ರೈತರು ಭೂಮಿಯ ರಕ್ಷಕರು


ನಮ್ಮ ಆಲೋಚನೆಗಳು ಯಶಸ್ಸು ಯಾವುದೇ ಕಡಿವಾಣಗಳಿಲ್ಲದೆ ಸ್ವಚ್ಛಂದವಾಗಿ ಹಾರುತ್ತಿರುವ ಈ ಹೊತ್ತಿನಲ್ಲಿಯೇ ರೈತರು ಮತ್ತು ಬೀಜಗಳು ತಮ್ಮ ಸರಹದ್ದುಗಳಲ್ಲಿ ಉಳಿದೇ ಅದ್ಭುತವಾಗಿ ಅರಳಿ ನಳನಳಿಸುತ್ತಿದ್ದಾರೆ. ನಮ್ಮ ಹಾಗೂ ಭೂಮಿಯ ಆರೋಗ್ಯದ ಗುಟ್ಟು ಇದರಲ್ಲಿ ಅಡಗಿದೆ. ಜಗತ್ತನ್ನು ಪ್ರೀತಿಯಿಂದ ಪೊರೆಯುತ್ತಿರುವುದು ರೈತರು ಈ ಭೂಮಿಯಿಂದ ಬೆಳೆಯುತ್ತಿರುವ ಆಹಾರ.


 

ಫೋಟೊ : ರೈತರು ದೇಸಿ ಬೀಜಗಳನ್ನು ವಿನಿಮಯ ಮಾಡಿಕೊಳ್ಳುತ್ತಿದ್ದಾರೆ.

ಪರಿಸರಕ್ಕೆ ಹಾಗೂ ಸಮಾಜಕ್ಕೆ ಹಾನಿ ಉಂಟುಮಾಡುತ್ತಿರುವ ಮನುಷ್ಯರ ಪದ್ಧತಿಗಳನ್ನು ಸರಿಮಾಡಲು ಇರುವ ಏಕೈಕ ಮಾರ್ಗವೆಂದರೆ  ಕೃಷಿ ಮತ್ತು ಭೂಮಿಯನ್ನು ಕಾಪಾಡುವ ಪದ್ಧತಿಗಳ ಪುನಶ್ಚೇತನ. ಕೃಷಿ ಎನ್ನುವುದು ಆಹಾರ ಉತ್ಪಾದನೆಯ ಸಲುವಾಗಿ ವಿಜ್ಞಾನವನ್ನು ಅನ್ವಯಿಸಿ ತಂತ್ರಜ್ಞಾನ ಬಳಸಿ ಮಾಡುವ ಚಟುವಟಿಕೆಯಲ್ಲ. ಅದೊಂದು ಸಮಾಜೋ ಸಾಂಸ್ಕೃತಿಕ ಪದ್ಧತಿ. ಮನುಷ್ಯರ ಬದುಕಿನಲ್ಲಿ ಆಳವಾಗಿ ಬೇರುಬಿಟ್ಟ ಜೀವನಕ್ರಮ. ಕೃಷಿಯು ಬದುಕನ್ನು ಪೋಷಿಸುತ್ತಿದೆ, ಕಾಪಾಡುತ್ತಿದೆ, ನಿರಂತರವಾಗಿ ನಡೆಸುತ್ತಿದೆ. ಇದೊಂದು ಧ್ಯಾನವಿದ್ದಂತೆ. ವ್ಯಕ್ತಿಗಳು ಸಂಬಂಧಗಳನ್ನೊಳಗೊಂಡ ವ್ಯವಸ್ಥೆ. ಕೃಷಿ  ಎನ್ನುವುದು ಕೈಗಾರಿಕೆಯಲ್ಲ.

ಇದೇ ಸನ್ನಿವೇಶವನ್ನು ಗಮನದಲ್ಲಿಟ್ಟುಕೊಂಡು ನಮ್ಮ ಸೃಜನಶೀಲ ತಂಡವು ರೈತರೊಂದಿಗೆ ಒಡನಾಡಿ ಕೃಷಿಯ ಸಂಸ್ಕೃತಿಯನ್ನು ಇವತ್ತಿನ ಪರಿಸರ ಮತ್ತು ಸಾಮಾಜಿಕ ಸಂದರ್ಭದ ಹಿನ್ನೆಲೆಯಲ್ಲಿ ರೂಪಿಸಿಕೊಳ್ಳುವ ಕಲಾ ಯೋಜನೆಯೊಂದನ್ನು ಹಮ್ಮಿಕೊಂಡಿತು. ಈ ಲೇಖನವು ಕಳೆದ ಮೂರು ವರ್ಷಗಳ ಈ ಹಾದಿಯಲ್ಲಿನ ನಮ್ಮ ಅನುಭವವನ್ನು ನಿರೂಪಿಸುತ್ತದೆ. ಈ ಪಯಣದಲ್ಲಿ ನನ್ನ ಜೊತೆ ಇದ್ದವರು – ದೃಶ್ಯ ಕಲಾವಿದ ಅಜಿಸ್‌ ಟಿ.ಎಂ, ಕವಿ – ವಿ.ಟಿ. ಜಯದೇವನ್‌, ರಂಗಭೂಮಿ ಕಲಾವಿದ – ಶಿವದಾಸ್‌ ಪೋಯ್ಕಾವು ಮತ್ತು ಕವಿ – ಎಂ.ಪಿ. ಪ್ರತೀಶ್.

