ಮೌಲ್ಯ ವರ್ಧನೆ ಸಣ್ಣ ಭೂಮಿಗಳನ್ನು ಸ್ಮಾರ್ಟ್ಗೊಳಿಸುವಿಕೆ


ಸರಳ ಪದ್ಧತಿಗಳ ಮೂಲಕ ಮೌಲ್ಯವರ್ಧನೆಯನ್ನು ಸಾಧಿಸಬಹುದು. ಸಮುದಾಯಗಳ ಸಹಕಾರ, ಸಮನ್ವಯ, ಒಮ್ಮುಖತೆ, ಒಳಗೊಳ್ಳುವಿಕೆ ಮತ್ತು ಸಂಶೋಧನ ಸಂಸ್ಥೆಯಿಂದಾಗಿ ಕೇರಳದ ಪತಿಯೂರ್ಪಂಚಾಯತ್ಪ್ರದೇಶದಲ್ಲಿ ಸಾಮಾಜಿಕ ಅನ್ವೇಷಣೆಯು ಯಶಸ್ವಿಯಾಯಿತು.


 

ಹಲವು ವರ್ಷಗಳ ನಂತರ ಎಳ್ಳಿನ ಪುನಶ್ಚೇತನ

ಕುಟುಂಬ ಕೃಷಿಯಿಂದ ಪ್ರಪಂಚದ ಒಟ್ಟಾರೆ ಆಹಾರದಲ್ಲಿ ೭೦.೮೦% ಆಹಾರವು ಉತ್ಪಾದನೆಯಾಗುತ್ತದೆ. ೨೦೫೦ರ ವೇಳೆಗೆ ಆಹಾರ ಧಾನ್ಯಗಳ ಉತ್ಪಾದನೆಯು ವರ್ಷಕ್ಕೆ ೩೩೦ಮಿಲಿಯನ್‌ ಟನ್‌ಗಳಷ್ಟಾಗಬೇಕಿದೆ. ಸಣ್ಣ ಕುಟುಂಬ ತೋಟಗಳು ಪರಿಸರಕ್ಕೆ ಹತ್ತಿರವಿದ್ದು ಆಹಾರ ಭದ್ರತೆ ಹಾಗೂ ಪೌಷ್ಟಿಕಾಂಶ ಆಧಾರ ಒದಗಿಸುವಲ್ಲಿ ದೊಡ್ಡ ಪಾತ್ರ ವಹಿಸುತ್ತದೆ.

ಕೇರಳದಲ್ಲಿ ಸರಾಸರಿ ಭೂಮಿ ಒಡೆತನ ೦.೨ ಹೆಕ್ಟೇರ್‌ ಮಾತ್ರ. ಬಹುತೇಕ ಕುಟುಂಬಗಳು ತೆಂಗಿನ ತೋಟವನ್ನು ಹೊಂದಿದೆ. ಲಾಭಗಳಿಕೆ ಸಣ್ಣ ರೈತರು ಎದುರಿಸುವ ಬಹುದೊಡ್ಡ ಸವಾಲು. ಫಾರ್ಮರ್‌ ಫಸ್ಟ್‌ ಪ್ರೋಗ್ರಾಂ (ಎಫ್‌ಎಫ್‌ಪಿ) ೨೦೧೬ರಿಂದ ಪತಿಯೂರ್‌ ಪಂಚಾಯತ್‌ನಲ್ಲಿ ಆರಂಭವಾಯಿತು. ಇಂಡಿಯನ್‌ ಕೌನ್ಸಿಲ್‌ ಆಫ್‌ ಅಗ್ರಿಕಲ್ಚರ್‌ ರಿಸರ್ಚ್‌- ಸೆಂಟ್ರಲ್‌ ಪ್ಲಾಂಟೇಶನ್‌ ಕ್ರಾಪ್ಸ್‌ ರಿಸರ್ಚ್‌ ಇನ್ಸ್‌ಟ್ಯೂಟ್‌, ಕಾಯಂಕುಲಂ ಇವರುಗಳು ಕೃಷಿಕರ ಜೀವನಕ್ರಮ ಹಾಗೂ ಆದಾಯ ಹೆಚ್ಚಿಸಲು ತಂತ್ರಜ್ಞಾನವನ್ನ ಒಗ್ಗೂಡಿಸುವುದನ್ನು ಪ್ರಚುರಪಡಿಸಿದರು. ಬೆಳೆ, ತೋಟಗಾರಿಕೆ, ಜಾನುವಾರು, ನೈಸರ್ಗಿಕ ಸಂಪನ್ಮೂಲ ನಿರ್ವಹಣೆ, ಮೌಲ್ಯವರ್ಧನೆ ಮತ್ತು ಐಎಫ್‌ಎಸ್‌ ಈ ವಿಷಯಗಳಲ್ಲಿ ಮಧ್ಯಸ್ಥಿಕೆ ವಹಿಸಿ ೧೦೦೦ ಕೃಷಿ ಕುಟುಂಬಗಳೊಡನೆ ಕೆಲಸ ಮಾಡುವ ಮೂಲಕ ಸಾಧಿಸಲಾಯಿತು.

 

