ನಗರ-ಗ್ರಾಮೀಣ ಹಿಂದುಳಿದ ಪ್ರದೇಶಗಳಲ್ಲಿ ಆಹಾರ ಮತ್ತು ಜೀವನೋಪಾಯದ ಭದ್ರತೆ


ನಗರ ಪ್ರದೇಶಗಳಿಗೆ ಪ್ರವೇಶ ಪಡೆಯಲು ಅರೆನಗರಗಳು ಎಂದೂ ʼಕಾಯುವ ಕೊಠಡಿʼಗಳಲ್ಲ. ಭೂಬಳಕೆ ಮತ್ತು ಅನಿಯಂತ್ರಿತ ನಿರ್ಮಾಣ ಚಟುವಟಿಕೆಗಳನ್ನು ತಡೆಯಲು ಮನಸ್ಥತಿಗಳಲ್ಲೇ ಮೂಲಭೂತ ಬದಲಾವಣೆ ಆಗಬೇಕಿದೆ. ಬಹುಕ್ರಿಯಾತ್ಮಕ ಹಸಿರು ವಲಯಗಳನ್ನು ಮತ್ತು ಅರೆನಗರ ಕೃಷಿಯನ್ನು ಉತ್ತೇಜಿಸುವ ಮತ್ತು ನಿರ್ವಹಿಸುವ ಮೂಲಕ ಪರಿಸ್ಥಿತಿಯನ್ನು ಉತ್ತಮವಾಗಿ ನಿರ್ವಹಿಸಬಹುದು. ಗೋರಖ್ಪುರದ ಅರೆನಗರ ಪ್ರದೇಶಗಳಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಪರಿಹಾರಗಳು ಹಸಿರು ವಲಯಗಳ ಮೇಲೆ ಪರಿಣಾಮ ಬೀರಿದೆ. ನಗರದ ಸುತ್ತಮುತ್ತಲು ಹಸಿರುವಲಯಗಳನ್ನು ನಿರ್ವಹಿಸಲು ಹಾಗೂ ಅರೆನಗರದ ಹಿಂದುಳಿದ ಪ್ರದೇಶಗಳಲ್ಲಿನ ಬಡ ಗ್ರಾಮೀಣ ಜನರಿಗೆ ಆಹಾರ ಹಾಗೂ ಜೀವನೋಪಾಯ ಭದ್ರತೆ ಒದಗಿಸುವಲ್ಲಿ ಪರಿಣಾಮಕಾರಿಯಾಗಿದೆ.


ಗೋರಖ್‌ಪುರ ನಗರದಲ್ಲಿನ ಅರೆನಗರ ಕೃಷಿಯು ನಗರದಲ್ಲಿ ಅದರಲ್ಲೂ ಬಡ ಹಾಗೂ ಅಂಚಿನ ಸಮುದಾಯಗಳ ಜೀವನೋಪಾಯಗಳಲ್ಲಿ ವೈವಿಧ್ಯತೆಯನ್ನು ತರುವಂತಹ ಪ್ರಾಯೋಗಿಕ ಕಾರ್ಯವಿಧಾನವಾಗಿದೆ. ಅವು ಸ್ಥಳೀಯವಾಗಿ ತರಕಾರಿಗಳು, ಹಣ್ಣುಗಳ ಪೂರೈಕೆ ಮಾಡುವುದರೊಂದಿಗೆ  ಪ್ರವಾಹದ ಸಮಯದಲ್ಲಿ ಈ ತೆರೆದ ಪ್ರದೇಶಗಳು ರಸ್ಷಣೆ ಒದಗಿಸುವ ಪ್ರದೇಶಗಳಾಗಿ ಕಾರ್ಯನಿರ್ವಹಿಸುತ್ತದೆ. ಹೊಸ ವಿಧಾನಗಳೊಂದಿಗೆ ಹವಾಮಾನ ಸ್ಥಿತಿಸ್ಥಾಪಕ ಅರೆನಗರ ಕೃಷಿಯನ್ನು ಉತ್ತೇಜಿಸಲು ಈ ಪ್ರದೇಶಗಳಲ್ಲಿ ಭೂ ಬಳಕೆಯ ಮಾದರಿ ಮತ್ತು ಪರಿಸರ ವ್ಯವಸ್ಥೆಯ ಸೇವೆಗಳನ್ನು ನಿರ್ವಹಿಸಲಾಗುತ್ತದೆ. ಇದು ಸಣ್ಣ ಮತ್ತು ಅತಿ ಸಣ್ಣ ರೈತರ ಜೀವನೋಪಾಯವನ್ನು ಭದ್ರಪಡಿಸುವುದರೊಂದಿಗೆ, ಕೃಷಿ ಉತ್ಪಾದಕತೆಯನ್ನು ಹೆಚ್ಚಿಸುತ್ತದೆ ಹಾಗೂ ನಗರದ ಆಹಾರ ಭದ್ರತೆಯ ಖಾತ್ರಿಗೆ ಕಾರಣವಾಗಿದೆ.

ಅಯೋಜಿತ ನಗರೀಕರಣ ಮತ್ತು ಹವಾಮಾನ ವೈಪರೀತ್ಯವು ನಗರಗಳ ಸುಸ್ಥಿರ ಅಭಿವೃದ್ಧಿಗೆ ಎರಡು ಪ್ರಮುಖ ಅಡ್ಡಿಗಳಾಗಿವೆ. ನಗರ ಪ್ರದೇಶಗಳಲ್ಲಿ ಮುಕ್ತ ಪ್ರದೇಶಗಳು ಕಡಿಮೆಯಾಗುತ್ತಿದ್ದು ಆಶ್ರಯತಾಣಗಳಿಗೆ ಹೆಚ್ಚುತ್ತಿರುವ ಬೇಡಿಕೆಯು ಅಸ್ತಿತ್ವದಲ್ಲಿರುವ ಕೃಷಿ ಭೂಮಿಯ ಮೇಲೆ ಒತ್ತಡವನ್ನುಂಟುಮಾಡುತ್ತಿದೆ. ಇದು ಹಸಿರು ಪ್ರದೇಶಗಳಿಗೆ ಅಪಾಯವನ್ನು ಒಡ್ಡುತ್ತಿದ್ದು, ನಗರಗಳಿಗೆ ಪ್ರಮುಖ ಆಹಾರ ಪದಾರ್ಥಗಳ ಪೂರೈಕೆಯ ಸರಪಳಿಯನ್ನು ಅಡ್ಡಿಪಡಿಸುತ್ತದೆ. ಗ್ರಾಮೀಣ ಪ್ರದೇಶಗಳ ಸಾಂಪ್ರದಾಯಿಕ ಜೀವನಶೈಲಿಯ ಮೇಲೆ ಪರಿಣಾಮ ಬೀರುತ್ತದೆ.

