ನ್ಯೂಟ್ರಿ ಗಾರ್ಡನ್ ಕೃಷಿ ಮಹಿಳೆಯರಿಗೆ ಪೌಷ್ಟಿಕಾಂಶದ ಸಮೃದ್ಧ ಮೂಲ


ತರಕಾರಿ ಮತ್ತು ಹಣ್ಣು ಆಧಾರಿತ ನ್ಯೂಟ್ರಿಗಾರ್ಡನ್ ಪೌಷ್ಟಿಕಾಂಶದ ಶ್ರೀಮಂತ ಮೂಲವಾಗಿದೆ. ಅಪೌಷ್ಟಿಕತೆಯನ್ನು ನಿರ್ಮೂಲನೆ ಮಾಡುವಲ್ಲಿ ಸಕ್ರಿಯ ಪಾತ್ರವನ್ನು ವಹಿಸುತ್ತದೆ. ನ್ಯೂಟ್ರಿಗಾರ್ಡನ್ ಕಿಚನ್ಗಾರ್ಡನ್ಗಳ ಸುಧಾರಿತ ರೂಪವಾಗಿದೆ. ಇದರಲ್ಲಿ ಹಣ್ಣುಗಳು ಮತ್ತು ತರಕಾರಿಗಳನ್ನು ಆಹಾರ ಮತ್ತು ಆದಾಯದ ಮೂಲವಾಗಿ ಬೆಳೆಯಲಾಗುತ್ತದೆ. ಸಣ್ಣ ಮತ್ತು ಅತಿಸಣ್ಣ ರೈತರಿಗೆ, ನ್ಯೂಟ್ರಿಗಾರ್ಡನ್ಗಳು ಕುಟುಂಬ ಆಹಾರಕ್ಕೆ ವೈವಿಧ್ಯಮಯ ಕೊಡುಗೆ ನೀಡಬಹುದು. ಅದರಲ್ಲೂ ವಿಶೇಷವಾಗಿ ಮಹಿಳೆಯರಿಗೆ ಹಲವಾರು ಪ್ರಯೋಜನಗಳನ್ನು ಒದಗಿಸುತ್ತವೆ.