ಬದಲಾಗುತ್ತಿರುವ ಮೌಲ್ಯಗಳು

ಕೆಲವೇ ವರ್ಷಗಳ ಹಿಂದೆ ಈ ದೇಶದಲ್ಲಿ ಬಹುತೇಕ ಮಂದಿ ಕೃಷಿ ಮಾಡುತ್ತಿದ್ದರು ಇಲ್ಲವೇ ಕೃಷಿಕರೊಂದಿಗೆ ಒಂದಲ್ಲ ಒಂದು ರೀತಿಯ ಸಂಬಂಧವಿರಿಸಿಕೊಂಡಿದ್ದರು. ಇಂದು ಈ ಸಂಬಂಧ ಕಡಿದುಹೋಗಿದೆ. ಇದು ನಮ್ಮ ಸಂಸ್ಕೃತಿ, ಪರಿಸರ, ಬಳಕೆ, ಆಹಾರ ಕುರಿತ ತಿಳುವಳಿಕೆ ಮತ್ತು ಆಹಾರವನ್ನು ಹಾಳುಮಾಡುತ್ತಿರುವ ಬಗೆ ಎಲ್ಲದರ ಮೇಲೂ ಪರಿಣಾಮ ಬೀರಿದೆ.  ಇಂದು ಕೃಷಿ ಮತ್ತು ಜನರ ನಡುವಿನ ಸಂಬಂಧವನ್ನು ಮತ್ತೆ ಬೆಸೆಯಬೇಕಿರುವುದು ಅತ್ಯಗತ್ಯವಾಗಿದೆ.

ಜನರು ಕೃಷಿಯೊಂದಿಗೆ ಸಂಬಂಧವನ್ನಿಟ್ಟುಕೊಂಡಿದ್ದಾಗ ಅದು ನಮ್ಮ ಸಾಂಸ್ಕೃತಿಕ ಸೂಕ್ಷ್ಮತೆಗಳನ್ನು ರೂಪಿಸುತ್ತಿತ್ತು. ಉದಾಹರಣೆಗೆ ಆಹಾರ ಕುರಿತ ಗೌರವ ಆಹಾರದೊಂದಿಗಿನ ಸಂಬಂಧದಿಂದ ಮೂಡಿದ್ದು. ನಮ್ಮ ಮನೆಗಳಲ್ಲಿ ಮಕ್ಕಳಿಗೆ ಊಟವನ್ನು ಹಾಳುಮಾಡಬಾರದು ಎನ್ನುವುದನ್ನು ಕಲಿಸಲಾಗುತ್ತಿತ್ತು. ಅನ್ನದ ಅಗುಳು ನೆಲದ ಮೇಲೆ ಬಿದ್ದರೆ ಅದನ್ನು ಕೈಯಲ್ಲಿ ಎತ್ತುತ್ತಿದ್ದರು. ಅನ್ನವನ್ನು ಪೊರಕೆಯಿಂದ ಗುಡಿಸಿದರೆ ಭೂಮಿತಾಯಿಗೆ ಅಪಚಾರ ಮಾಡಿದಂತೆ ಎಂದು ಪರಿಗಣಿಸಲಾಗುತ್ತಿತ್ತು. ನಮಗೆ ಆಹಾರದ ಕೊರತೆ ಇಲ್ಲದಾಗಲೂ ಇದೇ ರೀತಿಯ ಭಾವನೆ ನಮ್ಮಲ್ಲಿತ್ತು. ನಾವು ಉಣ್ಣುತ್ತಿರುವ ಆಹಾರವನ್ನು ಹಣದಿಂದ ಅಳೆಯುತ್ತಿರಲಿಲ್ಲ ಬದಲಿಗೆ ಅದನ್ನು ಭೂಮಿತಾಯಿಯ ಕೊಡುಗೆ ಎಂದು ತಿಳಿಯಲಾಗುತ್ತಿತ್ತು. ಪ್ರತಿಯೊಂದು ಕಾಳು ನಮ್ಮ ಜೀವ ಉಳಿಸುವಂಥದ್ದು ಎನ್ನಲಾಗುತ್ತಿತ್ತು. ಆದರಿಂದು ನಾವು ಆಹಾರವನ್ನು ಹಾಳುಮಾಡುತ್ತಿದ್ದೇವೆ.

