ಸಣ್ಣ ಪ್ರಮಾಣದ ರೈತರಿಂದ ಬೃಹತ್ ಬದಲಾವಣೆ


ಕೃಷಿ ಜೀವವೈವಿಧ್ಯತೆ ಅರಿವು ಕಾರ್ಯಕ್ರಮ (ದಿ ಅಗ್ರಿಕಲ್ಚರಲ್ ಬಯೋಡೈವರ್ಸಿಟಿ ನಾಲೆಜ್ ಪ್ರೋಗ್ರಾಂ- ಆಗ್ರೋ ಬಯೋಡೈವರ್ಸಿಟಿ @ ನಾಲೆಜ್) ಅನ್ನು ಆರಂಭಿಸಿದ್ದು ಆಕ್ಸ್ಫಾಮ್ ನೋವಿಬ್ ಮತ್ತು ಹಿವೋಸ್ ಎಂಬ ಸಂಸ್ಥೆಗಳು. ಕೃಷಿ ಬಗೆಗಿನ ಅರಿವನ್ನು ಹೆಚ್ಚಿಸುವ, ಪರಸ್ಪರ ಹಂಚಿಕೊಳ್ಳುವ ಮತ್ತು ಅದರ ಒಳನೋಟಗಳನ್ನು ವಿಸ್ತರಿಸುವುದರೊಂದಿಗೆ ಕೃಷಿ ಜೀವವೈವಿಧ್ಯತೆಯ ಮೌಲ್ಯವನ್ನು ವಿಸ್ತರಿಸುವುದೇ ಈ ಕಾರ್ಯಕ್ರಮದ ಉದ್ದೇಶವಾಗಿದೆ. ಈ ಮೂಲಕ ಮುಖ್ಯವಾಹಿನಿಯ ಸಾಂದ್ರೀಕೃತ ಕೃಷಿ ಪದ್ಧತಿಯನ್ನು ಜೀವವೈವಿಧ್ಯತೆಯತ್ತ ಬದಲಾಯಿಸುವುದೇ ಕಾರ್ಯಕ್ರಮದ ಮೂಲ ತತ್ತ÷್ವವಾಗಿದೆ. ಈ ಪರಿವರ್ತನಾ ವ್ಯವಸ್ಥೆಯು ರೈತ ಮತ್ತು ಪರಿಸರವನ್ನು ಪೋಷಿಸುವ ಜೊತೆಗೆ ಆಹಾರ ಮತ್ತು ಪೋಷಕಾಂಶಗಳ ಭದ್ರತೆಯನ್ನೂ ಹೆಚ್ಚಿಸುತ್ತದೆ. ಜನರು, ಅವರ ಜ್ಞಾನ ಮತ್ತು ಆಯ್ಕೆಗಳನ್ನೂ ಗೌರವಿಸುತ್ತದೆ. ಒಟ್ಟಿನಲ್ಲಿ ರೈತರಿಗೆ ಅಥವಾ ಜನರಿಗೆ ಪೂರಕವಾದ ಪರಿಸರ ಅಲ್ಲಿ ನಿರ್ಮಾಣವಾಗುತ್ತದೆ. ಇದು ಸಂಪೂರ್ಣವಾಗಿ ಕೃಷಿ ವ್ಯವಸ್ಥೆಯ ಮೇಲೇ ಅವಲಂಬಿತವಾಗಿರುವ ರೈತ ಕುಟುಂಬಗಳ ಬದುಕು ಬದಲಾಯಿಸುವ ನಿಟ್ಟಿನಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡಿದೆ ಎನ್ನುವುದು ಆಂಧ್ರಪ್ರದೇಶದಲ್ಲಿರುವ ‘ಸುಸ್ಥಿರ ಕೃಷಿ ಕೇಂದ್ರ’ (ಸೆಂಟರ್ ಫಾರ್ ಸಸ್ಟೆöÊನೇಬಲ್ ಅಗ್ರಿಕಲ್ಚರ್-ಸಿ.ಎಸ್.ಎ.)ದ ಮೂಲಕ ಸಾಬೀತಾಗಿದೆ.


ಆoಧ್ರಪ್ರದೇಶದಲ್ಲಿ ಬಹುಪಾಲು ಸಣ್ಣ ಪ್ರಮಾಣದ ರೈತ ಕುಟುಂಬಗಳು ಬಹಳ ಗಂಭೀರ ಸ್ವರೂಪದ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಪರಿಣಾಮವಾಗಿ ಕಳೆದ ಹದಿನೆಂಟು ವರ್ಷಗಳಲ್ಲಿ ೩೫,೦೦೦ ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಕೃಷಿಗಾರಿಕೆಗೆ ಅಧಿಕ ಸಾಲ ಮಾಡಿ, ಹೊರಗಿನ ಸಂಪನ್ಮೂಲಗಳ ಮೇಲೆ ಅವಲಂಬಿತರಾಗಿದ್ದೇ ಇದಕ್ಕೆ ಮುಖ್ಯ ಕಾರಣ. ಇದಕ್ಕೆ ಕಾರಣ ಕೇಳಿದರೆ, ಬೆಳೆಗಳಿಗೆ ಕೀಟಗಳದ್ದೇ ಸಮಸ್ಯೆ ಎನ್ನುವುದು ರೈತರ ಮಾತು. ಆದರೆ, ಸುಸ್ಥಿರ ಕೃಷಿ ಕೇಂದ್ರ(ಸಿ.ಎಸ್.ಎ.) ಬಿಡುಗಡೆ ಮಾಡಿರುವ ಮಾಹಿತಿಯ ಪ್ರಕಾರ, ಕೀಟಗಳೇ ರೈತರ ಮುಖ್ಯ ಸಮಸ್ಯೆಯಲ್ಲ, ಬದಲಾಗಿ ರೈತರು ಕೀಟನಾಶಕಗಳನ್ನೇ ಅವಲಂಬಿಸಿದ್ದು. ಕೇವಲ ಅವಲಂಬನೆ ಮಾತ್ರವಲ್ಲ, ಕೀಟನಾಶಕ ಬಳಕೆಯನ್ನು ಅವರು ಒಂದು ಚಟವಾಗಿ ಬೆಳೆಸಿಕೊಂಡಿದ್ದಾರೆ!

