ಜೀವಾಮೃತ – ದ್ರವರೂಪದ ಬಂಗಾರ


ಪಾಡೇರು ಮಹಿಳೆಯರು ಕಡಿಮೆ ಸಂಪನ್ಮೂಲಗಳನ್ನು ಹೊಂದಿದ್ದರೂ, ಆರಂಭಿಕ ನೆರವು ಮತ್ತು ತರಬೇತಿಯೊಂದಿಗೆ ಪರಿಸರಕೃಷಿಯ ವಿಧಾನಗಳನ್ನು ಅಳವಡಿಸಿಕೊಳ್ಳುವುದು ಸಾಧ್ಯ ಎಂದು ಸಾಬೀತುಪಡಿಸಿದ್ದಾರೆ. ಜೈವಿಕ ವಸ್ತುಗಳ ಬಳಕೆಯು ಹಸಿರು ಕೃಷಿಯತ್ತ ಒಂದು ಸಣ್ಣ ಹೆಜ್ಜೆಯಾಗಿದೆ. ವಿಶೇಷವಾಗಿ ರೈತ ಉತ್ಪಾದಕ ಸಂಸ್ಥೆಗಳ(FPOs) ಮೂಲಕ ದೊಡ್ಡ ಪ್ರಮಾಣದಲ್ಲಿ ಬೆಳೆಯುವ ಸಾಮರ್ಥ್ಯವನ್ನು ಹೊಂದಿದೆ.


ಸಾವಯವ ಕೃಷಿಯು ಕಳೆದ ಕೆಲವು ವರ್ಷಗಳಿಂದ ಪ್ರಪಂಚದಾದ್ಯಂತ ಸಂಚಲನವನ್ನು ಸೃಷ್ಟಿಸುತ್ತಿದೆ. ರಾಸಾಯನಿಕಗಳ ಬಳಕೆಯಿಲ್ಲದೆ ಬೆಳೆದ ಹಣ್ಣುಗಳು ಮತ್ತು ತರಕಾರಿಗಳ ಮಾರುಕಟ್ಟೆಯಾಗಿ ಪ್ರಾರಂಭವಾದದ್ದು ಈಗ ಹಾಲು ಮತ್ತು ಮೊಟ್ಟೆಗಳಿಂದ ಹಿಡಿದು ಕಾಫಿ ಮತ್ತು ಚಹಾದವರೆಗೆ ಪ್ರತಿಯೊಂದು ರೂಪದ ಆಹಾರವನ್ನು ಒಳಗೊಂಡು ವಿಸ್ತರಿಸಿದೆ. ಸಾವಯವ ಆಹಾರದ ಆರೋಗ್ಯ ಮತ್ತು ಪರಿಸರ ಪ್ರಯೋಜನಗಳ ಬಗ್ಗೆ ಗ್ರಾಹಕರಲ್ಲಿ ಹೆಚ್ಚುತ್ತಿರುವ ಅರಿವಿನಿಂದಾಗಿ ಅದರಲ್ಲೂ ವಿಶೇಷವಾಗಿ ನಗರ ಪ್ರದೇಶಗಳಲ್ಲಿ ಸಾವಯವ ಆಹಾರಗಳ ಮಾರುಕಟ್ಟೆಯು ಈಗ ವಿಶ್ವದಲ್ಲೇ ವೇಗವಾಗಿ ಬೆಳೆಯುತ್ತಿದೆ. ೨೦೨೦-೨೫ರ ವೇಳೆಗೆ ೧೬.೪% ರಷ್ಟು ಬೆಳವಣಿಗೆಯ ದರವನ್ನು ನಿರೀಕ್ಷಿಸಲಾಗಿದೆ.

