ವರ್ಟಿಕಲ್ ಗಾರ್ಡಿನಿಂಗ್ನ ಹೊಸ ಹಾದಿಗಳು


ಹೊಸ ಮಾದರಿಯು ಸ್ಪೂರ್ತಿದಾಯಕವಾಗಿದ್ದು, ಮರುಬಳಕೆಯ ಅರಿವು ಮತ್ತು ಹೊಸತನವನ್ನು ಹುಡುಕುವ ರೈತ ಅನ್ವೇಷಕರಿಗೆ, ಮಹತ್ವಾಕಾಂಕ್ಷಿ ನಗರ ಕೃಷಿಕರಿಗೆ ಇದು ಅನುಕರಣೀಯ ಮಾದರಿಯಾಗಿದೆ.


 ಖ್ಯಾತ ಕೃಷಿವಿಜ್ಞಾನಿ ಡಾ.ರತನ್‌ ಲಾಲ್‌ ತಮ್ಮ ಭಾಷಣವೊಂದರಲ್ಲಿ, ದಕ್ಷಿಣ ಏಷ್ಯಾ ಹೇಗೆ ಆಹಾರ ಭದ್ರತೆಯ ವಿಷಯದಲ್ಲಿ ವಿಫಲವಾಗಿದೆ ಎನ್ನುವುದನ್ನು ಅಧ್ಯಯನಗಳು ತೋರಿರುವುದನ್ನು ಕುರಿತು ಮಾತನಾಡುತ್ತಾರೆ. ದಕ್ಷಿಣ ಏಷ್ಯಾದ 57%ಗೂ ಹೆಚ್ಚು ಜನಸಂಖ್ಯೆಗೆ ಆರೋಗ್ಯಕರ ಆಹಾರ ಸಿಗುವುದಿಲ್ಲ ಎಂದು ವರದಿಯಾಗಿದೆ. ಹೆಚ್ಚುತ್ತಿರುವ ಜನಸಂಖ್ಯೆಯಿಂದಾಗಿ, ಆಹಾರ ಭದ್ರತೆಯು ಸಮಸ್ಯೆಯು ದಿನದಿನಕ್ಕೂ ಹೆಚ್ಚುತ್ತಿದೆ. ಅದರಲ್ಲೂ ನಗರಗಳಲ್ಲಿ ಹೆಚ್ಚುತ್ತಿರುವ ಸ್ಥಳಾವಕಾಶದ ಕೊರತೆಯು ಇದನ್ನು ಇನ್ನಷ್ಟು ಜಟಿಲವಾಗಿಸಿದೆ.  ತಾಳಿಕೆಯುಳ್ಳ/ಸ್ಥಿತಿಸ್ಥಾಪಕ ಆಹಾರ ವ್ಯವಸ್ಥೆಗಳನ್ನು ಅಳವಡಿಸಿಕೊಳ್ಳುವುದು, ನಗರದ ಆಹಾರ ಪೂರೈಕೆಯ ಸರಪಳಿಯನ್ನು ಸುಧಾರಿಸುವುದು, ಮನೆ ಕೈತೋಟ ಮತ್ತು ನಗರ ಕೃಷಿಯನ್ನು ಪ್ರಚುರಪಡಿಸುವ ಅಗತ್ಯವಿದೆ. ನಗರದ ಮನೆ ಕೈತೋಟಗಳು ಮನೆಬಳಕೆಗೆ ಆರೋಗ್ಯಕರ ತರಕಾರಿಗಳನ್ನು ಒದಗಿಸುವುದರೊಂದಿಗೆ ಸುತ್ತಲ ಪರಿಸರವನ್ನು ಉತ್ತಮಗೊಳಿಸುತ್ತದೆ. ಲಭ್ಯವಿರುವ ಸೀಮಿತ ಸ್ಥಳಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ಮೂಲಕ ಅವುಗಳನ್ನು ಬೆಳೆಯಬಹುದು.

