ಸಮಗ್ರ ಕೃಷಿಯಿಂದ ಆದಾಯ ಹೆಚ್ಚು


ಸಮಗ್ರ ಕೃಷಿ ವ್ಯವಸ್ಥೆಗಳು (IFS) ಕೃಷಿ ವ್ಯವಸ್ಥೆಯ ಹಲವಾರು ಘಟಕಗಳನ್ನು ಜೋಡಿಸುವುದನ್ನು ಒಳಗೊಂಡಿರುತ್ತದೆ. ಘಟಕಗಳ ನಡುವೆ ಸಂಪನ್ಮೂಲಗಳ ಹರಿವನ್ನು ಸ್ಥಾಪಿಸಲಾಗುತ್ತದೆ. ಒಂದು ಘಟಕದ ʼಹೊರಸುರಿಯುವಿಕೆʼ ಮತ್ತೊಂದಕ್ಕೆ ʼಒಳಸುರಿಯುವಿಕೆʼ ಆಗುತ್ತದೆ. ಸಂಪನ್ಮೂಲಗಳ ಸದ್ಬಳಕೆ; ಸುಸ್ಥಿರತೆ ಮತ್ತು ಕೃಷಿ ಉತ್ಪಾದನೆ ಹಾಗೂ ಕೃಷಿಕರ ಬದುಕಿನ ಸುಧಾರಣೆ; ಕೃಷಿ ಬದುಕಿನ ಅವಶ್ಯಕತೆಗಳನ್ನು ಪೂರೈಸುವುದರೊಂದಿಗೆ ಪೌಷ್ಟಿಕಾಂಶಯುಕ್ತ, ಆರೋಗ್ಯಭರಿತ, ವೈವಿಧ್ಯಮಯ ಆಹಾರ ಹಾಗೂ ಮೇವಿನ ಉತ್ಪಾದನೆ ಐಎಫ್ಎಸ್ವಿಧಾನವಾಗಿದೆ.


ಕೊಡಿಯಳ್ಳಿ ಎಂಬುದು ತಮಿಳುನಾಡಿನ ಧರ್ಮಪುರಿ ಜಿಲ್ಲೆಯ ಪೆನ್ನಗರಂ ಬ್ಲಾಕ್‌ನ ಮೀಸಲು ಅರಣ್ಯ ವ್ಯಾಪ್ತಿಯ ಸಮೀಪದಲ್ಲಿರುವ ಒಂದು ಗ್ರಾಮವಾಗಿದೆ. ಗ್ರಾಮವು ಮೀಸಲು ಅರಣ್ಯದಿಂದ ಆವೃತವಾಗಿದೆ. ಹೆಚ್ಚಿನ ರೈತರು ಸಣ್ಣ ರೈತರು ಮತ್ತು ಮಳೆಯಾಶ್ರಿತರಾಗಿದ್ದು ಹವಾಮಾನ ವೈಪರೀತ್ಯಗಳ ಆತಂಕವನ್ನು ಎದುರಿಸುತ್ತಿದ್ದಾರೆ. ಜೀವನೋಪಾಯಕ್ಕಾಗಿ, ಅವರು ಋತುಮಾನ ಆಧಾರಿತ ಒಣ ಭೂಮಿಯ ಏಕ ಬೆಳೆ ಪದ್ಧತಿಯ ಮೇಲೆ ಅವಲಂಬಿತರಾಗಿದ್ದಾರೆ. ಫಲವತ್ತಾಗಿಲ್ಲದ ಮಣ್ಣು, ದುಬಾರಿ ಕೀಟನಾಶಕ , ಅಪಾಯಕಾರಿ ರಾಸಾಯನಿಕ ಒಳಹರಿವುಗಳೊಂದಿಗೆ ಸೆಣೆಸಬೇಕಾಗುತ್ತದೆ. ಗಂಡಸರು ನಗರ ಪ್ರದೇಶಗಳಿಗೆ ವಲಸೆ ಹೋಗುತ್ತಿರುವುದರಿಂದ ಹೆಂಗಸರು ತೋಟವನ್ನು ನಿರ್ವಹಿಸುತ್ತಾರೆ. ಅವರಲ್ಲಿ ಹಲವರು ಕೀಟಭಾದೆ, ಕುಂಠಿತ ಮಣ್ಣಿನ ಫಲವತ್ತತೆ, ಏಕಬೆಳೆ ಅಪಾಯ, ಹವಾಮಾನ ವೈಪರಿತ್ಯಗಳ ವಿರುದ್ಧ ಹೋರಾಡುತ್ತಾರೆ.

