ಮರಗಳನ್ನು ಬೆಳೆಸಿ ಪರಿಸರ ಸಂರಕ್ಷಿಸಿ – ಜೀವನಮಟ್ಟ ಸುಧಾರಿಸಿ

Grow-Trees.com ಎನ್ನುವ ಸಮಾಜ ಸೇವಾ ಸಂಸ್ಥೆಯೊಂದು ಪ್ರಪಂಚದಾದ್ಯಂತ ವ್ಯಕ್ತಿಗಳಿಗೆ ಮತ್ತು ಕಂಪನಿಗಳಿಗೆ ಮರಗಳನ್ನು ನೆಡುವ ಸೇವೆಯೊಂದನ್ನು ಒದಗಿಸುತ್ತಿದೆ. ಅಂತರ್ಜಾಲದ ಮೂಲಕ ನೀಡಲಾಗುವ ತನ್ನ ಸೇವೆಗಳ ಮೂಲಕ ಈ ಸಂಸ್ಥೆಯು ಪ್ರತಿಯೊಬ್ಬ ವ್ಯಕ್ತಿಗೂ ಪರಿಸರ ಸಂರಕ್ಷಣೆಗಾಗಿ ತನ್ನ ಕೈಲಾದದ್ದನ್ನು ಮಾಡುವ ಅವಕಾಶವನ್ನು ಒದಗಿಸುತ್ತಿದೆ.

ಫೋಟೊ : Grow-Trees.com

ಗಿಡಗಳನ್ನು ನೆಡುವ ಪ್ರಕ್ರಿಯೆಯಲ್ಲಿ ಗ್ರಾಮೀಣ ಸಮುದಾಯಗಳು ವಿವಿಧ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವರು

ಭಾರತದ ಗ್ರಾಮೀಣ ಸಮುದಾಯಗಳು ಕಾಲದಿಂದಲೂ ಅವಕಾಶ ವಂಚಿತರಾಗಿ ಬದುಕುತ್ತಿದ್ದಾರೆ. ಬದುಕಲು ಅಗತ್ಯವಾದ ವಸ್ತುಗಳಷ್ಟೇ ಅಲ್ಲದೆ ನೀರು, ಆಹಾರ ಮತ್ತು ನಿಯಮಿತ ಆದಾಯದಂತಹ ಸಂಪನ್ಮೂಲನಗಳಿಂದ ಕೂಡ ವಂಚಿತರಾಗಿದ್ದಾರೆ. ಈ ಸಮುದಾಯಗಳವರು ಬಹುತೇಕ ಮಣ್ಣಿನ ಗುಣಮಟ್ಟ ಹಾಳಾಗಿರುವ ಕಡೆಗಳಲ್ಲಿ, ಉದ್ಯೋಗಾವಕಾಶಗಳು ಕಡಿಮೆಯಿರುವಲ್ಲಿ ಮತ್ತು ನೀರಿನ ಮೂಲಗಳು ಹಾಳಾಗಿರುವ ಕಡೆಗಳಲ್ಲಿ ವಾಸಿಸುತ್ತಿದ್ದಾರೆ.

Grow-Trees.com ಎನ್ನುವ ಸಮಾಜ ಸೇವಾ ಸಂಸ್ಥೆಯು ೨೦೧೦ರಲ್ಲಿ ಭಾರತದಾದ್ಯಂತ ಗ್ರಾಮೀಣ ಮತ್ತು ಬುಡಕಟ್ಟು ಸಮುದಾಯಗಳ ಸಮಾಜೋಆರ್ಥಿಕ ಪರಿಸ್ಥಿತಿಯನ್ನು ಉತ್ತಮಗೊಳಿಸಲು ಮರಗಳನ್ನು ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಂಡಿತು. ಈ ಸಮುದಾಯಗಳ ಜನರಿಗೆ ಬದುಕಿನ ಮೂಲಭೂತ ಅಗತ್ಯಗಳನ್ನು ಒದಗಿಸುವುದು ಇದರ ಗುರಿಯಾಗಿತ್ತು.

