ಪರಿಣಾಮಕಾರಿ ಶಿಕ್ಷಣಶಾಸ್ತ್ರ ಮತ್ತು ಸಂಶೋಧನಾ ದೃಷ್ಟಿಕೋನ


ಕೃಷಿ ಪರಿಸರ ಶಿಕ್ಷಣದ ಉತ್ತೇಜನಕ್ಕೆ ಅನುಭವದ ಕಲಿಕೆ ಆಧಾರಿತ ಶಿಕ್ಷಣಶಾಸ್ತ್ರ, ರೈತ ಕೇಂದ್ರಿತ ಸಹಭಾಗಿತ್ವದ ಸಂಶೋಧನೆ ಮತ್ತು ಜ್ಞಾನ ವಿನಿಮಯ ಅತ್ಯಗತ್ಯ.


1982 ರಲ್ಲಿ, ಒಳಸುರಿಯುವಿಕೆಗಳ ಅತಿಬಳಕೆಯು ಕೃಷಿಯ ಮೇಲೆ ಋಣಾತ್ಮಕ ಪರಿಣಾಮಗಳನ್ನು ಮತ್ತು ಕೃಷಿ, ಪರಿಸರ ವಿಜ್ಞಾನ ಮತ್ತು ಮನುಷ್ಯರ ನಡುವಿನ ಸಂಬಂಧವನ್ನು ಗುರುತಿಸಿ, ನೆದರ್‌ಲ್ಯಾಂಡ್ಸ್‌ನಲ್ಲಿನ ಕೆಲವು ಉತ್ಸಾಹಿ ವ್ಯಕ್ತಿಗಳು ಕೃಷಿ, ಮನುಷ್ಯ, ಪರಿಸರ ವಿಜ್ಞಾನವನ್ನು ಪರಿಸರ ಕೃಷಿಯ ಕುರಿತು ಅಂತರರಾಷ್ಟ್ರೀಯ ತರಬೇತಿ ಕಾರ್ಯಕ್ರಮವಾಗಿ ಪ್ರಾರಂಭಿಸಿದರು. ಎಂಬತ್ತರ ದಶಕದ ಆರಂಭದಲ್ಲಿ ಅಭಿವೃದ್ಧಿಶೀಲ ದೇಶಗಳಿಂದ ಹಲವರನ್ನು ಆಕರ್ಷಿಸುವ ಮೂಲಕ, ಕೃಷಿ, ಮನುಷ್ಯ, ಪರಿಸರ ವಿಜ್ಞಾನವು ಪರಿಸರ ಕೃಷಿಯ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಮಹತ್ವದ ಕೊಡುಗೆ ನೀಡಿದೆ. ಭಾರತಕ್ಕೆ ಸ್ಥಳಾಂತರಗೊಂಡು AME ಭಾರತದಲ್ಲಿ ತನ್ನ ಯೋಜನೆಯನ್ನು ಮುಂದುವರೆಸಿ LEISA ಎಂದು ಒಳಸುರಿಯುವಿಕೆಗಳನ್ನು ಹೆಚ್ಚಿಗೆ ಬಳಸಲಾಗುವ ಕೃಷಿಯನ್ನು ಪ್ರಚಾರಮಾಡುವಲ್ಲಿ ತೊಡಗಿಕೊಂಡಿದೆ. ಆಸಕ್ತ ಸಂಸ್ಥೆಗಳಿಗೆ ತಾಂತ್ರಿಕ ಬೆಂಬಲವನ್ನು ನೀಡುವುದರೊಂದಿಗೆ ತರಬೇತಿಯನ್ನು ನೀಡುವ ಮೂಲಕ ಲೀಸಾ ಭಾಗವಹಿಸುವ ಮೂಲಕ ಕಲಿಕೆಯ ಪ್ರಕ್ರಿಯೆಯನ್ನು ಪ್ರಚುರಗೊಳಿಸುತ್ತಿದೆ. 90 ರ ದಶಕದ ಉತ್ತರಾರ್ಧದಿಂದ, ಸಣ್ಣ ಹಿಡುವಳಿದಾರರೇ ಹೆಚ್ಚಾಗಿರುವ ಮಳೆಯಾಶ್ರಿತ ಪ್ರದೇಶಗಳಲ್ಲಿ ರೈತ ಕೇಂದ್ರಿತ ಭಾಗವಹಿಸುವಿಕೆಯ ಕಲಿಕೆಯ ಪ್ರಕ್ರಿಯೆಗಳಲ್ಲಿ ತನ್ನ ಪ್ರಯತ್ನಗಳನ್ನು ತೀವ್ರಗೊಳಿಸಿದೆ. 2002 ರಲ್ಲಿ, AME ಫೌಂಡೇಶನ್ ಸ್ಥಾಪನೆಯಾದ ನಂತರ, ಕೃಷಿಯಾಧಾರಿತ ಜೀವನೋಪಾಯಗಳಲ್ಲಿ ಸುಧಾರಿತ ಕೃಷಿ ಉತ್ಪಾದಕತೆ ಮತ್ತು ಕೃಷಿ ಪರಿಸರ ತತ್ವಗಳ ಆಧಾರದ ಮೇಲೆ ಒಣ ಭೂಮಿಯಲ್ಲಿ ಸುಸ್ಥಿರ ಕೃಷಿ ಪದ್ಧತಿಗಳ ಸಂಯೋಜನೆಯನ್ನು ಮತ್ತಷ್ಟು ಉತ್ತೇಜಿಸಿತು.