ರೈತರು ಪರಿಸರ ಆಯ್ಕೆಗಳಿಗೆ ಬದಲಾಗಲು ಸಹಾಯ ಮಾಡಲು, ಆ ಮೂಲಕ ಕೃಷಿ ವೆಚ್ಚವನ್ನು ಕಡಿಮೆ ಮಾಡಲು ಮತ್ತು ಇಳುವರಿಯನ್ನು ಹೆಚ್ಚಿಸಲು, AME ಫೌಂಡೇಶನ್ 2021 ರಿಂದ ಕೊಡಿಯಾಳ್ಳಿಯ ರೈತರೊಂದಿಗೆ ಕೆಲಸ ಮಾಡುತ್ತಿದೆ. ನೈಸರ್ಗಿಕ ಸಂಪನ್ಮೂಲ ನಿರ್ವಹಣೆ ಮತ್ತು ಸಮಗ್ರ ಕೃಷಿ ವ್ಯವಸ್ಥೆಗಳಿಗೆ ಸ್ವೀಕಾರಾರ್ಹ ಮತ್ತು ಕೈಗೆಟುಕುವ ಪರ್ಯಾಯಗಳನ್ನು ಪ್ರಯತ್ನಿಸಲು ಕೃಷಿ ಸಮುದಾಯಗಳಿಗೆ ಕ್ಷೇತ್ರ ಮಾರ್ಗದರ್ಶನದೊಂದಿಗೆ ವ್ಯವಸ್ಥಿತ ತರಬೇತಿ ನೀಡಲಾಗುತ್ತದೆ. 27 ವರ್ಷ ವಯಸ್ಸಿನ ತಮಿಳರಸಿ ಆ ಕಲಿಕೆಯ ಪ್ರಕ್ರಿಯೆಗಳಲ್ಲಿ ಉತ್ಸಾಹದಿಂದ ಭಾಗವಹಿಸಿದ ರೈತಮಹಿಳೆ.

ತಮಿಳರಸಿ ಒಂದು ಎಕರೆ ತೋಟದಲ್ಲಿ ಶೇಂಗಾ ಇಲ್ಲವೇ ರಾಗಿಯನ್ನು ಏಕಬೆಳೆಯಾಗಿ ಬೆಳೆಯುತ್ತಿದ್ದಳು. ಅವಳ ಬಳಿ ಎರಡು ಹಸುಗಳಿತ್ತು. ಅದಕ್ಕೆ ದುಬಾರಿ ಹಸಿ ಹಾಗೂ ಒಣ ಮೇವನ್ನು ಖರೀದಿಸಿ ಹಾಕುತ್ತಿದ್ದಳು. AMEF ತರಬೇತಿ ಹಾಗೂ ಮಾರ್ಗದರ್ಶನದ ನಂತರ ತಮಿಳರಸಿ ಸಮಗ್ರ ಕೃಷಿ ಮಾದರಿಯನ್ನು ತನ್ನ ಜಮೀನಿನಲ್ಲಿ ಪ್ರಯತ್ನಿಸಲು ಮುಂದಾದಳು. ಜೊತೆಗೆ ಕೈತೋಟ, ಅಜೋಲ ಮತ್ತು ಅಣಬೆಯನ್ನು ಕೂಡ ಬೆಳೆಯಲು ಉತ್ಸಾಹ ತೋರಿದಳು.

ಹಸುವಿನ ಸಗಣಿ ಮತ್ತು ಗಿಡಗಳ ತ್ಯಾಜ್ಯದ ಸರಿಯಾದ ಶೇಖರಣೆಯ ಬಗ್ಗೆ ನಾನು ಎಂದಿಗೂ ತಲೆಕೆಡಿಸಿಕೊಂಡಿರಲಿಲ್ಲಅದು ಅರ್ಥವಾದ ನಂತರ, ಗೊಬ್ಬರಕ್ಕಾಗಿ ಕಳೆಗಳನ್ನು ಸಹ ಬಳಸುತ್ತೇನೆ, ಎಂದು ತಮಿಳರಸಿ ಹೇಳುತ್ತಾರೆ.

