ಜಲಚರ ಸಾಕಣೆಯ ಸುಸ್ಥಿರ ಕೃಷಿ

ಅರುಣಾಚಲ ಪ್ರದೇಶದ ಅಪತಾನಿ ಬುಡಕಟ್ಟುಗಳವರು ಭತ್ತ ಮತ್ತು ಮೀನು ಸಾಕಾಣಿಕೆಯನ್ನು ಒಗ್ಗೂಡಿಸಿದ ಕಡಿಮೆ ವೆಚ್ಚದ ಸುಸ್ಥಿರ ಕೃಷಿ ಪದ್ಧತಿಯನ್ನು ಅನುಸರಿಸುತ್ತಾರೆ. ಇದು ರೈತ ಕುಟುಂಬಗಳಿಗೆ ಪೌಷ್ಟಿಕಾಂಶ ಮತ್ತು ಆದಾಯ ಭದ್ರತೆಯನ್ನು ಒದಗಿಸುತ್ತದೆ. ಈ ರೀತಿಯ ಸಾಂಪ್ರದಾಯಿಕ ಪದ್ಧತಿಗಳು ಆರ್ಥಿಕವಾಗಿ ಲಾಭದಾಯಕ ಮತ್ತು ಪರಿಸರ ಸ್ನೇಹಿ.

ಪೋಟೊ : ಜೈರೊ ಕಣಿವೆಯ ಮಹಿಳಾ ಉದ್ಯಮಿಗಳಿಗೆ ಕೌಶಲ್ಯಾಭಿವೃದ್ಧಿ ಕಾರ್ಯಕ್ರಮ

ಜೈರೊ ಕಣಿವೆಯು ಅರುಣಾಚಲ ಪ್ರದೇಶದಲ್ಲಿ ಸಮುದ್ರಮಟ್ಟದಿಂದ ೧೫೫೦ ಅಡಿಗಳಷ್ಟು ಎತ್ತರದಲ್ಲಿದೆ. ಇಲ್ಲಿನ ಭೌಗೋಳಿಕ ಪರಿಸರವು ಕೃಷಿಗೆ ಸೂಕ್ತವಾಗಿದೆ. ಈ ಪ್ರದೇಶದಲ್ಲಿ ೪೦೦ಮಿಮೀ ನಷ್ಟು ಸರಾಸರಿ ಮಳೆಯಾಗುತ್ತದೆ. ಉಷ್ಣಾಂಶವು ೫ ಸೆಂ – ೨೮ ಸೆಂ ನಷ್ಟಿರುತ್ತದೆ. ಭತ್ತದೊಂದಿಗೆ ಈ ಕಣಿವೆಯಲ್ಲಿ ಜೋಳ, ಕಿರುಧಾನ್ಯಗಳು, ಗೋಧಿ, ಹಣ್ಣು ಮತ್ತು ತರಕಾರಿಗಳನ್ನು ಬೆಳೆಯುತ್ತಾರೆ. ಇಲ್ಲಿನ ಕೃಷಿ ಅರಣ್ಯ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಪೈನ್‌ ಮರಗಳು ಮತ್ತು ಬಿದಿರನ್ನು ಕಾಣಬಹುದು. ಬೇಸಿಗೆಯಲ್ಲಿ ಇಲ್ಲಿನ ಹವಾಮಾನ ತಂಪಾಗಿರುವುದರಿಂದ ಪ್ರಪಂಚದಾದ್ಯಂತದಿಂದ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ.

ಅಪತಾನಿಗಳ ಭತ್ತಮೀನು ಕೃಷಿ

ಮೊದಲು ಹಾಂಗ್‌, ಹಾರಿ, ಹಿಜ, ಬುಲ, ದುತ್ತ, ಮುಡಂಗ್‌, ಬಾಮಿನ್‌ ಮತ್ತು ಹಳೆಯ ಜೈರೊ ಹಳ್ಳಿಗಳಲ್ಲಿನ ಜಲಸಂಸ್ಕೃತಿ ಪದ್ಧತಿಗಳನ್ನು ಅರ್ಥಮಾಡಿಕೊಳ್ಳಲು ಕ್ಷೇತ್ರಾಧ್ಯಯನವನ್ನು ಕೈಗೊಳ್ಳಲಾಯಿತು. ಅಪತಾನಿ ಬುಡಕಟ್ಟಿನವರು ಜೈರೊ ಕಣಿವೆಯ ಮೂಲನಿವಾಸಿಗಳು. ಈ ಪ್ರದೇಶವು ತನ್ನದೇ ಆದ ವಿಶಿಷ್ಟ ಭತ್ತ ಮತ್ತು ಮೀನುಸಾಕಾಣಿಕೆ ಸಂಯೋಜಿತ ಕೃಷಿ ಪದ್ಧತಿಗೆ (ಸ್ಥಳೀಯ ಹೆಸರು ಅಜಿನ್ಗೊಯಿ) ಹೆಸರುವಾಸಿಯಾಗಿದೆ. ಇಲ್ಲಿನ ೫೯.೧೨% ಭೂಮಿಯಲ್ಲಿ ಇದೇ ಕೃಷಿ ಪದ್ಧತಿಯನ್ನು ಅನುಸರಿಸಲಾಗುತ್ತಿದೆ. ಅಪತಾನಿ ಬುಡಕಟ್ಟಿನ ಮಂದಿ ಕೃಷಿಕರು. ಸಮರ್ಥ ನೀರಿನ ನಿರ್ವಹಣೆ, ಕೃಷಿ ಭೂಮಿಯ ನಿರ್ವಹಣೆ, ಭತ್ತ – ಮೀನುಸಾಕಾಣಿಕೆ ಕುರಿತು ಅವರು ಶ್ರೀಮಂತ ಸಾಂಪ್ರದಾಯಿಕ ತಿಳುವಳಿಕೆಯನ್ನು ಪಡೆದಿದ್ದಾರೆ.  ಇಲ್ಲಿ ಮಹಿಳೆಯರು ಪುರುಷರೊಂದಿಗೆ ಸಮಾನವಾಗಿ ದುಡಿಯುತ್ತಾರೆ. ಅಸ್ಸಾಂನಿಂದ ಒಳ್ಳೆಯ ಮೀನಿನ ಮೊಟ್ಟೆಗಳನ್ನು ತರಿಸಿಕೊಳ್ಳಲು ರೈತರು ಅತಿಹೆಚ್ಚು ಹಣವನ್ನು ನೀಡುತ್ತಾರೆ. ಈ ಕಣಿವೆಯು ಬೆಟ್ಟಪ್ರದೇಶವಾದ್ದರಿಂದ ಇಲ್ಲಿ ಮೀನುಮರಿ ಉತ್ಪಾದನಾ ಕೇಂದ್ರಗಳಿಲ್ಲ.