ಕೇರಳದ ವೈನಾಡಿನ ಪುಲ್ಪಲ್ಲಿಯ ಜನಪ್ರಿಯ ವ್ಯಕ್ತಿ ಶ್ರೀ ವರ್ಗೀಸ್‌. ತಮ್ಮ ಕುತೂಹಲ ಹಾಗೂ ಉತ್ಸಾಹಿ ಮನೋಭಾವದಿಂದಾಗಿ ವರ್ಟಿಕಲ್‌ ಗಾರ್ಡಿನಿಂಗ್‌ನಲ್ಲಿ ಮೊದಲಿಗರಾಗಿದ್ದಾರೆ. ವರ್ಗೀಸ್‌ ತಮ್ಮ 60ನೇ ವಯಸ್ಸಿನಲ್ಲೂ ನವಾನ್ವೇಷಕ ಕೃಷಿಕರು ಹಾಗೂ ವಿನಮ್ರ ವ್ಯಕ್ತಿಯಾಗಿದ್ದಾರೆ. ತಮ್ಮ ಮನೆಯ ಮುಂದಿನ ಅಂಗಳ ಹಾಗೂ ಹಿತ್ತಲನ್ನು ಬಳಸಿಕೊಂಡು ಕ್ರಿಯಾತ್ಮಕ ಮಾದರಿಗಳನ್ನು ಯಶಸ್ವಿಯಾಗಿ ಸೃಷ್ಟಿಸಿದ್ದಾರೆ.‌ ರೇಡಿಯೋ ಮೆಕ್ಯಾನಿಕ್ ಕೆಲಸವನ್ನು ಬಿಟ್ಟಮೇಲೆ ಇಪ್ಪತ್ತು ವರ್ಷಗಳಿಂದ ಅವರು ಕೃಷಿಯಲ್ಲಿ ಪ್ರಯೋಗಗಳನ್ನು ಮಾಡುತ್ತಾ ಬಂದಿದ್ದಾರೆ. ಪ್ರಸ್ತುತ, ಅವರು ವರ್ಟಿಕಲ್ ಗಾರ್ಡನಿಂಗ್ ಮತ್ತು ಇತರ ಮಾದರಿಗಳ ಮೂಲಕ ಕ್ಯಾರೆಟ್, ಎಲೆಕೋಸು, ಆಲೂಗಡ್ಡೆ, ಟಪಿಯೋಕಾ, ಫೆನ್ನೆಲ್, ಸ್ಟ್ರಾಬೆರಿ, ಮೆಣಸಿನಕಾಯಿ, ಸಿಹಿ ಗೆಣಸು ಮುಂತಾದ ವೈವಿಧ್ಯಮಯ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ವರ್ಗೀಸ್‌ ಅವರು ಆರಂಭದಲ್ಲಿ ಮುಂದಿನ ಅಂಗಳದಲ್ಲಿ ಅಲಕಾಂರಿಕ ಗಿಡಗಳನ್ನು ಬೆಳೆಸಿದ್ದರು. ಅದು ತಮ್ಮ ಕುಟುಂಬಕ್ಕೆ ಆಹಾರವನ್ನು ಒದಗಿಸುವುದಿಲ್ಲ ಎನ್ನುವುದು ಅರಿವಾದ ನಂತರ ತರಕಾರಿಗಳನ್ನು ಬೆಳೆಸಲು ನಿರ್ಧರಿಸಿದರು. ಸೌಂದರ್ಯಾತ್ಮಕವಾಗಿಯೂ ಇದ್ದು ವೈವಿಧ್ಯಮಯ ಬೆಳೆ ಬೆಳೆಯಲು ಸಾಧ್ಯವಾಗುವಂತೆ ಸ್ಥಳವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲು ನಿರ್ಧರಿಸಿದರು. ಅಡುಗೆಮನೆ ತ್ಯಾಜ್ಯ, ಒಣಗಿದ ಎಲೆಗಳು, ಭತ್ತದ ಹುಲ್ಲು ಇವುಗಳನ್ನು ಗೊಬ್ಬರ ಮತ್ತು ಮಣ್ಣನ್ನು ನಾಟಿಗೆ ಬಳಸಿದರು.

ವರ್ಟಿಕಲ್‌ ಗಾರ್ಡಿನಿಂಗ್‌ ಮಾದರಿಗಳು

ವರ್ಗೀಸ್‌ ಅವರು ಹಲವು ರೀತಿಯ ವಿನೂತನ ವರ್ಟಿಕಲ್‌ ಗಾರ್ಡಿನಿಂಗ್‌ ಮಾದರಿಗಳನ್ನು ಅಭಿವೃದ್ಧಿಪಡಿಸಿದ್ದಾರೆ.

