ದೇಸಿ ಭತ್ತದ ಪುನಃಶ್ಚೇತನ


ದಶಕಗಳ ಹಿಂದೆ ಸಹಜ ಸಮೃದ್ಧ ಸಾವಯವ ರೈತರ ಸಾಮುದಾಯಿಕ ಕೃಷಿ ವಿಧಾನ ಹುಟ್ಟಿಕೊಂಡಿತ್ತು. ಸುಸ್ಥಿರ ಕೃಷಿ ವ್ಯವಸ್ಥೆ ಕುರಿತಾದ ಅರಿವು, ಬೀಜಗಳ ಮಾಹಿತಿ ಮತ್ತು ಕೃಷಿಗೆ ಸಂಬoಧಿಸಿದ ಇತರೆ ಹಲವಾರು ಮಾಹಿತಿಗಳನ್ನು ಪರಸ್ಪರ ಹಂಚಿಕೊಳ್ಳುವುದಕ್ಕಾಗಿ ರೈತರೇ ಈ ಸಹಜ ಸಮೃದ್ಧ ಸಂಘಟನೆಯನ್ನು ಆರಂಭಿಸಿದ್ದರು. ಅಂದು ಸಾಮಾನ್ಯ ಕೃಷಿ ಸಂಘಟನೆಯಾಗಿ ಹುಟ್ಟಿಕೊಂಡ ಈ ಸಂಘಟನೆಯು ಇಂದು ಪ್ರಬಲ ಕೃಷಿ ಸಂಸ್ಥೆಯಾಗಿ ಬೆಳೆದಿದೆ. ಸ್ಥಳೀಯ ಬೀಜಗಳ ಪುನಶ್ಚೇತನದ ಮೂಲಕ ಭಾರತೀಯ ಕೃಷಿ ವ್ಯವಸ್ಥೆಯ ಅಭಿವೃದ್ಧಿಗೆ ಪೂರಕವಾದ ಮಹತ್ತರವಾದ ಚಳವಳಿಗೆ ಈ ಸಂಸ್ಥೆ ಕಾರಣವಾಗಿದೆ ಎಂದರೆ ಅತಿಶಯೋಕ್ತಿಯಾಗದು.


ಅಂದಿನ ಆ ಅಕ್ಕಿ ಅಥವಾ ಭತ್ತ ಮೇಳ ನಮಗೆ ಬಿಡುವಿಲ್ಲದ ದಿನವಾಗಿತ್ತು. ಎರಡು ದಿನಗಳ ಕಾಲ ನಿರಂತರವಾಗಿ ಮಾತಾಡಿ ನಮ್ಮ ಗಂಟಲಲ್ಲಿ ಧ್ವನಿಯೇ ಕಟ್ಟಿಹೋದ ಅನುಭವ. ಆದರೆ, ಮರುದಿನದ ಅನುಭವವೇ ಬೇರೆ. ವಿವಿಧ ಬಗೆಯ ಅಕ್ಕಿಯನ್ನು ತಂದು ರೈತರೇ ಮಾರಾಟ ಮಾಡಿದ್ದರು. ಅದು ಎಷ್ಟರಮಟ್ಟಿಗೆ ಮಾರಾಟವಾಯಿತು ಎಂದರೆ ತಂದ ಅಕ್ಕಿಮೂಟೆಗಳೆಲ್ಲಾ ಖಾಲಿಯಾದವು. ಆದರೆ, ಮೇಳ ಇನ್ನೂ ಒಂದು ದಿನ ಬಾಕಿ ಇತ್ತು!

