ಶೂನ್ಯ ಬಂಡವಾಳ ಕೃಷಿ

ಶ್ರೀ ಮಲ್ಲೇಶಪ್ಪ ಗುಳ್ಳಪ್ಪ ಬೀಸೆರೊಟ್ಟಿ ಅವರು ಧಾರವಾಡ ಜಿಲ್ಲೆಯ ಕುಂದುಗೋಳ ತಾಲ್ಲೂಕಿನ ಹೀರೆಗುಂಜಾಲ ಹಳ್ಳಿಯವರು. ೧೯೯೦ರ ನಂತರ ಈ ಪ್ರದೇಶವು ಅತಿಯಾದ ನೀರಿನ ಅಭಾವವನ್ನು ಎದುರಿಸುತ್ತಿದೆ.

ಇವರು ಕಳೆದ ಒಂದು ದಶಕದಿಂದ ಸಾವಯವ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಬೀಸೆರೊಟ್ಟಿಯವರು ಮೊದಲಿಗೆ ಹೊಲಗೊಬ್ಬರ ಮತ್ತು ಎರೆಹುಳ ಗೊಬ್ಬರವನ್ನು ಬಳಸುತ್ತಿದ್ದರು. ನಾಲ್ಕು ವರ್ಷಗಳ ಕಾಲ ಸತತವಾಗಿ ಇದನ್ನು ಬಳಸಿದ್ದರಿಂದ ಫಸಲು ಉತ್ತಮಗೊಂಡಿರುವುದನ್ನು ಅವರು ಗಮನಿಸಿದರು.  ಇದರೊಂದಿಗೆ ಜೀವಾಮೃತವನ್ನು ಬಳಸಲಾರಂಭಿಸಿದರು. ಇಲ್ಲೊಂದು ಸಣ್ಣ ತೊಂದರೆಯಿತ್ತು. ಜೀವಾಮೃತವನ್ನು ತಯಾರಿಸಲು ಹೆಚ್ಚು ನೀರು ಬೇಕಾಗುತ್ತಿತ್ತು. ನೀರಿನ ಅಭಾವವಿದ್ದುದರಿಂದ ಅವರು ದ್ರವರೂಪದ ಜೀವಾಮೃತವಕ್ಕೆ ಬದಲಾಗಿ ಘನ ಜೀವಾಮೃತವನ್ನು ಬಳಸಲಾರಂಭಿಸಿದರು. ಕಳೆದ ಆರು ವರ್ಷಗಳಿಂದ ಇದೇ ರೀತಿ ಯಶಸ್ವಿಯಾಗಿ ಬೆಳೆ ಬೆಳೆಯುತ್ತಿದ್ದಾರೆ.

 

೧೦ಕೆಜಿ ಸಗಣಿ, ೨೫೦ಗ್ರಾಂ ಯಾವುದೇ ದ್ವಿದಳಧಾನ್ಯದ/ಕಾಳಿನ ಹಿಟ್ಟು, ೨೫೦ ಗ್ರಾಂ ಬೆಲ್ಲ, ೫೦೦ ಗ್ರಾಂ ಮಣ್ಣು ಮತ್ತು ೧.೫ ಅಥವಾ ೨ ಲೀಟರ್‌ ಗಂಜಲವನ್ನು ಬೆರೆಸಿ ಘನ ಜೀವಾಮೃತವನ್ನು ತಯಾರಿಸುತ್ತಾರೆ. ಈ ಎಲ್ಲ ವಸ್ತುಗಳನ್ನು ಚೆನ್ನಾಗಿ ಕಲಸಿ ೨೪ ಗಂಟೆಗಳವರೆಗೆ ನೆರಳಿನಲ್ಲಿಡಬೇಕು. ಇದರ ಮೇಲೆ ಗೋಣಿಚೀಲವನ್ನು ಮುಚ್ಚಬೇಕು. ಮರುದಿನ ಆ ಗೋಣಿಚೀಲವನ್ನು ತೆಗೆದು ನೆರಳಿನಲ್ಲಿಯೇ ಇದನ್ನು ೨೫-೩೦ ದಿನಗಳವರೆಗೆ ಒಣಗಿಸಬೇಕು. ಆಗ ಅದು ಒಣಗಿ ಉಂಡೆಗಳಂತಾಗುತ್ತದೆ. ಈ ಉಂಡೆಗಳನ್ನು ಒಡೆದು ಪುಡಿಮಾಡಿಕೊಳ್ಳಬೇಕು. ನಂತರ ಇದನ್ನು ಬೀಜದೊಟ್ಟಿಗೆ ಭೂಮಿಗೆ ಹಾಕಬಹುದು ಇಲ್ಲವೇ ನಂತರ ಕೂಡ ಹಾಕಬಹುದು. ಈ ವಿಧಾನದಲ್ಲಿ ಅಸಂಖ್ಯಾತ ಎರೆಹುಳುಗಳು ವೃದ್ಧಿಯಾದುದನ್ನು ಶ್ರೀ ಬೀಸೆರೊಟ್ಟೆಯವರು ಗಮನಸಿದರು. ಇದರಿಂದಾಗಿ ಸಾವಯವ ಕೃಷಿಯ ಕುರಿತು ಅವರಲ್ಲೊಂದು ಆಶಾಭಾವ ಮೂಡಿತು.