ಕೀಟನಾಶಕಗಳು ಬಲು ದುಬಾರಿ ಎನ್ನುವುದು ಗೊತ್ತೇ ಇದೆ. ಅಷ್ಟೇ ಅಲ್ಲ, ಇದರಿಂದ ರೈತರು ಮತ್ತು ಅವರ ಕುಟುಂಬಗಳ ಆರೋಗ್ಯವೂ ಹಾಳಾಗುವುದರೊಂದಿಗೆ ಪರಿಸರ ಸಂಬAಧಿ ಸಮಸ್ಯೆಗಳೂ ಸೃಷ್ಟಿಯಾಗಲು ಕಾರಣವಾಗುತ್ತವೆ. ಈ ಸಮಸ್ಯೆಗಳನ್ನು ಪರಿಹರಿಸಲು ರೈತರಿಂದ ಸಾಧ್ಯವೇ? ನೀವು ಎಷ್ಟು ಪ್ರಮಾಣದಲ್ಲಿ ಕೀಟನಾಶಕಗಳನ್ನು ಬಳಸುತ್ತೀರೋ ಅಷ್ಟರಮಟ್ಟಿಗೆ ನೀವೂ ನಿಮ್ಮೊಂದಿಗೆ ಪರಿಸರ ವ್ಯವಸ್ಥೆಯೂ ತೊಂದರೆಗೊಳಗಾಗುತ್ತದೆ. ಆಂಧ್ರಪ್ರದೇಶದಲ್ಲಿ ಹಲವಾರು ರೈತ ಕುಟುಂಬಗಳು ನೇರವಾಗಿ ಇಂಥ ಸಮಸ್ಯೆಗಳಿಗೆ ಸಿಲುಕಿರುವುದನ್ನು ಗಮನಿಸಬಹುದು. ಈ ಗಂಭೀರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಅನಿವಾರ್ಯ ಕಂಡುಬoದ ಹಿನ್ನೆಲೆಯಲ್ಲಿ ರೈತರು, ಸರ್ಕಾರೇತರ ಸಂಸ್ಥೆಗಳು(ಎನ್.ಜಿ.ಒ.)ಗಳು ಮತ್ತು ಸರ್ಕಾರದ ಸಹಭಾಗಿತ್ವದಲ್ಲಿ ‘ಕೀಟನಾಶಕ ರಹಿತ ನಿರ್ವಹಣೆ’(ನಾನ್-ಪೆಸ್ಟಿಸಿಡಲ್ ಮ್ಯಾನೇಜ್‌ಮೆಂಟ್-ಎನ್.ಪಿ.ಎA.) ಕೃಷಿ ವ್ಯವಸ್ಥೆಯನ್ನು ಆಂಧ್ರಪ್ರದೇಶದಲ್ಲಿ ಜಾರಿಗೆ ತರಲಾಗಿದೆ.

ಕೀಟನಾಶಕ ರಹಿತ ನಿರ್ವಹಣೆ
ರೈತರ ಬದುಕು ಸುಧಾರಿಸುವ ನಿಟ್ಟಿನಲ್ಲಿ ಒಂದು ಅಮೂಲಾಗ್ರ ಬದಲಾವಣೆಯ ಅಗತ್ಯತೆ ಕಂಡಿತ್ತು. ಮೊದಲ ಹೆಜ್ಜೆಯೆಂದರೆ ಕೀಟಗಳನ್ನು ನಿಯಂತ್ರಿಸಲು ಕೀಟನಾಶಗಳ ಬಳಕೆಯನ್ನು ಕೈಬಿಟ್ಟು, ಸಮಗ್ರ ವ್ಯವಸಾಯ ಪದ್ಧತಿಯ ಬಳಕೆ ಮತ್ತು ಸ್ಥಳೀಯವಾಗಿ ದೊರೆಯುವ ಸಂಪನ್ಮೂಲಗಳನ್ನು ಬಳಸಿಕೊಂಡೇ ಕೃಷಿ ಮಾಡುವಂಥದ್ದು. ಈ ಉದ್ದೇಶವನ್ನಿಟ್ಟುಕೊಂಡೇ ಸಿ.ಎಸ್.ಎ. ಕೃಷಿ ಕುಟುಂಬಗಳಿಗೆ ನೆರವಾಗುತ್ತಿದೆ. ರೈತರಲ್ಲಿ ಈ ಕುರಿತಾಗಿ ಜಾಗೃತಿ ಮೂಡಿಸುತ್ತಿದೆ. ಅದಕ್ಕಾಗಿ ೧೯೮೦ರ ಆರಂಭದಲ್ಲಿಯೇ ಎನ್.ಪಿ.ಎಂ. ಅನ್ನು ಜಾರಿಗೆ ತರಲಾಯಿತು. ಈ ಎನ್.ಪಿ.ಎಂ. ವ್ಯವಸ್ಥೆ ರಾಜ್ಯದ ಬೇರೆ-ಬೇರೆ ಭಾಗಗಳಲ್ಲಿ ಉತ್ತಮ ಫಲಿತಾಂಶವನ್ನೂ ತಂದುಕೊಟ್ಟಿರುವುದು ಗಮನಾರ್ಹ. ರೈತರಿಗೆ ತರಬೇತಿ ನೀಡುವ ಮೂಲಕ ಅವರಲ್ಲಿ ಕೀಟ ಜೀವಶಾಸ್ತç ಮತ್ತು ಕೀಟಗಳ ಸ್ವಭಾವ ಹಾಗೂ ಬೆಳೆ ಪರಿಸರ ವ್ಯವಸ್ಥೆಯ ಬಗ್ಗೆ ಸ್ವ-ಅರಿವು ಮತ್ತು ಕೌಶಲ್ಯ ಬೆಳೆಸುವುದೇ ಎನ್.ಪಿ.ಎಂ.ನ ಮೂಲೋದ್ದೇಶವಾಗಿದೆ.