ಸಾವಯವ ಕೃಷಿಯ ವಿಶಿಷ್ಟ ಮಾರಾಟದ ಅಂಶವೆಂದರೆ ಯಾವಾಗಲೂ ರಾಸಾಯನಿಕಗಳ ಬದಲಿಗೆ ನೈಸರ್ಗಿಕ ರಸಗೊಬ್ಬರಗಳು ಮತ್ತು ಕೀಟನಾಶಕಗಳನ್ನು ಬಳಸಲಾಗುತ್ತದೆ. ಇದು ಏಕಕಾಲದಲ್ಲಿ ಹೆಚ್ಚು ಪರಿಸರ ಸ್ನೇಹಿ ಮತ್ತು ವಿವಿಧ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ ಎಂದು ಹೇಳಲಾಗುತ್ತದೆ. ಇದರೊಂದಿಗೆ ಕೃಷಿಯನ್ನು ಸುಸ್ಥಿರಗೊಳಿಸಲು ಜೈವಿಕಗೊಬ್ಬರಗಳು ಮತ್ತು ಸೂಕ್ಷ್ಮಾಣುಗಳ ಒಳಸುರಿಯುವಿಕೆಗಳ ಕಡೆ ಹೆಚ್ಚು ಗಮನಕೊಡಲಾಗುತ್ತದೆ. ಸಾವಯವ ಉತ್ಪನ್ನಗಳು ಹಾಗೂ ಸಾವಯವವಲ್ಲದ ಉತ್ಪನ್ನಗಳ ಬೆಲೆಯ ನಡುವೆ ಅಗಾಧ ವ್ಯತ್ಯಾಸವಿದೆ. ಇಂದಿಗೂ ನಗರಗಳಲ್ಲಿ ಸಾವಯವ ಉತ್ಪನ್ನ ಉಳ್ಳವರಿಗೆ ಮಾತ್ರ ಎಂಬ ಧೋರಣೆಯಿದೆ. ಮತ್ತೊಂದೆಡೆ ರೈತರು ಒಳ್ಳೆಯ ಇಳುವರಿ ಪಡೆಯಲು ದುಬಾರಿ ಗೊಬ್ಬರಗಳು, ಕೀಟನಾಶಕಗಳು ಮತ್ತಿತರ ಒಳಸುರಿಯುವಿಕೆಗಳ ಮೇಲೆ ಅವಲಂಬಿತರಾಗುವ ಪರಿಸ್ಥಿತಿಯಿದೆ. ಸಾವಯವ ಕೃಷಿ ಪದ್ಧತಿಯಲ್ಲೂ ರೈತರು ಕೀಟಬಾಧೆಯಿಂದ ಮುಕ್ತರಾಗಲು, ಒಳ್ಳೆಯ ಇಳುವರಿ ಪಡೆಯಲು ಕೆಲವು ಬಗೆಯ ಒಳಸುರಿಯುವಿಕೆಗಳನ್ನು ಅವಲಂಭಿಸಬೇಕಾಗುತ್ತದೆ. ಭಾರತದ ತಲುಪಲು ಅಸಾಧ್ಯ ಎನಿಸುವಂತಹ ಬುಡಕಟ್ಟು ಹಳ್ಳಿಗಳಲ್ಲಿರುವವರು ತಮ್ಮ ಆಹಾರವನ್ನು ಸಾವಯವ ರೀತಿಯಲ್ಲಿ ಹೇಗೆ ಬೆಳೆಯುತ್ತಾರೆ?

 

ಸಾಂಕ್ರಾಮಿಕ ಸಮಯದಲ್ಲಿ, ಪಾಡೇರು ಬುಡಕಟ್ಟು ಮಹಿಳೆಯರು ಸ್ವಾವಲಂಬಿಗಳಾಗಿ ಹೊರಹೊಮ್ಮಿದರು. ತಮ್ಮ ಸ್ವಂತ ಕುಟುಂಬಗಳಿಗೆ ಮಾತ್ರವಲ್ಲದೆ ತಮ್ಮ ಸಹ ಗ್ರಾಮಸ್ಥರಿಗೆ ತಮ್ಮ ಹಿತ್ತಲಿನಲ್ಲಿಯೇ ಬೆಳೆದ ತರಕಾರಿಗಳೊಂದಿಗೆ ಸಹಾಯ ಮಾಡಿದರು.

ಪಡೇರು ಬೆಟ್ಟಗಳ ಮೇಲಿರುವ ಮಿನಿಮುಲುರು ಎಂಬ ಪುಟ್ಟ ಬುಡಕಟ್ಟು ಗ್ರಾಮವು ಆಂಧ್ರಪ್ರದೇಶದ ಅತಿದೊಡ್ಡ ನಗರವಾದ ವಿಶಾಖಪಟ್ಟಣದಿಂದ ಸುಮಾರು 100 ಕಿ.ಮೀ ದೂರದಲ್ಲಿದೆ. ನಗರಕ್ಕೆ ವ್ಯತಿರಿಕ್ತವಾಗಿ, ಮಿನಿಮುಲೂರು ಪ್ರಶಾಂತವಾದ ಸ್ಥಳವಾಗಿದೆ. ರಾಜ್ಯದಲ್ಲಿ ವಾಸಿಸುವ ೩೩ ಬುಡಕಟ್ಟುಗಳಲ್ಲಿ ಒಂದಾದ ಪರಜಾ ಬುಡಕಟ್ಟಿನ ಜನರಿಗೆ ನೆಲೆಯಾಗಿದೆ. ತಮ್ಮ ೧ -೧.೫ ಎಕರೆಗಳಷ್ಟಿರುವ ಹೊಲಗಳಲ್ಲಿ ಗಂಡಸರು, ಹೆಂಗಸರು ಒಟ್ಟಿಗೆ ದುಡಿಯುತ್ತಿರುವುದನ್ನು ಕಾಣಬಹುದು. ಅಲ್ಲಿ ಅವರು ಭತ್ತ, ಅರಿಶಿನ ಮತ್ತು ಕಾಫಿ ಬೆಳೆಯುತ್ತಾರೆ. ಬುಡಕಟ್ಟು ಸಮುದಾಯಗಳು ತಮ್ಮ ಆಹಾರ ಮತ್ತು ಜೀವನೋಪಾಯ ಎರಡಕ್ಕೂ ಪ್ರಕೃತಿಯ ಮೇಲೆ ವ್ಯಾಪಕವಾಗಿ ಅವಲಂಬಿತವಾಗಿವೆ. ಕಾಲಾಂತರದಲ್ಲಿ ನಡೆದ ಅಧ್ಯಯನಗಳು ಬುಡಕಟ್ಟು ಸಮುದಾಯಗಳ ಅದರಲ್ಲೂ ಮಹಿಳೆಯರ ಪೌಷ್ಟಿಕಾಂಶ ಸೇವನೆಯ ಮಟ್ಟವು ಇರಬೇಕಾದ್ದಕ್ಕಿಂತ ತುಂಬ ಕಡಿಮೆಯಿದೆ ಎಂದು ತೋರಿಸಿದೆ.