ಅಪತಾನಿಗಳು ನವಂಬರ್‌ ತಿಂಗಳಿನಲ್ಲಿ ಭತ್ತ – ಮೀನು ಸಾಕಾಣಿಕೆಗೆ ಭೂಮಿಯನ್ನು ಸಿದ್ಧಪಡಿಸುತ್ತಾರೆ. ಕೊಯ್ಲಿನ ನಂತರ ಉಳಿದ ಭತ್ತದ ಕಾಂಡಗಳನ್ನು ಗದ್ದೆಯಲ್ಲಿಯೇ ಕೊಳೆಯಲು ಬಿಡುತ್ತಾರೆ. ಇದು ನಂತರ ಭೂಮಿಗೆ ಗೊಬ್ಬರವಾಗಿ ಬಳಕೆಯಾಗುತ್ತದೆ. ಗದ್ದೆಬಯಲನ್ನು ಚೆನ್ನಾಗಿ ಒಣಗಲು ಬಿಡುತ್ತಾರೆ. ಇದರಿಂದ ಮಣ್ಣಿನೊಳಗಡೆ ಉಳಿದಿರಬಹುದಾದ ಕೀಟಗಳು ಸತ್ತುಹೋಗುತ್ತವೆ. ಡಿಸೆಂಬರ್‌ – ಜನವರಿ ತಿಂಗಳಲ್ಲಿ ರೈತರು ಭೂಮಿಯನ್ನು ಉತ್ತು ಹದ ಮಾಡುತ್ತಾರೆ. ಈ ಕೆಲಸಕ್ಕೆ ಅವರು ಯಾವುದೇ ಪ್ರಾಣಿಗಳನ್ನಾಗಲಿ, ಯಂತ್ರಗಳನ್ನಾಗಲಿ ಅಥವ ಯಾವುದೇ ರೀತಿಯ ಆಧುನಿಕ ಸಲಕರಣೆಗಳನ್ನು ಬಳಸುವುದಿಲ್ಲ. ಬದಲಿಗೆ ತಮ್ಮದೇ ಆದ ಸಾಂಪ್ರದಾಯಿಕ ಶೈಲಿಯಲ್ಲಿ ಸಾಂಪ್ರದಾಯಿಕ ಸಲಕರಣೆಗಳನ್ನು ಬಳಸಿ ಭೂಮಿಯನ್ನು ಹದಮಾಡುತ್ತಾರೆ. ರಾಗಿ, ಜೋಳದಂತಹ ಬೆಳೆಗಳು ಮತ್ತು ಹೆಚ್ಚುವರಿ ತರಕಾರಿಗಳಾದ ಸೌತೆಕಾಯಿ, ಬದನೆಕಾಯಿ, ಟೊಮ್ಯಾಟೊ, ಕುಂಬಳಕಾಯಿ, ಮೆಣಸಿನಕಾಯಿ, ಹುರುಳಿಕಾಯಿ ಇತ್ಯಾದಿ  ಬೆಳೆಯಲು ಸಾಕಾಗುವಷ್ಟು ೩೦-೭೦ ಸೆಂಮೀ ಅಗಲದ ಕಟ್ಟೆಗಳನ್ನು ನಿರ್ಮಿಸುತ್ತಾರೆ. ಇವುಗಳ ಮೇಲೆ ಗಿಡಗಳನ್ನು ಬೆಳೆಯುವುದರಿಂದ ಮಣ್ಣಿನ ಸವಕಳಿಯನ್ನು ತಡೆಯಬಹುದು.

ಫೋಟೋ : Fishes in trenches ನಾಲೆಗಳಲ್ಲಿ ಮೀನುಗಳು

ಮಹಿಳೆಯರು ಇದರಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಅವರು ಈ ಬೆಟ್ಟಪ್ರದೇಶದ ಭತ್ತ – ಮೀನು ಸಾಕಾಣಿಕೆ ಕೃಷಿಯಲ್ಲಿ ಗಂಡಸರೊಂದಿಗೆ ಸರಿಸಮಾನವಾಗಿ ಕೆಲಸವನ್ನು ಹಂಚಿಕೊಳ್ಳುತ್ತಾರೆ.

