ಸಾಂಕ್ರಾಮಿಕ ಕಾಲದಲ್ಲಿ ಇಪ್ಪೆಯ ಮೌಲ್ಯವರ್ಧನೆ


ಇಪ್ಪೆಯ ಹೂಗಳು ಮತ್ತು ಹಣ್ಣುಗಳನ್ನು ವಿವೇಚನೆಯಿಂದ ವಾಣಿಜ್ಯ ಬಳಕೆ ಮಾಡಿದಲ್ಲಿ ಅದರ ಮೌಲ್ಯವರ್ಧನೆಯಾಗಿ ಹಳ್ಳಿಗೆ ಲಾಭದಾಯಕ ಉದ್ಯಮವಾಗಬಲ್ಲುದು. ಇಪ್ಪೆಯ ಹೂಗಳಿಂದ ಸ್ಯಾನಿಟೈಸರ್ತಯಾರಿಸಬಹುದು ಎಂದು ಗ್ರಾಮಸ್ಥರು ತಿಳಿದುಕೊಂಡರು. ಇದು ಅವರನ್ನು ಸಾಂಕ್ರಾಮಿಕ ಸಮಯದಲ್ಲಿ ಸ್ವಾವಲಂಬಿಗಳನ್ನಾಗಿಸಿತು.


ಮಧ್ಯಪ್ರದೇಶದ ಟಿಕಮ್‌ಗಢ್ ಜಿಲ್ಲೆಯ ಜನರು ಅರಣ್ಯಕ್ಕೆ ಸಮೀಪದಲ್ಲಿ ಸರಳವಾಗಿ ಬದುಕುತ್ತಿದ್ದಾರೆ. ಆದರೆ ಸುಸಜ್ಜಿತ ರಸ್ತೆಗಳ ಅತಿಕ್ರಮಣ ಮತ್ತು ನಗರೀಕರಣದ ಮಹತ್ವಾಕಾಂಕ್ಷೆಯು ಕೆಲವು ಅನಪೇಕ್ಷಿತ ಬದಲಾವಣೆಗಳಿಗೆ ಕಾರಣವಾಗಿದೆ. ಅರಣ್ಯ ಉತ್ಪನ್ನಗಳ ಅವಲಂಬನೆ ಇವರ ಸಾಂಪ್ರದಾಯಿಕ ಜೀವನೋಪಾಯವಾಗಿದೆ.  ಗ್ರಾಮ ಜೀವನದಲ್ಲಾಗುತ್ತಿರುವ ಬದಲಾವಣೆಗಳಿಂದಾಗಿ ಇದು ತಪ್ಪಿಹೋಗಿ ಹೊಸ ಜೀವನಕ್ರಮಗಳನ್ನು ಅಳವಡಿಸಿಕೊಳ್ಳುತ್ತಿದ್ದಾರೆ. ದೀರ್ಘಕಾಲಿಕ ಬರಗಾಲದಿಂದಾಗಿ ಹಳ್ಳಿಯಲ್ಲಿ ಜೀವನನಿರ್ವಹಣೆ ಕಷ್ಟವಾದ್ದರಿಂದ ಜನ ಕೆಲಸಕ್ಕಾಗಿ ನಗರಗಳಿಗೆ ವಲಸೆ ಹೋಗುತ್ತಿದ್ದಾರೆ.

