ಜಮೀನಿನಲ್ಲಿ ತರಗತಿಗಳು ಭರವಸೆಯ ಹೆಣಿಗೆ


ಅನೇಕ ಉತ್ಸಾಹಿ ರೈತರು ಪರಿಸರ ಸ್ನೇಹಿ ರೀತಿಯಲ್ಲಿ ಆಹಾರವನ್ನು ಬೆಳೆಯುವ ಬಗ್ಗೆ ತಮ್ಮ ಜ್ಞಾನ ಮತ್ತು ಅನುಭವವನ್ನು ಹಂಚಿಕೊಳ್ಳುವ ಮೂಲಕ ಸಮಾಜಕ್ಕೆ ತಮ್ಮ ಕೊಡುಗೆಯನ್ನು ಹಿಂತಿರುಗಿಸುತ್ತಿದ್ದಾರೆ. ಸಾಂಪ್ರದಾಯಿಕ ರೀತಿಯಲ್ಲಿ ಜ್ಞಾನವು ಹೀಗೆ ಪೀಳಿಗೆಯಿಂದ ಪೀಳಿಗೆಗೆ ಹರಿದುಬರುತ್ತಿದೆ. ಆದರೆ, ಇಂದಿನ ರೈತರು ಆಧುನಿಕ ತಂತ್ರಜ್ಞಾನ ಮತ್ತು ಸಾಮಾಜಿಕ ಮಾಧ್ಯಮಗಳನ್ನು ಒಗ್ಗೂಡಿಸಿಕೊಳ್ಳುವ ಮೂಲಕ ಒಂದು ಹೆಜ್ಜೆ ಮುಂದಿದ್ದಾರೆ. ಮೂಲಕ ಕೃಷಿಯಲ್ಲಿ ಆಸಕ್ತಿ ಹೊಂದಿರುವ ಹೆಚ್ಚಿನ ಸಂಖ್ಯೆಯ ಜನರನ್ನು ತಲಪುವುದರೊಂದಿಗೆ ಶಿಕ್ಷಣವನ್ನೂ ನೀಡುತ್ತಿದ್ದಾರೆ. ಶ್ರೀ ಅಯ್ಯೂಬ್ ರೀತಿ ಕೃಷಿಯಲ್ಲಿ ತೀವ್ರ ಆಸಕ್ತಿಯನ್ನು ಹೊಂದಿರುವ ಹೊಸತನವನ್ನು ಅರಸುವ ಕೃಷಿ ಶಿಕ್ಷಕರಾಗಿದ್ದಾರೆ.


ಹವಾಮಾನ ಬದಲಾವಣೆ ಮತ್ತು ಆಹಾರ ಭದ್ರತೆಯ ಪ್ರಸ್ತುತ ಸಂದರ್ಭದಲ್ಲಿ, ಕೃಷಿಯಲ್ಲಿನ ವಿವಿಧ ಸಮಸ್ಯೆಗಳನ್ನು ಪರಿಹರಿಸಲು ಸಮಗ್ರ ವಿಧಾನದ ಅಗತ್ಯವಿದೆ. ಸಾಂಪ್ರದಾಯಿಕ ಬೋಧನಾ ವ್ಯವಸ್ಥೆಗಳು ಕೃಷಿ ಪರಿಸರ ವಿಜ್ಞಾನದ ಪ್ರಾಯೋಗಿಕ ಅಂಶಗಳಿಗೆ ಹೆಚ್ಚು ಒತ್ತುನೀಡುವುದಿಲ್ಲ. ಇಂದಿಗೂ ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಇಂತಹ ಪರಿಕಲ್ಪನೆಗಳನ್ನು ಸೇರಿಸಿಲ್ಲ. ಕೆಲವು ಖಾಸಗಿ ಶಾಲೆಗಳ ಪಠ್ಯಕ್ರಮದಲ್ಲಿ ಪೌಷ್ಟಿಕಾಂಶ ಉದ್ಯಾನವನಗಳು, ರೈತ ಶಾಲೆಗಳು ಇತ್ಯಾದಿ ವಿಷಯಗಳನ್ನು ಸೇರಿಸುವಲ್ಲಿ ಕೆಲವು ಸಂಭಾವ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.