ಚೌಕ : ಶ್ರೀಮತಿ ದೇವಿಯ ಕತೆ

ಈ ಯೋಜನೆಯು ವಿಲ್ಲುಪುರಂನ ಇರುಳ ಬುಡಕಟ್ಟಿಗೆ ಸೇರಿದ ೩೫ ವರ್ಷದ ಮಹಿಳೆ ಶ್ರೀಮತಿ ದೇವಿಯ ಬದುಕಿನಲ್ಲಿ ಮಹತ್ವದ ಬದಲಾವಣೆಯನ್ನು ತಂದಿತು.  ಆಕೆಗೆ ಮೂವರು ಗಂಡು ಮಕ್ಕಳು. ಕುಟುಂಬ ನಿರ್ವಹಣೆಯ ಜವಾಬ್ದಾರಿಯನ್ನು ಆಕೆಯೇ ಹೊತ್ತಿದ್ದಳು. ಮೊದಲು ಆಕೆ ಕಾರ್ಮಿಕಳಾಗಿ ೧೩ ಗಂಟೆಗಳ ಕಾಲ ಶ್ರಮದಾಯಕ ಕೆಲಸ ಮಾಡುತ್ತಿದ್ದಳು. ಇದರಿಂದಾಗಿ ಆಕೆಗೆ ತನ್ನ ಮಕ್ಕಳ ಆರೋಗ್ಯ, ಶಿಕ್ಷಣ ಇವುಗಳ ಕಡೆ ಗಮನಕೊಡಲು ಸಮಯವೇ ಸಿಕ್ಕುತ್ತಿರಲಿಲ್ಲ.

ನರ್ಸರಿಯಲ್ಲಿ ಕೆಲಸ ಮಾಡುವ ಅವಕಾಶ ಸಿಕ್ಕ ಬಳಿಕ ಶ್ರೀಮತಿ ದೇವಿ ಸಂತೋಷಗೊಂಡಿದ್ದಾಳೆ. ಈಗ ಆಕೆ ತನ್ನ ಮಕ್ಕಳ ಶಿಕ್ಷಣ, ಆರೋಗ್ಯದತ್ತ ಗಮನಹರಿಸಲು ಸಾಧ್ಯವಾಗಿದೆ. ಆಕೆಯ ಕುಟುಂಬ ನಿರ್ವಹಣೆಗೂ ಈ ಕೆಲಸದಿಂದ ಅನುಕೂಲವಾಗಿದೆ. ಸಮುದಾಯದಲ್ಲಿ ಆಕೆಯ ಗೌರವವು ಹೆಚ್ಚಿದೆ.

ಕಳೆದ ಹತ್ತು ವರ್ಷಗಳಲ್ಲಿ ಸಂಸ್ಥೆಯು ಭಾರತದಾದ್ಯಂತ ೨೦ ರಾಜ್ಯಗಳಲ್ಲಿ ಹಬ್ಬಿದೆ. ಒರಿಸ್ಸಾ, ಪಶ್ಚಿಮ ಬಂಗಾಳ, ಮಹಾರಾಷ್ಟ್ರ, ಜಾರ್ಖಂಡ್‌, ಮಧ್ಯಪ್ರದೇಶ, ಕರ್ನಾಟಕ, ಆಂಧ್ರ ಪ್ರದೇಶ, ರಾಜಸ್ಥಾನ, ಬಿಹಾರ್‌, ಅರುಣಾಚಲ ಪ್ರದೇಶ, ಉತ್ತರ ಪ್ರದೇಶ, ಛತ್ತೀಸ್‌ಗಡ್‌, ಗುಜರಾತ್‌, ತಮಿಳು ನಾಡು, ಸಿಕ್ಕಿಂ, ತೆಲಂಗಾಣ, ಉತ್ತರಾಕಾಂಡ, ದೆಹಲಿ, ಪುದುಚೆರಿ ಮತ್ತು ಪಂಜಾಬ್‌ಗಳಲ್ಲಿ ಇದು ಹಬ್ಬಿದೆ. ಇತ್ತೀಚೆಗೆ , ಕೀನ್ಯಾದ  ಚೆರಗಣಿ ಪರ್ವತಗಳಲ್ಲಿನ ಅರಣ್ಯೀಕರಣ ಯೋಜನೆಯು ಜಾಗತಿಕವಾಗಿ ಇದನ್ನು ಮತ್ತೊಂದು ಎತ್ತರಕ್ಕೆ ಕೊಂಡೊಯ್ದಿದೆ.