ಅರಣ್ಯ ಪರಂಪರೆಯ ಪುನರುಜ್ಜೀವನ

ಜಿಲ್ಲೆಯ ವ್ಯಾಪ್ತಿಗೆ ಬರುವ ಸಂಪೂರ್ಣ ಪ್ರದೇಶವು ಅರಣ್ಯವನ್ನು ಒಳಗೊಂಡಿದೆ. ಅದು ಕೂಡ ಮಹುವ (ಮಧುಕಾ ಲಾಂಗಿಫೋಲಿಯಾ), ಪಲಾಸ್ (ಬ್ಯುಟಿಯಾ ಮೊನೊಸ್ಪರ್ಮಾ) ತೇಗ (ಟೆಕ್ಟೋನಾ ಗ್ರ್ಯಾಂಡಿಸ್) ಮತ್ತು ತೆಂದು (ಡಯೋಸ್ಪೈರೋಸ್ ಮೆಲನಾಕ್ಸಿಲಾನ್) ನಂತಹ ಆರ್ಥಿಕ ಮಹತ್ವ ಹೊಂದಿರುವ ಮರಗಳನ್ನು ಹೊಂದಿದೆ. ಇಪ್ಪೆ ಗ್ರಾಮಸ್ಥರ ಬಹುಮುಖ್ಯ ಆದಾಯ ಮೂಲವಾಗಿದೆ. ಸಾಂಪ್ರದಾಯಿಕವಾಗಿ ಇದು ಆಲ್ಕೊಹಾಲ್‌ ಮೂಲವಾಗಿದೆ. ತೆಂದು/ಬೀಡಿ ಎಲೆಗಳನ್ನು ಬೀಡಿ ತಯಾರಿಕೆಗೆ ಬಳಸಲಾಗುತ್ತದೆ.

ಇಪ್ಪಿ ಹೂಗಳು, ಹಣ್ಣುಗಳು ಸಾಕಷ್ಟು ಪ್ರಮಾಣದಲ್ಲಿ ಲಭ್ಯವಿದ್ದರೂ ಅವುಗಳ ಸಾಂಪ್ರದಾಯಿಕ ಸಂಗ್ರಹಣಾ ವಿಧಾನ, ಒಣಗಿಸುವಿಕೆ, ಸಂಗ್ರಹಣೆ ಇವೆಲ್ಲವೂ ಅವೈಜ್ಞಾನಿಕವಾಗಿದೆ”, ಎಂದು ಕೃಷಿವಿಜ್ಞಾನಿ ಡಾ. ಎಲ್‌.ಎಂ. ಬಾಲ್ಹೇಳುತ್ತಾರೆ. ಅವೈಜ್ಞಾನಿಕ ಶೇಖರಣೆಯಿಂದಾಗಿ ಅವುಗಳಲ್ಲಿ ಸೂಕ್ಷ್ಮಾಣುಗಳು ಹೆಚ್ಚಾಗಿ ಕೇವಲ ಸಾರಾಯಿ ಹಾಗೂ ಜಾನುವಾರುಗಳ ಮೇವಿಗೆ ಸೂಕ್ತವಾಗಿದೆ ಎನ್ನುತ್ತಾರೆ. ಸಂಸ್ಕರಣ ಜ್ಞಾನದ ಕೊರತೆಯಿಂದಾಗಿ ಮಹುವಾ ಹೂವುಗಳ ಮಾರಾಟದಲ್ಲಿ ತೊಂದರೆ ಕಂಡುಬಂದಿದೆ. ಈ ಸಮಸ್ಯೆಗಳನ್ನು ಪರಿಹರಿಸಲು, ಮಧ್ಯಪ್ರದೇಶ ಸರ್ಕಾರದ ಜೀವವೈವಿಧ್ಯ ಮಂಡಳಿಯ ಆರ್ಥಿಕ ಬೆಂಬಲದೊಂದಿಗೆ ಟಿಕಮ್‌ಗಢ್‌ನಲ್ಲಿರುವ ಕೃಷಿ ಕಾಲೇಜು ಯೋಜನೆಯೊಂದನ್ನು ಕೈಗೆತ್ತಿಕೊಂಡಿತು.  ಒಣಗಿದ ಇಪ್ಪೆ ಹೂಗಳ ಅಪೇಕ್ಷಿತ ಗುಣಮಟ್ಟವನ್ನು ಪಡೆಯಲು ಸೂಕ್ತರೀತಿಯಲ್ಲಿ ಒಣಗಿಸುವುದು (ಮೈಕ್ರೋವೇವ್ ಮತ್ತು ಸೌರ ಒಣಗಿಸುವಿಕೆ) ಮತ್ತು ಸಂರಕ್ಷಣಾ ವಿಧಾನಗಳನ್ನು ಪ್ರಮಾಣೀಕರಿಸಿತು.