ಮಿಶ್ರಬೆಳೆಯತ್ತ ಹೆಜ್ಜೆ

ಆರಂಭದಲ್ಲಿ, ತಮಿಳರಸಿ ತನ್ನ ಕುಟುಂಬದ ಆಹಾರ, ಮೇವು ಮತ್ತು ಆದಾಯದ ಅವಶ್ಯಕತೆಗಳ ಆಧಾರದ ಮೇಲೆ ಏಕಬೆಳೆಯಿಂದ ವಿವಿಧ ಬೆಳೆ ಬೆಳೆಯಲು ನಿರ್ಧರಿಸಿದಳು. ಪರಿಸರಸ್ನೇಹಿ ವಿಧಾನಗಳನ್ನು ಪ್ರಯತ್ನಿಸಲು ಮುಂದಾದಳು. ಆಳಕ್ಕೆ ಬೇರೂರುವ ಗಿಡಗಳು, ಬಳ್ಳಿಗಳು; ಕಾಳುಗಳು ಮತ್ತು ದ್ವಿದಳ ಧಾನ್ಯಗಳನ್ನು ವಿವಿಧ ಅಗತ್ಯಗಳಿಗೆ ತಕ್ಕಂತೆ ಬೆಳೆಸಂಯೋಜನೆ ಮಾಡಲಾಯಿತು. ಉದಾಹರಣೆಗೆ ವೈವಿಧ್ಯಮಯ ಆಹಾರ, ಜಾನುವಾರುಗಳಿಗೆ ಮೇವು, ಮಣ್ಣಿನ ಗುಣಮಟ್ಟ ಹೆಚ್ಚಳ, ಹವಾಮಾನ ತಾಳಿಕೆ, ಇಳುವರಿ, ಕೀಟ ಹಾಗೂ ರೋಗಬಾಧೆ ತಡೆಗೆ ಪರಿಸರಸ್ನೇಹಿ ವಿಧಾನಗಳ ಬಳಕೆ ಇವುಗಳನ್ನು ಅಳವಡಿಸಿಕೊಳ್ಳಲಾಯಿತು. ಸಾವಯವ ಗೊಬ್ಬರ ತಯಾರಿಕೆಗೆ ಗಿಡ ಹಾಗೂ ಪ್ರಾಣಿಗಳ ತ್ಯಾಜ್ಯವನ್ನು ಬಳಸಲಾಯಿತು.

ಕುಟುಂಬದ ವರ್ಷದ ಅಗತ್ಯಕ್ಕಾಗಿ ಶೇಂಗಾವನ್ನು ತೊಗರಿಯೊಂದಿಗೆ ಬೆಳೆಯಲಾಯಿತು. ಹರಳೆಯನ್ನು ಕೀಟಬಾಧೆ ತಡೆಗಾಗಿ ಬೆಳೆಸಲಾಯಿತು. ಅಲಸಂದೆಯನ್ನು ಕಾಳುಗಳ ಮುಖ್ಯಬೆಳೆಯಾಗಿ ಬೆಳೆಯಲಾಯಿತು. ಕೀಟಗಳನ್ನು ತಡೆಗಟ್ಟಲು ಕೀಟಭಕ್ಷಕಗಳನ್ನು ಆಕರ್ಷಿಸಲು ಜೋಳ/ನವಣೆಯನ್ನು ಅಂಚಿನಲ್ಲಿ ಬೆಳೆಯಲಾಯಿತು. ಅರ್ಧ ಎಕರೆಯಲ್ಲಿ ಶೇಂಗಾವನ್ನು ಉಳಿದರ್ಧದಲ್ಲಿ ರಾಗಿಯನ್ನು ತೊಗರಿಯನ್ನು ಅಂತರಬೆಳೆಯಾಗಿಯೂ ಬೆಳೆಯಲಾಯಿತು.