ಕಣಿವೆಗಳಲ್ಲಿನ ನೀರಾವರಿ ವ್ಯವಸ್ಥೆ ವಿಶಿಷ್ಟವಾದದ್ದು. ಕಿಲ್ಲೆ ನದಿಯಿಂದ ನಾಲೆಯೊಂದರ ಮೂಲಕ ಈ ಗದ್ದೆಗಳಿಗೆ ನೀರನ್ನು ಹರಿಸಲಾಗುತ್ತದೆ. ಈ ನಾಲೆಯಿಂದ ಕಾಲುವೆಗಳನ್ನು ತೋಡಿ ಗದ್ದೆಗಳಿಗೆ ಸಂಪರ್ಕ ಕಲ್ಪಿಸಲಾಗುತ್ತದೆ. ಮೆಟ್ಟಿಲುಪಾತಿಗಳಲ್ಲಿನ ಎಲ್ಲ ಗದ್ದೆಗಳಿಗೆ ಬಿದಿರು ಇಲ್ಲವೇ ಮರದಿಂದ ತಯಾರಿಸಿದ ಕೊಳವೆಗಳನ್ನು ಅಳವಡಿಸಿ ಎಲ್ಲ ಕಡೆಗೂ ಸಮಾನವಾಗಿ ನೀರು ಹಂಚಿಕೆಯಾಗುವಂತೆ ಮಾಡಲಾಗುತ್ತದೆ. ಈ ಕೊಳವೆಗಳನ್ನು ೧೫-೨೫ ಸೆಂಮೀ ಎತ್ತರದಲ್ಲಿ ಅಳವಡಿಸಲಾಗುತ್ತದೆ. ಭತ್ತ – ಮೀನಿನ ಕಾಲುವೆಯಲ್ಲಿ ೨೫-೩೦ ಸೆಂಮೀ ನೀರು ಇರುವಂತೆ ನೋಡಿಕೊಳ್ಳಲಾಗುತ್ತದೆ. ಬಿಸಿಲಿನಲ್ಲಿ ಮೀನುಗಳಿಗೆ ತೊಂದರೆಯಾಗದಂತೆ ಕಾಲುವೆಗಳನ್ನು (೩೦-೪೫ ಸೆಂಮೀ) ಆಳವಾಗಿ ತೋಡಿರುತ್ತಾರೆ. ಒಟ್ಟು ಗದ್ದೆಯ ವಿಸ್ಥೀರ್ಣದಲ್ಲಿ ೮-೧೨% ಜಾಗದಲ್ಲಿ ಕಾಲುವೆಗಳಿರುತ್ತವೆ. ಈ ಕಾಲುವೆಗಳಿಗೆ ಎರಡು ದ್ವಾರಗಳಿರುತ್ತವೆ. ಒಂದರ ಮೂಲಕ ಹೆಚ್ಚುವರಿ ನೀರನ್ನು ಹೊರಕ್ಕೆ ಬಿಡಲಾಗುತ್ತದೆ. ಮತ್ತೊಂದು ತುದಿಯಿಂದ ಮೀನಿನ ಕೊಯ್ಲಿಗೆ ಅನುಕೂಲವಾಗುವಂತೆ ಗದ್ದೆಯನ್ನು ಒಣಗಿಸಲಾಗುತ್ತದೆ. ಎರಡೂ ಕಡೆ ಮೀನು ತಪ್ಪಿಸಿಕೊಂಡು ಹೋಗದಂತೆ ಬಿದಿರಿನ ತಟ್ಟೆಯನ್ನು ಕಟ್ಟಿರುತ್ತಾರೆ.

ಜೈರೊ ಕಣಿವೆಯಲ್ಲಿ ಹದಿನೈದು ಬಗೆಯ ದೇಸಿ ಅಕ್ಕಿಯನ್ನು ಬೆಳೆಸಲಾಗುವುದು. ಏಪ್ರಿಲ್‌ ತಿಂಗಳಿನಲ್ಲಿ ಭತ್ತದ ಸಸಿಗಳನ್ನು ನರ್ಸರಿಗಳಿಂದ ತಂದು ಮಡಿಗಳಲ್ಲಿ ನೆಡುತ್ತಾರೆ. ಇದರೊಂದಿಗೆ ಹೆಚ್ಚುವರಿ ಬೆಳೆಯಾಗಿ ರಾಗಿ, ಸೋಯಾ, ಗೋಧಿ, ಜೋಳ, ಬಾರ್ಲಿಗಳನ್ನು ಗದ್ದೆಯ ಅಂಚಿನಲ್ಲಿ ಬೆಳೆಯುತ್ತಾರೆ.  ಸೌತೇಕಾಯಿ, ಬದನೆ,  ಟೊಮ್ಯಾಟೊ, ಕುಂಬಳಕಾಯಿ, ಮೆಣಸಿನಕಾಯಿ, ಮೂಲಂಗಿ ಇತ್ಯಾದಿಗಳನ್ನು ಕೂಡ ಬೆಳೆಯುತ್ತಾರೆ. ಇವೆಲ್ಲವನ್ನು ಮರದಿಂದ ಮಾಡಿದ ಗುಳಿದಸಿ (ಡಿಬ್ಲರ್‌) ಬಳಸಿ ನೆಡುತ್ತಾರೆ. ಕಿವಿಯಂತಹ ಹಣ್ಣುಗಳನ್ನು ಅಕ್ಕಪಕ್ಕದ ಭೂಮಿಯಲ್ಲಿ ನೆಡುತ್ತಾರೆ. ಬೆಳೆಯ ನಡುವಿನ ಕಳೆಯನ್ನು ಕೆಲಸಗಾರರನ್ನು ಬಳಸಿಕೊಂಡು ಉಪಕರಣಗಳ ಸಹಾಯದಿಂದ ಕಿತ್ತುಹಾಕುತ್ತಾರೆ.