ಶ್ರೀಮತಿ ರಾಧಾಕುಮಾರಿ, ಅಧ್ಯಕ್ಷರು, ಕಮ್ಯುನಿಟಿ ಡೆವಲಪಿಂಗ್‌ ಸೊಸೈಟಿ, ವಾರ್ಡ್‌ -೧ ಇವರು ಇದರಲ್ಲಿ ಭಾಗವಹಿಸಿದ್ದು ಗುಂಪು ಕೃಷಿಯಲ್ಲಿ ನಾಯಕಿಯಾಗಿ ಹೊರಹೊಮ್ಮಿದ್ದಾರೆ. “ನಾವೆಲ್ಲರೂ ಪಾರ್ಮರ್‌ ಫಸ್ಟ್‌ ಪ್ರೋಗ್ರಾಂನಿಂದಾಗಿ ಉತ್ತೇಜನದೊಂದಿಗೆ ಆತ್ಮವಿಶ್ವಾಸವನ್ನುಪಡೆದುಕೊಂಡಿದ್ದೇವೆ. ಕಳೆದ ಐದು ವರ್ಷಗಳಲ್ಲಿನ ಎಳ್ಳು ಕೃಷಿಯ ಯಶಸ್ಸಿನಿಂದಾಗಿ ಭತ್ತದ ಕೃಷಿಯನ್ನು ಕೂಡ ಪುನಶ್ಚೇತನ ಮಾಡಲು ಪ್ರೇರೇಪಿಸಿದೆ. ೧೯ ವಾರ್ಡುಗಳ ೬೮ ಮಹಿಳಾ ಗುಂಪುಗಳಲ್ಲಿ ನಮ್ಮ ಗುಂಪು ಅತಿ ಹೆಚ್ಚಿನ ಇಳುವರಿ ಹೆಕ್ಟೇರಿಗೆ ೫೦೦ ಕೆಜಿ ಉತ್ಪಾದಿಸಿದೆ. ಇದರೊಂದಿಗೆ ನಾವು  ಸಾವಯವ ವಿಧಾನದಲ್ಲಿ ಗಡ್ಡೆಗಳು, ಕಾಳುಗಳು, ಮಸಾಲೆಗಳು, ತರಕಾರಿಗಳು, ಧಾನ್ಯಗಳು ಮತ್ತು ಮೇವಿನ ಬೆಳೆಗಳನ್ನು ಬೆಳೆಯುವುದರಲ್ಲೂ ಪರಿಣತಿ ಸಾಧಿಸಿದ್ದೇವೆ. ನಮ್ಮಲ್ಲಿನ ಪ್ರತಿ ಮಹಿಳೆ ಎಂಜಿಎನ್‌ಆರ್‌ಇಜಿಎಸ್‌ನ ವೇತನದ ಹೊರತಾಗಿ ಬೆಳೆ ಬೆಳೆಯುವ ಋತುವಿನಲ್ಲಿ ರೂ.೧೦,೦೦೦-೧೨,೦೦೦ ಹೆಚ್ಚುವರಿ ಆದಾಯ ಗಳಿಸುತ್ತಿದ್ದಾಳೆ. ತಾಜಾ ಉತ್ಪನ್ನಗಳನ್ನು ನಮ್ಮ ಕುಟುಂಬದ ಬಳಕೆಗೆ ಇಟ್ಟುಕೊಂಡು ಹೆಚ್ಚುವರಿಯಾದದ್ದನ್ನು ಮಾರಾಟ ಮಾಡುತ್ತಿದ್ದೇವೆ. ಇದಕ್ಕೆ ನಮ್ಮ ಕುಟುಂಬದ ಸಹಕಾರ ಕೂಡ ಇದೆ. ಅದರಲ್ಲೂ ಕೋವಿಡ್‌ ಸಮಯದಲ್ಲಿ ನಮ್ಮ ಮಕ್ಕಳು ಖುಷಿಯಿಂದ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರು. ನಮ್ಮ ವಯಸ್ಸಿನ ಹೊರತಾಗಿ ನಮ್ಮನ್ನು ಕೃಷಿಕರೆಂದು, ಗಳಿಸುವವರೆಂದು, ಪರಿಣಿತರೆಂದು ಗೌರವಿಸಲಾಗುತ್ತಿದೆ. ಇದು ನಿಜವಾಗಿ ಬಹುದೊಡ್ಡ ಸಂಗತಿ”.

 

ಮಧ್ಯಸ್ಥಿಕೆಗಳ ಟೈಂಲೈನ್‌ ಕ್ಷಿಪ್ರ ಗ್ರಾಮೀಣ ವಿಶ್ಲೇಷಣೆ, ಪಾರ್ಟಿಸಿಪೆಟರಿ ರೂರಲ್‌ ಅನಾಲಿಸಿಸ್‌ (ಪಿಆರ್‌ಎ), ೭೫೦ ಮಾದರಿ ಪ್ರತಿಸ್ಪಂದಕರ ನಡುವೆ ಕೇಂದ್ರಿಕೃತ ಗುಂಪು ಚರ್ಚೆ (ಎಫ್‌ಜಿಡಿ)ಯನ್ನು ಎಲ್ಲ ೧೯ ವಾರ್ಡುಗಳಲ್ಲಿ ನಡೆಸಲಾಯಿತು. ಇದು ವಾರ್ಡಿನ ಪ್ರತಿನಿಧಿಗಳು, ಮಧ್ಯಸ್ಥಿಕೆಗಾರರನ್ನು ಒಳಗೊಂಡಿತ್ತು. ಮುಖ್ಯವಾದ ಸಮಸ್ಯೆಗಳು ಹಾಗೂ ಪರಿಹಾರಗಳು, ರೈತರ ಆಕಾಂಕ್ಷೆಗಳು ಮತ್ತು ಕಾರ್ಯಕ್ರಮದ ಮುಖ್ಯ ಉದ್ದೇಶಗಳು ಇವೆಲ್ಲವನ್ನೂ ೨೦೧೬ರಲ್ಲಿ ಪೂರ್ಣಗೊಳಿಸಲಾಯಿತು. ಈ ಸವಾಲುಗಳನ್ನು ಎದುರಿಸಲು ತಂತ್ರಗಳನ್ನು ರೂಪಿಸಲಾಯಿತು : ಸಣ್ಣ ತೆಂಗಿನ ತೋಟಗಳು; ಬದಲಾಗುತ್ತಿರುವ ಸಾಮಾಜಿಕ, ಆರ್ಥಿಕ ಕೃಷಿಯ ಸವಾಲುಗಳು  ಉತ್ಪಾದನೆಯ ಪ್ರಮಾಣವನ್ನು ಒಳಗೊಂಡಿತ್ತು. ಇದರೊಂದಿಗೆ ಸಣ್ಣ ರೈತರನ್ನು ಅದರಲ್ಲೂ ಮಹಿಳೆಯರನ್ನು ತಲುಪುವ ಸವಾಲು, ರೈತರ ಸೀಮಿತ ಸಂಪನ್ಮೂಲಗಳು ಹಾಗೂ ಆದಾಯವನ್ನು ಒಳಗೊಂಡಿತ್ತು. ಇದಕ್ಕೆ ಕಂಡುಕೊಂಡ ಮುಖ್ಯ ತಂತ್ರ ಮೌಲ್ಯವರ್ಧನೆ. ಪಂಚಾಯತ್‌ನ ಸಣ್ಣ ಹಾಗೂ ಅತಿಸಣ್ಣ ರೈತರಿಗೆ ಸೂಕ್ತವಾದ ʼಮೌಲ್ಯವರ್ಧನೆ ವಿಸ್ತರಣಾ ತಂತ್ರಗಳನ್ನುʼ ವ್ಯಾಖ್ಯಾನಿಸಿ, ಪರಿಷ್ಕರಿಸಿ, ವಿನ್ಯಾಸಗೊಳಿಸಿ, ಅಭಿವೃದ್ಧಿ ಪಡಿಸಿ, ಮಾನವೀಯಗೊಳಿಸುವುದು ಅತ್ಯಗತ್ಯವಾಗಿತ್ತು.