ಕೃಷಿಯ ಬಗ್ಗೆ ತೀವ್ರ ಆಸಕ್ತಿ ಹೊಂದಿರುವ ಕೆಲವರು ತಮ್ಮ ಕ್ಷೇತ್ರ ಮಟ್ಟದ ಪ್ರಾಯೋಗಿಕ ಅನುಭವಗಳ ಆಧಾರದ ಮೇಲೆ ಜನರಿಗೆ ಶಿಕ್ಷಣ ನೀಡುವ ಜವಾಬ್ದಾರಿಯನ್ನು ತೆಗೆದುಕೊಂಡಿದ್ದಾರೆ. ಅಂತಹ ರೈತರಲ್ಲಿ ಒಬ್ಬರು ಕೇರಳದ ವಯನಾಡಿನ ಮನಂತ್ವಾಡಿಯ ಶ್ರೀ ಅಯ್ಯುಬ್ ತೊಟ್ಟೋಲಿ. ಅವರು ತಮ್ಮ ಅನುಭವಗಳನ್ನು ಸಮುದಾಯದೊಂದಿಗೆ ಹಂಚಿಕೊಳ್ಳಲು ಉತ್ಸುಕರಾಗಿದ್ದಾರೆ. ಶ್ರೀ ಅಯ್ಯೂಬ್ ಅವರು ತಮ್ಮ ಜಮೀನಿನಲ್ಲಿ ಕೃಷಿಯನ್ನು ಲಾಭದಾಯಕವಾಗಿಸುವ ಬಗೆ, ಸಾವಯವ ಕೃಷಿ, ವಿವಿಧ ಕೃಷಿ ತಂತ್ರಗಳು ಮತ್ತಿತರ ವಿಷಯಗಳ ಬಗ್ಗೆ ರೈತರು, ವಿದ್ಯಾರ್ಥಿಗಳು, ಮಹಿಳೆಯರು ಮತ್ತು ಹೊರಗಿನವರಿಗೆ ತರಗತಿಗಳನ್ನು ನಡೆಸುತ್ತಾರೆ. ಒಟ್ಟಿನಲ್ಲಿ ಕೃಷಿಯ ಬಗ್ಗೆ ಕಲಿಯಲು ಆಸಕ್ತಿ ಹೊಂದಿರುವ ರೈತರು, ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಲ್ಲಿ ಶ್ರೀ ಅಯ್ಯುಬ್ ಅವರು ಈಗ ಚಿರಪರಿಚಿತ ವ್ಯಕ್ತಿಯಾಗಿದ್ದಾರೆ.

ಆರಂಭ

ಶ್ರೀ ಅಯ್ಯೂಬ್ ಸಾಂಪ್ರದಾಯಿಕ ಕೃಷಿಕರಲ್ಲ. ಅರ್ಥಶಾಸ್ತ್ರದ ಹಿನ್ನೆಲೆ ಹೊಂದಿರುವ ಇವರು ಬೆಂಗಳೂರಿನ ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದರು. 2004 ರಲ್ಲಿ, ಅವರ ವೃದ್ಧ ತಂದೆಯ ಅನಾರೋಗ್ಯದ ಕಾರಣ, ತಮ್ಮ ಉತ್ತಮ ಸಂಬಳದ ಕೆಲಸವನ್ನು ತೊರೆದು ಕೃಷಿಯನ್ನು ಪ್ರಾರಂಭಿಸಲು ತಮ್ಮ ಊರಿಗೆ ಮರಳಲು ನಿರ್ಧರಿಸಿದರು.

ಕೃಷಿಗೆ ಹೊಸಬರಾದ ಅಯ್ಯುಬ್ ಆರಂಭದಲ್ಲಿ ಸಾಕಷ್ಟು ಕಷ್ಟಪಟ್ಟರು. ಮೊದಲಿಗೆ ಬಾಳೆ ಮತ್ತು ವಿವಿಧ ತರಕಾರಿಗಳನ್ನು ಬೆಳೆಸಿದರು. ನಂತರ ಅವರು ತಮ್ಮ ಜಮೀನಿನಲ್ಲಿ ವೈವಿಧ್ಯಮಯ ಅಲ್ಪಾವಧಿಯ ಬೆಳೆಗಳನ್ನು ಬೆಳೆಸಿದರು. ಇದು ದೈನಂದಿನ ಅಥವಾ ಮಾಸಿಕ ಆಧಾರದ ಮೇಲೆ ಸ್ಥಿರ ಆದಾಯವನ್ನು ಗಳಿಸಲು ಸಹಾಯ ಮಾಡುತ್ತದೆ. ಪಪ್ಪಾಯದಂತಹ ಬೆಳೆಗಳನ್ನು ವರ್ಷಪೂರ್ತಿ ಪಡೆಯಲು ನಾಟಿಯ ಸಮಯವನ್ನು ಬದಲಿಸಿದರು. ಮಾರ್ಕೆಟಿಂಗ್‌ ಸವಾಲುಗಳನ್ನು ಎದುರಿಸಿದರು. ಅವರು ರಾಸಾಯನಿಕಗಳಿಲ್ಲದೆ ಉತ್ತಮ ಗುಣಮಟ್ಟದ ತರಕಾರಿಗಳನ್ನು ಬೆಳೆದಿದ್ದರೂ ಕೂಡ, ಅವು ಸೂಪರ್‌ಮಾರ್ಕೆಟ್‌ನಲ್ಲಿ ಇರುವಷ್ಟು ಆಕರ್ಷಕವಾಗಿರಲಿಲ್ಲ. ಹಾಗಾಗಿ, ಉತ್ತಮ ಬೆಲೆ ಸಿಗಲಿಲ್ಲ. ಈ ಸವಾಲನ್ನು ಎದುರಿಸಲು, ಅವರು ತಮ್ಮ ತೋಟದಲ್ಲೇ ಉತ್ಪನ್ನಗಳನ್ನು ಮಾರಲು ಆರಂಭಿಸಿದರು. ಈ ನೇರ ಮಾರಾಟವು ಪ್ರವಾಸಿಗರಿಂದ ಹೆಚ್ಚಿನ ಮಾರಾಟಕ್ಕೆ ಅನುವು ಮಾಡಿಕೊಟ್ಟಿತು. ಸ್ಥಳೀಯ ಮಾಧ್ಯಮಗಳು ಅವರನ್ನು ಬೆಂಬಲಿಸಿದವು. ಕಾಲಾಂತರದಲ್ಲಿ ಶ್ರೀ ಅಯ್ಯೂಬ್‌ರ ಕಲಿಯುವ ಉತ್ಸಾಹ ಮತ್ತು ಪ್ರಯತ್ನಗಳಿಂದ ಕೃಷಿಯನ್ನು ಲಾಭದಾಯಕವಾಗಿಸಿಕೊಂಡರು.

