಕೃಷಿಯು ರೈತರಿಗೆ ವರವಾಗಿದೆ. ಭಾರತದಲ್ಲಿ ಇನ್ನೂ ಕ್ಯಾಕ್ಟಸ್‌ ಅನ್ನು ವಾಣಿಜ್ಯ ಬೆಳೆಯಾಗಿ ಬೆಳೆಯುತ್ತಿಲ್ಲ.

ಇಂತಹ ಕ್ಲಿಷ್ಟಕರ ಸಂದರ್ಭಗಳಲ್ಲಿ ಮುಳ್ಳುರಹಿತ ಕ್ಯಾಕ್ಟಸ್‌ ಬೆಳೆ ಭೂಮಿಯ ಸಂರಕ್ಷಣೆಗೆ ಹಾಗೂ ಜಾನುವಾರುಗಳಿಗೆ ಬದಲಿ ಮೇವನ್ನಾಗಿ ಬಳಸಲು ಪ್ರಯೋಜನಕಾರಿಯಾಗಿದೆ. ಸವಳುಭೂಮಿಯಾಗುವುದನ್ನು ಹಾಗೂ ಮಣ್ಣಿನ ಕೊರತೆ ತಪ್ಪಿಸಲು ಈ ಬೆಳೆಯನ್ನು ಬೆಳೆಯಬಹುದಾಗಿದೆ.

ಮುಳ್ಳುರಹಿತ ಕ್ಯಾಕ್ಟಸ್‌ ಅತ್ಯುತ್ತಮ ಪರ್ಯಾಯ ಹಸಿರು ಮೇವು. ಇದರಲ್ಲಿ ೮೦-೮೫% ನೀರಿನಂಶವಿರುವುದರಿಂದ ಬೇಸಿಗೆಗೆ ಉತ್ತಮವಾದ ಮೇವು. ಬರದ ಸಮಯದಲ್ಲೂ ಇದು ಉತ್ತಮ ಪರ್ಯಾಯ ಹಸಿರು ಮೇವು. ಕ್ಯಾಕ್ಟಸ್‌ ಕೇವಲ ಮೇವಿನ ಬೆಳೆಯಾಗಿ ಮಾತ್ರವಲ್ಲ ಔಷಧಿಯಾಗಿ ಕೂಡ ಬಳಸುತ್ತಾರೆ. ಇದರಲ್ಲಿ ೮೦-೮೫% ನೀರಿನಂಶ ಇರುವುದರಿಂದ ಜಾನುವಾರುಗಳಿಗೆ ಉತ್ತಮ ನೀರಿನ ಮೂಲವಾಗಿದೆ. ಜೊತೆಗೆ ವಿಟಮಿನ್‌, ಪ್ರೋಟಿನ್‌, ಕ್ಯಾಲ್ಸಿಯಂ, ಪೊಟಾಶಿಯಂ ಮತ್ತಿತರ ಖನಿಜಗಳು ಉತ್ತಮವಾಗಿರುವುದರಿಂದ ಉತ್ತಮ ಮೇವು ಕೂಡ ಆಗಿದೆ.

ಕೈಗೊಂಡಿರುವ ಕ್ರಮ

ಚಿತ್ರ : ಕ್ಯಾಕ್ಟಸ್‌ ಪಟ್ಟೆಗಳನ್ನು ಏರುಮಡಿಗಳಲ್ಲಿ ನೆಡಲಾಗುತ್ತದೆ

ಕರ್ನಾಟಕದ ತಿಪಟೂರಿನ ಬಿಎಐಎಫ್‌ನ ಗ್ರಾಮೋದ್ಯೋಗ ಕ್ಯಾಂಪಸ್‌ನವರು ೨೦೧೮-೧೯ರಲ್ಲಿ ಮುಳ್ಳುರಹಿತ ಕ್ಯಾಕ್ಟಸ್‌ ಕೃಷಿ ಸಂಶೋಧನೆ, ಪ್ರಾತ್ಯಕ್ಷಿಕೆ, ತರಬೇತಿ ಹಾಗೂ ಸೂಕ್ಷ್ಮಾಣು ಪ್ಲಾಸ್ಮಾ ನಿರ್ವಹಣೆಗಾಗಿ ಇದರ ಪ್ರಚಾರವನ್ನು ಆರಂಭಿಸಿದರು. ಬಿಎಐಎಫ್‌ನವರು ಮುಳ್ಳುರಹಿತ ಕ್ಯಾಕ್ಟಸ್‌ ಕೃಷಿಯನ್ನು ತೋಟದ ಬದುಗಳು ಹಾಗೂ ಕೃಷಿಯೋಗ್ಯವಲ್ಲದ ಭೂಮಿಯಲ್ಲಿ ಮಾಡಲು ಉತ್ತೇಜನ ನೀಡುತ್ತಿದ್ದಾರೆ. ಇದರಿಂದ ನಿಯಮಿತ ಬೆಳೆ ಬೆಳೆಯುವ ಪ್ರದೇಶಗಳಿಗೆ ತೊಂದರೆಯಾಗುವುದಿಲ್ಲ.

೨೦೧೯-೨೦ರ ನಂತರ ವಿವಿಧ ಜಿಲ್ಲೆಗಳು ಹಾಗೂ ರಾಜ್ಯಗಳಿಂದ ಹಲವಾರು ರೈತರು, ಎನ್‌ಜಿಒಗಳು, ಸರ್ಕಾರಿ ಸಿಬ್ಬಂದಿಗಳು, ಶಾಲಾ ವಿದ್ಯಾರ್ಥಿಗಳು, ಕೃತಕ ಗರ್ಭಧಾರಣೆ ಕೇಂದ್ರಗಳವರು, ಸ್ವಸಹಾಯಗುಂಪುಗಳವರು ಕ್ಯಾಕ್ಟಸ್‌ ಕೃಷಿ ಹಾಗೂ ಮೇವು ಪದ್ಧತಿಗಳನ್ನು ತಿಳಿಯಲು ಪ್ರಾತ್ಯಕ್ಷಿಕೆ ಭೂಮಿಗೆ ಭೇಟಿ ನೀಡಿದ್ದಾರೆ. ಚಿತ್ರದುರ್ಗದ ೧೨೦ ರೈತರು, ಶಿರಾದ ೨೨೦ ರೈತರು, ಮೈಸೂರಿನ ಕೃತಕ ಗರ್ಭಧಾರಣೆ ಕೇಂದ್ರದವರು, ಬೆಳಗಾಂ, ಧಾರವಾಡ, ಗದಗ, ಬಾಗಲಕೋಟೆ, ಹಾಸನ ತುಮಕೂರು ಜಿಲ್ಲೆಯವರು; ತಮಿಳುನಾಡಿನ ೬೫ ರೈತರು; ಆಂಧ್ರ ಪ್ರದೇಶದ ೧೮೦ ರೈತರು, ತೆಲಂಗಾಣದ ೧೫೦ ರೈತರು ಹಾಗೂ ತಿಪಟೂರಿನ ರೈತರಿಗೆ ಮುಳ್ಳುರಹಿತ ಕ್ಯಾಕ್ಟಸ್‌ ಕೃಷಿಯಲ್ಲಿ ತರಬೇತಿ ನೀಡಲಾಗಿದೆ. ಇಲ್ಲಿಗೆ ಭೇಟಿ ನೀಡಿದ ಜಾನುವಾರು ಬೆಳೆಯಾಗಿ ಕ್ಯಾಕ್ಟಸ್‌ನ ಮಹತ್ವ ಅರಿತು ತಮ್ಮ ಜಮೀನಿನ ಬದುಗಳಲ್ಲಿ, ಲಭ್ಯವಿರುವ ಜಾಗಗಳಲ್ಲಿ ಬೆಳೆಸಿದ್ದಾರೆ. ಪ್ರತಿಯೊಬ್ಬ ರೈತ ಸರಿಸುಮಾರು ೧೦-೧೫ ಕಾಂಡಗಳನ್ನು ನಾಟಿ ಮಾಡಿದ್ದಾನೆ.

ಇದರಲ್ಲಿ ೮೦-೮೫% ನೀರಿನಂಶ ಇರುವುದರಿಂದ ಜಾನುವಾರುಗಳಿಗೆ ಉತ್ತಮನೀರಿನ ಮೂಲವಾಗಿದೆ. ಜೊತೆಗೆ ವಿಟಮಿನ್‌, ಪ್ರೋಟಿನ್‌, ಕ್ಯಾಲ್ಸಿಯಂ, ಪೊಟಾಶಿಯಂ ಮತ್ತಿತರ ಖನಿಜಗಳು ಉತ್ತಮವಾಗಿರುವುದರಿಂದ ಉತ್ತಮ ಮೇವು ಕೂಡ ಆಗಿದೆ.