ಫೋಟೋ: ಮಣ್ಣಿನ ಜೀವಂತಿಕೆ ಗಿಡದ ಬದುಕಿಗೆ ಅತ್ಯಗತ್ಯ

 ದೇಶದ ಅಭಿವೃದ್ಧಿ ಯೋಜನೆಗಳು ಹಲವರನ್ನು ಅವರ ಭೂಮಿಯ ಸಹಿತ ಸುಟ್ಟುಬಿಟ್ಟವು. ಕೆಲವರು ರೆಂಬೆ ಕಡಿದ ಮರವೊಂದು ಅಲ್ಲಲ್ಲಿ ಚಿಗುರಿದಂತೆ ಉಳಿದಿದ್ದಾರೆ. ಅವರು ಕೃಷಿಯ ಹಣತೆಯನ್ನು ನಿರಂತರವಾಗಿ ಉರಿಯುವಂತೆ ಮಾಡಲು ಶ್ರಮಿಸುತ್ತಿದ್ದಾರೆ. ಬೀಜಗಳು ಹಾಗೂ ನಮ್ಮ ನಡುವಿನ ಸಂಬಂಧವನ್ನು ಪೊರೆಯುತ್ತಿದ್ದಾರೆ. ದೇಶದ ಕಾನೂನು ಮಾರುಕಟ್ಟೆ ಮತ್ತು ಬಂಡವಾಳಶಾಹಿಯ ಹಿತವನ್ನು ಕಾಪಾಡಲು ಹೊರಟಿದ್ದರೆ ಕೃಷಿಕರು ಬದುಕು ಮತ್ತು ಆರೋಗ್ಯವನ್ನು ಕಾಪಾಡುವಂತಹ ಕಾನೂನನ್ನು ಪಾಲಿಸುತ್ತಿದ್ದಾರೆ. ಕೃಷಿಕರ ಕಾನೂನು ಬದುಕಿನಲ್ಲಿನ ಪರಸ್ಪರ ಸಂಬಂಧ ಮತ್ತು ಪರಸ್ಪರ ಅವಲಂಬನೆಯನ್ನು ಆಧರಿಸಿದ್ದು ಜವಾಬ್ದಾರಿ ಮತ್ತು ಕರ್ತವ್ಯವನ್ನು ಗೌರವಿಸುತ್ತದೆ. ಆದ್ದರಿಂದಲೇ ಹಿಂದೆ ದೇಶದಲ್ಲಿ ನಡೆದ ಚಳುವಳಿಗಳಲ್ಲಿ ರೈತರು, ಬುಡಕಟ್ಟಿನವರು ಅಥವ ಮೀನುಗಾರರು ಅಭಿವೃದ್ಧಿ ಯೋಜನೆಗಳು ಮತ್ತು ಮಾರುಕಟ್ಟೆ ನೀತಿಗಳನ್ನು ವಿರೋಧಿಸಿದರು. ಮಣ್ಣು ಮತ್ತು ಅದು ಪೊರೆಯುತ್ತಿರುವ ಬದುಕನ್ನು ಉಳಿಸುವ ಕಾನೂನಿನ ಸಲುವಾಗಿ ಹೋರಾಟ ನಡೆಸಿದರು.

ಕೇರಳದಲ್ಲಿ ಕೃಷಿ ಬಿಕ್ಕಟ್ಟು ಉತ್ತುಂಗವನ್ನು ಮುಟ್ಟಿದಾಗ FTAK ಹುಟ್ಟಿತು. ಇದನ್ನು ೨೦೦೫ರಲ್ಲಿ ಕೇರಳದ ಕೋಜಿಕೊಡ್‌ನಲ್ಲಿನ ಅತ್ಯಂತ ಹಳೆಯ ಸಾವಯವ ಅಂಗಡಿಯ ಟಾಮಿ ಮ್ಯಾಥ್ಯು ಆರಂಭಿಸಿದು. ವೈನಾಡಿನ ೩೦೦ ರೈತಕುಟುಂಬಗಳು ಇದರ ಮೊದಲ ಸದಸ್ಯರಾದರು. ಇವರುಗಳು ತಮ್ಮ ಉತ್ಪನ್ನಗಳಿಗೆ ಉತ್ತಮ ಬೆಲೆ ಪಡೆಯಲು ಒಟ್ಟಾಗಿ ಹೋರಾಡುತ್ತಿದ್ದರು. ಇಂದು ಈ ಸಂಸ್ಥೆಯಲ್ಲಿ ೫೦೦೦ ಕುಟುಂಬಗಳಿವೆ. ಮಲಬಾರ್‌ನಂತಹ ಬೆಟ್ಟದ ಪ್ರದೇಶಗಳ ರೈತರಿಗೂ ಉತ್ತಮ ಮಾರುಕಟ್ಟೆ ಸೌಲಭ್ಯ ಸಿಗುವಂತೆ ಮಾಡಿದ್ದರ ಹಿಂದೆ ಇದರ ಪರಿಶ್ರಮವಿದೆ.