GI ನೆಟ್ ಮತ್ತು PVC ಪೈಪ್ ಮಾದರಿ ವ್ಯವಸ್ಥೆ: ಇದನ್ನು ಮುಖ್ಯವಾಗಿ ಅವರು ಮುಂಭಾಗದಲ್ಲಿ ಕ್ಯಾರೆಟ್, ಎಲೆಕೋಸು, ಮೆಣಸಿನಕಾಯಿ, ದೊಣ್ಣೆಮೆಣಸಿನಕಾಯಿ, ಬದನೆ, ಸಿಹಿ ಗೆಣಸು ಮತ್ತು ಸ್ಟ್ರಾಬೆರಿ ಸೇರಿದಂತೆ ವಿವಿಧ ತರಕಾರಿಗಳನ್ನು ಬೆಳೆಯಲು ಬಳಸಿದರು. ಇದರಲ್ಲಿ ಒಮ್ಮೆಗೆ 24 ಗಿಡಗಳನ್ನು ಅಳವಡಿಸಬಹುದು. ಇದು ಗಟ್ಟಿಮುಟ್ಟಾದ ನಾರು/ಬಟ್ಟೆ ಅಥವಾ ಶೇಡ್‌ ನೆಟ್‌ ಬಳಸುತ್ತದೆ. ಇದನ್ನು GI (2 ಇಂಚಿನ ಅಂತರ) ನೆಟ್‌ ಮೂಲಕ ಮುಚ್ಚಲಾಗುತ್ತದೆ. ಈ ಸಿಲಿಂಡರ್‌ ಆಕಾರದ ಮಾದರಿಯಲ್ಲಿ ಗಿಡ ಬೆಳೆಯಲು ಅಗತ್ಯವಾದ ವಸ್ತುಗಳನ್ನು ತುಂಬಲಾಗುತ್ತದೆ. ನೀರು ವ್ಯರ್ಥವಾಗಿ ಹರಿದು ಹೋಗದಂತೆ ತಡೆಯಲು ತಳದಲ್ಲಿ ಭತ್ತದ ಹುಲ್ಲು ಅಥವ ಎಲೆಗಳನ್ನು ಹಾಸಲಾಗುತ್ತದೆ. ಇದರ ಮೇಲೆ ಅಡುಗೆಮನೆ ತ್ಯಾಜ್ಯವನ್ನು ಸ್ವಲ್ಪ ಮಣ್ಣು ಮತ್ತು ಗೊಬ್ಬರದೊಂದಿಗೆ ಹಾಕಲಾಗುತ್ತದೆ. ಪ್ರತಿ ಪದರವನ್ನು ಒತ್ತಿ ಗಟ್ಟಿಯಾಗಿರುವಂತೆ ಹಾಕಲಾಗುತ್ತದೆ. ನೀರು ಪೂರೈಕೆ ಉದ್ದೇಶಕ್ಕಾಗಿ ನಡುವೆ ಪೈಪುಗಳನ್ನು 3.5 ಅಂತರದಲ್ಲಿ ಅಳವಡಿಸಲಾಗುತ್ತದೆ. ಪ್ರಸ್ತುತ ವರ್ಗೀಸ್‌ ಅವರು ಹನಿ ನೀರಾವರಿ ಮೂಲಕ ವಿವಿಧ ಮಾದರಿಗಳಿಗೆ ನೀರುಣಿಸುತ್ತಿದ್ದಾರೆ. ಇದಕ್ಕೆ ಜಿಪ್‌ ಟೈಗಳನ್ನು ಬಳಸಿರುವುದರಿಂದ ಅವುಗಳನ್ನು ತೆಗೆಯುವುದು ಅಳವಡಿಸುವುದು ಸುಲಭ. ಇವುಗಳನ್ನು ಸುಮಾರು 10-15 ವರ್ಷಗಳವರೆಗೆ ಬಳಸಬಹುದು.

ತರಕಾರಿ ಸಸಿಗಳನ್ನು ನೆಡಲು ಸಣ್ಣ ಪಿವಿಸಿ ಪೈಪ್‌ಗಳನ್ನು ಸೂಕ್ತ ಅಂತರದಲ್ಲಿ ಅಳವಡಿಸಲಾಗಿದೆ. ಸಸ್ಯಗಳು ದೊಡ್ಡದಾದಂತೆ ಅದರ ಬೆಂಬಲಕ್ಕಾಗಿ ಹೆಚ್ಚುವರಿ ಪೈಪ್ ಸೆಟ್ಟಿಂಗ್ ಅನ್ನು ಒದಗಿಸಲಾಗುತ್ತದೆ. ಪೈಪ್‌ಗಳಲ್ಲಿ ಬೇವಿನ ಹಿಂಡಿ, ಮಣ್ಣು ಮತ್ತು ಸಾವಯವ ಗೊಬ್ಬರ (ಹಸುವಿನ ಸಗಣಿ) ಮಿಶ್ರಣವನ್ನು ತುಂಬಿಸಲಾಗುತ್ತದೆ. ಈ ಮಿಶ್ರಣವು ಸಸ್ಯಗಳಿಗೆ ನೀರು ಮತ್ತು ಪೋಷಕಾಂಶಗಳನ್ನು ಸುಲಭವಾಗಿ ಹೀರಿಕೊಳ್ಳಲು ಸಹಾಯ ಮಾಡುತ್ತದೆ.