 

ಅವರು ತಟ್ಟೆಗಳಲ್ಲಿ ಎರೆಹುಳುಗಳನ್ನು ಬೆಳೆಸಲು ಶುರುಮಾಡಿದರು. ಮೂರು ದಿನಗಳವರೆಗೆ ೨.೫ ಲೀಟರ್‌ ನೀರನ್ನು ೨೦ಕೆಜಿ ಜೀವಾಮೃತಕ್ಕೆ ಬೆರೆಸಲಾಯಿತು. ೪೫ ದಿನಗಳ ನಂತರ ಆ ಟ್ರೇಗಳಲ್ಲಿ ೧,೦೦೦ ಎರೆಹುಳುಗಳು ಹುಟ್ಟಿಕೊಂಡಿದ್ದನ್ನು ಗಮನಿಸಿದರು. ೭೧ ದಿನಗಳ ಎರೆಹುಳ ಗೊಬ್ಬರ ತಯಾರಿಕೆಯಲ್ಲಿ ಅಸಂಖ್ಯಾತ ಎರೆಹುಳುಗಳು ವೃದ್ಧಿಸಿದ್ದನ್ನು ನೋಡಿದರು. ಸಣ್ಣ ಮರಿಗಳೊಂದಿಗೆ ಸರಿಸುಮಾರು ೧,೫೦೦ದಷ್ಟು ಚೆನ್ನಾಗಿ ಬೆಳೆದ ಎರೆಹುಳುಗಳು ಕಂಡುಬಂದವು. ಪ್ರತಿ ಟ್ರೇ ಇಂದ ೨೦ಕೆಜಿಯಷ್ಟು ಎರೆಹುಳು ಗೊಬ್ಬರವನ್ನು ಪಡೆಯುತ್ತಾರೆ. ಇದನ್ನು ಘನ ಜೀವಾಮೃತದೊಂದಿಗೆ ಬೆರೆಸಿ ಬೆಳೆಗೆ ಹಾಕುತ್ತಾರೆ.

ಪ್ರತಿದಿನ ಒಂದು ಟ್ರೇಯಿಂದ ಕನಿಷ್ಠ ೧೫ಕೆಜಿಯಷ್ಟು ಘನ ಜೀವಾಮೃತವನ್ನು ತಯಾರಿಸುತ್ತಾರೆ. ಅಂದರೆ ವರ್ಷಕ್ಕೆ ಸರಾಸರಿ ೫ ಮೆಟ್ರಿಕ್ ಟನ್‌ನಷ್ಟು ಘನಜೀವಾಮೃತವನ್ನು ತಯಾರಿಸುತ್ತಾರೆ. ಅದೇ ರೀತಿ ಪ್ರತಿ ವರ್ಷ ೧೦ ಮೆಟ್ರಿಕ್ ಟನ್‌ ಎರೆಹುಳು ಗೊಬ್ಬರವನ್ನು ಉತ್ಪಾದಿಸುತ್ತಾರೆ. ಈ ಜೈವಿಕ ಉತ್ಪನ್ನಗಳಿಂದ ಅವರು ಸುಸ್ಥಿರ ಬೆಳೆಯನ್ನು ಬೆಳೆಯುತ್ತಿದ್ದಾರೆ. ಈ ಬೆಳೆಗಳು ಅಜೈವಿಕ ಪದ್ಧತಿಯಲ್ಲಿ ಬೆಳೆದ ಬೆಳೆಗಳಿಗಿಂತ ಉತ್ತಮವಾಗಿದೆ. ಇದರೊಂದಿಗೆ ೧೭ ಬೇವಿನ ಮರಗಳಿಂದ ಸಂಗ್ರಹಿಸಿದ ಬೀಜಗಳಿಂದ ೨೦೦ ಕೆಜಿ ಬೇವಿನ ಹಿಂಡಿ ಕೇಕ್‌ ತಯಾರಿಸುತ್ತಾರೆ. ಬೇವಿನ ಎಲೆಗಳನ್ನು ಎರೆಹುಳು ಗೊಬ್ಬರ ತಯಾರಿಕೆಗೆ ಬಳಸುತ್ತಾರೆ.