ಯಾವುದೇ ಕೃಷಿ ಕುಟುಂಬಗಳು ತಮ್ಮ ಕೃಷಿ ಜಮೀನಿನಲ್ಲೇ ವಾಸಿಸುತ್ತಾ, ತಾವು ಬೆಳೆಯುವ ಬೆಳೆಗಳ ಜೊತೆಗೆ ಆಪ್ತಸಂಬoಧವನ್ನು ಹೊಂದಿರುತ್ತವೆ ಎನ್ನುವುದು ಎನ್.ಪಿ.ಎಂ. ಭಾವಿಸಿರುವ ತಾರ್ಕಿಕ ತಂತ್ರ ಕೂಡ. ಇಲ್ಲಿ ರೈತರು ತಮ್ಮ ಕೆಲಸದ ಹರವನ್ನೂ ತಿಳಿದಿರುತ್ತಾರೆ. ಇದಕ್ಕಿಂತಲೂ ಹೆಚ್ಚಾಗಿ ರೈತ ಕುಟುಂಬಗಳು ರಾಸಾಯನಿಕಗಳ ಬಳಕೆಯಿಂದ ಗಾಳಿ, ಚರ್ಮ ಮತ್ತು ಅವರ ಆಹಾರದ ಮೂಲಕ ಬರುವ ತೊಂದರೆಗಳ ಕುರಿತಾಗಿಯೂ ಎಚ್ಚರಿಕೆಯನ್ನು ಹೊಂದುತ್ತಾರೆ.

೨೦೦೪ರಲ್ಲಿ ಸಿ.ಎಸ್.ಎ. ಆಂಧ್ರಪ್ರದೇಶದ ಸುಮಾರು ೧೨ ಹಳ್ಳಿಗಳಲ್ಲಿ ‘ಫಾರ್ಮರ್ ಫೀಲ್ಡ್ ಸ್ಕೂಲ್ಸ್(ಎಫ್.ಎಫ್.ಎಸ್.)’ ಅನ್ನು ಆರಂಭಿಸಿತ್ತು. ಕೀಟ ನಿರ್ವಹಣೆಯ ಕುರಿತಾಗಿ ರೈತರಲ್ಲಿ ಜಾಗೃತಿ ಮೂಡಿಸುವುದೇ ಇದರ ಉದ್ದೇಶ. ಎಫ್.ಎಫ್.ಎಸ್. ಮೂಲಕ ರೈತರು ಕ್ರಮೇಣ ಕೃಷಿ-ಪರಿಸರ ವ್ಯವಸ್ಥೆ ಮತ್ತು ನಿಯಮಿತವಾಗಿ ಬೆಳೆ ಬೆಳೆಯುವುದು ಹೇಗೆಂಬುದನ್ನು ಅರಿತುಕೊಂಡರು. ಪ್ರಸ್ತುತ ಆಂಧ್ರಪ್ರದೇಶದ ೧೧,೦೦೦ ಗ್ರಾಮಗಳಲ್ಲಿ ಎಫ್.ಎಫ್.ಎಸ್. ಕಾರ್ಯಕ್ರಮ ಚಾಲ್ತಿಯಲ್ಲಿದೆ. ಪರಿಣಾಮವಾಗಿ ಒಂದು ಕಾಲದಲ್ಲಿ ಭಾರತದಲ್ಲಿ ಅತಿ ಹೆಚ್ಚು ಕೀಟನಾಶಕಗಳನ್ನು ಬಳಸುತ್ತಿದ್ದ ಗ್ರಾಮಗಳೆನಿಸಿಕೊಂಡ, ಇಲ್ಲಿನ ಗ್ರಾಮಗಳು ಇಂದು ಅತಿ ಕಡಿಮೆ ಕೀಟನಾಶಕಗಳನ್ನು ಬಳಸುವ ಗ್ರಾಮಗಳೆನಿಸಿಕೊಂಡಿರುವುದು ಹೆಗ್ಗಳಿಕೆ. ಕಳೆದ ಆರು ವರ್ಷಗಳಲ್ಲಿ ಈ ಹಳ್ಳಿಯ ಜನರು ಕೀಟನಾಶಕಗಳನ್ನು ಬಳಸುವುದನ್ನು ಕಡಿಮೆ ಮಾಡಿದ್ದಾರೆ; ಹಾಗಂತ ಕೈಗೆ ಬರಬೇಕಾದ ಆದಾಯಕ್ಕೇನೂ ಕೊರತೆ ಉಂಟಾಗಿಲ್ಲ.

