ಭಾಸ್ಕರ್ ಸಾವೆ ನೈಸರ್ಗಿಕ ಕೃಷಿಯ ಗಾಂಧಿ


ದಿವಂಗತ ಭಾಸ್ಕರ್‌ ಸಾವೆಯವರು ʼನೈಸರ್ಗಿಕ ಕೃಷಿಯ ಗಾಂಧಿʼ ಎಂದು ಹೆಸರಾದವರು. ಇವರು ಮೂರು ತಲೆಮಾರಿನ ಸಾವಯವ ಕೃಷಿಕರಿಗೆ ಸ್ಪೂರ್ತಿಯಾಗಿದ್ದು ಮಾರ್ಗದರ್ಶನ ಮಾಡಿದ್ದಾರೆ. ನಿಸರ್ಗದೊಂದಿಗಿನ ಸಾಂಕೇತಿಕ ಸಂಬಂಧವನ್ನು ಅರ್ಥಮಾಡಿಕೊಂಡಿದ್ದರು.


ದಿವಂಗತ ಭಾಸ್ಕರ್‌ ಸಾವೆಯವರು ʼನೈಸರ್ಗಿಕ ಕೃಷಿಯ ಗಾಂಧಿʼ ಎಂದು ಹೆಸರಾದವರು.ಅವರ ಕೃಷಿ ಹಾಗೂ ವಿಧಾನಗಳು ಇದೇ ಅರಿವಿನಿಂದ ಮೂಡಿಬಂದಿದ್ದವು. ಆಸಕ್ತರೊಂದಿಗೆ ಇದನ್ನು ಬಹಳ ಉತ್ಸಾಹದಿಂದ ಮುಕ್ತವಾಗಿ ಹಂಚಿಕೊಳ್ಳುತ್ತಿದ್ದರು. ಇಂಟರ್‌ನ್ಯಾಷನಲ್‌ ಫೆಡರೇಶನ್‌ ಆಫ್‌ ಆರ್ಗಾನಿಕ್‌ ಅಗ್ರಿಕಲ್ಚರ್‌ ಮೂವ್‌ಮೆಂಟ್‌ – ವಿಶ್ವದಾದ್ಯಂತದ ಸಾವಯವ ಕೃಷಿಕರು ಮತ್ತು ಚಳುವಳಿಗಳ ಏಕತ್ರ ಸಂಸ್ಥೆಯವರು ೨೦೧೦ರಲ್ಲಿ ʼಜೀವಮಾನದ ಸಾಧನೆʼಯ ಪುರಸ್ಕಾರವನ್ನು ಸಾವೆಯವರಿಗೆ ನೀಡಿ ಸತ್ಕರಿಸಿದರು.

ಗುಜರಾತಿನ ವಲ್ಸಾದ್‌ ಜಿಲ್ಲೆಯ ದೆಹ್ರಿ ಹಳ್ಳಿಯ ರಾಷ್ಟ್ರೀಯ ಹೆದ್ದಾರಿ ಸಮೀಪ ಭಾಸ್ಕರ್‌ ಸಾವೆಯವರ ೧೪ ಎಕರೆ ಹಣ್ಣಿನ ತೋಟ ಕಲ್ಪವೃಕ್ಷ ಇದೆ. ಸುಮಾರು ಹತ್ತು ಎಕರೆಯಲ್ಲಿ ಮುಖ್ಯವಾಗಿ ತೆಂಗು ಮತ್ತು ಸಪೋಟದೊಂದಿಗೆ ಇನ್ನು ಕೆಲವು ತಳಿಗಳನ್ನು ಬೆಳೆಸಲಾಗಿದೆ. ಎರಡು ಎಕರೆಯಲ್ಲಿ ಕಾಲೋಚಿತ ಬೆಳೆಗಳನ್ನು ಸಾವಯವ ರೀತಿಯಲ್ಲಿ ಕೃಷಿ ಮಾಡಲಾಗುತ್ತದೆ. ಮತ್ತೊಂದು ಕಡೆ ನರ್ಸರಿಯಿದೆ. ಇದರಲ್ಲಿ ಬೆಳೆಸಲಾಗುವ ತೆಂಗು ಸಸಿಗಳಿಗೆ ಹೆಚ್ಚಿನ ಬೇಡಿಕೆಯಿದೆ. ಈ ತೋಟವು ಒಟ್ಟಾರೆಯಾಗಿ ರಾಸಾಯನಿಕಗಳನ್ನು ಬಳಸುವ ಉಳಿದ ತೋಟಗಳಿಗಿಂತ ಉತ್ತಮವಾಗಿದೆ. ಇಲ್ಲಿನ ಇಳುವರಿಯ ಪ್ರಮಾಣ, ಪೋಷಕಾಂಶದ ಗುಣಮಟ್ಟ, ರುಚಿ, ಜೈವಿಕ ವೈವಿಧ್ಯತೆ, ಪರಿಸರ ಸುಸ್ಥಿರತೆ, ಜಲಸಂರಕ್ಷಣೆ, ಆರ್ಥಿಕ ಲಾಭ ಇವೆಲ್ಲವೂ ಉತ್ತಮವಾಗಿದ್ದು ಇದಕ್ಕಾಗಿ ತಗಲುವ ವೆಚ್ಚ (ಮುಖ್ಯವಾಗಿ ಕೊಯ್ಲಿಗೆ ಕೂಲಿ) ಬಹಳ ಕಡಿಮೆ. ಹೊರ ಸುರಿಯುವಿಕೆಗಳಂತೂ ಇಲ್ಲವೇ ಇಲ್ಲ.‌