ಗ್ರಾಮೀಣ ಪ್ರದೇಶಗಳಲ್ಲಿ, ವಿಶೇಷವಾಗಿ ಗುಡ್ಡಗಾಡು ಪ್ರದೇಶಗಳಲ್ಲಿ ಅಪೌಷ್ಟಿಕತೆ ಗಂಭೀರ ಸಮಸ್ಯೆಯಾಗಿದೆ. ಸಣ್ಣ ಮತ್ತು ಚದುರಿದ ಭೂ ಹಿಡುವಳಿ, ಕಳಪೆ ಮಣ್ಣು ಮತ್ತು ಹೆಚ್ಚಾಗಿ ಮಳೆಯಾಶ್ರಿತ ಕೃಷಿಯಿಂದಾಗಿ ಗುಡ್ಡಗಾಡು ಪ್ರದೇಶದಲ್ಲಿ ಬೆಳೆ ಉತ್ಪಾದಕತೆ ಕಡಿಮೆಯಾಗಿದೆ. ರೈತರು ಇನ್ನೂ ಸಾಂಪ್ರದಾಯಿಕವಾಗಿ ಕೃಷಿಯನ್ನು ಮಾಡುತ್ತಿದ್ದು ಏಕದಳ ಧಾನ್ಯಗಳನ್ನು ಬೆಳೆಯುತ್ತಿದ್ದರು. ಇದು ಕೃಷಿಕುಟುಂಬಗಳನ್ನು ವರ್ಷದಲ್ಲಿ ಎರಡು ಮೂರು ತಿಂಗಳಿಗಿಂತ ಹೆಚ್ಚು ಕಾಲ ಪೋಷಿಸುವುದಿಲ್ಲ. ಗಂಡಸರು ಬಯಲುಸೀಮೆಯ ಕಡೆ ಹೆಚ್ಚಾಗಿ ವಲಸೆ ಹೋಗುತ್ತಿದ್ದಾರೆ. ಇದರಿಂದಾಗಿ ಗ್ರಾಮೀಣ ಪ್ರದೇಶದಲ್ಲಿ ಮಹಿಳೆಯರ ಸಂಖ್ಯೆ ಹೆಚ್ಚಾಗಿದೆ. ಇದರಿಂದಾಗಿ ಈ ಪ್ರದೇಶದಲ್ಲಿ ಜನಸಂಖ್ಯಾ ಅಸಮತೋಲನವಾಗಿದೆ. ಆದ್ದರಿಂದ ಮಹಿಳೆಯರ ಮೇಲೆ ಹೆಚ್ಚಿನ ಕೆಲಸದ ಹೊರೆ ಬೀಳುತ್ತದೆ. ಹಾಗಾಗಿ ಅವರು ಹೆಚ್ಚಿನ ಶಕ್ತಿ ವ್ಯಯಿಸುವುದರಿಂದ ಅವರಿಗೆ ದೈನಂದಿನ ಆಹಾರದಲ್ಲಿ ಹೆಚ್ಚಿನ ಪೋಷಕಾಂಶಗಳ ಅವಶ್ಯಕತೆಯಿದೆ. ಈ ಪ್ರದೇಶಗಳಲ್ಲಿನ ಸಮಸ್ಯೆಗೆ ಪರಿಹಾರವೆಂದರೆ “ಸ್ಥಳೀಯ ಅಗತ್ಯಗಳನ್ನು ಸ್ಥಳೀಯವಾಗಿ ಪೂರೈಸುವುದು”. ಗುಡ್ಡಗಾಡಿನ ಹವಾಮಾನವು ಕಾಲಮಾನಕ್ಕೆ ತಕ್ಕಂತಹ ಮತ್ತು ಇತರ ಸಮಯದಲ್ಲಿನ ಹಣ್ಣು, ತರಕಾರಿಗಳನ್ನು ಬೆಳೆಯಲು ಸೂಕ್ತವಾಗಿದೆ. ಇವುಗಳಲ್ಲಿ ಸೂಕ್ಷ್ಮಪೋಷಕಾಂಶಗಳು ಹೇರಳವಾಗಿವೆ. ಈ ಪ್ರದೇಶದಲ್ಲಿ ಸಣ್ಣ ಹಾಗೂ ಚದುರಿದ ಹಿಡುವಳಿಗಳು ಇರುವುದರಿಂದ ನ್ಯೂಟ್ರಿ ಗಾರ್ಡನ್‌ ಸುಲಭವಾಗಿ ಬೆಳೆಸಬಹುದು. ಇಲ್ಲಿನ ಸಮುದಾಯದ ಅಪೌಷ್ಟಿಕತೆಯ ಸಮಸ್ಯೆಯನ್ನು ಬಗೆಹರಿಸಲು ಇದು ಸುಲಭ ಹಾಗೂ ಉತ್ತಮ ಮಾರ್ಗವಾಗಿದೆ.