ಉತ್ತಮ ಫಸಲು ಪಡೆಯುವುದು ಹೇಗೆ?
ಅಭಿವೃದ್ಧಿ ವಲಯಗಳಲ್ಲಿ ಒಂದು ಪ್ರಮುಖವಾದ ಪ್ರಶ್ನೆ ನಿರಂತರವಾಗಿ ಕೇಳಿ ಬರುತ್ತಲೇ ಇದೆ. ಅದೇನೆಂದರೆ, ಉತ್ತಮ ಫಸಲು ಪಡೆಯುವುದು ಹೇಗೆ? ಎನ್ನುವುದು. ಆಂಧ್ರಪ್ರದೇಶದಲ್ಲಿ ಕೀಟನಾಶಕದ ಕುರಿತಾಗಿ ಜನರಿಗಿದ್ದ ದೃಷ್ಟಿಕೋನದಲ್ಲಾದ ಅಮೂಲಾಗ್ರ ಬದಲಾವಣೆಯೇ ಈ ಪ್ರಶ್ನೆಗೆ ಉತ್ತರ ನೀಡುತ್ತದೆ. ಕೀಟನಾಶಕ ಬಳಸದೆಯೇ ಹೇಗೆ ಫಸಲು ಪಡೆಯಬಹುದು ಎನ್ನುವುದನ್ನು ಅಲ್ಲಿನ ಹಳ್ಳಿಗರು ತೋರಿಸಿಕೊಟ್ಟಿದ್ದಾರೆ. ವಿಸ್ತೃತವಾದ ಸುಸ್ಥಿರ, ಯಶಸ್ವಿದಾಯಕ ಉಪಕ್ರಮಗಳನ್ನು ಮತ್ತು ತಂತ್ರಗಳನ್ನು ಅನುಸರಿಸುವ ಮೂಲಕ ಸೂಕ್ತ ಸಮಯದಲ್ಲಿ ಬೇರೆ-ಬೇರೆ ಪ್ರದೇಶಗಳ ಹಲವಾರು ಜನರನ್ನು ತಲುಪುವಲ್ಲಿಯೂ ಸಿ.ಎಸ್.ಎ. ಸಫಲವಾಗಿದೆ. ಹೊಸ-ಹೊಸ ತಂತ್ರಗಳ ಪುನರ್ ಶೋಧನೆಯ ಜೊತೆಗೆ ಮರುಬಳಕೆ ಮತ್ತು ಸಂಶೋಧನೆ ರೈತರಿಗೆ ಸಾಕಷ್ಟು ಉತ್ತಮ ಪಾಠ ಕಲಿಸಿದೆ. ಈ ಎಲ್ಲಾ ಪ್ರಕ್ರಿಯೆ, ಕಾರ್ಯಯೋಜನೆಗಳ ಹೊರತಾಗಿಯೂ ಹಲವಾರು ಮೌಲ್ಯಯುತವಾದ ಅನುಭಗಳು, ಯಶಸ್ಸಿನ ಕತೆಗಳು ಈ ಹಳ್ಳಿಗಳಲ್ಲಿವೆ.

ಈ ಯಶಸ್ಸಿಗೆ ಹಲವಾರು ಕಾರಣಗಳಿರಬಹುದು. ಈ ಗೆಲುವು ಸ್ವಾಭಾವಿಕವಾಗಿ ದಕ್ಕಿರಬಹುದು ಅಥವಾ ಎನ್.ಜಿ.ಒ., ಸರ್ಕಾರ ಅಥವಾ ತಳಮಟ್ಟದ ಚಳವಳಿಗಳು, ಕಾರ್ಯಕ್ರಮಗಳ ಮೂಲಕವೂ ದೊರೆತಿರಬಹುದು. ಸಿ.ಎಸ್.ಎ. ಗುರುತಿಸಿರುವ ಪ್ರಕಾರ, ಈ ಯಶಸ್ಸಿಗೆ ಎರಡು ಪ್ರಮುಖ ಕಾರಣಗಳಿವೆ: ಒಂದನೆಯದು ಸರ್ಕಾರೇತರ ಸಂಸ್ಥೆಗಳು ಮತ್ತು ಸರ್ಕಾರದ ಸಹಭಾಗಿತ್ವ ಮತ್ತು ಇನ್ನೊಂದು – ಎನ್.ಪಿ.ಎಂ. ಪರಿಕಲ್ಪನೆಯನ್ನು ಬಳಸಿಕೊಂಡು ರೈತರು ತಾವಾಗಿಯೇ ಕೃಷಿ ಮಾಡಲು ಮುಂದಾಗಿದ್ದು.

ರೈತರಿoದ ರೈತರಿಗಾಗಿ
ಆಂಧ್ರಪ್ರದೇಶದ ಖಮ್ಮಮ್ ಜಿಲ್ಲೆಯಲ್ಲಿ ಪುನುಕುಲ ಎಂಬ ಪುಟ್ಟ ಗ್ರಾಮವಿದೆ. ಬುಡಕಟ್ಟು ಜನಾಂಗಗಳೇ ಈ ಹಳ್ಳಿಯ ನಿವಾಸಿಗಳು. ವಿಶೇಷ ಎಂದರೆ ರಾಜ್ಯದ ಎಷ್ಟೋ ನೊಂದ ರೈತರಿಗೆ ಈ ಗ್ರಾಮ ಇಂದು ಭರವಸೆಯ ದಾರಿದೀವಿಗೆಯಾಗಿದೆ.