ಚಿತ್ರ : ತೆಂಗು ಸಸಿಗಳನ್ನು ಕೀಳುತ್ತಿರುವ ಸಾವೆ

 ಕಲ್ಪವೃಕ್ಷದ ನೈಸರ್ಗಿಕ ಶ್ರೀಮಂತಿಕೆ

ಭಾಸ್ಕರ್‌ ಸಾವೆಯವರ ತೋಟದೊಳಗೆ ಇಪ್ಪತ್ತು ಹೆಜ್ಜೆ ನಡೆದರೆ “ಸಹಕಾರ ನಿರ್ಸಗದ ಮೂಲಭೂತ ನಿಯಮ” ಎನ್ನುವ ಬೋರ್ಡು ಕಣ್ಣಿಗೆ ಬೀಳುತ್ತದೆ. ಇದು ಸಾವಯವ ಕೃಷಿಯ ತತ್ವಶಾಸ್ತ್ರ ಹಾಗೂ ಅನುಸರಣೆಯ ಸರಳ, ಪರಿಣಾಮಕಾರಿ ಪರಿಚಯ. ತೋಟದೊಳಗೆ ಈ ರೀತಿಯಲ್ಲಿ ಹಲವಾರು ಗಮನಸೆಳೆಯುವ, ಚಿಂತನೆ ಹಚ್ಚುವಂತಹ ಬೋರ್ಡುಗಳಿವೆ. ಈ ಬರಹಗಳು ನಿಸರ್ಗ, ಕೃಷಿ, ಆರೋಗ್ಯ, ಸಂಸ್ಕೃತಿ, ಆಧ್ಯಾತ್ಮ ಮೊದಲಾದವುಗಳ ಸಾರರೂಪವಾಗಿದ್ದು ಭಾಸ್ಕರ ಅವರು ಹಲವು ವರ್ಷಗಳು ಕೃಷಿ ಅನುಭವದ ಫಲವಾಗಿದೆ.

ರಾಸಾಯನಿಕಗಳನ್ನು ಬಳಸುವ ತೋಟಗಳಿಗಿಂತ ಕಲ್ಪವೃಕ್ಷದ ಇಳುವರಿಯು ಹೆಚ್ಚು. ಇದನ್ನು ಎಲ್ಲ ಸಮಯದಲ್ಲೂ ಕಾಣಬಹುದಾಗಿದೆ. ಗಿಡವೊಂದಕ್ಕೆ ಬಿಡುವ ತೆಂಗಿನಕಾಯಿಗಳ ಸಂಖ್ಯೆಯು ದೇಶದಲ್ಲಿ ಅತಿಹೆಚ್ಚು. ಕೆಲವು ಮರಗಳು ವರ್ಷವೊಂದಕ್ಕೆ ೪೦೦ ತೆಂಗಿನಕಾಯಿಗಳನ್ನು ಬಿಡುತ್ತದೆ. ಇಲ್ಲಿನ ಮರಗಳ ಸರಾಸರಿ ಕಾಯಿ ಪ್ರಮಾಣ ಗಿಡವೊಂದಕ್ಕೆ ೩೫೦. ೪೫ ವರ್ಷಗಳ ಹಿಂದೆ ನೆಟ್ಟ ಸಪೋಟ ಗಿಡಗಳ ಇಳುವರಿ ಕೂಡ ಅಧಿಕವಾಗಿದೆ. ವರ್ಷವೊಂದಕ್ಕೆ ಈ ಗಿಡಗಳು ೩೦೦ ಕೆಜಿಯಷ್ಟು ರುಚಿಯಾದ ಹಣ್ಣನ್ನು ಬಿಡುತ್ತದೆ.

ಇದರೊಂದಿಗೆ ಹಲವಾರು ಬಾಳೆ, ಪರಂಗಿ, ಅಡಿಕೆ, ಕೆಲವು ಖರ್ಜೂರ, ನುಗ್ಗೆ, ಮಾವು, ಹಲಸು, ತಾಟಿ ನಿಂಗು, ಸೀತಾಫಲ, ನೇರಳೆ, ಸೀಬೆ, ದಾಳಿಂಬೆ, ನಿಂಬೆ, ಚಕೋತ, ಇಪ್ಪೆ, ಹುಣಸೆ, ಬೇವು, ಔದುಂಬರ, ಕೆಲವು ಬಿದಿರು ಮತ್ತು ಕರಬೇವು, ತುಳಸಿಯಂತಹ ಗಿಡಗಳು ಹಾಗೂ ಮೆಣಸು, ವೀಳ್ಯೆದೆಲೆ, ಪ್ಯಾಶನ್‌ ಫ್ರೂಟ್‌ (ಜ್ಯೂಸ್‌ ಹಣ್ಣು)ನಂತಹ ಬಳ್ಳಿಗಳು ಇತ್ಯಾದಿಗಳಿವೆ.

ನವಾಬಿ ಕೋಲಂನಂತಹ ಉದ್ದವಾದ ರುಚಿಯಾದ ಹೆಚ್ಚು ಇಳುವರಿ ನೀಡುವ ದೇಸಿ ಭತ್ತದ ತಳಿ, ಹಲವು ರೀತಿಯ ಕಾಳುಗಳು, ಗೋಧಿ ಮತ್ತು ಕೆಲವು ತರಕಾರಿಗಳು, ಗಡ್ಡೆಗಳನ್ನು ಕಾಲೋಚಿತವಾಗಿ ಎರಡು ಎಕರೆ ಭೂಮಿಯಲ್ಲಿ ಆವರ್ತನ ರೀತಿಯಲ್ಲಿ ಬೆಳೆಯಲಾಗುತ್ತದೆ. ಇವೆಲ್ಲವೂ ಈ ಸ್ವ-ಸುಸ್ಥಿರ ಕೃಷಿಕನ ಕುಟುಂಬ ಹಾಗೂ ಅತಿಥಿಗಳ ಅವಶ್ಯಕತೆಯನ್ನು ಪೂರೈಸುತ್ತದೆ. ಹಲವು ಬಾರಿ ಅಕ್ಕಿಯ ಇಳುವರಿ ಹೆಚ್ಚಾದಾಗ ಆ ಅಕ್ಕಿಯನ್ನು ಇಷ್ಟಪಡುವ ಬಂಧುಗಳು ಇಲ್ಲವೇ ಸ್ನೇಹಿತರಿಗೆ ನೀಡಲಾಯಿತು.