ಪ್ರಕ್ರಿಯೆಗಳು

ಗ್ರೋ ಟ್ರೀಸ್‌ ಸಂಸ್ಥೆಯು ಯೋಜನೆಯ ಸಂಯೋಜಕರು/ಆಯೋಜಕರು, ಸಹಭಾಗಿಗಳು ಮತ್ತು ಪರಿಸರ ಸಂಶೋದಕರೊಂದಿಗೆ ಸೇರಿ ಅರಣ್ಯೀಕರಣ ಅಗತ್ಯವಿರುವ ಸಮುದಾಯಕ್ಕೆ ಸೇರಿದ ಭೂಮಿಯನ್ನು ಗುರುತಿಸಿ ಗಿಡನೆಡುವ ಚಟುವಟಿಕೆಗಳನ್ನು ಆರಂಭಿಸುತ್ತದೆ. ಸ್ಥಳೀಯರಿಗೆ ಲಾಭ ದೊರಕಿಸಿಕೊಡಬೇಕೆಂದು ಮರಗಳನ್ನು ಸಾರ್ವಜನಿಕ ಜಮೀನುಗಳಲ್ಲಿಯೇ ನೆಡಲಾಗುತ್ತದೆ.

ಗ್ರಾಮೀಣ ಸಮುದಾಯಗಳಲ್ಲಿ ಗಿಡ ನೆಡುವ ಕುರಿತು ಜಾಗೃತಿ ಮೂಡಿಸಲಾಗುತ್ತದೆ. ಗ್ರಾಮ ಮಟ್ಟದಲ್ಲಿ ಪಂಚಾಯತ್‌ ಮತ್ತು ಸಮುದಾಯ ಸದಸ್ಯರ ಸಭೆ ಸೇರಿಸಿ ಅವರಿಗೆ ಮರಗಳಿಂದಾಗುವ ಪ್ರಯೋಜನಗಳು, ಮರಗಳನ್ನು ನೆಡುವಾಗ ಗಮನದಲ್ಲಿಟ್ಟುಕೊಳ್ಳಬೇಕಾದ ಅಂಶಗಳ ಕುರಿತು ಅರಿವು ಮೂಡಿಸಲಾಗುತ್ತದೆ. ಮರಗಳ ಮಹತ್ವ ಮತ್ತು ಭೂಮಿಯ ಮೇಲೆ ಅತಿಯಾದ ಆಕ್ರಮಣ ಮಾಡುವುದರ ಪರಿಣಾಮಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸಲಾಗುತ್ತದೆ.

