ಸಂಯೋಜಿತ ಡೈರಿ ಕಡೆಗಿನ ಪಯಣ


ಪ್ರತಿಕೂಲ ಸಂದರ್ಭಗಳು ಅವಳಿಗೆ ಹೊಸ ಹೆಜ್ಜೆಯಿಡಲು ಪ್ರೇರೇಪಿಸಿದವು. ಹೊರಗಿನ ಸಂಸ್ಥೆಗಳಿಂದ ಆಕೆ ಪಡೆದ ತರಬೇತಿ ಮತ್ತು ಬೆಂಬಲ ಕನಸನ್ನು ನನಸಾಗಿಸಿಕೊಳ್ಳಲು ನೆರವು ನೀಡಿತು. ಲಿಲ್ಲಿ ಮ್ಯಾಥ್ಯೂಸ್ಅವರದು ಹೀಗೆ ಪ್ರತಿಕೂಲ ಸಂದರ್ಭವನ್ನು ಅನುಕೂಲಕರ ಅವಕಾಶವಾಗಿ ಪರಿವರ್ತಿಸಿಕೊಂಡ ಸ್ಪೂರ್ತಿದಾಯಕ ಕತೆ. ಹೈನುಗಾರಿಕೆಯಲ್ಲಿ ೨೫ ವರ್ಷಗಳನ್ನು ಪೂರೈಸಿದ್ದು ಪ್ರದೇಶದವರಿಗೆ ಮಾದರಿಯಾಗಿದ್ದಾರೆ.


ಬದುಕಿನಲ್ಲಿ ಏರುಪೇರುಗಳಾದಾಗ ಎದೆಗುಂದದೆ ಹೊಸ ಸವಾಲುಗಳನ್ನು ಸ್ವೀಕರಿಸಬಲ್ಲ ಕೆಲವೇ ಮಹಿಳೆಯರಲ್ಲಿ ಲಿಲ್ಲಿ ಮ್ಯಾಥ್ಯೂಸ್‌ ಕೂಡ ಒಬ್ಬರು. ಅವರ ಕುಟುಂಬವು ಮೆಣಸು ಕೃಷಿಯಲ್ಲಿ ನಷ್ಟವನ್ನು ಅನುಭವಿಸಿದಾಗ ಆಕೆ ಹೈನುಗಾರಿಕೆ ಮಾಡಿ ತಮ್ಮ ಕುಟುಂಬಕ್ಕೆ ನೆರವಾಗಲು ಮುಂದಾದರು. ಲಿಲ್ಲಿ ಮ್ಯಾಥ್ಯೂಸ್‌ ಕೇರಳದ ಮನಂತವಾಡಿಯ ವೈನಾಡಿನಲ್ಲಿ ನೆಲೆಸಿದ್ದಾರೆ. ಈಗ ಅವರ ಬಳಿ ಎಪ್ಪತ್ತು ಕ್ರಾಸ್‌ಬ್ರೀಡ್‌ ಹಸುಗಳಿದ್ದು ಹೈನುಗಾರಿಕೆಯನ್ನು ಯಶಸ್ವಿಯಾಗಿ ಮಾಡುತ್ತಿದ್ದಾರೆ. ಕಠಿಣವಾದ ಹಾದಿಯನ್ನು ಕ್ರಮಿಸಿ, ಸವಾಲುಗಳನ್ನು ಎದುರಿಸಿ ಅವರು ತಮ್ಮ ಉದ್ಯಮವನ್ನು ಸ್ಥಾಪಿಸಿದ್ದಾರೆ.