ಶಿಕ್ಷಣದ ಯಾನವು ʼತರಬೇತಿ ಕೋರ್ಸ್‌ʼಗಳಿಂದ ʼಅನುಭವಾತ್ಮಕʼ ಭಾಗವಹಿಸುವಿಕೆಯ ಕಲಿಕೆಯ ಪ್ರಕ್ರಿಯೆಗೆ ಬದಲಾಯಿತು. ಪ್ರತಿ ಮಧ್ಯಸ್ಥಿಕೆಯು ಗ್ರಾಮ ಮಟ್ಟದಲ್ಲಿ PRA (Participatory Rural Appraisal) ನೊಂದಿಗೆ ಆರಂಭವಾಗುತ್ತದೆ. PRAಗಳು ಹಳ್ಳಿಯ ಸಂದರ್ಭ, ಸಮುದಾಯಗಳು ಮತ್ತು ಅವರ ನಿರ್ದಿಷ್ಟ ಅಗತ್ಯಗಳು, ಅವಕಾಶಗಳನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡಿತು. ಸೂಕ್ತವಾದ PRA ಪರಿಕರಗಳ ಬಳಕೆಯು ವಸ್ಥುಸ್ಥಿತಿಗಳ ಬಗ್ಗೆ ಸಮುದಾಯಗಳಿಂದ ಕಲಿಯಲು ಮತ್ತು ಸೂಕ್ತವಾದ ಕಲಿಕಾ ಪ್ರಕ್ರಿಯೆಗಳು ಮತ್ತು ಕಾರ್ಯತಂತ್ರಗಳನ್ನು ವಿನ್ಯಾಸಗೊಳಿಸಲು ಸಹಾಯ ಮಾಡಿತು.

ಇದರೊಂದಿಗೆ PTD (ಪಾರ್ಟಿಸಿಪೇಟರಿ ಟೆಕ್ನಾಲಜಿ ಡೆವಲಪ್‌ಮೆಂಟ್) ನಂತಹ ಜಂಟಿ ಕಲಿಕೆಯ ಪ್ರಕ್ರಿಯೆ ಅನುಸರಿಸಲಾಯಿತು. ಇಲ್ಲಿ ರೈತ ಗುಂಪುಗಳು ಸೀಮಿತ ಪ್ರದೇಶದಲ್ಲಿ ಕೆಲವು ಆಯ್ಕೆಗಳನ್ನು ಪ್ರಯತ್ನಿಸುತ್ತವೆ. ಫಲಿತಾಂಶಗಳನ್ನು ತಮ್ಮ ಸಾಮಾನ್ಯ ಪದ್ಧತಿಗಳೊಂದಿಗೆ ಹೋಲಿಸಿ ಸರಳವಾದ, ಕೈಗೆಟಕುವಂತಹ ಮತ್ತು ಸಾಂಸ್ಕೃತಿಕವಾಗಿ ಒಪ್ಪಿತವಾಗುವಂತಹ ಆಯ್ಕೆಗಳನ್ನು ಒಪ್ಪಿಕೊಳ್ಳುತ್ತವೆ. ನಿರ್ದಿಷ್ಟ ಬೆಳೆ ಆಧಾರಿತ PTD ಪ್ರಕ್ರಿಯೆಗಳ ಮೂಲಕ, ರೈತರು ಪ್ರಮುಖ ಸಮಸ್ಯೆಗಳನ್ನು ಗುರುತಿಸುತ್ತಾರೆ; ತಮಗೆ ತಿಳಿದಿರುವ ಮತ್ತು ತಜ್ಞರು ಸೂಚಿಸಿದ ಆಯ್ಕೆಗಳನ್ನು ಸೇರಿಸುತ್ತಾರೆ; ಎದುರಾಗಬಹುದಾದ ಹೊಸ ಸಮಸ್ಯೆಗಳನ್ನು ಗುರುತಿಸುತ್ತಾರೆ. ಈ ಪ್ರಕ್ರಿಯೆಯು ಪ್ರಯೋಗದ ಮೂಲಕ ಮತ್ತು ಸೂಕ್ತವಾದ ಆಯ್ಕೆಗಳನ್ನು ಕಂಡುಕೊಳ್ಳುವ ಮೂಲಕ ತಮ್ಮ ಪರಿಸ್ಥಿತಿಗಳನ್ನು ಪರಿಹರಿಸಿಕೊಳ್ಳುವುದನ್ನು ಕಲಿಯಲು ರೈತರನ್ನು ಸಮರ್ಥರನ್ನಾಗಿಸುತ್ತದೆ.