ಶ್ರೀ ಬಿಸೇರೊಟ್ಟಿಯವರು ಸ್ಥಳೀಯವಾಗಿ ಸಿಗುವ ಸಂಪನ್ಮೂಲಗಳಾದ ಗೊಬ್ಬರ, ಎರೆಹುಳು ಗೊಬ್ಬರ ಮತ್ತು ಬೀಜಗಳನ್ನು ಬಳಸಿಕೊಂಡು ಸುಸ್ಥಿರ ವ್ಯವಸಾಯವನ್ನು ಮಾಡುತ್ತಿದ್ದಾರೆ. ಮಳೆಯ ಅಭಾವವಿರುವಂತಹ ಸನ್ನಿವೇಶದಲ್ಲೂ ಸಾವಯವ ಕೃಷಿ ವಿಧಾನವನ್ನು ಅಳವಡಿಸಿಕೊಳ್ಳುವ ಮೂಲಕ ಉತ್ತಮ ಇಳುವರಿಯನ್ನು ಪಡೆಯುತ್ತಿದ್ದಾರೆ. ಫಸಲಿನ ಗುಣಮಟ್ಟ ಉತ್ತಮವಾಗಿದ್ದು ಪೌಷ್ಟಿಕಾಂಶಯುಕ್ತವಾಗಿದೆ. ಶ್ರೀ ಬಿಸೇರೊಟ್ಟಿಯವರ ಪ್ರಕಾರ ಈ ವಿಧಾನಗಳನ್ನು ಅಳವಡಿಸಿಕೊಳ್ಳುವ ಮೂಲಕ ಸುಸ್ಥಿರ ವ್ಯವಸಾಯವನ್ನು ಮಾಡಬಹುದು. ಅನಿಶ್ಚಿತ ಮಳೆ ಇಲ್ಲವೇ ಮಳೆಯ ಕೊರತೆಯ ಸಂದರ್ಭಗಳಲ್ಲೂ ಬೇಸಾಯದಲ್ಲೇ ಉತ್ತಮ ಆದಾಯವನ್ನು ಗಳಿಸಬಹುದು.

ಶ್ರೀ ಮಲ್ಲೇಶಪ್ಪ ಗೂಳಪ್ಪ ಬಿಸೇರೊಟ್ಟಿ

ಹೀರೆಗುಂಜಾಲ, ಕುಂದಗೋಳ, ಧಾರವಾಡ,

ಕರ್ನಾಟಕ.

ಮೊಬೈಲ್‌ : +೯೧ ೯೯೪೫೦೧೧೭೫೪

ಕೆ ವಿ ಪಾಟೀಲ್ಮತ್ತು ಐಎಸ್ರಾವ್

ಲೇಖನವು ಕೆಳಕಂಡ ಪುಸ್ತಕದಲ್ಲಿ ಪ್ರಕಟವಾಗಿದ್ದ ಮೂಲ ಲೇಖನದ ಸಂಕ್ಷಿಪ್ತ ರೂಪ.

Inspiring Stories from Innovative Farmers, 2018

ಸಂ: ಡಾ. ಮುತ್ತಣ್ಣ, ಡಾ. ಲಕ್ಷ್ಮೀ ಮೂರ್ತಿ, ಡಾ. ಸೂರ್ಯನಾರಾಯಣ ರಾಜ್

ನ್ಯಾಷನಲ್ಇನ್ಸ್ಟ್ಯೂಟ್ಆಫ್ಅಗ್ರಿಕಲ್ಚರಲ್ಎಕ್ಸ್ಟೆನ್ಷನ್ಮ್ಯಾನೇಜ್ಮೆಂಟ್

ರಾಜೇಂದ್ರನಗರ, ಹೈದರಾಬಾದ೫೬೦೦೦೩೦

ಆಂಗ್ಲ ಮೂಲ : ಲೀಸಾ ಇಂಡಿಯಾ; ಸಂಪುಟ :೨೧; ಸಂಚಿಕೆ : ೩; ಸೆಪ್ಟಂಬರ್‌ ೨೦೧೯

Recent Posts

ಕೃಷಿಯಲ್ಲಿ ನೀರಿನ ಸಮರ್ಥ ಬಳಕೆಗಾಗಿ ಕಾಲುವೆ ಯಾಂತ್ರೀಕರಣ

ಕೃಷಿಯಲ್ಲಿ ನೀರಿನ ಸಮರ್ಥ ಬಳಕೆಗಾಗಿ ಕಾಲುವೆ ಯಾಂತ್ರೀಕರಣ

ನಮ್ಮ ನೀರಾವರಿ ವ್ಯವಸ್ಥೆಯನ್ನು 21ನೇ ಶತಮಾನದ ಬೇಡಿಕೆಗಳಿಗೆ ಹೊಂದುವಂತೆ ಮಾಡುವುದು ನಮ್ಮ ಮುಂದಿರುವ ನಿಜವಾದ ಸವಾಲಾಗಿದೆ. ತಂತ್ರಜ್ಞಾನವೇ...