ಹಿಂದೆ ಲಿಲ್ಲಿ ಮತ್ತವರ ಕುಟುಂಬವು ತಮ್ಮ ಒಂಬತ್ತು ಎಕರೆ ಭೂಮಿಯಲ್ಲಿ ಕಪ್ಪುಮೆಣಸು, ತೆಂಗು, ಕಾಫಿ, ಅಡಕೆ, ಗೋಡಂಬಿ ಮತ್ತು ತರಕಾರಿಗಳನ್ನು ಬೆಳೆಯುತ್ತಿದ್ದರು. ವಾರ್ಷಿಕವಾಗಿ 40 ಕ್ವಿಂಟಾಲ್‌ ಮೆಣಸನ್ನು ಬೆಳೆಯುತ್ತಿದ್ದರು. ಅದೇ ಅವರ ಆದಾಯದ ಪ್ರಮುಖ ಮೂಲವಾಗಿತ್ತು. ಇದರೊಂದಿಗೆ ತೆಂಗು, ಕಾಫಿ ಮತ್ತು ಅಡಕೆಯಿಂದ ಕೂಡ ಲಾಭ ಬರುತ್ತಿತ್ತು. ಸುಮಾರು ಇಪ್ಪತ್ತಾರು ವರ್ಷಗಳ ಹಿಂದೆ ಇಡೀ ವೈನಾಡಿನ ಮೆಣಸಿಗೆ ರೋಗದಸೋಂಕು ತಗುಲಿದಾಗ ಅವರ ಮೆಣಸಿನ ಗಿಡಗಳು ಹಾಳಾದವು. ಈಗಲೂ ಅವರು ಕರಿಮುಂಡ, ಪಣ್ಣಿಯಾರ್‌ -I ಮೆಣಸಿನ ತಳಿಗಳನ್ನು ಬೆಳೆಯುತ್ತಿದ್ದಾರೆ. ಅಂದು ಮೆಣಸಿನೊಂದಿಗೆ, ಅಡಿಕೆ, ತೆಂಗು ಗಿಡಗಳಿಗೂ ಸೋಂಕು ಹಬ್ಬಿ ಬಹಳ ನಷ್ಟವಾಗಿ ಆರ್ಥಿಕಹೊರೆ ಹೆಚ್ಚಿತು. ಲಿಲ್ಲಿ ಮ್ಯಾಥ್ಯೂಸ್‌ ಎದೆಗುಂದದೆ ಹೈನುಗಾರಿಕೆಯನ್ನು ಆರಂಭಿಸಿ ಕುಟುಂಬಕ್ಕೆ ನೆರವಾಗಲು ಮುಂದಾದರು. ಅವರ ತಂದೆತಾಯಿ ಹಸುಗಳನ್ನು ಸಾಕುತ್ತಿದ್ದರು. ಹಾಗಾಗಿ ಆ ಅನುಭವ ಆಕೆಗೆ ಈ ಉದ್ಯಮಕ್ಕೆ ಕಾಲಿಡಲು ಧೈರ್ಯ ಕೊಟ್ಟಿತು.

ಡೈರಿಯ ಆರಂಭ

ಆರಂಭದಲ್ಲಿ ಕೊಯಂಬತ್ತೂರಿನಿಂದ ತಂದ 15 ಕ್ರಾಸ್‌ಬ್ರೀಡ್‌ ತಳಿಗಳೊಂದಿಗೆ ಅವರು ತಮ್ಮ ಡೈರಿಯನ್ನು ಆರಂಭಿಸಿದರು. ಅವರ ಗಂಡ ಮ್ಯಾಥ್ಯೂಸ್‌ ಮಂತವಾಡಿಯ ಖಾಸಗಿ ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದರು. ನಂತರ ಅವರು ಕೂಡ ಡೈರಿಕೃಷಿಗೆ ಕೈಜೋಡಿಸಿದರು. ಸೋಂಕಿಗೆ ಒಳಗಾಗಿದ್ದ ಕೆಲವು ಮರಗಳನ್ನು ಕಡಿದು ಆ ಜಾಗದಲ್ಲಿ ಮೇವಿನ ಹುಲ್ಲನ್ನು ಬೆಳೆಸಿದರು. ಅವರಿಗೆ ಡೈರಿ ಕೃಷಿಯಲ್ಲಿ ಅನುಭವವಿದ್ದರೂ ಅದನ್ನೊಂದು ಉದ್ಯಮವಾಗಿ ಆರಂಭಿಸುವುದು ಸವಾಲಾಗಿತ್ತು. ಡೈರಿ ಕೃಷಿಕಳಾಗಲು ಲಿಲ್ಲಿ ಹಲವಾರು ತರಬೇತಿಗಳಲ್ಲಿ ಭಾಗವಹಿಸಿದರು. ಆಕೆಯ ಪ್ರಯಾಣದಲ್ಲಿ ಸರ್ಕಾರಿ ಇಲಾಖೆಗಳು ಮತ್ತು ಇತರ ಸಂಸ್ಥೆಗಳ ಬೆಂಬಲವೂ ಸಿಕ್ಕಿತು. 2008 ರಲ್ಲಿ, ಅವರು ಪಶುಸಂಗೋಪನಾ ಇಲಾಖೆಯಿಂದ 10 ಹಸುಗಳು, ಹಾಲು ಕರೆಯುವ ಯಂತ್ರವನ್ನು ಖರೀದಿಸಲು, ಮೇವಿನ ಹುಲ್ಲು ನೆಡಲು ಮತ್ತು ಕೊಟ್ಟಿಗೆಯನ್ನು ವಿಸ್ತರಿಸಲು ಬೆಂಬಲವನ್ನು ಪಡೆದರು. ನಂತರ 2014 ರಲ್ಲಿ, ಈರೋಡ್ ಪಶು ಆಸ್ಪತ್ರೆ ಮತ್ತು ಪೂಕೋಡ್‌ನ ಪಶುವೈದ್ಯಕೀಯ ಕಾಲೇಜಿನಿಂದ ಜಾನುವಾರು ಸಾಕಣೆ ಮತ್ತು ಹಾಲಿನ ಉತ್ಪನ್ನಗಳ ಅಭಿವೃದ್ಧಿ ಕುರಿತು ತರಬೇತಿ ಪಡೆದರು. ಈ ಎಲ್ಲಾ ತರಬೇತಿಗಳು ಆಕೆಗೆ ಹೆಚ್ಚು ಆತ್ಮವಿಶ್ವಾಸವನ್ನು ಗಳಿಸಲು ಸಹಾಯ ಮಾಡಿತು. ತನಗೆ ಆಸಕ್ತಿಯಿದ್ದ ಹೈನುಗಾರಿಕೆಯಲ್ಲಿ ಮುಂದುವರೆಯಲು ಪ್ರೇರೆಪಿಸಿತು.