ಕೃಷಿಗೆ ಹೊಸಬರಾದ ಅಯ್ಯುಬ್ ಆರಂಭದಲ್ಲಿ ಸಾಕಷ್ಟು ಕಷ್ಟಪಟ್ಟರು. ಮೊದಲಿಗೆ ಬಾಳೆ ಮತ್ತು ವಿವಿಧ ತರಕಾರಿಗಳನ್ನು ಬೆಳೆಸಿದರು. ನಂತರ ಅವರು ತಮ್ಮ ಜಮೀನಿನಲ್ಲಿ ವೈವಿಧ್ಯಮಯ ಅಲ್ಪಾವಧಿಯ ಬೆಳೆಗಳನ್ನು ಬೆಳೆಸಿದರು. ಇದು ದೈನಂದಿನ ಅಥವಾ ಮಾಸಿಕ ಆಧಾರದ ಮೇಲೆ ಸ್ಥಿರ ಆದಾಯವನ್ನು ಗಳಿಸಲು ಸಹಾಯ ಮಾಡುತ್ತದೆ. ಪಪ್ಪಾಯದಂತಹ ಬೆಳೆಗಳನ್ನು ವರ್ಷಪೂರ್ತಿ ಪಡೆಯಲು ನಾಟಿಯ ಸಮಯವನ್ನು ಬದಲಿಸಿದರು. ಮಾರ್ಕೆಟಿಂಗ್‌ ಸವಾಲುಗಳನ್ನು ಎದುರಿಸಿದರು. ಅವರು ರಾಸಾಯನಿಕಗಳಿಲ್ಲದೆ ಉತ್ತಮ ಗುಣಮಟ್ಟದ ತರಕಾರಿಗಳನ್ನು ಬೆಳೆದಿದ್ದರೂ ಕೂಡ, ಅವು ಸೂಪರ್‌ಮಾರ್ಕೆಟ್‌ನಲ್ಲಿ ಇರುವಷ್ಟು ಆಕರ್ಷಕವಾಗಿರಲಿಲ್ಲ. ಹಾಗಾಗಿ, ಉತ್ತಮ ಬೆಲೆ ಸಿಗಲಿಲ್ಲ. ಈ ಸವಾಲನ್ನು ಎದುರಿಸಲು, ಅವರು ತಮ್ಮ ತೋಟದಲ್ಲೇ ಉತ್ಪನ್ನಗಳನ್ನು ಮಾರಲು ಆರಂಭಿಸಿದರು. ಈ ನೇರ ಮಾರಾಟವು ಪ್ರವಾಸಿಗರಿಂದ ಹೆಚ್ಚಿನ ಮಾರಾಟಕ್ಕೆ ಅನುವು ಮಾಡಿಕೊಟ್ಟಿತು. ಸ್ಥಳೀಯ ಮಾಧ್ಯಮಗಳು ಅವರನ್ನು ಬೆಂಬಲಿಸಿದವು. ಕಾಲಾಂತರದಲ್ಲಿ ಶ್ರೀ ಅಯ್ಯೂಬ್‌ರ ಕಲಿಯುವ ಉತ್ಸಾಹ ಮತ್ತು ಪ್ರಯತ್ನಗಳಿಂದ ಕೃಷಿಯನ್ನು ಲಾಭದಾಯಕವಾಗಿಸಿಕೊಂಡರು.