ಭಾಸ್ಕರ ಸಾವೆಯವರ ತೋಟದಲ್ಲಿನ ವೈವಿಧ್ಯಮಯ ಗಿಡಗಳು ಪರಸ್ಪರ ಸೌಹಾರ್ದಯುತವಾಗಿ ದಟ್ಟ ಹಸಿರು ಸಮುದಾಯದಂತೆ ಒಟ್ಟಾಗಿ ಬದುಕುತ್ತಿವೆ. ಅವರ ತೋಟದಲ್ಲಿ ಸೂರ್ಯನ ಬಿಸಿಲಿಗೆ, ಗಾಳಿಗೆ ಇಲ್ಲವೇ ಮಳೆಗೆ ಒಡ್ಡಿಕೊಂಡಂತಹ ಒಂದಿಚು ಖಾಲಿ ನೆಲ ಕಾಣಸಿಗುವುದು ಅಪರೂಪ. ಸಪೋಟ ಮರಗಳ ನೆರಳಿನಡಿಯಲ್ಲಿ ನೆಲದ ತುಂಬ ಎಲೆಗಳ ಹಾಸಿದೆ. ಅವುಗಳ ನಡುವೆ ಅಲ್ಲಲ್ಲಿ ಕಳೆಗಿಡಗಳು ಸೂರ್ಯರಶ್ಮಿ ಬೀಳುವಲ್ಲಿ ತಲೆಯೆತ್ತಿವೆ.

ನೆಲದ ಮೇಲಿನ ಎಲೆಹಾಸು ಮಣ್ಣಿನ ತೇವಾಂಶವನ್ನು ಕಾಪಾಡುವಲ್ಲಿ ಮಹತ್ತರ ಪಾತ್ರವನ್ನು ವಹಿಸಿದೆ. ಕೃಷಿಯಲ್ಲಿ ಇದು ಬಹಳ ಮುಖ್ಯ ಎಂದು ಭಾಸ್ಕರ್‌ ಸಾವೆಯವರು ಹೇಳುತ್ತಾರೆ. “ಬೇಸಿಗೆಯಲ್ಲಿ ಈ ಗಿಡಗಳ ನೆರಳು ಅಥವ ಎಲೆಗಳ ಹೊದಿಕೆ ಮಣ್ಣನ್ನು ತಂಪಾಗಿಡುತ್ತದೆ. ಚಳಿಗಾಲದಲ್ಲಿ ಇದೇ ಹಾಸು ಬೆಳಗ್ಗೆ ಹೀರಿಕೊಂಡ ಬಿಸಿಲನ್ನು ಕಾಪಿಟ್ಟು ನೆಲಕ್ಕೆ ಬೆಚ್ಚನೆಯ ಹೊದಿಕೆಯಾಗುತ್ತದೆ. ಈ ದಟ್ಟ ಹಸಿರಿನ ತೋಟದ ನಡುವೆ ಉಷ್ಣಾಂಶ ಕಡಿಮೆಯಾದ್ದರಿಂದ ನೀರು ಆವಿಯಾಗುವುದು ಕಡಿಮೆ. ಹೀಗಾಗಿ ಗಿಡಗಳಿಗೆ ಹೆಚ್ಚಿನ ನೀರಿನ ಅಗತ್ಯವಿಲ್ಲ. ಹಲವು ಕೃಷಿ ಸ್ನೇಹಿ ಹುಳುಗಳು, ಸೂಕ್ಷ್ಮ ಜೀವಿಗಳು ಈ ಪರಿಸ್ಥಿತಿಯಲ್ಲಿ ಮಣ್ಣಿನೊಳಗೆ ಬದುಕುಳಿಯುತ್ತವೆ.”

ಹತ್ತು ಎಕರೆ ಹಣ್ಣಿನ ತೋಟದ ವಾರ್ಷಿಕ ಇಳುವರಿ ಸರಾಸರಿ ೧೫,೦೦೦ಕೆಜಿ! (ಕಳೆದ ೧೫-೨೦ ವರ್ಷಗಳಲ್ಲಿ ಈ ಪ್ರದೇಶದಲ್ಲಿ ಕೈಗಾರಿಕರಣದಿಂದ ಹೆಚ್ಚಿದ ಮಾಲಿನ್ಯದಿಂದಾಗಿ ಇಳುವರಿ ತಗ್ಗಿದೆ). ವಿಷಕಾರಿ ರಾಸಾಯನಿಕಗಳನ್ನು ಬಳಸಿ ಪಂಜಾಬ್‌, ಹರಿಯಾಣ ಹಾಗೂ ಭಾರತದ ಹಲವೆಡೆಗಳಲ್ಲಿ ಬೆಳೆಯುವ ಇದೇ ಪ್ರಮಾಣದ ಆಹಾರದ ಪೋಷಕಾಂಶಕ್ಕೆ ಹೋಲಿಸಿದಾಗ ಇಲ್ಲಿ ಬೆಳೆದ ಫಸಲು ಅತ್ಯುತ್ತಮ ಗುಣಮಟ್ಟದ್ದಾಗಿದೆ.

