ಜೀವನೋಪಾಯ ಮತ್ತು ಪೌಷ್ಟಿಕಾಂಶದ ಭದ್ರತೆಗಾಗಿ ಸಣ್ಣ ಹಿಡುವಳಿದಾರರ ತೋಟಗಳಲ್ಲಿ ಸಮಗ್ರ ಕೃಷಿ


ಕಡಿಮೆ ಆದಾಯದ ಹೊರತಾಗಿಯೂ ತಮಿಳುನಾಡಿನ ಕರಾವಳಿಯ ರೈತರು ಭತ್ತವನ್ನು ಮಾತ್ರ ಬೆಳೆಯುವ ಒತ್ತಡಕ್ಕೆ ಒಳಗಾಗಿದ್ದಾರೆ. ಏಕೆಂದರೆ ಅಕ್ಕಿ ಮಾತ್ರ ದೀರ್ಘಕಾಲದವರೆಗೆ ನೀರಿನ ನಿಶ್ಚಲತೆಯನ್ನು ತಡೆದುಕೊಳ್ಳುವ ವಿಶಿಷ್ಟ ಲಕ್ಷಣವನ್ನು ಹೊಂದಿದೆ. ಅಕ್ಕಿಯೊಂದಿಗೆ ಮೀನು ಮತ್ತು ಕೋಳಿ ಸಾಕಣೆಯನ್ನು ಸಂಯೋಜಿಸಿದ್ದು ತಮಿಳುನಾಡಿನ 3 ಕರಾವಳಿ ಜಿಲ್ಲೆಗಳ ರೈತರಿಗೆ ತಮ್ಮ ಆದಾಯವನ್ನು ದ್ವಿಗುಣಗೊಳಿಸಿಕೊಳ್ಳಲು ಮತ್ತು ಕುಟುಂಬದ ಪೌಷ್ಟಿಕಾಂಶದ ಸ್ಥಿತಿಯನ್ನು ಹೆಚ್ಚಿಸಲು ಸಹಾಯ ಮಾಡಿತು.


ಅಕ್ಕಿ ಆಧಾರಿತ ಕೃಷಿ ವ್ಯವಸ್ಥೆಗಳು ಏಷ್ಯಾ, ಆಫ್ರಿಕಾ ಮತ್ತು ಲ್ಯಾಟಿನ್ ಅಮೆರಿಕದ ಲಕ್ಷಾಂತರ ಗ್ರಾಮೀಣ ಬಡವರ ಮುಖ್ಯ ಆರ್ಥಿಕ ಚಟುವಟಿಕೆಗಳಾಗಿವೆ. ಏಷ್ಯಾವೊಂದರಲ್ಲೇ 1 ಹೆಕ್ಟೇರ್‌ಗಿಂತ ಚಿಕ್ಕದಾದ 200 ಮಿಲಿಯನ್ ಭತ್ತದ ಗದ್ದೆಗಳಿವೆ. ಇದು ವಿಶ್ವದ ಅಕ್ಕಿ ಉತ್ಪಾದನೆಯ 90% ರಷ್ಟಿದೆ. ಏಷ್ಯಾದಾದ್ಯಂತ ಕರಾವಳಿ ಭತ್ತದ ಪ್ರದೇಶಗಳು ಮತ್ತು ಜೌಗು ಪ್ರದೇಶಗಳ ರೈತರಿಗೆ ಅಕ್ಕಿ ಯಾವಾಗಲೂ ಐಚ್ಛಿಕ ಬೆಳೆಗಿಂತ ಕಡ್ಡಾಯ ಬೆಳೆಯಾಗಿದೆ. ಏಕೆಂದರೆ ಇಡೀ ಪ್ರದೇಶವು ನೀರಾವರಿಗಾಗಿ ಮಳೆಯನ್ನೇ ಅವಲಂಭಿಸಿದೆ. ಮಳೆಯು ಅನಿಯಮಿತವಾಗಿದ್ದು ಅತಿವೃಷ್ಟಿ, ಅನಾವೃಷ್ಟಿಗಳಿಂದ ಪ್ರವಾಹದ ಪರಿಸ್ಥಿತಿ ವರ್ಷದುದ್ದಕ್ಕೂ ಇರುತ್ತದೆ. ಸಮುದ್ರದಲ್ಲಿ ಉಬ್ಬರವಿಳಿತಗಳು ಹೆಚ್ಚಿರುವುದರಿಂದ ಸಮುದ್ರಕ್ಕೆ ನೀರನ್ನು ಹರಿಬಿಡುವುದು ಕಷ್ಟವಾಗುತ್ತದೆ. ಭತ್ತದ ಪ್ರದೇಶಗಳ ಮಣ್ಣಿನ ರಚನೆ ನೀರಿನ ಹರಿವಿಗೆ ಅಡ್ಡಿಯುಂಟುಮಾಡುತ್ತದೆ. ಇವೆಲ್ಲವೂ ಈ ಪ್ರದೇಶದಲ್ಲಿ ಬೆಳೆ ಬೆಳೆಯುವಾಗ ನೀರಿನ ನಿಶ್ಚಲತೆಗೆ ಕಾರಣವಾಗುತ್ತದೆ. ಉಳಿದೆಲ್ಲ ಬೆಳೆಗಳಿಗಿಂತ ಭತ್ತ ಮಾತ್ರ ಬಹುಕಾಲದವರೆಗೆ ನಿಂತ ನೀರನ್ನು ತಾಳಬಲ್ಲುದು. ಉಳಿದ ಬೆಳೆಗಳು ಇಂತಹ ಪರಿಸ್ಥಿತಿಯಲ್ಲಿ ಹಾಳಾಗುತ್ತವೆ. ಆದ್ದರಿಂದ ಭತ್ತದಿಂದ ಬರುವ ಆದಾಯ ಕಡಿಮೆ ಮತ್ತು ಅವರ ಜೀವನಕ್ಕೆ ಅದು ಸಾಕಾಗುವುದಿಲ್ಲ ಎಂದು ಗೊತ್ತಿದ್ದರೂ ಈ ಪ್ರದೇಶದ ರೈತರು ಭತ್ತವನ್ನು ಬೆಳೆಯುವ ಅನಿವಾರ್ಯತೆಗೆ ಸಿಲುಕಿದ್ದಾರೆ. ಕಷ್ಟಕರವಾದ ಜೀವನಪರಿಸ್ಥಿತಿ ಈ ಸಣ್ಣ ಮಹಿಳಾ ರೈತರಲ್ಲಿ ಅಪೌಷ್ಟಿಕತೆ, ದುರ್ಬಲ ಮಕ್ಕಳು, ಹುಟ್ಟುವಾಗಲೇ ಕಡಿಮೆ ತೂಕದಂತಹ ಸಮಸ್ಯೆಗಳಿಗೆ ಕಾರಣವಾಗಿದೆ. ಹೀಗಾಗಿ ಈ ಪರಿಸ್ಥಿತಿಗಳಲ್ಲಿ ಗುರುತಿಸಿದ ಸಮಸ್ಯೆಗಳೆಂದರೆ ಮಳೆಯನ್ನಾಧರಿಸಿದ ಬೆಳೆಗಳು ಅನಿರ್ಧಿಷ್ಟ ಮಳೆಯಿಂದ ತೊಂದರೆ ಅನುಭವಿಸುವುದು; ಅತಿವೃಷ್ಟಿ ಇಲ್ಲವೇ ಅನಾವೃಷ್ಟಿಯಿಂದ ಬೆಳೆನಷ್ಟ; ಅಕ್ಕಿಯಿಂದ ಕಡಿಮೆ ಆದಾಯ; ವೈವಿಧ್ಯಮಯ ಉದ್ಯಮಗಳ ಕೊರತೆ ಮತ್ತು ಕಳಪೆ ಆರ್ಥಿಕಮಟ್ಟ, ಅಪೌಷ್ಟಿಕತೆ ಮತ್ತು ನಗರಗಳಿಗೆ ವಲಸೆ ಹೋಗುವುದು.