ಪ್ರಸ್ತುತ, ಅವರ ಫಾರಂನಲ್ಲಿ 70 ಕ್ರಾಸ್‌ಬ್ರೀಡ್‌ ಹಸುಗಳಿವೆ. ಕಳೆದ 10 ವರ್ಷಗಳಿಂದ, ಲಿಲ್ಲಿ ಅವರು ಡೈರಿ ನಿರ್ವಹಣೆಯಲ್ಲಿ ತಕ್ಕಮಟ್ಟಿಗೆ ತರಬೇತಿ ಪಡೆದ ಕೆಲವು ಕಾರ್ಮಿಕರ ಸಹಾಯದಿಂದ ಸ್ವಯಂಚಾಲಿತ ಹಾಲುಕರೆಯುವ ಯಂತ್ರಗಳ ಮೂಲಕ ಹಾಲು ಕರೆಯುತ್ತಾರೆ. ಎಲ್ಲಾ ಹಸುಗಳಿಗೆ ಗುಣಮಟ್ಟದ ಮೇವನ್ನು ಉಣಿಸಲಾಗುತ್ತದೆ. ಉತ್ತಮ ಮೇವುಗಳನ್ನು ಅವರ ಜಮೀನಿನಲ್ಲಿ ಬೆಳೆಸಲಾಗುತ್ತದೆ ಜೊತೆಗೆ ಮಿಶ್ರ ಪಡಿತರವನ್ನು ಅವರೇ ಸ್ವತಃ ವಿವಿಧ ಸಾಂದ್ರೀಕರಣ ಮತ್ತು ಆಹಾರಗಳ ಮೂಲಕ ನಿರ್ದಿಷ್ಟ ಅನುಪಾತದಲ್ಲಿ ತಯಾರಿಸುತ್ತಾರೆ. ವೈದ್ಯಕೀಯ ತುರ್ತುಪರಿಸ್ಥಿತಿ ಒದಗಿದಲ್ಲಿ ಪಶುಸಂಗೋಪನಾ ಇಲಾಖೆಯ ಅಧಿಕಾರಿಗಳು ತಕ್ಷಣ ಅಗತ್ಯವಾದ ಬೆಂಬಲವನ್ನು ಒದಗಿಸುತ್ತಾರೆ ಎಂದು ಅವರು ಹೇಳಿದರು.