ಮೆಟ್ಟಿಲು ಪಾತಿಗಳು ಯಾವ ಸ್ಥಿತಿಯಲ್ಲಿವೆ ಎನ್ನುವುದನ್ನು ಅವಲಂಭಿಸಿ ವರ್ಷಕ್ಕೆ ಒಂದು ಇಲ್ಲವೆ ಎರಡು ಬಾರಿ ಮೀನು ಸಾಕಾಣಿಕೆ ಮಾಡುತ್ತಾರೆ. ಕಾಮನ್‌ ಕಾರ್ಪ್‌ ತಳಿಯನ್ನು ಹೆಚ್ಚಾಗಿ ಸಾಕುತ್ತಾರೆ. ಸೈಪ್ರಿನಸ್ ಕಾರ್ಪಿಯೋ ಸ್ಪೆಕ್ಯುಲರಿಸ್ (ಮಿರರ್‌ ಕಾರ್ಪ್‌), ಸಿ. ಕಾರ್ಪಿಯೊ ಕಮ್ಯುನಿಸ್(ಸ್ಕೇಲ್‌ ಕಾರ್ಪ್‌) ಮತ್ತು  ಸಿ. ಕಾರ್ಪಿಯೊ ನ್ಯುಡುಸ್(ಲೆದರ್‌ ಕಾರ್ಪ್‌) ಎನ್ನುವುದು ಇವುಗಳ ವೈಜ್ಞಾನಿಕ ಹೆಸರು. ಇದನ್ನು ದೇಸಿ ತಳಿಗಳೊಂದಿಗೆ ಬೆಳೆಸುತ್ತಾರೆ. ೫-೮ ಸೆಂಮೀ ಉದ್ದದ ಸಣ್ಣ ಮೀನುಗಳನ್ನು ಭತ್ತವನ್ನು ನಾಟಿ ಮಾಡಿದ ೧೦-೧೫ ದಿನಗಳ ನಂತರ ಪಾತಿಗಳಲ್ಲಿ ಬಿಡುತ್ತಾರೆ. ಭತ್ತಕ್ಕೆ ಹಾನಿಕಾರಕವಾದ ಸಿಹಿನೀರು ಜೀರುಂಡೆಗಳನ್ನು ಈ ಮೀನುಗಳು ತಿನ್ನುತ್ತವೆ.  ಅಲ್ಲದೆ ಭತ್ತದ ಸಸಿಗಳಿಗೆ ಅಗತ್ಯವಾದ ಪೌಷ್ಟಿಕಾಂಶಗಳನ್ನು ಮಣ್ಣಿನ ಮೂಲಕ ಒದಗಿಸುತ್ತವೆ. ಕಾಮನ್‌ ಕಾರ್ಪ್‌ ಅಲ್ಲದೆ ಗ್ರಾಸ್‌ ಕಾರ್ಪ್‌ (ಸ್ಟೆನೊಫಾರೈನ್ಗೊಂಡೊನ್ಐಡೆಲ), ಸಿಲ್ವರ್‌ ಕಾರ್ಪ್‌ (ಹೈಪೋಫ್ಥಾಲ್ಮಿಚ್ತಿಸ್ ಮೊಲಿಟ್ರಿಕ್ಸ್), ಬಾರ್ಬೊನಿಮಸ್ ಗೊನಿಯೊನೋಟಸ್, ಲ್ಯಾಬಿಯೊ ಗೊನಿಯಸ್, ಲ್ಯಾಬಿಯೊ ಇತ್ಯಾದಿ ತಳಿಗಳನ್ನು ಬೆಳೆಸುತ್ತಾರೆ. ಗದ್ದೆಗೆ ಹಾಕುವ ಗೊಬ್ಬರದಲ್ಲಿನ ಸೂಕ್ಷ್ಮಜೀವಿಗಳಿಂದ (ಹಸು ಸಗಣಿ, ಹಂದಿ ಸಗಣಿ, ಕೋಳಿ ಹಿಕ್ಕೆಗಳು ಮತ್ತು ಹಸಿರು ತ್ಯಾಜ್ಯ) ಕೂಡ ಮೀನುಗಳಿಗೆ ಆಹಾರ ಸಿಗುತ್ತದೆ. ಇದರಿಂದ ಮೀನಿನ ಆಹಾರದ ವೆಚ್ಚವು ಕಡಿಮೆಯಾಗುತ್ತದೆ. ಉಳಿದೆಲ್ಲ ತಳಿಗಳಿಗಿಂತ ಕಾಮನ್‌ ಕಾರ್ಪ್‌ ತಳಿಯು ಹೆಚ್ಚು ತಾಳಿಕೆಯ ಗುಣವನ್ನು ಹೊಂದಿರುವುದು ಕಂಡುಬಂದಿದೆ. ಭತ್ತದ ಗದ್ದೆಗಳಲ್ಲಿ ಮೀನನ್ನು ಬೆಳೆಸುವಾಗ ಕಾಲುವೆಗಳನ್ನು ಆಳವಾಗಿ ತೋಡಲು ಸೂಚಿಸುತ್ತಾರೆ. ಕಡಿಮೆ ಮಳೆಯಾದಾಗ, ಬಿಸಿ ವಾತಾವರಣವಿದ್ದಾಗ, ತೆರೆದ ಬಯಲಿನಲ್ಲಿನ ನಿಂತ ನೀರು ಬಿಸಿಯಾಗುತ್ತದೆ. ಆಳದ ಕಾಲುವೆಗಳಲ್ಲಿನ ನೀರು ತಣ್ಣಗಿದ್ದು ಮೀನಿಗೆ ಅಡಗಲು ಅನುಕೂಲಕರವಾಗಿರುತ್ತದೆ.