ಕೈಗೊಂಡ ಕ್ರಮ

ಬಡತನ ನಿರ್ಮೂಲನೆಗಾಗಿ ಕೆಲಸ ಮಾಡುವ ಲಾಭರಹಿತ ಸಂಸ್ಥೆಯಾದ ಟೆಕ್ನೋಸರ್ವ್, ತಮ್ಮ ವಾಲ್‌ಮಾರ್ಟ್ ಫೌಂಡೇಶನ್ ಅನುದಾನಿತ ಕಾರ್ಯಕ್ರಮ ‘ಆಂಧ್ರಪ್ರದೇಶದ ಸಣ್ಣ ಹಿಡುವಳಿದಾರ ರೈತರಿಗೆ ಸುಸ್ಥಿರ ಜೀವನೋಪಾಯ’ವನ್ನು ಪಾಡೇರು ಪ್ರದೇಶದಲ್ಲಿ ಪ್ರಾರಂಭಿಸಿತು. ಬುಡಕಟ್ಟು ಮಹಿಳೆಯರ ಪೌಷ್ಠಿಕಾಂಶದ ಸೇವನೆಯನ್ನು ಹೆಚ್ಚಿಸುವುದರೊಂದಿಗೆ ಈ ಪ್ರದೇಶದಲ್ಲಿನ ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸುವುದು ಅವರ ಗುರಿಯಾಗಿತ್ತು. ಪದ್ಮಶ್ರೀ ಪುರಸ್ಕೃತ ಶ್ರೀ ಸುಭಾಸ್‌ ಪಾಳೇಕರ್‌ ಅವರ ಶೂನ್ಯ ಬಂಡವಾಳ ಕೃಷಿ ಮಾದರಿಯಿಂದ ಸ್ಪೂರ್ತಿಗೊಂಡು ಟೆಕ್ನೊಸರ್ವ್‌ನವರು ಬುಡಕಟ್ಟು ಮಹಿಳೆಯರಿಗೆ ಸಾವಯವ ಅಡುಗೆ ಕೈತೋಟವನ್ನು ರೂಪಿಸಲು ತರಬೇತಿ ನೀಡಲು ಅದನ್ನು ತಮ್ಮ ಕಾರ್ಯಕ್ರಮದ ಭಾಗವಾಗಿಸಿಕೊಳ್ಳಲು ನಿರ್ಧರಿಸಿದರು. ಇದು ಸಣ್ಣ ರೈತ ಕುಟುಂಬಗಳಿಗೆ ಪೌಷ್ಟಿಕಾಂಶ ಭದ್ರತೆಯನ್ನು ಒದಗಿಸುತ್ತದೆ. ಜೊತೆಗೆ ಮಹಿಳಾ ಸಬಲೀಕರಣ ಮಾಡುವ ಮೂಲಕ ಅವರು ಆರ್ಥಿಕ ಚಟುವಟಿಕೆಗಳಲ್ಲಿ ತೊಡಗಿಕೊಂಡು ಹೆಚ್ಚುವರಿ ಆದಾಯ ಪಡೆಯಲು ನೆರವಾಗುತ್ತದೆ.

ಸೆಪ್ಟೆಂಬರ್ ೨೦೧೯ ರಲ್ಲಿ ಪ್ರಾರಂಭವಾದಂದಿನಿಂದ ತಂಡವು ವಿಶಾಖಪಟ್ಟಣಂ ಜಿಲ್ಲೆಯ ಪಾಡೇರು ಮತ್ತು ಚಿಂತಪಲ್ಲಿ ಪ್ರದೇಶದ ೪೧ ಗ್ರಾಮಗಳ ಸುಮಾರು ೧,೦೦೦ ಬುಡಕಟ್ಟು ಮಹಿಳಾ ರೈತರಿಗೆ ತರಬೇತಿ ನೀಡುವುದರೊಂದಿಗೆ ಬೀಜಗಳನ್ನು ವಿತರಿಸಿತು ಮತ್ತು ತಮ್ಮಿಂದಾದ ಬೆಂಬಲವನ್ನು ನೀಡಲು ಪ್ರಾರಂಭಿಸಿತು. ಬದನೆ, ಟೊಮೊಟೊ, ಹಸಿರು ಮೆಣಸಿನಕಾಯಿ, ಫ್ರೆಂಚ್ ಬೀನ್ಸ್, ಅಲಸಂದಿ, ಮೂಲಂಗಿ, ಅಮರಂಠಸ್ ಮತ್ತು ಪಾಲಕ್ ಸೇರಿದಂತೆ ಒಟ್ಟು ೮ ಬಗೆಯ ತರಕಾರಿ ಬೀಜಗಳನ್ನು ವಿತರಿಸಲಾಯಿತು.