ನಿಸರ್ಗದ ಉಳುಮೆಗಾರರು ಮತ್ತು ಫಲವಂತಿಕೆಯ ನಿರ್ಮಾತೃಗಳು

ಶತಮಾನಗಳಷ್ಟು ಹಿಂದೆಯೇ ಚಾರ್ಲ್ಸ್‌ ಡಾರ್ವಿನ್‌ : ಎರೆಹುಳುವಿನಷ್ಟು ಬೇರೆ ಜೀವಿಗಳು ವಿಶ್ವದ ಇತಿಹಾಸದಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ಹೇಳಲಾಗುವುದಿಲ್ಲ ಎಂದ. “ತನ್ನ ಹೊಲದಲ್ಲಿ ಎರೆಹುಳುಗಳ ತಾವಾಗಿ ಹೆಚ್ಚಾಗುವುದಕ್ಕೆ ಬಿಡುವ ರೈತ ಸಮೃದ್ಧಿಯ ಹಾದಿಯಲ್ಲಿರುತ್ತಾನೆ” ಎಂದು ಭಾಸ್ಕರ್‌ ಸಾವೆ ಹೇಳುತ್ತಾರೆ. ಮಣ್ಣನ್ನು ಕೊರೆಯುವಂತಹ ಇರುವೆ ಮತ್ತಿತರ ಸೂಕ್ಷ್ಮಾಣು ಜೀವಿಗಳು ಕೂಡ ಮಣ್ಣಿನ ಫಲವಂತಿಕೆ ಹಾಗೂ ಗಿಡದ ಪೋಷಕಾಂಶಗಳನ್ನು ಕಾಪಾಡುವಲ್ಲಿ ಪಾತ್ರ ವಹಿಸುತ್ತದೆ. ಕಲ್ಪವೃಕ್ಷದಂತಹ ತೋಟದಲ್ಲಿ ಈ ರೀತಿಯ ಅಸಂಖ್ಯಾತ ಜೀವಿಗಳು ಅಡಿಅಡಿಗೂ ಇವೆ.

ಇದಕ್ಕೆ ತದ್ವಿರುದ್ಧವಾಗಿ ಆಧುನಿಕ ಕೃಷಿ ಪದ್ಧತಿಗಳು ಮಣ್ಣಿನ ಸಾವಯವ ಆರೋಗ್ಯವನ್ನು ಹಾಳುಗೆಡವಿದೆ. ಮಣ್ಣಿನ ಸಹಜ ಫಲವಂತಿಕೆಯನ್ನು ಹಾಳುಮಾಡಿ ನಾವಾಗಿಯೇ ಹೆಚ್ಚಿನ ಒಳಸುರಿಯುವಿಕೆ ಮತ್ತು ಅನಗತ್ಯ ಕೂಲಿಯ ಅಗತ್ಯಗಳನ್ನು ಸೃಷ್ಟಿಸಿಕೊಳ್ಳುತ್ತೇವೆ. “ಜೀವಂತ ಮಣ್ಣು ಎನ್ನುವುದು ಸಾವಯವ ಐಕ್ಯತೆ ಇದ್ದಂತೆ. ತನ್ನೊಳಗಿನ ಜೀವಜಾಲವನ್ನು ಆ ಮಣ್ಣು ಸುರಕ್ಷಿತವಾಗಿ ಪೊರೆಯುತ್ತಿರುತ್ತದೆ. ನೈಸರ್ಗಿಕ ಕೃಷಿ ಅಂತಹದ್ದೊಂದು ವಿಧಾನ.”

ಕಳೆ ಸ್ನೇಹಿತರು

“ನಿಸರ್ಗದಲ್ಲಿ ಪ್ರತಿಯೊಂದು ಜೀವಿ ಮತ್ತು ಗಿಡವೂ ಪರಿಸರ ವ್ಯವಸ್ಥೆಯಲ್ಲಿನ ತನ್ನ ಪಾತ್ರವನ್ನು ನಿರ್ವಹಿಸುತ್ತಿರುತ್ತದೆ. ಪ್ರತಿಯೊಂದು ಆಹಾರ ಸರಪಳಿಯ ಅವಿಭಾಜ್ಯ ಅಂಗ.

ಕಳೆ ಹೆಚ್ಚಾಗುವುದನ್ನು ʼಬುಡಸಮೇತʼ ತಡೆಯಲು ಇರುವ ಏಕೈಕ ಮಾರ್ಗವೆಂದರೆ ತೋಟದಲ್ಲಿ ಮಿಶ್ರ ಬೆಳೆಗಳನ್ನು ಬೆಳೆಯುವುದು ಮತ್ತು ಬೆಳೆ ಪುನರಾವರ್ತನೆ ಮಾಡುವುದು. ಜೊತೆಗೆ ಆಳವಾಗಿ ಉಳುವ ಹಾಗೂ ರಾಸಾಯನಿಕ ಬಳಕೆ ಮಾಡುವುದನ್ನು ನಿಲ್ಲಿಸುವುದು. ಮಣ್ಣಿನ ಆರೋಗ್ಯ ಉತ್ತಮಗೊಂಡಂತೆ ಸಮಸ್ಯಾತ್ಮಕವಾದ ಕಳೆಗಿಡಗಳು ತಾವಾಗೆ ನಾಶವಾಗುತ್ತವೆ. ಸುಧಾರಣೆಯ ಈ ಅವಧಿಯಲ್ಲಿ ಆಹಾರ ಬೆಳೆಗಳನ್ನು ಆವರಿಸಿಕೊಳ್ಳಬಹುದು. ಇದನ್ನು ತಡೆಗಟ್ಟಲು ಆಗಾಗ ಈ ಗಿಡಗಳನ್ನು (ಹೂ ಬಿಡುವುದಕ್ಕೆ ಮುಂಚೆ) ಕತ್ತರಿಸಿ ಬೆಳೆಯ ಬುಡದಲ್ಲಿ ೩-೪ ಇಂಚುಗಳಷ್ಟು ದಪ್ಪ ಹೊದಿಕೆಯಾಗಿ ಹಾಕಬೇಕು. ಇದರಿಂದ ಮಣ್ಣಿನೊಳಗಡೆ ಕೂತ ಕಳೆಬೀಜಗಳಿಗೆ ಸೂರ್ಯರಶ್ಮಿ ಸಿಗದೆ ಅವುಗಳು ಮೊಳಕೆಯೊಡೆದು ಬೆಳೆಯುವುದು ತಪ್ಪುತ್ತದೆ.