ಯಾವ ತಳಿಗಳನ್ನು ನೆಡಬೇಕು ಎನ್ನುವುದನ್ನು ಸಾಕಷ್ಟು ಸಂಶೋಧನೆ ನಡೆಸಿ, ಪರಿಣಿತರೊಂದಿಗೆ, ಸಮುದಾಯದ ಸದಸ್ಯರೊಂದಿಗೆ ಚರ್ಚಿಸಿ ಅಗತ್ಯಕ್ಕೆ ತಕ್ಕಂತೆ ನಿರ್ಧರಿಸಲಾಗುತ್ತದೆ. ಸಾಮಾನ್ಯವಾಗಿ ಸೌಂದರ್ಯದಾಯಕವಾದ, ಆಯುರ್ವೇದ ಗುಣಗಳುಳ್ಳ, ಆರ್ಥಿಕ ಮೌಲ್ಯವುಳ್ಳ ಮರಗಳನ್ನು ಸ್ಥಳೀಯ ಜೀವವೈವಿಧ್ಯವನ್ನು ಗಮನದಲ್ಲಿಟ್ಟುಕೊಂಡು ನೆಡಲಾಗುತ್ತದೆ. ಆಯಾಪ್ರದೇಶದ ಮಣ್ಣು, ಮಳೆ, ಆರ್ಥಿಕತೆ, ಔಷಧೀಯ ಗುಣ, ಸಮುದಾಯದ ಸಾಮಾಜಿಕ ಅವಶ್ಯಕತೆಗಳು ಮತ್ತು ವನ್ಯಜೀವನ ಇವೆಲ್ಲವುಗಳಿಗನುಗುಣವಾಗಿ ಸ್ಥಳೀಯ ನರ್ಸರಿಗಳಿಗೆ ತಳಿಗಳನ್ನು ಒದಗಿಸಲಾಗುತ್ತದೆ. ಉದಾಹರಣೆಗೆ : ಪಶ್ಚಿಮಬಂಗಾಳದ ಸುಂದರಬನ ರಾಷ್ಟ್ರೀಯ ಉದ್ಯಾನವನದ ಸುತ್ತ ಆಗಾಗ ಅಪ್ಪಳಿಸುವ ಬಂಗಾಳಕೊಲ್ಲಿಯ ಚಂಡಮಾರುತಗಳ ಅನಾಹುತವನ್ನು ತಗ್ಗಿಸಲು ಮ್ಯಾಂಗ್ರೋವ್‌ ಗಿಡಗಳನ್ನು ಬೆಳೆಸಲಾಯಿತು. ಈ ಗಿಡಗಳ ತಡೆಗೋಡೆಯಂತೆ ಇರುವುದರಿಂದ ಚಂಡಮಾರುತ ಉಂಟುಮಾಡುತ್ತಿದ್ದ ಹಾನಿ ಕಡಿಮೆಯಾಗಿದೆ ಎಂದು ಇತ್ತೀಚಿನ ಅಧ್ಯಯನಗಳಿಂದ ತಿಳಿದುಬಂದಿದೆ.

ನರ್ಸರಿಯಲ್ಲಿ ಮೊದಲು ತಳಿಗಳನ್ನು ಬೆಳೆಸಿ ನಂತರ ಅವುಗಳನ್ನು ನೆಡಬೇಕಾದ ಸ್ಥಳಗಳಿಗೆ ತಲುಪಿಸಲಾಗುತ್ತದೆ. ಈ ಪ್ರಕ್ರಿಯೆಯಲ್ಲಿ ಗ್ರಾಮೀಣ ಸಮುದಾಯಗಳು ವಿವಿಧ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುತ್ತಾರೆ. ನರ್ಸರಿಯಲ್ಲಿ ತಳಿಗಳನ್ನು ಬೆಳೆಸುವುದು, ಗಿಡ ನೆಡುವ ಸ್ಥಳಕ್ಕೆ ಅವುಗಳನ್ನು ಸಾಗಿಸುವುದು, ಆ ಸ್ಥಳವನ್ನು ನೆಡುವಿಕೆಗೆ ಸ್ವಚ್ಛಗೊಳಿಸಿ, ಗುಂಡಿ ತೋಡುವುದು, ಗಿಡಗಳನ್ನು ನೆಟ್ಟ ಮೇಲೆ ಅವುಗಳಿಗೆ ನೀರುಣಿಸುವುದು ಇತ್ಯಾದಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುತ್ತಾರೆ. ಇವೆಲ್ಲವೂ ಬುಡಕಟ್ಟು -ಗ್ರಾಮೀಣ ಸಮುದಾಯಗಳಿಗೆ ಅದರಲ್ಲೂ ಮಹಿಳೆಯರಿಗೆ ದಿನಗೂಲಿ ಆಧಾರದಲ್ಲಿ ಕೆಲಸವನ್ನು ಒದಗಿಸುತ್ತದೆ.