ನ್ಯೂಟ್ರಿ ಗಾರ್ಡನ್ಗಳು

ತರಕಾರಿ ಆಧಾರಿತ ನ್ಯೂಟ್ರಿ ಗಾರ್ಡನ್‌ಗಳು ಪೌಷ್ಟಿಕಾಂಶದ ಅತ್ಯುತ್ತಮ ಮೂಲವಾಗಿದೆ. ಪೌಷ್ಟಿಕಾಂಶ ಕೊರತೆಯನ್ನು ನಿರ್ಮೂಲನೆ ಮಾಡುವಲ್ಲಿ ಸಕ್ರಿಯ ಪಾತ್ರವನ್ನು ವಹಿಸುತ್ತದೆ. ನ್ಯೂಟ್ರಿ ಗಾರ್ಡನ್‌ ಹಿತ್ತಿಲು ತೋಟಗಳ ಸುಧಾರಿತ ರೂಪವಾಗಿದೆ. ಇದರಲ್ಲಿ ತರಕಾರಿಗಳನ್ನು ಆಹಾರ ಮತ್ತು ಆದಾಯದ ಮೂಲವಾಗಿ ಹೆಚ್ಚು ವೈಜ್ಞಾನಿಕ ರೀತಿಯಲ್ಲಿ ಬೆಳೆಯಲಾಗುತ್ತದೆ. ನ್ಯೂಟ್ರಿ ಗಾರ್ಡನ್‌ ಸಣ್ಣ ಹಾಗೂ ಅತಿಸಣ್ಣ ರೈತ ಕುಟುಂಬಗಳ ಆಹಾರಕ್ಕೆ ಕೊಡುಗೆ ನೀಡುತ್ತದೆ. ಇದರಿಂದ ಹಲವು ಲಾಭಗಳಿವೆ. ಅದರಲ್ಲೂ ಮಹಿಳೆಯರಿಗೆ ಇದರಿಂದ ವಿಶೇಷವಾಗಿ ಲಾಭವಾಗುತ್ತದೆ. ಪ್ರಸ್ತುತ ಸಂಶೋಧನೆಗಳು ಕ್ಷೇತ್ರ ಆಧಾರಿತ ವಾಣಿಜ್ಯ ಬೆಳೆಗಳ ಮೇಲೆ ಗಮನವನ್ನು ಕೇಂದ್ರೀಕರಿಸುತ್ತವೆ. ಆದರೆ ಈ ಬೆಳೆಗಳ ಮಾರಾಟದಿಂದ ಬರುವ ಆದಾಯವನ್ನು ಕುಟುಂಬಕ್ಕಾಗಿ ಉತ್ತಮ ಗುಣಮಟ್ಟದ ಆಹಾರ ಕೊಳ್ಳಲು ಬಳಸುವುದಿಲ್ಲ. ಇದು ನಿಧಾನವಾಗಿ ಪೋಷಣೆ ಮತ್ತು ಆರೋಗ್ಯಕ್ಕೆ ಕೃಷಿಯ ಕೊಡುಗೆ ಏನು ಎನ್ನುವಂತಹ ಪ್ರಶ್ನೆಗಳನ್ನು ಹುಟ್ಟುಹಾಕುತ್ತಿದೆ. ಇದು ನ್ಯೂಟ್ರಿ ಗಾರ್ಡನ್‌ಗಳ ಹುಟ್ಟಿಗೆ ಕಾರಣವಾಯಿತು. ಏಕೆಂದರೆ ಇವು ಪೌಷ್ಟಿಕಾಂಶಯುಕ್ತ ಆಹಾರ ಉತ್ಪಾದನೆಗೆ ದಾರಿಮಾಡಿಕೊಟ್ಟಿತು. ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ICMR, 2010) ಹೇಳಿರುವಂತೆ ತರಕಾರಿ ಸೇವನೆಯ ಶಿಫಾರಸುಗಳನ್ನು ಪೂರೈಸಬಹುದು. ಅಂದರೆ ಒಬ್ಬ ವ್ಯಕ್ತಿಗೆ ದಿನಕ್ಕೆ 300 ಗ್ರಾಂ ತರಕಾರಿ, ಇದರಲ್ಲಿ 50 ಗ್ರಾಂ ಸೊಪ್ಪು, 50 ಗ್ರಾಂ ಗಡ್ಡೆಗಳು ಮತ್ತು 200 ಗ್ರಾಂ ಇತರ ತರಕಾರಿಗಳು.

ಗುಡ್ಡಗಾಡು ಪ್ರದೇಶದಲ್ಲಿನ ಭೌಗೋಳಿಕ ಮತ್ತು ಹವಾಮಾನದ ಗುಣಲಕ್ಷಣಗಳು ಸಮಶೀತೋಷ್ಣ ಮತ್ತು ಉಪ ಉಷ್ಣವಲಯದ ಹಣ್ಣಿನ ಬೆಳೆಗಳಾದ ಸೇಬು, ಪೇರಳೆ, ಪೀಚ್, ಪ್ಲಮ್, ಸಿಟ್ರಸ್, ಏಪ್ರಿಕಾಟ್ ಮತ್ತು ವಾಲ್ನಟ್ ಉತ್ಪಾದನೆಗೆ ಸೂಕ್ತವಾಗಿದೆ. ದೈನಂದಿನ ಆಹಾರದಲ್ಲಿ ವಿವಿಧ ಹಣ್ಣುಗಳು, ತರಕಾರಿಗಳನ್ನು ಸೇರಿಸುವ ಮೂಲಕ ಸೂಕ್ಷ್ಮಪೋಷಕಾಂಶಗಳ ಅಪೌಷ್ಟಿಕತೆಯ ಸಮಸ್ಯೆಯನ್ನು ನಿವಾರಿಸಬಹುದು. 2018 ರಲ್ಲಿ ಅಲ್ಮೋರಾದ ICAR-VPKAS ಅಡಿಯಲ್ಲಿ ಜಾರಿಗೊಳಿಸಲಾದ ಪೋಷಣೆ ಸಂಬಂಧಿತ ಕೃಷಿ ಮಧ್ಯಸ್ಥಿಕೆಗಳು ಆಹಾರ ಉತ್ಪಾದನೆಯನ್ನು ಹೆಚ್ಚಿಸಲು ಮತ್ತು ಆಹಾರ ಸೇವನೆಯನ್ನು ವೈವಿಧ್ಯಗೊಳಿಸಲು ಪರಿಣಾಮಕಾರಿ ಎಂದು ಸಾಬೀತಾಯಿತು. ಮಹಿಳಾ ರೈತರ ಸಕ್ರಿಯ ಭಾಗವಹಿಸುವಿಕೆಯೊಂದಿಗೆ ಉತ್ತರಾಖಂಡದ ಎತ್ತರದ ಗುಡ್ಡಗಾಡು ಪ್ರದೇಶಗಳಲ್ಲಿ 65 ಕ್ಕೂ ಹೆಚ್ಚು ನ್ಯೂಟ್ರಿ-ಗಾರ್ಡನ್‌ಗಳನ್ನು ಯಶಸ್ವಿಯಾಗಿ ಪ್ರದರ್ಶಿಸಲಾಯಿತು.