ರೈತರು ಸಾವಯವ ಕೃಷಿಯನ್ನು ಆರಂಭಿಸಿದರೆ ಅವರ ಭೂಮಿಯ ಮಣ್ಣಿನ ಆರೋಗ್ಯ ವರ್ಷದಿಂದ ವರ್ಷಕ್ಕೆ ಸುಧಾರಿಸುತ್ತದೆ. ಇದರೊಂದಿಗೆ ಬೆಳೆಯ ಬೆಳವಣಿಗೆ ಉತ್ತಮಗೊಂಡು ಕಳೆಯ ಬೆಳವಣಿಗೆ ಕುಂಠಿತವಾಗುತ್ತದೆ. ಎರಡು ಮೂರು ವರ್ಷಗಳಲ್ಲಿ ಕಳೆಗಿಡಗಳು ಇಲ್ಲವಾಗುತ್ತವೆ. ಅದುವರೆಗೂ ರೈತ ಕಳೆಗಿಡಗಳನ್ನು ಕಡಿದು ಗಿಡದ ಬುಡಗಳಿಗೆ ಹೊದಿಕೆಯಾಗಿ ಹಾಕಬೇಕು.

ಕಳೆಗಿಡವನ್ನು ಕತ್ತರಿಸಿ ಹೊದಿಕೆಯಾಗಿ ಹಾಕುವುದಿಂದ ಭೂಮಿಗೆ ಹಲವು ರೀತಿಯ ಲಾಭಗಳಿವೆ. ಹೊದಿಕೆ ಹಾಕುವುದರಿಂದ ಮಣ್ಣಿನ ಸವಕಳಿ ಕಡಿಮೆಯಾಗುತ್ತದೆ. ತೇವಾಂಶ ಆವಿಯಾಗುವುದು ಕಡಿಮೆಯಾಗಿ ಗಿಡಕ್ಕೆ ಕಡಿಮೆ ನೀರು ಸಾಕಾಗುತ್ತದೆ.  ಗಾಳಿಯ ಹರಿಯುವಿಕೆ ಹೆಚ್ಚಾಗುತ್ತದೆ. ತೇವಾಂಶ, ಶಾಖ ಹಾಗೂ ತಂಪನ್ನು ಹೆಚ್ಚಾಗಿ ಹಿಡಿದಿಡುತ್ತದೆ. ಹೊದಿಕೆಯು ಎರೆಹುಳುಗಳಿಗೆ, ಸೂಕ್ಷ್ಮಜೀವಿಗಳಿಗೆ ಆಹಾರವನ್ನು ಒದಗಿಸುತ್ತದೆ. ಇದರಿಂದ ಬೆಳೆಗಳಿಗೆ ಪೋಷಕಾಂಶಯುಕ್ತ ಗೊಬ್ಬರ ಸಿಗುತ್ತದೆ. ಕಳೆಗಿಡದ ಬೇರುಗಳು ಮಣ್ಣಿನಲ್ಲೇ ಉಳಿದಿರುವುದರಿಂದ ಅದು ಮಣ್ಣು ಹಾಗೂ ಅದರ ಸಾವಯವ ಗುಣವನ್ನು ಹಿಡಿದಿಡುತ್ತದೆ. ಈ ಬೇರುಗಳು ಸತ್ತಮೇಲೆ ಅವು ಕೂಡ ಮಣ್ಣನ್ನು ಕೊರೆಯುವ ಜೀವಿಗಳಿಗೆ ಆಹಾರವಾಗುತ್ತದೆ.

ಕಳೆಗಿಡಗಳನ್ನು ಹೂ ಬಿಡುವುದಕ್ಕೂ ಮುನ್ನ ಬೀಜಪ್ರಸರಣ ಶುರುವಾಗುವುದಕ್ಕೂ ಮುನ್ನ ಕಡಿದು ಹೊದಿಕೆಯಾಗಿ ಹಾಸಬೇಕು. ರೈತ ತಡಮಾಡಿದರೆ ಬೀಜಪ್ರಸರಣವಾಗಿ ಹೊಸ ಕಳೆಗಿಡಗಳು ಹುಟ್ಟಿಕೊಳ್ಳುತ್ತವೆ.

ನಿಸರ್ಗದೊಂದಿಗೆ ಸಾಮರಸ್ಯದ ಕೃಷಿ ತತ್ವಗಳು

“ನೈಸರ್ಗಿಕ ಕೃಷಿಯ ನಾಲ್ಕು ಮೂಲತತ್ವಗಳು ಬಹಳ ಸರಳ!” ಎನ್ನುತ್ತಾರೆ ಭಾಸ್ಕರ್‌ ಸಾವೆ. “ಮೊದಲನೆಯದು ಎಲ್ಲ ಜೀವಿಗಳು ಜೀವಿಸುವ ಸಮಾನ ಹಕ್ಕಿದೆ. ಆ ಹಕ್ಕಿಗೆ ಗೌರವ ನೀಡಬೇಕೆಂದರೆ ಕೃಷಿಯು ಅಹಿಂಸಾತ್ಮಕವಾಗಿರಬೇಕು.”