ವಿವಿಧ ವಿಧಾನಗಳಿಂದ (ಸೌರ ಮತ್ತು ಮೈಕ್ರೊವೇವ್ ಒಣಗಿಸುವಿಕೆ) ಒಣಗಿಸುವ ಸಮಯದಲ್ಲಿ ಇಪ್ಪೆ ಹೂವುಗಳ ಹಲವಾರು ಗುಣಲಕ್ಷಣಗಳು, ಪರಿಣಾಮಕಾರಿ ತೇವಾಂಶ ಡಿಫ್ಯೂಸಿವಿಟಿ ಮತ್ತು ಬಣ್ಣದ ಚಲನಶಾಸ್ತ್ರವನ್ನು ಕಾಲೇಜಿನ ಸುಸಜ್ಜಿತ ಜೀವರಸಾಯನಶಾಸ್ತ್ರ ಪ್ರಯೋಗಾಲಯದಲ್ಲಿ ವ್ಯಾಪಕವಾಗಿ ಪರಿಶೋಧಿಸಲಾಯಿತು. ಒಣಗಿದ ಇಪ್ಪೆ ಹೂವುಗಳ ಭೌತ-ರಾಸಾಯನಿಕ ಗುಣಲಕ್ಷಣಗಳನ್ನು ಪ್ರಾಥಮಿಕವಾಗಿ ತೇವಾಂಶ, ಬಣ್ಣ ಮಾಪನ, ಪುನರ್ಜಲೀಕರಣ ಅನುಪಾತ ಮತ್ತು ಪ್ರೋಟೀನ್ ಮತ್ತು ಒಟ್ಟು ಸಕ್ಕರೆ ಅಂಶವನ್ನು ತಿಳಿಯಲು ಮೌಲ್ಯಮಾಪನ ಮಾಡಲಾಯಿತು. ಸ್ಥಳೀಯ ಖಾದ್ಯಗಳಾದ ಕಡುಬು, ಖೀರ್, ಪುರಿ ಮತ್ತು ಬರ್ಫಿಗಳನ್ನು ತಯಾರಿಸಲು ಈ ಹೂವುಗಳನ್ನು ನೈಸರ್ಗಿಕ ಸಿಹಿಕಾರಕಗಳಾಗಿ ಸುಲಭವಾಗಿ ಸಂಸ್ಕರಿಸಬಹುದು ಎಂದು ಈ ಎಲ್ಲಾ ಅಧ್ಯಯನಗಳು ಬಹಿರಂಗಪಡಿಸಿವೆ. ಈ ಹೂವುಗಳನ್ನು ಒಣಗಿದ ಹೂವು, ಕ್ಯಾಂಡಿಡ್ ಹೂವು, ಮಹುವಾ ಬಾರ್, ರೆಡಿ-ಟು-ಸರ್ವ್ ಪಾನೀಯಗಳು (ಆರ್‌ಟಿಎಸ್), ಸ್ಕ್ವಾಷ್, ಜಾಮ್, ಲಡ್ಡು, ಕೇಕ್ ಮತ್ತು ಟೋಫಿಯಂತಹ ವೈವಿಧ್ಯಮಯ ಆಹಾರ ಉತ್ಪನ್ನಗಳಾಗಿ ಪರಿವರ್ತಿಸುವುದನ್ನು ಗ್ರಾಮಸ್ಥರಿಗೆ ಪ್ರದರ್ಶಿಸಲಾಗಿದೆ. ಪ್ರಯೋಗಾಲಯದಲ್ಲಿ ಎರಡು ಸಲ ಬಟ್ಟಿ ಇಳಿಸುವಿಕೆಯ ಪ್ರಕ್ರಿಯೆಯಿಂದ ಆಲ್ಕೋಹಾಲ್ ಹೊರತೆಗೆಯಲಾಯಿತು. ಹೂವಿನಿಂದ ಹೊರಹೊಮ್ಮುವ ವಾಸನೆಯನ್ನು ತೆಗೆದುಹಾಕಲು ತುಳಸಿ ಎಲೆಗಳು, ನಿಂಬೆ ಹುಲ್ಲು ಮತ್ತು ಅಲೋವೆರಾದ ಸಾರಗಳನ್ನು ಬಳಸಲಾಯಿತು.