 ನ್ಯೂಟ್ರಿ ಗಾರ್ಡನ್ ಸ್ಥಾಪನೆ

ಸಾಮಾನ್ಯವಾಗಿ ಮನೆಯ ಹಿತ್ತಲಲ್ಲಿ ಸಾಕಷ್ಟು ನೀರಿನ ಲಭ್ಯತೆ ಇರುವಲ್ಲಿ ನ್ಯೂಟ್ರಿ-ಗಾರ್ಡನ್ ಸ್ಥಾಪಿಸಬಹುದು. ಬೆಟ್ಟಪ್ರದೇಶಗಳಲ್ಲಿ ಮನೆಯ ಸಮೀಪದಲ್ಲಿ ನ್ಯೂಟ್ರಿ-ಗಾರ್ಡನ್‌ಗಳನ್ನು ನಿರ್ವಹಿಸಬೇಕು. ಹೀಗೆ ಮಾಡುವುದರಿಂದ ಈ ಪ್ರದೇಶದಲ್ಲಿ ಹಾನಿಯನ್ನುಂಟುಮಾಡುವ ಪ್ರಾಣಿಗಳ ಹಾನಿಯಿಂದ ರಕ್ಷಿಸಬಹುದು. ಚೌಕಾಕಾರದ ಪ್ಲಾಟ್‌ಗೆ ಆಯತಾಕಾರದ ಉದ್ಯಾನವನ್ನು ಆದ್ಯತೆ ನೀಡಲಾಗುತ್ತದೆ. ಐದು ಸದಸ್ಯರನ್ನು ಒಳಗೊಂಡಿರುವ ಕುಟುಂಬಕ್ಕೆ ವರ್ಷವಿಡೀ ತರಕಾರಿಗಳನ್ನು ಒದಗಿಸಲು ಸುಮಾರು 200 m² ಭೂಮಿ ಸಾಕಾಗುತ್ತದೆ. ಹವಾಮಾನ ಮತ್ತು ಕಾಲೋಚಿತ ಬದಲಾವಣೆಗಳಿಗೆ ಅನುಗುಣವಾಗಿ ನ್ಯೂಟ್ರಿ-ಗಾರ್ಡನ್‌ನಲ್ಲಿ ಜಾಗ ಮತ್ತು ಬೆಳೆ ಹಂಚಿಕೆಯನ್ನು ಬದಲಿಸಬಹುದು.