ದಿನವೊಂದಕ್ಕೆ ಆರೋಗ್ಯವಂತ ವ್ಯಕ್ತಿಗಳಲ್ಲಿ ಗಂಡಸರಿಗೆ ೫೫ ಗ್ರಾಂ ಹಾಗೂ ಮಹಿಳೆಯರಿಗೆ ೪೫ ಗ್ರಾಂ ಪ್ರೋಟೀನ್‌ ಅಗತ್ಯವಿರುತ್ತದೆ. ಸಸ್ಯಮೂಲಗಳಿಗೆ ಹೋಲಿಸಿದಲ್ಲಿ ಪ್ರಾಣಿಮೂಲದಲ್ಲಿ ಹೆಚ್ಚಿನ ಪ್ರೋಟೀನ್‌ ಇರುತ್ತದೆ. ಪ್ರಾಣಿಮೂಲದಲ್ಲಿ ನಿವ್ವಳ ಪ್ರೋಟೀನ್‌ ಬಳಕೆ ೦.೭೫ರಷ್ಟಿದ್ದರೆ ಸಸ್ಯಮೂಲದಲ್ಲಿ ೦.೫ ರಿಂದ ೦.೬ರಷ್ಟಿರುತ್ತದೆ. ಮಾಂಸದಲ್ಲಿ ಸುಲಭವಾಗಿ ಜೀರ್ಣವಾಗಬಲ್ಲ (ಇದರಲ್ಲಿ ೦.೯೫ರಷ್ಟಿದ್ದರೆ ಸಸ್ಯಮೂಲದಲ್ಲಿ ೦.೮ ರಿಂದ ೦.೯ರಷ್ಟಿರುತ್ತದೆ) ಉತ್ತಮ ಗುಣಮಟ್ಟದ ಪ್ರೋಟೀನ್‌ ಇರುತ್ತದೆ. ಬಹುತೇಕ ಧಾನ್ಯಗಳಲ್ಲಿ ಅಷ್ಟಾಗಿ ಇಲ್ಲದಿರುವ ಅಮಿನೊ ಆಸಿಡ್‌ ಲೈಸಿನ್‌ ಹೆಚ್ಚುವರಿಯಾಗಿ ಒದಗಿಸುತ್ತದೆ. ೨೦೫೦ ರ ಹೊತ್ತಿಗೆ, ವಿಶ್ವದ ಜನಸಂಖ್ಯೆಯು ಇಂದು (FAO 2017) ಸೇವಿಸುವ ಪ್ರಾಣಿಗಳ ಪ್ರೋಟೀನ್ನ ಮೂರನೇ ಎರಡರಷ್ಟು ಹೆಚ್ಚು ಸೇವಿಸುತ್ತದೆ. ಜಾಗತಿಕವಾಗಿ ಹೆಚ್ಚುತ್ತಿರುವ ಮಾಂಸದ ಬೇಡಿಕೆಯ ಹಿನ್ನಲೆಯಲ್ಲಿ ಕೋಳಿ ಮಾಂಸವು ಪ್ರಮುಖ ಪಾತ್ರ ವಹಿಸುತ್ತಿದೆ. ಕಡಿಮೆ ಸಾಕಾಣಿಕೆ ವೆಚ್ಚದಿಂದಾಗಿ ಇದು ಕೈಗೆಟುಕುವ ಪ್ರೋಟೀನ್‌ ಮೂಲವಾಗಿದೆ (OECD, 2016).

ಈ ಹಿನ್ನಲೆಯಲ್ಲಿ ಬೆಳೆ ಮತ್ತು ಪ್ರಾಣಿಗಳನ್ನು ಒಗ್ಗೂಡಿಸಿದ ಸಮಗ್ರ ಕೃಷಿ ವಿನ್ಯಾಸವು (IFS ) ಈ ಸಮಸ್ಯೆಯನ್ನು ಪರಿಹರಿಸಲು ಉತ್ತಮಮಾರ್ಗವಾಗಿದೆ. ಇದಲ್ಲದೆ, ಈ IFS ವಿನ್ಯಾಸವು ಮನೆಯ ಆಹಾರ ವೈವಿಧ್ಯತೆ ಮತ್ತು ಸಂಪನ್ಮೂಲ ಬಡ ರೈತರ ಪೌಷ್ಟಿಕಾಂಶದ ಗುಣಮಟ್ಟವನ್ನು ಹೆಚ್ಚಿಸುತ್ತದೆ.