ಕೋವಿಡ್ 19 – ಒಂದು ಅವಕಾಶವನ್ನು ತೆರೆದಿಟ್ಟಿತು

ಕರೋನಾ ಸಾಂಕ್ರಾಮಿಕ ಮತ್ತು ಲಾಕ್‌ಡೌನ್‌ನ ಅನಿವಾರ್ಯತೆಯು ಪ್ರದೇಶದ ವಲಸಿಗರನ್ನು ಮನೆಗೆ ಮರಳುವಂತೆ ಮಾಡಿತು. ಯಾವುದೇ ಆದಾಯದ ಮೂಲವಿಲ್ಲದೆ ಗ್ರಾಮಕ್ಕೆ ಮರಳಿದ ಇವರ ಸ್ಥಿತಿ ಶೋಚನೀಯವಾಗಿತ್ತು. ಇದರೊಂದಿಗೆ ಅತಿ ಸಣ್ಣ ಭೂ ಹಿಡುವಳಿ, ಕೃಷಿಯ ಕಡೆಗೆ ಯುವಕರ ತೀವ್ರ ನಿರಾಸಕ್ತಿ ಮತ್ತು ನೀರು ಮೊದಲಾದ ಸಂಪನ್ಮೂಲಗಳ ಕೊರತೆಯು ಸಮಸ್ಯೆಗಳನ್ನು ಉಲ್ಬಣಗೊಳಿಸಿತು.

ಗ್ರಾಮ ಪ್ರವಾಸದ ಸಮಯದಲ್ಲಿ, ಟೀಕಾಮ್‌ಗಢ್‌ನ ಕೃಷಿ ಕಾಲೇಜಿನ ವಿಜ್ಞಾನಿಗಳು ಮತ್ತು ವಿದ್ಯಾರ್ಥಿಗಳ ತಂಡವು ರಾಷ್ಟ್ರವ್ಯಾಪಿ ಸಾಂಕ್ರಾಮಿಕ ರೋಗ ಹರಡಿದ್ದರೂ, ಗ್ರಾಮಸ್ಥರು ಸ್ಯಾನಿಟೈಸರ್ ಬಳಕೆಯ ಬಗ್ಗೆ ತೀವ್ರ ಅಸಡ್ಡೆ ಹೊಂದಿದ್ದಾರೆ ಎಂದು ಗಮನಿಸಿದರು. ಅಷ್ಟೇ ಅಲ್ಲದೆ, ಹಿಂದಿರುಗಿದ ವಲಸಿಗರಲ್ಲಿ ಯಾವುದೇ ಆದಾಯದ ಮೂಲ ಲಭ್ಯವಿಲ್ಲದ ಕಾರಣ ಸಾಕಷ್ಟು ಹತಾಶೆಯೂ ಇತ್ತು. ಇಂತಹ ಕಷ್ಟದ ಸಮಯದಲ್ಲಿ, ಟಿಕಮ್‌ಗಢ್‌ನ ಕೃಷಿ ಕಾಲೇಜು, ಈ ವಲಸಿಗರಿಗೆ ಸ್ಥಳೀಯವಾಗಿ ಹೇರಳವಾಗಿ ಲಭ್ಯವಿರುವ ಇಪ್ಪೆಯ ಮೌಲ್ಯವರ್ಧನೆಯ ಮೂಲಕ ಜೀವನೋಪಾಯವನ್ನು ಗಳಿಸುವ ಉತ್ತಮ ಅವಕಾಶ ನೀಡಲು ಪ್ರಯತ್ನಿಸಿತು. ಕಾಲೇಜು ತಂಡವು ಸ್ಥಳೀಯರಿಗೆ ಆ ಪ್ರದೇಶದಲ್ಲಿ ಸಾಕಷ್ಟು ಪ್ರಮಾಣದಲ್ಲಿರುವ ಇಪ್ಪೆ ಮರಗಳನ್ನು ಆದಾಯದ ಮೂಲವಾಗಿಸುವ ಕ್ರಮಗಳನ್ನು ಕೈಗೊಂಡಿತು. ಜೊತೆಗೆ ಆಲ್ಕೋಹಾಲ್‌ ಆಧಾರಿತ ಸ್ಯಾನಿಟೈಸರ್‌ ಬಳಸುವ ಅರಿವು ಮೂಡಿಸಿತು.