ಅರ್ಧ ಎಕರೆಯಲ್ಲಿ ಮೇವಿನ ಬೆಳೆಗಳನ್ನು ಬೆಳೆಯಲಾಯಿತು. Co4CN ಸ್ವೀಟ್‌ ಸುಡಾನ್‌, CoFs 29 ಜೋಳ ಇತ್ಯಾದಿಗಳನ್ನು ಬೆಳೆಸಲಾಯಿತು. ಇದು ೩-೪ ತಿಂಗಳವರೆಗೆ ಮೇವನ್ನು ಒದಗಿಸುತ್ತಿದ್ದವು.

ಬೆಳೆ ಮತ್ತು ಪ್ರಾಣಿ ತ್ಯಾಜ್ಯದ ಮರುಬಳಕೆ

ತಮಿಳರಸಿ ಮೊದಲು ಬೆಳೆ ಹಾಗೂ ಪ್ರಾಣಿ ತ್ಯಾಜ್ಯವನ್ನು ಮರುಬಳಕೆ ಮಾಡುತ್ತಿರಲಿಲ್ಲ. ಮೊದಲು ಅದನ್ನು ತೋಟದಲ್ಲಿ ಎಲ್ಲೆಡೆ (ಸರಿಸುಮಾರು ೧೦-೧೧ ತಿಂಗಳುಗಳು) ಬಿಸಿಲು, ಮಳೆಯಲ್ಲಿ ಬಿಡಲಾಗುತ್ತಿತ್ತು. ಇದರಿಂದಾಗಿ ಅದು ಸರಿಯಾಗಿ ಕೊಳೆಯುತ್ತಿರಲಿಲ್ಲ. ಹಾಗಾಗಿ ಮಣ್ಣಿನ ಫಲವಂತಿಕೆ ಹೆಚ್ಚಿಸುತ್ತಿರಲಿಲ್ಲ.

ಈಗ ಆಕೆ ಬೆಳೆ ಮತ್ತು ಪ್ರಾಣಿ ತ್ಯಾಜ್ಯದಿಂದ ಸಾವಯವ ಗೊಬ್ಬರ ತಯಾರಿಸಲು ಕಲಿತಳು. 10×15 ಅಡಿಯ ಗುಂಡಿಯನ್ನು ತೋಡಲಾಯಿತು. ಅದನ್ನು ಎರಡು ಭಾಗಗಳಾಗಿ ವಿಂಗಡಿಸಲಾಯಿತು. ಒಂದರಲ್ಲಿ ಸಗಣಿಯನ್ನು ತುಂಬಿದರೆ ಮತ್ತೊಂದರಲ್ಲಿ ಬೆಳೆ ತ್ಯಾಜ್ಯ ಮೊದಲಾದವನ್ನು ಹಾಕಲಾಯಿತು. ದಿನವೂ ಎರಡೂ ಭಾಗಗಳನ್ನು ತುಂಬಲಾಗುತ್ತಿತ್ತು. ಜೊತೆಗೆ ಗಂಜಲವನ್ನು (ಒಂದು-ಎರಡು ಅಡಿಗೊಮ್ಮೆ) ಅದರ ಮೇಲೆ ಹಾಕಲಾಗುತ್ತಿತ್ತು.

ಹಿತ್ತಲಲ್ಲಿ ಐದು ಕೋಳಿಗಲೂ, ಎರಡು ಮೇಕೆಗಳನ್ನು ಸಾಕುತ್ತಿದ್ದಳು. ಅದರ ತ್ಯಾಜ್ಯವನ್ನು ಕೂಡ ಗುಂಡಿಗೆ ಹಾಕಲಾಗುತ್ತಿತ್ತು. ಪ್ರತಿದಿನ ಸರಿಸುಮಾರು ಎರಡು ಹಸುಗಳಿಂದ 25 ಕೆಜಿ ಸಗಣಿ, 5 ಕೋಳಿಗಳಿಂದ 600ಗ್ರಾಂ ತ್ಯಾಜ್ಯ, 2 ಮೇಕೆಗಳಿಂದ 1 ಕೆಜಿ ತ್ಯಾಜ್ಯ ಸಿಗುತ್ತಿತ್ತು. ಕಡಿಮೆ ಸಮಯದಲ್ಲಿ ಉತ್ತಮ ಗುಣಮಟ್ಟದ ಗೊಬ್ಬರವು ತಯಾರಾಯಿತು.