೨೦೦೩ರಲ್ಲಿ ಈ ಪುನುಕುಲ ‘ಕೀಟನಾಶಕ ಮುಕ್ತ’ ಗ್ರಾಮವೆಂದು ತಾನೇ ಘೋಷಿಸಿಕೊಂಡಿತ್ತು. ಇಲ್ಲಿನ ರೈತರು ಪರ್ಯಾಯ ಕೀಟ ನಿರ್ವಹಣೆ ತಂತ್ರಗಳನ್ನು ಅನುಸರಿಸುವ ಮೂಲಕ ಹೊಸ ಪ್ರಗತಿಯ ದಾರಿಯನ್ನು ಕಂಡುಕೊoಡಿದ್ದಾರೆ. ಕೀಟನಾಶಕಗಳನ್ನು ನಿಯಂತ್ರಿಸಲು ಅತ್ಯಂತ ಸರಳ ಮತ್ತು ಅಗ್ಗವಾದ ವಿಧಾನವನ್ನು ಬಳಸುತ್ತಿದ್ದಾರೆ. ಕೀಟಗಳ ಜೀವನಚಕ್ರವನ್ನು ಅರಿತುಕೊಂಡೇ ರೈತರು ವಿಧಾನಗಳನ್ನು ಅನುಸರಿಸುತ್ತಿರುವುದು ವಿಶೇಷ. ಪ್ರಸ್ತುತ ಇಲ್ಲಿನ ರೈತರು ತಮ್ಮ ತಂತ್ರಜ್ಞಾನವನ್ನು ತಂತಮ್ಮ ಪ್ರದೇಶಗಳಲ್ಲಿ ಯಶಸ್ವಿಯಾಗಿ ವಿಸ್ತರಿಸುವಲ್ಲಿಯೂ ಸೈ ಎನಿಸಿಕೊಂಡಿದ್ದಾರೆ. ರೈತರ ಈ ಅಪೂರ್ವ ಸಾಧನೆ ಮಾಧ್ಯಮಗಳಲ್ಲಿಯೂ ಪ್ರಚಾರ ಕಂಡಿದೆ ಮಾತ್ರವಲ್ಲ, ರಾಜ್ಯ ಕೃಷಿ ಇಲಾಖೆಯ ಬಾಗಿಲೂ ಮುಟ್ಟಿದೆ!. ಇದರಿಂದಾಗಿ ಇಲ್ಲಿನ ರೈತರ ಪರ್ಯಾಯ ವಿಧಾನ ಅನುಸರಣೆ ರಾಜ್ಯಸರ್ಕಾರದ ಮೆಚ್ಚುಗೆಗೂ ಪಾತ್ರವಾಯಿತು.

ಹೌದು, ಇದೊಂದು ಕೆಳಸ್ತರದಿಂದ ಬೆಳೆದುಬಂದ ಅದ್ಭುತವಾದ ಕೃಷಿ ತಂತ್ರಗಾರಿಕೆ ಎಂದೇ ಹೇಳಬಹುದು. ಎನ್.ಪಿ.ಎಂ. ವ್ಯಾಪಕ ವಿಸ್ತರಣೆಯೂ ರೈತರಿಂದ ರೈತರಿಗಾಗಿ ಎನ್ನುವ ಪರಿಕಲ್ಪನೆಯನ್ನು ಇನ್ನಷ್ಟು ಗಟ್ಟಿಯಾಗಿಸಿತು. ಒಂದು ಜಮೀನಿನಲ್ಲಿ ಕೆಲಸ ಮಾಡುವ ಜನರು ತಮ್ಮೊಳಗಿನ ಜ್ಞಾನವನ್ನು ಪರಸ್ಪರ ಮತ್ತು ಒಂದು ಸಮುದಾಯದ ನಡುವೆ ಹಂಚಿಕೊಳ್ಳಲು ಸಹಾಯವಾಯಿತು. ಬೇರೆ-ಬೇರೆ ರೈತರ ಪರಿಸ್ಥಿತಿಗಳನ್ನು ಅರ್ಥೈಸಿಕೊಳ್ಳಲು ವೇದಿಕೆಯಾಯಿತು. ಅವರಿಗೆ ತಿಳಿದಿರುವ ಭಾಷೆಯಲ್ಲಿ ಪರಿಕಲ್ಪನೆಗಳನ್ನು, ಅಭಿಪ್ರಾಯಗಳನ್ನು ವಿವರಿಸಲು ಸಾಧ್ಯವಾಯಿತು. ಇದರಿಂದಾಗಿ ಸಣ್ಣ ಪ್ರಮಾಣದ ಮತ್ತು ಶ್ರಮಿಕ ಪ್ರಧಾನ ಸಮುದಾಯಗಳ ನಡುವೆ ಸಾಮಾಜಿಕ ಸಂಪರ್ಕ ಗಟ್ಟಿಯಾಗಿತು. ಇಂದು ಕುಟುಂಬ ಕೃಷಿ ಸಮುದಾಯಗಳಲ್ಲಿ ಈ ಕಾರ್ಯವಿಧಾನ ಉತ್ತಮ ಫಲಿತಾಂಶವನ್ನು ಒದಗಿಸಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ.
ಇಲ್ಲಿನ ನೂರಾರು ಹಳ್ಳಿಗಳಲ್ಲಿ ಆಗಿರುವ ಆಮೂಲಾಗ್ರ ಬದಲಾವಣೆಯ ಹಿಂದೆ ಮಹಿಳೆಯರ ಪಾತ್ರವನ್ನು ಅಲ್ಲಗಳೆಯುವಂತಿಲ್ಲ. ಮಹಿಳಾ ಸ್ವ-ಸಹಾಯ ಸಂಘಗಳು ಇಲ್ಲಿ ತಳಮಟ್ಟದ ಆಂದೋಲನಕ್ಕೆ ಸಹಕಾರಿಯಾಗಿವೆ. ಈ ಮೂಲಕ ಮಹಿಳೆಯರು ಸಬಲೀಕರಣದತ್ತ ಮುಂದೆಜ್ಜೆ ಇಡುವುದರ ಜೊತೆಗೆ, ಕೃಷಿ ಅಭಿವೃದ್ಧಿಯಲ್ಲಿಯೂ ಪ್ರಮುಖ ಪಾತ್ರವಹಿಸಿದ್ದಾರೆ. ನಷ್ಟದ ಯಾತನೆಯಿಂದ ಪಾರಾಗುವ ಪರಿಯನ್ನು ಕಂಡುಕೊoಡಿದ್ದಾರೆ. ಸಿ.ಎಸ್.ಎ. ಸ್ಫೂರ್ತಿಯಿಂದ ‘ಕೃಷಿ ಒಂದು ತಂತ್ರಜ್ಞಾನ ಎನ್ನುವುದಕ್ಕಿಂತ ಅದೊಂದು ಜೀವನೋಪಾಯ’ ಎಂದು ಭಾವಿಸಿದ್ದಾರೆ. ಮುಖ್ಯವಾಗಿ ಇಲ್ಲಿನ ಮಹಿಳೆಯರು ರಾಸಾಯನಿಕ ಬಳಸದೆ ಕೃಷಿ ಮಾಡುವುದರಿಂದ ಆಗುವ ಆರ್ಥಿಕ, ಸಾಮಾಜಿಕ ಮತ್ತು ಆರೋಗ್ಯ ಸಂಬoಧಿ ಪ್ರಯೋಜನಗಳ ಬಗ್ಗೆ ಸ್ಪಷ್ಟವಾಗಿ ತಿಳಿದುಕೊಂಡಿದ್ದಾರೆ. ಹೆಚ್ಚೆಚ್ಚು ಮಹಿಳೆಯರು ಸಿ.ಎಸ್.ಎ. ಕಾರ್ಯಕ್ರಮಗಳ ಬಗ್ಗೆ ಕೇಳಿ ತಮ್ಮ ಹಳ್ಳಿಗಳಲ್ಲೂ ಈ ಕಾರ್ಯಕ್ರಮವನ್ನು ಜಾರಿಗೊಳಿಸಬೇಕೆಂದು ಬೇಡಿಕೆ ಮುಂದಿಡುತ್ತಿದ್ದಾರೆ ಮತ್ತು ಮನೆಯಲ್ಲಿನ ಪುರುಷರಿಗೆ ಕೃಷಿಯಲ್ಲಿ ರಾಸಾಯನಿಕ ಬಳಸದಿರಲು ಮನವರಿಕೆ ಮಾಡಿಕೊಡುತ್ತಾರೆ.