ಸಮಗ್ರ ಅಕ್ಕಿ, ಮೀನು ಮತ್ತು ಕೋಳಿ ಸಾಕಣೆ ವ್ಯವಸ್ಥೆ

ಸಾಂಪ್ರದಾಯಿಕ ಅಕ್ಕಿ+ಮೀನು+ಕೋಳಿ ಸಾಕಣೆ ವ್ಯವಸ್ಥೆಯ ಪ್ರಮುಖ ಲಕ್ಷಣಗಳು ಹೀಗಿವೆ,

  • ಒಂದು ಎಕರೆ ಭತ್ತದ ಗದ್ದೆಯಲ್ಲಿ ೯೦ ಸೆಂಟ್‌ ಭೂಮಿಯನ್ನು ಬಿಟ್ಟು ಉಳಿದ ೧೦ ಸೆಂಟ್‌ ಭೂಮಿಯನ್ನು ಮೀನುಹೊಂಡಕ್ಕಾಗಿ ಅಗೆಯಲಾಗಿದೆ.
  • ಮೀನಿನ ಹೊಂಡದಲ್ಲಿ ಕೋಳಿ ಗೂಡನ್ನು ನಿರ್ಮಿಸಲಾಗಿದೆ. ಇವೆರೆಡು ನೇರವಾಗಿ ಭತ್ತದೊಂದಿಗೆ ಸಂಬಂಧ ಹೊಂದಿಲ್ಲ. ಕೋಳಿ ತ್ಯಾಜ್ಯವು ಹೊಂಡದಲ್ಲಿ ಸಂಗ್ರಹವಾಗಿರುತ್ತದೆ. ಅದನ್ನು ಋತುವಿನ ಕೊನೆಯಲ್ಲಿ ನೀರನ್ನು ಒಣಗಿಸಿದ ನಂತರ ತೆಗೆದು ಭತ್ತದ ಗದ್ದೆಗೆ ಹಾಕಲಾಗುತ್ತದೆ. ಇದು ಶ್ರಮದಾಯಕವಾದ ಕೆಲಸ.
  • ಕೋಳಿ ಗೂಡುಗಳಲ್ಲಿ ಹೆಚ್ಚಾಗಿ ಬೇಗ ಬೆಳವಣಿಗೆ ಹೊಂದಿ ಮೊಟ್ಟೆಯಿಡುವ ಕೋಳಿಗಳನ್ನು ಬೆಳೆಸಲಾಗುತ್ತದೆ.

ಅಕ್ಕಿ + ಮೀನು + ಕೋಳಿ ಸಾಕಣೆ ವ್ಯವಸ್ಥೆಯನ್ನು ಅಣ್ಣಾಮೈ ವಿಶ್ವವಿದ್ಯಾಲಯವು ಸುಧಾರಿಸಿದ್ದು ಈಗ ಅದನ್ನು ಅಣ್ಣಾಮಲೈ ಅಕ್ಕಿ + ಮೀನು + ಕೋಳಿ ಸಾಕಣೆ ವ್ಯವಸ್ಥೆ ಎಂದು ಕರೆಯಲಾಗುತ್ತಿದೆ. ಇದರ ಪ್ರಮುಖ ಲಕ್ಷಣಗಳನ್ನು ಕೆಳಗೆ ಪಟ್ಟಿಮಾಡಲಾಗಿದೆ :