ಈ ಸಂಸ್ಥೆಯು ಮೊದಲಿಗೆ ಉತ್ತಮ ಬೆಲೆ ಮತ್ತು ಮಾರುಕಟ್ಟೆ ಸೌಲಭ್ಯದ ಮೇಲೆ ಗಮನಕೇಂದ್ರೀಕರಿಸಿತ್ತು. ಇಂದು ಸಂಸ್ಥೆಯು ಸುಸ್ಥಿರ ಸಾವಯವ ಕೃಷಿ ಪದ್ಧತಿಗಳು, ಜೀವವೈವಿಧ್ಯಕ್ಕೆ ಹಾನಿಕಾರಕವಾದ ಏಕಬೆಳೆ ಪದ್ಧತಿಯ ನಿರಾಕರಿಸುವ ನಿಟ್ಟಿನಲ್ಲಿ ಶ್ರಮಿಸುತ್ತಿದೆ. ಕೃಷಿಯಲ್ಲಿ ತಂತ್ರಜ್ಞಾನದ ಅತಿಬಳಕೆಯನ್ನು ತಗ್ಗಿಸುವ ನಿಟ್ಟಿನಲ್ಲಿಯೂ ಕೆಲಸ ಮಾಡುತ್ತಿದೆ. ಜನರ ಹಿತಕ್ಕಾಗಿ ಬೀಜ ಸಂರಕ್ಷಣೆಯನ್ನು ಮಾಡುತ್ತಿದೆ. ಆಹಾರ ಸಾರ್ವಭೌಮತೆಯನ್ನು ಮರಳಿ ತರುವ ಪ್ರಯತ್ನದಲ್ಲಿ ತೊಡಗಿಸಿಕೊಂಡಿದೆ. ಸೂಕ್ತ ಕೃಷಿಪದ್ಧತಿಗಳನ್ನು ಅಳವಡಿಸಿಕೊಳ್ಳುವ ಮೂಲಕ FTAKನ ೪೫೦೦ ಸದಸ್ಯರು ಪಶ್ಚಿಮ ಘಟ್ಟಗಳಲ್ಲಿನ ೧೫೦೦೦ ಎಕರೆಗಿಂತಲೂ ಹೆಚ್ಚು ಭೂಮಿಯನ್ನು ಹಮಾಮಾನ ವೈಪರಿತ್ಯ ತಾಳಿಕೆಯ ಭೂಮಿಯನ್ನಾಗಿ ಮಾಡಿದ್ದಾರೆ. ಪ್ರತಿಯೊಬ್ಬ ಸದಸ್ಯನ ತೋಟವನ್ನು ಅಸಂಖ್ಯ ಸಸ್ಯ ಜೀವ ವೈವಿಧ್ಯವಿರುವ ಮಳೆ ಕಾಡನ್ನಾಗಿ ಪರಿವರ್ತಿಸುವುದು ಇದರ ಉದ್ಧೇಶ. ಪಶ್ಚಿಮ ಘಟ್ಟಗಳನ್ನು ಈಗ ಸಂರಕ್ಷಿತ ವಲಯವಾಗಿ ಘೋಷಿಸಲಾಗಿದೆ.

ನಾವಿಂದು ದೇಶದಲ್ಲಿ ಗಳಿಸುತ್ತಿರುವ ಬಹುತೇಕ ಲಾಭಗಳು ಕೊಳದ ನೀರಿಗೆ ವಿಷ ಬೆರೆಸಿ ಮೀನು ಹಿಡಿಯುವ ರೀತಿಯಲ್ಲಿದೆ. ಪರಿಸರ ಮತ್ತು ಸಾಮಾಜಿಕ ಸಂದರ್ಭಗಳನ್ನು ಗಣನೆಗೆ ತೆಗೆದುಕೊಳ್ಳದೆ ಅಲ್ಪಕಾಲಿಕ ಲಾಭಗಳ ಆಸೆಯಲ್ಲಿ ಮಾಡಿರುವಂಥದ್ದು. ಒಳ್ಳೆಯ ರೈತನೊಬ್ಬನಿಗೆ ಮಣ್ಣಿನೊಂದಿಗೆ ಇರುವ ಸಂಬಂಧ ಬೇರೆಯ ಬಗೆಯದು. ಅವರು ತಾವು ಉಳುವ ಮಣ್ಣಿನ ಮೇಲ್ವಿಚಾರಕರು.ಅವರು ಮಣ್ಣಿನ ಆರೋಗ್ಯವನ್ನು ಕಾಪಾಡಿದರೆ ಅವರ ಮಕ್ಕಳು ಮತ್ತೆ ಮಣ್ಣನ್ನು ಉಳಬಹುದು. ಮಣ್ಣನ್ನು ಹೀಗೆ ಕಾಪಾಡಿಕೊಳ್ಳುವುದು ತಮ್ಮ ಕುಟುಂಬ, ಮುಂದಿನ ಪೀಳಿಗೆ ಮತ್ತು ಸಮುದಾಯವನ್ನು ಮೀರಿದ ಅವರ ಬದ್ಧತೆಯನ್ನು ತೋರುತ್ತದೆ.

