ಸಾವಯವ ಕೃಷಿಯೆಡೆಗೆ ಪರಿವರ್ತನೆ


ಕೃಷಿ ಎನ್ನುವುದು ಬದಲಾವಣೆ. ಹೊಸ ಸ್ಪರ್ಷ, ಹೊಸ ದೃಷಿಕೋನ ಮತ್ತು ಹೊಸ ಸವಾಲುಗಳೊಂದಿಗೆ ರಾಸಾಯನಿಕ ಕೃಷಿಯಿಂದ ಸಾಂಪ್ರಾದಯಿಕತೆಗೆ ಮರಳುವುದು. ಸಾವಯವ, ಪುನರುತ್ಪಾದಕ ಇಲ್ಲವೇ ಶೂನ್ಯ ಬಜೆಟ್ಕೃಷಿಯಾಗಿರಲಿ ರೈತರಿಗೆ ಮುಖ್ಯವಾದದ್ದು ಅದು ನೀಡುವ ಆರ್ಥಿಕ ಹಾಗೂ ಪರಿಸರ ಸುಸ್ಥಿರತೆ.


ಸಾವಯವ ಕೃಷಿಯಲ್ಲಿ ೧೧ ವರ್ಷಗಳ ಅನುಭವ ಮತ್ತು ೫ ವರ್ಷಗಳು ಮಹಾರಾಷ್ಟ್ರದ ಚಂದ್ರಾಪುರ, ಚಿಮೂರ್‌ ಜಿಲ್ಲೆಯ ಗೊಂಡೆಡ, ತಲ್‌ನ ಮಧ್ಯಮ ಗಾತ್ರದ ಭತ್ತದ ಬೆಳೆಗಾರರೊಂದಿಗೆ (ಸಾವಯವ) ಕೆಲಸ ಮಾಡಿದ ಅನುಭವದ ಹಿನ್ನಲೆಯಲ್ಲಿ ಕಳೆದ ಖಾರಿಫ್‌ ಬೆಳೆಯ ಸಮಯದಲ್ಲಿ ನಾವು (ಜನರಸ್‌ ಟೆಕ್ನಾಲಜೀಸ್‌ ಪ್ರೈ. ಲಿ.,) ಅತಿಹೆಚ್ಚು ಕೀಟ ಭಾದೆಯಿರುವ ಭತ್ತದ ಪ್ರದೇಶದ ಮಹಾರಾಷ್ಟ್ರದ ಭಂದ್ರಾ ಜಿಲ್ಲೆಯ ಅಸ್ಗನ್‌ನಲ್ಲಿ ಕೆಲಸ ಮಾಡಲು ಮುಂದಾದೆವು. ಈಗಾಗಲೇ ಇರುವ ಕೃಷಿ ಪದ್ಧತಿಯನ್ನು ಬದಲಿಸುವುದು ಸುಲಭವಲ್ಲ. ಅದು ಆ ಎಂಟು ರೈತರಿಗೂ ಸುಲಭವಾಗಿರಲಿಲ್ಲ. ಯಶಸ್ವಿ ಸಾವಯವ ಭತ್ತದ ಬೆಳೆಗಾರರೊಂದಿಗಿನ ಚರ್ಚೆಗಳು ಹಾಗೂ ಕ್ಷೇತ್ರ ಭೇಟಿಗಳ ತರುವಾಯ ಈ ರೈತರ ಗುಂಪು ತಮ್ಮ ಒಟ್ಟು ಭೂಮಿಯಲ್ಲಿ ಒಂದು ಎಕರೆಯಷ್ಟು ಭೂಮಿಯಲ್ಲಿ ಸಾವಯವ ಪದ್ಧತಿಗಳನ್ನು ಅಳವಡಿಸಿಕೊಳ್ಳಲು ಮುಂದಾದರು. ಪರಸ್ಪರ ಒಪ್ಪಿಗೆಯ ಮೇರೆಗೆ ಜೈ ಶ್ರೀ ರಾಂ ಎನ್ನುವ ಮಧ್ಯಮ ಗಾತ್ರದ ಭತ್ತದ ತಳಿಯನ್ನು ಬೆಳೆಯಲು ಮುಂದಾದರು.