  • ಕೋಳಿ ಗೂಡುಗಳನ್ನು ನೇರವಾಗಿ ಭತ್ತದ ಗದ್ದೆಯಲ್ಲಿ 8′ ಎತ್ತರ, 4′ ಒಳಗೆ ಹೂತು ಮತ್ತು 4′ ಮೇಲೆ ಚಾಚಿಕೊಂಡಿರುವ ನಾಲ್ಕು ಕಾಂಕ್ರೀಟ್ ಕಂಬಗಳ ಸಹಾಯದಿಂದ ಸ್ಥಾಪಿಸಲಾಗುತ್ತದೆ. ಇದು ಗೂಡನ್ನು ಬೆಳೆಯ ಮೇಲಾವರಣದ ಮೇಲೆ ಎತ್ತುತ್ತದೆ. ಪಂಜರದ ಕೆಳಭಾಗಕ್ಕೆ ತಂತಿ ಜಾಲರಿಯಿರುತ್ತದೆ. ಇದರಿಂದ ಕೋಳಿ ತ್ಯಾಜ್ಯವು ಕೆಳಗಿನ ಭತ್ತದ ಗದ್ದೆಗಳಿಗೆ ತಲುಪುತ್ತದೆ. ಅಲ್ಲಿ ನಿಂತಿರುವ ನೀರಿನಲ್ಲಿ ಕರಗುತ್ತವೆ. ಬೆಳೆಗೆ ಗೊಬ್ಬರವಾಗಿಯೂ ಮೀನಿಗೆ ಆಹಾರವಾಗಿಯೂ ಕಾರ್ಯನಿರ್ವಹಿಸುತ್ತವೆ.
  • ಮೀನಿನ ಕಂದಕಗಳು ೧ ಮೀ ಆಳ ಮತ್ತು ಮೇಲ್ಭಾಗದಲ್ಲಿ ೧ ಮೀ ಮತ್ತು ತಳದಲ್ಲಿ ೦,೭೫ ಅಗಲವನ್ನು ಹೊಂದಿದೆ. ಇದನ್ನು ಭತ್ತದ ಗದ್ದೆಯ ಪಕ್ಕದಲ್ಲಿ ಮಾಡಲಾಗಿರುತ್ತದೆ. ಇದು ಭತ್ತದ ಗದ್ದೆಯ ೧೦ ಪ್ರತಿಶತವನ್ನು ಆಕ್ರಮಿಸಿರುತ್ತದೆ. ಹೆಕ್ಟೇರಿಗೆ ಕ್ಯಾಟ್ಲಾ, ರೋಗು, ಮೃಗಾಲ್‌ ಮತ್ತು ಮೃಗಾಲ್‌ ಕಾರ್ಪ್‌ನಂತಹ ೫೦೦೦ ಮೀನುಮರಿಗಳನ್ನು (ಭತ್ತದ ಗದ್ದೆಯ ವಿಸ್ತೀರ್ಣಕ್ಕೆ ತಕ್ಕಂತೆ ೨ ಪ್ಲಾಟ್‌ಗೆ ೧೦೦ ಮರಿಗಳು) ಬಿಡಲಾಗುತ್ತದೆ. ಇವುಗಳನ್ನು ಭತ್ತದ ಸಸಿಗಳನ್ನು ನಾಟಿ ಮಾಡಿದ ೧೫ ದಿನಗಳ ನಂತರ ಬಿಡಲಾಗುತ್ತದೆ. ಅವು ಭತ್ತದ ಬದುಗಳಲ್ಲಿ ಈಜಾಡುತ್ತ ಅಲ್ಲಿನ ಕೀಟ ಹಾಗೂ ಕಳೆಯನ್ನು ತಿನ್ನುತ್ತದೆ. ಬಿಸಿಲಿದ್ದಾಗ, ಸಂಜೆಯ ಹೊತ್ತು ಬದುಗಳಲ್ಲಿ ಆಶ್ರಯ ಪಡೆಯುತ್ತದೆ.
  • ಕೋಳಿ ಪಂಜರದ ಆಯಾಮ ಮತ್ತು ಕೋಳಿ ಸಂಗ್ರಹದ ಸಾಂದ್ರತೆಯನ್ನು ಕಠಿಣ ಪ್ರಯೋಗದ ಮೂಲಕ ಹೊಂದುವಂತೆ ರೂಪಿಸಲಾಗುತ್ತದೆ. ಪಂಜರಗಳು 6′ x 4′ x 3′ ಆಯಾಮವನ್ನು ಹೊಂದಿದ್ದು, ಪ್ರತಿ ಪಂಜರದಲ್ಲಿ 20 ಬ್ರಾಯ್ಲರ್ ಕೋಳಿಗಳಿಗೆ ಅವಕಾಶ ಕಲ್ಪಿಸಲಾಗುತ್ತದೆ. ದೊಡ್ಡ ಪಂಜರಗಳ ನೆರಳಿನಿಂದಾಗಿ ಬೆಳೆಗೆ ತೊಂದರೆಯಾಗುತ್ತದೆ. ಕೋಳಿ ಕಸ ಹೆಚ್ಚಾಗುವುದರಿಂದಲೂ ತೊಂದರೆಯಾಗುತ್ತದೆ.
  • ಈ ರೀತಿ ಮೂರು ಘಟಕಗಳ ಪರಿಪೂರ್ಣ ಒಗ್ಗೂಡುವಿಕೆಯಿಂದ ಭತ್ತಕ್ಕೆ ಕೀಟ ಮತ್ತು ಕಳೆ ಬಾಧೆ ತಪ್ಪುತ್ತದೆ. ಪ್ರತಿ ಬೆಳೆಯ ಋತುವಿನಲ್ಲಿ ೮.೫ ಟನ್‌ ಹೆಕ್ಟೇರ್‌ವರೆಗೆ ಪೋಷಕಾಂಶಗಳಿಂದ ಸಮೃದ್ಧವಾಗಿರುವ ಸಾವಯವ ಪದಾರ್ಥಗಳು ನಿಧಾನವಾಗಿ ಭೂಮಿಯನ್ನು ಸೇರುತ್ತದೆ. ತ್ಯಾಜ್ಯದ ಆಮ್ಲೀಯ ಪರಿಣಾಮದಿಂದ ಕಳೆಗಳು ಕಡಿಮೆಯಾಗುತ್ತವೆ. ಭತ್ತಕ್ಕೆ ನೆರವಾಗುವ ಕೋಳಿ ತ್ಯಾಜ್ಯದಿಂದ ಅಲೋಲೋಮೆಡಿಯೇಟರಿ ತತ್ವವನ್ನು ವಿನ್ಯಾಸಗೊಳಿಸಲಾಗಿದೆ.
  • ಒಂದು ಭತ್ತದ ಬೆಳೆಯ ಋತು ಮುಗಿಯುವ ಹೊತ್ತಿಗೆ ಮೂರು ತಲೆಮಾರುಗಳ ಬಾಯ್ಲರ್‌ ಕೋಳಿಗಳು ಬೆಳೆಯುತ್ತವೆ. ಇದು ಬಡರೈತರಿಗೆ ಉತ್ತಮ ಆದಾಯವನ್ನು ತಂದುಕೊಡುತ್ತದೆ. ಹಠಾತ್‌ ಪ್ರವಾಹ ಅಥವ ಬರಗಾಲದಂತಹ ನೈಸರ್ಗಿಕ ವಿಕೋಪಗಳಿಂದಾಗಿ ಬೆಳೆ ಸಂಪೂರ್ಣವಾಗಿ ನಾಶವಾಗಬಹುದು. ಮಾಂಸದ ಉತ್ಪಾದನೆಯು ಇದಕ್ಕೆ ಪರ್ಯಾಯವಾದ ಉತ್ಪಾದನೆಯನ್ನು ನೀಡುತ್ತದೆ. ಹವಾಮಾನ ತಾಳಿಕೆಯ ವಿಧಾನವಾಗಿ ಕಾರ್ಯನಿರ್ವಹಿಸುತ್ತದೆ.