ತರಗತಿಯೆನ್ನುವ ಆಶಾಕಿರಣ

ವರ್ಷಗಳ ನಿರಂತರ ಕಲಿಕೆಯೊಂದಿಗೆ, ಶ್ರೀ ಅಯ್ಯೂಬ್ ಈಗ ಕೃಷಿ ಉದ್ಯಮದಲ್ಲಿ ತಮ್ಮ ಯಶಸ್ಸನ್ನು ಹೆಮ್ಮೆಯಿಂದ ದಾಖಲಿಸಿದ್ದಾರೆ. ಕಲಿಕೆ ಎನ್ನುವುದು ಸ್ವಂತ ಅನುಭವದಿಂದ ಮತ್ತು ಇತರರು ಹಂಚಿಕೊಳ್ಳುವ ಜ್ಞಾನ ಮತ್ತು ತಿಳಿವಳಿಕೆಯಿಂದ ಬರುತ್ತದೆ ಎಂದು ಅವರು ಬಲವಾಗಿ ನಂಬುತ್ತಾರೆ. ಅನುಭವಿ ರೈತರಿಂದ ಕಲಿಯುವ ಮೂಲಕ, ಪುಸ್ತಕಗಳು, ಲೇಖನಗಳನ್ನು ಓದುವ ಮೂಲಕ, ಕಾರ್ಯಾಗಾರಗಳಲ್ಲಿ ಭಾಗವಹಿಸುವ ಮೂಲಕ ಮತ್ತು ಇಂಟರ್ನೆಟ್ ಮೂಲಕ ಕಲಿಯುವುದರೊಂದಿಗೆ ಅವರು ತಮ್ಮ ಪ್ರಯಾಣವನ್ನು ಪ್ರಾರಂಭಿಸಿದರು.

ಸುಮಾರು ಏಳು ವರ್ಷಗಳ ಹಿಂದೆ, ತರಬೇತಿ ಸಂಯೋಜಕರಲ್ಲಿ ಒಬ್ಬರಾದ ವಯನಾಡಿನ MSSRF ಸಮುದಾಯ ಕೃಷಿ ಜೀವವೈವಿಧ್ಯ ಕೇಂದ್ರದ ಶ್ರೀ ರಾಮಕೃಷ್ಣನ್ ಅಯ್ಯುಬ್‌ ಅವರಿಗೆ ಶಿಕ್ಷಕರಾಗಲು ಪ್ರೋತ್ಸಾಹಿಸಿದರು. ಹಲವು ಜನರಿಂದ ಮತ್ತು ವಿವಿಧ ಪ್ರಕಟಣೆಗಳಿಂದ ತಾವು ಗಳಿಸಿದ ಜ್ಞಾನ ಮತ್ತು ಅನುಭವವನ್ನು ಇತರರೊಂದಿಗೆ ಹಂಚಿಕೊಳ್ಳುವುದು ತಮ್ಮ ನೈತಿಕ ಜವಾಬ್ದಾರಿ ಎಂದು ಭಾವಿಸಿದರು. MSSRF ಮತ್ತು ತಮ್ಮ ಕುಟುಂಬದ ಬೆಂಬಲದೊಂದಿಗೆ, ಶ್ರೀ ಅಯ್ಯೂಬ್ ರೈತರು, ನಿವೃತ್ತ ಸಿಬ್ಬಂದಿಗಳು, ಮಹಿಳೆಯರು ಮತ್ತು ವಿದ್ಯಾರ್ಥಿಗಳಿಗೆ ತರಗತಿಗಳನ್ನು ಪ್ರಾರಂಭಿಸಿದರು. ಅವರು ಕಲಿಸಲು ಪ್ರಾರಂಭಿಸಿದಾಗ, ಜೊತೆಗೆ ಕಲಿಯುವುದು ಬಹಳ ಮುಖ್ಯ ಎಂದರಿತರು. ಕಲಿಸಲು ಆರಂಭಿಸಿದ ಮೇಲೆ ತರಗತಿಗೆ ಬಂದವರಿಂದ ಹಲವು ವಿಷಯಗಳನ್ನು ಕಲಿತಿದ್ದಾಗಿ ಹೇಳುತ್ತಾರೆ. ಜೊತೆಗೆ ಕಲಿಕೆಯ ಸಂವಹವನದಲ್ಲಿ ಪರಸ್ಪರ ಕೊಡುಕೊಳೆ ಇರಬೇಕೆಂದು ಹೇಳುತ್ತಾರೆ. ಕೋವಿಡ್‌ ಸಮಯದಲ್ಲಿ, ಯಾವುದೇ ನಿಯಮಗಳನ್ನು ಮೀರದೆ ಅವರು 1000ಕ್ಕೂ ಹೆಚ್ಚು ಮಂದಿಗೆ ತರಗತಿಗಳನ್ನು ನಡೆಸಿದ್ದಾರೆ.