2018 ರಲ್ಲಿ, ಲಿಲ್ಲಿ ಹೊಸ ಮೈಲಿಗಲ್ಲನ್ನು ಸಾಧಿಸಿದರು. ಮೊಸರು, ತುಪ್ಪ, ಬೆಣ್ಣೆ, ಪನೀರ್, ಮಜ್ಜಿಗೆ ಇತ್ಯಾದಿಗಳನ್ನು ಒಳಗೊಂಡಂತೆ ಹಾಲಿನಿಂದ ವೈವಿಧ್ಯಮಯ ಉತ್ಪನ್ನಗಳನ್ನು ಉತ್ಪಾದಿಸಲು ಕೋಲ್ಡ್ ಸ್ಟೋರೇಜ್ ಸೌಲಭ್ಯದೊಂದಿಗೆ ತಮ್ಮ ಮನೆಯಲ್ಲಿಯೇ ಮೌಲ್ಯವರ್ಧಕ ಘಟಕವನ್ನು ಪ್ರಾರಂಭಿಸಿದರು. ಈ ಹಿಂದೆ ಹಾಲು ಸೊಸೈಟಿಯಲ್ಲಿ ಮಾರಾಟ ಮಾಡುವಾಗ ಪ್ರತಿ ಲೀಟರ್ ಹಾಲಿಗೆ ಕನಿಷ್ಠ ರೂ. 35 ಸಿಗುತ್ತಿತ್ತು. ಮೌಲ್ಯವರ್ಧಕ ಘಟಕ ಸ್ಥಾಪಿಸಿದ ನಂತರ ಪ್ರತಿ ಲೀಟರ್‌ಗೆ ರೂ. 55 ಗಳಿಸಲಾರಂಭಿಸಿದರು. ಇದು ಹಾಲು ಮತ್ತು ಹಾಲಿನ ಉತ್ಪನ್ನಗಳ ಮಾರಾಟದ ಮೂಲಕ ಪ್ರತಿ ತಿಂಗಳು ಸಾಕಷ್ಟು ಉತ್ತಮ ಆದಾಯವನ್ನು ಗಳಿಸಲು ಸಹಾಯ ಮಾಡಿತು. ಪ್ರಸ್ತುತ, ಅವರ ಫಾರಂ ದಿನಕ್ಕೆ ಸುಮಾರು 700 ಲೀಟರ್ ಹಾಲು ಉತ್ಪಾದಿಸುತ್ತದೆ. ಫಾರಂ ಅನ್ನು ಯಶಸ್ವಿಯಾಗಿ ಮತ್ತು ಲಾಭದಾಯಕವಾಗಿ ನಡೆಸಲು ಪ್ರತಿ ಹಸುವಿನಿಂದ ಕನಿಷ್ಠ 20 ಲೀಟರ್ ಹಾಲು ಸಿಗುವುದು ಅಗತ್ಯ. ಇಲ್ಲದಿದ್ದರೆ ಡೈರಿಯ ಹೆಚ್ಚಿನ ವೆಚ್ಚದಿಂದಾಗಿ ನಷ್ಟವನ್ನು ಅನುಭವಿಸಬಹುದೆಂದು ಅವರು ಹೇಳುತ್ತಾರೆ. ಅವರು ತಮ್ಮದೇ ಸಾರಿಗೆ ವಾಹನಗಳು ಮತ್ತು ಎರಡು ಅಂಗಡಿಗಳ ಮೂಲಕ “ಲಿಲ್ಲಿಸ್” ಎನ್ನುವ ಬ್ರಾಂಡ್‌ ಹೆಸರಿನೊಂದಿಗೆ ವಯನಾಡ್ ಮತ್ತು ಕಣ್ಣೂರು ಜಿಲ್ಲೆಗಳಾದ್ಯಂತ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದಾರೆ. ನೆರೆಹೊರೆಯವರು ಫಾರಂಗೆ ಭೇಟಿ ನೀಡಲು ಬರುವ ಸಂದರ್ಶಕರು ನೇರವಾಗಿ ಘಟಕದಿಂದ ಉತ್ಪನ್ನಗಳನ್ನು ಖರೀದಿಸಬಹುದು. ಹಸುಗಳ ಹೊರತಾಗಿ, ಕೋಳಿ, ಬಾತುಕೋಳಿ, ಹೆಬ್ಬಾತು ಇತ್ಯಾದಿಗಳನ್ನು ಸಹ ಸಾಕುತ್ತಿದ್ದಾರೆ. ಮುಂಬರುವ ದಿನಗಳಲ್ಲಿ ಕೆಲವು ಮೇಕೆಗಳನ್ನು ಸಾಕಲು ಯೋಜಿಸುತ್ತಿದ್ದಾರೆ.