  • ದೀರ್ಘಕಾಲಿಕ ತರಕಾರಿಗಳನ್ನು ಉದ್ಯಾನದ ಒಂದು ಬದಿಯಲ್ಲಿ ನೆಡಬೇಕು. ಇದರಿಂದ ಅವು ಇನ್ನಿತರ ಬೆಳೆಗಳ ನಡುವೆ ಬರುವುದಿಲ್ಲ, ಉಳಿದ ಬೆಳೆಗಳ ಮೇಲೆ ನೆರಳನ್ನು ಚೆಲ್ಲುವುದಿಲ್ಲ. ನೆರಳಿನಲ್ಲಿ ಬೆಳೆಯಬೇಕಾದ ತರಕಾರಿಗಳನ್ನು ಈ ಬೆಳೆಗಳೊಂದಿಗೆ ಬೆಳೆಯಬಹುದು. ಅಡುಗೆ ತ್ಯಾಜ್ಯವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಗೊಬ್ಬರದ ಗುಂಡಿಯನ್ನು ನ್ಯೂಟ್ರಿ ಗಾರ್ಡನ್‌ನ ಒಂದು ಬದಿಯಲ್ಲಿ ಸಿದ್ಧಪಡಿಸಬೇಕು.
  • ದೀರ್ಘಕಾಲಿಕ ಬೆಳೆಗಳಿಗೆ ಪ್ರದೇಶಗಳನ್ನು ನಿಗದಿಪಡಿಸಿದ ನಂತರ, ಉಳಿದ ಭಾಗಗಳನ್ನು ವಾರ್ಷಿಕ ತರಕಾರಿ ಬೆಳೆಗಳನ್ನು ಬೆಳೆಯಲು 6-8 ಸಮಾನ ಪ್ಲಾಟ್‌ಗಳಾಗಿ ವಿಂಗಡಿಸಬಹುದು.
  • ವೈಜ್ಞಾನಿಕ ಪದ್ಧತಿಗಳು ಮತ್ತು ಬೆಳೆ ಸರದಿಯನ್ನು ಅನುಸರಿಸಿ, ಒಂದೇ ಪ್ಲಾಟ್‌ನಲ್ಲಿ ಎರಡರಿಂದ ಮೂರು ವಾರ್ಷಿಕ ಬೆಳೆಗಳನ್ನು ಬೆಳೆಸಬಹುದು. ಜಾಗವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಅಂತರ ಬೆಳೆ ಹಾಗೂ ಮಿಶ್ರಬೆಳೆ ಪದ್ಧತಿಗಳನ್ನು ಅನುಸರಿಸಬಹುದು.
  • ಪ್ಲಾಟ್‌ನ ನಡುವಲ್ಲಿ ಹಾಗೂ ನಾಲ್ಕು ಬದಿಗಳಲ್ಲಿ ನಡೆಯಲು ಜಾಗ ಬಿಡಬೇಕು. ಉದ್ಯಾನದಲ್ಲಿ ಬೆಳೆದ ತಾಜಾ ತರಕಾರಿಯನ್ನು ನೇರವಾಗಿ ಬಳಕೆ ಮಾಡುವುದರಿಂದ ಹಳ್ಳಿಗಳಲ್ಲಿ ಹೇರಳವಾಗಿ ದೊರಕುವ ಸಾವಯವ ಗೊಬ್ಬರವನ್ನು ಬಳಸಬೇಕು. ಕೀಟಬಾಧೆಯಿಲ್ಲದೆ ಒಳ್ಳೆಯ ಬೆಳೆಯನ್ನು ಪಡೆಯಲು ರಾಸಾಯನಿಕಗಳನ್ನು ಮಿತಪ್ರಮಾಣದಲ್ಲಿ ಬಳಸಬಹುದು.
  • ಹೆಚ್ಚು ಇಳುವರಿ ನೀಡುವ ಬೆಳೆಗಳಿಗಿಂತ ದೀರ್ಘಾವಧಿಯ ಮತ್ತು ಸ್ಥಿರ ಇಳುವರಿ ನೀಡುವ ಬೆಳೆಗಳಿಗೆ ಆದ್ಯತೆ ನೀಡುವುದು ಮುಖ್ಯ.
  • 200 m² ಪ್ಲಾಟ್‌ನಲ್ಲಿ ಜೇನು ಗೂಡನ್ನು ಕೂರಿಸಬಹುದು. ಇದರಿಂದ ಪರಾಗಸ್ಪರ್ಶ ಕ್ರಿಯೆಗೆ ಅನುಕೂಲವಾಗುವುದಲ್ಲದೆ ಜೇನನ್ನು ಕೂಡ ಪಡೆಯಬಹುದು.