ಪ್ರಸ್ತುತ ಲೇಖನವು ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಕೋರ್ ಸಪೋರ್ಟ್ ಪ್ರಾಜೆಕ್ಟ್‌ನಿಂದ ಬೆಂಬಲಿತವಾದ ಯೋಜನೆಯಡಿಯಲ್ಲಿ ಗೋರಖ್‌ಪುರ ಎನ್ವಿರಾನ್ಮೆಂಟಲ್ ಆಕ್ಷನ್ ಗ್ರೂಪ್ (GEAG) ಕೈಗೊಂಡ ನವೀನ ಉಪಕ್ರಮಗಳನ್ನು ಪ್ರಚುರ ಪಡಿಸುವ ಪ್ರಯತ್ನವಾಗಿದೆ. ಈ ಯೋಜನೆಯಲ್ಲಿ, ಅರೆನಗರ ಕೃಷಿಯನ್ನು ಬಲಪಡಿಸುವ ಮೂಲಕ ಹಸಿರನ್ನು ಕಾಪಾಡಿಕೊಳ್ಳುವ ಮೂಲಕ ಗೋರಖ್‌ಪುರ ನಗರದ ಪ್ರವಾಹದ ನೀರು ನಿಲ್ಲುವ ಅಪಾಯವನ್ನು ತಗ್ಗಿಸಲು GEAG ಪ್ರಯತ್ನಿಸುತ್ತದೆ. ಈ ಪ್ರಕ್ರಿಯೆಯು ನಗರದ ಮೇಲೆ ಪರಿಣಾಮ ಬೀರುವ ಹವಾಮಾನ ಬದಲಾವಣೆಯನ್ನು ಎದುರಿಸಲು ಸ್ಥಿತಿಸ್ಥಾಪಕ ಕೃಷಿ ಪದ್ಧತಿಗಳನ್ನು ಅನುಸರಿಸುವುದು ಪರಿಸರವ್ಯವಸ್ಥೆಯ ಸೇವೆಗಳ ಮಹತ್ವವನ್ನು ತೋರುತ್ತದೆ.

ಗೋರಖ್‌ಪುರದ ಅರೆನಗರ ಪ್ರದೇಶಗಳು ಜನನಿಬಿಡವಾಗಿವೆ. ಸಣ್ಣಹಿಡುವಳಿದಾರರ ಕೃಷಿ ಇಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಸ್ಥಳೀಯ ಅತಿಸಣ್ಣ ರೈತರು, ನಗರದ ಬಡಜನತೆ, ಹಳ್ಳಿಗಳಿಂದ ವಲಸೆ ಬಂದವರು ಒಟ್ಟಾಗಿ ಬದುಕುತ್ತಿದ್ದು ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಅರೆನಗರ ಪ್ರದೇಶಗಳು ಮುಖ್ಯವಾದ ಆಹಾರ ಉತ್ಪಾದನೆಯ ಕೇಂದ್ರಗಳು. ಅವು ಬೆಳೆಯುತ್ತಿರುವ ನಗರದ ಜನತೆಗೆ ತಾಜಾ ಹಾಗೂ ಕೈಗೆಟಕುವಂತಹ ಆಹಾರವನ್ನು ಒದಗಿಸುವಲ್ಲಿ ಮುಖ್ಯಪಾತ್ರ ವಹಿಸುತ್ತದೆ. ಅರೆನಗರ ಪ್ರದೇಶದ ಬಡ ಸಮುದಾಯಗಳಿಗೆ, ಕೃಷಿಯು ಒಂದು ಪ್ರಮುಖ ಜೀವನೋಪಾಯ ವಿಧಾನವಾಗಿದ್ದು ಉದಾ: ಕೃಷಿ ಕೂಲಿಕಾರ ಉದ್ಯೋಗವನ್ನು ಒದಗಿಸುತ್ತದೆ. ಇದು ಮೂಲಭೂತವಾದ ಆಹಾರ ಮತ್ತು ಆದಾಯದ ಅವಶ್ಯಕತೆಗಳನ್ನು ಪೂರೈಸುತ್ತದೆ. ಹೀಗಿದ್ದೂ, ಪರಿಸರದ ಸಮಗ್ರತೆಯನ್ನು ಕಾಪಾಡಿಕೊಳ್ಳುತ್ತಲೇ ಸುರಕ್ಷಿತ ಹಾಗೂ ಕೈಗೆಟುಕುವ ಬೆಲೆಯಲ್ಲಿ ಆಹಾರ ಉತ್ಪಾದಿಸುವ ಸವಾಲುಗಳು ಹೆಚ್ಚಿವೆ.

ಗೋರಖ್‌ಪುರವನ್ನು ಸರಯೂ ನದಿ ಪ್ರದೇಶದ ಅತಿದೊಡ್ಡ ವಾಣಿಜ್ಯ ಕೇಂದ್ರವೆಂದು ಪರಿಗಣಿಸಲಾಗಿದೆ. ಕೃಷಿ ಉತ್ಪನ್ನಗಳಿಂದ ಹಿಡಿದು ಗುಡಿ ಕೈಗಾರಿಕೆಗಳ ಉತ್ಪನ್ನಗಳ ಚಿಲ್ಲರೆ ಮತ್ತು ಸಗಟು ಮಾರುಕಟ್ಟೆಗಳನ್ನು ಹೊಂದಿದೆ. ಪ್ರತಿ ವರ್ಷ ಮಳೆಗಾಲದಲ್ಲಿ ಈ ಪ್ರದೇಶವು ಪ್ರವಾಹ ಪರಿಸ್ಥಿತಿಯನ್ನು ಎದುರಿಸುತ್ತದೆ. ಆದರೆ ಕಳೆದ ಕೆಲವು ದಶಕಗಳಲ್ಲಿ ಅವ್ಯವಸ್ಥಿತ ನಗರೀಕರಣ ಪ್ರಕ್ರಿಯೆ ಮತ್ತು ಹವಾಮಾನ ವೈಪರೀತ್ಯಗಳಿಂದಾಗಿ ನಗರ ಹಾಗೂ ಸುತ್ತಮುತ್ತಲ ಪ್ರದೇಶಗಳು ಹೊಸ ಸವಾಲುಗಳನ್ನು ಎದುರಿಸುವಂತಾಗಿದೆ. ಇತ್ತೀಚಿನ ಅತಿರೇಕದ ಘಟನೆಗಳಿಂದಾಗಿ ನಗರದಲ್ಲಿನ ಪ್ರವಾಹ ಪರಿಸ್ಥಿತಿ, ನೀರು ನಿಲ್ಲುವ ಅವಧಿಯನ್ನು ಹೆಚ್ಚಿಸಿದೆ.