ಎನ್.ಪಿ.ಎಂ. ಮತ್ತು ಸರ್ಕಾರದ ಸಹಭಾಗಿತ್ವ
ಈ ಎಲ್ಲಾ ಕಾರಣಗಳಿಂದಾಗಿ ಕೀಟನಾಶಕ ರಹಿತ ಕೃಷಿ ನಿರ್ವಹಣೆ(ಎನ್.ಪಿ.ಎಂ.)ಯನ್ನು ಅಭಿವೃದ್ಧಿಪಡಿಸಲು ಸರ್ಕಾರ ಮುಂದಾಗಬೇಕೆAದು ರಾಜ್ಯ ಸರ್ಕಾರದ ಮೇಲೆ ಒತ್ತಡ ಹೆಚ್ಚಿತ್ತು. ಇದರ ಭಾಗವೆಂಬAತೆ ‘ಕಮ್ಯೂನಿಟಿ ಮ್ಯಾನೇಜ್‌ಡ್ ಸಸ್ಟೇನಬಲ್ ಅಗ್ರಿಕಲ್ಚರ್’(ಸಮುದಾಯ ನಿರ್ವಹಿಸುವ ಸುಸ್ಥಿರ ಕೃಷಿ)’ ಕಾರ್ಯಕ್ರಮವೂ ಜಾರಿಗೆ ಬಂದಿದೆ. ಆದರೆ, ಸರ್ಕಾರ, ರೈತರು ಕೀಟನಾಶಕ ರಹಿತ ಕೃಷಿ ಮಾಡಲು ಆಸಕ್ತಿ ತೋರುತ್ತಿಲ್ಲ ಎಂದು ಹೇಳುತ್ತಿದೆ. ಹೀಗಿದ್ದರೂ, ಆಂಧ್ರಪ್ರದೇಶದಲ್ಲಿ ‘ರೈತರಿಂದ ರೈತರಿಗಾಗಿ’ ಕಾರ್ಯಕ್ರಮವು ಎನ್.ಪಿ.ಎಂ. ಕಾರ್ಯಸಾಧ್ಯತೆಯ ಕುರಿತು ಸಾಕಷ್ಟು ಅನುಭವವನ್ನು ನೀಡಿದೆ. ಸರ್ಕಾರ ಇದಕ್ಕೆ ಸಿದ್ಧವಿಲ್ಲದಿದ್ದರೂ, ಕೃಷಿ ಕುಟುಂಬಗಳು ಈ ಬದಲಾವಣೆಯನ್ನು ಒಪ್ಪಿಕೊಳ್ಳಬಹುದು. ಸರ್ಕಾರ ಯಾವುದೇ ಕ್ರಮಗಳನ್ನು ಕೈಗೊಳ್ಳದ ಹೊರತಾಗಿಯೂ ಎನ್.ಪಿ.ಎಂ. ಲಾಭ-ನಷ್ಟಗಳನ್ನು ಅರಿತುಕೊಂಡ ರೈತರು ಎನ್.ಪಿ.ಎಂ. ಮಾದರಿ ಅನುಸರಿಸುವ ನಿರ್ಧಾರಕ್ಕೆ ಬರಬಹುದು. ಅದೃಷ್ಟವಶಾತ್, ಆಂಧ್ರಪ್ರದೇಶದ ವಿಷಯದಲ್ಲಿ ಸರ್ಕಾರದ ಇಲಾಖೆಗಳೇ ಸಿ.ಎಸ್.ಎ. ಕೃಷಿ
ವಿಧಾನಗಳನ್ನು ಬೆಂಬಲಿಸಲು ಆಸಕ್ತಿ ಹೊಂದಿವೆ.