ಆಯಾ ಪ್ರದೇಶಗಳಿಗೆ ಸೇರಿದ ಸಮುದಾಯಗಳೇ ಆ ಮರಗಳ ಸಮಾಜೋಆರ್ಥಿಕ ಲಾಭಕ್ಕೆ ಹಕ್ಕುದಾರರು. ಅವುಗಳ ಉತ್ಪನ್ನಗಳನ್ನು ತಮ್ಮ ಬಳಕೆಗೆ ಇಟ್ಟುಕೊಳ್ಳಬೇಕೆ ಅಥವಾ ಹಣ್ಣು ಹಾಗೂ ಇತರೆ ಉತ್ಪನ್ನಗಳನ್ನು ಕೊಯ್ಲು ಮಾಡಿ ಮಾರುಕಟ್ಟೆಗೆ ಕಳುಹಿಸಬೇಕೆ ಎನ್ನುವುದನ್ನು ಸ್ಥಳೀಯರೇ ನಿರ್ಧರಿಸುತ್ತಾರೆ.  ನಾಟಿ ಮರದ ಅರಣ್ಯ ಉತ್ಪನ್ನ (ಎನ್‌ಟಿಎಫ್‌ಪಿ)ಗಳು ತಮ್ಮ ಜೀವಿತಾವಧಿಯ ಉದ್ದಕ್ಕೂ ಸುಸ್ಥಿರ ಆದಾಯ ಸಂಪನ್ಮೂಲವನ್ನು ಒದಗಿಸುತ್ತದೆ.

ಭಾರತದಾದ್ಯಂತ ೨೦ ರಾಜ್ಯಗಳಲ್ಲಿ ಸುಮಾರು ೪.೫ ಮಿಲಿಯನ್‌ ಮರಗಳನ್ನು ನೆಡಲಾಯಿತು. ಗ್ರಾಮೀಣ ಸಮುದಾಯಗಳಿಗೆ ಇದು ಸರಿಸುಮಾರು ೩೭೦,೦೦೦ ದಿನಗಳ ಕೆಲಸವನ್ನು ಒದಗಿಸಿತು.

ಚೌಕ : ಮರದೊಂದಿಗೆ ಶುಭಾಷಯ ಕೋರಿ

Grow-Trees.com ಒಂದು ವಿಶೇಷ ಸೇವೆಯನ್ನು ಒದಗಿಸುತ್ತದೆ. ಇದರಲ್ಲಿ ನೀವು ನಿಮ್ಮ ಪ್ರೀತಿಪಾತ್ರರಿಗೆ ಆನ್‌ಲೈನಿನಲ್ಲಿ ಮರವನ್ನು ನೆಡುವ ಮೂಲಕ ಶುಭಾಷಯ ಕೋರಬಹುದು. ಇದಕ್ಕೆ ಈ ಟ್ರೀ ಪ್ರಮಾಣಪತ್ರವನ್ನು ನೀಡಲಾಗುತ್ತದೆ. ಪ್ಲಾಂಟ್‌ ಮಾಸಿಕ, ಗ್ರೀಟ್‌ ಎನಿಟೈಮ್‌ ಚಂದಾ ಪತ್ರಿಕೆಯ ಮೂಲಕ ಭಾರತದ ಪ್ರತಿ ಮನೆಯಲ್ಲಿಯೂ ಗಿಡ ನೆಡುವ ಅಭ್ಯಾಸವನ್ನು ರೂಢಿಸಿಕೊಳ್ಳುವಂತೆ ಮಾಡಲಾಗುತ್ತದೆ. ಈ ಟ್ರೀ ಪ್ರಮಾಣಪತ್ರವನ್ನು ನಿಮ್ಮ ಕುಟುಂಬದವರು, ಸ್ನೇಹಿತರ ಹುಟ್ಟಿದ ಹಬ್ಬ, ಹಬ್ಬಗಳು, ವಾರ್ಷಿಕೋತ್ಸವಗಳು ಮತ್ತಿತರ ವಿಶೇಷ ಸಂದರ್ಭಗಳಲ್ಲಿ ಉಡುಗೊರೆಯಾಗಿ ನೀಡಬಹುದು. ನೀವು ನೆಡುವ ಪ್ರತಿಯೊಂದು ಗಿಡವು ಗ್ರಾಮೀಣ ಸಮುದಾಯಕ್ಕೆ ಕೊಡುಗೆಯನ್ನು ನೀಡುತ್ತದೆ. ದೇಶವನ್ನು ಮತ್ತೆ ಹಸಿರಾಗಿಸಿ ಪ್ರತಿಯೊಬ್ಬ ವ್ಯಕ್ತಿಗೂ ಸಮಾನ ಅವಕಾಶವನ್ನು ನೀಡುವ ನಿಟ್ಟಿನಲ್ಲಿ ಇದು ಅವರ ಪ್ರಯತ್ನ.