ಗ್ರಾಮಸ್ಥರಿಂದ ಒಟ್ಟು 300 ಕ್ವಿಂಟಾಲ್ ಇಪ್ಪೆಯನ್ನು ಖರೀದಿಸಲಾಗಿದ್ದು, ಇದುವರೆಗೆ ಸುಮಾರು 60 ಲೀಟರ್ ಇಪ್ಪೆ ಸ್ಯಾನಿಟೈಜರ್‌ಗಳನ್ನು ತಯಾರಿಸಿ ಗ್ರಾಮಸ್ಥರಿಗೆ ವಿತರಿಸಲಾಗಿದೆ. ಗ್ರಾಮೀಣ ಯುವಕರಿಗೆ 100ಮಿಲಿ ಸ್ಯಾನಿಟೈಸರ್‌ ಬಾಟಲಿಗಳನ್ನು ವಿತರಿಸಲಾಯಿತು. ಆರಂಭದಲ್ಲಿ, ದತ್ತು ಪಡೆದ ಹಳ್ಳಿಗಳ ಯುವಕರಿಗೆ ತರಬೇತಿಯ ಮೂಲಕ ಇಪ್ಪೆ ಆಧಾರಿತ ಆಹಾರ ಉತ್ಪನ್ನಗಳು ಮತ್ತು ಸ್ಯಾನಿಟೈಜರ್‌ಗಳ ಜನಪ್ರಿಯತೆ ಮತ್ತು ವಾಣಿಜ್ಯೀಕರಣವನ್ನು ತಿಳಿಸಲಾಯಿತು. ಪ್ರಯೋಗಾಲಯವು ಒಣಗಿದ ಇಪ್ಪೆಯ ಶೆಲ್ಫ್ ಜೀವಿತಾವಧಿಯನ್ನು ವಿಸ್ತರಿಸುತ್ತಿದೆ. ಹೀಗಾಗಿ ಇಪ್ಪೆಯ ಕೊಳೆಯುವ ಸಮಸ್ಯೆಯನ್ನು ನಿವಾರಿಸುತ್ತದೆ ಹಾಗೂ ವರ್ಷವಿಡೀ ಸಿಗುವಂತೆ ಮಾಡುತ್ತದೆ.

