ರೈತನ ಡೈರಿ – ಸುಸ್ಥಿರ ಉತ್ಪಾದನೆ ಮತ್ತು ಸಾಮೂಹಿಕ ಮಾರ್ಕೆಟಿಂಗ್ ರೈತರಿಗೊಂದು ಬಿಡುಗಡೆಯ ಮಾರ್ಗ

ಕೃಷ್ಣ ರೈ ಎನ್ನುವವರು ಅನುಕರಣೀಯ ರೈತ ಮತ್ತು ಹೊಸತನ್ನು ಅನ್ವೇಷಿಸ ಬಲ್ಲ ಉದ್ಯಮಿ. ಅವರು ಒಂದು ಹೆಕ್ಟೆರ್‌ ಭೂಮಿಯು “ಅರಣ್ಯ ಪರಿಸರವ್ಯವಸ್ಥೆ”ಯ ಅತ್ಯುತ್ತಮ ಮಾದರಿ. ಅಲ್ಲಿ ಪ್ರತಿಯೊಂದು ಒಂದೊರೊಡನೊಂದು ಒಡಗೂಡಿ ಅಚ್ಚರಿ ಹುಟ್ಟಿಸುವ ರೀತಿಯಲ್ಲಿ ಫಲಗಳನ್ನು ಕೊಡುತ್ತಿದೆ. ಬೆಳೆ – ಜಾನುವಾರುಗಳ ಸಮೀಕರಣವನ್ನು ಬಹಳ ಚೆನ್ನಾಗಿ ಸಾಧಿಸಲಾಗಿದೆ.

ಫಾರಂನ ಪ್ರವೇಶದ್ವಾರದಲ್ಲೇ ಇರುವಂತಹ ೧೦ ಮೀಟರ್‌ ಉದ್ದದ ಪ್ಲಾಸ್ಟಿಕ್‌ ಮೀನಿನ ಹೊಂಡವು ಬಂದವರನ್ನು ಸ್ವಾಗತಿಸುತ್ತದೆ. ಇದರಲ್ಲಿ ೧೦೦೦ ಮೀನುಗಳಿವೆ. ಅದಾದ ಮೇಲೆ ಹಂದಿಗಳ ದೊಡ್ಡಿಯಿದೆ. ಪ್ರತಿಯೊಂದು ಹಂದಿಯ ತೂಕ ೩೦೦ ಕೆಜಿ. ಅವರ ಫಾರಂ ಇರುವುದು ಬೆಟ್ಟದ ಇಳಿಜಾರಿನಲ್ಲಿ. ಹಾಗಾಗಿ ಕೆಳಕ್ಕೆ ಇಳಿಯುತ್ತಿದ್ದಂತೆ ಸಿರಂಜ್‌ ಪೈಪುಗಳೊಂದಿಗೆ ತೂಗುಹಾಕಿರುವ ಬಾಟಲುಗಳು ಕಣ್ಣಿಗೆ ಬೀಳುತ್ತವೆ. ಇದು ಅವರು ಕುಂಡದೊಳಗಿನ ಸಸ್ಯಗಳಿಗೆ ಮಾಡಿರುವ ಹನಿನೀರಾವರಿ ವ್ಯವಸ್ಥೆ. ಪುಟ್ಟ ಅಡುಗೆಕೈತೋಟದ ಹಿಂದೆ ೮,೦೦೦ ಲೀಟರ್‌ ಪ್ಲಾಸ್ಟಿಕ್‌ ಹೊಂಡವನ್ನು ಮಾಡಿದ್ದಾರೆ. ಇದರಲ್ಲಿ ಬಾತುಕಳೆ (ಒಂದು ಜಾತಿಯ ಕಳೆಗಿಡ) ತೇಲುತ್ತಿರುವುದನ್ನು ನೋಡಬಹುದು. ಇದು ಹಂದಿ ಮತ್ತು ಬಾತುಗಳಿಗೆ ಆಹಾರವನ್ನೊದಗಿಸುತ್ತದೆ. ಹಂದಿಗಳ ಮಲವನ್ನು ಬಾತುಗಳು ತಿನ್ನುವುದರಿಂದ ಮಾಲಿನ್ಯ ತಗ್ಗುವುದರೊಂದಿಗೆ ಸೊಳ್ಳೆಗಳ ಹಾವಳಿಯು ಇಲ್ಲವಾಗುತ್ತದೆ.