ಋತುವಿನ ಕೊನೆಯಲ್ಲಿ ರೈತರ ಮೌಲ್ಯಮಾಪನವನ್ನು ಒಗ್ಗೂಡಿಸಲಾಗುತ್ತದೆ. ಅದನ್ನು ಬಹುಪಾಲುದಾರರ ವಾರ್ಷಿಕ ಸಭೆಗಳಲ್ಲಿ ಹಂಚಿಕೊಳ್ಳಲಾಗುತ್ತದೆ. ಉದಾಹರಣೆಗೆ, ಎರಡು ಬೆಳೆಯಾಧಾರಿತ ಕಾರ್ಯನಿರತ ಗುಂಪುಗಳು – ನೆಲಗಡಲೆ ಮತ್ತು ಹತ್ತಿಯ ಗುಂಪುಗಳು ಹುಟ್ಟಿಕೊಂಡವು. ಔಪಚಾರಿಕ ಮತ್ತು ಅನೌಪಚಾರಿಕ ಜ್ಞಾನ ವ್ಯವಸ್ಥೆಗಳ ನಡುವೆ ‘ಪರಸ್ಪರ ಗೌರವ’ವನ್ನು ರೂಪಿಸುವುದು ಮಹತ್ವದ ಸವಾಲಿನ ಅಂಶವಾಗಿದೆ. ರೈತರು ಮತ್ತು ಶಿಕ್ಷಣ ತಜ್ಞರು ಒಟ್ಟಾಗಿ ಕಳೆದ ಋತುವಿನ ಸಲಹೆಗಳನ್ನು ಪರಾಮರ್ಶಿಸಿ, ಸ್ಥಳೀಯವಾಗಿ ಒದಗಿಬಂದ ಪರಿಹಾರಗಳನ್ನು ಪರೀಕ್ಷಿಸುತ್ತಾರೆ. ಇದು ʼದ್ವಿಮುಖ ಕಲಿಕೆʼ ಇದ್ದಂತೆ. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ದ್ವಿಮುಖ ಮೌಲ್ಯೀಕರಣ ಪ್ರಕ್ರಿಯೆ! ಇದು ಪರಸ್ಪರ ಗೌರವವನ್ನು ಹೆಚ್ಚಿಸುತ್ತದೆ. ಒಂದು ರೀತಿಯಲ್ಲಿ ಪರಸ್ಪರ ಹೊಣಗಾರಿಕೆಗಳನ್ನು ಕೂಡ ಹೆಚ್ಚಿಸುತ್ತದೆ. ʼಬ್ಲೂ ಪ್ರಿಂಟ್‌ʼ ವಿಧಾನವಿರಲಿಲ್ಲ. ಕೆಲವು ಬದ್ಧ ತಜ್ಞರ ಗುಂಪಿನಿಂದ ಬೆಳೆದು, ಕ್ರಮೇಣ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸಂಶೋಧನಾ ಸಂಸ್ಥೆಗಳು ಜಂಟಿ ಸಂಶೋಧನಾ ಉಪಕ್ರಮಗಳಿಗೆ, ಉತ್ತಮ ಬೀಜ ಪ್ರಭೇದಗಳ ಪ್ರವೇಶಕ್ಕೆ, ರೋಗ ನಿಯಂತ್ರಣಕ್ಕಾಗಿ ಪರಿಸರ ಆಯ್ಕೆಗಳು ಮತ್ತು NGO-GO ಸಹಯೋಗಗಳಿಗೆ ಕಾರಣವಾಯಿತು. AMEF ನಗರ ಕೃಷಿ ಮತ್ತು ಕೃಷಿ ಪರಿಸರ ವಿಜ್ಞಾನದ ಜ್ಞಾನ ವಿನಿಮಯದಂತಹ ಇತರ ಕಾರ್ಯಕ್ರಮಗಳಲ್ಲಿ ಬಹು ಪಾಲುದಾರರ ಜ್ಞಾನ ವಿನಿಮಯ ಪ್ರಕ್ರಿಯೆಗಳನ್ನು ಸುಗಮಗೊಳಿಸಿದೆ.