ಆದರೆ ಇಂದು ರೈತರು ತಮ್ಮ ಮೂಲಭೂತ ಅಗತ್ಯಗಳು, ತಮ್ಮ ಮಕ್ಕಳ ಶಿಕ್ಷಣ ಇತ್ಯಾದಿಗಳ ಪೂರೈಕೆಗಾಗಿ ಹೆಚ್ಚು ಗಳಿಸುವ ಅನಿವಾರ್ಯತೆಗೆ ಸಿಲುಕಿದ್ದಾರೆ. ತಮ್ಮ ಮಕ್ಕಳ ಶಿಕ್ಷಣಕ್ಕಾಗಿ ಸಾಲ ಮಾಡಬೇಕಾದ ಅನಿವಾರ್ಯತೆಗೆ ಸಿಲುಕಿದ್ದಾರೆ. ಕೃಷಿಯನ್ನು ಗೌರವಿಸದ ಪ್ರಪಂಚದಲ್ಲಿ ಬಾಳುವುದನ್ನು ಈ ಮಕ್ಕಳು ಕಲಿಯುತ್ತಿದ್ದಾರೆ. ಬದುಕನ್ನು ಪೊರೆಯುತ್ತಿರುವವರನ್ನು ರಕ್ಷಿಸಲಾಗದ ದೇಶದ ಬಗ್ಗೆ ಏನು ಹೇಳಬಹುದು. ರೈತರನ್ನು ತಮ್ಮ ಕೈಗೊಂಬೆಗಳಾಗಿಸಿಕೊಂಡು ಕುಣಿಸುತ್ತಿದ್ದಾರೆ. ಇದು ನಮ್ಮ ಕಾಲದ ದುರಂತ.

ಫೋಟೊ : ಕೃಷಿಕರ ಮಾರುಕಟ್ಟೆ

ಮಾರುಕಟ್ಟೆಯು ಪೊರೆಯುವಿಕೆಯ ವ್ಯಾಖ್ಯಾನವನ್ನು ಬದಲಿಸಿದೆ. ರೈತನೊಬ್ಬ ಹೀಗೆ ಹೇಳುತ್ತಾನೆ “ನಾವಿಂದು ನಮ್ಮಇಚ್ಛೆಯ ಸ್ವಾತಂತ್ರ್ಯವನ್ನು ಕಳೆದುಕೊಂಡಿದ್ದೇವೆ. ನಮ್ಮ ಇಚ್ಛೆಯನ್ನಿಂದು ಮಾರುಕಟ್ಟೆಗಳು ನಿರ್ಧರಿಸುತ್ತಿವೆ. ಇಲ್ಲಿಯವರೆಗೂ ನಾವೇನು ಬೆಳೆಯಬೇಕೆನ್ನುವುದನ್ನು ನಾವೇ ನಿರ್ಧರಿಸುತ್ತಿದ್ದೆವು. ಇಂದು ನಿರ್ಧಾರ ಮಾಡುತ್ತಿರುವುದು ಮಾರುಕಟ್ಟೆ. ಉದಾ: ಹಲಸಿನ ಹಣ್ಣಿನ ಬರ್ಗರ್‌, ರೋಲ್ಗಳು ಇತ್ಯಾದಿ. ನಮ್ಮ ಅಡುಗೆಮನೆ ಅಡುಗೆ ಮಾಡಲಷ್ಟೇ ಸೀಮಿತವಾಗಿರಲಿಲ್ಲ ಅದು ಆಹಾರ ಮತ್ತು ಬೀಜಗಳ ಸಂರಕ್ಷಣೆ ಮಾಡುವ ಸ್ಥಳವಾಗಿತ್ತು. ಇಂದು ನಾವು ಬೆಳೆಯುತ್ತಿರುವುದಕ್ಕೆ ನಮ್ಮ ಅಡುಗೆ ಮನೆಯಲ್ಲಿ ಸ್ಥಳವಿಲ್ಲ. ನಾವಿಂದು ಬೆಳೆಯುತ್ತಿರುವುದು ಮಾರುಕಟ್ಟೆಗಾಗಿ ನಮ್ಮ ಬದುಕನ್ನು ಹೊರಗಿನ ಪ್ರಪಂಚ ನಿಯಂತ್ರಿಸುತ್ತಿದೆ”. ಪ್ರಕೃತಿಯೊಂದಿಗಿನ ಸಂಬಂಧ ಮುರಿದಿದೆ.

ಬದಲಾದ ದೃಷ್ಟಿಕೋನ

ಲಿಖಿತ ರೂಪ ಮಾತ್ರ ಜ್ಞಾನವೆಂದು ಪರಿಗಣಿಸಲಾಗುತ್ತಿದೆ. ಆದರೆ ರೈತರ ತಿಳಿವಳಿಕೆ ಪುಸ್ತಕಗಳಲ್ಲಾಗಲಿ ಗ್ರಂಥಾಲಯಗಳಲ್ಲಾಗಲಿ ಇರುವುದಿಲ್ಲ. ಅದು ಬದುಕಿನಿಂದ ಬಂದಿದ್ದು. ರೈತರು ತಿಳಿವಳಿಕೆ ಮತ್ತು ಜ್ಞಾನದ ಭಂಡಾರವಿದ್ದಂತೆ. ರೈತರು ಮತ್ತಿತರ ವೃತ್ತಿಪರರ ಕೊಡುಗೆಗಳನ್ನು ಗಮನಿಸುವುದು ಅತ್ಯಗತ್ಯ. ನಮ್ಮ ಬದುಕಿನ ಸುಸ್ಥಿರತೆ ಕಾಪಾಡುವ, ಪರಿಸರ ಕಾಳಜಿ, ಶಕ್ತಿ ಸಂಪನ್ಮೂಲಗಳ ಸೂಕ್ತ ಬಳಕೆ, ತ್ಯಾಜ್ಯ ಉತ್ಪಾದನೆ ಮತ್ತಿತರ ಸಂಗತಿಗಳನ್ನು ಗಮನದಲ್ಲಿರಿಸಿಕೊಳ್ಳಬೇಕು. ವಸ್ತುಗಳನ್ನು ಇಡಿಯಾಗಿ ನೋಡಲು ಸಾಧ್ಯವಿಲ್ಲದವರು ಪೊರೆಯುವಿಕೆಯ ಜವಾಬ್ದಾರಿಯನ್ನು ನಿಭಾಯಿಸಲಾರರು. ಮಣ್ಣಿನೊಂದಿಗಿನ ನಿರಂತರ ಒಡನಾಟದಿಂದಾಗಿ ರೈತರಿಗೆ ಪೊರೆಯುವಿಕೆ, ಸಹಬಾಳ್ವೆ ಮತ್ತು ಸುಸ್ಥಿರತೆ ಎನ್ನುವುದು ಸಹಜವಾಗಿ ಅವರ ಪ್ರಜ್ಞೆಯ ಭಾಗವಾಗಿದೆ.