ಹೊಸ ಆರಂಭ

GEAG ಹವಾಮಾನ ಸ್ಥಿತಿಸ್ಥಾಪಕ ಕೃಷಿ ಪದ್ಧತಿಗಳನ್ನು ಗೋರಖ್‌ಪುರದ ಕೋಡಿಯಾ ಅರಣ್ಯ ಭಾಗದಲ್ಲಿನ ಎರಡು ಹಳ್ಳಿಗಳಲ್ಲಿ ಪ್ರಚುರಗೊಳಿಸುತ್ತಿದೆ. ಕೋಡಿಯಾ ಅರಣ್ಯದ ಅರೆನಗರ ಪ್ರದೇಶದಲ್ಲಿನ ೧೭೦ ಹೆಕ್ಟೇರ್‌ ಭೂಮಿಯು ಸಣ್ಣ, ಅತಿಸಣ್ಣ ಹಾಗೂ ಮಹಿಳಾ ರೈತರನ್ನು ಒಳಗೊಂಡಿದೆ. ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯಿಂದ ಬೆಂಬಲಿತವಾದ ಸ್ಟ್ರೆಂಥನಿಂಗ್‌, ಅಪ್‌ಸ್ಕೇಲಿಂಗ್‌ ಅಂಡ್‌ ನರ್ಚರಿಂಗ್‌ ಇನೋವೇಶನ್ಸ್‌ ಫಾರ್‌ ಲೈವ್ಲಿಹುಡ್‌ (SUNIL) ಕಾರ್ಯಕ್ರಮದಡಿಯಲ್ಲಿ ಬಳಕೆದಾರರ ಅಗತ್ಯಕ್ಕೆ ತಕ್ಕಂತಹ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುವ ಮೂಲಕ ಜಲಾವೃತ ಪ್ರದೇಶ, ಹೂಳು ಪ್ರದೇಶ, ಎತ್ತರದ ಪ್ರದೇಶ (ಬರದ ಅನಿಶ್ಚಿತತೆಯೊಂದಿಗೆ), ಪ್ರವಾಹ ಪೀಡಿತ ಬಯಲು ಪ್ರದೇಶಗಳು – ಜಲಾನಯನ ಪ್ರದೇಶ, ಅರೆನಗರ ಪ್ರದೇಶಗಳಲ್ಲಿನ ಸಣ್ಣ ಹಾಗೂ ಅತಿಸಣ್ಣ ರೈತರು ಕೃಷಿಯಲ್ಲಿ ಹೆಚ್ಚಿನ ಲಾಭ ಪಡೆಯುವಂತೆ ಮಾಡಿದೆ.

SUNIL ಕಾರ್ಯಕ್ರಮದ ಅಡಿಯಲ್ಲಿ, GEAG ಕಳೆದ ಮೂರು ವರ್ಷಗಳಿಂದ (2018-2021) ಅರೆ ನಗರ ಪ್ರದೇಶಗಳಲ್ಲಿ ಸ್ಥಿತಿಸ್ಥಾಪಕ ಕೃಷಿಯನ್ನು ಉತ್ತೇಜಿಸುತ್ತಿದೆ. ಈ ಉಪಕ್ರಮವು ಇಬ್ಬರು ಸಣ್ಣ ಮತ್ತು ಅತಿಸಣ್ಣ ಮಾದರಿ ರೈತರಾದ ಸುಗ್ರೀವ್ (ಬಾಕ್ಸ್ 1) ಮತ್ತು ರಾಮಚಂದರ್ (ಬಾಕ್ಸ್ 2) ಅವರೊಂದಿಗೆ ಆರಂಭವಾಯಿತು. ಇದೀಗ 117 ಮಂದಿ ರೈತರು ಈ ಮಾದರಿ ರೈತರನ್ನು ಅನುಸರಿಸುತ್ತಿದ್ದಾರೆ.

ಈ ಉಪಕ್ರಮವು ಹತಾಶಗೊಂಡ ರೈತರ ವಲಸೆಯನ್ನು ಕಡಿಮೆ ಮಾಡಿದೆ. ಕೃಷಿಯಲ್ಲಿ ಭರವಸೆಯನ್ನು ಹುಟ್ಟುಹಾಕಿದೆ.

ಈ ಉಪಕ್ರಮವು ಬಡ ಮತ್ತು ಅಂಚಿನಲ್ಲಿರುವ ಸಮುದಾಯಗಳಿಗೆ ವೈವಿಧ್ಯಮಯ ಜೀವನೋಪಾಯಗಳ ಪ್ರಾಯೋಗಿಕ ಮಾರ್ಗವನ್ನು ಪ್ರತಿನಿಧಿಸುತ್ತದೆ. ಸ್ಥಳೀಯವಾಗಿ ಆಹಾರ ವಿಶೇಷವಾಗಿ ತರಕಾರಿಗಳು, ಹಣ್ಣುಗಳ ಪೂರೈಕೆ ಮಾಡುತ್ತದೆ. ಪ್ರವಾಹದ ಸಂದರ್ಭದಲ್ಲಿ ಸಂರಕ್ಷಕ ಪ್ರದೇಶಗಳಾಗಿ ಕಾರ್ಯನಿರ್ವಹಿಸುವ ಮುಕ್ತ ಪ್ರದೇಶಗಳನ್ನು ಸಂರಕ್ಷಿಸುತ್ತದೆ.