FFS (ರೈತ ಕ್ಷೇತ್ರ ಶಾಲೆಗಳು) AMEF ಕೃಷಿ ಪರಿಸರ ಶಿಕ್ಷಣ ಪ್ರಕ್ರಿಯೆಗೆ ನೀಡಿದ ಅತ್ಯಂತ ಮಹತ್ವದ ಕೊಡುಗೆಯಾಗಿದೆ. ಈ ಸುದೀರ್ಘ ಕಲಿಕಾ ಪ್ರಕ್ರಿಯೆಯಲ್ಲಿ, 20-30 ರೈತರು ಪ್ರತಿ ಹದಿನೈದು ದಿನಗಳಿಗೊಮ್ಮೆ ಭೇಟಿಯಾಗುತ್ತಾರೆ. ಒಟ್ಟಾಗಿ ಕೃಷಿ ಪರಿಸರ ವ್ಯವಸ್ಥೆಗಳನ್ನು ವೀಕ್ಷಿಸುತ್ತಾರೆ, ವಿಶ್ಲೇಷಿಸುತ್ತಾರೆ ಮತ್ತು ಮಣ್ಣು, ನೀರು ಮತ್ತು ಬೆಳೆ ನಿರ್ವಹಣೆಯ ಬಗ್ಗೆ ‘ನಿರ್ಧಾರಗಳನ್ನು’ ಕೈಗೊಳ್ಳುತ್ತಾರೆ. ಶಿಕ್ಷಣಶಾಸ್ತ್ರವು ಅವರನ್ನು ʼಸತ್ಯʼವನ್ನು ಅರಿಯಲು ಮತ್ತು ಅನುಸರಿಸುತ್ತಿರುವ ಪದ್ಧತಿಗಳ ಹಿಂದಿನ ʼವಿಜ್ಞಾನʼವನ್ನು ಅರ್ಥಮಾಡಿಕೊಳ್ಳುವಂತೆ ಮಾಡುತ್ತದೆ. ಅಧ್ಯಯನ, ಆಟ, ಮಾದರಿ ಈ ರೀತಿಯ ವಿನೂತನ ಕಲಿಕಾ ಪ್ರಕ್ರಿಯೆಗಳ ಮೂಲಕ ಪರಿಕಲ್ಪನೆಗಳನ್ನು ಸ್ಪಷ್ಟವಾಗಿ ತಿಳಿಯುವಂತೆ ಮಾಡುತ್ತದೆ. ಉದಾಹರಣೆಗೆ, ʼಕೀಟ ಸಂಗ್ರಹಾಲಯಗಳುʼ ಕೀಟಗಳು ಮತ್ತು ಪರಭಕ್ಷಕಗಳ ನಡವಳಿಕೆಯನ್ನು ಗಮನಿಸಲು ನೆರವು ನೀಡುತ್ತದೆ. ರೈತರು ತಮ್ಮ ಕಲಿಕೆಯನ್ನು ಇತರ ರೈತರೊಂದಿಗೆ ಗ್ರಾಮ/ಬ್ಲಾಕ್ ಮಟ್ಟದಲ್ಲಿ ಆಯೋಜಿಸುವ ಕ್ಷೇತ್ರ ದಿನಗಳಲ್ಲಿ ಹಂಚಿಕೊಳ್ಳುವ ಮೂಲಕ ಸೂಕ್ತವಾದ ಪರ್ಯಾಯಗಳ ಕುರಿತು ತಿಳಿದುಕೊಳ್ಳುತ್ತಾರೆ. ಸುಗಮಕಾರರು ʼಬೋಧನೆʼ ಮತ್ತು ʼಮಾರ್ಗದರ್ಶನʼಕ್ಕೆ ಬದಲಾಗಿ ಅಗತ್ಯವಾದ ಕಲಿಕಾ ವಾತಾವರಣವನ್ನು ನಿರ್ಮಿಸುತ್ತಾರೆ.

ತರಬೇತಿ ಪಡೆದ ಕೃಷಿ ವೃತ್ತಿಪರರನ್ನು ಸಿದ್ಧಗೊಳಿಸುವುದು ದೊಡ್ಡ ಸವಾಲಾಗಿದೆ. ಯುವ ಕೃಷಿ ವೃತ್ತಿಪರರ ಹೊಸ ವರ್ಗವನ್ನು ರೂಪಿಸುವ ಅಗತ್ಯವನ್ನು ಮನಗಂಡು, AME ಆಯ್ದ ಯುವ ಪದವೀಧರರಿಗೆ ಕೃಷಿ ಮತ್ತು ಭಾಗವಹಿಸುವ ಕಲಿಕಾ ಪ್ರಕ್ರಿಯೆಗಳ ಕುರಿತು 9 ತಿಂಗಳ ಸುದೀರ್ಘ ಸುಸ್ಥಿರ ಕೃಷಿ ಫೆಲೋಶಿಪ್ ಕಾರ್ಯಕ್ರಮವನ್ನು ಆಯೋಜಿಸುವ ಸಾಹಸಕ್ಕೆ ಮುಂದಾಯಿತು. ಆದರೆ ದಾನಿಗಳ ಬೆಂಬಲದ ಕೊರತೆಯಿಂದಾಗಿ ಕಾರ್ಯಕ್ರಮವನ್ನು ಮುಂದುವರಿಸಲಾಗಲಿಲ್ಲ. ಆದರೂ, 15 ದಿನಗಳ TOT ಗಳ ಮೂಲಕ ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡ ಸ್ಥಳೀಯ ಯುವರೈತರಿಗೆ ವ್ಯವಸ್ಥಿತವಾಗಿ ತರಬೇತಿ ನೀಡಲಾಯಿತು. ಅವರು ಪರಿಸರ ಕೃಷಿಕ್ಷೇತ್ರದ ಹಾದಿಯನ್ನು ಬೆಳಗುವ ದೀವಟಿಗೆಯಂತಾದರು.

ಕಲಿಕಾ ಪ್ರಕ್ರಿಯೆಗಳ ಪ್ರತಿಫಲನಗಳು

ಎರಡು ದಶಕಕ್ಕಿಂತ ಹೆಚ್ಚು ಕಾಲದಿಂದ AMEFನೊಂದಿಗಿನ ಒಡನಾಟದಲ್ಲಿ ಇದ್ದೇನೆ. ಕುಟುಂಬ ಕೃಷಿಯ ಅಂತರರಾಷ್ಟ್ರೀಯ ವರ್ಷದಲ್ಲಿ ಇವು ನನ್ನ ಅನುಭವದ ಪ್ರತಿಫಲನಗಳು.