ಪ್ರತಿ ಎಕರೆಗೆ ಎರಡು ಟನ್ನುಗಳಷ್ಟು ಸಮೃದ್ಧ ಗೊಬ್ಬರವನ್ನು ಬಳಸಲಾಯಿತು. ಹೊಲ ಗೊಬ್ಬರ ಮತ್ತು ಕೃಷಿ ತ್ಯಾಜ್ಯವನ್ನು ಕೊಳೆಸುವ ಮೂಲಕ ಈ ಗೊಬ್ಬರವನ್ನು ತಯಾರಿಸಲಾಯಿತು. ಸಂಪೂರ್ಣವಾಗಿ ಕೊಳೆತ ನಂತರ, 8 ವಿಧದ ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರವನ್ನು ಸೇರಿಸಲಾಯಿತು. ಬೀಜ ಸಂಸ್ಕರಣೆಗಾಗಿ ವಿವಿಧ ಜೈವಿಕ ಗೊಬ್ಬರಗಳನ್ನು ಬಳಸಲಾಯಿತು. ಧೈಂಚ/ಬೋರುವನ್ನು ಹಸಿರು ಗೊಬ್ಬರವಾಗಿ ಬಳಸಲಾಯಿತು. ದಶಪರ್ಣಿ ಆರ್ಕ್ (10 ಎಲೆಗಳ ಸಾರ), ಬೇವಿನ ಎಲೆ ಸಾರ, ಅಗ್ನಿ ಅಸ್ತ್ರ (ಮೆಣಸಿನಕಾಯಿ ಬೆಳ್ಳುಳ್ಳಿ ಶುಂಠಿ ಸಾರ)ಗಳನ್ನು ಕೀಟ ನಿವಾರಕವಾಗಿ ಮತ್ತು ಪಾರ್ಥೇನಿಯಂ ಸಾರ, ಜೀ-ವಾಮೃತ್, ವರ್ಮಿವಾಶ್ ಮತ್ತು ಪಂಚಗವ್ಯವನ್ನು ಭತ್ತದ ಕೃಷಿಗೆ ಸಸ್ಯ ಬೆಳವಣಿಗೆಯ ಉತ್ತೇಜಕವಾಗಿ ಬಳಸಲಾಯಿತು.

ಸಣ್ಣ ಗಾತ್ರದ ಜಮೀನುಗಳಲ್ಲೂ ರಸಗೊಬ್ಬರ, ಕೀಟನಾಶಕಗಳು, ಕೆಲಸಗಾರರು ಮತ್ತು ಬಂಡವಾಳದ ಹೆಚ್ಚಿನ ಬಳಕೆಯನ್ನು ಹೊಂದಿರುವ ತೀವ್ರ ಕೃಷಿ ವಲಯದಲ್ಲಿ ನಾವು ಮೊದಲ ಬಾರಿಗೆ ಕೆಲಸ ಮಾಡುತ್ತಿದ್ದೆವು. ಪ್ರತಿಕೂಲ ಹವಾಮಾನದ ಹೊರತಾಗಿಯೂ, ನೆರೆಯ ರೈತರ ರಾಸಾಯನಿಕ ಹೊಲಗಳಿಗೆ ಹೋಲಿಸಿದರೆ ಬೆಳೆಗಳು ಹೆಚ್ಚು ತೃಪ್ತಿಕರವಾಗಿ ಪ್ರತಿಕ್ರಿಯಿಸಿದ್ದನ್ನು ಕಂಡು ನಮಗೆ ಆಶ್ಚರ್ಯವಾಯಿತು. ಕಡಿಮೆ ಕೀಟ ಭಾದೆ ಹಾಗೂ ರೋಗ ನಿರೋಧಕತೆಯ ದೃಷ್ಟಿಯಿಂದ ರೈತರು ಉತ್ತಮ ಫಲಿತಾಂಶಗಳನ್ನು ಪಡೆಯುವ ಮೂಲಕ ಅಂತಿಮವಾಗಿ ಭತ್ತದ ಉತ್ಪಾದಕತೆಯನ್ನು ಸುಧಾರಿಸಿಕೊಂಡರು.