ಸಾಂದರ್ಭಿಕ ಅಧ್ಯಯನ ಮತ್ತು ವಿಶ್ಲೇಷಣೆಯಲ್ಲಿ ಕೃಷಿ ಸಮುದಾಯಗಳು, ಜನಪ್ರತಿನಿಧಿಗಳು (ವಾರ್ಡ್‌ ಸದಸ್ಯರು, ಪಂಚಾಯತ್‌ ಸ್ಥಳೀಯ ಸಂಸ್ಥೆಗಳು), ತೆಂಗು ಕೃಷಿ ಉತ್ಪಾದಕ ಸೊಸೈಟಿಗಳು, ಮಹಿಳಾ ಸ್ವಸಹಾಯಸಂಘಗಳು, ಎಂಜಿಎನ್‌ಆರ್‌ಇಜಿಎಸ್‌ ಕೆಲಸಗಾರರು, ಜಾನುವಾರು ಹಾಗೂ ಕೋಳಿ ಸಾಕಣೆದಾರರು, ಗ್ರಾಮೀಣ ಯುವಕರನ್ನು ಒಳಗೊಳ್ಳಲಾಯಿತು. ಸಣ್ಣ ರೈತರ ಉತ್ಪಾದನಾ ವ್ಯವಸ್ಥೆಗಳಿಗಿರುವ ಬಹುಮುಖಿ ಆಯಾಮಗಳನ್ನು ಸಮರ್ಪಕವಾಗಿ ತಿಳಿಸಲಾಗಿಲ್ಲ ಎಂದು ಅಧ್ಯಯನವು ತಿಳಿಸಿದೆ. ಉತ್ಪಾದನೆಯಲ್ಲಿ ಸುಧಾರಣೆ ತರಲು ಬೆಳೆ ವ್ಯವಸ್ಥೆಯ ಆಯ್ಕೆ, ಉತ್ತಮ ಕೃಷಿ ಪದ್ಧತಿಗಳ ಅಳವಡಿಕೆ, ಕೃಷಿ ಹೊಂಡಗಳ ಪುನಶ್ಚೇತನ, ಉತ್ತಮ ಸಂಸ್ಕರಣೆ ಹಾಗೂ ಮಾರುಕಟ್ಟೆ ಪ್ರಯತ್ನಗಳಂತಹ ಸಾಧ್ಯತೆಗಳನ್ನು ಒಳಗೊಳ್ಳಲಾಯಿತು. ಮೌಲ್ಯವರ್ಧನೆಯ ಕೊರತೆ, ಯೋಜಿತ ಮಾರುಕಟ್ಟೆ ಯತ್ನಗಳು, ಕೂಲಿ ಹಾಗೂ ಒಳಸುರಿಯುವಿಕೆಗಳ ಹೆಚ್ಚಿನ ವೆಚ್ಚ, ಛಿದ್ರಗೊಂಡ ಹಿಡುವಳಿಗಳು, ಮನೆತೋಟಗಳ ವಿಸ್ತೀರ್ಣ ತಗ್ಗುತ್ತಿರುವುದು ಇವುಗಳನ್ನು ಪರಿಹರಿಸಲೇಬೇಕಾದ ಮುಖ್ಯಸಮಸ್ಯೆಗಳೆಂದು ಗುರುತಿಸಲಾಯಿತು.

ಆರಂಭದಲ್ಲಿ ಮನೆತೋಟಗಳ ಮಟ್ಟಿಗೆ ಯೋಜನೆಯನ್ನು ತಯಾರಿಸಿ ರೈತರು ತಮ್ಮ ತೋಟಗಳ ನಕ್ಷೆಯನ್ನು ತಯಾರಿಸಿ ಅದರಲ್ಲಿ ಪ್ರಸ್ತುತ ಸನ್ನಿವೇಶ, ಬೆಳೆಗಳು, ಕೃಷಿಯಲ್ಲಿ ಒಗ್ಗೂಡಿರುವ ವಿಷಯಗಳು, ಜಲಮೂಲಗಳು, ಭೂಮಿ, ಮಣ್ಣಿನ ವಿಧ, ಹಾಕಿರುವ ಬಂಡವಾಳ, ಲಾಭ/ನಷ್ಟದ ಲೆಕ್ಕಾಚಾರಗಳನ್ನು ಅದರಲ್ಲಿ ತೋರಿಸುವಂತೆ ತಿಳಿಸಲಾಯಿತು. ತೆಂಗಿನ ಇಳುವರಿ, ಸಲಹಾ ಸೇವೆಗಳ ಲಭ್ಯತೆ, ಸ್ಥಳೀಯ ಸಂಸ್ಥೆಗಳಲ್ಲಿ ಲಭ್ಯವಿರುವ ನೆರವು ಯೋಜನೆಗಳು, ಮೌಲ್ಯವರ್ಧನೆಯ ಹಾದಿಯಲ್ಲಿನ ತೊಡಕುಗಳು ಇವುಗಳನ್ನು ದಾಖಲಿಸಲಾಯಿತು.