ಸಿ.ಎಸ್.ಎ. ಸರ್ಕಾರೇತರ ಸಂಸ್ಥೆಗಳ ಸಹಯೋಗದೊಂದಿಗೆ ಈ ಕಾರ್ಯಕ್ರಮಕ್ಕೆ ಚಾಲ್ತಿ ನೀಡಿದಾಗ ರಾಜ್ಯ ಗ್ರಾಮೀಣಾಭಿವೃದ್ಧಿ ಇಲಾಖೆಯೂ ಇದಕ್ಕೆ ಸಹಕರಿಸಿತ್ತು. ಈ ಸಹಭಾಗಿತ್ವವನ್ನು ನೋಡಿದಾಗ ಗಟ್ಟಿಯಾಗಿ ನೆಲೆಯೂರಿದ ಬಡತನ ನಿರ್ಮೂಲನೆಗೂ ಇಂಥ ಒಂದು ಪಾಲುದಾರಿಕೆ ಅಗತ್ಯ ಎಂಬುದು ಸ್ಪಷ್ಟವಾಗುತ್ತದೆ. ಇಂಥ ಸಹಭಾಗಿತ್ವದ ಯಶಸ್ಸು ಪೂರಕವಾದ ಉದ್ದೇಶಗಳ ಮೇಲೆ ಅವಲಂಬಿಸಿರುತ್ತದೆ. ಸಿ.ಎಸ್.ಎ.ಯ ಮುಖ್ಯವಾದ ಗುರಿಯೆಂದರೆ ಕೀಟನಾಶಕಗಳ ಬಳಕೆಗೆ ಪರ್ಯಾಯ ಮಾರ್ಗಗಳನ್ನು ಕಂಡುಕೊಳ್ಳುವುದು. ರೈತರಿಗೆ ಕೃಷಿಯಲ್ಲಿ ವೆಚ್ಚ ಕಡಿತ ಮಾಡುವ ಮೂಲಕ ಅವರ ಜೀವನೋಪಾಯ ಸುಧಾರಿಸುವುದು. ಆಂಧ್ರಪ್ರದೇಶದಲ್ಲಾಗಿರುವ ಬದಲಾವಣೆಯನ್ನೇ ಮುಖ್ಯವಾಗಿಟ್ಟುಕೊಂಡು ಇದೀಗ ರಾಷ್ಟೀಯ  ಮಟ್ಟದಲ್ಲಿ ‘ಮಹಿಳಾ ರೈತರ ಸಬಲೀಕರಣ ಕಾರ್ಯಕ್ರಮ’ವನ್ನು ಕಾರ್ಯಗತಗೊಳಿಸಲಾಗಿದೆ. ಇದರಿಂದಾಗಿ ಸರ್ಕಾರದ ಸಹಭಾಗಿತ್ವದಲ್ಲಿ ಮಾಡಿದ ಈ ಕಾರ್ಯಕ್ರಮ ಇನ್ನಷ್ಟು ಯಶಸ್ಸನ್ನು ಪಡೆದು, ರಾಜ್ಯ ಮತ್ತು ರಾಷ್ಟೀಯ   ಮಟ್ಟದಲ್ಲಿ ಪರಿಣಾಮಕಾರಿಯಾಗಿ ಜನರನ್ನು ತಲುಪಿದೆ.

ಇಂಥ ಸರ್ಕಾರೇತರ ಸಂಸ್ಥೆಗಳ ಸಹಭಾಗಿತ್ವದಲ್ಲಿ ಇಂಥ ಕಾರ್ಯಕ್ರಮ ಮಾಡುವುದರಿಂದ ಸರ್ಕಾರಕ್ಕೆ ಖಂಡಿತವಾಗಿಯೂ ಲಾಭವಿದೆ. ಆದರೂ ಕೂಡ, ಸರ್ಕಾರವೇ ಇದನ್ನು ಮುಂದೆ ನಿಂತು ಮಾಡಲು ಮುಂದಾಗುತ್ತಿಲ್ಲ. ಇದಕ್ಕೆ ಪೂರಕವಾದ ಆಡಳಿತ ನೀತಿ ಅಥವಾ ಕಾನೂನು-ವಿಧಾನಗಳನ್ನು ಜಾರಿಗೊಳಿಸಲು ಮುಂದಾಗುತ್ತಿಲ್ಲ. ಇನ್ನೊಂದು ಪ್ರಮುಖವಾದ ವಿಷಯವನ್ನು ಇಲ್ಲಿ ಪ್ರಸ್ತಾಪಿಸಲೇಬೇಕು. ಇಂಥ ಸಹಭಾಗಿತ್ವದಲ್ಲಿ ಪಾಲುದಾರರು ಪರಸ್ಪರ ನಂಬಿಕೆ ಮತ್ತು ಸ್ವೀಕೃತ ನಿಲುವನ್ನು ಹೊಂದಿರುವುದು ಕೂಡ ಬಹುಮುಖ್ಯ ಎನ್ನುವುದು ಗಮನಾರ್ಹ.