ಎಲ್ಲಾ 8 ರೈತರು ಸಾವಯವ ಕೃಷಿಯ ಮೂಲಕ ಮೊದಲ ವರ್ಷದಲ್ಲಿ ಎಕರೆಗೆ 9-11 ಕ್ವಿಂಟಾಲ್ ಭತ್ತದ ಉತ್ತಮ ಇಳುವರಿಯನ್ನು ಪಡೆದರು ಹಾಗೂ ರಾಸಾಯನಿಕವಾಗಿ ಬೆಳೆದ ಭತ್ತದಲ್ಲಿ ಎಕರೆಗೆ 2-4 ಕ್ವಿಂಟಾಲ್ ಪಡೆದರು. ಗಮನಿಸಬೇಕಾದ ಅಂಶವೆಂದರೆ, ರಾಸಾಯನಿಕ ಕೃಷಿ ಕ್ಷೇತ್ರಗಳಲ್ಲಿ, ಪ್ರತಿಕೂಲ ಹವಾಮಾನ ಪರಿಸ್ಥಿತಿಗಳಿಂದಾಗಿ ವಾರ್ಷಿಕ ಉತ್ಪಾದನೆಯು ಬಹಳ ಕಡಿಮೆಯಾಯಿತು. ಸಾಮಾನ್ಯವಾಗಿ ಈ ಪ್ರದೇಶದಲ್ಲಿ ರಾಸಾಯನಿಕ ವಿಧಾನದಲ್ಲಿ ಬೆಳೆದ ಉತ್ತಮ ಭತ್ತದ ತಳಿಯು ಪ್ರತಿ ಎಕರೆಗೆ  15-16 ಕ್ವಿಂಟಾಲ್‌ ಇಳುವರಿ ನೀಡುತ್ತದೆ.

ರಾಸಾಯನಿಕ ಬಳಸಿ ಬೆಳೆದ ಬೆಳೆಗಳಿಗೆ ಹೋಲಿಸಿದರೆ ಉತ್ತಮ ಇಳುವರಿ ಬಂದಿದ್ದರ ಜೊತೆಗೆ ಬೆಳೆಗೆ ಉತ್ತಮ ಬೆಲೆ ಸಿಗುವಂತಾದ್ದರಿಂದ ರೈತರಿಗೆ ಸಂತೋಷವಾಯಿತು. ಉತ್ಪಾದನಾ ವೆಚ್ಚವು 50% ವರೆಗೆ ಕಡಿಮೆಯಾಗಿದೆ. ಕೆಲವು ಸಂದರ್ಭಗಳಲ್ಲಿ ಇನ್ನೂ ಕಡಿಮೆಯಾಗಿದೆ. ಅವರು ಕಳೆದ ವರ್ಷಕ್ಕಿಂತ ಹೆಚ್ಚು ಉಳಿಸುವುದರೊಂದಿಗೆ ಹೆಚ್ಚು ಗಳಿಸಿದ್ದಾರೆ.

 

ನೀತಿ ಬೆಂಬಲ

ಜಿಲ್ಲೆ/ತಾಲ್ಲೂಕು ಮಟ್ಟದಲ್ಲಿ, ಕೃಷಿ ಇಲಾಖೆ ಮತ್ತು ಕೃಷಿ ತಂತ್ರಜ್ಞಾನ ನಿರ್ವಹಣಾ ಸಂಸ್ಥೆ (ATMA) ಭಾಗವಹಿಸುವಿಕೆ ಖಾತರಿ ಯೋಜನೆ (PGS) ಮೂಲಕ ಸಾವಯವ ಕೃಷಿಯನ್ನು ಉತ್ತೇಜಿಸುತ್ತಿದೆ. ಸಾವಯವ ಕೃಷಿಗೆ ಅಗತ್ಯವಿರುವ ಎಲ್ಲಾ ಒಳಸುರಿಯುವಿಕೆಗಳನ್ನು ತಯಾರಿಸಲು ರೈತರಿಗೆ ತರಬೇತಿ ನೀಡಲಾಗುತ್ತದೆ. 200 ಲೀಟರ್ ಡ್ರಮ್, ವರ್ಮಿಕಾಂಪೋಸ್ಟ್ ಘಟಕಗಳು ಮುಂತಾದ ಅಗತ್ಯ ವಸ್ತುಗಳನ್ನು ಸಬ್ಸಿಡಿ ದರದಲ್ಲಿ ಒದಗಿಸಲು ಎಟಿಎಂಎ ಅವಕಾಶ ಕಲ್ಪಿಸಿದೆ. ರೈತರ ಗುಂಪುಗಳು ಮತ್ತು ಮಹಿಳಾ ಸ್ವಸಹಾಯ ಗುಂಪುಗಳು ಸಹ HNPV ಉತ್ಪಾದನೆ, ಟ್ರೈಕೊ ಕಾರ್ಡ್ ತಯಾರಿ ತರಬೇತಿ ಪಡೆದಿವೆ. ಈ ಎಲ್ಲಾ ಪ್ರಯತ್ನಗಳೊಂದಿಗೆ, ಅನೇಕ FPO ಗಳು ನೋಂದಾಯಿತ ಸಾವಯವ ಉತ್ಪಾದಕ ಗುಂಪಿನಂತೆ ಕಾರ್ಯನಿರ್ವಹಿಸುತ್ತಿವೆ. ನಾಗ್ಪುರ ಜಿಲ್ಲೆಯಲ್ಲಿ, ಕೃಷಿ ಇಲಾಖೆಗಳು ಒಟ್ಟಾಗಿ ಮುನಿಸಿಪಲ್ ಕಾರ್ಪೊರೇಶನ್‌ನೊಂದಿಗೆ ರೈತರ ಸರಕುಗಳನ್ನು ಮಾರಾಟ ಮಾಡಲು ಹಾಟ್ ಸ್ಪಾಟ್‌ಗಳನ್ನು ಗುರುತಿಸಲು ಮಾರ್ಕೆಟಿಂಗ್ ಉಪಕ್ರಮವಾಗಿ ಕಾರ್ಯನಿರ್ವಹಿಸುತ್ತಿವೆ.