ಈ ಉಪಕ್ರಮವು ಬಡ ಮತ್ತು ಅಂಚಿನಲ್ಲಿರುವ ಸಮುದಾಯಗಳಿಗೆ ಜೀವನೋಪಾಯವನ್ನು ವೈವಿಧ್ಯಗೊಳಿಸುವ ಪ್ರಾಯೋಗಿಕ ಮಾರ್ಗವನ್ನು ಪ್ರತಿನಿಧಿಸುತ್ತದೆ, ಸ್ಥಳೀಯ ಆಹಾರ ಸರಬರಾಜುಗಳನ್ನು ಖಾತ್ರಿಪಡಿಸುತ್ತದೆ, ವಿಶೇಷವಾಗಿ ತರಕಾರಿಗಳು ಮತ್ತು ಹಣ್ಣುಗಳು ಮತ್ತು ಪ್ರವಾಹ ಬಫರ್‌ಗಳಾಗಿ ಕಾರ್ಯನಿರ್ವಹಿಸುವ ತೆರೆದ ಪ್ರದೇಶಗಳನ್ನು ಸಂರಕ್ಷಿಸುತ್ತದೆ. ಈ ಪ್ರಕ್ರಿಯೆಯು ಕೃಷಿ ಸಮುದಾಯಗಳ ನಷ್ಟದ ಸಾಧ್ಯತೆಗಳನ್ನು ಕಡಿಮೆ ಮಾಡುವ ಮೂಲಕ ಹೆಚ್ಚು ದೃಢವಾಗಿ ಮತ್ತು ಪ್ರವಾಹ ಸ್ಥಿತಿಸ್ಥಾಪಕವಾಗಿರುವಂತೆ  ಸಹಾಯ ಮಾಡಿದೆ. ರೈತರು ಮರುಬಳಕೆಯ ಪ್ರಕ್ರಿಯೆಗಳನ್ನು ಕೃಷಿಯಲ್ಲಿ ಅಳವಡಿಸಿಕೊಂಡಿದ್ದು, ಇದರಿಂದಾಗಿ ಹೊರ ಒಳಸುರಿಯುವಿಕೆಗಳ ಅಗತ್ಯ ಕಡಿಮೆಯಾಗಿದೆ. ರೈತರು ಬಾಹ್ಯ ಜೈವಿಕ ಒಳಹರಿವುಗಳ ಬಳಕೆ ಕಡಿಮೆ ಮಾಡುವುದು, ಸೂಕ್ತವಾದ ಬೆಳೆಗಳನ್ನು ಬೆಳೆಯುವುದು, ಸ್ಥಳ ಮತ್ತು ಸಮಯ ನಿರ್ವಹಣೆ, ಬೀಜ ಬ್ಯಾಂಕಿಂಗ್, ಭೂಮಿಯನ್ನು ಸಿದ್ಧಪಡಿಸುವುದು ಮತ್ತು ಸೂಕ್ತ ನರ್ಸರಿ ವ್ಯವಸ್ಥೆಗಳನ್ನು ಬಳಸಿಕೊಳ್ಳುವುದು ಸೇರಿದಂತೆ ಹಲವಾರು ಅಭ್ಯಾಸಗಳನ್ನು ಅಳವಡಿಸಿಕೊಳ್ಳುತ್ತಾರೆ.

ಈ ಉಪಕ್ರಮವು ಕೃಷಿ ವ್ಯವಸ್ಥೆಯಲ್ಲಿ ವೈವಿಧ್ಯತೆ, ಸಂಕೀರ್ಣತೆ ಮತ್ತು ಮರುಬಳಕೆಯ ಪ್ರಕ್ರಿಯೆಗಳನ್ನು ಹೆಚ್ಚಿಸಲು ಕೃಷಿ-ತೋಟಗಾರಿಕೆ-ಜಾನುವಾರು ಸಾಕಣೆ ವ್ಯವಸ್ಥೆಯನ್ನು ಒಗ್ಗೂಡಿಸಿದ ತತ್ವವನ್ನಾಧರಿಸಿದೆ. ಇದು ಜನರೊಂದಿಗೆ ಸೇರಿ GEAG ಕಳೆದ ಮೂರು ದಶಕಗಳಲ್ಲಿ ಅಭಿವೃದ್ಧಿಪಡಿಸಿ ಅಳವಡಿಸಿಕೊಂಡ ಮಾದರಿಯಾಗಿದೆ. ಸುಸ್ಥಿರತೆ ಈ ಮಾದರಿಯ ವೈಶಿಷ್ಟ್ಯತೆ. ಸ್ಥಳೀಯ ಪರಿಸ್ಥಿತಿಗಳ ಆಧಾರದ ಮೇಲೆ ಇದನ್ನು ವಿನ್ಯಾಸಗೊಳಿಸಲಾಗಿದೆ. ಇವು ಹೆಚ್ಚಾಗಿ ಪ್ರವಾಹಕ್ಕೆ ತುತ್ತಾಗುವ ಪ್ರದೇಶಗಳು. ಆದ್ದರಿಂದ ರೈತರಿಗೆ ಹವಾಮಾನ ಮುನ್ಸೂಚನೆಯನ್ನು ಎಸ್‌ಎಂಎಸ್‌ ಮೂಲಕ ನೀಡಲಾಗುತ್ತದೆ.

ಬಾಕ್ಸ್ 1: ವೈವಿಧ್ಯೀಕರಣ: ಕಡಿಮೆ ಅಪಾಯಕಾರಿ ಆಯ್ಕೆ

ಗೋರಖ್‌ಪುರ ಜಿಲ್ಲೆಯ ಕೌಡಿಯಾ ಅರಣ್ಯ ವಿಭಾಗದ ಜಿಂದಾಪುರ ಹಳ್ಳಿಯ 50 ವರ್ಷದ ಸುಗ್ರೀವ ಪ್ರಸಾದ್‌ ತಮ್ಮ ಒಂದು ಎಕರೆ ಭೂಮಿಯಲ್ಲಿ ಕೆಲವು ಬಗೆಯ ಬೆಳೆಗಳನ್ನು ಮಾತ್ರ ಬೆಳೆಯುತ್ತಿದ್ದರು. 2019ರಲ್ಲಿ ಕೃಷಿ ಸಂಬಂಧಿತ ತಂತ್ರಜ್ಞಾನ ತರಬೇತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ತಮ್ಮ ಕೃಷಿ ವಿಧಾನವನ್ನು ಬದಲಿಸಿಕೊಳ್ಳಲು ನಿರ್ಧರಿಸಿದರು.

ಇಂದು ಸುಗ್ರೀವ ಮೊದಲಿಗಿಂತ ಹೆಚ್ಚು ಬಗೆಯ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಚಳಿಗಾಲದಲ್ಲಿ ಬೆಳೆಯುವ ತರಕಾರಿಗಳು ಬಟಾಣಿ, ಹೂಕೋಸು, ಎಲೆಕೋಸು, ಮೂಲಂಗಿ, ಕ್ಯಾರೆಟ್‌, ಕೊತ್ತಂಬರಿ, ಬೆಳ್ಳುಳ್ಳಿ, ಈರುಳ್ಳಿ, ಪಾಲಕ್‌, ಆಲೂಗಡ್ಡೆ, ಗೋಧಿ, ಟೊಮೆಟೊ ಬೆಳೆದರೆ ಮಳೆಗಾಲದಲ್ಲಿ ಹುರಳಿ ಕಾಯಿ, ಸೋರೆಕಾಯಿ, ಬೆಂಡೆಕಾಯಿ ಮತ್ತು ಭತ್ತ ಬೆಳೆಯುತ್ತಾರೆ. ಅವರು C.P.P ಮತ್ತು ಎರೆಹುಳು ಗೊಬ್ಬರವನ್ನು ತಯಾರಿಸುತ್ತಾರೆ. ಇವುಗಳೊಂದಿಗೆ ಸಗಣಿಯು ಅವರ ತೋಟಕ್ಕೆ ಜೈವಿಕ ಗೊಬ್ಬರವನ್ನು ಪೂರೈಸುತ್ತದೆ. ಇದರೊಂದಿಗೆ ಅವರು ರಾಸಾಯನಿಕ ಮುಕ್ತ ಕೀಟನಾಶಕಗಳನ್ನು ತಯಾರಿಸುತ್ತಾರೆ. ನೀರಾವರಿ ವ್ಯವಸ್ಥೆಯನ್ನು ರೂಪಿಸಿಕೊಂಡಿದ್ದಾರೆ. ಇದೆಲ್ಲವೂ ಅವರನ್ನು ಸ್ವಾವಲಂಬಿಯಾಗಿಸಿದೆ. ಸುಗ್ರೀವ್‌ ಈಗ ಹೊಸ ತಂತ್ರಗಳನ್ನು ಬಳಸಲು, ಹೊಸ ಪ್ರಯೋಗಗಳನ್ನು ಮಾಡಲು ಉತ್ಸುಕರಾಗಿದ್ದಾರೆ.