 ಜೀವಾಮೃತ ಸಾವಯವ ದ್ರವಗೊಬ್ಬರ

ಸಣ್ಣ ಹಿಡುವಳಿದಾರ ರೈತಾಪಿ ಕುಟುಂಬಗಳು ಕಡಿಮೆ ಆದಾಯವನ್ನು ಹೊಂದಿದ್ದು ರಸಗೊಬ್ಬರಗಳು ಮತ್ತು ಕೀಟನಾಶಕಗಳನ್ನು ಬಳಸಲು ಹಣಕಾಸಿನ ಪರಿಸ್ಥಿತಿಯು ಅಡ್ಡಿಯಾಗಿದೆ. ಅದಕ್ಕಾಗಿಯೇ ತಂಡವು ಮಹಿಳೆಯರಿಗೆ ಜೀವಾಮೃತ ತಯಾರಿಕೆ ತರಬೇತಿ ನೀಡಲು ನಿರ್ಧರಿಸಿತು. ಈ ಸಾವಯವ ದ್ರವ ಗೊಬ್ಬರವು ಬೆಳೆಗಳಿಗೆ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸುವುದರೊಂದಿಗೆ ಮಣ್ಣಿನ ಫಲವತ್ತತೆಯನ್ನು ಸುಧಾರಿಸಿತು.

ಸಮುದಾಯ ಸಂಪನ್ಮೂಲ ವ್ಯಕ್ತಿಗಳು (CRPs) ಮತ್ತು ಟೆಕ್ನೊಸರ್ವ್‌ ಸಿಬ್ಬಂದಿ ಮಹಿಳೆಯರನ್ನು ತಲಾ ಆರು ಮಂದಿಯ ಗುಂಪುಗಳಾಗಿ ವಿಂಗಡಿಸಿ ಅವರಿಗೆ ಸಾಧ್ಯವಾದಷ್ಟು ನೆರವು ನೀಡಿದರು. ತರಬೇತಿಯ ನಂತರ ಮಹಿಳೆಯರು ಗೊಬ್ಬರಕ್ಕಾಗಿ ಹೊರಮಾರುಕಟ್ಟೆಯನ್ನು ಅವಲಂಬಿಸದಂತೆ ಮಾಡುವುದು ಇದರ ಮುಖ್ಯ ಐಡಿಯಾ. ಜೈವಿಕಗೊಬ್ಬರವನ್ನು ತಯಾರಿಸಲು ಮುಖ್ಯವಾಗಿ ಬಳಸುವುದು ಸಗಣಿ, ಗಂಜಲ, ಕಪ್ಪುಬೆಲ್ಲ, ಕಡಲೆಹಿಟ್ಟು, ನೀರು ಮತ್ತು ಬದುಮಣ್ಣು. ಇವೆಲ್ಲವೂ ಎಲ್ಲ ಕಾಲದಲ್ಲೂ ಸುಲಭವಾಗಿ ಸಿಗುವಂತಹದ್ದು.

ತರಬೇತಿಯ ಸಮಯದಲ್ಲಿ ತಂಡದವರೇ ಮಹಿಳೆಯರಿಗೆ ಆರಂಭಿಕ ನೆರವು ನೀಡಲು ಬೆಲ್ಲ ಹಾಗೂ ಕಡಲೆಹಿಟ್ಟನ್ನು ಒದಗಿಸಲು ನಿರ್ಧರಿಸಿದರು. ಪ್ರತಿಯೊಬ್ಬರಿಗೂ ೨೦೦ ಗ್ರಾಂ ಬೆಲ್ಲ ಹಾಗೂ ಕಡಲೆಹಿಟ್ಟನ್ನು ನೀಡಲಾಯಿತು. ೨೦ ಲೀ., ಜೀವಾಮೃತ ತಯಾರಿಕೆಗೆ ಇಷ್ಟು ಸಾಕಾಗುತ್ತದೆ. ಇದಕ್ಕಾಗಿ ಪ್ರತಿ ವ್ಯಕ್ತಿಗೆ ತಗುಲಿದ ಸರಾಸರಿ ವೆಚ್ಚ ರೂ.೧೧.

ಚೌಕ : ೨೦೦ ಲೀಟರ್ಗಳ ಜೀವಾಮೃತ ತಯಾರಿಕೆಗೆ ಬೇಕಾದ ವಸ್ತುಗಳು

ನಾಟಿ ಹಸು ಸಗಣಿ 10 ಕೆಜಿ
ಗಂಜಲ 10 ಲೀ
ಬೆಲ್ಲ 2 ಕೆಜಿ
ಕಡಲೆ ಹಿಟ್ಟು 2 ಕೆಜಿ
ಬದುಮಣ್ಣು 2 ಕೆಜಿ
ನೀರು
190 ಲೀಟರ್

ಉಳಿದ ವಸ್ತುಗಳು ಸ್ಥಳೀಯವಾಗಿಯೇ ಸಿಗುವಂತಿದ್ದು ಮಹಿಳೆಯರೇ ಅವುಗಳನ್ನು ಒಟ್ಟುಗೂಡಿಸಿದರು. ಮಹಿಳೆಯರು ತಮ್ಮಲ್ಲಿಯೇ ಎರಡು ಮೂರು ಕುಟುಂಬಗಳ ಉಪಗುಂಪುಗಳಾಗಿ ಮಾಡಿಕೊಂಡು ಸಗಣಿ, ಗಂಜಲ ಮತ್ತು ಬದುಮಣ್ಣನ್ನು ಸಂಗ್ರಹಿಸಿದರು. ಅವುಗಳನ್ನು ಸಂಗ್ರಹಿಸಲಾಗದ ಮಹಿಳೆಯರೊಂದಿಗೆ ಹಂಚಿಕೊಳ್ಳಲು ಇದರಿಂದ ಸಹಾಯವಾಯಿತು.