ಭತ್ತಮೀನಿನ ಪಾತಿಗಳಲ್ಲಿ ಕೊಯ್ಲು ಮತ್ತು ಮಾರ್ಕೆಟಿಂಗ್

ಭತ್ತದ ಕೊಯ್ಲಿಗೂ ಮುನ್ನ ಮೀನನ್ನು ಪಾತಿಗಳಿಂದ ಹೊರತೆಗೆಯುತ್ತಾರೆ. ಗದ್ದೆಯಲ್ಲಿನ ನೀರನ್ನು ಮೊದಲು ಸಂಪೂರ್ಣವಾಗಿ ಖಾಲಿಮಾಡುತ್ತಾರೆ. ಆಮೇಲೆ ಕೈಯಲ್ಲಿ ಇಲ್ಲವೇ ಬಿದಿರನ್ನು ಬಳಸಿ ಮೀನುಗಳನ್ನು ಹೊರತೆಗೆಯುತ್ತಾರೆ. ಕಾಮನ್‌ ಕಾರ್ಪ್‌ ೩-೪ ತಿಂಗಳಲ್ಲಿ ೩೦೦-೫೦೦ ಗ್ರಾಂ ತೂಕ ತೂಗುತ್ತದೆ. ಉಳಿದವು ೬೫-೮೦ ಗ್ರಾಂ ತೂಕ ಬರುತ್ತಿದ್ದಂತೆ ರೈತರು ಅವುಗಳನ್ನು ಮಾರಾಟ ಮಾಡುತ್ತಾರೆ. ಗದ್ದೆಗಳಿಂದ ತೆಗೆದ ಮೀನುಗಳನ್ನು ನೀರಿನಲ್ಲಿ ತೊಳೆದು ಅವುಗಳನ್ನು ಬಿದಿರಿನ ಬುಟ್ಟಿಗಳಲ್ಲಿ (ಅಜಿ ಪಿವಾ ಅಥವ ಅಜಿ ರಾಜು) ಮಾರುಕಟ್ಟೆಗೆ ಸಾಗಿಸುತ್ತಾರೆ. ಮೀನುಗಳನ್ನು ಒಂದರ ಮೇಲೊಂದರಂತೆ ಪದರಗಳಾಗಿ ಜೋಡಿಸುತ್ತಾರೆ. ಇದಕ್ಕಾಗಿ ಆಮ್ಲಜನಕ ತುಂಬಿಸಿದ ಪ್ಲಾಸ್ಟಿಕ್‌ ಚೀಲ ಮತ್ತು ನೀರನ್ನು ಬಳಸುವುದಿಲ್ಲ. ಸುಬಾನಸಿರಿ ಜಿಲ್ಲಾಕೇಂದ್ರದ ಹತ್ತಿರದ ಹಪೋಲಿ ಎನ್ನುವ ಸ್ಥಳೀಯ ಮಾರುಕಟ್ಟೆಯಲ್ಲಿ ಇವುಗಳನ್ನು ತಾಜಾ ಆಗಿರುವಾಗಲೇ ಮಾರಾಟಮಾಡುತ್ತಾರೆ. ಬಿದಿರಿನ ತೊಟ್ಟಿಗಳಲ್ಲಿ ನೀರು ತುಂಬಿ ಅದರಲ್ಲಿ ಮೀನುಗಳನ್ನು ಬಿಟ್ಟು ಪಾಲಿಲೈನ್‌ ಹೊದಿಕೆಯನ್ನು ಮುಚ್ಚುತ್ತಾರೆ. ರೈತರ ಉತ್ಪನ್ನಗಳನ್ನು ಮಾರಲು ಯಾವುದೇ ಮಧ್ಯವರ್ತಿಗಳಿರುವುದಿಲ್ಲ. ಜೀವಂತ ಮೀನು ಒಂದು ಕೆಜಿಗೆ ರೂ.೩೦೦. ಭತ್ತದ ಕೊಯ್ಲಿನೊಂದಿಗೆ ರೈತನಿಗೆ ಶೇ.೧೦೦ಕ್ಕಿಂತಲೂ ಹೆಚ್ಚಿನ ಲಾಭ ಸಿಗುತ್ತದೆ.

ಭತ್ತವನ್ನು ನಾಟಿ ಮಾಡಿದ ಆಧಾರದ ಮೇಲೆ ಸೆಪ್ಟಂಬರ್‌-ಅಕ್ಟೋಬರ್‌ ತಿಂಗಳಲ್ಲಿ (ಆಂಟಿ ಪಿಲಾ ಅಥವ ಆಂಟಿ ದಂಡು) ಕೊಯ್ಲು ಮಾಡುತ್ತಾರೆ. ಮಣ್ಣಿನ ಫಲವತ್ತತೆಯ ಆಧಾರದ ಮೇಲೆ ಭತ್ತ – ಮೀನು ಸಾಕಾಣಿಕೆ ಮೆಟ್ಟಿಲುಪಾತಿಗಳಲ್ಲಿ ಬೆಳೆದ ಭತ್ತವು ಪ್ರತಿ ಹೆಕ್ಟೇರ್‌/ಋತುವಿಗೆ ತಕ್ಕಂತೆ ೧೦-೧೦೦ ಕ್ವಿಂಟಾಲ್‌ ಸಿಗುತ್ತದೆ. ತಾವು ಬೆಳೆದ ಭತ್ತವನ್ನು ಮನೆಬಳಕೆಗೆ ಇಟ್ಟುಕೊಳ್ಳುತ್ತಾರೆ. ಆದ್ದರಿಂದ ಭತ್ತವನ್ನು ಮಾರಾಟಮಾಡುವುದಿಲ್ಲ.  ಭತ್ತದೊಂದಿಗೆ ಬೆಳೆದ ರಾಗಿ, ಸೋಯಾ, ಜೋಳ ಇವುಗಳನ್ನು ಆಗಸ್ಟ್‌-ಸೆಪ್ಟಂಬರ್‌ನಲ್ಲಿ ಕೊಯ್ಲು ಮಾಡುತ್ತದೆ. ಇವುಗಳನ್ನು ಹಿಟ್ಟಿನ ರೂಪದಲ್ಲಿ ಬಳಸುತ್ತಾರೆ. ದೇಸಿ ಮದ್ಯ ತಯಾರಿಕೆಗೂ (ಸಾರ್ಸೆಒ) ಬಳಸುತ್ತಾರೆ. ಅದೇ ರೀತಿ ತರಕಾರಿಗಳನ್ನು ಆಯಾ ಕಾಲಕ್ಕೆ ತಕ್ಕಂತೆ ಜುಲೈ- ಅಕ್ಟೋಬರ್‌ ತಿಂಗಳಲ್ಲಿ ಕೊಯ್ಲು ಮಾಡುತ್ತಾರೆ. ಮನೆಬಳಕೆಗೆ ಸಾಕಾಗುವಷ್ಟು ತರಕಾರಿಯನ್ನಿಟ್ಟುಕೊಂಡು ಉಳಿದದ್ದನ್ನು ಮಾರಾಟಮಾಡುತ್ತಾರೆ.