ಮಣ್ಣಿನೊಂದಿಗಿನ ನಿರಂತರ ಒಡನಾಟದಿಂದಾಗಿ ರೈತರಿಗೆ ಪೊರೆಯುವಿಕೆ, ಸಹಬಾಳ್ವೆ ಮತ್ತು ಸುಸ್ಥಿರತೆ ಎನ್ನುವುದು ಸಹಜವಾಗಿ ಅವರ ಪ್ರಜ್ಞೆಯ ಭಾಗವಾಗಿದೆ.

ಇಂದು ಜ್ಞಾನವೆಂಬುದು ಅಸಂಗತವಾಗಿದೆ. ಬದುಕಿಗೆ ಪೂರಕವಾದಾಗ ಮಾತ್ರ ಜ್ಞಾನದ ಉದ್ದೇಶವು ಸಾರ್ಥಕವಾಗುತ್ತದೆ. ನಾವಿಂದು ಜ್ಞಾನವನ್ನು ಗಳಿಸಿದ್ದೇವೆ. ಆದರದು ಬದುಕಿನ ಸೂಕ್ಷ್ಮತೆಗಳಿಗೆ ನಮ್ಮನ್ನು ಕುರುಡಾಗಿಸಿದೆ. ಯಶಸ್ಸು ಮತ್ತು ಹೆಚ್ಚಿನ ಲಾಭದ ಆಸೆಯು ಕಳೆಗಿಡದಂತೆ ನಮ್ಮೆಲ್ಲ ಕ್ರಿಯೆ, ಆಲೋಚನೆಗಳನ್ನು ಆವರಿಸಿದೆ. ಒಂದು ಉತ್ಪನ್ನವನ್ನು ಮಾರುಕಟ್ಟೆಯಿಂದ ಹೊರಗಿಟ್ಟ ತಕ್ಷಣ ಅದು ಮತ್ತೊಂದು ರೂಪದಲ್ಲಿ ಪ್ರತ್ಯಕ್ಷವಾಗುತ್ತದೆ. ಅದೇ ರೀತಿ ಒಂದು ಸಮಸ್ಯೆ ಕಂಡುಹಿಡಿದ ಪರಿಹಾರವೇ ಮತ್ತೊಂದು ಸಮಸ್ಯೆಯಾಗಿ ಬೆಳೆದು ಅದಕ್ಕೆ ಮತ್ತೊಂದು ಪರಿಹಾರ ಕಂಡುಹಿಡಿಯಬೇಕಾಗುತ್ತದೆ. ಬದುಕಿನಿಂದ ದೂರವಾದ ದೃಷ್ಟಿಕೋನಗಳು ಹಲವು ಸಮಸ್ಯೆಗಳನ್ನು ಸೃಷ್ಟಿಸುತ್ತಿದೆ. ದೇಶದಲ್ಲಿ ಭೌತಿಕ, ಭಾವನಾತ್ಮಕ ಮತ್ತು ಮಾನಸಿಕ ಸಮಸ್ಯೆಗಳು ಅಪಾಯದ ಮಟ್ಟವನ್ನು ಮುಟ್ಟಿವೆ.