ಈ ವಿಧಾನದಲ್ಲಿ ಸ್ಟ್ರಾಬೆರಿಯನ್ನು ಪರಿಣಾಮಕಾರಿಯಾಗಿ ಬೆಳೆಯಬಹುದು. ಅಗತ್ಯವಿರುವ ಅಂತರದಲ್ಲಿ ರಂಧ್ರಗಳನ್ನು ಕೊರೆದು ಸ್ಟ್ರಾಬೆರಿ (ನಾರು) ಹರಡಿಕೊಳ್ಳಲು ಅವಕಾಶ ಕಲ್ಪಿಸಬೇಕು.

ಈ ವ್ಯವಸ್ಥೆಯಲ್ಲಿ ಸ್ಥಳವನ್ನು ಪರಿಣಾಮಕಾರಿಯಾಗಿ ಬಳಸಬಹುದು. ಗಿಡಗಳ ನಡುವೆ ಸಾಕಷ್ಟು ಅಂತರವಿರುವುದರಿಂದ ಕೀಟ ಹಾಗೂ ರೋಗಭಾದೆಯನ್ನು ತಡೆಯಬಹುದು. ಜೊತೆಗೆ ಕಳೆಯ ಸಮಸ್ಯೆ ಇರುವುದಿಲ್ಲ ಏಕೆಂದರೆ ಇದರಲ್ಲಿ ಬೆಳೆಗೆ ಮಾತ್ರ ಸ್ಥಳಾವಕಾಶ ಎಂದು ವರ್ಗೀಸ್‌ ಅವರು ಹೆಮ್ಮೆಯಿಂದ ವಿವರಿಸುತ್ತಾರೆ.

ಅಡಿಕೆ ಮರದ ಮಾದರಿ ವ್ಯವಸ್ಥೆ: ಹಿಂದಿನ ಮಾದರಿಯಂತೆಯೇ, ಇದು ಕೂಡ ಪರಿಸರ ಸ್ನೇಹಿ ಮತ್ತು ಅಗ್ಗದ ವ್ಯವಸ್ಥೆ. ಬಟ್ಟೆ ಮತ್ತು GI ನೆಟ್‌ಗೆ ಬದಲಿಗೆ ಅಡಿಕೆ ಮರ ಮತ್ತು ಒಣಗಿದ ಎಲೆಗಳನ್ನು ಬಳಸಲಾಗುತ್ತದೆ. ಮರದ ಹಲಗೆಗಳನ್ನು ಸಿಲಿಂಡರಾಕಾರದಲ್ಲಿ ಕಟ್ಟಿ ಅದರೊಳಗೆ ಒಣಹುಲ್ಲು, ಒಣಗಿದ ಎಲೆಗಳನ್ನು ತುಂಬಲಾಗುತ್ತದೆ. ನಂತರ ಅಡುಗೆ ಮನೆ ತ್ಯಾಜ್ಯವನ್ನು ಮಣ್ಣು ಮತ್ತು ಬೇವಿನ ಹಿಂಡಿ, ಸಾವಯವ ಗೊಬ್ಬರ ಇತ್ಯಾದಿಗಳನ್ನು ತುಂಬಲಾಗುತ್ತದೆ. ಇವೆಲ್ಲವನ್ನೂ ಸಿದ್ಧಗೊಳಿಸಿಕೊಂಡ ಬಳಿಕ ಮರದಲ್ಲಿ ರಂಧ್ರಗಳನ್ನು ಕೊರೆದು ಅದರಲ್ಲಿ  ಮೊಳಕೆಯೊಡೆದ ಆಲೂಗಡ್ಡೆಯನ್ನು (10 ಕಂಬಗಳಲ್ಲಿ ಸುಮಾರು 120 ಗಡ್ಡೆಗಳನ್ನು ನೆಡಬಹುದು) ನೆಡಬೇಕು. ಈ ಮಾದರಿಯಲ್ಲಿ ಆಲೂಗಡ್ಡೆಯ ಉತ್ತಮ ಇಳುವರಿಯನ್ನು ಪಡೆಯಬಹುದು. ಸಕಾಲದಲ್ಲಿ, ಅವರು ಗಿಡಗಳಿಗೆ ಸಾವಯವ ಗೊಬ್ಬರ, ಜೀವಾಮೃತ ಮತ್ತು ಬೇವಿನ ಹಿಂಡಿಯನ್ನು ಹೆಚ್ಚುವರಿ ಪೌಷ್ಟಿಕಾಂಶ ಒದಗಿಸಲು ಪೂರೈಸುತ್ತಾರೆ. ಮತ್ತೊಂದು ಕುತೂಹಲಕಾರಿ ಸಂಗತಿಯೆಂದರೆ, ವರ್ಗೀಸ್‌ ಅವರು ಒಂದೇ ಕಂಬದಲ್ಲಿ ವಿವಿಧ ಹಂತಗಳಲ್ಲಿ ಮೆಣಸಿನಕಾಯಿ ಮತ್ತು ಟೊಮೊಟೊ ಬೆಳೆಯನ್ನು ಯಶಸ್ವಿಯಾಗಿ ಬೆಳೆಸಿದರು. ಎಲ್ಲ ಬೆಳೆಗಳು ಉತ್ತಮ ಇಳುವರಿಯನ್ನು ನೀಡಿದವು. ಯಾವುದೇ ಬೆಳೆಯೂ ನಷ್ಟ ಅನುಭವಿಸಲಿಲ್ಲ.