ಶ್ರೀ ಅಯ್ಯೂಬ್ ಅವರು ಸಾವಯವ ನಿರ್ವಹಣೆಯ ಪದ್ಧತಿಗಳು, ಹವಾಮಾನ ಹೊಂದಾಣಿಕೆಯ ಅಭ್ಯಾಸಗಳು, ವಿಯೆಟ್ನಾಂ ಮಾದರಿಯ ಕಾಳುಮೆಣಸು ಕೃಷಿ, ಜಾನುವಾರು ಮತ್ತು ಮೀನುಗಾರಿಕೆ ನಿರ್ವಹಣೆ, ಪಪ್ಪಾಯ ಕೃಷಿ, ಮಣ್ಣಿನ ನಿರ್ವಹಣೆ, ಜೀವಾಮೃತ, ಫಿಶ್ ಅಮಿನೋ ಮುಂತಾದ ಜೈವಿಕ ಗೊಬ್ಬರಗಳ ಉತ್ಪಾದನೆ ಇತ್ಯಾದಿಗಳ ಕುರಿತು ತರಗತಿಗಳನ್ನು ನಡೆಸುತ್ತಾರೆ. ಸಂಪೂರ್ಣ ಪರಿಸರ ವ್ಯವಸ್ಥೆಯನ್ನು ಗಮನದಲ್ಲಿಟ್ಟುಕೊಂಡ ಸುಸ್ಥಿರತೆಯ ಅಂಶಗಳ ಮೇಲೆ ಅವರು ವಿಶೇಷವಾಗಿ ಗಮನಕೇಂದ್ರೀಕರಿಸುತ್ತಾರೆ. ಅವರು ನಡೆಸುವ ತರಗತಿಗಳು ಥಿಯರಿ ಮತ್ತು ಪದ್ಧತಿಗಳ ಬಗ್ಗೆ ಕ್ಷೇತ್ರದ ಅನುಭವವನ್ನು ಕಲಿಯುವವರಿಗೆ ಪರಿಣಾಮಕಾರಿಯಾಗಿ ನೀಡುತ್ತದೆ. ಅರ್ಥಶಾಸ್ತ್ರ ಮತ್ತು ಕ್ಷೇತ್ರದ ಅನುಭವವು ಶ್ರೀ ಅಯ್ಯೂಬ್‌ರವರ ತರಗತಿಗಳನ್ನು ಕಲಿಯುವವರಿಗೆ ತಿಳಿವಳಿಕೆಯ ಪರಿಣಾಮಕಾರಿ ಸಮ್ಮಿಶ್ರಣವಾಗಿಸಿದೆ.

ಬಾಕ್ಸ್ 1: ಶ್ರೀ ಅಯ್ಯೂಬ್ ಅವರು ಹಂಚಿಕೊಂಡಿರುವ ಕೆಲವು ತಂತ್ರಜ್ಞಾನಗಳು

ವಿಯೆಟ್ನಾಂ ಮಾದರಿ ಕಾಳುಮೆಣಸು ಕೃಷಿ

ವಿಯೆಟ್ನಾಂ ಮಾದರಿ ಕಾಳುಮೆಣಸು ಕೃಷಿಯಲ್ಲಿ ಮರಕ್ಕೆ ಬದಲಾಗಿ ಕಾಂಕ್ರೀಟ್‌ ಕಂಬಗಳನ್ನು ಬಳ್ಳಿಗಳಿಗೆ ಆಧಾರವಾಗಿ ಬಳಸಲಾಗುತ್ತದೆ. ಬಳ್ಳಿಗಳನ್ನು ಒತ್ತಾಗಿ ನೆಡುವ ಮೂಲಕ ಪೋಷಕಾಂಶಗಳನ್ನು ಸಮರ್ಥವಾಗಿ ಬಳಸಲಾಗುವಂತೆ ಮಾಡಲಾಗುತ್ತದೆ. ಆದರೂ, ಈ ವ್ಯವಸ್ಥೆಯು ತಂಪಾದ ವಾತಾವರಣಕ್ಕೆ ಸೂಕ್ತವಾಗಿದೆ. ಹೆಚ್ಚಿನ ಉಷ್ಣಾಂಶವಿರುವ ಕಡೆ ಕಾಂಕ್ರೀಟ್‌ ನೇತ್ಯಾತ್ಮಕ ಪರಿಣಾಮ ಬೀರುತ್ತದೆ.