ಕೈಗೊಂಡಿರುವ ಕೆಲವು ಕ್ರಮಗಳು

ಭೀಮ್ತಾಲ್‌ನ ಐಸಿಎಆರ್‌ – ಡಿಸಿಎಫ್‌ಆರ್‌ನ ವಿಜ್ಞಾನಿಗಳು ಕ್ಷೇತ್ರಾಧ್ಯಯನದಿಂದ ಪಡೆದ ಫಲಿತಾಂಶದ ಆಧಾರದ ಮೇಲೆ ಈ ಕಣಿವೆಗಳಲ್ಲಿನ ಮೀನು ಕೃಷಿಕರ ಸಬಲೀಕರಣಕ್ಕೆ ೨೦೧೮-೧೯ರಲ್ಲಿ ಕೆಲವು ಕ್ರಮಗಳನ್ನು ಕೈಗೊಂಡರು:

ಈ ಕಣಿವೆಯಲ್ಲಿ ಮೀನುಮರಿ ಉತ್ಪಾದನ ಕೇಂದ್ರವಿಲ್ಲದಿರುವುದರಿಂದ ರೈತರು ಹೆಚ್ಚು ಹಣ ಕೊಟ್ಟು ಪಕ್ಕದ ಅಸ್ಸಾಂನಿಂದ ಮೀನಿನ ಮರಿಗಳನ್ನು ತರಿಸಿಕೊಳ್ಳುತ್ತಿದ್ದಾರೆ. ಆದ್ದರಿಂದ ಸಣ್ಣದಾದ ಮೀನುಮರಿ ಉತ್ಪಾದನಾ ಕೇಂದ್ರವನ್ನು ೨೦೧೮ರಲ್ಲಿ ಅರುಣಾಚಲ ಪ್ರದೇಶದ ಸರ್ಕಾರಿ ಮೀನುಗಾರಿಕಾ ಇಲಾಖೆ ಮತ್ತು ಅಪತಾನಿ ಸಮುದಾಯದ ಸಹಯೋಗದಲ್ಲಿ ಹರಿ ಎನ್ನುವ ಹಳ್ಳಿಯಲ್ಲಿ ಸ್ಥಾಪಿಸಲಾಯಿತು. ಗೌಮ್ಕೊ ಬಹುಪಯೋಗಿ ಸಹಕಾರಿ ಸಂಘವಾಗಿ ಈ ಘಟಕವನ್ನು ಮಹಿಳಾ ಉದ್ಯಮ ಶ್ರೀಮತಿ. ಗ್ಯಾತಿ ರಿನ್ಯೊ ಅವರ ನೇತೃತ್ವದಲ್ಲಿ ಸ್ಥಾಪಿಸಲಾಯಿತು. ಈ ಸಂಘವನ್ನು ೨೦೧೪ರಲ್ಲಿ ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಕೃಷಿ, ಮೀನು ಸಾಕಾಣಿಕೆ ಮತ್ತು ಜಾನುವಾರುಗಳ ಅಭಿವೃದ್ಧಿಗಾಗಿ ಸ್ಥಾಪಿಸಲಾಯಿತು.

೨೨ನೇ ಮಾರ್ಚ್‌ ೨೦೧೮ರಂದು ಹರಿ ಹಳ್ಳಿಯಲ್ಲಿ “ಅರುಣಾಚಲ ಪ್ರದೇಶದಂತಹ ಶೀತ ಪ್ರದೇಶಗಳಲ್ಲಿ ಮೀನು ಕೃಷಿ ಮತ್ತು ಮೊಟ್ಟೆ ಉತ್ಪಾದನೆ” ಎನ್ನುವ ಸಂವಾದ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಇದರಲ್ಲಿ ೨೦೦ ರೈತರು, ಸರ್ಕಾರಿ ಅಧಿಕಾರಿಗಳು ಮತ್ತು ವಿಜ್ಞಾನಿಗಳು ಭಾಗವಹಿಸಿದ್ದರು. ಮೀನು ಕೃಷಿಕರಿಗೆ ಪ್ರೋತ್ಸಾಹ ನೀಡುವ ಸಲುವಾಗಿ ಉತ್ತಮ ಗುಣಮಟ್ಟದ ಮೀನಿನ ಮೊಟ್ಟೆಗಳನ್ನು ಉಚಿತವಾಗಿ ವಿತರಿಸಲಾಯಿತು.

ಇದರೊಂದಿಗೆ “ಜೈರೊ ಕಣಿವೆಯ ರೈತರಿಗೆ ಮೀನಿನ ಕೃಷಿಯನ್ನು ಆರಂಭಿಸುವುದು, ಮೊಟ್ಟೆ ಉತ್ಪಾದನೆ ಮತ್ತು ಮೀನು ಉತ್ಪಾದನಾ ಕೇಂದ್ರಗಳ ನಿರ್ವಹಣೆ” ಕುರಿತು ಕೌಶಲ್ಯಾಭಿವೃದ್ಧಿ ಕಾರ್ಯಕ್ರಮವನ್ನು ೨೦-೨೪ ಮೇ ೨೦೧೮ರಂದು ಅಸ್ಸಾಂನ ಬಿಸ್ವಂತ್‌ ಜಿಲ್ಲೆಯ ಪಬೊಹಿ ಫಿಶ್‌ ಫಾರಂನಲ್ಲಿ ಆಯೋಜಿಸಲಾಗಿತ್ತು. ಸಂಘದ ಐವರು ಪ್ರೌಢ ಮೀನುಗಳ ನಿರ್ವಹಣೆ, ಉತ್ಪಾದನಾ ಕೇಂದ್ರ ನಿರ್ವಹಣೆ, ಮೊಟ್ಟೆ ಉತ್ಪಾದನೆ, ಸಾಗಾಣಿಕೆ ಮತ್ತು ಮಾರ್ಕೆಟಿಂಗ್‌ ಕುರಿತು ತರಬೇತಿ ಪಡೆದರು. ಇದರೊಂದಿಗೆ ನರ್ಸರಿ ನಿರ್ವಹಣೆ ಮತ್ತು ಮೀನಿನ ಮರಿಗಳ ಸಾಕಾಣಿಕೆ ಕುರಿತು ತಿಳಿದುಕೊಂಡರು. ಇದರೊಂದಿಗೆ ಭೀಮ್ತಲ್‌ನ ಐಸಿಎಆರ್‌ – ಡಿಸಿಎಫ್‌ಆರ್‌ನವರು ಮೀನುಮರಿ ಉತ್ಪಾದನಾ ಕೇಂದ್ರದಲ್ಲಿ ಪ್ರೌಢಮೀನುಗಳಿಗಾಗಿ ಕೊಳ ಮತ್ತು ನಾಲ್ಕು ನರ್ಸರಿಗಳನ್ನು ಸ್ಥಾಪಿಸಲು ಸಂಘಕ್ಕೆ ಆರ್ಥಿಕ ಮತ್ತು ತಾಂತ್ರಿಕ ನೆರವನ್ನು ಒದಗಿಸಿದರು. ಈ ಕೇಂದ್ರದಿಂದ ವಿವಿಧ ಗಾತ್ರ ಮತ್ತು ವಿವಿಧ ಜಾತಿಯ ಮೀನುಗಳನ್ನು ಪಡೆಯಲು ರೈತರಿಗೆ ಅನುಕೂಲವಾಯಿತು.