PVC ಪೈಪ್ ಮಾದರಿ ವ್ಯವಸ್ಥೆ: ವರ್ಗೀಸ್‌ ಅವರು ವರ್ಟಿಕಲ್‌ ಗಾರ್ಡಿನಿಂಗ್‌ ವಿಧಾನದಲ್ಲಿ ಕ್ಯಾರೆಟ್, ಸೋಂಪು, ಮೆಣಸಿನಕಾಯಿ ಮುಂತಾದ ಬೆಳೆಗಳನ್ನು ಪಿವಿಸಿ ಪೈಪ್‌ಗಳನ್ನು ಬಳಸಿ ಬೆಳೆಯುತ್ತಾರೆ. 6 ಇಂಚಿನ ಪಿವಿಸಿ ಪೈಪನ್ನು ಬೆಳೆ ಬೆಳೆಸಲು ಬಳಸಲಾಗುತ್ತದೆ. ಬಿತ್ತನೆಗೆ ಅನುಕೂಲವಾಗುವ ರೀತಿಯಲ್ಲಿ ಸೂಕ್ತ ಅಂತರದಲ್ಲಿ ಬಿಸಿಮಾಡಿದ ಕಬ್ಬಿಣದ ರಾಡ್‌ ಬಳಸಿ ಇಲ್ಲವೆ ಕತ್ತರಿಸಿ ರಂಧ್ರಗಳನ್ನು ಮಾಡಲಾಗುತ್ತದೆ. ಒಂದು ಪೈಪಿನಲ್ಲಿ ಸುಮಾರು 16 ರಿಂದ 20 ಗಿಡಗಳನ್ನು ನೆಡಬಹುದು. ಗಿಡಗಳು ದೊಡ್ಡದಾಗಲು ಹೆಚ್ಚುವರಿ ಆಧಾರವನ್ನು ಒದಗಿಸಲಾಗುತ್ತದೆ. ಗಿಡಗಳಿಗೆ ನೀರಾವರಿ ವ್ಯವಸ್ಥೆ ಒದಗಿಸಲು ನಡುವಲ್ಲಿ ಪೈಪೊಂದನ್ನು ಅಳವಡಿಸಲಾಗುತ್ತದೆ ಇಲ್ಲವೇ ಹನಿ ನೀರಾವರಿ ವ್ಯವಸ್ಥೆ ಮಾಡಲಾಗುತ್ತದೆ.