 ಭಾಗವಹಿಸುವಿಕೆಯ ಮೂಲಕ ಸಂಶೋಧನೆ ಮತ್ತು ಉನ್ನತೀಕರಣ

ಭಾರತದಲ್ಲಿ ತಮಿಳುನಾಡು ರಾಜ್ಯದಲ್ಲಿ ಸುಸ್ಥಿರ ಗ್ರಾಮೀಣ ಜೀವನೋಪಾಯವನ್ನು ಹೆಚ್ಚಿಸುವ ಮುಖ್ಯ ಉದ್ದೇಶದೊಂದಿಗೆ ಈ ಕೃಷಿ ವ್ಯವಸ್ಥೆಯ ವಿನ್ಯಾಸವನ್ನು ವಿಶ್ವ ಬ್ಯಾಂಕ್ – ಇಂಡಿಯನ್ ಕೌನ್ಸಿಲ್ ಆಫ್ ಅಗ್ರಿಕಲ್ಚರಲ್ ರಿಸರ್ಚ್ ಅನುದಾನಿತ ರಾಷ್ಟ್ರೀಯ ಕೃಷಿ ಯೋಜನೆ (NAIP) ಮೂಲಕ ಉನ್ನತೀಕರಿಸಲಾಗಿದೆ. ಅಣ್ಣಾಮಲೈ ಅಕ್ಕಿ + ಮೀನು + ಕೋಳಿ ಸಾಕಣೆ ವ್ಯವಸ್ಥೆಯ ವಿನ್ಯಾಸವನ್ನು 838 ರೈತರ ಹಿಡುವಳಿಗಳಲ್ಲಿ 200 ಮೀ  ಭತ್ತದ ಪ್ರದೇಶದಲ್ಲಿ ಅಳವಡಿಸಿಕೊಳ್ಳುವಂತೆ ಮಾಡಲಾಯಿತು. ಭಾಗವಹಿಸುವ ಮೂಲಕ ಸಂಶೋಧನೆ ನಡೆಸಲು ಕಡಲೂರು, ವಿಲ್ಲುಪುರಂ ಮತ್ತು ನಾಗಪಟ್ಟಣಂ ಎನ್ನುವ ತಮಿಳುನಾಡಿನ ಮೂರು ಜಿಲ್ಲೆಗಳನ್ನು ಒಳಗೊಂಡಿದೆ. ಪ್ರತಿ ಜಿಲ್ಲೆಗೆ ಮೂರು ಗ್ರಾಮಗಳು ಮತ್ತು 100 ಮಂದಿ ಭಾಗವಹಿಸುವ ಸಣ್ಣ ಮತ್ತು ಅತಿ ಸಣ್ಣ ರೈತರನ್ನೊಳಗೊಂಡ ಕ್ಲಸ್ಟರ್‌ಗಳನ್ನು ಆಯೋಜಿಸಲಾಗಿದೆ.

ನಂತರ ೨೦೧೫-೧೬ರಲ್ಲಿ ಕೃಷಿ ಕುಟುಂಬಗಳ ಪೌಷ್ಟಿಕಾಂಶದ ಮೇಲೆ ಈ ಮಾದರಿಯ ಪ್ರಭಾವವನ್ನು ತಿಳಿಯಲು ಹೊಸ ಕ್ಲಸ್ಟರ್‌ನಲ್ಲಿ ೭೫ ಕೃಷಿಕುಟುಂಬಗಳನ್ನು ಬಳಸಲಾಯಿತು. ಈ ಗ್ರ್ಯಾಂಡ್‌ ಚಾಲೆಂಜಸ್‌ ಇಂಡಿಯಾ ಯೋಜನೆಗೆ ಬಯೋಟೆಕ್ನಾಲಜಿ ಇಂಡಸ್ಟ್ರಿ ರಿಸರ್ಚ್ ಅಸಿಸ್ಟೆನ್ಸ್ ಕೌನ್ಸಿಲ್ (BIRAC ಸಹಯೋಗದೊಂದಿಗೆ ಬಿಲ್ ಮತ್ತು ಮೆಲಿಂಡಾ ಗೇಟ್ಸ್ ಫೌಂಡೇಶನ್) ನೆರವು ನೀಡಿತು. ಸುಸ್ಥಿರತೆ ಮತ್ತು ಜೀವನೋಪಾಯದ ಮೇಲಿನ ಪ್ರಭಾವದ ಮೌಲ್ಯಮಾಪನವನ್ನು ಅಣ್ಣಾಮಲೈ ವಿಶ್ವವಿದ್ಯಾಲಯ ಮತ್ತು ಕೋಲ್ಕತ್ತಾದ M/S ಪ್ರೈಸ್ ವಾಟರ್ ಹೌಸ್ ಕೂಪರ್ ಒಟ್ಟಾಗಿ  ನಡೆಸಿದರು. ಕೃಷಿ ಕುಟುಂಬಗಳ ಪೌಷ್ಟಿಕಾಂಶದ ಸ್ಥಿತಿ ಮತ್ತು ಆಹಾರದ ವೈವಿಧ್ಯತೆಯ ಮೇಲೆ ಪರಿಣಾಮವನ್ನು ಹೈದರಾಬಾದಿನ M/S ಸದ್ಗುರು ಕನ್ಸಲ್ಟೆಂಟ್ಸ್‌ನವರು ಮಾಡಿದರು.