 ಒಮ್ಮುಖತೆ ಮತ್ತು ಬಲವರ್ಧನೆ

ಪ್ರತಿ ಹೆಕ್ಟೇರಿಗೆ ತಲುಪಬೇಕಾದ ಕುಟುಂಬಗಳ ಸಂಖ್ಯೆ ೪ರಿಂದ ೧೦. ಹಾಗಾಗಿ ತಂತ್ರಜ್ಞಾನದ ಪ್ರಸರಣ ಮತ್ತು ಅಳವಡಿಕೆಗೆ ಬಲವಾದ ಉದ್ದೇಶಕ್ಕೆ ತಕ್ಕಂತಹ ಸಂಪರ್ಕಗಳು ಮತ್ತು ಸಾಮಾಜಿಕ ಸಂಸ್ಥೆಗಳ ಒಮ್ಮುಖತೆ ಅಗತ್ಯವಾಗಿತ್ತು. ಸ್ಥಳೀಯ ಆಡಳಿತವು ಎಲ್ಲ ೧೯ ವಾರ್ಡುಗಳ ಸದಸ್ಯರಿಗೆ ಸಮಾಜವನ್ನು ಸಜ್ಜುಗೊಳಿಸಲು ಬೆಂಬಲ ನೀಡಿತು. ಎಂಜಿಎನ್‌ಆರ್‌ಇಜಿಎಸ್‌ನೊಂದಿಗೆ ಕೂಡಿ ಆಹಾರ ಭದ್ರತೆಯ ಅನ್ವೇಷಣೆಯಲ್ಲಿ ತೊಡಗಿತು. ಪಂಚಾಯತ್‌ನ ಪಶುವೈದ್ಯಕೀಯ ಕ್ಲಿನಿಕ್‌ನ ಪಶುವೈದ್ಯಕೀಯ ಸರ್ಜನ್‌ ಡಾ.ಮಧುರೈ ಕೋಳಿ ಮತ್ತು ಜಾನುವಾರು ಸಾಕಣೆ ಯೋಜನೆಯಲ್ಲಿ ತಮ್ಮ ಪರಿಣಿತ ಅನುಭವವನ್ನು ಹಂಚಿಕೊಂಡರು. ಸ್ಥಳೀಯ ಆಡಳಿತದ ನೆರವು ಕ್ರಿಯಾಸಂಶೋಧನೆಗಳು ಯೋಜಿತವಾಗಿ ಕೇಂದ್ರೀಕೃತವಾಗಿ ನಡೆಯುವಂತೆ ಮಾಡಿದವು. ನಕಲು ಮಾಡುವುದನ್ನು ತಪ್ಪಿಸಿ ಸಣ್ಣ ಹಾಗೂ ಅತಿಸಣ್ಣ ರೈತರು ಸಾಮಾಜಿಕ ಮತ್ತು ತಾಂತ್ರಿಕ ಪ್ರಯೋಗಗಳು ಹಾಗೂ ಅನ್ವೇಷಣೆಗಳ ಕುರಿತು ಅರಿವು ಪಡೆದು ಅವುಗಳನ್ನು ಅಳವಡಿಸಿಕೊಳ್ಳುವಂತೆ ಮಾಡಿತು. ಎಂಜಿಎನ್‌ಆರ್‌ಇಜಿಎಸ್‌ನಲ್ಲಿ ಕೆಲಸ ಮಾಡುವ ಮೂಲಕ ವಾರ್ಡ್‌ ಸದಸ್ಯರಾಗುವ ಮೂಲಕ ಕುಟುಂಬಶ್ರೀಯ ಸಿಡಿಎಸ್‌/ಎಡಿಎಸ್‌ ಮತ್ತು ಜೆಎಲ್‌ಜಿ ಮಹಿಳಾ ಕೃಷಿಕರ ನಾಯಕತ್ವವನ್ನು ಬೆಳೆಸಬಹುದು.

ಒಟ್ಟಾರೆಯಾಗಿ ಶ್ರಮ, ಸಮಯ, ಭೂಮಿ ಮತ್ತು ಅರಿವು ಇದು ಎಫ್‌ಎಫ್‌ಪಿಯ ಮೌಲ್ಯವರ್ಧನೆಯ ಆವಿಷ್ಕಾರವಾಗಿದೆ. ಅದರಲ್ಲೂ ಕೃಷಿ ಭೂಮಿಯನ್ನು ಹೊಂದುವ ಕಡಿಮೆ ಅವಕಾಶಗಳನ್ನು ಮಹಿಳಾ ಕೃಷಿಕರ ಮಟ್ಟಿಗೆ ಇದು ಮಹತ್ವದ್ದಾಗಿದೆ. ಮಹಿಳಾ ಕೃಷಿಕರು ಹೊಂದಿರುವ ಸರಾಸರಿ ಭೂಮಿ ೧೦-೧೫ ಸೆಂಟ್‌ಗಳು ಮಾತ್ರ. ಹಾಗಾಗಿ ಅವರನ್ನು ಗುಂಪುಕೃಷಿ ಮಾಡಲು ಒಗ್ಗೂಡಿಸುವುದು ಅತ್ಯವಶ್ಯಕ. ಸಾರ್ವಜನಿಕ ಸ್ಥಳಗಳಲ್ಲಿ (ದೇವಾಲಯದ ಆವರಣಗಳು, ಸರ್ಕಾರಿ ಕಛೇರಿ ಇತ್ಯಾದಿ) ಹಾಗೂ ರೈತರ ವೈಯುಕ್ತಿಕ ಭೂಮಿಯಲ್ಲಿ ಒಂದೆರೆಡು ಎಕರೆಯನ್ನು ಪರಸ್ಪರ ಒಪ್ಪಿಗೆಯ ಮೇರೆಗೆ ಪಡೆಯುವುದರ ಮೂಲಕ ಇದನ್ನು ಸಾಧಿಸಲಾಗಿದೆ. ಇದರಿಂದ ೨೫೦ ಹೆಕ್ಟೇರ್‌ ಪಾಳುಬಿದ್ದ ಭೂಮಿಯನ್ನು ಉತ್ಪಾದನೆಗೆ ಬಳಸಿಕೊಳ್ಳುವ ಮೂಲಕ ಮೌಲ್ಯವರ್ಧನೆಯನ್ನು ಸಾಧಿಸಲಾಯಿತು.

 ಎಳ್ಳು ಸ್ಥಾಪಿತ ಬೆಳೆಯಾಗಿ ಆಯ್ಕೆ ಮತ್ತು ಮೌಲ್ಯವರ್ಧನೆ

ಪಂಚಾಯತ್‌ ವ್ಯಾಪ್ತಿಯಲ್ಲಿ ನೀರಿನ ಉಳಿತಾಯ, ಪೋಷಕಾಂಶ ಭರಿತ ಹವಾಮಾನ ಸ್ಥಿತಿಸ್ಥಾಪಕ ಗುಣವುಳ್ಳ ಬೆಳೆಗಳಾದ ರಾಗಿ, ದ್ವಿದಳ ಧಾನ್ಯಗಳು, ಜೋಳ, ಸೂರ್ಯಕಾಂತಿ ಮತ್ತು ನೆಲಗಡಲೆ ಇವುಗಳನ್ನು ಭಾಗವಹಿಸುವಿಕೆಯ ಪರಿಚಯ ಹಾಗೂ ಪ್ರಯೋಗಗಳ ಮೂಲಕ ಕಾರ್ಯಕ್ರಮವನ್ನು ಆರಂಭಿಸಲಾಯಿತು. ೧೯ ವಾರ್ಡುಗಳಲ್ಲಿ ೨೪೮ ಮಹಿಳಾ ಸ್ವಸಹಾಯ ಸಂಘಗಳನ್ನು ಒಳಗೊಂಡಂತೆ ೧೬ ಬಗೆಯ ಬೆಳೆಗಳನ್ನು  ಭಾಗವಹಿಸಿದವರೊಂದಿಗೆ ಪ್ರಯೋಗ ಹಾಗೂ ಮೌಲ್ಯಮಾಪನ ಮಾಡಲಾಯಿತು. ನಂತರ ಭಾಗವಹಿಸಿದ ರೈತರು, ಸಾರ್ವಜನಿಕರು ಮತ್ತು ಇಂಡಿಯನ್‌ ಕೌನ್ಸಿಲ್‌ ಆಫ್‌ ಅಗ್ರಿಕಲ್ಚರಲ್‌ ರಿಸರ್ಚ್‌ – ಸೆಂಟ್ರಲ್‌ ಪ್ಲಾಂಟೇಶನ್‌ ಕ್ರಾಪ್ಸ್‌ ರಿಸರ್ಚ್‌ ಇನ್ಸ್‌ಟ್ಯೂಟ್‌ ಮತ್ತು ಸಂಬಂಧಿತ ಏಜೆನ್ಸಿಗಳು/ಸಂಸ್ಥೆಗಳೊಂದಿಗೆ ಸೇರಿ ಮೌಲ್ಯಮಾಪನ ಮಾಡಲಾಯಿತು. ಇದರ ಪ್ರಕಾರ ಸೂರ್ಯಕಾಂತಿಗೆ ಈ ರೀತಿಯ ಗುಣವಿಲ್ಲ ಎಂದು ತೀರ್ಮಾನಿಸಿ ಅದನ್ನು ನಿಲ್ಲಿಸಲಾಯಿತು.