ಆ ದಿನ ಮಾತ್ರ ಗ್ರಾಹಕರು ನಿರಾಶೆಗೊಳಗಾಗಬೇಕಾಯಿತು. ರೈತರು ತಂದಿದ್ದ ಅಕ್ಕಿ ಸಂಪೂರ್ಣ ಮಾರಾಟವಾಗಿತ್ತು. ಪರಿಣಾಮವಾಗಿ ಅಕ್ಕಿ ಖರೀದಿಗೆ ಬಂದವರು ಕನಿಷ್ಠ ಒಂದು ಕೆ.ಜಿ. ಅಕ್ಕಿ ಕೂಡ ಇಲ್ಲದೆ ಖಾಲಿ ಚೀಲಗಳನ್ನು ಹೊತ್ತು ಹಿಂತಿರುಗಬೇಕಾಯಿತು. ಆದರೆ ಗ್ರಾಹಕರು ಮಾತ್ರ ನೂರಾರು ಬಗೆಯ ಅಕ್ಕಿ ಮಳಿಗೆಗಳನ್ನು, ಆ ಅಕ್ಕಿಗಳನ್ನು ಕುರಿತ ಮಾಹಿತಿಗಳನ್ನೊಳಗೊಂಡ ಭಿತ್ತಿಪತ್ರಗಳನ್ನು, ಕರಪತ್ರಗಳು ಮತ್ತು ರೈತರೊಂದಿಗೆ ಮಾಹಿತಿಗಳನ್ನು ಹಂಚಿಕೊಳ್ಳುವುದನ್ನು ಮರೆಯಲಿಲ್ಲ.

ಸಾವಯವವೇ ಬದುಕು
ಸಹಜ ಸಮೃದ್ಧ ಸಂಘಟನೆಯು ಅಕ್ಕಿ ಮೇಳಗಳನ್ನು ಏರ್ಪಡಿಸುತ್ತದೆ. ಸಾಂಪ್ರದಾಯಿಕವಾದ ಅಕ್ಕಿ ವಿಧಗಳನ್ನು ಪರಿಚಯಿಸಲು, ಆ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ಮತ್ತು ಸುಸ್ಥಿರ ಕೃಷಿ ವ್ಯವಸ್ಥೆಯ ಕುರಿತು ಬೀಜಗಳನ್ನು ಮತ್ತು ಅವುಗಳ ಕುರಿತಾದ ಜ್ಞಾನವನ್ನು ಪರಸ್ಪರ ಹಂಚಿಕೊಳ್ಳಲು ವೇದಿಕೆ ಕಲ್ಪಿಸಿಕೊಡುವ ಉದ್ದೇಶದಿಂದ ಅಕ್ಕಿ ಮೇಳಗಳನ್ನು ಆಗಾಗ ನಡೆಸಲಾಗುತ್ತದೆ.

ಸಣ್ಣ ಮತ್ತು ಅತಿ ಸಣ್ಣ ರೈತರು, ಮಹಿಳಾ ಸಂಘಟನೆಗಳು ಮತ್ತು ಬೀಜ ಸಂಗ್ರಾಹಕರಾರರು ಸೇರಿ ಈ ಮೇಳವನ್ನು ದಶಕಗಳ ಹಿಂದೆಯೇ ಆರಂಭಿಸಿದ್ದರು. ಸಾವಯವ ಕೃಷಿಯ ಪ್ರಾಥಮಿಕ ಹಂತವನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಸುಮಾರು ೭೫೦ ರೈತರು ಮತ್ತು ೧೫ ರೈತರ ಸಂಘಟನೆಗಳು ‘ಸಹಜ ಸಮೃದ್ಧ’ದೊಂದಿಗೆ ಕೈಜೋಡಿಸಿದ್ದಾರೆ. ಸಾವಯವ ಕೃಷಿಕೆಲಸಗಳೊಂದಿಗೆ ನಾವು ‘ಸೇವ್ ಅವರ್ ರೈಸ್’ ಆಂದೋಲನದ ಮೂಲಕ ಅಕ್ಕಿ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸುತ್ತಿದ್ದೇವೆ. ‘ಸೇವ್ ಅವರ್ ರೈಸ್’ ಅಥವಾ ‘ನಮ್ಮ ಅಕ್ಕಿ ಸಂರಕ್ಷಣೆ’ ಆಂದೋಲನವು ಏಷ್ಯಾದಾದ್ಯಂತ ಸಾಂಪ್ರದಾಯಿಕ ಅಕ್ಕಿ ಸಂಸ್ಕೃತಿಯನ್ನು ಕಾಪಾಡುವ ಉದ್ದೇಶದಿಂದ ‘ಪಾನ್ ಏಷ್ಯಾ’ (PAN AP – Pesticide Action Network Asia and the Pacific ) ಹುಟ್ಟುಹಾಕಿದ ಅಭಿಯಾನ. ಸಹಜ ಸಮೃದ್ಧ ಕರ್ನಾಟಕದಲ್ಲಿಯೂ ಸಾವಯವ ಕೃಷಿಗೆ ನಾಂದಿ ಹಾಡಿದೆ. ಅಕ್ಕಿ ಕೃಷಿ ಸಂರಕ್ಷಣಾ ವೈವಿಧ್ಯತೆ, ಸಹಯೋಗಿ ಬೆಳೆ ಸುಧಾರಣೆ ಮತ್ತು ಸಾವಯವ ಅಕ್ಕಿಗೆ ಹೆಚ್ಚಿನ ಜನಪ್ರಿಯತೆಯನ್ನು ತಂದುಕೊಡುವ ಮೂಲಕ ಸಾಂಪ್ರದಾಯಿಕವಾದ ಅಕ್ಕಿ ಪರಂಪರೆಯನ್ನು ಪುನಃಶ್ಚೇತನಗೊಳಿಸುವ ಉದ್ದೇಶವನ್ನಿಟ್ಟುಕೊಂಡು ಕರ್ನಾಟಕದಲ್ಲಿ ಸಾವಯವ ಕೃಷಿ ಪದ್ಧತಿಯ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ.