ಐವತ್ತು ವರ್ಷಗಳ ಹಿಂದೆ ತ್ಯಾಜ್ಯ ಎನ್ನುವಂಥದ್ದು ಏನೂ ಇರಲಿಲ್ಲ. ತ್ಯಾಜ್ಯ ಎನ್ನುವುದು ತಿಳಿದಿರಲಿಲ್ಲ. ಪ್ರತಿಯೊಂದು ಮತ್ತೊಂದಕ್ಕೆ ಆಧಾರವಾಗುತ್ತಿತ್ತು. ಇಂದು ಉಪಯೋಗಕ್ಕೆ ಬರುವಂತಹ ತ್ಯಾಜ್ಯ ಎನ್ನುವುದೇ ಇಲ್ಲ. ನಮ್ಮ ಸುತ್ತ ತ್ಯಾಜ್ಯದ ರಾಶಿ ಬಿದ್ದಿದೆ. ಭಾರತದಲ್ಲಿ ನಾವಿಂದು ಪ್ರತಿದಿನ 25,940 ಟನ್‌ ಪ್ಲಾಸ್ಟಿಕ್‌ ತ್ಯಾಜ್ಯವನ್ನು ಬಿಸಾಡುತ್ತಿದ್ದೇವೆ. ಪ್ರತಿಯೊಂದು ಸಮಸ್ಯೆಯು ಮತ್ತೊಂದು ವಹಿವಾಟಿಗೆ ದಾರಿ ಮಾಡಿಕೊಡುತ್ತದೆ ಎಂದು ನಂಬಿದ್ದೇವೆ. ನಾವು ಎದುರಿಸುವ ಎಲ್ಲಾ ಸಮಸ್ಯೆಗಳಿಗೆ ಪರಿಹಾರವಿದೆ ಎಂದು ನಂಬಿದ್ದೇವೆ. ಎಲ್ಲವನ್ನೂ ಕಳೆದುಕೊಂಡ ಪರಿಸ್ಥಿತಿಯಲ್ಲೂ ಕನಸು ಕಾಣುವುದನ್ನು ನಿಲ್ಲಿಸಿಲ್ಲ. ಇದೇ ರೀತಿ ಎಷ್ಟು ದಿನ ಕಾಲಕಳೆಯಲು ಸಾಧ್ಯ?

ಬದುಕಿನೊಂದಿಗೆ ಮರಳಿ ಸಂಬಂಧ ಬೆಸೆಯಲು ಕಲಿಯಬೇಕು

ಮಾರುಕಟ್ಟೆ ಎನ್ನುವ ಯಂತ್ರದ ಭಾಗವಾಗಿ ಕಣ್ಮುಚ್ಚಿ ಗುರಿಯತ್ತ ಓಡುತ್ತಾ ನಮ್ಮನ್ನೇ ಕಳೆದುಕೊಂಡುಬಿಟ್ಟಿದ್ದೇವೆ. ರೈತರು ನಮಗೆ ಬೇರೆಯ ರೀತಿಯಲ್ಲಿ ಬದುಕುವುದನ್ನು ಕಲಿಸುತ್ತಾರೆ. ಅವರ ಬದುಕು ನಡೆಯುವ ಗತಿಯೇ ಬೇರೆ. ಎಚ್ಚರ, ಕಾಯುವಿಕೆ, ಸಾವಧಾನ ಮತ್ತು ಬಿಟ್ಟುಕೊಟ್ಟು ನಡೆಯುವುದು ಇವುಗಳನ್ನು ಒಳಗೊಂಡಿರುವ ಬದುಕು ಅವರದು. ನಾವುಗಳು ಈ ಸಾವಧಾನದ ಲಾಭ ಮತ್ತು ಸಾವಧಾನದ ಊಟ ಪದ್ಧತಿಯನ್ನು ಹೇಗೆ ಅರ್ಥಮಾಡಿಕೊಳ್ಳಬಲ್ಲೆವು? ನಮ್ಮ ಕಾಲದಲ್ಲಿ ನಿಧಾನ ಎನ್ನುವುದರ ಅರ್ಥವಾದರೂ ಏನು?

ರೈತರು ಬದುಕಿನ ಸತ್ಯವನ್ನು ಪೊರೆದಿರುವುದಕ್ಕೆ ಸಾಕ್ಷಿ ಬೀಜಗಳು ಮತ್ತು ಮಣ್ಣು. ಕೃಷಿ ಎನ್ನುವುದು ಎಚ್ಚರ ಮತ್ತು ಗಮನಿಸುವಿಕೆ. ಏನಾಗುತ್ತಿದೆಯೋ ಅದನ್ನು ನೋಡಬಹುದು. ಕೈಕಾಲುಗಳು ಅಪ್ರಜ್ಞಾಪೂರ್ವಕವಾಗಿ ಜೊತೆಯಲ್ಲಿ ಕೆಲಸ ಮಾಡುತ್ತಿರುತ್ತವೆ. ಸ್ಟುಡಿಯೋಗಳು ಕಟ್ಟಿರುವ ಸೌಂದರ್ಯಮೀಮಾಂಸೆ, ಕಾರ್ಪೋರೇಟ್‌ ವಲಯಗಳು ಆಯೋಜಿಸುವ ವಸ್ತುಪ್ರದರ್ಶನಗಳು ಮತ್ತಿತರ ಮನರಂಜನೆಗಳಿಗೆ ಒಗ್ಗಿಹೋಗಿರುವ ನಮ್ಮ ಮನಸ್ಸುಗಳಿಗೆ ಬೀಜ ಮತ್ತು ಮಣ್ಣಿನ ಸೌಂದರ್ಯವನ್ನು ಸವಿಯುವುದು ಒಂದು ರೀತಿಯ ತೀರ್ಥಯಾತ್ರೆಯ ಅನುಭವವನ್ನು ನೀಡಬಹುದು. ಕೃಷಿ ಮತ್ತು ಜನರ ನಡುವಿನ ಸಂಬಂಧವನ್ನು ಪುನರ್‌ಸ್ಥಾಪಿಸಲು ಆಕೆ ಅಥವ ಆತ ತನ್ನ ಮೂವತ್ತನೇ ವಯಸ್ಸಿಗೆ ಮುಂಚೆಯೇ ಕನಿಷ್ಠ ಎರಡು ವರ್ಷ ಕೃಷಿಭೂಮಿಯೊಂದಿಗೆ ಒಡನಾಡಬೇಕೆಂದು ನನಗನ್ನಿಸುತ್ತದೆ.