ಎರಡನೆಯದು ʼನಿಸರ್ಗದಲ್ಲಿನ ಪ್ರತಿಯೊಂದು ಪ್ರಯೋಜನಕಾರಿ. ಅದು ಜೀವಜಾಲದ ಉದ್ದೇಶಕ್ಕೆ ಪೂರಕವಾಗಿರುತ್ತದೆʼ

ಮೂರನೆಯದು : ಕೃಷಿ ಎನ್ನುವುದು ಧರ್ಮ. ನಿಸರ್ಗ ಹಾಗೂ ಸಹಜೀವಿಗಳಿಗೆ ಸೇವೆ ಸಲ್ಲಿಸುವ ಪವಿತ್ರ ಮಾರ್ಗ. ಅದು ದಂಡ ಅಥವ ಹಣವೇ ಮುಖ್ಯವಾದ ವಹಿವಾಟು ಆಗಬಾರದು. ಅಲ್ಪಾವಧಿಯಲ್ಲಿ ಹೆಚ್ಚು ಸಂಪಾದನೆ ಮಾಡುವ ಲೋಭಕ್ಕೆ ಬಿದ್ದು ನೈಸರ್ಗಿಕ ನಿಯಮಗಳನ್ನು ಅಲಕ್ಷಿಸುವುದು ನಾವು ಎದುರಿಸುವ ಸಮಸ್ಯೆಗಳಿಗೆಲ್ಲ ಮೂಲ.

ನಾಲ್ಕನೆಯದು ದೀರ್ಘಕಾಲಿಕ ಫಲವತ್ತತೆಯ ಪುನರುತ್ಪಾದನೆ. ನಾವು ಬೆಳೆಯುವ ಹಣ್ಣುಗಳು ಮತ್ತು ಬೀಜಗಳ ಮೇಲೆ ಹಕ್ಕು ಇದೆ. ಇದು ೫% ಇಂದ ೧೫% ಗಿಡಗಳ ಜೈವಿಕ ಇಳುವರಿ. ಉಳಿದ ೮೫% ಇಂದ ೯೫% ಕೃಷಿ ತ್ಯಾಜ್ಯ. ಇದು ಮರಳಿ ಮಣ್ಣಿಗೆ ಸೇರಿ ಫಲವಂತಿಕೆಯನ್ನು ಪುನರುತ್ಪಾದಿಸುತ್ತದೆ. ಇದು ಹೊದಿಕೆಯ ರೂಪದಲ್ಲಿ ಇಲ್ಲವೇ ಜಾನುವಾರುಗಳ ಗೊಬ್ಬರದ ರೂಪದಲ್ಲಿ ಮಣ್ಣನ್ನು ಸೇರುತ್ತದೆ. ಇದನ್ನು ಪಾಲಿಸಿದರೆ ಹೊರಗಿನಿಂದ ಏನನ್ನೂ ನೀಡುವ ಅವಶ್ಯಕತೆಯಿರುವುದಿಲ್ಲ. ಮಣ್ಣಿನ ಫಲವಂತಿಕೆ ಕಡಿಮೆಯಾಗುವುದಿಲ್ಲ.

ಚಿತ್ರ : ಎಲೆ ತ್ಯಾಜ್ಯ ನೈಸರ್ಗಿಕ ಹೊದಿಕೆಯಾಗುತ್ತದೆ

ಏನೂ ಮಾಡುತ್ತಿಲ್ಲವೇ?

ನೈಸರ್ಗಿಕ ತೋಟದಲ್ಲಿ ಆಧುನಿಕ ತೋಟಕ್ಕೆ ಹೋಲಿಸಿದರೆ ದೈಹಿಕ ಶ್ರಮದ ಕೆಲಸ ಕಡಿಮೆ. ನಿಯಮಿತವಾಗಿ ನಿಗಾವಹಿಸುವುದು ಮಾತ್ರ ಇರುತ್ತದೆ. “ತೋಟದೊಳಗೆ ರೈತ ಓಡಾಡುವುದೇ ಗಿಡಗಳಿಗೆ ಉತ್ತಮ ಗೊಬ್ಬರವಾಗುತ್ತದೆ” ಎಂದು ಹೇಳಲಾಗುತ್ತದೆ. ಮರಗಳ ವಿಷಯದಲ್ಲಿ ಆರಂಭಿಕ ವರ್ಷಗಳಲ್ಲಿ ಇದು ಬಹಳ ಮುಖ್ಯ. ಕ್ರಮೇಣ ಅವು ಸ್ವಾವಲಂಬಿಗಳಾಗುತ್ತವೆ. ರೈತನ ಕೆಲಸ ಕಡಿಮೆಯಾಗುತ್ತದೆ. ಕೊಯ್ಲು ಮಾಡುವುದು ಬಿಟ್ಟು ಬೇರೆನೂ ಕೆಲಸವಿರುವುದಿಲ್ಲ. ತೆಂಗಿನ ವಿಷಯದಲ್ಲಿ ಭಾಸ್ಕರ್‌ ಸಾವೆಯವರೂ ಕಾಯಿ ಕೂಡ ಕೀಳಲು ಹೋಗುತ್ತಿರಲಿಲ್ಲ. ಕಾಯಿಗಳು ತಾವಾಗಿ ಉದುರುವವರೆಗೆ ಕಾಯುತ್ತಿದ್ದರು. ನೆಲದ ಮೇಲೆ ಬಿದ್ದ ಕಾಯಿಗಳನ್ನಷ್ಟೇ ಆರಿಸಿಕೊಳ್ಳುತ್ತಿದ್ದರು!