 ಪಪ್ಪಾಯ ಕೃಷಿ

ಆರಂಭದಲ್ಲಿ, ಅಯ್ಯೂಬ್ ಅಸ್ಥಿರ ಮಾರುಕಟ್ಟೆಯಿಂದಾಗಿ ಪಪ್ಪಾಯ ಕೃಷಿಯಲ್ಲಿ ನಷ್ಟವನ್ನು ಅನುಭವಿಸಿದರು. ಆದರೆ ನಾಟಿಯ ಸಮಯವನ್ನು ಬದಲಿಸಿ, ಪಪ್ಪಾಯದಿಂದ ಬಿಡುಗಡೆಯಾಗುವ ಲ್ಯಾಟೆಕ್ಸ್ ‘ಪಪೈನ್’ ಅನ್ನು ಕೊಯ್ಲು ಮಾಡುವ ಮೂಲಕ ಅವರು ಉತ್ತಮ ಲಾಭ ಗಳಿಸಲು ಪ್ರಾರಂಭಿಸಿದರು. ಈ ಅನುಭವವನ್ನು ತಮ್ಮ ಸಹರೈತರರ ಅನುಕೂಲಕ್ಕಾಗಿ ಹಂಚಿಕೊಂಡರು.

ನವೀನ ವಿಧಾನಗಳನ್ನು ಅನುಸರಿಸುವಾಗ, ಶ್ರೀ ಅಯ್ಯುಬ್ ಅವರು ವೈವಿಧ್ಯಮಯ ತರಕಾರಿಗಳು, ಹಣ್ಣುಗಳು, ಸ್ಥಳೀಯ ಮರಗಳು ಮತ್ತು ಜಾನುವಾರುಗಳನ್ನು ಒಳಗೊಳ್ಳುವ ಮೂಲಕ ಜಮೀನಿನಲ್ಲಿ ಸುಸ್ಥಿರತೆಯನ್ನು ಕಾಯ್ದುಕೊಂಡರು. ಈ ವೈವಿಧ್ಯತೆಯನ್ನು ಒಳಗೊಳ್ಳಲು ಉಳಿದ ರೈತರನ್ನು ಪ್ರೇರೇಪಿಸಿದರು. ಅವರ ಫಾರಂ ದೇಸಿ ಹಸುವಿತ ತಳಿಗಳು, ಕೋಳಿ ಸಾಕಾಣಿಕೆ, ಮೀನುಗಾರಿಕೆ ಮತ್ತು ವೈವಿಧ್ಯಮಯ ಹಣ್ಣುಗಳು (ಮಾವು, ಸೀಬೆ, ಬಾಳೆ, ಪಪ್ಪಾಯ, ಡ್ರ್ಯಾಗನ್‌ ಫ್ರೂಟ್‌, ಸಪೋಟ, ಲಿಚಿ, ರಂಬುಟಾನ್‌, ಸೀತಾಫಲ, ಮಲ್ಬರಿ, ಮಿರಾಕಲ್‌ ಹಣ್ಣು, ಅವಕಾಡೊ, ಮ್ಯಾಂಗೋಸ್ಟಿನ್‌, ದಾಳಿಂಬೆ ಇತ್ಯಾದಿ,), ತರಕಾರಿಗಳು, ಕಾಫಿ, ಅಡಕೆ, ತೆಂಗು, ಕಾಳುಮೆಣಸು, ದಾಲ್ಚಿನ್ನಿ, ಬಿದಿರು, ಮೊರಿಂಗಾ, ಬೇವು ಮತ್ತಿತರ ದೇಸಿ ಮರಗಳ ತಾಣವಾಗಿದೆ.

ಶ್ರೀ ಅಯ್ಯೂಬ್‌ ಅವರು ತಮ್ಮ ತರಗತಿಗಳಲ್ಲಿ, ಲಾಭಗಳಿಸುವ ವಿಧಾನಗಳು ಮತ್ತು ಸುಸ್ಥಿರ ಕೃಷಿ ಪದ್ಧತಿಗಳನ್ನು ಬಹಳ ಸುಂದರವಾಗಿ ಸಂಯೋಜಿಸಿದ್ದಾರೆ. ತರಗತಿಗಳನ್ನು ಜಮೀನನಲ್ಲಿಯೇ ನಡೆಸುವುದರ ಬಗ್ಗೆ ಒತ್ತು ನೀಡುತ್ತಾರೆ. ಕೃಷಿಯಲ್ಲಿ ತೊಡಗಿಕೊಳ್ಳಬಯಸುವವರು ಇಡಿಯಾಗಿ ಕೃಷಿಪರಿಸರ ವ್ಯವಸ್ಥೆಯನ್ನು ಅಂದರೆ ಬೆಳೆ, ಮಣ್ಣು, ಸೂಕ್ಷ್ಮಾಣುಗಳು, ಕೀಟಗಳು, ಸಮತೋಲನವನ್ನು ಕಾಯ್ದುಕೊಳ್ಳುವಲ್ಲಿ ಅವು ವಹಿಸುವ ಪಾತ್ರವನ್ನು ಅರ್ಥಮಾಡಿಕೊಳ್ಳಬೇಕೆನ್ನುವುದು ಅವರ ನಂಬಿಕೆ. ʼನನ್ನ ಪೂರ್ವಜರಿಂದ ಭೂಮಿಯನ್ನು ಪಡೆದಾಗ ಅದು ಪರಿಶುದ್ಧವಾಗಿತ್ತು. ನನ್ನ ಮುಂದಿನ ಪೀಳಿಗೆಗೆ ಅದನ್ನು ಅದೇ ರೀತಿ ನೀಡಬೇಕುಎಂದು ಅವರು ಹೇಳುತ್ತಾರೆ.