ಸಾಮಾನ್ಯ ವರ್ಟಿಕಲ್‌ ಗಾರ್ಡಿನಿಂಗ್‌ ಹೊರತಾಗಿ ವರ್ಗೀಸ್‌ ಅವರು ಮರಗೆಣಸನ್ನು ಬೆಳೆಸುವ ವಿನೂತನ ವಿಧಾನವನ್ನು ಕಂಡುಹಿಡಿದಿದ್ದಾರೆ. ಇದರಲ್ಲಿ ಹೆಚ್ಚು ಇಳುವರಿ ಗಳಿಸಬಹುದಾಗಿದೆ. ಅವರು ಕಂಡುಹಿಡಿದಿರುವ ವಿಧಾನದಲ್ಲಿ ಒಂದೇ ಬಳ್ಳಿಯಿಂದ ಮೂರು ಕಡೆಯಿಂದ ಗಡ್ಡೆಗಳನ್ನು ಪಡೆಯಬಹುದಾಗಿದೆ. ಈ ವಿಧಾನದಲ್ಲಿ ಬೇರಿನ ಮೇಲಿನ ಪದರದ ಮೇಲೆ ಇನ್ನೆರೆಡು ಪದರಗಳಲ್ಲಿ ಗ್ರೋಬ್ಯಾಗುಗಳನ್ನು ಇಡಲಾಗುತ್ತದೆ. ಮುಖ್ಯ ಕಾಂಡವು ಈ ಎರಡೂ ಪದರಗಳನ್ನು ಹಾದುಹೋಗುತ್ತದೆ. ಮುಂಚಿತವಾಗಿಯೇ ಬೆಳವಣಿಗೆಗೆ ಅನುಕೂಲವಾಗುವಂತೆ ಗ್ರೋಬ್ಯಾಗುಗಳಲ್ಲಿ ಹಾದುಹೋದ ಕಾಂಡದ ಭಾಗದಲ್ಲಿ ಸಣ್ಣ ಛೇದನವನ್ನು ಮಾಡಲಾಗುತ್ತದೆ. ಈ ವಿಧಾನದ ಮೂಲಕ ಒಂದೇ ಗಿಡದಲ್ಲಿ 25 ಕೆಜಿ ಮರಗೆಣಸನ್ನು ಪಡೆದುದಾಗಿ ವರ್ಗೀಸ್‌ ಅವರು ಹೇಳುತ್ತಾರೆ.

ಇದೇ ರೀತಿ ಅವರು ಹೊಸ ವಿಧಾನದಲ್ಲಿ ನೆರಳಿನಲ್ಲಿ ವೆನೆಲ್ಲಾ ಮತ್ತು ಪುದೀನವನ್ನು ಪ್ಲಾಸ್ಟಿಕ್‌ ಬಾಟಲುಗಳಲ್ಲಿ ಬೆಳೆಯುತ್ತಿದ್ದಾರೆ.

ವರ್ಗೀಸ್‌ ಅವರು ಕೆಲವು ಸಮಯದಿಂದ ಪಿವಿಸಿ ಮತ್ತು ಜಿಐ ಮಾದರಿಯ ವರ್ಟಿಕಲ್‌ ಗಾರ್ಡಿನಿಂಗ್‌ ಮಾಡುತ್ತಿದ್ದಾರೆ. ವೆಲ್ಡರ್‌ನ ಸಹಾಯದಿಂದ ಹಳೆಯ ಪಿವಿಸಿ ಪೈಪುಗಳು ಮತ್ತು ಜಿಐ ನೆಟ್‌ಗಳನ್ನು ಅಗತ್ಯಬಿದ್ದಾಗ ಮರುಬಳಕೆಗೆ ಹೊಂದುವಂತೆ ಸರಿಮಾಡುಕೊಳ್ಳುತ್ತಾರೆ. ಅಗತ್ಯವಿದ್ದಾಗ ಮಾತ್ರ ಅವುಗಳನ್ನು ಹೊಸದಾಗಿ ಕೊಂಡುಕೊಳ್ಳುತ್ತಾರೆ.

ಈ ವಿಧಾನದಲ್ಲಿ ಪ್ರಶಂಸಾರ್ಹ ಸಂಗತಿ ಏನೆಂದರೆ ಇವುಗಳ ಒಳಗೆ ತುಂಬಿಸಲಾಗುವ ವಸ್ತುಗಳನ್ನು ಎರೆಹುಳ ಗೊಬ್ಬರದೊಂದಿಗೆ ಮಿಶ್ರಣಮಾಡಿ ಮರುಬಳಕೆ ಮಾಡಬಹುದು. ಇದನ್ನು ಗ್ರೋಬ್ಯಾಗುಗಳಿಗೂ ತುಂಬಿಸಿ ಮತ್ತೆ ಗಿಡ ಬೆಳೆಯಬಹುದು. ಈ ರೀತಿ ವರ್ಗೀಸ್‌ ಅವರು “ಮಿತಬಳಕೆ ಮರುಬಳಕೆ ಪುನರ್‌ಬಳಕೆ” ತತ್ವವನ್ನು ಪರಿಣಾಮಕಾರಿಯಾಗಿ ಅನುಷ್ಟಾನಗೊಳಿಸಿದ್ದಾರೆ.