ಈ ನ್ಯೂಟ್ರಿ ಗಾರ್ಡನ್‌ಗಳಲ್ಲಿ ತೋಟಗಾರಿಕಾ ಬೆಳೆಗಳನ್ನು ಬೆಳೆಯಬಹುದು. ಇವು ಹಣ್ಣುಗಳು, ತರಕಾರಿಗಳು, ಗಡ್ಡೆ ಗೆಣಸುಗಳು, ಸುಗಂಧಿತ ಹಾಗೂ ಔಷಧೀಯ ಸಸ್ಯಗಳು, ಮಸಾಲೆ ಮತ್ತಿತರ ಬೆಳೆಗಳನ್ನು ಒಳಗೊಂಡಿದೆ. ಇವು ಪೌಷ್ಟಿಕಾಂಶದ ವೈವಿಧ್ಯತೆಯನ್ನು ಹೆಚ್ಚಿಸುತ್ತದೆ.

 ಉತ್ತರಾಖಂಡದ ಎತ್ತರದ ಬೆಟ್ಟ ಪ್ರದೇಶದಲ್ಲಿ ನ್ಯೂಟ್ರಿಗಾರ್ಡನ್ ಮೂಲಕ ಮಹಿಳಾ ಸಬಲೀಕರಣ

ಪೂಜಾ ಕರ್ಕಿ ತಮ್ಮ ನ್ಯೂಟ್ರಿ ಗಾರ್ಡನ್‌ನ ಉತ್ಪನ್ನಗಳೊಂದಿಗೆ

ಉತ್ತರಾಖಂಡದ ಗುಡ್ಡಗಾಡು ಪ್ರದೇಶದ ಇತರ ಕೃಷಿ ಕುಟುಂಬಗಳಂತೆ, ಶ್ರೀಮತಿ ಪೂಜಾ ಕರ್ಕಿ ಅವರು ಮೊದಲು ಸಾಂಪ್ರದಾಯಿಕ ಕೃಷಿಯನ್ನು ನಡೆಸುತ್ತಿದ್ದರು. ವರ್ಷದಲ್ಲಿ ಕೇವಲ ಮೂರರಿಂದ ನಾಲ್ಕು ತಿಂಗಳುಗಳ ಕಾಲ ಕುಟುಂಬವನ್ನು ಪೋಷಿಸುವಷ್ಟು ಆಹಾರವನ್ನು ಉತ್ಪಾದಿಸುತ್ತಿದ್ದರು. ವರ್ಷದ ಉಳಿದ ದಿನಗಳಲ್ಲಿ ಆಹಾರಕ್ಕಾಗಿ ಮಾರುಕಟ್ಟೆಯ ಮೇಲೆ ಅವಲಂಬಿತರಾಗಿದ್ದರು. ಅವರು 2018 ರಲ್ಲಿ ಅಲ್ಮೋರಾದ ICAR-VPKAS ನ ವಿಜ್ಞಾನಿಗಳೊಂದಿಗೆ ಸಂಪರ್ಕಕ್ಕೆ ಬಂದರು. ತರಕಾರಿ ಕೃಷಿ ಪದ್ಧತಿಗಳು, ಅಣಬೆ ಕೃಷಿ, ಎರೆಹುಳು ಗೊಬ್ಬರ, ಜೇನು ಸಾಕಣೆ ಮತ್ತು ಸಂರಕ್ಷಿತ ಸ್ಥಿತಿಯಲ್ಲಿ ತರಕಾರಿ ಮೊಳಕೆ ಉತ್ಪಾದನೆಯಲ್ಲಿ ತರಬೇತಿ ಪಡೆದರು. ಅವಳು 8 ನೇ ತರಗತಿಯವರೆಗೆ ಮಾತ್ರ ಶಿಕ್ಷಣ ಪಡೆದಿದ್ದರೂ, ಪೌಷ್ಟಿಕಾಂಶದ ಸ್ಥಿತಿಯನ್ನು ಉತ್ತಮಗೊಳಿಸಲು ಪೌಷ್ಟಿಕಾಂಶ ಮತ್ತು ಇತರ ಸುಧಾರಿತ ಕೃಷಿ ಸುಧಾರಿತ ಅಭ್ಯಾಸಗಳ ಬಗ್ಗೆ ತಿಳಿದುಕೊಳ್ಳಲು ತುಂಬಾ ಉತ್ಸುಕಳಾಗಿದ್ದಳು. ವಿವಿಧ ಸೂಕ್ಷ್ಮ ಪೋಷಕಾಂಶಗಳಿಂದ ಸಮೃದ್ಧವಾಗಿರುವ ಹಣ್ಣಿನ ಗಿಡಗಳೊಂದಿಗೆ 16 ಕ್ಕೂ ಹೆಚ್ಚು ಬಗೆಯ ತರಕಾರಿಗಳನ್ನು ನ್ಯೂಟ್ರಿ-ಗಾರ್ಡನ್‌ಗಳಲ್ಲಿ ಬೆಳೆಸಲಾಯಿತು. ತನ್ನ ಕುಟುಂಬದ ದೈನಂದಿನ ಪೋಷಕಾಂಶದ ಅಗತ್ಯವನ್ನು ಪೂರೈಸಲು 200 m² ಭೂಪ್ರದೇಶ ಸಾಕಾಗುತ್ತದೆ ಎಂದರಿತು ತನ್ನ ಹಿತ್ತಲಿನಲ್ಲಿ ನ್ಯೂಟ್ರಿ-ಗಾರ್ಡನ್‌ ಬೆಳೆಸಲು ಅಗತ್ಯ ತರಬೇತಿ ಮತ್ತು ಮುಂಚೂಣಿಯ ಪ್ರಾತ್ಯಕ್ಷಿಕೆಗಳಲ್ಲಿ ತೀವ್ರ ಆಸಕ್ತಿಯನ್ನು ಹೊಂದಿದ್ದಳು. ಪೌಷ್ಟಿಕಾಂಶ ಕೃಷಿ ಮತ್ತು ಇತರ ಸಂಬಂಧಿತ ಚಟುವಟಿಕೆಗಳನ್ನು ಸಾಧಿಸಲು ಅವಳು ತನ್ನ ಭೂಮಿಯಲ್ಲಿ ಬಹುತೇಕ ಏಕಾಂಗಿಯಾಗಿ ಕೆಲಸ ಮಾಡಿದ್ದಾಳೆ.