ಮೊದಲನೆಯದಾಗಿ, ಕೃಷಿಪರಿಸರ ಶಿಕ್ಷಣವು ಹಲವು ವಾಸ್ತವಗಳನ್ನು ಗುರುತಿಸಿಕೊಳ್ಳಬೇಕಿದೆ – ʼದೊಡ್ಡದುʼ ಎನ್ನುವುದು ವಾಸ್ತವ ಪರಿಸ್ಥಿತಿಗಳು – ಪರಿಸರವ್ಯವಸ್ಥೆಗಳು ಜಾಗತಿಕ, ಪರಸ್ಪರ ಸಂಬಂಧ ಹೊಂದಿದೆ, ಸ್ವತಂತ್ರವಾಗಿದೆ. ಉದಾಹರಣೆಗೆ, ಹವಾಮಾನ ಬದಲಾವಣೆಗಳು ಜಾಗತಿಕವಾಗಿ ಆದರೂ ವಿಭಿನ್ನವಾಗಿ ಪ್ರಭಾವ ಬೀರುತ್ತವೆ. ಅಕ್ಕಪಕ್ಕದಲ್ಲಿರುವ ಎರಡು ಹೊಲಗಳು ಒಂದೇ ರೀತಿ ಇರುವುದಿಲ್ಲ. ಸಾವಯವ ರೈತರ ದೀರ್ಘಾವಧಿ ಶ್ರಮವು ಮಣ್ಣಿನ ಗುಣಮಟ್ಟವನ್ನು ಸುಧಾರಿಸಿ ಅದ್ಭುತ ಫಲಿತಾಂಶಗಳನ್ನು ನೀಡುತ್ತದೆ. ಪಕ್ಕದ ಹೊಲದಲ್ಲಿ ಹಾಳಾದ ಮಣ್ಣಿನ ಕಾರಣದಿಂದ ಫಸಲು ಕೈಕೊಡುತ್ತದೆ.

ಸ್ಥಳೀಯ ಸಮುದಾಯದ ಆವಿಷ್ಕಾರಗಳಿಂದ ಪುಷ್ಟೀಕರಿಸಲ್ಪಟ್ಟ ಸಂದರ್ಭದ ನಿರ್ದಿಷ್ಟ ನೈಜತೆಗಳು ಮತ್ತು ಸಂಕೀರ್ಣತೆಗಳನ್ನು ಗುರುತಿಸುವುದರ ಮೇಲೆ ಕೃಷಿ ಪರಿಸರ ಶಿಕ್ಷಣವನ್ನು ನಿರ್ಮಿಸಲಾಗಿದೆ. ಕೃಷಿ ಪರಿಸರ ಶಿಕ್ಷಣವು ಸಮುದಾಯಗಳಿಂದ ಕಲಿಯುವಿಕೆ ಮತ್ತು ‘ಪರಸ್ಪರ ಕಲಿಯುವಿಕೆʼʼಮಹತ್ವವನ್ನು ಗುರುತಿಸಬೇಕು.

ಮೂಲಭೂತವಾಗಿ, ಕೃಷಿ ಪರಿಸರ ಶಿಕ್ಷಣವು ಭಾಗವಹಿಸುವಿಕೆ, ಪರಸ್ಪರ ಗೌರವ ಮತ್ತು ಸಹಾನುಭೂತಿಯ ಮೂಲ ತತ್ವಗಳು/ಮೌಲ್ಯಗಳಲ್ಲಿ ಬಲವಾಗಿ ಬೇರೂರಿದೆ. ರೈತರ ಭಾಗವಹಿಸುವಿಕೆ ಎಂದರೆ ರೈತರು ಸಮಸ್ಯೆ ಗುರುತಿಸುವಿಕೆ, ಪ್ರಯೋಗ ವಿನ್ಯಾಸ, ಮೌಲ್ಯಮಾಪನ, ಸ್ವೀಕಾರ ಅಥವಾ ನಿರಾಕರಣೆಯಲ್ಲಿ ತೊಡಗಿಸಿಕೊಂಡಿರುತ್ತಾರೆ. ಪರಸ್ಪರ ಗೌರವ ಎಂದರೆ ಅಗತ್ಯಗಳು, ಆದ್ಯತೆಗಳು ಮತ್ತು ಸವಾಲುಗಳ ವಿಷಯದಲ್ಲಿ ಕೃಷಿ ಸಮುದಾಯ ಮತ್ತು ಎನ್‌ಜಿಒಗಳ ಸಂದರ್ಭೋಚಿತ ಜ್ಞಾನವನ್ನು ಗೌರವಿಸುವುದು. ಆಯ್ಕೆಗಳನ್ನು ಸುಮ್ಮನೆ ಸ್ವೀಕರಿಸುವ ಬದಲು ಜ್ಞಾನದ ಪೂರೈಕೆದಾರರು/ಜ್ಞಾನದ ಸಹ-ಉತ್ಪಾದಕರು ಎಂದು ಗುರುತಿಸುವುದು. ಸಹಾನುಭೂತಿ ಎಂದರೆ ರೈತರು ಎದುರಿಸುತ್ತಿರುವ ವೈವಿಧ್ಯಮಯ ʼವಾಸ್ತವʼಗಳೊಂದಿಗೆ ಸಂಬಂಧ ಹೊಂದಿರುವುದು ಮತ್ತು  ವೈವಿಧ್ಯತೆಗಳನ್ನು ಗುರುತಿಸುವುದು. ಭೂಮೇಲ್ಮೈ, ಹವಾಮಾನ ವೈಪರಿತ್ಯಗಳು, ಮಾರುಕಟ್ಟೆಗಳು, ಲಿಂಗಾಧಾರಿತ ಪಾತ್ರಗಳು, ವಲಸೆಯ ಮಾದರಿಗಳು ಇತ್ಯಾದಿಗಳನ್ನು ಗುರುತಿಸಿ ಮಧ್ಯಸ್ಥಿಕೆಗಳಿಗಾಗಿ ಅದಕ್ಕೆ ತಕ್ಕಂತಹ ತಂತ್ರಜ್ಞಾನಗಳು ಅಥವ ಸಾಮಾಜಿಕ ಪ್ರಕ್ರಿಯೆಗಳನ್ನು ರೂಪಿಸುವುದು.