ಎಳ್ಳು ಮತ್ತು ರಾಗಿ ಕಡಿಮೆ ಸಂಪನ್ಮೂಲವನ್ನು ಬೇಡುವ, ಪೋಷಕಾಂಶಯುಕ್ತ, ಬಹುಬೇಡಿಕೆಯ, ಕಡಿಮೆ ಕೀಟನಾಶಕ ಬಳಕೆ ಹಾಗೂ ರೋಗಕ್ಕೆ ತುತ್ತಾಗುವ ಬೆಳೆಗಳೆಂದು ಒಪ್ಪಿಕೊಳ್ಳಲಾಯಿತು. ಜೊತೆಗೆ ೨೫೦ ಹೆಕ್ಟೇರ್‌ ಪ್ರದೇಶದಲ್ಲಿ ಕೃಷಿಯನ್ನು ಕೈಗೊಂಡಿದ್ದರಿಂದ ಮಣ್ಣಿಗೆ ಪೋಷಕಾಂಶಗಳನ್ನು ಮತ್ತು ಬೆಳೆ ತ್ಯಾಜ್ಯವನ್ನು ಒದಗಿಸುವ ಮೂಲಕ ಇಂಗಾಲದ ಅಂಶವನ್ನು ಸರಿದೂಗಿಸಲಾಯಿತು.

ಎಳ್ಳು ʼಒಣಟ್ಟುಕರ ಮಣ್ಣು ಪ್ರದೇಶʼದ ಸಾಂಪ್ರದಾಯಿಕ ಬೆಳೆಯಾಗಿದೆ. ಇದು ಪ್ರಧಾನವಾಗಿ ಮರಳುಮಿಶ್ರಿತ ಮಣ್ಣಿನ ಪ್ರದೇಶ. ಇದನ್ನು ಸಾಂಪ್ರದಾಯಿಕವಾಗಿ ಭತ್ತದ ನಂತರ ಎರಡನೆಯ ಬೆಳೆಯಾಗಿ ಗದ್ದೆಗಳಲ್ಲಿ ಬೆಳೆಸಲಾಗುತ್ತದೆ. ಯೋಜನಾ ಪೂರ್ವ ಸಮೀಕ್ಷೆಯು ಎಳ್ಳು (ಇದನ್ನು ಶೀಘ್ರದಲ್ಲಿ ಜಿಐ ಬೆಳೆ ಎಂದು ಘೋಷಿಸಲಾಗುವುದು) ಮತ್ತು ಭತ್ತವನ್ನು ಪಂಚಾಯತ್‌ನಲ್ಲಿ ಸ್ಥಗಿತ ಬೆಳೆಗಳೆಂದು ತೋರಿಸಿದೆ. ಹಾಗಾಗಿ ಎಳ್ಳಿನ ಪುನಶ್ಚೇತನಗೊಳಿಸುವುದು ʼಮೌಲ್ಯವರ್ಧನೆ ವಿಸ್ತರಣಾ ತಂತ್ರʼ(ವಿಎಇಎಸ್‌) ಮೌಲ್ಯವರ್ಧನೆಯ ಯಶಸ್ವಿ ಆವಿಷ್ಕಾರವಾಗಿದೆ. ನಿರ್ದಿಷ್ಟ ಪ್ರದೇಶಕ್ಕೆ (ಕಾಯಂಕುಲಂ-೧, ತಿಲಕ್‌, ತಿಲತಾರ, ತಿಲರಾಣಿ, ತಿಲೋತ್ತಮ) ಕೆಎಯು ಬಿಡುಗಡೆ ಮಾಡಿದ ಹೆಚ್ಚಿನ ಇಳುವರಿ ತಳಿಗಳ ಭಾಗವಹಿಸಿದವರ ಮೌಲ್ಯಮಾಪನವು ೨೦೧೬ರ ಅನ್ವೇಷಣೆಯಾಗಿದೆ. ೨೦೧೬ರಲ್ಲಿ ಆರಂಭಿಸಿದಾಗ ೨.೦೪ ಎಕರೆಗಳಷ್ಟು ಇದ್ದ ಭೂಮಿಯನ್ನು ಮಹಿಳಾ ಗುಂಪುಗಳು ಸೇರಿ ಕ್ರಮೇಣ ೧೮೮ ಎಕರೆಗಳಿಗೆ ವಿಸ್ತರಿಸಿದವು. ೧೯ ಸ್ಥಳಗಳಲ್ಲಿ ೬೮ ಗುಂಪುಗಳು ಮಾಡಿದ ಮೌಲ್ಯಮಾಪನದ ಆಧಾರದ ಮೇಲೆ ಕಾಯಂಕುಲಂ -೧ ಮತ್ತು ತಿಲಕ್‌ಗೆ ಪ್ರಾಶಸ್ತ್ಯ ನೀಡಲಾಯಿತು. ಮೌಲ್ಯಮಾಪನವು ಕಾಯಂಕುಲಂ-೧ರಲ್ಲಿ ಎಣ್ಣೆಯ ಅಂಶ ೪೬-೪೮% ಮತ್ತು ತಿಲಕ್‌ನಲ್ಲಿ ೩೮% ಹಾಗೂ ಉಳಿದ ತಳಿಗಳಲ್ಲಿ ಇದಕ್ಕಿಂತ ಕಡಿಮೆಯಿರುತ್ತದೆ ಎಂದು ತೋರಿಸಿಕೊಟ್ಟಿತು. ಈ ಎರಡೂ ತಳಿಗಳು ರೋಗಭಾದೆಗೆ ತುತ್ತಾಗುವುದು ಕಡಿಮೆ ಎಂದು ತೋರಿಸಿಕೊಟ್ಟಿತು. ಆದ್ದರಿಂದ ಮಹಿಳಾ ಗುಂಪುಗಳು ತಮ್ಮ ಅಗತ್ಯ ಹಾಗೂ ಸ್ಥಳೀಯ ಸಂದರ್ಭಕ್ಕೆ ಹೊಂದುವ ತಳಿಯನ್ನು ಆಯ್ಕೆ ಮಾಡಿಕೊಂಡರು.