ಮೊದಲ ಋತುವಿನಲ್ಲಿ ಅವಳು ಮನೆ ಬಳಕೆಗೆ ಸಾಕಾಗುವಷ್ಟು ತರಕಾರಿಗಳ ಉತ್ತಮ ಇಳುವರಿಯನ್ನು ಪಡೆಯಲು ಸಾಧ್ಯವಾಯಿತು. ಹತ್ತಿರದ ಸ್ಥಳೀಯ ಮಾರುಕಟ್ಟೆಯಲ್ಲಿ ತರಕಾರಿಗಳನ್ನು ಮಾರಾಟ ಕೂಡ ಮಾಡಿದಳು. ಅವಳು ನ್ಯೂಟ್ರಿ-ಗಾರ್ಡನ್‌ನಲ್ಲಿ ಅಳವಡಿಸಲಾದ ಪಾಲಿ-ಟನಲ್‌ಗಳಲ್ಲಿ ತರಕಾರಿ ಬೆಳೆಗಳ ನರ್ಸರಿಯನ್ನು ಪ್ರಾರಂಭಿಸಿದಳು. ತನ್ನ ಸಹ ಕೃಷಿ ಮಹಿಳೆಯರಿಗೆ ಸುಧಾರಿತ ತರಕಾರಿಗಳ ಮೊಳಕೆಗಳನ್ನು ಒದಗಿಸುವಲ್ಲಿ ಪ್ರಮುಖ ಪಾತ್ರ ವಹಿಸಿದಳು.