ಪರಿಣಾಮಕಾರಿ ಕೃಷಿಪರಿಸರ ಶಿಕ್ಷಣವನ್ನು ಈ ಮೂರು ಕಂಬಗಳ ಆಧಾರದ ಮೇಲೆ ನಿರ್ಮಿಸಬೇಕಿದೆ

  • ಶಿಕ್ಷಣಶಾಸ್ತ್ರ – ಸಂದರ್ಭ ಮತ್ತು ನಿರ್ದಿಷ್ಟ ಗುಂಪು ಆಧಾರಿತ
  • ಜ್ಞಾನ ವಿನಿಮಯ ಪರಸ್ಪರ ಗೌರವ ಆಧಾರಿತ
  • ಬದಲಿ ಕೃಷಿಪರಿಸರ ವಿಜ್ಞಾನ ಸಂಶೋಧನೆ

ಶಿಕ್ಷಣಶಾಸ್ತ್ರವು ಇವುಗಳನ್ನು ಗುರುತಿಸಬೇಕು ಅ) ಕೃಷಿ ಶಿಕ್ಷಣವು ಉದ್ಯಮಿಗಳಾದ ಹಾಗೂ ಹೊಸತನಕ್ಕಾಗಿ ಹಾತೊರೆವ ವಯಸ್ಕ ಕಲಿಕಾರ್ಥಿಗಳಾದ ರೈತರೊಂದಿಗೆ ವ್ಯವಹರಿಸುವುದು ಆ) ರೈತ ಸಮುದಾಯವು ಏಕರೂಪವಾಗಿಲ್ಲ – ಸಂಪನ್ಮೂಲಗಳು, ಸಾಮರ್ಥ್ಯಗಳು ಇತ್ಯಾದಿಗಳೊಂದಿಗೆ ವೈವಿಧ್ಯಮಯವಾಗಿದೆ. ಇ) ಕೃಷಿ ಪರಿಸ್ಥಿತಿ ಮತ್ತು ಸವಾಲುಗಳು ಹಲವು – ಹವಾಮಾನ, ಮಾರುಕಟ್ಟೆಗಳು, ಹಣಕಾಸು, ಜ್ಞಾನ, ಆತ್ಮಾಭಿಮಾನದ ಕೊರತೆ. ಒಂದೇ ಪಠ್ಯಕ್ರಮ ಒಂದೇ ಶಿಕ್ಷಣಶಾಸ್ತ್ರ ಸಾಕಾಗುವುದಿಲ್ಲ.

ಪ್ರಾಯೋಗಿಕ ಕಲಿಕೆ, ಮುಖ್ಯವಾಗಿ ಅನುಭವಾತ್ಮಕ ಕಲಿಕೆಯ ವಿಧಾನಗಳ ಆಧಾರದ ಮೇಲೆ ವಯಸ್ಕರ ಕಲಿಕೆಯ ತತ್ವಗಳ ಸುತ್ತ ಶಿಕ್ಷಣಶಾಸ್ತ್ರವನ್ನು ನಿರ್ಮಿಸಬೇಕು. ವರ್ಧಿತ ಕೌಶಲ್ಯಗಳ ಹೊರತಾಗಿ ಬಾಳಿಕೆ ಬರುವ ಮತ್ತು ಬದಲಾದ ನಡವಳಿಕೆಗಳಿಗಾಗಿ, ಕಲಿಕೆಯ ಪ್ರಕ್ರಿಯೆಗಳು ಪ್ರಾಯೋಗಿಕವಾಗಿರಬೇಕು. ಹೆಚ್ಚುಮಂದಿ, ಯುವರೈತರು ಕಲಿಕಾರ್ಥಿಗಳಾಗಿರುವುದು ಎಲ್ಲರಿಗೂ ತಿಳಿದಿದೆ. ಯುವಕರಲ್ಲಿ ಆಸಕ್ತಿ ಹುಟ್ಟಿಸುವಂತಾಗಲು ಶಿಕ್ಷಣಶಾಸ್ತ್ರ ಮತ್ತು ವಿಷಯವು ಉತ್ತೇಜಕವಾಗಿದ್ದು ಮತ್ತು ಸೂಕ್ತವಾಗಿರಬೇಕು. ಆರ್ಥಿಕ ಆದಾಯ, ಸಾಮಾಜಿಕ ಮನ್ನಣೆ – ಎರಡೂ ತತ್‌ ತಕ್ಷಣ ಹಾಗೂ ದೀರ್ಘಾವಧಿಯಲ್ಲೂ ಪ್ರತಿಫಲ ನೀಡುವಂತಹದ್ದಾಗಿದೆ.