 ರಾಷ್ಟ್ರ ಮಟ್ಟದಲ್ಲಿ MANAGE, ಹೈದರಾಬಾದ್ ಮತ್ತು IIFSR, ಮೋದಿಪು-ರಾಮ್‌ನಂತಹ ಸಂಸ್ಥೆಗಳು ತಮ್ಮ ವಿಸ್ತರಣಾ ವ್ಯವಸ್ಥೆಗಳ ಮೂಲಕ ಸಾವಯವ ಕೃಷಿಯನ್ನು ಅಧ್ಯಯನ ಮಾಡುತ್ತಿವೆ. ಡೇಟಾವನ್ನು ಸಂಗ್ರಹಿಸುವುದರೊಂದಿಗೆ, ಉತ್ತೇಜನ ನೀಡುತ್ತಿವೆ. ಸಾವಯವ ಕೃಷಿಯಲ್ಲಿ ಪ್ರಮಾಣೀಕೃತ ಕೃಷಿ ಸಲಹೆಗಾರರು (CFA) ದೇಶಾದ್ಯಂತ ಸಾವಯವ ಸಲಹೆಗಾರರನ್ನು ರಚಿಸುವ ನವೀನ ಕೋರ್ಸ್‌ಗಳಲ್ಲಿ ಒಂದಾಗಿದೆ. ಭವಿಷ್ಯದಲ್ಲಿ ಸಾವಯವ ಕೃಷಿಯ ವಿಸ್ತರಣೆಗೆ ಈ CFAಗಳು ನೆರವಾಗುತ್ತವೆ.

ಪ್ರತಿಯೊಂದು ಹಂತದ ವಿಸ್ತರಣೆಯ ಉಪಕ್ರಮಗಳು ರೈತರು ಜವಾಬ್ದಾರಿಯುತವಾಗಿ ಕೃಷಿ ಮಾಡಲು ಖಂಡಿತವಾಗಿಯೂ ಸಹಾಯ ಮಾಡುತ್ತಿವೆ. ರೈತರಿಗೆ ಮಾಹಿತಿ ಹರಿವು ಸಮಾನವಾಗಿ ಹಂಚಿಕೆಯಾಗುತ್ತದೆ. ಜೈವಿಕ ಗೊಬ್ಬರಗಳಂತಹ ಒಳಸುರಿಯುವಿಕೆಗಳು ಮಾರುಕಟ್ಟೆಯಲ್ಲಿ ಸುಲಭವಾಗಿ ಲಭ್ಯವಿರುತ್ತದೆ. ಸ್ಟಾಕ್ ಇಲ್ಲದಿದ್ದಾಗ ಅದನ್ನು ಸುಲಭವಾಗಿ ಆರ್ಡರ್ ಮಾಡಬಹುದು.