ಎಲ್ಲ ವಸ್ತುಗಳನ್ನು ವ್ಯವಸ್ಥೆಗೊಳಿಸಿದ ಮೇಲೆ ತರಬೇತಿ ಪ್ರಕ್ರಿಯೆ ಆರಂಭವಾಯಿತು. ಜೀವಾಮೃತವನ್ನು ಸಿಮೆಂಟು ತೊಟ್ಟಿಗಳಲ್ಲಿ ಇಲ್ಲವೇ ಮಣ್ಣಿನ ಮಡಿಕೆಗಳಲ್ಲಿ ಮಾಡಬಹುದು. ಬಹುತೇಕ ಹಳ್ಳಿಗರು ಇದನ್ನು ಪ್ಲಾಸ್ಟಿಕ್‌ ಬ್ಯಾರಲ್‌ಗಳಲ್ಲಿ ಮಾಡುವುದನ್ನೇ ಆಯ್ಕೆ ಮಾಡಿಕೊಂಡರು. ಅದೇ ಹೆಚ್ಚು ಅನುಕೂಲಕರವಾಗಿತ್ತು. CRPಗಳು ಹಾಗೂ ತಂಡದ ಮಾರ್ಗದರ್ಶನದಲ್ಲಿ ಮಹಿಳೆಯರು ಎಲ್ಲ ವಸ್ತುಗಳನ್ನು ಬ್ಯಾರೆಲ್ಲಿಗೆ ಹಾಕಿ ಕಲಸಿದರು.

ಮಹಿಳೆಯರು ಮೊದಲಿಗೆ ೨೦ಲೀಟರ್‌ ಜೈವಿಕ ಗೊಬ್ಬರ ತಯಾರಿಕೆಗೆ ಅಗತ್ಯವಾದಷ್ಟು ನೀರನ್ನು ಸೇರಿಸಿದರು. ನಂತರ ಸಗಣಿ ಮತ್ತು ಗಂಜಲವನ್ನು ಹಾಕಿ ಚೆನ್ನಾಗಿ ಮಿಶ್ರಮಾಡಿದರು. ನಂತರ ಉಳಿದ ವಸ್ತುಗಳಾದ ಬೆಲ್ಲ, ಕಡಲೆಹಿಟ್ಟು, ಬದುಮಣ್ಣು ಇವೆಲ್ಲವನ್ನೂ ಹಾಕಿ ಕಟ್ಟಿಗೆಯಿಂದ ಚೆನ್ನಾಗಿ ಕಲಸಿದರು.

ಬ್ಯಾರೆಲ್ಲಿನ ಬಾಯಿಗೆ ಗೋಣಿಚೀಲವನ್ನು ಕಟ್ಟಿ ಇದನ್ನು ನೆರಳಿರುವ ಜಾಗದಲ್ಲಿ ಹುದುಗಲು ಇಟ್ಟರು.

ಜೀವಾಮೃತವನ್ನು ನೇರವಾಗಿ ಗಿಡದ ಬೇರಿಗೆ ಸಿಂಪಡಿಸಬಹುದು. ಇದನ್ನು ೧:೧೦ ಅನುಪಾತದಲ್ಲಿ ನೀರಿನೊಂದಿಗೆ ಮಿಶ್ರಣ ಮಾಡಿ ಗಿಡಗಳಿಗೆ ಸಿಂಪಡಿಸಬಹುದು.

ಪರಿಣಾಮ

ನಂತರ ಭಾಗವಹಿಸಿದ ಮಹಿಳೆಯರಿಗೆ ತಯಾರಿಸಲಾದ ಜೈವಿಕ ಗೊಬ್ಬರವನ್ನು ವಿತರಿಸಲಾಯಿತು. ಮಹಿಳೆಯರು ಜೀವಾಮೃತವನ್ನು ಬಳಸಲು ಆರಂಭಿಸಿ ಕೆಲವೇ ದಿನಗಳಾಗಿವೆ ಆಗಲೇ ಧನಾತ್ಮಕ ಪ್ರತಿಕ್ರಿಯೆಗಳು ಬರುತ್ತಿವೆ. ಇದಕ್ಕೆ ಮೊದಲು ನನ್ನ ಹಿತ್ತಲಲ್ಲಿ ಬೆಳೆಯುತ್ತಿದ್ದ ತರಕಾರಿಗಳು ಇಷ್ಟು ತಾಜಾ ಹಾಗೂ ಸತ್ವಪೂರ್ಣವಾಗಿರಲಿಲ್ಲ. ಲಕ್ಷ್ಮೀಯವರು (CRP) ತಿಳಿಸಿದಂತೆ ಜೀವಾಮೃತವನ್ನು ಬಳಸಿದೆ. ಅದು ಬೆಳೆಗಳಿಗೆ ಹಾನಿಯುಂಟುಮಾಡುತ್ತಿದ್ದ ಕೀಟಬಾಧೆಯನ್ನು ತಪ್ಪಿಸಿತು,” ಎಂದು ಈ ತರಬೇತಿಯಲ್ಲಿ ಭಾಗವಹಿಸಿದ್ದ ಮಂಗಮ್ಮ ಎನ್ನುವಾಕೆ ಹೇಳಿದಳು.