ಜೈವಿಕ ಒಳಸುರಿಯುವಿಕೆಗಳ ತಯಾರಿಕೆ ಮತ್ತು ಭವಿಷ್ಯದ ಯೋಜನೆಗಳು:  ಈ ವರ್ಟಿಕಲ್‌ ಗಾರ್ಡಿನಿಂಗ್‌ನ ಹೊರತಾಗಿ ವರ್ಗೀಸ್‌ ಅವರು ನಿರಂತರವಾಗಿ ಹೊಸವಿಧಾನಗಳನ್ನು ಕಂಡುಹಿಡಿದು ತಮ್ಮ ತೋಟದಲ್ಲಿ ಅಳವಡಿಸಿಕೊಳ್ಳುವಲ್ಲಿ ಸಕ್ರಿಯವಾಗಿದ್ದಾರೆ. ಅವರು ಜೈವಿಕ ರಸಗೊಬ್ಬರಗಳು ಮತ್ತು ಪೋಷಕಾಂಶ ಸುರಿಯುವಿಕೆಗಳಾದ ಜೀವಾಮೃತಂ, ಬೀಜಾಮೃತಂ, ಫಿಶ್‌ಅಮಿನೋ ಇತ್ಯಾದಿಗಳನ್ನು ತಯಾರಿಸುತ್ತಾರೆ. ತಮ್ಮ ಮನೆಯ ಹತ್ತಿರ ನರ್ಸರಿಯನ್ನು ಆರಂಭಿಸಿ ಸಸಿಗಳನ್ನು ಕಡಿಮೆ ಬೆಲೆಗೆ ಮಾರಲು ಯೋಜಿಸುತ್ತಿದ್ದಾರೆ. ಇದರೊಂದಿಗೆ ತಮ್ಮ ವರ್ಟಿಕಲ್‌ ಗಾರ್ಡಿನಿಂಗ್‌ನಲ್ಲಿ ಪಡೆದ ಹೆಚ್ಚುವರಿ ತರಕಾರಿಗಳನ್ನು ಅಲ್ಲಿ ಮಾರುವ ಉದ್ದೇಶವಿಟ್ಟುಕೊಂಡಿದ್ದಾರೆ. ಈಗಾಗಲೇ ಇದಕ್ಕಾಗೆ ಶೆಡ್‌ ಕಟ್ಟಿದ್ದು ಇನ್ನು ಕೆಲವೇ ತಿಂಗಳಲ್ಲಿ ಅಲ್ಲಿ ವ್ಯಾಪಾರ ಶುರುಮಾಡಲಿದ್ದಾರೆ. ಮುಂಬರುವ ದಿನಗಳಲ್ಲಿ ತಮ್ಮ ಕುಟುಂಬದವರೊಂದಿಗೆ ಸೇರಿ ತಮ್ಮದೇ ನರ್ಸರಿಯಲ್ಲಿ ವಿವಿಧ ಬಗೆಯ ತರಕಾರಿ ಸಸಿಗಳು, ಕೃಷಿಗೆ ಅಗತ್ಯವಾದ ವಸ್ತುಗಳನ್ನು ಕಡಿಮೆ ದರದಲ್ಲಿ ರೈತರಿಗೆ ಒದಗಿಸುವ ಯೋಜನೆಯನ್ನು ಹೊಂದಿದ್ದಾರೆ.