ಮೇವು ನಿರ್ವಹಣೆ

ರಾಗಿ ಹುಲ್ಲು (912kgs), ಕಡಲೆಕಾಯಿ (476kgs), ಮುಸುಕಿನ ಜೋಳದ ಹುಲ್ಲು (122kgs) ನಂತಹ ವೈವಿಧ್ಯಮಯ ಮೇವಿನ ಬೆಳೆ ಕಟಾವು ಆದ ನಂತರ ಪ್ರಾಣಿಗಳಿಗೆ ಹಸಿರು ಮತ್ತು ಒಣ ಮೇವಾಗಿ ಕೊಡುಗೆ ನೀಡಿತು. ಕೊಯ್ಲಿನ ನಂತರ ಈ ಮೇವನ್ನು ಮನೆಯಲ್ಲೇ ತಯಾರುಮಾಡಲಾಗುತ್ತಿತ್ತು. ನವಣೆ ಹಾಗೂ ಜೋಳದ ಕಾಳುಗಳು ಶಕ್ತಿ ನೀಡುತ್ತಿತ್ತು. ಶೇಂಗಾ ಪ್ರೊಟೀನ್‌ ಮೂಲವಾಗಿತ್ತು. 100ಕೆಜಿ ಶೇಂಗಾವನ್ನು ಅರೆದಾಗ 47ಕೆಜಿಯಷ್ಟು ಕಡಲೆಕಾಯಿ ಎಣ್ಣೆ ಸಿಗುತ್ತಿತ್ತು. ರಾಗಿ ಮತ್ತಿತರ ಕಾಳುಗಳ ಹೊಟ್ಟಿನೊಂದಿಗೆ 200ಕೆಜಿಯಷ್ಟು ಸಾಂದ್ರಿತ ಮೇವು ತಯಾರಾಗುತ್ತಿತ್ತು. ಕೊಯ್ಲಿನ ನಂತರ ಉಳಿದದ್ದನ್ನು ಮೇವಾಗಿ ಹಾಗೂ ಸಾಂದ್ರಿತ ಮೇವಾಗಿ ಬಳಸಲಾಯಿತು. ಮೊದಲು ಆಕೆ 210ಕೆಜಿ ಸಾಂದ್ರಿತ ಮೇವು ಖರೀದಿಗೆ ಪ್ರತಿತಿಂಗಳಿಗೆ ರೂ. 1650ರಷ್ಟು ಮತ್ತು 250ಕೆಜಿ ಹಸಿರು ಹಾಗೂ ಒಣಮೇವು ಖರೀದಿಗೆ ರೂ. 7500 ವ್ಯಯಿಸುತ್ತಿದ್ದಳು. ಇವುಗಳಿಗೆ ಆದಾಯವೆಲ್ಲ ಖರ್ಚಾಗಿ ಹೋಗುತ್ತಿತ್ತು. ಎಷ್ಟೋ ಸಲ ಜಾನುವಾರುಗಳನ್ನು ಇಟ್ಟುಕೊಳ್ಳುವುದೇ ಹೊರೆ ಎಂದು ಅನ್ನಿಸುತ್ತಿತ್ತು,” ಎಂದು ತಮಿಳರಸಿ ಹೇಳುತ್ತಾಳೆ. ಅವಳ ಎರಡು ಹಸುಗಳು ಈಗ ದಿನವೊಂದಕ್ಕೆ 10 – 15 ಲೀಟರ್‌ ಹಾಲು ಕೊಡುತ್ತಿದೆ. ಹಾಲಿನ ಮಾರಾಟದಿಂದ ತಿಂಗಳಿಗೆ ಸರಾಸರಿ ರೂ. 16,500 – 20000 ಗಳಿಸುತ್ತಿದ್ದಾಳೆ.