ಜೀವನೋಪಾಯ ಮತ್ತು ಕೃಷಿ ಉತ್ಪಾದನೆಯ ಮೇಲೆ ಪರಿಣಾಮ

ಯೋಜನೆಯ ಮೂಲ ಸಮೀಕ್ಷೆಯು ವೆಟ್‌ಲ್ಯಾಂಡ್ ಕ್ಲಸ್ಟರ್‌ಗಳಲ್ಲಿ ಒಟ್ಟು ಕುಟುಂಬದ ವಾರ್ಷಿಕ ಆದಾಯ ರೂ.೩೧,೮೨೨.೧೧ ಎಂದು ಸೂಚಿಸಿದೆ. ಅಕ್ಕಿ + ಮೀನು + ಕೋಳಿ ಸಾಕಾಣಿಕೆಯನ್ನು ಅಳವಡಿಸಿಕೊಳ್ಳುವ ಮೂಲಕ ಹೆಚ್ಚಾದ ಈ ಮೂರು ಜಿಲ್ಲೆಗಳ ಆದಾಯವನ್ನು ಕೋಷ್ಟಕ 1 ರಲ್ಲಿ ಪ್ರಸ್ತುತಪಡಿಸಲಾಗಿದೆ. ವಿಲ್ಲುಪುರಂ ಜಿಲ್ಲೆಯ ಕುಟುಂಬಗಳ ಒಟ್ಟು ಆದಾಯವು ರೂ.೩೧,೨೦೦ರಷ್ಟು ಹೆಚ್ಚಿದ್ದು ಇದು ಶೇ೯೮%ನಷ್ಟಾಗಿದೆ. ಏಕೆಂದರೆ ಮೂರು ಭತ್ತದ ಬೆಳೆಗಳಲ್ಲಿ ನಡೆಯುವ ಏಳು ಬಾರಿ ಕೋಳಿ ಸಾಕಣೆಯನ್ನು ಮಾಡಲಾಗುತ್ತದೆ. ಕಡಲೂರು ಜಿಲ್ಲೆಯಲ್ಲಿ ಕುಟುಂಬದ ಆದಾಯದ ಹೆಚ್ಚಳವು ರೂ.೨೮,೦೫೦ ಆಗಿದ್ದು ಕೇವಲ ಶೇ.೮೮% ಹೆಚ್ಚಳವಾಗಿದೆ. ಈ ಜಿಲ್ಲೆಯು ಜೌಗುಪ್ರದೇಶವಾಗಿರುವುದರಿಂದ ಒಂದಕ್ಕಿಂತ ಹೆಚ್ಚು ಬೆಳೆಯನ್ನು ಬೆಳೆಯಲಾಗುವುದಿಲ್ಲ. ಆದ್ದರಿಂದ ಕೇವಲ ನಾಲ್ಕು ಸಲ ಮಾಂಸದ ಕೋಳಿ ಸಾಕಾಣಿಕೆ ಸಾಧ್ಯವಾಗುತ್ತದೆ. ಹೀಗಿದ್ದೂ ರೈತರು ಹೊಸತರ ಮಧ್ಯಪ್ರವೇಶಕ್ಕೆ ಉತ್ಸಾಹವನ್ನು ತೋರಿದ್ದಾರೆ. ಭತ್ತದಂತಹ ಏಕಬೆಳೆಯ ನಡುವೆ ಮೂರು ಬಾರಿ ಬಾಯ್ಲರ್‌ ಕೋಳಿ ಸಾಕಾಣಿಕೆ ಮಾಡಿರುವುದರಲ್ಲಿ ಇದು ಕಂಡುಬರುತ್ತದೆ. ನಾಗಪಟ್ಟಣಂ ಜಿಲ್ಲೆಯಲ್ಲಿ ಒಟ್ಟು ಕುಟುಂಬದ ಆದಾಯವು ರೂ ೧೭,೩೦೦ ಆಗಿದ್ದು ಇದು ವರ್ಷದಲ್ಲಿ ೫೪%ನಷ್ಟು ಹೆಚ್ಚಿದೆ. ಎರಡು ಭತ್ತದ ಬೆಳೆ ಬೆಳೆದು, ಐದು ಸಲ ಕೋಳಿ ಸಾಕಾಣೆ ಮಾಡಿದರೂ ಮಾಂಸದ ಇಳುವರಿ ಮತ್ತು ಮಾರುಕಟ್ಟೆ ಬೆಲೆ ಕಡಲೂರಿಗಿಂತ ಕಡಿಮೆಯಾಗಿದೆ.

ಐದು ಸೆಂಟ್‌ ಭತ್ತದ ಗದ್ದೆಗೆ ಕೋಳಿ ಗೊಬ್ಬರವನ್ನು ಸೇರಿಸಿದಾಗ ಸಾಮಾನ್ಯವಾಗಿ ಶಿಫಾರಸ್ಸು ಮಾಡಲಾಗುವ ಪೋಷಕಾಂಶಗಳಿಗಿಂತ ಹೆಚ್ಚಿನ ಪ್ರಮಾಣದ ಪೋಷಕಾಂಶವು ಸಿಗುವಂತಾಗುತ್ತದೆ. ಬೇರೆ ಸಾವಯವ ಮೂಲಗಳಿಗೆ ಹೋಲಿಸಿದಲ್ಲಿ ಭತ್ತಕ್ಕೆ ಕೋಳಿ ಗೊಬ್ಬರದಿಂದ ಹೆಚ್ಚಿನ ಪೋಷಕಾಂಶಗಳು ಸಿಗುತ್ತದೆ. ಇದನ್ನು ಈಗಾಗಲೇ ಸಾಂಸ್ಥಿಕ ಮತ್ತು ಕ್ಷೇತ್ರ ಪ್ರಯೋಗಗಳಲ್ಲಿ ಗಮನಿಸಲಾಗಿದೆ. ಭತ್ತದೊಂದಿಗೆ ಮೀನು ಮತ್ತು ಕೋಳಿ ಸಾಕಣೆ ಮಾಡುವುದರಿಂದ ಭತ್ತಕ್ಕೆ ಕೀಟ ಮತ್ತು ಕಳೆಯ ಬಾಧೆ ತಪ್ಪುತ್ತದೆ. ಕೀಟಗಳ ಮೊಟ್ಟೆಗಳು, ಕಳೆಗಳನ್ನು ತಿನ್ನುವ ಮೀನಿನ ಆಹಾರಕ್ರಮದಿಂದಾಗಿ ಇವುಗಳನ್ನು ನಿಗ್ರಹಿಸಿದಂತಾಗುತ್ತದೆ. ಕುಟುಂಬವೊಂದಕ್ಕೆ ವರ್ಷದಲ್ಲಿ ೨೧೯ ದಿನಗಳು ಉದ್ಯೋಗ ಸೃಷ್ಟಿಯಾದಂತಾಗುತ್ತದೆ. ಈ ತಂತ್ರಜ್ಞಾನದಿಂದ ಉತ್ಪಾದಕ ಉದ್ಯೋಗಸೃಷ್ಟಿ ಕಂಡುಬಂದಿದೆ.

ಈ ಅಕ್ಕಿ + ಮೀನು + ಕೋಳಿ ಸಾಕಣೆ ವ್ಯವಸ್ಥೆಯ ಗಮನಾರ್ಹ ಯಶಸ್ಸು ೩೯೨ ಇತರ ರೈತರು (೮೩೮ ಗುರುತಿಸಲಾದ ಅಭಿವೃದ್ಧಿ ಪಾಲುದಾರರನ್ನು ಹೊರತುಪಡಿಸಿ) ಇದನ್ನು ತಮ್ಮ ಹಿಡುವಳಿಯಲ್ಲಿ ಅಳವಡಿಸಿಕೊಳ್ಳುವಂತೆ ಮಾಡಿದೆ. ಗುರುತಿಸಲಾದ ಅಭಿವೃದ್ಧಿ ಪಾಲುದಾರರಲ್ಲಿ ಇನ್ನೂ ೧೨ ಮಂದಿ ತಮ್ಮ ಹಿಡುವಳಿಗಳ ಅರ್ಧ ಎಕರೆ (2000 m2) ಪ್ರದೇಶಕ್ಕೆ ಬೆಂಬಲಿತ ಯೋಜನೆಯಿಂದ ತಂತ್ರಜ್ಞಾನವನ್ನು ವಿಸ್ತರಿಸುತ್ತಿದ್ದಾರೆ.