ʼಆದಾಯ ಹೆಚ್ಚಿದರೆ, ಸಾಲ ತೆಗೆದುಕೊಳ್ಳುವುದು ಕಡಿಮೆಯಾಗುತ್ತದೆ. ಕುಟುಂಬಕ್ಕೆ ಹೊಟ್ಟೆ ತುಂಬುವಷ್ಟು ಊಟ ಸಿಗುತ್ತದೆ. ಈ ಎಲ್ಲ ಪ್ರಯತ್ನಗಳು ಹಾಗೂ ತಂತ್ರಜ್ಞಾನಗಳಿಂದಾಗಿ ಕನಿಷ್ಠ ಹೊರ ಒಳಸುರಿಯುವಿಕೆಗಳನ್ನು ಬಳಸುತ್ತಿದ್ದು ಮಾರುಕಟ್ಟೆ ವೆಚ್ಚವನ್ನು 42% ತಗ್ಗಿಸಿಕೊಂಡಿದ್ದೇನೆ. ಈ ಯೋಜನೆಯೊಂದಿಗೆ ಸಂಪರ್ಕ ಹೊಂದುವ ಮೊದಲು ವಾರ್ಷಿಕವಾಗಿ ರೂ. 10000-12000 ಲಾಭ ಗಳಿಸುತ್ತಿದ್ದೆ. ಆದರೆ ಈಗ ವಾರ್ಷಿಕವಾಗಿ ನಿವ್ವಳ ರೂ. 65000 ಲಾಭ ಗಳಿಸುತ್ತಿದ್ದೇವೆ,ʼ ಎಂದು ಹೇಳುತ್ತಾರೆ. ಇಂದು, ಅವರ ಅನುಭವವನ್ನಾಧರಿಸಿ ಹಲವು ರೈತರು ಹಲಬಗೆಯ ತರಕಾರಿ ಕೃಷಿ ತಂತ್ರಗಳನ್ನು ಅಳವಡಿಸಿಕೊಂಡಿದ್ದಾರೆ. ಸರಿಸುಮಾರು 25% ರೈತರು ಈ ತಂತ್ರಗಳನ್ನು ತಮ್ಮ ಭೂಮಿಯಲ್ಲಿ ಅಳವಡಿಸಿಕೊಂಡಿದ್ದಾರೆ.

ಕೃಷಿ ವ್ಯವಸ್ಥೆಗಳಲ್ಲಿ ತಾಂತ್ರಿಕ ಬೆಂಬಲದೊಂದಿಗೆ, ಅರೆನಗರಗಳಲ್ಲಿ ಹವಾಮಾನ ಸ್ಥಿತಿಸ್ಥಾಪಕ ಕೃಷಿವ್ಯವಸ್ಥೆಯ ಕುರಿತು ದುರ್ಬಲ ಗುಂಪುಗಳಲ್ಲಿ ಬೇಡಿಕೆಯನ್ನು ಸೃಷ್ಟಿಸುವ ತಂತ್ರವಾಗಿದೆ. ಅರೆನಗರಗಳಲ್ಲಿನ ಕೃಷಿ ಭೂಮಿಯನ್ನು ಸಂರಕ್ಷಿಸುವ ಪರಿಸರ ನೀತಿಯನ್ನು ಉತ್ತೇಜಿಸುವುದಾಗಿದೆ. ಈ ಪ್ರಕ್ರಿಯೆಯಲ್ಲಿ, ಮಾದರಿ ರೈತರು ಮತ್ತು ಕೃಷಿ ಸೇವಾ ಕೇಂದ್ರಗಳ ಮೂಲಕ ಸಮುದಾಯವನ್ನು ಸಾಂಸ್ಥಿಕಗೊಳಿಸಲು ಒತ್ತು ನೀಡಲಾಗಿದೆ. ಕೌಡಿಯಾ ಅರಣ್ಯ ವಿಭಾಗಗಳೊಂದಿಗೆ 16 ಮಂದಿ ಮಾದರಿ ರೈತರು ಮತ್ತು 4 ಕೃಷಿ ಸೇವಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.

ಅರೆನಗರ ಕೃಷಿಯ ಪ್ರಮುಖ ಅಂಶಗಳು

1, ಸ್ಥಿತಿಸ್ಥಾಪಕ ಕೃಷಿ ವ್ಯವಸ್ಥೆಯನ್ನು ಸ್ಥಾಪಿಸಿ ಪ್ರಸಾರ ಮಾಡುವುದು: ಈ ಕಾರ್ಯಕ್ರಮವು “ಕಂಡದ್ದನ್ನೇ ನಂಬುವುದು” ಎನ್ನುವುದನ್ನು ಆಧರಿಸಿದ್ದು ಸ್ಥಿತಿಸ್ಥಾಪಕ ಕೃಷಿ ವ್ಯವಸ್ಥೆಯನ್ನು ಸ್ಥಾಪಿಸಿ ಪ್ರಸಾರ ಮಾಡುವುದಾಗಿದೆ.