ತರಗತಿಗಳ ಹೊರತಾಗಿ ಅವರ ಜಮೀನಿಗೆ ಭೇಟಿ ಕೊಡುವುದರ ಮೂಲಕವೇ ಹಲವರು ಕಲಿಯುತ್ತಾರೆ. ಪ್ರತಿ ವರ್ಷ, ಕೃಷಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು, ವಿದೇಶಿಯರು ಅವರ ಜಮೀನಿಗೆ ಭೇಟಿ ಕೊಟ್ಟು ಪರಸ್ಪರ ಜ್ಞಾನವನ್ನು ಹಂಚಿಕೊಳ್ಳುತ್ತಾರೆ. ಕೃಷಿ ಮತ್ತಿತರ ಸರ್ಕಾರಿ ಇಲಾಖೆಗಳ ಸಿಬ್ಬಂದಿಗಳು ಮತ್ತು ಎನ್‌ಜಿಒಗಳು ಅವರ ಜಮೀನಿಗೆ ವಿಷಯ ತಿಳಿದುಕೊಳ್ಳಲೆಂದು ಭೇಟಿಗಳನ್ನು ಆಯೋಜಿಸುತ್ತಾರೆ.

ಶ್ರೀ ಅಯ್ಯೂಬ್ ಅವರು ಸಾಮಾಜಿಕ ಮಾಧ್ಯಮದಲ್ಲಿ ತುಂಬಾ ಸಕ್ರಿಯರಾಗಿದ್ದಾರೆ. ಅವರು ಇತರ ರೈತರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸುತ್ತಾರೆ. ತಮ್ಮ ಅನುಭವಗಳನ್ನು ಮತ್ತು ಬೆಳೆ ನಿರ್ವಹಣೆ, ಮಾರುಕಟ್ಟೆ ಇತ್ಯಾದಿಗಳ ಸಂಬಂಧಿತ ಮಾಹಿತಿಯನ್ನು ಫೇಸ್‌ಬುಕ್ ಮತ್ತು ವಾಟ್ಸಾಪ್ ಮೂಲಕ ಹಂಚಿಕೊಳ್ಳುತ್ತಿರುತ್ತಾರೆ. ಫೇಸ್‌ಬುಕ್‌ ಒಂದರಿಂದಲೇ ಭಾರತದಾದ್ಯಂತ ಸುಮಾರು 10,000 ರೈತರನ್ನು ತಲುಪಿದ್ದಾರೆ. https://www.facebook.com/ayoobkrishiwayanad.thotoli ಕೃಷಿಯ ಬಗ್ಗೆ ಅವರು ತಮ್ಮ ಒಳನೋಟಗಳನ್ನು ಹಂಚಿಕೊಳ್ಳುವ ಈ ಫೇಸ್‌ಬುಕ್‌ ಪೇಜಿಗೆ ಭೇಟಿನೀಡಬಹುದು.

ಶಿಕ್ಷಕ ವೃತ್ತಿಯು ಶ್ರೀ ಅಯ್ಯೂಬ್‌ ಅವರಿಗೆ ಹೆಮ್ಮೆಯನ್ನು ತಂದಿದೆ. ಅವರು ರೆಸಾರ್ಟ್‌ಗಳು, ತೋಟಗಾರರು ಮತ್ತು ಎಸ್ಟೇಟ್‌ ಮಾಲೀಕರಿಗೆ ಸಲಹೆಸೂಚನೆಗಳನ್ನು ಒದಗಿಸುತ್ತಾರೆ. ತಮ್ಮ ಕೃಷಿ ಪಯಣದಲ್ಲಿ, ಶ್ರೀ ಅಯ್ಯೂಬ್‌ ಅವರು ಸರ್ಕಾರಿ ಹಾಗೂ ಸರ್ಕಾರೇತರ ಸಂಸ್ಥೆಗಳಿಂದ ಹಲವಾರು ಪ್ರಶಸ್ತಿ ಗೌರವಗಳನ್ನು ಪಡೆದಿದ್ದಾರೆ.