 ಫೋಟೊ : ಭತ್ತ ಮೀನು ಮೆಟ್ಟಿಲು ಪಾತಿಗಳಲ್ಲಿನ ನೀರನ್ನು ಹೊರಚೆಲ್ಲುವ ನೀರಾವರಿ ಕಾಲುವೆಗಳು

ಭತ್ತದ ಪಾತಿಗಳಲ್ಲಿನ ನೀರಿನ ಪರಿಸರವು ಕಾಲುವೆಗಳ ಮೂಲಕ ಹರಿದುಬರುವ ನೀರಿನ ಗುಣಮಟ್ಟವನ್ನು ಅವಲಂಭಿಸಿರುತ್ತದೆ. ನೀರಿನ ಗುಣಮಟ್ಟ ಮತ್ತು ಮೀನಿನ ಆಹಾರದ ವೈವಿಧ್ಯತೆಯನ್ನು ಅರಿಯಲು ಕಾಲುವೆಗಳು ಮತ್ತು ಭತ್ತ- ಮೀನು ಪಾತಿಗಳಲ್ಲಿನ ನೀರನ್ನು ಸಂಗ್ರಹಿಸಿ ಅಭ್ಯಸಿಸುತ್ತಾರೆ. ಈ ಪಾತಿಗಳಲ್ಲಿ ಫೈಟೊಪ್ಲಾಂಕ್ಟನ್‌ಗಳಾದ ಸ್ಪಿರೋಗೈರಾ (೧೨-೪೭%), ಒಸೈಟಿಸ್ (೪೦%), ನಾವಿಕುಲಾ (೫- ೧೪%), ಪಿನ್ನುಲೇರಿಯಾ (೬-೧೩%), ನಿಟ್ಜ್ಚಿಯಾ (೧೩%), ಉಲೋಥ್ರಿಕ್ಸ್ (೧೩%), ಕ್ಲೋಸ್ಟೀರಿಯಂ (೧೩%), ಸ್ಟಿಜಿಯೋಕ್ಲೋನಿಯಮ್ (೧೧%) ಮತ್ತು ಅಂಕಿರಾ (೭%)ನಷ್ಟಿರುತ್ತದೆ. ಅದೇ ರೀತಿ ಕೋಪಪಾಡ್ಸ್ (೧೧-೯೦%), ಕ್ಲಾಡೋಸೆರಾನ್ (೫-೨೫%)ನಷ್ಟಿರುತ್ತದೆ ಎಂದು ಅಧ್ಯಯನದಿಂದ ತಿಳಿದುಬಂದಿದೆ.

ಕೃಷಿ ಸಲಹೆ ಮತ್ತು ತಾಂತ್ರಿಕ ಮಾರ್ಗದರ್ಶನವನ್ನು ಆಯಾ ರೈತರ ಗದ್ದೆಗಳಿಗೆ ಕಾಲಕಾಲಕ್ಕೆ ಭೇಟಿನೀಡಿ ನೀಡಲಾಗುತ್ತದೆ. ಉದಾಹರಣೆ ಭತ್ತ – ಮೀನು ಕೃಷಿ ಮಾಡುವವರಿಗೆ ಕಾಲುವೆಗಳನ್ನು ೯೦ಸೆಂಮೀನಷ್ಟು ಆಳವಾಗಿ ತೋಡಲು ಹೇಳಲಾಯಿತು. ಇದೇ ರೀತಿಯಲ್ಲಿ ಅಗಲವನ್ನು ಹೆಚ್ಚಿಸಿದಾಗ ಮೀನುಗಳು ಬದುಕುಳಿಯುವ ಸಾಧ್ಯತೆಯು ಹೆಚ್ಚಾಗುತ್ತದೆ. ಸಂಗ್ರಹಣಾ ಸಾಮರ್ಥ್ಯ ಹೆಚ್ಚುವುದರೊಂದಿಗೆ ಕೊಯ್ಲು ಮಾಡುವುದು ಸುಲಭವಾಗುತ್ತದೆ. ೧-೨ ರಿಂದ ೪-೫ ಮೀಟರ್‌ನಷ್ಟು ವ್ಯಾಪ್ತಿಯಲ್ಲಿ ಮೀನಿನಮರಿಗಳನ್ನು ಬಿಡಲಾಯಿತು. ಪಾತಿಗಳ ಆಳವನ್ನು ಹೆಚ್ಚಿಸಿದ್ದರಿಂದ ಮೀನಿನ ಮರಿಗಳ ಸಂಗ್ರಹವನ್ನು ಪ್ರತಿ ಚದುರಮೀಟರ್‌ ಪ್ರದೇಶಕ್ಕೆ ೧-೨ ರಿಂದ ೪-೫ಕ್ಕೆ ಹೆಚ್ಚಿಸಲಾಯಿತು.