  1. 2. ಸ್ಥಾಂಸ್ಥಿಕ ನೆರವು ಮೇಲೆ ವಿವರಿಸಲಾದ ಜೈವಿಕ ಒಳಹರಿವು ಮತ್ತು ಹವಾಮಾನ ಸ್ಥಿತಿಸ್ಥಾಪಕ ಅಭ್ಯಾಸಗಳ ಅನುಷ್ಠಾನವನ್ನು ರೈತ ಕ್ಷೇತ್ರ ಶಾಲೆಗಳು, ಸ್ವಸಹಾಯ ಗುಂಪು ಕೃಷಿ-ಸೇವಾ ಕೇಂದ್ರಗಳು ಮತ್ತು ರೈತ ಉತ್ಪಾದಕ ಗುಂಪುಗಳು ಮತ್ತಷ್ಟು ಬೆಂಬಲಿಸಿದವು. ರೈತ ಕ್ಷೇತ್ರ ಶಾಲೆಗಳು ರೈತರ ನಡುವೆ ಮಾಹಿತಿ ವಿನಿಮಯಕ್ಕೆ ಅನುಕೂಲ ಮಾಡಿಕೊಟ್ಟವು. ಹೊಸದಾಗಿ ಕಲಿತ ಅಭ್ಯಾಸಗಳನ್ನು ಅಳವಡಿಸಿಕೊಳ್ಳುವ ಬಗ್ಗೆ ಅವರಲ್ಲಿ ನಂಬಿಕೆ ಹುಟ್ಟಿತು. ಕೃಷಿ-ಸೇವಾ ಕೇಂದ್ರಗಳು ಡೀಸಲ್ ಚಾಲಿತ ನೀರಿನ ಪಂಪ್‌ಗಳು, ನೀರಾವರಿ ಪೈಪ್‌ಗಳು ಮತ್ತು ನರ್ಸರಿಗಳನ್ನು ಸಿದ್ಧಪಡಿಸಲು, ಪಾಲಿ ಹೌಸ್‌ಗಳನ್ನು ನಿರ್ಮಿಸಲು ಅಗತ್ಯವಾದ ಸಾಮಗ್ರಿಗಳು, ಕೃಷಿ ಉಪಕರಣಗಳನ್ನು ಬಾಡಿಗೆಗೆ ಒದಗಿಸಿದವು. ಈ ಸಂಸ್ಥೆಗಳು ಹವಾಮಾನ-ಸ್ಥಿತಿಸ್ಥಾಪಕ ಉತ್ಪಾದನಾ ಪದ್ಧತಿಗಳ ಅನುಷ್ಠಾನದಲ್ಲಿ ಮಾದರಿ ಮತ್ತು ಲಿಂಕ್ ರೈತರನ್ನು ಬೆಂಬಲಿಸುವಲ್ಲಿ ಹಾಗೂ ಸುಗಮಗೊಳಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿವೆ.
  2. ಮಾಹಿತಿ ಸಂಸ್ಥೆಗಳ ನಡುವೆ ಸಂಪರ್ಕ ಮತ್ತು ನೆಟ್‌ವರ್ಕಿಂಗ್‌ ಸ್ಥಾಪನೆ: ಈ ಯೋಜನೆಯು KVK, NABARD, IIT ಕಾನ್ಪುರ್ ಮತ್ತು ಸ್ಟಾರ್ಟ್ ಅಪ್ ಕಂಪನಿಗಳಂತಹ ವಿವಿಧ ಸಂಸ್ಥೆಗಳ ತಜ್ಞರು ಮತ್ತು ರೈತರ ನಡುವೆ ಸಂಪರ್ಕಗಳನ್ನು ಸ್ಥಾಪಿಸಲು ಅನುಕೂಲ ಮಾಡಿಕೊಟ್ಟಿತು. ಈ ಸಂಪರ್ಕಗಳು ರೈತರಿಗೆ ತಜ್ಞರಿಂದ ಮಾಹಿತಿ ಪಡೆಯಲು, ಸರ್ಕಾರ ಹಾಗೂ ಸಂಬಂಧಿತ ಇಲಾಖೆಗಳಿಂದ ಸಹಾಯಧನ ಯೋಜನೆಗಳನ್ನು ಪಡೆಯಲು ಅನುಕೂಲ ಮಾಡಿಕೊಡುತ್ತದೆ. ಈ ಸಂಪರ್ಕಗಳ ಪ್ರಾಮುಖ್ಯತೆಯನ್ನು ಗುರುತಿಸಿದ ರೈತರು ಇದರಿಂದ ತಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದರಿತರು.
ಬಾಕ್ಸ್‌ 2: ಸುರಂಗ ಹಸಿರುಮನೆ ತಂತ್ರಜ್ಞಾನ

ಜಿಂದಾಪುರ್‌ ಹಳ್ಳಿಯ ರಾಮ್‌ ಚಂದರ್‌ ರೈತನಾಗಿರಲಿಲ್ಲ. ಅವನು ತನ್ನ 0.6 ಎಕರೆ ಭೂಮಿಯಲ್ಲಿ ಗೋಧಿ ಬೆಳೆಯುತ್ತಿದ್ದ. ಅವನದು ಭೂಮಿ ತಗ್ಗುಪ್ರದೇಶದಲ್ಲಿ ಇದ್ದುದರಿಂದ ಹೆಚ್ಚು ನೀರು ನಿಲ್ಲುತ್ತಿತ್ತು. ಅವನದೊಂದು ಸಣ್ಣ ಅಂಗಡಿ ಇತ್ತು. ಅಂಗಡಿಯಿಂದ ಗಳಿಸುತ್ತಿದ್ದ ಆದಾಯವೇ ಅವನ ಕುಟುಂಬಕ್ಕೆ ಆಧಾರವಾಗಿತ್ತು. ಅವನು ಪ್ರತಿ ತಿಂಗಳು ನಡೆಯುತ್ತಿದ್ದ ಆಗ್ರೋ ಸರ್ವೀಸ್‌ ಸೆಂಟರ್‌ನ ಕಮಿಟಿ ಮೀಟಿಂಗ್‌ ಮತ್ತಿತರ ಜಾಗೃತಿ ಸಭೆಗಳಿಗೆ ಹೋಗುತ್ತಿದ್ದನಾದರೂ ಅವುಗಳ ಚಟುವಟಿಕೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುತ್ತಿರಲಿಲ್ಲ. ಒಂದು ವರ್ಷ ಇಂತಹ ತರಬೇತಿಗಳಿಗೆ ಹೋದನಾದರೂ ಅದರಲ್ಲಿ ಆಸಕ್ತಿ ವಹಿಸಲಿಲ್ಲ.