ಹಸಿರುಮನೆಗಳಲ್ಲಿ ಟೊಮೊಟೊಗಳನ್ನು ಚೈನೀಸ್‌ ಎಲೆಕೋಸು ಮತ್ತು ಹೂಕೋಸಿನೊಂದಿಗೆ ಬೆಳೆಸಲಾಗಿದೆ. ಕುಂಬಳಕಾಯಿ ಮತ್ತು ಹಾಗಲಕಾಯಿ ಬಳ್ಳಿಗಳನ್ನು ಟೊಮೊಟೊಗಳ ಮೇಲೆ ಬೆಳೆಸಲಾಗಿದೆ. ಪಶ್ಚಿಮದಲ್ಲಿ ಬಾತುಕೋಳಿಗಳು, ಕೋಳಿಗಳು ಮತ್ತು ಟರ್ಕಿಗಳನ್ನು ಬೆಳೆಸಲಾಗುತ್ತಿದೆ.

ಕೃಷ್ಣ ರೈ ಅವರ ಬಳಿ ೧೦ ಹಸುಗಳಿವೆ. ಹಾಲನ್ನು ಮಾರಾಟಮಾಡಲಾಗುತ್ತದೆ. ಸಗಣಿಯನ್ನು ಬಯೋಗ್ಯಾಸ್‌ ಉತ್ಪಾದನೆಗೆ ಬಳಸಲಾಗುತ್ತದೆ. ಜೈವಿಕ ತ್ಯಾಜ್ಯವನ್ನು ಎರೆಹುಳು ಗೊಬ್ಬರ ತಯಾರಿಕೆಗೆ ಬಳಸಲಾಗುತ್ತದೆ. ಹಲವು ಉದ್ಯಮಗಳ ಸಮೀಕರಣದಿಂದಾಗಿ ತನ್ನ ಒಂದು ಹೆಕ್ಟೇರ್‌ ಫಾರಂನಿಂದ ರೈ ಅವರು ಮಾಸಿಕ $೨೦೦೦ದಷ್ಟು ಗಳಿಸುತ್ತಿದ್ದಾರೆ. ಇದು ಸಾಮಾನ್ಯ ಕುಟುಂಬದ ಆದಾಯಕ್ಕಿಂತ ಹತ್ತು ಪಟ್ಟು ಹೆಚ್ಚು.

ಕೊಟ್ಟಿಗೆಯ ಎದುರಿಗೆ ಶೌಚಾಲಯವಿದೆ. “ತೋಟದಿಂದ ಹೊಟ್ಟೆಗೆ, ಹೊಟ್ಟೆಯಿಂದ ತೋಟಕ್ಕೆ” ಎಂದು ಶೌಚಾಲಯದ ಮೇಲೆ ಬರೆಯಲಾಗಿದೆ. ಮಲಮೂತ್ರಗಳನ್ನು ಬೇರೆ ಕಂಟೈನರ್‌ಗಳಲ್ಲಿ ಸಂಗ್ರಹಿಸಿ ಗೊಬ್ಬರವಾಗಿ ಪರಿವರ್ತಿಸಲಾಗುತ್ತದೆ. ಮನುಷ್ಯರ ಮತ್ತು ಪ್ರಾಣಿಗಳ ತ್ಯಾಜ್ಯವು ಗೊಬ್ಬರದ ಬ್ಯಾಂಕಿದ್ದಂತೆ. ಶ್ರೈ ರೈಯವರು ಅದರಿಂದ ಎರೆಹುಳ ಗೊಬ್ಬರ, ಎರೆಹುಳು ಟೀ, ಗೊಬ್ಬರದ ಕ್ಯಾಪ್ಸುಲ್‌ಗಳು ಮತ್ತು ದ್ರವಗೊಬ್ಬರಗಳನ್ನು ತಯಾರಿಸುತ್ತಾರೆ. ಇದರೊಂದಿಗೆ ಬಯೋಗ್ಯಾಸನ್ನು ಕೂಡ ಉತ್ಪಾದಿಸುತ್ತಾರೆ. ಈ ರೀತಿ ಪ್ರತಿ ಜೈವಿಕ ತ್ಯಾಜ್ಯವನ್ನು ಗೊಬ್ಬರವಾಗಿ ಪರಿವರ್ತಿಸುವುದರಿಂದ ಪ್ರತಿಯೊಂದು ಸಂಪನ್ಮೂಲದ ಗರಿಷ್ಠ ಉಪಯೋಗವನ್ನು ಪಡೆಯಲಾಗುತ್ತದೆ.