ಸವಾಲುಗಳು

ಸಾವಯವ ಕೃಷಿಯನ್ನು ಯೋಜಿತ ಚಟುವಟಿಕೆಯಾಗಿ ಒಪ್ಪಿಕೊಳ್ಳಬೇಕು. ಸಾವಯವ ಕೃಷಿಯು ಮೂಲತಃ ತಡೆಗಟ್ಟುವ ಒಂದು ವಿಧಾನವಾಗಿದೆ. ಸಾವಯವ ಕೃಷಿ ಚಟುವಟಿಕೆಯನ್ನು ಪ್ರಾರಂಭಿಸಲು, ಬೆಳೆ ಉತ್ಪಾದನೆಯಿಂದ ಉತ್ಪನ್ನಗಳ ಮಾರುಕಟ್ಟೆಯವರೆಗಿನ ಸಂಪೂರ್ಣ ವ್ಯವಸ್ಥೆಯನ್ನು ಅರ್ಥಮಾಡಿಕೊಳ್ಳಲು ತಾಳ್ಮೆಯ ಅಗತ್ಯವಿದೆ. ಕೆಲವು ಸಂದರ್ಭಗಳಲ್ಲಿ ಇದು ತಪ್ಪಾಗಿದೆ.

ಸಾವಯವ ಕೃಷಿಯ ಅಳವಡಿಕೆಯಲ್ಲಿ ಸರ್ಕಾರದ ವ್ಯವಸ್ಥೆಯಲ್ಲಿ ಸಾಕಷ್ಟು ಅವಕಾಶಗಳಿದ್ದರೂ, ರೈತರು ಸಾವಯವ ಕೃಷಿಗೆ ಪರಿವರ್ತನೆಗೊಳ್ಳಲು ತಡವಾಗುತ್ತಿರುವುದಕ್ಕೆ ಕಾರಣಗಳು ಈ ಕೆಳಗಿನಂತಿವೆ:-

  • ರಾಸಾಯನಿಕ ಕೃಷಿಯು ರೈತರ ಮನಸ್ಥಿತಿಯನ್ನು “ರೆಡಿಮೇಡ್ ಮತ್ತು ಫಾಸ್ಟ್” ಗೆ ಬದಲಾಯಿಸಿದೆ. ಸಾವಯವ ಕೃಷಿಯಲ್ಲಿ, ರೈತರು ತಾವೇ ರಸಗೊಬ್ಬರಗಳು, ಕೀಟ ನಿಯಂತ್ರಕ ಒಳಸುರಿಯುವಿಕೆಗಳು ಮತ್ತು ಶಿಲೀಂಧ್ರನಾಶಕಗಳನ್ನು ತಯಾರಿಸಬೇಕು/ಸಂಸ್ಕರಿಸಬೇಕು. ಇದನ್ನು ಮಾಡಲು ಅನೇಕರು ಹಿಂಜರಿಯುತ್ತಾರೆ.
  • ಸಾವಯವ ಕೃಷಿಯು ತಡೆಗಟ್ಟುವ ಒಂದು ವಿಧಾನವಾಗಿರುವುದರಿಂದ, ಸಾವಯವಕ್ಕೆ ಪರಿವರ್ತನೆಗೊಳ್ಳುವ ಆರಂಭಿಕ ಹಂತಗಳಲ್ಲಿ, ಸಿಂಪರಣೆಯ ವೇಳಾಪಟ್ಟಿಯನ್ನು ಸರಿಯಾಗಿ ಅನುಸರಿಸಬೇಕು. ಸಿಂಪರಣೆಯ ಸಂಖ್ಯೆಯು (ಕೆಲವು ಸಂದರ್ಭಗಳಲ್ಲಿ) ಹೆಚ್ಚಾಗಬಹುದು. ಹಲವು ಸಲ ಇದನ್ನು ರೈತರು ಮಾಡುವುದಿಲ್ಲ. ಸೋಂಕು ನಿಯಂತ್ರಣಕ್ಕೆ ಬಾರದೇ ಹೋದಾಗ ಸಾವಯವ ಕೃಷಿಯನ್ನೇ ದೂರುತ್ತಾರೆ.
  • ರಾಸಾಯನಿಕ ವಿಧಾನಗಳಿಗೆ ಹೋಲಿಸಿದರೆ ಕೂಲಿಕಾರರ ಅವಶ್ಯಕತೆ ಕೊಂಚ ಹೆಚ್ಚಿರುತ್ತದೆ. ಕೂಲಿಕಾರರ ಸಮಸ್ಯೆಯಿರುವ ಕಡೆ ಮತ್ತು ಹೆಚ್ಚು ಭೂಮಿಯಿರುವಲ್ಲಿ ಇದೊಂದು ಸಮಸ್ಯೆಯಾಗುತ್ತದೆ.
  • ಸಾವಯವ ಕೃಷಿ ಘಟಕವು ಪಶುಸಂಗೋಪನೆಯ ಸಂಯೋಜನೆಯೊಂದಿಗೆ ಲಾಭ ಪಡೆಯುತ್ತದೆ. “ಒಂದು ಉದ್ಯಮದ ತ್ಯಾಜ್ಯವು ಮತ್ತೊಂದಕ್ಕೆ ಉಪಯುಕ್ತ” ಎನ್ನುವುದನ್ನು ನೆನಪಿನಲ್ಲಿಡಬೇಕು. ಎಲ್ಲ ರೈತರು ಹಸುಗಳನ್ನು ಸಾಕಿರುವುದಿಲ್ಲ. ಒಳಸುರಿಯುವಿಕೆಗಳ ತಯಾರಿಕೆಗೆ ಗಂಜಲ ಮತ್ತು ಸಗಣಿಯ ಅಗತ್ಯವಿರುತ್ತದೆ. ಇವುಗಳನ್ನು ಖರೀದಿಸಬೇಕಾದಲ್ಲಿ ವೆಚ್ಚವು ಹೆಚ್ಚಾಗುತ್ತದೆ.