ನಮ್ಮ ಅಕ್ಕಿಯನ್ನು ರಕ್ಷಿಸಿ….
ಕರ್ನಾಟಕದ ಮಟ್ಟಿಗೆ ಹೇಳುವುದಾದರೆ ಇಲ್ಲಿನ ಸಾವಯವ ಅಕ್ಕಿ ಕೃಷಿಯು ಅತ್ಯಂತ ಕ್ಷಿಪ್ರಗತಿಯಲ್ಲಿ ಬೆಳವಣಿಗೆ ಕಾಣುತ್ತಿದೆ. ಹಲವಾರು ಮಂದಿ ಕೃಷಿಕರು ಸಾವಯವ ಕೃಷಿಯು ಸಾಂಪ್ರದಾಯಿಕವಾದ ಕೃಷಿ ಪದ್ಧತಿಗೆ ಸೂಕ್ತ/ಪರ್ಯಾಯವಾಗಿರುವ ಕೃಷಿ ವಿಧಾನ ಎಂಬುದನ್ನು ಕಂಡುಕೊoಡಿದ್ದಾರೆ.

ಇಂದಿಗೂ ಬಹಳಷ್ಟು ಹಳ್ಳಿಗಳಲ್ಲಿ ರೈತರು ಅಪರೂಪದ ಅಕ್ಕಿ ತಳಿಗಳನ್ನು ಬೆಳೆಯುತ್ತಾ ಬರುತ್ತಿದ್ದಾರೆ. ಆ ಅಕ್ಕಿಗಳು ಅದರದೇ ಅದ ರುಚಿ, ವಿಶೇಷ ಗುಣಲಕ್ಷಣಗಳು, ನಿರ್ವಹಣಾ ಗುಣಗಳು (ಬರ ನಿರೋಧಕ, ರೋಗ ನಿರೋಧಿ ಗುಣಗಳು) ಮತ್ತು ಆರೋಗ್ಯಕ್ಕೆ ಪೂರಕವಾದ ಪ್ರಯೋಜನಗಳು ಮತ್ತು ಅಡುಗೆ ಗುಣಗಳನ್ನು ಹೊಂದಿವೆ. ಇವುಗಳಲ್ಲಿ ಕರಿಭತ್ತ, ಕಳಮೆ, ಕರಿಕಳವೆ, ದೊಡ್ಡಬೈರ ನೆಲ್ಲು, ಕರಿ ಗಜಿವಿಲಿ ಮತ್ತು ಸಣ್ಣಕ್ಕಿ ಮುಂತಾದವುಗಳು ಔಷಧೀಯ ಗುಣಗಳನ್ನು ಹೊಂದಿವೆ.