ಭವಿಷ್ಯದ ಆಶಾಕಿರಣ

ಮುಂದಿನ ವರ್ಷಗಳಲ್ಲಿ, ಸಾಮಾಜಿಕ ಮಾಧ್ಯಮ ಮತ್ತು ಸ್ಥಳೀಯ ನೆಟ್‌ವರ್ಕ್‌ಗಳನ್ನು ಬಳಸಿಕೊಂಡು ರೈತರಿಗೆ ಉತ್ತಮ ಮಾರುಕಟ್ಟೆ ಸಂಪರ್ಕಜಾಲವನ್ನು ಅಭಿವೃದ್ಧಿಪಡಿಸಲು ಶ್ರೀ ಅಯ್ಯುಬ್ ಬಯಸಿದ್ದಾರೆ. ಮತ್ತೊಂದು ಯೋಜನೆ ಸಾಮಾನ್ಯರಿಗೆ ಸಾವಯವ ಕೃಷಿಯನ್ನು ಕೈಗೆಟುಕುವಂತೆ ಮಾಡುವುದು. ಅಂದರೆ, ಸಣ್ಣಭೂಮಿಯನ್ನು ಹೊಂದಿದ್ದು ಸಾವಯವವಾಗಿ ಬೆಳೆ ಬೆಳೆಯಲು ಆಸಕ್ತರಾಗಿರುವವರಿಗೆ ಸಾವಯವ ಕೃಷಿ ಕೈಗೊಳ್ಳಲು ನೆರವು ನೀಡುವುದು. ಇದು ಯೋಜನೆಯ ಹಂತದಲ್ಲಿದ್ದು, ಹಲವರು ಈಗಾಗಲೇ ಈ ಕುರಿತು ಆಸಕ್ತಿ ತೋರಿದ್ದಾರೆ. ಶ್ರೀ ಅಯ್ಯುಬ್‌ರವರು ತಮ್ಮ ಜೀವನಮಾನವಿಡಿ ಕೃಷಿಯನ್ನು ಅಭ್ಯಸಿಸಲು, ಕಲಿಸಲು ಮತ್ತು ತಮ್ಮ ಸಹರೈತರಿಂದ ಕಲಿಯಲು ಬದ್ಧರಾಗಿದ್ದಾರೆ. ರೈತಸಮುದಾಯಕ್ಕೆ ನೀತಿ ಬೆಂಬಲವನ್ನು ಒದಗಿಸಿ ಎನ್ನುವುದು ಸರ್ಕಾರಕ್ಕೆ ಅವರ ಮಾಡಿಕೊಳ್ಳುವ ಏಕೈಕ ಮನವಿ. ಏಕೆಂದರೆ ರೈತ ಸಮುದಾಯವು ಹವಾಮಾನ ಬದಲಾವಣೆ, ವನ್ಯಜೀವಿ ಸಂಘರ್ಷಗಳು, ರಾಸಾಯನಿಕಗಳ ಅತಿಬಳಕೆ ಮತ್ತು ವಿಜ್ಞಾನ ಹಾಗೂ ಅಭ್ಯಾಸಗಳ ನಡುವಿನ ಅಂತರ ಈ ರೀತಿಯ ಗಂಭೀರ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.

ಅರ್ಚನಾ ಭಟ್‌, ವಿಪಿನ್‌ದಾಸ್‌ ಮತ್ತು ದಿವ್ಯ ಪಿ ಆರ್‌


Archana Bhatt, Vipindas and Divya P R

MSSRF-Community Agrobiodiversity Centre

Puthoorvayal, Kalpetta, Wayanad, Kerala

PIN 673577

Email: archanabhatt1991@gmail.com


ಆಂಗ್ಲ ಮೂಲ : ಲೀಸಾ ಇಂಡಿಯಾ; ಸಂಪುಟ :೨೪; ಸಂಚಿಕೆ: ೨; ಜೂನ್‌ ೨೦೨೨

Recent Posts

ಕೃಷಿಯಲ್ಲಿ ನೀರಿನ ಸಮರ್ಥ ಬಳಕೆಗಾಗಿ ಕಾಲುವೆ ಯಾಂತ್ರೀಕರಣ

ಕೃಷಿಯಲ್ಲಿ ನೀರಿನ ಸಮರ್ಥ ಬಳಕೆಗಾಗಿ ಕಾಲುವೆ ಯಾಂತ್ರೀಕರಣ

ನಮ್ಮ ನೀರಾವರಿ ವ್ಯವಸ್ಥೆಯನ್ನು 21ನೇ ಶತಮಾನದ ಬೇಡಿಕೆಗಳಿಗೆ ಹೊಂದುವಂತೆ ಮಾಡುವುದು ನಮ್ಮ ಮುಂದಿರುವ ನಿಜವಾದ ಸವಾಲಾಗಿದೆ. ತಂತ್ರಜ್ಞಾನವೇ...