ಕ್ರಮಿಸಬೇಕಾದ ಹಾದಿ

ಬೆಳೆಯನ್ನು ಆಯ್ಕೆ ಮಾಡುವ ಮೊದಲು ಉತ್ಪನ್ನಗಳ ಮಾರಾಟಕ್ಕೆ ಮಾರುಕಟ್ಟೆಯನ್ನು ಗುರುತಿಸಿಕೊಳ್ಳಬೇಕು. ರೈತರು ಎಪಿಎಂಸಿಯಲ್ಲಿ ಬೆಳೆಗಳನ್ನು ಮಾರಾಟ ಮಾಡಲು ಬಯಸಿದರೆ, ಸಾವಯವ ಕೃಷಿಗಾಗಿ ಅಮೂಲ್ಯವಾದ ಶ್ರಮವನ್ನು ವ್ಯರ್ಥಮಾಡಿ ಎಂದು ಸಲಹೆ ನೀಡಲಾಗುವುದಿಲ್ಲ. ತಮ್ಮ ಮಾರುಕಟ್ಟೆ ಯಾವುದು ಎಂದು ಗುರುತಿಸಿಕೊಂಡರೆ ಅರ್ಧ ಯುದ್ಧವನ್ನು ಗೆದ್ದಂತೆ.

ಕೃಷಿ ಮಾಡುವ ಮೊದಲು, ರೈತರು ಸಾವಯವ ವಿಧಾನದ ಮೂಲಕ ಉತ್ಪಾದನೆಯ ಹಿಂದಿರುವ ವಿಜ್ಞಾನವನ್ನು ಅರ್ಥಮಾಡಿಕೊಳ್ಳಬೇಕು. ಮಣ್ಣು, ಬೆಳೆ, ಲಭ್ಯವಿರುವ ಸಂಪನ್ಮೂಲಗಳನ್ನು ಅಧ್ಯಯನ ಮಾಡಬೇಕೆಂದು ಶಿಫಾರಸು ಮಾಡಲಾಗುತ್ತದೆ. ಮತ್ತೊಬ್ಬರ ವಿಧಾನಗಳನ್ನು ಕಾಪಿ ಮಾಡುವುದು ಸರಿಯಲ್ಲ. ರೈತರು ತಮ್ಮ ಪರಿಸರ ಮತ್ತು ಲಭ್ಯವಿರುವ ಸಂಪನ್ಮೂಲಗಳಿಗೆ ಅನುಗುಣವಾಗಿ ವಿಧಾನದಲ್ಲಿ ಅಗತ್ಯ ಬದಲಾವಣೆಗಳನ್ನು ಮಾಡಿಕೊಳ್ಳಬೇಕು. ಈ ಎಲ್ಲ ಅಂಶಗಳನ್ನು ಅಧ್ಯಯನ ಮಾಡಿದ ನಂತರ ರೈತರು ಕಡಿಮೆ ಪ್ರದೇಶದಲ್ಲಿ ಸಾವಯವ ಕೃಷಿ ಆರಂಭಿಸಬೇಕು.