ವರ್ಷವೊಂದಕ್ಕೆ ೫ ರಿಂದ ೮ ಟನ್‌ ದೇಸಿ ಎಳ್ಳನ್ನು ʼಸ್ಥಾಪಿತ ಉತ್ಪನ್ನʼವಾಗಿ ಉತ್ಪಾದಿಸಲಾಗುತ್ತಿದೆ. ಕೆಜಿಗೆ ರೂ.೨೫೦-೩೦೦ಗಳಷ್ಟು ಬೇಡಿಕೆ ಹೊಂದಿದೆ. ಎಳ್ಳನ್ನು ಸ್ವಚ್ಛಗೊಳಿಸಿ, ಪ್ಯಾಕ್‌ ಮಾಡಿ ಪಂಚಾಯತ್‌ಗಳಲ್ಲಿ ಮಾರಾಟ ಮಾಡಲಾಗುತ್ತಿದೆ. ಸ್ಥಳೀಯ ಬ್ರಾಂಡಿನ ಈ ಎಳ್ಳೆಣ್ಣೆ ʼಪತಿಯೂರು ಕರ್ಶಕ ಎಲ್ಲೆನ್ನʼ  ಅಂದರೆ ʼಪತಿಯೂರು ರೈತರ ಎಳ್ಳೆಣ್ಣೆʼ ಎಂದು ಲೀಟರಿಗೆ ರೂ.೯೦೦-೧೦೦೦ಗಳಿಗೆ ಮಾರಾಟ ಮಾಡುತ್ತಿದ್ದಾರೆ. ಎಣ್ಣೆ ತೆಗೆಯುವ ಸೌಲಭ್ಯವನ್ನು ಯುವ ಉದ್ಯಮಿ ಕಾರ್ಯಕ್ರಮದಡಿ ಸ್ಥಾಪಿಸಲಾಗಿದೆ. ಮಹಿಳಾ ಕೃಷಿಕರು ಎಳ್ಳು ಕೃಷಿಯಲ್ಲಿ ಸ್ಥಳೀಯ ಪರಿಣತರಾಗಿದ್ದಾರೆ. ಕೊಯ್ಲಿನ ನಂತರದ ಸಂಸ್ಕರಣಾ ವ್ಯವಸ್ಥೆಗಳಿಂದಾಗಿ ಮಹಿಳೆಯರು ಸಮಾಜ ಹಾಗೂ ಕುಟುಂಬಕ್ಕೆ ಆರ್ಥಿಕ ಕೊಡುಗೆ ನೀಡುತ್ತಿದ್ದಾರೆ.  ರೈತರೊಂದಿಗೆ ರೈತರ ಜ್ಞಾನಪ್ರಸರಣವಾಗುತ್ತಿರುವುದು ನಿಜಕ್ಕೂ ಬಹಳ ಒಳ್ಳೆಯ ಮೌಲ್ಯವರ್ಧನೆ.

ಮಹಿಳಾ ಕೃಷಿಕರಿಗೆ ʼಕೃಷಿ ಡೈರಿʼ ಇಟ್ಟು ಬೆಳೆಯ ಹಂತಗಳನ್ನು, ಕೀಟನಾಶಕ/ರೋಗದ ವಾಯಿದೆ, ಇಳುವರಿ, ಎದರಿಸಿದ ಸಮಸ್ಯೆಗಳನ್ನು ದಾಖಲಿಸಿಡಲು ಮಾರ್ಗದರ್ಶನ ನೀಡಲಾಯಿತು. ವಾಟ್ಸಪ್‌ ಗುಂಪುಗಳು ತಮ್ಮ ಅನುಭವಗಳು, ಸಮಸ್ಯೆಗಳಿಗೆ ವಿಜ್ಞಾನಿಗಳು ಹಾಗೂ ಸಹ ಕೃಷಿಕರ ಪರಿಹಾರಗಳು, ಸಾಧನೆಗಳನ್ನು ತೋರುವ ಚಿತ್ರಗಳು, ವಿಡಿಯೋಗಳು, ಸಂದೇಶಗಳು, ಪಾಡ್‌ಕಾಸ್ಟ್‌ಗಳನ್ನು ಹಂಚಿಕೊಳ್ಳಲು ವೇದಿಕೆಯಾಯಿತು. ಮೌಲ್ಯವರ್ಧನೆಯ ಸಂಪೂರ್ಣ ಪ್ರಕ್ರಿಯೆಗೆ ಸ್ಪಂದನೆ ದೊರೆಯಿತು. ಸರಳವಾದ ಐಸಿಟಿ ಪರಿಕರಗಳನ್ನು ಬಳಸುವುದರಿಂದ ಅವರು ತಮ್ಮ ಸಮಯವನ್ನು ಉತ್ತಮವಾಗಿ ನಿರ್ವಹಿಸುವುದರೊಂದಿಗೆ ತಂತ್ರಜ್ಞಾನಗಳನ್ನು ಪಸರಿಸಲು, ಬೆಳೆನಷ್ಟವನ್ನು ಕಡಿಮೆಗೊಳಿಸುವುದರೊಂದಿಗೆ ಪರಸ್ಪರ ಸಬಲರನ್ನಾಗಿಸಲು ಅನುವು ಮಾಡಿಕೊಟ್ಟಿತು.