ಆದರೆ, ಸಾಂಪ್ರದಾಯಿಕ ಅಕ್ಕಿ ಪ್ರಭೇದಗಳನ್ನು ಮಾರುಕಟ್ಟೆ ಮಾಡುವುದು ಸವಾಲಿನ ಕೆಲಸವೂ ಹೌದು. ಮುಖ್ಯವಾಗಿ, ನಗರ ಕೇಂದ್ರಗಳ ಜನರು ಬಣ್ಣ ಮತ್ತು ಆಕಾರಗಳನ್ನು ನೋಡಿ ಅಕ್ಕಿಗಳ ಖರೀದಿ ಮಾಡುತ್ತಾರೆ. ಇಂಥವರಿಗೆ ಸಾಂಪ್ರದಾಯಿಕ ಅಕ್ಕಿ ಪ್ರಭೇದಗಳನ್ನು ಬಹುಬೇಗನೆ ತಲುಪಿಸುವುದು ಕಷ್ಟದ ಕೆಲಸ. ಪರಿಸ್ಥಿತಿ ಹೀಗಿದ್ದರೂ, ರೈತರು ಸಾಂಪ್ರದಾಯಿಕ ಅಕ್ಕಿ ಪ್ರಭೇದಗಳನ್ನು ಬೆಳೆಯುತ್ತಾ ಬರುತ್ತಿರುವುದು ವಿಶೇಷ.

ಈ ಹಿನ್ನೆಲೆಯನ್ನು ಗಮನಿಸಿ ನಾವು ವಿವಿಧ ಪ್ರಭೇದಗಳ ಅಕ್ಕಿಗಳ ಮಾರುಕಟ್ಟೆಯನ್ನು ವಿಸ್ತರಿಸುವ ಕೆಲಸ ಆರಂಭಿಸಿದೆವು. ಸಾಂಪ್ರದಾಯಿಕ ಅಕ್ಕಿಗೆ ಸಂಬAಧಿಸಿದ ಸ್ಥಳೀಯ ಗುಣಲಕ್ಷಣಗಳ ಬಗ್ಗೆ ಮಾಹಿತಿ ಸಂಗ್ರಹಿಸಿದೆವು ಮತ್ತು ಅದರಲ್ಲಿರುವ ಪೌಷ್ಠಿಕ ಗುಣಗಳ ಬಗ್ಗೆ ತಿಳಿಯಲು ಪ್ರಯೋಗಾಲಯಗಳಲ್ಲಿ ಅಕ್ಕಿಯನ್ನು ಪರೀಕ್ಷಿಸಲಾಯಿತು. ಮಾರುಕಟ್ಟೆಗಳಲ್ಲಿ ದೊರೆಯುವ ವಿವಿಧ ಬಗೆಯ ಮೆರುಗು ನೀಡಿದ(ಹೊಳಪು ಅಕ್ಕಿ) ಅಕ್ಕಿಗಳಿಗೆ ಹೋಲಿಸಿದರೆ ಸಾಂಪ್ರದಾಯಿಕ ಅಕ್ಕಿ ಪ್ರಭೇದಗಳಲ್ಲಿ ಅತೀ ಹೆಚ್ಚಿನ ಪ್ರಮಾಣದಲ್ಲಿ ಪೌಷ್ಠಿಕಾಂಶ ಮತ್ತು ಆರೋಗ್ಯಕ್ಕೆ ಪೂರಕವಾದ ಅಂಶಗಳು ಇರುವುದು ಈ ಅಧ್ಯಯನದಿಂದ ತಿಳಿದುಬಂತು. ಭಿತ್ತಿಚಿತ್ರಗಳು, ಕರಪತ್ರಗಳನ್ನು ಪ್ರದರ್ಶಿಸುವುದು ಮತ್ತು ಈ ಕುರಿತು ಲೇಖನಗಳನ್ನು ಬರೆಯುವ ಮೂಲಕ ಈ ಅಧ್ಯಯನಕ್ಕೆ ವ್ಯಾಪಕ ಪ್ರಚಾರವನ್ನು ನೀಡಿದೆವು. ಮಾಧ್ಯಮಗಳಲ್ಲಿ ಸಿಕ್ಕ ಪ್ರಚಾರ ಮತ್ತು ಅಕ್ಕಿ ಮೇಳಗಳು ಸಾಂಪ್ರದಾಯಿಕ ಅಕ್ಕಿಗಳ ಬಗ್ಗೆ ವ್ಯಾಪಕ ಮಾಹಿತಿಯನ್ನು ವಿಸ್ತರಿಸಲು ಕಾರಣವಾದವು. ಅಷ್ಟೇ ಅಲ್ಲ, ಹಲವಾರು ಮಂದಿ ರೈತರು ಸಾಂಪ್ರದಾಯಿಕ ಕೃಷಿಯಿಂದ ಪ್ರಭಾವಿತರಾಗಲು ಕಾರಣವಾಯಿತು.