ತಿಳುವಳಿಕೆ ಮತ್ತು ಸಂಪನ್ಮೂಲಗಳ ಪರಸ್ಪರ ವಿನಿಮಯಕ್ಕೆ ಗುಂಪನ್ನು ರಚಿಸಿಕೊಳ್ಳುವುದು ಸಹಕಾರಿ. ಇದರಿಂದ ಖರೀದಿ ಮತ್ತು ಮಾರಾಟಕ್ಕೂ ಅನುಕೂಲವಾಗುತ್ತದೆ.

ಮಣ್ಣು, ನೀರಿನ ಸುಧಾರಣೆ, ಆರೋಗ್ಯದ  ಮೇಲಿನ ಇತ್ಯಾತ್ಮಕ ಪರಿಣಾಮಗಳು ಮುಂತಾದ ಪರೋಕ್ಷ ಪ್ರಯೋಜನಗಳನ್ನು ಒಂದು ಕ್ಷಣ ನಿರ್ಲಕ್ಷಿಸಿದರೂ ಸಹ, ಹೆಚ್ಚಿನ ಮಾರುಕಟ್ಟೆ ಮೌಲ್ಯದಿಂದ ಸಾವಯವ ಕೃಷಿಯಿಂದ ಹಲವಾರು ಆರ್ಥಿಕ ಪ್ರಯೋಜನಗಳಿವೆ. ಮೊದಲು, ಸಾವಯವ ಕೃಷಿಯ ಆರ್ಥಿಕ ಲಾಭದ ಕುರಿತು ರೈತರಲ್ಲಿ ಭರವಸೆ ಮೂಡಬೇಕು. ಪರೋಕ್ಷ ಲಾಭಗಳು ಅವರಿಗೆ ಬೋನಸ್‌ ಇದ್ದಂತೆ.

ವೇಗದ ಮತ್ತು ಸಿದ್ಧ ವಿಧಾನಗಳನ್ನು ನಿರ್ಲಕ್ಷಿಸಲು ಮತ್ತು ಆರ್ಥಿಕ ಹಾಗೂಪರಿಸರ ಸುಸ್ಥಿರತೆಯ ಬದಲಾಗುತ್ತಿರುವ ಅಗತ್ಯಗಳಿಗೆ ಸರಿಯಾದ ರೀತಿಯಲ್ಲಿ ಪ್ರತಿಕ್ರಿಯಿಸಲು ಇದು ಸೂಕ್ತವಾದ ಸಮಯ.

ರೋಹನ್ ಯೋಗೇಶ್ ರಾವುತ್


Rohan Yogesh Raut

Address – 63, Mire Lay-out, Near Sudampuri, Sakkardara Square

Nagpur 440009

Email: raut.rohan1@gmail.com

ಆಂಗ್ಲ ಮೂಲ : ಲೀಸಾ ಇಂಡಿಯಾ; ಸಂಪುಟ :೨೩; ಸಂಚಿಕೆ : ೧ ; ಮಾರ್ಚ್‌ ೨೦‌೨೧

 

Recent Posts

ಕೃಷಿಯಲ್ಲಿ ನೀರಿನ ಸಮರ್ಥ ಬಳಕೆಗಾಗಿ ಕಾಲುವೆ ಯಾಂತ್ರೀಕರಣ

ಕೃಷಿಯಲ್ಲಿ ನೀರಿನ ಸಮರ್ಥ ಬಳಕೆಗಾಗಿ ಕಾಲುವೆ ಯಾಂತ್ರೀಕರಣ

ನಮ್ಮ ನೀರಾವರಿ ವ್ಯವಸ್ಥೆಯನ್ನು 21ನೇ ಶತಮಾನದ ಬೇಡಿಕೆಗಳಿಗೆ ಹೊಂದುವಂತೆ ಮಾಡುವುದು ನಮ್ಮ ಮುಂದಿರುವ ನಿಜವಾದ ಸವಾಲಾಗಿದೆ. ತಂತ್ರಜ್ಞಾನವೇ...