 ತೆಂಗು ಮತ್ತಿತರ ಉತ್ಪನ್ನಗಳುಮೌಲ್ಯವರ್ಧನೆ

ದೈನಂದಿನ ಜೀವನ, ನಡವಳಿಕೆ, ಉಡುಗೆತೊಡುಗೆ, ಸಾಮಾಜಿಕ ಸಂಬಂಧಗಳು, ಪರಿಸರ ಸ್ನೇಹಪರತೆ ಇತ್ಯಾದಿಗಳ ವಿಷಯದಲ್ಲಿ ಗ್ರಾಮೀಣ ಜೀವನ ಸರಳವಾಗಿದೆ. ಸಮುದಾಯಗಳ ತಲೆತಲಾಂತರದ ಅನುಭವದ ಕಲಿಕೆಯ ಪರಿಣಾಮವಾಗಿ ಸರಳವಾದ ಆವಿಷ್ಕಾರಗಳನ್ನು ಸುಲಭವಾಗಿ ಅರ್ಥಮಾಡಿಕೊಳ್ಳಬಹುದು.

೨೦೧೯ರಲ್ಲಿ ರೈತ ಉತ್ಪಾದಕ ಕಂಪನಿಯು ಸ್ಥಾಪಿತವಾಗಿ ರೈತರೊಂದಿಗೆ ತಳಮಟ್ಟದಿಂದ ಕೆಲಸ ಮಾಡುತ್ತಿರುವುದು ಗಮನಾರ್ಹವಾದ ಸಾಧನೆಯಾಗಿದೆ. ರೈತರಿಂದ ಕೊಬ್ಬರಿ, ಅರಿಶಿಣ, ಗೆಡ್ಡೆಗಳಂತಹ ತಾಜಾ ಉತ್ಪನ್ನಗಳನ್ನು ಖರೀದಿಸಿದ್ದರಿಂದ ಅವರ ಉತ್ಸಾಹವು ಹೆಚ್ಚಿತು. ಎಫ್‌ಎಫ್‌ಪಿ ನಬಾರ್ಡ್‌ ಒಡನಾಡ ರೈತ ಉತ್ಪಾದಕ ಕಂಪನಿ ಲಿ., ಎದುರಿಸಿದ ಸವಾಲುಗಳು ಹಾಗೂ ಅವುಗಳನ್ನು ನಿರ್ವಹಿಸಿದ ರೀತಿಯನ್ನು ಕೆಳಗೆ ನೀಡಲಾಗಿದೆ.

ತೆಂಗು, ಎಳ್ಳು ಮತ್ತು ಅರಿಶಿಣದ ಉತ್ಪಾದನೆಯು ಹೆಚ್ಚಿದ ನಂತರ ಮೌಲ್ಯವರ್ಧನೆಯನ್ನು ಆರಂಭಿಸಲಾಯಿತು. ಸಮಯಕ್ಕೆ ಸರಿಯಾಗಿ ಕೊಯ್ಲು ಮಾಡುವುದು ಕೂಡ ಮೌಲ್ಯವರ್ಧನೆಯಾಗುತ್ತದೆ. ತೆಂಗನ್ನು ಮಾರುಕಟ್ಟೆಗೆ ತಲುಪಿಸಲು ಕಾಯಿ ಬಿಟ್ಟ ಏಳನೇ ತಿಂಗಳಿಗೆ ಕುಯ್ಯಬೇಕು. ಕಂಪನಿಯು ಒಣಕೊಬ್ಬರಿಯ ಗುಣಮಟ್ಟದ ಬಗ್ಗೆ ಖಾತ್ರಿ ನೀಡುವುದಿಲ್ಲ. ಎಫ್‌ಎಫ್‌ಪಿಯು ಕೊಬ್ಬರಿಯ ತೇವಾಂಶ ಅಳೆಯುವ ಮೀಟರನ್ನು ರೂ.೩೫೦೦-೪೦೦೦ ಒದಗಿಸಿತು. ಸಂಸ್ಕರಣಾ ಪ್ರಕ್ರಿಯೆಯ ತರುವಾಯ ಗುಣಮಟ್ಟದ ಒಣಕೊಬ್ಬರಿಯ ತೇವಾಂಶ ೬% ಎಂದು ಅಂತಿಮಗೊಳಿಸಲಾಯಿತು. ಒಣಕೊಬ್ಬರಿಯ ಗಿಟುಕನ್ನು ಈ ಮೀಟರಿನ ನಾಬಿಗಿಟ್ಟು ತೇವಾಂಶವನ್ನು ನೋಡಬಹುದು.

ಮಹಿಳಾ ಗುಂಪುಗಳು ತಮ್ಮ ಅಗತ್ಯಗಳು ಮತ್ತು ಸ್ಥಳೀಯ ಪರಿಸ್ಥಿತಿಗೆ ತಕ್ಕ ಸೂಕ್ತವಾದ ಬೆಳೆ ಪ್ರಭೇದಗಳನ್ನು ತಾವೇ ಆಯ್ಕೆ ಮಾಡುವ ಸಾಮರ್ಥ್ಯವನ್ನು ಹೊಂದಿವೆ

ನಂತರ ತೆಂಗಿನ ಎಣ್ಣೆಯ ಘಟಕಗಳು, ಎರಡು ಪರಿಶುದ್ಧ ತೆಂಗಿನ ಎಣ್ಣೆ ಮತ್ತು ತೆಂಗು ಆಧಾರಿತ ಆಹಾರ ಉತ್ಪನ್ನ ಘಟಕಗಳು, ಒಂದು ಅರಿಶಿಣ ಬಾಯ್ಲರ್‌, ಡ್ರೈಯರ್‌ ಮತ್ತು ಪುಡಿಮಾಡುವ ಘಟಕವನ್ನು ಎಫ್‌ಎಫ್‌ಪಿಯಲ್ಲಿ ಸ್ಥಾಪಿಸಲಾಯಿತು. ಪ್ರಸ್ತುತ ಸುಮಾರು ೨೫೦೦೦ ತೆಂಗಿನ ಕಾಯಿಗಳಿವೆ. ಅರಿಶಿಣ ಪುಡಿಯ ಸಂಸ್ಕರಣೆಯು ೩ ಟನ್‌ ತಾಜಾ ಅರಿಶಿಣವನ್ನು ಒಳಗೊಂಡಿದೆ. ಎಳ್ಳಿನ ಮಾರ್ಕೆಟಿಂಗ್‌ ಮತ್ತು ಎಳ್ಳೆಣ್ಣೆಯ ಮಾರ್ಕೆಟಿಂಗ್‌ ವರ್ಷಕ್ಕೆ ರೂ.೧೫-೨೦ ಲಕ್ಷವಿದೆ.