ಫೋಟೊ: ಕೀಟಗಳನ್ನು ಆಕರ್ಷಿಸಲು ಮೀನಿನ ಹೊಂಡದ ಮೇಲೆ ಬಲ್ಬನ್ನು ತೂಗಿಬಿಡಲಾಗಿದೆ.

ಮೀನಿನ ಹೊಂಡದ ಮೇಲೆ ಬಲ್ಬನ್ನು ತೂಗಿಬಿಡಲಾಗಿದೆ. ಎಲ್ಲರೂ ಅದ್ಯಾಕೆ? ಅಂತ ಕೇಳುತ್ತಾರೆ. ಯಾರೂ ಅದರ ಕಾರಣವನ್ನು ಸರಿಯಾಗಿ ಊಹಿಸಿಲ್ಲ. ಅದನ್ನು ರಾತ್ರಿ ಹೊತ್ತು ಕೀಟಗಳನ್ನು ಆಕರ್ಷಿಸಲು ಬಳಸಲಾಗುತ್ತದೆ. ಸತ್ತ ಕೀಟಗಳು ಮೀನುಗಳಿಗೆ ಆಹಾರವಾಗುತ್ತದೆ ಎಂದಾಗ ಎಲ್ಲರೂ ಆಶ್ಚರ್ಯಪಡುತ್ತಾರೆಎನ್ನುತ್ತಾರೆ ಕೃಷ್ಣ ರೈ. ಬೇವು, ಕುರ್ಟಿಗೆ/ಅಲ್ಲಿಬೀಜ ಮತ್ತಿತರ ವಾಸನೆ ಇರುವಂತ ವಿವಿಧ ಸಸ್ಯಗಳನ್ನು ಬಳಸಿ ಜೈವಿಕ ಕೀಟನಾಶಕಗಳನ್ನು ತಯಾರಿಸುತ್ತಾರೆ. ಮನುಷ್ಯರ/ಪ್ರಾಣಿಗಳ ಮೂತ್ರವು ಕೀಟಬಾಧೆ ನಿಯಂತ್ರಣಕ್ಕೆ ರಾಮಬಾಣವಿದ್ದಂತೆ ಎನ್ನುತ್ತಾರೆ.