 

ಕೋಷ್ಟಕ : ಜೌಗು ಪ್ರದೇಶ ಸಮೂಹಗಳಲ್ಲಿ ಜೀವನೋಪಾಯ ವರ್ಧನೆ

ವಿವರಗಳು ವಿಲ್ಲಾಪುರಂ ಕಡಲೂರು ನಾಗಪಟ್ಟಣಂ ಮೂರು ಜಿಲ್ಲೆಗಳ ಸರಾಸರಿ ತೂಕ
ಕೋಳಿ ಸಾಕಣೆ ಸಂಖ್ಯೆ 7 5 5 5
ಸರಾಸರಿ ಮಾಂಸ ಇಳುವರಿ/ಕೋಳಿಗೆ (ಕೆಜಿ) 2.40 2.50 2.10 2.3
ಸರಾಸರಿ ಮಾಂಸ ಇಳುವರಿ/ಮನೆಗೆ (ಕೆಜಿ) 336 250 210 2.65
ಮಾಂಸದ ಬೆಲೆ ರೂ./ಕೆಜಿ 100 110 90 100
ಪೌಲ್ಟ್ರಿಯಿಂದ ಒಟ್ಟು ಆದಾಯ (ರೂ.) 33,600 27,500 18,900 26,666
ಕೋಳಿ ಸಾಕಣೆ ಉತ್ಪಾದನಾ ವೆಚ್ಚ (ರೂ.) 9,900 5,700 7,100 7,566
ಮೀನು ಸಾಕಾಣಿಕೆ ಸಂಖ್ಯೆ 2 1 1 1
ಮೀನಿನ ಇಳುವರಿ/ಮನೆಗೆ (ಕೆಜಿ) 120 75 75 90
ಮೀನಿನ ಬೆಲೆ ರೂ./ಕೆಜಿ 70 90 80 80
ಮೀನಿನಿಂದ ಒಟ್ಟು ಆದಾಯ (ರೂ.) 8,400 6,750 6,000 7,050
ಮೀನಿನ ಉತ್ಪಾದನಾ ವೆಚ್ಚ (ರೂ.) 900 500 500 633
ಒಟ್ಟು ನಿವ್ವಳ ಆದಾಯ, ಪ್ರತಿ ಮನೆಗೆ / ವರ್ಷಕ್ಕೆ (ರೂ.) 31,200 28,050 17,300 25,516
ಜೀವನೋಪಾಯ ವೃದ್ಧಿ (%) 98 88 54 80

೨೦೧೫-೧೬ರಲ್ಲಿ ಇದು ೩ ಹಳ್ಳಿಗಳಿಗೆ ವಿಸ್ತರಿಸಿತು. ಇದರ ಪರಿಣಾಮವಾಗಿ ೯,೦೦೦ ಕೆಜಿ ಕೋಳಿ ಮಾಂಸ ಮತ್ತು ೨,೨೫೦ ಕೆಜಿ ಮೀನಿನ ಮಾಂಸ ಉತ್ಪಾದನೆಯಾಯಿತು. ಇದರಿಂದಾಗಿ ಕೋಳಿ ಸಾಕಣೆ ಮಾಡುತ್ತಿದ್ದ ಕುಟುಂಬವು ಪ್ರತಿತಿಂಗಳಿಗೆ ೪ ಕೆಜಿ ಮಾಂಸವನ್ನು ಹೆಚ್ಚುವರಿಯಾಗಿ ಸೇವಿಸುವಂತಾಯಿತು. ಮೊದಲು ಇದು ತಿಂಗಳಿಗೆ ೨.೮ ಕೆಜಿ ಮಾತ್ರವಿತ್ತು (ಕೋಷ್ಟಕ ೨). ಮೊದಲು ತಿಂಗಳಿಗೆ ೦.೫ ಕೆಜಿಯಷ್ಟು ತಿನ್ನುತ್ತಿದ್ದ ಮೀನಿನ ಮಾಂಸ ಈಗ ಪ್ರತಿತಿಂಗಳಿಗೆ ೪ ಕೆಜಿಯಷ್ಟು ಹೆಚ್ಚಾಯಿತು. ಜೌಗುಪ್ರದೇಶದ ಸಮೂಹಗಳ ಪಾಲುದಾರ ಅಥವಾ ಫಲಾನುಭವಿಗಳಲ್ಲಿ 11.7 gm/dl ನಿಂದ 13.9 gm/ ಗೆ, ಫೋಲಿಕ್ ಆಮ್ಲದ ಮಟ್ಟ 7.61 ng/mL ನಿಂದ 8.76 ng/mL ಗೆ, ಸೀರಮ್ ಅಲ್ಬುಮಿನ್ 4.20 gm/dl ನಿಂದ 4.87 gm/dl ಗೆ, ಕ್ಯಾಲ್ಸಿಯಂ ಮಟ್ಟ 109.45 ರಿಂದ 109.45 ಕ್ಕೆ ಹೆಚ್ಚಿದೆ , ಗ್ಲೋಬ್ಯುಲಿನ್ 1.94 gm/dl ನಿಂದ 2.79 gm/dl ವರೆಗೆ (ಸರಾಸರಿ 10 ಫಲಾನುಭವಿ ಮಹಿಳಾ ರೈತರ ಮಾದರಿ) ಹೆಚ್ಚಿದೆ.