೨೦೨೦ರಲ್ಲಿ ಎಫ್‌ಪಿಒ ಪತಿಯೂರ್‌ ಫಾರ್ಮರ್ಸ್‌ ಬ್ರಾಂಡ್‌ ಮೇಲೆ ಗಮನಕೇಂದ್ರೀಕರಿಸಿತ್ತು. ಈ ಹೆಸರಿನಡಿಯಲ್ಲಿ ಮಾರ್ಕೆಟಿಂಗ್‌ ಮಾಡಿದ ಉತ್ಪನ್ನಗಳು : ಪರಿಶುದ್ಧ ತೆಂಗಿನ ಎಣ್ಣೆ, ಅರಿಶಿನದಿಂದ ಅರಿಶಿನ ಪುಡಿ, ಎಳ್ಳಿನಿಂದ ಎಳ್ಳೆಣ್ಣೆ, ಸಗಣಿ ಯಿಂದ ನೆರಳಿನಲ್ಲಿ ಒಣಗಿಸಿದ ಬೆರಣಿ, ಸಾವಯವ ತ್ಯಾಜ್ಯದಿಂದ ಎರೆಹುಳುಗೊಬ್ಬರ, ದೇಸಿ ಹಸುಗಳಿಂದ ತುಪ್ಪ ಮತ್ತು ಬೆಣ್ಣೆ. ಎಫ್‌ಪಿಒ ಅಡಿಯಲ್ಲಿ ಗ್ರಾಮೀಣ ʼಅಗ್ರಿಮಾರ್ಟ್‌ʼ ತೆರೆಯಲಾಯಿತು. ಇದರಲ್ಲಿ ಈ ಉತ್ಪನ್ನಗಳನ್ನೊಳಗೊಂಡಂತೆ ನಾಟಿ ವಸ್ತುಗಳು, ಸಗಣಿ, ಇನ್ನಿತರ ಜೈವಿಕ ಒಳಸುರಿಯುವಿಕೆಗಳು, ಎರೆಹುಳುಗೊಬ್ಬರ ಇತ್ಯಾದಿಗಳ ಮಾರಾಟಕ್ಕೆ ಅವಕಾಶ ನೀಡಲಾಯಿತು. ಕೋವಿಡ್‌ ಸಮಯದಲ್ಲಿ ಎಫ್‌ಪಿಒ ಕೃಷಿ ಉತ್ಪನ್ನಗಳನ್ನು ದೂರವಾಣಿ ಕರೆಯ ಮೇರೆಗೆ ಮತ್ತು ಬೇಡಿಕೆಗೆ ಅನುಗುಣವಾಗಿ ಮನೆಬಾಗಿಲಿಗೆ ತಲುಪಿಸಲು ನೆರವು ನೀಡಿತು.

 ಇವೆಲ್ಲದರಿಂದ ಕಲಿತ ಮುಖ್ಯ ಪಾಠಗಳೆಂದರೆ ಮೌಲ್ಯವರ್ಧನೆಯನ್ನು ಸರಳ ಪದ್ಧತಿಗಳು, ಸಹಕಾರ, ಸಮನ್ವಯ ಮತ್ತು ಒಮ್ಮುಖತೆಯೊಂದಿಗೆ ಎಲ್ಲ ಸಮುದಾಯಗಳನ್ನು ಒಟ್ಟುಗೂಡಿಸಿದರೆ ಸಾಧಿಸಬಹುದು. ಜೊತೆಗೆ ಸಂಶೋಧನ ಕೇಂದ್ರಗಳು ಸಾಮಾಜಿಕ ನಾವಿನ್ಯತೆಯನ್ನು ಉತ್ತೇಜಿಸಬಹುದು. ಈ ಸಂದರ್ಭದಲ್ಲಿ ಎದುರಿಸಿದ ಮುಖ್ಯ ಸವಾಲುಗಳು : ತೆಂಗಿನ ಮರವನ್ನು ಹತ್ತಬಲ್ಲವರ ಕೊರತೆ, ಕೋವಿಡ್‌ ಸಂದರ್ಭದಲ್ಲಿ ಸಾರಿಗೆ ಕಟ್ಟುಪಾಡುಗಳು, ಅಕಾಲಿಕ ಮಳೆ; ಬದಲಾದ ಸಮಾಜೋಆರ್ಥಿಕ ಪರಿಸ್ಥಿತಿಗಳಲ್ಲಿ ಭತ್ತದ ಗದ್ದೆಗಳು ವಸತಿ ಪ್ರದೇಶವಾಗಿ ಬದಲಾದ್ದರಿಂದ ಒಳಚರಂಡಿ ಸಮಸ್ಯೆಗಳು ಹುಟ್ಟಿಕೊಂಡವು. ಇವೆಲ್ಲದರ ಹೊರತಾಗಿಯೂ ಕೃಷಿ ಆವಿಷ್ಕಾರಗಳು ಮತ್ತು ಕೃಷಿ ಕೋವಿಡ್‌ ಸಮಯದಲ್ಲಿ ಭರವಸೆಯ ಬೆಳ್ಳಿರೇಖೆಗಳಾದವು. ಮೊಬೈಲ್‌ ಮೂಲಕ ನಿರಂತರ ಸಂಪರ್ಕ ಸಾಧ್ಯವಾಯಿತು ಮತ್ತು ಆದಾಯವನ್ನು ತಂದುಕೊಟ್ಟಿತು.

ಅನಿತಾ ಕುಮಾರಿ ಪಿ


Anithakumari.P

Principal Scientist ( Agrl.Extn.)

ICAR Central Plantation Crops Research Institute (CPCRI)

Kayamkulam, Kerala 690 533

 

ಆಂಗ್ಲ ಮೂಲ : ಲೀಸಾ ಇಂಡಿಯಾ; ಸಂಪುಟ :೨೩; ಸಂಚಿಕೆ : ೨ ; ಜೂನ್‌ ೨೦‌೨೧

 

Recent Posts

ಕೃಷಿಯಲ್ಲಿ ನೀರಿನ ಸಮರ್ಥ ಬಳಕೆಗಾಗಿ ಕಾಲುವೆ ಯಾಂತ್ರೀಕರಣ

ಕೃಷಿಯಲ್ಲಿ ನೀರಿನ ಸಮರ್ಥ ಬಳಕೆಗಾಗಿ ಕಾಲುವೆ ಯಾಂತ್ರೀಕರಣ

ನಮ್ಮ ನೀರಾವರಿ ವ್ಯವಸ್ಥೆಯನ್ನು 21ನೇ ಶತಮಾನದ ಬೇಡಿಕೆಗಳಿಗೆ ಹೊಂದುವಂತೆ ಮಾಡುವುದು ನಮ್ಮ ಮುಂದಿರುವ ನಿಜವಾದ ಸವಾಲಾಗಿದೆ. ತಂತ್ರಜ್ಞಾನವೇ...