 ಫಲಿತಾಂಶ ಮತ್ತು ಪರಿಣಾಮ

೨೦೧೦ರಲ್ಲಿ ವಿಶ್ವ ಪರಿಸರ ದಿನದಂದು ಈ ಸಂಸ್ಥೆಯು ಭಾರತದ ೨೦ ರಾಜ್ಯಗಳಲ್ಲಿ ೪.೫ ಮಿಲಿಯನ್‌ ಮರಗಳನ್ನು ನೆಟ್ಟಿತು. ಇದು ಗ್ರಾಮೀಣ ಸಮುದಾಯಗಳಿಗೆ ಸರಾಸರಿ ೩೭೦,೦೦೦ ಕೆಲಸದ ದಿನಗಳನ್ನು ಸೃಷ್ಟಿಸಿತು.

ಗಿಡ ನೆಡುವ ಪ್ರಕ್ರಿಯೆಯಲ್ಲಿ ಉದ್ಯೋಗಾವಕಾಶಕಗಳನ್ನು ಸೃಷ್ಟಿಸುವ ಮೂಲಕ ಬದಲಿ ಆದಾಯದ ಮೂಲವನ್ನು ಸೃಷ್ಟಿಸಿದರು. ಜೊತೆಗೆ ನೆಡು ತೋಪಿನ ಉತ್ಪನ್ನಗಳನ್ನು ಬಳಸಲು ಹಾಗೂ ಮಾರಾಟಮಾಡಲು ಅವಕಾಶ ಕಲ್ಪಿಸಿದರು. ನಮ್ಮ ಗಂಡುಮಕ್ಕಳು ನಮ್ಮನ್ನು ಬಿಟ್ಟುಹೊರಟುಹೋದರೂ ಕೂಡ ಮರಗಳು ನನ್ನ ಮತ್ತು ನನ್ನ ಹೆಂಡತಿಯನ್ನು ವಯಸ್ಸಾದ ಕಾಲದಲ್ಲಿ ಸಾಕುತ್ತದೆಎಂದು ಮರನೆಡುವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸದಸ್ಯರೊಬ್ಬರು ಹೇಳಿದರು.