ಜ್ಞಾನ ವಿನಿಮಯ: ಅನೇಕ ಜ್ಞಾನ ವ್ಯವಸ್ಥೆಗಳು ಅಸ್ತಿತ್ವದಲ್ಲಿವೆ ಎನ್ನುವುದನ್ನು ಗುರುತಿಸಿ, ಜ್ಞಾನ ವಿನಿಮಯಕ್ಕೆ ಅನುವು ಮಾಡಿಕೊಡುವ ವಾತಾವರಣವನ್ನು ಸೃಷ್ಟಿಸುವ ಅಗತ್ಯವಿದೆ. ಉದಾಹರಣೆಗೆ, ಸಿರಿಧಾನ್ಯಗಳ ತಳಿಗಳ ಕಾರ್ಯಕ್ರಮವೊಂದರಲ್ಲಿ, ವೈಜ್ಞಾನಿಕ ಮೌಲ್ಯಮಾಪನವು ಪೋಷಕಾಂಶದ ವಿಷಯವನ್ನು ಎತ್ತಿ ತೋರಿಸಿದರೆ, ರೈತರ ಮೌಲ್ಯಮಾಪನವು ಸೂಕ್ತ ಮೇವು, ಪೌಷ್ಟಿಕಾಂಶ, ರುಚಿ, ಪಾಕಪದ್ಧತಿ, ಶೆಲ್ಫ್ ಲೈಫ್‌ (ಬಡು ಅವಧಿ) ಇತ್ಯಾದಿಗಳನ್ನು ಆಧರಿಸಿದೆ. ಕೆಲವೊಮ್ಮೆ ಪರಿಸರ ಸ್ನೇಹಿತ ಆಯ್ಕೆಯೂ ಲಿಂಗ ಅನುಚಿತ ಅಥವ ಸಾಂಸ್ಕೃತಿಕವಾಗಿ ಸ್ವೀಕಾರಾರ್ಹವಲ್ಲವಾಗಿರಬಹುದು.

ಪರ್ಯಾಯ ಕೃಷಿ ಪರಿಸರ ಸಂಶೋಧನೆ: FAO ಮತ್ತು ಜಾಗತಿಕ ಸಂಶೋಧನಾ ಸಂಸ್ಥೆಗಳು, NGOಗಳು ಮತ್ತು ರೈತ ಸಂಘಟನೆಗಳನ್ನು ಒಳಗೊಂಡ IYFF ಸಮಯದಲ್ಲಿ ಫ್ರಾನ್ಸ್‌ನ ಮಾಂಟೆಪೆಲ್ಲಿಯರ್‌ನಲ್ಲಿ 2014 ರಲ್ಲಿ ಅಂತರರಾಷ್ಟ್ರೀಯ ಸಮ್ಮೇಳನವನ್ನು ಆಯೋಜಿಸಲಾಗಿತ್ತು. ಈ ಕೆಳಗಿನ ದೃಷ್ಟಿಕೋನವನ್ನು ಸಭೆಯಲ್ಲಿ ಮಂಡಿಸಲಾದ ವಿಷಯಗಳ ಆಧಾರದ ಮೇಲೆ ಮತ್ತು ಸುಗಮಕಾರನಾಗಿ ನಿರ್ವಹಿಸಿದ ಮಧ್ಯಸ್ಥಗಾರ ಗುಂಪಿನ ಚರ್ಚೆಯ ಆಧಾರದ ಮೇಲೆ ಪ್ರಸ್ತುತಪಡಿಸಲಾಗಿದೆ. ಸಂದರ್ಭ ಮತ್ತು ಕ್ಷೇತ್ರ ನಿರ್ದಿಷ್ಟ ಸಂಶೋಧನೆಯ ಪ್ರಾಮುಖ್ಯತೆಯನ್ನು ಗುರುತಿಸುವುದು; ಸಮುದಾಯಗಳ ಭಿನ್ನ ಅಗತ್ಯಗಳು ಮತ್ತು ಸಾಮರ್ಥ್ಯಗಳನ್ನು ಅರ್ಥಮಾಡಿಕೊಳ್ಳುವುದು; ಸಂಪನ್ಮೂಲ ಲಭ್ಯತೆ, ಅರ್ಹತೆ ಮತ್ತು ಜ್ಞಾನ ಸೇರಿದಂತೆ ಸಂಕೀರ್ಣ ಸಾಮಾಜಿಕ ಸಮಸ್ಯೆಗಳನ್ನು ಗುರುತಿಸುವುದು; ಪರ್ಯಾಯ ಜ್ಞಾನ ವ್ಯವಸ್ಥೆಗಳ ಕಡೆಗೆ ಪರಸ್ಪರ ಗೌರವದ ಆಧಾರದ ಮೇಲೆ ರೈತ ಕೇಂದ್ರಿತವಾದ ಭಾಗವಹಿಸುವಿಕೆಯನ್ನು ಒಳಗೊಂಡ ಸಂಶೋಧನೆಯ ಅವಶ್ಯಕತೆ; ಕ್ಷೇತ್ರದ ವಿದ್ಯಮಾನಗಳನ್ನು ʼಸ್ಥೀರಿಕರಿಸುವʼ ಸಂಶೋಧನೆ; ರೇಖಾತ್ಮಕ ಮಾದರಿಗಳಿಗಿಂತ ಆವರ್ತಕ ಮತ್ತು ವ್ಯವಸ್ಥಿತ ಸಂಶೋಧನೆಗಳಿಗೆ ಒತ್ತು; ಸಂಶೋಧನೆಯು ರೈತ ಸಂಘಟನೆಗಳು ಮತ್ತು ನಾಗರಿಕ ಸಮಾಜವನ್ನೊಳಗೊಂಡು ಕೆಲಸ ಮಾಡುವುದು. ಇವುಗಳಲ್ಲಿ ಕೆಲವನ್ನಾದರೂ ಮುಖ್ಯವಾಗಿ ಗಮನಿಸಬೇಕು. ಸಂಶೋಧನೆಗಳು ಹೆಚ್ಚು ಹೆಚ್ಚು ರೈತಕೇಂದ್ರಿತವಾಗಬೇಕು. ಔಪಚಾರಿಕ ಸಂಶೋಧನೆಗಳು ಕ್ಷೇತ್ರಕ್ಕೆ ಸಂಬಂಧಿಸಿದ ಆವಿಷ್ಕಾರಗಳನ್ನು ಪ್ರೋತ್ಸಾಹಿಸಬೇಕು. ಜನಪ್ರಿಯ ಸ್ಥಳೀಯ ಬದಲಿ ವ್ಯವಸ್ಥೆಗಳನ್ನು ಗುರುತಿಸಿ ಪರಿಶೀಲಿಸಬೇಕು. ಅಭಿವೃದ್ಧಿಗಾಗಿ ನಾಗರಿಕ ಸಮಾಜ ಮತ್ತು ರೈತ ಸಂಘಟನೆಗಳು ಪರಸ್ಪರರನ್ನು ಒಳಗೊಂಡ ಪಾಲುದಾರಿಕೆಯನ್ನು ಬೆಳೆಸುವುದು ಅವಶ್ಯಕ.