ಸುರಂಗ ಹಸಿರು ಮನೆ ತಂತ್ರಜ್ಞಾನವು ತಗ್ಗುಪ್ರದೇಶಗಳಿಗೆ ಸೂಕ್ತವಾದದ್ದು ಅನ್ನಿಸಿ ಅದರ ಬಗ್ಗೆ ಆಸಕ್ತಿ ಹುಟ್ಟಿತು. ಇದು ಬೆಳಕು ಮತ್ತು ಶಾಖವನ್ನು ಹೀರಿಕೊಳ್ಳುವ ಹಸಿರುಮನೆ ತಂತ್ರಜ್ಞಾನವನ್ನು ಆಧರಿಸಿತು. ಇವು ಗಾಜಿಗೆ ಬದಲಾಗಿ ಅಗ್ಗವಾದ ಪಾಲಿಥೇನ್‌ ಅಥವಾ ಪ್ಲಾಸ್ಟಿಕ್‌ನಿಂದ ಮಾಡಲ್ಪಟ್ಟಿವೆ. ಅವನು ತನ್ನ ಹೊಲದ ಎತ್ತರದ ಬದುಗಳ ಮೇಲೆ ತರಕಾರಿ ಗಿಡಗಳ ಬೆಳವಣಿಗೆಗೆ ಅನುಕೂಲವಾಗುವಂತೆ ಈ ಪಾರದರ್ಶಕ ಹೊದಿಕೆಗಳನ್ನು ನಿರ್ಮಿಸಿದ. ಇದರಿಂದಾಗಿ ಅವನು ಸಸಿಗಳನ್ನು ಬೆಳೆಸುವುದರೊಂದಿಗೆ ಋತುಮಾನಕ್ಕೆ ಹೊರತಾದ ತರಕಾರಿಗಳನ್ನು ಬೆಳೆದ. ಜೊತೆಗೆ ಇದರಿಂದಾಗಿ ಗಿಡಗಳು ಸಾಯುವುದನ್ನು ತಪ್ಪಿಸಿದ. ಇಂದು ರಾಮ್‌ ಚಂದರ್‌ ತನ್ನದೇ ನರ್ಸರಿಯನ್ನು ಹೊಂದಿದ್ದು ಸಸಿಗಳನ್ನು ತನ್ನ ನೆರೆಹೊರೆಯ ರೈತರಿಗೆ ಮಾರಾಟ ಮಾಡುತ್ತಿದ್ದಾನೆ. ಅವನು ಈ ತಂತ್ರಜ್ಞಾನವನ್ನು ಉಳಿದ ರೈತರಿಗೂ ಹೇಳಿಕೊಡುತ್ತಿದ್ದಾನೆ. ಹನ್ನೆರಡು ಮಂದಿ ರೈತರಿಗೆ ಈ ರೀತಿಯ ಹಸಿರುಮನೆ ನಿರ್ಮಾಣಕ್ಕೆ ಸಹಾಯಮಾಡಿದ್ದಾನೆ.

“ರೈತರು ಕೃಷಿಗೆ ಸಂಬಂಧಿಸಿದ ಹಲವು ಬಗೆಯ ಮಾಹಿತಿಗಾಗಿ ನನ್ನ ಬಳಿ ಬರುತ್ತಾರೆ,” ಎಂದು ರಾಮ್‌ ಚಂದರ್‌ ಹೆಮ್ಮೆಯಿಂದ ಹೇಳುತ್ತಾನೆ. ಲಾಭವು ಹೆಚ್ಚಾದ್ದರಿಂದ ಕುಟುಂಬದ ಬದುಕಿನಮಟ್ಟವು ಸುಧಾರಿಸಿದೆ. ಮೊದಲಿಗೆ ಕೃಷಿಯನ್ನು ಇಷ್ಟಪಡದಿದ್ದ ರಾಮ್‌ ಚಂದರ್‌ ಈಗ ಲೀಸಾದ ಅದರಲ್ಲೂ ಸುರಂಗ ಹಸಿರು ಮನೆ ತಂತ್ರಜ್ಞಾನದ ಪ್ರತಿಪಾದಕರಾಗಿದ್ದಾರೆ. “ಈ ಯೋಜನೆಯ ಸಂಪರ್ಕಕ್ಕೆ ಬರುವ ಮೊದಲು ಪ್ರತಿ ಋತುವಿಗೆ ನಿವ್ವಳ ರೂ. 3500.00 ಲಾಭ ಗಳಿಸುತ್ತಿದ್ದೆ. ಆದರೆ ಈಗ ವಾರ್ಷಿಕ ರೂ. 6000.00 ಗಳಿಸುತ್ತಿದ್ದೇನೆ.” ಮೊದಲು ಬೆಳೆಯುತ್ತಿದ್ದ ಗೋಧಿಗಿಂತ ತರಕಾರಿ ಬೆಳೆಯುವುದು ತ್ರಾಸದಾಯಕವಾದರೂ ಹೆಚ್ಚು ಲಾಭದಾಯಕವಾಗಿದ್ದು ಕುಟುಂಬಕ್ಕೂ ಹೆಚ್ಚು ಪೌಷ್ಟಿಕಾಂಶಯುಕ್ತ ಆಹಾರ ದೊರೆಯುತ್ತಿದೆ ಎಂದು ಆತ ನಂಬಿದ್ದಾನೆ. ಹೊಸ ತಂತ್ರಜ್ಞಾನ ಮತ್ತು ಗಳಿಸುತ್ತಿರುವ ಲಾಭವು ಕೃಷಿಯ ಬಗ್ಗೆ ರಾಮ್‌ ಚಂದರ್‌ನ ನಂಬಿಕೆಯನ್ನು ಹೆಚ್ಚಿಸಿದೆ. ನಗರೀಕರಣಕ್ಕೆ ತನ್ನ ಭೂಮಿಯನ್ನು ಬಲಿಕೊಡುವುದು ಅವನಿಗೆ ಇಷ್ಟವಿಲ್ಲ. ಕನಿಷ್ಠ ತನ್ನ ಅಥವಾ ತನ್ನ ಮಕ್ಕಳ ಕಾಲಕ್ಕೆ ಈ ರೀತಿ ಆಗಲಾರದು ಎನ್ನುವ ಆಶಾಭಾವನೆಯನ್ನು ಹೊಂದಿದ್ದಾನೆ. ಈಗ 50ಕ್ಕೂ ಹೆಚ್ಚು ರೈತರು ಈ ತಂತ್ರಜ್ಞಾನವನ್ನು ಅಳವಡಿಸಿಕೊಂಡು ನರ್ಸರಿಯಲ್ಲಿ ತರಕಾರಿ ಬೆಳೆಯುತ್ತಿದ್ದಾರೆ.

ಕಾರ್ಯಕ್ರಮದ ಪರಿಣಾಮಗಳು: ಈ ಕಾರ್ಯಕ್ರಮವು ಸ್ಥೂಲವಾಗಿ ಸಾಧಿಸಿದ್ದು ಹೀಗಿದೆ.