ಐಎಫ್ಎಸ್‌ – ಉಪಯೋಗಗಳು ಹಲವಾರು

2019-20ರಲ್ಲಿ ಅರ್ಧ ಎಕರೆಯಿಂದ ತಮಿಳರಸಿ ಕೇವಲ 280 ಕೆಜಿ ಶೇಂಗಾ ಮತ್ತು 670 ಕೆಜಿ ರಾಗಿಯನ್ನು ಕಟಾವು ಮಾಡಿ ಎಕರೆಗೆ 30,000 ರಿಂದ 35,000 ರೂ ಗಳಿಸಿದಳು. ಆದರೆ 2021-2022 ರಲ್ಲಿ, ಅವಳು ಕಡಲೆಕಾಯಿ (436ಕೆಜಿ/0.5ಎಕರೆ) ಮತ್ತು ರಾಗಿ (920ಕೆಜಿ/0.5ಎಕರೆ) ನಂತಹ ಮುಖ್ಯ ಬೆಳೆಗಳಲ್ಲದೆ, ಇನ್ನಿತರ ಬೆಳೆಗಳನ್ನು ಕೊಯ್ಲು ಮಾಡುವ ಮೂಲಕ 44,560 ರೂಪಾಯಿಗಳ ಆದಾಯವನ್ನು ಗಳಿಸಿದಳು.

ಹಿತ್ತಲ ಕೈತೋಟದಿಂದ 3 ತಿಂಗಳ ಅವಧಿಯಲ್ಲಿ ಸರಾಸರಿ 1.5 ಕೆಜಿ ಮೆಣಸಿನಕಾಯಿ, 3 ಕೆಜಿ ಟೊಮೆಟೊ, 3 ಕೆಜಿ ಬೆಂಡೆ, 2 ಕೆಜಿ ಲ್ಯಾಬ್ ಲ್ಯಾಬ್, 25 ಕೆಜಿ ಸೋರೆಕಾಯಿ, 20 ಕೆಜಿ ಹೀರೆಕಾಯಿ, 10 ಕೆಜಿ ಹಾಗಲಕಾಯಿ, 2.5 ಕೆಜಿ ಬದನೆ, 4 ವಿಧದ ಸೊಪ್ಪುಗಳು, 10 ಕೆಜಿ ಹುರಳಿಕಾಯಿ ಮತ್ತು 25 ಕೆಜಿ ಕುಂಬಳಕಾಯಿ ಕೊಯ್ಲು ಮಾಡಿದಳು. ಹೊರಗಿನ ತರಕಾರಿ ಖರೀದಿಯನ್ನು ತಪ್ಪಿಸುವ ಮೂಲಕ, ಹಾಗೂ ಆರೋಗ್ಯಕರ ಆಹಾರ ಸೇವನೆ ಹೊಂದುವ ಮೂಲಕ 2021 ರ ಸೆಪ್ಟೆಂಬರ್‌ನಿಂದ ನವೆಂಬರ್ 2021 ರವರೆಗೆ ತಮಿಳರಸಿಯು ಸುಮಾರು ರೂ.4500/- ಅನ್ನು ಉಳಿಸಿದಳು. ಜೊತೆಗೆ ತರಕಾರಿ ತ್ಯಾಜ್ಯವನ್ನು ಜಾನುವಾರುಗಳಿಗೆ ಮೇವಾಗಿ ಬಳಸಿದಳು ಹಾಗೂ ಗೊಬ್ಬರದ ಗುಂಡಿಗೆ ಹಾಕಿದಳು.

ಹೈನುಗಾರಿಕೆಯ ಜೊತೆಗೆ, ಬೇಸಾಯ ವ್ಯವಸ್ಥೆಯಲ್ಲಿನ ಇನ್ನೂ ಮೂರು ಘಟಕಗಳು – ಹಿತ್ತಲಿನಲ್ಲಿದ್ದ ಕೋಳಿ, ಆಡುಗಳು ಮತ್ತು ಅಜೋಲಾ ಇವು ಗೊಬ್ಬರದ ಮೂಲಗಳಾದವು ಜೊತೆಗೆ ಅವಳ ಆದಾಯವನ್ನು ಸುಧಾರಿಸಿದವು. ಮೇಕೆಗಳು ರೂ.16000 ಮೌಲ್ಯದ್ದಾಗಿದೆ, ಕೋಳಿಗಳು ಸುಮಾರು 40 ಮೊಟ್ಟೆಗಳನ್ನು ನೀಡುತ್ತದೆ ಮತ್ತು 35 ಕೋಳಿಮರಿಗಳು ಡಿಸೆಂಬರ್ 2021 ರಲ್ಲಿ ತಲಾ 250 ಗ್ರಾಂ ತೂಕವನ್ನು ಹೊಂದಿದ್ದವು. ಇವುಗಳಿಂದ ಸರಿಸುಮಾರು ರೂ. 28,000.00 ನಿರೀಕ್ಷಿಸಲಾಗುತ್ತಿದೆ. ನವಂಬರ್‌ನಿಂದ ಹಿತ್ತಲಲ್ಲಿ ಅಜೋಲ ಬೆಳೆಯಲು ಆರಂಭಿಸಿದಳು. ದಿನಬಿಟ್ಟು ದಿನ 0.5 – 1ಕೆಜಿಯಷ್ಟು 12ಚದುರಅಡಿಯಲ್ಲಿ ಕೊಯ್ಲು ಮಾಡಿದಳು. ಅಜೋಲವನ್ನು ಮೇವಿಗಾಗಿ ಬಳಸಲಾಯಿತು.