 ಕೋಷ್ಟಕ : ಮನುಷ್ಯರ ಪೋಷಣೆಯ ಮೇಲೆ ಪರಿಣಾಮ

ಮಧ್ಯಸ್ಥಿಕೆ ಪ್ರಾಣಿ ಪ್ರೋಟೀನ್ ಸೇವನೆ
  ಮಧ್ಯಸ್ಥಿಕೆಗೆ ಮುನ್ನ ಮಧ್ಯಸ್ಥಿಕೆಯ ನಂತರ
ಅಣ್ಣಾಮಲೈ ಅಕ್ಕಿ + ಮೀನು + ಕೋಳಿ ಕೋಳಿ ಮಾಂಸ 2.8 ಕೆಜಿ / ತಿಂಗಳು 4.00 ಕೆಜಿ/ ತಿಂಗಳು
ಮೀನು ಮಾಂಸ 0.5 ಕೆಜಿ/ ತಿಂಗಳು 4.00 ಕೆಜಿ/ ತಿಂಗಳು
   
ಅಣ್ಣಾಮಲೈ ಅಕ್ಕಿ + ಮೀನು + ಕೋಳಿ ಪೌಷ್ಟಿಕಾಂಶದ ನಿಯತಾಂಕಗಳು
ರಕ್ತ ಜೀವರಾಸಾಯನಿಕ ಮಧ್ಯಸ್ಥಿಕೆಗೆ ಮುನ್ನ ಮಧ್ಯಸ್ಥಿಕೆಯ ನಂತರ
ರಕ್ತದ ಹಿಮೋಗ್ಲೋಬಿನ್ 11.7 g/dl 13.9 g/dl
ಸೀರಮ್ ಅಲ್ಬುಮಿನ್ 4.20 g/dl 4.87 g/dl
ಸೀರಮ್ ಗ್ಲೋಬ್ಯುಲಿನ್ 1.94 g/dl 2.79 g/dl
ಫೋಲಿಕ್ ಆಮ್ಲ 7.61 ng/ml 7.61 ng/ml
ರಕ್ತದ ಕ್ಯಾಲ್ಸಿಯಂ ಮಟ್ಟ 9.4 10.05
ಮಕ್ಕಳ ಆಂಥ್ರೊಪೊಮೆಟ್ರಿ
ಬಿಎಂಐ 13.9 19.5
ತೂಕ 15 ಕೆಜಿ 20 ಕೆಜಿ

 ಉಪಸಂಹಾರ

ಅಣ್ಣಾಮಲೈ ಅಕ್ಕಿ + ಮೀನು + ಕೋಳಿ ಸಾಕಣೆ ಪದ್ಧತಿಯಂತೆ ಅಕ್ಕಿಯೊಂದಿಗೆ ಮೀನು ಕೃಷಿ ಮತ್ತು ಕೋಳಿ ಸಾಕಣೆಯನ್ನು ಸಂಯೋಜಿಸುವುದು ರೈತರ ಆದಾಯವನ್ನು ದ್ವಿಗುಣಗೊಳಿಸಲು ಸಹಾಯ ಮಾಡುತ್ತದೆ. ಕೃಷಿ ಕುಟುಂಬಗಳ ಪೌಷ್ಟಿಕಾಂಶದ ಸ್ಥಿತಿಯನ್ನು ಉತ್ತಮಗೊಳಿಸುತ್ತದೆ. ಸಣ್ಣ ಹಿಡುವಳಿದಾರರು ಹೆಚ್ಚಿರುವ ಭತ್ತದ ಕೃಷಿ ನಡೆಸುವ ಎಲ್ಲ ಜೌಗುಪ್ರದೇಶಗಳಲ್ಲಿ ಈ ಮಾದರಿಯನ್ನು ಅಭಿವೃದ್ಧಿಗೊಳಿಸಬಹುದು.

ಕೃತಜ್ಞತೆಗಳು

NAIP-ICAR ಮತ್ತು BIRAC ಗ್ರ್ಯಾಂಡ್‌ ಚಾಲೆಂಜಸ್‌ ಇಂಡಿಯಾ ಅಗ್ರಿಕಲ್ಚರ್‌ ಅಂಡ್‌ ನ್ಯೂಟ್ರಿಶನ್‌ ಅವರು ಒದಗಿಸಿದ ಆರ್ಥಿಕ ನೆರವನ್ನು ಕೃತಜ್ಞಾಪೂರ್ವಕವಾಗಿ ಸ್ವೀಕರಿಸಲಾಗಿದೆ.

ಪರಾಮರ್ಶನ

FAO, 2017. Meat and meat products in human nutrition in developing countries. FAO corporate document Repository. http://www.fao.org/docrep/T056RE05.html .

OECD, 2016. ‘Meat’ in OECD – FAO Agricultural outlook 2016 – 2025, OECD publishing, Paris.

ಕತಿರೇಸನ್ ರಾಮನಾಥನ್


Kathiresan Ramanathan

Professor of Agronomy (Retd.)

Faculty of Agriculture

Annamalai University

Tamilnadu, India – 608 002.

Email :  rmkathiresan.agron@gmail.com

Webpage : http://rmkathiresan.in/

ಆಂಗ್ಲ ಮೂಲ : ಲೀಸಾ ಇಂಡಿಯಾ; ಸಂಪುಟ :೨೩; ಸಂಚಿಕೆ : ೪ ; ಡಿಸೆಂಬರ್ ೨೦‌೨೧

 

 

Recent Posts

ಕೃಷಿಯಲ್ಲಿ ನೀರಿನ ಸಮರ್ಥ ಬಳಕೆಗಾಗಿ ಕಾಲುವೆ ಯಾಂತ್ರೀಕರಣ

ಕೃಷಿಯಲ್ಲಿ ನೀರಿನ ಸಮರ್ಥ ಬಳಕೆಗಾಗಿ ಕಾಲುವೆ ಯಾಂತ್ರೀಕರಣ

ನಮ್ಮ ನೀರಾವರಿ ವ್ಯವಸ್ಥೆಯನ್ನು 21ನೇ ಶತಮಾನದ ಬೇಡಿಕೆಗಳಿಗೆ ಹೊಂದುವಂತೆ ಮಾಡುವುದು ನಮ್ಮ ಮುಂದಿರುವ ನಿಜವಾದ ಸವಾಲಾಗಿದೆ. ತಂತ್ರಜ್ಞಾನವೇ...