ಶ್ರೀ ರೈ ಅವರು ಈ ಭೂಮಿಯನ್ನು ಸಾವಯವ ಕೃಷಿಭೂಮಿಯಾಗಿ ಮಾಡಲು ತಮ್ಮ ಬದುಕಿನ ಇಪ್ಪತ್ತು ವರ್ಷಗಳನ್ನು ವ್ಯಯಿಸಿದ್ದಾರೆ. ಇಂದು ಅದೇ ಅವರ ಹೆಮ್ಮೆಯ ಹೆಗ್ಗಳಿಕೆಯಾಗಿದೆ. ಅವರು ಸೊಟಾಂಗ್‌ ಅಗ್ರಿಕಲ್ಚರ್‌ ಫಾರಂ ಅಂಡ್‌ ರಿಸರ್ಚ್‌ ಸೆಂಟರಿನ ಸಿಇಒ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ತಮ್ಮ ಹಳ್ಳಿಯಲ್ಲಿ ಸಾವಯವ ಕೃಷಿಯನ್ನು ಮಾಡಿದ ಮೊದಲ ಕೃಷಿಕ. ಅದೇ ರೀತಿ ಇತರ ರೈತರು ಕೂಡ ಸಾವಯವ ಕೃಷಿಯನ್ನು ಅಳವಡಿಸಿಕೊಳ್ಳುವಂತೆ ಪ್ರೇರೆಪಿಸಿದ್ದಾರೆ. ಅದೇ ರೀತಿ ಈ ಹಳ್ಳಿಯನ್ನು “ಸಂಶೋಧನ ಕೇಂದ್ರ” ಎಂದೇ ಪರಿಗಣಿಸಲಾಗಿದೆ. ಇಲ್ಲಿ ನಿರಂತರವಾಗಿ ದಕ್ಷ ಮತ್ತು ಪರಿಣಾಮಕಾರಿ ಕೃಷಿ ವಿಧಾನಗಳ ಕುರಿತು ಸಂಶೋಧನೆ, ಅನ್ವೇಷಣೆ, ಸುಧಾರಣೆಗಳು ನಡೆಯುತ್ತಲೇ ಇರುತ್ತವೆ. ಸಾಮೂಹಿಕ ಮಾರ್ಕೆಟಿಂಗ್‌ ವ್ಯವಸ್ಥೆಯು ಈ ಹಳ್ಳಿಯನ್ನು ಸಬಲಗೊಳಿಸಿದೆ. ಕೃಷಿಯು ಬದುಕನ್ನು ಬದಲಿಸಬಲ್ಲದು ಎನ್ನುವುದಕ್ಕೆ ಇದೇ ಉದಾಹರಣೆ. ಪಶ್ಚಿಮ ನೇಪಾಳದ ಬೆಟ್ಟಪ್ರದೇಶದಲ್ಲಿರುವ ಇಲ್ಲಂ ಜಿಲ್ಲೆಯು ವಾಣಿಜ್ಯ ಬೆಳೆಗಳ ಸುಸ್ಥಿರ ಉತ್ಪಾದನೆ ಮತ್ತು ಸಾಮೂಹಿಕ ಮಾರ್ಕೆಟಿಂಗ್‌ ಮಾಡುತ್ತಿದೆ. ಇದು ನೇಪಾಳದಲ್ಲಿ ಸಂಪದ್ಭರಿತ ಜಿಲ್ಲೆಗಳಲ್ಲೊಂದಾಗಿದೆ. ಇಲ್ಲಿ ಶೇಕಡವಾರು ಬಡತನ ಮತ್ತು ವಲಸಿಗರ ಸಂಖ್ಯೆ ಬಹಳ ಕಡಿಮೆ. ಸರಿಯಾದ ವಿಧಾನಕ್ಕೆ ಸೂಕ್ತ ಮಾರುಕಟ್ಟೆಯ ಶಕ್ತಿ ಇದ್ದರೆ ಅದೇ ರೈತರಿಗೆ ಬಿಡುಗಡೆಯ ಹಾದಿಎನ್ನುತ್ತಾರೆ ರೈ.

ಕತೆಯನ್ನು ಹಂಚಿಕೊಂಡವರು ಡಾ. ರಾಜೇಂದ್ರ ಉಪ್ರೆಟೆ, ಪ್ರಾದೇಶಿಕ ಕೃಷಿ ಸಚಿವಾಲಯ, ಬೀರತ್ನಗರ್‌, ಮೊರಂಗ್‌, ನೇಪಾಳ.

ಮಿಂಚಂಚೆ ವಿಳಾಸ : upretyr@yahoo.com

ಆಂಗ್ಲಮೂಲ : ಲೀಸಾಇಂಡಿಯಾ, ಸಂಪುಟ : ೨೧, ಸಂಚಿಕೆ : ೨, ಜೂನ್‌ ೨೦೧೯

 

Recent Posts

ಕೃಷಿಯಲ್ಲಿ ನೀರಿನ ಸಮರ್ಥ ಬಳಕೆಗಾಗಿ ಕಾಲುವೆ ಯಾಂತ್ರೀಕರಣ

ಕೃಷಿಯಲ್ಲಿ ನೀರಿನ ಸಮರ್ಥ ಬಳಕೆಗಾಗಿ ಕಾಲುವೆ ಯಾಂತ್ರೀಕರಣ

ನಮ್ಮ ನೀರಾವರಿ ವ್ಯವಸ್ಥೆಯನ್ನು 21ನೇ ಶತಮಾನದ ಬೇಡಿಕೆಗಳಿಗೆ ಹೊಂದುವಂತೆ ಮಾಡುವುದು ನಮ್ಮ ಮುಂದಿರುವ ನಿಜವಾದ ಸವಾಲಾಗಿದೆ. ತಂತ್ರಜ್ಞಾನವೇ...