ಉಪಸಂಹಾರ

ಅನಾದಿ ಕಾಲದಿಂದಲೂ ನ್ಯೂಟ್ರಿ ಗಾರ್ಡನ್‌ಗಳು ಸಾಂಪ್ರದಾಯಿಕ ಕೃಷಿ ಪದ್ಧತಿಯ ಮೂಲಾಧಾರವಾಗಿದೆ ಆದರೆ ಕಾಲಾನಂತರದಲ್ಲಿ ಅದು ತನ್ನ ಪ್ರಾಮುಖ್ಯತೆಯನ್ನು ಕಳೆದುಕೊಂಡಿದೆ. ದೈನಂದಿನ ಆಹಾರದಲ್ಲಿ ಅಸಂಖ್ಯಾತ ಬಣ್ಣದ ತರಕಾರಿಗಳು ವ್ಯಕ್ತಿಯಲ್ಲಿ ರೋಗಗಳ ವಿರುದ್ಧ ಹೋರಾಡುವ ಮತ್ತು ರೋಗನಿರೋಧಕ ಶಕ್ತಿಯನ್ನು ಸುಧಾರಿಸುವ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ತಾಜಾ ಹಣ್ಣು, ತರಕಾರಿಗಳಲ್ಲಿರುವ ಅಸಂಖ್ಯಾತ ಫೋಟೊಕೆಮಿಕಲ್‌ಗಳು ಆಂಟಿ-ಆಕ್ಸಿಡೆಂಟ್‌, ಆಂಟಿ-ಅಲರ್ಜಿ, ಆಂಟಿ-ಕಾರ್ಸಿನೋಜೆನಿಕ್, ಉರಿಯೂತ, ಆಂಟಿವೈರಲ್ ಮತ್ತು ಆಂಟಿ-ಪ್ರೊಲಿಫೆರೇಟಿವ್ ಆಗಿ ಕಾರ್ಯನಿರ್ವಹಿಸುತ್ತವೆ. ಪ್ರತ್ಯೇಕವಾದ ಮತ್ತು ಸ್ಥಳೀಯ ಮಾರುಕಟ್ಟೆಯಿಂದ ದೂರವಿರುವ ಸ್ಥಳಗಳು ಮತ್ತು ಹಳ್ಳಿಗಳಲ್ಲಿ ನ್ಯೂಟ್ರಿ-ಗಾರ್ಡನ್‌ಗಳು ತುಂಬಾ ಅವಶ್ಯಕ. ಗ್ರಾಮೀಣ ಮತ್ತು ದೂರದ ಪ್ರದೇಶಗಳಲ್ಲಿ ಸರಿಯಾದ ಪೋಷಣೆ, ನ್ಯೂಟ್ರಿ ಗಾರ್ಡನ್, ಆಹಾರ ಪದ್ಧತಿಗಳ ಬಗ್ಗೆ ಜಾಗೃತಿ ಅಭಿಯಾನವನ್ನು ನಡೆಸಬೇಕು. ಕನಿಷ್ಠ ಹೂಡಿಕೆಯೊಂದಿಗೆ ಮಹಿಳೆಯರಲ್ಲಿ ಪೌಷ್ಟಿಕಾಂಶದ ಮಟ್ಟವನ್ನು ಸುಧಾರಿಸಲು ನ್ಯೂಟ್ರಿ-ಗಾರ್ಡನ್‌ ಬೆಳೆಸುವುದು ಅನುಕೂಲಕರ ಮಾರ್ಗಗಳಲ್ಲಿ ಒಂದಾಗಿದೆ.

ಪ್ರೀತಿ ಮಾಮ್ಗೈ, ಪಂಕಜ್ ನೌಟಿಯಾಲ್, ರೇಣು ಜೇಥಿ


 Preeti Mamgai

Principal Scientist,  ICAR-ATARI, Zone-I, PAU Campus, Ludhiana, Punjab, India.

Email id: preetinariyal@yahoo.com

Pankaj Nautiyal

SMS (Horticulture), KVK (ICAR-VPKAS)-Uttarkashi, Uttarakhand, India

 

Renu Jethi

Sr. Scientist(Social Science), ICAR-VPKAS, Almora, Uttarakhand, India

 

ಆಂಗ್ಲ ಮೂಲ : ಲೀಸಾ ಇಂಡಿಯಾ; ಸಂಪುಟ :೨೩; ಸಂಚಿಕೆ : ೩ ; ಸೆಪ್ಟಂಬರ್ ೨೦‌೨೧

 

 

Recent Posts

ಕೃಷಿಯಲ್ಲಿ ನೀರಿನ ಸಮರ್ಥ ಬಳಕೆಗಾಗಿ ಕಾಲುವೆ ಯಾಂತ್ರೀಕರಣ

ಕೃಷಿಯಲ್ಲಿ ನೀರಿನ ಸಮರ್ಥ ಬಳಕೆಗಾಗಿ ಕಾಲುವೆ ಯಾಂತ್ರೀಕರಣ

ನಮ್ಮ ನೀರಾವರಿ ವ್ಯವಸ್ಥೆಯನ್ನು 21ನೇ ಶತಮಾನದ ಬೇಡಿಕೆಗಳಿಗೆ ಹೊಂದುವಂತೆ ಮಾಡುವುದು ನಮ್ಮ ಮುಂದಿರುವ ನಿಜವಾದ ಸವಾಲಾಗಿದೆ. ತಂತ್ರಜ್ಞಾನವೇ...