ಒಕೆಜಿ ಕಾರ್ಯಕ್ರಮವನ್ನು ನೋಡಿಕೊಳ್ಳುತ್ತಿರುವ ಟೆಕ್ನೋಸರ್ವ್ ಸಿಬ್ಬಂದಿಯಾದ ವಿಶಾಲ್ ಅವರ ಪ್ರಕಾರ, ಮಹಿಳೆಯರು ಜೈವಿಕ ಗೊಬ್ಬರವನ್ನು ಅದರ ಸಾವಯವ ಗುಣವನ್ನು ಅರ್ಥಮಾಡಿಕೊಳ್ಳಲು ಪ್ರಾರಂಭಿಸಿದಾಗ ಅದನ್ನು ಬಳಸಲು ಉತ್ಸುಕರಾದರು. ಮೊದಲೆಲ್ಲ ಹಲವು ರೈತರು ತಮ್ಮ ಬೆಳೆಗಳಿಗೆ ಗೊಬ್ಬರಗಳು ಮತ್ತು ಕೀಟನಾಶಕಗಳನ್ನು ಪಡೆಯಲಾಗುತ್ತಿಲ್ಲವೆಂದು ದೂರುತ್ತಿದ್ದರುಮೊದಲಿಗೆ ನಾವು ಅವರಿಗೆ ಜೀವಾಮೃತ ತಯಾರಿಕೆ ಕುರಿತು ತರಬೇತಿ ನೀಡುವುದಾಗಿ ಹೇಳಿದಾಗ ಅವರಿಗೆ ಅದರ ಪರಿಣಾಮಗಳ ಕುರಿತು ಅನುಮಾನವಿತ್ತು. ಒಮ್ಮೆ ತರಬೇತಿಯನ್ನು ಪಡೆದು ಬಳಸಲಾರಂಭಿಸಿದ ಮೇಲೆ ಅವರಿಗೆ ಸಾವಯವ ವಸ್ತುವನ್ನು ತಯಾರಿಸುವುದು ಸುಲಭ, ಅಗ್ಗ ಮತ್ತು ಹೆಚ್ಚು ಪರಿಣಾಮಕಾರಿ ಎಂದು ಅರಿವಾಯಿತು!” ಎಂದು ವಿಶಾಲ್‌ ಹೇಳಿದರು.