ಸಹಜ ಆರ್ಗಾನಿಕ್ಸ್ – ಇಲ್ಲಿ ರೈತರೇ ಮಾಲಿಕರು

ಸಹಜ ಸಮೃದ್ಧ ಸಂಸ್ಥೆಯು ‘ಸಹಜ ಆರ್ಗಾನಿಕ್ಸ್’ ಬ್ರಾಂಡ್ ಹೆಸರಿನ ಮೂಲಕ ಸಾವಯವ ಆಹಾರಗಳಿಗೆ ಮಾರುಕಟ್ಟೆ ಒದಗಿಸುವ ಮತ್ತು ಗ್ರಾಹಕರು, ಉತ್ಪಾದಕರನ್ನು ಸೆಳೆಯುವ ಸಂಪರ್ಕಜಾಲವನ್ನು ಬೆಳೆಸಿದೆ. ಸಾವಯವ ಆಹಾರೋತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ಒದಗಿಸುವ ನಿಟ್ಟಿನಲ್ಲಿ
‘ಸಹಜ ಸಮೃದ್ಧ ಆರ್ಗಾನಿಕ್ ಪ್ರೊಡ್ಯೂರ‍್ಸ್ ಕಂಪನಿ ಲಿಮಿಟೆಡ್’ ಹುಟ್ಟಿಕೊಂಡಿದೆ. ಈ ಕಂಪನಿಯು ರೈತರಿಂದ ನೇರವಾಗಿ ಆಹಾರೋತ್ಪನ್ನಗಳನ್ನು ಖರೀದಿಸಿ ಗ್ರಾಹಕರಿಗೆ ಮಾರಾಟ ಮಾಡುತ್ತದೆ. ರೈತರ ಬೆಳೆಗಳಿಗೆ ನ್ಯಾಯಯುತವಾದ ಬೆಲೆ ಒದಗಿಸುವುದು ಮತ್ತು ಆಹಾರೋತ್ಪನ್ನಗಳನ್ನು ನೇರವಾಗಿ ಗ್ರಾಹಕರಿಗೆ ತಲುಪಿಸುವ ಉದ್ದೇಶದಿಂದ ಕಂಪನಿ ಈ ರೀತಿ ಕಾರ್ಯನಿರ್ವಹಿಸುತ್ತಾ ಬರುತ್ತಿದೆ.
ಸಹಜ ಆರ್ಗಾನಿಕ್ಸ್ ಸುಮಾರು ೩೦ ಪ್ರಭೇದಗಳ ಅಕ್ಕಿ, ೫೦ ಬಗೆಯ ವಿವಿಧ ಧಾನ್ಯಗಳು, ಕಾಳುಗಳು, ಗೋಧಿ, ಹಣ್ಣು ಮತ್ತು ತರಕಾರಿಗಳು, ಮಕ್ಕಳ ಆಹಾರಗಳು ಮತ್ತು ಹಪ್ಪಳ, ಆರೋಗ್ಯಭರಿತ ಪಾನೀಯಗಳು, ಬಹುಧಾನ್ಯದ ಹಿಟ್ಟು ಮುಂತಾದ ಸಂಸ್ಕರಿಸಿದ ಆಹಾರೋತ್ಪನ್ನಗಳನ್ನೂ ಮಾರಾಟ ಮಾಡುತ್ತಿದೆ. ಕೇವಲ ಸಾವಯವ ಮತ್ತು ಸಾಂಪ್ರದಾಯಿಕ ಅಕ್ಕಿ, ಧಾನ್ಯ ಮತ್ತು ಕಾಳುಗಳಿಗೆ ಮಾತ್ರ ಸಹಜ ಸಂಸ್ಥೆಯು ಆದ್ಯತೆ ನೀಡುತ್ತದೆ. ಮುಖ್ಯವಾಗಿ ಧಾನ್ಯ ಮತ್ತು ಕೆಂಪಕ್ಕಿಗಳಲ್ಲಿ ಹೆಚ್ಚಿನ ಪೌಷ್ಠಿಕಾಂಶ, ಔಷಧೀಯ ಗುಣಗಳು ಇರುವುದರಿಂದ ನಗರ ಪ್ರದೇಶಗಳಲ್ಲಿ ಈ ಆಹಾರೋತ್ಪನ್ನಗಳಿಗೆ ಹೆಚ್ಚಿನ ಬೇಡಿಕೆ ಇದೆ.
ಪ್ರಸ್ತುತ ‘ಸಹಜ ಸಮೃದ್ಧಿ’ಯು ರಾಜ್ಯದ ವಿವಿಧ ಭಾಗಗಳ ೭೮೬ ಸಾವಯವ ಉತ್ಪಾದಕರನ್ನು ಹೊಂದಿದೆ ಮತ್ತು ಸುಮಾರು ೨ ಸಾವಿರ ರೈತರು ಸಾವಯವ ಕೃಷಿ ಬೆಳೆಯುತ್ತಿದ್ದಾರೆ. ದಕ್ಷಿಣ ಭಾರತದ ಪ್ರಮುಖ ನಗರಗಳ ಸುಮಾರು ೨೬ ಮಳಿಗೆಗಳಿಗೆ ಆಹಾರೋತ್ಪನ್ನಗಳನ್ನು ಸರಬರಾಜು ಮಾಡಲಾಗುತ್ತದೆ. ಈ ಜೈವಿಕ ಉದ್ಯಮದಲ್ಲಿ ನಾಗರಿಕ-ಸಮಾಜ ಸಹಭಾಗಿತ್ವವನ್ನು ಸೃಷ್ಟಿಸಲಾಗಿದ್ದು, ಇದೊಂದು ಮಹತ್ವದ ಮೈಲಿಗಲ್ಲು ಎನ್ನಬಹುದು. ರೈತ ಸಮೂಹಗಳು, ಮಹಿಳಾ ಸಂಘಟನೆಗಳು ಮತ್ತು ಗ್ರಾಹಕರ ಗುಂಪುಗಳು ಒಗ್ಗಟ್ಟಿನಿಂದ ದುಡಿಯುತ್ತಿದ್ದಾರೆ. ದಕ್ಷಿಣ ಭಾರತದಲ್ಲಿ ಅಳಿದುಹೋಗುತ್ತಿರುವ ಕೃಷಿ ಸಂಸ್ಕೃತಿ ಮತ್ತು ಸಮುದಾಯವನ್ನು ಪುನಶ್ಚೇತನಗೊಳಿಸಬೇಕೆನ್ನುವುದೇ ಇವರೆಲ್ಲರ ಒಕ್ಕೊರಲಿನ ಮಂತ್ರವಾಗಿದೆ.