ಇವೆಲ್ಲವನ್ನೂ ಒಳಗೊಂಡ ಸಮಗ್ರ ಕೃಷಿಯು ತಮಿಳರಸಿಗೆ ಆದಾಯ ಹಾಗೂ ಉಳಿತಾಯದೊಂದಿಗೆ ತನ್ನ ಭೂಮಿಯಿಂದ ಸರಿಸುಮಾರು ರೂ. 1,00,560/-ದಷ್ಟು ಗಳಿಸಲು ನೆರವಾಗಿದೆ. ಈ ವಿಧಾನದಿಂದ ತಮಿಳರಸಿಯು ಹೆಚ್ಚಿನ ಆದಾಯದೊಂದಿಗೆ ಪೌಷ್ಟಿಕಾಂಶಯುಕ್ತ ಆಹಾರ ಪಡೆಯುತ್ತಿದ್ದಾಳೆ, ಪರಿಸರಾತ್ಮಕ ವಿಧಾನದಲ್ಲಿ ಕೀಟನಿಯಂತ್ರಣ ಮಾಡುತ್ತಿದ್ದಾಳೆ ಮತ್ತು ಮನೆಯಲ್ಲೇ ಮೇವು ತಯಾರಿಸುವುದರೊಂದಿಗೆ ಗಿಡ ಹಾಗೂ ಪ್ರಾಣಿ ತ್ಯಾಜ್ಯದ ಮರುಬಳಕೆ ಮಾಡುತ್ತಿದ್ದಾಳೆ. ಈ ಎಲ್ಲ ಹೆಚ್ಚುವರಿ ಚಟುವಟಿಕೆಗಳು ಅವಳನ್ನು ತೋಟದ ಕೆಲಸದಲ್ಲಿ ತೊಡಗಿಕೊಳ್ಳುವಂತೆ ಮಾಡಿದೆ. ನನಗೆ ನನ್ನ ತೋಟದ ಕೆಲಸವಿದೆ ಎಂದು ಹೇಳಿಕೊಳ್ಳಲು ಹೆಮ್ಮೆ,” ಎಂದು ಆಕೆ ಹೇಳುತ್ತಾಳೆ.

ಜೆ ಕೃಷ್ಣನ್


J Krishnan

Team Leader,

AME Foundation

Dharmapuri, Tamil Nadu

ಆಂಗ್ಲ ಮೂಲ : ಲೀಸಾ ಇಂಡಿಯಾ; ಸಂಪುಟ :೨೩; ಸಂಚಿಕೆ : ‌೪ ; ಡಿಸೆಂಬರ್ ೨೦‌೨೧

Recent Posts

ಕೃಷಿಯಲ್ಲಿ ನೀರಿನ ಸಮರ್ಥ ಬಳಕೆಗಾಗಿ ಕಾಲುವೆ ಯಾಂತ್ರೀಕರಣ

ಕೃಷಿಯಲ್ಲಿ ನೀರಿನ ಸಮರ್ಥ ಬಳಕೆಗಾಗಿ ಕಾಲುವೆ ಯಾಂತ್ರೀಕರಣ

ನಮ್ಮ ನೀರಾವರಿ ವ್ಯವಸ್ಥೆಯನ್ನು 21ನೇ ಶತಮಾನದ ಬೇಡಿಕೆಗಳಿಗೆ ಹೊಂದುವಂತೆ ಮಾಡುವುದು ನಮ್ಮ ಮುಂದಿರುವ ನಿಜವಾದ ಸವಾಲಾಗಿದೆ. ತಂತ್ರಜ್ಞಾನವೇ...