ಕ್ಷೇತ್ರ ಬೆಳೆಗಳಾದ ಭತ್ತ, ಗೋಧಿ, ಕಾಳುಗಳು, ತರಕಾರಿಗಳು ಇತ್ಯಾದಿಗಳಿಗೆ ಆಗಾಗ ಗಮನ ನೀಡಬೇಕಾಗುತ್ತದೆ. ಪ್ರತಿ ವರ್ಷದ ಈ ಕೆಲಸಗಳನ್ನು ತಪ್ಪಿಸಲಾಗುವುದಿಲ್ಲ. ಭಾಸ್ಕರ್‌ ಸಾವಿಯವರು ಈ ಬೆಳೆಗಳನ್ನು ಬೆಳೆಯುವ ತಮ್ಮ ವಿಧಾನವನ್ನು ಸಾವಯವ ಕೃಷಿ ಎಂದು ಕರೆಯುತ್ತಾರೆ. ʼಏನೂ ಮಾಡಬೇಕಾಗಿಲ್ಲದ ನೈಸರ್ಗಿಕ ಕೃಷಿʼಯು ಮರಗಳಾಧಾರಿತ ಬೆಳೆ ವ್ಯವಸ್ಥೆಯಲ್ಲಿ ಮಾತ್ರ ಪ್ರಬುದ್ಧ ಹಂತವನ್ನು ತಲುಪಿದೆ. ಈ ರೀತಿಯ ಕ್ಷೇತ್ರ ಬೆಳೆಗಳ ವಿಷಯದಲ್ಲೂ ರೈತರ ಭಾಗವಹಿಸುವಿಕೆ ಕಡಿಮೆಯಿರಬೇಕು. ಅವರು ಪ್ರಕೃತಿಯನ್ನು ಗೌರವಿಸಬೇಕು ಹಿಂಸೆಯನ್ನು ಕಡಿಮೆ ಮಾಡಬೇಕು.

ಕೃಷಿಯಲ್ಲಿ ಕಾಳಜಿ ವಹಿಸಬೇಕಾದ ಐದು ವಿಷಯಗಳು

ಭಾಸ್ಕರ್‌ ಸಾವೆಯವರು ನೈಸರ್ಗಿಕ ಕೃಷಿಯ ವಿಧಾನವನ್ನು ಮುಖ್ಯವಾದ ಪ್ರಾಯೋಗಿಕ ಅಂಶಗಳನ್ನು ಕ್ರೋಢಿಕರಿಸುವ ಮೂಲಕ ವಿವರಿಸುತ್ತಾರೆ. ವಿಶ್ವದಾದ್ಯಂತ ಎಲ್ಲ ರೈತರು ಮಾಡುವ ಚಟುವಟಿಕೆಯನ್ನು ಇದು ಒಳಗೊಂಡಿದೆ. ಉಳುಮೆ, ಫಲವತ್ತತೆಯ ಒಳಸುರಿಯುವಿಕೆಗಳು, ಕಳೆ, ನೀರಾವರಿ ಮತ್ತು ಬೆಳೆ ರಕ್ಷಣೆ.

ಉಳುಮೆ

ಮರಗಳ ವಿಷಯದಲ್ಲಿ ಸಸಿ ಇಲ್ಲವೇ ಬೀಜಗಳನ್ನು ನೆಡುವಾಗ ಮಾತ್ರ ಭೂಮಿಯನ್ನು ಹದಮಾಡಿ ನೆಡಬೇಕಾಗುತ್ತದೆ. ಒಮ್ಮೆ ನೆಟ್ಟ ನಂತರ ಮಣ್ಣನ್ನು ಸಡಿಲಗೊಳಿಸುವುದು ಅದನ್ನು ನೋಡಿಕೊಳ್ಳುವುದು ಎಲ್ಲವನ್ನೂ ಜೀವಿಗಳಿಗೆ ಬಿಡಬೇಕು. ಮಣ್ಣನ್ನು ಕೊರೆಯುವ ಜೀವಿಗಳು ಮತ್ತು ಗಿಡದ ಬೇರುಗಳು ಇದನ್ನು ನೋಡಿಕೊಳ್ಳುತ್ತದೆ.

 ಫಲವತ್ತತೆಯ ಒಳಸುರಿಯುವಿಕೆಗಳು

ಎಲ್ಲ ಬಗೆಯ ಬೆಳೆ ತ್ಯಾಜ್ಯಗಳು ಮತ್ತು ಜೈವಿಕತ್ಯಾಜ್ಯಗಳು ಫಲವತ್ತತೆಯನ್ನು ಹೆಚ್ಚಿಸುತ್ತದೆ. ತೋಟದಲ್ಲಿ ಜೈವಿಕ ತ್ಯಾಜ್ಯದ ಕೊರತೆಯಿದ್ದರೆ ಆರಂಭದಲ್ಲಿ ಸಾವಯವ ಒಳಸುರಿಯುವಿಕೆಗಳನ್ನು ಬಳಸುವುದು ಸಹಕಾರಿ. ಯಾವುದೇ ಬಗೆಯ ರಾಸಾಯನಿಕ ಗೊಬ್ಬರಗಳನ್ನು ಏನೇ ಆಗಲಿ ಬಳಸಬಾರದು.

ಕಳೆ

ಕಳೆಯನ್ನು ತಡೆಗಟ್ಟಬೇಕು. ಬೆಳೆಯನ್ನು ಮೀರಿ ಕಳೆಗಿಡಗಳು ಬೆಳೆದು ಸೂರ್ಯನ ರಶ್ಮಿಗೆ ತಡೆಯಾದಲ್ಲಿ ಅದನ್ನು ಕತ್ತರಿಸಿ ಗಿಡಗಳ ಬುಡಕ್ಕೆ ಹೊದಿಕೆಯಾಗಿಸಬೇಕು. ಬುಡಸಮೇತ ಅವುಗಳನ್ನು ನಿರ್ಮೂಲನ ಮಾಡಲು ಹೊರಡುವುದಕ್ಕಿಂತ ಇದು ಒಳ್ಳೆಯದು. ಗಿಡವನ್ನು ಒಣಗಿಸುವಂತಹ ಯಾವುದೇ ಔಷಧಿಗಳನ್ನು ಬಳಸಬಾರದು.