ಪರಿಣಾಮಕಾರಿ ಜಾರಿ
ಯಾವುದೇ ಕೃಷಿ ವ್ಯವಸ್ಥೆಯ ಸುಸ್ಥಿರತೆ ಅಥವಾ ಈ ಕ್ಷೇತ್ರದಲ್ಲಿ ನಡೆಯುವ ನೂತನ ಪ್ರಯೋಗಗಳು ಆಯಾ ಕೃಷಿ ಪದ್ಧತಿಯನ್ನು ಯಾವ ರೀತಿ ಅನುಸರಿಸಿಕೊಂಡು ಹೋಗಿರುತ್ತಾರೆ ಎನ್ನುವುದನ್ನು ಅವಲಂಬಿಸಿರುತ್ತದೆ. ಸಾವಿರಾರು ರೈತರು ಹೇಳುವ ಪ್ರಕಾರ, ಕೀಟಗಳ ನಿರ್ವಹಣೆ, ಬೆಳೆಗಳಿಗೆ ಬರುವ ರೋಗಗಳನ್ನು ತಡೆಯಲು ಮತ್ತು ಮಣ್ಣಿನ ಫಲವತ್ತತೆಗೆ ಅನುಸರಿಸುವ ನೈಸರ್ಗಿಕ ಪ್ರಯೋಗಗಳು ಅತ್ಯಂತ ಪರಿಣಾಮಕಾರಿ ಮತ್ತು ಯಶಸ್ವಿಯಾಗಿವೆ. ಜೊತೆಗೆ, ಇದರಿಂದ ಆರ್ಥಿಕ ಪ್ರಗತಿಯೂ ಸಾಧ್ಯವಾಗಿದೆ ಮತ್ತು ರೈತರ ಆತ್ಮವಿಶ್ವಾಸ ಹೆಚ್ಚಾಗಿದೆ. ಅಷ್ಟೇ ಅಲ್ಲ, ಸಾಲಕ್ಕಾಗಿ ಭೂಮಿಯನ್ನೇ ಒತ್ತೆಯಿಟ್ಟ ರೈತರು ತಮ್ಮ ಜಮೀನನ್ನು ವಾಪಾಸ್ ಪಡೆದುಕೊಳ್ಳಲು ಸಾಧ್ಯವಾಗಿದೆ. ಕೃಷಿಯಿಂದ ಬೇಸತ್ತು ವಲಸೆ ಹೋಗುವ ಪ್ರಕ್ರಿಯೆ ಕಡಿಮೆಯಾಗಿದೆ. ಅಂತೆಯೇ, ಕೃಷಿಯನ್ನು ಮತ್ತೆ ವೃತ್ತಿಯಾಗಿ ಹೊಂದಲು ರೈತರು ಉತ್ಸುಕರಾಗಿದ್ದಾರೆ. ಕೊನೆಯದಾಗಿ ಹೇಳುವುದಾದರೆ, ರೈತಮಹಿಳೆಯರು ಮತ್ತೊಮ್ಮೆ ತಮ್ಮ ಮುಂದಾಳುತ್ವವನ್ನು ಸಾಬೀತುಪಡಿಸಿದ್ದಾರೆ, ಅಭಿವೃದ್ಧಿಯ ಕೆಲಸಕ್ಕೆ ತಾವೇ ‘ಚಾಲಕ’ರಾಗಿ ನಿಂತಿದ್ದಾರೆ. ಈ ಮೂಲಕ ಪರಿಸರ ಸೂಕ್ಷ, ನ್ಯಾಯಸಮ್ಮತ, ಸುಸ್ಥಿರ ಮತ್ತು ದೀರ್ಘ ಅವಧಿಯ ದೃಷ್ಟಿಕೋನದ ಪ್ರಗತಿಯ ಗುರಿಯತ್ತ ಮುನ್ನುಗ್ಗುತ್ತಿದ್ದಾರೆ.

ಝಾಕಿರ್ ಹುಸೇನ್, ಜಿ.ವಿ. ರಾಮಾಂಜನೇಯುಲು, ಜಿ.ರಾಜಶೇಖರ್ ಮತ್ತು ಜಿ. ಚಂದ್ರಶೇಖರ್


Zakir Hussain

Programme Manager at the Centre for Sustainable Agriculture (CSA) in Tarnaka, Andhra Pradesh,

India

E-mail: zakir@csa-india.org

G.V. Ramanjaneyulu

Executive Director at CSA

E-mail: ramoo@csa-india.org

G.Rajasekhar

leading the seeds initiative at CSA

E-mail: rajasekhar@csa-india.org

G. Chandra Shekar

Head of Knowledge
Management at CSA

E-mail: sekhar@csa-india.org


ಆಂಗ್ಲ ಮೂಲ: ಲೀಸಾ ಇಂಡಿಯಾ, ಸಂಪುಟ ೧೫, ಸಂಚಿಕೆ ೪, ಡಿಸೆಂಬರ್ ೨೦೧೩

Recent Posts

ಕೃಷಿಯಲ್ಲಿ ನೀರಿನ ಸಮರ್ಥ ಬಳಕೆಗಾಗಿ ಕಾಲುವೆ ಯಾಂತ್ರೀಕರಣ

ಕೃಷಿಯಲ್ಲಿ ನೀರಿನ ಸಮರ್ಥ ಬಳಕೆಗಾಗಿ ಕಾಲುವೆ ಯಾಂತ್ರೀಕರಣ

ನಮ್ಮ ನೀರಾವರಿ ವ್ಯವಸ್ಥೆಯನ್ನು 21ನೇ ಶತಮಾನದ ಬೇಡಿಕೆಗಳಿಗೆ ಹೊಂದುವಂತೆ ಮಾಡುವುದು ನಮ್ಮ ಮುಂದಿರುವ ನಿಜವಾದ ಸವಾಲಾಗಿದೆ. ತಂತ್ರಜ್ಞಾನವೇ...