ಫಾರಂ ಒಗ್ಗೂಡಿಸುವಿಕೆ

ಲಿಲ್ಲಿ ಡೈರಿ ಕೃಷಿಯ ಯಶಸ್ಸಿನೊಂದಿಗೆ ಬೆಳೆ ಕೃಷಿಯನ್ನು ಪುನರುಜ್ಜೀವನಗೊಳಿಸಿಕೊಂಡರು. ಕಾಫಿ, ಮೆಣಸು, ತೆಂಗು ಇತ್ಯಾದಿಗಳೊಂದಿಗೆ ವಿವಿಧ ತರಕಾರಿಗಳನ್ನು ಕೂಡ ಬೆಳೆಯುತ್ತಿದ್ದಾರೆ. ಇಡೀ ತೋಟ ಸಾವಯವ ವಿಧಾನದಲ್ಲಿ ಮುನ್ನಡೆಯುತ್ತಿದೆ. ಗಂಜಲ ಮತ್ತು ಸಗಣಿಯನ್ನು ಸಂಗ್ರಹಿಸಿ ತೋಟಕ್ಕೆ ಸಾವಯವ ಗೊಬ್ಬರವಾಗಿ ಬಳಸಲಾಗುತ್ತಿದೆ. ಸಗಣಿಯ ಪುನರ್‌ಬಳಕೆಗೆ ಬಯೋಗ್ಯಾಸ್‌ ಪ್ಲಾಂಟ್‌ ನಿರ್ಮಾಣದ ಹಂತದಲ್ಲಿದೆ. ಗಂಜಲವನ್ನು ಕೀಟನಿಯಂತ್ರಕವಾಗಿ ಬಳಸಲಾಗುತ್ತಿದೆ. ಜೊತೆಗೆ ಮಾರಾಟ ಕೂಡ ಮಾಡಲಾಗುತ್ತದೆ. ಮುಂಬರುವ ದಿನಗಳಲ್ಲಿ ಜೀವಾಮೃತ ತಯಾರಿಕಾ ಘಟಕವನ್ನು ಆರಂಭಿಸಲು ಯೋಜಿಸಿದ್ದಾರೆ. ಹಾಳಾದ ತಮ್ಮ ಮೆಣಸು ಬೆಳೆಯಲು ಪುನರುಜ್ಜೀವನಗೊಳಿಸುವುದರೊಂದಿಗೆ ಮೌಲ್ಯವರ್ಧಕ ಉತ್ಪನ್ನಗಳ ಮೂಲಕ ತಮ್ಮ ಉದ್ಯಮವನ್ನು ವಿಸ್ತರಿಸಿಕೊಂಡಿದ್ದಾರೆ.