 ನೀರಾವರಿ

ಅಗತ್ಯವಿರುವಷ್ಟು ನೀರನ್ನು ಮಾತ್ರ ನೀಡಬೇಕು. ಮಣ್ಣಿನ ತೇವಾಂಶಕ್ಕೆ ಎಷ್ಟು ಬೇಕು ಅಷ್ಟನ್ನು ನೀಡಬೇಕು. ಗಿಡದ ಬುಡಕ್ಕೆ ಹಸಿರಿ ಬಹುಪದರದ ಹೊದಿಕೆ ಹಾಕುವುದರಿಂದ ನೀರಿನ ಅಗತ್ಯ ಬಹುಮಟ್ಟಿಗೆ ಕಡಿಮೆಯಾಗುತ್ತದೆ.

ಬೆಳೆ ಸಂರಕ್ಷಣೆ

ಬೆಳೆಯನ್ನು ರಕ್ಷಿಸುವುದನ್ನು ಸಂಪೂರ್ಣವಾಗಿ ನಿಸರ್ಗಕ್ಕೆ ಬಿಡಬಹುದು. ಪರಭಕ್ಷಕ ಜೀವಿಗಳು ಈ ಕೆಲಸವನ್ನು ಮಾಡುತ್ತವೆ. ಆರೋಗ್ಯವಂತ ಮಣ್ಣಿನಲ್ಲಿ ಸಾವಯವಾಗಿ ಬೆಳೆದ ಮಿಶ್ರ ಬೆಳೆಗಳು ಕೀಟಬಾಧೆಯ ವಿರುದ್ಧ ನಿರೋಧಕ ಶಕ್ತಿಯನ್ನು ಹೊಂದಿರುತ್ತದೆ. ಏನಾದರೂ ತೊಂದರೆ ಎದುರಾದರೂ ಅದು ಬಹಳ ಚಿಕ್ಕಮಟ್ಟದ್ದಾಗಿರುತ್ತದೆ. ಹೆಚ್ಚೆಂದರೆ ರಾಸಾಯನಿಕೇತರ ವಿಧಾನಗಳಾದ ಬೇವು, ಗಂಜಲ ಇತ್ಯಾದಿಗಳ ಬಳಕೆಯಷ್ಟೇ ಇದರ ನಿವಾರಣೆಗೆ ಸಾಕಾಗುತ್ತದೆ. ಇದನ್ನು ಕೂಡ ಮಾಡದೇ ಇರಬಹುದು.

ನಿರ್ಸಗದ ಕೆಲಸಗಳನ್ನು ಅದಕ್ಕೆ ಹಿಂತಿರುಗಿಸಿದರೆ ಆಧುನಿಕ ಕಾಲದ ರೈತರ ಬೆನ್ನಮೇಲಿನ ಹೊರೆ ತಾನಾಗಿ ಇಳಿಯುತ್ತದೆ. ಭೂಮಿ ತಂತಾನೇ ಪುನಶ್ಚೇತನಗೊಳ್ಳುತ್ತದೆ.

“ಅಹಿಂಸೆ ಎನ್ನುವುದು ಸಾಂಸ್ಕೃತಿಕ ಹಾಗೂ ಆಧ್ಯಾತ್ಮಿಕ ಏಳಿಗೆಯ ಹೆಗ್ಗುರುತು. ನೈಸರ್ಗಿಕ ಕೃಷಿಯ ಮೂಲಕ ಮಾತ್ರ ಇದನ್ನು ಸಾಧಿಸಬಹುದು” ಎಂದು ಭಾಸ್ಕರ್‌ ಸಾವೆ ಹೇಳುತ್ತಾರೆ.

“ನೈಸರ್ಗಿಕ ಕೃಷಿಗೆ ಎಲ್ಲ ಜೀವಿಗಳಿಗೂ ಉಣಿಸಬಲ್ಲ ದೇವಿ ಅನ್ನಪೂರ್ಣೆಯ ಆಶೀರ್ವಾದವಿದೆ” ಎಂದೂ ಹೇಳುತ್ತಾರೆ.

 ಈ ಲೇಖನವು ‘The Vision of Natural Farming’ by Bharat Mansata, 277 pages, Earthcare Books, www.earthcarebooks.com ಇದನ್ನು ಆಧರಿಸಿದೆ.

ಭಾರತ್‌ ಮನ್ಸತ


Bharat Mansata

bharatmansata@yahoo.com

ಆಂಗ್ಲ ಮೂಲ : ಲೀಸಾ ಇಂಡಿಯಾ; ಸಂಪುಟ :೨೩; ಸಂಚಿಕೆ : ೩ ; ಸೆಪ್ಟಂಬರ್ ೨೦‌೨೧

 

Recent Posts

ಕೃಷಿಯಲ್ಲಿ ನೀರಿನ ಸಮರ್ಥ ಬಳಕೆಗಾಗಿ ಕಾಲುವೆ ಯಾಂತ್ರೀಕರಣ

ಕೃಷಿಯಲ್ಲಿ ನೀರಿನ ಸಮರ್ಥ ಬಳಕೆಗಾಗಿ ಕಾಲುವೆ ಯಾಂತ್ರೀಕರಣ

ನಮ್ಮ ನೀರಾವರಿ ವ್ಯವಸ್ಥೆಯನ್ನು 21ನೇ ಶತಮಾನದ ಬೇಡಿಕೆಗಳಿಗೆ ಹೊಂದುವಂತೆ ಮಾಡುವುದು ನಮ್ಮ ಮುಂದಿರುವ ನಿಜವಾದ ಸವಾಲಾಗಿದೆ. ತಂತ್ರಜ್ಞಾನವೇ...