ತಮ್ಮ ಯೋಜನೆಗಳ ಮೂಲಕ ಗ್ರೋ ಟ್ರೀನವರು ರಾಜಸ್ಥಾನ ಮತ್ತು ಗುಜರಾತಿನ ಬರದ ಹಳ್ಳಿಗಳಿಗೆ ನೀರನ್ನು ಒದಗಿಸುವಲ್ಲಿ ಯಶಸ್ವಿಯಾದರು. ಉದಾಹರಣೆಗೆ ಸರಿಸ್ಕಾ ಹುಲಿ ಮೀಸಲು ಪ್ರದೇಶದಲ್ಲಿ ನೀರಿನ ಮಟ್ಟ ೪೦ ರಿಂದ ೪೦೦ ಅಡಿಗೆ ಗಣನೀಯವಾಗಿ ಇಳಿದುಹೋಗಿತ್ತು. ಕಳೆದ ನಾಲ್ಕು ವರ್ಷಗಳಲ್ಲಿ ಇಲ್ಲಿ ಸುಮಾರು ೪೦೦,೦೦೦ ಮರಗಳನ್ನು ನೆಡಲಾಗಿದೆ. ಇದರಿಂದ ಹಳ್ಳಿಗರಿಗೆ ಸಹಾಯವಾಗಿದೆಯಲ್ಲದೆ ಹುಲಿವನಕ್ಕೂ ಉಪಯೋಗವಾಗಿದೆ.

ಫೋಟೊ : Grow-Trees.com  ತಳಿಗಳನ್ನು ಬೆಳೆಸುವುದು ಮಹಿಳೆಯರಿಗೆ ಸಾಕಷ್ಟು ಉದ್ಯೋಗಾವಕಾಶಗಳನ್ನು ಕಲ್ಪಿಸಿದೆ

ಗ್ರೋ ಟ್ರೀ ಯೋಜನೆಗಳು ತಮ್ಮ ಯೋಜನೆಗಳ ಮೂಲಕ ಗರಿಷ್ಠ ಪರಿಣಾಮವನ್ನು ಬೀರುತ್ತಿದ್ದು ಲಕ್ಷಾಂತರ ಬದುಕುಗಳು ಇದರಿಂದ ಬದಲಾಗಿದೆ. ದೇಶದ ಮೂಲೆಮೂಲೆಗಳಲ್ಲೂ ಗಿಡಗಳನ್ನು ನೆಡುವ ಯೋಜನೆಗಳನ್ನು ಅನುಷ್ಠಾನಗೊಳಿಸಿದೆ. ಇತರೆ ಚಟುವಟಿಕೆಗಳಿಂದ ಗ್ರಾಮೀಣ ಸಮುದಾಯಗಳ ಆದಾಯವನ್ನು ಹೆಚ್ಚಿಸಲು ಪ್ರಯತ್ನಿಸುತ್ತಿದೆ.

ಸುಪ್ರಿಯಾ ಪಾಟಿಲ್

Supriya Patil

G3, Scheherazade Building,

Colaba, Maharashtra – 400005

E-mail: supriya.patil@grow-trees.com

www.Grow-Trees.com

ಆಂಗ್ಲ ಮೂಲ : ಲೀಸಾ ಇಂಡಿಯಾ; ಸಂಪುಟ :೨೧; ಸಂಚಿಕೆ : ೪; ಡಿಸೆಂಬರ್‌ ೨೦೧೯

Recent Posts

ಕೃಷಿಯಲ್ಲಿ ನೀರಿನ ಸಮರ್ಥ ಬಳಕೆಗಾಗಿ ಕಾಲುವೆ ಯಾಂತ್ರೀಕರಣ

ಕೃಷಿಯಲ್ಲಿ ನೀರಿನ ಸಮರ್ಥ ಬಳಕೆಗಾಗಿ ಕಾಲುವೆ ಯಾಂತ್ರೀಕರಣ

ನಮ್ಮ ನೀರಾವರಿ ವ್ಯವಸ್ಥೆಯನ್ನು 21ನೇ ಶತಮಾನದ ಬೇಡಿಕೆಗಳಿಗೆ ಹೊಂದುವಂತೆ ಮಾಡುವುದು ನಮ್ಮ ಮುಂದಿರುವ ನಿಜವಾದ ಸವಾಲಾಗಿದೆ. ತಂತ್ರಜ್ಞಾನವೇ...