ಮುಕ್ತಾಯ

ಗ್ರಾಮೀಣ ಸಮುದಾಯಗಳು ಅತ್ಯಲ್ಪ ವೆಚ್ಚದಲ್ಲಿ ಕೈಗೊಳ್ಳಬಹುದಾದ ಸುಸ್ಥಿರ ಕೃಷಿಪದ್ಧತಿ ಭತ್ತ ಮತ್ತು ಮೀನಿನ ಜಂಟಿಕೃಷಿ. ಇದರಿಂದ ಅವರಿಗೆ ಉತ್ತಮ ಪೌಷ್ಟಿಕಾಂಶವುಳ್ಳ ಆಹಾರ ದೊರಕುವುದಲ್ಲದೆ ನಿಶ್ಚಿತ ಆದಾಯವೂ ಸಿಗುತ್ತದೆ. ಭತ್ತವೊಂದನ್ನೇ ಏಕಬೆಳೆಯಾಗಿ ಬೆಳೆಯುವುದರ ಬದಲು ಈ ಪದ್ಧತಿಯನ್ನು ಅನುಸರಿಸಿದಲ್ಲಿ ಹೆಚ್ಚಿನ ಆದಾಯವನ್ನು ಗಳಿಸಬಹುದು ಎನ್ನುವುದನ್ನು ಇಲ್ಲಿ ಗಮನಿಸಬಹುದಾಗಿದೆ. ಎಲ್ಲಕ್ಕಿಂತ ಹೆಚ್ಚಾಗಿ ಜೈರೊ ಕಣಿವೆಯಲ್ಲಿಯೇ ಖಾಸಗಿ ಮೀನು ಉತ್ಪಾದನಾ ಕೇಂದ್ರವನ್ನು ಸ್ಥಾಪಿಸಿದ್ದರಿಂದ ಮೀನಿನ ಮರಿಗಳು ಸುಲಭವಾಗಿ ಸಿಗುವಂತಾಯಿತು. ಅಲ್ಲದೆ ಮಹಿಳೆಯರು ಮೀನಿನ ಮೊಟ್ಟೆ ಮತ್ತು ಮರಿಗಳ ಉತ್ಪಾದನೆ, ನಿರ್ವಹಣೆಯನ್ನು ಕಲಿತಿದ್ದರ ಪರಿಣಾಮದಿಂದ ಉತ್ತಮ ಫಲಿತಾಂಶಗಳು ದೊರೆಯಿತು. ಆದರೂ ಶೈತ್ಯೀಕರಣ ಘಟಕವನ್ನು ಹೊಂದಿದ ಸಾರಿಗೆ ಸೌಲಭ್ಯ ಮತ್ತು ಸ್ವಚ್ಛ ಮೀನಿನ ಮಾರುಕಟ್ಟೆಯ ಅವಶ್ಯಕತೆ ಇದೆ.

ಫೋಟೊ : Installation of FRP fish hatchery ಮೀನು ಉತ್ಪಾದನಾ ಕೇಂದ್ರದ ಅಳವಡಿಕೆ

ಕೃತಜ್ಞತೆಗಳು

ಎನ್‌ಇಎಚ್‌ನ ನೊಡಾಲ್‌ ಅಧಿಕಾರಿಗಳು, ಭೀಮ್ತಲ್‌ನ ಐಸಿಎಆರ್‌ – ಡಿಸಿಎಫ್‌ಆರ್‌ ವೈಜ್ಞಾನಿಕ ಸಿಬ್ಬಂದಿ ವರ್ಗ, ಪಿಎಂಇ ಇವರೆಲ್ಲರೂ ಗ್ರಾಮೀಣಾಭಿವೃದ್ಧಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಲು ನೀಡಿದ ಸಹಕಾರಕ್ಕೆ ಲೇಖಕರು ಹೃತ್ಪೂರ್ವಕ ಕೃತಜ್ಞತೆಗಳನ್ನು ಅರ್ಪಿಸಿದ್ದಾರೆ.

ಭತ್ತ – ಮೀನು ಕೃಷಿಕರು, ರಾಜ್ಯ ಮೀನುಗಾರಿಕೆ ಇಲಾಖೆಯ ಅಧಿಕಾರಿಗಳು, ಕೆವಿಕೆಯ ವಿಜ್ಞಾನಿಗಳು  ಇವರಿಗೆ ಕೂಡ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ.

ಉಲ್ಲೇಖಗಳು

Baruah D & Singh ND., Rice-fish cultivation of Apatanis: A high altitude farming system in Arunachal Pradesh, 2018, Journal of Krishi Vigyan, 7(1), pp. 187-191.

Halwart M and Gupta MV., Culture of fish in rice fields, 2004, FAO and The World Fish Center, pp.1-77

IRRI, Rice research in a time of change, 1993, IRRI, Los Banos, Laguna, Philippines

ದೀಪಜ್ಯೋತಿ ಬರುಹ್‌, ರವೀಂದ್ರ ಪೋಸ್ತಿ, ಕೆ. ಕುನಾಲ್‌, ಪಿ. ಗಣಿ, ಡಿ. ಶರ್ಮ ಮತ್ತು ಗಯತಿ ರಿನ್ಯೊ

Deepjyoti Baruah, Ravindra Posti, K Kunal,

P A Ganie, D Sarma

ICAR-Directorate of Coldwater Fisheries Research,

Bhimtal-263136, Nainital, Uttarakhand

E-mail: deep_baruah@rediffmail.com

Gyati Rinyo

Gaumco Multipurpose Cooperative Society

Lower Subansiri district, Hapoli-791120

Arunachal Pradesh

ಆಂಗ್ಲ ಮೂಲ : ಲೀಸಾ ಇಂಡಿಯಾ; ಸಂಪುಟ :೨೧; ಸಂಚಿಕೆ : ೧; ಮಾರ್ಚ್‌ ೨೦೧೯

Recent Posts

ಕೃಷಿಯಲ್ಲಿ ನೀರಿನ ಸಮರ್ಥ ಬಳಕೆಗಾಗಿ ಕಾಲುವೆ ಯಾಂತ್ರೀಕರಣ

ಕೃಷಿಯಲ್ಲಿ ನೀರಿನ ಸಮರ್ಥ ಬಳಕೆಗಾಗಿ ಕಾಲುವೆ ಯಾಂತ್ರೀಕರಣ

ನಮ್ಮ ನೀರಾವರಿ ವ್ಯವಸ್ಥೆಯನ್ನು 21ನೇ ಶತಮಾನದ ಬೇಡಿಕೆಗಳಿಗೆ ಹೊಂದುವಂತೆ ಮಾಡುವುದು ನಮ್ಮ ಮುಂದಿರುವ ನಿಜವಾದ ಸವಾಲಾಗಿದೆ. ತಂತ್ರಜ್ಞಾನವೇ...