ಮುಳ್ಳುರಹಿತ ಕ್ಯಾಕ್ಟಸ್‌ ಶುಷ್ಕ ಬೆಳೆಯಾಗಿರುವುದರಿಂದ ಅದಕ್ಕೆ ಹೆಚ್ಚಿನ ನೀರಿನ ಅವಶ್ಯಕತೆಯಿಲ್ಲ. ತಿಂಗಳಲ್ಲಿ ಒಮ್ಮೆ ಅದಕ್ಕೆ ನೀರು ಹಾಯಿಸಿದರೂ ಸಾಕು ಬೆಳೆ ಚೆನ್ನಾಗಿ ಬರುತ್ತದೆ. ಇದು ಎಂತಹ ಮಣ್ಣಿನಲ್ಲಾದರೂ ಬೆಳೆಯುತ್ತದೆ. ಆದ್ದರಿಂದ ಇದನ್ನು ಸವಳಿ ಭೂಮಿಯಲ್ಲಿ ಕೂಡ ಬೆಳೆಯಬಹುದು. ಮೇವಿನ ಬೆಳೆಗಳಲ್ಲೇ ಬಹಳ ಸುಲಭವಾಗಿ ಬೆಳೆಯಬಹುದಾದ್ದು ಕ್ಯಾಕ್ಟಸ್‌ (ಚೌಕ ೧ ನೋಡಿ). ಇದಕ್ಕೆ ಬೇಕಾದ ಒಳಸುರಿಯುವಿಕೆಗಳು ಅತ್ಯಲ್ಪ ಹಾಗೂ ಬೆಳೆಸುವುದು ಸುಲಭ. ಇದು ಬರವನ್ನು, ಹೆಚ್ಚು ಉಷ್ಣಾಂಶವನ್ನು ವರ್ಷವಿಡೀ ತಾಳಿಕೊಳ್ಳಬಲ್ಲುದು. ಆದ್ದರಿಂದ ರೈತರಿಗೆ ಇದನ್ನು ತಮ್ಮ ಜಮೀನಿನ ಬದುಗಳು ಹಾಗೂ ಲಭ್ಯವಿರುವ ಜಾಗಗಳಲ್ಲಿ ಬೆಳೆಯಬಹುದೆಂದು ಸಂತಸ. ಇದು ಜಮೀನಿಗೆ ಬೇಲಿಯಾಗಿ, ಗಾಳಿಗೆ ತಡೆಯಾಗಿ ಜಾನುವಾರಿಗೆ ಮೇವಾಗಿ ವರ್ತಿಸುತ್ತದೆ.

ಚೌಕ : ಕ್ಯಾಕ್ಟಸ್ಬೆಳೆಯುವ ವಿಧಾನಮಳೆಗಾಲದ ನಂತರ ಅಂದರೆ ಅಕ್ಟೋಬರ್‌ ಇಂದ ಮಾರ್ಚ್‌ವರೆಗೆ ಈ ಬೆಳೆಯ ನಾಟಿಗೆ ಉತ್ತಮ ಸಮಯ.ತಾಜಾ ಪಾಪಾಸುಕಳ್ಳಿ ಕಾಂಡದಲ್ಲಿನ ನೀರಿನಂಶವನ್ನು (ಪಟ್ಟೆ/ಎಲೆಗಳು ೬-೧೫ ಇಂಚುಗಳಷ್ಟಿರುತ್ತದೆ) ೬೫ – ೭೦% ಗೆ ಇಳಿಸಿ ನಾಟಿ ಮಾಡಬೇಕು. ತಾಯಿ ಗಿಡದ ಕಾಂಡಗಳನ್ನು ಬೇರ್ಪಡಿಸಿ ೪-೫ ದಿನಗಳವರೆಗೆ ನೆರಳಿನಲ್ಲಿ ಹರಡಿದಾಗ ನೈಸರ್ಗಿಕವಾಗಿ ತೇವಾಂಶ ಕಡಿಮೆಯಾಗುತ್ತದೆ. ೧ ಅಡಿ ಎತ್ತರ ೨ ಅಡಿ ಅಗಲ ಇರುವಂತೆ ಏರುಮಡಿ ಮಾಡಿಕೊಂಡು ಅದರಲ್ಲಿ ಪಟ್ಟೆಗಳನ್ನು ನಾಟಿ ಮಾಡಬೇಕು.
ನಾಟಿ ಮಾಡಿದ ತಕ್ಷಣವೇ ನೀರು ಕೊಡದೆ ಒಂದು ವಾರದ ನಂತರ ನೀರು ಪೂರೈಸಬೇಕು. ಒಂದು ಗಿಡಕ್ಕೆ ಒಂದು ಲೀಟರ್‌ನಂತೆ ನೀರು ಕೊಟ್ಟರೆ ಸಾಕು. ನಂತರದ ದಿನಗಳಲ್ಲಿ ೧೦ ದಿನಕ್ಕೊಮ್ಮೆ ನೀರು ಕೊಡಬೇಕು.
ನಾಟಿ ಮಾಡಿದ ೧೨ ತಿಂಗಳಲ್ಲಿ ಗಿಡವೊಂದು ೧೫-೩೦ ಪಟ್ಟೆಗಳನ್ನು ಕೊಡುತ್ತದೆ. ಒಂದು ವರ್ಷದ ನಂತರ ತಾಯಿ ಪಟ್ಟೆಯನ್ನು ಬಿಟ್ಟು ಈ ಪಟ್ಟೆಗಳನ್ನು ಕೊಯ್ಲು ಮಾಡಿ ಜಾನುವಾರುಗಳಿಗೆ ಮೇವಾಗಿ ಕೊಡಬಹುದು. ಕೊಯ್ಲಿನ ಸಮಯಕ್ಕೆ ಗಿಡವು ಒಂದು ಮೀಟರ್‌ನಷ್ಟು ಬೆಳೆದಿರಬೇಕು.