ಇತರರೊಂದಿಗೆ ಹಂಚಿಕೊಳ್ಳುವಿಕೆ: ಅವರು ಹಲವಾರು ರೈತ ಗುಂಪುಗಳು ಮತ್ತು ವಾಟ್ಸಾಪ್‌ ಗುಂಪುಗಳಲ್ಲಿ ಸಕ್ರಿಯವಾಗಿದ್ದು ಅಲ್ಲಿ ತಮ್ಮ ಜ್ಞಾನವನ್ನು ಹಂಚಿಕೊಳ್ಳುತ್ತಾರೆ. ಅವರು ತರಬೇತಿ ನೀಡಲು ಸಂಪನ್ಮೂಲವ್ಯಕ್ತಿಯಾಗಿ ಕೂಡ ಕಾರ್ಯನಿರ್ವಹಿಸುತ್ತಾರೆ.  ಅವರದೇ ಆದ ಯೂಟ್ಯೂಬ್‌ ಚಾನಲ್‌ (https://www.youtube.com/c/VARGHESEPULPALLY) ಹೊಂದಿದ್ದು ಅದರಲ್ಲಿ ತರಕಾರಿ ಕೈತೋಟ ಕುರಿತಾದ ತಮ್ಮ ವಿನೂತನ ಪದ್ಧತಿಗಳ ಕುರಿತು ಮಾಹಿತಿ ಹಂಚಿಕೊಳ್ಳುತ್ತಾರೆ. ಎಲ್ಲ ಮಾಹಿತಿಯನ್ನು ಫೋನಿನ ಮೂಲಕ ಇಲ್ಲವೇ ವಾಟ್ಸಾಪ್‌ನಲ್ಲಿ ಹಂಚಿಕೊಳ್ಳಲು ಸಾಧ್ಯವಿಲ್ಲ ಎಂದು ಯೂಟ್ಯೂಬ್‌ ಚಾನೆಲ್‌ ಶುರುಮಾಡಿದ್ದಾಗಿ ಹೇಳುತ್ತಾರೆ.  ಈ ವಯಸ್ಸಿನಲ್ಲಿ ವರ್ಗೀಸ್‌ ಅವರು ಹೊಸ ವಿಧಾನಗಳನ್ನು ಕಲಿಯಲು ಉತ್ಸುಕರಾಗಿದ್ದು ಯುವರೈತರಿಗೆ ಸ್ಪೂರ್ತಿಯ ಮಾದರಿಯಾಗಿದ್ದಾರೆ. ವಿವಿಧ ಮಾಧ್ಯಮಗಳು ಅವರನ್ನು ಗುರುತಿಸಿ ಅವರಿಗೆ ತಮ್ಮ ಜ್ಞಾನವನ್ನು ಸಹರೈತರೊಂದಿಗೆ ಹಂಚಿಕೊಳ್ಳಲು ಸಹಾಯಮಾಡಿದ್ದನ್ನು ಸ್ಮರಿಸಿಕೊಳ್ಳುತ್ತಾರೆ.  ತಮ್ಮ ತೋಟವನ್ನು ಅಭಿವೃದ್ಧಿಪಡಿಸಲು ಹಲವಾರು ಹೊಸ ಐಡಿಯಾಗಳನ್ನು ಹೊಂದಿದ್ದರೂ ಹಣಕಾಸಿನ ಕೊರತೆಯಿಂದಾಗಿ ಅವೆಲ್ಲವನ್ನೂ ಕೈಗೊಳ್ಳಲು ಅವರಿಗೆ ಸಾಧ್ಯವಾಗಿಲ್ಲ. ಈ ವರ್ಟಿಕಲ್ ಗಾರ್ಡನಿಂಗ್ ವ್ಯವಸ್ಥೆಯು ನಗರವಾಸಿಗಳಿಗೆ ಕಡಿಮೆ ವೆಚ್ಚದಲ್ಲಿ ಕೈಗೊಳ್ಳಬಹುದಾದ ಮಾದರಿಯಾಗಬಲ್ಲದು ಎನ್ನುವುದು ಅವರ ಬಲವಾದ ನಂಬಿಕೆ.

ಅರ್ಚನ ಭಟ್‌, ವಿಪಿನ್‌ದಾಸ್‌ ಪಿ ಮತ್ತು ಅಬ್ದುಲ್ಲ ಹಬೀಬ್


Dr. Archana Bhatt

Scientist

 Vipindas P

Development Coordinator

 Abdulla Habeeb

Development Associate

MSSRF-Community Agrobiodiversity Centre, Wayanad, Kerala


ಆಂಗ್ಲ ಮೂಲ : ಲೀಸಾ ಇಂಡಿಯಾ; ಸಂಪುಟ :೨೪; ಸಂಚಿಕೆ :೧; ಮಾರ್ಚ್‌ ೨೦೨೨

 

Recent Posts

ಕೃಷಿಯಲ್ಲಿ ನೀರಿನ ಸಮರ್ಥ ಬಳಕೆಗಾಗಿ ಕಾಲುವೆ ಯಾಂತ್ರೀಕರಣ

ಕೃಷಿಯಲ್ಲಿ ನೀರಿನ ಸಮರ್ಥ ಬಳಕೆಗಾಗಿ ಕಾಲುವೆ ಯಾಂತ್ರೀಕರಣ

ನಮ್ಮ ನೀರಾವರಿ ವ್ಯವಸ್ಥೆಯನ್ನು 21ನೇ ಶತಮಾನದ ಬೇಡಿಕೆಗಳಿಗೆ ಹೊಂದುವಂತೆ ಮಾಡುವುದು ನಮ್ಮ ಮುಂದಿರುವ ನಿಜವಾದ ಸವಾಲಾಗಿದೆ. ತಂತ್ರಜ್ಞಾನವೇ...