ಮುಂದಿನ ವರ್ಷ ತಮ್ಮ ಫಾರಂನ ಬೆಳ್ಳಿಹಬ್ಬವನ್ನು ಆಚರಿಸಲು ಸಿದ್ಧರಾಗಿರುವ ಅವರು, ಹಸುಗಳ ಸಂಖ್ಯೆಯನ್ನು 90 ಕ್ಕೆ ಹೆಚ್ಚಿಸುವ ಮೂಲಕ  ಹಾಲಿನ ಉತ್ಪಾದನೆಯನ್ನು ದಿನಕ್ಕೆ 1000 ಲೀಟರ್‌ಗೆ ಹೆಚ್ಚಿಸುವುದು ತಮ್ಮ ಕನಸು ಎಂದು ಹೆಮ್ಮೆಯಿಂದ ಹೇಳುತ್ತಾರೆ. ಈ ಉದ್ಯಮಕ್ಕೆ ಕಾಲಿಡಲು ಬಯಸುವ ಹೊಸಬರಿಗೆ ಉದ್ಯಮವನ್ನು ಸಣ್ಣಪ್ರಮಾಣದಲ್ಲಿ ಆರಂಬಿಸಿ ಎನ್ನುವುದು ಅವರು ಹೇಳುವ ಕಿವಿಮಾತು. ಜೊತೆಗೆ ತಮ್ಮ ಗುರಿ ಮುಟ್ಟಲು ಸೂಕ್ತ ತರಬೇತಿ ಪಡೆಯಬೇಕೆಂದು ಹೇಳುತ್ತಾರೆ. ತಮ್ಮ ಯಶಸ್ಸಿನಿಂದಾಗೆ, ಲಿಲ್ಲಿ ಮ್ಯಾಥ್ಯೂಸ್ ಈಗ ಇತರ ರೈತರು ಮತ್ತು ಸಲಹೆಗಾಗಿ ತನ್ನ ಫಾರಂಗೆ ಭೇಟಿ ನೀಡುವ ವಿದ್ಯಾರ್ಥಿಗಳಿಗೆ ಮಾನ್ಯತೆ ಪಡೆದ ಸಂಪನ್ಮೂಲ ವ್ಯಕ್ತಿಯಾಗಿದ್ದಾರೆ. ಅವರು ತಮ್ಮ ಸಾಧನೆಗಳಿಗಾಗಿ ಡೈರಿ ವುಮನ್ ಆಫ್ ದಿ ಇಯರ್ ಸೇರಿದಂತೆ ರಾಷ್ಟ್ರ ಮತ್ತು ರಾಜ್ಯ ಮಟ್ಟದಲ್ಲಿ ಹಲವಾರು ಪುರಸ್ಕಾರಗಳನ್ನು ಪಡೆದಿದ್ದಾರೆ. ಅವರು ತಮ್ಮ ತಿಳುವಳಿಕೆ ಮತ್ತು ಅನುಭವಗಳನ್ನು ಹಂಚಿಕೊಳ್ಳಲು ಮಾನಂತವಾಡಿಯ ದ್ವಾರಕಾದಲ್ಲಿ ರೇಡಿಯೋ ಮಟ್ಟೋಲಿಯಲ್ಲಿ ಪ್ರಮುಖ ಭಾಷಣಕಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಲಿಲ್ಲಿ ಸಾಂಪ್ರದಾಯಿಕ ಕೃಷಿ ಪದ್ಧತಿಯೊಂದಿಗೆ ಡೈರಿಯನ್ನು ಸಂಯೋಜಿಸುವುದರೊಂದಿಗೆ ತಮ್ಮ ಜೀವನ ಬದಲಾದದ್ದನ್ನು ಲಿಲ್ಲಿ ತಮ್ಮ ಹಿಂದಿನ ದಿನಗಳನ್ನು ನೆನಪಿಸಿಕೊಳ್ಳುತ್ತ ಹೇಳುತ್ತಾರೆ. ಪಶುಸಂಗೋಪನೆಯನ್ನು ಸಾಂಪ್ರದಾಯಿಕ ಕೃಷಿ ಪದ್ಧತಿಯೊಂದಿಗೆ ಸಂಯೋಜಿಸಿದಾಗ ಬೆಳೆಯ ಆಧಾರಿತ ಕೃಷಿ ವ್ಯವಸ್ಥೆಯನ್ನು ಹೇಗೆ ಬದಲಿಸಬಹುದು ಎನ್ನುವುದಕ್ಕೆ ಆಕೆಯ ಪಯಣ ಉತ್ತಮ ಉದಾಹರಣೆ.

ಅರ್ಚನಾ ಭಟ್, ರವೀಂದ್ರನ್ ಮತ್ತು ಅಬ್ದುಲ್ಲಾ ಹಬೀಬ್


Archana Bhatt, Scientist

Community Agrobiodiversity Centre, MSSRF

Wayanad, Kerala

Email: archanabhatt1991@gmail.com

ಆಂಗ್ಲ ಮೂಲ : ಲೀಸಾ ಇಂಡಿಯಾ; ಸಂಪುಟ :೨೩; ಸಂಚಿಕೆ : ೪ ; ಡಿಸಂಬರ್ ೨೦‌೨೧

Recent Posts

ಕೃಷಿಯಲ್ಲಿ ನೀರಿನ ಸಮರ್ಥ ಬಳಕೆಗಾಗಿ ಕಾಲುವೆ ಯಾಂತ್ರೀಕರಣ

ಕೃಷಿಯಲ್ಲಿ ನೀರಿನ ಸಮರ್ಥ ಬಳಕೆಗಾಗಿ ಕಾಲುವೆ ಯಾಂತ್ರೀಕರಣ

ನಮ್ಮ ನೀರಾವರಿ ವ್ಯವಸ್ಥೆಯನ್ನು 21ನೇ ಶತಮಾನದ ಬೇಡಿಕೆಗಳಿಗೆ ಹೊಂದುವಂತೆ ಮಾಡುವುದು ನಮ್ಮ ಮುಂದಿರುವ ನಿಜವಾದ ಸವಾಲಾಗಿದೆ. ತಂತ್ರಜ್ಞಾನವೇ...