ಮುಳ್ಳುರಹಿತ ಕ್ಯಾಕ್ಟಸ್‌ ಅತಿಕಡಿಮೆ ಆರೈಕೆ ಹಾಗೂ ನಿರ್ವಹಣೆಯಿಂದಲೇ ವರ್ಷವೊಂದಕ್ಕೆ ೫-೬ ಜಾನುವಾರುಗಳಿಗೆ ಮೇವನ್ನು ಒದಗಿಸಬಲ್ಲುದು. ದೊಡ್ಡ ಜಾನುವಾರಿಗೆ ದಿನವೊಂದಕ್ಕೆ ೧೦ಕೆಜಿ (೮-೧೦ ಪಟ್ಟೆ)ಗಳನ್ನು ಮೇವಾಗಿ ನೀಡಬಹುದು. (ಪ್ರತಿ ಪಟ್ಟೆ ೦.೮೦೦ ರಿಂದ ೧.೨೦೦ ಕೆಜಿಯಷ್ಟಿರುತ್ತದೆ). ಇದರಲ್ಲಿ ಹೆಚ್ಚಿನ ಖನಿಜಾಂಶಗಳಿರುತ್ತದೆ. ಚೆನ್ನಾಗಿ ಬಲಿತ ಪಟ್ಟೆಗಳನ್ನು ಸಣ್ಣದಾಗಿ ಕತ್ತರಿಸಿ ಒಣಮೇವಿನೊಂದಿಗೆ ಕಲಸಿ ದನ ಹಾಗೂ ಮೇಕೆಗಳಿಗೆ ಕೊಡಬಹುದು. ಇದರಲ್ಲಿ ಹೆಚ್ಚಿನ ನಾರಿನಂಶ ಇರುವುದರಿಂದ ಬೇಸಿಗೆಯಲ್ಲೂ ಕೊಡಬಹುದು.

ಆಂಧ್ರ ಪ್ರದೇಶ ಹಾಗೂ ತೆಲಂಗಾಣದ ರೈತರು ತಮ್ಮ ಜಾನುವಾರುಗಳಿಗೆ ಕ್ಯಾಕ್ಟಸ್‌ ಮೇವು ನೀಡಲು ಶುರುಮಾಡಿದ್ದಾರೆ. ಚಿತ್ರದುರ್ಗ ಜಿಲ್ಲೆಯ ಸುಮಾರು ೨೩ ರೈತರು ೧೫೦೨೦ ಪಟ್ಟೆಗಳನ್ನು ನಾಟಿ ಮಾಡಿದ್ದು ತಮ್ಮ ಜಾನುವಾರುಗಳಿಗೆ ನೀಡಲು ಕಾಯುತ್ತಿದ್ದಾರೆ.

ಡಾ ಐ.ಐ ಹೂಗಾರ್


Dr.I.I.Hugar 

Research Programme Manager

BAIF Gramodaya campus, Tiptur

Karnataka

Email: iranna.hugar@baif.org.in

 

 

ಆಂಗ್ಲ ಮೂಲ : ಲೀಸಾ ಇಂಡಿಯಾ; ಸಂಪುಟ :೨೩; ಸಂಚಿಕೆ : ೪ ; ಡಿಸಂಬರ್ ೨೦‌೨೧

Recent Posts

ಕೃಷಿಯಲ್ಲಿ ನೀರಿನ ಸಮರ್ಥ ಬಳಕೆಗಾಗಿ ಕಾಲುವೆ ಯಾಂತ್ರೀಕರಣ

ಕೃಷಿಯಲ್ಲಿ ನೀರಿನ ಸಮರ್ಥ ಬಳಕೆಗಾಗಿ ಕಾಲುವೆ ಯಾಂತ್ರೀಕರಣ

ನಮ್ಮ ನೀರಾವರಿ ವ್ಯವಸ್ಥೆಯನ್ನು 21ನೇ ಶತಮಾನದ ಬೇಡಿಕೆಗಳಿಗೆ ಹೊಂದುವಂತೆ ಮಾಡುವುದು ನಮ್ಮ ಮುಂದಿರುವ ನಿಜವಾದ ಸವಾಲಾಗಿದೆ. ತಂತ್ರಜ್ಞಾನವೇ...