ಅಕ್ಕಿ ಮೇಳಗಳೇ ಬದಲಾವಣೆಯ ಮುನ್ಸೂಚಕಗಳು!
ಗ್ರಾಹಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಬೇರೆ-ಬೇರೆ ಕಡೆಗಳಲ್ಲಿ ಅಕ್ಕಿ ಮೇಳಗಳನ್ನು ನಡೆಸಲಾಯಿತು. ಅನನ್ಯ ಮತ್ತು ಅಸಾಮಾನ್ಯ ಸುವಾಸನೆಯನ್ನು ಹೊಂದಿರುವ ಮತ್ತು ಮರೆಯಾಗುತ್ತಿರುವ ಅಮೂಲ್ಯ ಸಂಪತ್ತಾದ ಸಾಂಪ್ರದಾಯಿಕ ಅಕ್ಕಿ ಪ್ರಭೇದಗಳಲ್ಲಿ ಇರುವ ಆರೋಗ್ಯಕ್ಕೆ ಪೂರಕವಾದ ಪ್ರಯೋಜನಗಳನ್ನು ಗ್ರಾಹಕರಿಗೆ ತಿಳಿಸುವುದೇ ಈ ಮೇಳಗಳ ಉದ್ದೇಶ. ಸಾವಯವ ಮೇಳ, ದೇಸೀ ಮೇಳ, ಕೆಂಪಕ್ಕಿ ಮೇಳ, ಬಯೋಡೈವರ್ಸಿಟಿ ಮೇಳ(ಜೀವವೈವಿಧ್ಯ ಮೇಳ), ಸೇಫ್ ಫುಡ್ ಮೇಳ(ಸುರಕ್ಷಿತ ಆಹಾರ ಮೇಳ)…ಹೀಗೆ ಹಲವಾರು ಮೇಳಗಳನ್ನು ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಆಯೋಜಿಸಿದೆವು. ಅಲ್ಲಿ ಅಕ್ಕಿಗಳಿಂದ ರುಚಿ-ರುಚಿಯಾದ ಆಹಾರಗಳನ್ನು ತಯಾರಿಸಿ ಪ್ರದರ್ಶನಕ್ಕಿಟ್ಟೆವು. ಜನರಿಗೆ ಇಲ್ಲಿ ಸವಿಯನ್ನು ಪರೀಕ್ಷಿಸುವ ಅವಕಾಶವೂ ಇತ್ತು. ಈ ಮೂಲಕ ಜನರಿಂದ ಮರೆಯಾಗುತ್ತಿರುವ ಆರೋಗ್ಯಕರ ಮತ್ತು ಪೌಷ್ಠಿಕ ಅಕ್ಕಿಯನ್ನು ಮಾರುಕಟ್ಟೆಗೆ ಮರುಪರಿಚಯಿಸಿದೆವು.

ಪ್ರತಿ ಮೇಳವೂ ಸರಾಸರಿ ೪ರಿಂದ ೫ ಸಾವಿರ ಗ್ರಾಹಕರನ್ನು ಆಕರ್ಷಿಸುತ್ತಿತ್ತು. ಸುಮಾರು ೩ರಿಂದ ೪ ಲಕ್ಷ ರೂಪಾಯಿ ಮೌಲ್ಯದ ಸಾಂಪ್ರದಾಯಿಕ ಆಹಾರ ಪ್ರಭೇದಗಳು ಮಾರಾಟವಾಗುತ್ತಿದ್ದವು. ೨೦೧೨ರಲ್ಲಿ ವಾರ್ಷಿಕವಾಗಿ ಮಾರಾಟವಾದ ಸಾಂಪ್ರದಾಯಿಕ ಪ್ರಭೇದ ಅಕ್ಕಿಯ ಪ್ರಮಾಣ ೧೦೦ ಟನ್ ದಾಟಿತ್ತು.