ಕೋವಿಡ್೧೯ರ ಸಮಯದ ಪರಿಣಾಮ

ಈ ಸಾಂಕ್ರಾಮಿಕಮವು ಹೊಸ ದೃಷ್ಟಿಕೋನವನ್ನು ಹುಟ್ಟುಹಾಕಿದೆ. ಕೋವಿಡ್‌ ೧೯ ಹಾಗೂ ದೇಶದಾದ್ಯಂತದ ಲಾಕ್‌ಡೌನ್‌ ಕಣ್ಣಿಗೆ ಕಂಡದ್ದಕ್ಕಿಂತ ಹೆಚ್ಚು ಪರಿಣಾಮಗಳನ್ನುಂಟುಮಾಡಿದೆ. ಪಾಡೆರು ರೈತರು ಸಗಟುಖರೀದಿ ಕೃಷಿ ಮಾರುಕಟ್ಟೆಗಳು ಮುಚ್ಚಿದ್ದರಿಂದ ಜೀವನೋಪಾಯಕ್ಕಾಗಿ ಪರದಾಡಬೇಕಾಯಿತು. ಅಷ್ಟೇ ಅಲ್ಲದೆ ಓಡಾಟದ ಮೇಲಿನ ನಿರ್ಬಂಧದಿಂದಾಗಿ ಅವರಿಗೆ ತರಕಾರಿಯಂತಹ ಅಗತ್ಯವಸ್ತುಗಳು ಕೂಡ ಸಿಗದೇ ಹೋದವು. ಈ ಸಮಯದಲ್ಲೇ ಕೈತೋಟಗಳು ಹಾಗೂ ಸುಲಭವಾಗಿ ಸಿಗುವಂತಹ ಜೈವಿಕಗೊಬ್ಬರಗಳು ಮಹತ್ವ ಪಡೆದುಕೊಂಡವು. ತರಕಾರಿಗಳನ್ನು ಕೊಳ್ಳಲಾಗದೆ ಹಳ್ಳಿಯವರು ಪರದಾಡುತ್ತಿದ್ದಾಗ ಪಾಡೆರುವಿನ ಬುಡಕಟ್ಟು ಮಹಿಳೆಯರು ತಮ್ಮ ಕುಟುಂಬಗಳಿಗೆ ಮಾತ್ರವಲ್ಲದೆ ಹಳ್ಳಿಯವರಿಗೂ ತಮ್ಮ ಕೈತೋಟಗಳಲ್ಲಿ ಬೆಳೆದ ತರಕಾರಿಗಳನ್ನು ಒದಗಿಸಿದರು. “ನಾನು ಸಾಮಾನ್ಯವಾಗಿ ನಮ್ಮ ಅಗತ್ಯಕ್ಕಿಂತ ಹೆಚ್ಚಿನ ತರಕಾರಿಯನ್ನು ಬೆಳೆದಿರುತ್ತೇನೆ. ಹಾಗಾಗಿ ಅವುಗಳನ್ನು ಹಳ್ಳಿಯಲ್ಲಿ ಹಂಚುತ್ತೇನೆ. ಲಾಕ್ಡೌನ್ಸಮಯದಲ್ಲಿ ಓಡಾಟದ ನಿರ್ಬಂಧದ ನಡುವೆ ನಮ್ಮ ಹಳ್ಳಿಯಿಂದ ದೂರವಿದ್ದ ಮಾರುಕಟ್ಟೆಗೆ ತಲುಪುವಷ್ಟರಲ್ಲಿ ಕೊಳ್ಳಲು ಹೆಚ್ಚಿನ ತರಕಾರಿಗಳು ಉಳಿದಿರುತ್ತಿರಲಿಲ್ಲ ಎಂದು ಮಂಗಮ್ಮ ಹೇಳುತ್ತಾಳೆ. ಅಂದಿನಿಂದ ಮಂಗಮ್ಮನ ಸಾವಯವ ಕೈತೋಟದಿಂದ ಸ್ಪೂರ್ತಿಗೊಂಡು ಹಲವು ಮಹಿಳೆಯರು ತಮ್ಮದೇ ಕೈತೋಟಗಳನ್ನು ಬೆಳೆಸಲು ಮುಂದಾದರು. ಜನ ನಾನು ಬೆಳೆದ ತರಕಾರಿಗಳನ್ನು ನೋಡಿ ಅದನ್ನು ಹೇಗೆ ಬೆಳೆದೆ ಎಂದು ಕೇಳುತ್ತಾರೆ. ಅವರಿಗೆ ಜೀವಾಮೃತದ ಬಗ್ಗೆ ಹೇಳುತ್ತೇನೆ. ಲಾಕ್ಡೌನ್ಸಮಯದಲ್ಲಿ ಕೃಷಿಒಳಸುರಿಯುವಿಕೆಗಳು ಸಿಗದೆ ಪರದಾಡುತ್ತಿದ್ದಾಗ ಜೀವಾಮೃತವು ಸುಲಭವಾಗಿ ನಮಗೆ ಬಳಸಬಹುದಾದ ಬದಲಿ ಉತ್ಪನ್ನವಾಗಿ ದೊರಕಿತು. ಇದು ಅತ್ಯಂತ ಪರಿಣಾಮಕಾರಿ ಗೊಬ್ಬರ ಮತ್ತು ಕೀಟನಾಶಕ!”

ಮುಂದಿನ ಹಾದಿ

ತರಬೇತಿ ಅವಧಿಯಲ್ಲಿ 32 ಬುಡಕಟ್ಟು ಗ್ರಾಮಗಳ ಒಟ್ಟು 708 ಮಹಿಳಾ ರೈತರಿಗೆ ಜೀವಾಮೃತ ತಯಾರಿಕೆಯ ಕುರಿತು ತರಬೇತಿ ನೀಡಲಾಯಿತು. ಜೈವಿಕ ಗೊಬ್ಬರವನ್ನು ಬಳಸುತ್ತಿರುವ ಬಹುತೇಕ ಎಲ್ಲಾ ಮಹಿಳೆಯರು ತಮ್ಮ ಇಳುವರಿಯಲ್ಲಿ ಧನಾತ್ಮಕ ಫಲಿತಾಂಶ ಬಂದಿದೆ ಎಂದು ವರದಿ ಮಾಡಿದ್ದಾರೆ. ಆರಂಭಿಕ ನೆರವು ಮತ್ತು ತರಬೇತಿಯೊಂದಿಗೆ ಅತ್ಯಲ್ಪ ಸಂಪನ್ಮೂಲಗಳನ್ನು ಹೊಂದಿರುವವರಿಗೂ ಕೃಷಿಪರಿಸರ ಪದ್ಧತಿಗಳನ್ನು ಹೇಗೆ ಕಲಿಸಬಹುದೆಂದು ಇದು ತೋರಿಸಿಕೊಟ್ಟಿದೆ. ಜೀವಾಮೃತದ ತಯಾರಿಕೆಯು ಹಸಿರು ಕೃಷಿಯತ್ತ ಒಂದು ಸಣ್ಣ ಹೆಜ್ಜೆಯಾಗಿದ್ದರೂ, ವಿಶೇಷವಾಗಿ ರೈತ ಉತ್ಪಾದಕ ಸಂಸ್ಥೆಗಳ ಮೂಲಕ (FPOs) ವ್ಯಾಪಕವಾಗಿ ರೈತರು ಮತ್ತು ಹೆಚ್ಚಿನ ಸಂಪನ್ಮೂಲಗಳೊಂದಿಗೆ ಸಂಬಂಧ ಹೊಂದಿದೆ. ಇದರಿಂದಾಗಿ ಅದನ್ನು ಹೆಚ್ಚಿನ ಮಟ್ಟದಲ್ಲಿ ವಿಸ್ತರಿಸುವ ಸಾಮರ್ಥ್ಯ ಹೊಂದಿದೆ.