  • ಅರೆನಗರ ಪ್ರದೇಶಗಳಲ್ಲಿ ಕೃಷಿ ಭೂಮಿಯ ಸಂರಕ್ಷಣೆ. ನಗರದ ಪ್ರವಾಹ ಸಂರಕ್ಷಕ ಸಾಮರ್ಥ್ಯ ಹೆಚ್ಚಿಸುವಂತಹ ಸುಸಜ್ಜಿತ ಮಾದರಿಯನ್ನು ರೂಪಿಸುವುದು.
  • ಜೈವಿಕ ಒಳಸುರಿಯುವಿಕೆಗಳ ಅಭ್ಯಾಸಗಳನ್ನು ಉತ್ತೇಜಿಸುವ ಮೂಲಕ ಅರೆನಗರ ಪ್ರದೇಶಗಳಲ್ಲಿ ಸಣ್ಣ ಭೂಮಿಯನ್ನು ಹೊಂದಿರುವವರಲ್ಲಿ ಕೃಷಿ-ತೋಟಗಾರಿಕೆ-ಜಾನುವಾರು ಸಾಕಣೆಯನ್ನು ಒಳಗೊಂಡಂತಹ ಸುಸ್ಥಿರ, ಹವಾಮಾನ ಸ್ಥಿತಿಸ್ಥಾಪಕ ಮಾದರಿಯನ್ನು ಸ್ಥಾಪಿಸುವುದು.
  • ಬಡ ಕುಟುಂಬಗಳಿಗೆ ಆಹಾರ ಭದ್ರತೆಯನ್ನು ಖಾತ್ರಿಗೊಳಿಸುವುದು ಹಾಗೂ ವಲಸೆಯನ್ನು ಕಡಿಮೆಮಾಡುವುದು.
  • ಒಳಸುರಿಯುವಿಕೆಗಳ ಬಳಕೆ ಕಡಿಮೆಗೊಳಿಸುವುದು. ಸಣ್ಣ ಮತ್ತು ಮಹಿಳಾ ರೈತರಿಗೆ ಲಾಭ ಗಳಿಕೆಯನ್ನು ಹೆಚ್ಚಿಸುವುದು.
  • ಅರೆನಗರ ಪ್ರದೇಶಗಳಲ್ಲಿನ ದುರ್ಬಲ ಗುಂಪುಗಳ ಜೀವನೋಪಾಯದ ಭದ್ರತೆ ಮತ್ತು ಬಡಕುಟುಂಬಗಳ ಆಹಾರ ಭದ್ರತೆ.

 ಉಪಸಂಹಾರ

 ಗೋರಖ್‌ಪುರ ಪ್ರಕರಣವು ಹತಾಶ ರೈತರ ವಲಸೆಯನ್ನು ಕಡಿಮೆ ಮಾಡುವಂತಹ ಯಶಸ್ವಿ ಪ್ರಯತ್ನವಾಗಿದೆ. ಕೃಷಿಯಲ್ಲಿ ಹೊಸ ಭರವಸೆಯನ್ನು ಹುಟ್ಟುಹಾಕಿದೆ. ಹವಾಮಾನ ಸ್ಥಿತಿಸ್ಥಾಪಕ ಕೃಷಿಯ ಅಭ್ಯಾಸಗಳು ಒಳಸುರಿಯುವಿಕೆಗಳ ವೆಚ್ಚವನ್ನು ಕಡಿಮೆ ಮಾಡಲು ಮತ್ತು ನಿವ್ವಳ ಲಾಭವನ್ನು ಹೆಚ್ಚಿಸಲು ಸಹಾಯ ಮಾಡಿದೆ. ಇದು ದುರ್ಬಲ ಗುಂಪುಗಳ ಜೀವನೋಪಾಯವನ್ನು ಹೆಚ್ಚಿಸಿ ಭದ್ರತೆ ಒದಗಿಸುವಲ್ಲಿ ಕೊಡುಗೆ ನೀಡಿದೆ. ನಗರದಲ್ಲಿನ ಬಡವರಿಗೆ ಆಹಾರ ಭದ್ರತೆಯನ್ನು ಖಾತ್ರಿಗೊಳಿಸಿದೆ. ಹಳ್ಳಿಗರಿಗೆ ಕೃಷಿ, ತೋಟಗಾರಿಕೆ ಮತ್ತು ಪಶುಸಂಗೋಪನೆಯನ್ನು ಸುಧಾರಿಸಲು ವ್ಯವಸ್ಥಿತವಾಗಿ ನೆರವು ನೀಡಿದಲ್ಲಿ ಅವರು ತಮ್ಮ ಭೂಮಿಯನ್ನು ಬಿಲ್ಡರ್‌ಗಳಿಗೆ ಮಾರಾಟ ಮಾಡುವುದು ನಿಲ್ಲುತ್ತದೆ. ಇದರಿಂದ ಮುಕ್ತ ಪ್ರದೇಶಗಳು ಕಡಿಮೆಯಾಗುವುದು ತಪ್ಪುತ್ತದೆ ಜೊತೆಗೆ ಪ್ರದೇಶದಲ್ಲಿನ ಜಲಮೂಲಗಳನ್ನು ಸಂರಕ್ಷಿಸಿದಂತಾಗುತ್ತದೆ.

ಅಜಯ್‌ ಕುಮಾರ್‌ ಸಿಂಗ್‌ ಮತ್ತು ಅರ್ಚನ ಶ್ರೀವಾಸ್ತವ


Ajay Kumar Singh

Archana Srivastava

Gorakhpur Environmental Action Group

HIG - 1/4, Siddharthpuram

Taramandal Road

Gorakhpur-273 017

E-mail: geagindia@gmail.com

ಆಂಗ್ಲ ಮೂಲ : ಲೀಸಾ ಇಂಡಿಯಾ; ಸಂಪುಟ :೨೪; ಸಂಚಿಕೆ :೧; ಮಾರ್ಚ್‌ ೨೦೨೨

Recent Posts

ಕೃಷಿಯಲ್ಲಿ ನೀರಿನ ಸಮರ್ಥ ಬಳಕೆಗಾಗಿ ಕಾಲುವೆ ಯಾಂತ್ರೀಕರಣ

ಕೃಷಿಯಲ್ಲಿ ನೀರಿನ ಸಮರ್ಥ ಬಳಕೆಗಾಗಿ ಕಾಲುವೆ ಯಾಂತ್ರೀಕರಣ

ನಮ್ಮ ನೀರಾವರಿ ವ್ಯವಸ್ಥೆಯನ್ನು 21ನೇ ಶತಮಾನದ ಬೇಡಿಕೆಗಳಿಗೆ ಹೊಂದುವಂತೆ ಮಾಡುವುದು ನಮ್ಮ ಮುಂದಿರುವ ನಿಜವಾದ ಸವಾಲಾಗಿದೆ. ತಂತ್ರಜ್ಞಾನವೇ...