ಈ ಅಕ್ಕಿ ಮೇಳಗಳು ಮತ್ತು ಅದರ ಉತ್ಪನ್ನಗಳ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಮಾಧ್ಯಮಗಳೂ ಪ್ರಮುಖ ಪಾತ್ರ ವಹಿಸಿವೆ. ಹಲವಾರು ಪತ್ರಿಕೆಗಳು ಮತ್ತು ನಿಯತಕಾಲಿಕೆಗಳು ಕೆಂಪಕ್ಕಿ ಮತ್ತು ಸಾವಯವ ಅಕ್ಕಿ ಸೇವನೆಯಿಂದ ಆರೋಗ್ಯಕ್ಕಿರುವ ಪ್ರಯೋಜನಗಳ ಬಗ್ಗೆ ವಿಶೇಷ ವರದಿಗಳನ್ನು ಪ್ರಕಟಿಸಿವೆ. ಮೇಳಗಳಿಗೆ ಭೇಟಿ ನೀಡಿದವರ ಬಗ್ಗೆಯೂ ಮಾಹಿತಿಯನ್ನು ಕಲೆಹಾಕಲಾಯಿತು. ಪ್ರಸ್ತುತ ದೇಶಾದ್ಯಂತ ಗ್ರಾಹಕ ಮತ್ತು ರೈತರ ಗುಂಪುಗಳು ಸೇರಿ ಸುಮಾರು ೩೦ ಇತರ ಸಂಘಟನೆಗಳು ಮತ್ತು ೨ ಸಾವಿರ ಅಕ್ಕಿ-ಸಂರಕ್ಷಕ ರೈತರು ಸಹಜ ಸಮೃದ್ಧಿಯ ಸಾವಯವ ಕೃಷಿ ಆಂದೋಲನದಲ್ಲಿ ಕೈಜೋಡಿಸಿದ್ದಾರೆ. ಹಾಗಂತ ಸಹಜ ಸಮೃದ್ಧಿ ಸಾವಯವ ಕೃಷಿ ವ್ಯವಸ್ಥೆಯಲ್ಲಿ ತನ್ನ ಗುರಿಯನ್ನು ತಲುಪಿದೆ ಎಂದರ್ಥವಲ್ಲ. ಈಗ ಏನು ಆಗಿದೆಯೋ ಅದು ಬರೀ ಆರಂಭ ಅಷ್ಟೇ. ಸಾವಯವ ಆಹಾರ ಮತ್ತು ಸ್ಥಳೀಯ ಧಾನ್ಯಗಳಿಗೆ ಹೆಚ್ಚಿನ ಪ್ರಚಾರ ನೀಡುವ ಮೂಲಕ ನಮ್ಮಲ್ಲಿನ ಬಹುತೇಕ ಜನರು ಆರೋಗ್ಯಕರ ಆಹಾರವನ್ನು ಸೇವಿಸಬೇಕು ಎನ್ನುವುದು ನಮ್ಮ ಪರಮ ಗುರಿ. ಜಗತ್ತು ಸಾಂಪ್ರದಾಯಿಕ ಆಹಾರಧಾನ್ಯಗಳನ್ನು ಎದುರು ನೋಡುತ್ತಿದೆ. ಅಂತೆಯೇ, ರಾಜ್ಯದಲ್ಲಿಯೂ ಮಹತ್ವದ ಬದಲಾವಣೆಗೆ ಮುನ್ನುಡಿ ಬರೆಯಲಿದ್ದೇವೆ ಎನ್ನುವ ಭರವಸೆ ನಮ್ಮದಾಗಿದೆ.

ಸೀಮಾ ಜಿ. ಪ್ರಸಾದ್


Seema G Prasad

State Coordiantor,

Save Our rice Campaign – Karnataka,

No.7, 2 cross, 7th main, Sulthan Palya,

Bangalore – 560 032

E-mail : seemaprasadg@gmail.com


ಆಂಗ್ಲ ಮೂಲ : ಲೀಸಾ ಇಂಡಿಯಾ , ಸಂಪುಟ ೧೫, ಸಂಚಿಕೆ ೨, ಜೂನ್ ೨೦೧೩

Recent Posts

ಕೃಷಿಯಲ್ಲಿ ನೀರಿನ ಸಮರ್ಥ ಬಳಕೆಗಾಗಿ ಕಾಲುವೆ ಯಾಂತ್ರೀಕರಣ

ಕೃಷಿಯಲ್ಲಿ ನೀರಿನ ಸಮರ್ಥ ಬಳಕೆಗಾಗಿ ಕಾಲುವೆ ಯಾಂತ್ರೀಕರಣ

ನಮ್ಮ ನೀರಾವರಿ ವ್ಯವಸ್ಥೆಯನ್ನು 21ನೇ ಶತಮಾನದ ಬೇಡಿಕೆಗಳಿಗೆ ಹೊಂದುವಂತೆ ಮಾಡುವುದು ನಮ್ಮ ಮುಂದಿರುವ ನಿಜವಾದ ಸವಾಲಾಗಿದೆ. ತಂತ್ರಜ್ಞಾನವೇ...