CRPಗಳು ಮಹಿಳಾ ರೈತರೊಂದಿಗೆ ನಿರಂತರ ಸಂಪರ್ಕವನ್ನು ಇಟ್ಟುಕೊಂಡಿದ್ದು ಇದು ಯಶಸ್ವಿಯಾಗಲು ಒಂದು ಮುಖ್ಯ ಕಾರಣವಾಗಿದೆ. ಸ್ಥಳೀಯ ಸಮುದಾಯದ ಭಾಗವಾಗಿರುವ ಸಮುದಾಯ ಸಂಪನ್ಮೂಲ ವ್ಯಕ್ತಿಗಳು ಆಗಾಗ ಅದೇ  ಹಳ್ಳಿ ಅಥವಾ ಹತ್ತಿರದ ಹಳ್ಳಿಗಳಿಂದ ಬರುತ್ತಾರೆ. ಹೆಚ್ಚು ಸುಸ್ಥಿರವಾದ ಮತ್ತು ಸಮುದಾಯ ನೇತೃತ್ವದ ಮಾದರಿಯನ್ನು ಮುನ್ನಡೆಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಟೆಕ್ನೊಸರ್ವ್‌ ಸಿಬ್ಬಂದಿಗಳು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮುನ್ನಡೆಸಿದರೆ CRPಗಳು ಮಹಿಳಾ ರೈತರು ಈ ಪದ್ಧತಿಗಳನ್ನು ಪರಿಣಾಮಕಾರಿಯಾಗಿ ಅಳವಡಿಸಿಕೊಳ್ಳುವಂತೆ ಮಾಡಿದರು. ಇದರಿಂದ ಕಲಿತ ಒಂದು ಪ್ರಮುಖ ಅಂಶವೆಂದರೆ ಮಾನವಸಂಪನ್ಮೂಲದ ಕೊರತೆಯಾಗಿರುವ ಸಂದರ್ಭಗಳಲ್ಲಿ ಸಮುದಾಯದೊಳಗಿನ ಸಮರ್ಥ ವ್ಯಕ್ತಿಗಳನ್ನು ಗುರುತಿಸಿದರೆ ಅವರು ಕಾರ್ಯವನ್ನು ಮುನ್ನಡೆಸುತ್ತಾರೆ.

ಪಾಡೇರು ಪ್ರದೇಶದಲ್ಲಿ ಜೈವಿಕ ಗೊಬ್ಬರ ಅಳವಡಿಕೆಯ ಯಶಸ್ಸಿನೊಂದಿಗೆ, ಟೆಕ್ನೊಸರ್ವ್‌ ಈಗ ಈ ಮಾದರಿಯನ್ನು ಕಾರ್ಯಕ್ರಮದ ಅಡಿಯಲ್ಲಿ ಇತರ ಪ್ರದೇಶಗಳಲ್ಲಿ ಮಾತ್ರವಲ್ಲದೆ, ಪ್ರಸ್ತುತ ದೇಶಾದ್ಯಂತ ಕಾರ್ಯನಿರ್ವಹಿಸುತ್ತಿರುವ ಹಲವಾರು ಕಾರ್ಯಕ್ರಮಗಳಲ್ಲಿ ಪುನರಾವರ್ತಿಸಲು ಯೋಜಿಸಿದೆ.

ಪರಾಮರ್ಶನಗಳು

Laxmaiah, A., Diet and Nutritional Status of Tribal Population in ITDA Project Areas of Khammam District, Andhra Pradesh, 2007, Journal of Human Ecology.

Mordor Intelligence, Organic Food and Beverages Market – Growth, Trends, and Forecasts (2020 – 2025), 2020

ಟೆಕ್ನೋಸರ್ವ್


TechnoServe,

B1 ,201 Center Point 243A NM Joshi Marg,
Mumbai Maharashtra , 400013

ಆಂಗ್ಲ ಮೂಲ : ಲೀಸಾ ಇಂಡಿಯಾ; ಸಂಪುಟ :೨೩; ಸಂಚಿಕೆ : ೧ ; ಮಾರ್ಚ್‌ ೨೦‌೨೧

Recent Posts

ಕೃಷಿಯಲ್ಲಿ ನೀರಿನ ಸಮರ್ಥ ಬಳಕೆಗಾಗಿ ಕಾಲುವೆ ಯಾಂತ್ರೀಕರಣ

ಕೃಷಿಯಲ್ಲಿ ನೀರಿನ ಸಮರ್ಥ ಬಳಕೆಗಾಗಿ ಕಾಲುವೆ ಯಾಂತ್ರೀಕರಣ

ನಮ್ಮ ನೀರಾವರಿ ವ್ಯವಸ್ಥೆಯನ್ನು 21ನೇ ಶತಮಾನದ ಬೇಡಿಕೆಗಳಿಗೆ ಹೊಂದುವಂತೆ ಮಾಡುವುದು ನಮ್ಮ ಮುಂದಿರುವ ನಿಜವಾದ ಸವಾಲಾಗಿದೆ. ತಂತ್ರಜ್ಞಾನವೇ...