ಪರಿಣಾಮ

ಹಳ್ಳಿಯ ಜನರು ಈಗ ಸ್ಯಾನಿಟೈಸರ್‌ನ ಮಹತ್ವವನ್ನು ಅರ್ಥಮಾಡಿಕೊಂಡಿದ್ದಾರೆ. ಇದನ್ನು ತಮ್ಮ ಸುತ್ತಲಿನ ವಸ್ತುಗಳಿಂದ ಮಾಡಲಾಗಿದೆ ಎಂದು ಅರಿತಿದ್ದಾರೆ. ಅನೇಕ ಗ್ರಾಮಸ್ಥರು ಇಪ್ಪೆ ಹೂವುಗಳನ್ನು ಮಾತ್ರವಲ್ಲದೆ ಗಿಲೋಯ್, ತುಳಸಿ ಮತ್ತು ಲೆಮನ್‌ಗ್ರಾಸ್ ಗಿಡಗಳನ್ನು ಮನೆಯ ಕುಂಡಗಳಲ್ಲಿ ಮತ್ತು ಕೈತೋಟಗಳಲ್ಲಿ ನೆಡಲು ಆಸಕ್ತಿಯನ್ನು ತೋರುತ್ತಿದ್ದಾರೆ. ಕರ್ಮರೈ ಗ್ರಾಮದ ಅಜಯ್ ಯಾದವ್, ಯೋಜನೆಯ ಸ್ವಯಂಸೇವಕರು. ಹಳ್ಳಿಯ ಜನರು ಬರ್ಫಿ ಮತ್ತು ಇಪ್ಪೆಯಿಂದ ಮಾಡಿದ ಮಿಠಾಯಿಗಳನ್ನು ಹೆಚ್ಚು ಇಷ್ಟಪಡುತ್ತಾರೆ ಎಂದು ಹೇಳುತ್ತಾರೆ. ಮಹಾನಗರಗಳಿಂದ ಹಿಂತಿರುಗಿದ ಯುವಕರು ಈಗ ಈ ಹೂವುಗಳು ಮತ್ತು ಹಣ್ಣುಗಳನ್ನು ಸಂಗ್ರಹಿಸಲು ಆಸಕ್ತಿ ತೋರುತ್ತಿದ್ದಾರೆ. ಕಾಲೇಜಿನ ಮಾರ್ಗದರ್ಶನದಲ್ಲಿ ಇಪ್ಪೆಯಿಂದ ಇತರ ಮೌಲ್ಯವರ್ಧಿತ ಉತ್ಪನ್ನಗಳನ್ನು ತಯಾರಿಸಲು ಕಲಿಯುತ್ತಿದ್ದಾರೆ. “ಸಾಂಕ್ರಾಮಿಕ ಪರಿಸ್ಥಿತಿ ಸುಧಾರಿಸಿದರೂ ಉದ್ಯೋಗಕ್ಕಾಗಿ ಮತ್ತೆ ದೊಡ್ಡ ನಗರಗಳಿಗೆ ಹೋಗುವ ಯಾವುದೇ ಯೋಜನೆ ನನಗಿಲ್ಲ”, ಎಂದು ದಯಾರಾಮ್ ಅಹಿರ್ವಾರ್ ಹೇಳುತ್ತಾರೆ. ಈ ಮೌಲ್ಯವರ್ಧಿತ ಉತ್ಪನ್ನಗಳು ಹೆಚ್ಚುವರಿ ಆದಾಯವನ್ನು ಒದಗಿಸುವುದರೊಂದಿಗೆ ರೈತರು ತಮ್ಮ ಹಳ್ಳಿಗಳಿಗೆ ಮರಳಲು ಮತ್ತು ಸಾಂಕ್ರಾಮಿಕ ಸಮಯದಲ್ಲಿ ಸ್ವಾವಲಂಬಿಗಳಾಗಿರಲು ಅನುವು ಮಾಡಿಕೊಟ್ಟಿವೆ.

ಯೋಗರಂಜನ್, ಲಲಿತ್ ಮೊಹಲ್ ಬಾಲ್, ದಿನೇಶ್ ಕುಮಾರ್ ಮತ್ತು ಆಯುಷಿ ಸೋನಿ


Yogranjan, Scientist (Biotechnology)

E-mail: yogranjan@gmail.com

Lalit Mohal Bal, Scientist (Post Harvest Technology)

E-mail: lalit.bal@gmail.com

Dinesh Kumar, Scientist (Animal Nutrition)

E-mail: kr.dinesh7@gmail.com

College of Agriculture, Tikamgarh, M.P.-472001, India

 Ayushi Soni, Research Scholar

College of Agriculture, Gwalior, M.P.- 474011, India

E-mail: ayushisoni2351997@gmail.com

ಆಂಗ್ಲ ಮೂಲ : ಲೀಸಾ ಇಂಡಿಯಾ; ಸಂಪುಟ :೨೩; ಸಂಚಿಕೆ : ೨ ; ಜೂನ್ ೨೦‌೨೧

Recent Posts

ಕೃಷಿಯಲ್ಲಿ ನೀರಿನ ಸಮರ್ಥ ಬಳಕೆಗಾಗಿ ಕಾಲುವೆ ಯಾಂತ್ರೀಕರಣ

ಕೃಷಿಯಲ್ಲಿ ನೀರಿನ ಸಮರ್ಥ ಬಳಕೆಗಾಗಿ ಕಾಲುವೆ ಯಾಂತ್ರೀಕರಣ

ನಮ್ಮ ನೀರಾವರಿ ವ್ಯವಸ್ಥೆಯನ್ನು 21ನೇ ಶತಮಾನದ ಬೇಡಿಕೆಗಳಿಗೆ ಹೊಂದುವಂತೆ ಮಾಡುವುದು ನಮ್ಮ ಮುಂದಿರುವ ನಿಜವಾದ ಸವಾಲಾಗಿದೆ. ತಂತ್ರಜ್ಞಾನವೇ...