ಕೃಷಿಯಲ್ಲಿ ಬೀಜ ಮತ್ತು ಮಣ್ಣಿನ ಸಂಬಂಧಕ್ಕೆ ವಿಶಾಲವಾದ ಆಧ್ಯಾತ್ಮಿಕ ಅರ್ಥವಿದೆ. ಮಣ್ಣಿನೊಂದಿಗಿನ ಒಡನಾಟವು ಬೇರೆಯದೇ ಪ್ರಪಂಚವನ್ನು ತೆರೆದುತೋರುತ್ತದೆ. ಇದೊಂದು ರೀತಿಯ ಆಧ್ಯಾತ್ಮಿಕ ಪಯಣವಿದ್ದಂತೆ. ಬೀಜಗಳನ್ನು ಹೊರತೆಗೆದು, ಸಂಗ್ರಹಿಸಿ, ಪೊರೆದು, ಬಿತ್ತು ಸಸಿಮಾಡಿ ಅವುಗಳನ್ನು ವಿನಿಮಯ ಮಾಡಿಕೊಳ್ಳುವ ಪ್ರಕ್ರಿಯೆ ರೈತನೊಬ್ಬ ಅಂಧಕಾರದಿಂದ ಬೆಳಕಿನತ್ತ ನಡೆದ ಅರಿವಿನ ಪಯಣವಿದ್ದಂತೆ. ಬೀಜಗಳನ್ನು ಬಿತ್ತುವುದೊಂದು ಪವಿತ್ರ ಕಾರ್ಯವಿದ್ದಂತೆ. ಕೃಷಿ ಭೂಮಿಗಳೆಲ್ಲ ತಪೋಭೂಮಿಗಳಾಗುತ್ತವೆ.

ಬೇರೆಬೇರೆ ವೃತ್ತಿಗಳ ವ್ಯಕ್ತಿಗಳನ್ನು ನಾವು ಗೌರವಿಸುತ್ತೇವೆ. ನಮ್ಮ ನಡುವೆಯೇ ಇರುವ ಯಾವುದೇ ಹೆಸರು, ಹುದ್ದೆ , ಗೌರವಗಳನ್ನು ಬಯಸದೇ ಹಗಲು ರಾತ್ರಿ ನಾವು ತಿನ್ನುವ ಆಹಾರವನ್ನು ಉತ್ಪಾದಿಸುತ್ತಾ ಭೂತಾಯಿಯನ್ನು ಪೊರೆಯುತ್ತಿರುವವರನ್ನು ಮರೆತುಬಿಡುತ್ತೇವೆ.

ನಮಗಾಗಿರುವ ಗಾಯಗಳು ಮಾಗುವುದು ಅವರ ಗಾಯಗಳು ವಾಸಿಯಾದಾಗ. ಪ್ರಕೃತಿಯೊಂದಿಗಿನ ಅವರ ಅವಲಂಬನೆಯಲ್ಲಿ ನಮಗೆ ಸಾಂತ್ವನ ಸಿಗುತ್ತದೆ. ನಮ್ಮೆಲ್ಲ ನೋವು, ಖುಷಿ, ಒಗ್ಗಟ್ಟು ಮತ್ತು ಬೆಳವಣಿಗೆಗಳು ಬದುಕಿನ ಸತ್ಯದಲ್ಲಿ ಬೇರು ಬಿಡಲಿ.

ಸಿ ಎಫ್ಜಾನ್


C F John

25, 1st Cross, 1st Main

Byraveshwara Layout, Hennur Bande,

Kalyanagar Post, Bangalore – 560 043, India.

E-mail: cfjohn23@gmail.com

www.cfjohn.com

ಆಂಗ್ಲ ಮೂಲ : ಲೀಸಾ ಇಂಡಿಯಾ; ಸಂಪುಟ :೨೧; ಸಂಚಿಕೆ : ೧; ಸೆಪ್ಟಂಬರ್‌ ೨೦೧೯

Recent Posts

ಕೃಷಿಯಲ್ಲಿ ನೀರಿನ ಸಮರ್ಥ ಬಳಕೆಗಾಗಿ ಕಾಲುವೆ ಯಾಂತ್ರೀಕರಣ

ಕೃಷಿಯಲ್ಲಿ ನೀರಿನ ಸಮರ್ಥ ಬಳಕೆಗಾಗಿ ಕಾಲುವೆ ಯಾಂತ್ರೀಕರಣ

ನಮ್ಮ ನೀರಾವರಿ ವ್ಯವಸ್ಥೆಯನ್ನು 21ನೇ ಶತಮಾನದ ಬೇಡಿಕೆಗಳಿಗೆ ಹೊಂದುವಂತೆ ಮಾಡುವುದು ನಮ್ಮ ಮುಂದಿರುವ ನಿಜವಾದ ಸವಾಲಾಗಿದೆ. ತಂತ್ರಜ್ಞಾನವೇ...