ಕೃಷಿಪರಿಸರ ಶಿಕ್ಷಣಕ್ಕೆ ಮುಖ್ಯವಾದ ಇನ್ನಿತರ ಅಂಶಗಳು ಹೀಗಿವೆ ಅ) ಪ್ರಯೋಗಾತ್ಮಕ ಕಲಿಕಾ ಪ್ರಕ್ರಿಯೆಯ ಜೊತೆಗೆ ಬೋಧಕರು ತಾಂತ್ರಿಕ ಆಯ್ಕೆಗಳನ್ನು ತಿಳಿದಿರಬೇಕು; ಆ) ಸ್ಥಳೀಯ ಅನುಭವಗಳನ್ನು ವ್ಯವಸ್ಥಿತವಾಗಿ ದಾಖಲೀಕರಣ ಮಾಡಬೇಕು; ಇ) ವಿವಿಧ ಪುರಾವೆಗಳು, ಸಮಯ – ಸ್ಥಳ – ವ್ಯಕ್ತಿ ಆಧಾರಿತ ದತ್ತಾಂಶಗಳು, ಪ್ರತಿಕ್ರಿಯೆಗಳು ಮತ್ತು ಅದರ ಪರಿಣಾಮದ ಮೌಲ್ಯಮಾಪನವನ್ನು ವ್ಯವಸ್ಥಿತವಾಗಿ ಕ್ರೋಡೀಕರಿಸಬೇಕು.

ಕೆ ವಿ ಎಸ್‌ ಪ್ರಸಾದ್


 ಪರಾಮರ್ಶನ

K V S Prasad. A perspective on the working of multistakeholder processes. 2016, LEISA India, Vol 18.4, P.10-14


K V S Prasad

Consultant Editor, LEISA India

Email: prasadkvs@amefound.org

ಆಂಗ್ಲ ಮೂಲ : ಲೀಸಾ ಇಂಡಿಯಾ; ಸಂಪುಟ :೨೪; ಸಂಚಿಕೆ :೨; ಜೂನ್ ೨೦೨೨

Recent Posts

ಕೃಷಿಯಲ್ಲಿ ನೀರಿನ ಸಮರ್ಥ ಬಳಕೆಗಾಗಿ ಕಾಲುವೆ ಯಾಂತ್ರೀಕರಣ

ಕೃಷಿಯಲ್ಲಿ ನೀರಿನ ಸಮರ್ಥ ಬಳಕೆಗಾಗಿ ಕಾಲುವೆ ಯಾಂತ್ರೀಕರಣ

ನಮ್ಮ ನೀರಾವರಿ ವ್ಯವಸ್ಥೆಯನ್ನು 21ನೇ ಶತಮಾನದ ಬೇಡಿಕೆಗಳಿಗೆ ಹೊಂದುವಂತೆ ಮಾಡುವುದು ನಮ್ಮ ಮುಂದಿರುವ ನಿಜವಾದ ಸವಾಲಾಗಿದೆ. ತಂತ್ರಜ್ಞಾನವೇ...